ತಿಮ್ಮಪ್ಪ ಒಬ್ಬ ಬಡ ರೈತ. ತಿಮ್ಮಕ್ಕ ಅವನ ಹೆಂಡತಿ. ಅವರಿಗೆ ಮಕ್ಕಳು ಮರಿ ಇರಲಿಲ್ಲ. ಸಣ್ಣದೊಂದು ಗುಡಿಸಲಲ್ಲಿ ಅವರು ವಾಸಿಸುತ್ತಿದ್ದರು.

ತಿಮ್ಮಪ್ಪನಲ್ಲಿ ಎರಡು ಎತ್ತುಗಳಿದ್ದವು. ಒಂದು ದನ ಇತ್ತು. ದನ ಹೆಚ್ಚು ಹಾಲು ಕೊಡುತ್ತಿತ್ತು. ಅದರ ಹಾಲನ್ನು ಅವರು ಮಾರುತ್ತಿದ್ದರು. ತಿಮ್ಮಪ್ಪ ಹಾಲು ಕರೆಯುತ್ತಿದ್ದ. ತಿಮ್ಮಕ್ಕ ಅದನ್ನು ಮಾರಿ ಬರುತ್ತಿದ್ದಳು.

ತಿಮ್ಮಕ್ಕನಿಗೆ ಒಂದು ಆಸೆ ಇತ್ತು. ಮುತ್ತಿನ ಓಲೆಗಳನ್ನು ಕೊಳ್ಳಬೇಕು; ಅವುಗಳನ್ನು ಧರಿಸಿ, ಓಡಾಡಬೇಕು ಎನ್ನುವ ಬಯಕೆ ಅವಳದು. ಆದರೆ ಬಡವರಿಗೆ ಮುತ್ತಿನ ಓಲೆ ಎಲ್ಲಿಂದ ಬರಬೇಕಕು? ಗಂಡ ತೆಗೆಸಿಕೊಡಲಾರ. ತಾನೇ ಹಣ ಸಂಪಾದಿಸಬೇಕು. ಓಲೆಗಳನ್ನು ಕೊಳ್ಳಬೇಕು. ಅವಳಿಗೊಂದು ಉಪಾಯ ಹೊಳೆಯಿತು. ಅದನ್ನು ಅವಳು ಕಾರ್ಯರೂಪಕ್ಕೆ ಇಳಿಸಿದಳು. ಅಂದಿನಿಂದ ಅವಳ ಹಾಲು ಮಾರಾಟ ಪ್ರಮಾಣ ಹೆಚ್ಚಿತು. ದನ ಮಾತ್ರ ಮೊದಲಿನಷ್ಟೇ ಹಾಲು ಕೊಡುತ್ತಿತ್ತು.

ದಿನಗಳು ಉರುಳಿದವು. ಗಿರಾಕಿಗಲಿಂದ ದೂರುಗಳು ಬರತೊಡಗಿದವು. “ಹಾಳು ಮೊದಲಿನಂತಿಲ್ಲ. ಹೆಚ್ಚು ನೀರಾಗಿದೆ” ಎಂದು ಗೊಣಗುತ್ತಿದ್ದರು. “ಮಳೆಗಾಲ ನೋಡಿ, ದನ ಎಳೆಹುಲ್ಲು ಮೇಯುತ್ತಿದೆ. ಹಾಲು ನೀರಾಗಿರಬಹುದು. ತಿಮ್ಮಕ್ಕ ಸಮಾಧಾನ ಹೇಳುತ್ತಿದ್ದಳು. ವ್ಯಾಪಾರ ನಡೆದೇ ಇತ್ತು.

ಆರು ತಿಂಗಳು ಕಳೆದಿರಬಹುದು. ಒಂದು ದಿನ ತಿಮ್ಮಕ್ಕ ಪೇಟೆಗೆ ಹೋದಳು. ಹಿಂದಿರುಗಿ ಬಂದಾಗ ಅವಳ ಕಿವಿಗಳಲ್ಲಿ ಮುತ್ತಿನ ಓಲೆಗಳು ಮಿನುಗುತ್ತಿದ್ದವು. “ಈ ಬಾರಿ ಸ್ವಲ್ಪ ಹೆಚ್ಚು ಹಾಲು ಮಾರಾಟವಾಗಿತ್ತು. ಲಾಭದ ಹಣದಲ್ಲಿ ಓಲೆಗಳನ್ನು ಕೊಂಡು ಕೊಂಡೆ” ಗಂಡನಿಗೆ ಅವಳು ವಿವರಣೆ ನೀಡಿದಳು. ಅವಳು ಮಾರಿದ ಹೆಚ್ಚಿನ ಹಾಲು ಯಾವುದೆಂಬುದನ್ನು ತಿಮ್ಮಪ್ಪನಿಗೆ ಅರ್ಥವಾಯಿತು. ಆದರೆ ಅವನೇನೂ ಹೇಳಲಿಲ್ಲ.

