ಅಂತಿಮವಾಗಿ ಸೊಂಡೂರು ಹೋರಾಟ ಸಾಧ್ಯವಾದದ್ದು ಯಾರಿಂದ ಎಂದುಕೊಂಡರೆ ಒಂದು ಸಮೂಹವೇ ಎದುರು ನಿಲ್ಲುತ್ತದೆ. ಈ ಹೋರಾಟ ಒಬ್ಬರ ವೈಯಕ್ತಿಕ ಯಶಸ್ಸಲ್ಲ. ಅದು ಅಂತಿಮವಾಗಿ ಸಮಾನಾಸಕ್ತ ಸಮೂಹದ ಯಶಸ್ಸೆ ಆದರೂ ಸಮೂಹ ದೊಳಗೆ ಭಿನ್ನ ವ್ಯಕ್ತಿತ್ವಗಳು ಒಂದು ಹೋರಾಟಕ್ಕೆ ಬೇರೆ ಬೇರೆ ರೀತಿಯ ಕಾಣಿಕೆ ನೀಡಿರುತ್ತವೆ. ಹಾಗಾಗಿ ಚಳವಳಿಯಲ್ಲಿ ಶ್ರಮಿಸಿದ ವ್ಯಕ್ತಿತ್ವಗಳನ್ನು ಇಲ್ಲಿ ವಿಶ್ವೇಷಿಸಲಾಗಿದೆ. ಭಾಗವಹಿಸುವಿಕೆಯ ಉಲ್ಲೇಖಗಳು ಈ ಹಿಂದೆ ಬಂದಿರುವುದರಿಂದ ಇಲ್ಲಿ ಸಂಕ್ಷಿಪ್ತವಾಗಿ ಹೋರಾಟಕ್ಕೆ ಶ್ರಮಿಸಿದವರ ಚಿತ್ರಕೊಡಲಾಗಿದೆ.

ಸೊಂಡೂರಿನಲ್ಲಿ ಪ್ರತಿಭಟನೆಯ ಬೀಜ ಬಿತ್ತದ್ದು ಯಜಮಾನ ಶಾಂತರುದ್ರಪ್ಪ. ಇವರು ಬಳ್ಳಾರಿಯವರು. ವಿಠಲ ಪ್ರೆಸ್ ನಡೆಸಿಕೊಂಡು ‘ಯಜಮಾನ್ ಅಂಡ್ ಬ್ರದರ್’ ಎನ್ನುವ ಪುಸ್ತಕದಂಗಡಿ ಇಟ್ಟುಕೊಂಡು ಇದ್ದವರು. ಬಳ್ಳಾರಿಗೆ ಆಂಧ್ರದ ರೈತ ಹೋರಾಟಗಳ ಪ್ರಭಾವವಿತ್ತು. ತೆಲಂಗಾಣ ಹೋರಾಟವು ಇಲ್ಲಿಯ ಬಹುತೇಕರನ್ನು ಪ್ರಭಾವಿಸಿತು. ಯಜಮಾನರೂ ಇದರಿಂದ ಪ್ರಭಾವಿತರಾದರು. ಬಳ್ಳಾರಿಯು ಹಲವು ಸಂಘರ್ಷ ಪ್ರತಿಭಟನೆಯ ತವರಿನಂತಿತ್ತು. ರಂಜಾನ್ ಸಾಬ್, ಮಹಾಬಳೇಶ್ವರಪ್ಪ ಇಂತಹವರ ಗೆಳೆತನ ಯಜಮಾನರನ್ನು ಹೋರಾಟಗಾರರನ್ನಾಗಿ ಪ್ರಭಾವಿಸಿತು. ಇವರು ಕನ್ನಡ ಪುಸ್ತಕಗಳನ್ನು ತಲೆಮೇಲೆ ಹೊತ್ತು ಮಾರಾಟ ಮಾಡಿದ ಪುಸ್ತಕ ಪ್ರೇಮಿಯೂ ಹೌದು. ೪೦ರ ದಶಕದಲ್ಲಿಯೇ ‘ಸೊಂಡೂರು ವಿಮೋಚನಾ ಸಮರ ಸಮಿತಿ’ ಯನ್ನು ಹುಟ್ಟು ಹಾಕಿದರು. ಇದರ ಮೂಲಕ ಸೊಂಡೂರು ರಾಜರನ್ನು ವಿರೋಧಿಸಿ ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಸೊಂಡುರಿನ ಯಶವಂತರಾವ್ ಘೋರ್ಪಡೆ ಮೂಲವಂಶಜರಲ್ಲ, ಇವರು ಕುಮಾರಸ್ವಾಮಿಯ ದೇವಸ್ಥಾನದ ಮೂಲ ಟ್ರಸ್ಟಿ ರಾಜವಂಶ ಅಲ್ಲ ಎನ್ನುವುದೇ ಇವರು ಹೋರಾಟದ ಪ್ರಮುಖ ಧ್ಯೇಯಗಳಾಗಿದ್ದವು. ಕುಮಾರಸ್ವಾಮಿಯ ಪ್ರತಿ ಜಾತ್ರೆಗೂ ದರ್ಶನ ಕರ ವಿರೋಧಿ ಪ್ರತಿಭಟನೆ ಮಾಡುತ್ತಾ ಬಂದರು ಮೂಲತಃ ಗಾಂಧಿವಾದಿಗಳಾದ ಇವರು ಹೋರಾಟವೆಂದರೆ ಕೋರ್ಟು, ಕಛೇರಿ, ಅರ್ಜಿಗಳ ಮೂಲಕ ಇತ್ಯಾರ್ಥ ಆಗಬೇಕು ಎಂದು ನಂಬಿದವರು. ಕರ್ನಾಟಕ ಏಕೀಕರಣದಲ್ಲಿಯೂ, ಬಳ್ಳಾರಿಯಲ್ಲಿ ಕನ್ನಡಪರ ಚಳವಳಿಯಲ್ಲಿಯೂ ಇವರದು ಮುಂಚೂಣಿ ನಾಯಕತ್ವ. ೧೯೭೩ ಹೋರಾಟದಲ್ಲಿ ಚಳವಳಿಯುದ್ದಕ್ಕೂ ಇದ್ದರು. ಈವರೆಗಿನ ಅವರ ಒಂಟಿತನದ ಹೋರಾಟಕ್ಕೆ ಒಂದು ಸಾಮೂಹಿಕ ಧ್ವನಿ ಬಂದಿತ್ತು. ೧೯೭೩ರಲ್ಲಿ ಹೋರಾಟ ಆಗುವುದಕ್ಕೆ ಈ ಭಾಗದಲ್ಲಿ ಅವರು ಹುಟ್ಟು ಹಾಕಿದ ಹೋರಾಟ ಪರಂಪರೆಯೂ ಕಾರಣವಾಯಿತು.

