ದೇವರಾಜ ಅರಸು ಹೇಳಿಕೆ

ಹೋರಾಟ ಪ್ರಾರಂಭವಾಗಿ ೨೦ ನೇ ದಿನದಂದು ಅಂದರೆ ಸೆಪ್ಟಂಬರ್ ೩೦.೧೯೭೩ರಂದು ವಿಧಾನ ಸಭೆಯಲ್ಲಿ ಸೊಂಡೂರು ಹೋರಾಟ ಕುರಿತಂತೆ ಅರಸು ಅವರು ಸ್ಪಷ್ಟನೆ ನೀಡಿದರು. ಅರಸು ಅವರ ಮೌನವೇ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮುಖ್ಯಮಂತ್ರಿಗಳು ಸಂದಿಗ್ಧತೆಯಲ್ಲಿದ್ದರು. ತಮ್ಮ ಕ್ಯಾಬಿನೆಟಿನ ಪ್ರಭಾವಿ ಮಂತ್ರಿ ಎಂ.ವೈ. ಘೋರ್ಪಡೆಯವರ ವಿರುದ್ಧವೇ ಪ್ರತಿಕ್ರಿಯಿಸಬೇಕಿತ್ತು. ಹಾಗಾಗಿ ಘೋರ್ಪಡೆಯವರನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿದರು. ಇತ್ತ ಭೂಮಿಯ ಹಕ್ಕನ್ನು ಕೇಳುತ್ತಿರುವ ಸೊಂಡೂರು ಜನತೆಯ ಪರವಾಗಿಯೂ ನಿಲ್ಲಬೇಕಿತ್ತು. ಬಹುಶಃ ಈ ಸಂದಿಗ್ಧತೆಯನ್ನು ಪರಿಹರಿಸಿಕೊಳ್ಳಲಿಕ್ಕಾಗಿಯೇ ಸ್ವಲ್ಪ ದಿನ ಅರಸು ಅವರು ಮೌನಾಗಿರಬೇಕಾಯಿತು. ಅವರ ಹೇಳಿಕೆಯ ವಿವರ ಹೀಗಿದೆ:

ಸೊಂಡೂರಿನ ಶ್ರೀ ಕಾರ್ತಿಕೇಯ ಸ್ವಾಮಿ ಮತ್ತಿತರ ದೇವಾಲಯಗಳಿಗೆ ಸೇರಿದ ಎಂಟು ಇನಾಂ ಹಳ್ಳಿಗಳಿವೆಅದನ್ನು ೧೯೪೮ರಲ್ಲೇ ಸರ್ಕಾರ ವಹಿಸಿಕೊಂಡು  ದೇವಾಲಯಕ್ಕೆ ೩೬,೦೦೦ ರೂಗಳನ್ನು ವಾರ್ಷಿಕ ಗ್ರಾಂಟ್ಸ್ ಕೊಡುತ್ತಿದೆ ಇನಾಂ ಹಳ್ಳಿಗಳ ಮೇಲೆ ಸೊಂಡೂರಿನ ಮಾಜಿ ರಾಜರಿಗೆ ಯಾವ ಹಕ್ಕೂ ಇಲ್ಲಆದರೆ  ಗೇಣಿದಾರರಿಗೆ ಪಟ್ಟಾ ದೊರೆತಿಲ್ಲ ಇನಾಂಗಳ ರದ್ದಿಯಾತಿಗೆ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆಭೂಮಿಗುತ್ತಿಗೆಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ ಸಂಸ್ಥೆಗೆ ೨೯ ಚದರ ಮೈಲುಗಳ ಭೂಮಿ ಗುತ್ತಿಗೆಗೆ ಕೊಡಲಾಗಿದೆ ಗುತ್ತಿಗೆ ೧೯೭೩ರ ಡಿಸೆಂಬರ್‌ಗೆ ಮುಗಿಯಲಿದೆಅದನ್ನು ಇನ್ನೂ ೨೦ ವರ್ಷ ಮುಂದುವರಿಸಬೇಕೆಂದು  ಸಂಸ್ಥೆ  ಕೇಳಿದೆಅದಕ್ಕೆ ಕೇಂದ್ರ ಸರ್ಕಾರ ಒಪ್ಪಿದೆಅಲ್ಲಿ ೨೦,೦೦೦ ಕೆ.ವಿ.ವಿಶಕ್ತಿಯಎರಡು ಫೆರೊ ಸಿಲಿಕಾನ್ ಕುಲುಮೆಗಳನ್ನು  ಸಂಸ್ಥೆ ಸ್ಥಾಪಿಸಲಿದೆಸಿದ್ದಾಪುರರಾಧಾಪುರನಂದಿಹಳ್ಳಿಯಲ್ಲಿ ಸೊಂಡೂರು ಟುಬ್ಯಾಕೋ ಕಂಪನಿಗೆ ೧೯೪೬ರಲ್ಲಿ ೮೪೭ ಎಕರೆ ಭೂಮಿಯನ್ನು ಗುತ್ತಿಗೆಗೆ ಕೊಡಲಾಯಿತು ಕಂಪನಿ ಈಗ ವಿಸರ್ಜನೆಯಾಗಿದೆಭೂಮಿಯ ಬಗ್ಗೆ ಕೋರ್ಟಿನ ಡಿಕ್ರಿ ಇತ್ತು೧೯೭೦ರಲ್ಲಿ  ಭೂಮಿಯೆಲ್ಲಾ ಸರ್ಕಾರದ ವಶಕ್ಕೆ ಬಂತುಈಗ ಅಲ್ಲಿ ತೋಟಗಾರಿಕೆಯ ಫಾರಂ ಒಂದರ ನಿರ್ಮಾಣ ಯೋಜನೆ ಇದೆಅದಕ್ಕೆಷ್ಟು ಭೂಮಿ ಬೇಕು ಅನ್ನುವುದನ್ನು ಪರಿಶೀಲಿಸಿ ಉಳಿದ ಭೂಮಿಯನ್ನು ರೈತರಿಗೆ ಕೊಡುವ ವಿಚಾರವೂ ಇದೆ ಭಾಗದಲ್ಲಿ ಈಗ .೯೧೪ ಎಕರೆಗಳಷ್ಟು ಭೂಮಿ ಹಂಚಲು ಸಾಧ್ಯಸೊಂಡೂರು ರಾಜ ಮನೆತನದ ಬೇಟೆಗಾಗಿ ದೇವಗಿರಿರಾಮಘಡದಲ್ಲಿ ಸ್ವಲ್ಪ ಅರಣ್ಯ ಭೂಮಿಯನ್ನು ಮೀಸಲಿರಿಸಲಾಗಿತ್ತುಈಗ ಅದು ರದ್ದಾಗಿದೆ ಅರಣ್ಯವನ್ನು ಸರಕಾರವೇ ವಹಿಸಿಕೊಂಡಿದೆ.

ಅರಸು ಅವರ ಹೇಳಿಕೆಯಲ್ಲಿ ದ್ವಂದ್ವ ಇತ್ತು. ರಾಜಮನೆತನವನ್ನು ಸಂಪೂರ್ಣವಾಗಿ ಬಿಟ್ಟುಕೊಡುವಂತೆಯೂ ಇರಲಿಲ್ಲ. ರೈತರ ಬೇಡಿಕೆಗಳಿಗೆ ಪರಿಹಾರ ನೀಡಿದಂತೆಯೂ ಇರಲಿಲ್ಲ. ದೇವಸ್ಥಾನಕ್ಕೆ ಸೇರಿದ ಇನಾಂ ಭೂಮಿಯನ್ನು ೧೯೪೮ರಲ್ಲಿ ಸರಕಾರ ವಹಿಸಿಕೊಂಡಿದೆ ಎಂದು ಹೇಳಿದರು. ಆದರೆ ಚಳವಳಿಗಾರರ ಬೇಡಿಕೆಗಳಾದ ೧೯೩೭ರ ಇನಾಂ ನಿಯಂತ್ರಣ ಕಾನೂನು, ೧೯೪೬ರ ಸಂವಿಧಾನದ ಉದ್ಘೋಷಣೆ ಮತ್ತು ೧೯೪೮ರ ದೇವಾಲಯ ಉದ್ಘೋಷಣೆಗಳನ್ನು ರದ್ದುಪಡಿಸುವ ಬಗೆಗೆ ಸರಿಯಾದ ಮಾಹಿತಿಯನ್ನು ನೀಡಲಿಲ್ಲ. ಎಫ್.ಎಂ. ಅಂಡ್ ಪಿ.ಒ. ಕಂಪನಿಗೆ ನೀಡಲಾದ ೨೯ಚದರ ಮೈಲಿ ಗುತ್ತಿಗೆಯನ್ನು ರದ್ದು ಪಡಿಸಿ ಈ ಗುತ್ತಿಗೆಯನ್ನು ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮ ಅಥವಾ ಮೈಸೂರು ಮೆಟಲ್ಸ್ ಲಿಮಿಟೆಡ್ ಈ ಎರಡರಲ್ಲಿ ಒಂದು ಸಂಸ್ಥೆಗೆ ಕೊಡಬೇಕು ಎನ್ನುವುದು ಚಳವಳಿಗಾರರ ಬೇಡಿಕೆ ಯಾಗಿತ್ತು. ಆದರೆ ಅವರು ಹೇಳಿಕೆಯಲ್ಲಿ ಇದೇ ಕಂಪನಿ ಇನ್ನೂ ೨೦ ವರ್ಷ ಲೀಜಿಂಗ್ ಮುಂದುವರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ಅನುಮತಿಸಿದೆ. ನಮ್ಮ ದೇನು ಅಭ್ಯಂತರ ವಿಲ್ಲ ಎನ್ನುವ ರೀತಿಯಲ್ಲಿ ಸ್ಪಷ್ಟನೆ ನೀಡಿದರು. ಇದೂ ಸಹ ಚಳವಳಿಗಾರರ ಬೇಡಿಕೆಯನ್ನು ತಿರಸ್ಕರಿಸುವ ದಾಟಿಯಲ್ಲಿತ್ತು. ಒಟ್ಟಾರೆ ಅರಸು ಅವರ ಹೇಳಿಕೆ ಚಳವಳಿಗಾರರ ಒಂದೆರಡು ಪ್ರಮುಖ ಬೇಡಿಕೆಗಳ ಕಡೆ ಗಮನ ಹರಿಸಿತು. ಆದರೆ ಇತರೆ ಸ್ಥಳೀಯ ಬೇಡಿಕೆಗಳನ್ನು ಪ್ರಸ್ತಾಪಿಸಲಿಲ್ಲ. ಸೊಂಡೂರು ರಾಜವಂಶದ ಭೂ ವಿವರ, ದಬ್ಬಾಳಿಕೆ, ಶೋಷಿತ ಆಡಳಿತ ನೀತಿ, ಇವುಗಳ ವಿರುದ್ಧ ಸರ್ಕಾರ ತೀವ್ರ ಕ್ರಮ ಕೈಗೊಳ್ಳುವ ಬಗ್ಗೆ ಅರಸು ಯಾವ ಸುಳಿವನ್ನೂ ನೀಡಲಿಲ್ಲ. ಬಹುಶಃ ಈ ಎಲ್ಲಾ ಕಾರಣಗಳಿಂದಾಗಿ ಸೊಂಡೂರಿನಲ್ಲಿ ನಡೆಯುತ್ತಿದ್ದ ಚಳವಳಿಯ ಮೇಲೆ ಈ ಹೇಳಿಕೆ ವ್ಯತಿರಿಕ್ತ ಪರಿಣಾಮ ಬೀರಿತು. ಇಡಿಯಾದ ಹೇಳಿಕೆ ಅರಸು ಘೋರ್ಪಡೆಯವರನ್ನು ಮರೆ ಮಾಚಿಯಾದರೂ ರಕ್ಷಿಸುತ್ತಿದ್ದಾರೆ ಎನ್ನುವುದು ಗೋಚರಿಸಿತು.

