ಬೆಳಗಿನ ಸಮಯವದು. ಬಹಳ ಹೊತ್ತಿನಿಂದ ಮಳೆಸುರಿಯುತ್ತಿತ್ತು. ಥಂಡಿ ಗಾಳಿ ಬೀಸುತ್ತಿತ್ತು. ಆಗೊಮ್ಮೆ ಕೇಳಿಸಿತು ಭಯಂಕರವಾದ ಗುಡುಗಿನ ಸದ್ದು. ಆ ಸದ್ದಿಗೆ ನಾಣಿಯ ನಿದ್ರೆ ಹಾರಿಯೋಯಿತು. ಅವನು ತನ್ನ ಹೊದಿಕೆ ಸರಿಸಿದ; ಕಣ್ಣು ಬಿಟ್ಟು ಅತ್ತಿತ್ತ ನೋಡಿದ. ಅವನ ಅಪ್ಪ-ಅಮ್ಮ ಆಗಲೇ ಎದ್ದಿದ್ದರು. ಹೊತ್ತು ಮೂಡಿದ್ದರೂ ಸೂರ್ಯ ಮಾತ್ರ ಕಾಣಿಸುತ್ತಿರಲಿಲ್ಲ.

ವಾಣಿ ಎದ್ದು ಕೂತ. ಚಾಪೆ ಮಡಚಿಟ್ಟು, ಪಡಸಾಲೆಗೆಬಂದ. ಅವನ ಅಮ್ಮ ಅಡುಗೆ ಮನೆಯಲ್ಲಿದ್ದಳು. ಅಪ್ಪ ಚಾವಡಿಯಲ್ಲಿದ್ದ ಬೆಂಚಿನ ಮೇಲೆ ಕೂತು, ಬೀಡಿ ಸೇದುತ್ತಿದ್ದ, ಉಂಡೆ ಉಂಡೆ ಹೊಗೆ ಬಿಡುತ್ತಿದ್ದ. ಏನನ್ನೋ ಯೋಚಿಸುತ್ತಿರುವಂತೆ ಅವನು ಅಲ್ಲಿ ಕೂತೇ ಇದ್ದ.

ನಾಣಿ ಇನ್ನೂ ಪಡಸಾಲೆಯಲ್ಲೇ ನಿಂತಿದ್ದ. ಕಿಟಕಿಯ ಮೂಲಕ ಅವನು ಬೀಡಿ ಸೇದುವ ಅಪ್ಪನನ್ನೆ ನೋಡುತ್ತಿದ್ದ. ಅಂಥ ನೋಟವನ್ನು ಅವನು ಹಲವು ಬಾರಿ ಕಂಡಿದ್ದ. ಅದರ ಬಗ್ಗೆ ಅವನೆಂದೂ ಯೋಚಿಸಿರಲಿಲ್ಲ. ಆದರೆ ಇಂದು ಹಾಗಾಗಲಿಲ್ಲ ಏನೇನೋ ಯೋಚನೆಗಳು ಅವನನ್ನು ಕಾಡತೊಡಗಿದವು.

“ಈ ಅಪ್ಪ ಯಾಕೆ ಬೀಡಿ ಸೇದುತ್ತಾನೆ?” ಅವನು ತನಗೆ ತಾನೆ ಕೇಳಿಕೊಂಡ. ಅದರಲ್ಲಿ ಏನೋ ಮಜ ಇರಬೇಕು. ಅಥವಾ ರುಚಿ ಇರಬೇಕು. ಏನಿದೆಯೋ ಯಾರಿಗೆ ಗೊತ್ತು? ಒಮ್ಮೆ ಅದನ್ನು ಪರೀಕ್ಷಿಸಿ ನೋಡಬೇಕು. ಆದರೆ ಹೇಗೆ? ಅಪ್ಪ ಅದನ್ನು ಕೊಡುವಂತಿಲ್ಲ. ನಾನಾಗಿ ಕೇಳಿದರೂ ಕಣ್ಣು ಕೆಂಪಗೆ ಮಾಡಿ, ಗದರಿಸಿಬಿಟ್ಟಾನು. ಏನು ಮಾಡಲಿ?” ಅವನು ಯೋಚಿಸಿದ. ಥಟ್ಟನೆ ಅವನಿಗೊಂದು ಯೋಚನೆ ಹೊಳೆಯಿತು.

