ಪ್ರತಿ ಹೋರಾಟದ ನಂತರ ಧುತ್ತನೆ ಎದುರಾಗುವ ಪ್ರಶ್ನೆ ಸೋಲು ಗೆಲುವಿನದು. ಒಂದು ಅರ್ಥದಲ್ಲಿ ಸೋತ ಚಳುವಳಿ ಇನ್ನೊಂದು ದೃಷ್ಟಿಯಲ್ಲಿ ಗೆದ್ದಿರುತ್ತದೆ. ಬಹಿರಂಗವಾಗಿ ಗೆಲುವು ಕಂಡ ಹೋರಾಟ ಅಂತರಿಕವಾಗಿ ಸೋತಿರುತ್ತದೆ. ಈ ಸೋಲು ಗೆಲುವಿನ ಮುಖಾಮುಖಿಯಲ್ಲಿಯೇ ಹೋರಾಟದ ಫಲಿತಗಳು ವಿಸ್ತರಿಸಿಕೊಳ್ಳುತ್ತವೆ. ಅಲ್ಪಕಾಲೀನ ಗೆಲುವು ದೀರ್ಘಕಾಲೀನ  ಸೋಲು, ಅಲ್ಪಕಾಲೀನ ಸೋಲು ದೀರ್ಘಕಾಲೀನ ಗೆಲವು ಆಗಿರಲಿಕ್ಕೆ ಸಾಧ್ಯ. ಈ ಬಗೆಯ ಸಂಕೀರ್ಣ ಪ್ರಶ್ನೆಗಳನ್ನಿಟ್ಟುಕೊಂಡು ಒಂದು ಹೋರಾಟವನ್ನು ಪ್ರವೇಶಿಸಿದಾಗಲೂ ನಿರ್ದಿಷ್ಟ ಉತ್ತರ ಸಿಗಲಿಕ್ಕೆ ಸಾಧ್ಯವಾಗದೆ ಇರಬಹುದು.

ನಲವತ್ತಾರು ದಿನದ ಹೋರಾಟ ಸೊಂಡೂರಿನಲ್ಲಿ ಹಿಂದೆಂದೂ ಕಾಣದ ಒಂದು ಭಿನ್ನ ವಾತಾವರಣವನ್ನು ಸೃಷ್ಟಿಸಿತ್ತು. ಇದಕ್ಕೆ ಚಳವಳಿ ಪೋಲಿಸರ ದಬ್ಬಾಳಿಕೆ ಮೂಲಕ ಮುಕ್ತಾಯಗೊಂಡದ್ದು ಕಾರಣ. ಎಲ್ಲಿ ಧ್ವನಿಯೇ ಹೊರಡುವುದಿಲ್ಲ ಎಂದು ತಿಳಿಯಲಾಗಿತ್ತೊ, ಅಲ್ಲ ಧ್ವನಿ ಪ್ರತಿಧ್ವನಿಯಾಗಿ ಮೊಳಗಿತ್ತು. ಇದು ಈ ಭಾಗದ ಜನರಿಗೆ ಏಕಕಾಲಕ್ಕೆ ಕುತೂಹಲವೂ ಭಯವೂ ಆಗಿತ್ತು. ‘ಹೋರಾಟದಲ್ಲಿ ಭಾಗವಹಿಸಿದವರನ್ನು ರಾಜರು ಏನು ಮಾಡುತ್ತಾರೋ ಎಂದು ಜನರೆಲ್ಲ ನೋಡುವಂತಾಗಿತ್ತು’ ಎಂದು ಕಪ್ಪೆ ಸುಬ್ಬಣ್ಣ ಹೇಳುತ್ತಾರೆ. ಚಳುವಳಿಯಲ್ಲಿ ಭಾಗವಹಿಸಿದ ಸ್ಥಳೀಯರಿಗೂ ಅಂತಕ ಕಾಡತೊಡಗಿತು. ಹಿರಿಯ ನಾಯಕರು ಸರ್ಕಾರದ ಜೊತೆ ಮಾತುಕತೆಗಾಗಿ ಬೆಂಗಳೂರು ಸೇರಿದರು. ಅಕ್ಟೋಬರ್ ೨೨ ರಿಂದ ಜಾರಿಯಲ್ಲಿದ್ದ ನಿಷೇದಾಜ್ಞೆಯನ್ನು ಒಂದು ವಾರದ ಕಾಲ ವಿಸ್ತರಿಸಲಾಯಿತು. ಕಾಯಿದೆ ಹಾಗೂ ಸುವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಆಗದ ಕಾರಣ ವಿಸ್ತರಿಸಲಾಗಿದೆ ಎಂದು ಡಿವಿಜನಲ್ ಮ್ಯಾಜಿಸ್ಟ್ರೀಟ್ ಸ್ವಾತಂತ್ರರಾವ್ ಪತ್ರಿಕಾ ಹೇಳಿಕೆ ನೀಡಿದರು.

ಅಕ್ಟೋಬರ್ ೨೫ ರಂದು ಕೋಣಂದೂರು ಲಿಂಗಪ್ಪ, ಕಾಗೋಡು ತಿಮ್ಮಪ್ಪ, ಎಸ್. ವೆಂಕಟರಾವ್, ಬಿ.ಎಸ್. ಚಂದ್ರಶೇಕರ್, ವೈ.ಆರ್. ಪರಮೇಶ್ವರಪ್ಪ ಇವರನ್ನೊಳಗೊಂಡ ಒಂದು ಆಯೋಗವು ಸಚಿವ ಹುಚ್ಚಮಾಸ್ತಿ ಗೌಡರನ್ನು ಭೇಟಿ ಮಾಡಿತು. ಸೊಂಡೂರು ಹೋರಾಟದ ಬಗ್ಗೆ ಚರ್ಚಿಸಲಾಯಿತು. ಈ ಚರ್ಚೆಯಲ್ಲಿ ನಿರ್ಧರಿಸಿದ ಅಂಶಗಳೆಂದರೆ ಒಂದು: ಇನಾಂ ರದ್ದತಿ ವಿಧೇಯಕವು ವಿಧಾನ ಸಭೆಯಲ್ಲಿ ಮಂಡನೆಯಾಗಿರುವುದರಿಂದ ರೈತರಿಗೆ ಭೂಮಿಯ ಪಟ್ಟಗಳನ್ನು ಇಷ್ಟರಲ್ಲೇ ಕೊಡಲಾಗುವುದು ಎರಡು: ವ್ಯವಸಾಯ ಯೋಗ್ಯವಲ್ಲದ ಭೂಮಿಯಲ್ಲಿ ತಾಂತ್ರಿಕ ಸ್ನಾತಕೋತ್ತರ ಕೇಂದ್ರದ ಸ್ಥಾಪನೆ, ಮೂರು: ಹೊಗೆಸೊಪ್ಪಿನ ಭೂಮಿಯ ವಿತರಣೆ ಹಾಗೂ ಕುಮಾರಸ್ವಾಮಿ ದೇವಸ್ಥಾನವನ್ನು ಸಾರ್ವಜನಿಕ ಧರ್ಮ ದರ್ಶಿತ್ವಕ್ಕೆ ಒಳಪಡಿಸುವ ಮನವಿಯ ಪರಿಶೀಲನೆ. ನಾಲ್ಕು: ೨೯ ಚದರ ಮೈಲು ಮ್ಯಾಂಗನೀಸ್ ಅರಿದು ಪ್ರದೇಶದ ನವೀಕರಣ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುವರೆಂದು ಕಂದಾಯ ಸಚಿವರು ಹೇಳಿದರು.

ನವಂಬರ್ ೫ ರಂದು ಸಮಾಜವಾದಿ ಪಕ್ಷ ಮತ್ತು ಸೊಂಡೂರು ರೈತ ಸಂಘದ ಪ್ರತಿನಿಧಿ ಗಳು ಕೈಗಾರಿಕಾ ಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಹೋರಾಟದ ಬೇಡಿಕೆಗಳ ಬಗೆಗೆ ಪುನರ್ ಚರ್ಚಿಸಿದರು. ಈ ಸಮಸ್ಯೆಗಳು ಜಟಿಲವಾಗುತ್ತಲೂ ಪರಿಹಾರ ಹುಡುಕಲು ಸಭೆಯನ್ನು ಮುಂದೂಡಲಾಯಿತು. ಈ ಮಾತುಕತೆಗಳ ಫಲಿತಾಂಶ ಹೊರಬೀಳುವ ತನಕ ಹೋರಾಟವನ್ನು ಎರಡು ವಾರಗಳ ಕಾಲ ಮುಂದೂಡಲಾಯಿತು. ಮೂರನೆ ಸುತ್ತಿನ ಸಂಧಾನವು ಜನವರಿ ೧,೧೯೭೪ರಂದು ಕಂದಾಯ ಸಚಿವ ಹುಚ್ಚಮಾಸ್ತಿಗೌಡರ ಜೊತೆ ನಡೆಯಿತು. ಈ ಸಭೆಯಲ್ಲಿ ಜೆ.ಎಚ್.ಪಟೇಲ್, ಎಸ್. ವೆಂಕಟರಾವ್ ಮಹಾರಾಷ್ಟ್ರದ ಸಮಾಜವಾದಿ ನಾಯಕ ಹೀರಾಚಂದ್ ವಾಘಮೊರೆ, ಆರ್.ವಿ.ದೇಸಾಯಿ, ಕೆ.ಜಿ.ಮಹೇಶ್ವರಪ್ಪ, ಕೋಣಂದೂರು ಲಿಂಗಪ್ಪ, ಎಲಿಗಾರ ತಿಮ್ಮಪ್ಪ, ನರಸಿಂಗರಾವ್, ಶ್ರೀನಿವಾಸ್, ಯಜಮಾನ ಶಾಂತರುದ್ರಪ್ಪ ಅವರುಗಳು ಭಾಗವಹಿಸಿದ್ದರು. ಈ ಚರ್ಚೆಯಲ್ಲಿಯೂ ಮುಂಚಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯ ಮಾಡಲಾಯಿತು. ಈ ಸಂಧಾನ ಚರ್ಚೆಯ ಮೂಲಕ ಅಂತಿಮ ತೀರ್ಮಾನವಾಗಿ ಕೆಲವು ಬೇಡಿಕೆಗಳು ಈಡೇರಿದವು ಅವು ಈ ಕೆಳಗಿನಂತಿವೆ.

ಒಂದು: ಇನಾಂ ರದ್ದಿಯಾತಿ ಕಾನೂನನ್ನು ಜಾರಿಗೆ ತಂದಿದ್ದರಿಂದ ಕುಮಾರಸ್ವಾಮಿ ದೇವಾಸ್ಥಾನಕ್ಕೆ ಸೇರಿದ ೮೦೨೯ ಎಕರೆ ಭೂಮಿ ರೈತರಿಗೆ ಹಂಚಲು ಅರ್ಜಿ ಆಹ್ವಾನಿಸಲಾಯಿತು.

