ಬಿ.ಡಿ.ಜತ್ತಿಯವರ ಸೊಂಡೂರ ಭೇಟಿ

ಬಿ.ಡಿ. ಜತ್ತಿಯವರು ೧೯೫೮ರ ಹೊತ್ತಿನಲ್ಲಿ ಮೈಸೂರಿನ ಮುಖ್ಯಮಂತ್ರಿಗಳಾಗಿದ್ದರು. ಸೆಪ್ಟಂಬರ್ ೨೨ರಂದು ಸೊಂಡೂರಿಗೆ ಭೇಟಿ ನೀಡಿದರು. ಸಾಮಾನ್ಯ ಜನರು ಮುಖ್ಯಮಂತ್ರಿಯನ್ನು ಕಣ್ಣೆದುರಿಗೆ  ನೋಡುತ್ತೇವೆ ಎಂದು ಸಂಭ್ರಮಿಸಿದರು. ಬಳ್ಳಾರಿಯ ಸೊಂಡೂರು ವಿಮೋಚನ ಸಮರ ಸಮಿತಿಯವರು ಈ ಸಂದರ್ಭಕ್ಕಾಗಿ ಯೋಜನೆಯೊಂದನ್ನು ರೂಪಿಸಿದರು. ಮಹಾರಾಜರ ದುರಾಡಳಿತದ ಕೆಲವು ಅಂಶಗಳನ್ನು ಪಟ್ಟಿಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲು ತಯಾರಿ ಆಯಿತು. ಪಕ್ಷದ ದೃಷ್ಟಿಯಲ್ಲಿ ಎಲಿಗಾರ ತಿಮ್ಮಪ್ಪ ಕಾಂಗ್ರೆಸ್‌ನಲ್ಲಿದ್ದರೂ, ತನ್ನ ಸ್ಥಳೀಯ ಹಿತಾಸಕ್ತಿಯಿಂದ ಇದಕ್ಕೆ ಬೆಂಬಲಿಸಿದರು. ಈ ಯೋಜನೆ ತಿಳಿದ ದೊರೆಗಳು ಬಳ್ಳಾರಿಯ ಜಿಲ್ಲಾಧಿಕಾರಿ ಮತ್ತು ಡಿ.ಎಸ್‌.ಪಿ ಯವರಿಗೆ ಒಂದು ಎಚ್ಚರಿಕೆ ನೀಡಿದರು. ಯಜಮಾನ ಶಾಂತರುದ್ರಪ್ಪನವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಬಂದರೆ ಶಾಂತಿಭಂಗವಾಗುವ ಕಾರಣದಿಂದ ಬಂಧಿಸಬೇಕೆಂದು ತಿಳಿಸಲಾಯಿತು. ಯೋಜನೆಯಂತೆ ಜತ್ತಿಯವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವ ಹೊತ್ತಿಗೆ ಯಜಮಾನ ಶಾಂತರುದ್ರಪ್ಪ ಮತ್ತು ಎಲಿಗಾರ ತಿಮ್ಮಪ್ಪ ಮನವಿ ಸಲ್ಲಿಸಲು ವೇದಿಕೆ ಕಡೆ ದಾವಿಸಿದರು. ಕೂಡಲೇ ಪೊಲೀಸರು ಇವರನ್ನು ಬಂಧಿಸಿದರು. ಜತ್ತಿಯವರು ಈ ಬಂಧನವನ್ನು ನೋಡಿದರು. ಆದರೆ ಯಾಕೆ ಬಂಧಿಸುತ್ತಿದ್ದಾರೆ, ಏನು ವಿಷಯ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ನಮ್ಮ ಸ್ವಾತಂತ್ರ್ಯಕ್ಕೆ ಏನು ಬೆಲೆ ಇದೆ? ಯಾರನ್ನು ಯಾವ ಕ್ಷಣವಾದರೂ ಸೆರೆಯಲ್ಲಿ ಇರಿಸಬಹುದು ಎಂದು ಹುಬ್ಬಳ್ಳಿಯಿಂದ ಬರುತ್ತಿದ್ದ ‘ಪ್ರಪಂಚ’ ಪತ್ರಿಕೆ ವರದಿ ಮಾಡಿತು. ವ್ಯಕ್ತಿ ಸ್ವಾತಂತ್ರ್ಯವನ್ನು ಅಧಿಕಾರ ಹೇಗೆ ಮೊಟುಕುಗೊಳಿಸಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು. ದೊರೆಯು ಈ ಭೇಟಿಯನ್ನು ಹೇಗೆ ಲಾಭದಾಯಕ ಮಾಡಿಕೊಂಡರೆಂದು ಕೋ. ಚನ್ನಬಸಪ್ಪನವರು ತಮ್ಮ ‘ರೈತ’ ಪತ್ರಿಕೆಯಲ್ಲಿ ವರದಿ ಮಾಡಿದರು
“ಸೊಂಡೂರು ಸಂಸ್ಥಾನ ಮೈಸೂರಿನಲ್ಲಿ ವಿಲೀನವಾದ ನಂತರ ಸಂಸ್ಥಾನದ ಹೈಸ್ಕೂಲು ಕೂಡ ಬಳ್ಳಾರಿ ಜಿಲ್ಲಾ ಬೋರ್ಡಿನ ಆಧೀನಕ್ಕೆ ವರ್ಗವಾಯಿತು. ಜಿಲ್ಲಾ ಬೋರ್ಡಿನ ಮೂಲಕ ಎಲ್ಲಾ ಹೈಸ್ಕೂಲುಗಳು ನಡೆಯುವಂತಾಯಿತು. ಮುಖ್ಯಮಂತ್ರಿಗಳ ಭೇಟಿಯ ನಂತರ ಜಿಲ್ಲಾ ಬೋರ್ಡಿನಿಂದ ಸಂಸ್ಥಾನಕ್ಕೆ ವರ್ಗಾವಣೆಗೊಂಡಿತು. ‘ವಿದ್ಯಾವರ್ಧಕ ಸಂಘ’ವನ್ನು ಹೊಸದಾಗಿ ರಚಿಸಿದರು. ಟೇಕೂರು ಸುಬ್ರಮಣ್ಯ ಅದರ ಅಧ್ಯಕ್ಷರಾದರು. ಯಶವಂತರಾವ್‌ ಘೋರ್ಪಡೆಯವರು ಕಾರ್ಯದರ್ಶಿಗಳಾದರು. ದೊರೆ ಮನೆಯವರು ಸಮಿತಿಯ ಸದಸ್ಯರುಗಳಾದರು. ಈ ತೀವ್ರ ಬದಲಾವಣೆ ಸಂಸ್ಥಾನದ ಕೆಲವರಿಗೆ ಆಶ್ಚರ್ಯವಾಯಿತು. ಈ ಸಂಘ ಎಂದು ರಿಜಿಸ್ಟರ್‌ ಆಯಿತು? ಅದಕ್ಕಿರುವ ಮೂಲ ಧನವೆಷ್ಟು? ಹೀಗೆ ಯಾವುದಾದರೂ ಖಾಸಗಿ ಸಂಘಕ್ಕೆ ಜಿಲ್ಲಾ ಬೋರ್ಡು ಶಾಲೆಗಳ ಆಡಳಿತ ಕೊಡುವುದಾದರೆ ಸರ್ಕಾರದ ಜವಾಬ್ದಾರಿ ಏನು? ಎನ್ನುವಂತಹ ಪ್ರಶ್ನೆಗಳು ಜನರಲ್ಲಿ ಎದ್ದವು. ಅದಕ್ಕೆ ಉತ್ತರ ಸಿಗಲಿಲ್ಲ.

೧೯೫೯ರಲ್ಲಿ ಸೊಂಡೂರು ಕ್ಷೇತ್ರದ ಜನಪರ ಶಾಸಕರಾಗಿದ್ದ ಅರಗಿನದೋಣಿ ರಾಯನಗೌಡರು ಆಕಸ್ಮಿಕವಾಗಿ ನಿಧನರಾದರು. ತೆರವಾದ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು.  ಈವರೆಗೂ ಸಂಸ್ಥಾನದ ರಾಜಾಧಿಕಾರವನ್ನಲ್ಲದೆ ಭಾರತ ಸರ್ಕಾರದ ರಾಜಕೀಯಕ್ಕೆ ಮಹಾರಾಜರು ಪ್ರವೇಶಿಸಿರಲಿಲ್ಲ. ಈ ಉಪ ಚುನಾವಣೆ ಎಂ.ವೈ. ಘೋರ್ಪಡೆಯವರು ರಾಜಕೀಯ ಪ್ರವೇಶಿಸಲು ಅನುಕೂಲವಾಯಿತು. ಮಾಜಿ ದೊರೆಗಳ ಆಡಳಿತವನ್ನು ವಿರೋಧಿಸುತ್ತ ಬಂದವರಿಗೆಲ್ಲಾ ಇದು ಗಂಭೀರ ಪ್ರಶ್ನೆಯಾಯಿತು. ದೊರೆ ತನ್ನ ಹಣ ಬಲದಿಂದ ಅಸೆಂಬ್ಲಿ ಸೀಟನ್ನು ಕೊಳ್ಳುವಂತಾದರೆ ರಾಜಕೀಯವಾಗಿಯೂ ದೊರೆತನಕ್ಕೆ ಶಕ್ತಿ ಬಂದಂತಾಗುತ್ತಿತ್ತು. ಆ ಆತಂಕ ಪ್ರಪಂಚ ಪತ್ರಿಕೆಯಲ್ಲಿ ವ್ಯಕ್ತವಾಯಿತು. ಅದರ ಒಂದು ಭಾಗ ಹೀಗಿದೆ “ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್‌ ಇನ್ನೂ ಮರ್ಯಾದೆ ಇರಿಸಿಕೊಂಡಿದೆ. ಆ ಮರ್ಯಾದೆ ತನಗೇಕೆ ಎಂದು ಅಸಡ್ಡೆ ಮಾಡಿದರೆ ಅದು ಈ ಅಸೆಂಬ್ಲಿ ಸೀಟನ್ನು ಸೊಂಡೂರಿನ ರಾಜವಂಶಕ್ಕೆ ಕೊಟ್ಟರೂ ಕೊಟ್ಟೀತು. ಆದರೆ ಅದು ಅಸಾಧ್ಯ. ಕಾಂಗ್ರೆಸ್ಸು ಹಾಗೇನಾದರೂ ಸೀಟುಕೊಟ್ಟ ಪಕ್ಷದಲ್ಲಿ ಅದು ಸೊಂಡೂರು ದೊರೆಯ ಊಳಿಗದ ಆಳಾದೀತು! ಮಾಜಿ ದೊರೆ ಬಾಯಿ ದುಂಬಲಕ್ಕೆ ಕೈಚಾಚುವ ಕಾಂಗ್ರೆಸ್ಸಿಗರೇನಾದರೂ ಇದ್ದರೆ ಅವರಿಗೆ ಸಾವಿರ ಧಿಕ್ಕಾರ.”