ಎಲಿಗಾರ ತಿಮ್ಮಪ್ಪ ಈ ಹೋರಾಟದ ರುವಾರಿ, ಯಜಮಾನರು ಮಂದಗಾಮಿ ಹೋರಾಟಗಾರರಾದರೆ, ಇವರು ತೀವ್ರಗಾಮಿ. ಕೋರ್ಟು ಕಛೇರಿಗಳ ಮೂಲಕ ನಮ್ಮ ಹೋರಾಟಕ್ಕೆ ಯಶ ದೊರೆಯಲಾರದು ಎಂದು ನಂಬಿದವರು. ಎಂ. ವೈ. ಘೋರ್ಪಡೆ ಇವರು ಜೊತೆಯಲ್ಲೆ ಓದಿದವರು. ಶಾಲೆಗಳಲ್ಲಿ ಘೋರ್ಪಡೆಯವರಗೆ ಪ್ರತ್ಯೇಕ ಆಸನದಲ್ಲಿ ಕೂರಿಸಿ ಪಾಠ ಮಾಡುವಾಗಲೂ ‘ಆತನಿಗೇಕೆ ಪ್ರತ್ಯೇಕ ಆಸನ.. ನಮ್ಮಂತೆ ಆತನೂ ಕುಳಿತುಕೊಳ್ಳಲಿ..’ ಎಂದು ಪ್ರತಿಭಟಿಸುತ್ತಿದ್ದರಂತೆ. ಹೀಗೆ ಬಾಲ್ಯದಿಂದಲೂ ರಾಜಮನೆತವನ್ನು ವಿರೋಧಿಸುತ್ತ ಬಂದವರು. ಸೊಂಡೂರನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವಾಗಲೂ ಹೋರಾಟದಲ್ಲಿ ಇದ್ದರು. ಯಜಮಾನ ಶಾಂತರುದ್ರಪ್ಪನವರ ಪ್ರತಿಭಟನೆಗಳಿಗೆ ಸೊಂಡೂರಿನಲ್ಲಿ ತಮ್ಮ ಸಹಚರರೊಂದಿಗೆ ಬೆಂಬಲ ದೊರೆಯುತ್ತಿದ್ದುದು ಇವರಿಂದಲೆ ಮೂಲತಃ ಕಾಂಗ್ರೆಸ್  ಇಬ್ಭಾಗವಾದಾಗ ಎಸ್. ನಿಜಲಿಂಗಪ್ಪನವರ ಸಂಸ್ಥಾ ಕಾಂಗ್ರೆಸ್ಸಿಗೆ ಸೇರಿದವರು. ಭೂ ಅಭಿವೃದ್ಧಿ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಉತ್ತಮ ಕೆಲಸ  ನಿರ್ವಹಿಸಿದರು. ಸೊಂಡುರಿನ ರೈತ ಚಳವಳಿಯನ್ನು ಪ್ರಾರಂಭಿಸಲು ಸಂಸ್ಥಾ ಕಾಂಗ್ರೆಸ್ಸಿನ ನಾಯಕರನ್ನು ಕೇಳಿಕೊಂಡರು. ಭೂಮಾಲಿಕರು ತುಂಬಿಕೊಂಡ ಸಂಸ್ಥಾ ಕಾಂಗ್ರೆಸ್ ನಾಯಕರು ಭೂಮಿಗಾಗಿ ನಡೆಯುವ ಹೋರಾಟಕ್ಕೆ ಸಹಜವಾಗಿ ಬೆಂಬಲಿಸಲಿಲ್ಲ. ಇದರಿಂದಾಗಿ ತಿಮ್ಮಪ್ಪನವರು ಸಂಸ್ಥಾ ಕಾಂಗ್ರೆಸ್ ತೊರೆದು ಸೊಂಡುರಿನಲ್ಲೊಂದು  ‘ರೈತ ಸಂಘ ಸ್ಥಾಪಿಸಿದರು’. ಇದರ ಮೊದಲ ಅಧ್ಯಕ್ಷರು ಇವರೇ ಆದರು. ಸೋಷಲಿಸ್ಟ್ ಪಾರ್ಟಿಯ ಜೆ.ಎಚ್.ಪಟೇಲ್, ಕೆ.ಜಿ.ಮಹೇಶ್ವರಪ್ಪ ಇವರನ್ನು ಸಂಪರ್ಕಿಸಿ ಹೋರಾಟವನ್ನು ರೂಪಿಸಿದರು. ಹೋರಾಟದ ಪ್ರಾರಂಭದಿಂದಲೂ ಕೊನೆಯವರೆಗೆ ಸ್ಥಳೀಯ ನಾಯಕರಾಗಿ ಇವರು ನಿರ್ವಹಿಸಿದ ಪಾತ್ರ ಗಮನಾರ್ಹ. ಹೋರಾಟದ ನಂತರ ರಾಜಮನೆತನದಿಂದ ಚಿತ್ರಹಿಂಸೆ ಅನುಭವಿಸಿದರು. ಸ್ಥಳೀಯವಾಗಿ ರಾಜಮನೆತನಕ್ಕೆ ಇಂತಹ ಪ್ರಭಾವಿ ಪ್ರತಿಸ್ಪರ್ಧಿ ಇರದೆ ಹೋಗಿದ್ದರೆ ಹೋರಾಟ ಸಾಧ್ಯವಾಗುತ್ತಿರಲಿಲ್ಲ.