ಎರಡು: ಯಶವಂತ ರಾವ್ ಘೋರ್ಪಡೆಯವರು ತಮ್ಮ ಕುಮಾರಸ್ವಾಮಿ ದೇವಸ್ಥಾನದ ವಂಶಪಾರಂಪರ್ಯ ಧರ್ಮದರ್ಶಿತ್ವವನ್ನು ಬಿಟ್ಟುಕೊಟ್ಟರು. ಹಾಗೂ ಈ ಬಗ್ಗೆ ಇನಾಂ ರದ್ದಿಯಾತಿ ಕಾನೂನಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಯಿತು.

ಮೂರು: ನಂದಿಹಳ್ಳಿ ಮತ್ತು ರಾಘಪುರ ಗ್ರಾಮಗಳ ಬಳಿಯಿರುವ ಹೊಗೆಸೊಪ್ಪಿನ ಗುತ್ತಿಗೆ ಭೂಮಿಯಲ್ಲಿ ತಾಂತ್ರಿಕ ಸ್ನಾತಕೋತ್ತರ ಕೇಂದ್ರ ಹಾಗೂ ತೋಟಗಾರಿಕ ಇಲಾಖೆಯ ಪ್ರಯೋಗ ಮತ್ತು ಬೀಜದ ಕೇಂದ್ರಗಳ ಸ್ಥಾಪನೆಯನ್ನು ತಪ್ಪಿಸುವುದು ಸಾಧ್ಯವಾಗಲಿಲ್ಲ. ಆದರೆ ಸಿದ್ದಾಪುರದ ಬಳಿ ಇರುವ ಹೊಗೆಸೊಪ್ಪಿನ ಗುತ್ತಿಗೆ ಭೂಮಿಯಲ್ಲಿ ೩೦೦ ಎಕರೆ ಪ್ರದೇಶವನ್ನು ಸರಕಾರ ರೈತರಿಗೆ ಬಿಡುಗಡೆ ಮಾಡಿತು.

ನಾಲ್ಕು: ಎಸ್.ಎಂ. ಆಂಡ್ ಐ.ಒ. ಕಂಪನಿಗೆ ನೀಡಲಾಗಿದ್ದ ಮ್ಯಾಂಗನೀಸ್ ಅದಿರು ಪ್ರದೇಶದ ಗುತ್ತಿಗೆಯನ್ನು ೨೯ ಚದರ ಮೈಲಿ ಪ್ರದೇಶದಿಂದ ೨೦ ಚದರ ಮೈಲಿಗೆ ಇಳಿಸಲಾಯಿತು.

ಐದು: ರಾಜಮನೆತನವು ೨೦೦೦ ಎಕರೆ ಅರಣ್ಯ ಭೂಮಿಯಲ್ಲಿ ತಮಗಿದ್ದ ಬೇಟಿ ಹಕ್ಕನ್ನು ಬಿಟ್ಟುಕೊಟ್ಟಿತು.

ಇದು ಹೋರಾಟದಿಂದ ಬಂದ ಸಫಲತೆ. ಅಂದ ಮಾತ್ರಕ್ಕೆ ಹೋರಾಟ ಪೂರ್ಣ ಯಶಸ್ವಿಯಾಯಿತಾ ಎನ್ನುವ ಪ್ರಶ್ನೆಯಿದೆ. ಹೋರಾಟಕ್ಕೂ ಮುಂಚೆ ಸಲ್ಲಿಸಿದ ಮನವಿಯಲ್ಲಿ ಕೆಲವು ನ್ಯಾಯಬದ್ಧ ಬೇಡಿಕೆಗಳನ್ನು ಇಟ್ಟಿದ್ದರು. ಈ ಬೇಡಿಕೆಯ ಪಟ್ಟಿ ಹಾಗೂ ಈಡೇರಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡರೆ ಕೆಲವು ಅನುಮಾನಗಳು ಉಳಿಯುತ್ತವೆ. ಸೊಂಡೂರು ರಾಜರ ಧರ್ಮದರ್ಶಿತ್ವದಲ್ಲಿರುವ ವಿವಿಧ ದೇವಸ್ಥಾನಗಳ ಸುಮಾರು ೧೩,೦೦೦ ಎಕರೆ ಜಮೀನನ್ನು ಗೇಣಿದಾರರಿಗೆ ಕೊಡಬೇಕೆಂದು ಬೇಡಿಕೆ ಇತ್ತು. ಆದರೆ ಕೊನೆಗೆ ಕುಮಾರಸ್ವಾಮಿ ದೇವಸ್ಥಾನದ ಭೂಮಿ ಮಾತ್ರ ಪರಿಗಣಿಸಲ್ಪಟ್ಟಿತು. ಉಳಿದ ದೇವಸ್ಥಾನಗಳ ಭೂಮಿ ೧೯೮೪ರ ನಂತರ ಹಂಚಲ್ಪಟ್ಟಿತು. ಎಸ್.ಎಂ.ಆಂಡ್ ಐ.ಒ ಕಂಪನಿಯು ನೀಡಲಾದ ೨೯ ಚದರ ಮೈಲು ಗುತ್ತಿಗೆಯನ್ನು ರದ್ದುಪಡಿಸಿ ರಾಷ್ಟೀಯ ಗಣಿ ಅಭಿವೃದ್ದಿ ನಿಗಮ ಅಥವಾ ಮೈಸೂರು ಮೆಟಲ್ಸ್ ಲಿಮಿಟೆಡ್ ಈ ಎರಡರಲ್ಲಿ ಒಂದು ಸಂಸ್ಥೆಗೆ ಕೊಡಬೇಕೆಂದು ಕೇಳಿಕೊಂಡಿದ್ದರು. ಆದರೆ ೨೯ ಚದರ ಮೈಲಿನಿಂದ ೨೦ ಚದರ ಮೈಲಿಗೆ ಇಳಿಸಲಾಯಿತು. ಅಂದರೆ ಹೋರಾಟ ದಿಂದಾಗಿ ೯ ಚದರ ಮೈಲು ಮಾತ್ರ ಕಡಿಮೆ ಮಾಡಲಾಯಿತು. ಹೋರಾಟಗಾರರು ಅದರ ಮಾಲಿಕತ್ವವನ್ನು ಪ್ರಶ್ನಿಸಿದ್ದರು. ರಾಷ್ಟೀಯ ಗಣಿ ಅಭಿವೃದ್ಧಿ ನಿಗಮಕ್ಕೆ ವಹಿಸಲು ಒತ್ತಾಯಸಿದ್ದರು. ಆದರೆ ಇದಾವುದೂ ಪರಿಗಣನೆಗೆ ಆಗಲಿಲ್ಲ. ರಾಜರ ಖಾಸಗಿ ಸಂಸ್ಥೆ  ಸ್ಕಂದ ಉದ್ಯಮವನ್ನು ರದ್ದು ಪಡಿಸಬೇಕೆಂದಿದ್ದರು. ಅದೂ ಸಹ ಪರಿಗಣನೆ ಬರಲಿಲ್ಲ. ಶಿವಪುರ ಶಿಕ್ಷಣ ಸಮಿತಿ, ಸೊಂಡೂರು ಶಿಕ್ಷಣ ಸಮಿತಿಯನ್ನು ಸರ್ಕಾರ ವಹಿಸಿಕೊಳ್ಳಬೇಕೆಂಬ ಮತ್ತು ‘ರಾಜಮನೆತನದ ವಿರುದ್ಧ ಮಾಡಲಾದ ಆರೋಪಗಳ ಪರಶೀಲನೆಗೆ ವಿಚಾರಣ ಆಯೋಗ ರಚಿಸಬೇಕು, ಘೋರ್ಪಡೆಯವರು ಕೂಡಲೆ ಮಂತ್ರಿ ಪದವಿಯಿಂದ ರಾಜಿನಾಮೆ ಕೊಡಬೇಕು ಎನ್ನುವ ಇನ್ನಿತರ ಬೇಡಿಕೆಗಳಾಗಿದ್ದವು. ಇವು ಕೊನೆಯ ಹಂತದ ಚರ್ಚೆಗೂ ಬರಲಿಲ್ಲ.

