ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು, ಉಜ್ಜಿನಿಯ ಭಾಗದ ಹಳ್ಳಿಗಳೆಲ್ಲಾ ಸೊಂಡೂರು ರಾಜರ ಬಗೆಗೆ ಕಥೆಗಳಿದ್ದವು. ರಾಜರು ಹುಲಿ, ಚಿರತೆಗಳನ್ನು ಬೇಟೆಯಾಡುತ್ತಾರೆ. ಅವರ ಸಿಂಹಾಸನದ ಮೇಲೆ ಹುಲಿಯ ಚರ್ಮವಿದೆ, ಕೋವಿ (ಬಂದೂಕ)ಗಳಿವೆ…. ಅಂತೆಲ್ಲಾ ಹೇಳುತ್ತಿದ್ದರು. ಇವುಗಳ ನಡುವೆ ಪ್ರಸಿದ್ಧ ಕಥೆಯೆಂದರೆ ಹಂದಿಬೇಟೆಯದು. ಸೊಂಡೂರು ರಾಜರಿಗೆ ಮಿಕದ (ಅಡವಿಹಂದಿ) ಮಾಂಸವಿಲ್ಲದ ಊಟವಿಲ್ಲ ಎನ್ನುವುದು. ಈ ಭಾಗದಲ್ಲಿ ಸೊಂಡೂರಿನಿಂದ ಬೇಟೆಯ ಜೀಪೊಂದು ಬರುತ್ತಿತ್ತು. ಓಪನ್‌ ಜೀಪಿನಲ್ಲಿ ಹಿಂದೆ ನಾಲ್ಕು ಜನ ಕೋವಿ ಹಿಡಿದು ನಿಂತಿರುತ್ತಿದ್ದರು. ಊರುಗಳ ಪಕ್ಕ ಇರುವ ಬೈರದೇವರ ಗುಡ್ಡ, ಕರೆಕಲ್ಲು ಗುಡ್ಡ ಮುಂತಾದ ಕಡೆ ಅಡವಿ ಹಂದಿಗಳು ಹೆಚ್ಚಿದ್ದವು. ಅದಕ್ಕಾಗಿ ಜೀಪು ಆಗಾಗ ಬರುತ್ತಿತ್ತು. ಹುಡುಗರೆಲ್ಲಾ ‘ರಾಜರ ಜೀಪು ಬಂತು’ ಎಂದು ಕೇಕೆ ಹಾಕುತ್ತಿದ್ದರು. ಇದು ೧೯೮೯ರ ಘಟನೆ. ಆ ಹೊತ್ತಿನಲ್ಲಿ ಸೊಂಡೂರು ರಾಜರು ಜನ ಸಮುದಾಯದಲ್ಲಿ ಹೆಚ್ಚು ನೆನಪುಳಿದದ್ದು ಮಿಕದ ಮಾಂಸದ ಜೊತೆ. ಆಗ ಈ ಭಾಗದಲ್ಲಿ ಓಪನ್‌ ಜೀಪು ಬಂತೆಂದರೆ ಸೊಂಡೂರು ರಾಜವಂಶವೇ ಬಂದಂತೆ ಭಾಸವಾಗುತ್ತಿತ್ತು.

ಸೊಂಡೂರು ಸುತ್ತಮುತ್ತಲ ಹಳ್ಳಿಗಳಲ್ಲಿ ರಾಜವಂಶದ ಬಗೆಗೆ ಕಥನಗಳಿವೆ. ಇವುಗಳ ಲಿಖಿತ ಚರಿತ್ರೆಗಿಂತ ವರ್ಣರಂಜಿತವಾದವು. ಜನರಲ್ಲಿ  ರಾಜರ ಜೀವಂತಿಕೆ ಇರುವುದು ಈ ಕಾರಣಕ್ಕಾಗಿಯೆ. ಇನ್ನು ರಾಜವಂಶದ ಚರಿತ್ರೆಗೆ ಹಲವು ಆಕರಗಳಿವೆ. ಮದ್ರಾಸ್‌ ಜಿಲ್ಲಾ ಗೆಜೆಟಿಯರ್, ಬಳ್ಳಾರಿ ಜಿಲ್ಲಾ ಗೆಜೆಟಿಯರ್, ಸರ್ ಥಾಮಸ್‌ ಮನ್ರೋ ಆಡಳಿತದ ಅವಧಿಯ ರಿಪೋರ್ಟುಗಳು, ಮರಾಠರ ಚರಿತ್ರೆಗೆ ಸಂಭಂದಿಸಿದ ದಾಖಲೆಗಳು ಟಿ.ಬಿ.ಕೇಶವರಾವ್‌ ಅವರ ‘ಸೊಂಡೂರಿನ ಘೋರ್ಪಡೆ ರಾಜಮನೆತನ’ ಕೆ.ವಿ. ನಂದ್ಯಪ್ಪ ಅವರ ಸಂಪಾದನೆಯ ಸೊಂಡೂರು ‘ತಾಲ್ಲೂಕು ದರ್ಶನ’, ಯಜಮಾನ್‌ ಶಾಂತರುದ್ರಪ್ಪ ಅವರ ಪ್ರಕಟಿತ ಕಾದಂಬರಿ, ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರ ‘ಬಳ್ಳಾರಿ ಜಿಲ್ಲೆಯ ಪಾಳೆಯಗಾರರು’ ಕೃತಿ. ಮುಂತಾದವುಗಳಲ್ಲಿ ರಾಜವಂಶದ ಚರಿತ್ರೆಯು ದಾಖಲಾಗಿದೆ. ಈ ಬಗೆಯ ಅಧ್ಯಯನಗಳಲ್ಲಿ ಚರಿತ್ರೆಯನ್ನು ಗ್ರಹಿಸುವ ಪಾರಂಪರಿಕ ವಿಧಾನವೊಂದಿದೆ.

