೧೯೭೩ರಲ್ಲಿ ಡಿ. ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿ. ಕೇಂದ್ರದಲ್ಲಿ ಇಂದಿರಾಗಾಂಧಿಯವರು ಸಮರ್ಥ ಆಡಳಿತಗಾರರಾಗಿದ್ದರು. ಆದರೆ ಅವರ ಮಂತ್ರಿಮಂಡಲದ ಮಂತ್ರಿಗಳು ಅವರಂತೆ ನಡೆಯದೆ ಸರ್ಕಾರ ಟೀಕೆಗೆ ಗುರಿಯಾಗಿತ್ತು ಇಂಥದ್ದೆ ವಿಚಿತ್ರ ಸ್ಥಿತಿ ಅರಸರದು ಕೂಡ. ಅರಸು ಕರ್ನಾಟಕ ಕಂಡ ಸಮರ್ಥ ಮುಖ್ಯಮಂತ್ರಿ ಎನ್ನುವುದು ಆಗಿನ ಜನಾಭಿಪ್ರಾಯ. ಆದರೆ ಅವರ ಮಂತ್ರಿ ಮಂಡಲ ಅವರದೇ ದಾರಿಯಲ್ಲಿ ನಡೆದದ್ದು ಕಡಿಮೆ. ಕೆಲ ಮಂತ್ರಿಗಳ ಮಿತಿ ಮೀರಿದ ವರ್ತನೆ ಹಾಗೂ ಅಧಿಕಾರದ ದುರುಪಯೋಗದ ಪ್ರಕರಣಗಳು ಅರಸರನ್ನು ನೆರಳಿನಂತೆ ಹಿಂಬಾಲಿಸಿದವು. ಪತ್ರಿಕೆಗಳಲ್ಲಿ ಟೀಕೆ ಹಾಗೂ ವಿಧಾನ ಮಂಡಲದಲ್ಲಿ ಶಸ್ತ್ರ ಚಿಕಿತ್ಸೆ ನಡೆದರೂ ಕೂಡ, ಆ ಮಂತ್ರಿಗಳು ತಮ್ಮನ್ನು ತಿದ್ದಿಕೊಳ್ಳಲಿಲ್ಲ. ಇದರಿಂದಾಗಿ ಮಂತ್ರಿಗಳ ಮೇಲಿನ ಬಾಣ ಪ್ರಯೋಗ ಮುಖ್ಯಮಂತ್ರಿಗಳಿಗೂ ಬಡಿದುಕೊಳ್ಳುತ್ತಿದ್ದವು.

೧೯೭೩ರ ಕರ್ನಾಟಕದ ಕೆಲವು ಸಾಮಾಜಿಕ ವಿದ್ಯಮಾನಗಳನ್ನು ಗಮನಿಸಬಹುದು. ಕಳ್ಳತನದ ಗುಮಾನಿಯ ಮೇಲೆ ಹಾಸನದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ತರುಣನೊಬ್ಬ ಸತ್ತ. ಸುದ್ದಿ ಅಲ್ಲಿನ ಜನತೆಯಲ್ಲಿ ಪೊಲೀಸ್ ದೌರ್ಜನ್ಯದ ಶಂಕೆಯನ್ನು ಉಂಟುಮಾಡಿತು. ಇದರಿಂದಾಗಿ ಜನರು ಮತ್ತು ಪೊಲೀಸರ ನಡುವೆ ಘರ್ಷಣೆಯಾಯಿತು (ಸೆಪ್ಟಂಬರ್ ೫. ೧೯೭೩). ಇದೇ ವರ್ಷದಲ್ಲಿ ಪೊಲೀಸರಿಂದ ಅಂತಹ ಹತ್ತಕ್ಕೂ ಹೆಚ್ಚು ಲಾಕಪ್‌ಡೆತ್‌ಗಳಾಗಿದ್ದವು. ಆ ಸಂದರ್ಭದಲ್ಲಿ ಪೊಲೀಸರ ಪರವಾಗಿ ನೀಡಲಾದ ವಿವರಣೆಗಳು ಏಕಪ್ರಕಾರವಾಗಿದ್ದವು. ಇದು ಬ್ರಿಟಿಷರ ಆಡಳಿತದ ಪೊಲೀಸ್ ದರ್ಪ ದೌರ್ಜನ್ಯಗಳು ಸ್ವತಂತ್ರ್ಯ ನಂತರದ ಭಾರತದಲ್ಲಿ ನಿರಂತರವಾದದ್ದರ ಚಿತ್ರ. ಕರ್ನಾಟಕದಾದ್ಯಂತ ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ದಂಗೆಗಳಾದವು. ಮಂಗಳೂರಿನ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರ ಬೃಹತ್ ಪ್ರತಿಭಟನೆ, ತುಮಕೂರಿನ ವಿದ್ಯಾರ್ಥಿ ಫೆಡರೇಷನ್ ಹಾಸನದ ಘಟನೆ ವಿರೋಧಿಸಿ ತುಮಕೂರು ಬಂದ್ ಆಚರಿಸಿದ್ದು, ದಕ್ಷಿಣ ಮೈಸೂರಿನ ವಿದ್ಯಾರ್ಥಿ ಗಲಭೆ, ಮಂಡ್ಯದಲ್ಲಿ ವಿದ್ಯಾರ್ಥಿ ದಂಗೆಯಲ್ಲಿ ಪೊಲೀಸರಿಗೂ ವಿದ್ಯಾರ್ಥಿಗಳಿಗೂ ನಡೆದ ಸಂಘರ್ಷ. ಇವು ವಿದ್ಯಾರ್ಥಿಗಳು ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಮಾಡಿದ ಪ್ರತಿಭಟನೆಗಳು. ಇವುಗಳಿಗೆ ಮುಖ್ಯಮಂತ್ರಿಯ ಭರವಸೆಯಂದರೆ ‘ಹಾಸನದಲ್ಲಿ ಸಾವು ಅನುಮಾನಸ್ಪದ ನಿಜಾಂಶ ತಿಳಿಯಲು ಸರ್ಕಾರದ ಸರ್ವ ಪ್ರಯತ್ನ’ ಎನ್ನುವುದಾಗಿತ್ತು. ೧೨ ಸೆಪ್ಟಂಬರ್ ೧೯೭೩ರಲ್ಲಿ ಎಲ್ಲ ಪತ್ರಿಕೆಗಳಲ್ಲಿ ಹಾಸನದ ಘಟನೆ ಮುಖಪುಟದ ಸುದ್ದಿಯಾಯಿತು.

