ಸೊಳ್ಳೆಯನ್ನು ನಿಯಂತ್ರಿಸಲು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು. ಇದು ವಿಜ್ಞಾನದ ವಿವೇಕ.

ಕಡು ಬೇಸಿಗೆಯ ಬೇಗೆಯಲ್ಲಿ ಕಿಟಕಿ, ಬಾಗಿಲು ತೆರೆದು ನಿರುಮ್ಮಲ ಮಲಗ ಬೇಕೆಂದುಕೊಂಡರೆ ರೊಯ್ಯೆಂದು ನುಗ್ಗಿ ಬರುವ ಸೊಳ್ಳೆಗಳಿಂದ ಕಿವಿ ಬಳಿ ಹಿಂಸಾತ್ಮಕ ಸಂಗೀತ; ಸಿಕ್ಕಿದೆಡೆ ಕಡಿತ; ಉರಿ.

ಈ ವಿಪರ್ಯಾಸ ನೋಡಿ ತಂತ್ರಜ್ಞಾನದ ಬೆಂಬಲದಿಂದ ಮನುಷ್ಯ ಈ ಜಗತ್ತನ್ನು ಹತ್ತಾರು ಸಲ ನಾಶಮಾಡಬಲ್ಲ ಪರಮಾಣು ಅಸ್ತ್ರಗಳನ್ನು ತಯಾರಿಸಿದ್ದಾನೆ. ಕ್ಷಣಾರ್ಧದಲ್ಲಿ ಕೊಲ್ಲಬಲ್ಲ ಉಗ್ರ ವಿಷಗಳನ್ನು ಸಂಶ್ಲೇಷಿಸಿದ್ದಾನೆ. ಸಹಸ್ತ್ರಾರು ಎಕರೆ ಕಾಡನ್ನು ದಿನವೊಪ್ಪತ್ತಿನಲ್ಲಿ ಸವರಿ ಹಾಕಬಲ್ಲ ದೈತ್ಯ ಯಂತ್ರಗಳನ್ನು ನಿರ್ಮಿಸಿದ್ದಾನೆ. ತಂತ್ರಜ್ಜಾನದಿಂದ ಮನುಷ್ಯನ ‘ಲಯ’ ಶಕ್ತಿ ಅಪರಿಮಿತವಾಗಿ ಹೆಚ್ಚಿದೆ. ಆದರೆ ಅದೇ ಮನುಷ್ಯ ಸೊಳ್ಳೆಯಂಥ ಯಕಶ್ಚಿತ್ ಪ್ರಾಣಿ ಎದುರು ಸೋತು ಸುಣ್ಣವಾಗಿದ್ದಾನೆ. ಇದು ವಿಜ್ಜಾನ ಮತ್ತು ತಂತ್ರ ಜ್ಞಾನಗಳ ಮಿತಿಯನ್ನು ಢಾಳಾಗಿ ಜಾಹೀರುಗೊಳಿಸುತ್ತದೆ.

ವಿಜ್ಜಾನದ ಎಚ್ಚರ

ಸೊಳ್ಳೆ ಕಚ್ಚಿದರೆ ಕಚ್ಚಲಿ ಎಂದು ಸೆಟೆದು ಮಲಗುವಂತಿಲ್ಲ. ಅದರಿಂದ ಭಯಂಕರ ಕಾಯಿಲೆಗಳು ಬರುತ್ತವೆ ಎಂದು ವಿಜ್ಜಾನ ಎಚ್ಚರಿಸುತ್ತದೆ. ಸೊಳ್ಳೆ ಕಡಿತದಿಂದ ಮುಖ್ಯವಾಗಿ ಬರುವ ನಾಲ್ಕು ರೀತಿಯ ಕಾಯಿಲೆಗಳಲ್ಲಿ ಮಲೇರಿಯಾ ಮುಖ್ಯವಾದದ್ದು ಮತ್ತು ಬಹಳ ವ್ಯಾಪಕವಾದದ್ದು. ಸೊಳ್ಳೆಯ ಕಡಿತ ದಢೂತಿ ಮನುಷ್ಯನನ್ನು ಗಡಗಡ ನಡುಗಿಸುತ್ತದೆ. ಪ್ರಪಂಚದಲ್ಲಿ ಸಾವಿಗೆ ಕಾರಣವಾಗುವ ಎಲ್ಲಾ ಸೋಂಕುರೋಗಗಳಲ್ಲಿ ಮಲೇರಿಯಾಕ್ಕೆ ಐದನೆಯ ಸ್ಥಾನ. ಪ್ರತಿ ವರ್ಷ ಒಂದರಿಂದ ಎರಡು ದಶಲಕ್ಷ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಮಿಲಿಯಾಂತರ ಜನ ಅನಾರೋಗ್ಯದಿಂದ ನರಳುತ್ತಿದ್ದಾರೆ.

