ಇದು ಸೊಂಡೂರು ಸಂಸ್ಥಾನದ ೧೯೪೮ರ ಸಂವಿಧಾನ. ಭಾರತ ಸ್ವಾತಂತ್ರ್ಯವಾದರೂ ಸಣ್ಣಪುಟ್ಟ, ಸಂಸ್ಥಾನಗಳು ಪರಂಪರೆಯಿಂದ ಆಳಿಕೊಂಡು ಬಂದ ಅಧಿಕಾರವನ್ನು ಅಷ್ಟು ಬೇಗನೆ ಬಿಟ್ಟುಕೊಡಲು ತಯಾರಿರರಿಲ್ಲ. ಹೀಗಾಗಿ ಒಂದು ಅರ್ಥದಲ್ಲಿ ಬ್ರಿಟಿಷರಿಂದ ಸ್ವತಂತ್ರ ದೊರೆತರೂ, ಸ್ಥಳೀಯ ಅರಸರುಗಳಿಂದ ಆಯಾ ಭಾಗದ ಜನತೆಗೆ ಬಿಡುಗಡೆ ಸಿಕ್ಕಿರಲಿಲ್ಲ. ಸಂಡೂರು ಸಂಸ್ಥಾನವೂ ಸಹ ೧೯೪೭ರಲ್ಲಿ ಸೊಂಡೂರು ಜನತೆಗೆ ಸ್ವತಂತ್ರ್ಯ ನೀಡಲು ನಿರಾಕರಿಸಿತು. ಈ ಕಾರಣಕ್ಕಾಗಿ ಭಾರತದಲ್ಲಿ ಸಂಸ್ಥಾನಿ ಅರಸರ ಆಡಳಿತದ ವಿರುದ್ಧ ನಡೆಯುತ್ತಿದ್ದ ಆಂದೋಲನದ ಪ್ರಭಾವವು ಸೊಂಡೂರು ಜನತೆಯ ಮೇಲಾಯಿತು. ಈ ಸಂದರ್ಭದಲ್ಲಿ ಆಡಳಿತಾತ್ಮಕ ನಿಯಂತ್ರಣ ಹೇರಲು ರೂಪಗೊಂಡದ್ದು ೧೯೪೮ರ ಸೊಂಡೂರು ಜಾಹಿರುನಾಮೆ.

ಪ್ರತಿಭಟನೆಗಳು ಪ್ರಾರಂಭವಾಗುವುದೇ ಆ ಪ್ರತಿಭಟನೆಗೆ ಕಾರಣವಾದ ಪ್ರಮುಖ ಸಂಕೇತಗಳನ್ನು ಸುಡುವ ಅಥವಾ ಅಪಮಾನಗೊಳಿಸುವ ಮೂಲಕ. ನಾವೀಗ ದಿನಂಪ್ರತಿ ಪತ್ರಿಕಾ ವರದಿಗಳಲ್ಲಿ, ಟಿ.ವಿ, ವಾರ್ತೆಗಳಲ್ಲಿ ಚಳವಳಿಯ ಸಂಕೇತವಾಗಿ ಪ್ರತಿಕೃತಿ ದಹನದಂತಹ ವರದಿಗಳನ್ನು ನೋಡುತ್ತೇವೆ. ಇದು ತಮ್ಮ ಆಕ್ರೋಶ, ಅಸಹಾಯಕತೆಯನ್ನು ಪ್ರತಿಭಟಿಸಬೇಕೆಂಬ ಒಳತುಡಿತವನ್ನು ತಿಳಿಸುತ್ತದೆ. ೧೯೭೩ರ ಸೊಂಡೂರು ಭೂ ಹೋರಾಟದ ಪ್ರಾರಂಭವಾದದ್ದು ೧೯೪೮ರ ಸೊಂಡೂರು ಜಾಹಿರುನಾಮೆಯ ಒಂದು ಪ್ರತಿಯನ್ನು ಜನತಾ ಪ್ರತಿಭಟನೆಯ ಸಂಕೇತವಾಗಿ ಸಭೆಯಲ್ಲಿ ಸುಡುವ ಮೂಲಕ. ಅಂದರೆ ಸೊಂಡೂರು ಸಂಸ್ಥಾನದ ಸಂಕೇತದಂತಿದ್ದ ಜಾಹಿರುನಾಮೆಯನ್ನು ಸುಡುವುದು, ಮಹಾರಾಜರ ಆಡಳಿತವನ್ನೇ ನಾಶ ಮಾಡುವ ಜನತೆಯ ಮನೋಸ್ಥಿತಿಯನ್ನು ತೋರಿಸುತ್ತಿತ್ತು.

