ಸೊಂಡೂರಿನ ಹಳೆ ತಾಲ್ಲೂಕು ಕಚೇರಿ ಕಟ್ಟಡದ ಶೈಲಿ ಬ್ರಿಟಿಷ್ ಮಾದರಿಯದು. ಈಗ ‘ಸೊಂಡೂರು ಕುಶಲ ಕಲಾ ಕೇಂದ್ರ’ವಿದೆ. ೧೫ ರಿಂದ ೨೦ ಮಹಿಳೆಯರು ಇಲ್ಲಿ ನೂಲುವ, ನೂಲು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಉದ್ಯೋಗಿಯೊಬ್ಬರನ್ನು ಮಾತನಾಡಿಸಲಾಯಿತು. ‘೧೩ ವರ್ಷದಿಂದ ಕೆಲಸ ಮಾಡ್ತೀವಿ. ಕೆಲಸ ಮಾಡಿದಷ್ಟು ಹಣ. ಒಂದು ಯುನಿಟ್ ಗೆ ೧.೨೦ ಪೈಸೆ ಕೊಡ್ತಾರೆ’ ಎಂದು ಹೇಳಿದರು. ಅದೇ ಕಟ್ಟಡದಲ್ಲಿ ‘ಸ್ಮಯರ್ ಬಾಲವಾಡಿ’ ಇದೆ. ರಾಜರ ಕಂಪನಿಗಳಿಗೆ ಹೋಗುವವರ ಮಕ್ಕಳು ಇಲ್ಲಿರುತ್ತವೆ. ಈ ಕಟ್ಟಡದ ಮೇಲೆ ಉಡದ ರಾಜ ಚಿನ್ಹೆ ಇದೆ. ಕಟ್ಟಡದ ಒಳಗಡೆ ಚರಕ ಹಿಡಿದಿರುವ ಗಾಂಧೀಜಿ ಮತ್ತು ಶಿವಾಜಿಯ ಫೋಟೋ ಇದೆ. ಒಬ್ಬ ಶಾಂತಿಯ ದೂತ ಮತ್ತೊಬ್ಬ ಹುಟ್ಟು ಹೋರಾಟಗಾರ. ಕಟ್ಟಡದ ಒಳಗೆ ಕೈಮಗ್ಗದ ಮಿಷನ್ ಗಳನ್ನು ಅಳವಡಿಸಲಾಗಿದೆ. ರಾಜದರ್ಬಾರಿದ್ದ ಜಾಗವೀಗ ಮುರುಕಲು ಕೈಮಗ್ಗದ ಬಿಡಿ ಭಾಗಗಳಿಂದ ತುಂಬಿದೆ. ಅಲ್ಲಿ ನಿಂತು ೧೯೭೩ರ ಭೂ ಹೋರಾಟದ ಸಂದರ್ಭವನ್ನು ಕಲ್ಪಿಸಿಕೊಂಡರೆ, ಹೋರಾಟದ ಕೂಗು ಜೈಕಾರಗಳು ಮಸುಕಾಗಿ ಕೇಳಿ ಮರೆಯಾದದಂತೆ ಅನಿಸುತ್ತದೆ. ಈಗ ಕೈಮಗ್ಗವಿರುವ ಗಾಂಧಿ ಕನಸಿನ ದೇಶೀ ಕುಡಿ ಕೈಗಾರಿಕೆಯ ಈ ಹಳೆ ತಾಲ್ಲೂಕು ಆಫೀಸಿನ ಮುಂದೆ ೧೯೭೩ರಲ್ಲಿ ೪೬ ದಿನಗಳ ಕಾಲ ರೈತರು ಭೂಮಿಗಾಗಿ ಹೋರಾಟ ಮಾಡಿದರು.

ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಮಾರ್ಚ್ ೨೩. ೧೯೭೩ರಂದು ಸಮಾಜವಾದಿ ಪಕ್ಷ ಹಾಗೂ ಸೊಂಡೂರು ರೈತ ಸಂಘದ ಒಂದು ನಿಯೋಗವು ರಾಜಮನೆತನ ನಡೆಸುತ್ತಿರುವ ಸುಲಿಗೆ ವಿಧಾನಗಳನ್ನು ತಿಳಿಸಿ ಒಂದು ಮನವಿಯನ್ನು ಸಲ್ಲಿಸಿತು. ಅರಸು ಅವರು ಹೀಗೆ ಸಲ್ಲಿಸಿದ್ದ ಮನವಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿದ್ದರು. ಈ ಮೌನಕ್ಕೆ ಅವರ ಮಂತ್ರಿಮಂಡಲದಲ್ಲಿದ್ದ ಅರ್ಥಸಚಿವರಾದ ಎಂ.ವೈ. ಘೋರ್ಪಡೆಯವರ ಪ್ರಾಬಲ್ಯವೇ ಕಾರಣದಂತೆ ಕಂಡಿತು. ಹೀಗಾಗಿ ಈ ಮೊದಲು ನಿರ್ಧರಿಸಿದಂತೆ ಹೋರಾಟವನ್ನು ಸೆಪ್ಟಂಬರ್ ೧೦.೧೯೭೩ರಂದು ಸೊಂಡೂರಿನಲ್ಲಿ ಆರಂಭಿಸಲಾಯಿತು.

ರಾಜ್ಯ ಸಮಾಜವಾದಿ ಪಕ್ಷ ಹಾಗೂ ಸೊಂಡೂರು ರೈತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಅಂದಿನ ಬೆಳಿಗ್ಗೆ ಮೆರವಣಿಗೆ ನಡೆಯಿತು. ಕೆ.ಜಿ. ಮಹೇಶ್ವರಪ್ಪ ಈ ಸಂದರ್ಭವನ್ನು ನೆನಪಿಸಿ ಕೊಳ್ಳುತ್ತ “ಸೊಂಡೂರಿನ ಬಸ್ ಸ್ಟ್ಯಾಂಡ್ ನಲ್ಲಿ ಒಂದು ಬಹಳ ದೊಡ್ಡ ಬಹಿರಂಗ ಸಭೆ ಮಾಡಿದ್ವಿ ಇಲ್ಲಿ ಸಾರ್ವಜನಿಕ ಸಭೆಗಳು ಆಗ್ತಾ ಇರಲ್ಲ. ಆ ರಾಜರದು ಎಷ್ಟರ ಮಟ್ಟಿಗೆ ದಬ್ಬಾಳಿಕೆ ಅಂದ್ರೆ ಒಂದು ಸಾರ್ವಜನಿಕ ಸಭೆ ಆಗ್ಲಿ ಅವರ ವಿರುದ್ಧ ಮತಾಡೋದಾಗ್ಲಿ ಇಲ್ಲಿ ಸಾಧ್ಯ ಇರ‍್ಲ್ಲ. ನಮ್ಮ ಬಹಿರಂಗ ಸಭೆ ಪ್ರಾರಂಭವಾಗುತ್ತಲೂ ಘೋರ್ಪಡೆ ಕಡೆಯವರು, ಈ ಸಭೆಗೆ ಯಾರು ಪರ್ಮಿಷನ್ ಕೊಟ್ರು ಅಂತೇಳಿ.. ಅದೆಂಗೆ ಮಾಡ್ತೀರಿ ಮಾಡ್ರಿ.. ಎಂದು ಧಮಕಿ ಹಾಕಿದ್ರು. ಇದ್ಯಾವುದನ್ನು ಲೆಕ್ಕಿಸದೆ ನಾವು ಸಭೆಯನ್ನು ಮಾಡಿದ್ವಿ” ಎನ್ನುತ್ತಾರೆ. ಸೆಪ್ಟಂಬರ್ ೧೭ರಂದು ಚಳವಳಿಯ ಏಳನೇ ದಿನ ‘ಕನ್ನಡ ಪ್ರಭ’ದಲ್ಲಿ ಚಳುವಳಿ ಪ್ರಾರಂಭವಾದ ಒಂದು ಫೋಟೊ ಇದೆ. ಈ ಪೋಟೊವನ್ನು ತುಂಬಾ ಎತ್ತರದ ಸ್ಥಳದಿಂದ ತೆಗೆಯಲಾಗಿದೆ. ಚಿತ್ರದಲ್ಲಿ ಎಣಿಕೆಗೆ ಸಿಗುವುದು ೧೮೦ ಜನ. ಒಂದು ಜೀಪು ನಿಂತಿದೆ. ಅದರ ಸುತ್ತಮುತ್ತ ನಾಲ್ಕೈದು ಜನ ಪೊಲೀಸರು ನಿಂತಿದ್ದಾರೆ. ಜೀಪಿನ ಬಳಿ ನಾಲ್ಕು ಮಂದಿ ಜನರಿಗೆ ಎದುರು ನಿಂತು ಮಾತನಾಡುತ್ತಿರುವಂತೆ ಮಸುಕು ಮಸಕಾಗಿ ಕಾಣಿಸುತ್ತಿದೆ. ಇಡಿಯಾದ ಚಿತ್ರ ಒಂದು ಅತ್ಯಂತ ಕುತೂಹಲಭರಿತವಾದ ಸಭೆ ನಡೆಯುತ್ತಿದೆ, ಜನರೆಲ್ಲಾ ಉತ್ಸುಕರಾಗಿ ನಿರೀಕ್ಷೆಗಳಿಂದ ಮಾತನಾಡುವವರನ್ನು ನೋಡುತ್ತಿದ್ದಾರೆ ಎನ್ನುವಂತದೆ. ಬಹುತೇಕರು ಕಚ್ಚೆ ಪಂಚೆ, ಲುಂಗಿ ಮೈಯಂಗಿ (ಬನಿಯನ್)ಧರಿಸಿದ್ದಾರೆ. ತಲೆಗೆ ಕೆಲವರು ಟವಲ್ ಸುತ್ತಿದ್ದಾರೆ. ತರುಣರಿಗಿಂತ ಮಧ್ಯವಯಸ್ಸಿನವರೇ ಹೆಚ್ಚಾಗಿದ್ದಾರೆ. ಚಿತ್ರದಲ್ಲಿ ಮಹಿಳೆಯರು ಕಾಣುವುದಿಲ್ಲ. ಬಿಗಿಯಾಗಿ ವಾತಾವರಣ ಬಹಿರಂಗ ಸಭೆಯೊಂದರ ಗಂಭೀರತೆಯನ್ನು ಸೂಚಿಸುತ್ತಿದೆ. ಕೆಲವರು ಹಿಂದೆ ಕೈಕಟ್ಟಿಕೊಂಡರೆ ಕೆಲವರು ಮುಂದೆ ಕೈಕಟ್ಟಿಕೊಂಡಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ ಒಬ್ಬರೂ ಕೈ ಮೇಲಕ್ಕೆತ್ತಿಲ್ಲ. ಈಗಿನ ನಮ್ಮ ಬಹಿರಂಗ ಸಭೆಗಳ ಕಲ್ಪನೆಯನ್ನು ಹೋಲಿಕೆ ಮಾಡಿದರೆ ಇಲ್ಲಿ ಮುಗ್ದತೆ ಎದ್ದುಕಾಣುತ್ತದೆ. ಈ ಚಿತ್ರವು ಚಳುವಳಿಯ ಲಿಖಿತ ದಾಖಲೆಗಳ ಹಲವು ವಿವರಗಳಿಗಿಂತ ಶಕ್ತವಾದ ಒಂದು ಕಲ್ಪನೆಯನ್ನು ಕಟ್ಟಿಕೊಡುತ್ತದೆ.

ಮೊದಲ ದಿನದ ಮೆರವಣಿಗೆಯಲ್ಲಿ ಎರಡು ನೂರಕ್ಕೂ ಹೆಚ್ಚು ಜನ ಪ್ರದರ್ಶನಕಾರರನ್ನು ಕುರಿತು ಶಿವಮೊಗ್ಗ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದು ಲೋಕಸಭೆಯ ಸದಸ್ಯರಾಗಿದ್ದ ಜೆ.ಎಚ್. ಪಟೇಲ್. ಹೋರಾಟದ ನಿರ್ದೇಕರಾಗಿದ್ದ ಕೆ.ಜಿ. ಮಲ್ಲೇಶ್ವರಪ್ಪ, ರಾಜ ಸಮಾಜವಾದಿ ಪಕ್ಷದ ಕಾರ್ಯದಶಿಗಳಾಗಿದ್ದ ಎಸ್. ವೆಂಕಟರಾಮ್, ಸಹ ಕಾರ್ಯದರ್ಶಿಗಳಾಗಿದ್ದ ಎಸ್.ಎಸ್. ಕುಮಟ, ಸೊಂಡೂರು ರೈತ ಸಂಘದ ಅಧ್ಯಕ್ಷರಾಗಿದ್ದ ಎಲಿಗಾರ ತಿಮ್ಮಪ್ಪ ಮೊದಲಾದವರು ಮಾತನಾಡಿದರು. ಮಾಜಿ ಮಹಾರಾಜರು. ಮಾಜಿ ಮಹಾರಾಜರ ೧೯೪೮ರ ಸೊಂಡೂರತು ಪ್ರೊಕ್ಲಮೇಷನ್‌ ನ (ಜಾಹಿರುನಾಮೆ) ಒಂದು ಪ್ರತಿಯನ್ನು ಜನತಾ ಪ್ರತಿಭಟನೆಯ ಸಂಕೇತವಾಗಿ ಸಭೆಯಲ್ಲಿ ಸುಡಲಾಯಿತು. ೨೨ ಸತ್ಯಾಗ್ರಹಿಗಳು ತಾಲೂಕು ಕಛೇರಿಯ ಮುಂದೆ ಪಿಕೆಟಿಂಗ್ ನಡೆಸಿದಾಗ ಪೊಲೀಸರು ಬಂಧಿಸಿದರು. ಬಂಧನಕ್ಕೊಳಗಾದವರಲ್ಲಿ ಬೆಂಗಳೂರಿನ ಸಮಾಜವಾದಿ ಪಕ್ಷದ ಪ್ರಮುಖ ಕಾರ್ಯಕರ್ತರಾದ ಟಿ.ಮರಿಯಪ್ಪ, ಸೊಂಡೂರು ಪುರಸಭಾ ಸದಸ್ಯ ಲಿಂಗಾರೆಡ್ಡಿ, ಲಕ್ಷ್ಮೀಪುರದ ಗ್ರಾಮ ಪಂಚಾಯ್ತಿ ಸದಸ್ಯ ನಾಗಪ್ಪ ಮೊದಲಾದವರು ಸೇರಿದ್ದರು. ಮೊದಲೇ ಹೇಳಿದಂತೆ ಬಹಿರಂಗ ಸಭೆಯಲ್ಲಿ ೨೦೦ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಪಿಕೆಟಿಂಗ್‌ ನಂತಹ ಸಂದರ್ಭದಲ್ಲಿ ಜನತೆ ಹೆಚ್ಚಾಗಿ ಭಾಗವಹಿಸಲಿಲ್ಲ. ಕಾರ್ಯಕರ್ತರನ್ನೊಳ ಗೊಂಡಂತೆ ಮೊದಲ ದಿನ ಅರೆಸ್ಟ್ ಆದವರು ೨೨ ಜನ ಮಾತ್ರ. ಈ ದಿನ ಚಳವಳಿಯಲ್ಲಿ ಭಾಗವಹಿಸಿದವರ ಪಟ್ಟಿ ನೋಡಿದರೆ ಎಲ್ಲರೂ ಭೂಮಾಲಿಕ ಕುಟುಂಬಗಳಿಂದಲೇ ಬಂದವರು. ಜೆ.ಎಚ್. ಪಟೇಲ್, ಕೆ.ಜಿ.ಮಹೇಶ್ವರಪ್ಪ, ಎಲಿಗಾರ ತಿಮ್ಮಪ್ಪ ಇವರುಗಳೆಲ್ಲ ಹೆಚ್ಚು ಕಡಿಮೆ ಸ್ವತಃ ಭೂಮಾಲಿಕರು. ಹೋರಾಟ ಮಾತ್ರ ಬಡವರಿಗೆ ಭೂಮಿ ಕೊಡಿಸುವ ಬಗ್ಗೆ. ಭೂಮಿಯನ್ನು ಪಡೆಯಬೇಕಾಗಿದ್ದ ರೈತರು ಅಷ್ಟಾಗಿ ಭಾಗವಹಿಸಲಿಲ್ಲ. ಭೂಮಾಲಿಕರು ಮಾತ್ರ ಭೂಮಾಲಿಕರನ್ನು ಎದುರಿಸುವ ‘ಮುಳ್ಳನ್ನು ಮುಳ್ಳಿನಿಂದಲೆ ತೆಗೆ’ ಎನ್ನುವ ಅರ್ಥದಲ್ಲಿ ಈ ಹೋರಾಟ ಆರಂಭವಾಯಿತು.