ದೇವರಾಜ ಅರಸರು ಚಳವಳಿ ಬಗೆಗೆ ಪ್ರತಿಕ್ರಿಯಿಸಿದ ನಂತರ, ಮನವಿ ಪತ್ರದಲ್ಲಿ ಕಾಣಿಸಿರುವ ಅಂಶಗಳ ಬಗ್ಗೆ ಸರಕಾರ ಈಗಾಗಲೇ ಕ್ರಮ ಕೈಗೊಂಡಿರುವುದರಿಂದ ಹೋರಾಟವನ್ನು ನಿಲ್ಲಿರುವುದು ಯೋಗ್ಯವೆಂದು ಸಮಾಜವಾದಿ ಪಕ್ಷಕ್ಕೆ ಮನವಿ ಮಾಡಿಕೊಂಡರು. ತಕ್ಷಣ ಕೋಣಂದೂರು ಲಿಂಗಪ್ಪ ಪ್ರತಿಕ್ರಿಯಿಸಿ ”ಸೊಂಡೂರು ಹೋರಾಟದ ಎಲ್ಲಾ ಬೇಡಿಕೆಗಳಿಗೆ ನಿಮ್ಮ ಹೇಳಿಕೆಯಲ್ಲಿ ಉತ್ತರವಿಲ್ಲ ಹಾಗಾಗಿ ಚಳವಳಿ ನಿಲ್ಲಿಸಲು ಆಗುವುದಿಲ್ಲ” ಎಂದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸ್ವತಃ ಅರಸು ಅವರೇ ಸೊಂಡೂರು ವಿಷಯದಲ್ಲಿ ಕೆಲ ಇಕ್ಕಟುಗಳಿಗೆ ಸಿಕ್ಕಿಹಾಕಿಕೊಂಡಿದ್ದರು. ವ್ಯಂಗ್ಯವೆಂದರೆ ಭೂಸುಧಾರಣೆ ಕಾನೂನು ಜಾರಿ ಮಾಡಿದ ಕೀರ್ತಿಗೆ ಪಾತ್ರರಾದ ಅವರಿಗೆ ಈ ಇಕ್ಕಟುಗಳಿಂದ ಹೊರಬಂದು ಚಳವಳಿಯನ್ನು ತೀವ್ರವಾಗಿ ಗಮನಿಸಲು ಸಾಧ್ಯವಾಗಲೇ ಇಲ್ಲ.

ಅರಸು ಮನವಿಯನ್ನು ಕಾಗೋಡು ತಿಮ್ಮಪ್ಪನವರು ವಿರೋಧಿಸಿರು. ಈ ವರದಿಯನ್ನು ತಿಳಿದ ಸಮಾಜವಾದಿ ಪಕ್ಷದ ಕಾರ್ಯದರ್ಶಿ ಎಸ್. ವೆಂಕಟರಾಂ ಅವರು ಮುಖ್ಯಮಂತ್ರಿಗಳಿಗೆ ಸೆಪ್ಟಂಬರ್ ೩೦ರಂದು ‘ಸೊಂಡೂರು ಸತ್ಯಾಗ್ರಹ ನಿಲ್ಲುವುದಿಲ್ಲ. ಬೇಡಿಕೆಗಳ ಈಡೇರಿಕೆಗಾಗಿ ಈ ಚಳವಳಿಯನ್ನು ತೀವ್ರಗೊಳಿಸಲಾಗುವುದು’ ಎಂಬ ತಂತಿ ಸಂದೇಶವನ್ನು ಕಳಿಸಿದರು. ಅದೇ ಹೊತ್ತಿಗೆ ಚಳವಳಿಯ ೧೭ನೇ ದಿನವಾದ ಸೆಪ್ಟಂಬರ್ ೨೮ರಂದು ೨೭ ಜನ, ೧೮ನೇ ದಿನವಾದ ಸೆಪ್ಟಂಬರ್ ೨೯ರಂದು ೨೪ ಜನ ಸತ್ಯಾಗ್ರಹಿಗಳು ಬಂಧಿತರಾಗಿ ಬಿಡುಗಡೆ ಹೊಂದಿ ದರು. ಸೆಪ್ಟಂಬರ್ ೩೦ ರಂದು ಸಂಜೆ ಸೊಂಡೂರಿನಲ್ಲಿ ಬಹಿರಂಗ ಸಭೆ ನಡೆಯಿತು. ಈ ಸಭೆಯ ಮುಖ್ಯ ಉದ್ದೇಶ ಅರಸು ಹೇಳಿಕೆಯನ್ನು ಚಳವಳಿಗಾರರಿಗೆ ತಿಳಿಸುವುದು ಮತ್ತು ಈ ಹೇಳಿಕೆಯನ್ನು ತಿರಸ್ಕರಿಸುವುದೇ ಆಗಿತ್ತು. ಹೋರಾಟದ ನಾಯಕರ ಮುಖ್ಯ ಪ್ರತಿಕ್ರಿಯೆಗಳು ಹೀಗಿದ್ದವು:

ಕೆ.ಜಿಮಹೇಶ್ವರಪ್ಪ : ಮಾನ್ಯ ಮಂತ್ರಿಗಳು ವಿಧಾನಸಭೆಯಲ್ಲಿ ಸೊಂಡೂರಿನ ಬಗ್ಗೆ ಕೊಟ್ಟಿರುವ ಹೇಳಿಕೆಯಲ್ಲಿ ಸಮಸ್ಯೆಯನ್ನು ಪರಿಹರಿಸುವ ಯಾವುದೇ ಸೂತ್ರವಿಲ್ಲ. ನಂದಿಹಳ್ಳಿ, ರಾಧಾಪುರ, ಸಿದ್ಧಾಪುರಗಳಲ್ಲಿ ಜಮೀನನ್ನು ಭೂಮಿ ಇಲ್ಲದವರಿಗೆ ವಿತರಣೆ ಮಾಡುವ ಬೇಡಿಕೆಯನ್ನು ತಾಲ್ಲೂಕು ರೈತ ಸಂಘ ಸರಕಾರದ ಮುಂದೆ ಮಂಡಿಸಿತ್ತು. ಪ್ರಧಾನಿ ಇಂದಿರಾ ಗಾಂಧಿಯವರಿಗೂ ಸಹ ಮನವಿ ಮಾಡಲಾಗಿದೆ. ಈ ಮಧ್ಯೆ ರಾಜ್ಯದ ಅರ್ಥ ಮಂತ್ರಿ ಘೋರ್ಪಡೆ ಈ ಭೂಮಿಯನ್ನು ತಾವು ನಡೆಸುವ ವಿವಿಧ ಸಂಸ್ಥೆಗಳಿಗೆ ಕೇಳಿದ್ದರು. ಆದರೆ ಜನರು ತಮ್ಮ ಬೇಡಿಕೆಗಳ ಬಗ್ಗೆ ಒತ್ತಾಯ ಮಾಡುತ್ತ ಬಂದ ಹಾಗೆ ಇವರು ತಮ್ಮ ಬೇಡಿಕೆಯನ್ನು ಬದಲಿಸಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ, ತೋಟಗಾರಿಕೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದು, ಈ ಬಗ್ಗೆ ಹಿಂದೆ ಅವರು ವಿಧಾನ ಸಭೆ, ಪರಿಷತ್ತಿನಲ್ಲಿ ನೀಡಿರುವ ಹೇಳಿಕೆ ಇದೆ. ಈ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳು ಗಮನಿಸದೆ ಇರುವುದು ವಿಷಾದನೀಯ ಸಂಗತಿ. ಹೀಗಿರುವಾಗ ತಮ್ಮ ಹೋರಾಟ ಸರಕಾರದ ಕಣ್ಣು ತೆರಸುವವರೆಗೆ ನಡೆಯಬೇಕಾದದ್ದು ಅನಿವಾರ್ಯವೆನಿಸುವತ್ತದೆ.

ಎಲಿಗಾರ ತಿಮ್ಮಪ್ಪ : ಶ್ರೀ ಘೋರ್ಪಡೆ ಈ ಕ್ಷೇತ್ರದ ಅರ್ಥ ಸಚಿವರು. ಅಲ್ಲದೆ ಇಲ್ಲಿನ ಮಾಜಿ ಯುವರಾಜರು ಅವರಿಗೆ ತಮ್ಮ ರೈತರ ಬಗ್ಗೆ ಅನುಕಂಪ ಇರಬೇಕು. ಈಗಲೂ ಸಮಯ ಮೀರಿಲ್ಲ. ಸರ್ಕಾರ ಸಮಸ್ಯೆಗಳನ್ನು ಇತ್ಯಾರ್ಥ ಮಾಡುವ ಮನಸ್ಸು ಮಾಡುವುದು ಒಳ್ಳೆಯದು.

ಎಸ್ವೆಂಕಟರಾಂ : ಸೊಂಡೂರಿನ ರಾಜಮನೆತವು ಜನತೆಯ ನೇರ ಸುಲಿಗೆ, ಶೋಷಣೆಯನ್ನು ಇಂದು ಸಂಸ್ಥೆಗಳ ಹೆಸರಿನಲ್ಲಿ ಮುಂದುವರಿದುಕೊಂಡು ಬಂದಿದೆ. ಅದನ್ನು ವಿರೋಧಿಸಬೇಕಾದದ್ದು ಸಮಾಜವಾದಿಗಳ ಕರ್ತವ್ಯ. ಈ ಭಾಗದಲ್ಲಿ ಕುಮಾರಸ್ವಾಮಿ ಭೂಮಿ, ಬೇಟೆಯ ಅರಣ್ಯ, ಈ ಎಲ್ಲಾ ಸವಲತ್ತುಗಳನ್ನು ಹೊಂದುವ ಅಧಿಕಾರವನ್ನು ಘೋರ್ಪಡೆ ಯವರು ಹೊಂದಿದ್ದಾರೆ. ಬಂಡಿ ಹರ್ಲಾಪುರದಲ್ಲಿ ಹರಿಜನರ ಮೇಲೆ ಹಲ್ಲೆ ನಡೆದಾಗ ಅದನ್ನು ಖಂಡಿಸುವುದು ತಪ್ಪಿತಸ್ಥರನ್ನು ಶಿಕ್ಷಿಸುವ ವ್ಯವಸ್ಥೆ ಈ ದೇಶದಲ್ಲಿಲ್ಲ. ಆದುದರಿಂದ ಸಾಮೂಹಿಕ ಸಂಘಟನಾಕಾರರ ಹೋರಾಟ ಸಂಸ್ಯೆಗಳ ಇತ್ಯರ್ಥಕ್ಕೆ ಹಾದಿ.

ಎಸ್.ಎಸ್ಕುಮುಟ : ಮೊದಲು ಮುಖ್ಯಮಂತ್ರಿಗಳು ಚಳವಳಿಯನ್ನು ತಪ್ಪುಸ್ಥಳದಲ್ಲಿ ನಡೆಸುತ್ತಿದ್ದೀರಿ ಎಂದರು, ಈಗ ಚಳುವಳಿಯನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇವರ ಈ ಹೇಳಿಕೆ ನೋಡಿದಾಗ ಅವರಿಗೆ ಸಮಸ್ಯೆಗಳಿವೆ ಎನ್ನುವುದು ತಿಳಿದಿದೆ. ಆದರೆ ಅವರು ಶ್ರೀ ಘೋರ್ಪಡೆಯವರನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸಲ್ಲದು. ರಾಜ್ಯದಲ್ಲಿ ಕುತೂಹಲ ಕೆರಳಿಸಿದ ‘ಸುಮಿತ್ರ’ ದೇಸಾಯಿ ಪ್ರಕರಣದಲ್ಲಿ ಶ್ರೀ ಕಿತ್ತೂರರವರು ನಿರಪರಾಧಿಗಳು ಎಂದು ಅವರೇ ಹೇಳಿದರೂ ಅಪರಾಧ ಸಾಬೀತಾಗಿದೆ. ಕಿತ್ತೂರರ ರಾಜಿನಾಮೆ ಯನ್ನು ಪಡೆದರು. ಒಂದು ಕಡೆ ಕಿತ್ತೂರರಿಗೆ ಶಿಕ್ಷೆ ಏಕೆಂದರೆ ಅವರೊಬ್ಬ ಹರಿಜನ. ಮತ್ತೊಂದು ಕಡೆ ಘೋರ್ಪಡೆಯವರು ಲೆಕ್ಕವಿಲ್ಲದಷ್ಟು ತಪ್ಪುಗಳನ್ನು ಮಾಡಿದರೂ ಆಪಾದನೆಗಳ ಪಟ್ಟಿ ಇದ್ದರೂ ಅವರಿಗೆ ಕುಮಾರಸ್ವಾಮಿ ದೇವಸ್ಥಾನಕ್ಕೆ ವರ್ಷಂಪ್ರತಿ ಕೊಡುತ್ತಿದ್ದ ೩೬,೦೦೦ ರೂಗಳನ್ನು ೪೬,೦೦೦ ರೂಗಳಿಗೆ ಏರಿಸಲಾಗಿದೆ. ಇದಾವ ನ್ಯಾಯ?