ಸೊಂಡೂರು ಚರಿತ್ರೆ ಮೌರ್ಯ, ಶಾತವಾಹನರಿಂದ ಆರಂಭವಾಗುತ್ತದೆ. ಆ ನಂತರ ಕದಂಬ, ಗಂಗ, ಬಾದಾಮಿ, ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ದೇವಗಿರಿ ಸೇವುಣರು, ವಿಜಯನಗರ ಹಾಗೂ ವಿಜಾಪುರದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಕರ್ನಾಟಕದ ಕೈಫಿಯತ್ತುಗಳಲ್ಲಿ ಕುಮಾರರಾಮನ ವಂಶಸ್ಥರಾದ ಮರಳನವರು ವಂಶಸ್ಥರಿಗೆ ನಾಡತಳವಾರಿಕೆ ಮಾಡಲು ವಿಜಯನಗರದ ಕೃಷ್ಣದೇವರಾಯರು ೨ ಜನರಿಗೆ ಎರಡು ಗ್ರಾಮಗಳನ್ನು ಜಹಗೀರಾಗಿ ನೀಡುತ್ತಾರೆ. ಇವರಲ್ಲಿ ಬೊಮ್ಮಂತ ರಾಜನು ಆರಂಭದ ಅರಸ. ಇವನ ಮಗ ಬಿಸಾಳ ರಾಜನಿಗೆ ಸೊಂಡೂರು ಪ್ರದೇಶವನ್ನು ಬಿಟ್ಟುಕೊಡುತ್ತಾರೆ. ಅಂದು ಸೊಂಡೂರಿಗೆ ಸೇರಿದ ಗ್ರಾಮಗಳೆಂದರೆ ಎತ್ತಿನಹಟ್ಟಿ, ಮುರಾರಿಪುರ, ವೀರಾಪುರ, ಹತ್ತಿನಹಾಳು, ಹೊಸಹಳ್ಳಿ, ಜೋಗ, ಸೊಂಡೂರು ಸೀಮೆಗೆ ಅನೇಕ ರಾಜರು ಬೇಟೆಗೆಂದು ಬಂದ ಪ್ರಸಂಗಗಳಿವೆ. ಮಧ್ಯಕಾಲೀನ ಸಂದರ್ಭದಲ್ಲಿ ಬಹುದೊಡ್ಡ ಅರಣ್ಯ ಪ್ರದೇಶವಾಗಿತ್ತು. ದರೋಜಿ ಕೆರೆ ಒಡೆದಾಗ ಅದರ ಮುಂದೆ ಒಂದು ಒಡಕು ಇರುತ್ತದೆ. ಅದನ್ನು ಕಟ್ಟಲು ಬಿಸಾಳ ರಾಜ ಹೇಳಿ ಹೋದನು. ಹಾಗೆಯೇ ಚಿನ್ನಯರಾಜನು ಒಡೆಯನಾಗಿ “‘ಬಿಸಾಳನಾಯಕನ ವಡಕು’ ಎಂದು ವಡಕಿಗೆ ಕೆರೆ ಕಟ್ಟಿಸಿದನು. ಇಂದು ‘ವಡ್ಡು’ ಎಂದು ಆ ಗ್ರಾಮಕ್ಕೆ ಹೆಸರು. ಈಗ ಸೊಂಡೂರಿನಿಂದ ತೋರಣಗಲ್ಲಿಗೆ ಹೋಗುವ ಮಾರ್ಗದಲ್ಲಿದೆ. ಸೊಂಡೂರು ಸಂಸ್ಥಾನದ ಪೂರ್ವದಲ್ಲಿ ಬೇಡ ದೊರೆಗಳು ಇಲ್ಲಿ ಆಳ್ವಿಕೆ ನಡೆಸಿದ್ದಾರೆ

[1] ಎಂದು ತಿಳಿದುಬರುತ್ತದೆ.

ಕ್ರಿ.ಶ. ೧೩೩೬ರಿಂದ ಕ್ರಿ.ಶ. ೧೫೬೫ರವರೆಗೆ ದಕ್ಷಿಣ ಭಾರತ ವಿಜಯನಗರದ ವಶದಲ್ಲಿ ಇದ್ದಿತು. ೧೫೬೫ರಲ್ಲಿ ವಿಜಯನಗರದ ಪತನಾನಂತರ ಬಿಜಾಪುರದ ಆದಿಲ್‌ಶಾಹಿ ರಾಜರು ಈ ಭಾಗವನ್ನು ೧೨೦ ವರ್ಷಗಳ ಕಾಲ ಆಳಿದರು. ೧೬೮೬ರಲ್ಲಿ ಔರಂಗಜೇಬನು ಆದಿಲ್‌ಶಾಹಿಗಳನ್ನು ಸೋಲಿಸಿ ಅವರ ರಾಜ್ಯವನ್ನು ಗೆದ್ದುಕೊಂಡ. ಆಗ ಬಿಜಾಪುರದ ಸುಲ್ತಾನರ ಆಳ್ವಿಕೆಯ ಕಾಲ. ಸುಲ್ತಾನರು ಶಾಹೀ ರಾಜ್ಯದ ವಿಸ್ತರಣೆಯಲ್ಲಿದ್ದರು. ಮರಾಠ ಸರದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೂರಾಜ್ಯವನ್ನು ಗೆಲ್ಲುವ ಕನಸುಕಂಡರು. ಮರಾಠ ಅರಸರ ಮೂಲ ಮಹಾರಾಷ್ಟ್ರ. ಇವರು ಮೊದಲು ಆಂಧ್ರದಲ್ಲಿದ್ದರು. ಗುತ್ತಿಯಿಂದ ಸೊಂಡೂರಿಗೆ ಬಂದರೆಂದು ತಿಳಿದು ಬರುತ್ತದೆ. ಈ ರಾಜ ಮನೆತನದವರಿಗೆ ‘ಘೋರ್ಪಡೆ’ ವಂಶದವರೆಂದು ಹೆಸರು. ಶಿವಾಜಿ ವಂಶಕ್ಕೆ ಸಂಬಂಧಿಸಿದ ಬೋಂಸ್ಲೆ ಮನೆತನದ ಸಂಬಂಧಿಕರೇ ಘೋರ್ಪಡೆಯವರು. ಕ್ರಿ.ಶ. ೧೪೬೯ರಲ್ಲಿ ದುರ್ಗದ ಕೋಟೆಯನ್ನು ಪಡೆಯುವಲ್ಲಿ ಯಶಸ್ವಿಯಾದ ಕಾರಣ (ಹಿಂದೊಮ್ಮೆ ಇವರು ಯುದ್ಧದಲ್ಲಿ ಕೋಟೆ ಹತ್ತಲು ಉಡ ಬಳಸಿದ್ದರಿಂದ ಆ ಮನೆತನಕ್ಕೆ ಘೋರ್ಪಡೆ ಎಂದಾಯಿತಂತೆ. ಘೋರ್ಪಡೆ ಎಂದರೆ ಮರಾಠಿಯಲ್ಲಿ ಉಡ ಎಂದರ್ಥ) ರಾಜ್ಯ ಸ್ಥಾಪಿಸಿ ತಮ್ಮ ಹೆಸರಿನ ಮುಂದೆ ಘೋರ್ಪಡೆ ಎಂದು ಕರೆದುಕೊಂಡರು.

