ಇಲ್ಲಿನ ಹೊಲಗಳಲ್ಲಿ ಈಗ ಬೆಳೆ ಕಾಣುವುದು ಅಪರೂಪ. ತಾಲೂಕಿನ ಶೇ ೬೦ರಷ್ಟು ಭೂಮಿಯಲ್ಲಿ ಡಿಪ್ಪಿಂಗ್ (ಮೈನಿಂಗ್ ಕಲ್ಲುಗಳನ್ನು ಅಗೆಯುವುದು) ಮಾಡುತ್ತಿದ್ದಾರೆ. ಪ್ರತಿ ಹೊಲಗಳಿಗೆ ಸುತ್ತಲೂ ತಡಿಕೆ ಕಟ್ಟುವುದು, ಹೊಲವನ್ನು ಅಗೆದು ಕಲ್ಲುಗಳನ್ನು ತೆಗೆಯುವುದು ಸಾಮಾನ್ಯವಾಗಿದೆ. ಹೊಸಪೇಟೆಯಿಂದ ಸುಶೀಲನಗರದ ಮಾರ್ಗವಾಗಿ ಸೊಂಡೂರು ತಲುಪುವ ಹೊತ್ತಿಗೆ ಮೈನಿಂಗ್‌ನ ಭಯಾನಕ ಚಿತ್ರ ಕಾಣುತ್ತದೆ. ರಸ್ತೆಯ ಪಕ್ಕವೇ ನಲವತ್ತಕ್ಕಿಂತ ಹೆಚ್ಚಿನ ಮೈನಿಂಗ್ ಕಂಪನಿಗಳಿವೆ. ಇವುಗಳಲ್ಲಿ ಕಲ್ಲು ಪುಡಿ ಮಾಡುವ, ಲಾರಿಗೆ ತುಂಬವ, ಕಬ್ಬಿಣದ ಕಲ್ಲನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿರುತ್ತದೆ. ಬುಲ್ಡೋಜರ್ ಗಳು ಕ್ರಷರ್ ಗಳು, ಪೋಕಲೈನ್ ಮಿಷನ್‌ಗಳು, ಜೆ.ಸಿ.ಬಿ. ಯಂತ್ರಗಳು ಹಗಲು ರಾತ್ರಿ ಭೂಮಿ ಅಗೆಯುವ ಕೆಲಸಕ್ಕೆ ಬಿಡುವಿಲ್ಲ. ಪ್ರತಿ ಮೈನಿಂಗ್ ಕಂಪನಿಯ ಗೇಟಿಗೆ ಉತ್ತರ ಭಾರತದ ಸೆಕ್ಯುರಿಟಿ ಗಾರ್ಡ್‌ಗಳು ಕಾದಿರುತ್ತಾರೆ. ಇದರಿಂದಾಗಿಯೇ ಸೊಂಡೂರಿನಲ್ಲಿ ಏಳೆಂಟು ಸೆಕ್ಯುರಿಟಿ ಏಜನ್ಸಿ ಕಂಪನಿಗಳು ತಲೆ ಎತ್ತಿವೆ. ಈ ಮೈನಿಂಗ್‌ನಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಬೇರೆ ಬೇರೆ ಭಾಗಗಳಿಂದ ಕೆಲಸವನ್ನರಸಿ ಬಂದ ಬಡ ಕೂಲಿಗಳು ಒಂದು ಅಂದಾಜಿನ ಪ್ರಕಾರ ಹತ್ತು ಸಾವಿರಕ್ಕೂ ಹೆಚ್ಚಿದ್ದಾರೆ. ಇವರೆಲ್ಲ ತಾವು ಕೆಲಸ ಮಾಡುವ ಕಡೆಯೇ ಸಣ್ಣ ಸಣ್ಣ ನೆಲ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಅಂತಹ ಪುಟ್ಟ ಟೆಂಟಿನಲ್ಲಿ ಒಂದಿಡೀ ಕುಟುಂಬ ಬದುಕುತ್ತದೆ. ಹಗಲಲ್ಲಿ ದುಡಿದು ದಣಿದ ಕಾರ್ಮಿಕರಿಗೆ ಸಾರಾಯಿಯೇ ವಿಮೋಚನೆಯ ದಾರಿ. ಸೊಂಡೂರಿನಲ್ಲಿ ಭಾನುವಾರ ಸಂತೆಯ ದಿನ ಹೀಗೆ ಕುಡಿದ ಅಮಲಿನಲ್ಲಿ ರಸ್ತೆಗಳ ಪಕ್ಕವೋ ಸಂದಿಗೊಂದಿಗಳಲ್ಲಿ ಮಲಗಿಕೊಂಡಿರುವ ಗಂಡು, ಹೆಣ್ಣುಗಳು ಸಿಗುತ್ತಾರೆ. ಟೆಂಟಿನ ಮುಂದಿನ ಕಬ್ಬಿಣದ ಕಲ್ಲುಗಳ ರಾಶಿಯಲ್ಲಿಯೇ ಮಕ್ಕಳ ಆಟವೂ ಕೂಡ. ಶಾಲೆಗೆ ಹೋಗಬಹುದಾದ ಎಷ್ಟೊಂದು ಬಾಲಕ ಬಾಲಕಿಯರು ಮೈನಿಂಗ್ ಕೆಲಸದಲ್ಲಿ ದುಡಿಯುತ್ತಿವೆ. ಮಕ್ಕಳು ಹಸಿದು ಊಟ ಮಾಡುವಾಗ ಅನ್ನದ ಜೊತೆ ಮೈನಿಂಗ್ ಧೂಳು ಹೊಟ್ಟೆ ಸೇರುತ್ತದೆ. ಸಾಲದ್ದಕ್ಕೆ ತಾಲೂಕು ಕಚೇರಿಯ ಕಾಂಪೌಂಡಿಗೆ “ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಹಾಗೆ ಕಂಡಬಂದಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಜುಲ್ಮಾನೆಯನ್ನು ವಿಧಿಸಲಾಗುವುದು” ಎಂದು ಬರೆಯಲಾಗಿದೆ. ಧೂಳು ಮುತ್ತಿ ಈ ಮುಸುಕು ಮುಸುಕಾಗಿ ಕಾಣುತ್ತದೆ. ಬಾಲಕಾರ್ಮಿಕರನ್ನು ಪತ್ತೆ ಹಚ್ಚುವ ಸರ್ಕಾರಿ ವೈದ್ಯರ ತಂಡದ ವೈದ್ಯರೊಬ್ಬರನ್ನು ಮಾತನಾಡಿಸಲಾಯಿತು. ‘ಎಲ್ಲಿ ಸಾರ್ ಬಡವರು ಮಕ್ಳು, ಮರಿ ಕಟ್ಟಿಕೊಂಡು ದುಡಿತಾರೆ. ಅದಕ್ಕಾಗಿ ಒಂದು ವಾರ ಸರ್ವೇಕ್ಷಣೆ ಮಾಡಿ ಬಾಲಕಾರ್ಮಿಕರು ಇಲ್ಲ ಎಂದು ಸರ್ಕಾರಕ್ಕೆ ರಿಪೋರ್ಟ್‌ ಕಳಿಸುತ್ತೇವೆ’ ಎಂದರು.

