“ಅಗಲ ಕಿರಿದಾದ ಅತಿ ಉದ್ದವಿರುವ ಕಣಿವೆಯಲ್ಲಿ ಎತ್ತರದ ಬೆಟ್ಟಗಳು ವಾಯುವ್ಯದಿಂದ ಆಗ್ನೇಯ ದಿಕ್ಕಿನವರೆಗೆ ಸಮಾನಾಂತರವಾಗಿವೆ. ಅವುಗಳಿಗೆ ಲಂಬವಾದ ಒಂದು ಸಣ್ಣ ನದಿ ಮಧ್ಯದ ಊರು ಸೊಂಡೂರು” ಎಂದು ೧೮೮೯ರಲ್ಲಿ ಬ್ರಿಟಿಷ್ ಅಧಿಕಾರಿ ಬ್ರೂಸ್‌ಪೂಟ್ ಸೊಂಡೂರಿನ ಬಗ್ಗೆ ಉದ್ಧರಿಸುತ್ತಾನೆ. ೧೯೩೦ರಲ್ಲಿ ಇಲ್ಲಿಗೆ ಭೇಟಿ ನೀಡಿದ ಮಹಾತ್ಮಗಾಂಧಿ ‘ಸೊಂಡೂರು ಒಂದು ಓಯಸಿಸ್’ ಸೆಪ್ಟೆಂಬರ್ ನಲ್ಲಿ ಅದರ ಸೌಂದರ್ಯ ನೋಡು ಎಂದು ಹೇಳುತ್ತಾರೆ. ಈ ಮಾತುಗಳನ್ನು ನೆನೆಯುತ್ತ ಈಗಿನ ಸೊಂಡೂರನ್ನು ಪ್ರವೇಶಿಸಿದರೆ, ಈ ಮಾತುಗಳು ಆಗಿನ ಕಾಲಕ್ಕೆ ಮಾತ್ರ ಎನ್ನುವಂತಹ ಭೌಗೋಳಿಕ ಪರಿಸರ ಈಗಿದೆ.ಸೊಂಡೂರು ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರ. ಬಳ್ಳಾರಿಯಿಂದ ನೈರುತ್ಯಕ್ಕೆ ಸುಮಾರು ೫೪ ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ವಾಯುವ್ಯದಲ್ಲಿ ೩೫೪ ಕಿ.ಮೀ. ಅಂತರವಿದೆ. ತಾಲೂಕಿನ ಉತ್ತರ ಮತ್ತು ಪಶ್ಚಿಮಕ್ಕೆ ಹೊಸಪೇಟೆ, ದಕ್ಷಿಣಕ್ಕೆ ಕೂಡ್ಲಿಗಿ, ಪೂರ್ವಕ್ಕೆ ಬಳ್ಳಾರಿ ಹಾಗೂ ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ) ತಾಲೂಕುಗಳಿವೆ. ಸಮುದ್ರ ಮಟ್ಟದಿಂದ ೩೦೦೦ ಅಡಿ ಎತ್ತರದಲ್ಲಿದೆ. ಇಲ್ಲಿನ ಅಕ್ಷಾಂಶ ೧೪.೫೮, ಜಿಲ್ಲೆಯ ಮಲೆನಾಡು. ಈ ಜಿಲ್ಲೆಯ ಪುಟ್ಟ ಕಾಶ್ಮೀರ, ಬೆಟ್ಟ ಗುಡ್ಡಗಳಿಂದಾವೃತವಾದ ಸುಂದರ ನಾಡು. ಅದು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಉತ್ತಮ ನೆಲ ಉಲ್ಲೇಖಿಸಲಾಗುತ್ತದೆ. ಇಂತಹ ರಮ್ಯ ಕಲ್ಪನೆ ಈಗಿನ ಸೊಂಡೂರಿನೊಂದಿಗೆ ಹೊಂದಿಕೊಳ್ಳಲಾರದು. ಸೊಂಡೂರನ್ನು ಒಳಗೊಂಡ ಬಳ್ಳಾರಿ ಜಿಲ್ಲೆಯು ಪೂರ್ವಭಾಗಕ್ಕೆ ಆಂಧ್ರಪ್ರದೇಶದ ಅನಂತಪುರ ಹಾಗೂ ಕರ್ನೂಲ್, ಪಶ್ಚಿಮಕ್ಕೆ ಧಾರವಾಡ, ದಕ್ಷಿಣಕ್ಕೆ ಚಿತ್ರದುರ್ಗ, ಉತ್ತರಕ್ಕೆ ರಾಯಚೂರು ಜಿಲ್ಲೆಗಳು ಗಡಿಗಳಾಗಿವೆ.

[1]

ಈ ಪ್ರದೇಶ ದಕ್ಷಿಣದಿಂದ ಉತ್ತರಕ್ಕೆ ಇಳಿಜಾರಾಗಿದ್ದು, ಬೆಟ್ಟಗಳಿಂದ ಆವರಿಸಿದೆ. ಸೊಂಡೂರು, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ಗುಡೆಕೋಟೆ, ಹೊಸಪೇಟೆ, ಕಂಪ್ಲಿ, ದರೋಜಿ, ಕುರುಗೋಡು, ಬಳ್ಳಾರಿ ಮುಂತಾದ ಸ್ಥಳಗಳಲ್ಲಿ ದೊಡ್ಡ ದೊಡ್ಡ ಬೆಟ್ಟಗಳಿವೆ. ಸೊಂಡೂರು ಕುಮಾರಸ್ವಾಮಿ ಬೆಟ್ಟ ಶಿಖರ (೧೦೩೬ ಮೀ) ರಾಮನಮಲೈ ಶಿಖರ (೯೯೨ ಮೀ) ಮತ್ತು ಜಂಬುನಾಥ ಶಿಖರ (೯೦೮ ಮೀ)ಗಳಿವೆ. ಬೆಟ್ಟ ಸಾಲುಗಳ ಪೂರ್ವಭಾಗದಲ್ಲಿ ವಾಯುವ್ಯದಿಂದ ಆಗ್ನೇಯಕ್ಕೆ (ಹಗರಿಯಿಂದ ದರೋಜಿ) ಹಬ್ಬಿರುವ ಸುಗ್ಗಲದೇವಿ ಬೆಟ್ಟದಲ್ಲಿ ತಾಮ್ರದ ಅದಿರು ಇರುವುದರಿಂದ ತಾಮ್ರದ ಪರ್ವತವೆಂದು ಕರೆಯುತ್ತಾರೆ. ಕೂಡ್ಲಿಗಿಯಲ್ಲಿ ಆನೆಕಲ್ಲು ದುರ್ಗ (೨೭೪ ಮೀ) ಜರಿಮಲೆ ದುರ್ಗ (೮೩೮ ಮೀ) ಎಂಬ ಎರಡು ಬೆಟ್ಟಸಾಲುಗಳಿವೆ. ಗುಡೇಕೋಟೆಯಿಂದ ಈಶಾನ್ಯಕ್ಕೆ ಹರಡಿರುವ ಗುಡೇಕೋಟೆ ಬೆಟ್ಟ, ಚಿನ್ನಹಗರಿ ನದಿ ದಾಟಿ ಚಿತ್ರದುರ್ಗ ಜಿಲ್ಲೆಯ ಸೆರಗಿನಲ್ಲಿ ಹಾದು ಹೋಗುತ್ತದೆ. ಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ ಮಲ್ಲಪ್ಪನ ಗುಡ್ಡ (೯೭೮ ಮೀ) ತುಂಗಭದ್ರ ದಂಡೆಯ ಹನ್ನೂರಿನ ಬಳಿ ಪ್ರಾರಂಭವಾಗಿ ಆಗ್ನೇಯ ಕಡೆಗೆ ಹೆಚ್ಚಿದೆ. ಮಲ್ಲಪ್ಪನ ಗುಡ್ಡದ ನೈರುತ್ಯಕ್ಕಿರುವ ಕಲ್ಲಪ್ಪನ ಗುಡ್ಡ ವಾಯುವ್ಯದಿಂದ ಈಶಾನ್ಯಕ್ಕೆ ಇದೆ. ನರಸಿಂಹ ದೇವರಗುಡ್ಡ ಸೇರಿದಂತೆ ಈ ಭಾಗದ ಬೆಟ್ಟಸಾಲು ಉಚ್ಚಂಗಿಯಲ್ಲಿ ಕೊನೆಗೊಳ್ಳುತ್ತದೆ. ಈ ಬೆಟ್ಟಗುಡ್ಡಗಳನ್ನು ದೈವೀಕರಿಸಿ ಸೌಂದರ್ಯವನ್ನು ಮೈದುಂಬಿ ವರ್ಣಿಸುವ ಕಾಲ ಒಂದಿತ್ತು. ಈಗ ಬೆಟ್ಟಗಳನ್ನೆಲ್ಲ ಉಪಭೋಗಿ ದೃಷ್ಟಿಯಿಂದ ನೋಡಲಾಗುತ್ತಿದೆ. ತಕ್ಕಡಿಯಲ್ಲಿಟ್ಟು ಮಾರಲು ಬರುವಂತಿದ್ದರೆ ಬೆಟ್ಟಗಳೇ ತಕ್ಕಡಿಯಲ್ಲಿ ಕೂತು ಕಣ್ಮರೆಯಾಗುತ್ತಿದ್ದವು. ಆದರೂ ಬೆಟ್ಟಗಳ ಅಗೆದು ಹಣವಾಗಿಸುವ ಕಾರ್ಯಕ ನಡೆದಿದೆ. ದೂರದ ಬೆಟ್ಟ ನುಣ್ಣಗೆ ಸವೆಯುತ್ತಿವೆ.