ರಾಸಾಯನಿಕ ಗೊಬ್ಬರದ ಹಾವಳಿಗೆ ರೈತರು ತತ್ತರಿಸಿದ್ದರು. ಹಾಗಾಗಿ ಸೀಮೆಗೊಬ್ಬರಕ್ಕಾಗಿ ಪ್ರತಿಭಟನೆಗಳು ಇದೇ ಸಮಯದಲ್ಲಿ ನಡೆದವು. ಸೆಪ್ಟಂಬರ್ ೧೩ರಂದು ಸಂಜೆ ಸಾವಿರಕ್ಕೂ ಹೆಚ್ಚು ಮಂದಿ ರೈತರು ದಾವಣಗೆರೆಯ ಸಬ್ ಡಿವಿಜನಲ್ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ‘ನಗರದಲ್ಲಿರುವ ಅಘೋಷಿತ ಹಾಗೂ ಕಳ್ಳ ದಾಸ್ತಾನು ಗೊಬ್ಬರ ವರ್ತಕರಲ್ಲಿರುವುದೆಂದೂ, ಗೊಬ್ಬರಕ್ಕಾಗಿ ತಾವುಗಳು ಪರಿತಪಿಸುತ್ತಿರುವುದಾಗಿಯೂ, ದಾಸ್ತಾನು ಹೊರಗೆಳೆದು ತಮಗೆ ನೀಡಬೇಕೆಂದು ಎಚ್ಚರಿಕೆಯ ಬೇಡಿಕೆ ಸಲ್ಲಿಸಿದರು. ದಾವಣಗೆರೆಯ ಶಾಸಕಿ ಶ್ರೀಮತಿ ನಾಗರತ್ನಮ್ಮ ರೈತರ ಪರವಾಗಿ ಒತ್ತಾಯಿಸಿದರು. ಸೆಪ್ಟಂಬರ್ ೧೭ರಂದು ಭದ್ರಾವತಿಯಲ್ಲಿಯೂ ಸೀಮೆಗೊಬ್ಬರಕ್ಕಾಗಿ ನೂರಾರು ಮಂದಿ ರೈತರು ಪ್ರತಿಭಟಿಸಿದರು. ತಹಶೀಲ್ದಾರರು, ಬಿ.ಡಿ.ಒ. ಮತ್ತು ಕೃಷಿ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕಛೇರಿಗಳನ್ನು ಬಲವಂತವಾಗಿ ಪ್ರವೇಶಿಸಲು ಯತ್ನಿಸಿ ಗೊಂದಲ ಉಂಟಾಯಿತು. ಪೊಲೀಸರಿಗೂ ರೈತರಿಗೂ ಘರ್ಷಣೆಯೂ ಆಯಿತು. ಹೀಗೆ ಕರ್ನಾಟಕದಲ್ಲಿ ಹಲವಾರು ಕಡೆ ಸೀಮೆಗೊಬ್ಬರಕ್ಕಾಗಿ ಕೃಷಿ ಇಲಾಖೆಯನ್ನು ರೈತರು ಮುತ್ತಿಗೆ ಹಾಕಿದ ಘಟನೆಗಳು ನಡೆದವು.

ಬೆಲೆ ಏರಿಕೆ ಮತ್ತು ಆಹಾರ ಅಭಾವಕ್ಕಾಗಿಯೂ ಕರ್ನಾಟಕದ ಬಹುತೇಕ ಕಡೆಗಳಲ್ಲಿ ದೊಂಬಿ ಗಲಭೆಗಳಾದವು. ರಾಣಿಬೆನ್ನೂರಿನಲ್ಲಿ ಧಾನ್ಯ ವ್ಯಾಗನ್‌ಗಳ ಮೇಲೆ ಲೂಟಿ ನಡೆದಿದ್ದರಿಂದ ಪೊಲೀಸರು ಗೋಲಿಬಾರ್ ಮಾಡಿದಾಗ ಒಬ್ಬನು ಮೃತಪಟ್ಟನು. ಗುಬ್ಬಿಯಲ್ಲಿ ಬೆಲೆ ಏರಿಕೆ ವಿರೋಧಿ ಸರ್ಕಾರಿ ಗೋದಾಮುಗಳನ್ನು ಲೂಟಿ ಮಾಡಿದ್ದಕ್ಕಾಗಿ ೩೦ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಪಾವಗಡದಲ್ಲಿ ಹಣ್ಣಿನ ಅಂಗಡಿಗಳ ಲೂಟಿ, ಯಲಹಂಕದಲ್ಲಿ ಕೃಷಿ ಮಾರುಕಟ್ಟೆಗಳ ಮೇಲೆ ರೈತರ ದಾಳಿ, ಸೆ.೨೦ರಂದು ಕೃಷಿಯ ಹಾಗೂ ಕೃಷಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ಒತ್ತಾಯ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಪುತ್ತೂರು ಹಾಗೂ ಕುಂದಾಪುರಗಳಲ್ಲಿ ಅಸಿಸ್ಟೆಂಟ್ ಕಮೀಷನರುಗಳ ಕಛೇರಿ ಮುಂದೆ ನಡೆಸಿದ ಧರಣಿ, ದೆಹಲಿಯಲ್ಲಿ ಬಸ್ ಸಾರಿಗೆಯ ಅವ್ಯವಸ್ಥೆ ವಿರೋಧಿಸಿ ಭಗತ್‌ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೂರು ಬಸ್ಸಿಗೆ ಬೆಂಕಿ ಇಟ್ಟಿದ್ದು. ಮಧ್ಯಪಾನ ವಿರೋಧಿ ಚಳುವಳಿಗಳು ಕರ್ನಾಟಕದಲ್ಲಿ ನಡೆಯುತ್ತಿದ್ದ ಕಾಲಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ಮುಂದಿನ ವರ್ಷದಿಂದ ಮಧ್ಯಪಾನ ನಿಷೇಧ ಎಂದು ಘೋಷಿಸಿದ್ದು. ಈ ಎಲ್ಲ ಘಟನೆಗಳು ಕರ್ನಾಟಕದ ಸಾಮಾಜಿಕ ಸ್ಥಿತಿಯನ್ನು ಭಿನ್ನವಾಗಿ ಚಿತ್ರಿಸುತ್ತವೆ.

