ಬಳ್ಳಾರಿಯ ಯಜಮಾನ ಶಾಂತರುದ್ರಪ್ಪನವರು ಬದುಕಿನ ಬಹುಭಾಗವನ್ನು ಸೊಂಡೂರಿನ ರಾಜಮನೆತನದ ವಿರುದ್ಧ ಹೋರಾಡುವುದರಲ್ಲೆ ಕಳೆದರು. ಅವರ ಹೋರಾಟದ ತೀವ್ರತೆಯನ್ನು ಸೊಂಡೂರು ಸಂಸ್ಥಾನದ ವಿರುದ್ಧವಾಗಿ ಹೊರಡಿಸುತ್ತಿದ್ದ ಕರಪತ್ರಗಳಲ್ಲಿ ಕಾಣಬಹುದು. ಇದಕ್ಕಿಂತ ಮುಖ್ಯವಾಗಿ ಅವರೇ ಬರೆದ ಕಾದಂಬರಿ ‘ಹಸಿದ ಮಾನವ ಹುಸಿ ನುಡಿದು ಹದಗೆಡಸಿದ ಸೊಂಡೂರು ನಾಡು’ ಅಥವಾ ‘ಸೊಂಡೂರಿನ ಮಾಜಿ ರಾಜ ಹಾಗೂ ಯುವರಾಜ ಭಯಂಕರ ಒಳಸಂಚು’ ಎಂಬ ಪತ್ತೇದಾರಿ ಕಾದಂಬರಿಯಲ್ಲಿ ಯಜಮಾನರ ಧಾರ್ಷ್ಟ್ಯ ನೇರವಂತಿಕೆಯನ್ನು ಗುರುತಿಸಬಹುದು. ಯಜಮಾನರೇ ಇದನ್ನೊಂದು ಕಾದಂಬರಿ ಎಂದಿದ್ದಾರೆ. ಆದರೆ ಕ್ರೈಮ್ ಪತ್ರಿಕೆಯ ರೋಚಕ ವರದಿಯಂತೆ ಇದೆ. ಇದು ಬಳ್ಳಾರಿ ಜಿಲ್ಲೆಯ ಚರಿತ್ರೆಯಲ್ಲಿ ಗಮನಿಸಬೇಕಾದ ಪಠ್ಯ. ಈ ಕಾದಂಬರಿ ರಾಜ್ಯಪತ್ರಗಾರ ಇಲಾಖೆಯು ಸಂಗ್ರಹಿಸಿದ ಯಜಮಾನ ಶಾಂತರುದ್ರಪ್ಪನವರ ವೈಯಕ್ತಿಕ ಸಂಗ್ರಹದಲ್ಲಿ ದೊರೆತಿದೆ. ಸೊಂಡೂರು ಭೂ ಹೋರಾಟಕ್ಕೆ ಪೂರಕವಾಗಿ ಈ ಕಾದಂಬರಿಯನ್ನು ಅವಲೋಕಿಸಬಹುದು. ಆ ಕಾರಣಕ್ಕಾಗಿ ಕಾದಂಬರಿಯ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ. ಇದು ಹಸ್ತಪ್ರತಿಯಾಗಿದ್ದು ಅಪ್ರಕಟಿತ ಬರಹವಾಗಿದೆ.

ಅಧ್ಯಾಯ :

ನೂಲಿನಂತೆ ಸೀರೆ ತಂದೆಯಂತೆ ಮಗ

ಯಶವಂತರಾವ್ ಘೋರ್ಪಡೆಯ ಅಚ್ಚುಪಡೆಯಲ್ಲಿ ಸಿದ್ಧವಾದ ದೇಹ ಎಂ.ವೈ. ಘೋರ್ಪಡೆಯವರದು. ದೇಹದಲ್ಲಿಯೂ ಅದೇ ರಕ್ತ. ಅದೇ ದುಷ್ಟ ಶಕ್ತಿ ಸಂಚರಿಸುತ್ತಲಿದೆ. ಬುದ್ಧಿಯಲ್ಲಿ ವಿಚಾರದಲ್ಲಿ ತಂದೆಗಿಂತಲೂ ಒಂದು ತೂಕ ಕೀಳ್ತನ ಜಾಸ್ತಿ ಎಂದೇ ಹೇಳಬಹುದು. ಮಾಜಿ ಯುವರಾಜ ಸದ್ಯದ ಎಂ.ಎಲ್.. (ಮೈಸೂರು ರಾಜ್ಯ) ಕಾರ್ಯ ಸಾಧನೆಗಾಗಿ ದೊಡ್ಡ ಅಧಿಕಾರಿಗಳನ್ನಷ್ಟೇ ಅಲ್ಲ. ಆಫೀಸರುಗಳ, ಜವಾನರ ಕಾಲನ್ನೂ ಹಿಡಿದುಕೊಳ್ಳುತ್ತಾರೆ. ಕೆಲಸ ತೀರಿದ ಬಳಿಕ ಜವಾನರ ಕೆನ್ನೆಗೆ ಏಟು ಹಾಕಿ ಬರುತ್ತಾರೆ. ಇಂತಹ ಭಂಡತನ ಈತನದು. ಜವಾನರು ಪ್ರತಿ ನುಡಿದರೆ ತನ್ನ ಎಂ.ಎಲ್. ತನದ ದರ್ಪ ತೋರಿಸಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಜವಾನರನ್ನು ಕೆಲಸದಿಂದ ಬಿಡುಗಡೆ ಮಾಡಿಸುತ್ತಾರೆ. ತಂದೆ ಮಗ ಇಬ್ಬರೂ ಕಾಂಗ್ರೆಸ್ ವಿರೋಧಿಗಳಾಗಿದ್ದರೂ ಸಹಿತ ೧೯೬೦೬೧ರಲ್ಲಿ ಎಂ.ವೈ. ಘೋರ್ಪಡೆ ತಾನಿನ್ನು ಕಾಂಗ್ರೆಸ್ ಸೇರದಿದ್ದರೆ, ತಮ್ಮ ಕುಟುಂಬ ರಕ್ಷಿಸಿಕೊಳ್ಳುವುದು ಕಷ್ಟವಾದೀತೆಂದು ಬಗೆದು ..ಸಿ.ಸಿ ಯವರ ಬಾಲ ಬಡಿದು ಕಾಂಗ್ರೆಸ್ಗೆ ಸೇರಿ, ಅದೇ ವರ್ಷ ಕಾಂಗ್ರೆಸ್ಸಿನ ಟಿಕೆಟ್ ಪಡೆದುಕೊಂಡು ಸೊಂಡೂರು ವಿಧಾನಸಭಾ ಕ್ಷೇತ್ರದಿಂದ ಎಂ.ಎಲ್. ಆದೊಡನೆಯೇ ಈತನ ತಲೆಯ ಮೇಲೆ ಎರಡು ಹದವಾದ ಕೋಡುಗಳು ಚಿಗುರಿದವು. ಜನರನ್ನು ಅಧಿಕಾರಿಗಳನ್ನು ಇರಿದು ಗಾಯಗೊಳಿಸಲಿಕ್ಕೆ.

