ಅಂದು ಸೊಂಡೂರಿನ ಹಳೆ ಬಸ್‌ಸ್ಟಾಂಡಿನಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದೆ. ಇರುವ ಒಂದು ಬೆಳಗಿನ ಬಸ್ಸು ಹೋಗಿದೆ ಎಂದು ಪಕ್ಕದ ಅಂಗಡಿಯರು ಹೇಳಿದರು. ಟೆಂಪೋಗಳು ಹೋಗುತ್ತವೆ ಕೇಳಿ ಎಂದರು. ಒಂದು ಟೆಂಪೋ ದೇವಸ್ಥಾನಕ್ಕೆ ಹೊರಟಿತ್ತು. ಹತ್ತಿ ಕುಳಿತೆ. ದೇವಸ್ಥಾನಕ್ಕಾಗಿ ಗದಗ್‌ನಿಂದ ಬಂದಿದ್ದ ಒಂದು ಕುಟುಂಬ ಆ ಟೆಂಪೋದಲ್ಲಿ ಇತ್ತು. ಕುಟುಂಬದ ಹಿರಿಯ ತಾನು ಹೊಸದಾಗಿ ಮದುವೆಯಾದ ವರ್ಷ ಬಂದದ್ದನ್ನು ನೆನಪಿಸಿಕೊಂಡು, ೨೦ ವರ್ಷ ಹಿಂದಿನ ನಿಸರ್ಗದ ರಮ್ಯತೆಯ ಕಥೆ ಹೇಳಿದರು. ಹಾಗೆಯೇ ಇಂದು ಹಾಳಾಗಿ ದೂಳಾಗುತ್ತಿರುವ ಪರಿಸರ ನಾಶದ ಬಗ್ಗೆ ವಿಷಾದಿಸಿದರು. ಟೆಂಪೋ ಹೊರಟಿತು. ರಸ್ತೆಗೆ ಜೋತು ಬಿದ್ದಂತೆ ಲಾರಿಗಳ ಸಾಗಾಟ ನಡೆದಿತ್ತು. ಕೊರಕಲು ಗುಂಡಿಗಳಲ್ಲಿ ಟೆಂಪೋ ಮೇಲೆ ಕೆಳಗೆ ಮಾಡುತ್ತಿದ್ದರೆ ಕುಳಿತ ನಾವುಗಳು ಕುಡಿದ ಅಮಲಿನಲ್ಲಿ ವಾಲಾಡುವವರಂತೆ ವಾಲಾಡುತ್ತಿದ್ದೆವು. ಉಸಿರಾಟ ಕಷ್ಟವಾಗುವಂತೆ ಧೂಳು ಮುತ್ತಿತು. ರಸ್ತೆಯ ಪಕ್ಕದಲ್ಲೇ ಮೈನಿಂಗ್ ಕೆಲಸಕ್ಕಾಗಿ ಬಂದವರ ಚಿಕ್ಕ ಚಿಕ್ಕ ಟೆಂಟುಗಳಿದ್ದವು. ಈ ಟೆಂಟುಗಳು ಎಷ್ಟು ಚಿಕ್ಕವೆಂದರೆ ಇಬ್ಬರು ಮಾತ್ರ ಒಳಗೆ ಕೂರಬಹುದು. ಅವರೆಲ್ಲ ಕೆಂಪು ಧೂಳಿನಲ್ಲಿ ಮುಳುಗಿ ಈಸ್ಟ್‌ಮನ್‌ ಕಲರ್‌ನಲ್ಲಿ ತೆಗೆದ ಪೋಟೋದಂತಿದ್ದರು. ಆ ಟೆಂಟುಗಳ ಎದುರಿಗೆ ಮೈನಿಂಗ್ ಕಲ್ಲುಗಳ ರಾಶಿಯಲ್ಲಿ, ದೊಡ್ಡ ಕಲ್ಲುಗಳನ್ನು ಒಡೆದು ಚಿಕ್ಕ ಚೂರುಗಳನ್ನು ಮಾಡುವ ಕೆಲಸ ನಡೆದಿತ್ತು. ಚಿಕ್ಕ ಚಿಕ್ಕ ಮಕ್ಕಳೆಲ್ಲಾ ಆ ಕಲ್ಲುಗಳ ರಾಶಿಯ ಮಧ್ಯೆಯೇ ಆಟ ಆಡುತ್ತಿದ್ದರು. ಮಕ್ಕಳೂ ಸಹ ಪುಟ್ಟಿಯಲ್ಲಿ ಕಲ್ಲು ಹೊರುವ ಜರಡಿ ಹಿಡಿಯುವ ಕೆಲಸದಲ್ಲಿ ಮುಳುಗಿದ್ದವು. ಈ ಮಧ್ಯೆಯೇ ಟೆಂಪೋ ಡ್ರೈವರ್ ‘ಕುಮಾರಸ್ವಾಮಿ ದೇವಸ್ಥಾನ ಬಂತು ಇಳ್ಕೊಳ್ಳಿ’ ಎಂದಾಗಲೆ ಎಚ್ಚರಗೊಂಡು ಇಳಿದೆವು. ಹಳೆಯದಾದ ದೇವಸ್ಥಾನ. ಎದುರಿಗೆ ಸಂರಕ್ಷಿಸಲ್ಪಟ್ಟ ಸ್ಮಾರಕದ ಪುರಾತತ್ವ ಇಲಾಖೆಯವರ ನಾಮಫಲಕದಲ್ಲಿ ‘ಈ ಸ್ಮಾರಕವು ಭಾರತ ಸರ್ಕಾರದ ೧೯೫೮ರ ಪ್ರಾಚೀನ ಸ್ಮಾರಕ ಮತ್ತು ಪುರಾತನ ವಾಸ್ತು ಇರುವ ಸ್ಥಳಗಳಿಗೆ ಸಂಬಂಧಿಸಿದೆ. ಶಾಸನದ ೨೪ನೆಯ ವಿಧಿಗನುಗುಣವಾಗಿ ರಾಷ್ಟ್ರೀಯ ಪ್ರಮುಖ ಸ್ಮಾರಕ ಎಂದು ಘೋಷಿಸಲ್ಪಟ್ಟಿದೆ. ಇದನ್ನು ನಾಶಪಡಿಸಿದಲ್ಲಿ ೫೦೦೦ ರೂ ಜುಲ್ಮಾನೆ ಅಥವಾ ೩ ತಿಂಗಳ ಸಹಜ ಜೈಲು ಶಿಕ್ಷೆ ವಿಧಿಸಲಾಗುವುದು’ ಎಂದಿದೆ. ೧೯೫೮ರ ಹೊತ್ತಿಗೆ ನೆಡಲಾದ ಈ ನಾಮಫಲಕ ಕುಮಾರಸ್ವಾಮಿ ದೇವಸ್ಥಾನದ ಹಕ್ಕುಗಳಿಗಾಗಿ ನಡೆದ ಜನಗಳ ಪ್ರತಿಭಟನೆಗಳಿಗೆ ಸಾಕ್ಷಿ ಎಂಬಂತಿದೆ. ‘ಮಾಜಿರಾಜರ ಹಿಡಿತ ತಪ್ಪಿಸಿ ಕುಮಾರಸ್ವಾಮಿಯನ್ನು ಬಂಧನದಿಂದ ಮುಕ್ತಿಗೊಳಿಸಬೇಕು’ ಎಂಬ ಹೋರಾಟದ ಕಾಲವನ್ನು ನೆನಪಿಸಿಕೊಂಡರೆ ಈ ನಾಮಫಲಕದ ‘ಕಠಿಣ ಜೈಲು ಶಿಕ್ಷೆ, ಜುಲ್ಮಾನೆ’ ಪದಗಳು ವ್ಯಂಗ್ಯದಂತೆ ಕಾಣುತ್ತವೆ.

ದೇವಸ್ಥಾನದಲ್ಲಿ ಕಡಿಮೆ ಜನರಿದ್ದ ಕಾರಣ ಬ್ರಾಹ್ಮಣ ಪೂಜಾರಿಯನ್ನು ಮಾತನಾಡಿಸಲಾಯಿತು. ‘ಈಗ ಜನರಿಗೆ ಭಕ್ತಿ ಕಡಿಮೆಯಾಗಿದೆ. ಮೈನಿಂಗ್ ಪ್ರಾರಂಭವಾದಾಗಿನಿಂದ ಕಾಣಿಕೆ ಹೆಚ್ಚು ಸಿಗುತ್ತಿದೆ’ ಎಂದು ಒಂದಷ್ಟು ಖುಷಿಯಿಂದಲೇ ಹೇಳಿದರು. ಮಾತನಾಡುತ್ತ ೧೯೭೩ರ ಭೂ ಸಂಬಂಧಿ ಹೋರಾಟದ ಬಗ್ಗೆ ಕೇಳಿದೆ.’ ‘ಅದು ಇಲ್ಲಿಯವರು ಮಾಡಿದ್ದಲ್ಲ ಬೆಂಗಳೂರಿನವರು ಇಲ್ಲಿಗೆ ಬಂದು ಮಾಡಿಸಿದ್ದು. ಇಲ್ಲಿನ ಜನ ಯಾರೂ ಭಾಗವಹಿಸಿರ್ಲಿಲ್ಲ ಬಿಡ್ರಿ’ ಎಂದರು. ‘ಈಗ ದೇವರ ಭೂಮಿ ಅಂತ ಹೆಚ್ಚು ಕಡಿಮೆ ಒಂದು ಐವತ್ತೋ.. ನೂರು ಎಕರೆ ಇರಬೇಕು. ಮೊದ್ಲೆಲ್ಲ ಬಾಳ ಭೂಮಿ ಇತ್ತು. ಎಲ್ಲ ರೈತರಿಗೆ ಸೇರ್ತು’ ಎಂದು ವಿಷಾದದಿಂದ ಹೇಳಿದರು. ಅವರ ಮಾತಿನಲ್ಲಿ ‘ಶ್ರೀಮಂತ ದೇವರು ಬಡವಾದ’ ಎಂಬ ನೋವು ಇದ್ದಂತಿತ್ತು ಈಗಲೂ ಮಹಾರಾಜರ ಒಡೆತನದಲ್ಲಿಯೇ ದೇವಸ್ಥಾನವಿದೆ. ಸರ್ಕಾರದ ವಾರ್ಷಿಕ ಧನವೂ ಬರುತ್ತಿದೆ. ಇಲ್ಲಿಯ ಸೆಕ್ಯುರಿಟಿ ಗಾರ್ಡ್‌ ‘ನಮ್ಮದು ಕುಮಾರಸ್ವಾಮಿ ಭೂಮಿ ಇದೆ ಸಾರ್. ಈಗ್ಲೂ ನಮ್ಮ ಹೆಸರಿಗೆ ಪಟ್ಟ ಮಾಡಿಸಿಕೊಂಡಿಲ್ಲ. ಹಂಗೆ ಮಾಡ್ಕೊಂಡು ಹೋಗ್ತೀವಿ… ಬೆಳೆದ ಬೆಳೆಯಲ್ಲಿ ಇಂತಿಷ್ಟು ಅಂತ ಕಾಣಿಕೆ ದೇವಸ್ಥಾನಕ್ಕೆ ಕೊಡ್ತೀವಿ’ ಎಂದರು. ದೇವಸ್ಥಾನದ ಕೆಲಸಕ್ಕೆಂದು ಐದಾರು ಜನರಿದ್ದರು. ಅವರಲ್ಲಿ ಒಬ್ಬಾತ ‘ಈ ದೇವಸ್ಥಾನವೇ ನಮಿಗೆ ಮನಿ ಮಠ ಅಂದನು…’ ಮಠದ ಸುತ್ತ ಹುಲ್ಲು, ಹೂವಿನ ಗಿಡಗಳ ಪಾರ್ಕ್‌ ಮಾಡಲಾಗಿದೆ. ದಕ್ಷಿಣ ದ್ರಾವಿಡ ಶೈಲಿಯ ಕೆತ್ತನೆಯಿಂದ ದೇವಾಲಯದ ವಾಸ್ತು ಕಲಾತ್ಮಕವಾಗಿದೆ. ಸಮುದ್ರದ ಮಟ್ಟಕ್ಕಿಂತ ೧,೪೦೦ ಅಡಿಗಳ ಎತ್ತರದಲ್ಲಿದೆ. ಕ್ರಿ.ಶ. ೮೯೩ಕ್ಕಿಂತ ಮೊದಲೇ ಕಟ್ಟಲ್ಪಟ್ಟಿದೆಂಬ ದಾಖಲೆಗಳಿವೆ. ರಾಷ್ಟ್ರಕೂಟರು ಈ ದೇವಾಲಯವನ್ನು ಕಟ್ಟಿಸಿದ್ದರು, ಮುಂದೆ ಚಾಲುಕ್ಯರ ಅದನ್ನು ಪೋಷಿಸಿಕೊಂಡು ಬಂದರೆಂದು ಶಾಸನಗಳಿಂದ ತಿಳಿಯುತ್ತದೆ. ಹೊಯ್ಸಳರ ರಾಜ ಇಮ್ಮಡಿ ಬಲ್ಲಾಳನ ಕಾಲದ ೧೨೦೬ರ ಶಾಸನ ಪ್ರಾಚೀನ ಶಾಸನಗಳಲ್ಲಿ ಒಂದು. ಕುಮಾರಸ್ವಾಮಿಯನ್ನು ಸ್ಕಂಧ, ಕಾರ್ತೀಕೇಯ, ಷಣ್ಮುಖ, ಸುಬ್ರಹ್ಮಣ್ಯನೆಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ಈ ದೇವಾಲಯ ೧೯೭೩ರ ಚಳವಳಿಗೆ ಪ್ರಬಲ ಕಾರಣಗಳಲ್ಲಿ ಒಂದು. ಕುಮಾರಸ್ವಾಮಿ ದೇವಾಲಯದ ಹೆಸರಲ್ಲಿ ೮,೦೦೦ ಎಕರೆಗಳಷ್ಟು ಇನಾಮು ಭೂಮಿ ಇತ್ತು. ಮಹಾರಾಜರು ೧೯೩೭ರ ಸೊಂಡೂರು ಇನಾಮು ರೆಗುಲೇಷನ್ ಆಕ್ಟ್ ತಂದರು. ಇದರ ೧೫ನೇ ಸೆಕ್ಷನ್ ಪ್ರಕಾರ ದೇವಸ್ಥಾನದ ಜಮೀನು ಅರಮನೆಗೆ ಸೇರಿತು. ೧೯೪೬ರ ಸೊಂಡೂರು ಸ್ಟೇಟ್ ಯಾಕ್ಟ್ ಕಲಂ ೪೮ರ ಪ್ರಕಾರ ದೇವಸ್ಥಾನದ ಜಮೀನು ರಾಜರ ಸ್ವಂತ ಆಸ್ತಿಯಾಯಿತು. ೧೯೪೮ರ ಸೊಂಡೂರು ಟೆಂಪಲ್ ಪ್ರೊಕ್ಲಮೇಷನ್‌ನಲ್ಲಿ ದೇವಾಲಯದ ವಂಶಾನುಗತಿ ಟ್ರಸ್ಟಿ ತಾವೇ ಎಂದು ರಾಜರು ಘೋಷಿಸಿಕೊಂಡರು. ಹೀಗೆ ಸಾರ್ವಜನಿಕ ಆಸ್ತಿಯಾಗಿದ್ದ ದೇವಾಲಯವು ಸಂಪೂರ್ಣ ಮಹಾರಾಜರ ಅಧೀನವಾಯಿತು. ರಾಜರು ತಮ್ಮ ಆಡಳಿತ ನಿಯಂತ್ರಣಕ್ಕೆ ‘ಕುಮಾರಸ್ವಾಮಿ’ಯನ್ನು ಒಂದು ಧಾರ್ಮಿಕ ಅಸ್ತ್ರದಂತೆ ಬಳಸಿಕೊಂಡರು. ಇದನ್ನು ಮತ್ತೆ ಸಾರ್ವಜನಿಕಗೊಳಿಸಬೇಕೆಂದು ೫೦ರ ದಶಕದಿಂದಲೂ ಸಾರ್ವಜನಿಕ ಪ್ರತಿಭಟನೆಗಳಾದವು.