ಬಿಜಾಪುರದ ಸುಲ್ತಾನರ ಸೇನೆಯಲ್ಲಿ ಮಲ್ಲೋಜಿರಾವ್‌ (ಮಹಾಜಿರಾವ್‌) ಸರದಾರನಾಗಿದ್ದ. ಈತನ ಸೇವಾನಿಷ್ಠೆಗೆ ‘ಹಿಂದೂರಾವ್‌ ಮತ್ತು ಮಮಲಿಕತ್‌ ಮದಾರ್’ ಎಂಬ ಬಿರುದನ್ನು ಕೊಟ್ಟರು. ಈತನಿಗೆ ಮೂವರು ಮಕ್ಕಳು. ಸಂತೋಜಿರಾವ್‌, ಬಹಿರೋಜಿರಾವ್‌ ಮತ್ತು ಮಲ್ಲೋಜಿರಾವ್‌. ಇವರಲ್ಲಿ ಸಂತೋಜಿರಾವ್‌ ಸುಲ್ತಾನರ ಸೈನ್ಯದಲ್ಲಿ ಸೇನಾಪತಿಯಾಗಿದ್ದ. ಈತನು ಶಿವಾಜಿ ಮಹಾರಾಜ ಮತ್ತು ಸಂಬಾಜಿ ಮಹಾರಾಜರಷ್ಟೇ ಬಲಿಷ್ಠನು. ಮುಂದೆ ಕೊಲ್ಲಾಪುರ ಸಂಸ್ಥಾನದ ಜಹಗೀರುದಾರನಾಗಿ ಬಲಿಷ್ಠನಾಗುತ್ತಿದ್ದಂತೆಯೇ ೧೬೯೮ರಲ್ಲಿ ಈತನ ಕೊಲೆಯಾಯಿತು. ಎರಡನೆಯ ಮಗ ಬಹಿರೋಜಿರಾವನಿಗೆ ಸುಲ್ತಾನರು ‘ಹಿಂದೂರಾವ್‌, ಮಮಲಿಕ್‌ ಮದಾರ್’ ಬಿರುದನ್ನಿತ್ತರು. ಈತ ಚಾಣಾಕ್ಷ ಪರಾಕ್ರಮಿ. ಈತನ ತಮ್ಮ ಮಲ್ಲೋಜಿರಾವ್‌ನೂ ಸಾಹಸಿ. ಈತನಿಗೆ ಸುಲ್ತಾನರು ‘ಅಮೀರ್‌-ಉಲ್‌-ಉಮರಾವ್‌’ ಎಂದು ಗೌರವಿಸಿದ್ದರು. ಈತನೂ ಕೊಲ್ಲಾಪುರ ಸಂಸ್ಥಾನದ ಜಹಗೀರಾದಾರನಾಗಿದ್ದು. ಬಹಿರೋಜಿಗೆ ನಾಲ್ಕು ಜನ ಮಕ್ಕಳು. ಹಿರಿಯ ಮಗ ಸಯ್ಯಾಜಿರಾವ್‌ ಬಾಲ್ಯದಲ್ಲಿ ಮೃತನಾದ. ಎರಡನೆ ಮಗನೂ ಯುದ್ಧದಲ್ಲಿ ಮಡಿದ. ಮೂರನೆಯವನಾದ ಸಿದ್ದೋಜಿರಾವ್‌ ಸೊಂಡೂರನ್ನು ಗೆದ್ದುಕೊಂಡನು. ೧೭೨೮ರಲ್ಲಿ ತನ್ನ ಅಧಿಕಾರ ಸ್ಥಾಪಿಸಿದನು.

ಟಿ.ಬಿ.ಕೇಶವರಾವ್‌ರು ಹೀಗೆ ಬರೆಯುತ್ತಾರೆ. ಜರಮಲಿ ಹಳ್ಳಿಯ ಪೆನ್ನನಾಯಕನಿಗೆ ವಿಜಯನಗರದ ಅರಸ ಅಚ್ಯುತರಾಯನಿಗೆ ಯುದ್ಧದಲ್ಲಿ ಉತ್ತಮ ಸೇವೆಸಲ್ಲಿಸಿದ್ದ. ಆತನ ನಂತರದ ಪಾಳೆಯಗಾರರು ಮತ್ತೆ ಕೆಲವು ಹಳ್ಳಿಗಳನ್ನು ಪಾಳೆಯ ಪಟ್ಟಿಗೆ ಸೇರಿಸಿಕೊಂಡರು. ಸೊಂಡೂರಿನ ಕಣಿವೆ ಪ್ರದೇಶವೂ ಜರಿಮಲೆ ಪಾಳೆಯಗಾರನಿಗೆ ಆಧೀನವಾಯಿತು. ಔರಂಗಜೇಬನ ಮರಣಾ ನಂತರ (೧೭೦೭) ಮರಾಠರ ಛತ್ರಪತಿ ಸಾಹು ‘ಚೌಥ್‌’ ಎಂಬ ಕಪ್ಪವನ್ನು ಇಡೀ ದಕ್ಷಿಣ ಭಾರತದಲ್ಲಿ ಸಂಗ್ರಹ ಮಾಡುವ ಅಧಿಕಾರವನ್ನು ಪಡೆದದ್ದು, ಇದರಿಂದ ಮರಾಠರು ದಕ್ಷಿಣದ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ ಬಳ್ಳಾರಿ ಭಾಗದಲ್ಲೂ ಇವರ ಪ್ರವೇಶವಾಯಿತು. ಜರಮಲಿ ಪಾಳೆಯಗಾರನ ದೌರ್ಬಲ್ಯದಿಂದಾಗಿ ಅರಾಜಕ ವ್ಯವಸ್ಥೆ ನೆಲೆಸಿತ್ತು. ಚಿತ್ರದುರ್ಗ ಮತ್ತು ಹರಪನಹಳ್ಳಿ ಪಾಳೆಯಗಾರರು ಜರಮಲಿಯನ್ನು ಕ್ರಮೇಣ ವಶಪಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಮರಾಠರ ವೀರ ಸೇನಾನಿ ಸಿದ್ದೋಜಿರಾವ್‌ ಘೋರ್ಪಡೆಯು (೧೭೨೬-೪೨) ಕ್ರಿ.ಶ. ೧೭೨೮ರಲ್ಲಿ ಸೊಂಡೂರು ಪ್ರದೇಶವನ್ನು ಕಷ್ಟವಿಲ್ಲದೆ ಜರಿಮಲೆ ಪಾಳೆಗಾರರಿಂದ ಗೆದ್ದುಕೊಂಡ.[2]

ಸಿದ್ದೋಜಿರಾವ್‌ ಸೊಂಡೂರು ಸಂಸ್ಥಾನದ ಮೂಲ ಪುರುಷ. ಬಹಿರೋಜಿಯ ತಮ್ಮ ಸಿದ್ದೋಜಿಯ ಚಿಕ್ಕಪ್ಪನೂ ಆದ ಮಲ್ಲೋಜಿಗೆ ಒಬ್ಬನೇ ಮಗನಿದ್ದ. ಆತನ ಹೆಸರು ಶಿವರಾವ್‌. ತಂದೆಯ ನಂತರ ದತ್ತವಾಡದ ಜಹಗೀರನ್ನು ಆಳಿಕೊಂಡಿದ್ದ. ದತ್ತವಾಡದ ಜಹಗೀರಾದರು, ಕಪಸಿ ಜಹಗೀರುದಾರರು, ಸೊಂಡೂರು ಪಾಳೆಗಾರರು ಇವರೆಲ್ಲಾ ಒಂದೇ ರಕ್ತ ಸಂಬಂಧಿಗಳಾಗಿದ್ದರು. ಒಬ್ಬರಿಗೆ ಆಪತ್ತು ಬಂದರೆ ಎಲ್ಲರೂ ನೆರವಾಗುತ್ತಾ ಸಹಕಾರದಿಂದ ತಮ್ಮ ಜಹಗೀರುಗಳನ್ನು ಭದ್ರಪಡಿಸಿಕೊಂಡಿದ್ದರು.