ಎಂ.ಎಲ್. ಅದರಲ್ಲಿಯೂ ಆಳುವ ಪಕ್ಷದವ ಕೇಳುವುದೇನು ಈತನು ಮಾಡಿದ ಬಾರಾ ಖೂನ್ ಮಾಪ್. ಸರಕಾರಿ ಅರಣ್ಯದೊಳಗಿನ ಗಂಧದ ಮರ, ಇಮಾರತಿನ ಕಟ್ಟಿಗೆ ಕಡಿಸಿ ಮಾರತೊಡಗಿದರು. ಕಾರ್ಯದಲ್ಲಿ ಫಾರೆಸ್ಟ್ ಖಾತೆಯ ಜಿಲ್ಲಾಧಿಕಾರಿಗಳನ್ನು ಸರಿಪಡಿಸಿಕೊಂಡು ಅವರಿಗೂ ತಿನ್ನಿಸಿ, ತಾನೂ ಹಣಗಳಿಸತೊಡಗಿದ. ಅರಣ್ಯಾಧಿಕಾರಿಗಳು ಘೋರ್ಪಡೆಗೆ ಸಹಾಯ ಮಾಡಿದಂತೆಯೇ ಇನ್ನಿತರ ಶ್ರೀಮಂತರಿಗೂ ಮಂತ್ರಿಗಳ ಹಾಗೂ ದೊಡ್ಡ ಸರಕಾರಿ ಅಧಿಕಾರಿಗಳ ಸಂಬಂಧಿಕರಿಗೂ ಲಂಚ ತಿಂದು ಅರಣ್ಯ ಸಂಪತ್ತು ವಿಲೇವಾರಿ ಮಾಡತೊಡಗಿದರು. ಇದನ್ನು ಸಹಿಸಲಾಗದೆ ಎಂ.ವೈ.ಘೋರ್ಪಡೆ ಎಂ.ಎಲ್. ತನದಿಂದ ಮಂತ್ರಿಗಳ ಕಿವಿಯೂದಿ ವಿಜಿಲನ್ಸಿ ಮತ್ತು ಲಂಚ ನಿಮೂರ್ಲನ ಖಾತೆಯವರಿಗೆ ತಿಳಿಸಿ, ಫಾರೆಸ್ಟ್ ಅಧಿಕಾರಿಗಳ ಮೇಲೆ ಕಾನೂನಿನ ಕಾರ್ಯಾಚರಣೆ ನಡೆಸಿದರು. ತನಗೆ ಮಾತ್ರ ಸಹಾಯ ಮಾಡಬೇಕು ಎನ್ನುವಂತಹ ಸ್ವಾರ್ಥಿ ಈತ. ಈತನಲ್ಲಿ ಯಾವ ತೆರವಾದ ದೇಶಭಕ್ತಿ ಇದೆ ನೋಡಿರಿ. ಗಾಂಧಿ ತತ್ವ, ಕಾಂಗ್ರೇಸ್ ನಿಯಮಗಳು ಒಂದೂ ಅರ್ಥವಾಗದ ಮಂಕು ದಿಣ್ಣೆಗೆ ಕಾಂಗ್ರೆಸ್ ಸದಸ್ಯತ್ವ ಸಿಕ್ಕುಬಿಟ್ಟರೆ, ಈತನು ದೇಶಭಕ್ತನಾದನೆ? ಖಾದಿ ಬಟ್ಟೆಗಳನ್ನು ಯಾರೂ ಹಾಕಿಕೊಳ್ಳಬಹುದು. ಖಾದಿ ಧರಿಸಿದವರೆಲ್ಲಾ ಕಾಂಗ್ರೆಸಿಗರಲ್ಲ. ಕಾಂಗ್ರೇಸ್ಸಿಗರು ತಾತ್ವಿಕವಾಗಿ ಗಾಂಧಿ ಸಿದ್ಧಾಂತಕ್ಕನುಗುಣವಾಗಿ ಖಾದಿ ಧರಿಸುತ್ತಿದ್ದರು. ಮಾತಿನ ತಾರತಮ್ಯವನ್ನು ತಿಳಿಯಬೇಕು. ಮಾಜಿ ರಾಜ, ಯುವರಾಜರ ಹಿನ್ನೆಲೆ ಈಗಾಗಲೇ ಓದಿ ತಿಳಿದಿದ್ದೀರಿ. ಎಂ.ವೈ.ಘೋರ್ಪಡೆ ಎಂ.ಎಲ್. ಆದ ಎರಡು ವರ್ಷದ ಬಳಿಕ ಎಸ್.ನಿಜಲಿಂಗಪ್ಪನವರ ಮಂತ್ರಿ ಮಂಡಳ ಉರುಳಿ ಶ್ರೀಮಾನ್ ಬಿ.ಡಿ.ಜತ್ತಿಯವರು ಮುಖ್ಯಮಂತ್ರಿಗಳಾದರು. ಜತ್ತಿಯವರು ಮುಖ್ಯಮಂತ್ರಿಗಳಾಗಲಿಕ್ಕೆ ಎಂ.ವೈ. ಘೋರ್ಪಡೆಯವರದೂ ಕೈವಾಡವಿತ್ತು. ಯಾಕೆಂದರೆ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಈತನ ಕಪಟತನ ನಡೆಯುತ್ತಿರಲಿಲ್ಲ. ಸೊಂಡೂರಿನ ಅರಣ್ಯ ಸಂಪತ್ತನ್ನು ಅಪಹರಿಸಲಿಕ್ಕೆ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಅವರ ವಿರುದ್ಧ ಗುಂಪಿನವರೊಡನೆ ಸೇರಿಕೊಂಡು ಜತ್ತಿಯವರಿಗೆ ಬೆಂಬಲವಾಗಿ ನಿಂತು ತನ್ನ ಬೇಳೆ ಬೇಯಿಸಿಕೊಳ್ಳತೊಡಗಿದರು. ಜತ್ತಿಯವರು ಮುಖ್ಯಮಂತ್ರಿಗಳಾದೊಡನೆ ಅವರನ್ನು ತನ್ನ ಮಾಜಿ ಸಂಸ್ಥಾನಕ್ಕೆ ಬಲವಂತ ಮಾಡಿ ಕರೆತಂದರು. ಸಂದರ್ಭದಲ್ಲಿ ನಡೆದ ಒಂದು ಅಚಾತುರ್ಯವನ್ನು ನೋಡೋಣ. ಸೊಂಡೂರು ವಿಮೋಚನೆ ಸಮರ ಸಮಿತಿ ಬಳ್ಳಾರಿ ಇವರಿಗೆ ಮಾನ್ಯ ಬಿ.ಡಿ.ಜತ್ತಿಯವರು ಸೊಂಡೂರಿಗೆ ಬರಲಿದ್ದಾರೆಂದು ತಿಳಿದು, ಸಮಿತಿಯ ಅಧ್ಯಕ್ಷರಾದ ಯಜಮಾನ ಶಾಂತರುದ್ರಪ್ಪನವರು ಒಂದು ಮನವಿ ಅರ್ಪಿಸಲು ಅಣಿಯಾದರು. ಆದರೆ ಎಂ.ವೈ.ಘೋರ್ಪಡೆ ಸಮತ ಸಮಿತಿಯವರು ತನ್ನ ವಿರುದ್ಧವಾಗಿ ಮತ್ತು ಇಲ್ಲಿಯವರೆಗೆ ಅಕ್ರಮವಾಗಿ ಸರಕಾರಿ ಆಸ್ತಿಯನ್ನು ಲೂಡಿ ಮಾಡಿದ್ದನ್ನು ತಿಳಿಸಬಹುದೆಂದು ಹೆದರಿ, ಯಜಮಾನ ಶಾಂತರುದ್ರಪ್ಪನವರು ಮನವಿ ಅರ್ಪಿಸಲಿಕ್ಕೆ ಬರದಂತೆ ನೋಡಿಕೊಳ್ಳಿ, ಒಂದು ವೇಳೆ ಬಂದರೆ ಅವರನ್ನು ಬಂಧಿಸಬೇಕೆಂದು ಒಳಗಿಂದೊಳಗೆ ಬಳ್ಳಾರಿ ಜಿಲ್ಲಾಧಿಕಾರಿಗಳೊಡನೆಯೂ, ಡಿ.ಎಸ್.ಪಿ. ಯವರೊಡನೆಯೂ ಸಂಪರ್ಕ ಬೆಳೆಸಿ ಅಧಿಕಾರಿಗಳ ಕಿವಿಯೂದಿ, ಸಮರ ಸಮಿತಿಯವರು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆತಂಕ ಪಡಿಸಿ ಗೊಂದಲ ಮಾಡುವ ಸಂಭವವಿದೆ ಎಂದು ಹೇಳಿಬಿಟ್ಟದ್ದರು. ಇದೆಲ್ಲಾ ಅವರ ಮಾನಸಿಕ ಕುಹುಕ ಕಲ್ಪನೆ. ಕಳ್ಳನ ಜೀವ ಹುಳ್ಳಗೆ ಆದ್ದರಿಂದ ಸಮಿತಿಯವರು ಯಾವ ಗೊಂದಲ ಮಾಡದಿದ್ದರೂ ಮಾಡುತ್ತಾರೆಂಬ ಭೀತಿ ಅವರಲ್ಲಿ ಬರಲಿಕ್ಕೆ ಆತನ ಕೃತಿಗಳೇ ಸಾಕ್ಷಿ.