ಸಮಯ ಸಂದಿತು. ಅದೊಂದು ದಿನ ತಿಮ್ಮಕ್ಕ ಹೊಳೆ ಬದಿಗೆ ಹೋಗಿದ್ದಳು. ಹೊಳೆ ತುಂಬಿಕೊಂಡಿತ್ತು. ನೀರು ರಭಸದಲ್ಲಿ ಹರಿಯುತ್ತಿತ್ತು. ತಿಮ್ಮಕ್ಕ ಅಲ್ಲಿ ಬಟ್ಟೆ ಒಗೆದಳು. ಸ್ನಾನ ಮಾಡಿದಳು. ಅವಳು ನೀರಲ್ಲಿ ಮುಳುಗಿ ಮೇಲೇಳುವಾಗ “ಟುಳುಂ” ಸದ್ದು ಕೇಳಿಸಿತು. ಹರಳು ಕಲ್ಲೊಂದು ನೀರಿಗೆ ಬಿದ್ದಂತಾಯಿತು. ಅದೇನೆಂದು ಅವಗಳಿಗೆ ಅರ್ಥವಾಗಲಿಲ್ಲ. ಅವಳು ಮೈ ಒರಸಿಕೊಂಡಳು. ಅವಳ ಕೈ ಕಿವಿಯ ಬಳಿ ಹೋದಾಗ ಅವಳಿಗೆ ಸಿಡಿಲು ಬಡಿದಂತಾಯಿತು. ಅವಳ ಒಂದು ಕಿವಿ ಬರಿದಾಗಿತ್ತು. ಅದರಲ್ಲಿದ್ದ ಓಲೆ ಬಿದ್ದುಹೋಗಿತ್ತು.

ಅವಳು ಅಲ್ಲೆಲ್ಲ ಹುಡುಕಾಡಿದಳು. ನೀರೊಳಗೆ ತಡಕಾಡಿ ನೋಡಿದಳು. ಹೊಯಿಗೆ, ಕಸಕಡ್ಡಿ, ಹರಳು, ಕಲ್ಲುಗಳ ಹೊರತು ಮತ್ತೇನೂ ಸಿಗಲಿಲ್ಲ. ಅವಳಿಗೆ ತುಂಬ ನಿರಾಸೆಯಾಯಿತು. ದುಃಖ ಉಕ್ಕಿ ಬಂತು. ಬಿಕ್ಕಿಬಿಕ್ಕಿ ಅಳುತ್ತಲೇ ಅವಳು ಮನೆಗೆ ಬಂದಳು. ನಡೆದುದನ್ನು ಗಂಡನಿಗೂ ತಿಳಿಸಿದಳು

ತಿಮ್ಮಪ್ಪ ಹೆಂಡತಿ ಹೇಳಿದುದನ್ನೆಲ್ಲ ಕೇಳಿಸಿಕೊಂಡ. ಆದರೆ ಅವನು ಕೋಪಿಸಿಕೊಳ್ಳಲಿಲ್ಲ. ದುಃಖಪಡಲೂ ಇಲ್ಲ. “ಲೇ, ಇವಳೇ, ನೀನು ಹಾಲಿಗೆ ನೀರು ಬೆರೆಸಿ, ಮಾರಾಟ ಮಾಡಿದೆ. ಬಂದ ಹಣದಿಂದ ಓಲೆಗಳನ್ನು ಖರೀದಿಸಿದೆ. ನೀರು ಮಾರಿ ಖರೀದಿಸಿದ ಓಲೆ ನೀರಿಗಾಯಿತು. ಹಾಲು ಮಾರಿ ಖರೀದಿಸಿದ್ದು, ನಿನ್ನಲ್ಲೇ ಇದೆಯಲ್ಲಾ? ಅದಕ್ಕೊಂದು ಜೊತೆ ತಂದರಾಯಿತು. ಚಿಂತಿಸಬೇಡ” ಅವನು ಹೆಂಡತಿಯನ್ನು ಸಮಜಾಯಿಸಿದ.

ಗಂಡನ ಮಾತು ಕೇಳಿ ತಿಮ್ಮಕ್ಕನ ಅಳು ನಿಂತಿತ್ತು. ಅನ್ಯಾಯದ ಗಳಿಕೆ ಹೆಚ್ಚು ಕಾಲ ಉಳಿಯದು ಎನ್ನುವ ಸತ್ಯ ಅವಳಿಗೆ ಹೊಳೆಯಿತು.