ಸೊಂಡೂರು ರೈತ ಹೋರಾಟಕ್ಕೆ ರಾಷ್ಟ್ರೀಯ ಹೋರಾಟದ ಸ್ವರೂಪ ಬಂದದ್ದು  ಸೋಷಲಿಸ್ಟ್ ಪಾರ್ಟಿಯಿಂದ. ಕೊನೆಗೂ ಇದು ಕಾಂಗ್ರೆಸ್ ಸರ್ಕಾರ ಮತ್ತು ಸೋಷಲಿಸ್ಟ್ ಪಾರ್ಟಿಯ ನಡುವಿನ ಹೋರಾಟವಾಗಿಯೇ ಪರಿಣಮಿಸಿತು. ಭೂಮಾಲಿಕರು, ರಾಜಶಾಹಿಗಳು, ಬಂಡವಾಳಶಾಹಿಗಳು ತುಂಬಿದ ಭೂರ್ಜ್ವಮಯವಾದ ಕಾಂಗ್ರೆಸ್ ಸ್ಥಿತಿ ಒಂದಾದರೆ, ಕಳಪೆ ಅನೈತಿಕ ಜಗತ್ತಿನ ವಿರುದ್ಧ ಹೋಸ ನೈತಿಕ ಜಗತ್ತಿನ ನಿರ್ಮಾಣಕ್ಕಾಗಿ ಶ್ರಮಿಸುವ ಆಳದ ಆಶಯ ಹೊತ್ತ ಸಮಾಜವಾದಿ ಪಕ್ಷದ ಸ್ಥಿತಿ ಇನ್ನೊಂದು ಮುಖ. ಈ ಎರಡು ತಾತ್ವಿಕ ಭಿನ್ನಾಭಿಪ್ರಾಯಗಳೇ ಅವಳಿ ವೈರುಧ್ಯಗಳಾಗಿ ೭೦ರ ದಶಕದಲ್ಲಿ ಸಂಘರ್ಷಿಸುತ್ತಿದ್ದವು. ಈ ಸಂಘರ್ಷದ ಒಂದು ಅಂಚಿನಲ್ಲಿ ಕಾಂಗ್ರೆಸ್‌ನ ಇಂದಿರಾಗಾಂಧಿ ಇದ್ದರೆ ಇನ್ನೊಂದು ಅಂಚಿನಲ್ಲಿ ಸಮಾಜವಾದಿ ಪಕ್ಷದ ಜಾರ್ಜ್ ಫರ್ನಾಡಿಸ್ ಇದ್ದರು. ಇಂತಹ ಮುಖಾಮುಖಿಯ ಪರಿಣಾಮ ಸೊಂಡೂರಿನ ಭೂ ಹೋರಾಟದ ಮೇಲಾಯಿತು.

೭೦ರ ದಶಕದಲ್ಲಿ ಕರ್ನಾಟಕದಲ್ಲಿ ಸೋಷಲಿಸ್ಟ್ ಪಾರ್ಟಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು. ಲೇಖಕರು, ಬರಹಗಾರರು, ಕಲಾವಿದರು, ಯುವಜನರ ಒಂದು ಪಡೆ ಪ್ರತ್ಯೇಕಗೊಂಡು ಸಾಹಿತ್ಯ ಕ್ಷೇತ್ರ ಸೇರಿದಂತೆ ಸಮಾಜದೊಂದಿಗೆ ಸ್ವತಂತ್ರವಾಗಿ ಬರೆಯಲು ಪ್ರಾರಂಭಿಸಿದರು. ಸಮಾಜವಾದಿ ಪಕ್ಷದ ಯುವ ವಿಭಾಗ ‘ಸಮಾಜವಾದಿ ಯುವಜನ ಸಭಾ’ದಿಂದ ಹೊರಬಿದ್ದ ಗುಂಪು ಪ್ರತ್ಯೇಕವಾಗಿ ಕಾರ್ಯನಿರತವಾಯಿತು. ಇದರ ಮುಖಂಡ ರಾಗಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಪಿ. ಲಂಕೇಶ್, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಪ್ರೊ.ಚಂದ್ರಶೇಖರ ಪಾಟೀಲ್, ದೇವನೂರು ಮಹಾದೇವ,  ಪ್ರೊ.ಕೆ. ರಾಮದಾಸ್ ಮುಂತಾದವರು ಇದ್ದರು. ಇವರೆಲ್ಲಾ ಲೋಹಿಯಾ ಚಿಂತನೆಗಳಿಂದ ಪ್ರಭಾವಿತರಾಗಿ ಬರಹ-ಚಳವಳಿ ಎರಡರಲ್ಲೂ ತೊಡಗಿಸಿಕೊಂಡರು. ಜಿಲ್ಲೆಗಳಲ್ಲಿ ಚಟುವಟಿಕೆಯನ್ನು ಚುರುಕುಗೊಳಿಸಿ ಲಾಯಿತು. ಜಿಲ್ಲೆಗೊಂದರಂತೆ ಸಮಾಜವಾದಿ ಯುವಜನ ಸಭಾ ರಚಿಸಿ, ಯುವಜನರನ್ನು ಕಾರ್ಯಶೀಲಗೊಳಿಸಿದರು. ಕರ್ನಾಟಕ ವಿಚಾರವಾದಿ ಒಕ್ಕೂಟವನ್ನು ಸ್ಥಾಪಿಸಿ. ಕರ್ನಾಟಕ ಲೋಹಿಯಾ ವಿಚಾರ ಮಂಥನ ಕಿರು ಪುಸ್ತಕಗಳ ಪ್ರಕಟಣೆ, ಮೂಢನಂಬಿಕೆಗಳ ವಿರುದ್ಧ ಜನಜಾಗ್ರತಿ ಆಂದೋಲನ, ಜಾತಿ ವಿನಾಶ ಸಮ್ಮೇಳನಗಳ ಸಂಘಟನೆ, ಸಾಯಿಬಾಬನ ವಿರುದ್ಧ ಚಳವಳಿ ಮುಂತಾದ ಚಟುವಟಿಕೆಗಳನ್ನು ವ್ಯಾಪಕವಾಗಿ ಪ್ರಾರಂಭಿಸಿದರು. ಮುಂದೆ ೧೯೭೪ರಲ್ಲಿ ಕಾಣಿಸಿಕೊಂಡ ನವ ನಿರ್ಮಾಣ ಚಳವಳಿಗೆ  ಸಮಾಜವಾದಿ ಯುವಜನ ಸಭಾ ಸಂಪೂರ್ಣವಾಗಿ ಪ್ರತಿಕ್ರಿಯಿಸಿತು. ತನ್ನ ಅಸ್ತಿತ್ವವನ್ನೇ ಅದರಲ್ಲಿ ವಿಲೀನಗೊಳಿಸಿತು.