ಈಡ್ಸ್ ಸೊಳ್ಳೆಗಳ ಕಡಿತದಿಂದ ಬರುವ ಮತ್ತೊಂದು ಜ್ವರ ಡೆಂಗ್ಯೂ. ಬಂದರೆ ಮೈಮೇಲೆಲ್ಲ ಗುಳ್ಳೆಗಳು, ಕೀಲುಗಳಲ್ಲಿ ತೀವ್ರ ಯಾತನೆ. ನಾಲ್ಕರಿಂದ ಏಳು ದಿನ ಇರುವ ತೀವ್ರ ಜ್ವರ. ಜೊತೆಗೆ ತಲೆನೋವು, ಕಣ್ಣುರಿ. ೬೦ ವರ್ಷಗಳ ಹಿಂದೆ ಈ ಸಾಂಕ್ರಾಮಿಕ ರೋಗದ ಬಗ್ಗೆ ಜನರಿಗೆ ಹೆಚ್ಚು ತಿಳಿದಿರಲಿಲ್ಲ. ಅದು ದೊಡ್ಡ ರೀತಿಯಲ್ಲಿ ಪ್ರಾರಂಭವಾದದ್ದು ೧೯೫೦ರ ದಶಕದಲ್ಲಿ. ಭಾರತಕ್ಕೆ ನುಸುಳಿದ್ದು ೧೯೯೦ರ ದಶಕದಲ್ಲಿ.

ಆನೆ ಕಾಲು ರೋಗ ಕ್ಯೂಲೆಕ್ಸ್ ಸೊಳ್ಳೆಗಳ ಕಡಿತದಿಂದ ಬರುತ್ತದೆ. ಈ ಊತದಿಂದ ಮನುಷ್ಯರ ಕಾಲು ಆನೆಯ ಕಾಲಿನಂತಾಗುತ್ತದೆ. ಮಲೇರಿಯಾ ಮತ್ತು ಡೆಂಗ್ಯೂ ಸೊಳ್ಳೆಯ ಒಂದೇ ಒಂದು ಕಡಿತದಿಂದ ಬರಬಹುದು. ಆನೆ ಕಾಲು ರೋಗ ಬಹುತೀವ್ರವಾಗಿ ಮತ್ತು ದೀರ್ಘ ಕಾಲ ಸೊಳ್ಳೆಗಳಿಗೆ ಒಡ್ಡಿಕೊಳ್ಳುವುದರಿಂದ ಬರುತ್ತದೆ. ಈ ರೋಗ ಜೀವ ತೆಗೆಯುವುದಿಲ್ಲವಾದರೂ ಕುಂಠಿತಗೊಳಿಸುತ್ತದೆ.

ಮಿದುಳುರಿತ ಕ್ಯೂಲೆಕ್ಸ್ ಸೊಳ್ಳೆಗಳಿಂದ ಪ್ರಸಾರವಾಗುವ ರೋಗ. ಭತ್ತ ಬೆಳೆಯುವ ಜಾಗಗಳಲ್ಲಿ, ಹಂದಿ ಸಾಕುವೆಡೆ ಇದು ವ್ಯಾಪಕ. ಈ ಕಾಯಿಲೆ ಕೋಮಾ ಮತ್ತು ಸಾವಿಗೆ ಕಾರಣವಾಗಬಹುದು.

