ನನಗೆ ಸೊಳ್ಳೆಗಳನ್ನು ಕೇಳಿದರೇ ಭಯ!  ಇದು ವ್ಯಾಕರಣ ದೋಷವಲ್ಲ ಬಿಡಿ. ನಿಜವಾಗಿಯೂ ನನಗೆ ಸೊಳ್ಳೆಗಳ ಸದ್ದು ಕೇಳಿದರೇ ಭಯ. ಸೊಳ್ಳೆಗಳು ಕಚ್ಚಿದರೆ ಆಗುವ ನೋವಿಗಿಂತಲೂ, ಅದು ತರಬಹುದಾದ ರೋಗಕ್ಕಿಂತ,  ಕಿವಿಯ ಹತ್ತಿರ ಅದು ಬಂದು ಗುಂಯ್ಗುಡುವುದು ಭಯಾನಕ ಎನಿಸುತ್ತದೆ. ಎಷ್ಟೋ ಸಲ, ಸೊಳ್ಳೆಯ ಗುಂಯ್ಕಾರದಿಂದಾಗಿ ನಿದ್ರೆ ಬಾರದೇ ರಾತ್ರಿಯೆಲ್ಲ ನಿಶಾಚರನಾಗಿದ್ದೂ ಇದೆ. ಸೊಳ್ಳೆಯ ಸದ್ದಿನ ಮೇಲೂ ಸಂಶೋಧನೆ ನಡೆಸುವವರಿದ್ದಾರೆ ಎಂದಾಗ ಭೇಷ್ ಎನ್ನಬೇಕಷ್ಟೆ. ಮೊನ್ನೆ ಸುಪ್ರಸಿದ್ಧ ವಿಜ್ಞಾನ ಪತ್ರಿಕೆ ಸೈನ್ಸ್ನಲ್ಲಿ ಸೊಳ್ಳೆಗಳು ಮಾಡುವ ಸದ್ದನ್ನು ಕುರಿತೇ ಸಂಶೋಧನೆಯೊಂದು ಪ್ರಕಟವಾಗಿದೆ. ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದ ಕೀಟವಿಜ್ಞಾನಿ ರೋನಾಲ್ಡ್ ಹೋಯ್ ಮತ್ತು ಸಂಗಡಿಗರು ಸೊಳ್ಳೆ ದಂಪತಿಗಳ ಯುಗಳ ಗೀತೆಯ ಬಗ್ಗೆ ವರದಿ ಮಾಡಿದ್ದಾರೆ.  ಹೆಣ್ಣು ಸೊಳ್ಳೆಯ ಬಳಿ ಸಾರಿದಾಗ ಗಂಡು ಸೊಳ್ಳೆ ತನ್ನ ಸ್ವರವನ್ನು ಮಾರ್ಪಡಿಸಿಕೊಂಡು ಯುಗಳ ಗೀತೆ ಹಾಡುತ್ತದೆಯಂತೆ.

ಹೆಣ್ಣನ್ನು ಆಕರ್ಷಿಸಲು ಗಂಡು ಕೀಟಗಳು ಹಲವಾರು ಉಪಾಯಗಳನ್ನು ಬಳಸುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಬಣ್ಣ, ಬಣ್ಣದ ದಿರಿಸು ತೊಡುವ ಪತಂಗಗಳಿವೆ. ಉದ್ದನೆಯ ಮೀಸೆ ತೊಡುವ ದುಂಬಿಗಳಿವೆ. ಪ್ರೇಮ ಗೀತೆಗಳನ್ನು ಹಾಡುವ ಕೀಟಗಳೂ ಇವೆ. ಸೊಳ್ಳೆಯ ಗುಂಯ್ಕಾರವೂ ಪ್ರೇಮಾಲಾಪವೇ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಹೆಣ್ಣು ಸೊಳ್ಳೆಗಳು ಹಾರುವಾಗ ಉಂಟಾಗುವ ಗುಂಯ್ ಸದ್ದನ್ನು ಕೇಳಿ ಗಂಡು ಸೊಳ್ಳೆ ಅದರ ಬಳಿಸಾರುತ್ತದೆ ಎಂದು ನೂರೈವತ್ತು ವರ್ಷಗಳಿಗೂ ಹಿಂದೆಯೇ ಪತ್ತೆ ಮಾಡಲಾಗಿತ್ತು. ಸೊಳ್ಳೆಗಳ ಕಿವಿ ಅವುಗಳ ಕಾಲಿನಲ್ಲಿವೆ ಎನ್ನುವುದೂ ಅಷ್ಟೇ ಹಿಂದಿನ ಮಾತು. ಜಾನ್ಸ್ಟನ್ ಎನ್ನುವ ವಿಜ್ಞಾನಿ ಇತರೇ ಕೀಟಗಳಲ್ಲಿ ಇರುವಂತೆ ಸೊಳ್ಳೆಗಳ ಕಾಲಿನ ಬುಡದಲ್ಲಿಯೂ ಶಬ್ದಗಳನ್ನು ಗ್ರಹಿಸುವ ಸಂವೇದನಾಂಗಗಳಿವೆ ಎಂದು ಪತ್ತೆ ಮಾಡಿದ್ದ. ಈ ಅಂಗಗಳನ್ನು ಜಾನ್ಸ್ಟನ್ ಅಂಗಗಳು ಎಂದೇ ಹೆಸರಿಸಲಾಗಿದೆ. ಹೆಚ್ಚೂ ಕಡಿಮೆ ನಮ್ಮ ಒಳಗಿವಿಯಲ್ಲಿರುವ ಪುಟ್ಟ ಶಂಖುವಿನಾಕಾರದ ಶಬ್ದಗ್ರಾಹಿ ಕಾಕ್ಲಿಯದಂತೆಯೇ ಜಾನ್ಸ್ಟನ್ ಅಂಗವೂ ಕೆಲಸ ಮಾಡುತ್ತದೆ. ಗಾಳಿಯಲ್ಲಿ ತೇಲಿ ಬರುವ ಶಬ್ದದ ಅಲೆಗಳನ್ನು ಇದು ಗ್ರಹಿಸುತ್ತದೆ. ಶಬ್ದಗಳನ್ನು ಗ್ರಹಿಸುವ ಅಂಗ ಇರುವುದರಿಂದ, ಸೊಳ್ಳೆಗಳ ಸಮಾಜದಲ್ಲಿ ಹಾಡು, ಮಾತಿಗೂ ಅವಕಾಶವಿರಬೇಕು ಎನ್ನುವುದು ವಿಜ್ಞಾನಿಗಳ ಗುಮಾನಿ.

 

ಹಾಡು ಅಂದ ಮೇಲೆ ಸ್ವರವಿರಲೇಬೇಕಲ್ಲ! ಆಶಾಭೋಂಸ್ಲೆಯ ಸ್ವರಕ್ಕೂ, ಅವರಕ್ಕ ಲತಾ ಮಂಗೇಶ್ಕರರ ಸ್ವರಕ್ಕೂ ಅಜಗಜಾಂತರವಿದೆಯಲ್ಲ, ಅದು ಸ್ವರದಲ್ಲಿನ ಸಹಜ ವ್ಯತ್ಯಾಸ. ಆಯಾಯಾ ವ್ಯಕ್ತಿಯ ಗಂಟಲಿನಲ್ಲಿರುವ ಸ್ವರತಂತುಗಳು ವಿಭಿನ್ನ ವೇಗದಲ್ಲಿ ಕಂಪಿಸುವುದರಿಂದ ಈ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಸದ್ದುಂಟು ಮಾಡುವ ಯಾವುದೇ ವಸ್ತುವಿಗೂ ಅದರದ್ದೇ ಆದ ಸಹಜ ಕಂಪನಾಂಕವಿರುತ್ತದೆ.  ಕೊಳಲಿನಲ್ಲಿ ಊದಿದಾಗ ಮೊದಲು ಹುಟ್ಟುವ ನಾದ ಕೊಳಲಿನ ಸಹಜ ಕಂಪನಾಂಕ. ಅನಂತರ ಬೆರಳಾಡಿಸಿ ಹಾಡುವಾಗ ಬರುವ ಉಲಿ, ಅದೇ ಕಂಪನದ ವಿವಿಧ ಸ್ತರಗಳು. ನಾವು ಮಾತನಾಡುವಾಗ ಹೊರಡುವ ಸದ್ದು ಸಹಜ ಕಂಪನಾಂಕದ್ದು. ಹಾಡುವಾಗ ಅದೇ ಸ್ವರ ಹಿಮ್ಮೇಳದ ಜೊತೆಗೆ ಮೇಳೈಸುವಂತೆ ಬದಲಾಗುತ್ತದೆ. ಹಾಡಾಗುತ್ತದೆ. ಇನಿದಾಗುತ್ತದೆ.

