ಅಂದು ಸಹ ನಿಶ್ಚಿತ ಸಮಯದಲ್ಲೇ ಶಾಲೆ ಆರಂಭವಾಗಿತ್ತು. ಆದರೆ ಕಿಟ್ಟನ ಅಧ್ಯಾಪಕರು ತರಗತಿಗೆ ಬಂದಿರಲಿಲ್ಲ. ಕೆಲಸದ ಮೇಲೆ ಅವರು ವಿದ್ಯಾಧಿಕಾರಿಗಳ ಕಚೇರಿಗೆ ಹೋಗಿದ್ದರು. ಹಾಗಾಗಿ ಬಾಬು ಮಾಸ್ತರರು ತರಗತಿಗೆ ಬಂದರು. ಹಾಜರಿ ಪುಸ್ತಕ ಅವರ ಕೈಯಲ್ಲಿತ್ತು. ಮಕ್ಕಳ ಹಾಜರಿ ಕರೆಯಲೆಂದೇ ಅವರು ಬಂದಿದ್ದರು. ಗುರುಗಳನ್ನು ಕಂಡ ಮಕ್ಕಳೆಲ್ಲ ಎದ್ದು ನಿಂತರು.

‘ನಮಸ್ಕಾರ ಸಾರ್’ ಎಂದು ಅವರಿಗೆ ವಂದಿಸಿದರು.

ಮಾಸ್ತರರು ಪ್ರತಿವಂದನೆ ಮಾಡಿದರು. ಎಲ್ಲರೂ ಕೂತ ಬಳಿಕ ಅವರು ಮಕ್ಕಳ ಹಾಜರಿ ಕರೆದರು. ಅದು ಮುಗಿದೊಡನೆ ಒಬ್ಬ ಹುಡುಗೆ ಎದ್ದು ನಿಂತ, “ಸಾರ್, ಒಂದು ಕತೆ ಹೇಳಿ ಸಾರ್” ಎಂದು ಮಾಸ್ತರರನ್ನು ಕೇಳಿಕೊಂಡ. ತತ್‌ಕ್ಷಣ ಹತ್ತಾರು ಮಕ್ಕಳು ಅದಕ್ಕೆ ದನಿಗೂಡಿಸಿದರು. “ಕತೆ ಹೇಳಿ, ಸಾರ್, ಕತೆ ಹೇಳಿ, ಸಾರ್” ಎಂದು ಅವರು ಒತ್ತಾಯಿಸಿದರು.

ನಿಮ್ಮ ಅಧ್ಯಾಪಕರು ಈಗ ಬರುತ್ತಾರೆ, ಮಕ್ಕಳೇ. ತುಸು ಹೊತ್ತು ಕಾಯೋಣ. ನಾನೀಗ ನಿಮಗೊಂದು ಪ್ರಶ್ನೆ ಕೇಳುತ್ತೇನೆ. ಬಹಳ ಸುಲಭದ ಪ್ರಶ್ನೆ ಅದು. ನೀವು ಕೂಡಲೇ ಉತ್ತರಿಸಬೇಕು. ಎಷ್ಟು ಮಂದಿ ಸರಿಯಾದ ಉತ್ತರ ಕೊಡುತ್ತಿರೋ ನೋಡೋಣ. ಆ ಬಳಿಕ ನಿಮಗೆ ಕತೆ ಹೇಳುವ ಬಗ್ಗೆ ಯೋಚಿಸೋಣ. ಆಗಬಹುದಷ್ಟೇ”?

ಮಾಸ್ತರರು ಮಕ್ಕಳನ್ನು ಕೇಳಿದರು.

“ಆಗಲಿ ಸಾರ್, ಪ್ರಶ್ನೆ ಕೇಳಿ ಬಿಡಿ” ಮಕ್ಕಳು ಉತ್ಸಾಹ ತೋರಿದರು.

ಮಾಸ್ತರರು ಹೇಳತೊಡಗಿದರು. ‘ರಜಾ ದಿನದಂದು ನೀವು ಆಟದ ಬಯಲಲ್ಲಿ ಆಡುತ್ತೀದ್ದೀರಿ ಎಂದು ಊಹಿಸಿಕೊಳ್ಳಿ. ಭರದಲ್ಲಿ ಆಟ ಸಾಗುತ್ತಾ ಇದೆ. ಆಗ ನಿಮ್ಮ ಅಮ್ಮ ಕರೆಯುತ್ತಾರೆ.- ‘ಊಟದ ಹೊತ್ತಾಯಿತು. ತಟ್ಟೆಯಲ್ಲಿ ಅನ್ನ ಹಾಕಿದ್ದೇನೆ ಬೇಗ ಬಾ’ ಎನ್ನುತ್ತಾರೆ. ತತ್‌ಕ್ಷಣ ನೀವು ಏನು ಮಾಡುತ್ತೀರಿ.?”