ಕುಮಾರಸ್ವಾಮಿ ಕುರಿತಂತೆ ಬಂದ ಪುಸ್ತಕ, ಚರಿತ್ರೆಯ ರಚನೆಗಳನ್ನು ಗಮನಿಸಬಹುದು. ಕೂಡ್ಲಿಗಿಯ ಬೋರ್ಡ್‌ ಪ್ರೌಢಶಾಲೆಯ ಕನ್ನಡ ಪಂಡಿತ ವಿದ್ವಾನ್ ಕೆ. ರಾಮರಾವ್ ಅವರು ‘ಶ್ರೀ ಕುಮಾರಸ್ವಾಮಿಯ ಸಿಕ್ಕಿದ್ದು’ ಎಂಬ ಕೃತಿಯನ್ನು ೧೯೪೮ರಲ್ಲಿ ಪ್ರಕಟಿಸಿದರು. ದೇವತೆಗಳ ಬಳಕೆಯಲ್ಲಿದ್ದ ಶ್ರೀ ಕುಮಾರಸ್ವಾಮಿಯು ನರರ ವಶಕ್ಕೆ ಬಂದ ಬಗ್ಗೆ ಪುರಾಣ ಮತ್ತು ಸಮಕಾಲೀನ ಚಿತ್ರಣವಿದೆ. ಇವರು ಕೊಡುವ ಸೊಂಡೂರಿನ ವಿವರ ಹೀಗಿದೆ:

ಸೊಂಡೂರು ಸಂಸ್ಥಾನದ ಈಗಿನ ಅರಸರಾದ ಶ್ರೀಮಂತ ಮಹಾರಾಜ ಯಶವಂತರಾವ್ ಹಿಂದೂರಾವ್ ಘೋರ್ಪಡೆ ಮಮಲಕತ್ತು ಮದಾರು ಸೇನಾಪತಿ ಸೊಂಡೂರು ಇವರು ಅನೇಕ ಸ್ತುತ್ಯ ಕಾರ್ಯಗಳನ್ನು ಯಶಸ್ಸನ್ನು ಪಡೆದಿರುತ್ತಾರೆ. ಇತರ ಪ್ರಾಂತದಲ್ಲಿ ಅನ್ನಬಟ್ಟಿಗಳ ಕೊರತೆ ಇಲ್ಲ. ಪ್ರಜರು ನಿಶ್ಚಿಂತರಾಗಿ ಸುಖವಾಗಿ ಇರುತ್ತಾರೆ. ರಾಜ್ಯದ ಆಡಳಿತವನ್ನು ನಿರ್ವಹಿಸುವ ಜನಪ್ರಿಯ ಪ್ರಧಾನಿಯ ಮನೆಯಲ್ಲಿ ಎಷ್ಟು ವಸ್ತುಗಳು, ಎಷ್ಟು ಆಹಾರ ಸಂಗ್ರಹಣಾ ಇರುತ್ತದೆಯೊ ಅಷ್ಟೇ, ಕೂಲಿಕಾರನ ಮನೆಯಲ್ಲಿಯೂ ಕಾಣಬಹುದು. ಒಬ್ಬರ ಮನೆಯಲ್ಲಿ ಹೆಚ್ಚಾಗಲಿ, ಇನ್ನೊಬ್ಬರ ಮನೆಯಲ್ಲಿ ಇಲ್ಲದಿರುವುದನ್ನಾಗಲಿ ಕಾಣುವುದಿಲ್ಲ. ಹಾಗೂ ಒಬ್ಬರು ತುಪ್ಪಸಕ್ಕರೆಯನ್ನುಂಡು ಕಕ್ಕಸ ಬಟ್ಟು ಅಜೀರ್ಣ ರೋಗದಿಂದ ಬಳಲುವುದನ್ನಾಗಲಿ, ಮತ್ತೊಬ್ಬರು ಅನ್ನವಿಲ್ಲದೆ ಕಂಗಾಲಾಗಿ ಕಣ್ಣು ಕಣ್ಣು ಬಿಡುತ್ತಿರುವುದನ್ನಾಗಲಿ ರಾಜ್ಯದಲ್ಲಿ ಕಾಣುವುದು ದುರ್ಲಭವಿರುತ್ತದೆ. ಬಂದದ್ದನ್ನು ಬಚ್ಚಿಡದೆ ಎಲ್ಲರು ಸಮನಾಗಿ ಉಪಯೋಗಿಸಿ ಕೊಳ್ಳುವುದರಿಂದ ರಾಜ್ಯದಲ್ಲಿ ಶಾಂತಿಯು ನೆಲೆಸಿರುತ್ತದೆ.