ಮಾನ್ಯ ಮಂತ್ರಿಗಳು ಬಂದರು. ಯಜಮಾನ ಶಾಂತರುದ್ರಪ್ಪನವರು ಮುಖ್ಯಮಂತ್ರಿಗಳ ಭೇಟಿಗೆ ಹೋದರು. ಆದರೆ ಮಂತ್ರಿಗಳ ಭೇಟಿಗೆ ಮುನ್ನವೇ ಎಂ.ಎಲ್. ಘೋರ್ಪಡೆಯ ಸೂಚನೆಯ ಪ್ರಕಾರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಶಾಂತರುದ್ರಪ್ಪನವರನ್ನು ಸುರಕ್ಷಿತ ಕಾಯಿದೆಗನುಗುಣವಾಗಿ ಬಂಧಿಸಿದರು. ಜತ್ತಿಯವರು ಅನ್ಯಾಯದತ್ತ ಹೊರಳಿ ಕೂಡಾ ನೋಡಲಿಲ್ಲ. ಇವರು ಜನನಾಯಕರೆ? ಇವರು ಬಂಡವಾಳ ಶಾಹಿಯ ಬಾಲ ಬಡುಕ ನಾಯಕರು. ಸೊಂಡೂರು ವಿಮೋಚನ ಸಮರ ಸಮಿತಿಯವರು ಬಂಡೆಬ್ಬಿಸಿ ಜತ್ತಿಯವರನ್ನು ಅಪಮಾನಗೊಳಿಸಲು ಯತ್ನಿಸುತ್ತಿರಲಿಲ್ಲ. ಕೇವಲ ಮಾಜಿ ದೊರೆ ಮತ್ತು ಎಂ.ವೈ.ಘೋರ್ಪಡೆ ಎಂ.ಎಲ್. ಇವರು ಜನರ ಶೋಷಣೆ, ದೇವರ ಶೋಷಣೆ, ಸರಕಾರದ ಶೋಷಣೆಯನ್ನು ಹೇಗೆ ಕುತಂತ್ರಗಳ ಮೂಲಕ ಮಾಡುತ್ತಿದ್ದಾರೆಂಬುದನ್ನು ತಿಳಿಸುವುದಾಗಿತ್ತು. ಇಷ್ಟಕ್ಕೇನೆ ಬಂಧಿಸಿ ಕಾರಾಗೃಹದಲ್ಲಿಡುವ ಪ್ರಮೇಯವೇನಿತ್ತು? ಇದು ಪ್ರಜಾ ಪ್ರಭುತ್ವವೇ? ಅಲ್ಲ ಇದು ಅಧಿಕಾರ ದರ್ಪದ ರಾಜ್ಯ. ಜನರ ಪ್ರೀತಿಯಲ್ಲದ ಸರಕಾರ ಎಂದೂ ಉಳಿಯಲಾರದು. ಈಗ ಅದೇ ಜತ್ತಿಯವರು ನಾಯಿ ಹೊಡೆಯುವ ಕೋಲಿಗಿಂತಲೂ ಕಡೆಯಾಗಿದ್ದಾರೆ. ಜನರ ಶಕ್ತಿಯೇ ಶಶಕ್ತಿಯಾಗಿರುವಾಗ ಮಂತ್ರಿಗಳು ಅಧಿಕ ಪ್ರಮಾಣದಲ್ಲಿ ಜನರ ಪ್ರೀತಿಗೆ ಪಾತ್ರವಾಗಬೇಕೆ ವಿನಃ ಒಬ್ಬ ಶ್ರೀಮಂತನನ್ನು ಮೆಚ್ಚಿಸಲಿಕ್ಕೆ ಪ್ರಯತ್ನಿಸಬಾರದು. ಎಂ.ಎಲ್. ಘೋರ್ಪಡೆ ಹತ್ತು ವರ್ಷಗಳ ಅವಧಿಯಲ್ಲಿ ರಾಜಕೀಯ ಚದುರಂಗದಾಟವನ್ನು ಮೋಸದ ಹಾಗೂ ಲಂಚದ ಬಲದ ಮೇಲೆ ಆಡುತ್ತಾ ಬಂದಿದ್ದಾರೆ.

