ಅಂದು ದೀಪಾವಳಿ, ಪಟಾಕಿಯ ಸದ್ದಿಗೆ ಪುಟ್ಟ ಎಚ್ಚರಗೊಂಡ. ಆಗಲೇ ಅವನ ಅಮ್ಮ ಕರೆಯುವುದು ಕೇಳಿಸಿತು.

“ಏಳು ಪುಟ್ಟಾ, ಬೇಗ ಏಳು, ಇನ್ನು ಎಣ್ಣೆ ಹಾಕಿ ಸ್ನಾನ ಮಾಡಬೇಕು. ಹೊಸತು ಅಂಗಿ-ಚಡ್ಡಿ ಹಾಕಿಕೊಳ್ಳಬೇಕು.. “ಅವರು ಹೇಳುತ್ತಿದ್ದರು.

ಪುಟ್ಟನ ನಿದ್ರೆ ಹಾರಿಹೋಯಿತು. ಅವನು ಸಟ್ಟನೇ ಎದ್ದು ಬಂದ. ಅವನ ಅಪ್ಪ ಆಗಲೇ ಎದ್ದಿದ್ದರು. ಅವರ ಸ್ನಾನವೂ ಆಗಿತ್ತು. ಅವರು ಪೂಜೆಗೆ ಕೂತಿದ್ದರು. ಮಿಂದು ಬಂದಿದ್ದ ಅಜ್ಜಿ ದೋಸೆ ಹೊಯ್ಯುತ್ತಿದ್ದರು. ಅಣ್ಣನೂ ಸ್ನಾನ ತೀರಿಸಿದ್ದ. ಅಕ್ಕ ಸ್ನಾನ ಮಾಡುತ್ತಿದ್ದಳು. ಮುಂದಿನದು ಪುಟ್ಟನ ಸರದಿ. ಅವನು ಇನ್ನೂ ಮುಖ ತೊಳೆದಿರಲಿಲ್ಲ.

“ಪುಟ್ಟಾ, ನಿನ್ನ ಬ್ರಶ್ಶಿಗೆ ಪೇಸ್ಟ್‌ ಹಾಕಿ ಇರಿಸಿದ್ದೇನೆ. ಮುಖ ತೊಳೆದುಕೊ” ಬಚ್ಚಲು ಮನೆಯಲ್ಲಿದ್ದ ಅಮ್ಮ ಇನ್ನೊಮ್ಮೆ ಕೂಗಿ ಹೇಳಿದರು. ಪುಟ್ಟ ಅತ್ತ ಹೆಜ್ಜೆ ಹಾಕಿದ. ಅವನು ಬಚ್ಚಲು ಮನೆಗೆ ಬರುವಷ್ಟರಲ್ಲಿ ಅಕ್ಕನ ಸ್ನಾನವೂ ಮುಗಿದಿತ್ತು. ಅವಳು ಹೊರಗೆ ಬರುತ್ತಿದ್ದಳು.

ಏನು ಪುಟ್ಟಾ, ನೀನಿನ್ನು ಕಕ್ಕಸಿಗೆ ಹೋಗಲುಂಟೆ? ಹಾಗಿದ್ದರೆ ಬೇಗೆ ಅಲ್ಲಿಗೆ ಹೋಗಿ ಬಾ. ಮತ್ತೆ ಮುಖ ತೊಳೆದುಕೊಂಡು ಬಿಡು. ತಡ ಮಾಡಬೇಡ. ಅಮ್ಮ ಅವಸರಪಡಿಸಿದಳು.