ಕರ್ನಾಟಕದಲ್ಲಿ ೧೯೨೩ರಲ್ಲಿ ಅಸ್ಪಶ್ಯೃತೆ ಹಸಿ ಹಸಿಯಾಗಿತ್ತು. ಭೀಕರವಾಗಿತ್ತು. ಚಾಮರಾಜನಗರ ತಾಲ್ಲೂಕು ಸಂತೆ ಮಾರನಹಳ್ಳಿಯಲ್ಲಿ ಸವರ್ಣೀಯ ಹಿಂದೂಗಳು ಹರಿಜನರಿಗೆ ಸಾರ್ವಜನಿಕ ಬಹಿಷ್ಕಾರ ಹಾಕಲಾಗಿತ್ತು. ಹರಿಜನರನ್ನು ಊರಿನವರು ಯಾವ ಕೆಲಸಕ್ಕೂ ಕರೆಯದೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತೆ ಮಾಡಿದ್ದರು. ಸೆಪ್ಟಂಬರ್ ೧೧ರಂದು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆದರೂ ಕಟ್ಟುನಿಟ್ಟಿನ ಕ್ರಮವೇನೂ ಜಾರಿಯಾಗಲಿಲ್ಲ. ಇದು ಒಂದು ಘಟನೆ ಮಾತ್ರ. ಇದೇ ವರ್ಷದಲ್ಲಿ ಇಂತಹದೇ ಪ್ರಕರಣಗಳು ಇಪ್ಪತ್ತಕ್ಕೂ ಹೆಚ್ಚು ನಡೆದವು. ಇವುಗಳು ಮಾಧ್ಯಮದ ಕಣ್ಣಿಗೆ ಸಿಕ್ಕುವು ಮಾತ್ರ. ಇದೇ ಸಂದರ್ಭದಲ್ಲಿ ತಲೆ ಮೇಲೆ ಮಲ ಹೊರುವ ಪದ್ಧತಿಯ ರದ್ಧತಿಗೆ ಕೇಂದ್ರ ಯೋಜನೆಯೊಂದನ್ನು ರೂಪಿಸಿತು. ಮಧ್ಯಮ ವರ್ಗದ ಪಟ್ಟಣಗಳಲ್ಲಿ ತಲೆ ಮೇಲೆ ಮಲಹೋರುವ ಪದ್ಧತಿಯನ್ನು ರದ್ದು ಮಾಡಲು ಹೊಸ ಕಾರ್ಯಕ್ರಮಗಳು ಸಿದ್ಧಪಡಿಸುವುದಾಗಿ ಕಾಮಗಾರಿ ಮತ್ತು ನಗರಾಭಿವೃದ್ಧಿ ಸಚಿವ ಭೋಗಾಪಾಸ್ವಾನ್ ಶಾಸ್ತ್ರಿ ಸೆಪ್ಟಂಬರ್ ೧೯ರಂದು ವರದಿಗಾರರಿಗೆ ತಿಳಿಸಿದರು. ರಾಜ್ಯ ಸರ್ಕಾರವೂ ಅಸ್ಪೃಶ್ಯತೆ ನಿವಾರಣೆಗೆ ಕಾನೂನುಗಳನ್ನು ಜಾರಿಗೊಳಿಸಿತು. ಮುಜರಾಯಿ ದೇವಸ್ಥಾನಗಳ ಸಮಿತಿಯಲ್ಲಿ ಹರಿಜನರಿಗೆ ಸದಸ್ಯತ್ವವನ್ನು ಕಡ್ಡಾಯಗೊಳಿಸಲಾಯಿತು. ಊರಿನ ಎಲ್ಲರ ಜೊತೆ ಹರಿಜನರೂ ಬಾವಿ, ಕೆರೆ, ನಲ್ಲಿಯ ನೀರನ್ನು ಬಳಸುವ ವ್ಯವಸ್ಥೆಗಾಗಿ ಶೇ ೫೦%ರಷ್ಟು ಹರಿಜನರಿರುವ ಹಳ್ಳಿಗಳಿಗೆ ರಾಷ್ಟ್ರೀಯ ನೀರು ಪೂರೈಕೆ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಪಂಚಾಯ್ತಿ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಳಿಗಳ ಪ್ರದೇಶದ ಹರಿಜನರಿಗೆ ಓಡಾಡಲು ಪ್ರತಿ ಬಂಧಕವಿರುವ ಸಂಸ್ಥೆಗಳಿಗೆ ಧನ ಸಹಾಯ ನಿಲ್ಲಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿತು. ಇಂತಹ ಸಂದರ್ಭದಲ್ಲಿಯೇ ಸರ್ಕಾರದ ದುರ್ಬಲತೆ, ರಾಜಕೀಯ, ಭ್ರಷ್ಟಾಚಾರ ವಿರೋಧಿಸಿ ಆಂಧ್ರಪ್ರದೇಶದ ವಾರಂಗಲ್‌ನಲ್ಲಿ ಈ ರಾಷ್ಟ್ರದಲ್ಲಿ ಸಮಾಜವಾದವನ್ನು ಜಾರಿಗೆ ತರಲು ಜನತೆ ಶಸ್ತ್ರ ಸಜ್ಜಿತ ಹೋರಾಟಕ್ಕೆ ಸಿದ್ಧವಾಗಬೇಕು ಎಂದು ಕ್ರಾಂತಿಕಾರಿ ಬರಹಗಾರರ ಸಮ್ಮೇಳನ ಕರೆ ನೀಡಿತು.

ಒಂದು ವರ್ಷದ ಈ ಘಟನೆಗಳನ್ನು ನೋಡಿದರೆ ೧೯೭೩ ಸಂಘರ್ಷದ ವರ್ಷವಾಗಿ ಕಾಣುತ್ತೆ. ಹಾಸನದಲ್ಲಿ ಒಬ್ಬ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು ನಾಂದಿಯಾಗಿ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಚಳವಳಿ ತೀವ್ರರೂಪ ತಾಳಲು ಕಾರಣವಾಯಿತು. ಇಡೀ ರಾಜ್ಯಕ್ಕೆ ವ್ಯಾಪಿಸುವ ಭೀತಿಯುಂಟಾಯಿತು. ಚಳವಳಿ ಹಿಂಸಾತ್ಮಕ ತಿರುವು ಹೊಂದಿ ಅದನ್ನು ತಹಬದಿಗೆ ತರಲು ಪೊಲೀಸರು ರಾಜ್ಯದ ೭ ಪಟ್ಟಣಗಳಲ್ಲಿ ಗೋಲಿಬಾರ್, ಸುಮಾರು ೨೦ ಕಡೆ ಅಶ್ರುವಾಯು, ಲಾಟಿ ಪ್ರಹಾರ ಮೊದಲಾದವುಗಳನ್ನು ನಡೆಸಬೇಕಾಯಿತು. ಇದರ ಫಲವಾಗಿ ಲೆಕ್ಕಸಿಕ್ಕಂತೆ ೫ ಜನ ಸತ್ತರು. ಪೊಲೀಸರೂ ಸೇರಿದಂತೆ ನೂರಾರು ಜನ ಗಾಯಗೊಂಡರು. ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಇತರರೂ ಸೇರಿಕೊಂಡು ಧಾನ್ಯದ ಅಂಗಡಿಗಳು, ಸರ್ಕಾರಿ ಮಳಿಗೆಗಳು, ಸೀಮೆಗೊಬ್ಬರದ ದಾಸ್ತಾನಿನ ಮಳಿಗೆಗಳನ್ನು ಲೂಟಿ ಮಾಡಿ ಅವುಗಳನ್ನು ತಮಗಿಷ್ಟ ಬಂದಂತೆ ಹಂಚಿಕೊಂಡರು. ಅನೇಕ ವಾಹನಗಳು ಮತ್ತು ಮಂಡ್ಯದಲ್ಲಿ ೧೦೦ಕ್ಕೂ ಗುಡಿಸಲುಗಳು ಅಗ್ನಿಗೆ ಆಹುತಿಯಾದವು.