ಸೊಂಡೂರು ಸಂಸ್ಥಾನ ೧೯೪೮ರ ಹೊತ್ತಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯವರ ಆಧೀನದಲ್ಲಿ ಆಡಳಿತ ನಡೆಸಬೇಕಿತ್ತು. ಈ ಸಂಸ್ಥಾನ ತೆಗೆದುಕೊಳ್ಳುವ ಪ್ರಮುಖ ತೀರ್ಮಾನಗಳಿಗೆ, ಕಾನೂನು ಮತ್ತು ಆಡಳಿತಾತ್ಮಕ ನಿಯಮಾವಳಿಗಳಿಗೆ ಮದ್ರಾಸ್ ಪ್ರೆಸಿಡೆನ್ಸಿಯವರ ಒಪ್ಪಿಗೆ ಬೇಕಿತ್ತು. ಈ ಹಿಂದೆ ೧೯೩೭ರಲ್ಲಿ ಸೊಂಡೂರು ಇನಾಂ ನಿಯಂತ್ರಣ ಕಾನೂನನ್ನು ಜಾರಿಗೆ ತಂದಾಗಲೂ, ೧೯೪೬ರಲ್ಲಿ ರಾಜ್ಯ ಸಂವಿಧಾನಿಕ ಕಾನೂನನ್ನು ಜಾರಿಗೊಳಿಸಿದಾಗಲೂ ತಂದಾಗಲೂ, ಮದ್ರಾಸ್ ಪ್ರೆಸಿಡೆನ್ಸಿಯ ಒಪ್ಪಿಗೆಯನ್ನು ಪಡೆಯಲಾಗಿತ್ತು. ಒಂದು ಕಡೆ ಪ್ರೆಸಿಡೆನ್ಸಿಯು ಒಪ್ಪಿಗೆಗಾಗಿ ಜನಾಭಿಪ್ರಾಯವನ್ನೂ ನಿರೀಕ್ಷಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಮಹಾರಾಜರಿಗೆ ಆಪ್ತವಾಗಿರುವ ಕೆಲವರಿಂದ ಜನಾಭಿಪ್ರಾಯದ ಒಂದು ಚಿತ್ರವನ್ನು ಪ್ರೆಸಿಡೆನ್ಸಿಗೆ ತೋರಿಸಿ ಕಾಯ್ದೆ ಕಾನೂನುಗಳಿಗೆ ಒಪ್ಪಿಗೆ ಪಡೆಯಲಾಗುತ್ತಿತ್ತು. ಇಂತಹ ರಾಜಕೀಯ ತಂತ್ರದಿಂದಾಗಿ ದಮನಕಾರಿ ನೀತಿ, ನಿಯಮಾವಳಿಗಳು ಸೊಂಡೂರು ಜನತೆಯನ್ನು ಶೋಷಿಸಲು ಕಾರಣವಾಯಿತು.

