೧೯೭೧ರ ಫೆಬ್ರವರಿ ೧೮,೧೯ ರಂದು ನರಸಾಪುರದಲ್ಲಿ ಎನ್‌.ಎಂ.ಡಿ.ಸಿ (ನ್ಯಾಷನಲ್‌ ಮಿನರಲ್‌ ಡೆವಲಪಮೆಂಟ್‌ ಕಾರ್ಪೋರೇಷನ್‌) ಭೂಮಿ ಕಳೆದುಕೊಂಡವರು ಸತ್ಯಾಗ್ರಹ ಮಾಡಿದರು. ಎನ್‌.ಎಮ್‌.ಡಿ.ಸಿ. ಕೇಂದ್ರ ಸರ್ಕಾರದ ಯೋಜನೆ ಆದರೆ ಅದರ ಗುತ್ತಿಗೆಯನ್ನು ರಾಜಮನೆತನವೇ ಪಡೆದಿತ್ತು. ಇದು ಪ್ರಾರಂಭವಾದಾಗ ನರಸಾಪುರದ ಬಹುತೇಕ ರೈತರು ತಮ್ಮ ಆಸ್ತಿಗಳನ್ನು ಕಳೆದುಕೊಂಡರು. ಮಾಜಿ ರಾಜರು ಇದರ ಪರಿಹಾರಾರ್ಥವಾಗಿ ಭೂಮಿ ಕಳೆದುಕೊಂಡಿವರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಟ್ಟರು. ಆದರೆ ಕೆಲಸದಲ್ಲಿ ನಿಪುಣತೆ ಇಲ್ಲ ಎನ್ನುವ ನೆಪಹೊಡ್ಡಿ ಹೊಸದಾಗಿ ಉತ್ತರ ಭಾರತದ ಕೆಲಸಗಾರರನ್ನು ನೇಮಿಸಿಕೊಂಡು ೧೯೭೧ರಲ್ಲಿ ನರಸಾಪುರದ ರೈತರನ್ನೆಲ್ಲಾ ಕೆಲಸದಿಂದ ತೆರವುಗೊಳಿಸಲಾಯಿತು. ಇತ್ತ ಕೆಲಸವೂ ಇಲ್ಲದೆ ಅತ್ತ ಭೂಮಿಯೂ ಸಿಗದೆ ಅತಂತ್ರರಾದ ರೈತರು ರಾಜರನ್ನು ವಿರೋಧಿಸಿ ಎರಡು ದಿನ ಸತ್ಯಾಗ್ರಹ ಮಾಡಿದರು. ಎನ್‌.ಎಂ.ಡಿ.ಸಿ.ಗೆ ನೀರಿನ ಸರಬರಾಜು ಷಣ್ಮುಖಪ್ಪ ದೇಸಾಯಿಯವರ ಮನೆ ಪಕ್ಕದ ಭಾವಿಯಿಂದಲೇ ಆಗುತ್ತಿತ್ತು. ರೈತರು ಈ ನೀರಿನ ಸರಬರಾಜರನ್ನು ನಿಲ್ಲಿಸಿದರು. ಚಳವಳಿಗೆ ನರಸಾಪುರದ ರೈತರೆಲ್ಲಾ ಹೆಚ್ಚು ಕಡಿಮೆ ಒಂದು ಸಾವಿರ ಜನರು ಭಾಗವಹಿಸಿದರು. ಮೊದಲ ದಿನ ಘೋರ್ಪಡೆಯವರು ರೈತರಲ್ಲಿ ಮನವಿ ಮಾಡಿಕೊಂಡರು. ಪರಿಹಾರ ಧನ ನೀಡುವುದಾಗಿ ಹೇಳಿದರು. ಜನರು ಇಂತಹ ಭರವಸೆಯಲ್ಲಿ ನಂಬಿಕೆ ಕಳೆದುಕೊಂಡಿದ್ದರು. ಮಾಜಿ ರಾಜರ ಈ ಮನವಿಯನ್ನು ತಿರಸ್ಕರಿಸಿ, ಅವರೆದುರಿಗೇ ರಾಜರಿಗೆ ಧಿಕ್ಕಾರ ‘ಬೇಕೆ ಬೇಕು ನ್ಯಾಯ ಬೇಕು’ ಎಂದು ಕೂಗಿದರು. ಷಣ್ಮುಖಪ್ಪ ದೇಸಾಯಿಯವರ ನಾಯಕತ್ವದಲ್ಲಿ ರೈತರೆಲ್ಲಾ ಒಂದಾದರು. ಫೆಬ್ರವರಿ ೧೯ ಚಳುವಳಿಯ ಎರಡನೆಯ ದಿನ ಮತ್ತಷ್ಟು ರೈತರು ಉತ್ಸಾಹದಿಂದ ಭಾಗಿಯಾದರು. ಅಂದು ಲಾಟಿ ಚಾರ್ಜ ಆಯಿತು. ಅಂದೂ ಸಹ ಎನ್‌.ಎಂ.ಡಿ.ಸಿ.ಗೆ ನೀರು ಬಿಡಲಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎನ್ನುವ ಘೋಷನೆ ಮಾತ್ರ ಜೋರಾಗಿತ್ತು. ಪೊಲೀಸರ ರಿಜರ್‌ವ್ಯಾನ್ನು ಬಂದು ಚಳವಳಿಗಾರರನ್ನು ಬೆದರಿಸಲು ನೋಡಿದರು. ಆದಿನ ಕೂಡ್ಲಿಗಿಯ ಸರ್ಕಲ್‌ ಇನ್ಸ್‌ಪೆಕ್ಟರ್‌, ಬಳ್ಳಾರಿಯ ಜಿಲ್ಲಾಧಿಕಾರಿಗಳು ಬಂದು ರೈತರೊಂದಿಗೆ ಮಾತನಾಡಿ ಪರಿಹಾರ ಕೊಡಿಸುವುದಾಗಿ ಭರವಸೆ ಕೊಟ್ಟು ಚಳುವಳಿಯನ್ನು ನಿಲ್ಲಿಸಿದರು. ಆದರೆ ಮೊದಲ ಬಾರಿಗೆ ಇಷ್ಟು ರೈತರು ರಾಜನ ವಿರುದ್ಧ ತಿರುಗಿ ಬಿದ್ದುದ್ದು ಸೊಂಡೂರಿನ ಸುತ್ತಮುತ್ತಲಿನ ಹಳ್ಳಿಯ ರೈತರಿಗೆ ಬೆರಗು ಮೂಡಿಸಿತು. ಘೋರ್ಪಡೆಯವರಿಗೂ ರೈತರ ಶಕ್ತಿಯನ್ನು ನೋಡಿ ದಂಗ ಬಡಿದಂತಾಯಿತು. ವಿಪರ್ಯಾಸವೆಂದರೆ ಈವರೆಗಿನ ರಾಜವಂಶ ವಿರೋಧಿ ಚಳುವಳಿಗಾರರು ಈ ಸತ್ಯಾಗ್ರಹದಲ್ಲಿ ಭಾಗವಹಿಸಿರಲಿಲ್ಲ.