“ಆಟ ಬಿಟ್ಟು ನಾನು ಮನೆಗೆ ಓಡುತ್ತೇನೆ. ಊಟ ಮಾಡುತ್ತೇನೆ” ಒಬ್ಬ ಹೇಳಿದ.

“ನಮ್ಮಲ್ಲಿ ಪ್ರತ್ಯೇಕ ಊಟದ ಮನೆ ಇಲ್ಲ ಅಡುಗೆ ಮನೆಯಲ್ಲೇ ನಾವು ಊಟ ಮಾಡುತ್ತೇವೆ. ನಾನು ಅಲ್ಲಿಗೆ ಓಡುತ್ತೇನೆ; ಊಟಕ್ಕೆ ಕೂಡುತ್ತೇನೆ” ಇನ್ನೊಬ್ಬ ಹೇಳಿದ.

ಆಗ ಮಾಸ್ತರರು ಮಧ್ಯೆ ಪ್ರವೇಶಿಸಿದರು. “ಆಟದ ಬಯಲಿನಿಂದ ನೇರವಾಗಿ ನೀವು ಎಲ್ಲಿಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಅದನ್ನು ಹೇಳಿ” ಅವರು ಮತ್ತೆ ನೆನಪಿಸಿದರು.

“ನಾನಂತೂ ಆಟವನ್ನು ಅರ್ಧದಲ್ಲಿ ಬಿಟ್ಟು ಹೋಗುವುದಿಲ್ಲ. ಅದು ಮುಗಿದೊಡನೆ ಅಲ್ಲಿಂದ ನೆಟ್ಟಗೆ ಊಟದ ಮನೆಗೆ ಓಡಿ, ಊಟ ಮುಗಿಸುತ್ತೇನೆ” ಮತ್ತೊಬ್ಬ ಅಭಿಪ್ರಾಯ ಸೂಚಿಸಿದ.

“ಅಮ್ಮ ಊಟಕ್ಕೆ ಕರೆದ ತತ್‌ಕ್ಷಣ ನಾನು ಬಚ್ಚಲು ಮನೆಗೆ ಓಡುತ್ತೇನೆ” ಕಿಟ್ಟ ಹೇಳಿದ. ಅವನ ಮಾತು ಕೇಳಿ ಉಳಿದವರೆಲ್ಲ ಗೊಳ್ಳನೆ ನಕ್ಕುಬಿಟ್ಟರು. “ಕಿಟ್ಟ, ಬಚ್ಚಲು ಮನೆಯಲ್ಲಿ ಊಟ ಮಾಡುತ್ತಾನೆ” ಪುಟ್ಟ ಬೊಬ್ಬಿಟ್ಟ. ತರಗತಿ ಮತ್ತೊಮ್ಮೆ ನಗುವಿನಲ್ಲಿ ಮುಳುಗಿತು.

ಕ್ಷಣಕಾಲ ಬಿಟ್ಟು ಮಾಸ್ತರರು ಮತ್ತೆ ಪ್ರಶ್ನಿಸಿದರು. “ಮಕ್ಕಳೇ ನೀವೀಗ ನಕ್ಕುಬಿಟ್ಟಿರಲ್ಲ. ಯಾಕೆ ಹೇಳಿ?” ಕಿಟ್ಟ ಬಚ್ಚಲು ಮನೆಗೆ ಓಡುತ್ತೇನೆ ಎಂದುದಕ್ಕೆ ಒಬ್ಬ ನಗುತ್ತಲೇ ಉತ್ತರ ಕೊಟ್ಟ “ಹಾಗಾದರೆ ಅವನು ಹೇಳಿದ್ದು ತಪ್ಪು ಎನ್ನುತ್ತಿರಾ?” ಮಾಸ್ತರರು ಕೆದಕಿ ಕೇಳಿದರು.

“ಅಲ್ಲವೇ ಮತ್ತೆ? ಬಚ್ಚಲು ಮನೆಯಲ್ಲಿ ಯಾರಾದರೂ ಊಟ ಮಾಡುತ್ತಾರೆಯೇ?” ಗೋಪು ಮರುಪ್ರಶ್ನೆ ಹಾಕಿದ.