ಈ ಭಾಗದಲ್ಲಿ ಮರಳುಮಿಶ್ರಿತ ಕೆಂಪುಮಣ್ಣು, ಫಲವತ್ತಾದ ಜೇಡಿಮಣ್ಣು ಹರಡಿದೆ. ಗ್ರೆನಾಯಿಟ್, ಸಿಸ್ಟ್, ಸ್ಯಾಂಜ್‌ಸ್ಟೋನ್, ಜಾಸ್ಟರ್ ಮುಂತಾದ ಶಿಲೆಗಳು ಹಾಗೂ ಬೆಟ್ಟಗಳಲ್ಲಿ ಕಬ್ಬಿಣ, ಬಂಗಾರ, ತಾಮ್ರದ ಅದಿರಿನ ಮಿಶ್ರಣದ ಗಣಿಗಳಿವೆ. ಸೊಂಡೂರಿನ ಸುತ್ತಮುತ್ತ ಹಾಗೂ ನಂದಿಹಳ್ಳಿಯಿಂದ ಹೊಸಪೇಟೆಯ ವರೆಗಿನ ೪೦ ಕಿ.ಮೀ. ಉದ್ದ ಹಾಗೂ ೧೫.೨೦ ಕಿ.ಮೀ. ಅಗಲವುಳ್ಳ ಹಾಗೂ ಎತ್ತರವಾದ ಪರ್ವತಗಳಲ್ಲಿ ದೊರೆಯುವ ಐರನ್ ಪಾರ್ಮೇಶನ್ ಎಂಬ ಕಲ್ಲಲ್ಲಿ ಕಬ್ಬಿಣದ ನಿಕ್ಷೇಪಗಳು ದೊರೆಯುತ್ತವೆ. ಇಲ್ಲಿ ದೊರೆಯುವ ಅದಿರು ಹೆಮ ಟೈಟ್ ರೂಪದಲ್ಲಿರುವ ಉತ್ತಮ ದರ್ಜೆಗೆ ಸೇರಿದ್ದು. ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಡೇರಸ್, ಫಿಲೈಟ್ ಎಂಬ ಕಲ್ಲುಗಳಲ್ಲಿ ದೊರೆಯುತ್ತದೆ. ಈ ನಿಕ್ಷೇಪಗಳು ಸುಬ್ರಾಯನಹಳ್ಳಿ ಮತ್ತು ರಾಮಘಡ ವ್ಯಾಪ್ತಿಗೆ ಸೇರಿರುತ್ತದೆ. ಈ ಅದಿರಿನ ವಿಶೇಷ ಗುಣವೆಂದರೆ ನಿಗದಿತ ಅಂಶಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಂಜಕ ಹಾಗೂ ಗಂಧಕಗಳನ್ನು ಹೊಂದಿರುವುದು. ಈ ಕಾರಣಕ್ಕಾಗಿಯೇ ಜಗತ್ತಿನ ಮಾರುಕಟ್ಟೆಯಲ್ಲಿ ಸೊಂಡೂರಿನ ಮ್ಯಾಂಗನೀಸ್ ಅದಿರಿಗೆ ವಿಶೇಷ ಬೇಡಿಕೆ ಇದೆ.

‘ಸೊಂಡೂರು’ ಎಂಬ ಹೆಸರು ಬಂದ ಬಗೆಗೆ ಹಲವು ಪಾಠಗಳಿವೆ. ಒಂದು: ಪುರಾಣ ಕಾಲದ ‘ಸ್ಕಂಧಪುರ’ ಕಾಲನಂತರ ಸ್ಕಂದೂರು>ಸಂದೂರು>ಸಂಡೂರು>ಸೊಂಡೂರು ಆಗಿರುವ ಸಾಧ್ಯತೆ ಇದೆ. ಎರಡು: ಸೊಂಡೂರಿನ ಗ್ರಾಮದೇವತೆ ‘ಊರಮ್ಮ’ನನ್ನು ಚಂಡಿ ಎಂದು ಕರೆಯುವುದರಿಂದ ಚಂಡಿಯ+ಊರು ಚಂಡೂರು, ಸಂಡೂರು ಆಗಿರಬಹುದು. ಮೂರು: ಸೊಂಡೂರಿನ ಸುತ್ತಲೂ ಹರಡಿಕೊಂಡಿರುವ ಬೆಟ್ಟಗಳು ಆನೆಯ ಸೊಂಡಿಲಿನಂತೆ ಕಾಣುವುದರಿಂದ ಸೊಂಡಿಲ ಊರು>ಸೊಂಡೂರು ಎಂದಾಗಿರುವ ಸಾಧ್ಯತೆಯಿದೆ. ನಾಲ್ಕು; ಗುಡ್ಡ ಬೆಟ್ಟಗಳ ಕಡಿದಾದ ಊರಲ್ಲಿ ಸಂದಿಗಳಿರುವುದರಿಂದ ಸಂದಿಗಳ ಊರು>ಸಂದೂರು> ಸೊಂಡೂರು ಆಗಿರಬಹುದೆಂಬ ನಂಬಿಕೆಯಿದೆ.[2] ಐದು: ಕೆ.ರಾಮದಾಸ್ ತಮ್ಮ ‘ಶ್ರೀ ಕುಮಾರಸ್ವಾಮಿಯು ಸಿಕ್ಕಿದ್ದು’ ಗ್ರಂಥದಲ್ಲಿ ಸೊಂಡೂರು ಸಂಸ್ಥಾನದ ಆಸ್ಥಾನ ಕವಿಗಳು ಈ ನಿಸರ್ಗ ಸೌಂದರ್ಯ ನೋಡಿ ‘ಸುಂದರ ಪುರ’ವೇ ಮುಂದೆ ‘ಸೊಂಡೂರು’ ಆಗಿರಬಹುದು ಎಂದು ಊಹಿಸುತ್ತಾರೆ. ಕುಮಾರಸ್ವಾಮಿ ಬೆಟ್ಟದಲ್ಲಿರುವ ಕ್ರಿ.ಶ. ೧೨೦೬ರ ಹೊಯ್ಸಳ ಎರಡನೇ ವೀರಬಲ್ಲಾಳನ ಶಾಸನದಲ್ಲಿ ಸೊಂಡೂರು ಎಂದು ನಮೂದಿಸಲಾಗಿದೆ. ಹೀಗೆ ಪುರಾಣದಿಂದ, ಜನಪದದಿಂದ ಭೌಗೋಳಿಕ ಲಕ್ಷಣದಿಂದ, ಶಿಷ್ಟ, ಸಾಹಿತ್ಯದಿಂದ ಬಂದಿರಬಹುದಾದ ‘ಸೊಂಡೂರು’ ಈಗ ಗಣಿಗಾರಿಕೆ ಇನ್ನೊಂದು ಹೆಸರು ಎನ್ನುವಷ್ಟರ ಮಟ್ಟಿಗೆ ಪ್ರಚಲಿತದಲ್ಲಿದೆ.