ಗಣಿ ಮಾಲಿಕರ ಕೈಯಲ್ಲಿ ಐನೂರು, ಸಾವಿರದ ನೋಟುಗಳು ಚಿಲ್ಲರೆ ಪೈಸೆಗಳಂತಾಗಿವೆ. ಆದರೆ ಇಲ್ಲಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದರೆ ಬಡತನ ದಟ್ಟ ದಾರಿದ್ರ್ಯ ಕಣ್ಣಿಗೆ ರಾಚುತ್ತದೆ. ಈ ಜನಗಳಿಗೆ ಒಂದಷ್ಟು ಕೂಲಿ ಸಿಗುತ್ತದೆ ಅನ್ನುವುದನ್ನು ಬಿಟ್ಟರೆ ಅಂತಹ ಬದಲಾವಣೆ ಆಗಿಲ್ಲ. ಕೆಲವರು ಇದ್ದಕ್ಕಿದ್ದಂತೆ ಊಹಿಸಲು ಸಾಧ್ಯವಾಗದಷ್ಟು ಶ್ರೀಮಂತರಾಗಿದ್ದಾರೆ. ಮನೆಯ ಸ್ವಂತ ಉಪಯೋಗಕ್ಕೆ ಎಂಟೊಂಬತ್ತು ಲಕ್ಷದ ವಾಹನಗಳನ್ನು ಇಟ್ಟಿದ್ದಾರೆ. ‘ಮೈನಿಂಗ್ ಕಲ್ಲು’ ದೊರೆಯುವ ಹೊಲಗಳನ್ನೆಲ್ಲಾ ಲೀಜಿಂಗ್ (ಒಪ್ಪಂದದ ಮೇಲೆ ಇಂತಿಷ್ಟು ದಿನ ಭೂಮಿಯನ್ನು ಅಗೆದು ರೈತನಿಗೆ ಮರಳಿಸುವುದು.) ಕೊಡಲಾಗುತ್ತದೆ. ಕಲ್ಲು ದೊರೆಯುವ ಪ್ರಮಾಣವನ್ನು ಆಧರಿಸಿ ಒಂದು ಎಕರೆಗೆ ಐದಾರು ಲಕ್ಷಗಳಂತೆ ಮಾತುಕತೆ ಆಗುತ್ತದೆ. ಒಂದು ತಿಂಗಳು ಅಥವಾ ಎರಡು ತಿಂಗಳು ಕಲ್ಲು ಅಗೆದು ಮಟ್ಟಸ ಮಾಡಿ ಭೂಮಿಯನ್ನು ರೈತರಿಗೆ ಹಿಂತಿರುಗಿಸುತ್ತಾರೆ. ಮತ್ತೆ ಆ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಸಣ್ಣ, ಮಧ್ಯಮ ವರ್ಗದ ರೈತರು ತಮ್ಮ ಭೂಮಿಯನ್ನು ಗಣಿ ಧಣಿಗಳಿಗೆ ಒಪ್ಪಂದಕ್ಕೆ ಕೊಟ್ಟು ಹಣ ಪಡೆಯುತ್ತಾರೆ. ಭೂಮಿ ಅಗೆದ ನಂತರ ಬೆಳೆ ಬೆಳೆಯಲಾಗದ ಹೊಲದಲ್ಲಿ ಅವರು ಮುಂದಿನ ಬದುಕನ್ನ ಹೇಗೆ ಕಟ್ಟಿಕೊಳ್ಳುತ್ತಾರೋ ತಿಳಿಯದು. ಭೇಟಿ ಮಾಡಲಾದ ಐವತ್ತಕ್ಕೂ ಹೆಚ್ಚು ಕುಟುಂಬಗಳು ಕುಮಾರಸ್ವಾಮಿ ಇನಾಮು ಭೂಮಿ ಪಡೆದವರು. ೧೯೭೩ರ ಹೋರಾಟದಿಂದಾಗಿ ಇನಾಮು ಭೂಮಿಯನ್ನು ತಮ್ಮ ಹೆಸರಿಗೆ ಪಟ್ಟ ಮಾಡಿಸಿಕೊಂಡವರಲ್ಲಿ ಬಹುತೇಕರು ಈ ಭೂಮಿಯನ್ನು ಕಲ್ಲು ಅಗೆಯಲು ಲೀಜಿಂಗ್ ಕೊಟ್ಟು ಬರುವ ಹಣದಲ್ಲಿ ಸುಖವಾಗಿದ್ದಾರೆ. ಕೆಲವರು ಕೋಟ್ಯಾಧಿಪತಿಗಳೂ ಕೂಡ. ಮೈನಿಂಗ್ ಪ್ಲಾಟ್ ಮಾಡಲು ಹೊಲವನ್ನು ಬಾಡಿಗೆ ಕೊಡುವ ಪ್ರಕ್ರಿಯೆಯೂ ಇದೆ. ಪ್ರತಿ ತಿಂಗಳು ಎಕರೆಗೆ ಮೂವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಬಾಡಿಗೆ ಕೊಟ್ಟ ಉದಾಹರಣೆಗಳಿವೆ. ಸೊಂಡೂರಿನ ಪೊಲೀಸ್ ಸ್ಟೇಷನ್ನಿಗೆ ಭೇಟಿ ನೀಡಿ ರೈಟರ್ ಜೊತೆ ಮಾತಾಡಿದಾಗ “ಹೊಲ ಭಾಗ ಮಾಡಿಕೊಳ್ಳಲು ಅಣ್ಣ ತಮ್ಮಂದಿರ ಜಗಳದ ಕೇಸುಗಳೇ ಈಗ ಹೆಚ್ಚಿವೆ. ಅಕ್ರಮ ಗಣಿಗಾರಿಕೆಯಿಂದ ಹಿಡಿದ ಲಾರಿಗಳನ್ನು ನಿಲ್ಲಿಸಿಕೊಳ್ಳಲು ಸ್ಟೇಶನ್ ಬಳಿ ಜಾಗವಿಲ್ಲ. ಮೈನಿಂಗ್ ಸ್ಥಳಗಳಲ್ಲಿ ಕೊಲೆಗಳು ನಡೆಯುತ್ತವೆ ಎಂದು ಸುದ್ದಿ ಸಿಗುತ್ತದೆ. ಹೋಗಿ ನೋಡಿದರೆ ಡೆಡ್‌ಬಾಡಿಗಳೇ ಸಿಗುವುದಿಲ್ಲ. ಮೈನಿಂಗ್ ಗುಂಡಿಗಳಲ್ಲಿ ಮುಚ್ಚಿ ಬಿಡ್ತಾರೆ” ಎಂದು ಅಸಹಾಯಕರಂತೆ ಮಾತನಾಡಿದರು.