೧೭ನೇ ಶತಮಾನದ ಉತ್ತರಾರ್ಧ ದಕ್ಷಿಣ ಭಾರತ ರಾಜಕೀಯವಾಗಿ ಸಂಕಷ್ಟದಲ್ಲಿತ್ತು. ಶಾಹೀ ಮನೆತನಗಳ ಒಳಜಗಳ, ಪೇಶ್ವೆಗಳ ರಾಜ್ಯ ವಿಸ್ತಾರದ ದಾಹ, ಮೈಸೂರಿನಲ್ಲಿ ಹೈದರಾಲಿಯ ಮಹಾತ್ವಾಕಾಂಕ್ಷೆ, ಇವುಗಳಿಂದಾಗಿ ಇಡೀ ದಕ್ಷಿಣ ಭಾರತ ಗೊಂದಲಮಯವಾಗಿತ್ತು. ಜನಸಾಮಾನ್ಯರಿಗೆ ನೆಮ್ಮದಿ ಇರಲಿಲ್ಲ. ಯುದ್ಧದ ಬೀತಿ ವ್ಯಾಪಕವಾಗಿತ್ತು. ಈ ಸಮಯದಲ್ಲಿಯೂ ಸಿದ್ದೋಜಿರಾವ್‌ ಸೊಂಡೂರನ್ನು ಸಮರ್ಪಕವಾಗಿ ಮುನ್ನಡೆಸುತ್ತಿದ್ದ. ಈತನಿಗೆ ನಾಲ್ಕು ಜನ ಹೆಂಡತಿಯರು. ಇವರಿಗೆ ದೌಲತ್‌ರಾವ್‌, ಭುಜಂಗರಾವ್‌, ಗೋಪಾಲ್‌ರಾವ್‌, (ಸುಭಾನ್‌ರಾವ್‌) ಮುರಾರಿರಾವ್‌ ಎಂಬ ಮಕ್ಕಳಾದರು. ಭುಜಂಗರಾವ್‌ ಬಾಲ್ಯದಲ್ಲೇ ಮಡಿದ. ಗೋಪಾಲ್‌ರಾವ್‌ ಅಸಮರ್ಥನಾಗಿದ್ದ ಕಾರಣ ಮುರಾರಿರಾವ್‌ (ಹಿರಿಯ ಮಗ) ಸೊಂಡೂರಿನ ವಾರಸುದಾರನಾದ. ತಮ್ಮ ದೌಲತ್‌ರಾವ್‌ ಧಾರವಾಡದ ಬಳಿ ಇರುವ ಗಜೇಂದ್ರಗಡ ಸಂಸ್ಥಾನದ ಜಹಗೀರುದಾರನಾದನು.

ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಮೈಸೂರಿನ ಹೈದರಾಲಿಯು ತನ್ನ ಮಹಾ ಸೈನ್ಯವನ್ನು ಸೊಂಡೂರಿನ ಮೇಲೆ ದಾಳಿ ಮಾಡಲು ಬಿಟ್ಟನು. ಮುರಾರಿರಾವ್ ಇದರಿಂದ ವಿಚಲಿತನಾಗಿ ಚಿಕ್ಕಪ್ಪನ ಮಕ್ಕಳಾದ ಯಶವಂತರಾವ್, ಮಲ್ಲೋಜಿರಾವ್ ಇವರಿಗೆ ಸೈನ್ಯ ತರಲು ಹೇಳಿದ. ಈ ಇಬ್ಬರ ಸೈನ್ಯ ಬರುವ ನಡು ಹಾದಿಯಲ್ಲಿಯೇ ಹೈದರನ ಸೈನ್ಯದ ದಾಳಿಗೆ ಸಿಕ್ಕಿತು. ಯಶವಂತರಾವ್ ಅಲ್ಲಿಯೇ ಮಡಿದ. ಮಲ್ಲೋಜಿರಾವ್ ಮಾತ್ರ ಉಪಾಯವಾಗಿ ತಪ್ಪಿಸಿಕೊಂಡು ಮುರಾರಿರಾವ್‌ನನ್ನು ಸೇರಿಕೊಂಡನು. ನಂತರ ಹೈದರ ಸೈನ್ಯ ಸೊಂಡೂರಿನ ಮೇಲೆ ಮಾಡಿದ ದಾಳಿಯಿಂದಾಗಿ ಮಲ್ಲೋಜಿರಾವ್‌ನೂ ಹೋರಾಡುತ್ತಲೇ ಮಡಿದ. ಮುರಾರಿರಾವ್ ಶರಣಾಗತನಾದ. ಹೈದರ್ ಸೊಂಡೂರನ್ನು ವಶಪಡಿಸಿಕೊಂಡು ಮುರಾರಿರಾವ್‌ನನ್ನೂ ಮತ್ತು ಆತನ ದತ್ತುಪುತ್ರ ಶಿವಾಜಿರಾವ್‌ನನ್ನು ಕೊಪ್ಪಳದ ಜೈಲಿನಲ್ಲಿ ಬಂಧಿಸಿಟ್ಟ, ಮುರಾರಿರಾವ್‌ ೧೭೭೬ರಲ್ಲಿ, ಶಿವರಾವ್ ೧೭೭೯ರಲ್ಲಿ ಕಾರಾಗೃಹದಲ್ಲಿಯೇ ಮರಣ ಹೊಂದಿದ್ದನು.[3]

ಇದರಿಂದ ನೊಂದ ಮರಾಠರು ಸಮಯ ಕಾಯುತ್ತಿದ್ದರು. ದತ್ತವಾಡದ ಯಶವಂತರಾವ್ ಮಕ್ಕಳಾದ ಶಿವರಾವ್ ಮತ್ತು ವೆಂಕಟರಾವ್ ಟಿಪ್ಪುಸುಲ್ತಾನರಿಂದ ಸೊಂಡೂರು ಹಿಂದಕ್ಕೆ ಪಡೆಯಲು ಹೋರಾಡಿದರು. ೧೭೮೫ರಲ್ಲಿ ಶಿವರಾವ್ ಯುದ್ಧದಲ್ಲಿ ಹತನಾದ. ೧೭೯೦ರಲ್ಲಿ ವೆಂಕಟರಾವ್ ಟಿಪ್ಪುವಿನ ಸೈನ್ಯದಿಂದ ಹೊರದೂಡಲ್ಪಟ್ಟ. ಆಗ ಅಣ್ಣನ ಮಗ ಸಿದ್ದೋಜಿಯನ್ನು ರಕ್ಷಿಸಿಕೊಂಡು ಬಂದನು. ಆತ ಯುದ್ಧದಲ್ಲಿ ಗಾಯಗೊಂಡಿದ್ದರಿಂದ ಸ್ವಲ್ಪ ದಿನಗಳ ನಂತರ ಪುತ್ರ ಸಂತಾನವಿಲ್ಲದೆ ಮಡಿದ. ಆತನ ಹೆಂಡತಿ ಮಲ್ಲೋಜಿರಾವ್‌ನ ಮಗ ಖಂಡೇರಾಯನ ಹಿರಿಯ ಮಗ ಶಿವಾಜಿರಾವ್‌ನನ್ನು ದತ್ತು ತೆಗೆದುಕೊಂಡಳು. ಈತನು ೧೭೯೯ರಲ್ಲಿ ಸೊಂಡೂರನ್ನು ಟಿಪ್ಪುಸುಲ್ತಾನನಿಂದ ಗೆದ್ದುಕೊಂಡ. ಈ ಸಮಯದಲ್ಲಿ ಟಿಪ್ಪು ಶ್ರೀರಂಗಪಟ್ಟಣದಲ್ಲಿ ಯುದ್ಧ ಮಾಡುತ್ತ ಇಂಗ್ಲಿಷರ ಗುಂಡಿಗೆ ಬಲಿಯಾದ. ಟಿಪ್ಪುವಿನ ಸಾವು ಶಿವರಾವ್‌ನಿಗೆ ಸೊಂಡೂರನ್ನು ಭದ್ರಪಡಿಸಿಕೊಳ್ಳಲು ನೆರವಾಯಿತು.

