ಚಂದ್ರಗುತ್ತಿ

ತಾಲ್ಲೂಕು: ಸೊರಬ
ತಾಲ್ಲೂಕು ಕೇಂದ್ರದಿಂದ: ೩೦.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಪಟ್ಟಣದ ಪಶ್ಚಿಮಕ್ಕೆ ಸುಮಾರು ೩೦ ಕಿ.ಮೀ. ದೂರದಲ್ಲಿದೆ. ಇಲ್ಲಿನ ಗುಡ್ಡ ಎತ್ತರದಲ್ಲಿದ್ದು ಚಂದ್ರ ಗುಡ್ಡದ ಮೇಲೆ ಇದ್ದಂತೆ ಭಾಸವಾಗುತ್ತಿರುವ ಹಿನ್ನಲೆಯಲ್ಲಿ ಚಂದ್ರಗುತ್ತಿ ಹೆಸರು ಬಂದಿರುವ ಸಾಧ್ಯತೆಯಿದೆ.

ಇಲ್ಲಿ ಶ್ರೀ ರೇಣಕಾ ಗುಡಿ ಪ್ರಸಿದ್ಧ ಹಾಗೂ ಸುಮಾರು ೧೫-೧೬ನೇ ಪಂಥದ ನೆರಳಿರುವ ಇಲ್ಲಿ ಮಾತಂಗಿ ತಾಂತ್ರಿಕ ಪೂಜಾರ್ಹಳಾಗಿದ್ದಾಳೆ. ಇಲ್ಲಿ ಇನ್ನೂ ಅನೇಕ ಗುಡಿಗಳಿದ್ದು ಸೊರಬದಿಂದ ಚಂದ್ರಗುತ್ತಿ ಆರಂಭಕ್ಕಿರುವ ಬನದಮ್ಮ ಬನಶಂಕರಿ ಎಂದೆಲ್ಲ ಕರೆಯುವ ವನದೇವತೆ ಬಂದಮ್ಮ ೧೬ನೇ ಶತಮಾನಕ್ಕೆ ಸೇರುವಂತದ್ದು. ಗುಡಿ ಮೂಲದಲ್ಲಿ ಜಂಬಿಟ್ಟಿಗೆಯಿಂದ ರಚಿತವಾಗಿದ್ದು, ಕಾಲಾನಂತರ ನವೀಕೃತಗೊಂಡಿದೆ. ಅಲ್ಲಿಂದ ಮುಂದೆ ಪಾಳು ಜೈನ ಬಸದಿಯೊಂದು ಇದ್ದು ಬಾಗಿಲವಾಡದ ಲಲಾಟವನ್ನು ಗಮನಿಸಿದರೆ ಬಹುತೇಕ ಚಂದ್ರಗುತ್ತಿ ಪ್ರಸಿದ್ಧ ಜೈನ ಕ್ಷೇತ್ರವೂ ಆಗಿತ್ತೆನ್ನಲೂ ಶಾಸನ ಉಲ್ಲೇಖ ಗಮನಿಸಬಹುದು. ಹಾಗೆಯೇ ಗ್ರಾಮದ ಸನಿಹವಿರುವ ಬಸ್ತಿಕೊಪ್ಪ ಕೂಡ ಜೈನ ಸಂಬಂಧಿ ವಿಚಾರಕ್ಕೆ ಪುಷ್ಠಿಯಾಗಿದೆ. ಮುಂದೊಮ್ಮೆ ಇಂತಹ ತಾಂತ್ರಿಕ ಅಥವಾ ನಾಥ ಪಂಥದ  ನೆರಳುಳ್ಳ ಇಲ್ಲಿ ಬೆತ್ತಲೆ ಸೇವೆ ಜಗತ್ಪ್ರಸಿದ್ಧವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಗುಡವಿ

ತಾಲ್ಲೂಕು: ಸೊರಬ
ತಾಲ್ಲೂಕು ಕೇಂದ್ರದಿಂದ: ೨೦
ಜಿಲ್ಲಾ ಕೇಂದ್ರದಿಂದ: ೭೦.ಮೀ

ಪಕ್ಷಿಧಾಮಕ್ಕೆ ಹೆಸರಾಗಿರುವ ಗುಡವಿ ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ ಸುಮಾರು ೨೨ ಕಿ.ಮೀ ದೂರದಲ್ಲಿದೆ. ವರ್ಷಂಪ್ರತಿ ದೇಶ ವಿದೇಶದ ಸಾವಿರಾರು ವಿವಿಧ ಜಾತಿಯ ಪಕ್ಷಿಗಳು ಕುಳಿತು ನೋಡುಗರ ಮನಸೂರೆಗೊಳ್ಳುವ ಇಲ್ಲಿ ಈಗ ಪ್ರವಾಸಿಗಳಿಗೆ ಅನೂಕೂಲವಾಗಲೆಂದು ವಾಚಿಂಗ್ ಟವರ್, ಬೋಟಿಂಗ್ ಹಾಗೂ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ.

ಐತಿಹಾಸಿಕವಾಗಿ ಈ ಗ್ರಾಮ ಬನವಾಸಿ ಸನಿಹದಲ್ಲಿರುವುದರಿಂದ ಕ್ರಿ.ಶ. ೧೦೩೨ ರಿಂದಲೇ ಇಲ್ಲಿ ಮಹತ್ವದ ಶಾಸನಗಳು ದೊರೆತಿವೆ. ಇಲ್ಲಿ ದೊರೆತಿರುವ ಭಾಗ ರಾಜಕೀಯವಾಗಿ  ಅತಂತ್ರ ಸ್ಥಿತಿಯಲ್ಲಿತ್ತು ಎಂಬುದನ್ನು ಬಿಂಬಿಸುತ್ತದೆ. ತುರು ಕಾಳಗದ ಚಿತ್ರಣ ಹೊತ್ತ ವೀರಗಲ್ಲುಗಳು ಇಲ್ಲಿ ಗಮನಾರ್ಹ. ಕೆಲ ಶಿವಾಲಯಗಳಿದ್ದು ಜೀರ್ಣೋದ್ಧಾರಗೊಂಡಿದೆ.

 

ಕೋಟಿಪುರ

ತಾಲ್ಲೂಕು: ಸೊರಬ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೨೫ ಕಿ.ಮೀ

ತಾಲ್ಲೂಕು ಹೋಬಳಿ ಪ್ರದೇಶ, ಆನವಟ್ಟಿ ಸಮೀಪವಿರುವ ಕೋಟಿಪುರ ಹಿಂದೊಮ್ಮೆ ಕುಂತಳ ಪ್ರದೇಶವೆಂದು ಹೆಸರಿಸಿಕೊಂಡಿತ್ತು. ಇತಿಹಾಸ ಆರಂಭ ಕಾಲದಿಂದಲೇ ಮಹತ್ವ ಪಡೆದಿದ್ದ, ಕುಬಟೂರು ವ್ಯಾಪ್ತಿಗೆ ಸೇರಿದ್ದ ಇಲ್ಲಿ ತಾಲ್ಲೂಕಿನ ಮೇರುಕೃತಿ ಎನ್ನಬಹುದಾದ ಕೈಟಭೇಶ್ವರ ಗುಡಿಯಿದೆ. ಚಾಲುಕ್ಯ ಶೈಲಿಯ ದೇಗುಲದ ಇಂಚಿಂಚೂ ಕಲಾತ್ಮಕ ಕೆತ್ತನೆಯ ಮಹಾಪೂರವಿದೆ. ೧೨ನೇ ಶತಮಾನದ ಗುಡಿಯಾದ ಇದು ಪ್ರಾಚ್ಯ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿದೆ. ಇದೇ ಹೊತ್ತಿಗೆ ಇಲ್ಲಿ ಕ್ರಿಯಾ ಶಕ್ತಿಮುನಿಗಳಿದ್ದು ಕಾಳಮುಖ ಶೈವ ಪರಂಪರೆಯ ಮುಖ್ಯ ಕೇಂದ್ರವಾಗಿತ್ತು. ಇಲ್ಲಿ ದೊರೆತಿರುವ ಅನೇಕ ಶಾಸನಗಳು ಇಡೀ ಸೊರಬ ಭಾಗದ ಐತಿಹಾಸಿಕ ಮಹತ್ವತೆಯನ್ನು ಬಿಂಬಿಸುತ್ತಿವೆ. ವಿಶೇಷವಾಗಿ ಕೋಟಿಪುರ ಕೈಟಭೇಶ್ವರ ದೇಗುಲ ಆವರಣ ದೇಗುಲಗಳ ಸಂಕೀರ್ಣ, ಇಲ್ಲಿ ಶಿವನ ಪರಿವಾರದ ಅನೇಕ ದೇಗುಲಗಳಿವೆ.