ಯಜಮಾನ್ ಶಾಂತರುದ್ರಪ್ಪ : ಈ ಅಹಿಂಸಾತ್ಮಕ ಹೋರಾಟ ಮುಂದುವರಿದು ಕುಮಾರಸ್ವಾಮಿ ದೇವಸ್ಥಾನ ರಾಜರ ಹಿಡಿತದಿಂದ ಬಿಡುಗಡೆಯಾಗಲಿ. ಭೂಹೀನರ ಆಸೆ ಈಡೇರಲಿ. ಅದಕ್ಕಾಗಿ ಸಹಕರಿಸಿ (‘ಕನ್ನಡ ಪ್ರಭ’ ೫.೧೦.೧೯೭೩)

ಈ ಅಭಿಪ್ರಾಯಗಳನ್ನು ಗಮನಿಸಿದರೆ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ. ಮುಖ್ಯಮಂತ್ರಿಗಳು ಘೋರ್ಪಡೆಯವರನ್ನು ರಕ್ಷಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಬೇಸರವಿದೆ. ವೆಂಕಟರಾಂ ಪ್ರಸ್ತಾಪಿಸುವ ಹರ್ಲಾಪುರದ ದಲಿತರ ಪ್ರಕರಣ, ಕುಮಟರವರು ನೆನಪಿಸುವ ಸುಮಿತ್ರಾ ದೇಸಾಯಿ ಪ್ರಕರಣ ರಾಜಕೀಯ ತಂತ್ರ ಪ್ರತಿತಂತ್ರದ ಸಿದ್ಧ ಸೂತ್ರದಂತೆ ಕಂಡರೂ ಸರ್ಕಾರದ ವೈಫಲ್ಯವನ್ನು ತೋರಿಸುವ ಪ್ರಕಣಗಳಾಗಿ ಬಳಸಿದ್ದಾರೆ. ಅವುಗಳಮೂಲಕ ಸೊಂಡೂರು ಭೂ ಹೋರಾಟವನ್ನು ಕೇವಲ ರಾಜಕೀಯ ಹೊಂದಾಣಿಕೆಯಿಂದ ನಿಲ್ಲಿಸಲಾಗದು ಎನ್ನುವ ಸ್ಪಷ್ಟ ನಿರ್ಧಾರವಿತ್ತು. ಯಜಮಾನರು ಮೂಲತಃ ಗಾಂಧಿವಾದಿಗಳಾಗಿದ್ದರಿಂದ ಅಹಿಂಸಾತ್ಮಕ ಹೋರಾಟದಲ್ಲೇ ನಂಬಿಕೆ ಇರಿಸಿದ್ದರು. ತಿಮ್ಮಪ್ಪನವರ ಹೇಳಿಕೆಯಲ್ಲಿ ಘೋರ್ಪಡೆಯವರು ಬಗೆಗೆ ಗೌರವ ಮತ್ತು ವಿನಯದಿಂದ ರೈತರ ಬಗ್ಗೆ ಅವರು ಅನುಕಂಪ ತೋರಬೇಕು ಎನ್ನುವ ಪ್ರತಿಕ್ರಿಯೆಯನ್ನು ಮಾಡುತ್ತಾರೆ. ರಾಜವಂಶದ ಪರವಾಗಿದ್ದವರೂ ಅರಸು ಹೆಳಿಕೆಯನ್ನು ಅಭಿನಂದಿಸಿದರು. ಅಕ್ಟೋಬರ್ ೪ರಂದು ಸಂಯುಕ್ತ ಕರ್ನಾಟಕ ದಲ್ಲಿ ಪತ್ರಿಕಾ ಹೇಳಿಕೆ ಪ್ರಕಟವಾಯಿತು. ಸೊಂಡೂರು ತಾಲೂಕು ಮಂಡಳಿ ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪನವರು ‘ಮಾನ್ಯ ದೇವರಾಜ ಅರಸು ಅವರು ಇನಾಂ ರದ್ದಿಯಾತಿ ವಿಧೇಯಕ ಮಂಡಸಿ ಚಳವಳಿಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಕ್ಕೆ ಅಭಿನಂದನೆಗಳು. ಈ ಸಂದರ್ಭದಲ್ಲಿ ಕರ್ನಾಟಕ ಸಮಾಜವಾದಿ ಪಕ್ಷವು ನಡೆಸಿದ ಪ್ರಯತ್ನಕ್ಕೆ ಐಕ್ಯದಿಂದ ಜೊತೆಯಾದ ಸೊಂಡೂರಿನ ಜನರಿಗೂ ನಾವು ಅಭಿನಂದಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಇದು ಅರಸು ಹೇಳಿಕೆ ರಾಜಪರವೇ ಇತ್ತು. ಎನ್ನುವುದರ ಸಾಕ್ಷಿ.

ಹೋರಾಟವು ಸುತ್ತಮುತ್ತಲ ಹಳ್ಳಿಗಳಿಗೆ ವ್ಯಾಪಿಸಿತು. ಇದರಿಂದಾಗಿ ಆಯಾ ಹಳ್ಳಿಯ ಗುಂಪೊಂದು ಸೊಂಡೂರಿಗೆ ಬಂದು ಚಳುವಳಿಯಲ್ಲಿ ಭಾಗವಹಿಸುತ್ತಿದ್ದವು. ಸೊಂಡೂರು ಸಮೀಪದ ದೌಲತ್ ಪುರವು (ಮೂಲ ಹೆಸರು ಕೋನಾಪುರ) ೧೬೮ ಮನೆಗಳಿರುವ ಗ್ರಾಮ (೧೯೭೩ರಲ್ಲಿ). ಒಟ್ಟು ೯೮೪ ಜನರಿರುವ ಈ ಊರಿನ ರೈತರು ಚಳುವಳಿಯ ೧೯ನೇ ದಿನ ಸೆಪ್ಟಂಬರ್ ೩೦ರಂದು ಸೊಂಡೂರಿನಲ್ಲಿ ಸತ್ಯಾಗ್ರಹ ಮಾಡಿದರು. ದೌಲತ್ ಪುರದ ಒಟ್ಟು ೪೦ ಸತ್ಯಾಗ್ರಹಿಗಳು ೬ ಮಹಿಳೆಯರು ಮಕ್ಕಳೊಂದಿಗೆ ಭಾಗವಹಿಸಿದರು. ಈ ಊರಿನ ಪಂಚಾಯ್ತಿ ಬೋರ್ಡ್ ಸದಸ್ಯ ಆರ್. ಶಿವಮೂರ್ತಿ. ಪ್ರಮುಖ ರೈತರಾದ ವಿ.ನಾಗಪ್ಪ ಮತ್ತು ಕಂಪ್ಲಿ ಇಮಾಮ್ ಸಾಬ್ ಇವರ ನಾಯಕತ್ವದಲ್ಲಿ ತಾಲೂಕು ಕಛೇರಿ ಮುಂದೆ ಪಿಕೆಟಿಂಗ್ ಮಾಡಲು ಯತ್ನಿಸಿದಾಗ ಪೊಲೀಸರು ದಸ್ತಗಿರಿ ಮಾಡಿ ನಂತರ ಬಿಡುಗಡೆ ಮಾಡಿದರು. ಭಾಗವಹಿಸಿದ ೬ ಮಹಿಳೆಯರ ವಿವರ ಸಿಕ್ಕಿಲ್ಲ. ಈ ಹೊತ್ತಿಗಾಗಲೇ ಚಳವಳಿಯಲ್ಲಿ ದಸ್ತಗಿರಿ ಆದವರು ಒಟ್ಟು ೫೫೯ ಜನ. ೨೦ ನೇ ದಿನ ಸೊಂಡೂರು ತಾಲೂಕು ರೈತ ಸಂಘದ ಕಾರ್ಯದರ್ಶಿ ಜಿ.ನರಸಿಂಹರಾವ್ ಅವರ ನಾಯಕತ್ವದಲ್ಲಿ ೨೪ ಜನ ಸತ್ಯಾಗ್ರಹಿಗಳು ತಾಲೂಕು ಕಛೇರಿ ಮುಂದೆ ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾಗಿ ಬಿಡುಗಡೆಯಾದರು.

ಈ  ಮೊದಲೇ ಜಾರ್ಜ್ ಫರ್ನಾಂಡಿಸ್ ಸೊಂಡೂರು ಚಳವಳಿಯಲ್ಲಿ ಭಾಗವಹಿಸುವವರ ಪಟ್ಟಿ ಕೊಟ್ಟಿದ್ದರು. ಇದರಲ್ಲಿ ಮೊದಲಿಗೆ ಬಂದವರೆಂದರೆ ಮಹಾರಾಷ್ಟ್ರದ ಸೋಷಲಿಸ್ಟರು. ಮುಂಬೈನ ಮುನಿಸಿಪಾಲ್ ಕಾರ್ಪೋರೇಟರಾದ ಏಕನಾಥ ಥೋರ್ಪಡೆಯವರ ನಾಯಕತ್ವದಲ್ಲಿ ಮಹಾರಾಷ್ಟ್ರದ ಸೋಷಲಿಸ್ಟ್ ಪಕ್ಷದ ಜಾಥಾ ಅಕಟೋಬರ್ ೩.೧೯೭೩ರಂದು ಸೊಂಡೂರು ತಲುಪಿತು. ಮರುದಿನ ಅಂದರೆ ಅಕ್ಟೋಬರ್ ೪ರಂದು ಈ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿತು. ಈ ಜಾಥಾದೊಂದಿಗೆ ಇಲ್ಲಿನ ರೈತರು ಸ್ಥಳೀಯ ಕಾರ್ಯಕರ್ತರು ಸತ್ಯಾಗ್ರಹಿಗಳು ಭಾಗವಹಿಸಿದರು. ಆ ದಿನದಂದು ಏಕನಾಥ ಥೋರ್ಪಡೆ ಮತ್ತು ರಾಜ್ಯ ಸೋಷಲಿಸ್ಟ್ ಪಾರ್ಟಿ ಖಚಾಂಚಿ ದಯಾನಂದ ನಾಡಕರ್ಣಿಯವರನ್ನು ತಾಲ್ಲೂಕು ಕಛೇರಿಯ ಮುಂದೆ ದಸ್ತಗಿರಿ ಮಾಡಲಾಯಿತು. ನಾಗಪ್ಪನವರು ಈ ಸಂದರ್ಭ ನೆನಪಿಸಿಕೊಳ್ಳುತ್ತಾ ‘ಮಹಾರಾಷ್ಟ್ರದಿಂದ ನಮ್ಮ ಸಮಸ್ಯೆ ಪರಿಹರಿಸ್ಲಿಕ್ಕೆ ಬಂದಾರ ನಾವ್ಯಾಕ ಇನ್ನು ಎದುರಬೇಕು ಏನೇ ಆಗ್ಲಿ.. ಭೂಮಿ ನಮಗೆ ಸಿಗೋವರ್ಗು ಹೋರಾಟ ನಿಲ್ಲಿಸಬಾರ್ದು ಅಂತ ಚಳುವಳೀಲಿ ಭಾಗವಹಿಸಿದ ರೈತರು ಮಾತಾಡಿಕೊಳ್ತಿದ್ದರು’ ಎನ್ನುತ್ತಾರೆ.