ಪಂಚಾಯಿತಿಗಳಲ್ಲಿ ಈತನ ಕುತಂತ್ರ :

ಸೊಂಡೂರು ಮತಕ್ಷೇತ್ರಗಳಲ್ಲಿರುವ ಎಲ್ಲ ಪಂಚಾಯಿತಿಗಳಲ್ಲಿಯೂ ಈತ ತನ್ನ ಕೈಗೊಂಬೆಯಾಗಿರುವ ಅತಿ ದೊಡ್ಡ ಹಾಗೂ ಹುಂಬ ಮತ್ತು ಅಜ್ಞಾನಿಗಳನ್ನು ಸರಪಂಚರನ್ನಾಗಿ ಮಾಡಿಸಿಟ್ಟಿದ್ದಾನೆ. ಬುದ್ಧಿವಂತರು ಬಂದರೆ ತನ್ನ ಅಕೃತ್ಯಗಳ ಗುಟ್ಟು ಬಯಲಾಗಬಹುದೆಂಬ ಭಯ ಈತನದಾಗಿದೆ. ಈತ ತಿಳಿದಂತೆ ಸರಪಂಚರೂ ದಡ್ಡರಲ್ಲ. ಅವರೂ ಬಹು ಜಾಣರು. ಕೈ ಬಲ ಬೆಳೆಯಲಿ ಎಂದು ಸುಮ್ಮನಿದ್ದಾರೆ. ಕಾಲ ಬಂದಾಗ ಈತನಿಗೆ ಕೈಕೊಡದೆ ಇರುವುದಿಲ್ಲ.

ಹಳ್ಳಿಗಳಲ್ಲಿ ಇವರು ಮಾಡುವ ಆಟ ಇನ್ನೊಂದು ತೆರವಾಗಿದೆ. ಬಡವರ ಗುಡಿಸಲಿಗೆ ಬೆಂಕಿ ಹಚ್ಚಿಸಿ ಸುಡಿಸಿ ಅವರ ಬಳಿ ಪುನಃ ತಾನೇ ಖುದ್ದಾಗಿ ಹೋಗಿ ಅಯ್ಯೋ ಯಾರೋ ಪಾಪಿಗಳು ಹೊಟ್ಟೆಯ ಮೇಲೆ ಕಲ್ಲು ಹಾಕಿದ್ದಾರೆಂದು ಮರ ಮರ ಮರುಗಿದಂತೆ ಮಾಡಿ, ಮೊಸಳೆ ಕಣ್ಣೀರು ಸುರಿಸಿ ಅವರಿಗೆ ತನ್ನ ಮನೆಯಿಂದ ಕಾಳು, ಬೇಳೆ, ದನಕರುಗಳಿಗೆ ಹುಲ್ಲು ಅಲ್ಲದೆ ಅವರಿಗೆ ಬಟ್ಟೆ ಕೊಡಿಸಿ, ಎಂ.ಎಲ್. ದೊರೆಗಳು ಎಷ್ಟು ಉದಾರಿಗಳು ಕರುಣೆಯುಳ್ಳವ ರೆಂದೆನಿಸಿಕೊಂಡು, ಅವರ ಮೇಲೆ ಮಹದುಪಾಕಾರ ಮಾಡಿದವರಂತೆ ಆಪ್ಯತೆಯಿಂದ ಹಿಂದಿರುಗುತ್ತಾನೆ. ಇಲ್ಲಿ ಇತ್ತ ಸರಕಾರಕ್ಕೆ ಎಂ.ಎಲ್. ಖಾತೆಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಲುಕ್ಸಾನದ ಸುಳ್ಳು ವರದಿ ಮಾಡಿಸಿ ಅದರಲ್ಲಿ ಲಾಭ ಗಿಟ್ಟಿಸಿಕೊಳ್ಳುತ್ತಾನೆ. ಈತನ ತೆರನಾದ ತೆರೆಯ ಮರೆ ನಾಟಕ ಯಾರಿಗೂ ತಿಳಿದಿಲ್ಲವೆಂತಲ್ಲ, ಎಲ್ಲರಿಗೂ ತಿಳಿದಿದೆ. ಪಾಪ! ಬಡವರಿಗೆ ಕುತಂತ್ರ ಮೊದ ಮೊದಲು ತಿಳಿಯುತ್ತಿರಲಿಲ್ಲ. ಈಗೀಗ ಅವರಿಗೂ ಈತನ ಭಂಡತನ ತಿಳಿದಿದೆ. ಆದರೆ ಮಾಡುವುದೇನು? ಹೊಟ್ಟೆಯ ಸಿಟ್ಟು ರಟ್ಟೆಗಿಲ್ಲ. ಅದರಲ್ಲಿಯೂ ನಮ್ಮ ಘನ ಮೈಸೂರು ಸರಕಾರವೊಂದು ಹೇಡಿ. ಏನಾದರೂ ಕ್ರಮ ಕೈಗೊಂಡರೆ ಕಾಂಗ್ರೇಸ್ಸಿನ ಒಂದು ಸೀಟು ಕೈಬಿಟ್ಟು ಹೋಗುತ್ತದಲ್ಲವೆಂದು ಮಂತ್ರಿಗಳಿಗೆ ಚಿಂತೆ. ಅದರಲ್ಲೂ ಎಂ.ವೈ. ಘೋರ್ಪಡೆ ಮೊದಲಿಗೇನು ಕಾಂಗ್ರೇಸ್ಸಿಗಿರಲಿಲ್ಲ. ಈಗಲಾದರೂ ನಾಮ ಮಾತ್ರ ಕಾಂಗ್ರೇಸ್. ತಾತ್ವಿಕವಾಗಿ ಈತ ಕಾಂಗ್ರೇಸ್ ವಿರೋಧಿ. ವಸ್ತು ಸ್ಥಿತಿ ಹೀಗಿರುವಾಗ ಈಗ ಕಾಂಗ್ರೇಸ್ ಬಿಟ್ಟು ಹೋದರೆ ಕಾಂಗ್ರೇಸ್ ಸಂಸ್ಥೆಗೆ ಬಡತನ ಬರುತ್ತದೆಯೇ? ಇಲ್ಲ ಸೊಂಡೂರು ವಿಭಾಗದಲ್ಲಿ ಈತನನ್ನುಳಿದು ಬೇರೆ ಉತ್ತಮ ಕಾಂಗ್ರೇಸ್ ಕಾರ್ಯಕರ್ತರು ಇಲ್ಲವೆ? ಬೇಕಾದಷ್ಟು ಜನರಿದ್ದಾರೆ. ಹೀಗಿದ್ದರೂ ಸಹಿತ ನಮ್ಮ ಮೈಸೂರು ಘನ ಸರಕಾರ ಕೇಡಿ ಎಂ.ಎಲ್., ಎಂ.ವೈ.ಘೋರ್ಪಡೆಯ ಮೇಲೆ ಕ್ರಮವೇಕೆ ಕೈಗೊಳ್ಳುತ್ತಿಲ್ಲ. ಇದು ಅಖಿಲ ಕರ್ನಾಟಕದ ಮಹಾಜನಗಳಿಗೇನೆ ಒಂದು ಬಿಡಿಸಲಾರದ ಸಮಸ್ಯೆ ಅಲ್ಲ. ಇದರಲ್ಲಿ ಅಂಥ ಹೇಳಿಕೊಳ್ಳುವಂತಹ ಸಮಸ್ಯೆ ಏನಿಲ್ಲ. ಸೀರೆ ಮೇಲೆತ್ತಿದರೆ ತನ್ನ ತೊಡೆಯೇ ಕಾಣುತ್ತದೆಂಬ ಭೀತಿ ಮೈಸೂರು ಮಂತ್ರಿ ಮಂಡಲಕ್ಕಿದೆ. ಒಂದು ರಾಜಕಾರಣ ಬಿಟ್ಟರೆ ಬೇರೇನೂ ಇಲ್ಲ ಇಲ್ಲಿ.