ಎಂದೂ ವಾಸಿಯಾಗದ ರೋಗಿಯಂತೆ ಸೊಂಡೂರಿನ ಸರ್ಕಾರಿ ಆಸ್ಪತ್ರೆ ಇದೆ. ಇಲ್ಲಿನ ವೈದ್ಯರು ಎಲ್ಲರೂ ಆರೋಗ್ಯದಿಂದಿದ್ದಾರೆ ಎನ್ನುವಂತಹ ಶಾಂತ ಸ್ಥಿತಿಯಲ್ಲಿದ್ದರು. ಮೈನಿಂಗ್‌ನಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ‘ಅದಕ್ಕಾಗಿ ಸರ್ಕಾರ ವಿಶೇಷ ಕಾರ್ಯಕ್ರಮವನ್ನೇನು ಹಾಕಿಕೊಂಡಿಲ್ಲ. ಮಾಮೂಲಿ ಸರ್ಕಾರಿ ಆಸ್ಪತ್ರೆ ಇದ್ದಂಗೆ ಇದೆ’ ಎಂದು ಸಹಜವಾಗಿಯೇ ಉತ್ತರಿಸಿದರು. ೨೦೦೫-೦೬ರ ದಾಖಲಾತಿಗಳ ಪ್ರಕಾರ ೬೬೦೦ರಷ್ಟು ರೋಗಿಗಳು ದಾಖಲಾಗಿದ್ದಾರೆ. ೩,೩೦೦ರಷ್ಟು ಚರ್ಮರೋಗದಿಂದ ಬಳಲುತ್ತಿದ್ದಾರೆ. ದಾಖಲಾದಂತೆ ೭೦ಕ್ಕೂ ಹೆಚ್ಚಿನ ಟಿ.ಬಿ. ಪೇಷೆಂಟ್ಸ್‌ ಇದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಯಲ್ಲಿ ೫ ಸಾವಿರಕ್ಕೂ ಹೆಚ್ಚು ರೋಗಿಗಳು ಬಳಲುತ್ತಿದ್ದಾರೆ. ಲಾರಿ ಕ್ಲೀನರ್ ಪ್ರಕಾಶ ಎಂಬ ಹುಡುಗನ ಹತ್ತಿರ ಮಾತಾಡಿದಾಗ ‘ಬೆಂಗ್ಳೂರು, ದಾವಣಗೆರೆ, ಕೂಡ್ಲಿಗಿ, ಹರಿಹರಗಳಿಂದ ಹೆಣ್ಮಕ್ಕಳು ಬರ್ತಾರೆ. ಸೆಕ್ಸು ಭರ್ಜರಿ ನಡೆಯುತ್ತೆ’ ಎಂದು ಹೇಳುತ್ತಿದ್ದ. ಇತ್ತೀಚಿನ ವರದಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಏಡ್ಸ್‌ ರೋಗಿಗಳು ಸೊಂಡೂರಿನಲ್ಲೇ ಇದ್ದಾರೆ ಎಂಬ ವರದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಒಂದು ರಾತ್ರಿ ಮೈನಿಂಗ್ ನಡೆಯುವ ಸ್ಥಳದಲ್ಲಿ ಉಳಿದಿದ್ದೆ. ಹಗಲಿಗಿಂತ ರಾತ್ರಿಯೇ ಯಥೇಚ್ಛವಾಗಿ ಮೈನಿಂಗ್ ಸಾಗಾಟವಾಗುತ್ತದೆ. ಇದು ನಿಜವಾದ ನರಕದರ್ಶನ. ಅಕ್ರಮ ಸಾಗಾಣಿಕೆ ನಡೆಯುವುದು ರಾತ್ರಿಗಳಲ್ಲೇ. ಇಂತಹ ಅವಸರದ ಅವಗಢಗಳಲ್ಲಿ ಲಾರಿಯ ಗಾಲಿಗೆ ಬಿದ್ದೋ, ಮಣ್ಣು ಕುಸಿದೋ, ಮಹಿಳಾ ಕಾರ್ಮಿಕರ ಮೇಲೆ ಅತ್ಯಾಚಾರ ಮಾಡಿಯೋ ಸಾವುಗಳು ಸಹಜವಾಗಿ ಬಿಟ್ಟಿವೆ. ‘ಸಣ್ಣ ಕಂಪ್ಲೆಂಟು ಆಗದೆ ಬೆಟ್ಟದ ಕಂದಕಗಳಲ್ಲಿ ಮುಚ್ಚಿಬಿಡ್ತಾರೆ’ ಎಂದು ಇಲ್ಲಿಯ ಕೂಲಿ ಕಾರ್ಮಿಕರೊಬ್ಬರು ಹೇಳುತ್ತಿದ್ದರು. ಕುಮಾರಸ್ವಾಮಿ ದೇವಸ್ಥಾನ ಭಾಗದಲ್ಲಂತೂ ಸುತ್ತಲೂ ಮೈನಿಂಗ್‌ನ ಅಬ್ಬರವಿದೆ. ‘ಕುಮಾರಸ್ವಾಮಿ’ ಈ ಮೈನಿಂಗ್‌ನ್ನು ಕಾಯುವ ಕಾವಲುಗಾರನಂತೆ ಕಾಣುತ್ತಾನೆ. ಇಂತಹ ಪರಿಸರದ ಮಧ್ಯಯೇ ಸಪ್ಪಳ ಮಾಡುವುದೆ ಬೇಡ ಎಂದು ಗಪ್ಪನೆ ಕುಳಿತಂತೆ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರವಿದೆ. ೧೯೭೩ರ ಭೂ ಹೋರಾಟದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಈಗಿರುವ ಫಲವತ್ತಾದ ಸ್ಥಳಬಿಟ್ಟು ಬೇರೆ ಜಾಗದಲ್ಲಿ ಆಗಲಿ ಎನ್ನುವ ಬೇಡಿಕೆ ರೈತರದಾಗಿತ್ತು. ಆದರೆ ಘೋರ್ಪಡೆಯವರ ಹಠದಿಂದಾಗಿ ಸ್ನಾತಕೋತ್ತರ ಕೇಂದ್ರ ಇದೆ ಸ್ಥಳದಲ್ಲಿ ಸ್ಥಾಪನೆಯಾಯಿತು. ಈಗ ಅದನ್ನು ಮೈನಿಂಗ್ ಧನಿಗಳಿಗೆ ಕೊಡುವ ಯೋಚನೆ ಸರ್ಕಾರಕ್ಕಿದೆ. ಇಲ್ಲಿನ ಕನ್ನಡ ಅಧ್ಯಾಪಕಿ ಮಲ್ಲಿಕಾ ಘಂಟಿಯವರು ‘ಒಂದು ಕಾಲಕ್ಕೆ ರೈತರು ತಮ್ಮ ಮಕ್ಕಳು ಓದಲೆಂದು ವಿಶ್ವವಿದ್ಯಾಲಯ ಕಟ್ಟಲು ಈ ಭೂಮಿ ಕೊಟ್ಟಿದ್ದಾರೆ. ಈಗ ಕನ್ನಡ ವಿಭಾಗವನ್ನು ಇಲ್ಲಿಂದ ಓಡಿಸುವ ಪ್ರಯತ್ನ ನಡೆದಿದೆ. ಹಾಗೆ ನಮ್ಮನ್ನು ಓಡಿಸುವುದಾದರೆ ಈ ಭೂಮಿಯನ್ನು ರೈತರಿಗೆ ವಾಪಸ್ ಕೊಡಿ. ಕನ್ನಡ ಅಧ್ಯಯನಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಆಗದಿದ್ದರೆ ಕನ್ನಡ ನಾಡಿನ ರೈತರಾದರೂ ಸುಖವಾಗಿರಲಿ’ ಎನ್ನುತ್ತಾರೆ.