ಕುಮಾರಸ್ವಾಮಿ ದೇವಸ್ಥಾನ ಮಾತ್ರ ಸಮಸ್ಯೆಯ ಮೂಲವಾಗಿ ಕಾಣುತ್ತಿದ್ದ ಯಜಮಾನ ಶಾಂತರುದ್ರಪ್ಪನವರಿಗೆ ಈ ರೈತ ಸಮಸ್ಯೆಯು ಏಕೆ ಕಾಣಲಿಲ್ಲ? ಎಲಿಗಾರ ತಿಮ್ಮಪ್ಪ ಇದರಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ತಿಳಿಯುವುದಿಲ್ಲ. ಮೊದಲ ದಿನದ ಸತ್ಯಾಗ್ರಹದ ನಂತರ ಸೊಂಡೂರಿನಲ್ಲಿ ಇದರ ಸುದ್ದಿಯಾಯಿತು. ಈ ಸುದ್ದಿ ತಿಳಿದರೂ ಹೊರಗಿನ ಹೋರಾಟಗಾರರು ಏಕೆ ಎರಡನೆಯ ದಿನದ ಸತ್ಯಾಗ್ರಹ ಬೆಂಬಲಿಸಲಿಲ್ಲ ಎನ್ನುವ ಪ್ರಶ್ನೆಗಳು ಏಳುತ್ತವೆ. ದೇಸಾಯಿ ಷಣ್ಮುಖಪ್ಪನವರು ‘ಹೊರಗಿನ ಯಾರನ್ನು ಕರೆಯಲಿಲ್ಲ. ನಾನೇ ನಾಯಕತ್ವ ವಹಿಸಿದ್ದೆ. ಆಗಲೆ ಇಂದಿರಾಗಾಂಧಿಯವರು ಈಗಿನ ಜಿಂದಾಲನ್ನು (ವಿಜಯನಗರ ಉಕ್ಕಿನ ಕಾರ್ಖಾನೆ) ಉದ್ಘಾಟಿಸಿದ್ದರು. ಆ ಭಾಗದ ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಅಂತವರೂ ನಮ್ಮ ಜೊತೆ ಸೇರಿದ್ದರು’ ಎನ್ನುತ್ತಾರೆ. ಯಜಮಾನ ಮತ್ತು ಎಲಿಗಾರರಿಗೆ ಸೊಂಡೂರು ಮಾತ್ರ ಹೋರಾಟದ ಕೇಂದ್ರವಾಗಿದ್ದಂತೆ ಕಾಣುತ್ತದೆ. ಸುತ್ತಮುತ್ತಲ ಹಳ್ಳಿಗಳ ರೈತರ ಸಮಸ್ಯೆಗಳ ಸ್ವರೂಪದ ಬಗೆಗೆ ಅಷ್ಟಾಗಿ ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಈ ಸತ್ಯಾಗ್ರಹದಿಂದ ರೈತರಿಗೆ ಯಾವುದೇ ಪ್ರತಿಫಲ ಸಿಗಲಿಲ್ಲ. ಆದರೆ ರಾಜರ ವಿರುದ್ಧ ಹೋರಾಟ ಮಾಡಲು ನರಸಾಪುರದ ರೈತರು ಸಜ್ಜಾದರು. ೧೯೭೩ರ ರೈತ ಚಳವಳಿಯಲ್ಲಿಯೂ ನರಸಾಪುರದ ರೈತರು ಸಕ್ರಿಯವಾಗಿ ಭಾಗವಹಿಸಿದರು. ಇಲ್ಲಿಂದಲೇ ೧೯೭೩ರ ರೈತ ಚಳುವಳಿಗೆ ಪೂರಕ ವಾತಾವರಣ ಸೃಷ್ಟಿಯಾಯಿತು.

ಸೊಂಡೂರಿನಲ್ಲಿ ಚಾರ್ಜ

೧೯೭೦ರವರೆಗೆ ಮಾಜಿ ರಾಜರ ರಾಜಶಾಹಿ ಆಡಳಿತಕ್ಕೆ ಜನರ ಮೌನ ಉತ್ತರವಾಗಿತ್ತು. ಸಣ್ಣ ಬಗೆಯ ಪ್ರತಿರೋಧ, ಜಗಳ, ಗುದ್ದಾಟವನ್ನು ರೈತರ ಪರವಾಗಿ ಕೆಲವು ನಾಯಕರು ನಡೆಸಿಕೊಂಡೆ ಬಂದರು. ಸರ್ಕಾರಕ್ಕೆ ರಾಜರ ಶೋಷಣೆಯನ್ನು ಅರ್ಜಿ ಮೂಲಕ ತಿಳಿಸುವುದು, ಕೋರ್ಟು, ಕಛೇರಿಗಳ ಬೆಂಬಲಕ್ಕಾಗಿ ಕಾಯುವುದು, ಈ ಬಗೆಯ ಹೋರಾಟದಿಂದ ಶಾಶ್ವತ ಪರಿಹಾರ ಸಿಗಲಾರದೆಂದು ಮನವರಿಕೆಯಾಯಿತು. ಆಗ ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪ ಜನರನ್ನು ಸಂಘಟಿಸುವಲ್ಲಿ, ಜನಸಭೆಗಳನ್ನು ನಡೆಸುವಲ್ಲಿ ಆಸಕ್ತಿ ವಹಿಸಿದರು. ಎಲಿಗಾರ ತಿಮ್ಮಪ್ಪನು ನಮ್ಮ ಹೋರಾಟಕ್ಕೆ ಸೋಷಲಿಸ್ಟ್‌ ಪಾರ್ಟಿಯ ಬೆಂಬಲ ದೊರೆತರೆ ರಾಜ್ಯಮಟ್ಟದ ಹೋರಾಟವನ್ನು ಸಂಘಟಿಸಬಹುದೆಂದು ಅರಿತು, ರಾಜ್ಯ ಸೋಷಲಿಸ್ಟ್‌ ಪಾರ್ಟಿಯ ಅಧ್ಯಕ್ಷರಾಗಿದ್ದ ಕೆ.ಜಿ. ಮಹೇಶ್ವರಪ್ಪನವರಲ್ಲಿ ಸೊಂಡೂರು ರೈತರ ಸಮಸ್ಯೆಯನ್ನು ತಿಳಿಸಿ ಭೂಮಿಯ ಹಕ್ಕಿಗಾಗಿ ಚಳುವಳಿ ರೂಪಿಸಲು ಸಮಾಜವಾದಿ ಪಕ್ಷದ ಬೆಂಬಲ ಬೇಕಿದೆ ಎಂದು ಕೇಳಿಕೊಂಡರು. ಭೂಮಿ ಸಂಬಂಧಿ ಚಳುವಳಿಗಳನ್ನು ರೂಪಿಸುತ್ತಲೇ ಬಂದಿದ್ದ ಸೋಷಲಿಸ್ಟ್‌ ಪಾರ್ಟಿಯು ಇದಕ್ಕೆ ಸ್ಪಂದಿಸಿತು. ಕೆ.ಜಿ. ಮಹೇಶ್ವರಪ್ಪನವರು ರಾಷ್ಟೀಯ ಅಧ್ಯಕ್ಷರಾದ ಜಾರ್ಜ್‌ಫರ್ನಾಂಡಿಸ್ ರ ಬಳಿ ಚರ್ಚಿಸಿ, ಸೊಂಡುರಿಲ್ಲಿ ರೈತರ ಚಳುವಳಿಯನ್ನು ರೂಪಿಸುವುದಾಗಿ ನಿರ್ಧರಿಸಲಾಯಿತು. ಜನವರಿ ೨೮.೧೯೭೩ರಲ್ಲಿ ಸೋಷಲಿಸ್ಟ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಾರ್ಜ್‌ಫರ್ನಾಂಡಿಸ್ ಪೂರ್ವಭಾವಿಯಾಗಿ ಸೊಂಡೂರಿನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೆ.ಜಿ. ಮಹೇಶ್ವರಪ್ಪನವರು ಈ ದಿನವನ್ನು ನೆನಪಿಸಿಕೊಳ್ಳುತ್ತ ‘ಜಾರ್ಜ್ ಅಂದು ಗುಡುಗಿದರು. ಸೊಂಡೂರು ರಾಜರು ಜನರನ್ನು ಹೇಗೆ ಮೋಸಗೊಳಿಸುತ್ತಾ ಇದ್ದಾರೆ ಎನ್ನುವುದನ್ನು ಭಾಷಣದಲ್ಲಿ ಹೇಳಿ. ರೈತರೆಲ್ಲಾ ಒಂದಾಗಿ ಅಂತ ಕರೆಕೊಟ್ರು. ಆ ದಿನ ಸೊಂಡೂರಿನ ಇತಿಹಾಸದಲ್ಲಿಯೇ ಮಹತ್ವದ್ದು’ ಎನ್ನುತ್ತಾರೆ.