ನಾಣಿ ಹಲ್ಲುಜ್ಜಲು ಹೊರಟು ಹೋದ. ಬೇಗ ಬೇಗನೆ ಅವನು ಹಲ್ಲುಜ್ಜಿ, ಮುಖತೊಳೆದ, ಅಷ್ಟರಲ್ಲಿ ಮಳೆ ಕಡಿಮೆಯಾಗಿತ್ತು. ಅಪ್ಪ ಹಟ್ಟಿಗೆ ಹೋಗಿದ್ದ. ನಾಣಿ ಚಾವಡಿಗೆ ಬಂದ, ಒಂದು ಬಾರಿ ಬೀಡಿ ಸೇದಬೇಕು ಎನಿಸಿತು ಅವನಿಗೆ. ಬೀಡಿಗಾಗಿ ಅವನು ಅತ್ತಿತ್ತ ಕಣ್ಣಾಡಿಸಿದ. ಅಲ್ಲೇನೂ ಇರಲಿಲ್ಲ. ಅವನು ಜಗಲಿಗೆ ಬಂದ. ಕೆಳಗಡೆ ಬಗ್ಗಿ ನೋಡಿದ. ಅಪ್ಪ ಎಸೆದ ಬೀಡಿಯ ಕುತ್ತಿ ಅಲ್ಲಿತ್ತು. ಸಾಕಷ್ಟು ದೊಡ್ಡದಾಗಿಯೂ ಇತ್ತು ಅದು. ಅದರ ಬೆಂಕಿ ಆರಿರಲಿಲ್ಲ.

ನಾಣಿ ಜಗಲಿಯಿಂದ ಕೆಳಗಿಳಿದ. ಬೀಡಿ ಕುತ್ತಿಯನ್ನು ಎತ್ತಿಕೊಂಡು ಪಕ್ಕದ ಕೋಣೆಗೆ ಓಡಿದ. ಕಿಟಕಿಯ ಬಳಿ ನಿಂತು, ದಮ್ಮಲು ಎಳೆಯತೊಡಗಿದ. ಮೊದಲ ಬಾರಿಗೆ ಅವನು ಬೀಡಿ ಸೇದುತ್ತಿದ್ದ ಹಾಗೆ ದಮ್ಮು ಎಳೆದಾಗ ಅವನ ಗಂಟಲಲ್ಲಿ ಹೊಗೆ ಸಿಕ್ಕಿಕೊಂಡಿತು. ಉಸಿರು ಕಟ್ಟಿದಂತಾಗಿ ಕೆಮ್ಮು ಬಂದಿತು. ಕಣ್ಣುಗಳಲ್ಲಿ ನೀರು ತುಂಬಿತು. ಆದರೂ ಅವನು ಸಾವರಿಸಿಕೊಂಡ. ಮತ್ತೆ ದಮ್‌ ಎಳೆದ. ಅಪ್ಪನ ಹಾಗೆ ‘ಥೂ’ ಎಂಧು ಹೊಗೆ ಉಗುಳಿದ. ಅದು ಮೇಲೇರುವುದನ್ನು ನೋಡಿ ಖುಶಿ ಪಟ್ಟ.