ಕುಮಾರಸ್ವಾಮಿ ಜಾತ್ರೆ ಬಂತೆಂದರೆ ಎಂ.ವೈ.ಘೋರ್ಪಡೆಗೆ ಒಂದು ದೊಡ್ಡ ಚಿಂತೆ. ಎಲ್ಲಿ ಸೊಂಡೂರು ವಿಮೋಚನ ಸಮರ ಸಮಿತಿಯವರು ವಿಧಾಯಕ ರೀತಿಯಲ್ಲಿ ಜನರನ್ನು ಪರಿವರ್ತಿಸಿ ದೇವರ ಹುಂಡಿಗೆ ಮತ್ತು ದರ್ಶನ ಪೀಜಿಗೆ ಅಡಚಣೆಯನ್ನುಂಟು ಮಾಡುತ್ತಾರೆಯೋ ಎಂದು ಹಗಲಿರುಳೂ ನಿದ್ರೆ ಬರುವುದಿಲ್ಲ. ಈತನಿಗೆ ಅಂತಲೇ ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿಗಳಿಗೆ ಬರೆದುಕೊಂಡು ಪೊಲೀಸ್ ಬಂದೋಬಸ್ತು ಮಾಡಿಸಿಕೊಳ್ಳುತ್ತಾನೆ. ಅಲ್ಲದೆ ಸೊಂಡೂರು ವಿಮೋಚನಾ ಸಮರ ಸಮಿತಿಯವರಿಂದ ತನಗೆ ತೊಂದರೆಯಾಗಬಹುದೆಂದು ಅವರಿಂದ ತನ್ನ ರಕ್ಷಣೆಯಾಗಬೇಕೆಂದೂ, ಪೊಲೀಸ್ ಅಧಿಕಾರಿಗಳಿಗೆ ಬಿನ್ನವಿಸಿ ಕೊಂಡು ದೂರು ಕೊಟ್ಟಿರುತ್ತಾನೆ. ಎಲ್ಲಾ ಕೃತ್ಯಗಳು ಪ್ರಜಾಪ್ರಭುತ್ವದ ಸಂವಿಧಾನಕ್ಕೆ ವಿರುದ್ಧವಾದದ್ದು. ಎಂ.ಎಲ್. ಎಂ.ವೈ.ಘೋರ್ಪಡೆಗೆ ರೀತಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಿಕ್ಕೆ ಯಾವ ಹಕ್ಕೂ ಇಲ್ಲ. ಜಾತ್ರೆ ಈತನ ಮನೆಯ ಉತ್ತಮವಲ್ಲ. ಅದು ಸಾರ್ವಜನಿಕವಾದದ್ದು. ಅಲ್ಲಿ ಬರುವ ಎಲ್ಲಾ ಭಕ್ತರಿಗೂ ಸರಿಸಮಾನ ಅಧಿಕಾರ ಪೂಜಾವ ಕಾಶವುಂಟು. ಅದನ್ನು ಕಸಿದುಕೊಂಡು ತನ್ನ ರಕ್ಷಣೆಗಾಗಿ ಭದ್ರಕೋಟೆ ಕಟ್ಟಿಕೊಳ್ಳಲಿಕ್ಕೆ ದೇವಸ್ಥಾನವಾಗಲಿ, ಸುತ್ತಮುತ್ತಲಿನ ಜಾತ್ರಾ ಸ್ಥಳವಾಗಲಿ ಈತನ ಅರಮನೆಯಲ್ಲ. ಮತ್ತು ಅದು ಈತನ ಜಹಗೀರಿಯೂ ಅಲ್ಲ. ಇನ್ನು ಮುಂದೆ ಇಂತಹ ಕುಚೋದ್ಯತನಕ್ಕೆಡೆಯಿಲ್ಲ. ಮಾತನ್ನು ಎಂ.ಎಲ್. ಘೋರ್ಪಡೆ ಸ್ಪಷ್ಟವಾಗಿ ಅರಿತಿರಲಿ.

ಬುಲೆಟಿನ್ ಪತ್ರಿಕೆಯ ಪಾತ್ರ

೧೯೬೨ರಲ್ಲಿ ಬಳ್ಳಾರಿಯಲ್ಲಿ ಬುಲೆಟಿನ್ ಕನ್ನಡ ಪತ್ರಿಕೆ ಪ್ರಕಟವಾಗುತ್ತಿತ್ತು. ಪತ್ರಿಕೆ ಜನಜಾಗ್ರತೆ ಮಾಡುವಲ್ಲಿಯೂ, ಸೊಂಡೂರಿನ ಮಾಜಿ ದೊರೆ ಯಶವಂತರಾವ್ ಘೋರ್ಪಡೆ ಮತ್ತು ಆತನ ಮಗ ಎಂ.ವೈ. ಘೋರ್ಪಡೆ ಕೃತ್ಯಗಳು, ಇವರ ಅಮಾನುಷ ಕೃತಿ, ಸರಕಾರಿ ಸಂಪತ್ತಿನ ಅಪಹರಣ, ದೇವಸ್ಥಾನಗಳ ಆಡಳಿತಕ್ಕಾಗಿ ಸರಕಾರವು ಕೊಡುತ್ತಿರುವ ವರ್ಷಂಪ್ರತಿ ೩೬,೦೦೦ ರೂಪಾಯಿಗಳ ಅವ್ಯವಹಾರ, ಅಲ್ಲದೆ ದೇವಸ್ಥಾನಕ್ಕೆ ಬರುವ ಭಕ್ತರಿಂದ ದರ್ಶನ ಫೀ .೫೦ ರೂ ಪ್ರತಿಯೊಬ್ಬರಿಂದ ಅಕ್ರಮವಾಗಿ ಪಡೆದು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಿರುವುದು, ಇವೇ ಮೊದಲಾದ ಇವರ ಅಸ್ವಾಭಾವಿಕ, ಅನೈತಿಕ, ದುರ್ವ್ಯಾಪಾರಗಳನ್ನು ಕುರಿತು ಲೇಖನ ಪ್ರಕಟಿಸಿ, ಸಂದರ್ಭದಲ್ಲಿ ಹತ್ತಿಪ್ಪತ್ತು ವರ್ಷಗಳಿಂದಲೂ ಸೊಂಡೂರು ವಿಮೋಚನಾ ಸಮರ ಸಮಿತಿಯವರು ಮಾಡುತ್ತ ಬಂದ ಜನಸೇವಾ ಜನಜಾಗೃತಿ ಮತ್ತಲ್ಲದೆ ಜನರಿಗೆ ರಾಜನ ಅತ್ಯುದ್ಭುತ ಮೋಸಗಾರಿಕೆಯನ್ನು ಬಯಲಿಗೆ ಹಾಕಲಿಕ್ಕೆ ಮಾಡುತ್ತಿರುವ ಜನೋಪಕಾರಿ ಕಾರ್ಯವನ್ನು ಪತ್ರಿಕೆ ಪ್ರಕಟಿಸಿ, ಬಳ್ಳಾರಿ ಜಿಲ್ಲಾ ಜನತೆಯಲ್ಲಿ ವಿವೇಕೋದಯವನ್ನುಂಟು ಮಾಡುತ್ತಿತ್ತು. ಪತ್ರಿಕೆಯ ಕೆಲವು ಸಂಚಿಕೆಯಲ್ಲಿನ ವರದಿಗಳನ್ನು ನೋಡಿದರೆ ಎಂ.ವೈ.ಘೋರ್ಪಡೆಯು ತನ್ನ ಎಂ.ಎಲ್. ಪದದ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಬಳ್ಳಾರಿ ಜಿಲ್ಲಾ ಪ್ರವಾಸ ಮಾಡುತ್ತಿರುವಾಗ ಎಂ.ಎಲ್. ಘೋರ್ಪಡೆ ಅವರ ಜೊತೆಗೆ ಇದ್ದು ಸಂಚಾರ ಕಾರ್ಯದಲ್ಲಿ ಬಿಡುವು ಸಿಕ್ಕಾಗಲೆಲ್ಲ ಸೊಂಡೂರು ವಿಮೋಚನಾ ಸಮರ ಸಮಿತಿಯವರು ತನ್ನ ಬಗ್ಗೆ ಬಳ್ಳಾರಿ ಬುಲೆಟಿನ್ ಪತ್ರಿಕೆಯಲ್ಲಿ ಅವಹೇಳನ ಮಾಡುತ್ತಲಿದ್ದಾರೆಂದೂ, ಎಲ್ಲಾ ಆಪಾದನೆಗಳೂ ನಿರಾಧಾರವಾದವುಗಳೆಂದೂ, ಶ್ರೀಮಾನ್ ನಿಜಲಿಂಗಪ್ಪನವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದರಂತೆ. ಆದರೆ ಎಷ್ಟಾದರೂ ತಿಳಿದವರಾದ ನಿಜಲಿಂಗಪ್ಪನವರೂ ಈತನ ಮಾತಿಗೆ ಲಕ್ಷ್ಯ ಕೊಡದೆ ಸರಕಾರಕ್ಕೆ ಆಗುತ್ತಿರುವ ನಷ್ಟವನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು ಸಿದ್ಧವಾದರು.

ಒಮ್ಮೆ ಎಂ.ಎಲ್.. ಎಂ.ವೈ. ಘೋರ್ಪಡೆ ಮಂತ್ರಿವರ್ಯ ಎಚ್.ಎಂ. ಚನ್ನಬಸಪ್ಪನವರನ್ನು ಭೇಟಿಯಾಗಲು ಹೋಗಿದ್ದ, ಆಗಲೂ ಸಹ ಯಜಮಾನ್ ಶಾಂತರುದ್ರಪ್ಪ ಮತ್ತು ಸೊಂಡೂರು ವಿಮೋಚನಾ ಸಮರ ಸಮತಿಯವರ ಮೇಲೆ ದೂರಿತ್ತು. ತಾನು ಯಾವ ಸರಕಾರಿ ಅರಣ್ಯದಲ್ಲಿಯೂ ಅಕ್ರಮವಾಗಿ ಗಂಧದ ಮರ ಕಡಿಸಿಲ್ಲವೆಂದೂ, ಮ್ಯಾಂಗನೀಸ್ ಅದಿರು ಮಾರಿಲ್ಲವೆಂದೂ, ಸಾಚಾವಂತನಾಗಿ ಹೇಳಹತ್ತಿದನಂತೆ. ಆಗ ಮಂತ್ರಿ ಚನ್ನಬಸಪ್ಪನವರು ಎಂ.ಎಲ್.. ಘೋರ್ಪಡೆಗೆ ಗದರಿಸಿ, ಹುಚ್ಚನ ಹಾಗೆ ಮಾತನಾಡಬೇಡ. ಸುಮ್ಮನೆ ಇನ್ನೆಂದು ಅಕ್ರಮವಾಗಿ ಸರ್ಕಾರಿ ಅರಣ್ಯ ಸಂಪತ್ತನ್ನು ಅಪಹರಿಸುವುದಿಲ್ಲ ಎಂದು ಬರೆದು ಕೊಟ್ಟು ಹೋಗು ಎಂದಾಗ ಎಂ.ಎಲ್.. ಘೋರ್ಪಡೆ ಸುಮ್ಮನೆ ಬಾಯಿ ಮುಚ್ಚಿಕೊಂಡು ಬರೆದುಕೊಟ್ಟರಂತೆ. ವಿಷಯವನ್ನೂ ಸಹ ಬುಲೆಟಿನ್ ಪತ್ರಿಕೆ ..೬೭ರಲ್ಲಿ ಪ್ರಕಟಿಸಿದೆ.

ಮತ್ತೊಂದು ಸಲ ಮಂತ್ರಿ ರಾಮರಾವ್ ಬಳಿ ಹೋಗಿದ್ದ ಎಂ.ಎಲ್.. ಘೋರ್ಪಡೆ ತಾನೊಬ್ಬನೇ ಹೋಗಿರಲಿಲ್ಲ ಜೊತೆಗೆ ತನ್ನ ಅನ್ಯಾಯದ ಕತೆ ಮುಚ್ಚಿ ಹಾಕಲು ಶ್ರೀ ಟೇಕೂರು ಸುಬ್ಬಮಣ್ಯಂ ಮತ್ತು ಆರ್.ಆರ್.ದಿವಾಕರರನ್ನು ಕರೆದುಕೊಂಡು ಹೋಗಿದ್ದ. ಇವೆಲ್ಲ ಆಟಾಟೋಪಗಳೇತಕ್ಕೆ ತಪ್ಪು ಮುಚ್ಚಿಕೊಳ್ಳಲಿಕ್ಕೆ ಅಲ್ಲವೆ? ಒಂದು ವೇಳೆ ತಪ್ಪುಗಾರ ನಲ್ಲದಿದ್ದರೆ, ಎಲ್ಲಾ ಒಳಸಂಚುಗಳು ಏಕೆ? ತಾನು ಗರತಿಯಾಗಿದ್ದರೆ ಸೂಳೆಯ ಓಣಿಯಲ್ಲಿ ಮನೆ ಮಾಡು ಎಂಬ ಗಾದೆಯ ಮಾತಿನಂತೆ ಮಾಜಿ ದೊರೆ ಮತ್ತು ಆತನ ಮಗ ಎಂ.ವೈ. ಘೋರ್ಪಡೆ ಯಾವ ತಪ್ಪು ದಾರಿಯನ್ನೇ, ಅನೀತಿಯನ್ನೇ ತುಳಿಯದಿದ್ದ ಪಕ್ಷದಲ್ಲಿ ಅವರಿಗೆ ಅಂಜಿಕೆ ಏಕೆ? ಅಥವಾ ಜನರಾದರೂ ಇವರನ್ನು ದೂರುತ್ತಿದ್ದರೇಕೆ? ಬೆಂಕಿ ಇದ್ದರೆ ತಾನೆ ಹೊಗೆಯಾಡುವುದು. ಕಾರಣ ಈತ ಅನ್ಯಾಯವಾಗಿ ನಡೆಯುತ್ತಿರುವುದರಿಂದಲೇ ಜನರು ದೂರುತ್ತಿರುವುದು. ಇಲ್ಲದೆ ಹೋದರೆ ಯಾರು ದೂರುತ್ತಾರೆ?