ರಾಜ್ಯದಲ್ಲಾದ ಗಲಭೆ ದೊಂಬಿ ಅಗ್ನಿ ಸ್ಪರ್ಶ, ವಿದ್ಯಾರ್ಥಿಗಳ ಪ್ರತಿಭಟನೆ, ಬೆಲೆ ಏರಿಕೆಯ ವಿರುದ್ಧದ ಜನರ ಧೋರಣೆ ಹಿಂಸಾತ್ಮಕ ರೂಪ ತಾಳಿತು. ಇಷ್ಟೆಲ್ಲಾ ಆದದ್ದು ಯಾಕೆ ಎಂದರೆ ಹಸಿವು ಮತ್ತು ಕೊರತೆ. ಹಸಿವು ಎಲ್ಲಕ್ಕಿಂತ ಭೀಕರವಾದದ್ದು. ವಿಪರೀತ ಪರಿಣಾಮಗಳಿಗೆ ಕಾರಣವಾಗುವಂಥದ್ದು ಆಹಾರಕ್ಕಾಗಿ ಪರಿತಪಿಸಿದ ಇಕ್ಕಟ್ಟಿನ ದಿನಗಳು ಇವಾಗಿದ್ದವು. ಆ ಕಾರಣದಿಂದಲೇ ಈ ಪರಿಯ ಪ್ರತಿಭಟನೆ, ಆಹಾಕಾರ ಭಾರತದಾದ್ಯಂತ ಇತ್ತು. ಅದು ಕರ್ನಾಟಕದಲ್ಲಿ ತೀವ್ರವಾಗಿಯೇ ಅಭಿವ್ಯಕ್ತಗೊಂಡಿತು. ಮೈಸೂರಿನಂಥ ಅಕ್ಕಿ ಕಣಜದ ಪ್ರದೇಶದಲ್ಲಿ ಕೆ.ಜಿ.ಯ ಧಾರಣೆ ಬೆಳಗಾಗುವುದರಲ್ಲಿ ೨ ರೂಪಾಯಿನಷ್ಟು ಏರಿದರೆ, ಉಳಿದೆಡೆ ಅಕ್ಕಿ ಸಿಗುವುದೇ ಕಷ್ಟವಾಯಿತು. ಇದರಿಂದಾಗಿ ಜನರು ಪ್ರಕ್ಷುಬ್ಧರಾದರು. ಗಲಭೆ ದೊಂಬಿ ಲೂಟಿಗಳಿಗೆ ಗೂಂಡಾಗಳು, ಸಮಾಜ ವಿರೋಧಿ ಶಕ್ತಿಗಳೂ ಕಾರಣವಾದದ್ದು ಸಹಜವಾಗಿತ್ತು. ಸಾಮಾನ್ಯವಾಗಿ ಚಳವಳಿಗಳು ತೀವ್ರ ಸ್ವರೂಪ ತಾಳಿದಾಗ ಅಂಥವರು ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಹೊಸದೇನಲ್ಲ. ಆದರೆ ಚಳವಳಿಯ ಒಟ್ಟು ಮನಸ್ಥಿತಿಯನ್ನು ಈ ನೆಪದಲ್ಲಿ ಸರಳೀಕರಿಸಲು ಸಾಧ್ಯವಿಲ್ಲ.

ಇಲ್ಲಿನ ವಿವರಗಳು ಎಪ್ಪತ್ತರ ದಶಕದ ಕರ್ನಾಟಕವನ್ನು ಪರಿಚಯಿಸುತ್ತವೆ. ಒಂದು: ರಾಜ್ಯದಲ್ಲಿ ಶಾಂತಿ ಇರಲಿಲ್ಲ ಮುಖ್ಯವಾಗಿ ‘ಆಹಾರ’ ಇರದಿದ್ದ ಮೇಲೆ ಶಾಂತಿ ನೆಲೆಸಲು ಹೇಗೆ ಸಾಧ್ಯ. ಎರಡು: ಸಾಮಾನ್ಯ ಜನರಿಗೆ ಪ್ರತಿಭಟನೆಯ ವಿನಃ ಮತ್ತಾವ ದಾರಿಗಳೂ ಕಾಣದಂತಾಗಿತ್ತು. ತಾವು ಹಸಿದಿದ್ದಾಗಲೂ ಕೆಲವರು ಸುಖದ ಸುಪ್ಪತ್ತಿಗೆಯಲ್ಲಿರುವುದು ಜನರನ್ನು ಕೆರಳಿಸಿತ್ತು. ಮೂರು: ದೊಂಬಿ ಗಲಭೆಗಳ ನೆಪದಲ್ಲಿ ಸಂಪತ್ತಿನ ಸಂಗ್ರಹಗಳನ್ನು ಕೊಳ್ಳೆ ಹೊಡೆಯುವುದು, ಶ್ರೀಮಂತರ ಮೇಲಿನ ತಮ್ಮ ಕೋಪವನ್ನು ಈ ರೀತಿ ಕಡಿಮೆ ಮಾಡಿಕೊಳ್ಳುವುದು. ನಾಲ್ಕು: ಒಂದು ವರ್ಷದಲ್ಲಿ ಕನಿಷ್ಟ ಮೂರು ನೂರಕ್ಕೂ ಹೆಚ್ಚಿನ ಪ್ರತಿಭಟನೆ ಚಳುವಳಿಗಳು ಜನಸಮುದಾಯದ ಪ್ರತಿಭಟನಾ ಮನೋಭಾವ ಮತ್ತು ೧೯೭೩ರ ಸಂದರ್ಭದಲ್ಲಿದ್ದ ಸಾಮಾಜಿಕ ರಾಜಕೀಯ ವ್ಯವಸ್ಥೆಗೆ ಜನತೆ ಸ್ಪಂದಿಸುತ್ತಿದ್ದ ಬಗೆಯನ್ನು ತೋರಿಸುತ್ತದೆ.

