ಕೂಡ್ಲಿಗಿ ತಾಲ್ಲೂಕು ಹಾರಕನಾಳಿನಲ್ಲಿ ೧೯೯೮ರಲ್ಲಿ ನಡೆದ ಒಂದು ಘಟನೆ. ಅಂದು ಊರಿಗೆ ಲೈನ್‌ಮ್ಯಾನ್‌ಗಳ ಗುಂಪೊಂದು ಬಂದಿತ್ತು (ಕೆ.ಇ.ಬಿ ನೌಕರರು) ಬಾಕಿ ಉಳಿದ ಕರೆಂಟ್‌(ಎಲೆಕ್ಟ್ರಿಕಲ್‌) ಬಿಲ್ಲುಗಳನ್ನು ವಸೂಲಿ ಮಾಡುವುದು ಆ ದಿನದ ಉದ್ದೇಶ. ಹಣಪಾವತಿ ಮಾಡದೆ ಬಾಕಿ ಇರುವ ಮನೆಗಳ ಕರೆಂಟ್‌ ಕನೆಕ್ಷನ್‌ ಕಟ್‌ ಮಾಡುತ್ತಿದ್ದರು. ಹಾರಕನಾಳಿನ ಭರಮನ ಗೌಡರದು ಐದು ತಿಂಗಳ ಬಿಲ್‌ಬಾಕಿ ಇತ್ತು. ಅವರು ‘ಈಗ ದುಡ್ಡು ಇಲ್ಲ ಬೆಳೆ ಬಂದಿಂದೆ ಕಟ್ತೀವಿ’ ಎಂದರು. ಕೆ.ಇ.ಬಿ. ನೌಕರನೊಬ್ಬ ‘ಆಯ್ತು ನಾವು ಆವಾಗ್ಲೆ ಕನೆಕ್ಷನ್‌ ಕೊಡ್ತೀವಿ’ ಎಂದು ಲೈನ್‌ ಕಟ್‌ ಮಾಡಲು ಕರೆಂಟ್‌ ಕಂಬವನ್ನು ಹತ್ತಿದ. ಭರಮನ ಗೌಡರಿಗೆ ಸಿಟ್ಟು ಅವಮಾನ ಎರಡೂ ಆಗಿ ದೊಡ್ಡದೊಂದು ಕಲ್ಲು ಹಿಡಿದುಕೊಂಡು ‘ಲೇ ಲೈನ್‌ ಬಂದ್‌ ಕಟ್‌ ಮಾಡು ಕಲ್ಲಿಲೇ ಹೊಡಿತೀನಿ….. ಸೊಂಡೂರು ರಾಜರದು ಕೋಟಿಗಟ್ಟಲೆ ಕರೆಂಟ್‌ ಬಿಲ್ಲು ಬಾಕಿ ಐತಿ ಅದನ್ನು ವಸೂಲಿ ಮಾಡು ನೋಡ್ತೀನಿ…. ಬಂದ್‌ ಬಿಟ್ಟ ನಮ್ಮಂತ ಬಡವರ ಅತ್ರ’ ಎಂದು ಹೊಡೆಯಲು ಸಜ್ಜಾಗಿ ನಿಂತರು. ಕಂಬದ ಮೇಲಿನ ಲೈನ್‌ ಮ್ಯಾನ್‌ ಹೆದರಿ ಲೈನ್ ಕಟ್‌ ಮಾಡದೆ ಇಳಿದ. ಆತನ ಮುಖದಲ್ಲಿ ಅವಮಾನದ ಛಾಯೆಯಿತ್ತು. ಸೊಂಡುರು ಪರಿಸರದ ಮತ್ತು ಸುತ್ತಮುತ್ತಲ ತಾಲ್ಲೂಕುಗಳಲ್ಲಿ ವಿದ್ಯುತ್‌ ಮಂಡಳಿಯವರು ಜನರಿಂದ ಮತ್ತೆ ಮತ್ತೆ ಕೇಳುವ ಮಾತಿದು. ರೈತರ ಕೊಳವೆ ಬಾವಿಗಳಿಗೆ ಮೀಟರ್‌ ಅಳವಡಿಸುವ ಚರ್ಚೆ ಬಂದಾಗ ಕೂಡ್ಲಿಗಿಯಲ್ಲಿ ರೈತರ ಧರಣಿ ನಡೆಯಿತು. ಈ ಧರಣಿಯಲ್ಲಿ ’ಸೊಂಡೂರು ರಾಜರದು ಕೋಟಿಗಟ್ಟಲೆ ವಿದ್ಯುತ್‌ ಬಿಲ್‌ ಬಾಕಿ ಇದೆ. ಮೊದ್ಲು ಅದನ್ನ ಕಟ್ಟಸಿಕೊಳ್ಳಿ., ಆ ನಂತರ ನಮ್ಮ ಬೋರ್‌ವೆಲ್‌ಗಳಿವೆ ಮೀಟ್‌ರ್‌ ಅಳವಡಸ್ರಿ’ ಎಂದು ಬರೆದ ಬಿತ್ತಿಪತ್ರವನ್ನು ಹಿಡಿದಿದ್ದರು. ವಿದ್ಯುತ್‌ ಮಂಡಳಿಯ ಒಬ್ಬರನ್ನು ಮಾತನಾಡಿಸಿದಾಗ ಅವರು ಅಸಹಾಯಕತೆಯಿಂದ ‘ಅದೇನೋ ನಿಜ ದೊಡ್ಡೋರ್ನೆಲ್ಲ ಯಾರು ಕೇಳ್ಬೇಕು ಸಿಕ್‌ ಇಂಡಸ್ಟ್ರೀ ಅಂತ ಕರೆಂಟ್‌ ಬಿಲ್ಲನ್ನೆಲ್ಲಾ ಸರ್ಕಾರ ಮನ್ನ ಮಾಡ್ತು’ ಎಂದರು. ಈ ಭಾಗದ ರೈತರು ವಿದ್ಯುತ್‌ ಸಂಬಂಧಿ ಮಾತು ಬಂದಾಗಲೆಲ್ಲಾ ಸೊಂಡೂರು ರಾಜರ ಕರೆಂಟ್‌ ಬಿಲ್ಲಿನ ಕತೆ ಬಿಚ್ಚಿಕೊಳ್ಳುತ್ತದೆ. ಈ ತನಕದ ರೈತಸಂಘದ ಪ್ರತಿಭಟನೆಗಳಲ್ಲಿ ಅದು ಪ್ರಸ್ತಾಪವಾಗುತ್ತಿದೆ. ರಾಜರ ಜೊತೆಗಿನ ಜನತೆಯ ಪ್ರತಿರೋಧ ಇಂದು ನಿನ್ನೆಯದಲ್ಲ ನಿರಂತರ ನಡೆಯುತ್ತಲೇ ಬಂದಿದೆ.

ಟಿ. ಶ್ರೀನಿವಾಸಚಾರ್ಯರ ದೂರು

೧೯೩೭ ಸೊಂಡೂರು ಇನಾಂ ನಿಯಂತ್ರಣ ಕಾನೂನು ಜಾರಿಯಾಯಿತು. ಇದರ ೧೫ನೇ ನಿಬಂಧನೆಯ ಪ್ರಕಾರ ಎಲ್ಲಾ ಸಾರ್ವಜನಿಕ ದೇವಸ್ಥಾನಗಳ ಆಸ್ತಿ ರಾಜರ ಖಾಸಗಿ ಆಸ್ತಿಯಾಗಿ ಮಾರ್ಪಟ್ಟಿತು. ಈ ಬದಲಾವಣೆ ರಾಜಮನೆತನದ ಬಗೆಗೆ ಇದ್ದ ಪ್ರಶ್ನೆಗಳನ್ನು ಮತ್ತೆ ನೆನಪಿಸಿತು. ಕುಮಾರಸ್ವಾಮಿಯು ನಿಜವಾಗಲೂ ರಾಜರ ಕುಲದೈವವೇ? ರಾಜರು ವಂಶಾನುಗತ ಧರ್ಮದರ್ಶಿಗಳೆ? ಯಶವಂತರಾವ್ ಘೋರ್ಪಡೆ, ಎಂ.ವೈ.ಘೋರ್ಪಡೆಯವರು ಮೂಲ ರಾಜವಂಶಜರೇ? ಇಂತಹ ಪ್ರಶ್ನೆಗಳು ಕೆಲವರ ಮಧ್ಯೆ ಸುಳಿದವು. ಈ ಪ್ರಶ್ನೆಗಳ ಪರಿಣಾಮದಿಂದ ಬಳ್ಳಾರಿಯ ಜನಪರ ಹೋರಾಟಗಾರರಾದ ಟಿ.ಶ್ರೀನಿವಾಸಚಾರ್ಯರು ಕ್ರಿಯಾಶೀಲರಾದರು. ೧೯೩೮ರಲ್ಲಿ ಇವರನ್ನೊಳಗೊಂಡಂತೆ ಇನ್ನಿತರರು ಅಂದಿನ ರೆಸಿಡೆಂಟರಿಗೆ ಒಂದು ದೂರು ಸಲ್ಲಿಸಿದರು. ದೂರಿನಲ್ಲಿ ಸೊಂಡೂರು ಸಂಸ್ಥಾನಾಧೀಶರು ಕುಮಾರಸ್ವಾಮಿ ಮತ್ತು ಇತರೆ ದೇವಸ್ಥಾನಗಳಿಂದ ಬರುವ ವರಮಾನವನ್ನು ತಮ್ಮ ಖಾಸಗಿ ಖಜಾನೆಗೆ ಸೇರಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಅಂದಿನ ರೆಸಿಡೆಂಟರಾದ ಸ.ಪಿ.ಸ್ಕ್ರೀನೋ ದಿನಾಂಕ ೧೪ ಮಾರ್ಚ್‌೧೯೩೮ ತಮ್ಮ ಪತ್ರದಲ್ಲಿ ಟಿ.ಶ್ರೀನಿವಾಸಾಚಾರ್ಯರಿಗೆ ‘೧೯೩೪ರ ಲಗಾಯ್ತು ಶ್ರೀ ಕುಮಾರಸ್ವಾಮಿ ದೇವಸ್ಥಾನದ ವ್ಯವಹಾರಗಳನ್ನು ಸೊಂಡೂರು ಸಂಸ್ಥಾನದ ಲೋಕೋಪಯೋಗಿ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆಂದು ಸಂಸ್ಥಾನಾಧೀಶರು ತಿಳಿಸಿರುತ್ತಾರೆ. ದೇವಸ್ಥಾನದ ವರಮಾನದ ಹಣವನ್ನು ಹುಜೂರು ಖಾಸಗಿ ಖಜಾನೆಗೆ ಉಪಯೋಗಿಸಿಲ್ಲವೆಂದು ದೊರೆ ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಹಾಗೂ ಈ ದೇವಸ್ಥಾನದ ಆಡಳಿತವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಮನವಿದಾರರಿಗೆ ವಿವರಿಸಲು ಸೊಂಡೂರು ದೊರೆ ಒಪ್ಪಿಕೊಂಡು ಅವರಿಗೆ ಸಂದರ್ಶನ ಕೊಡಲೊಪ್ಪಿದ್ದಾರೆ’ ಎಂದು ತಿಳಿಸಿದರು.