ಜಾರ್ಜ್ ಮಾತನಾಡಿ “ಸೊಂಡೂರು ಮಾಜಿರಾಜ ಸಾವಿರಾರು ಎಕರೆ ರೈತರ ಭೂಮಿಯನ್ನು ಕುಮಾರಸ್ವಾಮಿ ಇನಾಮಿನ ನೆಪದಲ್ಲಿ ತಾನೇ ಅನುಭವಿಸುತ್ತಿದ್ದಾನೆ. ೧೯೪೮ರಲ್ಲಿ ವಿಸರ್ಜನೆ ಯಾದ ಟ್ಯುಬ್ಯಾಕೋ ಕಂಪನಿಯ ಜಮೀನನ್ನೂ ರಾಜನೇ ಕೊಳ್ಳೆ ಹೊಡೆದಿದ್ದಾನೆ. ಸರ್ಕಾರಕ್ಕೆ ಮೋಸಗೊಳಸಿ ೯೦ ಸಾವಿರ ರಾಜಧನ ಈ ಹಿಂದೆ ಪಡೆಯುತ್ತಿದ್ದ. ಈಗ ರೈತರ ಬಿಡುಗಡೆಗಾಗಿ ಸೋಷಲಿಸ್ಟ್ ಪಾರ್ಟಿ ರಾಷ್ಟ್ರಮಟ್ಟದ ಹೋರಾಟವನ್ನು ಮಾಡುತ್ತಿದೆ. ಇದಕ್ಕೆ ಇಲ್ಲಿನ ರೈತರೆಲ್ಲಾ ಕೈಜೋಡಿಸಬೇಕು. ಉಳುವವನೇ ಭೂ ಒಡೆಯ. ನೀವು ಉತ್ತುವ ಭೂಮಿ ನಿಮಗೆ ಸಿಗಬೇಕು. ಈ ಹೋರಾಟಕ್ಕೆ ನೀವೆಲ್ಲರೂ ಪಣತೋಟ್ಟು ಭಾಗವಹಿಸಿ” ಎಂದು ಕರೆ ನೀಡಿದರು. ಜಾರ್ಜ್ ಮಾತುಗಳಿಂದ ರೈತರಲ್ಲಿ ಉತ್ಸಾಹ ತುಂಬಿದರು. ನಮ್ಮ ಬಗ್ಗೆ ಕರುಣೆ ತೋರಿಸುವವರು ಈ ರಾಜ್ಯದಲ್ಲಿ ಇದ್ದಾರೆ ಎನ್ನುವಂತಹ ಭಾವನೆ ಈ ಭಾಗದ ಜನರಲ್ಲಿ ಮೂಡತೊಡಗಿತ್ತು.

ಜಾರ್ಜ್ ಮಾಡಿದ ಈ ಭಾಷಣ, ಎಂ.ವೈ.ಘೋರ್ಪಡೆಯವರ ಮೇಲಿನ ಆಪಾದನೆಗಳು ರಾಜ್ಯಮಟ್ಟದ ಸುದ್ದಿಯಾದವು. ಕೂಡಲೇ ಎಂ.ವೈ. ಘೋರ್ಪಡೆಯವರು ಜಾರ್ಜ್‌ರ ಆಪಾದನೆಗಳನ್ನು ಅಲ್ಲಗಳೆದು. ನಾನು ಅಪಾರ ಆಸ್ತಿ ಜಮೀನಿನ ಒಡೆಯ ಎಂಬ ಹಳೆಯ ಸುಳ್ಳನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಈ ವಿಷಯ ಆಗಿಂದಾಗ್ಗೆ ಪತ್ರಿಕೆಗಳಲ್ಲಿ ಬರುತ್ತಿದೆ. ನಾನು ಅರ್ಥಸಚಿವನಾದ ಕೂಡಲೆ ಸೊಂಡೂರಿನ ನನ್ನ ಮನೆಯ ಬಳಿ ಸುಮಾರು ೬೦ ಎಕರೆ ಖುಷ್ಕಿ ಜಮೀನಿದೆ ಎಂದು ತಿಳಿಸಿ ನನ್ನ ಆಸ್ತಿಪಾಸ್ತಿಗಳ ವಿವರಗಳನ್ನು ವಿಧಾನ ಮಂಡಲದ ಉಭಯ ಸಧನಗಳ ಅಧ್ಯಕ್ಷರುಗಳಿಗೆ ಒಪ್ಪಿಸಿದ್ದೆ. ಜನತೆಗೆ ಜ್ಞಾಪಕ ಮಾಡಿಕೊಡುವ ಉದ್ದೇಶ ದಿಂದ ಮತ್ತೆ ಹೇಳಬೇಕಾಗಿದೆ. ೧೯೭೨ರ ಜೂನ್ ೨೨ರಂದು ವಿಧಾನಪರಿಷತ್ತಿನಲ್ಲಿ ನಾನು ನೀಡಿದ ಹೇಳಿಕೆಯಲ್ಲಿ ಹೆಚ್ಚು ಭೂಮಿಯನ್ನು ಹೊಂದಿರುವ ಇಚ್ಚೆಯ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ.

ದತ್ತಿಯಾಗಿ ನಿರ್ವಹಿಸುತ್ತಿರು ಕುಮಾರಸ್ವಾಮಿ ದೇವಾಲಯದ ಸ್ವಾಧೀನದಲ್ಲಿ ಅರಣ್ಯ ಭೂಮಿ ಇದೆ. ಜೊತೆಗೆ ೭೦ ದಿಂದ ೮೦ ಎಕರೆಯಷ್ಟು ಖುಷ್ಕಿ ಜಮೀನಿದೆ ಎಂದು ಅದೇ ಹೇಳಿಕೆಯಲ್ಲಿ ತಿಳಿಸಿದ್ದೆ. ದೇವಾಲಯಕ್ಕೆ ಸೇರಿದ ಸುಮಾರು ೮೦೦೦ ಎಕರೆ ಉಳಿದ ಜಮೀನು ೮ ಗ್ರಾಮಗಳಲ್ಲಿದೆ. ಇದನ್ನು ಸರ್ಕಾರ ನಿರ್ವಹಿಸುತ್ತಿದೆ. ಈ ಜಮೀನು ದೇವಾಲಯದ ಸ್ವಾಧೀನದಲ್ಲಿದೆ. ೧೯೪೮ರಲ್ಲಿ ವಿಸರ್ಜನೆಗೊಂಡ ಸೊಂಡೂರು ಟೊಬ್ಯಾಕೋ ಕಂಪನಿಗೆ ಅನೇಕ ವರ್ಷಗಳ ಹಿಂದೆ ಗುತ್ತಿಗೆಗೆ ಈಗ ಸರ್ಕಾರಕ್ಕೆ ಸೇರಿದೆ. ಬಹುಭಾಗ ಬೀಳು ಬಿದ್ದಿರುವ ಈ ಜಮೀನನ್ನು ಯಾವುದಾದರೂ ಒಂದು ಸಾರ್ವಜನಿಕ ಅಥವಾ ಸಾಮಾಜಿಕ ಉದ್ದೇಶಕ್ಕಾಗಿ ಸಾರ್ಥಕವಾಗಿ ಉಪಯೋಗಿಸುವ ಬಗ್ಗೆ ನಾನು ಆಸಕ್ತಿ ವಹಿಸಿದೆ. ರಾಘಾಪುರಗಳಲ್ಲಿರುವ ಜಮೀನಿನಲ್ಲಿ ಸರ್ಕಾರ ಒಂದು ತೋಟಗಾರಿಕೆ ಕ್ಷೇತ್ರ ಹಾಗೂ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಿದೆ. ನಂದಿಹಳ್ಳಿಯಲ್ಲಿರುವ ಜಮೀನು ಶಿಕ್ಷಣಕ್ಕೆ ಯೋಗ್ಯವಾಗಿದೆ. ಇಲ್ಲಿ ವ್ಯವಸಾಯ ಕಾಲೇಜು ಮತ್ತು ಉಕ್ಕು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆ ಎಂದು ಉತ್ತರವಿತ್ತರು.