ಸಹಜವಾಗಿ ಚುನಾವಣಾ ಬಿಸಿ ಏರುತ್ತಿದ್ದಂತೆಯೇ ಕಾಂಗ್ರೇಸ್ಸೇತರ ಪಕ್ಷಗಳು ಚುರುಕಾದವು. ‘ಐಕ್ಯರಂಗ’ವೂ ಈ ನಿಟ್ಟಿನಲ್ಲಿ ಜಾಗೃತಗೊಂಡಿತು. ಕಾಂಗ್ರೆಸ್‌ ಸರಕಾರದ ಜನವಿರೋಧಿ ನೀತಿಯಿಂದ ಜನತೆಯ ಜೀವನವು ಅತಂತ್ರವಾಗಿದೆ. ಈ ನೀತಿಯನ್ನು ಪ್ರತಿಭಟಿಸಲು ಮತ್ತು ಕಾಂಗ್ರೆಸ್‌ ನೀತಿಯನ್ನು ಖಂಡಿಸಲು ಪ್ರತಿಪಕ್ಷಗಳ ಪ್ರಜಾಪ್ರಭುತ್ವವಾದಿಗಳು ಸೇರಿ ಮುಂಬರುವ ಸೊಂಡೂರು ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಎಲ್ಲ ವಾಮ ಪಕ್ಷಗಳ ಪರವಾಗಿ ಒಬ್ಬನೇ ಹುರಿಯಾಳನ್ನು ನಿಲ್ಲಿಸಬೇಕೆಂದು ಕರೆಯಿತ್ತರು. ೧೪ ಜನವರಿ ೧೯೫೯ರಂದು ಚೋರನೂರಿನಲ್ಲಿ ಸಭೆ ನಡೆದು ಹೆಚ್ಚಿನ ನಾಯಕರು ಬರದಿದ್ದ ಕಾರಣ ಮುಂದೂಡಲಾಯಿತು. ಕೊಟ್ಟೂರಿನ ವಿಧಾನಸಭಾ ಸದಸ್ಯರಾದ ಎಂ.ಎಂ.ಜೆ. ಸಧ್ಯೋಜಾತಪ್ಪ, ಬಳ್ಳಾರಿಯ ವಿಧಾನಸಭಾ ಸದಸ್ಯ ಎಂ. ದಾನಪ್ಪ, ಬಳ್ಳಾರಿಯ ವಕೀಲರಾದ ಡಿ.ಆರ್‌. ಮುನ್ನಾರ್‌, ಮುಂತಾದ ನಾಯಕರು ಜನವರಿ ೨೪.೧೯೫೯ರಂದು ಹೊಸಪೇಟೆಯಲ್ಲಿ ಸಭೆ ಮಾಡಿದರು. ಪ್ರಜಾಸಮಾಜವಾದಿ, ಸಮಾಜವಾದಿ, ಕಮ್ಯುನಿಸ್ಟ್ ಐಕ್ಯರಂಗ ಮುಂತಾದ ಪಕ್ಷಗಳ ಸಂಯುಕ್ತ ವಿರೋಧಿ ಸಂಘವನ್ನು ರಚಿಸಿ ತಮ್ಮ ವತಿಯಿಂದ ಎಚ್‌.ಎಂ. ವೀರಭದ್ರಯ್ಯನವರನ್ನು ಚುನಾವಣೆಗೆ ನಿಲ್ಲಿಸಿತು.

ಎಲಿಗಾರ ತಿಮ್ಮಪ್ಪ ಸ್ವಾತಂತ್ರ್ಯ ಹೋರಾಟದಿಂದಲೂ ಕಾಂಗ್ರೆಸ್ಸಿನ ಜೊತೆ ಇದ್ದರು. ಹಾಗಾಗಿ ಇವರಿಗೆ ಕಾಂಗ್ರೆಸ್‌ ಸೀಟು ಸಿಗುವ ಸಾಧ್ಯತೆ ಇತ್ತು. ಈ ಮುಂಚೆ ಕಾಂಗ್ರೆಸ್‌ನ್ನು ವಿರೋಧಿಸುತ್ತಿದ್ದ ಮಹಾರಾಜರು ಕಾಂಗ್ರೆಸ್‌ ಪರವಾಗಿದ್ದರು. ಮುಖ್ಯಮಂತ್ರಿ ಬಿ.ಡಿ. ಜತ್ತಿಯವರೊಂದಿಗೆ ಉತ್ತಮ ಸಂಬಂಧವಿತ್ತು. ಬದಲಾಗಿ ಸೊಂಡೂರು ತಾಲ್ಲೂಕಿನ ಬಹುಪಾಲು ಜನಸಮುದಾಯ ‘ದೊರೆಗಳ’ ಬಗೆಗೆ ಭಯ, ಭಕ್ತಿಗೌರವ ಹೊಂದಿದ್ದರು. ಈ ಎಲ್ಲಾ ಕಾರಣಗಳು ಎಂ.ವೈ. ಘೋರ್ಪಡೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿಕ್ಕೆ ಬೆಂಬಲಿಸಿದವು. ಪ್ರಜಾಪ್ರಭುತ್ವದ ಬಗೆಗೆ ಓದಿಕೊಂಡಿದ್ದವರು ಸಹಜವಾಗಿ ಅರಸುತನವನ್ನು ವಿರೋಧಿಸಿದರು. ಎಂ.ವೈ. ಘೋರ್ಪಡೆಯವರಿಗೆ ಟಿಕೇಟ್‌ ಕೊಟ್ಟು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಢೇಬರ್‌ ಪಕ್ಷದ ಪ್ರತಿಷ್ಠೆಯನ್ನು ಮಾರಿಕೊಂಡಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ೧೯೫೭ರ ಸಾರ್ವತ್ರಿಕ ಚುನಾವಣೆ ನಡೆದಾಗಲೂ ದೊರೆ ಮಗನಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸುವ ಯತ್ನ ನಡೆದಿತ್ತು. ಆಗ ಅರಸು ಮನೆತನದವರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಕೊಡಬಾರದೆಂದು ಇಲ್ಲಿಯ ಕೆಲ ಜನ ಪ್ರತಿಭಟಿಸಿದ್ದರು. ಈ ಪ್ರತಿಭಟನೆಯಿಂದಾಗಿಯೇ ಅವಕಾಶ ತಪ್ಪಿ ಜನತೆಗೆ ಜಯವಾಗಿತ್ತು. ಇದೇ ಹೊತ್ತಿಗೆ ಮಹಾರಾಷ್ಟ್ರದ ನಾಗ್‌ಪುರದಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದು ಸಮಾಜವಾದಿ ಸಮಾಜ ರಚನೆಯ ಬಗ್ಗೆ ಗೊತ್ತುವಳಿಯನ್ನು ಸ್ವೀಕರಿಸಲಾಗಿತ್ತು. ಇಂತಹ ಸಂದರ್ಭದಲ್ಲಿಯೆ ಬಂಡವಾಳಶಾಹಿ ದೊರೆ ಮಗನನ್ನು ಬೆಂಬಲಿಸಿದ್ದು ಕಾಂಗ್ರೆಸ್‌ ಪರವಾಗಿದ್ದವರಿಗೆಲ್ಲ ಅಸಹನೆಯನ್ನುಂಟುಮಾಡಿತ್ತು. ಕಾಂಗ್ರೆಸ್‌ ಬಗೆಗೆ ನಂಬಿಕೆಯನ್ನಿರಿಸಿಕೊಂಡ ಅನೇಕರಿಗೆ ಈ ನಿರ್ಣಯ ಇಡಿಯಾದ ರಾಜಕೀಯ ವ್ಯವಸ್ಥೆಯ ಬಗೆಗೆ ನಿರಾಸಕ್ತಿ ಮೂಡಿಸಿತು. ಇದರ ನಡುವೆ ಎಂ.ವೈ. ಘೋರ್ಪಡೆಯವರು ಮಾರ್ಚ್‌ ೧.೧೯೫೬ರಲ್ಲಿ ನಡೆದ ಚುನಾವಣೆಯಲ್ಲಿ ೨೨.೩೩೪ ಮತ ಪಡೆದು ೧೫,೦೦೦ ಮತಗಳ ಅಂತರದಲ್ಲಿ ಜಯಗಳಿಸಿದರು. ವಾಮ ಪಕ್ಷಗಳ ಎಚ್‌.ಎಂ. ವೀರಭದ್ರಯ್ಯನವರು ೭,೨೬೯ ಮತ ಪಡೆದರು. ಕೋ.ಚನ್ನಬಸಪ್ಪ ತಮ್ಮ ‘ರೈತ ಪತ್ರಿಕೆ’ಯಲ್ಲಿ (ಮಾರ್ಚ್‌, ೧೯೫೬) ಚುನಾವಣೆಗೂ ಮುಂಚೆ ಅದರ ಒಳನೋಟ ಕೊಡುತ್ತಾರೆ: “ನಾನು ಮತದಾನ ಕ್ಷೇತ್ರದಲ್ಲಿ ಅಡ್ಡಾಡಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ದೊರೆಮಗನಿಗೆ ತಕ್ಕ ಹಾಗೆಯೇ ಪ್ರಚಾರವಿದೆ. ಈತನ ಪರವಾಗಿ ಪ್ರತಿಯೊಂದು ಫಿರ್ಕಾದಲ್ಲೂ ೩೦೪ ಜೀಪು, ಕರು, ವ್ಯಾನು ಕೆಲಸ ಮಾಡುತ್ತಿವೆ. ಪ್ರತಿ ಊರಲ್ಲಿ ಏಜೆಂಟರಿದ್ದಾರೆ. ಅವರಿಗೆ ಬೇಕಾಗುವ ವಾಹನ, ಧನ, ಜನ, ಮದ್ಯ ಎಲ್ಲ ಸರಬರಾಜಾಗುತ್ತಿದೆ. ಆದರೆ ಸ್ವತಂತ್ರ್ಯ ಉಮೇದುವಾರರ ಪ್ರಚಾರ ಸಪ್ಪೆ ಅವರಿಗೆ ವಾಹನ ಹಣದ ಕೊರತೆ ಇದೆ. ಇದರಿಂದಾಗಿ ದೊರೆ ಮಗನೇ ಗೆಲ್ಲಬಹುದು. ಗೆದ್ದರೆ ಜನರನ್ನು ಹಣದಿಂದ ಕೊಳ್ಳಬಹುದು ಎಂಬುದು ಸಾಬೀತಾಗುತ್ತದೆ.”

ಈ ಚುನಾವಣೆ ಅರಸು ಮನೆತನಕ್ಕೆ ಹೊಸ ತಿರುವನ್ನು ತಂದಿತು. ಎಲಿಗಾರ ತಿಮ್ಮಪ್ಪ ಈವರೆಗೆ ರಾಜಮನೆತನವನ್ನು ವಿರೋಧಿಸುತ್ತಿದ್ದರು. ಅವರ ಜೊತೆ ಒಂದು ವಿರೋಧಿ ಬಣವೇ ಇತ್ತು. ಚುನಾವಣೆ ಸಂದರ್ಭಕ್ಕೆ ಕಾಂಗ್ರೆಸ್‌ ಟಿಕೆಟ್‌ ಪಡೆಯುವ ಸಾಮರ್ಥ್ಯವಿತ್ತು. ಆದರೆ ಸಿಗಲಿಲ್ಲ. ಆಗ ಅವರ ಮುಂದಿದ್ದ ಆಯ್ಕೆಗಳೆಂದರೆ ಒಂದು: ಎಂ.ವೈ. ಘೋರ್ಪಡೆಯವರನ್ನು ಬೆಂಬಲಿಸುವುದು. ಎರಡು: ಸಂಯುಕ್ತ ವಿರೋಧಿ ಸಂಘಕ್ಕೆ ಸೇರುವುದು. ಈತನಕದ ರಾಜ ಮನೆತನದ ವಿರೋಧವನ್ನು ಮರೆತು ಕಾಂಗ್ರೆಸ್‌ನಲ್ಲಿ ಉಳಿಯುವ ಕಾರಣಕ್ಕಾಗಿ ಎಂ.ವೈ. ಘೋರ್ಪಡೆಯವರಿಗೆ ಬೆಂಬಲಿಸಿದರು. ಮಾರ್ಚ್‌ ೩೦,೧೯೫೬ರಂದು ಸಂಯುಕ್ತ ಕರ್ನಾಟಕಕ್ಕೆ ಪ್ರಕಟಣೆಗೆಂದು ಸ್ವತಃ ತಿಮ್ಮಪ್ಪ ಘೋರ್ಪಡೆಯವರಿಗೆ ಬೆಂಬಲ ಸೂಚಿಸಿ ಪತ್ರ ಬರೆದರು. ಈ ನಿರ್ಣಯದಿಂದ ತಿಮ್ಮಪ್ಪನ ಜೊತೆಗಿನವರಿಗೆ ಆಘಾತವಾಯಿತು. ಕೆಲವರು ಜೊತೆ ಉಳಿದರೆ ಇನ್ನು ಕೆಲವರು ಎಚ್‌.ಎಂ. ವೀರಭದ್ರಯ್ಯನವರನ್ನು ಬೆಂಬಲಿಸಿದರು. ಕೊನೆಪಕ್ಷ ತಿಮ್ಮಪ್ಪನವರು ಕಾಂಗ್ರೆಸ್‌ ವಿರೋಧಿ ಬಣವನ್ನು ಬೆಂಬಲಿಸಿದ್ದರೆ ಅರಸು ಮನೆತನದ ವಿರೋಧಿ ಬಣಕ್ಕೆ ಹೆಚ್ಚಿನ ಶಕ್ತಿ ಬರುತ್ತಿತ್ತು. ಸೋಲಿನ ಅಂತರವೂ ಕಡಿಮೆಯಾಗುತ್ತಿತ್ತು. ಈ ಸಂದರ್ಭದಲ್ಲಿ ಬಹುತೇಕರಿಗೆ ಎಲಿಗಾರ ತಿಮ್ಮಪ್ಪ ಅವಕಾಶವಾದಿ ರಾಜಕಾರಣಿಯಂತೆಯೇ ಕಂಡರು. ಜನರಲ್ಲಿ ರಾಜಮನೆತನದ ಬಗೆಗಿದ್ದ ಗೌರವ ‘ಕಾಂಗ್ರೆಸ್‌ ಮೇಲಿದ್ದ ಅಭಿಮಾನ’ ತಿಮ್ಮಪ್ಪನವರ ಬೆಂಬಲ ಎಂ.ವೈ. ಘೋರ್ಪಡೆಯವರ ವಿಜಯಕ್ಕೆ ಕಾರಣವಾದವು.