ಜನರ ಮನವಿ ಮತ್ತು ರೆಸಿಡೆಂಟರ ಉತ್ತರ ಬ್ರಿಟಿಷ್ ಆಡಳಿತದ ಚಿತ್ರವನ್ನು ಕೊಡುತ್ತದೆ. ಸಂಸ್ಥಾನಿಕರ ವಿರುದ್ಧದ ಆರೋಪಗಳು ಅರ್ಜಿ ರೂಪದಲ್ಲಿರುತ್ತಿದ್ದವು. ಬ್ರಿಟಿಷ್ ಸರ್ಕಾರದ ಹೊತ್ತಿನಲ್ಲಿ ರಾಜರನ್ನು ವಿರೋಧಿಸುವುದು ಸಾಮಾನ್ಯರಿಗೆ ಅಸಾಧ್ಯವಾಗಿತ್ತು. ‘ಪೊಲೀಸರು ಬಂದರೆ ಮನೆಗಳಿಗೆ ಹೋಗಿ ಚಿಲಕ ಹಾಕ್ಕೊಳ್ತಿದ್ದಿ’ ಎನ್ನುವ ಹಿರಿಯ ತಲೆಮಾರಿನವರು ಹೇಳುತ್ತಿದ್ದ ಮಾತನ್ನು ನೆನಪಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ರಾಜರ ವಿರುದ್ಧದ ದೂರು ಅಷ್ಟು ಸಲೀಸಾಗಿರಲಿಲ್ಲ. ದೂರು ಸಲ್ಲಿಸಿದರೂ ರೆಸಿಡೆಂಟರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದೂ ಮುಖ್ಯ. ಮೇಲಿನ ಘಟನೆಯನ್ನೇ ನೋಡಿ. ಟಿ.ಶ್ರೀನಿವಾಸಚಾರ್ಯರ ದೂರಿಗೆ ರೆಸಿಡೆಂಟರು ಪ್ರತಿಕ್ರಿಯಿಸಿದ್ದು ಸಂಸ್ಥಾನಾಧೀಶರು ಈ ದೂರನ್ನು ನಿರಾಕರಿಸುತ್ತಾರೆ ಎಂದು. ಅಂದರೆ ಈ ದೂರಿನ ವಾಸ್ತವವನ್ನು ಪರಿಶೀಲಿಸಲು ಯಾವ ಕಾರ್ಯಾಚರಣೆಯೂ ನಡೆಯಲಿಲ್ಲ. ಸಂಸ್ಥಾನಧೀಶರ ಗಮನಕ್ಕೆ ತಂದರು. ನಂತರ ಅವರ ಉತ್ತರವನ್ನು ಮನವಿದಾರರಿಗೆ ತಿಳಿಸಿದರು. ಇದು ರೆಸಿಡೆಂಟರ ಜವಾಬ್ದಾರಿ. ದೊರೆಗಳು ದೇವಸ್ಥಾನದ ಆಡಳಿತ ನಿರ್ವಹಣೆಯ ಬಗ್ಗೆ ಮನವಿದಾರರಿಗೆ ವಿವರಿಸಲು ಸಂದರ್ಶನಕ್ಕೆ ಆಹ್ವಾನಿಸಿದರು. ಆದರೆ ಅವರು ದೂರು ಸಲ್ಲಿಸಿದಷ್ಟು ಸುಲಭವಾಗಿ ದೊರೆಗಳೊಂದಿಗೆ ಸ್ಪಷ್ಟನೆ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಇರುವ ಸ್ಥತಿ ಬದಲಾವಣೆಯಿಲ್ಲದೆ ಉಳಿಯಿತು.

೧೯೩೯-೪೦ರ ಅವದಿ ಎರಡನೇ ಜಾಗತಿಕ ಮಹಾಯುದ್ಧದ ಸಮಯ. ಈಗ ಇಂಗ್ಲೆಂಡ್ ಬಲವನ್ನು ಹೆಚ್ಚಿಸಿಕೊಳ್ಳಲು ತನ್ನ ವಸಾಹತುಗಳಿಂದ ಹಣ ಹಾಗೂ ಸೈನ್ಯದ ಸಹಾಯ ಪಡೆಯತೊಡಗಿತು. ಇಂತಹ ಪ್ರಕ್ರಿಯೆ ಭಾರತದಾದ್ಯಂತ ಶುರುವಾಯಿತು. ಈ ಸಂದರ್ಭ ಬ್ರಿಟಿಷ್ ಸರ್ಕಾರದ ಮನವೊಲಿಸಲು ದೇಶಿಸಂಸ್ಥಾಕರಿಗೆ ಸಹಾಯಕವಾಯಿತು. ಸೊಂಡೂರು ಸಂಸ್ಥಾನದಲ್ಲೂ ಈ ಪ್ರಕ್ರಿಯೆ ನಡೆಯಿತು. ರಾಜ ಯಶವಂತರಾವ್ ಘೋರ್ಪಡೆಯವರು ಬ್ರಿಟಿಷರ ಸೈನ್ಯಕ್ಕೆ ಸೊಂಡೂರಿನ ಬಡಜನರನ್ನು ಬಲವಂತವಾಗಿ ಭರ್ತಿಮಾಡಿದರು. ಭಾರತದ ತುಂಬಾ ಈ ಕಾರ್ಯ ನಡೆದಿದ್ದರಿಂದ ಸೊಂಡೂರು ಜನರ ಕೂಗು ಯಾರಿಗೂ ಕೇಳಿಸಲಿಲ್ಲ.

ಸಂಸ್ಥಾನದಲ್ಲಿ ಸಾರ್ವಜನಿಕ ಆಸ್ತಿಯನ್ನು ರಾಜಮನೆತನದ ಒಡೆತನಕ್ಕೆ ಮಾರ್ಪಡಿಸುವ ಕೆಲಸ ಮತ್ತೆ ಮುಂದುವರಿಯಿತು. ೧೯೪೯ರಲ್ಲಿ ಸೊಂಡೂರು ರಾಜ್ಯದ ಸಂವೈಧಾನಿಕ ಕಾನೂನು ಜಾರಿಗೆ ಬಂತು. ಈ ಕಾನೂನಿನ ೪೮ನೆಯ ವಿಧಿಯ ಪ್ರಕಾರ ದೇವಸ್ಥಾನಗಳ ಎಲ್ಲ ಸೊತ್ತು ರಾಜರ ಖಾಸಗಿ ಸೊತ್ತು ಎಂದು ಘೋಷಿಸಲಾಯಿತು. ಈ ವಿಧಿಗೆ ಜನರು ಪ್ರತಿಕ್ರಿಯಿಸಿದರೂ ರಾಜತ್ವದ ಬಲದಿಂದ ಹತ್ತಿಕ್ಕಲಾಯಿತು. ಆಗಸ್ಟ್ ೨೦.೧೯೪೮ರಂದು ‘ಸೊಂಡೂರು ದೇವಸ್ಥಾನಗಳ ಉದ್ಘೋಷ’ ಎಂಬ ಕಾನೂನನ್ನು ಸಂಸ್ಥಾನ ಜಾರಿ ಮಾಡಿತು. ದೇವಸ್ಥಾನಗಳ ಇನಾಂ ಆಸ್ತಿಗಳನ್ನು ಒಂದು ಟ್ರಸ್ಟಾಗಿ ಪರಿವರ್ತಿಸಲಾಯಿತು. ಇದರ ಅನುವಂಶಿಕ ಧರ್ಮದರ್ಶಿಗಳು ರಾಜರೇ ಆಗಿದ್ದು, ‘ಕುಮಾರಸ್ವಾಮಿ’ ರಾಜರ ಮನೆದೇವರು ಎನ್ನುವುದು ಈ ಉದ್ಘೋಷದ ಪ್ರಮುಖ ಅಂಶವಾಗಿತ್ತು.

ಸಾರ್ವಜನಿಕವಾದ ಭೂಮಿ ಹಾಗೂ ನಿಸರ್ಗ ಖಾಸಗಿಯಾಗಿ ರೂಪಾಂತರವಾಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಈ ಹೊತ್ತಲ್ಲಿ ಸೊಂಡೂರು ಸಂಸ್ಥಾನ ಜಾರಿಗೊಳಿಸಿದ ಕಾನೂನುಗಳನ್ನು ನೋಡುವುದೆಂದರೆ, ಸಾರ್ವಜನಿಕವಾದದ್ದು ಖಾಸಗಿಯಾಗಿ ಪರಿವರ್ತನೆಗೊಳ್ಳುವ ಸಂಕ್ರಮಣ ಸ್ಥಿತಿಯ ಚರಿತ್ರೆಯಾಗಿ ಕಾಣುತ್ತದೆ. ಜನರ ಬದುಕಿನ ಭಾಗವೇ ಆಗಿದ್ದ ದೇವಸ್ಥಾನಗಳನ್ನು ರಾಜತ್ವ ಮೊದಲು ನಿಯಂತ್ರಿಸಿತು. ಈ ದೇವಸ್ಥಾನಗಳ ಮೂಲಕ ಜನರನ್ನು ನಿಯಂತ್ರಿಸುವ ರಾಜಕೀಯ ಆರಂಭಗೊಂಡಿತು. ‘ಕುಮಾರಸ್ವಾಮಿ ಕುಲದೈವವಾಗಿರುವುದರಿಂದ ರಾಜಮನೆತನದ ಸಾರ್ವಭೌಮತ್ವಕ್ಕೆ ಎಂದೆಂದೂ ಒಳಪಟ್ಟಿರುತ್ತದೆ. ಈ ಪ್ರದೇಶಗಳಿಗೆ ಕಾನೂನಿನ ಮಾನ್ಯತೆ ಕೊಡಬೇಕಾಗಿರುವ ಕಾರಣದಿಂದ ಈ ಉದ್ಘೋಷವನ್ನು ಮಾಡಲಾಗಿದೆ’ ಎನ್ನುವ ಸ್ಪಷ್ಟನೆಗಳು ಅಧಿಕಾರಯುಕ್ತವಾಗಿಯೇ ಇದ್ದವು. ದೇವಸ್ಥಾನಗಳಿಗೆ ಸಂಬಂಧಪಟ್ಟ ಆಸ್ತಿ ವಿವರಗಳನ್ನು ಕೊಟ್ಟಿದ್ದರೂ ಇವುಗಳ ಗಡಿಗಳನ್ನು ನಿರ್ದಿಷ್ಟವಾಗಿ ಹೇಳಿರಲಿಲ್ಲ. ಹೀಗೆ ಹಂತ ಹಂತವಾಗಿ ಜನರ ಆಸ್ತಿ ರಾಜರ ನೇರ ನಿಯಂತ್ರಣಕ್ಕೆ ಬರುವಂತಾಯಿತು. ರೈತರು ಎತ್ತುಗಳಿಗೆ ಮೂಗುದಾರ ಹಾಕಿ ಕೃಷಿ ಮಾಡುತ್ತಾರೆ. ಅಂತೆಯೇ ರಾಜರು ರೈತರಿಗೆ ಮೂಗುದಾರ ಹಾಕಿ ಕೃಷಿ ಮಾಡಿಸತೊಡಗಿದರು.