ಅಷ್ಟರಲ್ಲಿ ಏನಾಯಿತು ಗೊತ್ತೇ? ಹಟ್ಟಿಗೆ ಹೋಗಿದ್ದ ಅಪ್ಪ ಮನೆಗೆ ಹಿಂದಿರುಗಿದ. ಹಾಗೆ ಬರುವಾಗ ಕೋಣೆಯ ಕಿಟಕಿಯಿಂದ ಹೊರಹೊಮ್ಮಿದ ಹೊಗೆ ಅವನ ಗಮನ ಸೆಳೆಯಿತು. ಅವನು ಸರಸರನೆ ಒಳಗೆ ಬಂದ. ನಾಣಿ ಬೀಡಿ ಸೇದುವುದನ್ನು ಅವನು ನೋಡಿದ. ಅವನ ಸಿಟ್ಟು ನೆತ್ತಿಗೇರಿತು. “ಏ ಫಟಿಂಗ, ಇದೇನು ಮಾಡುತ್ತೀಯಾ?” ಎನ್ನುತ್ತಾ ಮಗನಿಗೆ ಅವನು ಹೊಡೆಯತೊಡಗಿತು. ನಾಣಿಯ ಕೈಯಲ್ಲಿದ್ದ ಬೀಡಿ ಕುತ್ತಿ ಕೆಳಗೆ ಬಿತ್ತು. “ಅಪ್ಪಾ, ಹೊಡೆಯಬೇಡಪ್ಪಾ. ಇನ್ನು ಹೀಗೆ ಮಾಡುವುದಿಲ್ಲಪ್ಪಾ” ಅವನು ಬೊಬ್ಬಿಟ್ಟ.

“ಚೋಟುದ್ದದ ಹುಡುಗ. ಈಗಲೇ ಬೀಡಿ ಸೇದುತ್ತಿಯೇನೋ” ಎಂದು ಅಬ್ಬರಿಸುತ್ತ, ಅಪ್ಪ ಹೊಡೆಯುತ್ತಲೇ ಇದ್ದ.

“ಎಷ್ಟು ಹೊಡೆಯುತ್ತೀರಾ? ಸ್ವಲ್ಪ ನಿಲ್ಲಿಸಬಾರದೇ?” ಅಮ್ಮ ಅಂಗಲಾಚಿದಳು. ಆದರೂ ಅಪ್ಪನ ಕೋಪ ತಣಿಯಲಿಲ್ಲ. ಅವನು ಒಂದು ಕೈಯಲ್ಲಿ ಮಗನನ್ನು ಹಿಡಿದುಕೊಂಡಿದ್ದ, ಇನ್ನೊಂದು ಕೈಯಲ್ಲಿ ಅವನ ಬೆನ್ನಿಗೆ ರಪರಪನೆ ಬಾರಿಸುತ್ತಿದ್ದ. ನಾಣಿ, ಹೊಡೆತಗಳನ್ನು ತಪ್ಪಿಸಿಕೊಳ್ಳಲು ಹೆಣಗುತ್ತ, ಬೊಬ್ಬಿಡುತ್ತಿದ್ದ. ನೆರೆಯ ಮನೆಗಳಿಗೂ ಕೇಳಿಸುವಷ್ಟು, ಗಟ್ಟಿಯಾಗಿತ್ತು ಅವನ ಬೊಬ್ಬೆ. ಅದನ್ನು ಕೇಳಿದ ಬಾಬು ಮಾಸ್ತರರಿಗೆ ತಡೆಯಲಾಗಲಿಲ್ಲ. ಅವರು ಅಲ್ಲಿಗೆ ಓಡಿ ಬಂದರು.

“ಏ ತಿಮ್ಮಾ, ಏನಾಯಿತು, ಹೇಳು? ಮಗುವನ್ನು ಯಾಕೆ ಹೀಗೆ ಹೊಡೆಯುತ್ತೀಯಾ? ಸಾಕು ಇನ್ನಾದರೂ ನಿಲ್ಲಿಸು” ಎನ್ನುತ್ತ ಅವರು ಅಡ್ಡ ಬಂದರು. ತಿಮ್ಮನ ಕೈಯಿಂದ ನಾಣಿಯನ್ನು ಬಿಡಿಸಿದರು.