ಈವರಿಗೂ ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪ ಮುಂತಾದವರು ಹಲವು ಬಾರಿ ಎತ್ತಿದ ಪ್ರಶ್ನೆಗಳನ್ನೆ ಜಾರ್ಜ್ ಎತ್ತಿದ್ದರು. ಆದರೆ ಎಂ.ವೈ. ಘೋರ್ಪಡೆ ಈ ಪ್ರಶ್ನೆಗಳಿಗೆ ಸಮರ್ಥನೆ ನೀಡುವ ಕಡೆಗೆ ಗಮನ ಹರಿಸಲಿಲ್ಲ. ಆದರೆ ಇದೇ ಪ್ರಶ್ನೆಗಳನ್ನು ಜಾರ್ಜ್ ಎತ್ತುತ್ತಲೂ ಘೋರ್ಪಡೆಯವರು ನಿಜಕ್ಕೂ ಆತಂಕಕ್ಕೊಳಗಾದರು. ಇದು ತಮ್ಮ ಮಂತ್ರಿ ಪದವಿಗೆ ಕುತ್ತು ಬರಬಹುದೆಂದು ಅವರ ಪ್ರಶ್ನೆಗಳಿಗೆ ಉತ್ತರಿಸಿ ನನಗೆ ಕೇವಲ ೬೦ ಎಕರೆ ಖುಷ್ಕಿ ಭೂಮಿ ಮಾತ್ರ ಇದೆ ಇದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದರು. ಈ ಹೇಳಿಕೆಯನ್ನು ಆಶ್ಚರ್ಯಕರ ಚಿನ್ಹೆಯನ್ನೊಳಗೊಂಡು ಎಲ್ಲ ಪತ್ರಿಕೆಗಳು ಪ್ರಕಟಿಸಿದವು.

ಸೋಷಲಿಸ್ಟ್ ಪಾರ್ಟಿಯ ರಾಜ್ಯಧ್ಯಕ್ಷರಾದ ಕೆ.ಜಿ. ಮಹೇಶ್ವರಪ್ಪನವರು ಘೋರ್ಪಡೆಯ ಈ ಹೇಳಿಕೆಯನ್ನು ಖಂಡಿಸಿದರು. ‘ಅರ್ಥ ಸಚಿವರಾದ ಘೋರ್ಪಡೆಯವರು ಪತ್ರಿಕಾ ಹೇಳಿಕೆಯಲ್ಲಿ ಸತ್ಯಕ್ಕೆ ದೂರವಾದ ವಿಚಾರ ತಿಳಿಸಿದ್ದಾರೆ. ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ’ ಎಂದು ಆಪಾದಿಸಿದರು. ಇಲ್ಲಿನ ಆರೋಪ ಪ್ರತ್ಯಾರೋಪಗಳು ತೀರಾ ರಾಜಕೀಯ ಕ್ಷ್ಲೀಷೆಗಳಂತೆ ಕಂಡರೂ ಸೊಂಡೂರಿನ ವಿಷಯದಲ್ಲಿ ಇಂತಹದ್ದೊಂದು ಚರ್ಚೆ ರಾಜ್ಯ ಮಟ್ಟದಲ್ಲಿ ನಡೆಯುವ ಅಗತ್ಯವಿತ್ತು. ಬಹುಶಃ ಈ ಸಂದರ್ಭದಲ್ಲಿಯೇ ಸೊಂಡೂರಿನ ಜನರ ಸ್ಥೀತಿಯ ಬಗ್ಗೆ ತಿಳಿಯಲು ಸಾಧ್ಯವಾಯಿತು. ಇದರಿಂದಾಗಿ ಇದು ಕೇವಲ ಸೊಂಡೂರಿನ ಸಮಸ್ಯೆ ಎನ್ನುವ ಅರ್ಥಕ್ಕಿಂತ ರಾಜಶಾಹಿಯ ದರ್ಪದಡಿ ಬಳಸುವ ಬದುಕು ಬಿಡುಗಡೆಯಾಗ ಬೇಕಿದೆ ಎನ್ನುವ ವ್ಯಾಪ್ತಿಯನ್ನು ಪಡೆದುಕೊಂಡಿತು.

ಸೋಷಲಿಸ್ಟರ ಸಂಗ್ರಾಮ ಸಮಿತಿ

ಸೋಷಲಿಸ್ಟರು ಸೊಂಡೂರಿನಲ್ಲಿ ಚಳವಳಿ ಮಾಡುವುದಾಗಿ ನಿರ್ಧರಿಸಿದರು. ಅದರ ರೂಪುರೇಷೆಗೆ ಹೊಸಪೇಟೆಯಲ್ಲಿ ಜನವರಿ ೩೦,೧೯೭೩ರಲ್ಲಿ ಒಂದು ಸಭೆ ನಡೆಯಿತು. ಈ ಸಭೆಯ ನಿರ್ಣಯದಲ್ಲಿ ಸೊಂಡೂರಿನ ಮಾಜಿ ರಾಜರು ಮತ್ತು ಎಂ.ವೈ. ಘೋರ್ಪಡೆಯವರು ರೈತರ ಜಮೀನನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿರುವುದನ್ನು ಪ್ರತಿಭಟಿಸಿ ಆ ಜಮೀನಿನ ವಿಮೋಚನೆಗಾಗಿ “ಸೊಂಡೂರು ಸಂಗ್ರಾಮ ಸಿದ್ಧತಾ ಸಮಿತಿ”ಯನ್ನು ರಚಿಸಿದರು. ಅದರಲ್ಲಿ ಕೆ.ಜಿ.ಮಹೇಶ್ವರಪ್ಪ, ಎಸ್. ವೆಂಕಟರಾಂ, ದಾಸನ್ ಸಾಲೋಮನ್, ಎಂ.ವೈ.ಆರ್. ಪರಮೇಶ್ವರಪ್ಪ, ಎಸ್.ಎಸ್. ಕುಮುಟ ಮತ್ತು ಕೋಣಂದೂರು ಲಿಂಗಪ್ಪ ಇವರುಗಳನು ಸಮಿತಿಯ ಸದಸ್ಯರುಗಳನ್ನಾಗಿ ನಿರ್ಣಯಿಸಲಾಯಿತು. ಈ ಸಭೆಯಲ್ಲಿ ಸ್ಥಳೀಯ ಕಾಂಗರನ್ನು ಪಕ್ಷ ಖಂಡಿಸಿತು. ಇದೇ ಸಭೆಯಲ್ಲಿ ಹೂವಿನಹಡಗಲಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮಾವೇಶ ಮಾಡಲು ನಿರ್ಧರಿಸಲಾಯಿತು.