ಚಳುವಳಿ ಪ್ರಾರಂಭವಾಗುತ್ತಲೂ ರಾಜವಂಶದ ಪರವಾಗಿದ್ದವರು ಇದನ್ನು ವಿರೋಧಿಸುವಂತೆ ಮನವಿ ಮಾಡಿಕೊಂಡರು. ಸೆಪ್ಟಂಬರ್ ೧೧ರಂದು ‘ಸಂಯುಕ್ತ ಕರ್ನಾಟಕ’ ದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಮನವಿ ಮಾಡಿಕೊಂಡವರನ್ನು ಹೆಸರಿಸಿಲ್ಲ.  ‘ಸಮಾಜವಾದಿ ಪಕ್ಷ ಸಂಘಟಿಸಿರುವ ರೈತ ಹೋರಾಟವೆನ್ನಲಾದ ಚಳವಳಿಯಿಂದ ಜನರು ತಪ್ಪು ಮಾರ್ಗ ಹಿಡಿಯದೆ ಸೊಂಡೂರು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಐಕ್ಯ ಕಾಪಾಡಿಕೊಳ್ಳಬೇಕು’ ಎಂದು ಇಲ್ಲಿಯ ಪ್ರಮುಖರು ಸಮಾಜದ ಜನತೆಗೆ ಮನವಿ ಮಾಡಿದ್ದರೆ. ಈ ಬಗ್ಗೆ ಹೊರಡಿಸಿದ ಕರಪತ್ರದಲ್ಲಿ ಅವರು ಪ್ರಸ್ತುತ ಚಳವಳಿಗೆ ಜನತೆಯ ಬೆಂಬಲವೇನೂ ಇಲ್ಲವೆಂದೂ, ಅದು ಅಭಿವೃದ್ಧಿ ಕಾರ್ಯಗಳಿಗೆ ಆತಂಕಕಾರಿಯಾಗಿದೆಯಲ್ಲದೆ ತಾಲೂಕಿನಲ್ಲಿ ಶಾಂತ ಪರಿಸ್ಥಿತಿಯನ್ನು ಕದಡುವಂತಾಗಿದೆ ಎಂದೂ, ತಮಗೆ ಹಿತವಾದದ್ದನ್ನು ತಾಲೂಕಿನ ಜನರು ನಿರ್ಧರಿಸಬೇಕಲ್ಲದೆ ಹೊರಗಿನವರು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲವೆಂದೂ, ತಾಲ್ಲೂಕಿನ ಜನತೆಯ ಶೋಷಣೆ ನಡೆದಿದೆ ಎನ್ನುವ ಸಮಾಜವಾದಿ ಪಕ್ಷದ ಪ್ರಕಟಣೆಯು ಸತ್ಯಕ್ಕೆ ದೂರವಾಗಿದೆ ಎಂದೂ, ಇಲ್ಲಿ ರಾಜಶಾಹಿಯಿಲ್ಲ ಅದರ ಬದಲು ಪ್ರಜಾಪ್ರಭುತ್ವವಿದೆಯೆಂದು ಹೇಳಲಾಗಿತ್ತು.

ಈ ವರದಿಯ ಚಳುವಳಿಯನ್ನು ನಿಲ್ಲಿಸುವ ಪ್ರಯತ್ನವಾಗಿ ಕಾಣುತ್ತಿದೆ. ಹಾಗೆಯೇ ಒಂದು ವರ್ಗದ ಜನಾಭಿಪ್ರಾಯ ಕೂಡ. ಇನ್ನು ಈ ವರದಿ ಅದೇ ದಿನ ‘ಪ್ರಜಾವಣಿ’, ‘ಕನ್ನಡ ಪ್ರಭ’ ಪತ್ರಿಕೆಗಳಲ್ಲಿ ಪ್ರಕಟವಾಗಲಿಲ್ಲ. ‘ಸಂಯುಕ್ತ ಕರ್ನಾಟಕ’ ಮಾತ್ರ ಇದನ್ನು ಮುಖ್ಯ ವರದಿ ಎಂಬಂತೆ ಬಿಂಬಿಸಿತು. ‘ಸಮಾಜವಾದಿಗಳಿಂದ ಸೊಂಡೂರಲ್ಲಿ ಚಳವಳಿ ಆರಂಭ’ ಎಂಬ ಒಂದು ಕಲಮಿನ ವರದಿ ಪ್ರಕಟಿಸಿದ ‘ಸಂಯುಕ್ತ ಕರ್ನಾಟಕ’ಕ್ಕೆ ಚಳವಳಿಯನ್ನು ನಿಲ್ಲಿಸುವ ವರದಿಯೇ ಮುಖ್ಯವಾದದ್ದರ ಹಿಂದಿನ ಧೋರಣೆಯನ್ನು ಊಹಿಸಬಹುದು. ಈ ವರದಿಯು ನಯವಾಗಿ ರಾಜಶಾಹಿಯ ದರ್ಪವನ್ನು ಮನವಿ ರೂಪದಲ್ಲಿ ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ. ಲಕ್ಷ್ಮೀಪುರದ ನಾಗಪ್ಪ ‘ಮೊದಲ ದಿನ ಯಾರು ಯಾರು ಭಾಗವಹಿಸಿದ್ರೊ ಅವರ ಮನೆಗೆ ರಾಜರ ಕಡೆಯವರು ಬಂದು ನಾಳೆ ಏನಾದ್ರು ನೀವ್ ಭಾಗವಹಿಸಿದ್ರೆ ನಿಮ್ಮ ಗತಿ ಮುಗಿದಂತೆ.. ಅವ್ರೇನು ಈಗ ಇರ್ತಾರೆ.. ನಾಳೆ ಹೋಗ್ತಾರೆ.. ಆಮೇಲೆ ಸೊಂಡೂರಿನ್ಯಾಗೆ ಬದುಕೋರು ನೀವು.. ಅಂತ ಹೆದರಿಸ್ತಾ ಇದ್ರು’..; ಎಂದು ಹೇಳುತ್ತಾರೆ. ಹಾಗಾಗಿ ಬಹಿರಂಗವಾಗಿ ಮನವಿ ಸಲ್ಲಿಸಿ ಜನರನ್ನು ಚಳವಳಿಯಿಂದ ದೂರವಿರಿಸುವ ಯತ್ನ ನಡೆದರೆ, ರಾತ್ರೋ ರಾತ್ರಿ ರೈತರ ಮನೆಗಳಿಗೆ ಹೋಗಿ ಚಳವಳಿಯಲ್ಲಿ ಭಾಗವಹಿಸದಂತೆ ತಡೆಯುವ ಪ್ರಯತ್ನಗಳು ನಡೆದವು. ಇದು ಚಳವಳಿಗಾರರ ಮೇಲೆ ಪ್ರಭಾವ ಬೀರಲಿಲ್ಲ. ಸೊಂಡೂರಿನ ಸ್ಥಳೀಯರು ಹೋರಾಟದಲ್ಲಿ ಭಾಗವಹಿಸುವುದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲಾಯಿತು.

ಸಂಡಪ್ಪಾ ಮಟ್ಟಿಯವರ ಭೂ ವಿವರ

ಸೆಪ್ಟಂಬರ್ ೧೦ ರಂದು ಭೂ ಹೋರಾಟ ಪ್ರಾರಂಭವಾಗುತ್ತಲೂ ಆಗಿನ ತಾಲೂಕಿನ ತಹಶೀಲ್ದಾರ ಸಂಡಪ್ಪಾ ಮಟ್ಟಿಯವರು ಜಾಗೃತರಾದರು. ಸೆಪ್ಟಂಬರ್ ೧೦ರಂದು ನಂದಿಹಳ್ಳಿಗೆ ತೆರಳಿ ಅಲ್ಲಿನ ಪದವಿಯೋತ್ತರ ತಾಂತ್ರಿಕ ಕೇಂದ್ರಕ್ಕಾಗಿ ಸ್ಥಳ ಪರಿಶೀಲನೆ ನಡೆಸಿದರು. ಸೆಪ್ಟಂಬರ್ ೧೧ರ ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾದ ವರದಿಯಲ್ಲಿ ಮಟ್ಟಿಯವರು ನೀಡಿದ ವಿವರಗಳನ್ನು ಗಮನಿಸಬಹುದು: ”ನಂದಿಹಳ್ಳಿಯಲ್ಲಿ ಪದವಿಯೋತ್ತರ ತಾಂತ್ರಿಕ ಕೇಂದ್ರಕ್ಕಾಗಿ ೨೪೩ ಎಕರೆ ಭೂಮಿಯನ್ನು, ರಾಘಾಪುರದಲ್ಲಿ ಸರ್ಕಾರದ ವಶದಲ್ಲಿರುವ ೧೫೨ ಎಕರೆ ಭೂಮಿಯನ್ನು ತೋಟಗಾರಿಕೆ ಫಾರ್ಮ ಮತ್ತು ತರಬೇತಿ ಕೇಂದ್ರಕ್ಕಾಗಿ ಕಾಯ್ದಿರಿಸಲಾಗಿದೆ. ಇದಕ್ಕೆ ೧೦ ಲಕ್ಷ ರೂ ವೆಚ್ಚವಾಗಲಿದೆ ಎಂದರು. ಈ ಭೂಮಿಯನ್ನು ಯಾರೂ ಸಾಗುಮಾಡಿಲ್ಲ. ಸೊಂಡೂರಿನ ರಾಜಮನೆತನದ ೬ ಕುಟುಂಬಗಳಿಗೆ ಒಟ್ಟು ೧೯೮ ಎಕರೆ ಭೂಮಿ ಇದೆ ಎಂದು ತಿಳಿಸಿದ ತಹಶೀಲ್ದಾರರು ಕುಮಾರಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ೮೦೨೯ ಎಕರೆ ಭೂಮಿಯ ವ್ಯವಸ್ಥೆ ಸರಕಾರದ ವಶದಲ್ಲಿದೆ. ಸರಕಾರ ದೇವಸ್ಥಾನದ ವ್ಯವಸ್ಥೆಗೆ ಪ್ರತಿವರ್ಷ ೩೬ ಸಾವಿರ ರೂಗಳನ್ನು ಕೊಡುವುದು.”