“ಸೊಂಡೂರಿನಲ್ಲಿ ಭೂ ಹೋರಾಟವನ್ನು ಫರ್ನಾಂಡಿಸ್ ಅವ್ರು ಭಾರತದಾದ್ಯಂತ ಪ್ರಚಾರ ಮಾಡಿದ್ರು. ಹಾಗಾಗಿ ಇಂದಿರಾಗಾಂಧಿಯವರು ಈ ಹೋರಾಟದ ಬಗ್ಗೆ ಗಮನ ಹರಿಸುವಂತೆ ದೇವರಾಜ ಅರಸರಿಗೆ ಮನವಿ ಮಾಡಿದ ಮೇಲೆ ಅರಸು ಅವರು ಹೋರಾಟದ ಬಗೆಗೆ ಘೋರ್ಪಡೆಯವರ ಹತ್ರ ಚರ್ಚಿಸಿದ್ರು.. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ಈ ಬೇಡಿಕೆಗಳ ಈಡೇರಿಕೆಗೆ ಘೋರ್ಪಡೆಯವರು ಸಹಿ ಹಾಕಿದ್ರು” ಎಂದು ಎಲಿಗಾರ ನಾಗರಾಜಪ್ಪ ಹೇಳುತ್ತಾರೆ. ಈ ಹೋರಾಟ ರಾಷ್ಟೀಯ ಪ್ರಚಾರ ಪಡೆಯದೆ ಇದ್ದರೆ, ಈಗ ಈಡೇರಿದ ಬೇಡಿಕೆಗಳೂ ಹಾಗೆಯೇ ಉಳಿಯುತ್ತಿದ್ದವು. ಇನಾಮು ಭೂಮಿ ರೈತರಿಗೆ ಎಷ್ಟರ ಮಟ್ಟಿಗೆ ದೊರಕಿತು ಎನ್ನುವುದು ಪ್ರಶ್ನೆ. ಯಾರ‍್ರು ಈಗ ಉಳುಮೆ ಮಾಡುತ್ತಾರೋ ಅವರು ತಮ್ಮ ಹೆಸರಿಗೆ ಪಟ್ಟ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕಿತ್ತು. ಅರ್ಜಿ ಸಲ್ಲಿಸುವವರೆಲ್ಲ ಮಹಾ ರಾಜರ ವಿರೋಧಿಗಳು ಎಂಬ ಅರ್ಥ ಬರುವಂತಿತ್ತು. ಹಾಗಾಗಿ ಎಷ್ಟೋ ಜನರು ಅರ್ಜಿ ಸಲ್ಲಿಸುವುದನ್ನೇ ಕೈಬಿಟ್ಟರು. ಅಥವಾ ಅರ್ಜಿ ಸಲ್ಲಿಸಲಾರದಂತಹ ವಾತಾವರಣವನ್ನು ಮಹಾರಾಜರ ಕಡೆಯವರು ಸೃಪ್ಟಿಸಲು ಪ್ರಯತ್ನಿಸಿದರು. ನೇರವಾಗಿ ಹೋರಾಟದ ಜೊತೆ  ಗುರುತಿಸಿಕೊಂಡವರು ಧೈರ್ಯಮಾಡಿ ಅರ್ಜಿ ಸಲ್ಲಿಸಿ ಭೂಮಿಯನ್ನು ತಮ್ಮ ಹೆಸರಿಗೆ ಪಟ್ಟ ಮಾಡಿಸಿಕೊಂಡರು. ಇಂಥವರಲ್ಲಿ ಸ್ಥಿತಿವಂತ ಮಧ್ಯಮವರ್ಗದ ರೈತರಿದ್ದರು. ಅದರಲ್ಲೂ ಇನಾಮು ಭೂಮಿ ಇದ್ದದ್ದು ಹೆಚ್ಚಾಗಿ ಭೂಮಾಲಿಕರಿಗೆ, ೧೯೮೪ರ ಜಹೀರು ನಾಮೆಯಲ್ಲಿ ಹೇಳಿರುವಂತೆ  ‘ರೈತವಾರಿ’ ಟೆನರ್ ಗಳಿಗೆ ೮ ಸಾವಿರ ಎಕರೆ ಇನಾಮು ಭೂಮಿಯಿತ್ತು. ಸಾಮಾನ್ಯ ಗೇಣಿದಾರ ಕೂಲಿಕಾರ ರೈತರಿಗೆ ೪ ಸಾವಿರ ಎಕರೆಯಿತ್ತು. ರೈತವಾರಿಗಳ ಜಮೀನಿನಲ್ಲೂ ಕೂಲಿಕಾರ ರೈತರೇ ಊಳುತ್ತಿದ್ದರು. ಹಾಗಾಗಿ ಊಳುವ ಸಾಮಾನ್ಯ ರೈತನಿಗಿಂತ ‘ರೈತವಾರಿ’ ಗೇಣಿದಾರರಿಗೆ ಇನಾಮು ಭೂಮಿ ಹೆಚ್ಚಾಗಿ ಸಿಕ್ಕಿತೆ. ಇದರಿಂದಾಗಿ ಉಳುವವನೆ ಭೂ ಒಡೆಯ ಎನ್ನುವ ಅರ್ಥದಲ್ಲಿ ಉಳುವ ಕೂಲಿಕಾರ ರೈತರಿಗೆ ಭೂಮಿ ಸಿಕ್ಕಿದ್ದು ಕಡಿಮೆ.

೧೯೭೩ರ ನವೆಂಬರ್ ೧ಕ್ಕೆ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂಬ ನಾಮಕರಣವಾಯಿತು. ಆಗ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ, ಮಾದ್ಯಮಗಳು ಕರ್ನಾಟಕಕ್ಕೆ ಹೆಸರು ತಂದು ದೇವರಾಜರು ಹೆಸರಾದರು ಎಂದೆಲ್ಲಾ ವರದಿಯಾಯಿತು. ಸೊಂಡೂರಿನಲ್ಲಿ  ರೈತ ಹೋರಾಟ ಅಕ್ಟೋಬರ್ ೨೪ ಕ್ಕೆ ಕೊನೆಗೊಂಡಿತು. ನವೆಂಬರ್ ೧ಕ್ಕೆ ‘ಕರ್ನಾಟಕ’ ನಾಮಕರಣವಾಯಿತು. ಈ ಘಟನೆ ಹೋರಾಟದ ಒಟ್ಟು ಪರಿಣಾಮದ ಮೇಲೆ ತೀವ್ರ ಪ್ರಭಾವ ಬೀರಿತು. ನವೆಂಬರ್ ೧ ರಂದು ಹಂಪಿಯಲ್ಲಿ ಕರ್ನಾಟಕ ಒಗ್ಗೂಡಿದಾಗ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರು ಕರ್ನಾಟಕದ ಜ್ಯೋತಿ ಬೆಳಗಿಸಿದರು. ‘ಕರ್ನಾಟಕ’ ಎಂಬ ನಾಮಫಲಕವೊಂದನ್ನು ಅನಾವರಣ ಮಾಡಿದರು. ಸಚಿವರುಗಳು ಅವರ ಕ್ಷೇತ್ರಗಳಿಗೆ ಹೋಗಿ ‘ಕರ್ನಾಟಕ’ ನಾಮಕರಣದ ಸಮಾರಂಭಗಳಲ್ಲಿ ಭಾಗವಹಿಸತೊಡಗಿದರು. ಇದರಿಂದಾಗಿ ಹೋರಾಟದ ಬೇಡಿಕೆಗಳ ಈಡೇರಿಕೆಯ ಚರ್ಚೆ ಮುಂದೂಡಲ್ಪಟ್ಟಿತು, ಹೋರಾಟದಲ್ಲಿ ಭಾಗವಹಿಸಿದ ನಾಯಕರು ಈ ಸಂದರ್ಭದಲ್ಲಿ ಒಂದಾದರು. ನವೆಂಬರ್ ತಿಂಗಳು ಪೂರ್ತಿ ಇಂತಹ ದ್ದೊಂದು ನಾಡಾಭಿಮಾನದ ಜಾತ್ರೆಯಂತಹ ವಾತಾವರಣವಿತ್ತು. ಸೊಂಡೂರಿನಲ್ಲಿಯೂ ಎಂ.ವೈ. ಘೋರ್ಪಡೆಯವರು ಪ್ರಜಾಸಭೆ ಮಾಡಿ ಮಾತನಾಡಿದರು. ಈ ಎಲ್ಲ ಕಾರಣದಿಂದ ಹೋರಾಟದ ನಂತರದ ಬೇಡಿಕೆ ಈಡೇರಿಕೆಯ ಬಗೆಗೆ ಗಂಭೀರವಾದ ಚರ್ಚೆ ಸಂವಾದಗಳು ಸಾಧ್ಯವಾಗದೆ ಹೋದವು.

ರೈತರಿಗೆ ಎಷ್ಟು ಭೂಮಿ ದೊರೆಯಿತು ಎನ್ನವದಷ್ಟೇ ಹೋರಾಟದ ಯಶಸ್ಸಲ್ಲ. ಆದರೆ ಭೂಮಿಗಾಗಿ ನಡೆದ ಹೋರಾಟ ಇದಾಗಿದ್ದರಿಂದ ರೈತರಿಗೆ ಎಷ್ಟು ಭೂಮಿ ಸಿಕ್ಕಿತು ಎನ್ನುವುದನ್ನು ನೋಡಬಹುದು. ಕುಮಾರಸ್ವಾಮಿ ಇನಾಮು ಭೂಮಿಯಾದ ೮೦೦೦ ಎಕರೆಗೆ ಅರ್ಜಿ ಕರೆಯಲಾಯಿತು. ಹಂತ ಹಂತವಾಗಿ ಈ ಭೂಮಿ ರೈತರ ಹೆಸರಿಗೆ ಪಟ್ಟವಾಯಿತು. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಮೂರು ನಾಲ್ಕು ಬಾರಿ ತಾಲೂಕು ಕಛೇರಿಗೆ ಭೇಟಿ ನೀಡಲಾಯಿತು. ಅಲ್ಲಿ ದಿನವೂ ಜಾತ್ರೆಯಂತೆ ಜನ ಸೇರುತ್ತಾರೆ. ಕಾರಣ ಮೈನಿಂಗ್ ಭೂಮಿಯ ಸಂಬಂಧದ ಇತ್ಯಾರ್ಥಗಳಿಗಾಗಿ, ಇನಾಂ ರದ್ದತಿಯಿಂದಾಗಿ ಈವರೆಗೂ ದೊರೆತ ಭೂಮಿಯ ಬಗ್ಗೆ ವಿವರ ಪಡೆದೆ. ಭೂನ್ಯಾಯ ಮಂಡಳಿಯಲ್ಲಿ ಇನಾಂ ರದ್ದತಿ ಕಾಯ್ದೆ ಅಡಿ ೭೧೭೬ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಅರ್ಜಿಗಳ ಭೂಮಿಯ ಒಟ್ಟು ವಿಸ್ತೀರ್ಣ ೩೯,೮೬೮ ಎಕರೆ. ಆದರೆ ಅರ್ಜಿದಾರರ ಪರವಾಗಿ ತೀರ್ಮಾನವಾದದ್ದು ೩೪೪೮ ಅರ್ಜಿಗಳು, ಇದರಿಂದಾಗಿ ಈತನಕ ೨೦,೧೮೦ ಎಕರೆ ಇನಾಮು ಭೂಮಿ ಸೊಂಡೂರು ರೈತರಿಗೆ ದೊರೆತಿದೆ. ಭೂನ್ಯಾಯ ಮಂಡಳಿಯಲ್ಲಿ ತಿರಸ್ಕರಿಸಲ್ಪಟ್ಟ ಅರ್ಜಿಗಳು ೩,೭೨೮ ಇದರ ಭೂಮಿಯ ವಿಸ್ತೀರ್ಣ ೧೯,೬೮೦ ಎಕರೆಗಳು. ಆಶ್ವರ್ಯವೆಂದರೆ ಇನ್ನು ಹತ್ತೊಂಬತ್ತು ಸಾವಿರ ಎಕರೆಯಷ್ಟು ಭೂಮಿ ಸಾಗುವಳಿ ಯಾಗುತ್ತದೆ. ಆದರೆ ಸಾಗುವಳಿದಾರರ ಹೆಸರಿಗೆ ಪಟ್ಟಾ ಆಗಿಲ್ಲ. ಅರ್ಜಿ ತಿರಸ್ಕೃತ ಆಗಲು ಕಾರಣಗಳೆಂದರೆ, ಪಹಣಿಯಲ್ಲಿ ಸಾಗುವಳಿದಾರರ ಕಾಲಂನಲ್ಲಿ ಅರ್ಜಿದಾರರ ಹೆಸರು ಇಲ್ಲದಿರುವುದು, ಬಂಜರು, ಪರಂಪೋಕ್ ಮುಂತಾದ ಪಟ್ಟಕ್ಕೆ ಯೋಗ್ಯವಲ್ಲದ ಭೂಮಿಯ ಅರ್ಜಿಗಳು ಬಂದಿದ್ದವು.