“ನಾನು ಸುಮ್ಮಸುಮ್ಮನೆ ಹೊಡೆಯುತ್ತಿಲ್ಲ, ಮಾಸ್ತರರೇ, ಚೋಟುದ್ದೆ ಇದ್ದಾನೆ ನೋಡಿ, ಈಗಲೇ ಇವನು ಬೀಡಿ ಸೇದತೊಡಗಿದ್ದಾನೆ!” ತಿಮ್ಮ ವಿವರಣೆ ನೀಡಿದ.

“ಏನು, ಇವನು ಬೀಡಿ ಸೇದುತ್ತಾನೆಯೇ? ಹಾಗಿದ್ದರೆ ಅದಕ್ಕೆ ಕಾರಣ ಯಾರು ಗೊತ್ತೆ? ನೀನು, ನೀನೇ ಕಾರಣ ಇದು ನಿನಗೆ ತಿಳಿದಿರಬೇಕು” ಮಾಸ್ತರರು ಒತ್ತಿ ಹೇಳಿದರು.

“ನೀವೇನು ಹೇಳುತ್ತಿದ್ದೀರಿ ಮಾಸ್ತರರೇ? ಇವನಿಗೆ ನಾನು” “ಬೀಡಿ ಸೇದು” ಎಂದಿದ್ದೇನೆಯೇ?” ಆಶ್ಚರ್ಯದಿಂದ ಪ್ರಶ್ನಿಸಿದ ತಿಮ್ಮ.

“ಇಲ್ಲ, ನೀನು ಇವನಿಗೆ “ಬೀಡಿ ಸೇದು” ಎನ್ನಲಿಲ್ಲ ಸೇದಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೆ ಅಷ್ಟೆ” ಸಮಾಧಾನದಿಂದಲೇ ಹೇಳಿದರು ಮಾಸ್ತರರು.

ತಿಮ್ಮನಿಗೆ ಅವರ ಮಾತು ಅರ್ಥವಾಗಲಿಲ್ಲ. ಅವನು ಅವರ ಮುಖವನ್ನೇ ಮಿಕಿಮಿಕಿ ನೋಡತೊಡಗಿದ.

“ತಿಮ್ಮಾ, ಇಲ್ಲಿ ಕೇಳು, ಅನುಕರಣೆ ಮಕ್ಕಳ ಸಹಜ ಗುಣ. ಹಿರಿಯರನ್ನು ನೋಡಿ ಅವರು ಮಾತು ಕಲಿಯುತ್ತಾರೆ. ಹಿರಿಯರನ್ನು ನೋಡಿಯೇ ರೀತಿ ನೀತಿಗಳನ್ನು ತಿಳಿಯುತ್ತಾರೆ. ಆದ ಕಾರಣ, ಮಕ್ಕಳು ಆಡಬಾರದ ಮಾತು ನಮ್ಮ ಬಾಯಿಯಿಂದ ಬರಬಾರದು; ಅವರು ಮಾಡಬಾರದ ಕೆಲಸವನ್ನು ನಾವೆಂದೂ ಮಾಡಬಾರದು. ಮಕ್ಕಳ ಮೇಲೆ ಹೆತ್ತವರ ಮತ್ತು ಗುರುಗಳ ಪ್ರಭಾವ ಬಹಳ ಹೆಚ್ಚು. ಅವರ ಅನುಕರಣೆಯಿಂದಲೇ ಮಕ್ಕಳು ಹೆಚ್ಚಿನದನ್ನು ಕಲಿಯುವುದಾಗಿದೆ. ನೀನು ಬೀಡಿ ಸೇದಿದೆ. ನಿನ್ನ ಮಗ ಅದನ್ನು ನೋಡಿದ. ಅದರಲ್ಲೆನೋ ಮಜ ಇದೆ. ಹಾಗಾಗಿಯೆ ಅಪ್ಪ ಬೀಡಿ ಸೇದುತ್ತಾನೆ ಎಂದು ಅವನು ನಂಬಿದ. ಅಂತ ಕುತೂಹಲದಿಂದಲೇ ಅವನು ಬೀಡಿ ಸೇದತೊಡಗಿದ. ಇದರಲ್ಲಿ ಅವನ ತಪ್ಪಿಗಿಂತ ನಿನ್ನ ತಪ್ಪೇ ಹೆಚ್ಚಿನದು. ಇದನ್ನು ಅರ್ಥಮಾಡಿಕೋ. ಮಕ್ಕಳು ತಪ್ಪು ಕೆಲಸ ಮಾಡಿದಾಗ, ಅದು ತಪ್ಪು ಏಕೆ? ಹೇಗೆ? ಇದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಆಗ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ” ಮಾಸ್ತರರು ಬುದ್ದಿ ಹೇಳಿದರು.