ಈ ಸಮಿತಿಯ ಕಾರ್ಯ ಚಟುವಟಿಕೆಯ ಬಗೆಗೆ ಫೆಬ್ರವರಿ ೧೪ರಂದು ಕೆ.ಜಿ. ಮಹೇಶ್ವರಪ್ಪನವರು ಪತ್ರಿಕಾಗೋಷ್ಟಿಯಲ್ಲಿ ‘ಸೊಂಡೂರಿನ ರಾಜ ವೈ.ಆರ್. ಘೋರ್ಪಡೆ ಮತ್ತು ಎಂ.ವೈ. ಘೋರ್ಪಡೆ ಅವರ ಅಕ್ರಮ ವ್ಯವಹಾರಗಳ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ನಡೆಸಲು ಕರ್ನಾಟಕ ರಾಜ್ಯ ಸೋಷಲಿಸ್ಟ್ ಪಾರ್ಟಿ ನಿರ್ಧರಿಸಿದೆ. ಹೋರಾಟದ ದಿನ ಮತ್ತು ಇನ್ನಿತರ ವಿಚಾರಗಳಿಗೆ ಫೆಬ್ರವರಿ ೧೬,೧೭ ಮತ್ತು ೧೮ ರಂದು ದೆಹಲಿಯಲ್ಲಿ ಸಮಾವೇಶಗೊಳ್ಳಲು ರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ವಿವರಿಸಿದರು.

ಈ ನಡುವೆ ರಾಷ್ಟ್ರಪತಿಗೆ ಸೊಂಡೂರಿನ ಚಳವಳಿಯ ಬಗೆಗೆ ಮನವರಿಕೆ ಮಾಡುವ ಅಗತ್ಯವಿತ್ತು. ಹಾಗಾಗಿಯೇ ಫೆಬ್ರವರಿ ೧೨ರಂದು ಜಾರ್ಜ್ ಫರ್ನಾಂಡಿಸ್ ರಾಷ್ಟ್ರಪತಿ ವಿ.ವಿ. ಗಿರಿಯವರಿಗೆ ಒಂದು ಪತ್ರ ಬರೆದರು. ಈ ಪತ್ರದಲ್ಲಿ ಮೈಸೂರಿನ ಹಣಕಾಸು ಸಚಿವ ಮುರಾರಿರಾವ್ ಯಶವಂತರಾವ್ ಘೋರ್ಪಡೆಯವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡುವಂತೆ ತಮ್ಮ ಪ್ರಭಾವ ಬೀರಬೇಕೆಂದು ರಾಷ್ಟ್ರಪತಿಗಳನ್ನು ಪ್ರಾರ್ಥಿಸಿದ್ದರು. ರಾಜ ವಂಶಸ್ಥರು ಅಕ್ರಮವಾಗಿ ಸಾವಿರಾರು ಎಕರೆಗಳಷ್ಟು ಭೂಮಿಯನ್ನು  ಇಟ್ಟುಕೊಂಡಿದ್ದಾರೆಂದು, ಜನವರಿ ೨೮ರಂದು ಸೊಂಡೂರಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ತಾವು ಭಾಷಣ ಮಾಡಿದ ಸಂದರ್ಭದಲ್ಲಿ ಹಣಕೊಟ್ಟು ತಯಾರಿಸಿದ ಗೂಂಡಾಗಳು ಸಮಾಜವಾದಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದರು. ಘೋರ್ಪಡೆ ವಂಶಸ್ಥರು ಪಡೆದಿರುವ ಜಮೀನುಗಳ ತನಿಖೆ ನಡೆಸಲು ಒಂದು ಆಯೋಗವನ್ನು ನೇಮಿಸಬೇಕೆಂದು ಪತ್ರದಲ್ಲಿ ಸೂಚಿಸಲಾಗಿತ್ತು. ಭೂಹೀನರಿಗೆ ಆ ಜಮೀನುಗಳನ್ನು ಹಂಚಲು ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಬರುವ ಏಪ್ರಿಲ್ ನಲ್ಲಿ ಘೋರ್ಪಡೆ ಅವರ ಜಮೀನನ್ನು ಬಲವಂತವಾಗಿ ಆಕ್ರಮಿಸಿಕೊಳ್ಳಲು ಶಾಂತಿಯುತ ಸತ್ಯಾಗ್ರಹ ಆರಂಭಿಸಬೇಕೆಂದು ಸಮಾಜವಾದಿ ಪಕ್ಷದ ರಾಜ್ಯ ಶಾಖೆ ನಿರ್ಧರಿಸಿರುವ ವಿಷಯವನ್ನು ಪತ್ರದಲ್ಲಿ ತಿಳಿಸಲಾಗಿತ್ತು.