ಇಲ್ಲಿನ ಉಲ್ಲೇಖವನ್ನು ಗಮನಿಸಿದರೆ ಇದೊಂದು ಸುಖೀ ರಾಜ್ಯ ‘ ಈ ವರ್ಣನೆ ದೇವರನ್ನೂ ಅರಸರನ್ನೂ ಒಂದೇ ತಕ್ಕಡಿಯಲ್ಲಿ ತೂಗುವಂತಿದೆ.’ ‘ ಈ ಗ್ರಂಥದಲ್ಲಿ ಶುಷ್ಕ ಶಬ್ದಗಳಿಲ್ಲ, ಸರ್ವೋತ್ಕೃಷ್ಟವಾಗಿದೆ’ ಎಂದು ಸೊಂಡೂರು ಸಂಸ್ಥಾನದ ಆಗಿನ ರಾಜ ಜೋಷಿ ನಾರಾಯಣಶಂಕರ ಶಾಸ್ತ್ರಿ ಮುನ್ನುಡಿ ಬರೆಯುತ್ತಾರೆ. ಅದೇ ಹೊತ್ತಿನಲ್ಲಿ ಸೊಂಡೂರಿನ ದೊರೆ ಸ್ವಾತಂತ್ರ್ಯ ಭಾರತಕ್ಕೆ ಸೇರದೆ ಮದ್ರಾಸ್‌ ಪ್ರಾಂತ್ಯದ ಸ್ವತಂತ್ರ ರಾಜ್ಯವಾಗುಳಿಯಲು ಪ್ರಯತ್ನಿಸಿದರು. ಸೊಂಡೂರನ್ನು ಭಾರತದ ಒಕ್ಕೂಟದಲ್ಲಿ ಸೇರಿಸಲು ಜನರು ಚಳವಳಿಗಳನ್ನು ರೂಪಿಸಿದರು. ರಾಜರು ರಜಾಕಾರರನ್ನು ಕರೆಯಿಸಿ ಚಳವಳಿಗಾರರನ್ನು ಹಿಂಸಿಸಿದರು. ಆದರೆ ಇದೇ ಸಂದರ್ಭದ ಈ ಕೃತಿ ರಾಜ್ಯದಲ್ಲಿ ‘ಶಾಂತಿಯು ನೆಲೆಸಿದೆ’ ಎಂದು ತಿಳಿಸುತ್ತದೆ.

ತಾಳಂಕಿ ಸುಬ್ರಾಯ ಶ್ರೇಷ್ಟಿ ಎಂಬುವವರು ‘ಶ್ರೀ ಕಾರ್ತಿಕೇಶ್ವರ ಸ್ವಾಮಿ ಲಾವಣಿ’ ಎಂಬ ಕಿರು ಹೊತ್ತಿಗೆಯನ್ನು ೧೯೫೫ರಲ್ಲಿ ಪ್ರಕಟಿಸಿದರು. ‘ಹೀನ ಗುಣಂಗಳ ಬಿಡಬೇಕು, ಹಿರಿಯರ ಹಾದಿ ಅನುಸರಿಸುತ್ತಲಿ, ದೇಶ ಸೇವಕರು ಆಗ್ಬೇಕು. ನಮ್ಮ ರಾಜ್ಯದ ಘೋರ್ಪಡೆ ವಂಶದ ಯಶವಂತರಾವು, ದತ್ತೋಜಿರಾವು, ಮುರಾರಿ ರಾಯರು ಕೇಳ್ಬೇಕು. ನಾವು ನೀವು ನೋಡಲಿಬೇಕು. ತನುಮನ ಧನದಿಂದ ಆಡಿದ ಕೂಟ ಎಲ್ಲರು ಪ್ರೋತ್ಸಾಹ ಕೊಡಬೇಕು’. ಎಂದು ಉದ್ಗರಿಸುತ್ತಾರೆ. ಹೀಗೆ ‘ಕುಮಾರಸ್ವಾಮಿ’ ಕುರಿತು ಬರೆದ ಪುರಾಣ ಚರಿತ್ರೆಗಳು ಮಹಾರಾಜರನ್ನು ದೈವಪರವಶತೆಯಿಂದ ಕಂಡವು. ಇದು ಆ ಕೃತಿಗಳ ಪ್ರಕಟಣೆಗೆ ಸಂಸ್ಥಾನದ ಬೆಂಬಲವೂ ಕಾರಣವಾಯಿತು. ಹೀಗೆ ಮಹಾರಾಜರನ್ನು ಆರಾಧನಾ ಭಾವದಿಂದ ಕಂಡ ಪುರಾಣಗಳು ಜನರಲ್ಲಿಯೂ ಅಂತಹ ಭಾವನೆ ತರಿಸಲು ಪ್ರಯತ್ನಿಸಿದವು. ೨೦೦೫ರಲ್ಲಿ ಡಾ. ನಿಂಗಪ್ಪ ಮುದೇನೂರು ಅವರ ‘ಸೊಂಡೂರು ಕುಮಾರಸ್ವಾಮಿ’ ಎಂಬ ಸಂಶೋಧನ ಕೃತಿ ಬಂದಿದೆ. ಈತನಕದ ‘ಕುಮಾರಸ್ವಾಮಿ’ ಯನ್ನು ಕಂಡ ಮಾದರಿಗಳಿಗಿಂತ ಭಿನ್ನವಾಗಿದೆ. ಇಲ್ಲಿಯೂ ಚರಿತ್ರೆಯನ್ನು ಆರಾಧಾನ ಭಾವದಿಂದ ಕಾಣುವ ಮನೋಧರ್ಮ ಇದೆ. ಇದಕ್ಕೆ ‘ಜಾನಪದೀಯ ಅಧ್ಯಯನ’ ಎಂಬ ಚೌಕಟ್ಟನ್ನು ಹಾಕಿಕೊಂಡಿದ್ದರಿಂದ ಈ ದೇಗುಲ ಸಮುದಾಯಗಳಲ್ಲಿ ಸೃಷ್ಟಿಸಿದ ಸಂಘರ್ಷವನ್ನು ದಾಖಲಿಸಲು ಸಾಧ್ಯವಾಗಿಲ್ಲ. ಹಾಗಾಗಿ ಕುಮಾರಸ್ವಾಮಿಯನ್ನು ನೋಡುವ ಏಕಮುಖದ ಚಿತ್ರವನ್ನು ಈ ತನಕದ ಅಧ್ಯಯನಗಳು ದಾಖಲಿಸಿವೆ.

೧೯೩೬ರಲ್ಲಿ ಮಹಾತ್ಮ ಗಾಂಧೀಜಿಯವರ ಮೂಲಕ ಕುಮಾರಸ್ವಾಮಿ ದೇವಾಲಯದಲ್ಲಿ ಹರಿಜನರಿಗೆ ಮಹಾರಾಜರು ಪ್ರವೇಶವನ್ನು ಕಲ್ಪಿಸಿದರು. ಗಾಂಧೀಜಿಯವರು ಈ ಕಾರ್ಯವನ್ನು ಶ್ಲಾಘಿಸಿ ದಕ್ಷಿಣ ಭಾರತದಲ್ಲಿಯೆ ಸೊಂಡೂರಿನ ಸಣ್ಣ ಸಂಸ್ಥಾನ ಹರಿಜನರಿಗೆ ದೇವಸ್ಥಾನದಲ್ಲಿ ಪ್ರವೇಶ ಕಲ್ಪಿಸಿದೆ. ಸ್ವರ್ಗವೇನು ಕಳಚಿ ಬೀಳಲಿಲ್ಲ ಎಂದಿದ್ದರು. ವಿಪರ್ಯಾಸವೆಂದರೆ, ಗಾಂಧೀಜಿಯವರು ಸೊಂಡೂರಿನಿಂದ ಮರಳಿದರು. ಮರುಳಿದ ತಕ್ಷಣ ಇತ್ತ ಕುಮಾರಸ್ವಾಮಿ ದೇವಸ್ಥಾನವನ್ನು ಶುದ್ಧಿಕರಿಸಲಾಯಿತು. ಆನಂತರ ಹರಿಜನರಿಗೆ ಪ್ರವೇಶವನ್ನು ರದ್ದುಗೊಳಿಸಿದರು. ಗಾಂಧೀಜಿಯವರು ಬಂದ ಸಮಯದಲ್ಲಿ ಹರಿಜನರಿಂದ ಬಾವಿಯೊಂದರಲ್ಲಿ ನೀರನ್ನು ಸೇದಿಸಿದ್ದರು. ಆ ಬಾವಿಯಲ್ಲಿ ಯಾರೊಬ್ಬರು ನೀರು ಸೇದದೆ ಮುಂದೆ ಅದು