ಸರಕಾರಕ್ಕೆ ಇವೆಲ್ಲ ತಿಳಿಯಲಿಕ್ಕಿಲ್ಲ. ಸರಕಾರಕ್ಕೆ ಇವೆಲ್ಲ ತಿಳಿಯುವಂತೆ ಮಾಡುವುದು ಜನರ ಕರ್ತವ್ಯವಾಗಿದೆ. ಪೊಲೀಸ್ ಖಾತೆಯವರು ಕೇಳಿಕೊಳ್ಳುವುದಿಲ್ಲವೇ? ಕೇಡಿಗಳನ್ನು ಪತ್ತೆ ಹಚ್ಚಲಿಕ್ಕೆ ಜನರನ್ನೂ ಸಹ ಕರೆಯಿಸಬೇಕೆಂದು. ಅಂದ ಮೇಲೆ ಇಂತಹ ಕೇಡಿಗಳ ದುರ್ವ್ಯಾಪಾರವನ್ನು ಕಣ್ಣಾರೆ ಕಂಡ ಜನತೆ ಸರಕಾರಕ್ಕೆ ಹೇಳುತ್ತದೆ. ಇದು ನ್ಯಾಯ ಸಮ್ಮತವಲ್ಲವೇ? ಒಂದು ವೇಳೆ ಸರಕಾರವು ಕ್ರಮಕೈಗೊಳ್ಳಲು ಹಿಂಜರಿದರೆ ಸರಕಾರವನ್ನು ಒತ್ತಾಯ ಪಡಿಸುವ ಹಕ್ಕೂ ಜನತೆಗಿದೆ. ಯಾಕೆಂದರೆ ಇದು ಜನತಾ ಸರಕಾರ. ಜನರೇ ಸರಕಾರವನ್ನು ರಚಿಸಿದ್ದಾರೆ. ಕಾರಣ ಈಗ ಜನರು ಎಚ್ಚೆತ್ತು ಎಂ.ಎಲ್. ಘೋರ್ಪಡೆಯ ಅನಂತಾನಂತ ಅನ್ಯಾಯಗಳನ್ನು ಖಂಡಿಸಿ ಯೋಗ್ಯ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಪ್ರಾರ್ಥಿಸಬೇಕೆಂದು ತಿಳಿಸುವುದೇ ಕಾದಂಬರಿಯ ಮೂಲ ಗುರಿ.

ಒಂದು ಕಾಲದ ವಾಸ್ತವವನ್ನು ಸಾಮಾಜಿಕ ಕಳಕಳಿ ಇರುವವರು ಗ್ರಹಿಸುವಿಕೆಯ ಸ್ವರೂಪವನ್ನು ತಿಳಿಯಲು, ಆಳುವ ದೊರೆಯ ಎದುರು ಆತನ ತಪ್ಪುಗಳನ್ನು ಹೇಳಲಿಕ್ಕಾಗದೆ, ಹೇಳಿದರೂ ಅವುಗಳನ್ನು ತಿದ್ದಲಿಕ್ಕಾಗದ ಅಸಹಾಯಕ ಸ್ಥಿತಿ ಇರುವಾಗ ಒಂದು ಭಾಷೆ ಪಡೆಯುವ ಸ್ವರೂಪವನ್ನು ಅರಿಯಲು, ಸ್ವಾತಂತ್ರ್ಯಬಂದ ನಂತರದಲ್ಲಿ ನೈತಿಕತೆಯೇ ಬದುಕು ಎಂದುಕೊಂಡ ಜನರು ಮತ್ತು ನೈತಿಕತೆಯನ್ನು ಗಾಳಿಗೆ ತೂರುತ್ತಿದ್ದ ಶಕ್ತಿ ರಾಜಕಾರಣ, ಈ ಎರಡರ ನಡುವಿನ ಮುಖಾಮುಖಿ ಹೇಗಿತ್ತು ಎಂದು ತಿಳಿಯಲು ಈ ಕಾದಂಬರಿ ನೆರವಾಗುತ್ತದೆ. ಈ ಬರಹಕ್ಕೆ ವೈಯಕ್ತಿಕ ದ್ವೇಷದ ನೆಲೆಯೂ ಇದೆ. ಈ ಕಾರಣಕ್ಕಾಗಿಯೇ ಈ ಭಾಗವನ್ನು ಅಧಿಕೃತ ಪಠ್ಯ ಎಂದು ಗ್ರಹಿಸಿಲ್ಲ. ಅಂತೆಯೇ ಸ್ವಾತಂತ್ರ್ಯ ನಂತರದ ಜನರ ಪ್ರತಿಭಟನೆಗಳಿಗೆ ಆಧಾರಸ್ತಂಭ ಎಂತಲೂ ಪರಿಗಣಿಸಿಲ್ಲ. ಅಂದ ಮಾತ್ರಕ್ಕೆ ವೈಯಕ್ತಿಕ ದೃಷ್ಟಿಯಲ್ಲಿ ಸಾಮಾಜಿಕ ಆಯಾಮವು ಇರುವುದಿಲ್ಲ ಎಂಬ ನಿಲುವೂ ಸರಿಯಲ್ಲ. ಇಲ್ಲಿನ ಬರಹ ಸಿಟ್ಟು ಆಕ್ರೋಶ ಅಸಹಾಯಕ ಸ್ಥಿತಿಯಿಂದ ರಚನೆಯಾಗಿದೆ. ಹಾಗಾಗಿ ಏಕವಚನದಲ್ಲಿ ಸಂಭೋದನೆ ಇದೆ. ಬರಹದಲ್ಲಿ ಎದ್ದು ಕಾಣುವುದು ಮುಸುಗುಡುವ ನೈತಿಕತೆ ಮತ್ತು ಗಾಂಧಿವಾದ. ಆಕ್ರೋಶವನ್ನು ವ್ಯಕ್ತಪಡಿಸುತ್ತಲೂ ಒಂದು ಭಾಷೆಗೆ ಗಡುಸುತನ ಬರುತ್ತದೆ. ವ್ಯಂಗ್ಯ ಕುಹುಕ ಆಶ್ಚರ್ಯ ಚಿನ್ಹೆ, ವಿಡಂಬನೆ ಇವುಗಳು ಭಾಷೆಯ ಏರು ಇಳುವಿನ ಸಾಧನಗಳಾಗುತ್ತವೆ. ವ್ಯಕ್ತವಾಗುವ ಸಿಟ್ಟಿಗೆ ಹೊಸ ರೂಪಕಗಳು ಬಳಕೆಯಾಗುತ್ತವೆ. ಆಗ ಬರಹಕ್ಕೆ ಕಾವ್ಯದ ಸ್ವರೂಪವೂ ಸಾಧ್ಯವಾಗುತ್ತದೆ. ‘ಎಂ.ಎಲ್.ಎ ಆದೊಡನೆ ಈತನ ತಲೆಯ ಮೇಲೆ ಎರಡು ಹದನಾದ ಕೋಡುಗಳು ಚಿಗುರಿದವು, ಜನರನ್ನು ಅಧಿಕಾರಿಗಳನ್ನು ಹಿರಿದು ಗಾಯಗೊಳಿಸಲಿಕ್ಕೆ, ಎನ್ನುವಲ್ಲಿ ಪ್ರಬಲವಾದದ್ದನ್ನೇ ತಣ್ಣಗೆ ಹೇಳುವ ದಾಟಿಯಿದೆ. ‘ಕಳ್ಳನ ಜೀವ ಹುಳ್ಳಗೆ’ ‘ನಾಯಿ ಹೊಡೆಯುವ ಕೋಲಿಗಿಂತಲೂ ಕಡೆ’, ‘ಹೊಟ್ಟೆಯ ಸಿಟ್ಟು ರಟ್ಟೆಗಿಲ್ಲ’, ‘ಗರತಿಯಾಗಿದ್ದಲ್ಲಿ ಸೂಳೆಯ ಓಣಿಯಲ್ಲಿ ಮನೆ ಮಾಡು’, ‘ಬೆಂಕಿ ಇದ್ದರೆ ತಾನೆ ಹೊಗೆಯಾಡುವುದು’ ಈ ಬಗೆಯ ಜನಪದ ನುಡಿಗಟ್ಟುಗಳನ್ನು ಬಳಸಿಕೊಳ್ಳುವ ಮೂಲಕ ಹೇಳಬೇಕೆಂದದನ್ನು ಜನಭಾಷೆಯಲ್ಲಿ ಜನಪರವಾಗಿಸುವ ತುಡಿತವಿದೆ. ಭಾಷೆಯ ಓಘ ತೀವ್ರವಾಗಿದೆ. ಜನಸಾಮಾನ್ಯರ ಭಾಷೆಯಲ್ಲಿ ರಾಜರನ್ನು ನಿಂದಿಸುವುದೆಂದರೆ ಅವಮಾನವೇ ಸರಿ. ರಾಜ ವೈಭವವನ್ನು ವರ್ಣಿಸಲು ಹಳೆಗನ್ನಡ ಕಾವ್ಯಗಳಲ್ಲಿ ಶಾಸ್ತ್ರೀಯ ಭಾಷೆಯೊಂದು ದುಡಿದಿದೆ. ಅದೇ ರಾಜರನ್ನು ದೂಷಿಸುವಾಗ ಜನಪದ ಭಾಷೆಯ ನುಡಿಗಟ್ಟುಗಳ ಗಡುಸುತನ ಬಳಕೆಯಾಗಿದೆ. ಇದು ಭಾಷೆ ಬಳಕೆಯ ರಾಜಕಾರಣವೂ ಹೌದು.