೧೯೪೭ರ ಸ್ವಾತಂತ್ರ್ಯ ಮತ್ತು ಸೊಂಡೂರು ಸಂಸ್ಥಾನ

ಮೇಲುನೋಟಕ್ಕೆ ಭಾರತ ಆಗಸ್ಟ್ ೧೫.೧೯೪೭ರಲ್ಲಿ ಸ್ವತಂತ್ರ ಪಡೆದಂತೆ ಕಂಡರೂ ಆಂತರಿಕವಾಗಿ ದೇಶ ವಿಚಿತ್ರ ತಲ್ಲಣಗಳನ್ನು ಎದುರಿಸುತ್ತಿತ್ತು. ಒಂದು ಕಡೆ ದೇಶ ವಿಭಜನೆ, ಇನ್ನೊಂದು ಕಡೆ ೬೦೦ಕ್ಕೂ ಹೆಚ್ಚಿನ ದೇಶಿ ಸಂಸ್ಥಾನಗಳ ಅಧಿಕಾರದ ಪ್ರಶ್ನೆ. ಕನ್ನಡ ಭಾಷಾ ಪ್ರದೇಶಗಳಲ್ಲಿ ಸುಮಾರು ೧೮ ದೇಶೀಯ ಸಂಸ್ಥಾನಗಳಿದ್ದವು. ಮೈಸೂರು, ಹೈದರಾಬಾದು ದೊಡ್ಡ ಸಂಸ್ಥಾನಗಳಾದರೆ ಸವಣೂರು, ಜತ್ತ, ಮುಧೋಳ ಮುಂತಾದವು ಸಣ್ಣಪುಟ್ಟ ಸಂಸ್ಥಾನಗಳಾಗಿದ್ದವು. ಬಳ್ಳಾರಿ ಜಿಲ್ಲೆಯ ಸೊಂಡೂರು ಸಂಸ್ಥಾನವು ಅಂತಹ ಒಂದು ಸಣ್ಣ ದೇಶೀಯ ಸಂಸ್ಥಾನ. ಸೊಂಡೂರು ವ್ಯಾಪ್ತಿಯಲ್ಲಿ ೩೩ ಹಳ್ಳಿಗಳಿದ್ದವು. ಜನಸಂಖ್ಯೆ ೧೫ ಸಾವಿರವಿತ್ತು. ಪ್ರಾಕೃತಿಕವಾಗಿ ಮನೋಹರ ಪರಿಸರವನ್ನು ಹೊಂದಿತ್ತು. ಸಂಸ್ಥಾನವನ್ನು ಪ್ರವೇಶಿಸಲು ಅಂದು ಕೇವಲ ಎರಡು ಮಾರ್ಗಗಳಿದ್ದವು. ಒಂದು ಗುಂಡಿ ನರಸಿಂಹಸ್ವಾಮಿ ಮಾರ್ಗ. ಮತ್ತೊಂದು ಬಳ್ಳಾರಿ ಮಾರ್ಗ.

[1]

ಸೊಂಡೂರಿನ ಸ್ವಾತಂತ್ರ ಹೋರಾಟಗಾರರಾದ ಟಿ.ಬಿ.ಕೇಶವರಾಯರು ಹೇಳುವಂತೆ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಸೊಂಡೂರು ಸಂಸ್ಥಾನದಿಂದ ಹೊರಕ್ಕೆ ಅಥವಾ ಹೊರಗಡೆಯಿಂದ ಒಳಗೆ ಯಾರೂ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಮಹಾರಾಜರ ಸರಕಾರ ದಮನಕಾರಿ ನೀತಿಗಳನ್ನು ಅನುಸರಿಸುತ್ತಿತ್ತು. ಸಂಸ್ಥಾನದಲ್ಲಿದ್ದ ಜನರು ಬ್ರಿಟಿಷ್‌ರ ವಿರುದ್ಧ ಕರ್ನಾಟಕದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತಿರಲಿಲ್ಲ. ಹೊರಗಿನಿಂದ ಸಂಸ್ಥಾನದೊಳಗೆ ಯಾವುದೇ ಸುದ್ದಿ ಸಮಾಚಾರ ಪ್ರಸಾರವಾಗದಂತೆ ಬಂದೋಬಸ್ತು ಮಾಡಲಾಗಿತ್ತು. ಇಲ್ಲಿಯ ದಮನಕಾರಿ ಆಳ್ವಿಕೆಯ ಸುದ್ದಿ ಹೊರಗೆ ಹೋಗುವಂತಿರಲಿಲ್ಲ. ಈ ಸಂದರ್ಭದಲ್ಲಿ ಸೊಂಡೂರಿನ ಡಾ.ಎಸ್‌.ಬಿ.ಷರಾಫ್ ಅವರ ನೇತೃತ್ವದಲ್ಲಿ ಮಹಾರಾಜರ ವಿರುದ್ಧ ೧೯೩೦-೩೧ರಲ್ಲಿ ಚಳವಳಿ ನಡೆದಿತ್ತು. ಇದರಿಂದಾಗಿ ಅವರು ಸಂಸ್ಥಾನದಲ್ಲಿ ಜೈಲುವಾಸ ಅನುಭವಿಸಿದರು.

೧೯೪೭ರಲ್ಲಿ ಪ್ರಾರಂಭವಾದ ಭಾರತದ ಒಕ್ಕೂಟದಲ್ಲಿ ಸೊಂಡೂರನ್ನು ವಿಲೀನಗೊಳಿಸಲು ಮಹಾರಾಜರು ನಿರಾಕರಿಸಿದರು. ಅಲ್ಲದೆ ಹೈದರಾಬಾದಿನ ರಜಾಕಾರರಿಗೂ ತಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಆಶ್ರಯಕೊಟ್ಟರು. ಕಾರಣ ಭಾರತದ ಒಕ್ಕೂಟ ಸೇರದಿರುವವರ ಸಂಘಟನೆಯನ್ನು ಬಲಗೊಳಿಸಬೇಕಿತ್ತು. ಈವರೆಗೂ ರಾಜರ ಆಡಳಿತದಿಂದ ಬೇಸರಗೊಂಡ ಜನತೆ ಭಾರತದ ಒಕ್ಕೂಟದಲ್ಲಿ ಸೊಂಡೂರನ್ನು ವಿಲೀನಗೊಳಿಸಲು ಹೋರಾಟ ನಡೆಸಿತು. ೧೯೪೮ರ ಹೊತ್ತಿಗೆ ಯಶವಂತರಾವ್ ಘೋರ್ಪಡೆಯವರು ದೇಶಿ ಸಂಸ್ಥಾನಿಕರ ಸಂಘದ ಕಾರ್ಯದರ್ಶಿಯಾಗಿದ್ದರು. ಅದೇ ಹೊತ್ತಿಗೆ ಸೊಂಡೂರಲ್ಲಿ ರಾಜರ ವರ್ತನೆಯನ್ನು ವಿರೋಧಿಸಿ ಸತ್ಯಾಗ್ರಹ ಮಾಡಿದರು. ಈ ಸತ್ಯಾಗ್ರಹದ ಬಿಸಿ ಬಳ್ಳಾರಿಗೂ ತಲುಪಿತು. ಅಂದಿನ ಬಳ್ಳಾರಿ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿದ್ದ ಅಲ್ಲಂ ಸುಮಂಗಲಮ್ಮನವರು ಈ ಸತ್ಯಾಗ್ರಹವನ್ನು ಬೆಂಬಲಿಸಿದರು. ಸ್ವತಃ ತಾವು ಸತ್ಯಾಗ್ರಹದಲ್ಲಿ ಭಾಗವಹಿಸಲು ಸೊಂಡೂರಿಗೆ ಬಂದರು. ಇದನ್ನು ತಿಳಿದ ಮಹಾರಾಜರು ಅವರ ಕಾರನ್ನು ನಿಲ್ಲಿಸಿ ಕಾರಿನ ಮೇಲೆ ಕಟ್ಟಿದ ಭಾರತದ ಧ್ವಜವನ್ನು ಕಿತ್ತು ಬಿಸಾಡಿದರು. ರಜಾಕಾರರಿಂದ ಸತ್ಯಾಗ್ರಹಿಗಳಿಗೆ ಹಿಂಸೆಯಾಯಿತು.

ಭಾರತ ಸ್ವಾತಂತ್ರ್ಯವಾದಾಗ ಹೈದರಾಬಾದ್‌ ನಿಜಾಮ, ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದರೂರ್ ಒಕ್ಕೂಟ ಸೇರಲು ನಿರಾಕರಿಸಿದ. ಹೈದರಾದ್ ಸಂಸ್ಥಾನ ಸ್ವತಂತ್ರವಾಗಿ ಉಳಿಸಿಕೊಳ್ಳುವುದಾಗಿ ಘೋಷಿಸಿದ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್‌, ಸಮಾಜವಾದಿ, ಕಮ್ಯುನಿಸ್ಟ್, ಆರ್ಯಸಮಾಜ, ಹಿಂದೂ ಮಹಾಸಭಾ ಮುಂತಾದ ಸಂಘಟನೆಗಳು ನಿಜಾಮನ ಕಾಶೀಂ ರಜ್ವಿಗೆ ಅಧಿಕಾರ ನೀಡಿದ್ದ. ಆತ ಪೊಲೀಸ್ ಹಾಗೂ ಮಿಲಟರಿಯ ಹೊರತಾದ ಖಾಸಗಿ ಸೇನೆಯನ್ನೇ ಹುಟ್ಟು ಹಾಕಿದ. ಸಮವಸ್ತ್ರವಿಲ್ಲದ ಈ ಖಾಸಗಿ ಸೇನೆಯೇ ರಜಾಕರು. ಇವರು ಚಾಕು, ಚೂರಿ, ತಲವಾರಿ, ಬಂದೂಕು ಮುಂತಾದ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಜಾಮ ಆಡಳಿತದ ವಿರುದ್ಧ ಧ್ವನಿ ಎತ್ತುವವರನ್ನು ಮಟ್ಟಹಾಕುತ್ತಿದ್ದರು. ವಾಸ್ತವವಾಗಿ ಮೀರ್ ಉಸ್ಮಾನ್ ಅಲಿಖಾನ್ ಸಂಸ್ಥಾನದ ರಕ್ಷಣೆಯ ದೃಷ್ಟಿಯಿಂದ ಕಾಶಿಂ ರಜ್ವಿ, ನಾಯಕತ್ವದ ಸೈನ್ಯ ರೂಪಿಸಿದ್ದ. ಆದರೆ ರಜ್ವಿ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ‘ಹಿಂಸೆಗೆ’ ಕಾರಣವಾದ. ಇವರ ಹಾವಳಿ ಹೈದರಾಬಾದ್ ಕರ್ನಾಟಕದ ತುಂಬಾ ಅಮಾನುಷವಾಗಿ ನಡೆಯುತ್ತಿತ್ತು. ಇಂತಹ ಕಾಶಿಂ ರಜ್ವಿಗೆ ಸೊಂಡೂರಿನ ದೊರೆ ಯಶವಂತರಾವ್ ಘೋರ್ಪಡೆಯವರು ಬೆಂಬಲ ಸೂಚಿಸಿದರು. ತಮ್ಮ ಆಡಳಿತವನ್ನು ವಿರೋಧಿಸುವವರನ್ನು ನಿಯಂತ್ರಿಸಲಿಕ್ಕಾಗಿ ಕೆಲವು ರಜಾಕಾರರನ್ನು ಸೊಂಡೂರಿನಲ್ಲಿ ಇಟ್ಟುಕೊಂಡಿದ್ದರು. ಭೀಕರ ಹಾವಳಿಗೆ ಹೆಸರಾದ ರಜಾಕಾರರ ಹೆಸರು ಸೊಂಡೂರು ಪರಿಸರದ ಜನಸಾಮಾನ್ಯರು ದೊರೆಯ ವಿರುದ್ಧ ನಿಲ್ಲುವುದನ್ನು ತಡೆಗಟ್ಟಿತು.