ಆ ಹೊತ್ತಿಗೆ ರಾಜವಂಶದ ಜನವಿರೋಧಿ ಅಂಶಗಳನ್ನೆಲ್ಲಾ ಗುರುತಿಸುವುದು ಅವುಗಳ ಬಗ್ಗೆ ಜನರಿಗೆ ತಿಳಿ ಹೇಳುವುದಕ್ಕೆ ಎಲಿಗಾರ ತಿಮ್ಮಪ್ಪ ಪ್ರಮುಖರಾಗಿದ್ದರು. ಯಜಮಾನ ಶಾಂತರುದ್ರಪ್ಪನವರು ಬಳ್ಳಾರಿ ಭಾಗದಿಂದಲೇ ಹೋರಾಟ ಮಾಡುತ್ತಿದ್ದರಾದರೂ ಅವರ ಅಂತಿಮ ಗುರಿ ಕುಮಾರಸ್ವಾಮಿಯನ್ನು ಅರಸರ ಕೈವಶದಿಂದ ಬಿಡಿಸುವುದಾಗಿತ್ತು. ಅಷ್ಟಾಗಿ ಯಜಮಾನರಿಗೆ ಸ್ಥಳೀಯರಿಗೆ ಬಲವೆಂದರೆ ತಿಮ್ಮಪ್ಪ. ಈ ಹಿಂದಿನ ಹೋರಾಟಗಳಲ್ಲಿ ಸಕ್ರಿಯವಾಗಿದ್ದವರು. ಒಮ್ಮೆಲೇ ಎಂ.ವೈ. ಘೋರ್ಪಡೆಯವರನ್ನು ಬೆಂಬಲಿಸುತ್ತಲೂ ಅನೇಕರು ವಿಚಲಿತರಾದರು. ಮೂಲದಿಂದಲೂ ಕಾಂಗ್ರೆಸ್‌ನಲ್ಲಿ ನಿಷ್ಠೆ ಇಟ್ಟ ತಿಮ್ಮಪ್ಪನವರು ಪಕ್ಷದ ಮೇಲಿನ ನಿಷ್ಠೆಯಿಂದ ರಾಜವಂಶವನ್ನು ಬೆಂಬಲಿಸಿದರೋ, ರಾಜರ ಆಮಿಷಗಳಿಗೆ ಬಲಿಯಾಗಿ ಬೆಂಬಿಲಿಸಿದರೋ ಅಥವಾ ರಾಜವಂಶದೆದುರು ಎಲ್ಲಿಯವರೆಗೆ ಹೋರಾಡುವುದು ಎಂಬ ಸೋತ ಸ್ಥಿತಿಯಲ್ಲಿ ಬೆಂಬಲಿಸಿದರೋ? ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಅಷ್ಟಕ್ಕೂ ತಿಮ್ಮಪ್ಪ ರಾಜವಂಶದ ಜೊತೆ ದೀರ್ಘಕಾಲ ಇರಲಿಕ್ಕಾಗಲಿಲ್ಲ. ಬೇಗನೆ ಹೊರಬಂದರು. ಚುನಾವಣೆ ಸಂದರ್ಭಕ್ಕೆ ತೆಗೆದುಕೊಂಡ ಅವರ ತೀರ್ಮಾನ ತುಂಬಾ ಇಕ್ಕಟ್ಟಿನದೇ ಇರಬಹುದು. ತಮ್ಮ ವೈಯಕ್ತಿಕ ಬದ್ಧತೆಗಿಂತ ಕಾಂಗ್ರೆಸ್‌ ಪಕ್ಷದ ಮೋಹಕ್ಕೆ ಬಿದ್ದದ್ದು ಅರವತ್ತರ ದಶಕದ ರಾಜಕೀಯ ವಾಸ್ತವ.

ಭಾರತದ ಒಕ್ಕೂಟದಲ್ಲಿ ಸೇರಿದ ಸಂಸ್ಥಾನಗಳ ವಾರಸುದಾರರಿಗೆ ರಾಜಧನ ಕೊಡುವುದಾಗಿ ಒಪ್ಪಂದವಾಗಿತ್ತು. ಸಂಸ್ಥಾನದ ಆದಾಯಕ್ಕೆ ತಕ್ಕಷ್ಟು ‘ಪ್ರಿವಿ ಪರ್ಸ್‌’ ಕೊಡುವ ನಿರ್ಣಯವಿತ್ತು. ಇದರ ನಿರ್ಧಾರಕ್ಕೆ ಕೆಲವು ನಿಯಮಾವಳಿಗಳಿದ್ದವು. ಯಾವುದೇ ರಾಜ್ಯದ ವಾರ್ಷಿಕ ಸರಾಸರಿ ವರಮಾನದ ಪ್ರಥಮ ಒಂದು ಲಕ್ಷದಲ್ಲಿ ಶೇಕಡ ೧೫ ರಷ್ಟು ‘ನಂತರದ ನಾಲ್ಕು ಲಕ್ಷದಲ್ಲಿ ಶೇ ೧೦% ಐದು ಲಕ್ಷಕ್ಕೂ ಹೆಚ್ಚಿನ ವರಮಾನದಲ್ಲಿ ಶೇ. ೭ರಷ್ಟು ’ ಒಟ್ಟು ಹತ್ತು ಲಕ್ಷಕ್ಕೆ ಮೀರದಂತೆ ರಾಜಧನ ನೀಡುವುದಾಗಿ ಸರ್ಕಾರ ತೀರ್ಮಾನಿಸಿತು. ಸೊಂಡೂರು ಸಂಸ್ಥಾನದ ವಾರ್ಷಿಕ ಆದಾಯ ಎರಡು ಲಕ್ಷವಿತ್ತು. ಈ ಆದಾಯಕ್ಕೆ ೨೫ ಸಾವಿರ ರಾಜಧನ ಸಿಗಬೇಕು. ಆದರೆ ಯಶವಂತರಾವ್‌ ಘೋರ್ಪಡೆಯವರು ಪಡೆಯುತ್ತಿದ್ದ ರಾಜಧನ ೯೦ ಸಾವಿರ. ಆಗ ಯಜಮಾನ್‌ ಶಾಂತರುದ್ರಪ್ಪನವರು ‘ಮಹಾರಾಜರು ಸರ್ಕಾರವನ್ನು ವಂಚಿಸುತ್ತಿದ್ದಾರೆ’ ಎಂದು ಕರಪತ್ರ ಹಂಚಿದರು. ಕೋ. ಚೆನ್ನಬಸಪ್ಪನವರ ‘ರೈತ ಪತ್ರಿಕೆ’ ಒಳಗೊಂಡಂತೆ ಹಲವು ಪತ್ರಿಕೆಗಳು ಈ ವಂಚನೆಯ ವಾಸ್ತವವನ್ನು ವರದಿ ಮಾಡಿದವು. ಇದರ ಒಟ್ಟು ಸಾರ ಹೀಗಿದೆ. “೯೦ ಸಾವಿರ ರೂಗಳ ರಾಜಧನ ಪಡೆಯಬೇಕಿದ್ದರೆ ವರ್ಷ ಸೊಂಡೂರು ವಾರ್ಷಿಕ ಸರಾಸರಿ ವರಮಾನ ೧೦ ಲಕ್ಷ ಇರಬೇಕು. ಒಂದು ವೇಳೆ ಹತ್ತು ಲಕ್ಷ ರೂ.ಗಳ ವರಮಾನವಿತ್ತು ಎಂದುಕೊಳ್ಳೋಣ. ಆಗ ೧೫೮ ಚದುರ ಮೈಲು ಭೂಮಿಗೆ ೧೦ ಲಕ್ಷ ವರಮಾನ ಬರಬೇಕಾದರೆ, ಚದುರ ಮೈಲು ಭೂಮಿಗೆ ೬೩೨೯ ರೂಗಳ ವರಮಾನವಿರಬೇಕಾಗುತ್ತೆ. ಒಂದು ಚದುರ ಮೈಲು ಭೂಮಿಯಿಂದ ಇಷ್ಟು ವರಮಾನ ಬರಬೇಕಾದರೆ ಇಲ್ಲಿ ಬರಿ ಬಂಗಾರವನ್ನೇ ಬಿತ್ತಿ ಬೆಳೆಯುತ್ತಿರಬೇಕು. ಪ್ರಜೆಗಳ ಲೆಕ್ಕಚಾರದಲ್ಲಿ ಅದನ್ನು ಹೀಗೂ ನೋಡಬಹುದು. ೧೦ ಲಕ್ಷ ಕೊಡುತ್ತಿದ್ದವರು ಸೊಂಡೂರಿನ ೧೫,೦೦೦ ಪ್ರಜೆಗಳು. ಜನಸಂಖ್ಯೆಯಲ್ಲಿ ಒಬ್ಬೊಬ್ಬರು ೬೬,೬೬ರಷ್ಟು ಕಂದಾಯ ಕೊಡಬೇಕು. ವಾಸ್ತವದಲ್ಲಿ ಇದು ನಂಬಲರ್ಹವಲ್ಲದ ಸಂಗತಿ” ಈ ಮಾಹಿತಿಯನ್ನು ನೀಡಿಯೇ ಯಜಮಾನರು ಕರಪತ್ರ ಹಂಚಿದರು.

ಈ ವಿಷಯ ನಮಗೆ ಸಂಬಂಧವೇ ಇಲ್ಲವೆನ್ನುವಷ್ಟರ ಮಟ್ಟಿಗೆ ರಾಜವಂಶಜರು ಪ್ರತಿಕ್ರಿಯಿಸಲಿಲ್ಲ.

ಸೊಂಡೂರಿನಂತಹ ಒಂದು ಸಣ್ಣ ಸಂಸ್ಥಾನವೇ ತಪ್ಪು ಆದಾಯ ತೋರಿಸಿ ೯೦ ಸಾವಿರದಷ್ಟು ರಾಜಧನ ಪಡೆಯಬೇಕಾದರೆ, ಇನ್ನು ಭಾರತದ ೬೦೦ ಸಂಸ್ಥಾನಗಳು ಎಷ್ಟು ರಾಜಧನವನ್ನು ಪಡೆದಿರಲಿಕ್ಕಿಲ್ಲ? ರಾಜಧನದಿಂದಾಗಿಯೇ ಮಾಜಿ ಮಹಾರಾಜರುಗಳು ಮೊದಲಿಗಿಂತ ವೈಭವದ ಜೀವನ ಪ್ರಾರಂಭಿಸಿದರು. ಪ್ರಜೆ ಮತ್ತು ದೊರೆಯ ನಡುವೆ ಇರುವ ಅಂತರ ಮತ್ತಷ್ಟು ಹೆಚ್ಚಾಯಿತು. ಕಾಂಗ್ರೆಸ್ ಸರ್ಕಾರ ಮಹಾರಾಜರನ್ನು ಪೋಷಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಜೊತೆಗಿದ್ದು ಕೆಲವು ಪ್ರಗತಿಪರರು ನಂತರ ಕಾಂಗ್ರೆಸ್‌ನ್ನು ವಿರೋಧಿಸತೊಡಗಿದರು. ಈ ಅಸಹನೆಯೇ ಕಾಂಗ್ರೆಸ್ಸೇತರ ಪಕ್ಷಗಳು ಹುಟ್ಟಿ ಬೆಳೆಯಲು ಕಾರಣವಾಯಿತು.