ಗಣಿಗಾರಿಕೆಯಿಂದಾಗಿ ಜನಸಮುದಾಯದಲ್ಲಿ ಹಲವು ಮಿಥ್‌ಗಳು, ಕಥನಗಳು ಹುಟ್ಟಿಕೊಂಡಿವೆ. ಜನಪದ ಅಧ್ಯಯನಕಾರರು ಜನಪದ ನಶಿಸುತ್ತಿದೆ ಎಂಬ ವಿಷಾದದಿಂದ ಹೊರಬಂದು ಹೊಸರೂಪ ಪಡೆಯುತ್ತಿರುವ ಜನಪದದ ಬಗೆಗೆ ಗಮನಹರಿಸುತ್ತಿಲ್ಲ. ನಿಜಕ್ಕೂ ಗಣಿಗಾರಿಕೆ ಬಗೆಗೆ ಹುಟ್ಟಿಕೊಂಡ ಕಥನಗಳು ಕುತೂಹಲಕಾರಿಯಾಗಿವೆ. ‘ಗಣಿಜಾನಪದ’ ಎಂಬ ಅಧ್ಯಯನವನ್ನೇ ಮಾಡಬಹುದು. ಕೆಲವು ಮಿಥ್‌ಗಳು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ದೊರೆತವು. ಅವುಗಳೆಂದರೆ ಒಂದು: ಇತ್ತೀಚೆಗೆ ಕುಮಾರಸ್ವಾಮಿ ದೇವಸ್ಥಾನಕ್ಕೆ ಗಣಿಧನಿಯೊಬ್ಬರು ಹೆಲಿಕ್ಯಾಪ್ಟರ್ ನಲ್ಲಿ ಇಳಿದು ದರ್ಶನ ಪಡೆದರಂತೆ. ‘ಕುಮಾರಸ್ವಾಮಿ ಇದರಿಂದ ಕೋಪಗೊಂಡಿದ್ದಾನೆ. ಮುಂದೊಂದು ದಿನ ಆತ ರಕ್ತಕಾರಿ ಸಾಯುತ್ತಾನೆ’ ಎಂದು ಸೊಂಡೂರು ಸುತ್ತಮುತ್ತಲ ಹಳ್ಳಿಗಳಲ್ಲಿ ನಂಬಿಕೆಯೊಂದು ಹುಟ್ಟಿಕೊಂಡಿದೆ. ಪತ್ರಿಕಾ ವರದಿಯಲ್ಲಿ ಈಗಾಗಲೇ ಇಪ್ಪತ್ತಕ್ಕಿಂತ ಹೆಚ್ಚಿನ ಹೆಲಿಕ್ಯಾಪ್ಟರ್ ಗೆ ಆರ್ಡರ್ ಕೊಡಲಾಗಿದೆ. ಇವುಗಳೆಲ್ಲಾ ಬಂದದ್ದೇ ನಿಜವಾದರೆ ಏಷ್ಯಾದಲ್ಲಿಯೇ ಬಳ್ಳಾರಿ ಜಿಲ್ಲೆ ಅತಿ ಹೆಚ್ಚು ಹೆಲಿಕ್ಯಾಪ್ಟರ್ ಹೊಂದಿದ ಜಿಲ್ಲೆಯಾಗುತ್ತದೆ ಎಂಬ ಸುದ್ದಿಯಿದೆ. ಎರಡು: ಬ್ಯಾಂಕ್ ನೌಕರರಿಂದ ಹುಟ್ಟಿಕೊಂಡ ಮಿಥ್‌ಗಳೆಂದರೆ ೫೦೦ ಕೋಟಿ ಇರುವವರು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಜನ ಹೊಸಪೇಟೆ, ಸೊಂಡೂರಿನ ಭಾಗವೊಂದಲ್ಲೇ ಇದ್ದಾರೆ. ಗಣಿ ಹಣದ ಮುಂದೆ ಬ್ಯಾಂಕ್‌ಗಳೆ ಹೆದರಿ ತತ್ತಿ ಹಾಕುತ್ತಿದೆ. ಭಾರತದಲ್ಲಿ ಕಲ್ಕತ್ತಾದ ನಂತರ ಬ್ಯಾಂಕಿನ ವ್ಯವಹಾರ ಹೊಸಪೇಟೆ ಬಳ್ಳಾರಿಯಲ್ಲಿಯೇ ಹೆಚ್ಚು ನಡೆಯುತ್ತದೆ ಎಂಬ ಸುದ್ದಿಯಿದೆ. ಮೂರು: ಪ್ಯಾರಾಚೂಟ್‌ನಲ್ಲಿ ಗಣಿ ಧಣಿಗಳು ವಾಯುವಿಹಾರ ಹೋಗುತ್ತಿದ್ದಾರೆ. ಜನರು ಈ ಪ್ಯಾರಾಚೂಟ್ ಬಗೆಗೆ ಕುತೂಹಲ, ಬೆರಗಿನಿಂದ ತಮ್ಮತಮ್ಮಲೇ ಮಾತನಾಡಿಕೊಳ್ಳುತ್ತ ‘ಪ್ಯಾರಾಚೂಟ್’ ಕಥನಗಳೇ ಪ್ರಸಾರವಾಗುತ್ತಿವೆ. ನಾಲ್ಕು: ಪ್ರಪಂಚ ಪ್ರಳಯ ಆಗೋ ಕೇಡುಗಾಲ ಬಂದಾತಿ. ಅದಕ್ಕೆ ಬೆಟ್ಟಗುಡ್ಡನಾ ಮಾರಿಕೊಳ್ಳಾಕ ಹಚ್ಚಾರ.. ಹಿಂಗ ಆದ್ರ ಇಲ್ಲಿ ಭೂಕಂಪ ಆಕ್ಕಾತಿ’, ದುಡ್ಡು ಇರೋ ತನಕ ಸುಖವಾಗಿ ಉಂಡು ಸತ್ರಾತು ಭೂಮಿ ತಾಯಿ ಗರ್ಭ ಬಗೆಯೋ ಪಾಪ ನಮ್ಮನ್ನು ಸುಮ್ನೆ ಬಿಡಲ್ಲ.. ಎಂಬ ನಿಲುವಿನ ಕಥನಗಳು ೬೦-೭೦ರ ಅಸುಪಾಸಿನ ಹಿರಿಯರಲ್ಲಿವೆ. ಐದು: ಸೊಂಡೂರು ಭಾಗದ ಹಳ್ಳಿಗಳಲ್ಲಿ ಧೂಳಿನಿಂದಾಗಿ ಹರಡುವ ಕ್ಷಯರೋಗ ಮುಂತಾದ ಚರ್ಮ ಸಂಬಂಧಿ ಕಾಯಿಲೆಗಳು ಬರುವುದರಿಂದ ಹೆಣ್ಣು-ಗಂಡು ಪಡೆಯಲು ಮತ್ತು ಕೊಡಲು (ಮದುವೆಗೆ) ಸುತ್ತಮುತ್ತಲ ಹಳ್ಳಿ ಜನರು ಹೆದರುತ್ತಿದ್ದಾರೆ. ಆರು: ಮೈನಿಂಗ್‌ನಿಂದಾಗಿ ಸೊಂಡೂರು ಪಕ್ಕದ ತಾಲ್ಲೂಕುಗಳ ಹಳ್ಳಿಹಳ್ಳಿಗಳಲ್ಲಿ ಇಲ್ಲಿನ ಹಣದ ಬಗ್ಗೆ, ಕಲ್ಲು ಮಾರಾಟವಾಗುವ ಬಗ್ಗೆ, ಸಾವುಗಳ ಬಗ್ಗೆ, ಇಲ್ಲಿ ಕೆಲಸ ಮಾಡಿ ಹಳ್ಳಿಗಳಿಗೆ ಹೋಗಿ ಅವರು ಹೇಳಿದ ಭಯಾನಕ ಕಥೆಗಳ ಬಗ್ಗೆ ವಿವಿಧ ರೀತಿಯ ಕಥನಗಳು ಹುಟ್ಟಿಕೊಂಡಿವೆ. ಹೀಗೆ ಗಣಿಗಾರಿಕೆಯನ್ನೆ ಆಧರಿಸಿದ ಅಥವಾ ಅದರ ಪರಿಣಾಮದಿಂದಾಗಿ ಹುಟ್ಟಿಕೊಂಡ ಕಥನಗಳು ಬೇರೆ ಬೇರೆ ಪಾಠಗಳಲ್ಲಿ ಸಿಗುತ್ತವೆ.