ಸ್ವೀಕೃತಗೊಂಡ ೩೪೪೮ ಪ್ರಕರಣಗಳ ಪೈಕಿ ಇನ್ನು ಕೆಲವರು ತಮಗೆ ಮುಂಜೂರಾಗಿರುವ ಜಮೀನಿನ ಪಹಣಿಗಳಲ್ಲಿ ತಮ್ಮ ಹೆಸರಿಗೆ (ಕುಮಾರಸ್ವಾಮಿ ಇನಾಮು ಭೂಮಿ ಹೆಸರಿನಿಂದ) ಬದಲಾವಣೆ ಮಾಡಿಸಿಕೊಂಡಿರುವುದಿಲ್ಲ. ಅಲ್ಲದೆ ಅವುಗಳ ಪೈಕಿ ಮಂಜೂರಾದ ಜಮೀನಿಗೆ ಈಗಲೂ ಪ್ರೀಮಿಯರ್ (ಇನಾಂ ಕಾಯ್ದೆ ರೀತಿ ಮಂಜೂರಾಗಿರುವ ಜಮೀನಿಗೆ ಕಟ್ಟಬೇಕಾದ ಮೊತ್ತ) ಪಾವತಿಸದೆ ಅರ್ಜಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡ ಪ್ರಕರಣಗಳಿವೆ. ಪಾರಂ ೨ ರಲ್ಲಿ ‘ಕುಮಾರಸ್ವಾಮಿ ಭೂಮಿ’ ಎಂಬ ಸಾಗುವಳಿ ಹೆಸರಿನಿಂದ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಎಚ್ಚರ ಈಗ ಕೆಲವರಿಗೆ ಬಂದಿದೆ. ಕಾರಣ ಮೈನಿಂಗ್ ಕಲ್ಲು ಇರುವ ಭೂಮಿಯನ್ನು ಲೀಜಿಂಗ್ ಹಾಕಲು ಪಟ್ಟಬೇಕಾಗಿದೆ. ತಾಲ್ಲೂಕು ಕಚೇರಿಗೆ ಭೇಟಿ ನೀಡಿದಾಗಲೂ ಇಂತಹ ಮೂರ್ನಾಲ್ಕು ಪ್ರಕರಣಗಳನ್ನು ನೋಡಲಾಯಿತು.

ಹೋರಾಟದ ಮುಂಚಿನ ಬೇಡಿಕೆಗೆಗಳನ್ನು ನೋಡಿದರೆ ಈಡೇರಿದ್ದು ಕೆಲವು ಮಾತ್ರ. ಆ ಕಾರಣಕ್ಕೆ ಹೋರಾಟ ಪೂರ್ಣ ಪ್ರಮಾಣದ ಯಶಸ್ಸು ಪಡೆಯಲಿಲ್ಲ. ಎಂ.ವೈ. ಘೋರ್ಪಡೆ ಅವರು ಇದನ್ನೊಂದು ಹಟದಂತೆ ಸಾಧಿಸಿದರು. ಅವರು ಪಟ್ಟುಹಿಡಿದಂತೆ ಕೆಲವು ಬೇಡಿಕೆಗಳನ್ನು ಈಡೇರದಂತೆ ನೋಡಿಕೊಂಡರು. ಚಳವಳಿಗಾರರು ರಾಜಮನೆತನದ ರಾಜಶಾಹಿಯನ್ನೆಲ್ಲ ದುರ್ಬಲಗೊಳಿಸುವ, ಪ್ರಜಾಪ್ರಭುತ್ವ ಸಮಾಜದಲ್ಲಿ ರಾಜನೂ ಸಾಮಾನ್ಯ ಪ್ರಜೆಯು ಒಂದೇ ಎಂಬ ಸಮಾಜಿಕ ನ್ಯಾಯದಂತೆ ಬೇಡಿಕೆಗಳನ್ನು ಇಟ್ಟಿದ್ದರು. ಆದರೆ ಇನಾಮು ಭೂಮಿ ರೈತರಿಗೆ ಸಿಕ್ಕಿದ್ದನ್ನು ಹೊರತುಪಡಿಸಿದರೆ ಉಳಿದ ಪ್ರಬಲ ಬೇಡಿಕೆಗಳು ರಾಜಶಾಹಿಯ ಪರವಾಗಿಯೇ ಆದವು. ಈ ಹೋರಾಟ ಸೊಂಡೂರು ಸಂಸ್ಥಾನದ ಪರಂಪರೆಯಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನರು ರಾಜರ ಎದುರು ದೊಡ್ಡ ಮಟ್ಟದಲ್ಲಿ ಪ್ರತಿರೋಧ ಒಡ್ಡಿದ್ದು. ಈಗಲೂ ಈ ಭಾಗದ ಕೆಲವರು ಈ ಹೋರಾಟವನ್ನು ಬೆಂಗಳೂರಿನಿಂದ ಬಂದ ಜನರು ಮಾಡಿದರು. ಇಲ್ಲಿ ಕೆಲಸವಿಲ್ಲದೆ ಬಿಡಾಡಿಯಾಗಿ ಸುತ್ತುವ ಕೆಲವು ರೈತರು ಊಟ ಸಿಗುತ್ತದೆ ಎಂದು ಹೋರಾಟದಲ್ಲಿ ಭಾಗವಹಿಸಿದರು ಎನ್ನುವ ಅಬಿಪ್ರಾಯ ಕೆಲವರದು. ಕುಮಾರಸ್ವಾಮಿ ಪೂಜಾರಿಯಂತು ಇಲ್ಲಿ ಹೋರಾಟವೇ ಆಗಿಲ್ಲ ಕೆಲವು ರಾಜರ ವಿರೋಧಿಗಳು ಮಾಡಿದ  ಕುತಂತ್ರ, ಇಲ್ಲಿನ ಜನ ಮಾಡಿದ್ದು ಅಲ್ಲ ಎನ್ನುತ್ತಾರೆ. ಅಂದರೆ ಈಗಲೂ ರಾಜರ ಬಗೆಗೆ ಅಭಿಮಾನ ಗೌರವ ಇಟ್ಟುಕೊಂಡವರು ಈ ಹೋರಾಟ ನಡೆಯಿತು ಎನ್ನುವುದನ್ನೇ ಅವಮಾನ ದಂತೆ ಮರೆಮಾಚಿಸಲು ಪ್ರಯತ್ನಿಸುತ್ತಾರೆ. ರಾಜ ಏನೇ ಮಾಡಿದರೊ ಅದು ಸರಿ ಎನ್ನುವುದರಲ್ಲಿ ವಿಶ್ವಾಸವಿರಿಸಿದ ಈ ಭಾಗದ ಜನರು ಹೋರಾಟ ನಡೆದಿದನ್ನೇ ನಂಬಿವುದಿಲ್ಲ.

ಕೊನೆಗೂ ಚಳವಳಿಯ ಯಶಸ್ಸು ಇರುವುದು ಅದು ಜನರಲ್ಲಿ ಹುಟ್ಟು ಹಾಕಿದ ರಾಜಕೀಯ ಪ್ರಜ್ಞೆಯಲ್ಲಿ. ಚಳವಳಿಯ ನಂತರದ ಸೊಂಡೂರಿನ ಜನರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಿತೆ? ನಂತರ ಚಳವಳಿ ಮುನ್ನಡೆಯಿತೆ? ಎಂದು ಪ್ರಶ್ನೆ ಮಾಡಿಕೊಂಡರೆ, ಸಿಗುವ ಉತ್ತರ ಚಳವಳಿಯ ಸೋಲು-ಗೆಲುವನ್ನು ಸಮಸಮವಾಗಿ ಹಿಬ್ಬಾಗಿಸುತ್ತದೆ. ಕಾರಣ ೧೯೭೩ರ ನಂತರದ ಸೊಂಡೂರಿನಲ್ಲಿ ಆ ಬಗೆಯ ಚಳವಳಿಯ ಪರಂಪರೆ ವ್ಯಾಪಕವಾಗಿ ಬೆಳೆಯಲಿಲ್ಲ. ಹೋರಾಟದಲ್ಲಿ ಭಾಗವಹಿದ ಕೆಲವು ನಾಯಕರೆ ಘೋರ್ಪಡೆಯವರ ಪರವಾದರು. ಯಜಮಾನ ಶಾಂತರುದ್ರಪ್ಪ ಮಾತ್ರ ತನ್ನ ಸಾವಿನವರೆಗೆ (ಮರಣ ೧೯೮೯) ಸಣ್ಣ ಪುಟ್ಟ, ಪ್ರತಿರೋಧವನ್ನು ಮಾಡಿಕೊಂಡಿದ್ದರು. ಇದು ಅವರಿಗೆ ಸ್ವಾಭಾವಿಕವೆ ಆದಂತಾಗಿತ್ತು. ಜನರೂ ಇವರನ್ನು ಬರಬರುತ್ತಾ ನಿರ್ಲಕ್ಷಿಸತೊಡಗಿದ್ದರು, ಇಂಥದ್ದೇ ಸ್ಥಿತಿ ಇಲಿಗಾರ ತಿಮ್ಮಪ್ಪನದೂ ಕೂಡ. ಈ ಎಲ್ಲಾ ಕಾರಣಗಳನ್ನು ನೋಡಿದರೆ ಹೋರಾಟದ ನಂತರ ಜನರಲ್ಲಿ ಕ್ರಾಂತಿಯಾಗುವಂತಹ ರಾಜಕೀಯ ಪ್ರಜ್ಞೆಯನ್ನೇನು ಬೆಳೆಸಲಿಲ್ಲ. ಅಥವಾ ಈ ಭಾಗದ ರೈತರು ಒಂದೆಡೆ ಒಗ್ಗಟ್ಟಾಗುವುದನ್ನು ವ್ಯವಸ್ಥಿತವಾಗಿ ರಾಜಪರವಾದವರು ಮುರಿಯತೊಡಗಿದರು. ತಿಮ್ಮಪ್ಪನ ಬೆಂಬಲಿಗರನ್ನು ಘೋರ್ಪಡೆಯವರು ಆಮಿಷಗಳನ್ನು ಒಡ್ಡಿ ತಮ್ಮ ಪರಮಾಡಿಕೊಂಡರು.