೧೯೭೨ರ ಚುನಾವಣೆ ಹೊತ್ತಿಗಾಗಲೇ ಸಮಾಜವಾದಿಗಳು ರಾಜ್ಯದಲ್ಲಿ ತಮ್ಮ ನೆಲೆ ಕಳೆದುಕೊಂಡಿದ್ದರು. ಬಹುತೇಕ ಪಿ.ಎಸ್.ಪಿ. ನಾಯಕರುಗಳೆಲ್ಲ ಇಂದಿರಾಗಾಂಧಿಯವರ ಆಡಳಿತ ಕಾಂಗ್ರೆಸ್ ಸೇರಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಿಂದಿ ಕೆ. ಲಕ್ಕಪ್ಪ, ಮಂಡ್ಯ ಕ್ಷೇತ್ರದಿಂದ ಎಸ್. ಎಂ. ಕೃಷ್ಣ ಅವರು ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ ಗೆ ಸೇರಿ ಆಡಳಿತ ಕಾಂಗ್ರೆಸ್ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. ೧೯೭೨ರ ವಿಧಾನಸಭೆ ಚುನಾವಣೆ ಯಲ್ಲಿ ಕೇವಲ ಮೂರು ಸ್ಥಾನಗಳು ಮಾತ್ರ ಸಮಾಜವಾದಿ ಪಕ್ಷಕ್ಕೆ  (ಸೋಷಲಿಷ್ಟ್ ಪಾರ್ಟಿ ಎಸ್.ಓ.ಪಿ) ದೊರಕಿದವು. ಅವೆಂದರೆ ಸೊರಬದಿಂದ ಎಸ್. ಬಂಗಾರಪ್ಪ, ಸಾಗರದಿಂದ ಕಾಗೋಡು ತಿಮ್ಮಪ್ಪ, ತೀರ್ಥಹಳ್ಳಿಯಿಂದ ಕೋಣಂದೂರು ಲಿಂಗಪ್ಪ. ೧೯೭೩ರ ಹೊತ್ತಿಗೆ ಸಮಾಜವಾದಿ ಪಕ್ಷದ ಜನಪ್ರಿಯ ನಾಯಕ ಗೋಪಾಲಗೌಡರು ಇರಲಿಲ್ಲ. ಅವರ ನಂತರ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸಮರ್ಥ ನಾಯಕತ್ವವೂ ಇನ್ನು ಸಾಧವಾಗಿರಲಿಲ್ಲ.

ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಈ ಸ್ಥಿತಿಯಲ್ಲಿರುವಾಗ ಭಾರತದಲ್ಲಿ ಸಮಾಜವಾದಿ ಪಕ್ಷ ಆಡಳಿತ ಕಾಂಗ್ರೆಸ್‌ನ ಸಮರ್ಥ ವಿರೋಧ ಪಕ್ಷವಾಗಿ ಬೆಳೆಯತೊಡಗಿತ್ತು. ಜಾರ್ಜ್ ಫರ್ನಾಂಡಿಸ್‌ರ ನಾಯಕತ್ವವೂ ಇದಕ್ಕೆ ಕಾರಣವಾಗಿತ್ತು. ಅಂತೆಯೇ ರಾಜ್ಯವಾರು ಪ್ರಭಾವಿ ನಾಯಕರಿದ್ದರು. ಬಿಹಾರದ ಮಾಜಿ ಗೃಹಮಂತ್ರಿ ರಾಮಾನಂದ ತಿವಾರಿ, ಅಸ್ಸಾಂನ ಲೋಕ ಸಭಾಸದಸ್ಯ ಗೋಪಾಲ್ ಬಾರ್ಬೊಲಾ, ರಾಜಸ್ಥಾನದ ಶಾಸಕರು ಹಾಗೂ ಗಂಗಾನಗರದ ರೈತ ಆಂದೋಲನದ ಪ್ರಸಿದ್ಧ ನಾಯಕರೂ ಆದ ಪ್ರೊ. ಕೇದಾರನಾಥ್, ಕೇರಳದ  ಸೋಷಲಿಸ್ಟ್ ಪಾರ್ಟಿಯ  ಮಾಜಿ ನಾಯಕ ಕೆ.ಕೆ. ಅಬುಸಾಹೇಬ್, ತಮಿಳುನಾಡಿನ ರೈತ ಹೋರಾಟದ ನಾಯಕರು ಹಾಗೂ ಮಾಜಿ ಶಾಸನ ಸಭೆಯ ಸದಸ್ಯರಾದ ಪಿ.ಕೆ. ನಲ್ಲಂಶಿವಂ ಇಂತಹ ನಾಯಕರುಗಳಿಂದಾಗಿ ರಾಷ್ಟ್ರೀಯ ಸೋಷಲಿಸ್ಟ ಪಾರ್ಟಿ ತನ್ನದೇ ಆದ ಚಳವಳಿಗಳನ್ನು ಹುಟ್ಟುಹಾಕುತ್ತಾ, ಆಯಾ ರಾಜ್ಯಗಳಲ್ಲಿ ಜನಪರವಾದ ಕೆಲಸಗಳನ್ನು ಮಾಡುತ್ತಿತ್ತು. ಇದರ ಭಾಗವಾಗಿ ಸೊಂಡೂರಿನಲ್ಲಿ ಭೂ ಹೋರಾಟ ಸಾಧ್ಯವಾಯಿತು.