ಬರಹದ ಧೋರಣೆ ಸಿಟ್ಟಿನ ಸ್ಫೋಟಗೊಳ್ಳುವಿಕೆ. ಬೀಸು ಹೇಳಿಕೆಗಳಿಲ್ಲದೆ ಖಚಿತ ಮಾಹಿತಿಗಳ ಮೂಲಕ ಅಧಿಕೃತವಾಗಿ ವಿಮರ್ಶಿಸುವ ಗುಣವಿದೆ. ಯಜಮಾನರಿಗೆ ‘ಕಾದಂಬರಿ’ ಎಂದು ಬರೆಯುವುದರ ಹಿಂದಿನ ತುಡಿತವೇನಾಗಿರಬಹುದು? ‘ಪತ್ತೇದಾರಿ’ಕೆಯಲ್ಲಿ ಅಪರಾಧವನ್ನು ಗುರುತಿಸುವ ಮತ್ತು ಅದಕ್ಕೆ ಹೊಡೆಯುವ ನೇರವಂತಿಕೆ ಇದೆ. ‘ಹಸಿದ ಮಾನವ ಹುಸಿನುಡಿದು ಹದಗೆಡಿಸಿದ ಸೊಂಡೂರು ನಾಡು’ ಅಥವಾ ಮಾಜಿ ಮಹಾರಾಜ ಹಾಗೂ ಯುವರಾಜರ ಭಯಂಕರ ಒಳಸಂಚು ಎನ್ನುವ ಕಾದಂಬರಿಯ ಶೀರ್ಷಿಕೆಯಲ್ಲಿಯೇ ರೋಚಕತೆ ಇದೆ. ಅಧಿಕಾರ ವಿಕೇಂದ್ರಿಕರಣಕ್ಕೆ ಗ್ರಾಮ ಪಂಚಾಯಿತಿಗಳು ಆದರೂ ಭೂ ಹೊಡೆಯರು, ಉಳ್ಳವರ ಹಸ್ತಕ್ಷೇಪದಿಂದ ಅದರ ದುರುಪಯೋಗ ಹೇಗೆ ನಡೆಯುತ್ತಿತ್ತು ಎನ್ನುವುದನ್ನು ಯಜಮಾನರು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ಸರ್ಕಾರದ ದುರ್ಬಲತೆಯನ್ನು ಒತ್ತಿ ಹೇಳಲಾಗಿದೆ. ಇಂಗ್ಲಿಷರ ಆಡಳಿತದಿಂದ ಹೊರಬಂದ ಜನರು ಮುಕ್ತವಾದ ಸ್ವಾತಂತ್ರ್ಯ ಬದುಕನ್ನು ಕನಸು ಕಂಡಿದ್ದರು. ಆದರೆ ಆ ಮುಕ್ತತೆ ಇಲ್ಲದೆ ಇಂಗ್ಲಿಷರ ಜಾಗದಲ್ಲಿ ಮತ್ತೊಬ್ಬರು ಬಂದು ಕೂತಂತೆ ‘ಪ್ರಜಾಪ್ರಭುತ್ವ’ ಸರ್ಕಾರ ಜನತೆಗೆ ಕಾಣಿಸಿತು. ಹಾಗಾಗಿಯೇ ಇಂಗ್ಲಿಷರೊಂದಿಗಿನ ದೇಶಿಯರ ಸಂಘರ್ಷದಂತೆಯೇ ದೇಶಿಯರೊಂದಿಗೆ ಜನರ ಸಂಘರ್ಷಕ್ಕೆ ಯಜಮಾನರು ಜನನಾಯಕರಂತೆ ಕಾದಂಬರಿಯನ್ನು ನಿರೂಪಿಸಿದ್ದಾರೆ. ಇಂತಹ ಹಲವು ಕಾರಣಕ್ಕಾಗಿ ಈ ಬರಹವು ಮುಖ್ಯವಾಗಿದೆ.