ಹೋರಾಟದಲ್ಲಿ ಭಾಗವಹಿಸಲು ಬಿಹಾರದಿಂದ ಶ್ರೀಮತಿ ಸಂತೋಷಿತಿಗಾ ಮತ್ತು ಸೂರಜ್ ಕುಮಾರ್ ಠಾಕೂರ್ ಅಕ್ಟೋಬರ್ ೬ರಂದು ಇಲ್ಲಿಗೆ ಬಂದರು. ಸಂತೋಷಿ ತಿಗಾರವರು ರಾಂಚಿ ನಗರ ಸೋಷಲಿಸ್ಟ್ ಪಾರ್ಟಿಯ ಅಧ್ಯಕ್ಷರು, ಬಿಹಾರಿನ ಸಮಾಜವಾದಿ ಯುವಜನ ಸಭಾದ ಸಂಚಾಲಕರಾಗಿದ್ದರು. ಸೂರಜ್ ಕುಮಾರ್‌ರು ಸಮಾಜವಾದಿ ಯುವಜನ ಸಭಾದ ಬಿಹಾರ ಶಾಖೆಯ ಮುಖ್ಯ ಕಾರ್ಯಕರ್ತರಾಗಿದ್ದರು. ಅಕ್ಟೋಬರ್ ೮ರಂದು ಇವರ ನಾಯಕತ್ವದಲ್ಲಿ ಮೆರವಣಿಗೆ ನಡೆಯಿತು. ಇದರಲ್ಲಿ ಮೂರು ನೂರಕ್ಕೂ ಹೆಚ್ಚು ಜನ ಸತ್ಯಾಗ್ರಹಿಗಳು ಸೇರಿದ್ದರೆಂದು ಕೆ.ಜಿ. ಮಹೇಶ್ವರಪ್ಪನವರು ಹೇಳುತ್ತಾರೆ. ಘೋಷಣೆಗಳು. ಕಿರುಚಾಟ ತೀವ್ರವಾಗಿ ಮೆರವಣಿಗೆ ತಾಲ್ಲೂಕು ಕಛೇರಿಯ ಮುಂದೆ ತಲುಪಿದಾಗ ಸಂತೋಷಿ ತಿಗಾರವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ‘ಸೊಂಡೂರಿನಲ್ಲಿ ನಡೆಯುತ್ತಿರುವ ಈ ಹೋರಾಟವು ಜನತೆಯ ಹೋರಾಟವೆಂದೂ’ ನಿಮ್ಮ ಹೋರಾಟಕ್ಕೆ ಜನತೆಯ ಬೆಂಬಲವಿದೆಯೆಂದೂ ಹೇಳಿದರಲ್ಲದೆ ಭೂಮಿಯಲ್ಲಿ ದುಡಿಯುವ ರೈತ, ಗಣಿಯಲ್ಲಿ ದುಡಿ ಯುವ ಕಾರ್ಮಿಕ ಈ ದೇಶದ ಶಿಲ್ಪಗಳೆಂದೂ, ಅವರ ಹಕ್ಕುಗಳು ಈಡೇರಬೇಕೆಂದೂ ಕರೆಯಿತ್ತರು. ಆದಿನ ಜೆ.ಎಚ್. ಪಟೇಲರು, ಎಸ್. ವೆಂಕಟರಾಂ, ಎಸ್.ಎಸ್. ಕುಮುಟಾರವರು ಮೆರವಣಿಗೆಯ ಜೊತೆ ಇದ್ದರು. ಈವರೆಗೆ ೬೫೦ ಜನ ಸತ್ಯಾಗ್ರಹಿಗಳು ಭಾಗಿಯಾಗಿದ್ದಾರೆಂದು ಸತ್ಯಾಗ್ರಹದ ಪ್ರಮುಖ ಬೆಳವಣಿಗೆಯನ್ನು ಪಟೇಲರು ಸಂತೋಷಿತಿಗಾರವರಿಗೆ ವಿವರಿಸಿದರು. ಅಕ್ಟೋಬರ್ ೯ರಂದು ಕೃಷ್ಣಾನಗರದ ಮಾಳಿಗೆ ಮನೆ ಮಾರಪ್ಪನವರ ನೇತೃತ್ವದಲ್ಲಿ ೩೫ ಜನ ರೈತರು ತಾಲೂಕು ಕಛೇರಿಯ ಮುಂದೆ ಪಿಕೆಟಿಂಗ್ ಮಾಡುವಾಗ ಬಂಧಿತರಾಗಿ ಬಿಡುಡಗೆ ಯಾದರು.

ನಂದಿಹಳ್ಳಿಯ ಬಳಿ ಇರುವ ೨೪೩ ಎಕರೆ ಜಮೀನನ್ನು ಸ್ನಾತಕೋತ್ತರ ಕೇಂದ್ರಕ್ಕೆ ನೀಡುವುದಾಗಿ ನಿಗದಿಯಾಗಿತ್ತು. ಈ ಬಗ್ಗೆ ತಹಶೀಲ್ದಾರ ಸಂಗಪ್ಪಾ ಶೆಟ್ಟಿಯವರು ಸರಕಾರದ ಪರವಾಗಿ ಭೂ ವಿವರವನ್ನು ನಿಡಿದ್ದರು. ಈ ಪ್ರಕರಣ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುತ್ತಿದ್ದ ಕಾರಣ ಅಲ್ಲಿಯ ಧಾರವಾಡದ ಸೋಷಲಿಸ್ಟ್ ಪಾರ್ಟಿ ಕಾರ್ಯಕರ್ತರು ಜಾಗೃತರಾದರು. ಅಕ್ಟೋಬರ್ ೧೦ರಂದು ಕರ್ನಾಟಕ ರಾಷ್ಟ್ರೀಯ ಸೋಷಲಿಸ್ಟ್ ಪಾರ್ಟಿ ಮತ್ತು ಧಾರವಾಡ ಜಿಲ್ಲಾ ಸೊಷಲಿಸ್ಟ್ ಪಾರ್ಟಿಯ ಕಾರ್ಯಕರ್ತರು ಒಗ್ಗೂಡಿ ಮತ ಪ್ರದರ್ಶನ ಮಡಿದರು. ಈ ಪ್ರದರ್ಶನದ ನೇತೃತ್ವವನ್ನು ಧಾರವಾಡ ಜಿಲ್ಲಾ ಸೋಷಲಿಸ್ಟ್ ಪಾರ್ಟಿ ಅಧ್ಯಕ್ಷ ಶ್ರೀ ಗಂಗಾಧರ ಪದಕಿ, ಕಾರ್ಯದರ್ಶಿ ರಾಚಪ್ಪ ಬೆಟದೂರು ಹಾಗೂ ಹಿರಿಯ ಸಮಾಜವಾದಿ ನೀಲಗಂಗಯ್ಯ ಪೂಜಾರ ಅವರು ವಹಿಸಿದ್ದರು. ಈ ಮತ ಪ್ರದರ್ಶನ ಸೊಂಡೂರಿನಲ್ಲಿ ನಡೆಯುತ್ತಿರುವ ರೈತರ ಚಳವಳಿಗೆ ಬೆಂಬಲ ಸೂಚಿಯೂ ಆಗಿತ್ತು. ಅಂತೆಯೇ ಕರ್ನಾಟಕದ ಇತರ ಕಡೆಗಳಲ್ಲಿರುವ ಸಮಾಜವಾದಿ ಕಾರ್ಯಕರ್ತರನ್ನು ಜಾಗೃತ ಗೊಳಿಸುವ ಜಾಥಾವೂ ಕೂಡ. ಒಂದು ವಿಶ್ವವಿದ್ಯಾಲಯವು ಜನಾಭಿಪ್ರಾಯದ ವಿರುದ್ಧ ಸ್ಥಾಪಿಸ ಹೊರಟ ಸ್ನಾತಕೋತ್ತರ ಕೇಂದ್ರದ ಸ್ಥಳ ಬದಲಾವಣೆಗೆ ಕ್ರಮವಹಿಸಲು ಕುಲಪತಿಗಳಾದ ಎಂ. ಜಯಲಕ್ಷ್ಮಮ್ಮಣ್ಣಿಯವರಿಗೆ ಮನವರಿಕೆ ಪತ್ರ ನೀಡಿದರು. ಈ ಮತ ಪ್ರದರ್ಶನದಲ್ಲಿ ಭಾಗವಹಿಸಿದ ಇತರೆಂದರೆ ಯಜಮಾನ ಶಾಂತರುದ್ರಪ್ಪ ‘ಕುರುಕ್ಷೇತ್ರ’ ಪತ್ರಿಕೆಯ ಸಂಪಾದಕ ಬಾಬುರೆಡ್ಡಿ ತುಂಗಳ್, ಸಾಗರದ ಸೋಷಲಿಸ್ಟ್ ಪಾರ್ಟಿಯ ಕಾರ್ಯದರ್ಶಿ ಐ.ಡಿ. ರಾಮಚಂದ್ರಪ್ಪ, ಬಿ.ರಮೇಶ್,  ರಾಜ್ಯ ಸಮಾಜವಾದಿ ಯುವಜನ ಸಭಾದ ಪ್ರಭಾಕರ ಕಾಳೆ ಜಯಂತ್, ‘ಆಂದೋಲನ’ ಪತ್ರಿಕೆಯ ರಾಜಶೇಖರ ಕೋಟಿ.

ತೋಟಗಾರಿಕೆ ಕಛೇರಿ ಎದುರು ಸತ್ಯಾಗ್ರಹ

ಸೊಂಡೂರಿನಿಂದ ೮ ಕಿ.ಮೀ. ದೂರವಿರುವ ರಾಘಾಪುರದಲ್ಲಿ ಚಳವಳಿ ಆರಂಭಕ್ಕಿಂತ ಮುಂಚಿನ ಮೂರು ವರ್ಷದಿಂದಲೂ ತಂಬಾಕು ಕಂಪನಿ ಕೆಲಸವನ್ನು ನಿಡುಗಡೆ ಮಾಡಿತ್ತು. ಹಾಗಾಗಿ ಅಲ್ಲಿನ ಫಲವತ್ತಾದ ೧೫೨ ಎಕರೆ ಭೂಮಿ ತಂಬಾಕು ಕಂಪನಿಯ ಹೆಸರಿನಲ್ಲಿ ಸಾಗು ಮಾಡದೆ ರಾಜರ ಹದ್ದುಬಸ್ತಿನಲ್ಲಿತ್ತು. ೧೯೪೮ರ ಜಾಹಿರುನಾಮೆಯಲ್ಲಿ ಈ ಭೂಮಿ ೧೫೦೦ ಎಕರೆ ಎಂದಿದೆ. ಆದರೆ ೧೯೭೩ರ ಹೊತ್ತಿಗೆ ಅದು ೧೫೨ ಎಕರೆಗೆ ಹೇಗೆ ಇಳಿಯಿತೋ ತಿಳಿಯದು. ಸೆಪ್ಟಂಬರ್ ೧೦ರಂದು ಸೊಂಡೂರಿನ ತಹಶೀಲ್ದಾರ ಸಂಗಪ್ಪಾ ಮಟ್ಟಿ ಭೂ ವಿವರ ನೀಡುವಾಗ ರಾಘಾಪುರದ ಬಳಿಯಿರುವ ೧೫೨ ಎಕರೆ ಜಮೀನು ಸರಕಾರದ ವಶದಲ್ಲಿದೆ, ಈ ಭೂಮಿಯನ್ನು ತೋಟಗಾರಿಕೆ ಫಾರ್ಮ್ ಮತ್ತು ತರಬೇತಿ ಕೇಂದ್ರಕ್ಕಗಿ ಕಾಯ್ದಿರಿಸಲಾಗಿದೆ ಎಂದಿದ್ದರು. ತಂಬಾಕು ಕಂಪನಿಯ ಈ ಭೂಮಿಯನ್ನು ಈಗ ಯೋಜಿಸಿದಂತೆ ತೋಟಗಾರಿಕೆ ಪ್ರಾತ್ಯಕ್ಷಿತೆಗಾಗಿ ಉಪಯೋಗಿಸದೆ ಅದನ್ನು ಭೂರಹಿತರಿಗೆ ಹಂಚಬೇಕೆಂಬುದು ಚಳವಳಿಗಾರರ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಲಿಕ್ಕಾಗಿಯೇ ಅಕ್ಟೋಬರ್ ೧೫ರಂದು ಚಳವಳಿಗಾರರು ಇಲ್ಲಿಯ ತೋಟಗಾರಿಕೆ ಕಛೇರಿ ಎದುರು ಮತ ಪ್ರದರ್ಶನ ನಡೆಸಿದರು. ಕಛೇರಿಯ ಒಳಗಡೆ ಹೋಗಲು ಪ್ರಯತ್ನಿಸಿದ ೨೩ ಜನ ಸತ್ಯಾಗ್ರಹಿಗಳನ್ನು ಬಂಧಿಸಲಾಯಿತು.