ಇತಿಹಾಸ ಪೂರ್ವ ಕಾಲದಲ್ಲಿ ಮಾನವನಿಗೆ ಪೂರಕ ವಾತಾವರಣವಿತ್ತು. ಈ ಪರಿಸರದಲ್ಲಿರುವ ಬೆಟ್ಟಗಳು, ಅರಣ್ಯ, ವಿವಿಧ ಕಾಡುಪ್ರಾಣಿಗಳು, ಜಲ ಮತ್ತು ಆಯುಧ ತಯಾರಿಕೆಗೆ ತಾಮ್ರ, ಕಬ್ಬಿಣದ ಅದಿರು ಮುಂತಾದವು ಅನುಕೂಲವಾಗಿದ್ದವು. ರೈತರ ಸಾಮಾಗ್ರಿಗಳಿಗೆ ಅಗತ್ಯವಾಗಿ ಬೇಕಾದ ಸಲಕರಣೆಗಳನ್ನು ಮಾಡಿಕೊಡಲು ಇಲ್ಲಿ ಕಮಾರರು ಇದ್ದರು. ಇದಕ್ಕೆ ಸಾಕ್ಷಿಯೆಂಬಂತೆ ಯಶವಂತ ನಗರದ ಬಳಿ ಕಪ್ಪುಕಲ್ಲಿನ ಗುಡ್ಡಗಳು ಹಾಗೂ ಕುಲುಮೆಯಲ್ಲಿ ಬಳಸುತ್ತಿದ್ದ ಜೇಡಿಮಣ್ಣಿನ ಕೊಳವೆಗಳು, ಬೂದಿಯ ರಾಶಿಗಳನ್ನು ಈಗಲೂ ಕಾಣಬಹುದು. ಸೊಂಡೂರಿನ ದಕ್ಷಿಣಕ್ಕೆ ಸುಮಾರು ೫೦ ಕಿ.ಮೀ. ದೂರದಲ್ಲಿರುವ ಬ್ರಹ್ಮಗಿರಿಯಲ್ಲಿಯ ಬೃಹತ್ ಶಿಲಾ (ಸು.ಕಿ.ಮೀ. ೯೦೦-೨೦೦) ಗೋರಿಗಳ ಉತ್ಖನನದಲ್ಲಿ ಕಬ್ಬಿಣದ ಆಯುಧಗಳಾದ ಈಟಿ, ಭರ್ಚಿ, ಕತ್ತಿ, ಬಾಣದ ಮೊನಚು ದೊರೆತಿವೆ. ಈ ಭಾಗದ ಗವಿಗಳಲ್ಲಿ ವರ್ಣಚಿತ್ರಗಳು ಕಂಡುಬಂದಿವೆ. ಈಟಿ, ಭರ್ಚಿ, ಬಾಣ ಮುಂತಾದವು ಚಿತ್ರದಲ್ಲಿವೆ. ಈ ಕಾರಣದಿಂದ ಕಬ್ಬಿಣದ ಉಪಕರಣಗಳ ವೈಜ್ಞಾನಿಕ ಅಧ್ಯಯನ ಸು.ಕ್ರಿ.ಪೂ ೪೦೦-೫೦೦ರ ಹೊತ್ತಿಗೆ ಪ್ರಾರಂಭವಾಗಿರಬಹುದೆಂದು ಇತಿಹಾಸಕಾರರು ಊಹಿಸುತ್ತಾರೆ. ಹಿರೇಬೆಣಕಲ್ಲಿನ ಗವಿ ವರ್ಣಚಿತ್ರಗಳಲ್ಲಿ ಕತ್ತಿ, ಈಟಿ, ಬಿಲ್ಲು, ಕುದರೆ ಸವಾರರನ್ನು ಈಗಲೂ ನೋಡಬಹುದು.[3]

ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕೆಂಜಿ ಈ ಭಾಗದ ಬೂದಿದಿಬ್ಬಗಳನ್ನು ಅಧ್ಯಯನ ಮಾಡಿ, ಸ್ಥಳೀಯ ಕಥೆಗಳನ್ನು ಸಂಗ್ರಹಿಸಿದನು. ದೊಡ್ಡ ದೊಡ್ಡ ರಾಕ್ಷಸರನ್ನು ಮತ್ತು ರಾಮಾಯಣ ಮಹಾಭಾರತದ ಕಾವ್ಯಗಳಲ್ಲಿರುವ ವಾಲಿ, ಹಿಡಂಬಾಸುರ ಮುಂತಾದ ಪ್ರಮುಖ ವ್ಯಕ್ತಿಗಳನ್ನು ಸುಟ್ಟಿದ್ದರಿಂದ ಬೂದಿದಿಬ್ಬಗಳು ಉಂಟಾದವೆಂಬ ನಂಬಿಕೆಗಳಿವೆ. ಇಂಗ್ಲೆಂಡಿನ ಇತಿಹಾಸಕಾರ ನ್ಯೂಬೋಲ್ಡ್ ಎಂಬುವನು ೧೮೪೩ರಲ್ಲಿ ಮೊದಲು ಬಳ್ಳಾರಿ ಬಳಿಯ ಕಪ್ಪು ಗಲ್ಲಿನಲ್ಲಿ ಉತ್ಖನನ ನಡೆಸಿ ಇವು ಮಾನವನ ಔದ್ಯೋಗಿಕ ಕೇಂದ್ರವಾಗಿರದೆ. ಪ್ರಾಯಶಃ ಶವ ಸಂಸ್ಕಾರದ ವಿಧಿಗೆ ಸಂಬಂಧಿಸಿರಬೇಕೆಂಬ ನಿರ್ಣಯಕ್ಕೆ ಬಂದನು. ಕ್ರಿ.ಶ. ೧೯೩೬ರಲ್ಲಿ ಯಜ್ಞಾನಿ ಎಂಬ ಇತಿಹಾಸಕಾರರು ಕಪ್ಪಗಲ್ಲಿನಲ್ಲಿರುವ ಬೂದಿದಿಬ್ಬಗಳನ್ನು ಪರಿಶೀಲಿಸಿ ಚಿನ್ನ, ಕಬ್ಬಿಣ ಮುಂತಾದ ಲೋಹಗಳನ್ನು ತಯಾರಿಸುವ ಸಂದರ್ಭದಲ್ಲಿ ಅದಿರನ್ನು ಕರಗಿಸುವ ಕಾರಣದಿಂದ ಈ ಬಗೆಯ ದಿಬ್ಬಗಳು ಆಗಿರಬಹುದೆಂದು ಹೇಳುತ್ತಾರೆ. ಆದರೆ ಪುರಾಣಗಳ ಉಲ್ಲೇಖಗಳನ್ನು ನೋಡಿದರೆ ಸೊಂಡೂರಿನ ಪರ್ವತಗಳಿಗೆ ಕೃತಯುಗದಲ್ಲಿ ‘ದೇವಗಿರಿ’ ಎಂದು, ತ್ರೇತಾಯುಗದಲ್ಲಿ ‘ಸ್ವರ್ಣಗಿರಿ’ ಎಂದು, ದ್ವಾಪರಯುಗದಲ್ಲಿ ‘ದಿವ್ಯಾಚಲ’ ಎಂದೂ ಕಲಿಯುಗದಲ್ಲಿ ‘ಲೋಹಾಚಲ’ವೆಂದೂ ಕರೆಯಲಾಗುತ್ತಿತ್ತು. ತಾರಕಾದಿ ಅಸುರರ ಸಂಹಾರಕ್ಕಾಗಿ ಶ್ರೀಸ್ವಾಮಿ ಕಾರ್ತಿಕೇಯನು ಬ್ರಹ್ಮಾದಿ ದೇವತೆಗಳಿಂದ ಪ್ರಾರ್ಥನೆ ಮಾಡಿಸಿಕೊಂಡು ದೇವಸೇನಾಧಿಪತ್ಯವನ್ನು ವಹಿಸಿಕೊಂಡು ಬಂದು ಈ ಪರ್ವತದಲ್ಲಿ ನೆಲೆಸಿತೆಂದು ಪ್ರತೀತಿ ಇದೆ.

೧೯೪೮ರಲ್ಲಿ ರಚನೆಯಾದ ‘ಕುಮಾರಸ್ವಾಮಿಯು ಸಿಕ್ಕಿದ್ದು’ ಎಂಬ ಕೃತಿಯಲ್ಲಿ ಕೆ. ರಾಮರಾವ್‌ರವರು ಆಗಿನ ಸೊಂಡೂರಿನ ಪರಿಸರವನ್ನು ಕಾವ್ಯಮಯವಾಗಿ ಕಟ್ಟಿಕೊಡುತ್ತಾರೆ. ಇದು ರಮ್ಯಾತ್ಮಕ ಮತ್ತು ಭಾಹುಕ ಕಲ್ಪನೆ. ಸಮಕಾಲೀನ ಸೊಂಡೂರನ್ನು ಅರ್ಥ ಮಾಡಿಕೊಳ್ಳಲು ೧೯೪೮ರ ಭೌಗೋಳಿಕ ಪರಿಸರದ ಈ ಉಧೃತ ಭಾಗವನ್ನು ನೋಡಬಹುದು.

ಸುಂದರ ಪುರದ ಭೂಮಿಯು ಬಹಳ ಫಲವತ್ತಾದುದು. ಸಾರವಂತವಾದುದು. ಮಾವು, ಬಾಳೆ, ವೀಳೆಯದೆಲೆಗಳ ತೋಟಗಳು ವಿಶೇಷವಾಗಿ ಇವೆ. ಅಲ್ಲಲ್ಲಿ ಕೆಲವು ತೋಟಗಳಲ್ಲಿ ತೆಂಗಿನ ಗಿಡಗಳೂ ಉಂಟು. ಬಳ್ಳಾರಿಯಿಂದ ಒಂದು ರಸ್ತೆಯು ಸೊಂಡೂರು ಮಾರ್ಗವಾಗಿ ಹೊರಟು ಮುಂದೆ ಕೂಡ್ಲಿಗಿ ಮಾರ್ಗವಾಗಿ ಹೋಗಿ ಮದ್ರಾಸ್ ಮುಂಬಯಿ ರಸ್ತೆಯನ್ನು ಕೂಡುತ್ತದೆ. ಲೋಹಾಚಲದ ಹೊರಗಿನ (ಕೂಡ್ಲಿಗಿ ತಾಲ್ಲೂಕಿನ) ಭಾಗಕ್ಕೆ ಹೊರ ಮಲೆಸೀಮೆ ಎಂದು ಹೆಸರು. ಸಂಸ್ಥಾನ ಸೀಮೆಗಳಲ್ಲಿಯ ರಸ್ತೆಗಳು ಎಡಬಲಕ್ಕೆ ಹುಣಸೆ, ಬೇವು, ಮಾವು ಮತ್ತು ಆಲ ವೃಕ್ಷಗಳಿಂದ ಆಚರಿಸಲ್ಪಟ್ಟು ಪ್ರಯಾಣಿಕರಿಗೆ ನೆರಳನ್ನು, ತಂಪನ್ನು, ಸಂಪನ್ನು ಮತ್ತು ಇಂಪನ್ನು ಉಂಟುಮಾಡುತ್ತವೆ. ಇಲ್ಲಿಯ ಜನರ ಮಾತೃಭಾಷೆಯು ಕನ್ನಡವಿರುತ್ತದೆ. ಶ್ರೀಷಣ್ಮುಖ ಯಾತ್ರೆ ಎಂಬ ಶತಕದಲ್ಲಿ ನಾಡನ್ನು

ಸುಂದರ ಕಿರಿನಾಡು ಹಸುರಿನ |
ಹಂದರದ ಗಿರಿನಾಡು ಕುಂದದ ||
ನಂದನದ ಸಿರಿನಾಡು ಶುಕ ಪಿಕ ಪಕ್ಷಿಗಳ ನಾಡ ||
ಇಂದಿರೆಯ ನೆಲಮಾಡ ಶಾರದೆ |
ಬಂದುಲಿವ ಕರುಮಾಡ ಸೊಂಡೂ ||
ರೆಂದು ಹೆಸರಾಂತಿಹುದು ರಕ್ಷಿಸು ದೇವ ಷಣ್ಮಖನೆ ||

