ಶ್ರೀಯುತ ಪಳಕಳ ಸೀತಾರಾಮ ಭಟ್ಟರು ಮಕ್ಕಳಿಗಾಗಿ ಬರೆದಿರುವ ಕವನಗಳು, ಕಥನ ಕವನಗಳು, ರೂಪಕ, ಕತೆಗಳು, ಪ್ರಹಸನ, ನಾಟಕ, ಜೀವನ ಚರಿತ್ರೆ, ಪತ್ರಲೇಖನ, ಚುಟುಕುಗಳು ನೇರವಾಗಿ ಮಕ್ಕಳ ಮನ ಮುಟ್ಟುವಂತಿದೆ. ಶಿಶು ಸಾಹಿತ್ಯ ಮಾಲೆಯ ಮೂಲಕ ಮಕ್ಕಳಿಗಾಗಿ ಸಿಹಿ ತಿನಿಸನ್ನು ನೀಡುತ್ತಾ ಬಂದಿರುವ ಶ್ರೀ ಪಳಕಳರ ಬಹುತೇಕ ಸತ್ಕೃತಿಗಳು ನಮ್ಮ ಪ್ರಕಟಣಾಲಯದ ಮೂಲಕ ಪ್ರಕಟವಾಗಿವೆ.

ಶಿಶು ಸಾಹಿತ್ಯ ಮಾಲೆಯ ಮೂಲಕ ಹೊಸ ಆಯಾಮವನ್ನೇ ಪರಿಕಲ್ಪಿಸಿ ಸಾರಸ್ವತ ಲೋಕದಲ್ಲಿ ಸ್ವಂತ ನಡಿಗೆಯಲ್ಲಿ ಮುನ್ನಡೆಯುತ್ತಿರುವ ಶ್ರೀ ಪಳಕಳ ಸೀತಾರಾಮ ಭಟ್ಟರ ಸೋದರರ ಸಾಹಸ ಮಕ್ಕಳ ಕತೆಗಳನ್ನು ನಮ್ಮ ಪ್ರಕಟಣಾಲಯ ೩೬೯ ನೇ ಕೃತಿಯಾಗಿ ಓದುಗರ ಸಮ್ಮುಖದಲ್ಲಿರಿಸಲು ಸಂತೋಷ ಪಡುತ್ತೇವೆ. ಶ್ರೀ ಪಳಕಳರಿಗೆ ನಮ್ಮ ವಂದನೆಗಳು.

ಕೃತಿಯ ಅಚ್ಚುಕಟ್ಟಿನ ಅಚ್ಚಿನ ದಿಶೆಯಲ್ಲಿ ಸಹಕರಿಸಿದ ಯುಗಪುರುಷದ ಕಾರ್ಯಕರ್ತರೆಲ್ಲರಿಗೂ ನಮ್ಮ ಹಾರ್ದಿಕ ಕೃತಜ್ಞತೆಗಳು.

ಕೊಡೆತ್ತೂರು ಭುವನಾಭಿರಾಮ ಉಡುಪ
ಪ್ರಕಾಶಕ
ಕಿನ್ನಿಗೋಳಿ