ಕಾಗೋಡು ತಿಮ್ಮಪ್ಪ ‘ಇದು ಕೊನೆಗೂ ಒಬ್ಬ ಘೋರ್ಪಡೆಯ ವಿರುದ್ಧದ ಹೋರಾಟವಾಗಿ ಉಳಿಯಿತೇ ವಿನಾ ಜಮೀನ್ದಾರನ ವಿರುದ್ಧ ರೈತರ ಪ್ರತಿಭಟನೆಯಾಗಿ ಬೆಳೆಯಲಿಲ್ಲ. ಅಂತೆಯೇ ಅದು ಕೇವಲ ಸೊಂಡೂರಿನ ಭೂಮಿಯ ವಿಷಯವಾಯಿತೇ ಹೊರತು ಜಿಲ್ಲೆಯ ಇತರ ಭಾಗಗಳಲ್ಲಿದ್ದ ಜಮೀನುದಾರರ ಮೇಲು ಈ ಕಾನೂನಿನ ಪ್ರಭಾವ ಆಗಲಿಲ್ಲ. ಈ ಹೋರಾಟಕ್ಕೆ ಬೇರೆ ಬೇರೆ ಭಾಗದಿಂದ ಸಮಾಜವಾದಿಗಳು ಬಂದರು, ಆದರೆ ರೈತ ಸಂಘ ಈ ಹೋರಾಟದಲ್ಲಿ ಹೆಚ್ಚು ಕ್ರೀಯಾಶೀಲವಾಗಲಿಲ್ಲ. ಬಳ್ಳಾರಿ ಜಿಲ್ಲೆಯ ಇತರ ಭಾಗಗಳಿಂದಲೂ ರೈತರು ಈ ಹೋರಾಟಕ್ಕೆ ಬಂದದ್ದು ಕಡಿಮೆ ಎನ್ನುತ್ತಾರೆ. ಸೊಂಡೂರು ಸುತ್ತಮುತ್ತಲ ತಾಲೂಕುಗಳಲ್ಲಿ ಕೆಲವರನ್ನು ಮಾತನಾಡಿಸಿದಾಗ ಈ ಹೋರಾಟ ನಡೆದ ಬಗ್ಗೆ ನಮಗೆ ಗೊತ್ತೆ ಇಲ್ಲ.. ಇಂತಹ ಚಳುವಳಿ ನಡೆಯಿತಾ? ಎಂದು ಆಶ್ಚರ್ಯದಿಂದ ಕೇಳುತ್ತಾರೆ.ಈ ಹೋರಾಟ ಲಿಂಗಾಯಿತರ ಹೋರಾಟವೆಂಬಂತೆ ರೂಪುಗೊಂಡಿತು. ಭಾಗವಹಿಸಿದ ಸ್ಥಳೀಯ ನಾಯಕರು ಬಹುತೇಕ ಲಿಂಗಾಯತರು. ಯಜಮಾನ ಶಾಂತರುದ್ರಪ್ಪನವರು ಇದು  ‘ಲಿಂಗಾಯತರ’ ಹೋರಾಟ ಎನ್ನುವಂತೆಯೇ ಪ್ರಚಾರ ಮಾಡಿದರು. ಹಾಗಾಗಿ ಬೇರೆ ಜಾತಿ ಸಮುದಾಯದವರು ಈ ಹೋರಾಟದಲ್ಲಿ ಸಾಧ್ಯವಾಗಲಿಲ್ಲ.

ಈ ಎಲ್ಲದರ ನಡುವೆಯೂ ಕರ್ನಾಟಕದ ರೈತ ಸತ್ಯಾಗ್ರಹಗಳಲ್ಲಿ ಇದು ಮಹತ್ವದ ಹೋರಾಟ. ರಾಜರ ಎದುರು ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದ ಸೊಂಡೂರಿನಲ್ಲಿ ಇಂತಹ ಒಂದು ಹೋರಾಟ ಆಯಿತು ಎನ್ನುವುದೇ ಮುಖ್ಯ ಅಂಶ. ಇದು ರಾಜಶಾಹಿಯ ವಿರುದ್ದದ ಹೋರಾಟ ಹೇಗೋ ಸದ್ಯದ ಸರ್ಕಾರದ ಅರ್ಥ ಸಚಿವರ ವಿರುದ್ದದ ಹೋರಾಟವೂ ಆಗಿತ್ತು. ಹಾಗಾಗಿಯೇ ಹೋರಾಟಕ್ಕೆ ಒಂದು ರಾಜಕೀಯ ಸ್ವರೂಪ ಬಂದದ್ದು. ನಿಜಕ್ಕೂ ಈ ಹೋರಾಟ ರಾಜಮನೆತನವನ್ನು ವಿಚಲಿತಗೊಳಿಸಿತು. ರೈತರ ನಿಜವಾದ ಶಕ್ತಿ ಏನೆಂಬುದು ರಾಜರಿಗೆ ಅರ್ಥವಾಯಿತು. ಈ ಹೋರಾಟದಿಂದಾಗಿ ರಾಜರ ಬಗೆಗಿದ್ದು ಕಲ್ಪನೆ, ನಂಬಿಕೆ, ಭಯದ ಚಿತ್ರಗಳು ಹೊಸ ರೂಪವನ್ನು ಪಡೆಯಲಿಕ್ಕೆ ಸಾಧ್ಯವಾಯಿತು. ಇನಾಮು ಭೂಮಿ ನೆಪದಲ್ಲಿ ರಾಜರ ಹಂಗಿನಲ್ಲಿದ್ದೇವೆ ಎಂಬ ಅಳುಕು ಇಲ್ಲವಾಯಿತು. ಇನಾಮು ಭೂಮಿಯನ್ನು ತಮ್ಮ ಹೆಸರಿಗೆ ಪಟ್ಟ ಮಾಡಿಸಿಕೊಂಡವರು ಸ್ವಾತಂತ್ಯ್ರದ ಅನುಭವವನ್ನು ಮೊದಲ ಬಾರಿಗೆ ಪಡೆದರು. ಜನಸಮುದಾಯದಲ್ಲಿ ದೊಡ್ಡ ಪ್ರಮಾಣದ ಸಂಚಲವನ್ನು ಈ ಹೋರಾಟ  ಹುಟ್ಟು ಹಾಕದಿದ್ದರೂ ಆಳುತ್ತಿದ್ದ ರಾಜಶಾಹಿಯ ಯೋಚನೆಯಿಂದ ಹೊರಬರಲು ಈ ಹೋರಾಟ ನಿಧಾನವಾಗಿ ಮಾಡಿದ ಪರಿಣಾಮ ಮಹತ್ವದ್ದು. ಈ ಹೋರಾಟದಲ್ಲಿಯೇ ‘ಜನತಾಪಕ್ಷ’ದ ಬೀಜ ಮೊಳಕೆಯೊಡೆಯಿತು. ರೈತ ಸಂಘ, ಸಾಂಸ್ಥಕಾಂಗ್ರೆಸ್, ಸಮಾಜವಾದಿ ಪಕ್ಷ, ಕಮ್ಯೂನಿಸ್ಟ್ ಮುಂತಾದ ಕಾಂಗ್ರೆಸೇತರ ಪಕ್ಷದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದರು. ದಾವಣಗೆರೆಯಲ್ಲಿ ೧೯೭೭ರಲ್ಲಿ ಜನತಾಪಕ್ಷದ ಸಭೆ ನಡೆದಾಗ ಜೆ.ಎಚ್. ಪಟೇಲರು ‘ಕರ್ನಾಟಕದಲ್ಲಿ ಜನತಾಪಕ್ಷ’ ಸಂಡೂರು ಹೋರಾಟದಲ್ಲಿ ಜನ್ಮತಾಳಿತು. ಅಲ್ಲಿ ಕಾಂಗ್ರೆಸೇತರ ಎಲ್ಲ ಪಕ್ಷದವರು ಒಂದಾಗಿದ್ದೆವು’ ಎಂದಿದ್ದರು.

ಹೋರಾಟದ ನಂತರ

ಭೂಹೋರಾಟದಲ್ಲಿ ಭಾಗವಹಿಸಿದವರನ್ನು ಮಾತನಾಡಿಸುತ್ತಿದ್ದಾಗ ಎಲ್ಲರಲ್ಲೂ ಸಮಾನವಾದ ವಿಷಾದವೊಂದಿತ್ತು. ಅದೆಂದರೆ ”ಆಗೇನೋ ಹುರುಪಿನ್ಯಾಗ ಭಾಗವಹಿಸಿದ್ವಿ.. ಆನಂತರ ನಾವು ತುಂಬ ಕಷ್ಟ ಅನುಭವಿಸಬೇಕಾಯ್ತು. ಹೋರಾಟದಲ್ಲಿ ಭಾಗವಹಿದವರನ್ನ ಯಾವ ರೀತಿ ಹತ್ತಿಕ್ಲಿಕ್ಕೆ ಸಾಧ್ಯನೋ ಹಾಗೆ ಹತ್ತಿಕ್ಕಿದ್ರು .. ಈಗ್ಲೂ ನಮ್ಮಿಂದ ಮೇಲೇಳಲಿಕ್ಕೆ ಆಗ್ತಾ ಇಲ್ಲ ”ಎನ್ನುವುದು, ಭೇಟಿ ಮಾಡಿದ ಬಹುತೇಕರ ಮನೆಯ ಆರ್ಥಿಕ ಸ್ಥಿತಿ ದಾರುಣವಾಗಿದೆ. ಪಾತ್ರ ಸೀನಪ್ಪ ತಾನೊಬ್ಬ ಹುಟ್ಟು ಹೋರಾಟಗಾರ ಈಗ ಏನು ಮಾಡಲಾಗದ ಸ್ಥಿತಿಯಲ್ಲಿದ್ದೇನೆ ಎನ್ನುವಂತೆ ಮಾತನಾಡುತ್ತಿದ್ದರು. ಮಕ್ಕಳು ಇವರನ್ನು ಪ್ರತ್ಯೇಕ ಕೋಣೆಯೊಂದರಲ್ಲಿ ಇರಿಸಿದ್ದಾರೆ. ಅವರ ಈಗಿನ ಸ್ಥಿತಿ ಶೋಚನೀಯ ಹೀಗೆ ಹೋರಾಟದ ನಂತರ ಇದರಲ್ಲಿ ಭಾಗವಹಿಸಿದವರು ಒಂದಲ್ಲ ಒಂದು ರೀತಿ ಪೇಚಿಗೆ ಸಿಕ್ಕಿಹಾಕಿಕೊಂಡರು. ಎಂ.ವೈ. ಘೋರ್ಪಡೆಯವರು ಮಂತ್ರಿಯಾಗಿದ್ದರಿಂದ ಹೋರಾಟದ ನಂತರ ಇವರನ್ನು ಎದುರು ಹಾಕಿಕೊಂಡು ಬದುಕುವ ಶಕ್ತಿ ಚಳವಳಿಗಾರರಿಗೆ ಬಹುದಿನ ಉಳಿಯಲಿಲ್ಲ. ಕೆಲವರು ರಾಜರ ಪಕ್ಷ ಸೇರಿಕೊಂಡರು. ಹೀಗಾಗಿ ಎಲಿಗಾರ ತಿಮ್ಮಪ್ಪನ ಬಣವು ಶಕ್ತಿ ಗುಂದುತ್ತಾ ಹೋಯಿತು.