ಇಂಪೀರಿಯಲ್ ಗೆಜೆಟಿಯ್‌ನಲ್ಲಿ ಹೈದರಾಲಿ ಸೊಂಡೂರನ್ನು ಪಡೆದ ನಂತರ ಗುತ್ತಿಯನ್ನು ೧೭೭೯ರಲ್ಲಿ ಆಕ್ರಮಿಸಿದನು. ತಂದೆ ಆರಂಭಿಸಿದ ನೀತಿಯನ್ನು ಟಿಪ್ಪು ಸುಲ್ತಾನನು ಮುಂದುವರಿಸಿದನು. ೧೭೮೫ರಲ್ಲಿ ಸೊಂಡೂರಿಗೆ ಬಂದ ಟಿಪ್ಪು ಕದನ ನಡೆಸಿ ಮುರಾರಿರಾಯರ ದತ್ತು ಪುತ್ರ (ಗೋಪಾಲರಾವ್‌ರ ಮಗ) ಶಿವಾಜಿರಾವ್‌ನನ್ನು ಕೊಲೆಗೈದನು. ೧೭೯೦ರಲ್ಲಿ ಶಿವಾಜಿರಾವ್ ಸಹೋದರನಾದ ವೆಂಕಟರಾವ್ (ಸಿದ್ದೋಜಿ ಅಳಿಯ) ಎಲ್ಲರ ಪರವಾಗಿ ಟಿಪ್ಪು ವಿರುದ್ಧ ಹೋರಾಡಿ ಸೊಂಡೂರನ್ನು ಮತ್ತೆ ವಶಪಡಿಸಿಕೊಂಡನು. ೧೭೯೨ರಲ್ಲಿ ಇಂಗ್ಲಿಷರಿಗೂ ಟಿಪ್ಪುವಿಗೂ ಏರ್ಪಟ್ಟ ಒಪ್ಪಂದದಂತೆ ಘೋರ್ಪಡೆ ವಂಶದವರಿಗೆ ಸೊಂಡೂರಿನ ಅಧಿಕಾರವನ್ನು ನೀಡಲಾಯಿತು. ನಂತರ ಶ್ರೀರಂಗಪಟ್ಟಣದ ಅವನತಿಯವರೆಗೂ ಟಿಪ್ಪು ಸೊಂಡೂರನ್ನು ಮುತ್ತಿಗೆ ಹಾಕಲಿಲ್ಲ ಎಂಬ ಉಲ್ಲೇಖವಿದೆ.

೧೮೧೭ರಲ್ಲಿ ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಸರ್ ಥಾಮಸ್ ಮನ್ರೋ ನೇತೃತ್ವದಲ್ಲಿ ಪೇಶ್ವೆಯವರಿಗೂ ಇಂಗ್ಲಿಷರಿಗೂ ಆದ ಬೆಸ್ಸಿನ್ ಒಪ್ಪಂದದಂತೆ ಸೊಂಡೂರನ್ನು ಇಂಗ್ಲಿಷರಿಗೆ ಬಿಟ್ಟುಕೊಡಲಾಯಿತು. ಆಗ ಇಂಗ್ಲಿಷರು ಶಿವರಾವನಿಗೆ ೧೦೦೦ ಪೌಂಡಿಗೆ ಸಮವಾದ ಭೂಮಿ ಮತ್ತು ಅನುಕಂಪದ ಹಣ ನೀಡಿದರು. ಪೇಶ್ವೆ ಪತನದ ನಂತರ ೧೮೧೮ರಲ್ಲಿ ಸೊಂಡೂರನ್ನು ಮರಳಿ ಘೋರ್ಪಡೆ ಮನೆತನಕ್ಕೆ ವಹಿಸುವಂತೆ ಸರ್ಕಾರ ಅನುಮತಿ ನೀಡಿತು. ಶಿವರಾವನು ೧೮೨೯ರಲ್ಲಿ ರಾಜನಾಗಿ ಸೊಂಡೂರು ರಾಜ್ಯವನ್ನು ಮೊದಲ ಸ್ಥಿತಿಗೆ ತರಲು ಪ್ರಯತ್ನಿಸಿದ. ಶಿವರಾವನಿಗೆ ಮಕ್ಕಳಿಲ್ಲದ ಕಾರಣ ತಮ್ಮ ಭುಜಂಗರಾವನ ಮಗ ವೆಂಕಟರಾವನನ್ನು ದತ್ತು ತೆಗೆದುಕೊಳ್ಳಲಾಯಿತು. ಶಿವರಾವ ೧೮೪೦ರಲ್ಲಿ ನಿಧನ ಹೊಂದಿದ. ಆ ನಂತರ ಕಂಪನಿ ಸರಕಾರವು ವೆಂಕಟರಾವ ಅವರಿಗೆ ೧೮೪೧ರಲ್ಲಿ ಸನದುಕೊಟ್ಟು ಸೊಂಡೂರು ಸಂಸ್ಥಾನದ ರಾಜನೆಂದು ಘೋಷಿಸಲಾಯಿತು. ಈತ ೧೭ ವರ್ಷಗಳ ಕಾಲ ಆಳ್ವಿಕೆ ನಡೆಸಿದ.

ವೆಂಕಟರಾವ ಅವರು ಅಧಿಕಾರವನ್ನು ವಿಲಾಸಿ ಜೀವನಕ್ಕಾಗಿ ಬಳಸಿದರು. ಈತನಿಗೆ ಆರು ಜನ ಹೆಂಡತಿಯರು, ನಾನಿ ಸಾಹೇಬ, ಮಾನಾಬಾಯಿ, ಕೃಷ್ಣಬಾಯಿ, (ದಾದಿಬಾಯಿ) ಆಬಾಯಿ ಸಾಹೇಬ, ನಾನಿಬಾಯಿ, ರಾಣಿಬಾಯಿ. ಈತನ ಹಿರಿಯ ಮಗ ಶಿವಷಣ್ಮುಖರಾವ್, ಈತ ಅಪ್ರಬುದ್ಧನಾಗಿದ್ದಾಗಲೇ ಸನದನ್ನು ೧೮೬೩ರಲ್ಲಿ ಪಡೆದ. ಈತನು ಬಳ್ಳಾರಿಯ ‘ಲಂಡನ್ ಮಿಷನ್‌’ಗೆ ಸಂಬಂಧಿಸಿದ ಜೆ.ಮೆಕಾರ್ಥೆಯನ್ನು ತನ್ನ ಆಡಳಿತದ ಸಲಹೆಗಾರನನನ್ನಾಗಿ ನೇಮಕ ಮಾಡಿಕೊಂಡಿದ್ದನು. ಇವನಿಗೆ ಜನವರಿ ೨೪.೧೮೭೬ರಂದು ಗವರ್ನರ್ ಜನರಲ್ ಆದ ಲಾರ್ಡ್‌ನಾರ್ಥ್‌ ಬ್ರೂಕನ್ ‘ರಾಜ’ ಎಂಬ ಬಿರುದನ್ನು ಅಭಿದಾನ ಮಾಡಿದನು. ಶಿವಷಣ್ಮುಖರಾವ್ ೧೮೭೮ರಲ್ಲಿ ತೀರಿದ ನಂತರ ಐದನೆ ಹೆಂಡತಿ ನಾನಿಬಾಯಿಯ ಮಗ (ಜನನ ಮಾರ್ಚ್‌೨೯, ೧೮೫೦) ರಾಮಚಂದ್ರ ವಿಠಲರಾವ್ ಇದ್ದ ಮಕ್ಕಳಲ್ಲಿ ಬಲಿಷ್ಠನೂ ಚಾಣಾಕ್ಷನೂ ಆಗಿದ್ದ. ಕಾರಣ ಫೆಬ್ರವರಿ ೫, ೧೮೭೯ರಲ್ಲಿ ಬ್ರಿಟಿಷ್ ಕಂಪನಿ ಸರಕಾರವು ಸನದು ಕೊಟ್ಟು ಸೊಂಡೂರಿನ ರಾಜನನ್ನಾಗಿಸಿದರು. ರಾಮಚಂದ್ರ ವಿಠಲರಾವ್ ೨೯ ವರ್ಷಗಳ ಕಾಲ ಸೊಂಡೂರನ್ನು ಆಳಿದ. ಈತನಿಗೆ ಇಬ್ಬರು ಮಕ್ಕಳು. ಶಬಾಬಾಯಿ ಮತ್ತು ವೆಂಕಟರಾವ್ ಶಬಾಬಾಯಿಯನ್ನು ಬೆಳಗಾವಿ ಜಿಲ್ಲೆಯ ತೋದಗಲ್ ಜಹಗೀರುದಾರ ಗೋವಿಂದರಾವ್ ಬಾಪು ಸಹಿಬ್ ಸಿಲ್ಲೆ ಇವರಿಗೆ ಕೊಟ್ಟು ವಿವಾಹ ಮಾಡಲಾಯಿತು. ವಿಠಲರಾವ್‌ನ ಕೊನೆಯ ದಿನಗಳಲ್ಲಿ ವೆಂಕಟರಾವ್ ಹುಟ್ಟಿದ (ಜುಲೈ ೧೦, ೧೮೯೭), ಮುಂದೆ ವಿಠಲರಾವ್ ಡಿಸೆಂಬರ್ ೨, ೧೮೯೭ರಲ್ಲಿ ನಿಧನರಾದರು.