ಮುಖ್ಯಮಂತ್ರಿಗೆ ಮನವಿ

ಮಾರ್ಚ್ ೩.೧೯೭೩ರಂದು ಸೊಂಡೂರು ಸತ್ಯಾಗ್ರಹದ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಸೋಷಲಿಸ್ಟ್ ಪಕ್ಷದ ಕಾರ್ಯಕರ್ತರು ಸೊಂಡೂರಿನ ರೈತರು ಮೆರವಣಿಗೆ ಮಾಡಿದರು. ಈ ಮೆರವಣಿಗೆಯ ಅಜೆಂಡಾ “ಅಂದು ಕಾಗೋಡು ಇಂದು ಸೊಂಡೂರು” ಎಂಬುದಾಗಿತ್ತು. ಈ ಮೆರವಣಿಗೆಯಲ್ಲಿ ಕೆ.ಜಿ. ಮಹೇಶ್ವರಪ್ಪ, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ್, ಯಜಮಾನ ಶಾಂತರುದ್ರಪ್ಪ, ಎಲಿಗಾರ ತಿಮ್ಮಪ್ಪ, ಎಸ್. ಎಸ್. ಕುಮುಟ, ಕಾಗೋಡು ತಿಮ್ಮಪ್ಪ ಮುಂತಾದ ಪ್ರಮುಖರನ್ನೊಳಗೊಂಡಂತೆ ನೂರಕ್ಕೂ ಹೆಚ್ಚು ಸಮಾಜವಾದಿ ಪಕ್ಷ ಕಾರ್ಯಕರ್ತರೂ, ಸೊಂಡೂರಿನ ರೈತರು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೊಂಡೂರು ರೈತರ ಶೋಷಣೆಯ ಮುಕ್ತಿಗಾಗಿ ನಡೆಸಿದ ಮೆರವಣಿಗೆಯಾಗಿತ್ತು. ಈ ಮೆರವಣಿಗೆಯ ಸಂದರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಫೋಟೋ ಇದೆ. ಮುಂದೊಬ್ಬರು ಕಪ್ಪು ಕನ್ನಡಕ, ಕೋಟು ಹಾಕಿಕೊಂಡಿದ್ದಾರೆ. ಅಂಗವಿಕಲರೊಬ್ಬರು ಕೋಲು ಊರುತ್ತಾ ನಡೆಯುತ್ತಿದ್ದಾರೆ. ಮತ್ತೊಬ್ಬರು ಕೈಯಲ್ಲಿ ಕರಪತ್ರಗಳನ್ನು ಹಿಡಿದಂತೆ ಕಾಣುತ್ತಿದೆ. ಬಿಳಿ ಅಂಗಿ, ಬಿಳಿ ಪ್ಯಾಂಟು, ಗಾಂಧಿ ಟೋಪಿ ಧರಿಸಿ ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಗಂಭೀರವಾಗಿ ಮುಂದೊಬ್ಬರು ನಡೆಯುತ್ತಿದ್ದಾನೆ. ಸೋಷಲಿಸ್ಟ್ ಪಾರ್ಟಿ (ನೇಗಿಲು ಸುತ್ತಚಕ್ರದ ಚಿನ್ನೆಯನ್ನೊಳಗೊಂಡ) ಎಂಬ ಬ್ಯಾನರ್ ಹಿಡಿದಿದ್ದಾರೆ. ಮೊದಲ ಸಾಲಲ್ಲಿ ಜೆ.ಎಚ್. ಪಟೇಲ್ ಇದ್ದಾರೆ. ಅವರ ಹಿಂದಿನ ಸಾಲಿನಲ್ಲಿ “ಸೊಂಡೂರು ರೈತ ಹೋರಾಟ” ಎಂಬ ಇನ್ನೊಂದು ಬ್ಯಾನರ್ ಹಿಡಿಯ ಲಾಗಿದೆ. ಎಣಿಕೆಗೆ ೪೦ ಜನರು ಕಾಣುತ್ತಾರೆ. ಮೂವರು ಭಿತ್ತಿಪತ್ರಗಳನ್ನು ಹಿಡಿದಿರುವುದು ಕಾಣುತ್ತಿದೆ. ಚಳವಳಿಗಾರರು ಮುಖ್ಯರಸ್ತೆಯಲ್ಲಿ ಪಥಸಂಚಲನ ಮಾಡುತ್ತಿದ್ದಾರೆ. ಬಲಕ್ಕೆ ಅಂಬಾಸಿಡರ್ ಕಾರು, ಒಂದು ಆಟೋ  ಹೋಗುತ್ತಿದೆ. ಪಕ್ಕದ ಪುಟ್ ಬಾತಿನಲ್ಲಿ ನಡೆದಾಡುತ್ತಿರುವ ಜನರೆಲ್ಲರೂ ಈ ಮೆರವಣಿಗೆಯನ್ನೆ ಕುತೂಹಲದಿಂದ ನೋಡುತ್ತಿದ್ದಾರೆ. ಎಡಭಾಗಕ್ಕೆ ಬ್ರಿಟಿಷ್ ಮಾದರಿಯ ಮೊಣಕಾಲಿನ ತನಕದ ಅರ್ಧ ಪ್ಯಾಂಟು ಧರಿಸಿದ ಮೂವರು ಪೊಲೀಸರು ಲಾಟಿ ಹಿಡಿದು ನಡೆಯುತ್ತಿದ್ದಾರೆ. ಹೆಚ್ಚು ಜನರು ಗಾಂಧಿ ಟೋಪಿ ಧರಿಸಿದ್ದಾರೆ.

ಸೊಂಡುರು ತಾಲೂಕಿನಿಂದ ಬಂದಿದ್ದ ರೈತರ ಯೋಗಕ್ಷೇಮ ವಿಚಾರಿಸಲು ಮುಖ್ಯವಂತ್ರಿ ಡಿ.ದೇವರಾಜ ಅರಸು ಅವರು ವಿಧಾನಸೌಧದಿಂದ ಚಳವಳಿಗಾರರು ತಂಗಿದ್ದ ಕಬ್ಬನ್ ಪಾರ್ಕಿನ ಮರದಡಿಗೆ ಬಂದರು. ಚಳಿವಳಿಗಾರರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ಸೊಂಡೂರು ಚಳವಳಿ ಕುರಿತು ಒಂದು ಮನವಿಯನ್ನು ಅರ್ಪಿಸಿದರು. ಮನವಿ ಒಳಗೊಂಡ ಅಂಶಗಳು ಹೀಗಿದ್ದವು.

೧. ಸೊಂಡೂರು ರಾಜರ ಧರ್ಮದರ್ಶಿತ್ವದಲ್ಲಿರುವ ವಿವಿಧ ದೇವಸ್ಥಾನಗಳ ಸುಮಾರು ೧೦,೦೦೦ ಎಕರೆ ಜಮೀನನ್ನು ಅವುಗಳ ಗೇಣಿದಾರರಿಗೆ ಕೊಡಬೇಕು. ಈ ಕ್ರಮವನ್ನು ಜಾರಿಗೆ ತರುವಲ್ಲಿ ಅವಶ್ಯಕವಾದರೆ ೧೯೩೭ರ ಸೊಂಡೂರು ಇನಾಂ ನಿಯಂತ್ರಣ ಕಾನೂನು, ೧೯೪೬ರ ಸಂವಿಧಾನ ಉದ್ಘೋಷಣೆ ಮತ್ತು ೧೯೪೮ರ ಸೊಂಡೂರ ದೇವಾಲಯ ಉದ್ಘೋಷಣೆಗಳನ್ನು. ಸುಗ್ರೀವಾಜ್ಞೆಯ ಮೂಲಕವಾದರೂ ರದ್ದುಮಾಡಬೇಕು.

೨. ಎಸ್. ಎಂ. ಆಂಡ್ ಐ. ಕಂಪನಿಗೆ ನೀಡಲಾದ ೨೯ ಚದರ ಮೈಲಿ ಗುತ್ತಿಗೆಯನ್ನು ರದ್ದುಪಡಿಸಿ, ಈ ಗುತ್ತಿಗೆಯನ್ನು ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮ ಮತ್ತು ಮೈಸೂರು ಮೆಟಲ್ಸ್ ಲಿಮಿಟೆಡ್ ಈ ಎರಡರಲ್ಲಿ ಒಂದು ಸಂಸ್ಥೆಗೆ ಕೊಡಬೇಕು.

೩. ಹಿಂದೆ ಹೊಗೆಸೊಪ್ಪಿನ ಕಂಪನಿಗೆ ಗುತ್ತಿಗೆ ಕೊಡಲಾಗಿದ್ದ ನಂದಿಹಳ್ಳಿ, ಸಿದ್ದಾಪುರ ಮತ್ತು ರಾಘಾಪುರ ಗ್ರಾಮಗಳಲ್ಲಿ ರತಕ್ಕ ಸುಮಾರು ೧೦೦೦ ಎಕರೆ ಜಮೀನನ್ನು ಭೂಹೀನ ರೈತರಿಗೆ ಹಂಚಬೇಕು.

೪. ರಾಜಮನೆತನದ ಖಾಸಗಿ ಸಂಸ್ಥೆಯಾದ ‘ಸ್ಕಂದ ಉದ್ಯಮ’ದ ಹೆಸರಲ್ಲಿ ಪಡೆದಿರುವ ೧೫೦ ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಪಕ್ಕದ ಭೂಮಿ ಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕು.

೫. ರಾಜಮನೆತನದ ಮೃಗಯಾ ವಿಹಾರಕ್ಕೆಂದು ಕಾದಿಟ್ಟ ಸುಮಾರು ೨೦೦೦ ಎಕರೆ ವಿಸ್ತಾರವಾದ ಅರಣ್ಯ ಪ್ರದೇಶವನ್ನು ಸರಕಾರ ರದ್ದಪಡಿಸಬೇಕು.

೬. ಶಿವಾಪುರ ಶಿಕ್ಷಣ ಸಮಿತಿ ಹಾಗೂ ಸೊಂಡೂರು ಶಿಕ್ಷಣ ಸಮಿತಿ ಇತ್ಯಾದಿ ಸಂಸ್ಥೆಗಳನ್ನು ಸರಕಾರ ವಶಪಡಿಸಿಕೊಳ್ಳಬೇಕು.