ಜಾರ್ಜ್‌ಫರ್ನಾಂಡಿಸ್ ಅವರು ಸೊಂಡೂರು ಭೂ ಹೋರಾಟದ ಕುರಿತಾಗಿ ಪತ್ರಿಕೆ ಹೇಳಿಕೆ ನೀಡಿದಾಗ ‘ಶ್ರೀಮತಿ ಇಂದಿರಾಗಾಂಧಿಯವರ ಕಪಟ ಸಮಾಜವಾದವನ್ನು ಬಯಲಿಗೆಳೆಯಲು ಈ ಹೋರಾಟ ನೆರವಾಗುತ್ತದೆ’ ಎಂದಿದ್ದರು. ಒಂದು ವೇಳೆ ಎಂ.ವೈ. ಘೋರ್ಪಡೆಯವರು ಪ್ರಧಾನಿ ಇಂದಿರಾಗಾಂಧಿಯೊಂದಿಗೆ ನೇರ ಸಂಪರ್ಕವಿರುವ ಕಾಂಗ್ರೆಸ್ ಪ್ರಭಾವಿ ರಾಜಕಾರಣಿ ಆಗದೆ ಇದ್ದಿದ್ದರೆ ಈ ಹೋರಾಟ ನಡೆಯುತ್ತಲೇ ಇರಲಿಲ್ಲ. ಅಥವಾ ಜಾರ್ಜ್‌ರಂತಹ ರಾಷ್ಟ್ರೀಯ ನಾಯಕರು ಸೊಂಡೂರಿಗೆ ಬರುತ್ತಿರಲಿಲ್ಲ. ಹಾಗಾಗಿ ಈ ಹೋರಾಟವನ್ನು ರಾಜಕೀಯಗೊಳಿಸಿ ಆಡಳಿತ ಕಾಂಗ್ರೆಸ್‌ನ ವಿರುದ್ಧದ ಹೋರಾಟವನ್ನಾಗಿ ಸಮಾಜವಾದಿ ಪಕ್ಷ ಕಂಡಿತು. ರೈತರಿಗೆ ಭೂಮಿ ಕೊಡಿಸುವುದೆ ನಿಜವಾದ ಕಾಳಜಿ ಆಗಿತ್ತಾ? ಎಂದು ಪ್ರಶ್ನೆ ಮಾಡಿಕೊಂಡರೆ, ನಿಜಕ್ಕೂ ಆಳದಲ್ಲಿ ರೈತರಿಗೆ ಭೂಮಿ ಕೊಡಿಸುವ ಕಾಳಜಿಗಿಂತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಕಡಿಮೆ ಮಾಡಬೇಕು. ವಿಫಲಗೊಂಡಿರುವ ಸಮಾಜವಾದಿ ಪಕ್ಷವನ್ನು ಚೇತರಿಸಿಕೊಳ್ಳಲು ಸಹಕಾರಿಯಾಗಬೇಕು ಎನ್ನುವ ರಾಜಕೀಯ ಉದ್ದೇಶ ಈ ಹೋರಾಟಕ್ಕಿತ್ತು. ಹಾಗಾಗಿ ಜಾರ್ಜ್‌ರಿಗೆ ಹೋರಾಟದಲ್ಲಿ ನೇರವಾಗಿ ಭಾಗವಹಿಸಿ ಭೂಮಿ ಕೋಡಿಸಲು ಆಡಳಿತ ಸರ್ಕಾರದೆದುರು ತೀವ್ರ ಒತ್ತಡ ತರಲು ಆಗಲಿಲ್ಲ. ಬದಲಾಗಿ ಭಾರತದಾದ್ಯಂತ ಇವರು ಹೋದೆಡೆಗಳೆಲ್ಲೆಲ್ಲ ಸೊಂಡೂರಿನಲ್ಲಿ ಆಗುತ್ತಿದ್ದ ಹೋರಾಟದ ಬಗೆಗೆ ಪ್ರಚಾರ ಕೈಗೊಂಡರು. ‘ಸೊಂಡೂರು ಹೋರಾಟವನ್ನು’ ಸೋಷಲಿಸ್ಟ್ ಪಾರ್ಟಿಯ ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳಲಾಯಿತು. ಆಯಾ ರಾಜ್ಯದ ಸಮಾಜವಾದಿ ನಾಯಕರನ್ನು ಈ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಕೊನೆಗೂ ಜಾರ್ಜ್ ಅವರು ಹೋರಾಟದ ಬಗ್ಗೆ ಪತ್ರಿಕೆ ಹೇಳಿಕೆ ನೀಡಿದ್ದನ್ನು ಬಿಟ್ಟರೆ ಚಳುವಳಿಯ ೪೬ ದಿನಗಳಲ್ಲಿ ಒಂದು ದಿನವೂ ಬಂದು ಭಾಗವಹಿಸಲಿಲ್ಲ. ಹೋರಾಟದ ಪ್ರಾರಂಭಕ್ಕೆ ಇದ್ದ ಹುರುಪು ನಂತರ ಉಳಿಯಲಿಲ್ಲ. ಹೋರಾಟದ ನಂತರ ಭೂಮಿಗಾಗಿ ನಡೆದ ಮಾತುಕತೆಯಲ್ಲಿಯೂ ಇವರು ಭಾಗವಹಿಸಲಿಲ್ಲ. ಆ ನಂತರ ಒಂದು ಹೇಳಿಕೆಯನ್ನು ಸಹ ಕೊಡಲಿಲ್ಲ. ರಾಷ್ಟ್ರೀಯ ನಾಯಕರಾಗಿದ್ದರಿಂದ ಗಮನಹರಿಸಲು ಸಾಧ್ಯವಾಲಿಲ್ಲ ಎಂದು ಹೇಳಿದರೆ ಅಷ್ಟು ಸರಿಯಾಗಲಾರದು.