“ಈ ಅಮ್ಮನಿಗೆ ಎಲ್ಲದಕ್ಕೂ ಅವಸರ” ಪುಟ್ಟ ತನ್ನಲ್ಲೇ ಗೊಣಗಿಕೊಂಡ. ಮತ್ತೆ ಬೇಗ ಬೇಗ ಮುಖ ತೊಳೆದು, ಅವನು ಕಕ್ಕಸಿಗೆ ಹೋದ. ಎರಡು ಮೂರು ನಿಮಿಷ ಕಳೆದಿರಬಹುದು. ಆಗಲೇ ಅವನು ಅಮ್ಮನನ್ನು ಕರೆಯತೊಡಗಿದ. ಅವರು ಕಕ್ಕಸಿಗೆ ಹೋದರು. ಅವನಿಗೆ ನೀರು ಒದಗಿಸಿಕೊಟ್ಟರು. ಪುಟ್ಟ ಅಲ್ಲಿಂದ ಹೊರಗೆ ಬಂದ, ಮತ್ತೆ ಮನೆಯೊಳಗೆ ಹೋಗಿ, ದೇವರಿಗೆ ನಮಸ್ಕರಿಸಿದ. ಅಷ್ಟರಲ್ಲಿ ಎಣ್ಣೆಯ ಬಟ್ಟಲು ಎತ್ತಿಕೊಂಡು ಅಮ್ಮ ಅಲ್ಲಿ ಪ್ರತ್ಯಕ್ಷರಾದರು. ಪುಟ್ಟನಿಗೆ ಅವರು ಎಣ್ಣೆ ಹಚ್ಚಿದರು; ಸ್ನಾನ ಮಾಡಿಸಿದರು. ಅನಂತರ ಅವರೂ ಸ್ನಾನ ಮಾಡಿದರು, ಎಲ್ಲರೂ ಹೊಸಬಟ್ಟೆ ಧರಿಸಿಕೊಂಡರು, ದೋಸೆ ಕಜ್ಜಾಯಗಳು ಸಿದ್ಧವಾಗಿದ್ದವು. ದೇವರ ಪೂಜೆ ನಡೆಯಿತು: ಎಲ್ಲರೂ ದೇವರಿಗೆ ನಮಸ್ಕರಿಸಿದರು ಬಳಿಕ ಮನೆಯ ಕಿರಿಯರೆಲ್ಲ ಹಿರಿಯರಿಗೆ ನಮಸ್ಕರಿಸಬೇಕು ಅದು ಅವರ ಮನೆಯ ಪದ್ಧತಿ. ಅಪ್ಪ ಅಜ್ಜಿಗೆ ನಮಸ್ಕರಿಸಿದರು.

ಅಮ್ಮ ಅಪ್ಪನಿಗೂ ಅಜ್ಜಿಗೂ ನಮಸ್ಕರಿಸಿದರು. ಅಣ್ಣ ಮತ್ತು ಅಕ್ಕ ಆ ಮೂವರಿಗೂ ನಮಸ್ಕರಿಸಿದರು. “ಅಜ್ಜಿಗೆ ನಮಸ್ಕರಿಸು ಪುಟ್ಟ” ಅಪ್ಪ ಹೇಳಿದರು. ಪುಟ್ಟ ಅಜ್ಜಿಗೆ ನಮಸ್ಕರಿಸಿದ. ಅವರು ಅವನನ್ನು ಹರಸಿದರು. “ಅಪ್ಪನಿಗೆ ನಮಸ್ಕಾರ ಮಾಡು ಮಗೂ” ಅಜ್ಜಿ ಪುಟ್ಟನಿಗೆ ಹೇಳಿದರು. ಪುಟ್ಟ ಅಪ್ಪನಿಗೆ ನಮಸ್ಕಾರ ಮಾಡಿದ ಅವರೂ ಅವನನ್ನು ಹರಿಸಿದರು. “ಇನ್ನು ಅಮ್ಮನಿಗೆ ನಮಸ್ಕಾರ ಮಾಡು ಪುಟ್ಟಾ” ಅಣ್ಣ ಹೇಳಿದ. ಪುಟ್ಟ ಅಮ್ಮನಿಗೆ ನಮಸ್ಕರಿಸಿದ. ಅವರೂ ಅವನನ್ನು ಹರಿಸಿದರು. “ಇನ್ನು ಅಣ್ಣನಿಗೂ ಅಕ್ಕನಿಗೂ ನಮಸ್ಕರಿಸು ಮಗೂ” ಅಮ್ಮ ಹೇಳಿದರು. ಪುಟ್ಟ ಅವರಿಗೂ ನಮಸ್ಕರಿಸಿದ. ಅಣ್ಣ ಪುಟ್ಟನನ್ನು ಒಮ್ಮೆ ತಬ್ಬಿ ಹಿಡಿದ. ಅಕ್ಕ ಅವನ ಕೆನ್ನೆಗೊಂದು ಮುದ್ದು ಕೊಟ್ಟಳು. ದೇವರ ಕೋಣೆಯಿಂದ ಅವರೆಲ್ಲ ಹೊರಗೆಬಂದರು. ಅನಂತರ ಹಬ್ಬದೂಟದ ಸರದಿ. ಅದಕ್ಕಾಗಿ ಅವರು ಸಿದ್ಧತೆ ನಡೆಸತೊಡಗಿದರು.