ವಿಗ್ರಹ ಭಂಜನೆ ಪ್ರಕರಣ

ಸೊಂಡೂರಿನ ಪ್ರಮುಖ ನವಿಲು ಸ್ವಾಮಿ ದೇವಸ್ಥಾನದಲ್ಲಿ ಒಂದು ಘಟನೆ ನಡೆಯಿತು. ಅಕ್ಟೋಬರ್ ೨೧.೧೯೫೯ರಲ್ಲಿ ದೇವರ ವಿಗ್ರಹವನ್ನು ಒಡೆದು ಹಾಕಿದರು. ಈ ದೇವಾಲಯ ಮಾಜಿ ದೊರೆಗಳ ಟ್ರಸ್ಟಿಗೆ ಒಳಪಟ್ಟಿದ್ದರಿಂದ ತಮ್ಮ ವಿರೋಧಿಗಳೇ ಇದನ್ನು ಮಾಡಿದ್ದರೆಂದು ಊಹಿಸಿ ಮೊಕದ್ದಮೆ ಹಾಕಿದರು. ಮೊಕದ್ದಮೆಯಲ್ಲಿ ಇದ್ದವರೆಂದರೆ ಎಚ್‌.ಎಂ. ಗುರುಶಾಂತಯ್ಯ, ಎಲಿಗಾರ ತಿಮ್ಮಪ್ಪ, ಓಂಕಾರಪ್ಪ, ಸುಬ್ಬಣ್ಣ, ಜಿಗಿನಿಹಳ್ಳಿ ಬಸವನಗೌಡ, ಭೂಪತಿ, ತ್ರಿಯಂಬಕ ಭಟ್ಟ ಮುಂತಾದ ಹನ್ನೊಂದು ಜನರಿದ್ದರು. ಇದು ಮಾಜಿ ದೊರೆಗಳ ಪೂರ್ವನಿಯೋಜಿತ ಕಾರ್ಯ ಎಂದು ನಂತರ ತಿಳಿಯಿತು. ಈ ಪ್ರಕರಣಕ್ಕೆ ಕಾರಣ ಹೀಗಿತ್ತು. ನವಿಲು ಸ್ವಾಮಿ ದೇವಸ್ಥಾನದ ಬಳಿ ಬೆಲೆಬಾಳುವ ಲೋಹದ ಅದಿರು ಯಥೇಚ್ಚವಾಗಿತ್ತು. ಇಲ್ಲಿ ಗಣಿಯನ್ನು ನಡೆಸಲು ಗೊಗ್ಗ ಮರಿಸ್ವಾಮಿ ಎಂಬುವವರು ಸರ್ಕಾರದಿಂದ ಲೈಸೆನ್ಸ್ ಪಡೆದಿದ್ದರು. ಆದರೆ ಮಾಜಿ ರಾಜರು ಇಲ್ಲಿ ಗಣಿಯನ್ನು ಉಪಯೋಗಿಸದಂತೆ ತಡೆಯಾಜ್ಞೆ ತಂದರು. ಇದರಿಂದಾಗಿ ಮರಿಸ್ವಾಮಿಯವರು ಈ ಸೇಡು ತೀರಿಸಿಕೊಳ್ಳಲು ನವಿಲುಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ಸಾಮಾನುಗಳನ್ನು ಕಳವು ಮಾಡಿ ವಿಗ್ರಹವನ್ನು ನಾಶ ಮಾಡಿದರು ಎಂದು ಆರೋಪಿಸಲಾಗಿತ್ತು. ಕೂಡ್ಲಿಗಿಯ ಸರ್ಕಲ್ ಇನ್ಸ್‌ಪೆಕ್ಟರ್ ಈ ಬಗ್ಗೆ ತಪಾಸಣೆ ನಡೆಸಿ ಖಟ್ಲೆ ಹಾಕಿದ್ದರು.

ಕೋರ್ಟಿನಲ್ಲಿ ಈ ಸಂಬಂಧಿ ವಿಚಾರಣೆ ನಡೆದಾಗ ಒಂದು ಸೋಜಿಗದ ಸಂಗತಿ ನಡೆಯಿತು. ಆರೋಪಿಗಳಲ್ಲೊಬ್ಬರಾದ ತ್ರಿಯಂಬಕ ಭಟ್ಟ ಎಂಬುವವರು ತಮ್ಮ ಆರೋಪವನ್ನು ಒಪ್ಪಿಕೊಂಡರು. ಹೀಗಾಗಿ ಅವರಿಗೆ ಮೂರು ತಿಂಗಳ ಶಿಕ್ಷೆ ವಿಧಿಸಲಾಯಿತು. ಈ ಕೇಸನ್ನು ಪ್ರತ್ಯೇಕಿಸಿ ಉಳಿದ ಆರೋಪಿಗಳ ಪರವಾಗಿ ನಾಲ್ಕುಜನ ಸಾಕ್ಷಿ ನುಡಿದರು. ಅಂತಿಮವಾಗಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟರಾದ ಎಲ್. ಕುಮಾರಸ್ವಾಮಿ ಇವರು ಏಪ್ರಿಲ್ ೧೧.೧೯೫೯ರಂದು ತೀರ್ಪು ನೀಡಿದರು. ಸೊಂಡೂರಿನ ಪ್ರಮುಖ ವರ್ತಕರು ಗಣಿ ಮಾಲಿಕರು ಆದ ಗೊಗ್ಗ ಮರಿಸ್ವಾಮಯ್ಯನವರನ್ನು ಒಳಗೊಂಡು ೧೧ ಜನ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದರು. ಈ ತೀರ್ಮಾನದ ಮೇಲೆ ಮೈಸೂರು ಸರಕಾರ ಹೈಕೋರ್ಟಿನಲ್ಲಿ ತಕರಾರು ಹೂಡಿತು. ಅಲ್ಲಿಯೂ ಸಹ ನ್ಯಾಯ ಪೀಠವು ಹೊಸಪೇಟೆಯ ಮ್ಯಾಜಿಸ್ಟ್ರೇಟ್ ಕೋರ್ಟಿನ ತೀರ್ಮಾನವನ್ನೇ ಎತ್ತಿಹಿಡಿಯಿತು.

ಈ ತೀರ್ಪಿನಿಂದ ಮಹಾರಾಜರು ವಿಚಲಿತರಾದರು. ನ್ಯಾಯದೆದುರು ದೊರೆ ಪ್ರಜೆ ಎಲ್ಲರೂ ಸಮಾನರು ಎನ್ನುವುದನ್ನು ಈ ತೀರ್ಪು ಬೆಂಬಲಿಸಿತು. ಮಾಜಿ ದೊರೆಗಳ ಅಧಿಕಾರದ ದುರುಪಯೋಗವನ್ನು ಪ್ರಶ್ನಿಸುತ್ತಾ ಬಂದವರು ಇದನ್ನು ಸಂಭ್ರಮಿಸಿದರು. ಈ ತೀರ್ಪಿನ ಒಂದು ಹೀಗಿದೆ.

ನವಿಲುಸ್ವಾಮಿ ಮೂರ್ತಿ ಭಂಜನೆ ಅಪವಿತ್ರ ಕಾರ್ಯದ ಹಿಂದೆ ಯಾರದೋ ಕೈವಾಡವಿದೆಮೊದಲನೆಯ ಆಪಾದಿತನಾಗಲಿಉಳಿದ ಆಪಾದಿತರಾಗಲಿ ಅಲ್ಲಆಪಾದಕರು  ನಿಷ್ಕಳಂಕಿತರ ಮೇಲೆ ತಪ್ಪು ಹೊರಿಸಲು ಪ್ರಯತ್ನ ಮಾಡಿದ್ದಾರೆಮಾಜಿ ಸೊಂಡೂರು ರಾಜರು ಕುಮಾರಸ್ವಾಮಿ ಮತ್ತು ನವಿಲು ಸ್ವಾಮಿ ದೇವಾಲಯಗಳ ಪಾರಂಪರ್ಯ ಹಕ್ಕಿನ ಧರ್ಮದರ್ಶಿಗಳೆಂದು ಸ್ಥಾಪಿಸಿರುವ ಸರಕಾರದ ಆಜ್ಞೆಯನ್ನು ನ್ಯಾಯಸ್ಥಾನದ ಮುಂದಿಟ್ಟಿಲ್ಲಆದ ಕಾರಣ ಸೊಂಡೂರು ರಾಜರು  ದೇವಾಲಯಗಳ ಧರ್ಮದರ್ಶಿಗಳೆಂದು ಹೇಳುವುದು ಸಂದೇಹಾಸ್ಪದವಾಗಿದೆ೯ನೇ ಆಪಾದಿತನಿಗೆ ಜಮೀನೊಂದರಲ್ಲಿ ಗಣಿ ಲೈಸನ್ಸ್ ಕೊಡಲಾಗಿದೆ ಜಮೀನು ನವಿಲು ಸ್ವಾಮಿ ದೇವಾಲಯಕ್ಕೆ ಸೇರಿದ್ದೆಂದು ತೋರಿಸಲು ಯಾವ ಆಧಾರವೂ ಇಲ್ಲಆಪಾದಕರ ವಾದ ಸರಣಿಯು ಕತೆಯ ವ್ಯಾಧಿಗೊಳಗಾಗಿದೆನ್ಯಾಯಸ್ಥಾನದ ಮುಂದಿರುವ ಸಾಕ್ಷ್ಯ ಸಾಹಿತ್ಯ ಇದನ್ನು ಸ್ಥಾಪಿಸುತ್ತದೆ ಮೊಕದ್ದಮೆಯಲ್ಲಿ ಆಪಾದಕರ ನಡತೆ  ಅತೃಪ್ತಿಕರವಾದದ್ದೆಂದು ನಾನು ಹೇಳದೆ ವಿಧಿ ಇಲ್ಲಅಷ್ಟೇ ಅಲ್ಲ ಆಪಾದಕರು ಪಕ್ಷಪಾತಪೂರಿಗಳಾಗಿದ್ದರೆಂದು ನನ್ನ ಅಭಿಪ್ರಾಯ ಆಪಾದಕರು ಮೊಕದ್ದಮೆಯನ್ನು ನಡೆಸಿರುವ ವಿಚಾರಣೆ ನೋಡಿದರೆ ಇವರು ನಾಟಕ ಮಾಡಿದ್ದಾರೆಂಬ ಭಾವನೆ ನನ್ನ ಮನಸ್ಸಿನ ಮೇಲೆ ಮೂಡುತ್ತದೆಆಪಾದಕರ ಮೇಲೆ ತಪ್ಪು ಹೊರಿಸಬೇಕೆಂಬ ಉದ್ದೇಶದಿಂದ ಆಪಾದಿತರು ಕೆಲವು ರಿಜಿಸ್ಟಾರ್ ಗಳಲ್ಲಿ ತಿದ್ದುಪಡಿಗಳನ್ನು ಮಾಡಿದ್ದಾರೆತಮ್ಮ ಉದ್ದೇಶ ಸಾಧನೆಗಾಗಿ ಕೆಲವರ ಹೆಸರುಗಳನ್ನು ಸೇರಿಸಿದ್ದಾರೆಂದು ನನಗೆ ಖಚಿತವಾಗಿದೆ.

ಈ ತೀರ್ಪನ್ನು ಗಮನಿಸಿದರೆ ಕೆಲವು ಅಂಶಗಳು ತಿಳಿಯುತ್ತವೆ. ಗಣಿಗಾರಿಕೆ ತುಂಬಾ ಲಾಭದಾಯಕ ಎನ್ನುವುದು ಮಾಜಿ ದೊರೆಗಳಿಗೆ ತಿಳಿದಿತ್ತು. ಅದೇ ಹೊತ್ತಿನಲ್ಲಿ ಗಣಿಗಾರಿಕೆಯನ್ನು ಬೇರೆಯವರು ಮಾಡುವುದನ್ನು ನಿಯಂತ್ರಿಸಲಾಯಿತು. ಗಣಿಗಾರಿಕೆ ದೊರೆಗಳ ಏಕಸ್ವಾಮ್ಯ ಎನ್ನುವ ಅರ್ಥದಲ್ಲಿ ಅದರ ಮೇಲಿನ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಪ್ರಜೆಗಳು ಯಾರಾದರೂ ಗಣಿಗಾರಿಕೆಯ ಲೈಸೆನ್ಸ್ ಪಡೆಯಲು ಯತ್ನಿಸಿದರೆ ದೊರೆಗಳು ವ್ಯವಸ್ಥಿತವಾಗಿ ಇದನ್ನು ತಪ್ಪಿಸುತ್ತಿದ್ದರು. ಅವರಿಗೆ ಗೊತ್ತಿತ್ತು. ಗಣಿಗಾರಿಕೆಯನ್ನು ಬೇರೆ ಯಾರೇ ಮಾಡಲಿ ಅವರು ನಮಗೆ ಎದುರಾಳಿಯಾಗಿ ನಿಲ್ಲಬಲ್ಲರೆಂದು. ಗೊಗ್ಗ ಮರಿಸ್ವಾಮಿಯವರು ಪ್ರಬಲ ವರ್ತಕರಾಗಿದ್ದರು. ಹಾಗಾಗಿಯೇ ದೊರೆಗಳ ಪ್ರಾಬಲ್ಯವನ್ನು ಕುಗ್ಗಿಸಲಿಕ್ಕಾಗಿಯೇ ಈ ವಿಗ್ರಹಭಂಜನೆ ಪ್ರಕರಣ ನಡೆಯಿತು. ರಾಜಮನೆತನದ ವಿರುದ್ಧ ಪ್ರತಿಭಟಿಸುತ್ತಿದ್ದವರನ್ನೆಲ್ಲಾ ಈ ಮೊಕದ್ದಮೆಯಲ್ಲಿ ಸೇರಿಸಲಾಯಿತು. ಒಂದು ವೇಳೆ ನ್ಯಾಯಾಲಯದ ತೀರ್ಪು ದೊರೆಗಳ ಪರವಾಗಿದ್ದರೆ ಇವರಿಗೆಲ್ಲ ಜೈಲು ಶಿಕ್ಷೆ ಆಗುತ್ತಿತ್ತು, ಈ ಘಟನೆಯಿಂದಾಗಿ ಮತ್ತಾರು ರಾಜಮನೆತನದ ವಿರುದ್ಧ ತಲೆ ಎತ್ತಲಾರರು ಎನ್ನುವುದು ದೊರೆಗಳ ಲೆಕ್ಕಚಾರ. ಈ ಲೆಕ್ಕಚಾರವನ್ನೇ ನ್ಯಾಯಾಲಯ ಬಯಲುಗೊಳಿಸಿದ್ದು ಚಾರಿತ್ರಿಕವಾಗಿ ಪ್ರಮುಖ ಅಂಶ.

ಮಾಜಿ ದೊರೆಗಳ ವಿರೋಧಕ್ಕೆ ಹಲವು ಕಾರಣಗಳಿದ್ದವು. ದೊರೆಗಳು ಕುಮಾರಸ್ವಾಮಿ ದೇವಸ್ಥಾನದ ವಂಶಾನುಗತಿ ಟ್ರಸ್ಟಿ ಅಲ್ಲ ಎನ್ನುವುದು ಒಂದು. ಸಂಸ್ಥಾನದ ಕಾನೂನುಗಳ ಮೂಲಕ ತಾವೇ ವಂಶಾನುಗತ ಟ್ರಸ್ಟಿ ಎಂದು ಕರೆದುಕೊಂಡು ದೇವಸ್ಥಾನದ ಸಂಪತ್ತುಗಳನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ‘ಪರಿಶೀಲನೆ ನಡೆಯಬೇಕು ಎಂದು ಕೆಲವರು ಸರ್ಕಾರದ ಗಮನಕ್ಕೆ ತಂದಿದ್ದರು. ಆದರೆ ಮೂಲ ಟ್ರಸ್ಟಿ ಯಾರು ಎನ್ನುವ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಸಾರ್ವಜನಿಕವಾದ’ ಕುಮಾರಸ್ವಾಮಿ ದೇವಾಲಯ ದೊರೆಗಳ ಟ್ರಸ್ಟಿಗೆ ಹೇಗೆ ಸೇರುತ್ತದೆ ಎನ್ನುವುದು ರಾಜಮನೆತನವನ್ನು ವಿರೋಧಿಸುವವರ ವಾದ ಸರಣಿಯಾಗಿತ್ತು. ಯಜಮಾನ ಶಾಂತರುದ್ರಪ್ಪನವರು ಮಾರ್ಚ್‌ ೧೪.೧೯೬೦ರಲ್ಲಿ ಕರಪತ್ರ ಪ್ರಕಟಿಸಿ ವಂಶಾನುಗತ ಟ್ರಸ್ಟಿ ಯಾರು ಎಂಬುದನ್ನು ಖಚಿತ ಪಡಿಸಿದರು. ಅದು ಹೀಗಿತ್ತು.

ಸೊಂಡೂರು ಮಾಜಿ ದೊರೆ ಶ್ರೀ ಕುಮಾರಸ್ವಾಮಿ ದೇವಾಲಯದ ವಂಶ ಪಾರಂಪರ್ಯ ಧರ್ಮಕರ್ತರಲ್ಲ ಎಂಬುದಕ್ಕೆ ದಾಖಲೆಗಳು ಈಗ ದೊರೆತಿವೆ. ಚಿಕ್ಕ ಸೊಂಡೂರಿನ (ಈಗಿನ ಲಕ್ಷೀಪುರದಿವಂಗತ ಮುದಕನಗೌಡರು ಎಂಬ ಓರ್ವ ವ್ಯಕ್ತಿಯು ೧೮೪೮ರಲ್ಲಿ ಕುಮಾರಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾಗಿದ್ದರು೧೯೮೪ರಲ್ಲಿ ಸೊಂಡೂರಿನ ಬ್ರಿಟೀಷ್ ಸರಕಾರದ ಏಜೆಂಟರಾಗಿದ್ದ ಜೆ.ಮೆಕಾರ್ಥೆ ಎನ್ನುವವರು ತಾ೧೮ ಡಿಸೆಂಬರ್ ನಲ್ಲಿ ನೀಡಿರುವ ರಸೀದಿ ಇದೆ. ಇದರ ಪ್ರಕಾರ ಮುದುಕನಗೌಡರೇ ಕುಮಾರಸ್ವಾಮಿ ದೇವಸ್ಥಾನದ ಭೂಮಿಗಳ ಕಂದಾಯವನ್ನು ವಸೂಲಿ ಮಾಡಿದೇವಸ್ಥಾನದ ಧರ್ಮಕರ್ತರೆಂದು ಭೂಮಿ ಸಾಗುವಳಿದಾರರಿಗೆ ರಸೀದಿ ಕೊಟ್ಟಿದ್ದಾರೆ೧೮೮೪ರಲ್ಲಿ ಕೊಟ್ಟ ರಸೀದಿಗಳು ಈಗಲೂ ಕೆಲವರಲ್ಲಿ ಇವೆಅವುಗಳು ಸುಳ್ಳೆಂದು ಹೇಳಲು ಯಾವ ಆಧಾರವೂ ಇಲ್ಲ.

ಹೀಗೆ ಕರಪತ್ರ ಪ್ರಕಟಿಸಿದ ಯಜಮಾನ ಶಾಂತರುದ್ರಪ್ಪನವರು ಮಾಜಿ ದೊರೆಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಮುದುಕನ ಗೌಡರು ಮೂಲ ಟ್ರಸ್ಟಿಯಾಗಿರುವಾಗ ಮಾಜಿ ದೊರೆಗಳು ವಂಶಪಾರಂಪರ್ಯ ಧರ್ಮಕರ್ತರು ಹೇಗಾದರು? ಈ ಮಾಜಿ ದೊರೆ ವಂಶಪಾರಂಪರ್ಯ, ಧರ್ಮಕರ್ತನೆಂಬುದು ನಿಜವಾದರೆ ಈ ದೊರೆ ಮುದುಕನಗೌಡರ ವಂಶದಲ್ಲಿ ಹುಟ್ಟಿರಬೇಕು. ಹಾಗಿದ್ದರೆ ಇವರು ದೊರೆಗಳು ಹೇಗಾದರು? ಇಲ್ಲದೆ ಇದ್ದರೆ ೧೮೪೮ರಲ್ಲಿ ಕೊಟ್ಟ ರಸೀದಿಗಳು ಮೆಕಾರ್ಥೆಯವರ ಅಧಿಕಾರ ಇವೆಲ್ಲ ಸುಳ್ಳಾಗಬೇಕಾಗುತ್ತದೆ. ಇವುಗಳಲ್ಲಿ ಯಾವುದು ಸತ್ಯ ಎಂದು ರಾಜವಂಶವನ್ನು ಗೇಲಿಮಾಡಿದರು. ಸೊಂಡೂರಿನ ಬಹುತೇಕರಿಗೆ ಈ ವಿಷಯ ಗೊತ್ತಿತ್ತು. ಆದರೆ ಯಜಮಾನರಂತೆ ಪುರಾವೆಗಳನ್ನು ಒದಗಿಸಿ ರಾಜರೊಂದಿಗೆ ನೇರ ಜಗಳಕ್ಕೆ ಇಳಿಯುವುದು ಅಸಾಧ್ಯವಾಗಿತ್ತು. ಆದರೆ ಮಾಜಿ ದೊರೆಗಳು ಯಜಮಾನರ ಯಾವ ಪ್ರಶ್ನೆಗಳಿಗೂ ಉತ್ತರಿಸಲಿಕ್ಕೆ ಹೋಗಲಿಲ್ಲ. ಆದರೆ ಯಜಮಾನರನ್ನು ಶಕ್ತಿ ಗುಂದಿಸುವ ಸಮಯಕ್ಕಾಗಿ ಕಾಯುತ್ತಿದ್ದರು. ಸೊಂಡೂರಿನ ರಾಜಮನೆತನದ ವಿರುದ್ಧ ಇಂತಹ ಸಣ್ಣ ಸಣ್ಣ ಸಂಘರ್ಷಗಳು ನಡೆಯುತ್ತಲೇ ಇದ್ದವು. ಮಾಜಿ ರಾಜರು ಅಧಿಖಾರ ಮತ್ತು ಸರಕಾರದ ಜೊತೆ ಇದ್ದದರಿಂದ ಇವುಗಳಿಗೆ ಸಿಗಬೇಕಾದ ತೀವ್ರ ಪರಿಣಾಮ ದೊರೆಯುತ್ತಿರಲಿಲ್ಲ.

ಸುಶೀಲ ರಾಜೆಯವರ ಭೇಟಿ

ಮಾಜಿ ದೊರೆ ಯಶವಂತರಾವ್ ಘೋರ್ಪಡೆ ಜೂನ್ ೨೦.೧೯೨೮ರಂದು ಸೊಂಡೂರು ರಾಜರಾಗಿ ನೇಮಕಗೊಂಡರು. ಅಲ್ಲಿನ ಜನರಿಗೆ ಯಶವಂತರಾವ್ ಮೂಲ ರಾಜವಂಶಜರಲ್ಲ ಎಂದು ತಿಳಿದಿತ್ತು. ಬ್ರಿಟಿಷ್ ರೆಸಿಡೆಂಟರೊಂದಿಗಿನ ಒಪ್ಪಂದ ಗುಪ್ತವಾಗಿ ನಡೆದು ರಾಜಗದ್ದುಗೆ ಏರಿದ್ದರು. ಈ ಕಾರಣದಿಂದ ಸೊಂಡೂರು ಜನರಲ್ಲಿ ಯಶವಂತರಾವ್ ನಿಜವಾದ ವಾರಸುದಾರರಲ್ಲ ಎನ್ನುವ ಬಗೆಗೆ ಅಸಮಾಧಾನವಿತ್ತು. ರಾಜರ ವಿರುದ್ಧ ಎತ್ತುತ್ತಿದ್ದ ಪ್ರಶ್ನೆಗಳಲ್ಲಿ ವಾರಸು ದಾರಿಕೆಯ ಪ್ರಶ್ನೆಯೂ ಒಂದು. ಈ ಹಿಂದನ ರಾಜಮನೆತನದ ಕೊನೆಯ ವಾರಸುದಾರರಾದ ವೆಂಕಟರಾವ್ ರಾವ್ ಸಾಹೇಬರು ಜುಲೈ ೨೮.೧೯೨೭ರಲ್ಲಿ ನಿಧನರಾದರು. ಅವರಿಗೆ ಒಬ್ಬಳೆ ಮಗಳಿದ್ದಳು. ಆಕೆಯೇ ಸುಶೀಲ ರಾಜೆ ಅಲಿಯಾಸ್ ಶ್ರೀಮತಿ ಅಕ್ಕಾ ಸಾಹೇಬ. ರಾವ್‌ಸಾಹೇಬ ನಿಧನ ಹೊಂದಿದಾಗ ರಾಜಕುಮಾರಿ ಸುಶೀಲ ರಾಜೆ ಮೈನರ್‌ ಹುಡುಗಿಯಾಗಿದ್ದಳು. ಆಕೆ ವಾಸ್ತವದಲ್ಲಿ ಸಂಸ್ಥಾನದ ರಾಣಿಯಾಗಬೇಕಿತ್ತು. ೧೪ನೇ ವಯಸ್ಸಿನಲ್ಲಿಯೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದಳು. ಯಶವಂತರಾವ್‌ ಘೋರ್ಪಡೆಯವರು ಸೊಂಡೂರು ಸಂಸ್ಥಾನದ ದೊರೆಯಾದ ನಂತರ ರಾಜ್ಯದ ವಾರಸುದಾರಿಕೆಯನ್ನು ಕಳೆದುಕೊಂಡು ಒಬ್ಬ ಸಾಮಾನ್ಯ ಸ್ತ್ರೀಯಂತೆ ಮದ್ರಾಸಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಉಪಜೀವನ ನಡೆಸುತ್ತಿದ್ದಳು.