ಸಹಜವಾಗಿಯೇ ಭಾರತದ ತುಂಬ ಸಂಸ್ಥಾನಿ ಅರಸರ ಆಡಳಿತದ ವಿರುದ್ಧ ಚಳವಳಿ ಆರಂಭವಾಯಿತು. ಮೊದಮೊದಲು ಸೊಂಡೂರು ದೊರೆಯ ಭಯದಿಂದಾಗಿ ವಿರೋಧ ತೀವ್ರವಾಗಲಿಲ್ಲ. ಭಾರತದಲ್ಲಿ ನಡೆಯುತ್ತಿದ್ದ ಚಳವಳಿಯ ಪ್ರಭಾವ ಇಲ್ಲಿ ಹರಡಿತು. ಮಹಾರಾಜರ ಆಳ್ವಿಕೆಯ ವಿರುದ್ಧ ಯತ್ನಟ್ಟಿ (ತಾರಾನಗರ) ಮತ್ತು ಹೊಸಳ್ಳಿ (ಭುಜಂಗನಗರ)ಗಳಲ್ಲಿ ಜನರು ಸಿಡಿದೆದ್ದರು. ಮಹಾರಾಜರಿಗೆ ಈ ಎರಡೂ ಹಳ್ಳಿಗಳು ತಲೆನೋವಾಗಿದ್ದವು. ೧೯೩೭ರಲ್ಲಿ ಕುಮಾರಸ್ವಾಮಿ ದೇವಸ್ಥಾನದ ೧೩ ಹಳ್ಳಿಗಳಿಗೆ ಸೇರಿದ್ದ ಸುಮಾರು ೮೦೦೦ ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ಯತ್ನಟ್ಟಿಯ ಎಂ.ಶರಭಯ್ಯನವರು ರೈತರನ್ನು ಸಂಘಟಿಸಿ ಆಂದೋಲನ ನಡೆಸಿದ್ದರು. ಈ ಕಾರಣಕ್ಕಾಗಿ ಅವರು ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಆಗ ಸೊಂಡೂರು ರಾಜಮನೆತನದ ವಿರುದ್ಧ ಹೋರಾಟ ನಡೆಸುತ್ತಿದ್ದ ಯತ್ನಟ್ಟಿ ಮತ್ತು ಹೊಸಳ್ಳಿಯ ಮನೆತನಗಳೆಂದರೆ ಷರಾಫ್ ಮನೆತನ, ಬೋಜಮನೆತನ ಹಾಗೂ ಪೋತನೀಸ್ ಮನೆತನ. ಈ ಮನೆತನಗಳ ಹಿರಿಯರೆಲ್ಲರೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಕೊಟ್ಟೂರು ಕೂಡ್ಲಿಗಿಗಳಲ್ಲಿ ನಡೆಯುತ್ತಿದ್ದ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರು.[2] ಸಂಸ್ಥಾನದೊಳಗೆ ಇದ್ದ ದಮನಕಾರಿ ಆಡಳಿತಕ್ಕಿಂತ ಪ್ರಜಾಪ್ರಭುತ್ವ ಸರ್ಕಾರಕ್ಕಾಗಿ ಜನರು ಬಯಸತೊಡಗಿದರು. ರಾಜರ ದೌರ್ಜನ್ಯಕ್ಕೆ ಮಹಿಳೆಯರೂ ಬಲಿಯಾಗಿದ್ದರು. ಸಂಸ್ಥಾನಕ್ಕೆ ಪ್ರವೇಶ ಸಂಚಾರ ನಿಷೇಧವಿತ್ತು. ಹಾಗಾಗಿ ಬಳ್ಳಾರಿಯ ಜನಪರ ಹೋರಾಟಗಾರ ವಿಠಲ್ ಪ್ರೆಸ್‌ನ ಮಾಲಿಕರಾದ ಯಜಮಾನ ಶಾಂತರುದ್ರಪ್ಪನವರು ಬಳ್ಳಾರಿ ಭಾಗದಿಂದಲೇ ಹೋರಾಟ ನಡೆಸಿದರು. ಕ್ರಾಂತಿಕಾರಿ ಕರಪತ್ರಗಳನ್ನು ಹಂಚಿದರು. ಅವರನ್ನು ಒಳಗುಮಾಡಿಕೊಳ್ಳಲು ಮಹಾರಾಜರು ಪ್ರಯತ್ನಿಸದರಾದರೂ ಯಜಮಾನರು ತಮ್ಮ ಪ್ರತಿಭಟನೆಗಳಿಂದ ವಿಚಲಿತರಾಗಲಿಲ್ಲ.

ಭಾರತದ ಒಕ್ಕೂಟದಲ್ಲಿ ಸೊಂಡೂರು ಸಂಸ್ಥಾನವನ್ನು ವಿಲೀನಗೊಳಿಸಲು ೧೯೪೮ರಲ್ಲಿ ಪ್ರಜಾಪರಿಷತ್ತು ಸ್ಥಾಪನೆಯಾಯಿತು. ಯಜಮಾನ ಶಾಂತರುದ್ರಪ್ಪನವರ ನಾಯಕತ್ವದಲ್ಲಿ ರಚನೆಯಾದ ಈ ಪ್ರಜಾಪರಿಷತ್ತಿನಲ್ಲಿ ಸ್ಥಳೀಯರು ಇದ್ದರು. ಮೈಸೂರು ರಾಜ್ಯಕ್ಕೆ ಸೊಂಡೂರನ್ನು ಸೇರಿಸುವುದು ಇದರ ಗುರಿ. ಅಂದಿನ ಕೇಂದ್ರ ಸರರ್ಕಾರದ ಗೃಹಮಂತ್ರಿ ಸರದಾರ ವಲ್ಲಭಭಾಯಿ ಪಟೇಲರು ಭಾರತದ ೫೬೭ ಸಂಸ್ಥಾನಿಕರಿಗೂ ನೋಟೀಸು ಕೊಟ್ಟರು. ಕೇಂದ್ರ ಸರಕಾರದಲ್ಲಿ ವಿಲೀನಗೊಳ್ಳಬೇಕು ಇಲ್ಲವಾದಲ್ಲಿ ಸರಕಾರಿ ಪೊಲೀಸ್ ಪಡೆಯಿಂದ ವಶಪಡಿಸಿಕೊಳ್ಳಲಾಗುವುದು ಎಂದು ಅದರಲ್ಲಿತ್ತು. ಈ ನೋಟೀಸಿನ ಪರವಾಗಿ ಪ್ರಜಾ ಪರಿಷತ್ತಿನ ಅಧಿವೇಶನ ನಡೆಸಲು ತಯಾರಿ ಮಾಡಿದರು. ಆಗಲೂ ಕಾಂಗ್ರೆಸ್‌ ಕಾರ್ಯಕರ್ತರಿಗೂ, ಬಳ್ಳಾರಿಯ ಸೊಂಡೂರು ವಿಮೋಚನ ಸಮಯ ಸಮಿತಿಯವರಿಗೂ ಮಹಾರಾಜರು ರಜಾಕಾರರ ಬೆದರಿಕೆ ಹಾಕಿದರು. ಆದರೂ ಯತ್ನಟ್ಟಿಯಲ್ಲಿ ಪರಿಷತ್ತಿನ ಮೊದಲ ಅಧಿವೇಶನ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಹೋರಾಟಗಾರರು ಈ ಅಧಿವೇಶನಕ್ಕೆ ಬಂದಿದ್ದರು. ಕೊಲ್ಲಾಪುರದ ರತ್ನಪ್ಪ ಕಂಬಾರ, ತಲ್ಲೂರು ರಾಮನಗೌಡ, ಶಾಂತಿನಾಥ ಇಂಗಳೆ, ಮಹದೇವಪ್ಪ ಪಟ್ಟಣ ಶಾಂತರುದ್ರಪ್ಪ ಮುಂತಾದವರು ಭಾಗವಹಿಸಿದ್ದರು. ಸೊಂಡೂರು ಸಂಸ್ಥಾನವು ಭಾರತದಲ್ಲಿ ವಿಲೀನವಾಗಬೇಕು ಎಂದು ಈ ಅಧಿವೇಶನ ನಿರ್ಣಯ ಮಾಡಿತು. ಈ ಬೆಳವಣಿಗೆಯ ನಡುವೆಯೇ ಸರ್ದಾರ್ ವಲ್ಲಭಭಾಯಿ ಪಟೇಲರ ಕಠಿಣ ನೀತಿಗನುಗುಣವಾಗಿ ಸಂಸ್ಥಾನವು ಏಪ್ರಿಲ್ ೧.೧೯೪೯ರಂದು ಭಾರತದ ಗಣರಾಜ್ಯದಲ್ಲಿ ವಿಲೀನವಾಯಿತು. ಇದಕ್ಕೆ ಶ್ರಮಿಸಿದ ಇತರ ಹೋರಾಟಗಾರರೆಂದರೆ ಅಂಗಡಿ ಶರಭಯ್ಯ, ಉಳ್ಳಾಗಡ್ಡಿ ಕರಿಯಪ್ಪ, ಬಾವಿಕಟ್ಟೆ ಮರಿಬಸಪ್ಪ, ಕೃಷ್ಣನಗರದ ಎಲಿಗಾರ ತಿಮ್ಮಪ್ಪ, ಭುಜಂಗನಗರದ ಗುರುಶಾಂತಯ್ಯ, ಅರಳುಕಲ್ ಕುಮಾರಪ್ಪ, ನಾಗಲಾಪುರದ ಸಿದ್ಧರಾಮಯ್ಯ, ಕಾಲೆ ಸುಬ್ಬಣ್ಣ, ಬೋಜ ಅಡಿವೆಪ್ಪ, ಗಿರಿಮಲ್ಲಪ್ಪ ಮುಂತಾದವರು ಇವರೆಲ್ಲಾ ಮಹಾರಾಜರ ಸೊಂಡೂರು ‘ಸ್ಟೇಟ್ ಸೆಲ್‌’ನಲ್ಲಿ ಶಿಕ್ಷೆ ಅನುಭವಿಸಿದ್ದರು. ಜೈಲಿನಲ್ಲಿಯೇ ಅರಮನೆಯಿಂದ ಸರಬರಾಜಾಗುತ್ತಿದ್ದ ಆಹಾರವನ್ನು ಸೇವಿಸದೆ ಪ್ರತಿಭಟಿಸಿದ್ದರು. ಊರಿನ ಜನ ತರುತ್ತಿದ್ದ ಬುತ್ತಿಯನ್ನು ಊಟ ಮಾಡುತ್ತಿದ್ದರು.

ಸೊಂಡೂರು ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಕ್ಕೆ ಒಪ್ಪಿತು. ಅಂತೆಯೇ ಮಹಾರಾಜರು ಕೇಂದ್ರ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡರು. ಈ ಒಪ್ಪಂದಕ್ಕೆ ಈಗಾಗಲೇ ಇದ್ದ ರಾಜಾಧಿಕಾರವನ್ನು ಮರುಸ್ಥಾಪಿಸುವ ಉದ್ದೇಶವಿತ್ತು. ಈ ಒಪ್ಪಂದದ ಷರತ್ತುಗಳು ಹೀಗಿದ್ದವು. ಒಂದು: ಭಾರತ ಸರಕಾರ ಸೊಂಡೂರು ಮಹಾರಾಜರಿಗೆ ೯೦.೦೦೦ ರೂಪಾಯಿಗಳ ರಾಜಧನವನ್ನು ಕೊಡಬೇಕು. ಎರಡು: ಸಂಸ್ಥಾನದ ವಿವಿಧ ದೇವಸ್ಥಾನಗಳ ನಿರ್ವಹಣೆಗೆಂದು ೩೬.೦೦೦ ರೂಗಳ ವಾರ್ಷಿಕ ಧನ ಕೊಡಬೇಕು. ಮೂರು: ರಾಮಗೊಳ್ಳ, ಹತ್ತಿಮರಗೊಳ್ಳ ಇತ್ಯಾದಿ ಪ್ರದೇಶಗಳಲ್ಲಿ ರಾಜರು ಮತ್ತು ಅವರ ವಂಶಜರಿಗೆ ಬೇಟೆಯಾಡುವ ಅನಿರ್ಬಂಧಿತ ಹಕ್ಕನ್ನು ನೀಡಬೇಕು. ನಾಲ್ಕು: ಆಡಳಿತಾವಧಿಯಲ್ಲಿ ನಡೆದ ಯಾವುದೇ ಕ್ರಮಗಳ ಬಗ್ಗೆ ವಿಚಾರಣೆ ನಡೆಸಬಾರದು. ಈ ಎಲ್ಲ ಷರತ್ತುಗಳು ಸಂಸ್ಥಾನದ ಮೂಲ ಅಧಿಕಾರವನ್ನು ಉಳಿಸಿಕೊಳ್ಳುವಂತವೇ ಆಗಿದ್ದವು. ಭಾರತ ಸರಕಾರದ ವಿಲೀನ ಒಪ್ಪಂದದಲ್ಲಿ ರಾಜರು ಕೇಳಿದ ರಾಜಧನವನ್ನು ನೀಡಲು ಒಪ್ಪಿತು. ಗೃಹಖಾತೆಯ ಕಾರ್ಯದರ್ಶಿಗಳು ಮಹಾರಾಜರಿಗೆ ಬರೆದ ಒಂದು ಪತ್ರದಲ್ಲಿ ಇನ್ನಿತರ ಷರತ್ತುಗಳನ್ನು ಒಪ್ಪಿಕೊಂಡರು. ಒಪ್ಪಂದದಲ್ಲಿ ತಮ್ಮ ಖಾಸಗಿ ಆಸ್ತಿಗಳ ವಿವರಗಳನ್ನು ನೀಡಿದರು. ದೇವಸ್ಥಾನಗಳ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿದ ವಿವರ ನೀಡಲಾಯಿತು. ಜೊತೆಗೆ ಹಲವಾರು ಸರಕಾರಿ ಕಟ್ಟಡಗಳನ್ನು ತಮ್ಮ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಸೇರಿಸಿದರು. ಸ್ವಾತಂತ್ರ್ಯಪಡೆದು ಒಂದು ವರ್ಷವೂ ಆಗಿರದ ಭಾರತದ ಒಕ್ಕೂಟವನ್ನು ಭದ್ರಗೊಳಿಸುವ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕಿತ್ತು. ಈ ಒತ್ತಡದಿಂದಾಗಿಯೇ ಸೊಂಡೂರು ಮಹಾರಾಜರ ಯಾವ ಷರತ್ತುಗಳನ್ನು ಪರಿಶೀಲಿಸದೆ ಒಪ್ಪಿಕೊಂಡಿತು.