ಸೋಷಲಿಸ್ಟ್ ಪಾರ್ಟಿಯ ಹೆಸರಲ್ಲಿ ಹೋರಾಟಕ್ಕೆ  ತೀವ್ರತೆ ತಂದವರೆಂದರೆ ಕೆ.ಜಿ. ಮಹೇಶ್ವರಪ್ಪ, ಜೆ.ಎಚ್. ಪಟೇಲ್, ಎಸ್.ಎಸ್. ಕುಮುಟ, ಎಸ್. ವೆಂಕಟರಾಮ್, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಎಂ.ಪಿ. ಪ್ರಕಾಶ್, ಕೆ.ಜಿ. ಮಹೇಶ್ವರಪ್ಪ ಅವರಿಗೆ ಸಮಾಜವಾದಿ ಪಕ್ಷದ ಆಶಯಗಳಿಗಿಂತ ಕಾಂಗ್ರೆಸ್ ವಿರೋಧಿ ಪಕ್ಷವೊಂದರಲ್ಲಿ ಹೆಸರು ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಪಕ್ಷ ಸೇರಿದ್ದರು. ಗೋಪಾಲಗೌಡರಿಗೆ ಹಣಕಾಸಿನ ನೆರವು ನೀಡುತ್ತಿದ್ದುದು ಇವರೆ. ಬೆಂಗಳೂರಿನಲ್ಲಿ ಸಮಾಜವಾದಿ ಪಕ್ಷಕ್ಕೆ ಎಂದರೆ ಒಂದು ಬಾಡಿಗೆ ರೂಮು ಸಿಗುವ ಸಾಧ್ಯತೆಯೂ ಇರಲಿಲ್ಲ. ಹಾಗಾಗಿ ಇವರು ಬೆಂಗಳೂರಿನ ಸುಬೇದಾರ್ ಚತ್ರಂ ಬಳಿ ತಮ್ಮ ಹೆಸರಿನಲ್ಲಿ ಕೋಣೆ ಹಿಡಿದು ಅದನ್ನೇ ಕಚೇರಿಯನ್ನಾಗಿ ಮಾಡಿಕೊಂಡಿದ್ದರು.

ಗೋಪಾಲಗೌಡರ ನಂತರ ಕರ್ನಾಟಕದ ಸಮಾಜವಾದಿ ಪಕ್ಷದಲ್ಲಿ ಗಟ್ಟಿಯಾದ ಹೆಸರು ಗುರುತಿಸಿಕೊಳ್ಳುವ ಸ್ಪರ್ಧೆ ತಣ್ಣಗೆ ನಡೆಯುತ್ತಿತ್ತು. ಈ ಸ್ಪರ್ಧೆಗೆ ಸೊಂಡೂರು ಹೋರಾಟ ಒಂದು ವೇದಿಕೆಯಂತೆ ಕಂಡಿತು. ಕೆ.ಜಿ. ಮಹೇಶ್ವರಪ್ಪನವರಂತೂ ಈ ಸ್ಪರ್ಧೆಯ ಹುರಿಯಾಳಿನಂತೆ ಹೋರಾಟದಲ್ಲಿ ಭಾಗವಹಿಸಿದರು. ಹೀಗಾಗಿ ಹೊಸ ತಲೆಮಾರಿನ ಸಮಾಜವಾದಿ ನಾಯಕರುಗಳ ಹೋರಾಟ ಇದಾಗಿತ್ತು. ಈಗಾಗಲೇ ಸಮಾಜವಾದಿ ಹೋರಾಟಗಾರರೆನಿಸಿ ಕೊಂಡಿದ್ದ ಹಿರಿಯ ನಾಯಕರು ಇದರಲ್ಲಿ ಭಾಗವಹಿಸಿದ್ದು ಕಡಿಮೆ. ಧಾರವಾಡದ  ನೀಲಗಂಗಯ್ಯ ಪೂಜಾರ ಬರೆದ ಪತ್ರವೊಂದರಲ್ಲಿ ‘ಸೊಂಡೂರಿನಲ್ಲಿ ರೈತ ಹೋರಾಟ ಆಯಿತೆ? ನನಗೆ ಅಷ್ಟಾಗಿ ಅದರ ಬಗ್ಗೆ ತಿಳಿದಿಲ್ಲ. ಸಂಸಾರದ ಒತ್ತಡದಲ್ಲಿ ದೂರದ ಊರುಗಳಿಗೆ ಚಳವಳಿ ಅಂತ ಸುತ್ತಲು ಆಗುತ್ತಿರಲಿಲ್ಲ. ಹೋರಾಟ ನಡೆದಿದ್ದರೆ ತಿಳಿಸಿ’ ಎಂದು ಬರೆಯುತ್ತಾರೆ. ಬಹುಶಃ ಈ ಪತ್ರ ಅವರು ಮರೆವಿನಿಂದಾಗಿ ಬರೆದಿರಬಹುದು. ಇವರು ಹೋರಾಟದಲ್ಲಿ ಭಾಗವಹಿಸಲಿಲ್ಲ ನಿಜ ಆದರೆ ಹೋರಾಟ ಸಂದರ್ಭದಲ್ಲಿಯೇ ಧಾರವಾಡ ದಲ್ಲಾದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಕುರಿತಾದ ಸೋಷಲಿಸ್ಟ್ ಪಾರ್ಟಿಯ ಜಮತ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ‘ಪ್ರಪಂಚ’, ‘ವಿಶಾಲ ಕರ್ನಾಟಕ’ ಪತ್ರಿಕೆಗಳಲ್ಲಿ ಈ ಹೋರಾಟದ ವಿವರವಾದ ಮಾಹಿತಿ ಹುಬ್ಬಳ್ಳಿ ಧಾರವಾಡಗಳಲ್ಲಿ ಪ್ರಸಾರವಾಗುತ್ತಿತ್ತು. ಆದರೂ ನೀಲಗಂಗಯ್ಯ ಪೂಜಾರ, ಅಬ್ಬಿಗೇರಿ ವಿರುಪಾಕ್ಷಪ್ಪ ಮೊದಲಾದ ಆ ಭಾಗದ ಸಮಾಜವಾದಿ ಹೋರಾಟಗಾರರು ಚಳವಳಿಯಲ್ಲಿ ಭಾಗವಹಿಸಲು ಬರಲಿಲ್ಲ. ಇವರು ಈ ಹೊತ್ತಿಗೆ ಪಕ್ಷ ದೊಂದಿಗೆ ಸಂಬಂಧ ಕಡಿದುಕೊಂಡಿದ್ದರೋ, ಹೋರಾಟ ಚಳವಳಿಗಿಂತ ವೈಯಕ್ತಿಕ ಬದುಕೆ ಭಾರವಾಗಿತ್ತೊ, ಅಥವಾ ಪಕ್ಷದ ಸದ್ಯದ ನಾಯಕರು ಇವರನ್ನು ಉಪೇಕ್ಷೆಗೆ ಗುರಿಮಾಡಿದರೋ ಎನ್ನುವದು ಖಚಿತವಾಗುವುದಿಲ್ಲ.

ಐವತ್ತರ ದಶಕದಲ್ಲಿ ಕಾಗೋಡು ಸತ್ಯಾಗ್ರಹದ ಹೊತ್ತಿನ ಕಾಂಗ್ರೆಸ್ ಮತ್ತು ಸೋಷಲಿಸ್ಟ್ ಪಾರ್ಟಿಯ ಸ್ಥಿತಿ ಎಪ್ಪತ್ತರ ದಶಕದಲ್ಲಿ ಹಲವು ಬದಲಾವಣೆಗಳಾಗಿದ್ದವು. ಕಾಂಗ್ರೆಸ್ ಜಮೀನ್ದಾರಿಯ, ಮನೋಭಾವದಿಂದ ಜನಮುಖಿಯಾಗುವ ಕಾರ್ಯಕ್ರಮಗಳಲ್ಲಿ ಆಸಕ್ತಿ ವಹಿಸಿತ್ತು. ಇಂದಿರಾಗಾಂಧಿಯವರು ರಾಜಧನ ರದ್ದುಮಾಡಿ ಸರ್ಕಾರ ರಾಜಶಾಹಿಯ ಪರವಾಗಿಲ್ಲ ಎನ್ನುವ ಜನಪ್ರಿಯ ನಂಬಿಕೆಯನ್ನು ಹುಟ್ಟುಹಾಕಿದ್ದರು. ಈ ಕಾರಣದಿಂದಾಗಿ ಐವತ್ತರ ದಶಕದಲ್ಲಿ ಕಾಂಗ್ರೆಸ್ ನ್ನು ವಿರೋಧಿಸುತ್ತಿದ್ದ ಸಮಾಜವಾದಿ ನಾಯಕರು ಕೆಲವರು ಕಾಂಗ್ರೆಸ್‌ನ ಕಡೆ ವಾಲತೊಡಗಿದರು. ಹೀಗಾಗಿ ಹಿರಿಯ ಸಮಾಜವಾದಿ ನಾಯಕರು ಹೆಚ್ಚಾಗಿ ಸೊಂಡೂರು ಹೋರಾಟದಲ್ಲಿ ಭಾಗವಹಿಸಲಿಲ್ಲ. ಈ ಹೋರಾಟದ ಸಂದರ್ಭದಲ್ಲಿ ಶಿವಮೊಗ್ಗ ಸಾಗರದ ಸೋಷಲಿಸ್ಟ್ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದರು. ಎಂ.ಪಿ. ಪ್ರಕಾಶ್ ರವರು ‘ನಮ್ಮ ಸಮಾಜವಾದಿ ಪಕ್ಷದ ಕೇಂದ್ರ ಸ್ಥಳ ಬೆಂಗಳೂರು  ಆಗಿದ್ದರೂ ಕೂಡ ನಮ್ಮ ಅನೇಕ ಸಭೆಗಳು ಕಾರ್ಯಕಾರಿ ಸಮಿತಿಯ ಮಾತುಕತೆಗಳು, ಸಭೆಗಳು ಎಲ್ಲವೂ ನಡೆಯುತ್ತಿದ್ದದ್ದು ಶಿವಮೊಗ್ಗದಲ್ಲಿ’ ಎನ್ನುತ್ತಾರೆ. ಹೀಗೆ ಸಮಾಜವಾದಿ ಪಕ್ಷದ ಪ್ರಮುಖ ಕಾರ್ಯಕರ್ತರು ಶಿವಮೊಗ್ಗದ ಭಾಗದಲ್ಲಿದ್ದರು. ಅವರೆಲ್ಲ ಈ ಹೋರಾಟದಲ್ಲಿ ಭಾಗವಹಿಸಿದರು. ಸೋಷಲಿಸ್ಟ್ ಪಾರ್ಟಿ ಶಿವಮೊಗ್ಗ ಭಾಗದಲ್ಲಿ ತಾತ್ವಿಕವಾಗಿ ಗಟ್ಟಿಯಾಗಿತ್ತು ಮತ್ತು ಚಳವಳಿಯ ಜೀವಂತಿಕೆಯನ್ನು ಉಳಿಸಿಕೊಂಡಿತ್ತು. ಬೆಂಗಳೂರಿನ ಸಮಾಜ ಕಾರ್ಯಕರ್ತರೂ ಸಹ ಅಲ್ಲಿಯೇ ಹೋರಾಟ ಬೆಂಬಲಿಸಿ ಮತ ಪ್ರದರ್ಶನ ಮಾಡಿದರು. ಹೋರಾಟ ಮುಗಿದ ಕೊನೆಯ ಹಂತದಲ್ಲಿ ‘ಸಮಾಜವಾದಿ ಯುವಜನ ಸಭಾ’ ಸೊಂಡೂರು ಹೋರಾಟದ ಬಗ್ಗೆ ಹೇಳಿಕೆ ನೀಡಿದರು. ಅದೊಂದು ಪ್ರತಿಕ್ರಿಯೆಯನ್ನು ಬಿಟ್ಟರೆ ಯುವಜನ ಸಭಾದ ಸದಸ್ಯರು ಹೋರಾಟದಲ್ಲಿ ಬಾಗವಹಿಸಿದ್ದು ಕಡಿಮೆ. ಜಯಪ್ರಕಾಶ್ ನಾರಾಯಣ ಅವರ ನವನಿರ್ಮಾಣದಲ್ಲಿ ನಂಬಿಕೆ ಇಟ್ಟ ಇವರಾರಿಗೂ ಸೊಂಡೂರು ರೈತ ಚಳವಳಿ ಕಾಡದಿದ್ದದ್ದು ಆಶ್ಚರ್ಯವೇ ಸರೀ. ಮೇಲಾಗಿ ಇವರು ಚಳವಳಿಯ ಕೇಂದ್ರವನ್ನಾಗಿ ಬೆಂಗಳೂರು, ಶಿವಮೊಗ್ಗ ಸಾಗರದಂತಹ ಪ್ರದೇಶಗಳಿಗೆ ಹೆಚ್ಚು ಸೀಮಿತಗೊಳಿಸಿಕೊಂಡಿದ್ದರು.

ಸೊಂಡೂರಿನ ರೈತ ಹೋರಾಟದಿಂದಾಗಿ ಭೂಮಿ ಸಿಕ್ಕಿತು. ಆದರೆ ಇಲ್ಲಿ ಸಮಾಜವಾದಿ ಹೋರಾಟ ಚಳವಳಿಯ ರೂಪವನ್ನು ಪಡೆಯಲಿಲ್ಲ. ಹೋರಾಟದ ನಂತರ ಸೋಷಲಿಸ್ಟ್ ಕಾರ್ಯಕರ್ತರಾರೂ ಸೊಂಡೂರಿನ ಕಡೆ ತಲೆಹಾಕಲಿಲ್ಲ. ಯಾವ ಭೂಮಿಗಾಗಿ ಹೋರಾಟ ನಡೆಯಿತೋ ಆ ಜನರಿಗೆ ಭೂಮಿ ಕೊಡಿಸಲು ಇನಾಮು ಭೂಮಿಗಾಗಿ ಅರ್ಜಿ ಹಾಕಿಸಲು ಹೋರಾಟಗಾರರು ಇರಲಿಲ್ಲ. ಎಲಿಗಾರ ತಿಮ್ಮಪ್ಪ ಮಾತ್ರ ಈ ಕಾರ್ಯ ಮಾಡುತ್ತಿದ್ದರು. ಅವರಿಗೆ ಮಿತಿಗಳಿದ್ದವು. ಸಮಾಜವಾದಿ ಸಮಾಜವನ್ನು ರೂಪಿಸುವ ಕನಸು ಈ ಭಾಗದಲ್ಲಿ ಮೊಳಕೆಯೊಡೆಯಲೆ ಇಲ್ಲ. ಬದಲಾಗಿ ಮತ್ತೆ ರಾಜಮನೆತನವೇ ಈ ಭಾಗದ ಆಡಳಿತವನ್ನು ಹಿಡಿಯಿತು. ಎಂ.ವೈ. ಘೋರ್ಪಡೆ ಅವರು ಸೊಂಡೂರನ್ನು ೩೩ ವರ್ಷಗಳ ಕಾಲ ವಿಧಾನಸಭಾ ಸದಸ್ಯರಾಗಿ ಮಂತ್ರಿಗಳಾಗಿ ಆಡಳಿತ ನಡೆಸಿದರು. ಸಮಾಜವಾದಿ ಪಕ್ಷವನ್ನು ಜಿಲ್ಲಾಧ್ಯಕ್ಷರಾಗಿದ್ದ ಎಂ.ಪಿ. ಪ್ರಕಾಶ್ ರವರು ಈ ಭಾಗದಲ್ಲಿ ಸಮಾಜವಾದಿ ಪಕ್ಷವನ್ನು ಬೆಳೆಸಲು, ಚಳವಳಿಯನ್ನು ನಿರಂತರವಾಗಿಸುವ ಸಾಧ್ಯತೆ ಇತ್ತು. ಆದರೆ ಈ ಬಗೆಗೆ ಹೋರಾಟದ ನಂತರ ಅವರು ಹೆಚ್ಚು ಗಮನಹರಿಸಲಿಲ್ಲ.

ಸೊಂಡೂರು ಹೋರಾಟ ರಾಜಮನೆತನದ ವಿರುದ್ಧವೂ, ಆಡಳಿತ ಕಾಂಗ್ರೆಸ್ ವಿರುದ್ಧವೂ ಒಂದರೊಳಗೊಂದು ಬೆರೆತಂತಿತ್ತು. ಹಾಗಾಗಿ ಕಾಂಗ್ರೆಸ್ ಸರ್ಕಾರ ರೈತ ಹೋರಾಟವನ್ನು ಹೇಗೆ ಕಂಡಿತು? ಎನ್ನುವುದು ಮುಖ್ಯ. ಮೂಲತಃ ಮುಖ್ಯಮಂತ್ರಿ ದೇವರಾಜ ಅರಸರು ಭೂಮಿ ವಿಷಯವಾಗಿ ರೈತರ ಪರವಾಗಿದ್ದವರು. ಅವರಿಗಿದ್ದ ಕಾಳಜಿಯನ್ನು ನೋಡಿದರೆ ಚಳವಳಿ ಆರಂಭಿಸುವುದಕ್ಕಿಂತ ಮುಂಚೆಯೇ ಬೇಡಿಕೆ ಈಡೇರಿಸಬಹುದಿತ್ತು. ಆದರೆ ಅವರು ತೆಗೆದುಕೊಳ್ಳುವ ನಿರ್ಧಾರ ತಮ್ಮದೇ ಸಚಿವ ಸಂಪುಟದ ಎಂ.ವೈ. ಘೋರ್ಪಡೆಯವರ ವಿರುದ್ಧವಾಗಿತ್ತು. ಇವರು ಸಂಪುಟದ ಪ್ರಭಾವಿ ಮಂತ್ರಿಯಾಗಿದ್ದರು. ಪ್ರಧಾನಿ ಇಂದಿರಾಗಾಂಧಿ ಯವರೊಂದಿಗೆ ನೇರ ಸಂಪರ್ಕವಿಟ್ಟುಕೊಂಡ ರಾಜಕಾರಣಿಯೂ ಆಗಿದ್ದರು. ಮೇಲಾಗಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ೬೦ ಎಕರೆ ಖಷ್ಕಿ ಜಮೀನು ಮಾತ್ರ ತಮ್ಮ ಒಡೆತನದ ಆಸ್ತಿ ಎಂದು ಹೇಳಿಕೆ ನೀಡಿದ್ದರು.

ಅರಸರು ಒಮ್ಮೆ ‘ಸೋಷಲಿಸ್ಟ್ ಪಾರ್ಟಿಯವರು ಹೋರಾಟಕ್ಕೆ ತಪ್ಪು ಆಯ್ಕೆ ಮಾಡಿ ಕೊಂಡಿದ್ದಾರೆ’ ಎಂದು ಗೇಲಿ ಮಾಡಿದ್ದರು. ”ನಾನು ಇನಾಮು ರದ್ದತಿಯನ್ನೇ ಮಾಡಿದ್ದೀನಿ. ನೀವಲ್ಲಿ ಹುಡುಗಾಟಿಕೆ ಮಾಡಿ ತಿರುಗಾಡುತ್ತಿದ್ದೀರಿ. ನಿಮ್ಮ ಸಮಾಜವಾದಿ ಪಕ್ಷದವರಿಗೇನು ಬೇರೆ ಕೆಲಸ ಇಲ್ಲವೇನು? ಅಲ್ಲಿ ಗೇಣಿನೇ ಇಲ್ಲ” ಎಂದು ಹೋರಾಟದ ಮುಖಂಡರನ್ನು

ಮಾತುಕತೆಗೆ ಕರೆಸಿದಾಗ ಹೇಳಿದ್ದರು. ಮೈಸೂರು ರಾಜ್ಯದಲ್ಲಿ ಗೇಣಿರದ್ದತಿಗೆ ಕಾಯ್ದೆ ಮಾಡುವ ಹೊತ್ತಿಗೆ ಸೊಂಡೂರಿನ ಸಂಸ್ಥಾನದ್ದೇ ಬೇರೆ ಕಾಯಿದೆಗಳು ಇರುವುದು ಗೊತ್ತಾಗದೆ, ಇಲ್ಲಿ ಮಾತ್ರ ಪದ್ದತಿ ಹಾಗೆ ಮುಂದುವರಿದಿತ್ತು. ಇದನ್ನು ಕಾನೂನು ವಿಭಾಗದವರು ಮುಖ್ಯಮಂತ್ರಿಗಳಿಗೆ ವಿವರಿಸಿದಾಗ ಸೊಂಡೂರಿನಲ್ಲಿ ಗೇಣಿ ಪದ್ದತಿ ಇರುವ ಬಗ್ಗೆ ತಿಳಿಯಿತು. ಆ ನಂತರ ಇವರು ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದರು. ಆದರೆ ಎಂ.ವೈ. ಘೋರ್ಪಡೆಯವರ ಕಾರಣಕ್ಕಾಗಿ ಮೌನವಾದರು. ಹೋರಾಟದ ಬಗೆಗೆ ಹೇಳಿಕೆ ನೀಡಿದಾಗಲೂ ಅದು ರೈತಪರವಾಗಿಲಿಲ್ಲ. ಒಂದೆರಡು ಬೇಡಿಕೆಗಳನ್ನು ಹೊರತುಪಡಿಸಿದರೆ ರಾಜಮನೆತನವನ್ನು ಘೋಷಿಸುವ ನಿರ್ಣಯಗಳಿದ್ದವು. ಸೋಷಲಿಸ್ಟ್ ಪಾರ್ಟಿಯ ಕಾರ್ಯಕರ್ತರು ‘ಮುಖ್ಯಮಂತ್ರಿಗಳು ಸೊಂಡೂರಿಗೆ ಬಂದು ಪರಿಶೀಲಿಸಬೇಕೆಂದು’ ಆಹ್ವಾನಿಸಿದರು. ಆದರೆ ಅವರು ೪೬ ದಿನಗಳ ಕಾಲ ಹೊರಾಟ ನಡೆದರೂ ಸೊಂಡೂರಿಗೆ ಅರಸರು ಬರಲಲ್ಲ.