ಚಳವಳಿ ಪ್ರಾರಂಭವಾಗುವುದಕ್ಕೂ ಮುಂಚೆ ೮ ತಿಂಗಳು ಇರುವಾಗಲೇ ಸರ್ಕಾರದಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಹೋರಾಟದ ಪ್ರಾರಂಭದ ಹಂತದವರೆಗೂ ಮೌನವಹಿಸಿದ ತಹಶೀಲ್ದಾರರು ದಿಢೀರನೆ ಸೆಪ್ಟಂಬರ್ ಹತ್ತರಂದು ಭೂ ವಿವರ ಕೊಡುವ ತರಾತುರಿಗೆ ಬಿದ್ದರು. ಒಂದು ಕಡೆ ಚಳವಳಿಗಾರರು ತಾಲೂಕು ಕಛೇರಿಯ ಮುಂದೆ ಪಿಕಿಟಿಂಗ್ ಮಾಡುತ್ತಿದ್ದರೆ, ಇನ್ನೊಂದೆಡೆ ನಂದಿಹಳ್ಳಿ ಬಳಿ ಪತ್ರಕರ್ತರೊಂದಿಗೆ’ ಸ್ಥಳ ಪರಿಶೀಲನೆ ನೆಪದಲ್ಲಿ ಭೂ ವಿವರ ಕೊಟ್ಟರು. ಪತ್ರಕರ್ತರಿಗೆ ತಾಲ್ಲೂಕು ಕಛೇರಿಯ ಮುಂದೆ ಮಾಡುತ್ತಿದ್ದ ಚಳವಳಿಯ ವರದಿಗಿಂತ ತಹಶೀಲ್ದಾರರ ಭೂ ವಿವರದ ವರದಿಯೇ ಮುಖ್ಯವಾಗಿತ್ತು. ಸೆಪ್ಟಂಬರ್ ೧೧ರಂದು ವರದಿಯನ್ನು ಪ್ರಕಟಿಸಿದವು. ಇದರ ದೋರಣೆ ಚಳವಳಿ ವಿನಾಕಾರಣ ನಡೆಯುತ್ತಿದೆ ಎಂಬಂತಿತ್ತು. ಇಲ್ಲಿ ಸಹ ಸಂಯುಕ್ತ ಕರ್ನಾಟಕವೇ ಉಳಿದೆಲ್ಲ ಪತ್ರಿಕೆಗಳಿಗಿಂತ ಈ ವರದಿಯನ್ನು ಢಾಳಾಗಿ ಬಿಂಬಿಸಿತು. ಈ ಭೂ ವಿವರ ಘೋರ್ಪಡೆ ಕುಟುಂಬದವರು ತಪ್ಪಿತಸ್ಥರಲ್ಲ ಎಂಬುವುದನ್ನು ಸಾಬೀತು ಪಡಿಸುವಂತಿತ್ತು. ನಂಬಲರ್ಹ ದಾಖಲೆಗಳಿಲ್ಲದೆ ಮೌಖಿಕವಾಗಿ ಮಂಡಿಸಿದ ವಿವರಗಳು ಸತ್ಯಕ್ಕೆ ಹತ್ತಿರವಿರಲಿಲ್ಲ. ಬಹುಶಃ ಈ ವಿವರಗಳು ಅಧಿಕೃತ ಎನ್ನುವುದಾದರೆ ತಾಲೂಕು ಕಛೇರಿಯ ಮುಂದೆ ಪಿಕೆಟಿಂಗ್ ಮಾಡುತ್ತಿರುವ ಚಳವಳಿ ಗಾರರೆದುರು ಮಂಡಿಸಬಹುದಿತ್ತು. ತಹಶೀಲ್ದಾರರು ಭೂವಿವರ ನೀಡಿದ್ದಕ್ಕೆ ಮೂರು ಕಾರಣ ಗಳಿದ್ದವು. ಮೊದಲನೆಯದಾಗಿ: ಸರ್ಕಾರದ ಪರವಾಗಿ ತಹಶೀಲ್ದಾರರೇ ಭೂ ವಿವರ ನೀಡಿ ಘೋರ್ಪಡೆಯವರದು ಅಥವಾ ರಾಜಮನೆತನದ ಯಾವ ತಪ್ಪು ಇಲ್ಲ ಎನ್ನುವುದನ್ನು ಖಚಿತ ಪಡಿಸುವುದು. ಎರಡು: ತಹಶೀಲ್ದಾರರ ಮೇಲೆ ಅರ್ಥಸಚಿವರಾಗಿದ್ದ ಎಂ.ವೈ.ಘೋರ್ಪಡೆ ಯವರು ಭೂವಿವರ ನೀಡಲು ಒತ್ತಡ ತಂದಿರುವುದು. ಮೂರು: ರಾಜವಂಶದ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸುವ ಮೂಲಕ ಚಳವಳಿಯನ್ನು ದುರ್ಬಲಗೊಳಿಸುವುದು.

ಚಳವಳಿಯ ಎರಡನೆಯ ದಿನ ಹರಿಜನ ನಾಯಕಿ ಬುಡ್ಡಮ್ಮನವರಿಂದ ಸಿದ್ದಾಪುರದಲ್ಲಿ ಭೂ ಆಕ್ರಮಣ ಚಳವಳಿಯನ್ನು ಉದ್ಘಾಟಿಸಲಾಯಿತು. ಚಳವಳಿಯಲ್ಲಿ ಹರಿಜನರ ಭಾಗವಹಿಸಿದ್ದು ತುಂಬಾ ಕಡಿಮೆ. ಬುಡ್ಡಮ್ಮ ತನ್ನ ಗಟ್ಟಿತನದಿಂದಾಗಿಯೇ ಚಳುವಳಿಗಾರನ್ನು ಆಕರ್ಷಿಸಿದ್ದಳು. ‘ಬುಡ್ಡಮ್ಮ ಸೆರೆ ಕುಡಿದ ಮತ್ತಿನಲ್ಲಿ ಚಳವಳಿಯಲ್ಲಿ ಒಮ್ಮೊಮ್ಮೆ ಕೂಗುತ್ತಿದ್ದಳು’ ಎಂದು ಸೀನಪ್ಪ ಹೇಳುತ್ತಾರೆ. ಚಳವಳಿಯ ಎರಡನೆಯ ದಿನದ ನಂತರವೇ ವಿಧಾನ ಸಭೆಯಲ್ಲಿ ಇನಾಂ ರದ್ದತಿ ಮಸೂದೆಯನ್ನು ಆಗಿನ ಕಂದಾಯ ಸಚಿವರಾಗಿದ್ದ ಹುಚ್ಚು ಮಾಸ್ತಿ ಗೌಡರು ಮಂಡಿಸಿದರು. ಭೂ ಹೋರಾಟದ ಮೊದಲ ಹಂತವಾಗಿ ಮಾರ್ಚ್ ೩. ೧೯೭೩ ರಲ್ಲಿಯೇ ಬೆಂಗಳೂರಿನಲ್ಲಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಸೊಂಡೂರು ರೈತ ಸಂಘದ ಸದಸ್ಯರು ಮೆರವಣಿಗೆ ಮಾಡಿ ಇನಾಂ ರದ್ದತಿಯನ್ನು ಒಳಗೊಂಡ ಹಲವು ಬೇಡಿಕೆಯ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ದೇವರಾಜ ಅರಸು ಪ್ರತಿಕ್ರಿಯಿಸಲಿಲ್ಲ. ಆದರೆ ಇನಾಂ ರದ್ದತಿಗಾಗಿ ಕಾನೂನು ರೂಪಿಸುವ ಆಡಳಿತಾತ್ಮಕ ಪ್ರಕ್ರಿಯೆ ನಡೆದಿತ್ತು. ಸದನದ ಕಲಾಪಗಳನ್ನು ಈ ಬಗೆಗೆ  ಚರ್ಚೆಗಳು ನಡೆಯುತ್ತಿದ್ದವು. ಜೂನ್ ೭, ೧೯೭೩ ವಿಧಾನಸಭಾ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಬೇಕೆಂದು ಶ್ರೀ ಕೋಣಂದೂರು ಲಿಂಗಪ್ಪನವರು ಪ್ರಶ್ನಿಸಿದ್ದರು. ಕಾಗೋಡು ತಿಮ್ಮಪ್ಪನವರೂ ದನಿಗೂಡಿಸಿದರು. ಇವರಿಬ್ಬರ ಮಾತಿಗೆ ಉತ್ತರಿಸುತ್ತ ಸಚಿವ ಎನ್. ಹುಚ್ಚಮಾಸ್ತಿಗೌಡರು ಪೂರ್ಣವಾಗಿ ಮಸೂದೆ ತಯಾರಾಗಿರುವ ಕಾರಣ ಸದ್ಯದ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ ತಿಳಿಸಿದರು.