ಸ್ವಾತಂತ್ರಪೂರ್ವದಲ್ಲಿಯೇ ಸಂಸ್ಥಾನ ಹೊಂದಿದ್ದ ಪರಮಾಧಿಕಾರ ಒಂದಷ್ಟು ಬದಲಾವಣೆಯೊಂದಿಗೆ ಸ್ವಾತಂತ್ರ್ಯ ನಂತರವೂ ಮುಂದುವರೆಯಿತು. ಭಾರತದ ಒಕ್ಕೂಟದ ಹೆಸರಲ್ಲಿ ದೇಶೀ ಸಂಸ್ಥಾನಗಳು ಸಾರ್ವಜನಿಕ ಆಸ್ತಿಗಳನ್ನೆಲ್ಲಾ ಖಾಸಗಿ ಆಸ್ತಿಯನ್ನಾಗಿಸಿ ವಿವರ ನೀಡಿದವು. ಸರಕಾರವೂ ಈ ವಿವರಗಳನ್ನು ಪರಿಶೀಲಿಸದೆ ಒಪ್ಪಿಕೊಂಡಿತು. ಇದರ ಪರಿಣಾಮವಾಗಿಯೇ ಮಾಜಿ ದೊರೆಗಳು ಅಪಾರ ಸಂಪತ್ತಿನ ಒಡೆಯರಾದರು. ಅಂತೆಯೇ ಇವರ ರಾಜಾಧಿಕಾರವೂ ಸಂಪತ್ತಿನ ಒಡೆತನದ ಮೂಲಕ ಮುಂದುವರಿಯಿತು. ಈ ಸಂದರ್ಭ ಮಾಜಿ ದೊರೆಗಳಿಗೆ ರೈತರ ಬಹುಪಾಲು ಭೂಮಿಯನ್ನು ವಶಪಡಿಸಿಕೊಳ್ಳಲು ಸಹಕರಿಸಿತು. ‘ಆಡಳಿತಾವಧಿಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವಂತಿಲ್ಲ’ ಎನ್ನುವ ಷರತ್ತಿನಿಂದಾಗಿ ಮಾಜಿ ದೊರೆಗಳು ದಮನಕಾರಿ ಆಡಳಿತವನ್ನು ಪ್ರಾರಂಭಿಸಿದರು. ಒಂದು ಕಡೆ ಪ್ರಜೆಗಳು ಸ್ವಾತಂತ್ರ್ಯರಾಗಿದ್ದೇವೆ ಎಂದು ಭಾವುಕರಾದರೆ, ಇನ್ನೊಂದು ಕಡೆ ಮಾಜಿ ದೊರೆಗಳ ನಿಯಂತ್ರಣದಲ್ಲಿದ್ದರು. ಹೆಚ್ಚು ಕಡಿಮೆ ಭಾರತದ ೬೦೦ಕ್ಕೂ ಹೆಚ್ಚಿನ ದೇಶೀ ಸಂಸ್ಥಾನಗಳಲ್ಲಿ ಇಂತಹದ್ದೇ ಪರಿಸ್ಥಿತಿ ಇತ್ತು. ೧೯೪೭ರ ನಂತರದ ಭಾರತದಲ್ಲಿ ದೇಶೀ ಸಂಸ್ಥಾನಿಕರ ವಿರುದ್ಧ ಆದ ರೈತ ಚಳವಳಿಗಳೆಲ್ಲ ಇದರ ಫಲವೆ. ಇಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರ ಭೂಮಿಯನ್ನು ಕೊಡುತ್ತಿದೆ. ಈ ಭೂಮಿಯ ಮೇಲೆ ಸರ್ಕಾರದ ಯಾವ ಹಿಡಿತವೂ ಇರುವುದಿಲ್ಲ. ಕಂಪನಿಯ ಸರಹದ್ದಿನಲ್ಲಿ ಯಾವ ಉತ್ಪನ್ನಗಳನ್ನಾದರೂ ಉತ್ಪಾದಿಸಬಹುದು. ಕಂಪನಿಯ ವಾದ ವಿವಾದಗಳೇನಿದ್ದರೂ ತೀರ್ಮಾನವಾಗುವುದು ನೇರವಾಗಿ ವಿಶ್ವಸಂಸ್ಥೆಯ ಮೂಲಕ. ಈಗಲೂ ಸಹ ಭೂಮಿಯ ಮೇಲಿನ ಹಕ್ಕು ಬಹುರಾಷ್ಟ್ರೀಯ ಕಂಪನಿಗಳ ವಶವಾಗುತ್ತಿರುವುದು ಚಾರಿತ್ರ್ಯಿಕ ವ್ಯಂಗ್ಯ.

ಸೊಂಡೂರು ಸಂಸ್ಥಾನವು ವಿಲೀನದ ನಂತರ ಯಾವ ಪ್ರಾಂತಕ್ಕೆ ಸೇರಬೇಕು ಎಂಬ ಪ್ರಶ್ನೆ ಉದ್ಭವವಾಯಿತು. ಇದು ಕರ್ನಾಟಕ ಏಕೀಕರಣ ಸಂದರ್ಭದ ಪ್ರಶ್ನೆಯೂ ಆಗಿತ್ತು. ಕರ್ನಾಟಕ ಪ್ರಾಂತ ರಚನೆಗೆ ಮೈಸೂರು ಸಂಸ್ಥಾನವಲ್ಲದೆ ಉತ್ತರ ಕರ್ನಾಟಕದ ಅನೇಕ ಸಂಸ್ಥಾನಗಳು ಮರಾಠಿಯವರ ಆಳ್ವಿಕೆಯಲ್ಲಿದ್ದವು. ಮತ್ತು ಆ ಮೊದಲು ಅಲ್ಲೆಲ್ಲಾ ಮರಾಠಿ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದುದರಿಂದ ಅವಕ್ಕೆ ಕರ್ನಾಟಕದೊಡನೆ ಸೇರಲು ಒಪ್ಪಿಗೆಯಿರಲಿಲ್ಲ. ‘ಕನ್ನಡ ನುಡಿ’ ಪತ್ರಿಕೆಯಲ್ಲಿ ಮಾರ್ಚ್‌ ೧೯.೧೯೪೮ರಂದು ಸೊಂಡೂರು ಸಂಸ್ಥಾನ ಮೈಸೂರು ಅಥವಾ ಮರಾಠಾ ಪ್ರಾಂತ್ಯಗಳಲ್ಲಿ ಸೇರಲು ಸೊಂಡೂರು ಸರ್ಕಾರವಾಗಲಿ ಅಲ್ಲಿನ ಜನರಾಗಲಿ ಒಪ್ಪುವುದಿಲ್ಲವೆಂದು ಸೊಂಡೂರು ಸಂಸ್ಥಾನದ ಪ್ರಧಾನಿ ಡಾ. ಯು.ಬಿ.ಷರಾಫ್ ಅವರು ಒಂದು ಹೇಳಿಕೆ ಕೊಡುತ್ತಾರೆ. ಆದರೆ ರಂ.ರಾ.ದಿವಾಕರರು ‘ಕರ್ನಾಟಕದ ಏಕೀಕರಣದ’ ಕಥೆ (ಪುಟ ೯೧) ಕೃತಿಯಲ್ಲಿ ‘ಸೊಂಡೂರಿನ ರಾಜೇಸಾಹೇಬರು ಜುಲೈ ೧.೧೯೪೬ರಂದು ಸೊಂಡೂರು ಸಂಸ್ಥಾನದ ಶಾಸನ ಸಭೆಯಲ್ಲಿ ಭಾಷಣ ಮಾಡುತ್ತ ಕರ್ನಾಟಕದ ಏಕೀಕರಣವನ್ನು ಸ್ವಾಗತಿಸಿ, ಭಾಷಾನ್ವಯ ಪ್ರಾಂತ. ರಚನೆಯ ಕಡೆಗೆ ತಮ್ಮ ಪಕ್ಷಪಾತವಿದೆ ಎಂದರು’ ಎಂದು ದಾಖಲಿಸುತ್ತಾರೆ. ಇದೇ ಅಭಿಪ್ರಾಯ ೧೯೪೬ರಲ್ಲಿ ಪ್ರಕಟವಾದ ಶ್ರೀನಿವಾಸರಾವ್ ಮಂಗಳವೀಡೆ ಮತ್ತು ನಾರಾಯಣ ಸಂಗಮ ಅವರ ‘ಕರ್ನಾಟಕ ಏಕೀಕರಣ’ ಪುಸ್ತಕದಲ್ಲೂ ದಾಖಲಾಗಿದೆ.

ಸೊಂಡೂರು ಶಾಸನ ಸಭೆಗಳಲ್ಲಿ ಆಗಸ್ಟ್ ೧೦.೧೯೪೭ರಂದು ಚರ್ಚೆ ನಡೆಯಿತು. ನಂತರ ಸರ್ವಾನುಮತದಿಂದ ಸೊಂಡೂರು ರಾಜರು ೧೯೪೬ರ ರಾಜ್ಯ ಘಟನಾ ವಿಧಿಯಂತೆ ಸ್ವತಂತ್ರ್ಯವಾದ ಭಾರತದ ಒಕ್ಕೂಟದಲ್ಲಿ ಸೇರಲು ಆಗಸ್ಟ್ ೧೬.೧೯೪೭ರಂದು ಒಪ್ಪಂದ ಮಾಡಿಕೊಂಡರು. ೧೯೪೮ರ ಶಾಸನ ಸಭೆಯ ತೀರ್ಮಾನದಂತೆ ಮೈಸೂರು ರಾಜ್ಯದಲ್ಲಿ ವಿಲೀನವಾಗುತ್ತೇವೆ ಎಂದು ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ತಿಳಿಸಿದರು. ಈ ವಿಲೀನಕ್ಕೆ ಕೊಟ್ಟ ಕಾರಣಗಳು ಹೀಗಿದ್ದವು.

೧. ಸೊಂಡೂರು ಮತ್ತು ಮೈಸೂರು ಸಂಸ್ಥಾನದ ಗಡಿಗಳು ಹೊಂದಿಕೊಂಡಿವೆ.

೨. ಸೊಂಡೂರು ಮತ್ತು ಮೈಸೂರು ಜನತೆಗೆ ಪರಸ್ಪರ ಭಾಷಿಕ ಮತ್ತು ಸಾಂಸ್ಕೃತಿಕ ಸಂಬಂಧವಿದೆ. ಎರಡೂ ಕಡೆ ಆಡುವ ಭಾಷೆ ಕನ್ನಡವೇ ಆಗಿದೆ.