ಸುಶೀಲ ರಾಜೆ ತಾನು ೧೪ ವರ್ಷದವಳಿದ್ದಾಗ ಸೊಂಡೂರು ಬಿಟ್ಟು ಹೋದವಳು. ಮತ್ತೆ ನವಂಬರ್‌ ೨೫.೨೯೬೨ರಲ್ಲಿ ಮರಳಿದಳು. ಬರುವ ಮೊದಲೇ ಸೊಂಡೂರು ತಾಲೂಕಿನಾದ್ಯಂತ ಸುಶೀಲ ರಾಜೆಯ ಪರಿಚಯ ಮಾಡುವ ಪ್ರಚಾರ ಕೈಗೊಂಡರು. ನಿಜವಾದ ವಾರಸುದಾರಳು ಸೊಂಡೂರಿಗೆ ಬರುತ್ತಿದ್ದಾಳೆಂದು ಜನರು ಭಾವನಾತ್ಮಕವಾಗಿ ಸ್ವಾಗತ ಕೋರಲು ಉತ್ಸುಕರಾದರು. ಎಲಿಗಾರ ತಿಮ್ಮಪ್ಪ, ಯಜಮಾನ ಶಾಂತರುದ್ರಪ್ಪ ಮುಂತಾದವರು ಈಗಿರುವ ರಾಜಗಾದಿಯನ್ನು ರಾಜಕುಮಾರಿಗೆ ಕೊಡಿಸಬೇಕೆಂದೂ ‘ನ್ಯಾಯವಾಗಿ ಈಗ ದೊರೆಯುತ್ತಿರುವ ರಾಜಧನ ಇವರಿಗೆ ದೊರೆಯಬೇಕೆಂದೂ’ ತಮ್ಮ ರಾಜವಂಶದ ವಿರುದ್ಧದ ಹೋರಾಟಕ್ಕೆ ಹೊಸ ತಿರುವು ಪಡೆಯತೊಡಗಿದರು. ಲಕ್ಷ್ಮೀಪುರದ ನಾಗಪ್ಪ ಈ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ, ‘ಲೇಟ್‌ಮಹಾರಾಜರ ಮಗಳು ಬರ್ತಾಳಂತೆ ಹಳ್ಳಿಗಳಿಂದ ಜನ ಬಂದಿದ್ರು ಹೆಣ್ಣು ಮಕ್ಕಳಂತು ಬಾರಿ ನೆರಿದಿದ್ರು. ನಮ್ಮ ಮಹಾರಾಣಿ ಆಗ್ಬೇಕಾದವ್ರು ನರ್ಸ್‌ ಆಗ್ಯಾರಲ್ಲ ಅಂತ ಕೆಲವ್ರು ಕಣ್ಣೀರು ಹಾಕಿದ್ರು, ಎನ್ನುತ್ತಾರೆ.

ಸುಶೀಲ ರಾಜೆ ಆಗ ಕರ್ನಾಟಕದ ಬ್ಲಡ್‌ಬ್ಯಾಂಕಿನ ಶಾಖಾಧ್ಯಕ್ಷೆ ಆಗಿದ್ದರು. ರಾಜ್ಯ ಅರಣ್ಯ ಸಚಿವ ರಾಚಯ್ಯನವರ ಜೊತೆ ಸೊಂಡೂರಿಗೆ ಬಂದರು. ಜನತೆ ತುಂಬಾ ತನ್ಮಯರಾಗಿ ಆಕೆಗೆ ಸ್ವಾಗತವನ್ನು ಕೋರಿದರು. ಪಾಟೀಲ ಪುಟ್ಟಪ್ಪನವರು ತಮ್ಮ ‘ಪ್ರಪಂಚ’ ಪತ್ರಿಕೆಯಲ್ಲಿ ಹೀಗೆ ಬರೆದರು “ಸೊಂಡೂರಿನ ಜನತೆ ತಮ್ಮನ್ನು ಹೆತ್ತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಸ್ವರ್ಗೀಯ ದೊರೆ ವೆಂಕಟರಾವ್‌ ಅವರ ಪುತ್ರಿ ಸುಶೀಲ ರಾಜೆ ಇವರನ್ನು ಮೊದಲ ಬಾರಿಗೆ ನೋಡುತ್ತಿದ್ದು, ತಮ್ಮ ನೆಚ್ಚಿನ ಸಹೋದರಿಯಂತಿರುವ ಅಕ್ಕಾ ಸಾಹೇಬರಿಗೆ ಭವ್ಯ ಸ್ವಾಗತವನ್ನು ಹೃತ್ಪೂರ್ವಕವಾಗಿ ನೀಡಿದರು. ಬಹುದಿನದ ನಂತರ ಬಂದ ತಮ್ಮ ಅಕ್ಕಾ ಸಾಹೇಬರ ಪಾದಕ್ಕೆ ವಂದಿಸಿ ನಮಸ್ಕರಿಸುತ್ತಿದ್ದ ಸಹೋದರಿಯರನ್ನು ಹಿಡಿದೆತ್ತಿ ಆಲಂಗಿಸಿಕೊಂಡು ರಾಷ್ಟ್ರರಕ್ಷಣೆಗಾಗಿ ಮುಂದಾಗಿ ನಿಮ್ಮ ಸೇವೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದ ಆ ದೃಶ್ಯ ಕಂಡ ಕಣ್ಣು ಧನ್ಯ. ಈ ದೃಶ್ಯವನ್ನು ನೋಡುತ್ತಿದ್ದರೆ, ರಾಷ್ಟ್ರರಕ್ಷಣೆಗೆಂದು ಧರೆಗಿಳಿದು ಬಂದ ದೇವತೆಯೇ ಎಂಬಂತೆ ನೋಡಿದವರ ಹೃದಯ ಮನಸ್ಸಿನಲ್ಲಿ ಸಂತೋಷ ಉಕ್ಕಿ ಹರಿಯುತ್ತಿತ್ತು. ಕಣ್ಣಲ್ಲಿ ಆನಮದ ಬಾಷ್ಪ ಮೂಡಿ ಬಂದವು.”

ಸುಶೀಲ ರಾಜೆಯವರು ಛತ್ರಿಭಾಗ್‌ದಲ್ಲಿರುವ ತಮ್ಮ ತಂದೆಯ ಸಮಾಧಿಗೆ ಭಕ್ತಿಪೂರ್ವಕ ಗೌರವ ಸಲ್ಲಿಸಿ ನಂತರ ಕೃಷ್ಣನಗರಕ್ಕೆ ತೆರಳಿ ಜನತೆಯನ್ನುದ್ದೇಶಿಸಿ ಮಾತನಾಡಿದರು. ಬ್ಲಡ್‌ಬ್ಯಾಂಕಿಗೆ ಜನರು ರಕ್ತವನ್ನು ಕಾಣಿಕೆಯಾಗಿ ನೀಡಬೇಕೆಂದು ಕರೆಯಿತ್ತರು. ಹಾಗೆ ರಕ್ತದಾನ ಮಡ ಬಯಸುವವರು ಅಲ್ಲಂ ಕರಿಬಸಪ್ಪ ಎಂ.ಎಲ್‌.ಎ ಅವರಲ್ಲಿ ತಮ್ಮ ಹೆಸರು ಕೊಡಬೇಕೆಂದು ತಿಳಿಸಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಿದ ಕಿತ್ತೂರ ರಾಣಿ ಚನ್ನಮ್ಮನ ನಾಡಿನವರಾದ ನಾವು ಹಿಂದೆ ಬೀಳದೆ ವೀರಾವೇಶದಿಂದ ಯಾವುದೇ ಸಂದರ್ಭವನ್ನು ಎದುರಿಸಬಲ್ಲೆವು. ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂದು ವಿಜಯನಗರದ ವೀರಭೂಮಿಯ ನಿವಾಸಿಗಳಾದ ನಿಮಗೆ ಸಂದೇಶ ಕೊಡುತ್ತೇನೆಂದು ಜನತೆಗೆ ಮನವಿ ಮಾಡಿದರು.

ಯಶವಂತರಾವ್‌ ಘೋರ್ಪಡೆಯವರಿಗೆ ಸುಶೀಲ ರಾಜೆ ಬರುತ್ತಿರುವ ವಿಷಯ ತಿಳಿದು ಸಂಸಾರ ಸಮೇತ ಪ್ರವಾಸ ಕೈಗೊಂಡಿದ್ದರು. ರಾಜೆಯವರು ಜನರಲ್ಲಿ ತಮ್ಮ ರಾಜ್ಯದ ಅಧಿಕಾರದ ಬಗೆಗೆ ಯಾವ ಪ್ರಸ್ತಾಪವನ್ನು ಮಾಡಲಿಲ್ಲ. ತಾನು ಸಾಮಾನ್ಯ ಪ್ರಜೆ ಎಂಬ ಭಾವದಲ್ಲಿಯೇ ಜನರನ್ನು ಕುರಿತು ಮಾತನಾಡಿದರೇ ಹೊರತು ತಾನು ರಾಜಕುಮಾರಿ ಎಂಬ ಅರ್ಥದಲ್ಲಿ ಅಲ್ಲ. ಯಾವುದೋ ಸಂದರ್ಭದಲ್ಲಿ ಕೈತಪ್ಪಿ ಹೋದ ರಾಜ್ಯದ ಅಧಿಕಾರವನ್ನು ಮತ್ತೆ ಮರಳಿ ಪಡೆಯಬೇಕೆಂಬ ಯಾವ ಹಂಬಲವನ್ನು ಅವರು ತಮ್ಮ ಭೇಟಿಯಲ್ಲಿ ತೋರಲಿಲ್ಲ. ರಾಜಶಾಹಿಯನ್ನು ವಿರೋಧಿಸುತ್ತಾ ಬಂದವರೆಲ್ಲ ಈ ಭೇಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಆದರೆ ಅವರ ಭಾಗವಹಿಸುವಿಕೆಗೆ ಕಾರಣಗಳಿದ್ದವು. ರಾಜೆಯವರಿಗೆ ನೀವೇ ನಮ್ಮ ರಾಜಕುಮಾರಿ, ಈ ರಾಜ್ಯ ನ್ಯಾಯವಾಗಿಯೂ ನಿಮ್ಮದು, ಅದನ್ನು ಪಡೆಯಿರಿ ನಾವು ಬೆಂಬಲಿಸುತ್ತೇವೆ ಎಂದು ಮನವೊಲಿಸಲು ಪ್ರಯತ್ನಿಸಿದರು. ಈ ಪ್ರಯತ್ನಕ್ಕೆ ಅವರು ಒಪ್ಪಲಿಲ್ಲ. ನಾನು ಸಾಮಾನ್ಯ ನರ್ಸ್‌ ಆಗಿದ್ದುಕೊಂಡೆ ಜನತೆಯ ಸೇವೆಯನ್ನು ಮಾಡುತ್ತಿದ್ದೇನೆ. ಅಧಿಕಾರ ಸಂಪತ್ತು ಯಾವುದೂ ಬೇಡ ಎನ್ನುವ ರಾಜಕುಮಾರಿಯ ನಿರ್ಲಿಪ್ತತೆ ಅವರ ಬಗೆಗೆ ಸೊಂಡೂರಿನ ಜನರಲ್ಲಿ ಗೌರವ ಅಭಿಮಾನವನ್ನು ಮೂಡಿಸಿತು.