ಎಂದು ವರ್ಣಿಸುತ್ತದೆ. ಪ್ರಾಂತವನ್ನು ಚೆನ್ನಾಗಿ ನೋಡಿದವರಿಗೆ ಅದರಲ್ಲಿಯ ಯಾತಾರ್ಥತೆಯು ಗೋಚರಿಸದೆ ಇರುವುದಿಲ್ಲ. ಸೃಷ್ಟಿ ಜನ್ಯವಾದ ಸಹಜ ಸನ್ನಿವೇಶಗಳಿಂದ ಕೂಡಿದ ಸೀಮೆಯು ನೋಡುವವರಿಗೆ ಪ್ರಕೃತಿಗಧಿದೇವಿ ಎಂಬ ಸುಂದರಳಾದ ವನಿತಾಮಣಿಯು ರಾಗ ಶಿಖರಗಳ ಕುಂಕುಮದ ತಿಲಕವನ್ನು ಇಟ್ಟುಕೊಂಡು ತನ್ನ ಒಂದು ಮೊಣಕೈಯನ್ನು ನೆಲಕ್ಕೆ ಊರಿ ಅಂಗೈಯನ್ನು ತಲೆಗೆ ಕೊಟ್ಟು ಕಾಲುಗಳನ್ನು ಅರ್ಧಚಂದ್ರಾಕಾರವಾಗಿ ನೀಡಿಕೊಂಡು ಇನ್ನೊಂದು ಹಸ್ತದ ಒಳಗಡಗೆಯ ವಜ್ರಪಂಜರದಲ್ಲಿ ಸುಂದರ ಪುರವೆಂಬ ಶಿಶುವನ್ನು ಮಗ್ಗಲಲ್ಲಿ ಇಟ್ಟುಕೊಂಡು ಮೊಲೆಯೂಡುತ್ತಿರುವ ಹಾಗೆ ಕಾಣುತ್ತದೆ. ಕಾಲಕಾಲಕ್ಕೆ ಮಳೆಯು ತಪ್ಪದೆ ಬೀಳವುದರಿಂದ ಹಸಿರು ಹುಲ್ಲು ಹುಲುಸಾಗಿ ಬೆಳೆದು ಸುಂದರಿಯು ಉಟ್ಟ ಹಸುರುಡುಗೆಯಂತೆ ತೋರುವುದು ಅಲ್ಲದೆ ಖನಿಜ ಸಂಪತ್ತಿನಿಂದ ಕೂಡಿದ ಮರಡಿಗಳು ಅವಳ ಮಟ್ಟಸಾದ ಕುಚಗಳಂತೆಯೂ ಅವುಗಳ ಮೇಲೆ ಚಿಗಿತ ತಮಾಲ ವೃಕ್ಷಗಳು ಅವಳ ಕುಪ್ಪಸದಂತೆಯೂ, ಗವ್ವರದ ಪಡೆಗಳಲ್ಲಿರುವ ಸಿಹಿನೀರಿನ ತಿಳಿನೀರಿನ ತಿಳಿಗೊಳಗಳು ಅವಳ ಇನಿದಾದ ಅಧರಾಮೃತದಂತೆಯೂ, ನಿಬಿಡವಾದ ಗಿಡಬಳ್ಳಿ, ಪೊದೆಗಳಿಂದ ಮುಚ್ಚಲ್ಪಟ್ಟು, ಮಳೆ ಬಂದಾಗ ಮಾತ್ರ ಧಾತು ನೀರಿನಿಂದ ಪ್ರವಹಿಸುವ ಕಾಳ್ವರಗಳು ಅವಳ ಮನೋಹರವಾದ ಕಚ್ಚಲದಿಂದ ಕೂಡಿದ ಆನಂದ ಭಾಷ್ಪಗಳಂತೆಯೂ, ಒಳಪೊಕ್ಕೂ ವಿಹರಿಸುವವರಿಗೆ ಸಕಲ ವಿಧವಾದ ದುಃಖದ ಮೊರವೆಯನ್ನು ಕೊಟ್ಟು ಸ್ವರ್ಗಸುಖವನ್ನು ಉಂಟು ಮಾಡುತ್ತದೆ. ಅಲ್ಲದೆ ಗಿಳಿ, ಕೋಗಿಲೆ, ಹಂಸ ಮತ್ತು ನವಿಲುಗಳೇ ಮೊದಲಾದ ಪಕ್ಷಿ ನಿಕರಗಳು ಅವಳ ನುಡಿ, ಕಂಠ, ನಡಿಗೆ ಮತ್ತು ನರ್ತನಗಳನ್ನು ಕ್ಷಣ ಕ್ಷಣಕ್ಕೂ ನಾಡಿನಲ್ಲಿ ಪ್ರಕಟಗೊಳಿಸುತ್ತಿರುವುದನ್ನು ಕಾಣಬಹದು. ಭೂಮಂಡಲದಲ್ಲಿಯ ಶುಚಿ, ಆರೋಗ್ಯ, ತೃಪ್ತಿ, ಶಾಂತಿ ಮತ್ತು ಸೌಂದರ್ಯ ಮೊದಲಾದವುಗಳಲ್ಲಿ ಜಳ್ಳನ್ನು ತೂರಿ ಸಾರವಾದ ನಿಧಿಯನ್ನು ಸುಂದರ ಪುರದ  ಸೀಮೆಯಲ್ಲಿ ರಾಶಿ ಮಾಡಿ ಅದು ಚದುರಿ ಹೋಗದಂತೆ ಲೋಹಚಲವೆಂಬ ಒಡ್ಡನ್ನು ಸೃಷ್ಟಿ ಕರ್ತನು ಸೃಷ್ಟಿಸಿರುವಂತೆ ಕಾಣುತ್ತದೆ. (ಪುಟ. )

ಇದು ಸೊಂಡೂರಿನ ಮನೋಹರ ವರ್ಣನೆ. ಆಗಿನ ಸಾಮಾಜಿಕ ಬದುಕಲ್ಲಿ ಬಡತನ, ದಾರಿದ್ರ್ಯ ಇರಲೇ ಇಲ್ಲ ಎನ್ನುವ ಸುಖೀ ರಾಜ್ಯ ಕಲ್ಪನೆ. ಈ ಕೃತಿ ಸಂಸ್ಥಾನಿಕ ಮಹಾರಾಜರನ್ನು ಮೆಚ್ಚಿಸಲಿಕ್ಕೆ ಬರೆದಿರುವ ಸಾಧ್ಯತೆಯಿದೆ. ಇದು ಸಂಸ್ಕೃತ ಕಾವ್ಯಗಳಲ್ಲಿ ‘ಸಮುದ್ರವಸನೇ ಪರ್ವತಸ್ತನ ಮಂಡಲೇ’ ಎಂಬ ಭೂ ದೇವಿಯ ವರ್ಣನೆಯನ್ನು ನೆನಪಿಸುತ್ತದೆ. ಆದರೆ ಇದರ ಆಚೆಯೂ ೪೦ ರ ದಶಕದ ಸೊಂಡೂರಿನ ಒಂದು ಚಿತ್ರವಿದೆ. ಭೂಮಿಯ ಫಲವತ್ತತೆ, ಬೆಳೆಗಳು, ಪ್ರಕೃತಿಯ ಸೌಂದರ್ಯದ ವರ್ಣನೆ ಹೀಗೆ ಪರಿಸರವನ್ನು ಮೈದುಂಬಿ ವರ್ಣಿಸುತ್ತ ಸಾಮಾನ್ಯ ಜನರನ್ನು ಪ್ರಕೃತಿಯ ಭಾಗವಾಗಿಯೇ ಚಿತ್ರಿಸುತ್ತಾರೆ. ಕೃತಿಯೊಂದರ ರಚನೆ ಎಂದರೆ ಅದು ವರ್ಣನೆಗಾಗಿಯೇ ಎಂಬ ಕಾಲದ ಒತ್ತಡ ಇಲ್ಲಿದ್ದಂತಿದೆ. ಇಲ್ಲಿ ಸೊಂಡೂರಿನ ಬೆಟ್ಟಗಳನ್ನು ಸುಂದರ ವನಿತಾಮಣಿಗೆ ಹೋಲಿಸಲಾಗಿದೆ. ಇದೇ ವರ್ಣನೆಯನ್ನು ಈಗಿನ ಸೊಂಡೂರಿನೊಂದಿಗೆ ಹೋಲಿಸಿದರೆ ಕುಚಗಳೇ ಕತ್ತರಿಸಿದ, ನಿರಂತರ ಅತ್ಯಾಚಾರಕ್ಕೊಳಗಾದ, ಮೈಯೆಲ್ಲ ರಕ್ತಮಯವಾದ ವಿಕೃತಗೊಳಿಸಿರುವ ನಗ್ನ ಹೆಣ್ಣೊಂದರ ಭಯಾನಕ ಆಕೃತಿ ತಲ್ಲಣಗೊಳಿಸುತ್ತದೆ.