೩. ಖನಿಜ ಸಂಪತ್ತಿಗೆ ಸಂಬಂಧಿಸಿದಂತೆ ಮೈಸೂರು ಮತ್ತು ಸೊಂಡೂರು ಸಂಸ್ಥಾನಗಳು ಪರಸ್ಪರ ಹೊಂದಿಕೊಂಡಿವೆ. ಅದರ ಪ್ರಗತಿಗೆ ಸಮಾನ ಆಸಕ್ತಿಯನ್ನು ಹೊಂದಿವೆ.

೪. ಆಡಳಿತಕ್ಕೆ ಸೊಂಡೂರು ಮೈಸೂರು ಸಂಸ್ಥಾನವನ್ನೇ ಅನುಸರಿಸಿದೆ. ಆದ್ದರಿಂದ ಅದನ್ನು ಮದ್ರಾಸ್ ಪದ್ಧತಿಗೆ ಬದಲಾಯಿಸುವುದು ಸುಲಭವಲ್ಲ.

೫. ಏಕೀಕೃತ ಭವಿಷ್ಯದ ಆಸಕ್ತಿಗಳನ್ನು ಗಮನಿಸಿ ಸೊಂಡೂರು ಸಂಸ್ಥಾನ ಮದ್ರಾಸ್‌ಗಿಂತ ಮೈಸೂರಿನ ಜೊತೆ ಸೇರಲು ಇಚ್ಚಿಸುತ್ತದೆ. ಹೇಗಿದ್ದರೂ ಮದ್ರಾಸ್ ಮುಂದೆ ಆಂಧ್ರ, ತಮಿಳುನಾಡು, ಕೇರಳ ಎಂದು ಬೇರ್ಪಡೆಯಾಗಲಿದೆ.[3]

ಹೀಗೆ ಸೊಂಡೂರು ಮಹಾರಾಜರು ಮೊದಮೊದಲು ಭಾರತದ ಗಣರಾಜ್ಯವನ್ನು ಸೇರಲು ನಿರಾಕರಿಸಿದರು. ನಂತರ ಜನರ ಪ್ರತಿಭಟನೆಗಳಿಂದಲೂ, ಸರಕಾರವನ್ನು ಎದುರಿಸಲಾಗದ ಪರಿಸ್ಥಿತಿಯ ಒತ್ತಡದಿಂದಲೂ, ಸೊಂಡೂರು ಮೈಸೂರು ಸರ್ಕಾರದಲ್ಲಿ ವಿಲೀನವಾಯಿತು.

ಶ್ರೀಗಂಧದ ಪ್ರಕರಣ

ಐವತ್ತರ ದಶಕದ ಸೊಂಡೂರು ಪರಿಸರದಲ್ಲಿ ಶ್ರೀಗಂಧದ ಮರಗಳಿದ್ದವು. ತಾಲ್ಲೂಕಿನ ದೇವಗಿರಿ ಮತ್ತು ರಾಮದುರ್ಗ ಸುತ್ತಲ ಕಾಡಿನಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿತ್ತು. ಗಂಧದ ಮರಗಳ ವಾರಸುದಾರಿಕೆ ರಾಜವಂಶದ್ದು. ಬೇಟೆಗಾಗಿ ಕಾಯ್ದಿರಿಸಿದ ಅರಣ್ಯ ಸಂಪತ್ತು ರಾಜರದು ಹೇಗಾಯಿತು? ಎನ್ನುವ ಬಗ್ಗೆ ಅರಣ್ಯ ಇಲಾಖೆ ಮತ್ತು ರಾಜವಂಶದ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾದವು. ೧೯೪೯ರ ಭಾರತ ಸರಕಾರದ ಒಪ್ಪಂದದಲ್ಲಿ ಈ ಎರಡೂ ಗ್ರಾಮಗಳ (ನಕಾಶೆ ೩,೪) ಅರಣ್ಯದಲ್ಲಿ ದೊರೆಯೂ ಆತನ ಸಂತತಿಯೂ ಬೇಟೆಯಾಡಬಹುದೆಂದು ಮಾತ್ರ ಉಲ್ಲೇಖವಿತ್ತು. ಭಾರತ ಸರ್ಕಾರವು ಪ್ರಕಟಿಸಿದ “White papers On Indian States” ಎಂಬ ಅಧಿಕೃತ ಪ್ರಕಟಣೆಯಲ್ಲಿ ಅರಣ್ಯ ಪ್ರದೇಶಗಳ ಮೇಲೆ ಸಂಸ್ಥಾನಿಕ ಅರಸರ ಹಕ್ಕುಗಳಿಗೆ ಮಿತಿಯಿದೆ. ಗುರುತಿಸಲ್ಪಟ್ಟ ಸರಹದ್ದಿನಲ್ಲಿ ಬೇಟೆಯ ಹಕ್ಕನ್ನು ಮಾತ್ರ ನೀಡಲಾಗಿದೆ. ಅರಣ್ಯ ಸಂಪತ್ತಿನ ಹಕ್ಕು ಭಾರತ ಸರ್ಕಾರದ್ದು. ಅರಣ್ಯದ ದುರ್ಬಳಕೆಗೆ ಸರಕಾರದ ಆಕ್ಷೇಪವಿದೆ. ಹೀಗಾದಲ್ಲಿ ಬೇಟೆಯ ಹಕ್ಕನ್ನು ಹಿಂದಕ್ಕೆ ಪಡೆಯುವ ಅಧಿಕಾರವೂ ಭಾರತ ಸರ್ಕಾರಕ್ಕಿದೆ ಎಂದು ತಿಳಿಸಲಾಗಿತ್ತು. ಹೀಗಿದ್ದರೂ ಸೊಂಡೂರಿನ ರಾಜವಂಶಸ್ಥರು ವಿಸ್ತಾರವಾದ ಅರಣ್ಯವನ್ನು ವಿಭಾಗಿಸಿ ಕಟ್ಟಿಗೆ ಕಂಟ್ರಾಕ್ಟರುಗಳಿಗೆ ಉರುವಲಿಗಾಗಿ ಕೊಡುತ್ತಿದ್ದರು. ಟನ್‌ಗಟ್ಟಲೆ ಗಂಧದ ಮರ ಕಡಿದು ಮುಂಬೈಗೆ ಸಾಗಿಸಲಾಗಿತ್ತು.

೧೯೫೪ರಲ್ಲಿ ಗಂಧದ ಮರ ಕಡಿಯುವುದು ‘ಅಕ್ರಮ’ ಎಂದು ಅರಣ್ಯ ಇಲಾಖೆಯು ರಾಜರಿಗೆ ಮನವಿ ನೀಡಿತು. ಇದಕ್ಕೆ ಪ್ರತಿಯಾಗಿ ೧೯೪೬ರ ಒಪ್ಪಂದದ ಪ್ರಕಾರ ತನ್ನ ಖಾಸಗಿ ಆಸ್ತಿಯ ಮೇಲೆ ಪೂರ್ಣ ಸ್ವಾಮ್ಯ ಸ್ವಾಧೀನಾನುಭವ ಇದೆ ಎಂದು ಮಹಾರಾಜರು ಉತ್ತರಿಸಿದರು. ಸೊಂಡೂರು ಸಂಸ್ಥಾನ ಸಂವಿಧಾನದ ೩೬ನೆಯ ಕಾಲಮಿನ ಪ್ರಕಾರ ಗಂಧದ ಕಟ್ಟಿಗೆ ಮೇಲೆ ಸಂಪೂರ್ಣ ಹಕ್ಕಿದೆ ಎಂದು ಸಮರ್ಥಿ. ಈ ವಿಷಯ ಶೋಧಿಸಿ ವರದಿ ಮಾಡಲು ಅಂದಿನ ಹೊಸಪೇಟೆಯ ಅಸಿಸ್ಟೆಂಟ್ ಕಮಿಷನರ್ ಎನ್‌.ನರಸಿಂಹರಾವ್ ಅವರಿಗೆ ಸಕಾರ ವಹಿಸಿತು. ಅವರು ನವೆಂಬರ್ ೨೧.೧೯೫೪ರಂದು ಜಿಲ್ಲಾಧಿಕಾರಿಗೆ ವರದಿ ಒಪ್ಪಿಸಿದರು. ಮಾಜಿ ದೊರೆಗಳಿಗೆ ಸೊಂಡೂರು ಅರಣ್ಯದಲ್ಲಿರುವ ಗಂಧದ ಕಟ್ಟಿಗೆಯನ್ನು ಕಡಿಯಲು ಅಧಿಕಾರವಿಲ್ಲ ಎನ್ನುವುದು ವರದಿಯು ಮುಖ್ಯ ಅಂಶವಾಗಿತ್ತು.

ಮಹಾರಾಜರು ಈ ವರದಿಯನ್ನು ವಿರೋಧಿಸಿದರು. ಇದರಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಅಂದಿನ ಸರಕಾರಿ ವಕೀಲರಾದ ಕೆ.ಎಂ. ದಕ್ಷಿಣಾಮೂರ್ತಿಯವರಲ್ಲಿ ಮತ್ತೊಮ್ಮೆ ಸ್ಪಷ್ಟವಾದ ವರದಿ ಸಲ್ಲಿಸಲು ಮನವಿ ಮಾಡಿದರು. ಇವರು ೧೯೫೫ರಲ್ಲಿ ಸಲ್ಲಿಸಿದ ವರದಿ ಹೀಗಿತ್ತು.

ಸೊಂಡೂರು ಅರಣ್ಯ ಕಾಯಿದೆಯಲ್ಲಿ ಗಂಧದ ಮರವನ್ನು ರಾಜ್ಯವೃಕ್ಷ (ರಾಯಲ್  ಟ್ರೀ) ಎಂದು ಪರಿಗಣಿಸಲಾಗಿದೆ. ಅದನ್ನು ಘೋರ್ಪಡೆಯವರ ಮನೆತನದ ಸೊತ್ತೆಂದು ಘೋಷಿಸಿಲ್ಲ. ಅಭಿಪ್ರಾಯಕ್ಕೆ ಪುಷ್ಟಿ ಕೊಡದ ಇನ್ನೊಂದು ಅಂಶವೇನೆಂದರೆ ಗಂಧದ ಮರಗಳನ್ನು ಮಾರಿ ಬಂದ ಹಣವನ್ನು ರಾಜ್ಯದ  ಬೊಕ್ಕಸಕ್ಕೆ ಸೇರಿಸುತ್ತಿದ್ದರು. ದೊರೆಯ ವಯಕ್ತಿಕ ಖಜಾನೆಗೆ ಹಣ ಸಂದಾಯವಾಗುತ್ತಿರಲಿಲ್ಲ. ರಾಜ್ಯದ ಬೊಕ್ಕಸವನ್ನು ಸ್ಟೇಟ್ ಫಂಡ್ಎಂದೂ ತನ್ನ ಖಾಸಗೀ ಖಜಾನೆಯನ್ನು ಪ್ಯಾಲೇಸ್ ಫಂಡ್ ಎಂದು  ಕರೆಯುತ್ತಿದ್ದರು. ಪ್ಯಾಲೇಸ್ ಫಂಡ್ ದೊರೆಯ ವೈಯಕ್ತಿಕ ನಿಧಿ. ಹಿಂದಿನ ರಾಜ್ಯದ ಆಯವ್ಯಯಗಳನ್ನು ನೋಡಿದರೆ, ರಾಜ್ಯದ ಬೊಕ್ಕಸಕ್ಕೆ ಬೇಕಾದ ಹಣವನ್ನು ದೊರೆ ತನ್ನ ಸ್ವಂತ ಹಣದಿಂದ ಸಾಲಕೊಡುತ್ತಿದ್ದರು. ಸಾಲವನ್ನು ರಾಜ್ಯದ ಬೊಕ್ಕಸದಿಂದ ತೀರಿಸುತ್ತಿದ್ದರು. ಅಂದ ಮೇಲೆ ಮೇ .೧೯೩೮ರ ಸರ್ಕಾರಿ ಆಜ್ಞೆಯಲ್ಲಿ ರೂಲರ್ ಎಂಬ ಪದವು ದೊರೆ, ರಾಜ್ಯದ ಅಧಿಪತಿ ಅರ್ಥದಲ್ಲಿ ಬಳಕೆಯಾಗಿದೆ. ಸರ್ವಾಧಿಕಾರಿ ಎಂದಲ್ಲ. ಇದಲ್ಲದೆ ಆಗಸ್ಟ್ .೧೯೪೯ರಲ್ಲಿ ಮದ್ರಾಸ್ ಅರಣ್ಯ ಕಾಯಿದೆಯನ್ನು ಸೊಂಡೂರು ತಾಲೂಕಿಗೆ ಅನ್ವಯಿಸಲಾಯಿತು. ನಂತರ ಗಂಧದ ಮರಗಳು ಮದ್ರಾಸ್ ಸರ್ಕಾರದ ಸ್ವತ್ತಾದವು. ೧೯೪೯ರ ಭಾರತದ ವಿಲೀನ ಒಪ್ಪಂದದಿಂದಾಗಿ ಸೊಂಡೂರು ಸಂಸ್ಥಾನದ ಸಕಲ ಸಂಪತ್ತು ಮದ್ರಾಸ್ ಮತ್ತು ಮೈಸೂರು ರಾಜ್ಯ ಸರಕಾರಗಳ ಅಧೀನವಾಯಿತು. ಹೀಗಾಗಿ ಸೊಂಡೂರು ಮಾಜಿ ದೊರೆಗಳಿಗೂ ಗಂಧದ ಮರಗಳಿಗೂ ಯಾವ ಹಕ್ಕು ಅಧಿಕಾರವೂ ಇಲ್ಲ.