ವಿಧಾನಮಂಡಲದ ಕಲಾಪಗಳ ಚರ್ಚೆಯನ್ನು ಗಮನಿಸಿದರೆ ಮುಖ್ಯಮಂತ್ರಿಗಳ ಗೈರು ಹಾಜರಿಯು ಹೆಚ್ಚಿದೆ. ಇದಕ್ಕೆ ಬೇರೆ ಕಾರಣ ಇರಬಹುದಾದರೂ ಸೂಂಡೂರಿನ ಬಗೆಗಿನ ಚರ್ಚೆಗೆ ಪ್ರತಿಕ್ರಿಯಿಸಬೇಕಾಗುತ್ತದೆ ಎನ್ನುವುದು ಇವರ ಗೈರು ಹಾಜರಿಗೆ ಕಾರಣವಿರಬಹುದು. ಹೋರಾಟದ ಕೊನೆಗೆ ಲಾಠಿಚಾರ್ಜ್ ಆಗಿ ಚಳುವಳಿಯಲ್ಲಿ ಹಿಂಸೆ ಆದಗಲೂ ಪೋಲೀಸ್ ದೌರ್ಜನ್ಯದ ವಿರುದ್ದ ಅರಸು ಮಿದುವಾದ ಧೋರಣೆ ಸುಳಿದರು. ಹೋರಾಟದ ನಂತರ ೧೯೭೪ರಲ್ಲಿ ಎಲಿಗಾರ ತಿಮ್ಮಪ್ಪನನ್ನು ಐ.ಜಿ.ಪಿ, ಲಾಕಪ್‌ನಲ್ಲಿಟ್ಟು ಹಿಂಸೆಕೊಟ್ಟಾಗಲೂ ಈ ಬಗ್ಗೆ ಅರಸು ಪ್ರತಿಕ್ರಿಯೆ ಮೌನವಾಗಿತ್ತು. ಈ ಎಲ್ಲಾ ಕಾರಣದಿಂದಾಗಿ ಕಾಂಗ್ರೆಸ್ ಸರ್ಕಾರ ಹೋರಾಟವನ್ನು ಬೆಂಬಲಿಸುವ ಮತ್ತು ಸಂಪುಟದ ಅರ್ಥಮಂತ್ರಿಯನ್ನು ವಿರೋಧಿಸುವ ಸಂದಿಗ್ಧತೆಯಲ್ಲಿ ಉಳಿಯಿತು. ಆದರೆ ಇನಾಮು ಅಬಾಲಿಷನ್ ಆಕ್ಟ್ ತರುವ ಮೂಲಕ ಗೇಣಿಯನ್ನು ರದ್ದುಗೊಳಿಸಿ ಊಳುವವನೆ ಭೂ ಒಡೆಯ ಎಂಬ ಕಾನೂನನ್ನು ಜಾರಿಗೊಳಿಸಲಾಯಿತು. ಇದು ಸೊಂಡೂರಿನಲ್ಲಾದ ಐತಿಹಾಸಿಕ ಪರಿವರ್ತನೆ. ಅರಸು ಕೆಲವು ಒತ್ತಡಗಳಿಗೆ ಮಣಿದರಾದರೂ ಅಂತಿಮವಾಗಿ ಇನಾಂ ರದ್ದುಗೊಳಿಸುವ ಮೂಲಕ ರೈತ ಪರವಾದ ಕಾಳಜಿಯನ್ನು ಎತ್ತಿಹಿಡಿದರು. ಕಾಗೋಡು ತಿಮ್ಮಪ್ಪ ‘ಕಾಗೋಡು ಚಳುವಳಿಯ ಸಂಧರ್ಭಕ್ಕೆ ಕಾಂಗ್ರೆಸ್ ಹೋರಾಟದ ಬಗ್ಗೆ ತಳೆದ ನಿಲುವು ತುಂಬ ಕಠೋರವಾಗಿತ್ತು. ಕೊನೆಗೂ ಸ್ಪಂದಿಸಲಿಲ್ಲ. ಆದರೆ ಸೊಂಡುರು ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ತಡವಾಗಿಯಾದರೂ ಸ್ಪಂದಿಸಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವರಾಜ ಅರಸರು ಇರುವ ಕಾರಣಕ್ಕೆ ಸೊಂಡೂರಿನ ಜನರಿಗೆ ಭೂಮಿ ಸಿಗುವಂತಾಯಿತು’ ಎನ್ನುತ್ತಾರೆ. ಹೀಗೆ ಸೊಂಡೂರು ಹೋರಾಟದಿಂದ ಭೂಮಿ ಸಿಕ್ಕಿತು ಎನ್ನುವುದಾದರೆ ಸೋಷಲಿಸ್ಟ್ ಪಾರ್ಟಿಯ ಹೋರಾಟದಂತೆ ಕಾಂಗ್ರೆಸ್ ಸರ್ಕಾರದ ಸ್ಪಂದನೆ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಈ ಹೋರಾಟದಿಂದ ಅಮೂಲಾಗ್ರ ಬದಲಾವಣೆ ಸಾಧ್ಯವಾಗಲಿಲ್ಲ. ಆದರೆ ರೈತರಲ್ಲಿ ಒಂದು ಸಣ್ಣ ಬದಲಾವಣೆಯ ಬೀಜ ಬಿತ್ತಿತ್ತು.