ಎಲ್ಲರೂ ರಾಜರನ್ನು ಆರಾಧನಾಭಾವದಿಂದ ನೋಡುವ ಹೊತ್ತಲ್ಲಿ ಸೊಂಡೂರು ತಾಲೂಕಿನ ಕೆಲವರು ರಾಜರನ್ನು ವಿರೋಧಿಸುವ ಧೈರ್ಯವನ್ನು ತೋರಿದರು. ಅಂತವರ ಭಾಗವಹಿಸುವಿಕೆ ಕಡಿಮೆ ಇದ್ದರೂ ಇವರಿಂದಾಗಿಯೇ ಚಳವಳಿಗೊಂದು ಶಕ್ತಿ ಬಂದಿತು. ಇಲ್ಲದೆ ಹೋಗಿದ್ದರೆ ಸೋಷಲಿಸ್ಟ್ ಕಾರ್ಯಕರ್ತರು ಮಾತ್ರ ಭಾಗವಹಿಸಿದ ಜನರಿಲ್ಲದ ಹೋರಾಟವಾಗುವ ಸಾಧ್ಯತೆ ಇತ್ತು. ನರಸಾಪುರದ ಷಣ್ಮುಖಪ್ಪ ದೇಸಾಯಿ ಈ ಭಾಗದ ರೈತರನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದರು. ಸ್ವತಃ ಅವರು ಹೋರಾಟದಲ್ಲಿ ಭಾಗವಹಿಸಿ ರೈತರನ್ನು ಹುರಿದುಂಬಿಸಿದರು. ತಿಮ್ಮಪ್ಪನವರಿಗೆ ಪ್ರಮುಖ ಶಕ್ತಿಯಂತೆಯೂ ಇದ್ದರು. ಅವರನ್ನು ಮಾತನಾಡಿಸಿದಾಗ.. ‘ಅದು ದೊಡ್ಡ ಹೋರಾಟ ಬಿಡ್ರಿ… ಅಂಥ ಹೋರಾಟ ಸೊಂಡೂರಿನಲ್ಲಿ ಹಿಂದೆಯೂ ಆಗಿರಲಿಲ್ಲ.. ಇನ್ನು ಮುಂದೆಯೂ ಆಗಲ್ಲ. ನಾವೆಲ್ಲ ರಾಜರ ಕಡೆಯವರಿಂದ ತುಂಬಾ ಕಷ್ಟ ಅನುಭವಿಸಿದ್ವಿ, ಆದ್ರೂ ಭೂಮಿ ಸಿಕ್ತು.. ಈಗ ಆ ಭೂಮಿ ಸಿಕ್ಕವರೇ ಘೋರ್ಪಡೆಯವರನ್ನು ಮೀರಿಸೋ ರೀತಿ ಐದಾರ’ ಎನ್ನುತ್ತಾರೆ. ಪಾತ್ರ ಸೀನಪ್ಪ ಹೋರಾಟದಲ್ಲಿ ವಿಶಿಷ್ಟ ಪಾತ್ರವಹಿಸಿದರು. ವೈಯಕ್ತಿಕವಾಗಿ ಎಲಿಗಾರ ತಿಮ್ಮಪ್ಪನನ್ನು ವಿರೋಧಿಸುತ್ತಿದ್ದರು ಎಂದು ಅವರನ್ನು ಮಾತನಾಡಿಸಿದಾಗ ತಿಳಿಯಿತು. ‘ಹೋರಾಟಕ್ಕೆ ಆತನೇನು ಕಳ್ಕೊಂಡ.. ಮಕ್ಕಳಿಗೆಲ್ಲ ಆಸ್ತಿ ಮಾಡಿದ.. ಹೋರಾಟಕ್ಕೆ ಹಣ ಖರ್ಚು ಮಾಡಿದ್ದು ನಾನು’ ಎನ್ನುತ್ತಾರೆ. ಸಾರಾಯಿ ಕಂಟ್ರಾಕ್ಟ್ ಸೀನಪ್ಪನೇ ಹಿಡಿದುದ್ದರಿಂದ ಚಳವಳಿಯಲ್ಲಿ ಭಾಗವಹಿಸುವ ರೈತರಿಗೆ ಈತ ಸಾರಾಯಿಯನ್ನು ಹಂಚುತ್ತಿದ್ದರಂತೆ ಚಳುವಳಿಯ ಕೊನೆಗೆ ೧೪೪ ಸೆಕ್ಷನ್ ಜಾರಿಯಾದಾಗ ಪೋಲಿಸರಿಂದ ಒದೆ ತಿಂದು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆ ಗಾಯದ ಗುರುತನ್ನು ತೋರಿಸುತ್ತ ‘ಇದೇ ನೋಡ್ರಿ ಹೋರಾಟದ ಗುರ್ತು’ ಎಂದು ಹೋರಾಟ ಸಂದರ್ಭದ ಖಾಸಗಿ ವಿವರಗಳನ್ನು ಹೇಳುತ್ತ ಹಾಸ್ಯಭರಿತವಾಗಿ ವಿವರಿಸುತ್ತಾರೆ. ಬಾಚಿಗೊಂಡನಹಳ್ಳಿಯ ಕೆ. ಚನ್ನವಸವನಗೌಡರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ ೧೯೭೨ರಲ್ಲಿ ಸದನದಲ್ಲಿ ಎಂ.ವೈ.ಘೋರ್ಪಡೆ ಇವರನ್ನು ಅಕ್ರಮ ಗಣಿಗಾರಿಕೆ ವಿಷಯವಾಗಿ ಪ್ರಶ್ನಿಸಿದ್ದರು ಆದರೆ ಇವರನ್ನು ಯಾರು ಬೆಂಬಲಿಸಿದಲಿಲ್ಲ. ಇವರು ಹೋರಾಟದಲ್ಲಿ ಭಾಗವಹಿಸಲಿಲ್ಲ. ಮುಂದೆ ಎಂ.ವೈ. ಘೋರ್ಪಡೆ ಅವರನ್ನು ಸನ್ಮಾನಿಸಿದ್ದಾಗಿ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆಯುತ್ತಾರೆ.

ಸೊಂಡೂರಿನ ಸ್ಥಳೀಯರಿಗಿಂತ ಸುತ್ತಮುತ್ತಲ ಹಳ್ಳಿಗಳ ರೈತರು ಈ ಹೋರಾಟದಲ್ಲಿ ಭಾಗವಹಿಸಿದ್ದು ಹೆಚ್ಚು. ಅವರು ನೇರವಾಗಿ ರಾಜರ ಅಧೀನದಲ್ಲಿದ್ದದ್ದು ಕಡಿಮೆ. ಹಾಗಾಗಿ ಸ್ಥಳೀಯರಿಗಿಂತ ಇವರು ರಾಜಮನೆತನದ ಎದುರಿನ ಹೋರಾಟದಲ್ಲಿ ಭಾಗವಹಿವುದು ಭಯದ ವಿಷಯ ಆಗಿರಲಿಲ್ಲ. ಮೇಲಾಗಿ ಇನಾಮು ಭೂಮಿ ಇದ್ದದ್ದು ಹೆಚ್ಚು ಗ್ರಾಮೀಣ ಭಾಗದ ರೈತರವು. ಅವರೆಂದರೆ ಹರಿಜನ ಬುಡ್ಡಮ್ಮ, ಬಂಡ್ರಿಗ್ರಾಮದ ಸೋಮಪ್ಪ ನಾಯ್ಕರ ಹೊನ್ನೂರಪ್ಪ. ಟಿ.ಕೃಷ್ಣಪ್ಪ, ರೈತ ಸಂಘದ ಡೈರೆಕ್ಟರ್ ಜುಮ್ಮನಗೌಡ, ಸಣ್ಣ ಬಸಪ್ಪ, ಭುಜಂಗ ನಗರದ ವಡ್ಡನಕಟ್ಟಿ ಶಾಂತಮ್ಮ, ದೌಲತ್ ಪುರದ ಪಂಚಾಯ್ತಿ ಸದಸ್ಯ, ಆರ್.ಶಿವಮೂರ್ತಿ, ಪ್ರಮುಖ ರೈತ ವಿ.ನಾಗಪ್ಪ ಕಂಪ್ಲಿ ಇಮಾಮ್ ಸಾಬ್, ಕೃಷ್ಣನಗರದ ಮಾಳಿಗೆಮನೆ ಮಾರಪ್ಪ, ಮುರಡಿ ಕೃಷ್ಣಪ್ಪ, ರೈತ ಸಂಘದ ಉಪಾಧ್ಯಕ್ಷ ಜಿಗಿನಿಹಳ್ಳಿ ಬಸವನಗೌಡ, ತ್ಯಾಗದಾಳು ಪಂಚಾಯ್ತಿ ಸದಸ್ಯ ಲತೀಫ್ ಸಾಹೇಬ್, ನರಸಾಪುರದ ಗಂಗಪ್ಪ, ಸಿ.ಭೀಮಪ್ಪ, ಕೆ ಚೌಡಪ್ಪ, ಆರ್.ಪರಮೇಶ್ವರಪ್ಪ, ವಿ.ಹನುಮಂತಪ್ಪ, ದುರ್ಗಪ್ಪ, ಕೆ.