ಈ ವರದಿಯು ಮಾಜಿ ದೊರೆಗಳ ಅಧಿಕಾರವನ್ನು ಕಡಿತಗೊಳಿಸಿತು. ಇದರಿಂದ ಕೆ.ಎಂ. ದಕ್ಷಿಣಾಮೂರ್ತಿಯವರು ಸರ್ಕಾರಿ ವಕೀಲಿ ವೃತ್ತಿಯಿಂದ ಹೊರಬರುವಂತೆ ದೊರೆಗಳ ಪ್ರಭಾವವಾಯಿತು. ದೊರೆಗಳ ಸರ್ವಾಧಿಕಾರವನ್ನು ಪ್ರಶ್ನಿಸುವಲ್ಲಿ ಈ ಪ್ರಕರಣ ಜನರ ಗಮನ ಸೆಳೆಯಿತು. ಶ್ರೀಗಂಧದ ನಾಡು ಎಂಬ ಕವಿವರ್ಣನೆಯ ಕಾಲದಲ್ಲಿಯೇ ಗಂಧದ ಮರಗಳು ಮಾರುಕಟ್ಟೆಯ ಸರಕಾಗುತ್ತಿದ್ದುದು ಚರಿತ್ರೆಯ ವೈರುದ್ಧ್ಯ. ರಾಜವೃಕ್ಷ ಮಹಾರಾಜರಿಂದಲೇ ಕಣ್ಮರೆಯಾಗುವ ಸಂದರ್ಭ ಕೂಡ. ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲವನ್ನು ಹಣಕ್ಕೆ ಪರಿವರ್ತಿಸುವ ಅಧಿಕಾರ ಎನ್ನುವ ಪ್ರಜ್ಞೆಗರಿಗಟ್ಟುತ್ತಿರುವ ಕಾಲಾವಧಿ ಇದಾಗಿದೆ. ನಿಸರ್ಗದ ಜೊತೆಗಿನ ಸಹಜ ಸಂಬಂಧದಿಂದ ವಾಸ್ತವದ ಮಾರುಕಟ್ಟೆಯ ಮನೋಸ್ಥಿತಿಗೆ ಹೊಂದಿಕೊಳ್ಳುತ್ತಿರುವ ಸಂಕ್ರಮಣ ಕಾದಘಟ್ಟವಿದು. ಅಧಿಕಾರ ಹಣದ ಜೊತೆಜೊತೆಗೆ ಪರಿಸರ ನಾಶದ ಮೊದಲ ಹೆಜ್ಜೆಗಳೂ ಕೂಡ. ೧೯೫೫ರ ಕಾಲಾವಧಿಯಲ್ಲಿ ಸರ್ಕಾರ ಮಹಾರಾಜರ ಎಲ್ಲ ಅಧಿಕಾರವನ್ನು ಬೆಂಬಲಿಸುತ್ತದೆ ಎನ್ನುವುದು ಸಾರ್ವತ್ರಿಕ ಹೇಳಿಕಯಾಗಿತ್ತು. ಶ್ರೀಗಂಧದ ಪ್ರಕರಣ ನೋಡಿದರೆ ಸರ್ಕಾರ ಮತ್ತು ದೊರೆಗಳ ನಡುವೆ ಒಂದು ಸಂಘರ್ಷವೂ ಇತ್ತು ಎನ್ನುವುದನ್ನು ಮರೆಯುವಂತಿಲ್ಲ. ವಾಸ್ತವವೆಂದರೆ ಗಂಧದ ಮರಗಳು ದೊರೆಗಳಿಗೆ ಸೇರಿಲ್ಲ ಎಂದು ಕಾನೂನಿನ ಮೂಲಕ ಸಾಬೀತಾದರೂ, ಅವನ್ನು ಕಡಿಯುವ, ಮುಂಬೈಗೆ ಸಾಗಿಸುವ ಕಾರ್ಯ ನಡೆದೇ ಇತ್ತು.

ಗಂಧದ ಮರದ ವಿಷಯಕ್ಕಾಗಿ ಸಣ್ಣ ಪುಟ್ಟ ಘರ್ಷಣೆಗಳು ನಡೆಯುತ್ತಲೇ ಬಂದವು. ೧೯೬೨ರಲ್ಲಿ ಸೊಂಡೂರಿಗೆ ಮೂಲ ವಾರಸುದಾರಿಣಿ ಎಂದು ಕರೆಯಲಾಗುವ ಸುಶೀಲ ರಾಜೆ ಭೇಟಿ ನೀಡಿದ್ದರು. ಆಗ ರಾಜ್ಯ ಅರಣ್ಯ ಸಚಿವ ಬಿ. ರಾಚಯ್ಯನವರು ಬಂದಿದ್ದರು. ಅವರಿಗೆ ರಾಜರಿಂದಾಗಿ ಗಂಧದ ಮರಗಳು ನಾಶವಾಗುತ್ತಿವೆ ‘ಕಾನೂನು ಕ್ರಮ ತೆಗೆದುಕೊಳ್ಳಿ’ ಎಂದು ಮನವಿ ಮಾಡಲಾಗಿತ್ತು. ಆಗ ರಾಚಯ್ಯನವರು “ಮದ್ರಾಸ್ ರಾಜ್ಯದ ಕಾನೂನಿನಂತೆ ಗಂಧದ ಮರದ ಮೇಲಿನ ಅಧಿಕಾರ ಸರಕಾರದ್ದು. ಈ ಬಗ್ಗೆ ಮಹಾರಾಜರಿಗೆ ಮನವಿ ಮಾಡಲಾಗುವುದು. ಈ ವಿವಾದ ಇತ್ಯರ್ಥಕ್ಕಾಗಿ ಕೇಂದ್ರದ ಸಚಿವ ಶ್ರೀ.ಬಿ.ಎನ್. ದಾತರೆಯವರು ಮಧ್ಯೆ ಪ್ರವೇಶಿಸಬೇಕಾಗಿದೆ” ಎಂದು ಹೇಳಿಕೆ ನೀಡಿ ಜವಾಬ್ದಾರಿಯಿಂದ ಕಳಚಿಕೊಂಡರು.

ಐವತ್ತರ ದಶಕದ ಸೊಂಡೂರಿನಲ್ಲಿ ಮಹಾರಾಜರ ಅಧಿಕಾರದ ಮಿತಿಗಳ ಬಗೆಗೆ ಆಲೋಚಿಸುತ್ತಿದ್ದ ಸಮುದಾಯವೆಂದರೆ ಬ್ರಾಹ್ಮಣರದು. ದೊರೆಗಳಿಗೂ ಈ ಅರಿವಿತ್ತು. ಇವರು ಯಾವುದೇ ಸಮಯದಲ್ಲಿ ದೊರೆಯ ವಿರುದ್ಧ ಜನರನ್ನು ತಯಾರಿ ಮಾಡುವ ಸಾಧ್ಯತೆಯಿತ್ತು. ಹೀಗಾಗಿ ಬುದ್ಧಿವಂತರಾದ ಬ್ರಾಹ್ಮಣರನ್ನು ಮೊದಲು ಆರ್ಥಿಕವಾಗಿ ದುರ್ಬಲಗೊಳಿಸಬೇಕಿತ್ತು. ಇದಕ್ಕಾಗಿ ಕೆಲವು ಯೋಜನೆಗಳು ರೂಪುಗೊಂಡವು. ಬ್ರಾಹ್ಮಣರಿಗೆ ದೇವಸ್ಥಾನಗಳ ಪೂಜೆಯ ಕಾರಣಕ್ಕಾಗಿ ದತ್ತಿ ಭೂಮಿಗಳಿದ್ದವು. ಈ ಭೂಮಿ ಅವರನ್ನು ಪ್ರಬಲರನ್ನಾಗಿಸುವ ಶಕ್ತಿಯಾಗಿತ್ತು. ಇದರಿಂದಾಗಿಯೇ ೧೯೫೩ರಲ್ಲಿ ಬ್ರಾಹ್ಮಣರನ್ನು ಒಳಗೊಂಡಂತೆ ಕುಮಾರಸ್ವಾಮಿ ದೇವಸ್ಥಾನದ ಭೂಮಿಯ ಗೇಣಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಲಾಯಿತು. ಈ ಬಗೆಯ ಹಠಾತ್ ದಾಳಿಗೆ ತತ್ತರಿಸಿದ ಜನರು ಈ ಅನ್ಯಾಯದ ವಿರುದ್ಧ ಪ್ರತಿಭಟಿಸಿದರು. ಆಗ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ ಶಿವಮೂರ್ತಿ ಸ್ವಾಮಿಯವರು ಇದಕ್ಕೆ ಸ್ಪಂದಿಸಿದರು. ಭಾರತ ಸರಕಾರದ ಗೃಹಖಾತೆಗೆ ಪತ್ರ ಬರೆದು ಈ ಬಗ್ಗೆ ಸರಕಾರದ ಗಮನ ಸೆಳೆದರು. ಯಜಮಾನ ಶಾಂತರುದ್ರಪ್ಪನವರು ‘ಇದ್ದ ಹಲವಾರು ಬ್ರಾಹ್ಮಣರ ಕುಟುಂಬಗಳಲ್ಲಿಯೇ ತನಗೆ ಅವರಿಂದ ಏನಾದರೂ ಮುಂದೆ ತೊಂದರೆಯಾಗಬಹುದೆಂದು ಸಂಶಯದಿಂದ ಅಂತವರ ಬಲ ಕಡಿಮೆ ಮಾಡಲು ಮೊದಲು ಸಭ್ಯರೂ ‘ಅಂಜುಬುರುಕರು’ ರಾಜನ ವಿರುದ್ಧ ಪ್ರತಿ ನುಡಿಯದವರ ಆಸ್ತಿಗಳನ್ನು ಕತ್ತರಿಸಿದರು. ನಂತರದಲ್ಲಿ ಕ್ರಮೇಣ ಬಲಿಷ್ಟರೆನಿಸಿಕೊಂಡ ಬ್ರಾಹ್ಮಣರ ಚಂಡಿಕೆ, ಜನಿವಾರಕ್ಕೆ ಕತ್ತರಿ ಪ್ರಯೋಗ ಪ್ರಾರಂಭಿಸಿದರು. ದೇವರ ಪೂಜಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬ್ರಾಹ್ಮಣ ಪೂಜಾರಿಗಳ ಇನಾಮ ಜಮೀನುಗಳನ್ನು ಸೊಂಡೂರು ಸಂಸ್ಥಾನದ ಹೆಸರಿಗೆ ಸೇರಿಸಿಕೊಂಡು ಅವರಿಗೆ ಪೂಜೆಯ ಪರಿಹಾರಾರ್ಥವಾಗಿ ಕೂಲಿ ಕೊಡಲು ಆರಂಭಿಸಿದರು. ಬರುಬರುತ್ತಾ ಅವರ ಸಂಬಳವನ್ನು ನಿಲ್ಲಿಸಿದರು’ ಎಂದು ಬರೆಯುತ್ತಾರೆ.