ಈ ನಡುವೆ ಸೆಪ್ಟಂಬರ್ ೧೨, ೧೯೭೩ರಂದು ಸದನದಲ್ಲಿ ವಿವರವಾಗಿ ಇನಾಂ ರದ್ದಿಯಾಗಿ ಮಸೂದೆಯು ಮಂಡಿಸಲ್ಪಟ್ಟಿತು. ಈ ಮಸೂದೆ ಸೊಂಡೂರಿನಲ್ಲಿ ನಡೆಯುತ್ತಿದ್ದ ಚಳವಳಿಯ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಕಾರಣವೆಂದರೆ ಚಳವಳಿಯ ಬೇಡಿಕೆಯ ಒಂದು ಅಂಶದ ಮೇಲೆ ಮಾತ್ರ ಮಸೂದೆ ಪರಿಹಾರದಂತಿತ್ತು. ಇದು ಕಾನೂನಿನಲ್ಲಿ ಮಾತ್ರ ಜೀವತಳೆ ಯದೆ ಪ್ರಾಯೋಗಿಕವಾಗಿಯೂ ಅದರ ಯಶಸ್ಸನ್ನು ನಿರ್ಧರಿಸಬೇಕಿತ್ತು. ಚಳವಳಿಗಾರರು ಈ ಮಸೂದೆಯನ್ನು ಸ್ವಾಗತಿಸಿ ಹೋರಾಟವನ್ನು ಮುಂದುವರಿಸಿದರು. ಉತ್ತರ ಭಾರತದ ಪ್ರಮುಖ ಸಮಾಜವಾದಿ ಮಧುಲಿಮಯೆ ರಾಷ್ಟ್ರಪತಿ ವಿ.ವಿ. ಗಿರಿಯವರಿಗೆ ಪತ್ರ ಬರೆದರು. ಅದರಲ್ಲಿ ಈ ಮಸೂದೆಯನ್ನು ವಿಮರ್ಶಿಸುತ್ತ ”ಸ್ಥಳೀಯ ರೈತ ಸಂಘ ಮತ್ತು ರಾಜ್ಯ ಸೋಷಲಿಸ್ಟ್ ಪಾರ್ಟಿಯು ೧೯೭೩ ಸೆಪ್ಟಂಬರ್ ೧೦ನೇ ತಾರೀಕಿನಿಂದ ಹೋರಾಟವನ್ನು ಪ್ರಾರಂಭಿಸಲು, ರಾಜ್ಯ ಸರ್ಕಾರವು ಒಂದು ಪ್ರತಿಗಾಮಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತು. ಈ ಮಸೂದೆಯು ರಾಜ ಮನೆತನದ ಹಿತಾಸಕ್ತಿಗಳನ್ನೆಲ್ಲಾ ಕಾಪಾಡುತ್ತದೆ. ಗೇಣಿ ರೈತರಿಂದ ಭಾರಿ ಮೊತ್ತದ ಹಣವನ್ನು ಹೀರಿ ಅವರಿಗೆ ಪಟ್ಟಾ ಹಕ್ಕನ್ನು ನೀಡುತ್ತದೆ. ರೈತರ ಹಿತದೃಷ್ಟಿಯಿಂದ ಇದು ತಿದ್ದುಪಡಿಯಾಗಬೇಕೆಂದು” ಹೇಳಲಾಗಿತ್ತು.

ಜಾರ್ಜ್ ಫರ್ನಾಂಡಿಸ್ ಪತ್ರಿಕಾ ಹೇಳಿಕೆ

ಸೊಂಡೂರು ಹೋರಾಟದ ರಾಷ್ಟ್ರೀಯ ಉಪಸಮಿತಿಯ ಅಧ್ಯಕ್ಷರು ಜಾರ್ಜ್ ಫರ್ನಾಂಡಿಸ್ ಆಗಿದ್ದರು. ಇಲ್ಲಿ ಚಳವಳಿ ಪ್ರಾರಂಭವಾಗಿ ಮೂರನೆಯ ದಿನ ಬೆಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿದರು. ಆ ಮೂಲಕ ಇದನ್ನೊಂದು ರಾಷ್ಟ್ರೀಯ ಹೋರಾಟವನ್ನಾಗಿ ರೂಪಿಸಬಹುದಾದ ಮಾಹಿತಿಯನ್ನು ಒದಗಿಸಿದರು. ೭೦ರ ದಶಕದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಡಳಿತ ಕಾಂಗ್ರೆಸಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಸಿಂಹಸ್ವಪ್ನ ದಂತಿದ್ದರು. ಈ ಮಾತಿಗೆ ಸೆಪ್ಪಂಬರ್ ೧೩ರಂದು ಸೊಂಡೂರು ಹೋರಾಟ ಕುರಿತಂತೆ ನೀಡಿದ ಪತ್ರಿಕಾ ಹೇಳಿಕೆ ಸಾಕ್ಷಿಯಂತಿದೆ.

ಕರ್ನಾಟಕ ರಾಜ್ಯದ ಅರ್ಥ ಮಂತ್ರಿಗಳಾದ ಶ್ರೀ ಎಂ.ವೈ. ಘೋರ್ಪಡೆಯವರ ಅಕ್ರಮ ಸ್ವಾಧೀನದಲ್ಲಿರುವ ಸೊಂಡೂರು ಪ್ರದೇಶದ ಭೂಮಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯ ಮಾಡಲು ನಮ್ಮ ಪಕ್ಷವು ಹೋರಾಟವನ್ನು ಪ್ರಬಲವಾಗಿ ಮಾಡುವುದು. ತಿಂಗಳ ಮೊದಲ ವಾರ ದೆಹಲಿಯಲ್ಲಿ ಪಾರ್ಟಿಯ ಆಶ್ರಯದಲ್ಲಿ ನಡೆದ ಕಿಸಾನ್ ಖೇತ್ ಮಜದೂರ್ ಪಂಚಾಯತ್ ಸಭೆಯಲ್ಲಿ ಸೊಂಡೂರು ಹೋರಾಟಕ್ಕೆ ಹಿಂದೂಸ್ಥಾನದ ಎಲ್ಲಾ ಕಡೆಗಳಿಂದಲೂ ಸತ್ಯಾಗ್ರಹಿ ಗಳ ತಂಡಗಳನ್ನು ಕಳುಹಿಸಬೇಕೆಂದು ತೀರ್ಮಾನಿಸಲಾಯಿತು. ಬಿಹಾರದ ಮಾಜಿ ಗೃಹ ಮಂತ್ರಿ ಶ್ರೀ ರಾಮನಂದ ತಿವಾರಿ, ಮಧ್ಯ ಪ್ರದೇಶದ ಶಾಸಕ ಹಾಗೂ ಖೇತ್ ಮಜದೂರ್ ಪಂಚಾಯತ್ ಅಧ್ಯಕ್ಷ ಶ್ರೀ ಜಮುನಾ ಪ್ರಸಾದ್ ಶಾಸ್ತ್ರಿ, ಅಸ್ಸಾಂನಿಂದ ಲೋಕಸಭಾ ಸದಸ್ಯರಾಗಿರುವ ಶ್ರೀ ಗೋಪಾಲ್ ಬಾರ್ಬೊರಾ, ರಾಜಸ್ಥಾನದ ಶಾಸಕರು ಹಾಗೂ ಗಂಗಾ ನಗರದ ರೈತ ಆಂದೋಲನದ ಪ್ರಸಿದ್ಧ ನಾಯಕರೂ ಆದ ಪ್ರೊ. ಕೇದರ್ ನಾಥ್, ಕೇರಳ ಶಾಸನ ಸಭೆಯ ಸೋಷಿಯಲಿಸ್ಟ್ ಪಾರ್ಟಿಯ ಮಾಜಿ ನಾಯಕ ಶ್ರೀ. ಕೆ.ಕೆ. ಅಬುಸಾಹೇಬ್, ತಮಿಳುನಾಡಿನ ರೈತ ಹೋರಾಟದ ನಾಯಕರು ಹಾಗೂ ಮಾಜಿ ಶಾಸನ ಸಭಾ ಸದಸ್ಯರೂ ಆದ ಪಿ.ಕೆ. ನಲ್ಲಶಿವಂ ಮೊದಲಾದ ಪಾಟೀಯ ಪ್ರಮುಖರು ಹೋರಾಟದಲ್ಲಿ ಭಾಗವಹಿಸುವರು.