ಕರ್ನಾಟಕ ಸಮಾಜವಾದಿ ಪಕ್ಷದ ಜೊತೆ ಹೀರಾಚಂದ ವಾಗ್ಮೋರೆಯವರು ಚಳವಳಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ”ಇಂದಿನ ಸರಕಾರ ತಾನು ಸಾರ್ವತ್ರಿಕ ಚುನಾವಣೆಯ ಕಾಲಕ್ಕೆ ಇತ್ತ ವಚನವನ್ನು ಪಾಲಿಸುವಲ್ಲಿ ವಿಫಲವಾಗಿದೆ. ಜನರು ಚಳವಳಿಯ ಮೂಲಕ ತಮ್ಮ ಪ್ರತಿನಿಧಿಗಳು ಮತ್ತು ಸರಕಾರದ ಮೇಲೆ ಹಿಡಿತ ಇಟ್ಟುಕೊಳ್ಳಬೇಕೆಂದು” ಹೇಳಿದರು. ಆನಂತರ ಪೊಲೀಸರ ಕಾವಲು ಮುರಿದು ಕಛೇರಿಯ ಒಳಗೆ ನುಗ್ಗಲು ಹೋದಾಗ ಬಂಧಿಸಲ್ಪಟ್ಟಿದ್ದ ಸತ್ಯಾಗ್ರಹಿಗಳನ್ನು ಕಛೇರಿಯ ವೇಳೆ ಮುಗಿದ ನಂತರ ಪೊಲೀಸರು ಬಿಡುಗಡೆ ಮಾಡಿದರು.

ಪ್ರತಿದಿನ ನಡೆಯುತ್ತಿರುವ ಚಳವಳಿಯಲ್ಲಿ ಹೊರಗಿನಿಂದ ಬಂದವರು ನಾಯಕತ್ವ ವಹಿಸುತ್ತಿದ್ದರು. ಅಕ್ಟೊಂಬರ್ ೧೮ರಂದು ಸೋಷಲಿಸ್ಟ್ ಪಾರ್ಟಿಯ ಕರ್ನಾಟಕ ಶಾಖೆಯ ಜಂಟಿ ಕಾರ್ಯದರ್ಶಿ ಬಿ.ಎಸ್. ಚಂದ್ರಶೇಖರ್ ಅವರು ಚಳುವಳಿಯ ನಾಯಕತ್ವ ವಹಿಸಿದ್ದರು. ಇವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸಮಾಜವಾದಿ ಪಕ್ಷವನ್ನು ಬೆಳೆಸಲು ಸಮಾನ ಆಸಕ್ತರ ಜೊತೆ ಸಾರ್ವಜನಿಕ ಸಮಸ್ಯೆಗಳ ಈಡೇರಿಕೆಗಾಗಿ ಜನಪರ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ಚಳವಳಿಯಲ್ಲಿ ಸೊಂಡೂರು ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ಜೆ. ಬಸವನ ಗೌಡ, ತ್ಯಾಗದಾಳು ಪಂಚಾಯ್ತಿ ಸದಸ್ಯ ಲತೀಫ್ ಸಾಹೇಬ್, ಧಾರವಾಡ ಜಿಲ್ಲೆಯ ಬಿ.ಟಿ. ಮಾಳಗಿ ಮನಿ ಮತ್ತು ಜೆ.ಎಚ್. ಪಟೇಲರನ್ನು ಒಳಗೊಂಡಂತೆ ೩೧ ಜನ ಸತ್ಯಾಗ್ರಹಿಗಳೊಂದಿಗೆ ತಾಲೂಕು ಕಛೇರಿ ಮುಂದೆ ಪಿಕೆಂಟಿಂಗ್  ಮಾಡುಲು ಮುಂದಾದಾಗ ಅವರನ್ನೆಲ್ಲ ಪೊಲೀಸರು ಬಂಧಿಸಿದರು. ಇದಕ್ಕೂ ಮುನ್ನ ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಹೊರಟು ತಾಲ್ಲೂಕು ಕಛೇರಿ ತಲುಪಿದರು. ಅಲ್ಲಿ ಬಿ.ಎಸ್. ಚಂದ್ರಶೇಖರ್ ಚಳವಳಿಯ ಬಗೆಗೆ ಮಾತನಾಡಿದರು. ಎಲಿಗಾರ ತಿಮ್ಮಪ್ಪನವರು ಈವರೆಗೂ ನಡೆದ ಚಳುವಳಿಯ ವರದಿಯನ್ನು ವಿವರಿಸಿದರು. ಆನಂತರ ಒಮ್ಮತದಿಂದ ”ಸರಕಾರ ಸಮಜವಾದಿ ಪಕ್ಷ ಹಾಗೂ ರೈತ ಸಂಘದೊಂದಿಗೆ ಮಾತನಾಡಿ ರೈತರ ಬೇಡಿಕೆಗಳನ್ನು ಪರಿಹರಿಸುವವರೆಗೆ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ” ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಸೋಷಲಿಸ್ಟ್ ಪಾರ್ಟಿಯ ಪ್ರಭಾವಿ ಕಾರ್ಯಕರ್ತರು, ಶಾಸಕರು ಆದ ಕಾಗೋಡು ತಿಮ್ಮಪ್ಪನವರು ಅಕ್ಟೋಬರ್ ೨೧ರಂದು ಚಳವಳಿಯಲ್ಲಿ ಭಾಗವಹಿಸಿದರು. ತಿಮ್ಮಪ್ಪನವರು ಚಳವಳಿಯಲ್ಲಿ ನೇರವಾಗಿ ಬಾಗವಹಿಸುವ ಜೊತೆಗೆ ವಿಧಾನ ಸಭೆಯಲ್ಲಿ ಇಲ್ಲಿನ ಹೋರಾಟದ ಬಗೆಗೆ ಮುಖ್ಯಮಂತ್ರಿಗಳಿಗೆ ಇತರೆ ಕಾಂಗ್ರೆಸ್ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ತುಂಬಾ ಕಾಳಜಿ ವಹಿಸಿದ್ದರು. ಅಂದಿನ ಚಳವಳಿಯಲ್ಲಿ ನೂರು ಜನ ಸತ್ಯಾಗ್ರಹಿಗಳು ಮೆರವಣಿಗೆ ಘೋಷಣೆಯೊಂದಿಗೆ ತಾಲೂಕು ಕಛೇರಿ ತಲುಪಿದರು. ಕಾಗೋಡು ತಿಮ್ಮಪ್ಪನವರು ಮಾತನಾಡಿ ‘ಸೋಷಲಿಸ್ಟ್ ಪಾರ್ಟಿಯವರು ಸೊಂಡೂರಿನ ಪ್ರಗತಿಗೆ ಅಡ್ಡಿ ಬರುತ್ತಿದ್ದಾರೆಂದು ಕೆಲವರು ಅಪಪ್ರಚಾರ ನಡೆಸಿದ್ದಾರೆ. ಈ ಭಾಗದ ಪ್ರಗತಿಗೆ ನಾವೆಂದೂ ಅಡ್ಡ ಬಂದಿಲ್ಲ, ಅದಕ್ಕೆ ನಾವೂ ಹೋರಾಡಲು ಸಿದ್ಧ. ನಂದಿಹಳ್ಳಿಯಲ್ಲಿ ಸ್ಥಾಪಿಸಬೇಕೆಂದಿರುವ ತಾಂತ್ರಿಕ ಶಿಕ್ಷಣ ಸ್ನಾತಕೋತ್ತರ ಕೇಂದ್ರ ಇಲ್ಲಿಯೇ ಆಗಲಿ, ಆದರೆ ಅದು ಫಲವತ್ತಾದ ತಂಬಾಕು ಜಮೀನಿನಲ್ಲಿ ಆಗದೆ ಸಾಗುವಳಿಗೆ ಯೋಗ್ಯವಲ್ಲದ ಕಡೆ ಸ್ಥಾಪನೆ ಆಗಲಿ ಎಂಬುದೇ ನಮ್ಮ ವಾದ. ಇದನ್ನು ಕರ್ನಾಟಕದ ಜನತೆ, ಸರಕಾರ ಮತ್ತು ವಿಶ್ವವಿದ್ಯಾಲಯ ಅರಿಯಬೇಕು’ ಎಂದರು. ಆನಂತರ ಚಳವಳಿಗಾರರನ್ನು ಬಂಧಿಸಿ ಸಂಜೆಗೆ ಬಿಡುಗಡೆ ಮಾಡಿದರು.

ಚಳವಳಿಯಲ್ಲಿ ಭಾಗವಹಿಸಿದ ಸೋಷಲಿಸ್ಟ್‌ರನ್ನು ಟೀಕಿಸುವುದು ಕಾಂಗ್ರೆಸ್ ಸರ್ಕಾರದ ಮತ್ತು ರಾಜಮನೆತನದ ಪರವಾಗಿದ್ದವರ ಕೆಲಸವಾಗಿತ್ತು. ಹಾಗಾಗಿಯೇ ಸೋಷಲಿಸ್ಟರು ಸೊಂಡೂರಿನ ಪ್ರಗತಿಗೆ ಅಡ್ಡಿಯಾಗುತ್ತಿದ್ದಾರೆ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಲ್ಲಿನ ಜನತೆಗೆ ಇದು ಸಮಸ್ಯೆಯೇ ಅಲ್ಲ, ಸೋಷಲಿಸ್ಟರ್ ಇದನ್ನೊಂದು ಸಮಸ್ಯೆಯಾಗಿಸುತ್ತಿದ್ದಾರೆ. ಇಂತಹ ಟೀಕೆಗಳು ಚಳುವಳಿಯ ಉದ್ದಕ್ಕೂ ನಡೆದಿದ್ದವು. ಈ ಟೀಕೆಗಳಿಗೆ ಸೋಷಲಿಸ್ಟ್ ಕಾರ್ಯಕರ್ತರು ಉತ್ತರಿಸುತ್ತಿದ್ದರು. ಈ ಕಾರಣಕ್ಕಾಗಿಯೇ ತಿಮ್ಮಪ್ಪನವರು ಸೋಷಲಿಸ್ಟ್ ರನ್ನು ಸಮರ್ಥಿಸಿಕೊಂಡರು.

ಅಕ್ಟೋಬರ್ ೧೯ರಂದು ನಡೆದ ಚಳುವಳಿಯ ೩೧ನೇ ತಂಡದ ನಾಯಕತ್ವವನ್ನು ಆಂಧ್ರ ಪ್ರದೇಶದ ಉರುವಕೊಂಡ ಕ್ಷೇತ್ರದ ಸ್ವತಂತ್ರ ಶಾಸಕ ಬುಕ್ಕಟ್ಲ ಬಸಪ್ಪನವರು ವಹಿಸಿದ್ದರು. ಕೆ.ಜಿ. ಮಹೇಶ್ವರಪ್ಪ, ಎಸ್. ಎಸ್. ಕುಮುಟ, ಬಳ್ಳಾರಿ ಜಿಲ್ಲಾ ಸಮಾಜವಾದಿ ಪಕ್ಷದ ಕಾರ್ಯದರ್ಶಿ ಆರ್.ವಿ. ದೇಸಾಯಿ, ವೈ.ತಿಮ್ಮಪ್ಪ, ಜಿ.ನರಸಿಂಗರಾವ್ ಇವರನ್ನು ಒಳ ಗೊಂಡಂತೆ ೪೫ ಜನ ಸತ್ಯಾಗ್ರಹಿಗಳೊಂದಿಗೆ ಸೋಷಲಿಸ್ಟ್ ಪಾರ್ಟಿ ಕಛೇರಿಯಿಂದ ಹೊರಟ ಮೆರವಣಿಗೆ ತಾಲ್ಲೂಕು ಕಛೇರಿ ತಲುಪಿತು. ಬಿ. ಬಸಪ್ಪನವರು ಮಾತನಾಡುತ್ತ ‘ನಂದಿಹಳ್ಳಿಯಲ್ಲಿ ಸ್ಥಾಪಿಸಬೇಕೆಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ಕೇಂದ್ರದ ಪ್ರದೇಶವನ್ನು ವೀಕ್ಷಿಸಿದ್ದೇನೆ. ಇದು ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಇದನ್ನು ಭೂಹೀನ ರಿಗೆ ಹಂಚಬೇಕು. ಆಂಧ್ರ ಪ್ರದೇಶದ ವಿ.ಪಿ.ಎ.ಜಿ. ರಾಜಮನೆತನವು ೧೦ ಕೋಟಿ ಬೆಲೆ ಬಾಳುವ ಅರಮನೆಯಲ್ಲಿ ಶಾಲೆಯೊಂದಕ್ಕೆ ಬಿಟ್ಟುಕೊಟ್ಟಂತೆ, ಶ್ರೀ ಎಂ.ವೈ. ಘೋರ್ಪಡೆ ಯವರು ಜನಾನುರಾಗಿಗಳಾಗಿದ್ದಲ್ಲಿ ಸೊಂಡೂರಿನ ತಮ್ಮ ಅರಮನೆಯನ್ನು ಈ ಶಾಲೆಗೆ ಬಿಟ್ಟುಕೊಡಬಾರದೇಕೆಂದು ಪ್ರಶ್ನಿಸುತ್ತೇನೆ’ ಎಂದರು. ಈವರೆಗೂ ನಂದಿಹಳ್ಳಿಯಲ್ಲಿ ಸ್ಥಾಪಿಸಬೇಕೆಂಬ ಸ್ನಾತಕೋತ್ತರ ಕೇಂದ್ರಕ್ಕೆ ಬೇರೆ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಿ ಎನ್ನುವ ಬೇಡಿಕೆ ಇತ್ತು. ಇದಕ್ಕಿಂತ ಭಿನ್ನವಾಗಿ ಬಸಪ್ಪನವರು ಅರಮನೆಯನ್ನೇ ಸ್ನಾತಕೋತ್ತರ ಕೇಂದ್ರಕ್ಕೆ ಏಕೆ ಕೊಡಬಾರದು? ಎಂದು ಪ್ರಶ್ನಿಸಿದ್ದು ಚಳುವಳಿಗಾರರಿಗೆ ಹೊಸ ಬಗೆಯದಾಗಿತ್ತು. ಇದಕ್ಕೆ ಪೂರಕವಾಗಿ ಚಳವಳಿಗಾರರ ಘೋಷಣೆ ಹೆಚ್ಚಾದಾಗ ಪೊಲೀಸರು ಬಂಧಿಸಿದರು.