ಫಿಸಿಕ್ಸ್ನ ಈ ಮೂಲತತ್ವ ಸೊಳ್ಳೆಯ ಹಾಡಿಗೂ ಅನ್ವಯಿಸಬೇಕಷ್ಟೆ. ಅಂದ ಹಾಗೆ ಸೊಳ್ಳೆಗಳು ನಮ್ಮಂತೆ ಗಂಟಲೊಣಗಿಸಿಕೊಂಡು ಹಾಡುವುದಿಲ್ಲ. ರೆಕ್ಕೆಯನ್ನು ರಭಸದಿಂದ ಬೀಸಿ ಅವು ಸದ್ದುಂಟು ಮಾಡುತ್ತವೆ.  ಗಂಡುಸೊಳ್ಳೆ ಮತ್ತು ಹೆಣ್ಣು ಸೊಳ್ಳೆಯ ರೆಕ್ಕೆ ಬಡಿತದಿಂದುಂಟಾಗುವ ಸದ್ದುಗಳಲ್ಲಿ ವ್ಯತ್ಯಾಸವಿದೆ. ಗಂಡುಸೊಳ್ಳೆಯ ರೆಕ್ಕೆ ಬಡಿತದ ಧ್ವನಿ ತುಸು ಹೆಚ್ಚಿನ ಕಂಪನಾಂಕದ್ದು – ಸುಮಾರು 600 ಹಟ್ರ್ಸ್. ಹೆಣ್ಣುಸೊಳ್ಳೆಯದ್ದು ತುಸು ನಿಧಾನ ಬಡಿತ ಗ 400 ಹಟ್ರ್ಸ್. ಸೊಳ್ಳೆಗಳ ಗುಂಯ್ಕಾರದ ಸಹಜ ಕಂಪನಾಂಕ 300 ರಿಂದ 600 ಹಟ್ರ್ಸ್ವರೆಗೆ ಇರುತ್ತದೆ. ಬೇರೆ, ಬೇರೆ ಸೊಳ್ಳೆ ಪ್ರಬೇಧಗಳ ಸಹಜ ಕಂಪನಾಂಕದಲ್ಲಿಯೂ ಭಿನ್ನತೆ ಇರುತ್ತದೆ.  ಹೆಣ್ಣಿನ ಗುಂಯ್ ಸದ್ದನ್ನು ಕೇಳಿಯೇ ಗಂಡು ಅದರ ಬೆನ್ನು ಹತ್ತುತ್ತದೆ ಎಂದು ಇದುವರೆವಿಗೂ ವಿಜ್ಞಾನಿಗಳು ನಂಬಿದ್ದರು. ಸೊಳ್ಳೆಗಳ ಸದ್ದಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಮರ್ಮವನ್ನು ರೋನಾಲ್ಡ್ ಹೋಯ್ ಕಂಡಿದ್ದಾರೆ.