೨೦೦೧ರ ಜನಗಣತಿಯ ಸೊಂಡೂರು ಹೀಗಿದೆ. ಜನಸಂಖ್ಯೆ ೨.೧೧೬೬ರಷ್ಟಿದೆ. ಪುರುಷರು ೯೮,೨೭೮ ಇದ್ದರೆ ಮಹಿಳೆಯರು ೯೨,೮೮೮ ರಷ್ಟಿದ್ದಾರೆ. ಗ್ರಾಮೀಣ ಭಾಗದ ಜನಸಂಖ್ಯೆ ೧೫೬,೯೯೮ರಷ್ಟಿದೆ. ನಗರ ಪ್ರದೇಶದ ಜನಸಂಖ್ಯೆ ೩೪,೧೬೮. ಲಿಂಗಪ್ರಮಾಣ ೯೪೫ರಷ್ಟಿದೆ. ಬಳ್ಳಾರಿ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಅಂದರೆ ಸಾವಿರಕ್ಕೆ ೫೫ರಷ್ಟು ಮಹಿಳೆಯರು ಪುರುಷರಿಗಿಂತ ಕಡಿಮೆ ಇದ್ದಾರೆ. ಕೃಷಿಯನ್ನು ಅವಲಂಬಿಸಿದವರು ಶೇ. ೩೦.೬ರಷ್ಟು, ಕೃಷಿ ಕೂಲಿಕಾರರು ಶೆ. ೩೨.೮ರಷ್ಟು ಕೃಷಿಯೇತರ ಕೆಲಸಗಾರರು ಶೇ. ೩೪.೯ರಷ್ಟಿದೆ. ೮೯ ಹಳ್ಳಿಗಳಿದ್ದು ೨ ಪಟ್ಟಣಗಳಿವೆ. ಶಿಕ್ಷಣ ಶೇ. ೫೩.೩ರಷ್ಟಿದೆ. ಈ ಬಗೆಯ ಅಂಕೆ ಸಂಖ್ಯೆಗಳಲ್ಲಿ ಸೊಂಡೂರು ಕಾಲ್ಪನಿಕ ಚಿತ್ರದಂತೆ ಕಾಣುತ್ತದೆ. ಕೃಷಿ ಅವಲಂಬಿತರಿಗಿಂತ ಕೃಷಿಯೇತರ ಕೆಲಸಗಾರರೇ ಹೆಚ್ಚಿದ್ದಾರೆ. ಅಂದರೆ ಮೈನಿಂಗ್‌ನಲ್ಲಿ ತೊಡಗಿಕೊಂಡವರ ಸಂಖ್ಯೆಯೇ ಅಧಿಕವಾಗಿದೆ. ೧೯೭೩ರ ಸಂದರ್ಭಕ್ಕೆ ಹೋಲಿಸಿದರೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ೧೯೫೨ರಿಂದ ಸೊಂಡೂರಿನ ರಾಜಕೀಯ ಚರಿತ್ರೆ ಹೀಗಿದೆ. ಈ ತನಕ ಸೊಂಡೂರು ಕ್ಷೇತ್ರದಿಂದ ಆರಿಸಿ ಬಂದ ವಿಧಾನಸಭಾ ಸದಸ್ಯರುಗಳೆಂದರೆ ಡಾ. ನಾಗನಗೌಡ (೧೯೫೨-೫೭), ಅರಗಿನ ರಾಯನಗೌಡ (೧೯೫೭-೫೯), ಎಂ.ವೈ. ಘೋರ್ಪಡೆ(೧೯೫೯-೭೪), ಹಿರೋಜಿಲಾಡ್‌(೧೯೭೪-೭೬), ಸಿ.ರುದ್ರಪ್ಪ (೧೯೭೬-೮೦), ಯು. ಭೂಪತಿ (೧೯೮೦-೮೫), ಎಂ.ವೈ. ಘೋರ್ಪಡೆ (೧೯-೮೬-೨೦೦೪), ಸಂತೋಷಲಾಡ್‌(೨೦೦೪ರಿಂದ). ಎಂ.ವೈ. ಘೋರ್ಪಡೆಯವರು ಒಟ್ಟು ೩೩ ವರ್ಷ ಸೊಂಡೂರಿನಲ್ಲಿ ಆರಿಸಿ ಬಂದಿದ್ದಾರೆ.

ತಾಲೂಕಿನ ಭೌಗೋಳಿಕ ಕ್ಷೇತ್ರ ೯೪,೩೫೯ ಹೆಕ್ಟೇರಿನಷ್ಟಿದೆ. ಇದರಲ್ಲಿ ಸಾಗುವಳಿ ಮಾಡುವ ಭೂಮಿ ೩೪೨೯೦ ಹೆಕ್ಟೇರು. ಮಳೆ ಆಧಾರಿತ ಸಾಗುವಳಿ ಭೂಮಿ ೨೮.೨೯೦ ಹೆಕ್ಟೇರು ಇದ್ದು ಒಟ್ಟು ನೀರಾವರಿ ಸಾಗುವಳಿ ಭೂಮಿ ೬೦೦೦ ಹೆಕ್ಟೇರುಗಳಿಷ್ಟಿದೆ. ಹೀಗಾಗಿ ನೀರಾವರಿಗಿಂತ ಮಳೆಯಾಶ್ರಿತ ಸಾಗುವಳಿ ಭೂಮಿಯೇ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಒಟ್ಟು ೨೪ ಕೆರೆಗಳಿವೆ. ಇವುಗಳಿಂದಾಗಿ ೧೦೦೦ ಹೆಕ್ಟೇರುಗಳಷ್ಟು ನೀರಾವರಿ ಆಗುತ್ತಿದೆ. ಈಗ ೪೦೦ ಅಡಿಗಳಷ್ಟು ಬೋರ್‌ ಕೊರೆಸಿದರೂ ನೀರು ಬರುವುದು ಕಷ್ಟವೆ. ಅಂತರ್ಜಲ ಕಡಿಮೆಯಾಗಿದೆ. ಕೆರೆ ಹೂಳು ತೆಗೆಸಲಾಯಿತು ಎಂದು ತಾಲೂಕು ಪಂಚಾಯ್ತಿಯಲ್ಲಿ ಲಕ್ಷಗಳಲ್ಲಿ ಲೆಕ್ಕ ಬರೆದಿಟ್ಟಿದ್ದಾರೆ. ಆದರೆ ಕೆರೆಗಳು ನೀರಿಗಿಂತ ಹೂಳು ತುಂಬಿಕೊಂಡಿರುವುದೇ ಹೆಚ್ಚು. ೮೮೦ ಕೊಳವೆ ಬಾವಿಗಳಿವೆ. ಇದರಿಂದಾಗಿ ೩೬೩೫ ಹೆಕ್ಟೇರಿನಷ್ಟು ನೀರಾವರಿ ಆಗುತ್ತಿದೆ. ಉಳಿದಂತೆ ಕಾಲುವೆಗಳ ನೀರಿನಿಂದ ೧೩೬೫ ಹೆಕ್ಟೇರಿನಷ್ಟು ನೀರಾವರಿ ಸಾಧ್ಯವಿದೆ. ೯ ರೈತ ಸೇವಾ ಸಹಕಾರಿ ಸಂಘಗಳಿವೆ. ಇವುಗಳಲ್ಲಿ ರೈತರ ಹೆಸರಿನಲ್ಲಿ ಅನುದಾನ ಪಡೆದದ್ದಕ್ಕಿಂತ ರೈತರಿಗೆ ಸಹಾಯ ಮಾಡಿದ್ದು ಕಡಿಮೆ. ಸಣ್ಣ ರೈತರ ಕುಟುಂಬಗಳು ೧೫೮೦೦ ಇವೆ. ಮಧ್ಯಮ ರೈತ ಕುಟುಂಬಗಳು ೨೫೭೭, ಭೂಹಿಡುವಳಿದಾರರ ಕುಟುಂಬಗಳು ೩೯೨೩ರಷ್ಟಿದೆ. ಈಗೀಗ ಭೂಮಿಯ ವರ್ಗೀಕರಣ ಹೆಚ್ಚಾಗಿ ನಡೆಯುತ್ತಿರುವುದರಿಂದ ತುಂಡುಭೂಮಿಗಳಾಗಿ ಪರಿವರ್ತನೆ ಹೊಂದುತ್ತಿವೆ. ಕಬ್ಬಿಣದ ಕಲ್ಲುಗಳಿರುವ ಹೊಲಗಳೆಲ್ಲ ಹಣದ ಬೆಳೆ ಬೆಳೆಯುತ್ತಿವೆ.