ಸೊಂಡೂರಿನಲ್ಲಿ ರಾಜವಂಶಜರನ್ನು ಪ್ರಶ್ನಿಸುವವರು ಹೆಚ್ಚಿದಂತೆ ಅವರ ನಿಯಂತ್ರಣಗಳನ್ನು ಸಂಸ್ಥಾನ ಪ್ರಾರಂಭಿಸಿತು. ಹೀಗೆ ಪ್ರಶ್ನೆ ಮಾಡಿದ ಷಣ್ಮುಖಶಾಸ್ತ್ರಿ, ಐಕಲ್ ಗುರುಸಿದ್ದಪ್ಪ, ಬಾವಿಕಟ್ಟಿ ಮರಿಬಸಪ್ಪ ಎನ್ನುವುವರನ್ನು ಗಡಿಪಾರು ಮಾಡಲಾಯಿತು. ಬ್ರಾಹ್ಮಣರ ಭೂಮಿಯನ್ನು ವಶಪಡಿಸಿಕೊಂಡಿದ್ದನ್ನು ಉಗ್ರವಾಗಿ ವಿರೋಧಿಸಿದ ಪೊತ್ನೀಸ್ ರಾಮರಾಯರಿಗೆ ಸೊಂಡೂರಿನಲ್ಲಿ ನೆಲೆಯೂ ಸಿಗದಂತೆ ಮಾಡಲಾಯಿತು. ಒಂದು ದಿನ ಬಳ್ಳಾರಿಯಲ್ಲಿ ಅನಾಮಧೇಯರಾಗಿ ಸಾವನ್ನಪ್ಪಿದರು. ಮುಸಲ್ಮಾನರಿಗೆ ಸೊಂಡೂರಿನಲ್ಲಿ ಒಂದು ಪ್ರಾರ್ಥನಾ ಮಂದಿರ ಇರಲಿಲ್ಲ. ಆಗ ಕಂಟ್ರಾಕ್ಟರ್ ಕಾಶೀಮ ಸಾಹೇಬರು ತಮ್ಮ ಸ್ವಂತ ಖರ್ಚಿನಿಂದ ದರ್ಗಾದ ಬಳಿ ಪ್ರಾರ್ಥನಾ ಮಂದಿರ ಕಟ್ಟಿಸಲು ಅನುಮತಿ ಕೇಳಿದರು. ಮಹಾರಾಜರು ಅನುಮತಿ ಕೊಡಲಿಲ್ಲ. ಕೊನೆಗೆ ಊರ ಹೊರವಲಯದಲ್ಲಿ ಕಟ್ಟಿಸಬೇಕಾಯಿತು. ಅದು ಮುಸಲ್ಮಾನರಿಗೆ ದೊರೆಯ ಬಗೆಗೆ ಅಸಮಧಾನವನ್ನು ಮೂಡಿಸಿತು. ೧೯೪೮ಕ್ಕೆ ಮುಂಚೆ ಸಂಸ್ಥಾನದ ಕಛೇರಿಗಳಾದ ಯಶವಂತ ನಿವಾಸ, ಮಹಾರಾಣಿ ನಿವಾಸ, ಮೋಹಿನಿ ಮಹಲು ಎಂಬ ಕಟ್ಟಡಗಳನ್ನು ಜೂನ್ ೧೯೪೮ರಲ್ಲಿ ಭಾರತ ಸರ್ಕಾರ ವಶಪಡಿಸಿಕೊಂಡಿತು. ಆ ನಂತರ ೧ ಏಪ್ರಿಲ್ ೧೯೫೪ರಿಂದ ಸರಿಪಡಿಸಿಕೊಂಡು ತಿಂಗಳಿಗೆ ೪೦೨ ರೂಗಳನ್ನು ಬಾಡಿಗೆ ಪಡೆಯಲಾರಂಭಿಸಿದರು. ಸೊಂಡೂರು ವಿಲೀನ ಒಪ್ಪಂದದಲ್ಲಿ ಸರಕಾರಿ ಆಸ್ತಿಗಳಾದ ಈ ಕಟ್ಟಡಗಳು ೧೯೫೪ರಲ್ಲಿ ಹೇಗೆ ಖಾಸಗಿ ಆಸ್ತಿಗಳಾದವು ಎಂದು ಕೆಲವರು ಪ್ರಶ್ನೆ ಮಾಡಿದರು. ಈ ಪ್ರಶ್ನೆಗಳು ಹಾಗೆಯೆ ಉಳಿದವು.

೧೯೫೪ರಲ್ಲಿ ಸೊಂಡೂರು ಮಹಾರಾಜರಿಗೂ ಕರ್ನಾಟಕದ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೂ ಗೆಳೆತನ ಉತ್ತಮವಾಗಿತ್ತು. ಇದಕ್ಕೆ ಕಾರಣ ಹೀಗಿದೆ. ಸೊಂಡೂರಿನಲ್ಲಿರುವ ಶ್ರೇಷ್ಟವಾದ ಮ್ಯಾಂಗನೀಸ್ ಅದಿರಿನ (ಜನರಲ್ ಸೊಂಡೂರ್ ಮೈನಿಂಗ್ ಕಂಪನಿ) ಗಣಿಗಳು ಪರೀಕ್ಷೆಯಲ್ಲಿ ಬೆಲ್ಜಿಯಮ್ ಕಂಪನಿಯಿಂದ ವಾಪಸಾದವು. ಮಹಾರಾಜರಿಗೆ ಈ ಗಣಿಗಳನ್ನು ವಾಪಸ್ಸು ಪಡೆಯಲು ಗಾಬರಿಯಾಯಿತು. ಏಕೆಂದರೆ ಮೈಸೂರಿನೊಡನೆ ವಿಲೀನವಾದ ಬಳ್ಳಾರಿ ಗಣಿಯ ಸಾರ್ವಭೌಮತ್ವ ನ್ಯಾಯವಾಗಿ ಮೈಸೂರು ರಾಜ್ಯಕ್ಕೆ ಸೇರಬೇಕಾಗಿತ್ತು. ಈ ಸಂದರ್ಭದಲ್ಲಿ ಆಗಲೆ ಬಳ್ಳಾರಿಯಲ್ಲಿ ‘ಗಣಿ’ ಸರ್ಕಾರಕ್ಕೆ ಸೇರಬೇಕು ಅದನ್ನು ಸೊಂಡೂರು ರಾಜರಿಂದ ಬಿಡಿಸಬೇಕು ಎಂದು ಸರ್ಕಾರಕ್ಕೆ ಜನರು ಮನವಿ ಸಲ್ಲಿಸಿದ್ದರು. ಈ ನಡುವೆ ಮಹಾರಾಜರು ಬೊಂಬಾಯಿಯ ಜಾಯಿಂಟ್ ಸ್ಟಾಕ್ ಕಂಪನಿಯ ಪ್ಲಾಟ್ ಮಾಡಲು ಪ್ರಯತ್ನಿಸಿದರು. ಆಗ ವಿದೇಶಿ ಕಂಪನಿಯೊಂದರ ಸೊಂಡೂರಿನ ಗಣಿಯ ಮಾಲಿಕತ್ವ ವಿರೋಧಿಸಿ ಬಳ್ಳಾರಿಯಲ್ಲಿ ಪ್ರತಿಭಟನೆಯಾಯಿತು. ‘ಸೊಂಡೂರಿನ ರಾಜಸಾಹೇಬರ ಉದ್ಯಮಕ್ಕೆ ಮದ್ರಾಸಿನ ಕೈಗಾರಿಕಾ ಮಂತ್ರಿ ಸೀತಾರಾಮರೆಡ್ಡಿ ಪಾರ್ಟ್‌ನರ್ ಆಗಿದ್ದಾರೆ’ ಇದನ್ನು ಪರಿಶೀಲಿಸಬೇಕೆಂದು ರಾಜ ಸರ್ಕಾರದ ಮೇಲೆ ಬಳ್ಳಾರಿಯ ಸೊಂಡೂರು ವಿಮೋಚನ ಸಮರ ಸಮಿತಿಯವರು ಒತ್ತಡ ತಂದರು. ಈ ಕಂಪನಿಯು ಕೆಲಸ ಪ್ರಾರಂಭಿಸಿದರೆ ಮಹಾರಾಜರ ವಾರ್ಷಿಕ ವರಮಾನ ೩೭.೦೦೦ದಿಂದ ೩೦, ಲಕ್ಷ ರೂಗಳಿಗೆ ಹೆಚ್ಚಾಗುವ ಸಾಧ್ಯತೆ ಇತ್ತು. ಎಂ.ವೈ. ಘೋರ್ಪಡೆಯವರು ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಹೆಚ್ಚಿನ ಖರ್ಚು ಇತ್ತು. ಈ ಹಿನ್ನೆಲೆಯಲ್ಲಿ ಬೆಲ್ಜಿಯಮ್ ಕಂಪನಿಗೆ ಗಣಿಯನ್ನು ಕೋಟ್ಯಂತರ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿಗಳ ನೆರವು ಬೇಕಿತ್ತು. ಹಾಗಾಗಿ ಸೊಂಡೂರಿನ ಮಹಾರಾಜರು ಕೆಂಗಲ್ ಹನುಮಂತಯ್ಯನವರೊಂದಿಗೆ ಸಖ್ಯ ಬೆಳೆಸಿದರು. ಮುಖ್ಯಮಂತ್ರಿಗಳೂ ಇದಕ್ಕೆ ಸಹಕರಿಸಿ ಬೆಂಬಲಿಸಿದರು. ಆಗ ಬೆಂಗಳೂರಿನಿಂದ ಎಂ.ಜಿ. ಕರುಣಾಳ್ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಕರ್ಮಯೋಗಿ’ ಪತ್ರಿಕೆಯಲ್ಲಿ “ಹನುಮಂತಯ್ಯನವರೇ! ನೂತನ ಬಳ್ಳಾರಿ ಜಿಲ್ಲೆಯನ್ನು ಬಂಡವಾಳಶಾಹಿಯಿಂದ ಕಾಪಾಡಿ” ಎಂದು ಬಹಿರಂಗವಾಗಿ ಸವಾಲು ಹಾಕಿದರು. ಮುಖ್ಯಮಂತ್ರಿಗಳೇ ಮಹಾರಾಜರನ್ನು ಬೆಂಬಲಿಸಿದ್ದರಿಂದ ಸಾಮಾನ್ಯ ಜನರ ಅಹವಾಲುಗಳು ಮೌನವಾದವು.


[1] ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ, ಪು. ೧೩೩-೩೫, ೧೯೯೮

[2] ಅದೇ ಪು. ೧೩೪, ೧೯೯೮

[3] M.Y. Ggorpade, P -123, 1992

[4] ಕಾಗೋಡು ಚಳುವಳಿ ಸಮಾನ, ಸಂಪುಟ –ಪು. ೩೩೮