ಚಳವಳಿಯ ಭೂಮಿಕೆ ಸಿದ್ಧವಾದ ಕರ್ನಾಟಕದ ಒಟ್ಟು ಈ ಪರಿಸರ ಸೊಂಡೂರಿನಲ್ಲಿ ರೈತ ಚಳವಳಿಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು. ಸೊಂಡೂರು ಎಂಬ ಪುಟ್ಟ ತಾಲೂಕಿನ ರೈತರ ವಿಷಯವಾಗಿದ್ದ ಭೂಮಿಯ ಸಮಸ್ಯೆ ರಾಜ್ಯದ ಸಮಸ್ಯೆಯಾಯಿತು. ಈವರೆಗೂ ‘ರಾಜ’ನ್ನೇ ಆರಾಧ್ಯ ದೈವವಾಗಿಸಿಕೊಂಡು, ರಾಜರ ಎಲ್ಲ ಅಪ್ಪಣೆಗೂ ತಲೆ ಹಾಕುತ್ತಾ ಬಂದವರಲ್ಲಿ ಕೆಲವರು ಎಚ್ಚೆತ್ತು ಚಳವಳಿಗೆ ಕಾರಣರಾದರು. ರಾಜ್ಯದಾದ್ಯಂತ ಚಳವಳಿಗಳ ಮುಖಂಡತ್ವ ವಹಿಸಿಕೊಂಡಿದ್ದವರು ಈ ರೈತರ ಹೋರಾಟಕ್ಕೆ ಬೆಂಬಲಿಸಿದರು. ಸೋಷಲಿಸ್ಟ್ ಪಾರ್ಟಿಯು ಇದು ತನ್ನ ನಿರ್ಣಾಯಕ ಹೋರಾಟವೊ ಎಂಬಂತೆ ಚಳವಳಿಯನ್ನು ರೂಪಿಸಿತು. ೧೯೭೩ರ ಸೊಂಡೂರಿನ ಸಾಮಾಜಿಕ ಪರಿಸರವನ್ನು ಅವಲೋಕಿಸುವುದು ಮುಖ್ಯ. ಕರ್ನಾಟಕದ ವಿದ್ಯಮಾನಗಳು ಈ ತಾಲೂಕನ್ನು ಪ್ರೇರೇಪಿಸಿದವೆ? ಅಥವಾ ಹೊರ ಜಗತ್ತಿಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ಮಟ್ಟಿಗೆ ತಾಲ್ಲೂಕಿನ ಜನರು ಮೌನವಾಗಿದ್ದೆ? ಮೌನವಾಗಿದ್ದರೆ ಈ ಮೌನ ಹಿಂದಿರುವ ಒತ್ತಡವೇನು? ರೈತರ ಭೂ ಹೋರಾಟದಲ್ಲಿ ಯಾವ ಯಾವ ಸಮುದಾಯಗಳು ಕ್ರಿಯಾಶೀಲವಾಗಿ ಭಾಗವಹಿಸಿದವು? ಕೆಲವು ನಿರ್ಲಿಪ್ತವಾದದ್ದೇಕೆ? ಮುಂತಾದ ಪ್ರಶ್ನೆಗಳನ್ನು ಪರಿಶೀಲಿಸಬೇಕು. ಆಗ ಚಳವಳಿಯ ಜನಸಮುದಾಯದ ಮಗ್ಗಲುಗಳು ತೆರೆದುಕೊಳ್ಳುತ್ತವೆ.

೧೯೭೧ರ ಜನಗಣತಿಯ ಕೊಡುವ ತಾಲೂಕಿನ ಒಂದು ಚಿತ್ರವನ್ನು ನೋಡಬಹುದು. ಮೈಸೂರು ರಾಜ್ಯದ ಒಟ್ಟು ಜನಸಂಖ್ಯೆ ೨೯, ೨೯೯,೦೧೪ ರಷ್ಟಿದ್ದರೆ, ಬಳ್ಳಾರಿ ಜಿಲ್ಲೆಯ ಜನಸಂಖ್ಯೆ ೧,೧೨೨,೬೮೬ ರಷ್ಟಿತ್ತು. ಇನ್ನು ಸೊಂಡೂರು ತಾಲ್ಲೂಕಿನ ಜನಸಂಖ್ಯೆ ೯೨,೯೦೪ ರಷ್ಟು, ಪುರುಷರು ೪೭,೮೩೨ ಇದ್ದರೆ ಮಹಿಳೆಯರು ೪೫,೦೭೨ರಷ್ಟು, ಸಾಕ್ಷರತೆಯ ಪ್ರಮಾಣ ಒಟ್ಟು ೫,೧೭೯, ಪುರುಷರು ೧,೪೧೨ ಇದ್ದರೆ ಮಹಿಳೆಯರು ೩,೭೬೨ರಷ್ಟಿದ್ದರು. ತಾಲೂಕಿನ ಒಟ್ಟು ಕೆಲಸಗಾರರು ೩೪,೪೫೫. ಕೃಷಿಯನ್ನು ಅವಲಂಬಿಸಿದವರು ೧೩,೧೬೮. ಕೃಷಿ ಕಾರ್ಮಿಕರು ೧,೭೫೨, ಮೈನಿಂಗ್‌ನಲ್ಲಿ ದುಡಿಯುತ್ತಿದ್ದವರು ೪,೮೧೪ರಷ್ಟಿದ್ದರು.

ಇಲ್ಲಿನ ಅಂಕಿ ಸಂಖ್ಯೆಗಳನ್ನು ನೋಡಿದರೆ, ಸೊಂಡೂರು ಬಳ್ಳಾರಿ ಜಿಲ್ಲೆಯಲ್ಲಿಯೇ ಕಡಿಮೆ ಸಾಕ್ಷರತೆಯನ್ನು ಹೊಂದಿದ ತಾಲೂಕು. ಅಂತೆಯೇ ಹೆಚ್ಚು ಜನ ಕೃಷಿಯನ್ನು ಅವಲಂಬಿಸಿದವರು. ಜನಸಂಖ್ಯೆಯಲ್ಲಿ ಪುರುಷರಿಗಿಂತ ಮಹಿಳೆಯರು ೨೭೬೦ರಷ್ಟು ಕಡಿಮೆ ಇದ್ದಾರೆ. ಆದರೆ ಸಾಕ್ಷರತೆಯಲ್ಲಿ ಪುರುಷರಿಗಿಂತ ೨,೩೫೫ರಷ್ಟು ಹೆಚ್ಚಿದ್ದಾರೆ. ಪುರುಷರ ಸಾಕ್ಷರತೆ ತುಂಬ ಕಡಿಮೆ ಇದೆ. ೧೯೭೩ರ ಸಂದರ್ಭದ ಜನಸಮುದಾಯವನ್ನು ನೋಡಿದರೆ ಲಿಂಗಾಯಿತರು. ನಾಯಕರು ಸಮ ಪ್ರಮಾಣವಿದೆ. ಉಳಿದಂತೆ ಮರಾಠಿಗರು, ಜಂಗಮರು, ಬ್ರಾಹ್ಮಣರು, ಕುರುಬರು, ಮುಸ್ಲಿಮರು, ಪ್ರಮುಖವಾದ ಸಮುದಾಯಗಳು. ನಾಯಕರು ಮಹಾರಾಜರ ನಂಬಿಗಸ್ಥ ಸಮುದಾಯವಾಗಿತ್ತು. ಒಟ್ಟು ಇನಾಂ ಭೂಮಿಯಲ್ಲಿ ನಾಯಕ ಸಮುದಾಯದವರೇ ಹೆಚ್ಚು ಗೇಣಿ ಮಾಡುವವರಾಗಿದ್ದರು. ಆದರೆ ಚಳವಳಿಯಲ್ಲಿ ನಾಯಕ ಸಮುದಾಯ ಭಾಗವಹಿಸಿದ್ದು ಕಡಿಮೆ. ಕಾರಣ ಇವರನ್ನು ಮಹಾರಾಜರು ರಾಜವಂಶದ ಬೆಂಬಲಕ್ಕೆ ವಿಶ್ವಸನೀಯವಾಗಿ ನಡೆಸಿಕೊಂಡಂತೆ ಕಾಣುತ್ತದೆ.