“ಹಾಗಾದರೆ ನೀವೆಲ್ಲ ಆಟದ ಬಯಲಿನಿಂದ ಊಟದ ಮನೆಗೆ ನುಗ್ಗುವವರು. ಇರಲಿ, ಈಗ ಕಿಟ್ಟನನ್ನೇ ವಿಚಾರಿಸೋಣ, ಏನು ಕಿಟ್ಟ ನೀನು ಬಚ್ಚಲು ಮನೆಗೆ ಓಡುತ್ತೇನೆ ಎಂದಿಯಲ್ಲ? ಏಕೆ ಹೇಳು? ಅವರು ವಿಚಾರಿಸಿದರು.

“ಉಣ್ಣುವ ಮೊದಲು, ತಿನ್ನುವ ಮೊದಲು ಕೈಕಾಲು ಮುಖಗಳನ್ನು ತೊಳೆಯಬೇಕಷ್ಟೇ? ಅದಕ್ಕಾಗಿ ಬಚ್ಚಲು ಮನೆಗೆ ಹೋಗುತ್ತೇನೆ. ಎಂದಿದ್ದೆ ನಾನು “ಕಿಟ್ಟ ಕಾರಣ ನೀಡಿದ”.

“ಭೇಷ್‌, ಕಿಟ್ಟ ಸರಿಯಾದ ಉತ್ತರ ನೀಡಿದ್ದಾನೆ. ನಾವು ಆಡುವಾಗ ಇಲ್ಲವೇ ಕೆಲಸ ಮಾಡುವಾಗ ನಮ್ಮ ದೇಹವೆಲ್ಲಾ ಬೆವರಿರುತ್ತದೆ. ಕೈಕಾಲುಗಳಿಗೆ ಧೂಳು, ಕೊಳೆ ಮೆತ್ತಿಕೊಂಡಿರುತ್ತದೆ. ಜತೆಯಲ್ಲೆ ರೋಗಾಣುಗಳು ಇರಬಹುದು. ಆದುದರಿಂದ ಉಣ್ಣುವ-ತಿನ್ನುವ ಮೊದಲು ನಾವು ಕೈಕಾಳು, ಮುಖಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಲು ಶುಚಿಯಾಗಿರುವುದು ಅತೀ ಅಗತ್ಯ, ಇದನ್ನು ಗುರುಗಳಿಂದ, ಹಿರಿಯರಿಂದ ಕೇಳಿ ತಿಳಿದಿದ್ದೀರಿ ನೀವು. ಆದರೆ ನಿಮಗದು ಮರೆತುಹೋಗಿದೆ. ಸರಿ ತಾನೇ?” ಎನ್ನುತ್ತ ಮಾಸ್ತರರು ಮಕ್ಕಳ ಮುಖ ನೋಡಿದರು.

“ಹೌದು ಸಾರ್” ಮಕ್ಕಳು ಮೆಲು ದನಿಯಲ್ಲಿ ಹೇಳಿ ಮುಖ ಕೆಳಗೆ ಹಾಕಿದರು, ಅವರಿಗೆ ನಾಚಿಕೆ ಆಗಿತ್ತು. ಮಾಸ್ತರರು ಮಾತು ಮುಂದುವರಿಸಿದರು” ಕಿಟ್ಟನ ಹಾಗೆ ನಾವೆಲ್ಲರೂ ಕಲಿತುದನ್ನು ನೆನಪಿನಲ್ಲಿಡಬೇಕು; ಅದನ್ನು ನಮ್ಮ ನಡತೆಯಲ್ಲಿ ತೋರಿಸಿ ಕೊಡಬೇಕು. ಆಗ ಮಾತ್ರ ಕಲಿತದ್ದು, ಸಾರ್ಥಕವಾಗುತ್ತದೆ; ನಾವು ಜಾಣರು ಎನಿಸುತ್ತೇವೆ.”

ಅಷ್ಟರಲ್ಲೆ ಆ ತರಗತಿಯ ಅಧ್ಯಾಪಕರು ಬರುವುದು ಕಾಣಿಸಿತು. ಒಡನೆ” ನಿಮ್ಮ ಅಧ್ಯಾಪಕರು ಬಂದು ಬಿಟ್ಟರು ನೋಡಿ ಇನ್ನು ಅವರು ಪಾಠ ಮಾಡುತ್ತಾರೆ” ಎನ್ನುತ್ತಾ ಬಾಬು ಮಾಸ್ತರರು ತರಗತಿಯಿಂದ ಹೊರನಡೆದರು. ಮಕ್ಕಳು ಗಡಬಡಿಸಿ ಎದ್ದು ನಿಂತರು ತಮ್ಮ ಗುರುಗಳನ್ನು ಬರಮಾಡಿಕೊಂಡು ಮುಂದಿನ ಪಾಠಕ್ಕೆ ಸಿದ್ಧರಾದರು.