ರೈತರ ಚಳವಳಿಯು ನಿರಂತರವಾದಂತೆ ಕರ್ನಾಟಕದ ಪ್ರಜ್ಞಾವಂತ ಜನರಲ್ಲಿ ರೈತರನ್ನು ಬೆಂಬಲಿಸುವ ಪ್ರಜ್ಞೆ ಜಾಗ್ರತವಾಯಿತು. ಚಳವಳಿಯ ೩೦ನೇ ದಿನದವರೆಗೂ ಈ ಬಿಸಿ ಯಾವೊಬ್ಬ ಸಾಹಿತಿ, ಪತ್ರಿಕೋದ್ಯಮಿ, ಕಲಾವಿದರಿಗೂ ತಟ್ಟಿರಲಿಲ್ಲ. ಅಥವಾ ಗೊತ್ತಿದ್ದರು ಮೌನವಹಿಸಿದ್ದರೊ ತಿಳಿಯದು. ಈ ಚಳವಳಿ ಏಕಕಾಲದಲ್ಲಿ ಸೊಂಡೂರಿನ ರಾಜಮನೆತನದ ವಿರುದ್ಧವೂ, ರಾಜಮನೆತನವನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರದ್ಧವೂ ಆಗಿದ್ದಿತು. ಇದರಿಂದಾಗಿ ಇಲ್ಲಿನ ರೈತರನ್ನು ಬೆಂಬಲಿಸುವುದೆಂದರೆ ಆಡಳಿತ ಸರ್ಕಾರದ ವಿರುದ್ಧವೂ ಧ್ವನಿ ಎತ್ತು ವಂತಿತ್ತು. ಎರಡನೆಯದಾಗಿ ಚಳವಳಿಯ ವಾಸ್ತವ ಸ್ವರೂಪ ವಿವರವಾಗಿ ಮಾಧ್ಯಮಗಳಿಂದ ಪ್ರಚಾರವಾಗಲಿಲ್ಲ. ಈ ಎಲ್ಲದರ ಮಧ್ಯೆಯೂ ಸಾಹಿತಿಗಳು, ಪತ್ರಿಕೋದ್ಯಮಿಗಳು, ಕಲಾವಿದರು ಸೊಂಡೂರು ರೈತರ ಪರವಾಗಿ ಪ್ರತಿಕ್ರಿಯಿಸಿದರು.

ಸಮಾಜವಾದಿ ಆಂದೋಲನ ಹಾಗೂ ರೈತರ ಹಿತಚಿಂತನೆಯ ಬಗ್ಗೆ ಸಹಾನುಭೂತಿ ಮತ್ತು ಕಾಳಜಿಯುಳ್ಳ ಬೆಂಗಳೂರಿನ ಪತ್ರಕರ್ತರ ಸಂಘಟನೆಯೊಂದರ ಅಧ್ಯಕ್ಷರಾದ ಟಿ.ದಾಸಪ್ಪ, ‘ಡೇಲಿಸಾಲರ್’ ಎಂಬ ಉರ್ದು ಪತ್ರಿಕೆಯ ಸಂಪಾದಕರಾದ ಮೊಹಮದ್ ಅಯಾಜ್ ಮೊದಲಾದ ಪತ್ರಿಕೋದ್ಯಮಿಗಳೂ, ಚಿತ್ರ ನಿರ್ದೇಶಕರಾದ ಪಟ್ಟಾಭಿರಾಮ ರೆಡ್ಡಿ, ಕೆ.ಎಂ. ಶಂಕರಪ್ಪ, ಮಹೇಶ್ ಸ್ವಾಮಿ, ಚಿತ್ರ ನಟಿಯಾದ ಶ್ರೀಮತಿ ಸ್ನೇಹಲತಾ ರೆಡ್ಡಿ, ಮೈಸೂರಿನ ಅಧ್ಯಾಪಕರೂ ಲೇಖಕರೂ ಆದ ಡಾ.ಯು.ಆರ್. ಅನಂತಮೂರ್ತಿ, ಬೆಂಗಳೂರಿನ ಅಧ್ಯಾಪಕರಾದ ಭರತ್ ಝಂಜನ್ ವಾಲಾ, ಫೋಟೋ ಜರ್ನಲಿಸ್ಟ್ ರಾದ ಬಿ.ಎಸ್. ಆಚಾರ್ ಮೊದಲಾದವರು ಸೊಂಡೂರಿನ ನಿರ್ಗತಿಕ ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಸಹಾನುಭೂತಿಯಿಂದ ಪರಿಶೀಲಿಸಬೇಕೆಂದು ಅಕ್ಟೋಬರ್ ೧೭ರಂದು ಸರ್ಕಾರಕ್ಕೆ ಮನವಿ ನೀಡಿದರು.

”ಲೇಖಕರು, ಅಧ್ಯಾಪಕರು, ಕಲಾವಿದರು, ಪತ್ರಿಕೋದ್ಯಮಿಗಳು ಹಾಗೂ ಸಿನಿಮಾ ಜನತೆಯಾದ  ನಾವು ಸೊಂಡೂರಿನ ಬಡ ರೈತರ ಭೂಮಿಗಾಗಿ ನಡೆಸುತ್ತಿರುವ ಹೋರಾಟವನ್ನು ಗಮನಿಸಿದ್ದೇವೆ. ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ನಾವು ಅಲಕ್ಷ್ಯದಿಂದಿರಲು ಸಾಧ್ಯವಿಲ್ಲ. ಈ ಹೋರಾಟದ ವಿವರಗಳ ಬಗ್ಗೆ ಹೋಗದೆ ಬಡರೈತರ ಹಿತ ಚಿಂತನೆಯಿಂದ ಮುಖ್ಯಮಂತ್ರಿಗಳು ಶೀಘ್ರವಾಗಿ ಈ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾವು ಮನವಿ ಮಾಡಿಕೊಳ್ಳತ್ತೇವೆ” ಎನ್ನುವುದಾಗಿತ್ತು. ಎಲ್ಲಿಯೋ ನಡೆಯುತ್ತಿರುವ ರೈತ ಚಳವಳಿಗೂ, ಬೆಂಗಳೂರಿನ ನಮಗೂ ಎಲ್ಲಿಯ ಉಸಾಬರಿ ಎಂದು ಮೌನವಹಿಸುವವರ ನಡುವೆಯೂ ರೈತರಿಗೆ ಬೆಂಬಲವಾಗಿ ಆತ್ಮಸ್ಥೈರ್ಯ ತುಂಬಿದ ಇಂತಹ ಕೆಲ ಮನಸ್ಸುಗಳು ಇದ್ದವು.

ಈ ಹಿಂದೆ ನಂದಿಹಳ್ಳಿಯಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸುವ ವಿವಾದಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿನ ಸೋಷಲಿಸ್ಟ್ ಕಾರ್ಯಕರ್ತರು ಹೋರಾಟವನ್ನು ಬೆಂಬಲಿಸಿ ಮತ ಪ್ರದರ್ಶನ ಮಾಡಿ ಕರ್ನಾಟಕ ವಿ.ವಿ. ಕುಲಪತಿಗೆ ಮನವಿ ಸಲ್ಲಿಸಿದ್ದರು. ಈ ಮತ ಪ್ರದರ್ಶನ ನಗರಗಳ ಸೋಷಲಿಸ್ಟ್ ಕಾರ್ಯಕರ್ತರಿಗೆ ತಟ್ಟಿತು. ಇದರಿಂದಾಗಿಯೇ ಬೆಂಗಳೂರಿನ ಸೋಷಲಿಸ್ಟ್ ಕಾರ್ಯಕರ್ತರೂ ಸಹ ಬೆಂಗಳೂರಿನಲ್ಲಿಯೇ ಸೊಂಡೂರು ರೈತರ ಪರವಾಗಿ ಮತ ಪ್ರದರ್ಶನ ನಡೆಸಿದರು. ಧಾರವಾಡದ ಮತ ಪ್ರದರ್ಶನಕ್ಕೆ ನಂದಿಹಳ್ಳಿಯಲ್ಲಿ ಸ್ಥಾಪಿಸಬೇಕೆಂಬ ಸ್ನಾತಕೋತ್ತರ ಕೇಂದ್ರ ಕಾರಣವಾದರೆ, ಇವರಿಗೆ ರಾಘಾಪುರ ಮತ್ತು ಸಿದ್ಧಾಪುರಗಳಲ್ಲಿ ಭೂಮಿಯಲ್ಲಿ ಸ್ಥಾಪಿಸಬೇಕೆಂದಿದ್ದ ತೋಟಗಾರಿಕೆ ಇಲಾಖೆಯ ಬೀಜ ಕೇಂದ್ರ ಕಾರಣವಾಯಿತು.

ಅಕ್ಟೋಬರ್ ೨೦ರಂದು ಸಮಾಜವಾದಿ ಪಕ್ಷದ ಬೆಂಗಳೂರು ನಗರ ಶಾಖೆಯ ಕಾರ್ಯದರ್ಶಿ ಆರ್. ವೆಂಕಟಸ್ವಾಮಿ ಹಾಗೂ ಸಮಾಜವಾದಿ ಯುವಜನ ಸಭೆಯ ಬಂದಗದ್ದೆ ರಮೇಶ್ ಅವರ ನೇತೃತ್ವದಲ್ಲಿ ಮತ ಪ್ರದರ್ಶನ ನಡೆಸಿ ಸೊಂಡೂರಿನಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಆನಂತರ ಲಾಲ್ ಬಾಗಿನಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ ರಾಘಾಪುರ ಮತ್ತು ಸಿದ್ದಾಪುರಗಳ್ಲಿರುವ ಹೊಗೆ ಸೊಪ್ಪಿನ ಕಂಪನಿಯ ೪೪೯ ಎಕರೆ ಭೂಮಿಯಿದೆ. ಆ ಭೂಮಿಯಲ್ಲಿ ತೋಟಗಾರಿಕೆ ಇಲಾಖೆಯು ಪ್ರಯೋಗ ಮತ್ತು ಬೀಜದ ಕೇಂದ್ರವನ್ನು ಸ್ಥಾಪಿಸಬಾರದೆಂದೂ, ಆ ಭೂಮಿಯ ರೈತರಿಗೆ ಸಿಕ್ಕುವಂತೆ ಅದನ್ನು ಬಿಟ್ಟು ಕೊಡಬೇಕೆಂದೂ, ಒಂದು ಮನವಿ ಪತ್ರ ಸಲ್ಲಿಸಿ ಒತ್ತಾಯ ಪಡಿಸಿತು.