ಆರು ತಿಂಗಳ ಮಗು ವೆಂಕಟರಾವನಿಗೆ ಬ್ರಿಟಿಷ್ ಸರಕಾರವು ರಾಜಸನದು ನೀಡಿ ೧೮೯೩ರಲ್ಲಿ ರಾಜನೆಂದು ಘೋಷಿಸಿತು. ವೆಂಕಟರಾವ್ ಕಿರು ವಯಸ್ಕನಾಗಿದ್ದರಿಂದ ಈತನ ಪರವಾಗಿ ಸಹೋದರ ಮಾಲೋಜಿರಾವ್ ಬಾಳಾಸಾಹೇಬ ಮತ್ತು ಸಂಸ್ಥಾನದ ದಿವಾನರು ರಾಜ್ಯವಾಳಿದರು. ೧೯೨೩ರಲ್ಲಿ ಆಂಗ್ಲ ಸರಕಾರ ನೇರವಿರುವ ರಾಜಕೀಯ ಸಂಬಂಧ ಆಡಳಿತವನ್ನು ಸ್ಥಾಪಿಸಿತು. ಆಗ ಸೊಂಡೂರು ಸ್ವಾಯತ್ತ ಆಡಳಿತವನ್ನು ಹೊಂದಿದ ಪ್ರಮುಖ ಸಂಸ್ಥಾನಗಳಲ್ಲೊಂದಾಯಿತು. ರಾಜನ ಎಲ್ಲ ಕಂದಾಯ ಜವಾಬ್ದಾರಿ, ಪೊಲೀಸ್, ರಾಜ್ಯ, ನಾಗರೀಕ ಸೇವೆ, ನ್ಯಾಯ ತೀರ್ಮಾನ, ಕ್ರಿಮಿನಲ್ ನ್ಯಾಯಾಂಗ ಮುಂತಾದವುಗಳನ್ನು ಮದ್ರಾಸ್ ಸರ್ಕಾರ ನೋಡಿಕೊಳ್ಳುತ್ತಿತ್ತು. ರಾಜನು ಬಳ್ಳಾರಿ ಜಿಲ್ಲಾ ಕಲೆಕ್ಟರ್ ನ ಆದೇಶವನ್ನು ಪಾಲಿಸಬೇಕಿತ್ತು. ಮುಖ್ಯ ಹೊಣೆ, ಸನ್ನದು ನೀಡುವ ಹಕ್ಕು, ದತ್ತು ಸ್ವೀಕಾರ ಮುಂತಾದವನ್ನು ಬ್ರಿಟಿಷ್ ಸರಕಾರ ವಹಿಸುತ್ತಿತ್ತು. ರಾಜನ ಪ್ರತಿನಿಧಿಯಾದ (Agent)ವನು ತಾಮ್ರಪತ್ರಗಳ ದಾಖಲೆಗಳನ್ನು ಸಾಕ್ಷಾಧಾರಕ್ಕಾಗಿ ಇನಾಂ ರೀತಿಯಲ್ಲಿ ದೇಣಿಗೆ ಕೊಟ್ಟಿದ್ದಾನೆ. ಬಡನಿ, ವಡ್ಡ, ತಳವಾರ ಮುಂತಾದವರಿಗೆ ಗ್ರಾಮಗಳ ‘ನರಪತಿ’ ಎಂಬ ಬಿರುದು ನೀಡಿ ಇಂತಿಷ್ಟು ಗೌರವ ಹಣವನ್ನು ಕೊಡುತ್ತಿದ್ದರು ಎಂದು ಆಂಗ್ಲರ ಆಡಳಿತ ವರದಿಗಳಿಂದ ತಿಳಿಯುತ್ತದೆ.

