ಯಾವುದೋ ಮಾಹಿತಿ ಬೇಕಾಗಿತ್ತು. ಪ್ರಾಣಿಶಾಸ್ತ್ರದ ಪಠ್ಯಪುಸ್ತಕವೊಂದನ್ನು ತಿರುವಿ ಹಾಕುತ್ತಿದೆ. ಅದರಲ್ಲೊಂದು ಸಾಲು ನನ್ನನ್ನು ಸೆರೆಹಿಡಿಯಿತು. ‘ಆಗಸ್ಟ್ ೨೯, ೧೮೯೭ನ್ನು ಸೊಳ್ಳೆ ದಿನ’ವೆಂದು ಘೋಷಿಸಲಲಾಗಿದೆ. ಅರೆ! ಇದೇನಿದು. ಮಹಿಳಾ ದಿನ, ಅಂಗವಿಕಲರ ದಿನ, ವಿಶ್ವ ಪರಿಸರ ದಿನ, ಕಾರ್ಮಿಕರ ದಿನ ಮುಂತಾಗಿ ನೂರಾರು ‘ದಿನ’ಗಳ ಬಗ್ಗೆ ಕೇಳಿದ್ದೇನೆ. ಇದ್ಯಾವುದು ಸೊಳ್ಳೆ ದಿನ ಎಂದು ಅಚ್ಚರಿಯಾಯಿತು. ನಾನಂತೂ ಅದುವರೆಗೆ ಸೊಳ್ಳೆಗೊಂದು ದಿನ ಇರುವುದರ ಬಗ್ಗೆ ಕೇಳಿರಲಿಲ್ಲ. ನೀವು?

ಕುತೂಹಲದಿಂದ ಅದೇನೆಂದು ತಡಕಿದೆ. ಇಷ್ಟು ವಿವಿರ ಸಿಕ್ಕಿತು. ಸ್ವಲ್ಪ ಹಿಂದಿನಿಂದಲೇ ವಿವರಿಸುತ್ತೇನೆ.

ಬಹು ಹಿಂದೆ ಮಲೇರಿಯಾ ರೋಗಕ್ಕೆ ‘ಮಲೇರಿಯಾ’ ಎಂಬ ಹೆಸರೇ ಇರಲಿಲ್ಲ. ಅನೇಕ ಬೇರೆ ಬೇರೆ ಹೆಸರುಗಳಿಂದ ಆ ರೋಗ ಜನರ ಬಾಯಲ್ಲಿತ್ತು. ಜವುಗುಭೂಮಿ ಜ್ವರ, ಬಿಟ್ಟು ಬಿಟ್ಟು ಬರುವ ಮತ್ತು ರವಾನೆಯಾಗುವ ಜ್ವರ, ಕಾಡು ಜ್ವರ ಇತ್ಯಾದಿ. ಆ ರೋಗಕ್ಕೆ ಮಲೇರಿಯಾ ಎಂಬ ಹೆಸರಿಟ್ಟಿದ್ದು ಮಕ್ಕುಲೋಚ್ ಎಂಬ ವಿಜ್ಞಾನಿ – ೧೮೨೭ರಲ್ಲಿ. ಇದು ಜವುಗು ಪ್ರದೇಶದ ಕೆಟ್ಟ ಗಾಳಿಯಿಂದ ಬರುತ್ತದೆ ಎಂಬ ನಂಬಿಕೆಯ ಮೇಲೆ ಮಕ್ಕುಲೋಚ್ ಆ ಹೆಸರನ್ನಿಟ್ಟರು. ಮಲೇರಿಯಾ ಪದ ಎರಡು ಇಟಾಲಿಯನ್ ಪದಗಳ ಕೂಡಿಕೆಯಿಂದಾಗಿದೆ. : mal = bad; aria = air. ಕನ್ನಡದಲ್ಲಿ ಇದು ‘ಕೆಟ್ಟ ಗಾಳಿ’ ಎಂಬ ಅರ್ಥಕೊಡುತ್ತದೆ. ಈಗ ಮಲೇರಿಯ ಕೆಟ್ಟಗಾಳಿಯಿಂದ ಬರುವ ಕಾಯಿಲೆಯಲ್ಲ ಎಂಬುದು ತಿಳಿದಿದೆ. ಆದರೂ ಆ ಹೆಸರು ಮಾತ್ರ ನಿಂತು ಬಿಟ್ಟಿದೆ.

೧೮೮೦ರಲ್ಲಿ ಫ್ರಂಚ್ ಸೇನೆಯ ವೈದ್ಯಾಧಿಕಾರಿಯಾಗಿದ್ದ ಲಾವೆರನ್ ಮಲೇರಿಯ ರೋಗಿಯ ರಕ್ತದಲ್ಲಿ ಮಲೇರಿಯ ಪರಪುಷ್ಟ ಇರುವುದನ್ನು ತೋರಿಸಿ ‘ಕೆಟ್ಟ ಗಾಳಿ’ಯ ನಂಬಿಕೆಯನ್ನು ತೊಡೆದು ಹಾಕಿದ.

ಪರಪುಷ್ಟದಿಂದ ಮಲೇರಿಯ ಬರುತ್ತದೆ ಸರಿ. ಈ ಪರಪುಷ್ಟ ಮನುಷ್ಯನ ದೇಹವನ್ನು ಪ್ರವೇಶಿಸುವುದು ಹೇಗೆ? ಬಹು ಕಾಲದವರೆಗೆ ಇದೊಂದು ರಹಸ್ಯವಾಗಿ ಉಳಿದಿತ್ತು. ಮೂರು ಹಂತಗಳಲ್ಲಿ ಈ ರಹಸ್ಯವನ್ನು ಭೇದಿಸಲಾಯಿತು.

ಮನುಷ್ಯ ದೇಹವನ್ನು ‘’ಅನ್ಯ’ ವಸ್ತು-ಜೀವಿಗಳು ಸೇರುವ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದ ಜರ್ಮನಿಯ ವೈದ್ಯ ರಿಚರ್ಡ್ ಫೀಫರ್ ೧೮೯೨ರಲ್ಲಿ ಮಲೇರಿಯ ಪ್ರಸರಣದಲ್ಲಿ ರಕ್ತ ಹೀರುವ ಕೀಟಗಳ ಪಾತ್ರವಿದೆ ಎಂದು ಸೂಚಿಸಿದ. ಎರಡು ವರ್ಷಗಳ ನಂತರ ಸ್ಕಾಟಿಷ್ ವೈದ್ಯ ಸರ್ ಪ್ಯಾಟ್ರಿಕ್ ಮ್ಯಾನ್ಸನ್ ನಿರ್ದಿಷ್ಟವಾಗಿ ಆ ಕೀಟಗಳು ಸೊಳ್ಳೆಗಳೇ ಎಂದ. ಮ್ಯಾನ್ಸನ್ ಮಾತಿನ ಕೊಂಡಿಯನ್ನು ಹಿಡಿದು ಮುಂದುವರಿದ ಇಂಡಿಯನ್ ಮೆಡಿಕಲ್ ಸರ್ವಿಸಸ್‌ನಲ್ಲಿ ವೈದ್ಯನಾಗಿದ್ದ ಸರ್ ರೊನಾಲ್ಡ್ ರಾಸ್ ‘ಸೊಳ್ಳೆ-ಮಲೇರಿಯ ಸಂಬಂಧ’ವನ್ನು ಸ್ಥಾಪಿಸಿ ದಾಖಲೆ ನಿರ್ಮಿಸಿದ. ಮಲೇರಿಯದಿಂದ ನರಳುತ್ತಿದ್ದ ರೋಗಿಯೊಬ್ಬನ ನೆತ್ತರನ್ನು ಹೀರಿದ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಜಠರದಲ್ಲಿ ಪ್ಲಾಸ್ಮೋಡಿಯಮ್ ಪರಪುಷ್ಟ ಇರುವುದನ್ನು ಪತ್ತೆ ಹಚ್ಚಿದ. ಈ ಸಂಶೋಧನೆಯನ್ನು ಸರ್ ರೋನಾಲ್ಡ್ ರಾಸ್ ಮಾಡಿದ್ದು ಆಗಸ್ಟ್ ೨೯, ೧೮೯೭ರಂದು. ಅಂದಿನಿಂದ ಆ ದಿನವನ್ನು ‘ಸೊಳ್ಳೆ ದಿನ’ವೆಂದು ಕರೆಯಲಾಗುತ್ತಿದೆ. ಆದರೆ ಸೊಳ್ಳೆ ದಿನವನ್ನು ಇತರೆ ದಿನಗಳಂತೆ ಯಾರಾದೂ ಆಚರಿಸುತ್ತಿದ್ದಾರೆಂಬ ಬಗ್ಗೆ ವರದಿಗಳಿಲ್ಲ.

ಸೊಳ್ಳೆಯ ದೇಹ ರಚನೆ

ತನ್ನದೇ ದಿನವೊಂದನ್ನು ವಿಜ್ಞಾನಿಗಳು ಘೋಷಿಸುವಂತೆ ಮಾಡಿರುವ ಸೊಳ್ಳೆ ಎಂಥಾ ಮಹಾನ್ ಪ್ರಾಣಿ ಎಂದುಕೊಂಡೆ. ಅದುವರೆಗೆ ಸೊಳ್ಳೆಯ ವಿಷಯ ಅಮುಖ್ಯವಾತ್ತು. ತೀರ ಪರಿಚಿತವಾದದ್ದರ ಬಗ್ಗೆ ಅಸಡ್ಡೆ ಇರುತ್ತದೆ. ಈ ಅಸಡ್ಡೆಯಿಂದಾಗಿಯೇ ನಾವು ತೀರ ಪರಿಚಿತವವಾದದ್ದರ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದಿಲ್ಲ.

ಯಾವತ್ತಾದರೂ ಒಂದು ಸೊಳ್ಳೆಯನ್ನು ಹಿಡಿದು ಸೂಕ್ಷ್ಮವಾಗಿ ಗಮನಿಸಿದ್ದೀರ? ನಾನು ಗಮನಿಸಿದ್ದೇನೆ. ಅದೊಂದು ಪೆನ್ಸಿಲ್ ಗೀಟಷ್ಟೆ. ನಮ್ಮ ಕಣ್ಣು ತೇಜಿಯಾಗಿದ್ದರೆ ಆ ಗೀಟಿಗಂಟಿದ ಮೂರು ಜೊತೆ ಕೂದಲೆಳೆಯಂಥ ಕಾಲುಗಳನ್ನು ಮತ್ತ್ತು ಒಂದು ಜೊತೆ ಪಾರದರ್ಶಕ ಹಾಳೆಯಂಥ ರೆಕ್ಕೆಗಳನ್ನು ಕಾಣಬಹುದು. ಇನ್ನೊಂದಿಷ್ಟು ಆಳವಾಗಿ ನೋಡಿದರೆ ಒಂದು ತುದಿಯಲ್ಲಿ ಚೂಪು ಪೆನ್ಸಿಲ್ ಸೀಸದಂಥ ಕೂರಂಬು ನಮ್ಮ ಕಣ್ಣನ್ನು ಇರಿಯುತ್ತದೆ.

ಅದನ್ನೇ ಒಂದು ಸೂಕ್ಷ್ಮದರ್ಶಕದ ಕೆಳಗಿಟ್ಟು ನೋಡಿದರೆ ಇನ್ನಷ್ಟು ವಿವರಗಳು ಬಿಚ್ಚಿಕೊಳ್ಳುತ್ತವೆ. ಸೊಳ್ಳೆಗೂ ಬೇರೆ ಬೇರೆ ಕೀಟಗಳಿಗಿರುವಂತೆ ತಲೆ, ಎದೆ ಮತ್ತು ಉದರವಿದೆ ಎಂಬುದು ಗೊತ್ತಾಗುತ್ತದೆ. ಬರಿ ಕಣ್ಣಲ್ಲಿ ನೋಡಿದಾಗ ಇವೆಲ್ಲವೂ ಪೆನ್ಸಿಲ್ ಗೀಟಿನಲ್ಲಿ ಲೀನವಾಗಿದ್ದವು. ಹಾಗೆಯೇ ನಯವಾಗಿದ್ದಂತೆ ತೋರುತ್ತಿದ್ದ ಕಾಲುಗಳು ಮತ್ತು ಕೂರಂಬು ಅತಿ ಸೂಕ್ಷ್ಮ ಕೂದಲುಗಳಿಂದ ಆವೃತ್ತವಾಗಿ ಉರಟುರುಟೆಯಾಗಿ ಕಾಣುತ್ತದೆ. ಮತ್ತು ಅದೇ ರೀತಿ ಉರುಟುರುಟಾದ ಒಂದು ಜೊತೆ ಕುಡಿ ಮೀಸೆಗಳೂ ತಲೆಗಂಟಿರುವುದು ಸ್ಪಷ್ಟವಾಗುತ್ತದೆ.

ಸೊಳ್ಳೆಯ ದೇಹ ರಚನೆಗೆ ಸಂಬಂಧಿಸಿದ ವಿವಿರ ಇಷ್ಟೆ ಅಲ್ಲ. ನಮ್ಮ ಕಣ್ಣಿಗೆ ಕಾಣಿಸದ ಇನ್ನೆಷ್ಟೋ ವಿವರಗಳನ್ನು ವಿಜ್ಞಾನಿಗಳು ಕಲೆಹಾಕಿದ್ದಾರೆ.

ಸೊಳ್ಳೆಯ ತಲೆ ಮತ್ತು ಎದೆಯನ್ನು ತೆಳುವಾದ ಕತ್ತು ಕೀಲಿಗೂಡಿಸಿದೆ. ಒಂದಿಷ್ಟು ಗುಂಡಗಿರುವ, ತುಂಬಾ ಚುರುಕು ಚಲನೆಯನ್ನು ಹೊಂದಿರುವ ತಲೆಯ ಬಹುಭಾಗವನ್ನು ಮೂತ್ರಪಿಂಡಾಕಾರದ ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಗಂಡು ಸೊಳ್ಳ್ಳೆಗಳ ಕುಡಿ ಮೀಸೆಗಳ ಮೇಲಿನ ಕೂದಲು ಉದ್ದ ಮತ್ತು ಸಮೃದ್ಧ. ಅವು ಹಕ್ಕಿ ಪುಕ್ಕಗಳಂತೆ ಕಾಣುತ್ತವೆ. ಹೆಣ್ಣು ಸೊಳ್ಳೆಗಳ ಕುಡಿಮೀಸೆಗಳನ್ನಾವರಿಸಿದ ಕೂದಲು ಗಿಡ್ಡ ಮತ್ತು ಕಡಿಮೆ. ಇದು ಹೆಣ್ಣು-ಗಂಡನ್ನು ಗುರುತಿಸಲು ಸಹಾಯಕ.

ಸೊಳ್ಳೆಯ ಬಾಯಿ ಭಾಗ ಭಯಂಕರ. ಅದು ಹಿಂಸಾತ್ಮಕವಾಗಿರುವುದಕ್ಕೂ ಇದೇ ಕಾರಣ. ನಮ್ಮ ಕಣ್ಣಿಗೆ ಕಪ್ಪು ಬಣ್ಣದ ‘ಚುಚ್ಚಿ ಸೆಳೆಯುವ’ ಸರಳ ಸೂಜಿಯಂತೆ ತೋರುವ ಇದು ವಾಸ್ತವದಲ್ಲಿ ಆರು ಕೂರೆಗಂಬಿಗಳೊಂದಿಗೆ ಸಂಕೀರ್ಣ ರಚನೆಯನ್ನು ಹೊಂದಿದೆ. ಇದನ್ನು ಉಪಯೋಗಿಸಿ ಸೊಳ್ಳೆ ರಕ್ತ ಹೀರುವುದೂ ಒಂದು ಚಂದವೇ! ಬಾಯಿ ಮಧ್ಯದ ತುಟಿಹಾಲೆಗಳನ್ನು ಬಲಿಚರ್ಮದ ಮೇಲೆ ನಿಧಾನ ಊರುತ್ತದೆ. ಇದು ಸೊಳ್ಳೆ ಸ್ಥಿರವಾಗಿ ನಿಂತುಕೊಳ್ಳಲು ಅಗತ್ಯವಾದ ಆಧಾರವನ್ನು ಒದಗಿಸುತ್ತದೆ. ಮತ್ತು ಎಲ್ಲಾ ಆರು ಕೂರೆಗಂಬಿಗಳು ಚರ್ಮವನ್ನು ತೂರಿ ಇಳಿಯಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುತ್ತದೆ. ಕೂರೆಗಂಬಿಗಳು ಒಳ ತೂರುವಾಗ ಕೆಳತುಟಿಯಂಥ ರಚನೆ ಮಡಿಚಿಕೊಂಡು ಕೂರೆಗಂಬಿಗಳು ಒಳತೂರಲು ಅನುವುಮಾಡಿಕೊಡುತ್ತವೆ. ಇದರ ಜೊತೆ ಜೊತೆಗೆ ಗಂಟಲಿನ ಜೊಲ್ಲುನಾಳದ ಮೂಲಕ ಜೊಲ್ಲು ಸ್ರವಿಸುತ್ತದೆ. ಇದರಲ್ಲಿ ಕರಣೆ ರೋಧಕ ಇದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡಯುತ್ತದೆ. ಜೊಲ್ಲು ರಕ್ತವನ್ನು ತೆಳುವಾಗಿಸುತ್ತದೆ ಕೂಡ. ಇದರಿಂದ ರಕ್ತಭೋಜನ ಸರಾಗವಾಗಿ ಅನ್ನನಾಳದಲ್ಲಿ ಸಾಗಿಹೋಗುತ್ತದೆ.

ತುಂಬಾ ಅಡಕವಾಗಿರುವ ಸೊಳ್ಳೆಯ ಎದೆ ಭಾಗಕ್ಕೆ ಅಂಟಿಕೊಂಡಿರುವ ಮೂರು ಜೊತೆ ಕಾಲುಗಳು ತುಂಬಾ ಉದ್ದ- ದೇಹಕ್ಕಿಂತ ಉದ್ದ: ತೆಳು ಮತ್ತು ಸಪೂರ. ಇದು ಸೊಳ್ಳೆಗಳು ಯವುದೇ ಮೇಲ್ಮೈ ಮೇಲೆ ಯಾರಿಗೂ ಗೊತ್ತಾಗದಂತೆ ಸೌಮ್ಯವಾಗಿ  ನೆಲಯೂರಿ ಉಗ್ರವಾಗಿ ರಕ್ತ ಹೀರಲು ಅನುಕೂಲಕರವಾಗಿದೆ. ಇನ್ನು ರೆಕ್ಕೆಗಳೋ! ಅಗಲ ಕಡಿಮೆ ಉದ್ದ ಜಾಸ್ತಿ: ಪೊರೆಯಂಥ ನೋಟ. ಈ ರೆಕ್ಕೆಗಳೇ ನಮ್ಮ ನಿದ್ದೆಗೆಡಿಸುವ ಹಿಂಸಾತ್ಮಕ ಸಂಗೀತ ಕಚೇರಿಯನ್ನು ಕಿವಿಯ ಸುತ್ತ ಬಾಜಿಸುವುದು. ಸೂಕ್ಷ್ಮವಾಗಿ ಕಿವಿಗೊಟ್ಟರೆ ಎರಡು ರೀತಿಯ ಸಂಗೀತವನ್ನು ಗುರುತಿಸಬಹುದು. ಒಂದರ ಶೃತಿ ಆಳ; ಮತ್ತೊಂದು ಕೀರಲು. ಮೊದಲನೆಯದು ಗಂಡಿನದು; ಎರಡನೆಯದು ಹೆಣ್ಣಿನದು.

ಸೊಳ್ಳೆಗಳ ಉದರವೂ ತೆಳು. ಅದಕ್ಕೆ ದಶವಲಯಗಳು – ಒಂದರ ಪಕ್ಕ ಒಂದರಂತೆ ಸಣ್ಣ ಸಣ್ಣ ಕಾಳುಗಳನ್ನು ಜೋಡಿಸಿದಂತೆ. ಮೊದಲನೆಯದು ಎದೆಗೆ ಬೆಸೆದುಕೊಂಡಿರುತ್ತದೆ. ಕೊನೆಯದರಲ್ಲಿ ಜನನಾಂಗ ಭಾಗಗಳಿವೆ.

ಸೊಳ್ಳೆ ಸರ್ವಾಂತರ್ಯಾಮಿ. ಪ್ರಪಂಚದ ಎಲ್ಲಾ ಭಾಗಗಳಲ್ಲೂ ಅವು ನೆಲೆಸಿವೆ. ಉಷ್ಣವಲಯದ ದೇಶಗಳಲ್ಲಿ ಅವು ಹೆಚ್ಚು ಸಮೃದ್ಧ. ಒದ್ದೆ-ಜವುಗು ಜಾಗಗಳಲ್ಲಿ ಅವುಗಳ ವಾಸ. ಪ್ರಾಯಕ್ಕೆ ಬಂದ ಬಹಳಷ್ಟು ಸೊಳ್ಳೆಗಳು ತಮ್ಮ ಹುಟ್ಟಿದ ತಾಣದಿಂದ ಬಹುದೂರ ಹೋಗುವುದಿಲ್ಲ.

ಸೊಳ್ಳೆಗಳು ತಮ್ಮ ಸರ್ವಾಂತರ್ಯಾಮಿತ್ವದಿಂದಾಗಿಯೇ ಎಲ್ಲರಿಗೂ ‘ಚಿರಪರಿಚಿತ’. ಸೊಳ್ಳೆಗಳಿಂದ ಯಾರು ಕಡಿಸಿಕೊಂಡಿಲ್ಲ? ಪಾಡು ಪಟ್ಟಿಲ್ಲ? ಸೊಳ್ಳೆ ಕಡಿದ ಜಾಗ ಬಹು ಬೇಗ ಕೆಂಪಗಾಗಿ ಊದಿಕೊಳ್ಳುವುದನ್ನು ಯಾರು ನೋಡಿಲ್ಲ? ಆಮೇಲೇನಾಗುತ್ತದೆ? ಅಯ್ಯಯ್ಯೋ! ತುರುಸುವಿಕೆ, ಉರಿ.

ಸ್ವಲ್ಪ ಹೊತ್ತಿನ ನಂತರ ತುರಿಕೆ ನಿಂತು ಹೋಗುತ್ತದೆ.  ತುರಿಕೆ ಉಂಟಾಗಲು ಕಾರಣವೇನು? ವಿಜ್ಞಾನಿಗಳು ಹೇಳುತ್ತಾರೆ: ಸೊಳ್ಳೆ ಕಡಿದಾಗ ಅದರ ಜೊಲ್ಲಿನ ಜೊತೆ ಶಿಲೀಂಧ್ರವೊಂದು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಈ ಶಲೀಂಧ್ರ ಕಾರ್ಬನ್ ಡೈ ಆಕ್ಸೈಡನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ. ಶಲೀಂಧ್ರ ಒಂದು ಕಿಣ್ವವನ್ನು ಸಹ ಬಿಡುಗಡೆ ಮಾಡುತ್ತದೆ. ಇದು ರಕದೊತ್ತಡವನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಹೆಣ್ಣು ಸೊಳ್ಳೆಗಳು ನೆತ್ತರು ಹೀರುಕಗಳು. ಅವುಗಳಿಗೆ ಯಾವ ರಕ್ತವಾದರೂ ನಡೆಯುತದೆ. ಮನುಷ್ಯದ್ದೇ ಆಗಬೇಕೆಂದೇನು ಇಲ್ಲ. ಪ್ರಾಣಿ-ಪಕ್ಷಿಗಳ ರಕ್ತವಾದರೂ ಸರಿ. ಕೆಲ ಸೊಳ್ಳೆಗಳು ಕೆಲವು ನಿರ್ದಿಷ್ಟ ಅತಿಥೇಯರಿಂದ ಮಾತ್ರ ರಕ್ತ ಹೀರುತ್ತವೆ ಎಂಬ ಈ ಹಿಂದಿನ ಕೆಲವು ಸಂಶೋಧಕರ ವಾದ ಸಿದ್ಧಪಟ್ಟಿಲ್ಲ.

ಗಂಡು ಸೊಳ್ಳೆಗಳು ಇರುವುದರಲ್ಲಿ ಸ್ವಲ್ಪ ಸೌಮ್ಯ. ಅವು ಶುದ್ಧ ಶಾಖಾಹಾರಿಗಳು. ಸಸ್ಯರಸ ಮತ್ತು ಮಧುವಿನಿಂದ ಹೊಟ್ಟೆ ಹೊರೆದುಕೊಳ್ಳುತ್ತವೆ. ವಿರಳವಾಗಿ ಹೆಣ್ಣು ಕೂಡ ಶಾಖಾಹಾರಿಯಾಗುತ್ತದೆ.

ಸೊಳ್ಳೆಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ತುಂಬಾ ಚಟುವಟಿಕೆಯಿಂದಿರುತ್ತವೆ. ವಿಶೇಷವಾಗಿ ಮುಂಜಾನೆ ಮತ್ತು ಮುಸ್ಸಂಜೆ ಹೊತ್ತು. ಹಗಲನ್ನು ಅವು ಮರಗಳ ಪೊಟರೆಗಳಲ್ಲಿ, ಕಟ್ಟಡಗಳ ಕತ್ತಲ ಮರೆಯಲ್ಲಿ, ದಟ್ಟ ಪೊದರುಗಳಲ್ಲ್ಲಿ ಕಳೆಯುತ್ತವೆ.

ಪ್ರಭೇದಗಳು

ಸೊಳ್ಳೆಗಳಲ್ಲಿ ೨೯ ಕುಲಗಳು ಮತ್ತು ಸುಮಾರು ೨೫೦೦ ಪ್ರಭೇದಗಳಿವೆ ಎಂದು ವಿಜ್ಞಾನ ಪುಸ್ತಕಗಳು ಹೇಳುತ್ತವೆ. ಆದರೆ ನಮಗೆ, ಸಾಮಾನ್ಯರಿಗೆ, ಸೊಳ್ಳೆ ಸೊಳ್ಳೆಯಷ್ಟೆ. ಅದೊಂದು ಹಿಂಸಾತ್ಮಕ ಕೀಟವಷ್ಟೆ. ಹೆಚ್ಚೆಂದರೆ ನಾವು ಮೂರ್ನಾಲ್ಕು ರೀತಿಯ ಸೊಳ್ಳೆಗಳನ್ನು ಗುರುತಿಸಬಹುದು. ಚರ್ಮಕ್ಕೆ ಸಮಾಂತರವಾಗಿ ನಿಲ್ಲುವ ಸೊಳ್ಳೆಗಳು; ಒಂದು ಕೋನದಲ್ಲಿ ನಿಲ್ಲುವ ಸೊಳ್ಳೆಗಳು; ರೆಕ್ಕೆಯ ಮೇಲೆ ಚುಕ್ಕೆಗಳಿರುವ ಸೊಳ್ಳೆಗಳು ಮತ್ತು ಇಲ್ಲದಿರುವ ಸೊಳ್ಳೆಗಳು; ಚಿಕ್ಕವು ಮತ್ತು ದೊಡ್ಡವು. ಅಷ್ಟೆ.

೨೯ ಕುಲಗಳಲ್ಲಿ ಕೇವಲ ಮೂರಷ್ಟೆ ರೋಗವಾಹಕಗಳು: ಅನಾಫಿಲಿಸ್, ಕ್ಯೂಲೆಕ್ಸ್ ಮತ್ತು ಈಡ್ಸ್. ಈ ಕುಲಕಂಟಕಗಳೇ ಇಡೀ ಸೊಳ್ಳೆ ಜಾತಿಯನ್ನು (ಕು)ಪ್ರಸಿದ್ಧವಾಗಿಸಿವೆ. ಅದರಲ್ಲೂ ಇತಿಹಾಸದ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವಶಾಲಿಯಾದ, ಮಲೇರಿಯ ರೋಗವನ್ನು ಹರಡುವ, ಹೆಣ್ಣು ಅನಾಫಿಲೀಸ್ ಸೊಳ್ಳೆ ವಿಜ್ಞಾನಿಗಳು ‘ಸೊಳ್ಳೆ ದಿನ’ವನ್ನು ಘೋಷಿಸುವಂತೆ ಮಾಡಿ ವಿಕ್ರಮ ಸ್ಥಾಪಿಸಿವೆ.

ಮಲೇರಿಯ ಬಹು ಪ್ರಾಚೀನ ಕಾಲದಿಂದ ಮನುಕುಲವನ್ನು ಕಾಡುತ್ತ್ತಿರುವ ಶಾಪ – ಸೋಂಕು ರೋಗ. ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಅದರ ಆರ್ಭಟ ಹೆಚ್ಚು. ಕ್ರಿ.ಪೂ ೫ನೇ ಶತಮಾನದಷ್ಟು ಹಿಂದಿನ ಪಶ್ಚಿಮದ ವೈದ್ಯಕೀಯ ದಾಖಲೆಗಳಲ್ಲಿ ಮಲೇರಿಯ ಪ್ರಸ್ತಾಪ ಇರುವುದಾಗಿ ತಿಳಿದುಬಂದಿದೆ. ೧೪೯೩ರಲ್ಲಿ ಬಹು ಸ್ವರೂಪದ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದರ ದಾಖಲೆ ಇದೆ.

ಪ್ರಾಚೀನ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳ ಪತನದಲ್ಲಿ ಮಲೇರಿಯ ಪ್ರಧಾನ ಪಾತ್ರ ವಹಿಸಿದೆ. ಜಾಗತಿಕ ಸಮರಗಳಲ್ಲಿ ಮಲೇರಿಯ ವ್ಯಾಧಿ, ಗುಂಡು ಮತ್ತು ಬಾಂಬುಗಳಿಗಿಂತ, ದೊಡ್ಡ ಹಂತಕವಾಗಿತ್ತು. ೧೯೫೯ರ ಒಂದು ಅಂದಾಜಿನಂತೆ ಪ್ರಪಂಚದಲ್ಲಿ ೨೫೦ ದಶಲಕ್ಷಕ್ಕೂ ಹೆಚ್ಚು ಜನ ಪ್ರತಿ ವರ್ಷ ಮಲೇರಿಯಾದಿಂದ ನರಳುತ್ತಿದ್ದರು. ಇದರಲ್ಲಿ ಕನಿಷ್ಠ ೨.೫ ದಶಲಕ್ಷ ಮಂದಿ ಅಸುನೀಗುತ್ತಿದ್ದರು.

ಮಲೇರಿಯ ರೋಗವನ್ನು ಹರಡುವ ಹೆಣ್ಣು ಅನಾಫಿಲಿಸ್ ಸೊಳ್ಳೆಯ ರೆಕ್ಕೆ ಚುಕ್ಕೆಮಯ. ಅದು ಚರ್ಮಕ್ಕೆ ಕೊಂಚ ಓರೆಯಾಗಿ ನಿಂತು ರಕ್ತ ಹೀರುತ್ತದೆ. ಸಾದಾ ರೆಕ್ಕೆಗಳೊಂದಿಗೆ ಚರ್ಮಕ್ಕೆ ಸಾಮಾಂತರವಾಗಿ ನಿಂತು ರಕ್ತ ಹೀರುವ ಕ್ಯೂಲೆಕ್ಸ್ ಮಿದುಳು ಜ್ವರದ ಹುಳುಗಳನ್ನು ಮತ್ತು ಆನೆಕಾಲುರೋಗದ ವೈರಸ್ಸನ್ನು ಹರಡುತ್ತದೆ. ಹೆಚ್ಚು ಕಮ್ಮಿ ಕ್ಯೂಲೆಕ್ಸ್‌ನಂತೆಯೇ ವರ್ತಿಸುವ ಈಡ್ಸ್ ಹಳದಿ ಜ್ವರ ಮತ್ತು ಡೆಂಗ್ಯೂ ಜ್ವರಗಳಿಗೆ ಕಾರಣವಾಗುವ ವೈರಸ್ಸನ್ನು ಹರಡುತ್ತದೆ.

ಪೂರ್ವಾವಸ್ಥೆ

ಪ್ರಾಯಕ್ಕೆ ಬಂದ ಸೊಳ್ಳೆಗಳಿಗೆ ಸೊಕ್ಕು ಜಾಸ್ತಿ. ಅವುಗಳ ಆಟಾಟೋಪವನ್ನು ಈವರೆಗೆ ನೋಡಿದೆವು. ಅವುಗಳ ಪೂರ್ವಾವಸ್ಥೆ ಹೇಗಿರುತ್ತದೆ? ಅದೂ ಕುತೂಹಲಕಾರಿ. ಇದನ್ನಂತೂ ವಿಜ್ಞಾನಿಗಳನ್ನೇ ಕೇಳಬೇಕು.

ಸೊಳ್ಳೆಗಳು ಅಂಡಜಗಳು, ಮೊಟ್ಟೆಯಿಂದ ಹೊರಬರುವ ಪ್ರಾಣಿಗಳು – ಪಕ್ಷಿ, ಸರೀಸೃಪಗಳಂತೆ. ಗಂಡನ್ನು ಕೂಡಿದ ನಂತರ ಹೆಣ್ಣು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆ ಇಡುವುದಕ್ಕೆ ಮುನ್ನ ಮೊಟ್ಟೆ ಇಡಲು ಅವಶ್ಯಕವಾದ ಪೌಷ್ಟಿಕಾಂಶವನ್ನು ಪಡೆಯಲು ಹೆಣ್ಣು ಸೊಳ್ಳೆ ಪೊಗದಸ್ತಾದ ರಕ್ತದೂಟವನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಕೆಲವು ಪ್ರಭೇದದ ಸೊಳ್ಳೆಗಳು ಪ್ರಾಣಿ ರಕ್ತಕ್ಕಿಂತ ಮಾನವ ರಕ್ತವನ್ನು ಹೆಚ್ಚು ಇಷ್ಟಪಡುತ್ತವಂತೆ.

ಮೊಟ್ಟೆ ಇಡಲು ಸೊಳ್ಳೆಗಳು ಸಾಮಾನ್ಯವಾಗಿ ಆರಿಸಿಕೊಳ್ಳುವ ಸ್ಥಳಗಳು ಹಳ್ಳಕೊಳ್ಳ, ಚರಂಡಿ ಇತ್ಯಾದಿಗಳಲ್ಲಿ ನಿಂತ ನೀರಿನ ಮೇಲೆಹಾಸು. ಒಂದು ಕ್ಯೂಲೆಕ್ಸ್ ಸೊಳ್ಳೆ ಒಂದು ಬಾರಿಗೆ ೨೦೦-೩೦೦ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಾಕಾರ ಸಿಗಾರನ್ನು ಹೋಲುತ್ತದೆ. ಅದರ ಒಂದು ತುದಿ ಮತ್ತೊಂದಕ್ಕಿಂತ ಸ್ವಲ್ಪ ಹೆಚ್ಚು ಭಾರವಾಗಿರುತ್ತದೆ. ಮೊಟ್ಟೆ ಇಟ್ಟಾಗ ಅದರ ಬಣ್ಣ ಬೆಳ್ಳಗಿರುತ್ತದೆ. ಬಹು ಬೇಗ ಅದು ದಟ್ಟ ಬೂದು ಬಣ್ಣಕ್ಕೆ ತಿರುಗುತ್ತದೆ. ಅವು ಮೊಟ್ಟೆಯಿಡುವ ಹೊತ್ತು? ರಾತ್ರಿಯ ಅಂಧಕಾರ.

ನಿಶೆಯ ಮುಸುಕಿನಲ್ಲಿ ನಿಶ್ಯಬ್ದವಾಗಿ ಮೊಟ್ಟೆಗಳ ಮಳೆಗೆರೆಯುತ್ತದೆ. ಆದರೆ ಮಳೆ ಹನಿಗಳಂತೆ ಮೊಟ್ಟೆಗಳು ದೂರ ದೂರ ಚದುರಿ ಹೋಗುವುದಿಲ್ಲ. ತಾಯಿ ಸೊಳ್ಳೆ ಅದಕ್ಕೆ ಅವಕಾಶ ಕೊಡುವುದಿಲ್ಲ. ಇಲ್ಲಿ ತಾಯಿ ಸೊಳ್ಳೆಯ ಕೌಶಲ್ಯ ನೋಡಿ. ಅದು ಒಂದೊಂದೇ ಮೊಟ್ಟೆ ತನ್ನ ದೇಹದಿಂದ ಕಳಚಿ ಬೀಳುತಿದ್ದಂತೆ ಅವುಗಳನ್ನು ತನ್ನ ಹಿಂಗಾಲುಗಳನ್ನು ಉಪಯೋಗಿಸಿ ಒಂದೂ ತಪ್ಪಿಸಿಕೊಂಡು ಹೋಗದಂತೆ ಹಿಡಿದು ಒಂದಕ್ಕೊಂದನ್ನು ಅಂಟಿಸುತ್ತಾ ಹೋಗುತ್ತದೆ. ಹೀಗೆ ಜೋಡಣೆಯಾದ ಮೊಟ್ಟೆಗಳ ಸಮೂಹ ಒಂದು ಮೊಟ್ಟೆತೆಪ್ಪ ಆಗುತ್ತದೆ. ಈ ತೆಪ್ಪದಲ್ಲಿ ಮೊಟ್ಟೆಗಳು ಲಂಬವಾಗಿರುತ್ತವೆ. ಭಾರ ತುದಿ ಕೆಳಗಿರುತ್ತದೆ. ಇಡೀ ತಪ್ಪೆ ನಿಮ್ನ ಮೇಲ್ಮೈ ಹೊಂದಿರುತ್ತದೆ.

ಮೊಟ್ಟೆ ಇಡುವ ಕ್ರಿಯೆಯಲ್ಲಿ ಅನಾಫಿಲಿಸ್ ಸೊಳ್ಳೆ ಕ್ಯೂಲೆಕ್ಸ್ ಸೊಳ್ಳೆಯ ಜಾಣ್ಮೆಯನ್ನು ಪ್ರದರ್ಶಿಸುವುದಿಲ್ಲ. ಹಡಿಗಿನಾಕಾರದ ತನ್ನ ಮೊಟ್ಟೆಗಳನ್ನು ಬಿಡಿ ಬಿಡಿಯಾಗಿ ನೀರಿನಲ್ಲಿ ತೇಲಿ ಬಿಡುತ್ತದೆ. ಈಡ್ಸ್ ಸೊಳ್ಳೆಗಳು ಮಾತ್ರ ಒದ್ದೆ ಮಣ್ಣಲ್ಲಿ ಮೊಟ್ಟೆಗಳನ್ನು ಇಡುತ್ತವೆ.  ಕದಿರಣಿಗೆಯಾಕಾರದ ಈ ಮೊಟ್ಟೆಗಳು ಎಷ್ಟು ಗಟ್ಟಿಯೆಂದರೆ ತಿಂಗಳಾನುಗಟ್ಟಲೆ ನೀರು ಸಿಗದಿದ್ದರೂ ನಾಶವಾಗುವುದಿಲ್ಲ.

ಮೊಟ್ಟೆಯ ಹಂತ ೨-೩ ದಿನ ಇರುತ್ತದೆ ಅಷ್ಟೆ. ಮುಂದೆ ಲಾರ್ವ ಬರುತ್ತದೆ.

ಲಾರ್ವ ತುಂಬಾ ಚಿಕ್ಕದಾದ, ಪಾರದರ್ಶಕವಾದ, ಹುಳುವಿನಂತ ಜೀವಿ. ಅದರ ದೇಹದಲ್ಲಿ ಪ್ರಾಯದ ಸೊಳ್ಳೆಗಿರುವಂತೆ ಮೂರು ಭಾಗಗಳು: ತಲೆ, ಎದೆ ಮತ್ತು ಉದರ. ನೀರಿನಲ್ಲಿರುವ ಪಾಚಿ ಮತ್ತು ಸೂಕ್ಷ್ಮಸಾವಯವ ಕಣಗಳನ್ನು ಮುಕ್ಕಿ ಬದುಕುವ ಲಾರ್ವ ಬಾಯಿಯ ಅಂಚಿನಲ್ಲಿರುವ ಬಿರುಗೂದಲುಗಳ ಚಲನೆಯಿಂದ ಆಹಾರವನ್ನು ಬಾಯೊಳಕ್ಕೆ ಗುಡಿಸಿಕೊಳ್ಳುತ್ತದೆ. ನೀರಿನಲ್ಲಿ ಮುಳುಗಿದಂತೆ ಇಡೀ ದೇಹವನ್ನು ನುಲಿದಾಡಿಸುತ್ತಾ ಚಲಿಸುವ ಲಾರ್ವ ಜಲಚರವಾದರೂ ಗಾಳಿಯನ್ನು ಉಸಿರಾಡುತ್ತದೆ. ಇದಕ್ಕಾಗಿ ಅದು ತನ್ನ ಉದರದ ತುದಿಯಲ್ಲಿರುವ ಉಸಿರಾಟದ ಅಂಗವನ್ನು ನಿಯತವಾಗಿ ನೀರಿನ ಮೇಲಕ್ಕೆ ತೂರಿಸುತ್ತದೆ.

ಕ್ಯೂಲೆಕ್ಸ್ ಮತ್ತು ಈಡ್ಸ್ ಲಾರ್ವಗಳು ತಲೆ ಕೆಳಗಿರುವಂತೆ, ನೀರಿನ ಮೇಲ್ಮೈಯೊಂದಿಗೆ ಒಂದು ಕೋನದಲ್ಲಿ ವಾಲಿಕೊಂಡು ಚಲಿಸುತ್ತದೆ. ಅಮನಾಫಿಲಿಸ್‌ನ ಲಾರ್ವ ನೀರಿನ ಮೇಲ್ಮೈಗೆ ಸಮಾಂತರವಾಗಿ ಚಲಿಸುತ್ತದೆ.

ಲಾರ್ವ ಬದುಕು ಎರಡು ವಾರದ್ದು. ಈ ಅವಧಿಯಲ್ಲಿ ಅದು  ನಾಲ್ಕು ಬಾರಿ ಪೊರೆ ಕಳೆದುಕೊಳ್ಳುತ್ತದೆ. ಪ್ರತಿ ಪೊರೆ ಕಳಚಿದ ನಂತರ ಅದು ದೊಡ್ಡದಾಗಿ ಬೆಳೆಯುತ್ತದೆ. ಪೂರ್ತಿ ಬೆಳೆದ ಲಾರ್ವ ಸುಮಾರು ಒಂದು ಗೊದ್ದದ ಉದ್ದ ಇರುತ್ತದೆ.

ಕೊನೆಯ ಪೊರೆ ಕಳಚಿದ ನಂತರ ಲಾರ್ವ ರೂಪಾಂತರಗೊಂಡು ಪ್ಯೂಪ ಆಗುತ್ತದೆ. ಇದು ನಮ್ಮ ಕಾಮ (,) ಚಿಹ್ನೆಯ ತರ ಇರುತ್ತದೆ.

ಪ್ಯೂಪ ದೇಹಕ್ಕೆ ಈಗ ಎರಡೇ ಭಾಗಗಳು: ತಲೆ ಮತ್ತು ಎದೆ ಕೂಡಿದ ಒಂದು ವಲಯ (ತಲೆದೆ) ಮತ್ತು ತೆಳುವಾದ ೯ ವಲಯಗಳ ಉದರ. ತಲೆದೆ ಮೇಲಿರುವಂತೆ ಪ್ಯೂಪ ನೀರಿನಲ್ಲಿ ತೇಲುತ್ತಿರುತ್ತದೆ. ಹೊಟ್ಟೆ ಅದರ ಕೆಳಗೆ ಸುತ್ತಿಕೊಂಡಿರುತ್ತದೆ. ಯಾವುದೇ ರೀತಿಯ ಕ್ಷೋಭೆ ಉಂಟಾದಾಗ ಅದು ಮೇಲೆ ಕೆಳಗೆ ಒದರಾಡುತ್ತದೆ.

ಸೊಳ್ಳೆಗಳ ಪ್ಯೂಪ ಇತರ ಕೀಟಗಳ ಪ್ಯೂಪದಂತೆ ಆಹಾರ ಸೇವನೆ ಮಾಡುವುದಿಲ್ಲ. ಪೂರ್ಣ ಉಪವಾಸ. ತಲೆದೆ ಮೇಲಿರುವ, ನಮ್ಮ ಬಾಲ್ಯದ ಬಣ್ಣದ ತಗಡಿನ ತುತ್ತೂರಿ ರೂಪದ, ಉಸಿರಾಟದ ಸೈಫನ್ನನ್ನು ಬಾವುಟದಂತೆ ನೀರಿನ ಮೇಲ್ಮೈ ಮೇಲೆ ತೂರಿಸಿರುತ್ತದೆ.

ಪ್ಯೂಪದ ಜೀವಿತಾವಧಿ ಒಂದರಿಂದ ಮೂರು ದಿನಗಳು ಮಾತ್ರ. ಈ ಅವಧಿಯಲ್ಲಿ ಅದು ಪೂರ್ಣ ತಾರುಣ್ಯವನ್ನು ಹೊಂದುತ್ತದೆ. ಲಾರ್ವ ಅಂಗಾಂಗಳು ಉದುರಿ ಹೋಗುತ್ತವೆ. ಪ್ರಾಯದ ಅಂಗಗಳಾದ ಸಂಯುಕ್ತ ಕಣ್ಣುಗಳು, ಕುಡಿ ಮೀಸೆ, ಕಾಲುಗಳು ಮತ್ತು ರೆಕ್ಕೆಗಳು ಕಾಣಿಸಿಕೊಳ್ಳುತ್ತವೆ.

ಎರಡು ಉಸಿರಾಟದ ಸೈಫನ್‌ಗಳ ನಡುವೆ ಪ್ಯೂಪದ ಚರ್ಮ ಬಿರುಕು ಬಿಟ್ಟು ಕ್ರಮೇಣ ಪ್ರಾಯಕ್ಕ ಬಂದ ಸೊಳ್ಳೆ ಹೊರ ಬರುತ್ತದೆ. ಮೊದಮೊದಲು ರೆಕ್ಕೆಗಳು ಮಿದುವಾಗಿರುತ್ತವೆ. ತೇಲುವ ಪ್ಯೂಪದ ಚರ್ಮದ ಮೇಲೆ ವಿಶ್ರಮಿಸಿರುತ್ತವೆ. ಬಹುಬೇಗ ರೆಕ್ಕೆಗಳು ಒಣಗಿ ಗಡಸಾಗುತ್ತವೆ. ಅಲ್ಲಿಂದಾಚೆ ಸೊಳ್ಳೆ ಜಗತ್ತಿನಾಕ್ರಮಣಕ್ಕೆ ಸಿದ್ಧವಾಗಿ ಹಾರಿಹೋಗುತ್ತವೆ.

ಮೊಟ್ಟೆಯಿಂದ ಪ್ರಾಯದವರೆಗೆ ಸಾಗಲು ಸೊಳ್ಳೆಗೆ ೨೦ ದಿನಗಳು ಹಿಡಿಯುತ್ತವೆ. ಅನಂತರ ಹೆಣ್ಣು ಸೊಳ್ಳೆ ಸುಮಾರು ಒಂದು ತಿಂಗಳು, ಗಂಡು ಸೊಳ್ಳೆ ಸುಮಾರು ಒಂದು ವಾರ ಬದುಕಿರುತ್ತದೆ. ಇಷ್ಟು ಅಲ್ಪಾವಧಿ ಜೀವಿಸುವ ಸೊಳ್ಳೆಯ ಕಾಟ ಮಾತ್ರ ವಿಶ್ವವ್ಯಾಪಿ. ಜೈ ಸೊಳ್ಳೆ!!!