ಇತರ ಅನೇಕ ವಿಷಯಗಳಂತೆಯೇ ಸೊಂಡೂರು ಹೋರಾಟವೂ ಕೂಡ ಶ್ರೀಮತಿ ಇಂದಿರಾಗಾಂಧಿಯವರ ಕಪಟ ಸಮಾಜವಾದವನ್ನು ಬಯಲಿಗೆಳೆಯುವುದರಲ್ಲಿ ಸಹಾಯಕವಾಗಿದೆ. ಶ್ರೀಮತಿ ಇಂದಿರಾಗಾಂಧಿಯವರು ಮತ್ತು ಅವರ ಜಹಗೀರುದಾರಿ ಅನುಯಾಯಿಗಳಾದ  ಎಂ.ವೈ. ಘೋರ್ಪಡೆ ಯಂಥವರು ಭಾರತೀಯ ಸಮಾಜವಾದದ ಅಗ್ರದೂತರೆಂದು ಹೇಳುವುದು ಅಪಹಾಸ್ಯ ಮಾತ್ರವಲ್ಲ ಅಸಭ್ಯತೆಯೂ ಕೂಡ. ದುರಂತ ಪರಿಸ್ಥಿತಿಯೇನೆಂದರೆ ರಾಜಶಾಹಿಗಳು ಹಾಗೂ ಮಾರುತಿ ಸಮಾಜವಾದಿಗಳ ಭೂಗ್ರ ಹಣದಿಂದಾಗಿ ದೇಶದ ಆಹಾರೋತ್ಪನ್ನದ ಮೇಲೆ ಕೆಟ್ಟ ಪರಿಣಾಮವುಂಟಾಗಿದೆ. ಪ್ರಧಾನ ಮಂತ್ರಿಗಳು ದೆಹಲಿಯ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಬೆಳೆದ ಗೋಧಿಯನ್ನು ದಾಸ್ತಾನು ಮಾಡಿದ್ದಾರೆ. ರಾಜ್ಯ ಸಂಗ್ರಹಣಾಧಿಕಾರಿಗಳಿಗೆ ಸಾಮಾನ್ಯ ರೈತ ತಾನು ಉತ್ತು ಬಿತ್ತಿ ಬೆಳೆದ ಬೆಳೆಯನ್ನು ಕ್ವಿಂಟಲಿಗೆ ೭೫ ರೂಗಳಂತೆ ಮಾರಾಟ ಮಾಡಬೇಕಾದ ಸಂದರ್ಭವಿದೆ. ಶ್ರೀಮತಿ ಗಾಂಧಿಯವರು ತಮ್ಮ ಜಮೀನಿನಲ್ಲಿ ದಮಡಿ ಕೂಲಿಕೊಟ್ಟು ಭೂಹೀನ ಕೆಲಸಗಾರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಇವರಿಂದ ಬೆಳೆದ ಗೋಧಿಯನ್ನು ಕ್ವಿಂಟಲಿಗೆ ೩೫೦ ರೂನಂತೆ ಭಾರಿ ದರದಲ್ಲಿ ಮಾರಲು ರಾಷ್ಟ್ರೀಯ ಬೀಜ ಕಾರ್ಪೋರೇಷನ್ ಜೊತೆ ಸಂಧಾನ ನಡೆಸುತ್ತಿದ್ದಾರೆ. (ಕನ್ನಡಪ್ರಭ)

ಜಾರ್ಜ್ ರವರು ಕೊಯಮತ್ತೂರಿನಲ್ಲಿ ಯುನೈಟೆಡ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಕೇಂದ್ರೀಯ ಸಭೆಯಲ್ಲಿ ಭಾಗವಹಿಸಿ ಮುಂಬೈಗೆ ಹಿಂತಿರುಗುವ ಮಾರ್ಗದಲ್ಲಿ ಬೆಂಗಳೂರಿನಲ್ಲಿ ಈ ಹೇಳಿಕೆ ನೀಡಿದರು. ಜಾರ್ಜ್‌ರಿಗೆ ಸೊಂಡೂರು ಹೋರಾಟವನ್ನು ಒಂದು ರಾಷ್ಟೀಯ ಹೋರಾಟವನ್ನಾಗಿ ರೂಪಿಸುವ ಉದ್ದೇಶವಿತ್ತು. ಅಂತೆಯೇ ಇಡಿಯಾದ ಹೇಳಿಕೆ ಯಲ್ಲಿ ರೈತ ಪರವಾದ ಕಾಳಜಿ ಇದೆ. ಮುಖ್ಯವಾಗಿ ಕಾಂಗ್ರೆಸ್ ನ ರಾಜಶಾಹಿ ಪರವಾದ ನೀತಿ ಯನ್ನು ಕಟುವಾಗಿ ವಿರೋಧಿಸುವ ಅದಕ್ಕೆ ಪರ್ಯಾಯವಾಗಿ ಸಮಾಜವಾದಿ ಆಶಯದ ಚಳವಳಿಗಳನ್ನು ರೂಪಿಸುವ ಜರೂರಿತ್ತು ಇಲ್ಲಿತ್ತು. ೭೦ರ ದಶಕ ಆಹಾರದ ಸಮಸ್ಯೆ ತೀವ್ರ ವಾಗಿದ್ದ ಸಂದರ್ಭ. ಈ ಹೊತ್ತಲ್ಲಿ ಇಂದಿರಾಗಾಂಧಿಯವರ ಮೇಲಿನ ಜಾರ್ಜ್‌ರ ಆರೋಪ ರಾಜಕೀಯ ಪ್ರತ್ಯಾರೋಪದಂತೆ ಕಂಡರೂ, ಸಾಮಾಜಿಕ ವಾಸ್ತವದಲ್ಲಿ ಒಬ್ಬ ಪ್ರಧಾನಿಯವರ ಸ್ವಹಿತಸಕ್ತಿಯ ಧೋರಣೆಗಳು ಆರೋಗ್ಯಕರವಲ್ಲ. ಇಲ್ಲಿ ಜಾರ್ಜ್‌ರವರು ಸೊಂಡೂರು ಹೋರಾಟದಲ್ಲಿ ಭಾಗವಹಿಸುವವರ ಸಂಭವನೀಯ ಪಟ್ಟಿಯನ್ನು ಕೊಡುತ್ತಾರೆ. ಆದರೆ ಈ ಸಂಭವನೀಯರಲ್ಲಿ ಬಹುತೇಕರು ಸೊಂಡೂರು ಹೋರಾಟದಲ್ಲಿ ಭಾಗವಹಿಸಲಿಲ್ಲ.

ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರಲ್ಲಿ ಜೆ.ಎಚ್. ಪಟೇಲರು ಪ್ರಮುಖರು. ”ತಮ್ಮ ಪಕ್ಷದ ನಿರ್ಧಾರಕ್ಕೆ ಅನುಗುಣವಾಗಿ ಈ ತಿಂಗಳ ೧೦ರಂದು ಚಳವಳಿ ಆರಂಭವಾಗಿದ್ದು, ಹೋರಾಟದಲ್ಲಿ ಪಾಲ್ಗೊಂಡಿರುವವರು ಶೇಕಡ ೯೦ರಷ್ಟು ಆ ಭಾಗದ ರೈತರು. ಸೋಷಲಿಸ್ಟ್ ಪಾರ್ಟಿ ಕೇವಲ ನಾಯಕತ್ವ ವಹಿಸಿದೆ. ನಮ್ಮ ಪ್ರಮುಖ ಬೇಡಿಕೆಗಳನ್ನು ಕುರಿತು ಸರ್ಕಾರ ತ್ವರಿತವಾಗಿ ಅನುಕೂಲಕರ ಪ್ರತಿಕ್ರಿಯೆ ನೀಡದಿದ್ದರೆ ಸೊಂಡೂರಿನಲ್ಲಿ ಈಗಿರುವ ಶಾಂತ ಪರಿಸ್ಥಿತಿ ಉಳಿಯಲಾರದು” ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಪಟೇಲರು ಸೆಪ್ಟಂಬರ್ ೧೬ರಂದು ನೀಡಿದ ಪತ್ರಿಕಾ ಹೇಳಿಕೆಯಲ್ಲಿದ್ದ ಪ್ರಮುಖ ಅಂಶಗಳೆಂದರೆ, ಹೋರಾಟದ ಮುಖ್ಯ ಉದ್ದೇಶ ಸೊಂಡೂರಿನ ರಾಜವಂಶದ ದಬ್ಬಾಳಿಕೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ತಾಲೂಕು ಕಛೇರಿಯ ಮುಂದೆ ಪಿಕೆಟಿಂಗ್ ಮಾಡುವುದು. ಎರಡನೆಯದಾಗಿ ರೈತರ ಹಕ್ಕನ್ನು ಸ್ಥಾಪಿಸಲು ಭೂ ಆಕ್ರಮಣಗಳನ್ನು ಮಾಡುವುದು. ಚಳವಳಿಯ ವಿರೋಧಿ ಪ್ರಚಾರವನ್ನು ಪ್ರಸ್ತಾಪಿಸಿ, ಚಳವಳಿ ಪ್ರಾರಂಭವಾಗುವುದಕ್ಕೂ ಮೊದಲೇ ಅರಸು ಮನೆತನದವರು ಕೈಗೊಂಡಿದ್ದ ವ್ಯಾಪಕವಾದ ವಿರೋಧ ಪ್ರಚಾರ ಮತ್ತು ಉಂಟು ಮಾಡಿದ ಭಯದ ವಾತಾವರಣಗಳು ಚಳವಳಿಯ ಯಶಸ್ಸಿನ ಮೇಲೆ ಪರಿಣಾಮ ಬೀರಿಲ್ಲವೆಂದು ಹೇಳಿದರು.