‘ಸೊಂಡೂರು’ ಹೆಚ್ಚು ಸುದ್ದಿಯಲ್ಲಿದ್ದದ್ದು ಈಗಿನ (೨೦೦೬-೦೭) ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಮೇಲೆ ವಿಧಾನಪರಿಷತ್ ಸದಸ್ಯ ಬಳ್ಳಾರಿಯ ಜನಾರ್ಧನರೆಡ್ಡಿಯವರು ೧೦೫ ಕೋಟಿ ರೂ ಗಣಿ ಲಂಚದ ಆರೋಪ ಹೊರಿಸಿದ್ದರಿಂದ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಇದು ಮೊದಲೇನಲ್ಲ. ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿಯವರು ಮುಖ್ಯಮಂತ್ರಿಗಳಾಗಿದ್ದಾಗಲು ಗಣಿಗಾರಿಕೆ ಜೊತೆ ಸಂಬಂಧವಿದ್ದ ಪ್ರಕರಣಗಳು ನಡೆದಿವೆ. ೨೦೦೬ರ ಮಾರ್ಚ್‌ನಲ್ಲಿ ಕರ್ನಾಟಕದ ಅರಣ್ಯ ಸಚಿವ ಸಿ.ಚನ್ನಿಗಪ್ಪ ಮುಖ್ಯಮಂತ್ರಿಗಳಿಗೆ ಗಣಿಗಾರಿಕೆಯ ಬಗ್ಗೆ ಒಂದು ವರದಿ ಸಲ್ಲಿಸಿದ್ದರು. ಈ ವರದಿಯ ಕೆಲವು ಅಂಶಗಳನ್ನು ನೋಡಬಹುದು. ಪ್ರತಿದಿನ ಬಳ್ಳಾರಿ ಜಿಲ್ಲೆಯ ಅರಣ್ಯದಲ್ಲಿ ಸು. ೧೦ರಿಂದ ೨೫ ಸಾವಿರ ಟನ್ನಿನಷ್ಟು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿದೆ. ಇದಕ್ಕೆ ಈ ಭಾಗದಲ್ಲಿರುವ ಸು. ೨೦ ಕಂಪನಿಗಳು ಜವಾಬ್ದಾರರು. ಇಲ್ಲಿನ ಹಲವು ಕಂಪನಿಗಳು ಪ್ರಭಾವಿ ರಾಜಕಾರಣಿಗಳದ್ದು ಎಂದು ವರದಿಯಲ್ಲಿ ಹೇಳಲಾಗಿದೆ. ಆಕ್ರಮಣ ಮಾಡಿರುವ ೨೦ ಉದ್ದಿಮೆಗಳೆಂದರೆ ಎಂ.ಎಸ್‌.ಪಿ.ಎಲ್, ಕಾರಿಗನೂರು ಮೈನ್ಸ್, ಕುಮಾರಸ್ವಾಮಿ ಮೈನಿಂಗ್, ಎಂ.ಎಂ.ಪಿ, ಬಿ.ಪಿ.ಡಿ.ಪಿ ಟ್ರನೇಟ್ ಮಿನರಲ್, ಜಿ.ರಂಗೇಗೌಡ ಮೈನ್ಸ್, ಎಫ್.ಬಿ.ಎಂ.ಎಂ, ಪಿ.ಎಸ್‌.ಕೆ, ನಾರಾಯಣ ಮೈನ್ಸ್, ಪಿ.ಪಿ.ಎಸ್, ವಿ.ಪಿ.ಎ.ಎಸ್‌.ಕೆ, ಪಿ.ಎಂ.ಸಿ, ಎನ್‌.ಎಚ್‌.ಪಿ, ಮುನೀರ್ ಎಂಟರ್ ಪ್ರೈಸಸ್, ವಿ.ಎಂ.ಪಿ, ಬ್ಲಾಕ್‌ಗೋಲ್ಡ್ ಮೈನ್ಸ್, ಬಾಲಸುಬ್ರಮಣ್ಯ ಶೆಟ್ಟಿ ಮೈನ್, ಆರ್.ಪಿ.ಎಸ್‌, ಎಂ.ಎಂ.ವಿ.ಎಲ್. ಇವಾಗಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಒಟ್ಟು ೩೦,೫೬೨ ಹೆಕ್ಟೇರುಗಳಲ್ಲಿ ನಡೆಯುತ್ತಿದೆ. ದೋಣಿಮಲೆ ಬ್ಲಾಕ್, ೯೭೩೩,೯೮ ಹೆಕ್ಟೇರ್, ನಾರ್ಥ್ ಈಸ್ಟರ್ನ್‌ಬ್ಲಾಕ್ ೯೦೬೪,೮೬, ರಾಮನಮಲೆ ಬ್ಲಾಕ್ ೭೭೬೯, ಸ್ವಾಮಿಮಲೆ ಬ್ಲಾಕ್ ೬೯೯೩,೧೨, ಹೆಕ್ಟೇರುಗಳಲ್ಲಿ ಮೈನಿಂಗ್ ನಡೆಯುತ್ತಿದೆ. ಒಟ್ಟು ೪೮ ಗಣಿ ಉದ್ದಮಿಗಳ ಪೈಕಿ ೨೦ ಉದ್ಯಮಗಳು ಅರಣ್ಯವನ್ನು ಅತಿಕ್ರಮಣ ಮಾಡಿವೆ. ಹೀಗೆ ಸಾಗುವ ವರದಿ ಅಕ್ರಮ ಗಣಿಗಾರಿಕೆಯ ಪ್ರಮುಖ ಅಂಶಗಳ ಬಗ್ಗೆ ಗಮನ ಸೆಳೆಯುತ್ತದೆ. ಅವೆಂದರೆ.

  • ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ರ ಅಡಿ ಅನುಮೋದನೆ ಪಡೆಯದೆ ಗಣಿಗಾರಿಕೆ ನಡೆಯುತ್ತಿರುವುದು.
  • ನಿಗದಿತ ಲೈಸೆನ್ಸ್ ಪಡೆದ ಪ್ರದೇಶಕ್ಕಿಂತ ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡುತ್ತಿರುವುದು.
  • ಅರಣ್ಯ, ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ ಹಾಗೂ ಗಣಿ ಮಾಲಿಕರು ಗುಪ್ತವಾಗಿ ಒಪ್ಪಂದ ಮಾಡಿಕೊಂಡಿರುವುದು.
  • ರಹದಾರಿಗೆ ಬಳಸಲಾಗುವ ಫಾರಂ ೩೧ನ್ನು ನಕಲಿಯಾಗಿ ಮುದ್ರಿಸಿ ದುರುಪಯೋಗ ಮಾಡಿಕೊಂಡಿರುವುದು.
  • ಹಳೆ ದಾಸ್ತಾನು ಮಾಡಿದ ಅದಿರನ್ನು ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಅನಧಿಕೃತವಾಗಿ ರವಾನಿಸುತ್ತಿರುವುದು.
  • ಪರಿಸರ ನಿರ್ವಹಣೆ ಯೋಜನೆಯನ್ನು ಅಳವಡಿಸದೆ ಇರುವುದು.
  • ಯಾವುದೇ ತಪಾಸಣೆ ಇಲ್ಲದೆ ಗಣಿ ವಾಹನಗಳಿಗೆ ಅನುಮತಿ ನೀಡಲಾಗುತ್ತಿರುವುದು. ಇಷ್ಟು ಅಂಶಗಳಿಂದಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ದಾಖಲಿಸುವ ವರದಿ, ಇದನ್ನು ನಿಲ್ಲಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪಟ್ಟಿ ಕೊಡುತ್ತದೆ. ಸದ್ಯಕ್ಕೆ ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಒಟ್ಟು ೪೮ ಗಣಿ ಉದ್ಯಮಗಳಿವೆ. ಒಟ್ಟಾರೆ ತಪಾಸಣೆಯ ವೇಳೆ ಕಂಡುಬಂದ ಅಕ್ರಮ ವ್ಯವಹಾರಗಳ ಹಿನ್ನೆಲೆಯಲ್ಲಿ ಕೆಳಕಂಡ ಕ್ರಮಗಳನ್ನು ಸಚಿವರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗುವ ಕ್ರಮಗಳು ಹೀಗಿವೆ.