ಎಲ್ಲರೂ ಉಲ್ಲಾಸದಲ್ಲಿದ್ದರು. ಆದರೆ ಪುಟ್ಟನ ಮುಖ ಮಾತ್ರ ಬಾಡಿ ಹೋಗಿತ್ತು. ಹೊಸ ಅಂಗಿ ಚಡ್ಡಿ ಹಾಕಿಕೊಂಡಿದ್ದರೂ ಅವನಲ್ಲಿ ಉತ್ಸಾಹ ಕಾಣಿಸಲಿಲ್ಲ. ಯಾವ ಚಟುವಟಿಕಲೆಯಲ್ಲೂ ಅವನು ತೊಡಗಿಕೊಳ್ಳಲಿಲ್ಲ. ತೆಪ್ಪಗೆ ಒಂದು ಮೂಲೆಯಲ್ಲಿ ಅವನು ಕೂತು ಬಿಟ್ಟಿದ್ದ. ಅವನಿಗೆ ಕೋಪ ಬಂದಿತ್ತು, ಬೇಸರ ಉಂಟಾಗಿತ್ತು ಕಾರಣ ಯಾರಿಗೂ ತಿಳಿಯಲಿಲ್ಲ. ಅವನೂ ಹೇಳಲಿಲ್ಲ.

ಎಲ್ಲರೂ ಊಟದ ಮನೆಗೆ ಬಂದರು ಅಲ್ಲಿ ದೋಸೆ-ಕಜ್ಜಾಯಗಳು ಅವರಿಗಾಗಿ ಕಾದಿದ್ದವು. ಎಲ್ಲರೂ ಬಟ್ಟಲುಗಳು ಮುಂದೆ ಕೂತರು ಆದರೆ ಪುಟ್ಟ ಮಾತ್ರ ಬರಲಿಲ್ಲ. ಅವನು ಕೂತಲ್ಲೇ ಕೂತಿದ್ದ.

“ಬಾ ಪುಟ್ಟಾ, ಊಟಮಾಡೋಣ. “ಅಪ್ಪ ಅವನನ್ನು ಕರೆದರು ಪುಟ್ಟ ಕೂತಲ್ಲಿಂದ ಮಿಸುಕಾಡಲಿಲ್ಲ.

ಅಮ್ಮ ಪುಟ್ಟನ ಬಳಿಗೆ ಬಂದರು.

“ಯಾಕೆ ಮರೀ ಊಟ ಮಾಡುವುದಿಲ್ಲವೇ? ಏನಾಯಿತು ನಿನಗೆ?” ಪ್ರೀತಿಯಿಂದ ಅವರು ಕೇಳಿದರು.

ಪುಟ್ಟ ಮೆಲ್ಲನೆ ಬಾಯಿ ಬಿಟ್ಟ “ಮತ್ತೆ…… ಮತ್ತೆ …… ನಾನು ಎಲ್ಲರಿಗೂ ನಮಸ್ಕಾರ ಮಾಡಿದೆ. ನನಗೆ ಮಾತ್ರ ಯಾರು ನಮಸ್ಕಾರ ಮಾಡಲಿಲ್ಲ ಯಾಕೆ?”

ಪುಟ್ಟನ ಬೇಸರದ ಕಾರಣ ಹೊರಬಿತ್ತು. ಅವನ ಮಾತುಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಅಜ್ಜಿ ಗದರಿಸಿ ಎಲ್ಲರನ್ನೂ ಸುಮ್ಮನಿರಿಸಿದರು.. ಮತ್ತೆ ಅವರು ಪುಟ್ಟನ ಬಳಿ ಸಾಗಿದರು, ಪ್ರೀತಿಯಿಂದ ಅವನ ಬೆನ್ನ ಮೇಲೆ ಕೈಯಾಡಿಸಿದರು. “ದೊಡ್ಡವರಿಗೆ ಚಿಕ್ಕವರು ನಮಸ್ಕಾರ ಮಾಡಬೇಕು ಮಗೂ. ಅದು ಕ್ರಮ. ಮುಂದಿನ ಬಾರಿ ನಿನಗೊಬ್ಬಳು ತಂಗಿ ಬರಲಿ ಆಗ ಅವಳು ನಿನಗೂ ನಮಸ್ಕಾರ ಮಾಡುತ್ತಾಳೆ. ನಾನೇ ಅವಳಿಗೆ ಹೇಳುತ್ತೇನೆ, ನಿನಗೆ ನಮಸ್ಕಾರ ಮಾಡಿಸುತ್ತೇನೆ. ಇಂದು ದೀಪಾವಳಿ, ಹಬ್ಬದ ದಿನ ಈ ದಿನ ಯಾರೂ ಕೋಪಿಸಿ ಕೊಳ್ಳಬಾರದು ಬಾ ಮಗೂ ದೋಸೆ ತಿನ್ನೋಣ” ಅವರು ಅವನನ್ನು ಮಜಾಯಿಸಿದರು.

ಪುಟ್ಟನ ಬೇಸರ ದೂರಾಯಿತು. ಅಜ್ಜಿಯೊಡನೆ ಮೆಲ್ಲನೆ ಎದ್ದು ಬಂದ. ಹಬ್ಬದೂಟ ಸಾಂಗವಾಗಿ ನೆರವೇರಿತು.