ಸೊಳ್ಳೆಗಳ ಜಾನ್ಸ್ಟನ್ ಅಂಗಗಳು 400 ಹಟ್ರ್ಸ್ ಕಂಪನಾಂಕಕ್ಕಿಂತಲೂ ಹೆಚ್ಚಿನ ತರಂಗಾಂತರಗಳ ಸದ್ದನ್ನು ಆಲಿಸಲಾರದು ಎಂದು ನಂಬಲಾಗಿತ್ತು. ಹೋಯ್ರವರ ಸಂಶೋಧನೆಯ ಪ್ರಕಾರ ಗಂಡು ಸೊಳ್ಳೆಗಳು ಸುಮಾರು 1200 ಹಟ್ರ್ಸ್ವರೆಗಿನ ಸದ್ದನ್ನೂ ಪತ್ತೆ ಮಾಡಬಲ್ಲುವು. ಅಷ್ಟೇ ಅಲ್ಲ. ಹೆಣ್ಣಿನ ಹಾರಾಟಕ್ಕೆ ತಕ್ಕಂತೆ ತಮ್ಮ ಹಾರಾಟವನ್ನೂ ಬದಲಿಸಿಕೊಳ್ಳುತ್ತವೆಯಂತೆ.  ಹೆಣ್ಣುಗಳೂ ಅಷ್ಟೆ, ಗಂಡಿನ ರೆಕ್ಕೆಯ ಸದ್ದು ಕೇಳಿದಾಗ ಹಾಡು ಹಾಡುತ್ತವಂತೆ. ಅಂದರೆ ತಮ್ಮ ಸಹಜ ಕಂಪನಾಂಕದ ಸದ್ದಿನ ಸ್ಥಾಯಿಯನ್ನು ಬದಲಿಸಿಕೊಳ್ಳುತ್ತವೆ. ಅಷ್ಟೇ ಆಗಿದ್ದರೆ ವಿಚಿತ್ರವೆನ್ನಿಸುತ್ತಿರಲಿಲ್ಲ. ಗಂಡುಗಳೂ ಅದೇ ಕಂಪನಾಂಕದ ಸದ್ದನ್ನು ಹೊರಡಿಸಲು ಆರಂಭಿಸುತ್ತವೆ ಗ ಜುಗಲ್ಬಂದಿಯ ವೇಳೆ ಇಬ್ಬರೂ ಗಾಯಕರೂ ಒಂದೇ ರೀತಿ ಹಾಡುವುದಿಲ್ಲವೇ? ಹಾಗೆ ಸೊಳ್ಳೆಗಳೂ ತಮ್ಮ ರಾಗವನ್ನು ಮೇಳೈಸುತ್ತವೆ.

ನಂಬಿಕೆಯಾಗಲಿಲ್ಲವೇ? ರೋನಾಲ್ಡ್ ಹೋಯ್ರವರಿಗೂ ಇದು ನಂಬಿಕೆಯಾಗಲಿಲ್ಲ. ಹೀಗಾಗಿ ಮತ್ತಷ್ಟು ಜತನದಿಂದ ಪ್ರಯೋಗಗಳನ್ನು ನಡೆಸಿದ್ದಾರೆ. ಡೆಂಗ್ಯೂ ಜ್ವರ ಹರಡುವ ಸೊಳ್ಳೆಯ ಜಾತಿಯ ಗಂಡು ಸೊಳ್ಳೆಗಳನ್ನು ಸೂಜಿಯ ಮೊನೆಯ ಮೇಲೆ ಅಂಟಿಸಿ, ಅವುಗಳ ಸಮೀಪ ಹೆಣ್ಣು ಸೊಳ್ಳೆಗಳು ಹಾರಾಡುವಂತೆ ಮಾಡಿದ್ದಾರೆ. ಹೆಣ್ಣು ಸೊಳ್ಳೆಗಳ ರೆಕ್ಕೆಯಿಂದ ಹೊರಡುವ ಸದ್ದಿನ ಅಲೆಗಳನ್ನು ಸೂಕ್ಷ್ಮ ಯಂತ್ರದಿಂದ ಪತ್ತೆ ಮಾಡಿ, ಕಂಪನಾಂಕ ಅಳೆದಿದ್ದಾರೆ. ಗಂಡು ಸಮೀಪ ಸುಳಿದಂತೆ ಹೆಣ್ಣಿನ ರೆಕ್ಕೆಯ ರಭಸ ಹೆಚ್ಚಿ, ಕಂಪನಾಂಕವೂ ಹೆಚ್ಚುವುದನ್ನು ದಾಖಲಿಸಿದ್ದಾರೆ. ಅದೇ ವೇಳೆ ಗಂಡಿನ ರೆಕ್ಕೆಯೂ ಅಷ್ಟೇ ಕಂಪನಾಂಕದ ಸದ್ದನ್ನು ಹೊರಡಿಸಿದ್ದನ್ನೂ ದಾಖಲಿಸಿದ್ದಾರೆ. ಇದು ಆಕಸ್ಮಿಕವಿರಬಹುದೇನೋ ಎನ್ನುವ ಶಂಕೆಯಿಂದ, ಸೂಜಿ ಮೊನೆಗೆ ಅಂಟಿಸಿದ ಗಂಡಿಗೆ ಇಲೆಕ್ಟ್ರಾನಿಕ್ ಸಂಗೀತ ಕೇಳಿಸಿದ್ದಾರೆ. ಹೆಣ್ಣು ಸೊಳ್ಳೆಗಳ ರಾಗವನ್ನು ಹೋಲುವ ಶಬ್ದ ಕೇಳಿದಾಗ ಗಂಡು ಸೊಳ್ಳೆಗಳೂ ದನಿಗೂಡಿಸಿ ಹಾಡಿದುವಂತೆ. ರಾಗವಿಲ್ಲದೆ ಕೇವಲ ಸಹಜ ಕಂಪನಾಂಕದ ಸದ್ದಷ್ಟೆ ಕೇಳಿದಾಗ, ಗಂಡು ಸೊಳ್ಳೆಗಳ ದನಿಯಲ್ಲಿ ಏರಿಳಿತಗಳಾಗಲಿಲ್ಲ ಎನ್ನುತ್ತಾರೆ ಹೋಯ್. ಹಾಂ. ಈ ಡುಯೆಟ್ ಗಂಡಿನ ಜೊತೆ ಕೂಡುವವರೆಗಷ್ಟೆ ಅಂತೆ. ಒಮ್ಮೆ ಕೂಡಿದ ಅನಂತರ ಹೆಣ್ಣುಗಳು, ಗಂಡಿನ ಉಲಿಯನ್ನು ಆಲಿಸುವುದೇ ಇಲ್ಲವಂತೆ. ಅಂದರೆ ಈ ಡುಯೆಟ್ ಪ್ರೇಮದ ಹಾಡಷ್ಟೆ. ಒಮ್ಮೆ ಸಂಯೋಗವಾದರೆ, ಈ ಸ್ವರಸಂಗಮ ಕೊನೆಯಾದಂತೆಯೇ ಸರಿ.

ಅದು ಸರಿ. ಸೊಳ್ಳೆಗಳು ಡುಯೆಟ್ ಹಾಡಿದರೆ ನಮಗೇನು ಲಾಭ ಎಂದಿರಾ? ಬಹುಶಃ ಇಂತಹ ಡುಯೆಟ್ ಹಾಡಿ, ಹೆಣ್ಣು ಸೊಳ್ಳೆಗಳನ್ನು ಆಕರ್ಷಿಸಿ ಕೊಲ್ಲಬಹುದು ಎನ್ನುವ ಆಲೋಚನೆಯಿದೆ.  ಉದಾಹರಣೆಗೆ, ನಿರ್ವೀರ್ಯವಾದ ಗಂಡುಗಳನ್ನು ತಯಾರಿಸಿ, ಅವುಗಳ ಹಾಡಿನಿಂದ ಹೆಣ್ಣುಗಳನ್ನು ಆಕರ್ಷಿಸಬಹುದು. ಹೆಣ್ಣು ಒಮ್ಮೆ ಗಂಡಿನ ಜೊತೆಗೂಡಿದರೆ, ಮತ್ತೆ ಇನ್ಯಾವ ಗಂಡಿನ ಬಳಿಯೂ ಸುಳಿಯುವುದಿಲ್ಲವಾದ್ದರಿಂದ, ಅದು ಮರಿಯಿಡುವ ಸಾಧ್ಯತೆಗಳೂ ಕಡಿಮೆಯಾಗುತ್ತದೆ ಎನ್ನುವುದು ಇವರ ತರ್ಕ.

Lauren J. Cator et al; Harmonic Convergence in the Love Songs of the Dengue Vector Mosquito,  Science, 323, Pp 1077-1079, 2009