ಸೊಂಡೂರು ಸಂಸ್ಥಾನದ ಕೊನೆಯ ದೊರೆ ಯಶವಂತರಾವ್, ಹಿಂದೂರಾವ್ ಘೋರ್ಪಡೆ. ರಾಮಚಂದ್ರ ವಿಠಲರಾವ್‌ನ ಮಗ ವೆಂಕಟರಾವನ ಆಡಳಿತದ ನಂತರ ಆತನ ಒಬ್ಬಳೇ ಮಗಳು ಸುಶೀಲ ರಾಜೆ ಸೊಂಡೂರಿನ ಸಂಸ್ಥಾನಕ್ಕೆ ವಾರಸುದಾರಳಾಗಬೇಕಿತ್ತು. ಆದರೆ ಈಗೆ ಮಹಿಳೆಯಾಗಿದ್ದ ಕಾರಣಕ್ಕೋ, ಅಪ್ರಾಪ್ತಳು ಎಂಬ ಕಾರಣಕ್ಕೋ ತಿಳಿಯದು. ಬ್ರಿಟಿಷ್ ಕಂಪನಿಯು ಧಾರವಾಡದ ಬಳಿ ಇರುವ ಗಜೇಂದ್ರಗಡ ಸಂಸ್ಥಾನದ ವಂಶಸ್ಥರಾದ ಯಶವಂತರಾವ್ ಹಿಂದೂರಾವ್ ಘೋರ್ಪಡೆಯವನರನ್ನು ೧೯೨೪ರಲ್ಲಿ ಸನದು ಕೊಟ್ಟು ರಾಜನನ್ನಾಗಿಸಿದರು. ಯಶವಂತರಾವರ ಮೂಲ ವಂಶಾವಳಿ ಲಭ್ಯವಿಲ್ಲ. ಹಿಂದೊಮ್ಮೆ ೧೭೭೬ರಲ್ಲಿ ಹೈದರ್ ಅಲಿ ದಾಳಿಯಿಂದಾಗಿ ಮುರಾರಿರಾವ್, ಶಿವರಾವ್ ಮಡಿದಾಗಲೂ ರಾಜಗಾದಿಗೆ ಮುಂದುವರೆಯಲು ಸೊಂಡೂರು ಸಂಸ್ಥಾನದಲ್ಲಿ ರಾಜ ವಂಶಸ್ಥರೇ ಇರಲಿಲ್ಲ. ಆಗ ರಕ್ತಸಂಬಂಧಿಗಳಾದ ದತ್ತವಾಡ ಸಂಸ್ಥಾನದ ಯಶವಂತರಾವ್ ಮಕ್ಕಳಾದ ಶಿವರಾವ್ ವೆಂಕಟರಾವ್ ಸೊಂಡೂರು ಸಂಸ್ಥಾನದ ಅಧಿಕಾರ ವಹಿಸಿಕೊಂಡಿದ್ದರು. ಈಗಲೂ ಅಂತಹದ್ದೇ ಸಂದರ್ಭ. ಗಜೇಂದ್ರಗಡದ ವಾರಸುದಾರರೂ ಸೊಂಡೂರು ಘೋರ್ಪಡೆ ಮನೆತನದ ರಕ್ತ ಸಂಬಂಧಿಯೂ ಆದ ಯಶವಂತರಾವ್ ಹಿಂದೂರಾವ್ ಘೋರ್ಪಡೆ (೧೯೨೮-೧೯೪೯) ಸೊಂಡೂರಿನ ರಾಜರಾದರು. ಬಳ್ಳಾರಿಯ ಯಜಮಾನ ಶಾಂತರುದ್ರಪ್ಪನವರು ‘ಸುಶೀಲ ರಾಜೆಗೆ ನ್ಯಾಯವಾಗಿ ಸಿಗಬೇಕಾದ ರಾಜಗಾದಿ ಬ್ರಿಟಿಷರ ಕುತಂತ್ರದಿಂದಾಗಿ ಯಶವಂತರಾವ್ ಅವರಿಗೆ ಸಿಕ್ಕಿತು. ಇವರು ಸೊಂಡೂರಿನ ವಾರಸುದಾರರಲ್ಲ’ ಎಂದು ಕರಪತ್ರ ಹಂಚಿದರು. ಯಶವಂತರಾವ್ ಹಿಂದೂರಾವ್ ಘೋರ್ಪಡೆಯವರ ಹಿರಿಯ ಮಗನೇ ಮುರಾರಿರಾವ್ ಯಶವಂತರಾವ್ ಘೋರ್ಪಡೆ (ಎಂ.ವೈ.ಘೋರ್ಪಡೆ).

ಸೊಂಡೂರು ಅರಸು ಮನೆತನದ ಚರಿತ್ರೆಯನ್ನು ಭಾರತ ಸರ್ಕಾರದ ಗೆಜೆಟಿರ್ನಲ್ಲಿ ದಾಖಲಿಸಲಾಯಿತು. ಈ ಚರಿತ್ರೆಯನ್ನೇ ಘೋರ್ಪಡೆ ಮನೆತನ ತಮ್ಮ ಪರವಾಗಿ ದಾಖಲಿಸಲು ಅಧಿಕಾರವನ್ನು ಬಳಸಲಾಯಿತು ಎಂದು ಹುಬ್ಬಳ್ಳಿಯಿಂದ ಬರುತ್ತಿದ್ದ ‘ಪ್ರಪಂಚ’ ಪತ್ರಿಕೆಯಲ್ಲಿ ಪಾಟೀಲ ಪುಟ್ಟಪ್ಪ ಬರೆಯುತ್ತಾರೆ. ಅದರ ಒಂದು ಭಾಗ ಹೀಗಿದೆ: ‘ಎಂ.ವೈ.ಘೋರ್ಪಡೆ ಕರ್ನಾಟಕದ ಅರ್ಥಸಚಿವರಾದ ಮೇಲೆ ನವೆಂಬರ್ ೯,೧೯೭೨ರಲ್ಲಿ ಬಳ್ಳಾರಿ ಜಿಲ್ಲಾ ಗೆಜೆಟಿಯರ್ ಪ್ರಕಟವಾಯಿತು. ಇದರಲ್ಲಿ ಸೊಂಡೂರಿನ ಬಗ್ಗೆ ಒಳ್ಳೊಳ್ಳೆ ಮಾತುಗಳನ್ನು ಬರೆಯಲಾಯಿತು. ಗಾಂಧೀಜಿ ಕೊಟ್ಟ ದೇವಾಲಯ ಪ್ರವೇಶದ ಸರ್ಟಿಫಿಕೇಟನ್ನು ಹಾಕಿದ್ದಾರೆ. ಆದರೆ ಘೋರ್ಪಡೆಯವರು ರೈತರ ಜಮೀನನ್ನು ವಶಪಡಿಸಿಕೊಂಡು ಬಳಸುತ್ತಾರೆಂದು ಗೆಜೆಟಿಯರ್ ನಲ್ಲಿ ಬರೆದಿಲ್ಲ. ಗೆಜೆಟಿಯರ್ನ ೮೭ನೇ ಪುಟದಲ್ಲಿ ಸೊಂಡೂರಿನ ಘೋರ್ಪಡೆ ರಾಜರ ವಂಶಾವಳಿಯನ್ನು ಕೊಟ್ಟಿದೆ. ವಿಠಲರಾಯ ಅವರ ಮಗ ವೆಂಕಟರಾವರ ಮಗ ಯಶವಂತರಾವ್ ಎಂದು ವಂಶವೃಕ್ಷದಲ್ಲಿ ಬರೆಯಲಾಗಿದೆ. ಆದರೆ ವಾಸ್ತವೆಂದರೆ ದೊರೆ ವೆಂಕಟರಾವ್ ೧೯೨೭ರಲ್ಲಿ ಮರಣ ಹೊಂದಿದರು. ಅವರಿಗೆ ಇದ್ದ ಸಂತಾನವೆಂದರೆ ಸುಶೀಲ ರಾಜೆ ಒಬ್ಬಳೆ. ತಮ್ಮ ತಂದೆಯ ಮೃತದೇಹದೊಂದಿಗೆ ಬೊಂಬಾಯಿಯಿಂದ ಬರುತ್ತಿದ್ದ ಅವಳನ್ನು ಯಶವಂತರಾವ್ ಅವರು ಅಕ್ಕಲಕೋಟೆಯಲ್ಲಿ ಸಂಬಂಧಿಕರ ಬಳಿ ಉಳಿಯುವಂತೆ ಮಾಡಿ, ಇವರು ಸೊಂಡೂರನ್ನು ಹಿಡಿದುಕೊಂಡರು’[4] ಹೀಗೆ ‘ಗೆಜೆಟಿಯರ್‌ನಲ್ಲಿ ದಾಖಲಾದ ಚರಿತ್ರೆಯನ್ನು ತಮ್ಮ ಅಧಿಕಾರದಿಂದ ತಾವೇ ಸೊಂಡೂರಿನ ವಂಶಜರೆಂದು ನಿರೂಪಿಸುವಂತೆ ಮಾಡಲಾಗಿದೆ. ವಿಪರ್ಯಾಸವೆಂದರೆ ಗೆಜೆಟಿಯರ್ ನೋಡಿ ಚರಿತ್ರೆ ದಾಖಲಿಸುವ ಅಧ್ಯಯನಕಾರರೆಲ್ಲಾ ಅದುವೇ ಸೊಂಡೂರು ಚರಿತ್ರೆ ಎಂದು ಮತ್ತೆ ಮತ್ತೆ ಬರೆಯುತ್ತ ಬಂದಿದ್ದಾರೆ.