೧೯೪೮ರ ಜಾಯಿರುನಾಮೆ ಜಾರಿಯಾಗುವಾಗಲೂ ಇಂತಹ ರಾಜಕೀಯ ತಂತ್ರ ಕೆಲಸ ಮಾಡಿತ್ತು. ಎಲಿಗಾರ ನಾಗರಾಜಪ್ಪನವರು ಈಗಾಗಲೇ ಸೊಂಡೂರು ಸಂಸ್ಥಾನದಲ್ಲಿದ್ದ ಪ್ರೊಕ್ಲಮೇಷನ್ ೧೯೪೮ರಲ್ಲಿ ಮತ್ತೆ ಸ್ಟೇಟ್ ಆಕ್ಟ್ ಆಗಿ ಬದಲಾದ ಬಗೆಗೆ ಹೀಗೆ ಹೇಳುತ್ತಾರೆ:

ಮದ್ರಾಸ್ ಪ್ರೆಸಿಡೆನ್ಸಿಯು ೧೯೪೮ರ ಸ್ಟೇಟ್ ಆಕ್ಟ್ ಅಂತ ಜಾರಿಗೊಳಿಸ್ಲಿಕ್ಕೆ ಸೊಂಡೂರು ಪ್ರಜೆಗಳ ಅಬ್ಜಕ್ಷನ್ ಏನಾದ್ರೂ ಇದ್ದರೆ ಮದ್ರಾಸಿಗೆ ಬಂದು ಮಂಡಿಸಬಹುದು ಎಂಬ ಅಹವಾಲನ್ನು ಹೊರಡಿಸಿತು. ಪ್ರೆಸಿಡೆನ್ಸಿಯು ಇಂತಹ ಅಹವಾಲು ಘೋಷಣೆಯು ಭುಜಂಗನಗರದ (ಹೊಸಳ್ಳಿ) ಗುರುಶಾಂತಯ್ಯ ಮೇಸ್ಟ್ರಗೆ ತಿಳಿಯಿತು. ಮೇಷ್ಟ್ರಗೆ ಇಂಗ್ಲೀಷ್ ಚೆನ್ನಾಗಿ ಬರ್ತಾ ಇದ್ದಿದ್ದರಿಂದ ಈ ಆಕ್ಟ್ ಜಾರಿಗೆ ಬಂದ್ರೆ ಮತ್ತೆ ರಾಜರ ದಬ್ಬಾಳಿಕೆ ತಪ್ಪಿದ್ದಲ್ಲ ಇದನ್ನು ಹೇಗಾದ್ರು ಮಾಡಿ ತಡೀಬೇಕು ಅನ್ಕೊಂಡು ನಮ್ಮ ತಂದೆ (ಎಲಿಗಾರ ತಿಮ್ಮಪ್ಪ)ಯವರಿಗೆ ಹೇಳಿದ್ರು. ಆಗ ನನ್ನ ತಂದೆಗೆ ೧೮ ವರ್ಷ. ಗುರುಶಾಂತಯ್ಯನವರು ಮೇಷ್ಟ್ರು ಆಗಿದ್ದರಿಂದ ಮದ್ರಾಸ್‌ಗೆ ಹೋಗಿ ಪ್ರೊಕ್ಲಮೇಷನ್‌ಗೆ ವಿರುದ್ಧವಾಗಿ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ ಇರಲಿಲ್ಲ. ಹೀಗಾಗಿ ಅವರು ನನ್ನ ತಂದೆಯನ್ನು ತಯಾರಿ ಮಾಡಿದ್ರು. ಆಗ ಮದ್ರಾಸ್‌ವರೆಗೂ ಹೋಗ್ಲಿಕ್ಕೆ ಹೆಚ್ಚಿನ ಹಣ ಬೇಕಿತ್ತು. ನಮ್‌ತಂದೆಯವರಿಗೂ ಹಣದ ತೊಂದ್ರೆ ಇತ್ತು. ಮನೆಯಲ್ಲಿ ಶೇಂಗ ಇದ್ವು. ಇವನ್ನೇ ಒಂದೆರಡು ಚೀಲ ಹಾಕ್ಕೊಂಡು ಆದವಾನಿಗೆ ಹೋದ್ರು. ಶೇಂಗ ಮಾರಿದ ಪಟ್ಟಿ ಬೇಗ ಆಗ್ಲೇ ಇಲ್ಲ. ತುಂಬ ತಡವಾಗಿ ಪಟ್ಟಿ ಹಣ ಸಿಗುವ ಹೊತ್ತಿಗೆ ಮದ್ರಾಸಿಗೆ ಹೋಗೋ ಟ್ರೇನು ಮಿಸ್‌ಆಗಿತ್ತು. ಇದರಿಂದಾಗಿ ಮರುದಿವಸ ಮದ್ರಾಸ್‌ತಲುಪುವ ಹೊತ್ತಿಗೆ ಪ್ರೊಕ್ಲಮೇಷನ್‌ಗೆ ಸಂಬಂಧಿಸಿದ ಮೀಟಿಂಗ್‌ಮುಗಿದು ಸೊಂಡೂರು ಪ್ರಜೆಗಳಿಂದ ಯಾವುದೇ ತಕರಾರಿಲ್ಲ ಹಿಂದಿನ ಪ್ರೊಕ್ಲಮೇಷನ್ನ್ನೇ ೧೯೪೮ರ ಸ್ಟೇಟ್‌ಆಕ್ಟ್ ಎಂದು ಘೋಷಿಸಬಹುದೆಂದು ಮದ್ರಾಸ್‌ಪ್ರೆಸಿಡೆನ್ಸಿ ಅನುಮತಿ ನೀಡಿಯಾಗಿತ್ತು. ಆ ಮೀಟಿಂಗಿನ ದಿನವೇನಾದ್ರೂ ನಮ್ಮ ತಂದೆ ಸೊಂಡೂರು ರಾಜರ ದಬ್ಬಾಳಿಕೆಯನ್ನು, ದಮನಕಾರಿ ಆಡಳಿತವನ್ನು ಪ್ರೆಸಿಡೆನ್ಸಿ ಮೀಟಿಂಗ್‌ನಲ್ಲಿ ಬಹಿರಂಗ ಪಡಿಸಿದ್ರೆ, ೧೯೪೮ರ ಸ್ಟೇಟ್‌ಆಕ್ಟ್ ಜಾರಿಯಾಗೋದು ಅಷ್ಟು ಸುಲಭವಾಗಿರಲಿಲ್ಲ. ಈ ನೋವು ನಮ್ಮ ತಂದೆಯವರಿಗೆ ತುಂಬಾ ಕಾಡಿತ್ತು. ಇದರ ಬಗ್ಗೆ ನಮ್ಮತ್ರ ಹೇಳ್ತಾ ಇದ್ರು.

ಈ ವಿವರದಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಸೊಂಡೂರಿನ ಜನತೆ ಶೈಕ್ಷಣಿಕವಾಗಿ ತುಂಬಾ ಹಿಂದುಳಿದವರಾಗಿದ್ದರು. ರಾಜರ ವಿರುದ್ಧ ಪ್ರತಿಭಟಿಸುವಂತಹ ಪ್ರಜ್ಞೆ ಬಹುತೇಕರಿಗೆ ಇರಲಿಲ್ಲ. ಅಕ್ಷರವಂತ ಅಲ್ಪಸಂಖ್ಯಾತರ ಪ್ರತಿಭಟನೆಗಳಿಗೂ ಇವರ ಸಹಕಾರ ದೊರೆಯುತ್ತಿರಲಿಲ್ಲ. ಮದ್ರಾಸ್‌ಪ್ರೆಸಿಡೆನ್ಸಿ ಸಹ ಸೊಂಡೂರು ಸಂಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಕಾಯ್ದೆ ಕಾನೂನುಗಳನ್ನು ರಾಜರ ಹಿತಾಸಕ್ತಿಗೆ ಪೂರಕವಾಗಿ ಜಾರಿಗೊಳಿಸುತ್ತಿತ್ತು. ಎಲಿಗಾರ ತಿಮ್ಮಪ್ಪ ನವರಿಗೆ ಪ್ರೆಸಿಡೆನ್ಸಿಯಲ್ಲಿ ರಾಜರ ದುರಾಡಳಿತದ ಬಗ್ಗೆ ದೂರಿದರೂ ಒಬ್ಬರ ಅಭಿಪ್ರಾಯ ಶಕ್ತಿಯುತವಾಗಿ ಪರಿಣಮಿಸಿದೇ ಹೋಗುತ್ತಿತ್ತು. ಗುರುಶಾಂತಯ್ಯನಂತಹ ಶಿಕ್ಷಕರು ಪ್ರಜ್ಞಾವಂತರಾಗಿದ್ದರೂ ತಾವೊಬ್ಬ ಸರ್ಕಾರಿ ನೌಕರರಾಗಿ ಸಂಸ್ಥಾನವನ್ನು ಎದುರು ಹಾಕಿಕೊಳ್ಳುವಲ್ಲಿ ಹಿಂಜರಿಯುತ್ತಿದ್ದರು. ಈ ಕಾರಣಗಳೇ ೧೯೪೮ರ ಸ್ಟೇಟ್‌ಆಕ್ಟ್ ಜಾರಿಗೊಳ್ಳಲು ಸಹಾಯಕವಾದವು.