ರಾಜೆಯವರ ಈ ಭೇಟಿಗೆ ಯಾವುದೇ ರಾಜಕೀಯ ಉದ್ದೇಶಗಳಿರಲಿಲ್ಲ. ಅವರು ಸಾಮಾನ್ಯ ನರ್ಸ್‌ ಎಂದರೂ ಕರ್ನಾಟಕದ ಬ್ಲಡ್‌ಬ್ಯಾಂಕಿನ ಶಾಖಾಧ್ಯಕ್ಷೆಯೂ ಆಗಿದ್ದರು. ಆಗಿನ ರಾಜ್ಯ ಸರ್ಕಾರದ ಅರಣ್ಯ ಸಚಿವ ರಾಚಯ್ಯನವರ ಜೊತೆ ಸೊಂಡೂರಿಗೆ ಸರ್ಕಾರಿ ಸವಲತ್ತುಗಳಲ್ಲಿಯೇ ಬಂದಿದ್ದರು. ಅಂದರೆ ಒಬ್ಬ ಮಂತ್ರಿಗಳು ಕರೆದುಕೊಂಡು ಬರುವಷ್ಟು ಪ್ರಭಾವಿಯಾಗಿದ್ದರು. ಈ ಪ್ರಭಾವಿತನವೇ ಅವರ ಈ ಭೇಟಿಯನ್ನು ಸಾಧ್ಯವಾಗಿಸಿತು. ಇಲ್ಲವೆಂದರೆ ಮಹಾರಾಜರೂ ಈ ಭೇಟಿಯನ್ನು ರದ್ದುಗೊಳಿಸುವ ಸಾಧ್ಯತೆಯಿತ್ತು. ಬಾಲ್ಯದಿಂದಲೇ ರಾಜ್ಯವನ್ನು ತೊರೆದದ್ದರಿಂದ ಅದರ ಸಂಪತ್ತಿನ ಮೋಹ ರಾಜೆಯವರಿಗೆ ಇಲ್ಲವಾಗಿತ್ತು. ಒಂದು ವೇಳೆ ಅವರು ಸೊಂಡೂರು ಸಂಸ್ಥಾನವನ್ನು ಮರಳಿ ಪಡೆಯುವ ಯತ್ನ ಮಾಡಿದ್ದರೆ ಅರಸು ಮನೆತನವನ್ನು ವಿರೋಧಿಸುತ್ತಿದ್ದವರ ಹೋರಾಟಕ್ಕೆ ಹೊಸ ಕಳೆ ಬರುತ್ತಿತ್ತು. ಮಹಾರಾಜರಿಗೆ ಇದನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಮಾಜಿ ಮಹಾರಾಜರನ್ನು ಬೆಂಬಲಿಸುತ್ತಿದ್ದ ಕಾಂಗ್ರೆಸ್‌, ಮಂತ್ರಿ ರಾಚಯ್ಯರವರನ್ನು ಕಳಿಸಿರಬಹುದೇ ಎಂಬ ಅನುಮಾನ ಬರುತ್ತದೆ. ಈ ಸಂದರ್ಭವನ್ನು ಮಾನವೀಯ ನೆಲೆಯಿಂದ ನೋಡುವುದಾದರೆ ಸೊಂಡೂರಿನ ಜನರು ತುಂಬಾ ಆತ್ಮೀಯವಾಗಿ ಭಾವನಾತ್ಮಕಾಗಿ ರಾಜೆಯವರನ್ನು ಆರಾಧನಾ ಭಾವದಿಂದ ಕಂಡರು. ರಾಣಿಯಾಗಿರಬೇಕಿದ್ದ ರಾಜಕುಮಾರಿ ನರ್ಸ್‌ ಆಗಬೇಕಾಯಿತು ಎಂದು ವಿಷಾದಿಸಿದರು. ಅವರ ಅರಮನೆ ಈಗ ಮತ್ತಾರದೋ ಒಡೆತನದಲ್ಲಿದೆ. ಸುಶೀಲ ರಾಜೆಯವರು ನತದೃಷ್ಟರು ಎಂದು ಅನುಕಂಪ ವ್ಯಕ್ತವಾಯಿತು. ಆದರೆ ರಾಜೆಯವರಿಗೆ ಸಂಪತ್ತನ್ನು ಕಳೆದುಕೊಂಡದ್ದಕ್ಕೆ ಸ್ವಲ್ಪವೂ ದುಃಖವಿರಲಿಲ್ಲ. ಜನರಿಗೆ ರಕ್ತದಾನ ಮಾಡಿ ಎಂದು ಕರೆಕೊಟ್ಟಿದ್ದು ಕೂಡ ಒಬ್ಬ ಸಾಮಾನ್ಯ ಸ್ತ್ರೀಯಂತೆ. ಈ ಭೇಟಿಯಿಂದ ಸೊಂಡೂರು ಜನತೆಗೆ ಈಗಿರುವ ಯಶವಂತರಾವ್‌ ಘೋರ್ಪಡೆಯವರು ಮೂಲ ರಾಜವಂಶಜರಲ್ಲ ಎನ್ನುವುದು ಮಾತ್ರ ಖಚಿತವಾಯಿತು. ಯಜಮಾನ ಶಾಂತರುದ್ರಪ್ಪ, ತಿಮ್ಮಪ್ಪ ಮೊದಲಾದವರು ತಮ್ಮ ಹೋರಾಟಕ್ಕೆ ರಾಜೆಯವರನ್ನು ಶಕ್ತಿಯನ್ನಾಗಿಸಿಕೊಳ್ಳಬೇಕು ಎಂದುಕೊಂಡಿದ್ದರು. ಸುಶೀಲರಾಜೆ ಇದಕ್ಕೆ ಸ್ಪಂದಿಸದಿದ್ದ ಕಾರಣ ಈ ಭೇಟಿ ಅವರಿಗೆಲ್ಲಾ ನಿರಾಸೆಯಾಯಿತು. ಇದೇ ಹೊತ್ತಿಗೆ ಕಾಕತಾಳೀಯವೆಂಬಂತೆ ಮಧ್ಯಪ್ರದೇಶದ ಇಂದೋರ್‌ನ ಮಹಾರಾಣಿಯ ಆಯ್ಕೆಯಾಯಿತು. ಇಲ್ಲಿಯ ಅರಸು ಗದ್ದಿಗೆಗೆ ಯಶವಂತರಾವ್‌ ಹೋಳ್ಕರರ ಉತ್ತರಾಧಿಕಾರಿ, ಅವರ ಪುತ್ರಿ ರಾಜಕುಮಾರಿ ಉಷಾ ರಾಜೆಯವರನ್ನು ರಾಷ್ಟ್ರಪತಿಯವರು ಮಾನ್ಯ ಮಾಡಿದರು. “ಅವರನ್ನು ಇನ್ನುಮುಂದೆ ಇಂಧೋರಿನ ಮಹಾರಾಣಿ ಉಷಾದೇವಿಯವರೆಂದು ಕರೆಯಲಾಗುವುದು. ವರ್ಷಕ್ಕೆ ೫ ಲಕ್ಷ ರಾಜಧನ ನೀಡಲಾಗುವುದು. ಈ ಮಾನ್ಯತೆ ವಿಶೇಷ ಅಧಿನಿಯಮಕ್ಕೆ ಒಳಪಟ್ಟಿದ್ದು ಉಷಾರಾಜೆಯವರ ಜೀವಪರ್ಯಂತ ಮಾತ್ರ ಅನ್ವಯಸಿಸುವುದು” ಎಂಬುದಾಗಿ ಕೇಂದ್ರಗೃಹ ಮಂತ್ರಿ ಶಾಕೆ ಪ್ರಕಟಣೆ ಹೊರಡಿಸಿತು. ಈ ಪ್ರಕಟಣೆಯು ರಾಜಮನೆತನವನ್ನು ವಿರೋಧಿಸುತ್ತಿದ್ದವರನ್ನು ಪ್ರಭಾವಿಸಿತು. ಕಾರಣ ಸುಶೀಲ ರಾಜೆಗೂ ರಾಜಗಾದಿಯನ್ನು ಕೊಡಿಸಬೇಕೆಂದು ಆಲೋಚಿಸಿದರು. ಆದರೆ ಸುಶೀಲ ರಾಜೆಯವರು ಈ ವಿಷಯದಲ್ಲಿ ನಿರ್ಲಿಪ್ತರಾದರು.

೧೯೬೬ರ ಸತ್ಯಾಗ್ರಹ

ಈವರೆಗೂ ಪತ್ರಿಕೆಗಳಲ್ಲಿ ಯಶವಂತರಾವ್‌ ಘೋರ್ಪಡೆಯವರ ಆಡಳಿತ ಮತ್ತು ಸಂಪತ್ತಿನ ದುರುಪಯೋಗವನ್ನು ಬರೆಯುವ ಹಂತಕ್ಕೆ ಪ್ರತಿಭಟನೆ ಇತ್ತು. ಈ ಹಂತವೇ ೧೯೬೬ರ ಸತ್ಯಾಗ್ರಹಕ್ಕೆ ಕಾರಣವಾಯಿತು. ನವೆಂಬರ್‌ ೨೮.೧೯೬೬ರಂದು ನಡೆಯಲಿರುವ ಕುಮಾರಸ್ವಾಮಿ ಮಹಾಯಾತ್ರೆಯ ದಿನದಂದು ಸತ್ಯಾಗ್ರಹ ನಡೆಸಲು ನಿರ್ಧಾರವಾಯಿತು. ಸೊಂಡೂರು ವಿಮೋಚನಾ ಸಮರ ಸಮಿತಿಯ ಅಧ್ಯಕ್ಷರಾದ ಯಜಮಾನ ಶಾಂತರುದ್ರಪ್ಪ ಕರಪತ್ರ ಹೊರಡಿಸಿದರು. ಈ ಸತ್ಯಾಗ್ರಹಕ್ಕೆ ಮೂರು ಮುಖ್ಯ ಕಾರಣಗಳಿದ್ದವು. ಒಂದು: ಸರ್ಕಾರದಿಂದ ವಾರ್ಷಿಕ ೩೬ ಸಾವಿರ ಪಡೆದರೂ ಮೊದಲಿನಿಂದ ನಡೆಯುತ್ತಿದ್ದು ಅನ್ನ ಛತ್ರವನ್ನು ಮುಚ್ಚಲಾಗಿದೆ. ಎರಡು: ಕುಮಾರಸ್ವಾಮಿ ದೇವಸ್ಥಾನ ಸಾರ್ವಜನಿಕವಾದದ್ದು ಇದನ್ನು ರಾಜರು ತಮ್ಮ ಧರ್ಮದರ್ಶಿತ್ವಕ್ಕೆ ವಶಪಡಿಸಿಕೊಂಡು ದೇವಸ್ಥಾನದ ಹಣ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಮೂರು: ಸಾರ್ವಜನಿಕ ಝಂಡಾ ಹಾರಿಸುವ ಪದ್ಧತಿಯನ್ನು ರಾಜರೇ ನೆರವೇರಿಸುತ್ತಿದ್ದಾರೆ. ಒಟ್ಟಾರೆ ಸತ್ಯಾಗ್ರಹದ ಉದ್ದೇಶ ಕುಮಾರಸ್ವಾಮಿ ದೇವಸ್ಥಾನದ ಹಕ್ಕಿಗಾಗಿ ವಿಮೋಚನಾ ಹೋರಾಟವಾಗಿತ್ತು.