ಹೋರಾಟದ ಮುಕ್ತಾಯದ ನಂತರ ಸಮಾಜವಾದಿ ಯುವಜನ ಸಭೆಯು ಚೇತರಿಸಿಕೊಂಡು ಹೋರಾಟವನ್ನು ಬೆಂಬಲಿಸಿತು. ಅಕ್ಟೋಬರ್ ೩೧, ೧೯೭೩ರಲ್ಲಿ ಶಿವಮೊಗ್ಗದಲ್ಲಿ ಸಮಾಜವಾದಿ ಯುವಜನ ಸಭಾದ ಒಂದು ಸಭೆ ನಡೆಯಿತು. ಅಲ್ಲಿ ನೆರೆದ ಯುವ ಸಮಾಜವಾದಿಗಳು ಒಂದು ಮನವಿ ಮಾಡಿ ‘ಹಿಂಸಾತ್ಮಕ ಹೋರಾಟವನ್ನು ಏಕರೀತಿಯಲ್ಲಿ ಪರಿಗಣಿಸಿ ಲಾಠಿಪ್ರಹಾರ ಮೊದಲಾ‌ದ ಉಗ್ರಕ್ರಮಗಳನ್ನು ಅನುಸರಿಸಿ, ಅರಸು ಸರಕಾರ ಸೊಂಡೂರಿನ ಅಹಿಂಸಾತ್ಮಕ ಸತ್ಯಾಗ್ರಹಿಸಿ ಮೇಲೆ ದೌರ್ಜನ್ಯ ನಡೆಸಿದೆ. ನವೆಂಬರ್ ನಾಲ್ಕರ ಒಳಗಾಗಿ ಸರ್ಕಾರವು ಸೊಂಡುರಿನ ಸಮಸ್ಯೆಗೆ ಪರಹಾರ ಸೂಚಿಸದಿದ್ದಲ್ಲಿ ಅಂದಿನಿಂದ ಸರ್ವಶಕ್ತಿಯೊಡನೆ ಸತ್ಯಾಗ್ರಹ ಮುಂದುವರಿಸಲಾಗುವುದು. ರಾಜ್ಯ ಯುವಕ ಸಮುದಾಯವು ಹೋರಾಟಕ್ಕೆ ಇಳಿದ ನಂತರ ಸಂಭವಿಸಬಹುದಾದ ಎಲ್ಲ ಪರಿಸ್ಥಿತಿಗಳಿಗೂ ಸರಕಾರವೇ ಹೊಣೆಯಾಗಿರಬೇಕು’ ಎಂದು ಸೂಚನೆ ನೀಡಿದರು. ಈ ನಿರ್ಣಯಕ್ಕೆ ಕಡಿದಾಳ ಶಾಮಣ್ಣ, ಶಿವಮೊಗ್ಗದ ರೈತ ಹೋರಾಟರಾರ ಬಂದಗದ್ದೆ ರಮೇಶ್, ಬಿ.ಎಸ್. ಕೇಶವಪ್ಪ, ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ರೈತ ಚಳವಳಿಯ ಮುಖಂಡರಾದ ಎಂ.ಡಿ. ನಂಜುಂಡಸ್ವಾಮಿ ಹಾಗೂ ಎನ್.ಡಿ. ಸುಂದರೇಶನ್ ಸಹಿ ಮಾಡಿ ಬೆಂಬಲಿಸಿದ್ದಾರೆ. ಇದು ಹೋರಾಟದ ನಂತರದ ಕೊನೆಯ ಹೇಳಿಕೆಯಾಗಿದೆ. ಆನಂತರ ಸೊಂಡೂರಿನಲ್ಲಾದ ಪ್ರಕ್ರಿಯೆಗಳ ಬಗೆಗೆ ಸಮಾಜವಾದಿಗಳ ಗಮನ ಕಡಿಮೆಯಾಯಿತು. ಹಾಗಾಗಿ ಸ್ಥಳೀಯ ಹೋರಾಟಗಾರರು ರಾಜಮನೆತನದ ವಿರೋಧದ ಪರಿಣಾಮವನ್ನು ಎದುರಿಸಬೇಕಾಯಿತು. ಎಲಿಗಾರ ತಿಮ್ಮಪ್ಪನವರಂತೂ ರಾಜ ವಂಶದಿಂದ ಚಿತ್ರಹಿಂಸೆಗೆ ಗುರಿಯಾದರು. ಹೋರಾಟದ ನಂತರ ಅಮಾನುಷ ಮತ್ತು ಅಧಿ ಕಾರದ ದುರುಪಯೋಗ ಆದದ್ದಕ್ಕೆ ತಿಮ್ಮಪ್ಪನವರ ಮೇಲಿನ ಪೋಲಿಸ್ ದೌರ್ಜನ್ಯವೇ ಸಾಕ್ಷಿ.

ಎಲಿಗಾರ ತಿಮ್ಮಪ್ಪ ೧೯೭೩ ಹೋರಾಟದ ರೂವಾರಿ. ಸ್ವತಂತ್ರ ಹೋರಾಟಗಾರರೂ ಕೂಡ. ಇವರ ಮೇಲಿನ ಸೇಡು ತೀರಿಸಿಕೊಳ್ಳಲು ವ್ಯವಸ್ಥಿತ ಸಂಚು ಮಾಡಲಾಯಿತು. ಅರ್ಥ ಸಚಿವರಾಗಿದ್ದ ಎಂ.ವೈ. ಘೋರ್ಪಡೆಯವರ ಆದೇಶದ ಮೇಲೆಗೆ ಪೊಲೀಸರು ವಾರೆಂಟ್ ಇಲ್ಲದೆ ಬಳ್ಳಾರಿಯಲ್ಲಿ ಏಪ್ರೀಲ್ ೧೬,೧೯೭೪ ರಂದು ಬಂಧಿಸಿ ಬೆಂಗಳೂರಿಗೆ ಕರೆದೊಯ್ದು ಐ.ಜಿ.ಪಿ. ಲಾಕಪ್ಪಿನಲ್ಲಿರಿಸಿದರು. ನಂತರ ನವೆಂಬರ್ ೨೮,೧೯೭೩ ರಂದು ಕುಮಾರಸ್ವಾಮಿ ದೇವಸ್ಥಾನದಲ್ಲಿ ನಡೆದ ೫೦,೦೦೦ ರೂಪಾಯಿ ಮೌಲ್ಯದ ಆಭರಣಗಳ ಕಳ್ಳತನದ ಸಂಬಂಧವಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಯಿತು. ಈ ಕುರಿತು ಎಲಿಗಾರ ನಾಗರಾಜಪ್ಪ ”ಅಪ್ಪ ಬಳ್ಳಾರಿಯಲ್ಲಿ ಯಜಮಾನ ಶಾಂತರುದ್ರಪ್ಪ ಅವರ ಅಂಗಡಿ ಮೇಲಿನ ಮಳಿಗೆಯಲ್ಲಿ ಮಲಗಿದ್ರಂತೆ, ಇದ್ದಕ್ಕಿದ್ದಂತೆ ಬಂದ ಪೊಲೀಸರು ಬಂದು ವಿಚಾರಣೆ ಇದೆ ಬನ್ನಿ ಎಂದು ಕರೆದುಕೊಂಡು ಹೋದರಂತೆ, ಏನು? ಯಾಕೆ? ಎಂದು ಕೇಳಿದಾಗ ಅದೆಲ್ಲ ಆಮೇಲೆ ಗೊತ್ತಾಗುತ್ತೆ ಬಾರೋ.. ಎಂದು ದರ್ಪದಿಂದ ಆದಿನ ಬೆಂಗಳೂರಿಗೆ ಕರೆದೊಯ್ಯಲಾಯಿತಂತೆ. ಏಪ್ರಿಲ್ ೧೬ ರಿಂದ ೭ ದಿನಗಳವರೆಗೆ ಐ.ಜಿ.ಪಿ. ಲಾಕಪ್ಪಿನಲ್ಲಿಟ್ಟ ಚಿತ್ರಹಿಂಸೆ ಕೊಟ್ರಂತೆ. ನಮಗೆ ಅಪ್ಪ ಕಾಣೆಯಾಗಿದ್ದು ಭಯವಾಗಿತ್ತು. ಬೆಂಗಳೂರಿನ ಕೆ.ಜಿ.ಮಹೇಶ್ವರಪ್ಪ ಮುಂತಾದವರನ್ನು ಸಂಪರ್ಕಿಸಿದರೂ ಯಾವುದೇ ಮಾಹಿತಿ ಸಿಗ್ಲಿಲ್ಲ. ಏಳನೇ ದಿನ ಕ್ಷೌರ ಮಾಡಲು ಕ್ಷೌರಿಕನೊಬ್ಬ ಬಂದಿದ್ದನಂತೆ ಆತನ ಬಳಿ ಅಪ್ಪ ನಡೆದದ್ದನ್ನೆಲ್ಲಾ ಹೇಳಿ.. ಸಣ್ಣ ದೊಂದು ಚೀಟಿಯಲ್ಲಿ ಇಂಥ ಕಡೆ ಬಂಧನದಲ್ಲಿದ್ದೇನೆ ಎಂದು ಬರೆದು ಅದನ್ನು ಸುಬೇದರ್ ಛತ್ರದ ಬಳಿ ಸೋಷಲಿಸ್ಟ್ ಪಾರ್ಟಿಯ ಕಛೇರಿಯಿದೆ, ಅಲ್ಲಿ ಕೆ.ಜಿ. ಮಹೇಶ್ವರಪ್ಪ ಅಂತ ಇರ್ತಾರೆ ಅವರಿಗೆ ದಯವಿಟ್ಟು ತಲುಪಿಸಿ ಎಂದು ಕೊಟ್ಟರಂತೆ, ಆ ಕೌರಿಕ ಚೀಟಿಯನ್ನು ಸೋಷಲಿಸ್ಟ ಪಾರ್ಟಿ ಆಫೀಸಿಗೆ ತಲುಪಿಸಿದಾಗಲೆ ಬಂಧನದಲ್ಲಿದ್ದ ವಿಷಯ ಗೊತ್ತಾಯ್ತು. ಅದೇ ಸಮಯದಲ್ಲಿ ವಿಧಾನಸಭಾ ಕಲಾಪ ನಡೆದಿತ್ತು… ಅಲ್ಲಿ ದೊಡ್ಡ ಗಲಾಟೆ ಆಯ್ತು” ಎನ್ನುತ್ತಾರೆ.