೭. ಹೈಕೋರ್ಟು ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ರಾಜಮನೆತನದ ವಿರುದ್ಧ ಮಾಡಲಾಗಿರುವ ಮೇಲ್ಕಂಡ ಹಾಗೂ ಇತರ ಆಪಾದನೆಗಳ ಪರಿಶೀಲನೆಗೆ ಒಂದು ವಿಚಾರಣ ಆಯೋಗವನ್ನು ನೇಮಕ ಮಾಡಬೇಕು.

೮. ಮುಖ್ಯಮಂತ್ರಿ ದೇವರಾಜ ಅರಸು ಅವರು ಸೊಂಡೂರು ಮನೆತನದ ವಿವಿಧ ಸುಲಿಗೆ ಶೋಷಣೆ ಮತ್ತು ಅನ್ಯಾಯಗಳ ಬಗ್ಗೆ ತುರ್ತುಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಎಂ.ವೈ. ಘೋರ್ಪಡೆಯವರನ್ನು ಕೂಡಲೆ ಮಂತ್ರಿ ಪದವಿಯಿಂದ ತೆಗೆದು ಹಾಕಬೇಕು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಪ್ರಕರಣವನ್ನು ಸಮಗ್ರವಾಗಿ ಚರ್ಚಿಸಿ ಅದಷ್ಟು ಬೇಗನೆ ಬೇಡಿಕೆಗಳನ್ನು ಈಡೇರಿಸಲಾಗುವುದು. ಇನಾಂ ರದ್ದತಿ ಆಕ್ಟನ್ನು ಸದ್ಯದಲ್ಲಿಯೇ ಪಾಸ್ ಮಾಡಲಾಗುತ್ತಿದೆ ಎಂದು ಭರವಸೆಯನ್ನಿತ್ತರು. ಈ ಮನವಿ ಮೊದಲಿನ ಪ್ರತಿಭಟನೆಗಿಳಿದ್ದದ್ದು ಸಣ್ಣ ಪ್ರಮಾಣದ ಆರೋಪಗಳಿಗಿಂತ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿದ್ದು ಗಮನಾರ್ಹ. ಪ್ರಜಾಪ್ರಭುತ್ವದ ಆ ದಿನಗಳಲ್ಲಿಯೂ ರಾಜಪ್ರಭುತ್ವವನ್ನು ಅದೇ ಸರ್ಕಾರ ಪರೋಕ್ಷವಾಗಿ ಬೆಂಬಲಿಸುವ ಸೂಕ್ಷ್ಮತೆಗಳನ್ನು ಸೋಷಲಿಸ್ಟ್ ಪಾರ್ಟಿಯ ಕಾರ್ಯಕರ್ತರು ಸೊಂಡೂರು ಹೋರಾಟದ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಅರಸು ಮೌನ : ಹೋರಾಟಕ್ಕೆ ತಯಾರಿ

ಕರ್ನಾಟಕದ ಸಮಾಜವಾದಿ ಕಾರ್ಯಕಾರಿ ಸಮಿತಿಯು ಆಗಸ್ಟ್ ೨೫.೧೯೭೩ರಂದು ಸೊಂಡೂರಿನಲ್ಲಿ ಸಭೆ ಸೇರಿ ಸೊಂಡೂರು ಹೋರಾಟವನ್ನು ತೀವ್ರಗೊಳಿಸಬೇಕೆಂದು ನಿರ್ಧರಿಸಿತು. ಪಕ್ಷದ ಮತ್ತು ಸೊಂಡೂರು ರೈತ ಸಂಘದ ನಿಯೋಗವು ಮಾರ್ಚ್ ೨೩.೧೯೭೩ ರಂದು ದೇವರಾಜ ಅರಸು ಅವರಿಗೆ ಸಲ್ಲಿಸಿದ್ದ ಮನವಿಯ ಬಗ್ಗೆ ಅವರು ಇಲ್ಲಿಯವರೆಗೆ ಯಾವ ಕ್ರಮವನ್ನು ತೆಗೆದುಕೊಳ್ಳದೆ ಮೌನವಾಗಿದ್ದರು. ಹಾಗಾಗಿ. ಸೆಪ್ಟಂಬರ್ ೧೦.೧೯೭೩ ಒಳಗೆ ಬೇಡಿಕೆಗಳನ್ನು ನೆರವೇರಿಸದಿದ್ದರೆ ಹೋರಾಟವನ್ನು ಅನಿವಾರ್ಯವಾಗಿ ಪ್ರಾರಂಭಿಸ ಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಭೆ ನೀಡಿತು. ಸಮಿತಿಯ ಸಭೆಯು ಕರ್ನಾಟಕ ಸಮಾಜವಾದಿ ಪಕ್ಷ ಹಾಗೂ ಸೊಂಡೂರು ರೈತ ಸಂಘ ಜಂಟಿ ಆಶ್ರಯದಲ್ಲಿ ರಾಜಮನೆತನದ ರಾಜಪ್ರಭುತ್ವದ ವಿರುದ್ಧ ಹೋರಾಡಲು ಸೊಂಡೂರು ಹೋರಾಟ ಸಮಿತಿಯನ್ನು ರಚಿಸಿತು. ಕೆ.ಜಿ. ಮಹೇಶ್ವರಪ್ಪ ಅವರನ್ನು ಸಮಿತಿಯ ನಿರ್ದೇಶಕರನ್ನಾಗಿಯೂ, ಬೀದರಿನ ಕಾಶೀನಾಥ ರಾವ್ ಬೇಲೂರೆ, ಉತ್ತರ ಕನ್ನಡದ ಎಸ್. ಎಸ್. ಕುಮುಟ ಮತ್ತು ಹೂವಿನ ಹಡಗಲಿಯ ಎಂ.ಪಿ. ಪ್ರಕಾಶ್ ಹಾಗೂ ಸೊಂಡೂರು ರೈತ ಸಂಘದ ಅಧ್ಯಕ್ಷ ಎಲಿಗಾರ ತಿಮ್ಮಪ್ಪ, ಬಳ್ಳಾರಿಯ ಯಜಮಾನ ಶಾಂತರುದ್ರಪ್ಪ, ಸೊಂಡೂರು ನರಸಿಂಗರಾವ್ ಮೊದಲಾದವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕ ಸಮಾಜವಾದಿ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯು ಸೊಂಡೂರು ಹೋರಾಟದ ರೂಪರೇಷೆ ಹಾಗೂ ವಿಧಾನಗಳನ್ನು ಸ್ಪಷ್ಟಪಡಿಸಿತು. ಶಾಂತಿಯುತವಾಗಿ ಹಾಗೂ ಅಹಿಂಸಾತ್ಮಕವಾಗಿ ಇನಾಮು ಭೂಮಿಯನ್ನು ಹಳ್ಳಿಗಳ ಬಡರೈತರು ಆಕ್ರಮಿಸುವುದು, ತಾಲೂಕು ಕಛೇರಿಗಳ ಮುಂದೆ ಧರಣಿ ಹೂಡುವುದು, ಸಭೆ ಮೆರವಣಿಗೆ, ಪ್ರದರ್ಶನ ನಡೆಸುವುದು, ಈ ಮೊದಲಾದ ವಿಧಾನಗಳನ್ನು ಅನುಸರಿಸಿ ಹೋರಾಟವನ್ನು ತೀವ್ರಗೊಳಿಸಲು ಸಮಿತಿ ನಿರ್ಧರಿಸಿತು. ಈ ಬಗ್ಗೆ ರಾಜ್ಯ ಸಮಿತಿಯು ನೀಡಿದ ಒಂದು ಹೇಳಿಕೆಯಲ್ಲಿ “ಈ ಜನತಾ ಹೋರಾಟವನ್ನು ಹತ್ತಿಕ್ಕಲು ಸರಕಾರ ಪ್ರಯತ್ನ ಮಾಡಿದರೆ ಸಂಭವಿಸಬಹುದಾದ ಅಪಾಯಕರ ಪರಿಣಾಮಕ್ಕೆ ಸರಕಾರವೇ ಜವಾಬ್ದಾರಿಯಾಗುತ್ತದೆಂದು ಸಮಿತಿ ಎಚ್ಚರಿಕೆ ಕೊಡುತ್ತದೆ. ಅನ್ಯಾಯದ ವಿರುದ್ಧ ನಡೆಯುವ ಹಾಗೂ ರಾಜಶಾಹಿಯ ಶೋಷಣೆಯ ಅವಶೇಷಗಳ ನಿರ್ನಾಮ ಮಾಡುವ ಈ ಹೋರಾಟವನ್ನು ಸರಕಾರ ಕಡೆಗಣಿಸದಿರಲಿ ರಾಜ್ಯದ ಜನತೆ ಮತ್ತು ಇತರ ರಾಜಕೀಯ ಪಕ್ಷಗಳು ಈ ಹೋರಾಟವನ್ನು ಬೆಂಬಲಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ” ಎಂದು ಹೇಳಲಾಯಿತು.

ರಾಜ್ಯ ಸಮಾಜವಾದಿ ಪಕ್ಷವು ಸೊಂಡೂರು ಹೋರಾಟದ ಬಗ್ಗೆ ಮಾಡಿದ ನಿರ್ಣಯಗಳನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ತಿಳಿಸಿತು. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸೊಂಡೂರು ಹೋರಾಟದ ವಿವರಗಳನ್ನು ಹಾಗೂ ಹೋರಾಟದ ಸ್ವರೂಪ ವಿಧಾನಗಳನ್ನು ಚರ್ಚಿಸಿ ತನ್ನ ಅನುಮೋದನೆ ಮತ್ತು ನೆರವನ್ನು ನೀಡಲು ನಿರ್ಧರಿಸಿತು. ಸಮಾಜವಾದಿಪಕ್ಷದ ಕೇಂದ್ರ ಕಛೇರಿಯು ಸೆಪ್ಟಂಬರ್ ೬.೧೯೭೩ರಂದು ಭಾರತದ ರಾಜ್ಯಘಟಕಗಳಿಗೆ ಹಾಗೂ ಪ್ರಮುಖ ಸಮಾಜವಾದಿ ನಾಯಕರಿಗೆ ಸುತ್ತೋಲೆ ಕಳಿಸಲಾಯಿತು. ಕರ್ನಾಟಕ ರಾಜ್ಯ ಸಮಾಜವಾದಿ ಪಕ್ಷ ನಡೆಸುತ್ತಿರುವ ಸೊಂಡೂರು ರೈತ ಹೋರಾಟಕ್ಕೆ ಒಂದೊಂದು ತಂಡವನ್ನು ತಮ್ಮ ತಮ್ಮ ರಾಜ್ಯಗಳಿಂದ ಕಳುಹಿಸಬೇಕು, ಪ್ರಮುಖ ಸಮಾಜವಾದಿ ನಾಯಕರು ಸ್ವತಃ ಹೋರಾಟದಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟಿತು. ಈ ಬಗ್ಗೆ ಪಕ್ಷದ ಜಾರ್ಜ್‌ಫರ್ನಾಂಡಿಸ್, ಸಮಾಜವಾದಿ ಪಕ್ಷದಿಂದ ಲೋಹ ಸಂಭೆಯ ಸದಸ್ಯರಾಗಿದ್ದ ಮಧು ದಂಡವತೆ ಮತ್ತು ಪಿ.ವಿಶ್ವಂಬರನ್ ಅವರನ್ನೂ ಒಳಗೊಂಡ ಹೋರಾಟಕ್ಕೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡಲು ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು. ಅಖಿಲ ಭಾರತ ರೈತರ ಸಂಘಟನೆಯಾದ ಕಿಸಾನ್-ಖೇತ್ ಮಜದೂರ್ ಪಂಚಾಯಿತಿ ಸಹ ಸೊಂಡೂರು ರೈತರ ಹೋರಾಟಕ್ಕೆ ಸಂಪೂರ್ಣ ಹಾಗೂ ಸಕ್ರಿಯ ಬೆಂಬಲ ಕೊಡುವ ಒಂದು ನಿರ್ಣಯವನ್ನು ಕೈಗೊಂಡಿತು. ಜೊತೆಗೆ ಅದು ತನ್ನ ರಾಜ್ಯ ಘಟಕಗಳಿಗೆ ಒಂದು ಸುತ್ತೋಲೆಯನ್ನು ಕಳಿಸಿ ಸೊಂಡೂರು ಹೋರಾಟಕ್ಕೆ ತಂಡಗಳನ್ನು ಕಳುಹಿಸಿ ಭಾಗವಹಿಸುವುದರ ಮೂಲಕ ಹೋರಾಟವನ್ನು ಜಯಪ್ರದಗೊಳಿಸಬೇಕೆಂದು ಕರೆಕೊಟ್ಟಿತು.

ಹೀಗೆ ಸೊಂಡೂರಿನ ರೈತರ ಭೂಮಿ ಸಮಸ್ಯೆಯನ್ನು ಪರಿಹರಿಸಲು ಸೋಷಲಿಸ್ಟ್ ಪಾರ್ಟಿಯು ಚಳವಳಿ ರೂಪಿಸುವ ಮೂಲಕ ಇದೊಂದು ರಾಷ್ಟ್ರದ ಗಮನ ಸೆಳೆಯುವ  ವಿಷಯವಾಯಿತು. ಅಂತೆಯೇ ಈ ಚಳವಳಿಗೊಂದು ವಿಶಾಲ ಹರವು ಬಂದಿತು. ಈವರೆಗೂ ಸ್ಥಳೀಯ ಹೋರಾಟ ಚಳವಳಿಗಳು ಸಫಲತೆಗಿಂತ ವಿಫಲತೆಯನ್ನು ಅನುಭವಿಸಿದ್ದೇ ಹೆಚ್ಚು. ಬಹುಶಃ ಹೀಗಾಗಿ ಸೊಂಡೂರು ರೈತರು ಆತ್ಮವಿಶ್ವಾಸ ಕಳೆದುಕೊಂಡು ಸ್ಥಿತಿಯಲ್ಲಿರದ್ದರು. ೧೯೭೩ರ ಚಳವಳಿ ಪ್ರಾರಂಭಕ್ಕೂ ಮುನ್ನ ಬಹುದೊಡ್ಡ ಪ್ರಚಾರ ಪಡೆದುಕೊಂಡದ್ದು ಸೊಂಡೂರಿನ ಪ್ರಜ್ಞಾವಂತ ಸಮುದಾಯದಲ್ಲಿ ಹೊಸ ಹುರುಪು. ಚೈತನ್ಯ ತುಂಬಿತು. ಇದರ ಒಂದು ಸಣ್ಣ ಅಲೆ ರೈತ ಸಮುದಾಯದಲ್ಲೂ ಮಂದವಾಗಿ ಸಂಚರಿಸಲು ಪ್ರಾರಂಭವಾಯಿತು.