ರೋಗ ತಡೆ ಮತ್ತು ಚಿಕಿತ್ಸೆ : ತಂತ್ರಜ್ಜಾನದ ಹಂಗಿನರಮನೆ

ಇವುಗಳಲ್ಲಿ ಮಲೇರಿಯಾಕ್ಕೆ ಮಾತ್ರ ಪರಿಣಾಮಕಾರಿ ಚಿಕಿತ್ಸೆ ಇದೆ. ಕ್ವಿನೈನ್ ಉಳ್ಳ ಸಿಂಕೋನಾ ಮರದ ತೊಗಟೆಯನ್ನು ಮಲೇರಿಯಾ ಜ್ವರದ ಉಪಶಮನಕ್ಕೆ ೧೭೦೦ರಿಂದ ಉಪಯೋಗಿಸಲಾಗುತ್ತಿತ್ತು. ಎರಡನೆಯ ಜಾಗತಿಕ ಸಮರದ ನಂತರ ಹೆಚ್ಚು ಪರಿಣಾಮಕಾರಿ ಔಷಧಿಗಳನ್ನು ಅಭಿವೃದ್ಧಿಪಡಿಸಲಾಯಿತು. ಅದರಲ್ಲಿ ಕ್ಲೋರೊಕ್ವಿನ್ ಒಂದು. ಇನ್ನೂ ಪರಿಣಾಮಕಾರಿಯಾದ ಔಷಧಗಳೂ ಇವೆ. ಅವು ಪಮಕ್ವಿನ್, ಅಮಡಿಯಾಕ್ವಿನ್, ಮೆಫ್ಲೊಕ್ವಿನ್.

ಡೆಂಗ್ಯೂ ಜ್ವರಕ್ಕೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಕೇವಲ ಬೆಂಬಲ ಚಿಕಿತ್ಸೆಯಷ್ಟೇ ಉಂಟು. ಮಿದುಳುರಿತಕ್ಕೂ ಅಷ್ಟೆ.

ಈ ನಾಲ್ಕರಲ್ಲಿ ಮಿದುಳುರಿತಕ್ಕೆ ಮಾತ್ರ ರೋಗ ಬರದಂತೆ ರಕ್ಷೆ ಒದಗಿಸುವ ಲಸಿಕೆ ಇದ್ದು, ಕೊರಿಯಾದಲ್ಲಿ ಬಳಸಲಾಗುತ್ತಿರುವ ಇದು ತುಂಬಾ ದುಬಾರಿ. ಭಾರತದಲ್ಲಿ ವ್ಯಾಪಕವಾಗಿ ಲಭ್ಯವಿಲ್ಲ. ಇದನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷವಾಗಿ ಭತ್ತ ಬೆಳೆಯುವ ಮತ್ತು ಹಂದಿಗಳು ಹೆಚ್ಚಿಗೆ ಇರುವ ಜಾಗಗಳಲ್ಲಿ ತೆಗೆದುಕೊಳ್ಳಲು ಹೇಳಲಾಗುತ್ತದೆ. ಆದರೆ ಈ ದುಬಾರಿ ಲಸಿಕೆಯನ್ನು ಎಷ್ಟು ಮಂದಿ ತೆಗೆದುಕೊಳ್ಳಲು ಸಾಧ್ಯ?