ವಿಧಾನಸಭಾ ಕಲಾಪದಲ್ಲಿ ಏಪ್ರೀಲ್ ೨೫,೧೯೭೪ರಂದು ಎಂ.ವೈ.ಘೋರ್ಪಡೆಯವರ ರಾಜಕೀಯ ಪ್ರತೀಕಾರದ ವಿರುದ್ಧ ವಿರೋಧ ಪಕ್ಷದವರು ನಿಲುವಳಿ ಸೂಚನೆ ಮಂಡಿಸಿದರು. ವಿಧಾನಸಭಾಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ ಅವರು ವಿರೋಧ ಪಕ್ಷದವರರ ನಿಲುವಳಿ ಮಂಡನೆಗೆ ಅನುಮತಿಯನ್ನು ನಿರಾಕರಿಸಿದರು. ಹಾಗಾಗಿ ವಿರೋಧ ಪಕ್ಷದ ಮುಖಂಡರುಗಳಾದ ಎಚ್.ಡಿ. ದೇವೇಗೌಡ, ಸದಸ್ಯರಾದ ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಎಸ್. ಬಂಗಾರಪ್ಪ, ಬಾಪುಗೌಡ, ಸಿ.ಬೈರೇಗೌಡ, ಡಿ, ಪೋಸಲಿಂಗಮ್, ಎಂ. ರಾಜಶೇಖರಮೂರ್ತಿ, ಎಚ್.ಟಿ. ಕೃಷ್ಣಪ್ಪ, ಎಸ್.ವೈ. ಪಟೇಲ್, ಹನುಮೇಗೌಡ, ಗುರುಸಿದ್ದಪ್ಪ, ಪುಟ್ಟಸ್ವಾಮಯ್ಯ, ಎಂ.ಎಸ್. ಕೃಷ್ಣನ್, ಕೆ.ಎಂ.ನಾಗಣ್ಣ ಮೊದಲಾದವರು ವಿಧಾನಸಭೆಯಲ್ಲಿ ಧರಣಿ ಹೂಡಿದರು. ವೈ.ತಿಮ್ಮಪ್ಪವರ ಬಂಧನಕ್ಕೆ ಕಾರಣವಾದ ಸಂದರ್ಭ ಪೊಲೀಸರ ವರ್ತನೆ, ಪೊಲೀಸರ ವಶದಲ್ಲಿದ್ದಾಗ ಅವರಿಗೆ ನೀಡಲಾದ ಚಿತ್ರಹಿಂಸೆ ಮೊದಲಾದವುಗಳ ಬಗ್ಗೆ ಜಿಲ್ಲಾ ನ್ಯಾಯಾಧೀಶರ ಮಟ್ಟಕ್ಕೆ ಕಡಿಮೆ ಇಲ್ಲದ ನ್ಯಾಯಾಧೀಶರೊಬ್ಬರಿಂದ ನ್ಯಾಯಾಂಗ ವಿಚಾರಣೆ ಆಗಬೇಕೆಂದು ಪಟ್ಟು ಹಿಡಿದರು. ಆ ದಿನ ನಡೆದ ವಿಧಾನಸಭಾ ಚರ್ಚೆಯಲ್ಲಿ ಕಾಗೋಡು ತಿಮ್ಮಪ್ಪನವರು ವಿಧಾನಸಭಾ ಅಧ್ಯಕ್ಷರೊಂದಿಗೆ ದೀರ್ಘವಾಗಿ ಮಾತನಾಡಿದರು. ಇದರ ಒಂದು ಭಾಗ ಹೀಗಿದೆ:

ಸೊಂಡೂರಿನ ತಿಮ್ಮಪ್ಪನವರ ಘಟನೆ ಕೇಳಿದರೆ ಹೃದಯ ಇದ್ದ ಮನುಷ್ಯ ತಡೆದುಕೊಳ್ಳುವುದಕ್ಕಾಗುವುದಿಲ್ಲ. ರಾಜಕೀಯ ಎದುರಾಳಿಯನ್ನು ರೀತಿ ತುಳಿಯಬೇಕು ಎಂದು ಹಣಕಾಸು ಸಚಿವರಿಗೆ ದಾಹ ಇದ್ದರೆ ರಾಜೀನಾಮೆ ಕೊಟ್ಟು ಚುನಾವಣೆ ಬರಲಿ. ಅವರ ಎದುರು ಸ್ಪರ್ಧಿಸಲು ನಾನು ಬರುತ್ತೇನೆ. ಈವರೆಗೂ ಅವರ ವಿರುದ್ದ ಸ್ಪರ್ಧೆ ಮಾಡಿರತಕ್ಕ ವ್ಯಕ್ತಿ ಎಂದರೆ ಎಲಿಗಾರ ತಿಮ್ಮಪ್ಪ. ಅವರು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರು, ಸೊಂಡೂರು ತಾಲ್ಲೂಕಿನ ರೈತ ಸಂಘದ ಅಧ್ಯಕ್ಷರೂ ಕೂಡ. ಅವರನ್ನು ಹದಿನಾರನೇ ತಾರಿಕು ಬಂಧಿಸಿ, .ಜಿ.ಪಿ. ಲಾಕಪ್ಪಿನಲ್ಲಿಟ್ಟು ಕೈ ಮೇಲಕ್ಕೆತ್ತಿ ಕಟ್ಟಿ ಲಾಟಿಯಿಂದ ಹೊಡೆದಿದ್ದಾರೆ, ಏರೋಪ್ಲೇನ್ ಏರಿಸಿದ್ದಾರೆ. ಈಗ ಆತನಿಗೆ ನಡೆದಾಡಲು ಬರುವುದಿಲ್ಲ. ೧೯೭೩ರ ನವೆಂಬರ್‌ನಲ್ಲಿ ಸೊಂಡೂರಿನ ಕುಮಾರಸ್ವಾಮಿ ದೇವಸ್ಥಾನದಲ್ಲಿ ಆಭರಣ ಕಳುವಾಗಿದೆ. ಇದನ್ನು ಸಮಾಜವಾದಿಗಳೇ ಮಾಡಿಸಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲು ತಿಮ್ಮಪ್ಪನಿಗೆ ಹಿಂಸೆ ಕೊಟ್ಟಿದ್ದಾರೆ. ಸಮಾಜವಾದಿಗಳು ಅಂತ ಹೇಯವಾದ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ರಾಜಮನೆತನದವರೇ ಕಳ್ಳತನ ಮಾಡಿದ್ದರೆಂದು ಆರೋಪಿಸುತ್ತೇನೆ. ಒಬ್ಬ ತಿಮ್ಮಪ್ಪನನ್ನು ನೆಪಮಾಡಿಕೊಂಡು ರಾಜಕೀಯ ವಿರೋಧಿ ಶಕ್ತಿಯನ್ನು ದಮನ ಮಾಡಲು ಪೊಲೀಸರನ್ನು ಉಪಯೋಗಿಸಿಕೊಳ್ಳಲಾಗಿದೆ. ಸ್ಥಿತಿ ನಾಳೆ ನಮಗೆ ಬರುತ್ತದೆ. ದೇವರಾಜ ಅರಸರಿಗೂ ಬರುತ್ತದೆ. ಅಧಿಕಾರ  ಶಾಶ್ವತ ಇರುವುದಿಲ್ಲ. ಅಧಿಕಾರ ಕಳೆದುಕೊಳ್ಳಬಹುದು ಅಥವಾ ಹೀಗೇ ಇರಬಹುದು, ಆದರೆ ರಾಜಕಾರಣಿಗಳು ಅವರ ವಿರುದ್ಧ ಶಕ್ತಿಗಳನ್ನು ರೀತಿ ಬಲಿ ತೆಗೆದುಕೊಂಡರೆ ಎಲ್ಲರಿಗೂ ಸರ್ದಿ ಬರುತ್ತದೆ. ಇವತ್ತು ಇನ್ನೊಬ್ಬರ ಕತ್ತನ್ನು ಹಿಸುಕುವುದಕ್ಕೆ ಪ್ರಯತ್ನ ಮಾಡಿದರೆ, ಅದೇ ಕೈಗಳು ನಾಳೆ ತನ್ನ ಕತ್ತನ್ನು ಹಿಚುಕುತ್ತವೆ ಎನ್ನುವ ಭಯ ಮನುಷ್ಯನಲ್ಲಿ ಇರಬೇಕು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಎದುರಾಳಿಗಳನ್ನು ಸ್ನೇಹಿತರಂತೆ ಕಾಣಬೇಕು. ಅಂತಹ ಪ್ರವೃತ್ತಿ ಅಧಿಕಾರದಲ್ಲಿದವರಿಗೆ ಇರದಿದ್ದರೆ ಇಂತಹ ಪ್ರಕರಣಗಳು ನಡೆಯುತ್ತವೆ.