ಇಲ್ಲಿ ಮುಖ್ಯವಾಗಿ ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ಸೂರ್ಯಕಾಂತಿ, ಶೇಂಗಾ ಹಾಗೂ ಕೆಲ ಪ್ರದೇಶಗಳಲ್ಲಿ ರಾಗಿ, ಅಲ್ಪ ಪ್ರಮಾಣದಲ್ಲಿ ತೊಗರೆ ಮತ್ತು ಹತ್ತಿ ಬೆಳೆಯಲಾಗುತ್ತದೆ. ಅಲ್ಲದೆ ನೀರಾವರಿಯಲ್ಲಿ ಭತ್ತ ಮತ್ತು ಕಡಲೆ ಬೆಳೆಯುತ್ತಾರೆ. ತಾಲೂಕಿನ ಒಟ್ಟು ವಾರ್ಷಿಕ ಸರಾಸರಿ ಮಳೆ ೭೦೦ರಿಂದ ೭೫೦ ಮಿ.ಮೀಟರ್ ೨೦೦೬ರಲ್ಲಿ ಅತಿ ಕಡಿಮೆ ಅಂದರೆ ೨೭೭,೭೪ರಷ್ಟಾಗಿದೆ. ೭೦ರ ದಶಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚಚು ಮಳೆ ಬೀಳುತ್ತಿದ್ದ ಸೊಂಡೂರಿನ ಪ್ರದೇಶದಲ್ಲಿ ಈಗ ಬಹಳ ಕಡಿಮೆಯಾಗಿದೆ. ಕಾರಣ ಆಗಿನ ಸಂಪದ್ಭರಿತ ಕಾಡು ಈಗ ಬೋಳಾಗಿ ಕುರುಚಲು ಕಾಡಾಗಿದೆ. ಬೆಟ್ಟಗಳನ್ನೆಲ್ಲಾ ಮೈನಿಂಗ್‌ಗಾಗಿ ಡಿಪ್ಪಿಂಗ್ ಮಾಡುತ್ತಿರುವುದರಿಂದ ಒಂದು ಕಾಲದ ಹಸಿರಿನ ಸೊಂಡೂರು ಕೆಂಪಾಗಿದೆ. ೨೦೦೬-೦೭ನೇ ಸಾಲಿನಲ್ಲಿ ಮಳೆಯಿಲ್ಲದೆ ಮತ್ತು ಮೈನಿಂಗ್ ಧೂಳಿನಿಂದಾಗಿ ಬೆಳೆಗಳು ಹಾನಿಗೊಳಗಾದವು. ಹೈಬ್ರಿಡ್ ಜೋಳ ೫೬೭೭ ಹೆಕ್ಟೇರಿಗೆ ಬಿತ್ತಿದ್ದು ೩೪೦೬ ಹೆಕ್ಟೇರು ಶೇ ೭೫ರಷ್ಟು ಹಾನಿಗೊಳಗಾಯಿತು. ಉಳಿದ ಬೆಳೆಗಳ ಹಾನಿಗೊಳಗಾದ ಪ್ರಮಾಣ ಇಂತಿದೆ. ಮುಸುಕಿನಜೋಳ ೯೭೮೦ ಹೆಕ್ಟೇರು ಬಿತ್ತಿದ್ದು ೪೦೨೬ರಷ್ಟು ಹಾನಿಗೊಳಗಾದದ್ದು. ಹತ್ತಿ ೧೭೮೮ ಹೆಕ್ಟೇರು ಬಿತ್ತಿದ್ದು ೧೪೩೦ರಷ್ಟು ಹಾನಿಗೊಳಗಾಗಿದೆ. ಈ ಬೆಳೆಹಾನಿಯಲ್ಲಿ ಪ್ರಧಾನ ಪಾತ್ರ ಮಳೆಯಾದರೆ ಮತ್ತೊಂದು ಮೈನಿಂಗ್ ಧೂಳು.