ಹೀಗೆ ಬೆಂಗಳೂರು, ಧಾರವಾಡ, ಶಿವಮೊಗ್ಗ, ಸಾಗರಗಳಲ್ಲಿ ಸಮಾಜವಾದಿ ಕಾರ್ಯಕರ್ತರು, ಸಣ್ಣ ಪ್ರಮಾಣದಲ್ಲಿ ಪ್ರತಿಭಟನಾತ್ಮಕ ಮೆರವಣಿಗೆ ಮಾಡಿದರು. ಇದು ಸೊಂಡೂರಿನ ರೈತರಿಗೆ ಪರೋಕ್ಷವಾಗಿ ಧೈರ್ಯ ತುಂಬಿದಂತಾಯಿತು. ಅಂತೆಯೇ ಕರ್ನಾಟಕದ ಇತರ ಕಡೆಗಳಲ್ಲಿ ಸೊಂಡೂರು ಹೋರಾಟ ತೀವ್ರತೆ ನಿಧಾನವಾಗಿ ಅರ್ಥವಾಗತೊಡಗಿತು. ಕಾಂಗ್ರೆಸ್ ಮೊದಲು ಈ ಚಳವಳಿಯನ್ನು ಸೋಷಲಿಸ್ಟರು ರಾಜಕೀಯ ಹಿತಾಸಕ್ತಿಗಾಗಿ ಮಾಡುತ್ತಿದ್ದಾರೆ ಎಂದು ಸರಳವಾಗಿ ಗ್ರಹಿಸಿತ್ತು. ಹೀಗೆ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಚಳವಳಿಯನ್ನು ಬೆಂಬಲಿಸುವ ಮತ ಪ್ರದರ್ಶನಗಳು ನಡೆದದ್ದರಿಂದ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲು ಸಹಕಾರಿಯಾಯಿತು.

ಸೊಂಡೂರಿನಲ್ಲಿ ೧೪೪ ಸೆಕ್ಷನ್ ಜಾರಿ

ಅಕ್ಟೋಬರ್ ೨೧.೧೯೭೩ ಭಾನುವಾರ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಪ್ರಸ್ತಾವ ದಂತೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎಂ. ಜಯಲಕ್ಷ್ಮಮ್ಮಣ್ಣಿ ಅವರು ಸ್ಥಳ ಪರಿಶೀಲನೆಗಾಗಿ ನಂದಿಹಳ್ಳಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಚಳವಳಿ ನಡೆಸುತ್ತಿದ್ದ ಕಾರ್ಯಕರ್ತರು ”ನಂದಿಹಳ್ಳಿ ಪ್ರದೇಶದ ಫಲವತ್ತಾದ ಜಮೀನನ್ನು ತಾಂತ್ರಿಕ ಶಿಕ್ಷಣ ಕೇಂದ್ರಕ್ಕೆ ನೀಡುವ ಬದಲು ಬಡ ಕೃಷಿಕರಿಗಾಗಿ ವಿತರಣೆ ಮಾಡಬೇಕೆಂದು” ಮನವಿ ಸಲ್ಲಿಸಿದರು. ಇದೇ ಹೊತ್ತಿಗೆ ನಂದಿಹಳ್ಳಿಯಲ್ಲಿಯೇ ತಾಂತ್ರಿಕ ವಿ.ವಿ. ಯನ್ನು ಸ್ಥಾಪಿಸಬೇಕೆಂದು ಒತ್ತಾಯ ಮಾಡುವ ಮನವಿಯನ್ನು ಸೊಂಡೂರು ತಾಲೂಕು ಮಂಡಳಿ ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪ ಹಾಗೂ ಖಾಸಗಿ ಸಂಸ್ಥೆಯೊಂದರ ಅಧಿಕಾರಿ ಸುಬ್ಬರಾವ್ ಸಿಂಧೆ ಮತ್ತು ಅವರ ಜೋತೆ ಬಂದ ತಂಡವೊಂದು ಅರ್ಪಿಸಿತು. ಸಹಜವಾಗಿ ಈ ಸಂದರ್ಭದಲ್ಲಿ ಚಳವಳಿಗಾರರು ಮತ್ತು ಚಳವಳಿಯನ್ನು ವಿರೋಧಿಸುವ ಬಣ ಒಂದೇ ಕಡೆಯಲ್ಲಿ ಮುಖಮುಖಿಯಾದರು. ಇದರಿಂದಾಗಿ ಈ ಎರಡೂ ಬಣಗಳ ನಡುವೆ ಸಂಘರ್ಷ ಏರ್ಪಟ್ಟಿತು.

ಸೊಂಡೂರಿನ ಪ್ರವಾಸಿ ಮಂದಿರದ ಎದುರು ಈ ಘಟನೆ ಜರುಗಿತು. ಮನವಿ ಅರ್ಪಿಸಲು ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರು ಚಳವಳಿಗಾರರು ವಾಹನವೊಂದರಲ್ಲಿ ತೆರಳಿದ್ದರು. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಸಮೂಹವೂ ನೆರೆದಿತ್ತು. ವಾಹನದ ಮೇಲಿದ್ದ ಸೋಷಲಿಸ್ಟ್ ಪಾರ್ಟಿಯ ಬಾವುಟವನ್ನು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕಿತ್ತರು. ಇದನ್ನು ತಡೆಯಲು ಬಂದ ಸೋಷಲಿಸ್ಟ್ ಪಾರ್ಟಿ ಕಾರ್ಯಕರ್ತ ಶ್ರೀನಿವಾಸ್ (ಪಾತ್ರ ಸೀನಪ್ಪ) ಎಂಬುವವರ ಮೇಲೆ ದಾಳಿ ನಡೆಸಲಾಯಿತು. ಶ್ರೀನಿವಾಸ್‌ಗೆ ಕಲ್ಲಿನಂದ ಏಟು ಬಿದ್ದು ತೀವ್ರವಾಗಿ ಗಾಯಗೊಂಡರು. ಇದರಿಂದಾಗಿ ಉದ್ರಿಕ್ತಗೊಂಡ ಎರಡೂ ಬಣಗಳಲ್ಲಿ ತೀವ್ರ ಜಗಳ ಹೊಡೆದಾಟ ನಡೆಯಿತು. ಈ ಸುದ್ದಿ ತಿಳಿದೊಡನೆ ಪೊಲೀಸ್ ಸೂಪರಿಡೆಂಟ್ ವಿ.ವಿ. ಭಾಸ್ಕರ್ ಮತ್ತು ಬಳ್ಳಾರಿ ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟ್ ಸ್ವತಂತ್ರರಾವ್ ಅವರು ಸೊಂಡೂರಿಗೆ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಆನಂತರ ಪರಿಸ್ಥಿತಿಯನ್ನು ಶಾಂತಸ್ಥಿತಿಗೆ ತರಲು ಅಕ್ಟೋಬರ್ ೨೨ ಸೋಮವಾರ ಮುಂಜಾನೆ ೮ ಗಂಟೆಯಿಂದ (ಕ್ರಿಮಿನಲ್ ಕೋಡಿನ) ೧೪೪ನೇ ಸೆಕ್ಷನ್ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಲಾಯಿತು.

ಈ ಘಟನೆಯಿಂದಾಗಿ ಕಳೆದ ೪೨ ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ರೈತ ಚಳವಳಿಯಲ್ಲಿ ಹಿಂಸೆ  ಕಾಣುವಂತಾಯಿತು. ಪ್ರತಿಬಂಧಕಾಜ್ಞೆಯಿಂದ ಸತ್ಯಾಗ್ರಹ ಸ್ವರೂಪ ಅತ್ಯಂತ ಕಠಿಣವಾಯಿತು. ಇದರ ಮಧ್ಯೆಯೂ ಅಕ್ಟೋಬರ್ ೨೨ರ ಸೋಮವಾರ ಸಂಜೆ ಕಾಯ್ದೆಯನ್ನು ಮುರಿದು ಹೋರಾಟವನ್ನು ಮುಂದುವರಿಸಿದರು. ಹಾಗಾಗಿ ಕೆ.ಜಿ. ಮಹೇಶ್ವರಪ್ಪ, ದೇಸಾಯಿ ಷಣ್ಮುಖಪ್ಪ, ಎಚ್.ಸಿದ್ದಪ್ಪ, ಗಂಗಪ್ಪ, ಸಿ. ಭೀಮಪ್ಪ, ಕೆ.ಚೌಡಪ್ಪ, ಆರ್. ಪರಮೇಶ್ವರಪ್ಪ, ವಿ.ಹನುಮಂತಪ್ಪ, ದುರ್ಗಪ್ಪ, ಕೆ.ತಿಮ್ಮಪ್ಪ ಅವರನ್ನು ಪೊಲೀಸರು ಬಂಧಿಸಿ ಕೂಡ್ಲಿಗಿ ಕೋರ್ಟಿಗೆ ಕರೆದೊಯ್ದರು. ಕೂಡ್ಲಿಗಿ ಕೋರ್ಟಿನ ನ್ಯಾಯಾಧೀಶರು ಅವರಿಗೆ ಮೂರು ದಿನದ ಸಾದಾ ಸಜೆಯನ್ನು ವಿಧಿಸಿದರು.

ಈ ಘಟನೆಯನ್ನು ಸೋಷಲಿಸ್ಟ್ ಪಾರ್ಟಿಯ ಕಾರ್ಯಕರ್ತರು ಖಂಡಿಸಿದರು. ಈವರೆಗೂ ೪೨ ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಸತ್ಯಾಗ್ರಹವನ್ನು ದಮನ ಮಾಡಲು ಸಂವಿಧಾನ ಬಾಹಿರ ಹಾಗೂ ಪ್ರಜಾತಂತ್ರ ವಿರೋಧಿ ಕ್ರಮಗಳನ್ನು ಖುದ್ದಾಗಿ ಅರ್ಥ ಮಂತ್ರಿ ಎಂ.ವೈ. ಘೋರ್ಪಡೆಯವರೇ ಸಜ್ಜುಗೊಳಿಸಿರುವರೆಂದು ಆಪಾದಿಸಿ ಇದಕ್ಕಾಗಿ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಅರ್ಥ ಸಚಿವರ ಕೈಗೊಂಬೆಗಳಾಗಿ ಪೋಲಿಸರು ವರ್ತಿಸುತ್ತಿದ್ದಾರೆಂಬುದು ಪೊಲೀಸರು ನಡವಳಿಕೆಯಿಂದ ರುಜುವಾತು ಪಟ್ಟಿದೆಯೆಂದು ಇದಕ್ಕಾಗಿ ಪೊಲೀಸರನ್ನು ಧಿಕ್ಕರಿಸಲಾಯಿತು.

ಈ ದಿನವನ್ನು ಕೆ.ಜಿ. ಮಹೇಶ್ವರಪ್ಪ ನೆನಪಿಸಿಕೊಳ್ಳುತ್ತಾ ”ಕೂಡ್ಲಿಗಿಯ ಜೈಲಿನಲ್ಲಿ ಗೊಬ್ಬು ವಾಸನೆ ಇತ್ತು. ಅಂತದ್ದರಲ್ಲಿ ಇದ್ದೆವು. ಲೆಟ್ರಿನ್ ಗೆ ಹೋಗುವ ಡಬ್ಬಗಳಲ್ಲಿ ಕೂಡಿಯಲಿಕ್ಕೆ ನೀರು ಕೊಡ್ತಾ ಇದ್ರು. ಆವಾಗಲೇ ಘೋರ್ಪಡೆ ಕಡೆಯವರು ಬಂದ್ ನೀವು ಲೀಡಿಂಗ್ ವಕೀಲ್ರು ಇದ್ದೀರಿ. ನಿಮಗೆ ಸರ್ಕಾರದಿಂದ ಏನು ಬೇಕು ಹೇಳ್ರಿ ಚಳವಳಿ ಬಿಟ್ಟು ಹೋಗ್ರಿ” ಎಂದು ಮನವೊಲಿಸುವ ಪ್ರಯತ್ನಿಸುತ್ತಿದ್ದರು ಎನ್ನುತ್ತಾರೆ.