ಈ ಕಾಯಿಲೆಗಳು ಬರದಂತೆ ರಕ್ಷಿಸಿಕೊಳ್ಳುವುದು ಹೇಗೆ? ಸೊಳ್ಳೆಗಳಿಂದ ರಕ್ಷಣೆ ಪಡೆಯಲು ತಂತ್ರಜ್ಞಾನ ಅನೇಕ ಸಾಧನಗಳನ್ನು ನಮ್ಮ ಮುಂದಿಟ್ಟಿದೆ. ಸೊಳ್ಳೆಗಳು ಸಾಮಾನ್ಯವಾಗಿ ಮುಸ್ಸಂಜೆ ಮತ್ತು ಮುಂಜಾವಿನ ಹೊತ್ತು ಚುರುಕಾಗಿರುತ್ತವೆ. ಇದಕ್ಕೆ ರಕ್ಷೆಯಾಗಿ ಸೊಳ್ಳೆ ಪರದೆ ಕಟ್ಟಿಕೊಳ್ಳಿ. ಇನ್ನೂ ಪರಿಣಾಮಕಾರಿ ರಕ್ಷೆ ಬೇಕೆಂದರೆ ಪರದೆಗೆ ಪೆರಿಥ್ರಿನ್ ಸಿಂಪಡಿಸಿ. ಅದೂ ಸಾಲದಿದ್ದರೆ ಕಿಟಕಿಗಳಿಗೂ ಸೊಳ್ಳೆ ಪರದೆ ಅಳವಡಿಸಿ. ಸೊಳ್ಳೆಗಳನ್ನು ವಿಕರ್ಷಿಸುವ ಮುಲಾಮನ್ನು ಮೈಗೆ ಪೂಸಿಕೊಂಡು ಮಲಗಿಬಿಡಿ. ಬೇಡವೆಂದರೆ ಕಿಟಕಿ, ಬಾಗಿಲು ಮುಚ್ಚಿ ಬಾಷ್ಟಕಾರಕವನ್ನು ತೇಲಿಬಿಡಿ ಅಥವಾ ಸೊಳ್ಳೆ ಬತ್ತಿ ಉರಿಸಿ.

ಈ ಎಲ್ಲ ರಾಸಾಯನಿಕ ಸಾಧನಗಳಿಂದ ಏನಾದರೂ ಅಡ್ಡ ಪರಿಣಾಮಗಳಾದರೆ, ಬೇರೆ ಕಾಯಿಲೆ ಬಂದರೆ (ಉದಾ: ಸೊಳ್ಳೆ ಬತ್ತಿ ಉರಿಸುವುದರಿಂದ ಉಸಿರಾಟದ ತೊಂದರೆ ಮತ್ತು ಅಲರ್ಜಿ ಬರಬಹುದು) ಹೆದರಬೇಡಿ. ಅದಕ್ಕೂ ಔಷಧಿ ಇದೆ. ಮತ್ತೇನು ಬೇಕು ನಿಮಗೆ?

ಇದು ‘ರೋಗವೂ ಬರಲಿ; ಔಷಧಿಯೂ ಇರಲಿ’ ಎನ್ನುವ ತಂತ್ರಜ್ಞಾನಾಧಾರಿತ ಆಧುನಿಕ ಜಗತ್ತಿನ ಅನಿವಾರ್ಯ ದ್ವಂದ್ವ.

ವಿಜ್ಜಾನದ ವಿವೇಕ

ಹಾಗಾದರೆ ವಿವೇಕದ ಕ್ರಮ ಯಾವುದು? ವಿಜ್ಞಾನದ ಪ್ರಕಾರ ಕಾಯಿಲೆಯ ಮೂಲವಾದ ಸೊಳ್ಳೆಗಳ ನಿಯಂತ್ರಣ ಮತ್ತು ನಿವಾರಣೆ. ವಿಜ್ಞಾನದ ವಿವೇಕ ಹೀಗೆ ಹೇಳುತ್ತದೆ – ಕಾಯಿಲೆ ಹರಡುವ ಸೊಳ್ಳೆ ಸಂತಾನಾಭಿವೃದ್ಧಿಯಾಗುವ ಸ್ಥಳ ನಿಂತ ನೀರು. ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಡಿ. ಸೊಳ್ಳೆಗಳಿಂದ ಮುಕ್ತಿ ಪಡೆಯಿರಿ.

ಪರಿಸರವನ್ನು ಸ್ವಚ್ಚವಾಗಿಡಲು ಅಗತ್ಯವಾದದ್ದೇನು? ನೀರು ಮತ್ತು ಮನಸ್ಸು. ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು; ಹಳ್ಳ ಕೊಳ್ಳಗಳನ್ನು ಮುಚ್ಚಬೇಕು. ಇದಕ್ಕೆ ಯಾವ ತಂತ್ರಜ್ಜಾನವೂ ಬೇಕಾಗಿಲ್ಲ. ಆದರೆ ಇಂದು ಎಲ್ಲೆಲ್ಲೂ ನಿಂತ ಗಬ್ಬು ನೀರಿನಿಂದಾಗಿ ಹೊರಗೆ ಸೊಳ್ಳೆಗಳ ಉತ್ಪಾದನೆ, ಮನೆಯ ಒಳಗೆ ಸೊಳ್ಳೆಗಳ ವಿರುದ್ಧ ಸೆಣಸಾಟ ನಡೆದಿದೆ. ನಿಮಗೆ ಗೊತ್ತೆ? ಪ್ರತಿ ವರ್ಷ ದಿಲ್ಲಿ ನಗರವೊಂದರಲ್ಲೇ ಸುಮಾರು ೪೫ ಕೋಟಿ ರೂಪಾಯಿಗಳನ್ನು ಸೊಳ್ಳೆ ಔಷಧ ಸಿಂಪಡಣೆಗೆ ವ್ಯಯಿಸಲಾಗುತ್ತಿದೆ. ಆದರೂ ಅಲ್ಲಿ ಸೊಳ್ಳೆ ಕಾಟ ತಪ್ಪಿಲ್ಲ.

ಈ ಮಧ್ಯ ಕೆಲವು ವಿಜ್ಞಾನಗಳು ನಗರಗಳಲ್ಲಿರುವ ಸೊಳ್ಳೆಗಳನ್ನು ಮೂಲೋತ್ಪಾಟನೆ ಮಾಡುವ ಹೊಸ ಯೋಜನೆ ಮುಂದಿಟ್ಟಿದ್ದಾರೆ. ಕೋಟಿಗಟ್ಟಲೆ ರೂಪಾಯಿ ವೆಚ್ಚದ ಈ ಯೋಜನೆಯ ತಂತ್ರ ತುಂಬಾ ಸರಳ: ಸೊಳ್ಳೆಗಳ ಸಾಮೂಹಿಕ ‘ಪೌರುಷ ಹರಣ’ ದ ಮೂಲಕ ಸೊಳ್ಳೆ ಕಾಟ ತಪ್ಪಿಸುವುದು. ಸೊಳ್ಳೆಗಳಲ್ಲಿ ಸಾರಾಸಗುಟು ನಪುಂಸಕತ್ವ ಉಂಟುಮಾಡುವುದು ಹೇಗೆ? ಪ್ರಯೋಗಾಲಯದಲ್ಲಿ ಬೆಳೆಸಿದ ಲಕ್ಷಾಂತರ ಸೊಳ್ಳೆಗಳಿಗೆ ವಿಕಿರಣ ಸ್ನಾನ ಮಾಡಿಸಿದರೆ ಅವು ತಮ್ಮ ಸಂತಾನಾಭಿವೃದ್ಧಿ ಶಕ್ತಿ ಕಳೆದುಕೊಳ್ಳುತ್ತವೆ. ಇಂಥ ಸೊಳ್ಳೆಗಳ ಜೊತೆ ಹೆಣ್ಣುಸೊಳ್ಳೆಗಳ ಮಿಲನವಾದರೂ, ಅವು ಮೊಟ್ಟೆ ಇಡುವುದಿಲ್ಲ. ಹೆಣ್ಣು ಸೊಳ್ಳೆ ಜೀವಮಾನದಲ್ಲಿ ಒಮ್ಮೆ ಮಾತ್ರ ಗಂಡಿನ ಜೊತೆ ಕೂಡುತ್ತದೆ. ಮುಂದೆ ಬದುಕಿನುದ್ದಕ್ಕೂ ಮೊಟ್ಟೆಗಳ ಮಳೆ ಸುರಿಸುತ್ತಲೇ ಇರುತ್ತದೆ. ಆ ಒಂದು ಮಿಲನ ನಿಷ್ಪಲವಾದರೆ ಹೆಣ್ಣು ಸೊಳ್ಳೆ ಶಾಶ್ವತ ಬಂಜೆಯಾಗುತ್ತದೆ. ಆದ್ದರಿಂದ ನಪುಂಸಕ ಸೊಳ್ಳೆಗಳ ಪ್ರಯೋಗವನ್ನು ಎರಡು, ಮೂರು ಸಲ ಮಾಡಿದರೆ ಹೊಸ ಸೊಳ್ಳೆಗಳ ಹುಟ್ಟು ಸಂಪೂರ್ಣವಾಗಿ ಅಡಗಿಹೋಗುತ್ತದೆ.