ಕ್ಷಣಕಾಲ ತಿಮ್ಮ ಯೋಚಿಸುತ್ತಲೇ ಇದ್ದ. ಅವನಿಗೆ ಮಾಸ್ತರರ ಮಾತು ನಿಜ ಎನಿಸಿರಬೇಕು. “ನನ್ನಿಂದ ತಪ್ಪಾಯಿತು ಮಾಸ್ತರರೇ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನನ್ನ ತಪ್ಪನ್ನು ತಿದ್ದಿಕೊಳ್ಳಲು ಯತ್ನಿಸುತ್ತೇನೆ. ಅವನು ಭರವಸೆ ನೀಡಿದ. ಮಾಸ್ತರರಿಗೆ ಸಮಾಧಾನವಾಯಿತು.

ಹೊಗೆ ಬತ್ತಿ ಸೇವನೆಯಿಂದ ತಮ್ಮ ಆರೋಗ್ಯ ಕೆಡುತ್ತದೆ. ಮಗೂ. ಬಹಳ ಕೆಟ್ಟ ಚಟ ಅದು. ಅದರಿಂದ ನಾವು ದೂರವಿರಬೇಕು.” ನಾಣಿಯ ಕಡೆಗೆ ತಿರುಗಿ ಹೇಳಿದರು ಮಾಸ್ತರರು.

“ಆಗಲಿ ಸಾರ್. ಇನ್ನು ಹೀಗೆ ಮಾಡುವುದಿಲ್ಲ” ಆವನೂ ಮಾತು ಕೊಟ್ಟ.

ಮಾಸ್ತರರಿಗೆ ಖುಷಿಯಾಯಿತು “ಸರಿಯಪ್ಪ ನಾನಿನ್ನು ಬರುತ್ತೇನೆ” ಎನ್ನುತ್ತ ಅವರು ಅಲ್ಲಿಂದ ಹೊರಟುಹೋದರು.

“ಬಾ ಮಗೂ, ನಿನ್ನ ಬೆನ್ನಿಗೆ ಸ್ವಲ್ಪ ಎಣ್ಣೆ ತಿಕ್ಕುತ್ತೇನೆ.” ಅಮ್ಮ ನಾಣಿಯನ್ನು ಕರೆದಳು. ಅವಳೊಂದಿಗೆ, ಅವನು ಅಡುಗೆ ಮನೆ ಕಡೆಗೆ ಹೆಜ್ಜೆ ಹಾಕಿದ.

“ಅಪ್ಪ ಬೀಡಿ ಸೇದದೆ ಇರುತ್ತಿದ್ದರೆ ನನಗೆ ಇಂಥ ಯೋಚನೆಯೇ ಬರುತ್ತಿರಲಿಲ್ಲ” ಅವನು ತನಗೆ ತಾನೇ ಹೇಳಿಕೊಳ್ಳುತ್ತಿದ್ದ; ಬಾಬು ಮಾಸ್ತರರಿಗೆ ಮನದಲ್ಲೇ ವಂದಿಸುತ್ತಿದ್ದ.