ಈ ಸತ್ಯಾಗ್ರಹದ ಮುನ್ನವೇ ಸಾಕಷ್ಟು ಪ್ರಚಾರ, ಕರಪತ್ರ ಹಂಚಿಕೆ, ಪತ್ರಿಕಾ ಪ್ರಕಟಣೆ ನಡೆಯಿತು. ತೆಲುಗು ಭಾಷೆಯಲ್ಲಿ ಪ್ರಕಟವಾದ ಕರಪತ್ರಗಳು ಆಂಧ್ರದ ಕುಮಾರಸ್ವಾಮಿ ಭಕ್ತರಿಗೆ ಹಂಚಲಾಯಿತು. ‘ಆಂದ್ರಪ್ರಭ’ ತೆಲುಗು ಪತ್ರಿಕೆಯಲ್ಲಿಯೂ ಸತ್ಯಾಗ್ರಹದ ಸುದ್ದಿಯಾಯಿತು. ಮೊದಲ ಬಾರಿಗೆ ಶಾಂತರುದ್ರಪ್ಪನವರು ವೈಯಕ್ತಿಕ ಹೋರಾಟದ ಸೀಮಿತತೆಯನ್ನು ಮೀರಿ ಸಾಮೂಹಿಕ ಹೋರಾಟಕ್ಕೆ ಕರೆ ನೀಡಿದರು. ಇಷ್ಟೆಲ್ಲಾ ಆದರೂ ಈ ಸತ್ಯಾಗ್ರಹ ನಡೆದ ಬಗೆಗೆ ಯಾವುದೇ ಮಾಹಿತಿಯಿಲ್ಲ. ಲಕ್ಷೀಪುರದ ನಾಗಪ್ಪ ‘ಸತ್ಯಾಗ್ರಹ ಅಗೋದಿಕ್ಕಿಂತ ಮುಂಚೆನೇ ಯಜಮಾನರನ್ನು ಬಂಧಿಸಲಾಯ್ತು. ಹಾಗಾಗಿ ನಡೀಲಿಲ್ಲ’ ಎಂದು ಹೇಳುತ್ತಾರೆ. ಯಜಮಾನರ ಬಹುತೇಕ ಚಳುವಳಿಗಳ ಮುಕ್ತಾಯ ಪೋಲೀಸರ ಬಂಧನವೇ ಆಗಿತ್ತು. ಮಹಾರಾಜರಿಗೂ ಇದು ಸುಲಭದ ವಿಧಾನ. ಸ್ವತಂತ್ರ್ಯ ಹೋರಾಟದ ಮಾದರಿಗಳಲ್ಲಿ ಚಳುವಳಿ ಮಾಡುತ್ತಿದ್ದ ಯಜಮಾನರು ಅಹಿಂಸಾಮಾರ್ಗದಲ್ಲಿ ಬಲವಾದ ವಿಶ್ವಾಸವಿರಿಸಿದ್ದರು. ಈ ಮಂದಗತಿಯಿಂದಾಗಿಯೇ ಯುವಕರು ಯಜಮಾನರೊಂದಿಗೆ ಹೆಚ್ಚಾಗಿ ಕೈ ಜೋಡಿಸಲಿಲ್ಲ.

೧೯೬೮ರಲ್ಲಿ ರಾಜಧನ ರದ್ಧತಿಯ ವಿಷಯ ದೇಶವ್ಯಾಪಿ ಚರ್ಚೆಯಾಯಿತು. ಕಾಂಗ್ರೆಸ್ ಸರ್ಕಾರದ ಪ್ರಧಾನಿ ಇಂದಿರಾಗಾಂಧಿಯವರು ರಾಜಧನ ರದ್ದುಗೊಳಿಸುವುದಾಗಿ ಘೋಷಿಸಿದರು. ಇದು ಭಾರತದಾದ್ಯಂತ ಇದ್ದ ರಾಜಮಹಾರಾಜರುಗಳನ್ನು ಧ್ವನಿ ಎತ್ತುವಂತೆ ಮಾಡಿತು. ಅವರೆಲ್ಲ ಸಂಘಟಿತರಾಗಿ ಈ ನಿಯಮವನ್ನು ವಿರೋಧಿಸಿದರು. ‘ಕೇಂದ್ರ ಸರ್ಕಾರದ ಇಂತಹ ಕ್ರಮವು ಗಡಿಯಾಚೆಯಿರುವ ನಮ್ಮ ಶತೃಗಳಿಗೆ ಪರಿಣಾಮಕಾರಿ ಆಯುಧವಾಗುವುದಷ್ಟೇ ಅಲ್ಲದೆ ಈಗಾಗಲೇ ಅನೇಕ ಅಪಾಯಗಳನ್ನೆದುರಿಸುತ್ತಿರುವ ರಾಷ್ಟ್ರದ ಮುಂದೆ ಇನ್ನೂ ಅನೇಕ ಹೊಸ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ನವದೆಹಲಿಯಲ್ಲಿ ಅಕ್ಟೋಬರ್ ೪,೧೯೬೮ರಂದು ನಡೆದ ಸಭೆಯಲ್ಲಿ ಮಾಜಿ ರಾಜರುಗಳು ಸರ್ಕಾರವನ್ನು ಎಚ್ಚರಿಸಿದರು. ಈ ಬಗೆಯ ಎಲ್ಲ ವಿರೋಧಗಳನ್ನು ಲೆಕ್ಕಿಸದೆ ರಾಜಧನವನ್ನು ರದ್ಧತಿಗೊಳಿಸಿ ಇಂತಿಷ್ಟು ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲಾಯಿತು. ‘ಮಾಜಿ ರಾಜರುಗಳು ಇನ್ನು ಮಾನವಂತರಂತೆ ಬಾಳಿರಿ’ ಎಂದು ಇಂದಿರಾಗಾಂಧಿಯವರು ಕರೆ ನೀಡಿದರು. ಈ ಹೊತ್ತಲ್ಲಿ ಸೊಂಡೂರಿನ ಮಾಜಿ ದೊರೆಗಳು ರಾಜಧನ ರದ್ಧತಿಯ ವಿರೋಧಿ ಬಣದಲ್ಲಿದ್ದರು. ಆಗ ಯಜಮಾನ ಶಾಂತರುದ್ರಪ್ಪನವರು ‘ರಾಜಧನ ರದ್ಧತಿಯು ಸರ್ಕಾರದ ಶ್ಲಾಘನೀಯ ಕಾರ್ಯ’ ಎಂದು ಕರಪತ್ರ ಹಂಚಿದರು. ಸೊಂಡೂರಿನಲ್ಲಿ ರಾಜಧನ ರದ್ಧತಿಯು ಬೆಂಬಲಿಸುವ ಜನಸಭೆ ಮಾಡಲು ಪ್ರಯತ್ನಿಸಿದರು. ಆದರೆ ಇದು ಸಾಧ್ಯವಾಗಲಿಲ್ಲ.

ಸೊಂಡೂರು ಮ್ಯಾಂಗನೀಸ್ ಮತ್ತು ಅದಿರಿನ ಕಂಪನಿಯು (ಎಸ್‌.ಎಂ ಆಂಡ್ ಐ.ಓ) ಯಶವಂತರಾವ್ ಅವರ ಶೋಷಣೆಯ ಮತ್ತೊಂದು ಸಾಧನ. ೧೯೫೩ರಲ್ಲಿ ಮೈಸೂರು ಸರ್ಕಾರದಿಂದ ೧೦ ಚದರ ಮೈಲಿಗಿಂತ ಹೆಚ್ಚಿನ ಪ್ರದೇಶವನ್ನು ಯಾವ ಮ್ಯಾಂಗನೀಸ್ ಕಂಪನಿಗೂ ಕೊಡಬಾರದೆಂಬ ಕಾನೂನನ್ನು ಉಲ್ಲಂಘಿಸಿ ೨೯ ಚದರ ಮೈಲು ಮ್ಯಾಂಗನೀಸ್ ಅದಿರು ಪ್ರದೇಶವನ್ನು ೨೦ ವರ್ಷಗಳ ಅವಧಿಗೆ ಗುತ್ತಿಗೆ ಪಡೆದರು. ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಎಂಬ (ಎನ್.ಎಂ.ಡಿ.ಸಿ.) ಸರ್ಕಾರಿ ಸಂಸ್ಥೆ ಇದ್ದರೂ ಈ ಪ್ರದೇಶದ ಗುತ್ತಿಗೆಯನ್ನು ತಮ್ಮ ಎಸ್‌.ಎಂ. ಆಂಡ್ ಐ.ಓ ಕಂಪನಿಗೆ ಗಿಟ್ಟಿಸಿಕೊಂಡಿದ್ದರು. ಗುತ್ತಿಗೆಯ ಕರಾರಿನ ಪ್ರಕಾರ ಮ್ಯಾಂಗನೀಸ್ ಫೆರೋ ಕಾರ್ಖಾನೆಯನ್ನು ಸ್ಥಾಪಿಸಬೇಕಿತ್ತು. ೧೯೭೩ರ ಡಿಸೆಂಬರ್ ನಲ್ಲಿ ಕೊನೆಗೊಂಡ ಈ ಗುತ್ತಿಗೆಯನ್ನು ನವೀಕರಿಸಲು ತಮ್ಮ ಅಧಿಕಾರ ಪ್ರಭಾವ ಬೀರತೊಡಗಿದರು. ತಮ್ಮ ಖಾಸಗಿ ಸಂಸ್ಥೆಯೇ ‘ಪಬ್ಲಿಕ್ ರಿಲೇಷನ್ಸ್ ಡೆವಲಪ್ ಮೆಂಟ್ ಡಿಪಾರ್ಟ್‌ಮೆಂಟ್’ (ಪಿ.ಆರ್.ಡಿ.ಡಿ). ಈ ಸಂಸ್ಥೆಯ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳೆಂದು ಪ್ರಜೆಗಳನ್ನು ವಂಚಿಸತೊಡಗಿದರು. ಸರ್ಕಾರದ ಹೆಚ್ಚು ಬೆಳೆ ಬೆಳೆಯುವ ಯೋಜನೆಯನ್ನು ನೆಪವಾಗಿಟ್ಟುಕೊಂಡು ರಾಜರು ೧೯೫೩ರಲ್ಲಿ ‘ಸ್ಕಂದ ಉದ್ಯಮ’ವನ್ನು ರಚಿಸಿ ಸರ್ಕಾರದ ೧೫೩ ಎಕರೆ ಭೂಮಿಯನ್ನು ಪಡೆದರು.

[4] ಈ ಎಲ್ಲಾ ಅಂಶಗಳ ಬಗ್ಗೆ ಜನರ ಅಸಹನೆ ಪ್ರತಿರೋಧ ಕಂಡೂ ಕಾಣದಂತೆ ಪ್ರವಹಿಸುತ್ತಿತ್ತು.

ಈ ಮೇಲಿನ ಎಲ್ಲ ವಿವರ ಹಲವು ಚಿತ್ರಗಳನ್ನು ಮುಂದಿಡುತ್ತದೆ. ಒಂದು ಕಾಲದ ಪ್ರಭುತ್ವ ನಿರಂತರ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ. ೧೯೪೭ರ ನಂತರ ಈ ಹಿಂದೆ ಆಳುತ್ತಿದ್ದ ಅದೇ ರಾಜರೊಂದಿಗೆ ಜನರು ಉಳಿಸಿಕೊಳ್ಳಬೇಕಾದ ಸಂಬಂಧ, ಬೆಳೆಸಿಕೊಳ್ಳುವ ಸಂಘರ್ಷ. ವ್ಯಕ್ತಿ ಸ್ವಾತಂತ್ರ್ಯದ ಪ್ರಜ್ಞೆಯಿಂದಾಗಿ ರಾಜಶಾಹಿಯನ್ನು ವಿರೋಧಿಸುವ ಮತ್ತು ಒಪ್ಪಿಕೊಳ್ಳುವಿಕೆಯ ನಡುವಿನ ತಾಕಲಾಟ. ಪ್ರಜಾಪ್ರಭುತ್ವವೂ ‘ರಾಜರ’ ಕೈವಶವಾಗಿ ಸ್ವಾತಂತ್ರ್ಯಪೂರ್ವದ ವ್ಯವಸ್ಥೆಯೇ ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡದ್ದು. ಈ ಎಲ್ಲಾ ಬಗೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಕೃತಿಗಳನ್ನು ೧೯೪೭ರ ನಂತರದ ಸೊಂಡೂರು ಜನರ ಪ್ರತಿಭಟನೆಗಳಲ್ಲಿ ಕಾಣಬಹುದು.