ಹಾಳುಬಾವಿಯಾಯಿತು ಎಂಬುದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಿಳಿಯಿತು. ಆದರೆ ಮಹಾತ್ಮಗಾಂಧಿಯವರು ಸೊಂಡೂರು ಸಂಸ್ಥಾನವನ್ನು ಉದ್ಧರಿಸಿದ್ದು ಸುದ್ದಿಯಾಯಿತು. ಅದು ಸಂಸ್ಥಾನದ ಬಹುದೊಡ್ಡ ಹಿರಿಮೆಯಾಗಿ ಪ್ರಚಾರ ಪಡೆಯಿತು. ಇದನ್ನು ಗಮನಿಸಿದರೆ ಗಾಂಧೀಜಿಯವರ ಅಸ್ಪೃಶ್ಯ ನಿವಾರಣೆಯ ಚಳುವಳಿಯ ಇನ್ನೊಂದು ಮುಖ ಗೋಚರಿಸುತ್ತದೆ. ಅವರು ದೇಗುಲಗಳಲ್ಲಿ ಬಾವಿ, ಕೆರೆಗಳಲ್ಲಿ ಹರಿಜನರಿಗೆ ಪ್ರವೇಶ ಕಲ್ಪಿಸಿ ಮುಂದಿನ ಸ್ಥಳಗಳಿಗೆ ಸಂಚರಿಸುತ್ತಿದ್ದರು. ಆದರೆ ಅವನ ವ್ಯಕ್ತಿತ್ವಕ್ಕೆ ಮಾರು ಹೋಗಿ ಅಲ್ಲಿನ ಜಮೀನ್ದಾರರು ಮೇಲ್ವರ್ಗದವರು ಗಾಂಧೀಜಿಯವರ ಎದುರಿಗೆ ‘ಹರಿಜನರಿಗೆ’ ಪ್ರವೇಶ ಕಲ್ಪಿಸಿದಂತೆ ಮಾಡಿ, ಅವರು ತೆರಳುತ್ತಲೇ ರದ್ದುಗೊಳಿಸಲಾಗುತ್ತಿದ್ದುದು ಚಾರಿತ್ರ್ಯಿಕ ವ್ಯಂಗ್ಯ ಭಾರತದಲ್ಲಿ ಅಂತಹದ್ದೊಂದು ಪರಂಪರೆಯೇ ಬೆಳೆದುಬಂದಿದೆ. ಭಾರತಕ್ಕೆ ಅಮೆರಿಕದ ಅಧ್ಯಕ್ಷ ಬಿಲ್‌ಕ್ಲಿಂಟನ್‌ ಬಂದಾಗಲೂ, ಅವರು ಹೋದ ಹಳ್ಳಿಗಳ ಗ್ರಾಮ ಪಂಚಾಯ್ತಿಗಳಲ್ಲಿ ಕಂಪ್ಯೂಟರ್ ಇಟ್ಟು ತೋರಿಸಿ ಭಾರತದ ಗ್ರಾಮ ಪಂಚಾಯ್ತಿಗಳಲ್ಲಿ ಕಂಪ್ಯೂಟರ್‌ ಇದೆ ಎಂದು ಹೇಳಿದರು. ಬಿಲ್‌ಕ್ಲಿಂಟನ್‌ ಆ ಹಳ್ಳಿಯಿಂದ ತೆರಳುತ್ತಲೂ ಪಂಚಾಯ್ತಿಯಲ್ಲಿದ್ದ ಕಂಪ್ಯೂಟರ್‌ಗಳನ್ನು ಅವುಗಳ ಮೂಲಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಜಗತ್ತನ್ನು ಆಳುವ ಕನಸು ಕಾಣುತ್ತಿರುವ, ನಿಯಂತ್ರಿಸುತ್ತಿರುವ ಅಮೇರಿಕದ ಎದುರು ಭಾರತದ ಈ ನಾಟಕೀಯ ವರ್ತನೆ ಅಪಹಾಸ್ಯದಂತೆ ಕಾಣುತ್ತದೆ.