ಯಜಮಾನ ಶಾಂತರುದ್ರಪ್ಪನವರ ಚಳವಳಿ ವೀರಶೈವ ಲಿಂಗಾಯಿತರನ್ನು ಹೆಚ್ಚು ಅವಲಂಬಿಸಿದ್ದಿತು. ಹಾಗಾಗಿ ಅವರಿಗೆ ಇತರ ಸಮುದಾಯಗಳ ಜೊತೆ ಬೆರೆಯುವಿಕೆ ಸಾಧ್ಯವಾಗುತ್ತಿರಲಿಲ್ಲ. ೭೦ರ ದಶಕದಲ್ಲಿ ಕಾಂಗ್ರೇಸ್ ಪ್ರಭಾವಿ ಪಕ್ಷವಾಗಿತ್ತು. ಇದರ ಎದುರು ನಿಲ್ಲುವಂತಹ ಪಕ್ಷಗಳಿರಲಿಲ್ಲ. ಇಂದಿರಾಗಾಂಧಿಯವರ ಆಕರ್ಷಕ ವ್ಯಕ್ತಿತ್ವ ಜನರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಎಲಿಗಾರ ತಿಮ್ಮಪ್ಪನವರು ಸಂಸ್ಥಾ ಕಾಂಗ್ರೆಸ್ಸಿನಲ್ಲಿ ಇದ್ದ ಕಾರಣ ಅವರ ಸಹಚರರೆಲ್ಲಾ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದರು. ಇವರು ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾಗಿದ್ದರು. ರೈತರಿಗೆ ಕೃಷಿ ಸಾಲವನ್ನು ಕೊಡುತ್ತಿದ್ದರು. ಸಹಜವಾಗಿ ಕೃಷಿ ಸಾಲವನ್ನು ಮಧ್ಯಮ ವರ್ಗದ ಕೃಷಿಕರಿಗೆ ಕೊಡಲಾಗುತ್ತಿತ್ತು. ಸಾಲ ಪಡೆದವರಲ್ಲಿ ಹೆಚ್ಚಿನವರು ಲಿಂಗಾಯತರು. ಹಾಗಾಗಿ ತಿಮ್ಮಪ್ಪನವರ ಜೊತೆ ಕೃಷಿ ಕೂಲಿ ಕೆಲಸಗಾರರು ಇತರ ಸಮುದಾಯದವರು ಜೊತೆಗಿದ್ದದ್ದು ಕಡಿಮೆ. ಹೀಗಾಗಿ ತಿಮ್ಮಪ್ಪನವರನ್ನು ಬೆಂಬಲಿಸುವ ಕೃಷಿ ಸಮುದಾಯದ ಒಂದು ವರ್ಗವಿತ್ತು. ಪಾತ್ರ ಸೀನಪ್ಪ ಹೇಳುವಂತೆ “ಸರಾಯಿ ಕಾಂಟ್ರ್ಯಾಕ್ಟ್ ಮಹಾರಾಜರದೇ ಆಗಿದ್ದರಿಂದ ಜನರಿಗೆ ಸರಾಯಿ ಕುಡಿಸಿ ಮಳ್ ಮಾಡ್ತಿದ್ರು. ನಾನು ಹಿರೋಜಿ ಲಾಡ್‌ಅವ್ರತ್ರ ಕಾರ್ ಡ್ರೈವರ್ ಆಗಿದ್ದೆ. ಸರಾಯಿ ಕಾಂಟ್ರ್ಯಾಕ್ಟ್ ಹೇಗಾದ್ರೂ ಮಾಡಿ ನಾವು ಪಡ್ಕೋಬೇಕು ಅಂತ ಹೋರಾಡಿ ನಾನೇ ಕಾಂಟ್ರ್ಯಾಕ್ಟ್ ತೊಗೊಂಡೆ”, ಆಗ ಹಿರೋಜಿ ಲಾಡ್ ಅವರಿಗೂ ಘೋರ್ಪಡೆ ವಂಶಸ್ಥರಿಗೂ ಸಂಘರ್ಷಗಳೇನೂ ಇರಲಿಲ್ಲ.

ಎಂ.ವೈ.ಘೋರ್ಪಡೆಯವರು ದೇವರಾಜ ಅರಸು ಅವರ ಮಂತ್ರಿ ಮಂಡಲದಲ್ಲಿ ಅರ್ಥ ಸಚಿವರಾಗಿದ್ದರು. ಇದರಿಂದಾಗಿ ಸರ್ಕಾರದ ಕನಿಷ್ಠ ಸೌಲಭ್ಯಗಳನ್ನು ತಾಲ್ಲೂಕಿನ ಬಡ ಜನತೆಗೆ ಒದಗಿಸುವಲ್ಲಿ ಸಹಕಾರಿಯಾಗಿತ್ತು. ಇದು ತಾಲೂಕಿನ ಜನತೆಯಲ್ಲಿ ರಾಜಮನೆತನದ ಮೇಲೆ ಮೊದಲಿನಿಂದಲೂ ಇದ್ದ ಅಭಿಮಾನ ಗೌರವ ಇಮ್ಮಡಿಯಾಗಲು ಕಾರಣವಾಯಿತು. ಯಶವಂತರಾವ್‌ ಘೋರ್ಪಡೆಯವರ ದರ್ಪದ ಆಡಳಿತ ಜನಗಳ ಮಧ್ಯೆ ಹಸಿಹಸಿಯಾಗಿತ್ತು. ಇದು ಜನರಲ್ಲಿ ರಾಜವಂಶದ ಮೇಲೆ ನಿಜವಾದ ಭಕ್ತಿ ಗೌರವಗಳಿಗಿಂತ ‘ರಾಜರು’ ಎಂಬ ಭಯವೇ ಹೆಚ್ಚಾಗಲು ಕಾರಣವಾಗಿತ್ತು. ಈ ಭಯ ರಾಜರ ವಿರುದ್ಧ ನಿಲ್ಲುವುದನ್ನು ‘ಮಾತನಾಡುವುದನ್ನು’ ತಡೆಯುತ್ತಿತ್ತು. ಕುಮಾರಸ್ವಾಮಿ ಮುಂತಾದ ದೇವಾಲಯಗಳ ಜಾತ್ರೆ ಉತ್ಸವಗಳಲ್ಲಿ ರಾಜದರ್ಬಾರಿನದು ಪ್ರಧಾನ ಪಾತ್ರ. ಹೀಗೆ ಧರ್ಮದ ಮೂಲಕವೂ ಜನರನ್ನು