ಈ ಮಾತುಗಳನ್ನು ನೋಡಿದರೆ ಎಲಿಗಾರ ತಿಮ್ಮಪ್ಪನವರ ಪ್ರಕರಣ ಎಂತಹ ಸ್ವರೂಪವನ್ನು ಪಡೆದಿತ್ತು ಎನ್ನುವುದು ತಿಳಿಯುತ್ತದೆ. ರಾಜಮನೆತನ ತನ್ನ ರಾಜಶಾಹಿದರ್ಪವನ್ನು ಮಂತ್ರಿ ಪದವಿ ಮೂಲಕ ವಿಸ್ತರಿಸಿಕೊಂಡ ಬಗೆಗೂ ಸಾಕ್ಷಿಯಂತಿದೆ. ವಿಧಾನಭೆಯಲ್ಲಿ ವಿರೋಧ ಪಕ್ಷದವರ ಬೇಡಿಕೆಯಂತೆ ಈ ಪ್ರಕರಣವನ್ನು ನ್ಯಾಯಾಂಗ ವಿಚಾರಣೆ ನಡೆಸಲು ಸರ್ಕಾರ ಒಪ್ಪಿಕೊಂಡಿತು. ರಾಜ್ಯ ಸರ್ಕಾರವು ಮೇ ೨,೧೯೭೪ರಂದು ಜಿಲ್ಲಾ ನ್ಯಾಯಧೀಶರಾದ ಎಸ್.ಎನ್.ಬಾಟಪ್ ಅವರನ್ನು ‘ಶ್ರೀ ತಿಮ್ಮಪ್ಪ ಪ್ರಕರಣ ವಿಚಾರಣಾ ಆಯೋಗ’ ದ ಅಧ್ಯಕ್ಷರನ್ನಾಗಿ ನೇಮಿಸಿತು. ಈ ಆಯೋಗವು ಸುಮಾರು ೨ ತಿಂಗಳುಗಳ ಕಾಲ ಸತತವಾಗಿ ವಿಚಾರಣೆ ನಡೆಸಿ ಜುಲೈ ೬,೧೯೭೪ರಂದು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ವೈ.ತಿಮ್ಮಪ್ಪನವರನ್ನು ದಸ್ತಗಿರಿ ಮಾಡುವಲ್ಲಿ ಸಿ.ಐ.ಡಿ. ಇನ್‌ಸ್ಪೆಕ್ಟರ್ ಸೂರ್ಯನಾರಾಯಣ ಸ್ವಾಮಿಯವರ ವರ್ತನೆಯ ಆತುರತೆ ಮತ್ತು ಬೇಜವಾಬ್ದಾರಿತನದಿಂದ ಕೂಡಿದ್ದು ಅದು ಅಸಿಂಧು ಮತ್ತು ಆಕ್ಷೇಪಾರ್ಹವಾದುದು, ಪೋಲಿಸ್ ಕಸ್ಟಡಿಯಲ್ಲಿದ್ದಾಗ ಪೋಲಿಸರು ತಿಮ್ಮಪ್ಪನವರಿಗೆ ಚಿತ್ರಹಿಂಸೆಯನ್ನು ಕೊಟ್ಟಿದ್ದು ನಿಜವೆಂದೂ, ತಿಮ್ಮಪ್ಪನವರ ಚಿತ್ರಹಿಂಸೆಗೆ ಸೂರ್ಯ ನಾರಾಯಣ ಅವರೊಬ್ಬರೇ ಜವಾಬ್ದಾರರು ಎಂದು ಆಯೋಗ ತೀರ್ಪು ನೀಡಿ. ಸೂರ್ಯನಾರಾಯಣ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡಿತು.

ಬಾಟಪ್ ಆಯೋಗದ ವರದಿಯಲ್ಲಿ ಈ ಪ್ರಕರಣಕ್ಕೆ ಸಿ.ಐ.ಡಿ ಇನ್‌ಸ್ಪೆಕ್ಟರ್ ಸೂರ್ಯನಾರಾಯಣ ಸ್ವಾಮಿ ಮಾತ್ರ ಕಾರಣರು ಎನ್ನುವಲ್ಲಿ ವಿರೋಧ ಪಕ್ಷದವರು ಆರೋಪಿಸಿದ್ದ ಅರ್ಥ ಸಚಿವರನ್ನು ರಕ್ಷಿಸಲಾಗಿತ್ತು. ಈ ಪ್ರಕರಣದಲ್ಲಿ ಅರ್ಥ ಸಚಿವರ ಕೈವಾಡವಿಲ್ಲ, ಇದು ವಿರೋಧ ಪಕ್ಕದವರ ಅನಗತ್ಯ ಆರೋಪ ಎನ್ನುವಂತಿತ್ತು. ಆದಗ್ಯೂ ತಪ್ಪಿತಸ್ಥರಾದ ಸೂರ್ಯ ನಾರಾಯಣರನ್ನು ಸಸ್ಪೆಂಡ್ ಮಾಡುವುದಾಗಲಿ, ಸೂಕ್ತಕ್ರಮ ಕೈಗೊಳ್ಳುವುದಾಗಲಿ ಸರ್ಕಾರ ಕೂಡಲೆ ಮಾಡಲಿಲ್ಲ. ವಿಧಾನಸಭಾ ಕಲಾಪದಲ್ಲಿಯೂ ಈ ಬಗ್ಗೆ ಚರ್ಚೆ ಆಯಿತು. ಆರೋಪಿಯನ್ನು ಇನ್ನು ಯಾಕೆ ಶಿಕ್ಷಿಸುತ್ತಿಲ್ಲ? ಎನ್ನುವ ವಿರೋಧ ಪಕ್ಷದವರ ಪ್ರಶ್ನೆಗೆ ಆಗಿನ ಸಾರ್ವಜನಿಕ ಸೇವಾ ಮಂತ್ರಿ ಎಚ್.ಎಂ. ಚನ್ನಬಸಪ್ಪ  ‘ತ್ವರಿತಗತಿಯಲ್ಲಿ ಆರೋಪಿಯನ್ನು ಶಿಕ್ಷಿಸಲಾಗುವುದು’ ಎಂದರು. ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡರರು, ಎಲಿಗಾರ ತಿಮ್ಮಪ್ಪನ ಪ್ರಕರಣ ಸಂಬಂಧದ ನ್ಯಾಯಾಂಗ ತನಿಖೆ ಹೊರಬಿದ್ದದ್ದು ಜುಲೈ ೬ ರಂದು; ಸೂಕ್ತ ಕ್ರಮಕ್ಕೆ ಅಧಿಕಾರ ನೇಮಿಸಿದ್ದು ಆಗಸ್ಟ್ ೨೮ರಂದು; ಆದರೂ ಆರೋಪಿ ಶಿಕ್ಷೆ ಅನುಭವಿಸದೆ ಆರಾಮವಾಗಿದ್ದಾರೆ. ಸರ್ಕಾರ ಈತನನ್ನು ರಕ್ಷಿಸುತ್ತಿರುವ ಹಿನ್ನಲೆ ಏನು? ಎಂದು ಕಟುವಾಗಿ ಪ್ರಶ್ನೆ ಮಾಡಿದರು.

ನ್ಯಾಯಾಧೀಶ ಎಸ್.ಎಸ್. ಬಾಟಪ್ ಅವರು ಈ ತೀರ್ಪು ನೀಡಿದ್ದಕ್ಕೆ ವರದಿ ಸಲ್ಲಿಸಿದ ಮರುದಿನ ಅವರನ್ನು ವರ್ಗಾಯಿಸಲಾಯಿತು. ಈ ವಿಷಯ ಪ್ರಸ್ತಾಪಿಸಿದ ಎಚ್.ಡಿ.ದೇವೇಗೌಡರು  ‘ಬಾಟಪ್ ಅವರ ವರ್ಗಾವಣೆಯ ಅಗತ್ಯವೇನಿತ್ತು. ಇದರ ಹಿಂದಿನ ಶಕ್ತಿಗಳಾವುವು?’ ಎಂದು ಪ್ರಶ್ನಿಸಿದರು. ಅದೇ ಸದನದಲ್ಲಿ ಕೋಣಂದೂರು ಲಿಂಗಪ್ಪ ”ಈ ಕೊಲೆಪಾತಕ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ.. ಎಂದು ಏನೋ ಹೇಳಲು ಪ್ರಯತ್ನಿಸಿದರು. ಮಂತ್ರಿಯೊಬ್ಬರು ನಾಲಿಗೆಯಲ್ಲಿ ಮೂಳೆಯಿಲ್ಲ.. ಎಂದು ಪ್ರತಿಯಾಗಿ ಕಟುಕಿದರು. ಲಿಂಗಪ್ಪ ಮತ್ತೆ ಹೌದೌದು ಕೆಲವರ ತಲೆಯಲ್ಲಿ ಮೂಳೆ ಇರಲ್ಲ ನಾವೇನು ಮಾಡೋಣ? ಎಂದು ಉತ್ತರಿಸಿದರು. ಇಲ್ಲಿನ ಇಡಿಯಾದ ಚರ್ಚೆಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನನ್ನು ರಕ್ಷಿಸಿಕೊಳ್ಳುವ ಮತ್ತು ವಿರೋಧ ಪಕ್ಷವನ್ನು ದುರ್ಬಲಗೊಳಿಸುವ ತಂತ್ರಗಾರಿಕೆ ಇದ್ದಂತೆ ಕಾಣುತ್ತದೆ.

ಹೋರಾಟದ ನಂತರ ತಿಮ್ಮಪ್ಪನವರ ಈ ಪ್ರಕರಣ ಮಾನವೀಯತೆ ಇರುವವರೆಲ್ಲ ವಿರೋಧಿಸುವಂತಹದ್ದು. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಅಧಿಕಾರ ಸಾಮಾನ್ಯ ಪ್ರಜೆಯೊಬ್ಬನನ್ನು ಹೇಗೆಲ್ಲ ತುಳಿಯುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ತಿಮ್ಮಪ್ಪನವರನ್ನು ಬಂಧಿಸಿದ್ದಕ್ಕೆ ಕುಮಾರಸ್ವಾಮಿ ದೇವಸ್ಥಾನದಲ್ಲಿ ಕಳವಾದ ಆಭರಣಗಳು ಕಾರಣ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ದಿಢೀರನೆ ಸಿ.ಐ.ಡಿ ಇನ್ಸ್‌ಪೆಕ್ಟರ್ ಯಾವ ವಾರೆಂಟು ಇಲ್ಲದೆ ಒಬ್ಬರನ್ನು ಬಂಧಿಸುವುದೆಂದರೆ, ಸಾಮಾನ್ಯ ಪ್ರಜೆಯೂ ಗ್ರಹಿಸಬಹುದು ಇದರ ಹಿಂದೆ ಒಂದು ಪ್ರಭಾವಿ ಶಕ್ತಿ ಇದೆ ಎಂದು. ಆರೋಪಿ ಎಂದು ಸಾಬೀತಾದರೂ ಆತನಿಗೆ ಶಿಕ್ಷೆ ಆಗದಿದ್ದದ್ದು ಬಾಟಪ್‌ರನ್ನು ವರದಿ ಸಲ್ಲಿಸಿದ ಕಾರಣಕ್ಕಾಗಿ ವರ್ಗಾವಣೆ ಮಾಡಿಸಿದ್ದು. ಈ ಪ್ರಕರಣಕ್ಕೆ ಎಂ.ವೈ. ಘೋರ್ಪಡೆಯವರು ಯಾವುದೇ ಪ್ರತಿಕ್ರಿಯೆ ನೀಡಿದೆ ಮೌನವಾದದ್ದು, ಮುಖ್ಯಮಂತ್ರಿ ದೇವರಾಜ ಅರಸರು ಎಲ್ಲವೂ ಗೊತ್ತಿದ್ದು ಧ್ವನಿ ಎತ್ತದೆ ಇದ್ದದ್ದು, ಒಂದು ವ್ಯವಸ್ಥೆಯು ಪ್ರಭುತ್ವವನ್ನು ಬೆಂಬಲಿಸುವಂತಿದೆ. ಇದರ ಎದುರು ಎಲಿಗಾರ ತಿಮ್ಮಪ್ಪ ಬಲಿಪಶುವಿನಂತೆ ಕಾಣುತ್ತಾರೆ.