ಚಳವಳಿಯ ೫ನೇ ದಿನ ಸೆಪ್ಟಂಬರ್ ೧೪ ರಂದು ಸೋಷಲಿಸ್ಟ್ ಪಾರ್ಟಿಯ ಬಳ್ಳಾರಿಯ ಜಿಲ್ಲಾಧ್ಯಕ್ಷರಾದ ಎಂ.ಪಿ. ಪ್ರಕಾಶ ಮುಂದಾಳತ್ವದಲ್ಲಿ ಸಭೆ ನಡೆಯಿತು. ಆನಂತರ ತಾಲೂಕು ಕಛೇರಿಯ ಮುಂದೆ ಪಿಕೆಟಿಂಗ್ ಮಾಡಲಾಗಿ ಎಂ.ಪಿ. ಪ್ರಕಾಶ್, ಎಸ್. ತಿಪ್ಪಯ್ಯನವರನ್ನು ಒಳಗೊಂಡಂತೆ ೩೦ ಜನ ಸತ್ಯಾಗ್ರಹಿಗಳನ್ನು ಬಂಧಿಸಿ ಸಂಜೆಗೆ ಅವರನ್ನು ಬಿಡುಗಡೆ ಮಾಡ ಲಾಯಿತು. ಚಳವಳಿಯ ಆರನೇ ದಿನದಲ್ಲಿ ಮೂರು ಕಡೆ ಭೂ ಅಕ್ರಮಣ ಚಳವಳಿ ನಡೆಯಿತು. ಎರಡನೇ ದಿನ ಬುಡ್ಡಮ್ಮನಿಂದ ಸಿದ್ದಾಪುರದಲ್ಲಿ ಆರಂಭವಾಗಿ ನಂದಿಹಳ್ಳಿ ರಾಧಾಪುರದಲ್ಲಿ ಮುಂದುವರಿಯಿತು. ರಾಧಾಪುರದಲ್ಲಿ ತಂಬಾಕು ಕಂಪನಿಗೆ ಬಿಟ್ಟು ಕೊಟ್ಟಿದ್ದ ಭೂಮಿಯನ್ನು ರೈತರಿಗೆ ಹಂಚಬೇಕೆಂಬುದೇ ನಮ್ಮ ಬೇಡಿಕೆ ಎಂದು ಚಳವಳಿಗಾರರು ಒಕ್ಕೊರಲಿನಿಂದ ಕೂಗಿ ಈ ಮೂರು ಗ್ರಾಮಗಳ ಕೃಷಿ ಯೋಗ್ಯ ಭೂ ವಿಸ್ತೀರ್ಣ ೧೦೦೦ ಎಕರೆಯಷ್ಟಿದೆ. ಅದು ರೈತರಿಗೆ ಹಂಚಿಕೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸೆಪ್ಟಂಬರ್ ೨೧ ರಂದು ವಿಧಾನಸಭಾ ಚರ್ಚೆಯಲ್ಲಿ ಕೋಣಂದೂರು ಲಿಂಗಪ್ಪ ಸೊಂಡೂರು ಭೂ ಹೋರಾಟ ನಡೆಯುತ್ತಿರುವ ಬಗೆಗೆ ಪ್ರಸ್ತಾಪಿಸಿ, ಅರಸು ಮೌನವಾಗಿರುವ ಬಗೆಗೆ ಟೀಕಿಸಿದರು. ಅದಕ್ಕೆ ಅರಸು ಪ್ರತಿಕ್ರಿಯಿಸಿ ‘ನಮ್ಮ ಸ್ನೇಹಿತರು ಚಳವಲಿಗೆ ತಪ್ಪು ಸ್ಥಳವನ್ನು ಆರಿಸಿಕೊಂಡಿದ್ದಾರೆ’ ಎಂದಿದ್ದರು. ಸೊಂಡೂರಿನ ಚಳವಳಿಗಾರರು ಈ ಹೇಳಿಕೆಯನ್ನು ವಿರೋಧಿಸಿದರು. ‘ಸೋಷಲಿಸ್ಟ್ ಪಾರ್ಟಿ ಹೋರಾಟಕ್ಕೆ ತಪ್ಪು ಸ್ಥಳವನ್ನು ಆರಿಸಿಕೊಂಡಿದೆಯೆಂದು ದೇವರಾಜ ಅರಸು ಅವರು ವಿಧಾನಸಭೆಯ್ಲಲಿ ಹೇಳಿರುವುದು  ವಿಷಾದಕರ. ಈ ಸಮಸ್ಯೆಯ ಬಗ್ಗೆ ಬಹುಶಃ ಅವರನ್ನೇ ತಪ್ಪು ತಿಳುವಳಿಕೆಯಲ್ಲಿ ಇಟ್ಟಿರಲಿಕ್ಕೆ ಸಾಕು. ಮನಪೂರ್ವಕವಾಗಿ ಈ ಹೋರಾಟದ ಉದ್ದೇಶಗಳನ್ನು ಅವರು ಅರ್ಥಮಾಡಿಕೊಂಡಿದ್ದರೆ ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಲು ಅಪೇಕ್ಷೆಯಿದ್ದರೆ ಅವರು ಒಂದು ದಿನದ ಮಟ್ಟಿಗೆ ಸೊಂಡೂರಿಗೆ ಬರಬೇಕಾಗಿ ಆಹ್ವಾನಿಸುತ್ತೇವೆ. ಸ್ಥಳ ಪರಿಶೀಲನೆ ಮಾಡದ ಹೊರತು ಇಲ್ಲಿಯ ರಹಸ್ಯ ಬೆಂಗಳೂರಿನಲ್ಲಿ ಅರ್ಥವಾಗದು’ ಎಂದು ಕೆ.ಜಿ. ಮಹೇಶ್ವರಪ್ಪ ಪತ್ರಿಕಾ ಹೇಳಿಕೆ ನೀಡಿದರು.

ರೈತಪರ ಚಳವಳಿಯನ್ನು ಮುಖ್ಯಮಂತ್ರಿಗಳು ಲಘುವಾಗಿ ಟೀಕಿಸಿದ್ದರು. ಚಳವಳಿಯ ಕಾರ್ಯಕರ್ತರಿಗೆ ಅವಮಾನಿಸುವ ಮಾತಾಗಿತ್ತು. ಚಳವಳಿಗೆ ಯೋಗ್ಯವಾದ ಸ್ಥಳವಲ್ಲ ಎನ್ನುವ ಮಾತಿನ ಹಿಂದೆ ಸೊಂಡೂರಿನಲ್ಲಿ ರೈತರ ಶೋಷಣೆ ನಡೆದಿಲ್ಲ ಎನ್ನುವ ಧೋರಣೆಯಿತ್ತು. ಸಮಾಜವಾದಿ ಪಕ್ಷ ವಿನಾಃಕಾರಣ ಅಲ್ಲೊಂದು ಹೋರಾಟ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಅರಸುರವರು ಪ್ರತಿಕ್ರಿಯಿಸಿದರು. ಸಮಸ್ಯೆಯ ಸ್ವರೂಪವನ್ನು ಅರ್ಥಮಾಡಿ ಕೊಳ್ಳಲು ಪ್ರಯತ್ನಿಸದ ಮುಖ್ಯಮಂತ್ರಿಗಳು ಸಮಾಜವಾದಿಗಳನ್ನು, ರೈತರನ್ನು ಅವಗಣನೆ ಮಾಡಿದರು. ವಿರೋಧ ಪಕ್ಷ ಯಾವುದಾದರೂ ತಪ್ಪನ್ನು ಹುಡುಕುತ್ತಲೇ ಇರುತ್ತದೆ ಅದರ ಬಗ್ಗೆ ಗಂಭೀರವಾಗಿ ಯೋಚಿಸುವುದೇಕೆ? ಎನ್ನುವ ಆಡಳಿತ ಪಕ್ಷದ ನಿಲುವು ದೇವರಾಜ ಅರಸು ಅವರದಾಗಿತ್ತು.

ದೆಹಲಿಯಲ್ಲಿ ಸೆಪ್ಟಂಬರ್ ೨೩ರಂದು ಸಮಾಜವಾದಿ ರಾಷ್ಟ್ರೀಯ ಮಂಡಳಿ ಸಭೆ ಸೇರಿ ಸೊಂಡೂರಿನಲ್ಲಿ ನಡೆದಿರುವ ರೈತ ಚಳವಳಿಯ ಬಗೆಗೆ ಚರ್ಚಿಸಿ ‘ಸೊಂಡೂರು ತಾಲ್ಲೂಕಿನಲ್ಲಿ ತಮ್ಮ ಕುಟುಂಬದಿಂದ ರೈತರ ಶೋಷಣೆ ಆಪಾದನೆಗೆ ಗುರಿಯಾಗಿರುವ ಮೈಸೂರು ರಾಜ್ಯದ ಅರ್ಥ ಸಚಿವ ಎಂ.ವೈ. ಘೋರ್ಪಡೆಯವರು ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿತು. ಹೆಚ್ಚು ಭೂಮಿ ಹೊಂದಿರುವ ಅರ್ಥ ಸಚಿವರ ವಿರುದ್ಧ ಪಕ್ಷ ಕೈಗೊಂಡಿರುವ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುವ ನಿರ್ಧಾರವನ್ನು ನಿರ್ಣಯದಲ್ಲಿ ಕೈಗೊಳ್ಳಲಾಯಿತು. ಸೊಂಡೂರಿನಲ್ಲಿ ನಡೆಯುವ ಚಳವಳಿಯಲ್ಲಿ ಪಕ್ಷದ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿತು. ಸೆಪ್ಟಂಬರ್ ೨೯.೧೯೭೩ ‘ಪ್ರಜಾವಣಿ’ಯಲ್ಲಿ ಪ್ರಕಟವಾದ ವರದಿಯಲ್ಲಿ ಮಂಡಳಿಯಲ್ಲಿದ್ದ ಸದಸ್ಯರ ಹೆಸರು ಉಲ್ಲೇಖವಾಗಿಲ್ಲ.