ರಾಜಮನೆತನ ನಿಯಂತ್ರಿಸುತ್ತಿತ್ತು. ಇಲ್ಲಿಯ ದಸರಾ ಮೈಸೂರು ದಸರಾ ಮೆರವಣಿಗೆಯನ್ನು ಹೋಲುತ್ತಿತ್ತು. ಮಹಾರಾಜರಿಗೆ ಬನ್ನಿಕೊಟ್ಟು ಬೆನ್ನು ತಿರುಗಿಸಬಾರದೆಂದು ಮರೆಯಾಗುವ ತನಕ ಹಿಮ್ಮುಖವಾಗಿಯೇ ಚಲಿಸುವ ಪದ್ಧತಿ ಈಗಲೂ ಇದೆ. ಕುಮಾರಸ್ವಾಮಿ ಜಾತ್ರೆಯಲ್ಲಿ ಪಟದ ಹರಾಜಿನ ಜೊತೆ ಇನಾಮು ಭೂಮಿಯ ‘ಗೇಣಿ’ಯೂ ನಿರ್ಧಾರವಾಗುತ್ತಿತ್ತು. ಒಂದೇ ಹೊಲಕ್ಕೆ ಹೆಚ್ಚು ಗೇಣಿ ಕೊಡುವವರಿಗೆ ಸಾಗುವಳಿ ಬದಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಒಪ್ಪಿತ ಗೇಣಿಯನ್ನು ಕಟ್ಟಲಾಗುತ್ತಿತ್ತು. “ಬೆಳೆ ಬಂದಾಗ ಇಂತಿಷ್ಟು ಕಾಳು ಎಂದು ಶಿವಪುರ ಪ್ಯಾಲೇಸಿಗೆ ಹೋಗಿ ಕೊಟ್ಟು ಬರುತ್ತಿದ್ದೆವು” ಎಂದು ಕಪ್ಪೆ ಸುಬ್ಬಣ್ಣ ನೆನಪಿಸಿಕೊಳ್ಳುತ್ತಾರೆ. ಈ ಕಾರಣಗಳು ಸೊಂಡೂರಿನ ಬಹುತೇಕ ಜನ ಸಮುದಾಯ ರಾಜಮನೆತನವನ್ನು ಆರಾಧಿಸುವಂತೆ ಮಾಡುತ್ತಿದ್ದವು. ತಾಲೂಕ ಕಛೇರಿ ‘ಗ್ರಾಮ ಪಂಚಾಯ್ತಿ’, ಪೊಲೀಸ್‌ ಇಲಾಖೆ ಮುಂತಾದ ಸರ್ಕಾರಿ ಇಲಾಖೆಗಳು ಕೂಡ ಮಹಾರಾಜರ ಅಪ್ಪಣೆಯ ಮೇರೆಗೆ ಇದ್ದವು.

೧೯೭೩ರ ಕರ್ನಾಟಕದಾದ್ಯಂತ ಆಹಾರ ಸಮಸ್ಯೆ, ಬೆಲೆ ಏರಿಕೆ, ಪೊಲೀಸರ ದೌರ್ಜನ್ಯ ಪ್ರಕರಣ, ಹೋರಾಟ, ಗಲಭೆಗಳಿದ್ದರೂ ಸೊಂಡೂರಿನಲ್ಲಿ ಇದಕ್ಕೆ ಪ್ರತಿಕ್ರಿಯೆ ಇರಲಿಲ್ಲ. ಅಂದರೆ ರಾಜ್ಯದ ಸಮಸ್ಯೆಗಳಿಗೂ ಸೊಂಡೂರಿನ ಜನತೆಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಮಟ್ಟಿಗೆ ನಿರ್ಲಿಪ್ತವಾಗಿದ್ದರು. ೧೯೭೧ರ ಜನಗಣತಿ ಪ್ರಕಾರ ಮೈನಿಂಗ್‌ನಲ್ಲಿ ೪,೮೧೪ ಜನ ದುಡಿಯುತ್ತಿದ್ದರಾದರೂ ವಾಸ್ತವದಲ್ಲಿ ಈ ಸಂಖ್ಯೆ ಹೆಚ್ಚಾಗಿತ್ತು. ಮೈನಿಂಗ್‌ನಿಂದಾಗಿ ಕರ್ನಾಟಕದ ಬೇರೆ ಭಾಗಗಳಿಗಿಂತ ಉದ್ಯೋಗ ಹೆಚ್ಚಿತ್ತು. ತಾಲೂಕಿನ ಒಟ್ಟು ೯೨ ಸಾವಿರ ಜನಸಂಖ್ಯೆಯಲ್ಲಿ ೩೫ ಸಾವಿರ ಜನರಿಗೆ ಉದ್ಯೋಗವಿತ್ತು. ಈ ಕಾರ್ಮಿಕರಿಗೆ ರಾಜಮನೆತನದಿಂದ ತುಂಬ ಕಡಿಮೆ ದರಕ್ಕೆ ಆಹಾರ ಧಾನ್ಯಗಳು ಬಟ್ಟೆ ದೊರೆಯುತ್ತಿತ್ತು. ಹೀಗಾಗಿ ಇಲ್ಲಿ ನಿರುದ್ಯೋಗ, ಆಹಾರ ಸಮಸ್ಯೆ ಬೇರೆ ಭಾಗಗಳಿಗಿಂತ ಕಡಿಮೆ ಇತ್ತು. ಹೀಗಾಗಿ ಸೊಂಡೂರ ಜನರಿಗೆ ಉದ್ಯೋಗವಿತ್ತು. ಕೃಷಿ ಭೂಮಿ ಫಲವತ್ತಾಗಿದ್ದು, ಮಳೆ ಪ್ರಮಾಣ ಹೆಚ್ಚಿದ್ದರಿಂದ ಕೃಷಿ ಅವಲಂಬಿತರು ಹೆಚ್ಚಿನ ಸಂಕಷ್ಟದಲ್ಲಿರಲಿಲ್ಲ, ಬಹುತೇಕ ಜನರ ಪ್ರಮುಖ ಸಮಸ್ಯೆಗಳಾದ ಆಹಾರ, ಉದ್ಯೋಗ, ಬಟ್ಟೆ, ವಸತಿ ರಾಜಮನೆತನ ಬೇರೆ ಬೇರೆ ಮೂಲಗಳಿಂದ ಒದಗಿಸುತ್ತಿದ್ದರಿಂದ ತಾಲೂಕಿನ ಶೇ. ೭೦ರಷ್ಟು ಜನ ರಾಜರ ಋಣದಲ್ಲಿದ್ದರು. ಹಾಗಾಗಿ ಇಂಥವರಿಗೆ ರಾಜರ ವಿರುದ್ಧ ಧ್ವನಿ ಎತ್ತುವ ಸಾಧ್ಯತೆ ಇರಲಿಲ್ಲ.