ಇನ್ನೊಂದು ವರ್ಗದ ವಿಜ್ಜಾನಿಗಳು ‘ಇದು ಅಸಾಧ್ಯ. ವೃಥಾ ಖರ್ಚು. ಈಗಿರುವ ಔಷಧ ಸಿಂಪಡಣೆಯಂಥ ಸರಳ ತಂತ್ರಗಳನ್ನೇ ಸರಿಯಾಗಿ ಜಾರಿಗೆ ತಂದರೆ ಸಾಕು’ ಎನ್ನುತ್ತಿದ್ದಾರೆ. ಹಾಗಾದರೆ ನಾವು ಯಾರನ್ನು ನಂಬುವುದು?

ನಿರರ್ಥಕ ತಂತ್ರಜ್ಜಾನ

ತಂತ್ರಜ್ಞಾನದ ಅಪಬಳಕೆ ಮತ್ತು ಅತಿಬಳಕೆಯೇ ಒಂದು ರೀತಿಯಲ್ಲಿ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ನೀರಿನ ಬಳಕೆ ಮತ್ತು ಮಾಲಿನ್ಯ ಹೆಚ್ಚಾಗಿದೆ; ತ್ಯಾಜ್ಯ ವಸ್ತುಗಳ ಉತ್ಪಾದನೆ ಮತ್ತು ಬಳಕೆ ನಿಯಂತ್ರಿಸಲಾಗದಷ್ಟು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಕೊಡುಗೆಗಳನ್ನು ಬಳಸಿಕೊಳ್ಳುವುದರಲ್ಲಿ ಇರುವ ಆಸಕ್ತಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವೆಡೆ ಇಲ್ಲ. ಇವೆಲ್ಲ ಸೇರಿ ಸೊಳ್ಳೆಗಳಿಗೆ ಫಲವತ್ತು ವಾತಾವರಣ ನಿರ್ಮಿಸಿವೆ. ಹೀಗೆ ತಂತ್ರಜ್ಞಾನ ಒಂದೆಡೆ ಕಾಯಿಲೆಗಳನ್ನು ಬಿತ್ತುತ್ತಾ, ಮತ್ತೊಂದೆಡೆ ಅದನ್ನು ವಾಸಿ ಮಾಡಲು ಔಷಧಿಗಳನ್ನು ಕೊಡುತ್ತದೆ.

ಅಸಫಲ ಹೋರಾಟ

ನಾವು ಸೊಳ್ಳೆಯನ್ನು ಬಹಳ ಹಗುರವಾಗಿ ತೆಗೆದುಕೊಳ್ಳುತ್ತೇವೆ. ‘ಯಾವ ಸೊಳ್ಳೆ ಲೆಕ್ಕ’ ಅನ್ನುತ್ತೇವೆ. ಈ ಮಾತಿನಲ್ಲಿ ಸೊಳ್ಳೆಯನ್ನು ಸುಲಭವಾಗಿ ನಾಶಮಾಡಬಲ್ಲೆ ಎಂಬ ಅಹಂ ಇದೆ. ಆದರೆ ಅದು ಇಷ್ಟು ಸುಲಭವೆ?

ಸೊಳ್ಳೆಗಳ ನಿಯಂತ್ರಣ ಮತ್ತು ನಿವಾರಣೆಗೆ ತಂತ್ರಜ್ಞಾನ ಏನೆಲ್ಲ ಮಾಡಿದರೂ ಯಶಸ್ಸು ಸಿಗದೆ ಸೊಳ್ಳೆಗಳೆದುರು ಸೋತು ಶರಣಾಗಿದೆ. ಸೊಳ್ಳೆಗಳೊಂದಿಗೆ ಹೊಂದಿಕೊಂಡು ಬದುಕುವ ರಾಜಿಗೆ ಬಿದ್ದಿದೆ. ಇದು ಡಿಡಿಟಿ ವಿಷಯದಲ್ಲಿ ವೇದ್ಯ.