೧. ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಟನೆ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಸಂಬಂಧಪಟ್ಟ ಗಣಿಗಾರಿಕೆಗಳ ಲೈಸೆನ್ಸ್ ರದ್ದು ಪಡಿಸಬೇಕು. ಅಕ್ರಮ ಗಣಿಗಾರಿಕೆ ಬಗ್ಗೆ ಸರ್ವೇಕ್ಷಣೆ ನಡೆಸುವವರೆಗೆ ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು.

೨. ಭೂಮಾಪನ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ ಇಲಾಖೆಗಳು ಹಾಗೂ ಸ್ಥಳೀಯ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ತಂಡ ರಚಿಸಿ ಇಡೀ ಅರಣ್ಯ ಪ್ರದೇಶದ ಸರ್ವೇಕ್ಷಣೆ ನಡೆಸಬೇಕು.

೩. ನಿಯಮ ಉಲ್ಲಂಘಿಸಿರುವ ಗಣಿ ಮಾಲಿಕರು ಎಷ್ಟು ಪ್ರಭಾವ ಶಾಲಿಯಾಗಿದ್ದರೂ ಅವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು.

೪. ಕಳೆದ ೫-೧೦ ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡಿರುವ ಮತ್ತು ಮಾಡುತ್ತಿರುವ ಅರಣ್ಯ, ಸಾರಿಗೆ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತಕ್ರಮ ಜರುಗಿಸಿ ಅವರಿಂದ ಆಗಿರುವ ನಷ್ಟವನ್ನು ವಾಪಸು ಮಾಡಿಸುವುದು. ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು.

೫. ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾಯಿಸುವುದು.

೬. ಅರಣ್ಯ ಜಮೀನು ವ್ಯಾಪ್ತಿ ಗುರುತಿಸಲು ಕಲ್ಲುಕಂಬ ನೆಡುವುದು.

೭. ಗಣಿ ಮಾಡಿದ ಮೇಲೆ ಮಣ್ಣ ಸಮತಟ್ಟು ಮಾಡಿ ಸಸಿ ನೆಡುವಂತೆ ಕ್ರಮಕೈಗೊಳ್ಳುವುದು.

೮. ಗಣಿ ಮಾಲೀಕರು ಅರಣ್ಯ ಇಲಾಖೆಯ ಸುತ್ತೋಲೆಗಳನ್ನು ಪಾಲಿಸುವಂತೆ ಬಿಗಿ ಬಂದೋಬಸ್ತು ಮಾಡಬೇಕು.

೯. ರಹದಾರಿ ಬಳಕೆಯಾದ ದಾಖಲೆಗಳನ್ನು ಗುರುತಿಸುವುದು, ಪರಿಸರ ಸಂರಕ್ಷಣೆ ಯೋಜನೆಯ ಪಾಲನೆ ಮಾಡುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

ಈ ಯಾವುದೇ ಕ್ರಮಗಳು ಈಗಿನ ಗಣಿಗಾರಿಕೆಯ ಮೇಲೆ ಆದಂತೆ ಕಾಣುತ್ತಿಲ್ಲ. ಈ ವರದಿಯು ತಯಾರಾಗಲು ಮುಖ್ಯಮಂತ್ರಿಗಳ ಗಣಿಹಗರಣ ಪ್ರಕರಣ ಕಾರಣವಾಯಿತು. ೨೦೦೬ರ ಫೆಬ್ರವರಿ ೨೨,೨೩ರಂದು ಅರಣ್ಯ ಸಚಿವ ಸಿ. ಚೆನ್ನಿಗಪ್ಪನವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಎ.ಕೆ.ವರ್ಮಾ ಹಾಗೂ ಅವರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಜೆ. ದಿಲೀಪ್ ಕುಮಾರ್ ಅವರ ಜತೆಗೆ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ತಪಾಸಣೆ ನಡೆಸಿ, ಆನಂತರ ಇಲಾಖೆಯಲ್ಲಿ ಚರ್ಚಿಸಿದ್ದರ ಫಲವಾಗಿ ಈ ವರದಿ ರೂಪುಗೊಂಡಿದೆ. ಸಚಿವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ “ಬಳ್ಳಾರಿಯ ಭೇಟಿ ನಂತರ ನಾನು ಕಂಡುಕೊಂಡ ಸತ್ಯಗಳನ್ನು ತಮ್ಮ ಅಗತ್ಯ ಕ್ರಮಕ್ಕಾಗಿ ಇಡುತ್ತಿದ್ದೇನೆ. ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟವನ್ನು ತಪ್ಪಿಸಬಹುದು”

[4] ಎಂದು ಹೇಳಿದ್ದಾರೆ.