ಈ ಎಲ್ಲದರ ಮಧ್ಯೆಯೂ ಪ್ರಜಾಪ್ರಭುತ್ವ ಸರ್ಕಾರದಲ್ಲಿ ರಾಜಶಾಹಿ ಕೆಲವರಿಗೆ ಕಹಿಯಾಯಿತು. ಜನರಿಗೆ ಅಹಾರ, ಉದ್ಯೋಗ ಕೊಟ್ಟು ಧ್ವನಿ ಎತ್ತದಂತೆ ಮಾಡಿ, ಅವರನ್ನೆಲ್ಲ ಶೋಷಿಸಲಾಗುತ್ತಿದೆ. ಇಲ್ಲಿ ಎಲ್ಲರೂ ಸಮಾನರು, ರಾಜರು ಅನಧಿಕೃತವಾಗಿ ಹೊಂದಿರುವ ಅಪಾರ ಸಂಪತ್ತು ಜನರಿಗೆ ಹಂಚಲ್ಪಡಲಿ, ಉಳುವವನೇ ಭೂಮಿಯ ಒಡೆಯನಾಗಲಿ ಎನ್ನುವ ಪ್ರಜ್ಞೆ ಕೆಲವರಲ್ಲಿ ಮೂಡಿತು. ಈ ಬಗೆಯ ಮನೋಸ್ಥಿತಿ ಇರುವವರು ಮತ್ತು ಇತರೆ ಕಾರಣಗಳಿಂದ ರಾಜರನ್ನು ವಿರೋಧಿಸುವವರ ಒಂದು ಗುಂಪು ಬೆಳೆಯಿತು. ಅವರುಗಳೆಂದರೆ, ಒಂದು: ಕೆಲವರು ಮೈನಿಂಗ್‌ ಲೈಸೆನ್ಸಿಗಾಗಿ ಪ್ರಯತ್ನಿಸಿ ವಿಫಲರಾಗಿದ್ದರು. ಇದಕ್ಕೆ ಕಾರಣ ಮಹಾರಾಜರು. ಹಾಗಾಗಿ ಇವರೆಲ್ಲ ರಾಜರ ವಿರೋಧಿಗಳಾದರು. ಎರಡು: ತಾಲೂಕಿನ ಗ್ರಾಮ ಪಂಚಾಯ್ತಿಗಳ ರಾಜಕೀಯದಲ್ಲಿ ರಾಜರ ಪರವಾರದವರು ಇರುತ್ತಿದ್ದರು. ರಾಜರ ಪರವಾದವರನ್ನು ವಿರೋಧಿಸುತ್ತಿದ್ದವರೆಲ್ಲ ರಾಜರನ್ನು ವಿರೋಧಿಸ ತೊಡಗಿದರು. ಇದರಿಂದಾಗಿ ಹಳ್ಳಿಗಳಲ್ಲಿ ರಾಜರ ವಿರೋಧಿ ಗುಂಪೊಂದು ಬೆಳೆಯಿತು. ಮೂರು: ಕೇಂದ್ರ ಸರ್ಕಾರದ ಎನ್‌.ಎಂ.ಡಿ.ಸಿ ಯನ್ನು ರಾಜರು ಗುತ್ತಿಗೆ ಹಿಡಿದು ಆ ನೆಪದಲ್ಲಿ ನರಸಾಪುರ, ಭುಜಂಗನಗರದ ರೈತರ ಜಮೀನನ್ನು ವಶಪಡಿಸಿಕೊಂಡರು. ಹೀಗೆ ಭೂಮಿ ಕಳೆದುಕೊಂಡವರು. ನಾಲ್ಕು: ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬೆಳೆಯುವ ಲಕ್ಷಣವಿರುವವರನ್ನು ರಾಜತಂತ್ರದಿಮದ ಹತ್ತಿಕ್ಕಲಾಯಿತು. ಹೀಗೆ ಹತ್ತಿಕ್ಕಲ್ಪಟ್ಟವರು. ಐದು; ರಾಜರ ಕಂಪನಿಗಳಲ್ಲಿ ಕಾರ್ಮಿಕರನ್ನು ಒಗ್ಗೂಡಿಸುವವರನ್ನು, ಸರಿಯಾಗಿ ಕೆಲಸ ಮಾಡದವರನ್ನು ‘ನಿಪುಣತೆ ಇರದವರನ್ನು’ ಕೆಲಸದಿಂದ ತೆಗೆಯಲಾಗುತ್ತಿತ್ತು. ಹೀಗೆ ಕೆಲಸ ಕಳೆದುಕೊಂಡವರು. ಆರು: ಕಡಿಮೆ ದರದಲ್ಲಿ ಆಹಾರ ಧಾನ್ಯ, ಬಟ್ಟೆ, ಸೀಮೆಎಣ್ಣೆ ಮುಂತಾದವುಗಳು ರಾಜರ ನ್ಯಾಯ ಬೆಲೆ ಅಂಗಡಿಯಿಂದ ಸಿಗುತ್ತಿದ್ದವು. ಇದರಿಂದ ಇವುಗಳ ವ್ಯಾಪಾರವನ್ನು ನಂಬಿಕೊಂಡು ಬದುಕುತ್ತಿದ್ದ ಬಣಜಿಗರು, ಶೆಟ್ಟರು, ಬ್ರಾಹ್ಮಣರು ಮುಂತಾದ ವ್ಯಾಪಾರಿ ಸಮುದಾಯ. ಏಳು: ರಾಜರ ಬೆಂಬಲದಿಂದ ಪೊಲೀಸರು ದೌರ್ಜನ್ಯ ಮಾಡುತ್ತಿದ್ದರು. ಇಂತಹ ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರು. ಹೀಗೆ ಮಹಾರಾಜರಿಂದ ಒಂದಲ್ಲ ಒಂದು ಕಾರಣಕ್ಕೆ ಶೋಷಣೆಗೆ ಒಳಗಾದವರೆಲ್ಲ ಒಂದು ಗುಂಪಾಗಿ ರಾಜವಂಶವನ್ನು ವಿರೋಧಿಸುವ ಒಂದು ಸಮೂಹವು ಜೊತೆಯಾಯಿತು. ಹೀಗೆ ರಾಜರ ವಿರೋಧಿಗಳ ಬಣವನ್ನು ಸೃಷ್ಡಿಸಿತು. ಈ ಸಂದರ್ಭದಲ್ಲಿ ೧೯೩೦ರಿಂದ ರಾಜರನ್ನು ವಿರೋಧಿಸುತ್ತಾ ಬಂದ ಎಲಿಗಾರ ತಿಮ್ಮಪ್ಪ, ಯಜಮಾನ ಶಾಂತರುದ್ರಪ್ಪ ನಾಯಕರಾದರು. ಮುಂದೆ ಭೂ ಹೋರಾಟದ ಸಂದರ್ಭದಲ್ಲಿ ಈ ವಿರೋಧಿ ಬಣ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಸಹಕರಿಸಿ ಭಾಗವಹಿಸಿತು.