ಸೊಂಡೂರು ಸಂಸ್ಥಾನದ ಮಹಾರಾಜರ ಆಡಳಿತದ ಒಟ್ಟು ಚಿತ್ರಣವನ್ನು ೧೯೪೮ರ ಸ್ಟೇಟ್‌ಆಕ್ಟ್ ಒಳಗೊಂಡಿದೆ. ಇಲ್ಲಿ ಒಂದು ರಾಜಶಾಹಿ ಮನೆತನ ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುವಂತೆ ಕಾಣುತ್ತಲೇ ಒಳ ತಂತ್ರಗಳ ಮೂಲಕ ನಿರಾಕರಿಸುವ ಧೋರಣೆಗಳು ಇವೆ. ಸೊಂಡೂರು ಜನರ ಪ್ರತಿಕ್ರಿಯೆಗಳು ಜನಾಭಿಪ್ರಾಯವನ್ನು ಗಮನಿಸಿದರೆ ಈ ಆಕ್ಟಿನೊಳ ಗಿನ ಜನಪರವಾದ ಅಂಶಗಳು ಕೇವಲ ಕಾನೂನಿನಲ್ಲಿ ಮಾತ್ರ ಉಳಿದಂತಿತ್ತು. ೧೯೪೮ರ ಪ್ರೊಕ್ಲಮೇಷನ್‌ಒಳಗೊಂಡ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬಹುದು.

ಒಟ್ಟು ಒಂಬತ್ತು ಅಧ್ಯಾಯದಲ್ಲಿ ವಿಷಯಗಳನ್ನು ವಿಭಾಗಿಸಲಾಗಿದೆ. ಮೊದಲ ಅಧ್ಯಾಯ ಸಂಸ್ಥಾನದ ಸಾಮಾನ್ಯ ವಿವರಗಳನ್ನು ಒಳಗೊಂಡಿದೆ. ಸೊಂಡೂರು ಭಾರತೀಯ ಸ್ವತಂತ್ರ ರಾಜ್ಯಗಳಲ್ಲಿ ಒಂದು. ಬೆಟ್ಟಗುಡ್ಡಗಳ ರುದ್ರಮನೋಹರ ಸ್ಥಳ ಇದಾಗಿದೆ. ೧೮೮೯ರಲ್ಲಿ ಬ್ರೂಸ್‌ಫ್ರೂಟ್‌ಭೌಗೋಳಿಕ ಸರ್ವೇಕ್ಷಣೆ ಮಾಡಿ `Sandur territory is One of the richest iron yielding Center in the whole world’ ಎಂದು ಉದ್ಗರಿಸಿದ ಉಲ್ಲೇಖವಿದೆ. ಇಲ್ಲಿನ ದಟ್ಟವಾದ ಕಾಡಿನಲ್ಲಿ ಶ್ರೀಗಂಧದ ಮರಗಳು ಇವೆ. ಬೆಲೆಬಾಳುವ ಗಿಡಮೂಲಿಕೆಗಳು ಅಪಾರವಾಗಿವೆ. ಇಂತಹ ಭೌಗೋಳಿಕ ವಿವರಗಳೆಲ್ಲ ಒಂದು ಸಂಪದ್ದರಿತ ರಾಜ್ಯವನ್ನು ಪ್ರತಿನಿಧಿಸುವ ರೀತಿಯಲ್ಲಿ ಮುಂದುವರೆಯುತ್ತವೆ. ಹಾಗೆಯೇ ಪರೋಕ್ಷವಾಗಿ ಈ ಎಲ್ಲಾ ನೈಸರ್ಗಿಕ ಸಂಪತ್ತು ರಾಜವಂಶದ ಅಧೀನದಲ್ಲೇ ಬರುತ್ತದೆ ಎನ್ನುವ ಸೂಚನೆಗಳಿವೆ.