ಯಶವಂತರಾವ್ ಘೋರ್ಪಡೆಯವರಿಗೆ ೭ ಜನ ಮಕ್ಕಳು. ಹಿರಿಯ ಮಗ ಮುರಾರಿರಾವ್ ಯಶವಂತರಾವ್ ಘೋರ್ಪಡೆ (ಎಂ.ವೈ), ರಣಜಿತ್ ಸಿಂಗ್ ಘೋರ್ಪಡೆ, ವಿಜಯಸಿಂಹ ಘೋರ್ಪಡೆ, ಶಿವಾಜಿರಾವ್ ಘೋರ್ಪಡೆ, ವೆಂಕಟರಾವ್ ಘೋರ್ಪಡೆ, ನಿರ್ಮಲಾದೇವಿ ಘೋರ್ಪಡೆ, ವಿಜಯದೇವಿ ಘೋರ್ಪಡೆ. ಇವರಲ್ಲಿ ರಾಜಕೀಯ ಪ್ರವೇಶಿಸಿದ್ದು ಎಂ.ವೈ.ಘೋರ್ಪಡೆಯವರು. ಇವರು ಡಿಸೆಂಬರ್ ೭, ೧೯೩೧ರಲ್ಲಿ ಜನಿಸಿದರು. ಇವರ ಬಾಲ್ಯದ ಶಿಕ್ಷಣ ಸೊಂಡೂರಿನಲ್ಲಾಯಿತು. ೧೯೫೨ರಲ್ಲಿ ಎಂ.ಎ. ಎಕನಾಮಿಕ್ಸ್, ಇಂಗ್ಲೆಂಡಿನ ಕೇಮ್ ಬ್ರಿಜ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ೧೯೫೯ರಲ್ಲಿ ಉಪಚುನಾವಣೆಯ ಮೂಲಕ ರಾಜಕೀಯ ಪ್ರವೇಶವಾಯಿತು. ೧೯೭೨ರಲ್ಲಿ ದೇವರಾಜ ಅರಸು ಸರ್ಕಾರದಲ್ಲಿ ಅರ್ಥಸಚಿವರಾಗಿದ್ದರು. ವೀರೇಂದ್ರ ಪಾಟೀಲ್, ವೀರಪ್ಪ ಮೊಯಿಲಿ, ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಪಂಚಾಯತ್ ರಾಜ್ ಮಂತ್ರಿಯಾಗಿದ್ದರು. ಇವರು ಅತ್ಯುತ್ತಮ ಛಾಯಾಚಿತ್ರಕಾರರು. ೧೯೬೮ರಲ್ಲಿ ವೈಲ್ಡ್ ಲೈಫ್‌ಗೆ ಸದಸ್ಯರಾಗಿದ್ದರು. ಇವರಿಗೆ ಬ್ರಿಟನ್‌ನಲ್ಲಿ ರಾಯಲ್ ಫೋಟೋಗ್ರಾಫಿಕ್ಸ್ ಸೊಸೈಟಿ ಆಫ್ ಗ್ರೇಟ್ ಬಿಟ್ (ಎಫ್.ಆರ್.ಪಿ.ಎಸ್‌) ಸಂಸ್ಥೆಯಿಂದ ಫೆಲೋಷಿಪ್ ಸಿಕ್ಕಿದೆ. ಇವರ ಅತ್ಯುತ್ತಮ ಪೋಟೋ ಸಂಗ್ರಹದ ‘ಸನ್‌ಲೈಟ್ ಆಂಡ್ ಶ್ಯಾಡೋಸ್’ ಎನ್ನುವ ಪುಸ್ತಕ ೧೯೮೩ರಲ್ಲಿ ಬಂದಿದೆ. ಪೋಟೋಗ್ರಫಿ, ಬೇಟೆ ಮುಂತಾದ ಬ್ರಿಟಿಷ್ ಅಧಿಕಾರಿಗಳ, ಶ್ರೀಮಂತ ವರ್ಗದ ಹವ್ಯಾಸಗಳು ಸಹಜವಾಗಿಯೆ ಎಂ.ವೈ.ಘೋರ್ಪಡೆಯವರಿಗಿವೆ. ಇತ್ತೀಚೆಗೆ ರಾಜಕೀಯದಿಂದ ನಿವೃತ್ತಿ ಹೊಂದಿ ವಿಶ್ರಾಂತಿ ಜೀವನದಲ್ಲಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ.

ಸೊಂಡೂರು ಭಾಗದ ಒಂದೊಂದು ಹಳ್ಳಿಗಳಿಗೆ ರಾಜ ಮನೆತನದವರ ಹೆಸರು ಇಡಲಾಗಿದೆ. ಈ ರೀತಿ ಅರಸು ಮನೆತನದ ನೆನಪು ಉಳಿದಿದೆ. ವ್ಯಂಗ್ಯವೆಂದರೆ ಕೆಲ ಹಳ್ಳಿಗಳು ‘ರಾಜರ’ ಹೆಸರನ್ನಿಟ್ಟುಕೊಂಡೂ ದಾರಿದ್ರ್ಯ ಬಡತನದಿಂದ ನರಳುತ್ತಿವೆ. ಅವುಗಳೆಂದರೆ ಯಶವಂತನಗರ (ಕಣಿವೆಹಳ್ಳಿ), ರಣಜಿತ್‌ಪುರ (ಮುದಕಲ್ ಕುಂಟೆ), ನಾರಾಯಣಪುರ (ಅಪ್ಪೇನಳ್ಳಿ), ದೌಲತ್ಪುರ (ಕೋನಾಪುರ), ವಿಠಲನಗರ (ನವಲಹಟ್ಟಿ), ಭುಜಂಗನಗರ (ಹೊಸಳ್ಳಿ), ತಾರಾನಗರ (ಎತ್ತಿನಹಟ್ಟಿ), ನರಸಿಂಗಾಪುರ (ನರಸಾಪುರ), ಲಕ್ಷ್ಮೀಪುರ (ಚಿಕ್ಕಸೊಂಡೂರು), ಜಯಸಿಂಗ್‌ಪುರ (ಮೇದರಹಳ್ಳಿ), ಸುಶೀಲನಗರ (ಬಾವಿಹಳ್ಳಿ).[5] ಇನ್ನು ಮುಂತಾದ ಹಳ್ಳಿಗಳಿಗೆ ಮೂಲ ಹೆಸರಿದ್ದು ರಾಜವಂಶ ಈ ಹೊಸ ಹೆಸರುಗಳನ್ನು ನಾಮಕರಣ ಮಾಡಿದೆ. ಊರಿನ ಬಹುತೇಕರು ಈಗಲೂ ಮೂಲ ಹೆಸರಿನಿಂದ ಕರೆಯುತ್ತಾರೆ.


[1] ಬಳ್ಳಾರಿ ಜಿಲ್ಲೆಯ ಪಾಳೆಯಗಾರರು, ಪು. ೯೦-೯೧

[2] ಸೊಂಡೂರಿನ ಘೋರ್ಪಡೆ ರಾಜಮನೆತನ, ಪು. ೧೪

[3] ಯಜಮಾನ ಶಾಂತರುದ್ರಪ್ಪ ಅವರ ಅಪ್ರಕಟಿತ ಕಾದಂಬರಿ, ಪು. ೮

[4] ‘ಪ್ರಪಂಚ’, ಜನವರಿ ೧೯,೧೯,೭೫ ಪು. ೨೬

[5] ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳು, ಪು. ೧೦