ತಿಮ್ಮಪ್ಪ, ರೇವಗಲ್ ಕುಮಾರ ಸ್ವಾಮಿ, ಸುಬ್ಬಯ್ಯ, ಮರಿಈರಪ್ಪ, ಹನುಮಂತಪ್ಪ, ಗಿರಿಯಪ್ಪ, ಲಿಂಗಾರೆಡ್ಡಿ, ದುರ್ಗಪ್ಪ, ಕೆ.ತಿಮ್ಮಪ್ಪ, ಕೃಷ್ಣಪ್ಪ, ಕೃಷ್ಣನಗರದ ಪಂಚಾಯ್ತಿ ಅಧ್ಯಕ್ಷ ಇಮಾಮ್ ಸಾಬ್, ಮೇದಾರ ಹುಲ್ಲೆಮ್ಮ, ಮೇದಾರ ಭೀಮಕ್ಕ, ಎನ್.ಎಂ. ಶಿವದೇವಮ್ಮ ಹೀಗೆ ಹೀಲ್ಲೇಖಗೊಂಡ ಮತ್ತು ಮಾಹಿತಿ ಸಿಕ್ಕ ಹೆಸರುಗಳು. ಇವರು ತಮ್ಮ ತಮ್ಮ ಗ್ರಾಮಗಳಿಂದ ರೈತರನ್ನು ಕರೆತಂದು ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು. ಇವರ ಭಾಗವಹಿಸುವಿಕೆ ಹಿಂದೆ ‘ಭೂಮಿ ಸಿಗುತ್ತದೆ.. ನಾವೇ ಒಡೆಯರಾಗುತ್ತೇವೆ’ ಎಂಬ ಕನಸಿತ್ತು. ಇನ್ನು ಕೆಲವರು ಇನಾಮು ಭೂಮಿ ಇಲ್ಲದ  ನಾಯಕರೂ ಭಾಗವಹಿಸಿದರು. ಪಾತ್ರ ಸೀನಪ್ಪ ಮಾತನಾಡುತ್ತ ‘ನಮ್ ಭೂಮಿ ಇದ್ದು ಹೋರಾಡಿದ್ರೆ ಸ್ವಾರ್ಥ ಆಗುತ್ತೆ.. ಭೂಮಿ ಇರೋ ರೈತರು ಬಾಳ ಜನ ಬರಿಲ್ಲ.. ಅವರೆಲ್ಲ, ರಾಜರು ಅಂದ್ರೆ ಹೆದ್ರಿ ತತ್ತಿ ಹಾಕ್ತಿದ್ರು.. ನಾವು ಅಂಥವರ ಪರವಾಗಿ ಹೋರಾಟದಲ್ಲಿ ಭಾಗವಸಿದ್ವಿ’ ಎನ್ನುತ್ತಾರೆ. ಹಾಗೆ ನೋಡಿದರೆ ಈಗಾಗಲೇ ಇನಾಮು ಭೂಮಿ ಹೆಚ್ಚು ಇರುವ ನಾಯಕ (ವಾಲ್ಮೀಕಿ) ಸಮುದಾಯ ಈ ಹೋರಾಟದಲ್ಲಿ ಭಾಗವಹಿಸಿದ್ದು ಬೆರಳೆಣಿಕೆಯ ಜನರು ಮಾತ್ರ. ಕುಮಾರಸ್ವಾಮಿ ಜಮೀನಿಗಾಗಿ  ಹೋರಾಟ ಇದಾಗಿದ್ದರಿಂದ ಕೆಲವರಿಗೆ ದೇವರ ಎದುರಿನ ಹೋರಾಟವಾಗಿ ಕಂಡಿತು. ಹರಿಜನ ತಿಂದಪ್ಪನನ್ನು  ಮಾತನಾಡಿಸಿದಾಗ ‘ದೇವರ ಭೂಮಿ ತೊಗೊಂಡು ಯಾರು ಉದ್ಧಾರ ಆಗ್ಯಾರೀ.. ರಾಜರೇನು ಮಾಡಿದ್ರು.. ದೇವರ ಭೂಮಿ ನಿಮಗೆ ಕೊಟ್ಟೀವಿ.. ಕುಮಾರಸ್ವಾಮಿಗೆ ಬಿಟ್ಟಿದ್ದು.. ಬಂದದ್ದ ಅನುಭವಸ್ರಿ ಅಂತ ಅಂದ್ರು.. ಆಮ್ಯಾಲೆ ಬಾಳ ಜನಕ್ಕೆ ಕೇಡು ಆಯ್ತು’ ಎಂದರು. ಅಂದರೆ ದೇವರ ಹೆಸರಲ್ಲಿ ಹುಟ್ಟಿದ ಭಯವು ರೈತರಲ್ಲಿ ಚಳವಳಿಯಲ್ಲಿ ಭಾಗವಹಿಸುವುದನ್ನು ತಡೆಯಿತು.