ಸೊಂಡೂರು ಪರಿಸರವನ್ನು ಅರ್ಥಮಾಡಿಕೊಳ್ಳಲು ಈಗ ಸ್ವಲ್ಪಮಟ್ಟಿಗೆ ಸಾಧ್ಯವಾಗಿರಬಹುದು. ಈ ಭಾಗದ ಹವಾಗುಣ, ಪರಿಸರ, ಎಲ್ಲವೂ ಕೆಟ್ಟು, ಹೋಗಿದೆ.. ಆದರೆ ಯಾವ ಪರಿಸರವಾದಿಗಳು, ರೈತಸಂಘಗಳು, ಯುವ ಸಂಘಗಳು ಇಂತಹ ಪರಿಸರ ನಾಶದ ಬಗೆಗೆ ಧ್ವನಿ ಎತ್ತುತ್ತಿಲ್ಲ. ಬ್ಲಾಕ್‌ಮೇಲೆ ಮಾಡಿ ಲಕ್ಷಗಟ್ಟಲೆ ಹಣ ಮಾಡುವುದಕ್ಕಾಗಿಯೇ ಯುವಜನ ಮತ್ತು ಪರಿಸರ ಸಂರಕ್ಷಣಾ ಹೆಸರಿನಲ್ಲಿ ಹಲವಾರು ಸಂಘ ಸಂಸ್ಥೆಗಳಿಗೆ ಪರವಾನಿಗಿ ಪಡೆಯಲಾಗುತ್ತಿದೆ. ಆದರೆ, ಸೊಂಡೂರು ನಾಗರಿಕ ಹಿತರಕ್ಷಣ ಸಮಿತಿ ಮಾತ್ರ ಆರೋಗ್ಯಕರ ಚಳವಳಿ ರೂಪಿಸುತ್ತಾ ಬಂದಿದೆ. ಡಾ. ಚನ್ನಬಸಪ್ಪ, ಟಿ.ಎಂ. ಶಿವಕುಮಾರ ಅವರನ್ನು ಒಳಗೊಂಡ ಒಂದು ಯುವಕರ ತಂಡವಿದೆ. ಇತ್ತೀಚೆಗೆ ಏಪ್ರಿಲ್ ೩೦, ೨೦೦೭ರಂದು ‘ಸೊಂಡೂರು ಬಂದ್‌’ ಆಚರಿಸಲಾಯಿತು. ತುಂಗಾಭದ್ರ ಜಲಾಶಯದಿಂದ ಕುಡಿಯುವ ನೀರು ಪೂರೈಕೆ, ರಸ್ತೆಗಳ ದುರಸ್ತಿ, ಒಳಚರಂಡಿ ವ್ಯವಸ್ಥೆ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ನಿಲ್ಲಿಸಲಾದ ಪದವಿಗಳ ಪುನಾರಾಂಭ ಇವು ಬೇಡಿಕೆಗಳಾಗಿದ್ದವು. ಇದನ್ನು ಜಿಲ್ಲಾ ಪಂಚಾಯ್ತಿ ವಿರೋಧಿಸಿತು. ಈ ಮಧ್ಯೆ ಬಂದ್ ಯಶಸ್ವಿಯಾಯಿತು. ಜನರೆಲ್ಲ ಸ್ಪಂದಿಸಿದರು. ಈ ಬಂದ್‌ಗೆ ಸಿ.ಪಿ.ಐ, ಕರ್ನಾಟಕ ರಕ್ಷಣಾ ವೇದಿಕೆ, ಸವಿತಾ ಸಮಾಜ, ಅಡಪದ ಅಪ್ಪಣ ಸಮಾಜ, ಕರ್ನಾಟಕ ಸ್ತ್ರೀಶಕ್ತಿ ಗುಂಪುಗಳು, ಟೈಲರ್ಸ್ ಅಸೋಷಿಯೇಷನ್ ಮುಂತಾದ ಸಂಘಟನೆಗಳು ಈವರೆಗಿನ ಮೌನ ತೊರೆದು ಬೆಂಬಲಿಸಿದವು. ಆದರೆ ಇಲ್ಲಿನ ಗ್ರಾಮೀಣ ಭಾಗದಲ್ಲಿ ಜನರಂತೂ ಕೋಟಿ ಲೆಕ್ಕದ ಗಣಿ ಮಾಲಿಕರೆದುರು ಉಸಿರಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಧೂಳಿನಿಂದಾಗಿ ಬೆಳೆ ಬೆಳೆಯುವುದೇ ಕಷ್ಟವಾಗುತ್ತಿದೆ. ಹಾಗಾಗಿ ರೈತ ಸಂಘದವರು ‘ಧೂಳಿನ ಹಾನಿಯ ಪರಿಹಾರಕ್ಕಾಗಿ ಹೋರಾಟ’ ಎಂಬ ಚಳವಳಿಯನ್ನು ಮಾಡಲಾಗಿದೆ. ‘ಒಂದು ಎಕರೆಗೆ ನಾಲ್ಕು ಸಾವಿರದಂತೆ ಪರಿಹಾರ ಕೊಡುವುದಕ್ಕೆ ಗಣಿ ಧನಿಗಳು ಒಪ್ಪಿಕೊಂಡರು. ಅದರಲ್ಲಿ ರೈತ ಸಂಘವೇ ಎಕರೆಗೆ ಒಂದು ಸಾವಿರ ತಾನು ಉಳಿಸಿಕೊಂಡು ಮೂರು ಸಾವಿರದಂತೆ ಹಂಚಿದರು’ ಎಂದು ಲಕ್ಷ್ಮೀಪುರದ ನಾಗಪ್ಪ ಹೇಳುತ್ತಾರೆ. ಹೀಗೆ ಚಳವಳಿಗಳು ಶಕ್ತಿಯನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ೧೯೭೩ರಲ್ಲಿ ೪೬ ದಿನಗಳ ಕಾಲ ಈ ಭಾಗದ ರೈತರು ಭೂಮಿಗಾಗಿ ಹೋರಾಟ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.

ಈಗಿನ ಗಣಿಗಾರಿಕೆಯ ಮಾಹಿತಿಯನ್ನು ನೋಡಿದರೆ ಯಾವ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಯಿತೋ, ಅದೇ ಭೂಮಿ ಇಂದು ಗಣಿಗಾರಿಕೆಯ ಮೂಲಕ ಭೂಮಾಲಿಕ ಬಂಡವಾಳಶಾಹಿಗಳನ್ನೇ ಬೆಳೆಸುತ್ತಿದೆ. ಇನಾಮು ಭೂಮಿ ಪಡೆದವರಲ್ಲಿ ಕೆಲವರು ತಮ್ಮ ಭೂಮಿಯನ್ನು ಇಂತಿಷ್ಟು ಹಣಕ್ಕೆ ಗಣಿಧನಿಗಳಿಗೆ ಕೊಡುತ್ತಾರೆ. ಅವರ ಈ ಹೊಲ ಅಗೆದು ಕೋಟಿಗಟ್ಟಲೆ ಸಂಪಾದಿಸಿ ಮತ್ತಷ್ಟು ಶ್ರೀಮಂತರಾಗುತ್ತಾರೆ. ಹಾಗಾಗಿ ಸಾಮಾನ್ಯ ರೈತ ವರ್ಗಕ್ಕೆ ಯಾವ ಉಪಯೋಗವೂ ಆಗಿಲ್ಲ. ಮತ್ತೆ ಇದರ ಲಾಭ ಪಡೆಯುವವರು ಮಧ್ಯಮ ವರ್ಗದ ರೈತರು, ಬಂಡವಾಳಶಾಹಿ ಭೂಮಾಲಿಕರು. ಹಾಗಾಗಿ ರೈತ ಮತ್ತು ಭೂಮಿಯ ಸಂಬಂಧಗಳು ಮತ್ತೆ ಶ್ರೀಮಂತರಿಂದಲೇ ನಿರ್ಧಾರವಾಗುತ್ತಿವೆ.