ಕುಮಾರಸ್ವಾಮಿ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶವಿರಲಿಲ್ಲ. ಇದಕ್ಕೆ ಜನಪದರ ಕತೆಯೊಂದಿದೆ. ತನ್ನ ತಾಯಿಯಂತೆಯೇ ಇರುವ ಮದುವೆ ಕನ್ಯೆಯನ್ನು ತಿರಸ್ಕರಿಸಿ ತಾಯಿ ನಿಂದನೆಗೆ ಗುರಿಯಾಗುತ್ತಾನೆ. ಮುಂದೆ ಆತನ ಹೆಣ್ಣನ್ನೇ ನೋಡದ ಬ್ರಹ್ಮಚಾರಿಯಾಗುತ್ತಾನೆ. ಹೀಗಾಗಿ ಇಲ್ಲಿನ ಹೆಣ್ಣುಮಕ್ಕಳು ಕುಮಾರಸ್ವಾಮಿಯನ್ನು ‘ನಿರ್ವಾಣಿ’ ಎನ್ನುತ್ತಾರೆ. ಹಿಂದೊಮ್ಮೆ ಗಂಡನ ವೇಷಧರಿಸಿ ಕುಮಾರಸ್ವಾಮಿಯನ್ನು ನೊಡಿದ ಹೆಣ್ಣೊಬ್ಬಳು ಕಲ್ಲಾಗಿದ್ದಳು ಎಂಬ ಐತಿಹ್ಯವಿತ್ತು. ಹೀಗಿರುವಾಗ ಜನವರಿ ೭, ೧೯೯೭ರಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾದ ಡಾ. ಮಲ್ಲಿಕಾ ಘಂಟಿಯವರು ಮೊದಲ ಬಾರಿಗೆ ‘ಕುಮಾರಸ್ವಾಮಿ’ಯ ಗರ್ಭಗುಡಿ ಪ್ರವೇಶಿಸಿದರು. ಈ ದೇವಸ್ಥಾನದ ಈವರೆಗಿನ ಕಟ್ಟುಪಾಡನ್ನು ಮುರಿದಿದ್ದರಿಂದ ಉದ್ರಿಕ್ತಗೊಂಡ ಭಕ್ತರು ಪ್ರಾಣ ಬೆದರಿಕೆ ಹಾಕಿದ್ದರು. ಆ ಸಂದರ್ಭದಲ್ಲಿ ಎಂ.ವೈ.ಘೋರ್ಪಡೆಯವರು ಬೆಂಬಲಕ್ಕೆ ಬಂದು ಧೈರ್ಯ ತುಂಬಿದರು ಎಂದು ಮಲ್ಲಿಕಾಘಂಟಿಯವರು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಬಳ್ಳಾರಿಯ ಯಜಮಾನ ಶಾಂತರುದ್ರಪ್ಪನವರು ಕುಮಾರಸ್ವಾಮಿ ದೇವಸ್ಥಾನವನ್ನು ಮಹಾರಾಜರ ಅಧೀನದಿಂದ ಬಿಡಿಸಲಿಕ್ಕೆ ಜೀವನಪೂರ್ತಿ ಹೋರಾಡಿದರು. ಕುಮಾರಸ್ವಾಮಿಯ ಪ್ರತಿ ಜಾತ್ರೆಗೂ ಯಜಮಾನರು ದರ್ಶನಕರ ವಿರೋಧಿಸಲು ಕರಪತ್ರ ಹಂಚುತ್ತಿದ್ದರು. ಮಹಾರಾಜರು ದೇವಸ್ಥಾನದ ವಂಶಾನುಗತ ಟ್ರಸ್ಟಿ ಅಲ್ಲ. ಮೂಲ ಟ್ರಸ್ಟಿ ಲಕ್ಷ್ಮೀಪುರದ ಮುದುಕನಗೌಡರ ವಂಶಸ್ಥರು ಎಂದು ಪ್ರತಿಪಾದಿಸಿದರು. ಹುಬ್ಬಳ್ಳಿಯಿಂದ ಬರುತ್ತಿದ್ದ ‘ವಿಶಾಲ ಕರ್ನಾಟಕ’ ಪತ್ರಿಕೆ, ‘ಸೊಂಡೂರು ಕುಮಾರಸ್ವಾಮಿ ವಿಮೋಚನೆ’ ಎಂಬ ಹೆಸರಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸಿತು. ಯಜಮಾನರ ಹೋರಾಟಕ್ಕೆ ಜಾತಿಯೂ ಕಾರಣವಾಗಿತ್ತು. ಹಿಂದೊಮ್ಮೆ ಲಿಂಗಾಯಿತರ ವಶದಲ್ಲಿದ್ದ ದೇವಾಲಯ ಈಗ ಮರಾಠಿಗರ ವಶಕ್ಕೆ ಹೋಗಿದೆ. ಅದನ್ನು ಮತ್ತೆ ಲಿಂಗಾಯಿತರ ವಶಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಯಜಮಾನರ ಹೋರಾಟಕ್ಕಿದ್ದ ಇನ್ನೊಂದು ಮುಖ. ಮೊದಲು ದರ್ಶನಕರ ರದ್ಧತಿಗಾಗಿ ಜಾತ್ರೆಯ ಸಂದರ್ಭದಲ್ಲಿ ಧರಣಿ ಮಾಡುತ್ತಿದ್ದರು. ನಂತರ ಮಹಾರಾಜರಿಂದ ಕುಮಾರಸ್ವಾಮಿಯನ್ನು ಬಂಧನ ಮುಕ್ತಗೊಳಿಸಲಿಕ್ಕೆ ಪ್ರಯತ್ನಿಸಿದರು. ಇದು ೧೯೭೩ರ ಹೊತ್ತಿಗೆ ಕುಮಾರಸ್ವಾಮಿ ಹೆಸರಿನ ಇನಾಮು ಭೂಮಿ ರೈತರಿಗೆ ದೊರೆಯಲಿ ಎನ್ನುವ ಹಂತ ತಲುಪಿತು. ಯಜಮಾನರ ಈ ಪ್ರತಿರೋಧದ ಪರಂಪರೆಯು ಸಾರ್ವಜನಿಕ ಸ್ವರೂಪ ಪಡೆದು ೧೯೭೩ರ ಚಳುವಳಿಗೆ ಕಾರಣವಾಯಿತು.