ಅಕ್ಟೋಬರ್ ೨೨ರಂದು ಚಳವಳಿಗಾರರು ಬಂದಿತರಾದುದರಿಂದ ಹೋರಾಟ ಮತ್ತಷ್ಟು ತೀವ್ರ ಸ್ವರೂಪವನ್ನು ಪಡೆಯಿತು. ಮುಂದುವರಿದಂತೆ ದಿನಾಂಕ ೨೩,೨೪ ರಂದು ಬೆಂಗಳೂರಿನ ಸಮಾಜವಾದಿ ಯುವಜನ ಸಭೆಯ ವಿದ್ಯಾರ್ಥಿ ನಾಯಕ ಕೆ. ಸುಬ್ರಮಣ್ಯಂ, ಗಂಗಪ್ಪ, ಮುದ್ದ ಹನುಮಂತಪ್ಪ, ರೇವಗಲ್ ಕುಮಾರಸ್ವಾಮಿ, ದೇಸಾಯಿ, ಸುಬ್ಬಯ್ಯ, ಮರಿ ಈರಪ್ಪ, ಹನುಮಂತಪ್ಪ, ಬೆಂಗಳೂರಿನ ಸೋಹನಕುಮಾರಿ, ಮೈಸೂರಿನ ತಿವಾರಿ ಬುಡ್ಡೆಮ್ಮ, ಸಾಗರದ ವಕೀಲ ಎಸ್.ನಾಗಪ್ಪ, ಸಮಾಜವಾದಿ ಯುವಜನ ಸಭೆಯ ಬಿ.ರಮೇಶ, ಎಚ್. ದಾಸಪ್ಪ ಬೆನಕಲ್, ದಾವಣಗೆರೆ ವಕೀಲ ಜೆ.ಎಂ. ಕಲ್ಲಪ್ಪ, ಸೊರಬ ತಾಲ್ಲೂಕಿನ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಎಂ.ಜಿ. ಸ್ವಾದಿ ಮುಂತಾದವರ ನೇತೃತ್ವದಲ್ಲಿ ರೈತರು ಪ್ರತಿಬಂದಕಾಜ್ಞೆಯನ್ನು ಉಲ್ಲಂಘಿಸಿ ಸೊಂಡೂರು ಕಛೇರಿಗೆ ಮುತ್ತಿಗೆ ಹಾಕಿದಾಗ ಪೊಲೀಸರು ಅಮಾನುಷವಾಗಿ ಚಳವಳಿಗಾರರನ್ನು ಹಿಂಸಿಸಿದರು.

ಪೋಲೀಸರು ಚಳವಳಿಗಾರರೊಂದಿಗೆ ನಡೆದುಕೊಂಡದ್ದು ದಬ್ಬಾಳಿಕೆ ಸ್ವರೂಪದ್ದಾಗಿತ್ತು. ಇದರಿಂದಾಗಿ ರಾಷ್ಟ್ರೀಯ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಮೋಹನ್ ಅವರು ಬೆಂಗೂರಿನಲ್ಲಿ ನೀಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ ”೨೩ ಮತ್ತು ೨೪ರಂದು ಸೊಂಡೂರಿನಲ್ಲಿ ರೈತ ಸತ್ಯಾಗ್ರಹಿಗಳನ್ನು ಥಳಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವದರ ಜೊತೆಗೆ ಇದರ ಬಗ್ಗೆ ನ್ಯಾಯಂಗ ವಿಚಾರಣೆಯೊಂದನ್ನು ನಡೆಸಬೇಕೆಂದು, ಸತ್ಯಾಗ್ರಹಿಗಳ ಮೇಲೆ ಈ ಕ್ರಮ ಸಚಿವ ಎಂ.ವೈ. ಘೋರ್ಪಡೆಯವರು ಆದೇಶದ ಮೇರೆಗೆ ನಡೆಯಿತು. ಸಚಿವರು ಅಧಿಕಾರದಲ್ಲಿರುವವರೆಗೆ ಅವರಿಂದ ಅದರ ದುರುಪಯೋಗವಾಗುತ್ತದೆ. ಆದುದರಿಂದ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು” ಸರ್ಕಾರವನ್ನು ಒತ್ತಾಯಿಸಿದರು.

ಸುರೇಂದ್ರ ಮೋಹನ್ ರನ್ನು ಒಳಗೊಂಡಂತೆ ಸೋಷಲಿಸ್ಟ್ ಕಾರ್ಯಕರ್ತರು ಪೊಲೀಸರ ದೌರ್ಜನ್ಯವನ್ನು, ಚಳವಳಿಗಾರರೊಂದಿಗೆ ನಡೆಸಿದ ಅಮಾನವೀಯ ವರ್ತನೆಯನ್ನು ಖಂಡಿಸಿದ ರಾದರೂ ಅದರ ತೀವ್ರ ಪರಿಣಾಮ ಪೊಲೀಸ್ ಅಧಿಕಾರಿಗಳಿಗೆ ತಟ್ಟಲಿಲ್ಲ. ಇದಕ್ಕೆ ಎಂ.ವೈ. ಫೋರ್ಪಡೆಯವರ ಪರೋಕ್ಷ ಸಹಕಾರ ಆ ಅಧಿಕಾರಿಗಳ ಮೇಲಿದ್ದದ್ದು. ಆದರೂ ಈ ಖಂಡನೆಯನ್ನು ಅಲ್ಲ ಗೆಳೆಯುವಂತೆ ಪೊಲೀಸ್ ಸೂಪರಿಡೆಂಟ್ ವಿ.ವಿ. ಭಾಸ್ಕರ್ ಅವರು ಪತ್ರಿಕಾ ಹೇಳಿಕೆ ನೀಡುತ್ತಾ ಸೊಂಡೂರಿನಲ್ಲಿ ಪೊಲೀಸರಿಂದ ಲಾಠಿ ಪ್ರಹಾರ ನಡೆದಿದೆ ಎಂದು ಪತ್ರಿಕೆಗಳಲ್ಲಿ ಸುಳ್ಳು ಸುದ್ದಿಯಾಗಿದೆ. ಇಲ್ಲಿ ಇದುವರೆಗೆ ಯಾವುದೇ ಲಾಠಿ ಪ್ರಹಾರ ನಡೆದಿಲ್ಲವೆಂದು ಸಮರ್ಥಿಸಿಕೊಂಡರು.

ಹೀಗೆ ೪೬ ದಿನ ನಡೆದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಒಟ್ಟು ೧೦೩೬ ಸತ್ಯಾಗ್ರಹಿಗಳ ಪಿಕೆಟಿಂಗ್ ಭೂ ಆಕ್ರಮಣಗಳಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. ರಾಜಮನೆತನದ ಯಾವುದೇ ವೈಯಕ್ತಿಕ ಆಸ್ತಿಗೆ ಧಕ್ಕೆ ಯುಂಟುಮಾಡದೆ ಅವರ ಸ್ವಂತ ಭೂಮಿಯನ್ನು ಆಕ್ರಮಿಸದೆ, ರಾಜಮನೆತನ ವಶಪಡಿಸಿಕೊಂಡಿದ್ದ ನಂದಿಹಳ್ಳಿ, ರಾಘಾಪುರ ಮತ್ತು ಸಿದ್ಧಾಪುರ ಹಳ್ಳಿಗಳ ಹೊಗೆಸೊಪ್ಪಿನ ಜಮೀನಗಳಲ್ಲಿ ಇನಾಮು ಭೂಮಿಯಲ್ಲಿ ಮಾತ್ರ ಸತ್ಯಾಗ್ರಹಿಗಳು ಒಟ್ಟು ೮ ಬಾರಿ ಭೂ ಆಕ್ರಮಣ ಚಳವಳಿಯನ್ನು ನಡೆಸಿದರು. ನಂದಿಹಳ್ಳಿಯ ಪಾರಮ್ಮ ಹೇಳುವಂತೆ ”ಸಿಗರೇಟು ಕಂಪನಿ ಬಳಿ ಏಳೆಂಟು ಜೊತೆ ಎತ್ತುಗಳನ್ನು ಕುಂಟೆ ಹಾಕಿಕೊಂಡು ಭೂಮಿಯಲ್ಲಿ ನೇಗಿಲು ಹೊಡೆಯುತ್ತಿದ್ದರು.. ಆಮೇಲೆ ಪೊಲೀಸರು ಬಂದು ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ನಾವು ಹೆಣ್ಣು ಮಕ್ಕಳು ದೂರದಿಂದಲೆ ನೋಡುತ್ತಿದ್ದೆವು” ಎನ್ನುತ್ತಾರೆ. ಅಂದರೆ ಹಳ್ಳಿಯ ಕೆಲವು ಜನರು ರಾಜರ ಭಯದಿಂದಾಗಿ ಭಾಗವಹಿಸುತ್ತಿರಲಿಲ್ಲ.

ಹೋರಾಟದಲ್ಲಿ ದಾಸೋಹ ಕಲ್ಪನೆಯಿತ್ತು. ಹಳ್ಳಿಗಳಿಂದ ಹೋರಾಟಗಾರರಿಗೆ ಜೋಳ, ರಾಗಿ, ನವಣಕ್ಕಿ, ನೆಲ್ಲಕ್ಕಿ ಮುಂತಾದ ದವಸ ದಾನ್ಯಗಳನ್ನು ರೈತರು ತರುತ್ತಿದ್ದರು. ವಾರದ ಸಂತೆ ದಿನ ಸಂತೆಗೆ ಹೋಗಿ ತರಕಾರಿಯನ್ನು ಎತ್ತುತ್ತಿದ್ದರು. ಎಲ್ಲರೂ ಕೂಡಿಯೇ ಊಟ ಮಾಡುತ್ತಿದ್ದರು. ನಾಗಪ್ಪ ಹೇಳುವಂತೆ ”ಹೋರಾಟದಲ್ಲಿ ಹೆಸ್ರು ಬರಬಾರ್ದು ಅನ್ನೋರೆಲ್ಲ ಹಿಂಗ ದವಸ ಧಾನ್ಯ ರೊಕ್ಕ ಕೊಟ್ಟು ಸಹಾಯ ಮಾಡ್ತಿದ್ರು. ಆವಾಗ ಊಟದ ತ್ರಾಸು ಬಾಳ ಇತ್ತು.. ಊಟಕ್ಕಾಗಿ ಚಳವಳೀಲಿ ಭಾಗವಹಿಸೋ ಜನಾನು ಇದ್ರು” ಇನ್ನುತ್ತಾರೆ. ಈ ಆಂದೋಲನದಲ್ಲಿ ಅನೇಕ ಮಹಿಳೆಯರು ತಮ್ಮ ಕೂಸುಗಳ ಸಮೇತ ಪಿಕೆಟಿಂಗ್ ಭೂ ಆಕ್ರಮಣಗಳಲ್ಲಿ ಭಾಗವಹಿಸಿ ಬಂಧಿತರಾದದ್ದು ಗಮನಾರ್ಹ. ಹರಿಜನ ನಾಯಕಿ ಬುಡ್ಡಮ್ಮ, ಮಾರಮ್ಮ, ಮೇದಾರ ಹುಲ್ಲೆಮ್ಮ, ಮೇದಾರ ಭೀಮ್ಮಕ್ಕ, ಬೆಂಗಳೂರಿನ ಸೋಹನ ಕುಮಾರಿ, ಭುಜಂಗ ನಗರದ ವಡ್ಡನಕಟ್ಟೆ ಶಾಂತಮ್ಮ, ಎನ್.ಎಂ. ಶಿವದೇವಮ್ಮ ಬಿಹಾರದ ಗಿರಿಜನ ನಾಯಕಿ ಸಂತೋಷಿತಿಗಾ, ಮಹಾರಾಷ್ಟ್ರದ ಸಮಾಜವಾದಿ ನಾಯಕಿ ಮೃಣಾಲ್ ಘೋರೆ. ಇವರುಗಳೆಲ್ಲ ಸ್ತ್ರೀಶಕ್ತಿಯನ್ನು ಹೋರಾಟದಲ್ಲಿ ಪ್ರತಿನಿಧಿಸಿದರು. ೪೬ ದಿನಗಳ ಭೂ ಹೋರಾಟ ಶಾಂತಿಯುತವಾಗಿಯೆ ನಡೆದರೂ ಪೊಲೀಸರ ದೌರ್ಜನ್ಯದಿಂದಾಗಿ ಕೊನೆಗೆ ಅಹಿಂಸಾತ್ಮಕ ರೂಪ ತಾಳಿತು.