ಡಿಡಿಟಿ ಸಿಂಚನದಿಂದ ಸೊಳ್ಳೆ ನಿವಾರಿಸಲು ಮಾಡಿದ ಪ್ರಯತ್ನ ಒಂದು ಕ್ರೂರ ವ್ಯಂಗ್ಯ. ೧೯೩೦ರಲ್ಲಿ ಕಂಡುಹಿಡಿಯಲ್ಪಟ್ಟ ಡಿಡಿಟಿಯನ್ನು ೧೯೪೫ರಲ್ಲಿ ಪ್ರಥಮಬಾರಿಗೆ ಅಮೆರಿಕಾದಲ್ಲಿ ಬಳಸಲಾಯಿತು. ಕೇವಲ ಐದು ವರ್ಷ ಕಳೆಯುವುದರೊಳಗೆ ಅದು ಸಂತಾನೋತ್ಪತ್ತಿ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತದೆಂಬ ಸತ್ಯ ಹೊರಬಿತ್ತು. ವಿಪರ್ಯಾಸವೆಂದರೆ, ಈ ಸತ್ಯ ಹೊರಬೀಳುವ ಎರಡು ವರ್ಷ ಮುಂಚೆ ಡಿಡಿಟಿಯನ್ನು ಕಂಡುಹಿಡಿದ ವಿಜ್ಞಾನಿಗೆ ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಗಿತ್ತು.

ಡಿಡಿಟಿಯ ದುಷ್ಪರಿಣಾಮ ಖಚಿತವಾದ ಮೇಲೆ ಅಮೆರಿಕ ೧೯೭೨ರಲ್ಲಿ ಡಿಡಿಟಿ ಬಳಕೆ ನಿಷೇಧಿಸಿತು. ಆದರೆ ಅಭಿವೃದ್ಧಿಶೀಲ ದೇಶಗಳಲ್ಲಿ ಡಿಡಿಟಿ ಹೆಚ್ಚು ಉಪಯುಕ್ತ, ಅಗ್ಗವೆಂಬ ಕಾರಣಕ್ಕೆ ಇಂದೂ ಬಳಕೆಯಲ್ಲಿದೆ. ಮಲೇರಿಯಾ ಬೇಕೋ, ನಪುಂಸಕತ್ವ ಬೇಕೋ? ಆಯ್ಕೆ ನಿಮ್ಮದು ಎಂದು ಗಹಗಹಿಸುತ್ತಿದೆ ಇಂದಿನ ತಂತ್ರಜ್ಜಾನ.

ಈಗ ಮಲೇರಿಯಾ ಪ್ರಸರಣ ೪೦-೫೦ ವರ್ಷ ಹಿಂದೆ ಇದ್ದುದಕ್ಕಿಂತ ಹೆಚ್ಚಿಗೆ ಇದೆ. ಡಿಡಿಟಿಯನ್ನು ಸೊಳ್ಳೆಗಳು ತಿಂದು ಜೀರ್ಣೊಭವ ಎನ್ನುತ್ತಿವೆ. ಹಾಗೆಯೇ ಮಲೇರಿಯಾ ಇಂದು ಕ್ಲೋರೋಕ್ವಿನ್‌ಗೆ ಜಗ್ಗುತ್ತಿಲ್ಲ. ಈಗ ನಮಗೆ ಬೇಕಾಗಿರುವುದು ಹೊಸ ಹೊಸ ಔಷಧಿಗಳಲ್ಲ, ಬದಲಿಗೆ ವಿಜ್ಞಾನದ ವಿವೇಕ ಮತ್ತು ಅದರಂತೆ ನಡೆಯುವ ಶ್ರದ್ದೆ ಮಾತ್ರ.