ಜಾಹಿರುನಾಮೆಯಲ್ಲಿ ಉಲ್ಲೇಖಗೊಂಡಂತೆ ಆಗ ಸೊಂಡೂರಿನಲ್ಲಿ ೧೬ ಸಾವಿರ ಜನ ಸಂಖ್ಯೆಯಿತ್ತು. ಹೆಚ್ಚಿನವರು ಕೃಷಿಯಾಶ್ರಿತರು. ಮಳೆ ಪ್ರಮಾಣ ಸರಾಸರಿ ೩೪.೩೭ನಷ್ಟಿತ್ತು. ಆಗಸ್ಟ್‌, ಸೆಪ್ಟಂಬರ್ ನಲ್ಲಿ ಉತ್ತಮ ಮಳೆ ಬೀಳುತ್ತದೆ. ಜನಸಂಖ್ಯೆಯ ೧೭%ರಷ್ಟು ಮುಸ್ಲಿಮರಿದ್ದಾರೆ. ಹರಿಜನ, ನಾಯಕರು, ಕುರುಬರು, ಲಿಂಗಾಯತರು, ಮರಾಠರು, ಬ್ರಾಹ್ಮಣರು ಪ್ರಮುಖ ಜಾತಿಸಮುದಾಯಗಳಾಗಿವೆ. ಈ ಎಲ್ಲಾ ಜಾತಿಸಮುದಾಯಗಳನ್ನು ಮಹಾರಾಜರು ಸಮಾನ ದೃಷ್ಟಿಯಿಂದ ಕಾಣುತ್ತಾರೆ. ಮಹಾರಾಜನು ಸಂಸ್ಥಾನದ ಸರ್ವಾಧಿಕಾರಿಯಾಗಿದ್ದು, ಸಂಸ್ಥಾನದ ಎಲ್ಲಾ ಬಗೆಯ ನಿರ್ಧಾರಗಳ ಮೇಲೆ ಆತನಿಗೆ ಅಧಿಕಾರವಿರುತ್ತದೆ. ಪ್ರಜೆಗಳು ಅದನ್ನು ಗೌರವಿಸಬೇಕು. ಸೊಂಡೂರು ಸಂಸ್ಥಾನದಲ್ಲಿ ಒಟ್ಟು ೨೫, ೭೭೬ ಎಕರೆ ಕೃಷಿಯೋಗ್ಯ ಭೂಮಿ ಇದೆ. ಇದು ೧೯೦೫ರ ಸರ್ವೆಯಾಗಿದ್ದು. ಇದು ಕೃಷಿಯೋಗ್ಯವಾದ ಎಲ್ಲ ಭೂಮಿಯನ್ನು ಪರಿಗಣಿಸಿಲ್ಲ. ಸಂಸ್ಥಾನ ರೈತರಿಂದ ವಶಪಡಿಸಿಕೊಂಡ ಒಟ್ಟು ಭೂಮಿ ೧೫, ೮೪೩ ಎಕರೆ. ಇದರಲ್ಲಿ ಕೃಷಿಗೆ ಸಾಗುವಳಿಯಾಗುತ್ತಿರುವ ಭೂಮಿ ೧೩, ೦೪೧ ಎಕರೆ.

ಭೂಮಿಯ ಗೇಣಿ ಪದ್ಧತಿಯಲ್ಲಿ ಮೂರು ವಿಧಾನಗಳಿವೆ. ರೈತವಾರಿ, ಹಜೂರ್ ಭೂಮಿ ಗೇಣಿದಾರ, ಇನಾಂದಾರ. ರೈತವಾರಿ ಸರ್ಕಾರಕ್ಕೆ ತನ್ನ ಕೃಷಿಯೋಗ್ಯ ಭೂಮಿಯ ಒಂದನೇ ಮೂರು ಭಾಗದಷ್ಟು ಕಂದಾಯವನ್ನು ಮುಂಚಿತವಾಗಿಯೇ ಪಾವತಿ ಮಾಡಬೇಕು. ಇವರು ಉತ್ತಮ ವರ್ಗದ ರೈತರಾಗಿದ್ದರು. ರೈತವಾರಿಗೆ ೮, ೦೬೯ ಎಕರೆ ನೀಡಲಾಗಿತ್ತು. ಒಬ್ಬ ರೈತವಾರಿ ೪ ಎಕರೆ ಪಡೆಯಬಹುದಿತ್ತು. ಹಜೂರ್ ಭೂಮಿ ಗೇಣಿದಾರ ಮಧ್ಯಮವರ್ಗದ ರೈತನಾಗಿದ್ದು, ಫಲವತ್ತಾದ ಭೂಮಿಗೆ ಇಂತಿಷ್ಟು ಎಂದು ನಿಗದಿಪಡಿಸಿದ ಹಣವನ್ನು ಕಟ್ಟಬೇಕಿತ್ತು. ಅಥವಾ ಭೂಮಿಯನ್ನು ಒತ್ತೆ ಇಡುವಲ್ಲಿ, ಲೀಜ್ ಕೊಡುವಲ್ಲಿ ಸೀಮಿತ ಹಕ್ಕುಗಳಿದ್ದವು. ೧,೬೩೦ ಎಕರೆ ಹಜೂರ್ ಭೂಮಿ ಗೇಣಿದಾರರಿಗೆ ನೀಡಲಾಗಿತ್ತು. ಸಾಮಾನ್ಯ ಬಡ ರೈತರು, ಸಂಸ್ಥಾನದ ಸೇವೆಯಲ್ಲಿ ಇದ್ದರು. ಇನಾಂದಾರರಾಗಿದ್ದ ಇವರಿಗೆ ೫,೪೮೨ ಎಕರೆ ನೀಡಲಾಗಿತ್ತು. ಇವರಿಗೆ ಗೇಣಿದರ ಕಡಿಮೆ ಇತ್ತು. ಇದನ್ನು ಹಣ ಅಥವಾ ದವಸಧಾನ್ಯಗಳ ರೂಪದಲ್ಲಿ ಕೊಡಬಹುದಾಗಿತ್ತು. ಹೀಗೆ ಮೂರು ಬಗೆಯ ಗೇಣಿದಾರರಲ್ಲಿಯೇ ಉತ್ತಮ, ಮಧ್ಯಮ, ಸಾಮಾನ್ಯ ರೈತರ ಶ್ರೇಣಿಕರಣವಿತ್ತು. ತಂಬಾಕು ಕಂಪನಿಗಾಗಿ ನಂದಿಹಳ್ಳಿ ಬಳಿ ೧೫೦೦ ಎಕರೆ ನೀಡಲಾಗಿತ್ತು.

೧೯೪೮ರ ಸೊಂಡೂರು ಸಂಸ್ಥಾನದ ಈ ಜಾಹಿರುನಾಮೆ ಸಂಸ್ಥಾನದ ಸಕಲ ಅಧಿಕಾರಗಳನ್ನು ತಿಳಿಸುತ್ತದೆ. ಪ್ರಜೆಗಳು ಸಂಸ್ಥಾನಕ್ಕೆ ವಹಿಸಬೇಕಾದ ಕರ್ತವ್ಯ ಮತ್ತು ವಿಧೇಯತೆ, ಸಂಸ್ಥಾನ ಹೊಂದಿರುವ ಸಂಪನ್ಮೂಲಗಳು. ರಾಜಕೀಯ ಪದ್ಧತಿ. ಸಂಸ್ಥಾನದ ರಕ್ಷಣೆ ವಿಧಾನ, ಕಾನೂನು, ನಿಯಮ, ಇವುಗಳನ್ನೆಲ್ಲಾ ಪರಚಯಿಸುತ್ತ ೧೯೪೮ರಲ್ಲಿಯೂ ಸೊಂಡೂರು ಸ್ವತಂತ್ರ ಸಂಸ್ಥಾನ, ಭಾರತದ ಒಕ್ಕೂಟದಲ್ಲಿ ಸೇರಿಲ್ಲ, ಪ್ರಜೆಗಳು ಇದನ್ನು ಗಮನಿಸಬೇಕು. ಸಂಸ್ಥಾನದ ನಿಯಮಗಳನ್ನು ಮೀರಿ ನಡೆದುಕೊಂಡವರನ್ನು ಸ್ಟೇಟ್ ಸೆಲ್ಲಿನಲ್ಲಿ ಶಿಕ್ಷಿಸಲಾಗುವುದು. ಈ ಬಗೆಯ ಸಂಸ್ಥಾನದ ಅಧಿಕಾರವನ್ನು ಜಾಹಿರುನಾಮೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿತ್ತು.