ಈಗ ಸೊಂಡೂರನ್ನು ನೋಡಲು ಹೋದರೆ ಕಾಣುವ ಚಿತ್ರ ಬೇರೆಯದೆ. ಕೂಡ್ಲಿಗಿ, ಹೊಸಪೇಟೆ, ಬಳ್ಳಾರಿಯ ಬಸ್‌ನಿಲ್ದಾಣದಲ್ಲಿ ಬಸ್‌ಗಳನ್ನು ಬೋರ್ಡ್‌ ನೋಡಿ, ಪ್ಲಾಟ್‌ಫಾರಂ ನೋಡಿ ಗುರುತಿಸಬೇಕಿಲ್ಲ. ಕೆಂಪು ಬೆಟ್ಟದಲ್ಲಿ ಮುಳುಗೆದ್ದು ಬಂದಿದೆ ಎನ್ನುವಷ್ಟು ಕೆಂದೂಳು ಮುತ್ತಿಕೊಂಡಿರುವುದರಲೆ ಸೊಂಡೂರು ಬಸ್ಸು ಎಂದು ತಿಳಿಯುತ್ತದೆ. ಇದರಿಂದ ಅನಕ್ಷರಸ್ಥರೂ ಯಾರನ್ನು ಕೇಳದೆ ಸೊಂಡೂರಿನ ಬಸ್ಸೆಂದು ನಿರಾತಂಕವಾಗಿ ಏರುತ್ತಾರೆ. ಕೂಡ್ಲಿಗಿಯಿಂದ ಯಶವಂತನಗರ ಮಾರ್ಗವಾಗಿ ಸೊಂಡೂರು ತಲುಪುವ, ಹೊಸಪೇಟೆಯಿಂದ ಸುಶೀಲನಗರ ಮಾರ್ಗವಾಗಿ ಸೊಂಡೂರು ತಲುಪುವ ರಸ್ತೆಗಳಂತೂ ಕೊರಕಲು ಗುಂಡಿಗಳು. ಆದರೆ ತಾಲೂಕು ಪಂಚಾಯ್ತಿಯ ಗೋಡೆಗಳ ಮೇಲೆ ರಸ್ತೆ ನಿರ್ಮಾಣಕ್ಕಾಗಿ ಖರ್ಚಾದ ಲಕ್ಷಗಳ ಲೆಕ್ಕಾಚಾರವಿದೆ. ಬಸ್ಸಿನಲ್ಲಿ ಸಿಕ್ಕ ಪ್ರಯಾಣಿಕರೊಬ್ಬರು ಮಾತಾಡುತ್ತ ‘ಘೋರ್ಪಡೆಯವರು ಅಷ್ಟು ಸಾರಿ ಮಿನಿಸ್ಟರ್ ಆದ್ರೂ ಸೊಂಡೂರಿಗೆ ಏನು ಮಾಡಿಲ್ಲ ಸಾರ್’ ಎಂದು ವಿಷಾದದಿಂದ ಹೇಳುತ್ತಿದ್ದರು. ಒಮ್ಮೆ ಸುಶೀಲನಗರದ ಬಳಿ ತಾಂಡಾದಲ್ಲಿ ಜನರನ್ನು ಮಾತನಾಡಿಸಿ ‘ಇಂಥ ಕೆಟ್ಟ ರಸ್ತೆಯಿದ್ದರೂ ನೀವ್ಯಾಕೆ ಪ್ರತಿಭಟಿಸುತ್ತಿಲ್ಲ’ ಎಂದು ಕೇಳಲಾಯಿತು. ರಾಮನಾಯ್ಕ ಎಂಬುವವರು ‘ಸಾರ್… ಕೇಳಿಕೇಳಿ ಸಾಕಾಯ್ತು. ಈಗ ರಸ್ತೆ ರಿಪೇರಿ ಆಗೋದೆ ಬೇಡ. ಈಗ ಹೆಂಗಿದೆಯೋ ಅಂಗೇ ಇರ್ಲಿ… ಈ ಗುಂಡಿಗಳಿಂದ ಮೈನಿಂಗ್ ಲಾರಿಗಳು ವಾಲಾಡಿ ಕೆಳಕ್ಕೆ ಕಬ್ಬಿಣದ ಕಲ್ಲು ಬೀಳ್ತಾತಿ.. ನಮ್ಮ ತಾಂಡಾದ ಹೆಣ್ಮಕ್ಳು ಈ ಕಲ್ಲು ಆರಿಸ್ತಾರ.. ದಿನಕ್ಕೆ ಮೂರು ನಾಲ್ಕು ಪುಟ್ಟಿ ಆಗ್ತಾವ.. ೨೫ ರೂಪಾಯಿಗೊಂದು ಪುಟ್ಟಿ’ ಎಂದರು. ರಸ್ತೆಯಲ್ಲಿ ತೆಗ್ಗು ಗುಂಡಿಗಳಿರುವ ಕಡೆಯಲ್ಲಿ ಬಿದ್ದ ಕಲ್ಲುಗಳನ್ನು ಆರಿಸುವ ಮಹಿಳೆಯರನ್ನೂ ನೋಡಿದೆ. ಈ ಕಾರಣಕ್ಕಾಗಿಯೇ ಸ್ವತಃ ಜನರೆ ರಸ್ತೆಗಳಲ್ಲಿ ಗುಂಡಿ ತೋಡುತ್ತಾರೆ ಎಂದು ಒಬ್ಬರು ಹೇಳಿದರು. ಸುತ್ತಲ ಬೆಟ್ಟಗಳೆಲ್ಲಾ ಬ್ರೆಡ್‌ಪೀಸ್ ಕತ್ತರಿಸಿದಂತೆ ಕಾಣುತ್ತದೆ. ದೂರದ ಬೆಟ್ಟಗಳೆಲ್ಲೆಲ್ಲಾ ಇರುವೆ ಸಾಲಿನಂತೆ ಲಾರಿಗಳು ಓಡಾಡುತ್ತಲೇ ಇರುತ್ತವೆ. ಈಗಂತೂ ಎಲ್ಲಿ ನೋಡಿದರಲ್ಲಿ ಲಾರಿಗಳು. ಸಣ್ಣ ಸಣ್ಣ ರಸ್ತೆಗಳಲ್ಲಿ, ಬೆಟ್ಟಗಳಲ್ಲಿ, ಸೊಂಡೂರಿನಲ್ಲಿ ಸುತ್ತಮುತ್ತಲ ಹಳ್ಳಿಗಳಲ್ಲಿ, ಹೊಲಗಳಲ್ಲಿ, ಲಾರಿಗಳ ಹಿಂಡೋ ಹಿಂಡು. ಈಗ ಕರ್ನಾಟಕದಲ್ಲಿ ಒಂದೇ ಕಡೆ ಇಷ್ಟೊಂದು ಲಾರಿಗಳನ್ನು ಬೇರೆ ಇನ್ನೆಲ್ಲಿಯೂ ನೋಡಲಿಕ್ಕೆ ಸಾಧ್ಯವಿಲ್ಲವೇನೋ. ಇಲ್ಲಿನ ಲಾರಿಗಳ ಕಾಟವನ್ನು ನೋಡುತ್ತಿದ್ದರೆ, ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ ಪದ್ಯ ನೆನಪಾಗುತ್ತದೆ. ‘ಇಲ್ಲೇನ್‌ ಲಾರಿಗಳ ಕಾಟವೆ ಕಾಟ.. ಇಲ್ಲಿನ ಜನಗಳಿಗತಿಗೋಳಾಟ..’ ಎಂದು ಇಡೀ ಪದ್ಯದಲ್ಲಿ ಇಲಿಗಳ ಬದಲು ಲಾರಿಯನ್ನಿಟ್ಟು ಓದಬೇಕೆನ್ನಿಸಿತು. ಇಲಿಗಳ ನಾಶಕ್ಕಾಗಿ ಕಿಂದರಿಜೋಗಿ ಬಂದಂತೆ.. ಈ ಲಾರಿಗಳ ನಾಶಕ್ಕಾಗಿ ಆಧುನಿಕ ಕಿಂದರಿಜೋಗಿಗಾಗಿ ಈ ಸೊಂಡೂರು ಭಾಗದ ಜನರೆಲ್ಲ ಕಾತುರದಿಂದ ಕಾಯುತ್ತಿದ್ದಾರೆ ಅನ್ನಿಸಿತು.

[1] ಸೊಂಡೂರು ಪರಿಸರದ ಶಾಸನಗಳು ಮತ್ತು ಉಲ್ಲೇಖಗಳು ದೇವಾಲಯಗಳು. ಪುಟ ೮,೧೦

[2] ಸೊಂಡೂರು ಕುಮಾರಸ್ವಾಮಿ ಪು.೧೧

[3] ಕನ್ನಡ ಟೈಮ್ಸ್, ೫ ಏಪ್ರಿಲ್ ೨೦೦೭. ಪು.೩

[4] ಕನ್ನಡ ಪ್ರಭ, ವಿಜಯ ಮಲಗಿಹಾಳ್, ಮಾರ್ಚ್‌. ೨೭.೨೦೦೬