‘ಕಾಗೋಡು ಸತ್ಯಾಗ್ರಹಕ್ಕೆ ಲೋಹಿಯಾ.. ಸೊಂಡೂರು ಹೋರಾಟಕ್ಕೆ ಜಾರ್ಜ್’ ಎಂದು ಸಮಾಜವಾದಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಕೂಗುತ್ತಿದ್ದರು. ಈ ಹೋರಾಟಕ್ಕೆ ಹೆಚ್ಚು ಜನಪ್ರಿಯತೆ ಮತ್ತು ಗಂಭೀರತೆ ಸಿಕ್ಕಿದ್ದು ಜಾರ್ಜ್ ಫರ್ನಾಂಡಿಸ್ ಅವರಿಂದ. ಹೋರಾಟಕ್ಕೂ ಮುನ್ನ ಸೊಂಡೂರಿನಲ್ಲಿ ಬಹಿರಂಗ ಸಭೆ ಮಾಡಿ ರಾಜಮನೆತನವನ್ನು ಕಟುವಾಗಿ ಟೀಕಿಸಿದರು. ಅವರು ಆಗ ಸಮಾಜವಾದಿ ಪಾರ್ಟಿಯ ರಾಷ್ಟೀಯ ಅಧ್ಯರಾಗಿದ್ದರು. ಕಾಂಗ್ರೆಸ್ ಪಕ್ಷದ ಪ್ರಬಲ ವಿರೋಧಿ ನಾಯಕರು ಕೂಡ, ಸೊಂಡೂರು ಭೂ ಹೋರಾಟದ ರಾಷ್ಟೀಯ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದ ಪ್ರಬಲ ವಿರೋಧಿ ನಾಯಕರು ಕೂಡ, ಸೊಂಡೂರು ಭೂ ಹೋರಾಟದ ರಾಷ್ಟೀಯ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ ಜಾರ್ಜ್ ಹೋರಾಟದ ಸಂದರ್ಭದಲ್ಲಿ ಸೊಂಡೂರಿಗೆ ಬರಲಿಲ್ಲ. ಭಾರತದ ವಿವಿಧ ಕಡೆಗಳಲ್ಲಿ ಅವರು ಭಾಗವಹಿಸಿದ ಸಭೆಗಳಲ್ಲಿ ಇಲ್ಲಿ ನಡೆಯುವ ಹೋರಾಟದ ಬಗ್ಗೆ ಪ್ರಸ್ತಾಪಿಸಿದರು. ಆಯಾ ರಾಜ್ಯದ ಸಮಾಜವಾದಿ ನಾಯಕರನ್ನು ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ದಾವಣಗೆರೆಯ ಕೆ.ಜಿ.ಮಹೇಶ್ವರಪ್ಪ ಆಗ ರಾಜ್ಯ ಸಮಾದಿವಾದಿ ಪಕ್ಷದ ಅಧ್ಯಕ್ಷರಾಗಿದ್ದರು. ಇವರನ್ನು ‘ಡಿಕ್ಟೇಟರ್ ಆಫ್ ಸ್ಟ್ರಗಲ್’ ಎಂದು ಸಮಾಜವಾದಿ ಪಕ್ಷ ನೇಮಿಸಿತ್ತು. ಇವರು ಹೋರಾಟದ ೪೬ ದಿನವೂ ಸೊಂಡೂರಿನಲ್ಲಿದ್ದು ಅದರ ಯಶಸ್ಸಿಗೆ ಶ್ರಮಿಸಿದರು. ಈ ಹೋರಾಟದ ಸಂದರ್ಭದಲ್ಲಿ ಅವರ ನಿಲುವು ಗಟ್ಟಿಯಾಗಿತ್ತು. ರಾಜಮನೆತನ ಆಮಿಗಳನ್ನು ಒಡ್ಡಿದರೂ ಅದಕ್ಕೆ ಬಲಿಯಾಗಲಿಲ್ಲ. ಹೈಕೋರ್ಟಿನಲ್ಲಿ ಲೀಡಿಂಗ್ ಆಗಿದ್ದರು. ದಿನಕ್ಕೆ ಸಾವಿರಾರು ರೂಪಾಯಿ ಆದಾಯವಿತ್ತು. ಆದರೆ ಹೋರಾಟದೊಂದಿಗೆ ಅವರಿಗಿದ್ದ ಬದ್ಧತೆ ಅವರನ್ನು ವಿಚಲಿತರಾಗದಂತೆ ಕಾಪಾಡಿತು.