ಸೊಂಡೂರು ಹೋರಾಟದ ೧೨ನೆಯ ದಿನ ಸೆಪ್ಟಂಬರ್ ೨೧ರಂದು ಬಂಡ್ರಿ ಗ್ರಾಮದ ಪ್ರಮುಖ ರೈತ ಸೋಮಪ್ಪನವರ ನಾಯಕತ್ವದಲ್ಲಿ ಗ್ರಾಮದ ೩೦ ಜನ ಸತ್ಯಾಗ್ರಹಿಗಳು ಸೊಂಡೂರು ತಾಲ್ಲೂಕು ಕಛೇರಿಯ ಮುಂದೆ ಪಿಕೆಟಿಂಗ್ ನಡೆಸಿದರು. ಸತ್ಯಾಗ್ರಹಿಗಳನ್ನು ಪೊಲೀಸರು ದಸ್ತಗಿರಿ ಮಾಡಿ ನಂತರ ಬಿಡುಗಡೆ ಮಾಡಿದರು. ಆ ದಿನ ಕೆ.ಜಿ. ಮಹೇಶ್ವರಪ್ಪ ಮಾತನಾಡಿ ಹೋರಾಟದ ಬೇಡಿಕೆಗಳ ಬಗ್ಗೆ ವಿವರಿಸಿ ಅವರನ್ನು ಮೆರವಣಿಗೆಯಲ್ಲಿ ತಾಲ್ಲೂಕು ಕಛೇರಿಗೆ ಕರೆದೊಯ್ದರು. ಇದೇ ಸಮಯಕ್ಕೆ ಬೆಂಗಳೂರಿನಲ್ಲಿ ವಿಧಾನಸಭಾ ಚರ್ಚೆಯಲ್ಲಿಯೂ ಕೋಣಂದೂರು ಲಿಂಗಪ್ಪ, ಕಾಗೋಡು ತಿಮ್ಮಪ್ಪ ಸೊಂಡೂರು ಹೋರಾಟದ ಬಗೆಗೆ ಪ್ರಸ್ತಾಪಿಸಿದರು.

ಸೊಂಡೂರಿನಲ್ಲಿ ಭೂ ಹೋರಾಟ ನಡೆಯುವ ಹೊತ್ತಿಗೆ ಕರ್ನಾಟಕದಾದ್ಯಂತ  ಇದರ ಪೂರ್ಣ ಮಾಹಿತಿ ದೊರೆಯಲಿಲ್ಲ. ಮಾಧ್ಯಮಗಳು ಈ ಹೋರಾಟವನ್ನು ವಿಶೇಷವಾಗಿ ಪರಿಗಣಿಸಲಿಲ್ಲ. ಈ ಕಾರಣದಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಸೊಂಡೂರು ಚಳವಳಿ ನಡೆಯುವ ಬಗೆಗೆ ಕೆಲವರಿಗೆ ಮಾತ್ರ ತಿಳಿದಿತ್ತು. ಅವರಿಂದಲೆ ಸಣ್ಣ ಪ್ರಮಾಣದ ಟೀಕೆ, ಪ್ರತಿಕ್ರಿಯೆ ಬರಲಾರಂಭಿಸಿತು. ಮೈಸೂರಿನಲ್ಲಿ ಸೆಪ್ಟಂಬರ್ ೨೪ರಂದು ಸಮಾಜವಾದಿ ಪಕ್ಷದ ಮಾಜಿ ಸಂಘಟನಾ ಕಾರ್ಯದರ್ಶಿಗಳಾದ ಜಿ.ವಿ. ಅಂಜಿನಪ್ಪ ಆಡಳಿತ ಕಾಂಗ್ರೇಸ್ಸನ್ನು ಕಟುವಾಗಿ ಟೀಕಿಸಿದರು. ಸಮಾಜವಾದಿ ಹೆಸರಿನಲ್ಲಿ ಅಧಿಕಾರಕ್ಕೇರಿ ರಾಜ್ಯದ ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳಲ್ಲಿ ಸಮಾಜವಾದದ ಅಥವಾ ಪ್ರಗತಿಪರ ನೀತಿಯ ಗಂಧವೂ ಇಲ್ಲವೆಂದು ದೂರಿದರು. ಸೊಂಡೂರಿನಲ್ಲಿ ನಡೆಯುತ್ತಿರುವ ರೈತರ ಚಳವಳಿಯನ್ನು ಬೆಂಬಲಿಸುತ್ತ ‘ಸಮಾಜವಾದದ  ಬಗ್ಗೆ ಅಷ್ಟೆಲ್ಲಾ ಭಾಷಣ ಮಾಡುವ ಅರ್ಥ ಸಚಿವ ಶ್ರೀ ಘೋರ್ಪಡೆಯವರು ದೇವಾಲಯಗಳ ಸಾವಿರಾರು ಎಕರೆ ಜಮೀನನ್ನು ಇಟ್ಟುಕೊಂಡಿದ್ದಾರೆ. ಇದಲ್ಲದೆ ರಾಜ್ಯದ ವಿದ್ಯುಚ್ಛಕ್ತಿ ಮಂಡಳಿಗೆ ಅವರಿಂದ ಲಕ್ಷಾಂತರ ರೂ ಬಾಕಿ ಬರಬೇಕಾಗಿದೆ. ಇಂಥವರಿಗೆ ಸಮಾಜವಾದ ಹೇಳುವ ಕಾಂಗ್ರೇಸ್ ಸರಕಾರದಲ್ಲಿ ಸ್ಥಾನವೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಮೂರನೇ ವಾರಕ್ಕೆ ಚಳವಳಿ ಮುಂದುವರಿಯುತ್ತಲೂ ಜನರಲ್ಲಿ ಒಂದಷ್ಟು ಭರವಸೆ, ನಂಬಿಕೆ ಬರತೊಡಗಿತು. ಇದರಿಂದಾಗಿ ಸ್ಥಳೀಯ ರೈತರ ಭಾಗವಹಿಸುವಿಕೆಯೂ ಕ್ರಮೇಣ ಹೆಚ್ಚಾಯಿತು. ಸೆಪ್ಟಂಬರ್ ೨೪ರಂದು ನಾಯ್ಕರ ಹೂನ್ನೂರಪ್ಪ ಮತ್ತು ಟಿ. ಕೃಷ್ಣಯ್ಯ ಶೆಟ್ಟಿ ಸೊಂಡೂರಿನ ಪ್ರಮುಖ ರೈತನ ನಾಯಕತ್ವದಲ್ಲಿ ೩೦ ಜನ ಸತ್ಯಗ್ರಹಿಗಳ ಮತ್ತು ೨೫,೨೬ನೇ ತಾರೀಖಿನಂದು ಭುಜಂಗನಗರದಿಂದ ತಾಲ್ಲೂಕು ರೈತ ಸಂಘದ ಡೈರೆಕ್ಟರ್ ಜುಮ್ಮನಗೌಡರ ಸಣ್ಣ ಬಸಪ್ಪ ಹಾಗೂ ವಡ್ಡನಕಟ್ಟಿ ಶಾಂತಮ್ಮನವರ ನಾಯಕತ್ವದಲ್ಲಿ ತಾಲ್ಲೂಕು ಕಛೇರಿಯ ಮುಂದೆ ಚಳವಳಿ ಮಾಡಿದಾಗ ಪೊಲೀಸರು ಅವರನ್ನು ದಸ್ತಗಿರಿ ಮಾಡಿ ನಂತರ ಆಯಾ ದಿನದ ಸಂಜೆ ಬಿಡುಗಡೆ ಮಾಡಿದರು. ಪಾಟೀಲ ಪುಟ್ಟಪ್ಪನವರ ಸಂಪಾದಕತ್ವದಲ್ಲಿ ಹುಬ್ಬಳ್ಳಿ ಯಿಂದ ಬರುತ್ತಿದ್ದ ‘ವಿಶ್ವವಾಣಿ’ ಪತ್ರಿಕೆಯು ಸೆಪ್ಟಂಬರ್ ೨೭ ರಂದು ಚಳವಳಿಯ ವರದಿ ಮಾಡುತ್ತ ”ಸತ್ಯಾಗ್ರಹ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ರಾಜ್ಯ ಮಟ್ಟದ ಹೋರಾಟ ಮಾತ್ರವಲ್ಲದೆ ರಾಷ್ಟ್ರ ಸಮಾಜವಾದಿ ನಾಯಕರ ಭಾಗವಹಿಸುವಿಕೆಯೊಂದಿಗೆ ಭಾರತದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರಾಂತ ಹೋರಾಟವಾಗಿ ಪರಿಣಮಿಸಲಿದೆ” ಎಂದು ಬರೆದರು.