ಒಂದು ಕಡೆ ದೊಡ್ಡದೊಂದು ಬೆಟ್ಟವಿತ್ತು. ಅದರ ತಪ್ಪಲಲ್ಲಿ ಎರಡು ಮನೆಗಳಿದ್ದವು. ಒಂದು ಮನೆ ರಾಮನದು. ಇನ್ನೊಂದು ಮನೆ ದೂಮನದು.

ರಾಮ ಮತ್ತು ದೂಮ ಇಬ್ಬರೂ ಆತ್ಮೀಯ ಗೆಳೆಯರು. ಅವರಿಬ್ಬರೂ ಬೇಸಾಯ ವೃತ್ತಿಯವರು. ತಮ್ಮ ತಮ್ಮ ಹೆಂಡತಿ ಮಕ್ಕಳೊಡನೆ ಅವರು ಅಲ್ಲಿ ವಾಸಿಸುತ್ತಿದ್ದರು. ಕಷ್ಟದಲ್ಲಿ ಅವರು ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ನೆಮ್ಮದಿಯ ಜೀವನ ಅವರದಾಗಿತ್ತು.

ಒಂದು ಬಾರಿ ಏನೋ ಒಂದು ಅಚಾತುರ್ಯ ನಡೆದು ಹೋಯಿತು. ಅದರಿಂದಾಗಿ ರಾಮ ಮತ್ತು ದೂಮ ಅವರೊಳಗೆ ಮನಸ್ತಾಪ ಬೆಳೆಯಿತು. ಮಿತ್ರರಾಗಿದ್ದ ಅವರು ಶತ್ರುಗಳಾದರು. ಸಣ್ಣಪುಟ್ಟ ಸಂಗತಿಗಳಿಗೂ ಅವರು ಜಗಳಾಡತೊಡಗಿದರು. ಎರಡೂ ಮನೆಯ ಮಂದಿಗಳೊಳಗೆ ಮಾತುಕತೆ ನಿಂತುಹೋಯಿತು. ಕಿರಿಯರೂ ಹಿರಿಯರನ್ನು ಅನುಸರಿಸತೊಡಗಿದರು.

ಒಂದು ರಾತ್ರೆ ಮೂರು ನಾಲ್ಕು ಮಂದಿ ದರೋಡಕೋರರು ದೂಮನ ಮನೆಗೆ ನುಗ್ಗಿದರು. ಅವರೆಲ್ಲರೂ ಕಪ್ಪು ಮುಸುಕುಧಾರಿಗಳಾಗಿದ್ದರು. ಮನೆಗೆ ನುಗ್ಗಿದ ಅವರು ಮನೆಯವರನ್ನು ಥಳಿಸಿದರು. ಅವರ ಕೈಕಾಲುಗಳನ್ನು ಕಟ್ಟಿಹಾಕಿ, ಮನೆಯನ್ನು ತೋಚತೊಡಗಿದರು. ಆಗ ಮನೆಯವರೆಲ್ಲ ಬೊಬ್ಬೆ ಹೊಡೆದರು. “ದರೋಡೆಕೋರರು ಬಂದಿದ್ದಾರೆ ಹೊಡೆದು ಬಡಿದು ನಮ್ಮನ್ನು ಕಟ್ಟಿಹಾಕಿದ್ದಾರೆ. ಮನೆಯನ್ನು ದೋಚುತ್ತಿದ್ದಾರೆ. ಬೇಗ ಬನ್ನಿ, ನಮ್ಮನ್ನು ಕಾಪಾಡಿ” ಎಂದು ಅವರು ಮೊರೆಯಿಟ್ಟರು.

ರಾಮನ ಮನೆಯವರಿಗೆ ನೆರೆಮನೆಯವರ ಬೊಬ್ಬೆ ಕೇಳಿಸಿತು. ಆದರೆ ಅವರು ತಮ್ಮ ಮನೆಯಿಂದ ಹೊರಗೆ ಕಾಲಿಡಲಿಲ್ಲ. ನೆರೆಯವರ ಸಹಾಯಕ್ಕೆ ಧಾವಿಸಲಿಲ್ಲ “ಅವರು ನಮ್ಮ ಹಗೆಗಳು ಅವರಿಗೆ ನಾವೇ ಶಿಕ್ಷೆ ಕೊಡಬೇಕಿತ್ತು. ಆದರೆ ನಾವು ಅದನ್ನು ಮಾಡಲಿಲ್ಲ. ನಮ್ಮ ಬದಲು ಬೇರೆ ಯಾರೋ ಅವರನ್ನು ಶಿಕ್ಷಿಸುತ್ತಿದ್ದಾರೆ. ಅದನ್ನು ನಾವೇಕೆ ತಡೆಯಬೇಕು? ಬಂದುದನ್ನು ಅವರೇ ಅನುಭವಿಸಲಿ” ಎನ್ನುತ್ತ ಅವರು ತೆಪ್ಪಗೆ ಇದ್ದುಬಿಟ್ಟರು. ಬೇರೆ ಮನೆಗಳು ಅಲ್ಲಿರಲಿಲ್ಲ. ಬೇರೆ ಯಾರೂ ಸಹಾಯಕ್ಕೆ ಬರಲಿಲ್ಲ. ಡಕಾಯಿತರ ಕೆಲಸ ಸುಲಭವಾಯಿತು. ಧೂಮನ ಮನೆಯನ್ನೆಲ್ಲ ದೋಚಿದರು. ಬೆಲೆಬಾಳುವ ವಸ್ತುಗಳೊಡನೆ ಅವರು ಕತ್ತಲಲ್ಲಿ ಕಣ್ಮರೆಯಾದರು. ರಾಮನ ಮನೆಯವರಿಗೆ ತುಂಬ ಖುಷಿಯಾಯಿತು.

ದಿನಗಳು ಉರುಳಿದೆವು. ಎರಡೋ ಮೂರೋ ತಿಂಗಳುಗಳು ಕಳೆದುಹೋದವು. ಅದೊಂದು ರಾತ್ರೆ ದರೋಡೆಕೋರರು ಇನ್ನೊಮ್ಮೆ ಅಲ್ಲಿ ಕಾಣಿಸಿಕೊಂಡರು. ಈ ಬಾರಿ ಅವರು ರಾಮನ ಮನೆಯನ್ನು ಆರಿಸಿಕೊಂಡಿದ್ದರು. ಮನೆಯಲ್ಲಿದ್ದ ಎಲ್ಲರಿಗೂ ಅವರು ಹೊಡೆದರು. ಎಲ್ಲರನ್ನೂ ಅವರು ಕಟ್ಟಿಹಾಕಿದರು. ಅಲ್ಲಿ ಇದ್ದುದನ್ನೆಲ್ಲ ದೋಚತೊಡಗಿದರು. ಮನೆಯವರು ಸಹಾಯಕ್ಕಾಗಿ ಕೂಗಿಕೊಂಡರು. ಆದರೆ ನೆರೆಮನೆಯ ಮಂದಿ ಇವರ ಸಹಾಯಕ್ಕೆ ಬರಲಿಲ್ಲ.

“ನಮ್ಮ ಕಷ್ಟದಲ್ಲಿ ಅವರು ನೆರವಾಗಲಿಲ್ಲ. ಈಗ ಅವರ ಕಷ್ಟದಲ್ಲಿ ನಾವೇಕೆ ಸಹಾಯ ಮಾಡಬೇಕು? ಬಂದುದನ್ನು ಅವರೂ ಅನುಭವಿಸಲಿ. ಡಕಾಯಿತರು ಅವರಿಗೂ ಹೊಡೆಯಲಿ. ಅವರ ಎಲ್ಲ ವಸ್ತುಗಳನ್ನು ಕೊಂಡೊಯ್ಯಲಿ. ನಮಗಾದ ಗತಿ ಅವರಿಗೂ ಬರಲಿ” ಎಂದು ಅವರು ಅಂದುಕೊಂಡರು. ನಮ್ಮ ಮನೆಯಲ್ಲೇ ಅವರು ಉಳಿದುಬಿಟ್ಟರು.

ದರೋಡೆಕೋರರು ಸಲೀಸಾಗಿ ತಮ್ಮ ಕೆಲಸ ಪೂರೈಸಿಕೊಂಡರು. ಆ ಮನೆಯಲ್ಲಿ ಇದ್ದುದನ್ನೆಲ್ಲ ದೋಚಿ ಅವರು ಪರಾರಿಯಾದರು.

ಇಬ್ಬರ ನ್ಯಾಯದಿಂದ ಮೂರನೆಯವರಿಗೆ ಆಯವಾಗಿತ್ತು. ಹಗೆತನದಿಂದಾಗಿ ಎರಡು ಮನೆಗಳೂ ಹಾಳಾಗಿದ್ದವು. ಮನೆಮಂದಿಯೆಲ್ಲ ಕಷ್ಟನಷ್ಟ ಅನುಭವಿಸಬೇಕಾಯಿತು.

ಎರಡೂ ಮನೆಗಳವರು ಒಬ್ಬರಿಗೊಬ್ಬರು ನೆರವಾಗಿದ್ದರೆ?