ಜೆ.ಎಚ್. ಪಟೇಲರು ಶಿವಮೊಗ್ಗವನ್ನು ಪ್ರತಿನಿಧಿಸಿ ಸಮಾಜವಾದಿ ಪಕ್ಷದಿಂದ ಗೆದ್ದು ಲೋಕಸಭಾ ಸದಸ್ಯರಾಗಿದ್ದರು. ಇವರು ಸಹ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸೊಂಡೂರಿನಲ್ಲಿ ಈ ಜನ ಸಭೆಗಳಲ್ಲಿ ಜನರನ್ನು ಹುರಿದುಂಬಿಸುವಂತೆ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ಆಗುತ್ತಿದ್ದ ಹೋರಾಟ ಸಂಬಂಧಿ ಚರ್ಚೆಗಳನ್ನು ರೈತರಿಗೆ ಹೇಳುತ್ತಿದ್ದರು. ಸರ್ಕಾರಕ್ಕೆ ನೇರವಾಗಿ ಹೋರಾಟದ ನಿರ್ಧಾರವನ್ನು ಹೇಳುತ್ತ, ಟೀಕಿಸುತ್ತ ಆಡಳಿತ ಸರ್ಕಾರದ ಎದುರು ಗಟ್ಟಿಯಾದ ಹುರಿಯಾಳಾಗಿದ್ದರು. ದೇವರಾಜ ಅರಸರನ್ನು ತರಾಟೆಗೆ ತೆಗೆದುಕೊಂಡು  ‘ಈ ರೈತರಿಗೆ ನ್ಯಾಯ ಒದಗಿಸಿ ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡುತ್ತಿದ್ದರು. ಎಂ.ಪಿ. ಪ್ರಕಾಶ್‌ರು ಆಗ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಆಗತಾನೆ ಅವರು ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು. ರಾಜಕೀಯ, ಚಳವಳಿಗಿಂತ ರಂಗಭೂಮಿಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ಸೊಂಡೂರು ಹೋರಾಟಕ್ಕೂ ಮುನ್ನ ಹಡಗಲಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟೀಯ ಸಭೆ ಮಾಡಿ ಗಮನ ಸೆಳೆದಿದ್ದರು. ಆದರೆ ಹೋರಾಟದಲ್ಲಿ ಇವರ ಭಾಗವಹಿಸುವಿಕೆ ತೀವ್ರವಾಗಿರಲಿಲ್ಲ. ಬಳ್ಳಾರಿ ಜಿಲ್ಲೆಯವರೇ ಆದ ಇವರು ಇಲ್ಲಿಯ ಪ್ರಭಾವಿ ರಾಜಕಾರಣಿಯಾಗಿ ಎಂ.ವೈ. ಘೋರ್ಪಡೆಯವರ ವಿರುದ್ಧ ಗಟ್ಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ರಾಜ್ಯ ಸಮಾಜವಾದಿ ಪಾರ್ಟಿಯ ಸಹಕಾರ್ಯದರ್ಶಿಯಾಗಿದ್ದ ಎಸ್.ಎಸ್. ಕುಮುಟ ಹೋರಾಟದ ಅಷ್ಟೂ ದಿನ ಸೊಂಡೂರಿನಲ್ಲೆ ಇದ್ದರು. ಈ ಹೋರಾಟದ ಕಮಾಂಡರ್ ಆಗಿ ಅವರನ್ನು ನೇಮಿಸಲಾಗಿತ್ತು. ಬದುಕಿನ ಬಹುಭಾಗ ಹೋರಾಟಗಳಲ್ಲೆ ಕಳೆದ ಕುಮುಟಾ ಸಾಗರದವರು. ಅಪ್ಪಟ ಸಮಾಜವಾದಿಯಾಗಿ ಬದುಕಿದವರು. ಸೊಂಡೂರಿನ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಾಗೋಡು ಚಳವಳಿಯಲ್ಲಿಯೂ ಭಾಗವಹಿಸಿ ಸಾರ್ವಜನಿಕ ಬದುಕು ಬದುಕಿದವರು. ಸಾಗರದಲ್ಲಿ ಇವರನ್ನು ಜನರು ‘ಸತ್ಯಣ್ಣ’ ಎಂದೇ ಕರೆಯುತ್ತಿದ್ದರು. ‘ಅಪ್ಪ ಹೋರಾಟಗಳ ಜೊತೆಗಿದ್ದು ಮನೆ ಮರೆತಿದ್ದರು. ಮಕ್ಕಳ ಭವಿಷ್ಯಕ್ಕಿಂತ ಸಮಾಜದ ಬಗೆಗಿನ ಕಾಳಜಿ ಅವರಿಗೆ ಹೆಚ್ಚಾಗಿತ್ತು’  ಎಂದು ಅವರ ಮಗಳಾದ ಪ್ರಜಾವಾಣಿ ಪತ್ರಕರ್ತೆ ಸುಜಾತ ಕುಮುಟ ಹೇಳುತ್ತಾರೆ. ಸೊಂಡೂರು ಸಮಿತಿಯ ಸದಸ್ಯರಾಗಿದ್ದ ಕಾಶೀನಾಥ ರಾವ್ ಬೇಲೂರೆ ಬೀದರ‍್ನವರು. ಇಲ್ಲಿಗೆ ಬಂದು ಹೋರಾಟದಲ್ಲಿ ಭಾಗವಹಿಸಿದರು. ‘ರಾತ್ರೋ ರಾತ್ರಿ.. ಲಾರಿಗಳನ್ನು ಹಿಡಿದು ಸೊಂಡೂರಿಗೆ ಬರ್ ಇದ್ವಿ..’ ಎಂದು ನೆನಪಿಸಿಕೊಳ್ಳುತ್ತಾರೆ. ಹೋರಾಟದ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿಧಾನಸಭೆಯಲ್ಲಿ ತೀವ್ರವಾಗಿ ಪ್ರತಿಭಟಿಸಿದವರೆಂದರೆ ಕಾಗೋಡು ತಿಮ್ಮಪ್ಪ ಹಾಗೂ ಕೋಣಂದೂರು ಲಿಂಗಪ್ಪ. ಇವರು ಸೋಷಲಿಸ್ಟ್ ಪಾರ್ಟಿಯಿಂದ ಗೆದ್ದು ವಿಧಾನಸಭಾ ಸದಸ್ಯರಾಗಿದ್ದರು. ವಿಧಾನಸಭೆಯಲ್ಲಿ ಸರ್ಕಾರದ ನಿರ್ಲಕ್ಷವನ್ನು ವಿರೋಧಿಸಿ ವಾಗ್ದಾಳಿಯನ್ನೆ ಮಾಡಿದರು. ಕಾಗೋಡು ತಿಮ್ಮಪ್ಪನವರಿಗೆ ಭೂ ಕಾಯಿದೆ ಬಗೆಗೆ ತುಂಬಾ ಸೂಕ್ಷ್ಮವಾದ ಪ್ರಾಯೋಗಿಕ ತಿಳುವಳಿಕೆ ಇತ್ತು. ಇದರಿಂದಾಗಿ ಸೊಂಡೂರಿನ ಭೂಮಿ ವಿಷಯದಲ್ಲಿ ಆದ ಲೋಪಗಳನ್ನು ತಿಳಿದು ಅದರ ತಿದ್ದುಪಡಿಗೆ ಸೂಚಿಸಿದರು. ಹಾಗೆಯೇ ಕಾಗೋಡು ಚಳುವಳಿಯ ತೀವ್ರ ಪ್ರಭಾವ ಇವರ ಮೇಲಿದ್ದುದರಿಂದ ಸೊಂಡೂರು ಹೋರಾಟ ರೂಪಿಸುವಲ್ಲಿ ಇವರ ಪಾತ್ರವು ಮುಖ್ಯವಾದುದು. ಇವರನ್ನು ಭೇಟಿಯಾದಾಗ ಹೋರಾಟದ ಬಗೆಗೆ ತುಂಬ ಸೂಕ್ಷ್ಮವಾದ  ವಿವರಗಳನ್ನು ತಿಳಿಸಿದರು. ‘ಇದು ಅಂತಿಮವಾಗಿ ಎಲಿಗಾರ ತಿಮ್ಮಪ್ಪನಿಂದಾದ ಹೋರಾಟ’ ನಾವೆಲ್ಲ ಇದನ್ನು ಬೆಂಬಲಿಸಿದ್ವಿ.. ಆದರೆ ಸ್ಥಳೀಯರಾಗಿ ರಾಜಶಾಹಿಯನ್ನು ವಿರೋಧಿಸುತ್ತ ಬಂದಿದ್ದ ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪನವರ ಸಹಕಾರ ಇಲ್ಲದೆ ಹೋಗಿದ್ದರೆ ಈ ಮಟ್ಟದ ಹೋರಾಟವನ್ನು ರೂಪಿಸಲಿಕ್ಕೆ ಆಗ್ತಾ ಇರ್ಲಿಲ್ಲ’ ಎನ್ನುತ್ತಾರೆ.

ರಾಜ್ಯ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿದ್ದ ಎಸ್. ವೆಂಕಟರಾಮ್ ಹೋರಾಟದ  ಅಷ್ಟು ದಿನ ಸೊಂಡೂರಿನಲ್ಲಿ  ಇದ್ದರು. ಬಂಧನಕ್ಕೊಳಗಾದರು. ಸರ್ಕಾರಕ್ಕೆ ಹೋರಾಟದ ಪರವಾಗಿ ಅರ್ಜಿ ಮುಂತಾಗಿ ಪ್ರತಿಕ್ರಿಯಿಸುವ ಹೊಣೆ ಇವರದಾಗಿತ್ತು. ಹೋರಾಟದ ಕುರಿತಾಗಿ ದೇವರಾಜ ಅರಸು ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ಮಾಡಿದರು. ಹೊರ ರಾಜ್ಯದಿಂದ ಬಂದ ಸಮಾಜವಾದಿ ನಾಯಕರು ಈ ಹೋರಾಟವನ್ನು ಜನಪ್ರಿಯಗೊಳಿಸಿದರು. ಆದರೆ ಆಡಳಿತಾತ್ಮಕವಾಗಿ ಸರ್ಕಾರವನ್ನು ಪ್ರಭಾವಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಉಲ್ಲೇಖಿಸಿದ ನಾಯಕರಲ್ಲದೆ ಅನೇಕರು ಹೋರಾಟದಲ್ಲಿ ಭಾಗವಹಿಸಿದರು. ಹೋರಾಟವನ್ನು ರೂಪಿಸುವಲ್ಲಿ ಶ್ರಮಿಸುವವರಿಗೆ ಅನೇಕರು ಹೋರಾಟದಲ್ಲಿ ಭಾಗವಹಿಸಿದರು. ಹೋರಾಟವನ್ನು ರೂಪಿಸುವಲ್ಲಿ ಶ್ರಮಿಸುವವರಿಗೆ ರಾಜಮನೆತನದ ಆಮಿಷಗಳು, ಬೆದರಿಕೆಗಳು, ಆಡಳಿತಾತ್ಮಕ ಕಿರುಕುಳಗಳು ಇದ್ದವು. ಅವುಗಳನ್ನೆಲ್ಲ ಮೀರಿಯೂ ಹೋರಾಟದ ಬದ್ಧತೆಗಾಗಿ ಇವರೆಲ್ಲಾ ಒಂದಾದರು. ಹೀಗೆ ವ್ಯಕ್ತಿಗಳ ಮೂಲಕ ಒಂದು ಹೋರಾಟವನ್ನು ನೋಡುವುದಾದರೆ, ಭಾಗವಹಿಸಿದಷ್ಟು ಜನರ ದೃಷ್ಟಿಕೋನ ಈ ಹೋರಾಟಕ್ಕೆ ಸಿಕ್ಕಿತು. ಅಥವಾ ಅಷ್ಟು ದೃಷ್ಟಿಕೋನಗಳು ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದವು.