ತಮ್ಮಯ್ಯ ಒಬ್ಬ ಸಾಹುಕಾರ. ಅವನು ಭಾರೀ ಶ್ರೀಮಂತ, ಆದರೆ ಜಿಪುಣ. ಯಾರಿಗೂ ಅವನು ದಾನ, ಧರ್ಮ ಮಾಡಿದವನೂ ಅಲ್ಲ, ಸಾಲಗೀಲ ನೀಡಿದವನೂ ಅಲ್ಲ. ಸಹಾಯಕ್ಕಾಗಿ ಯಾರೂ ಅವನ ಬಳಿಗೆ ಹೋಗುತ್ತಿರಲಿಲ್ಲ. ಹೋದರೂ ಸಹಾಯ ಸಿಗುತ್ತಿರಲಿಲ್ಲ.

ಆ ಸಾಹುಕಾರನಿಗೆ ಯಾವ ಮನೋರಂಜನೆಯೂ ಬೇಕಾಗಿರಲಿಲ್ಲ. ಅವನಿಗಿದ್ದುದು ಒಂದೇ ಹುಚ್ಚು. ಬಂಗಾರದ ಬೆಳ್ಳಿಯ ನಾಣ್ಯಗಳನ್ನು ಕೂಡಿಡುವ ಹುಚ್ಚು. ಬಹಳಷ್ಟು ನಾಣ್ಯಗಳನ್ನು ಅವನು ಕೂಡು ಹಾಕಿದ್ದ. ಅವನ ಸಂಗ್ರಹ ಸಾಕಷ್ಟು ದೊಡ್ಡದಿತ್ತು. ಪೆಟ್ಟಿಗೆ ತುಂಬ ನಾಣ್ಯಗಳು ಅವನಲ್ಲಿದ್ದವು. ದಿನವೂ ಅವನು ಪೆಟ್ಟಿಗೆ ತೆರೆಯುತ್ತಿದ್ದ. ಅದರೊಳಗಿದ್ದ ನಾಣ್ಯಗಳನ್ನು ಕಣ್ಣು ತುಂಬ ನೋಡುತ್ತಿದ್ದ. ನೋಡಿ ಖುಶಿಪಡುತ್ತಿದ್ದ. ಇದು ಅವನ ನಿತ್ಯದ ಕಾರ್ಯಕ್ರಮವಾಗಿತ್ತು. ದಿನಗಳು ಉರುಳುತ್ತಿದ್ದವು.

ಒಂದು ಬಾರಿ ಸಾಹುಕಾರ ತನ್ನ ಮಾವನ ಮನೆಗೆ ಹೋಗಬೇಕಾಯಿತು. ಅಲ್ಲಿ ಅವನ ಭಾವನಿಗೆ ಮದುವೆ ಇತ್ತು. ಹಾಗಾಗಿ ಮನೆ ಮಂದಿಯನ್ನೆಲ್ಲ ಕೂಡಿಕೊಂಡು ಅವನು ಮದುವೆಗೆ ಹೋಗಿದ್ದ. ಕಾರ್ಯಕ್ರಮ ಮುಗಿದಾಗ ತುಂಬಾ ತಡವಾಗಿತ್ತು. ರಾತ್ರೆ ಊರಿಗೆ ಬರಲು ಸಾಧ್ಯವಾಗಲಿಲ್ಲ. ಮರುದಿನ ಅವರೆಲ್ಲ ಮನೆಗೆ ಹಿಂದಿರುಗಿದರು.

ಸಾಹುಕಾರ ಮನೆಯ ಮೆಟ್ಟಿಲು ಏರಿದ. ಬಾಗಿಲ ಕಡೆ ಅವನ ನೋಟ ಹರಿಯಿತು. ಆಗಲೇ ಅವನ ಎದೆ ಧಸಕ್ಕೆಂದಿತು. ಕಾರಣ ಗೊತ್ತೆ? ಮನೆಯ ಮುಂಬಾಗಿಲು ತೆರೆದುಕೊಂಡಿತ್ತು. ಗಾಬರಿಗೊಂಡ ಸಾಹುಕಾರ ಮನೆಯೊಳಗೆ ಓಡಿದ. ಅವನ ಕೋಣೆಯ ಬಾಗಿಲುಗಳೂ ತೆರೆದುಕೊಂಡಿದ್ದವು. ಕೋಣೆಯೊಳಗಿದ್ದ ಪೆಟ್ಟಿಗೆ ಕಾಣೆಯಾಗಿತ್ತು. ಸಾಹುಕಾರನ ತಲೆಗೆ ಸಿಡಿಲು ಬಡಿದಂತಾಯಿತು. “ಅಯ್ಯಯ್ಯಪ್ಪೋ ನನ್ನ ಪೆಟ್ಟಿಗೆ …….” ಎನ್ನುತ್ತ ಅವನು ಗೋಳಾಡತೊಡಗಿದ. ಮನೆಯವರೆಲ್ಲ ಅಲ್ಲಿ-ಇಲ್ಲಿ ಹುಡುಕಾಡತೊಡಗಿದರು. ಸುದ್ದಿ ಹರಡಿತು. ನೆರೆಕರೆಯವರು ಓಡಿ ಬಂದರು. ಪೆಟ್ಟಿಗೆಗಾಗಿ ಹುಡುಕಾಟ ಮುಂದುವರೆಯಿತು. ಬಹಳ ಹೊತ್ತಿನ ಹುಡುಕಾಟದ ಬಳಿಕ ಪೆಟ್ಟಿಗೆ ಕಾಣಸಿಕ್ಕಿತು. ತೋಟದ ಮೂಲೆಯಲ್ಲಿ ಅದು ಬಿದ್ದುಕೊಂಡಿತ್ತು. ಅದರ ಬೀಗವನ್ನು ಒಡೆದಿದ್ದರು. ನಾಣ್ಯಗಳನ್ನೆಲ್ಲ ದೋಚಿದ್ದರು.

ಪೆಟ್ಟಿಗೆಯನ್ನು ಕಂಡವರು ಅದನ್ನು ಮನೆಗೆ ಹೊತ್ತು ತಂದರು. ಸಾಹುಕಾರ ಖಾಲಿಪೆಟ್ಟಿಗೆಯನ್ನು ನೋಡಿದ. ಅವನು ದುಃಖ ಉಲ್ಬಣಿಸಿತು. “ಅಯ್ಯಯ್ಯೋ.. ನನ್ನ ರಾಶಿ ಹಣ ಹೋಯಿತಲ್ಲಾ… ದಿನವೂ ಅದನ್ನು ನೋಡಿ ಖುಷಿಪಡುತ್ತಿದ್ದೆನಲ್ಲಾ.. ಇನ್ನೇನು ಮಾಡಲಿ.” ಎದೆ ಬಡಿದುಕೊಂಡು ಅವನು ಗೋಳಾಡತೊಡಗಿದ.

ಆಗ ಯುವಕನೊಬ್ಬ ಕಟಕಿಯಾಡಿದ. “ಸಾಹುಕಾರಾ, ಸಮಾಧಾನ ತಂದುಕೋ,.. ಪೆಟ್ಟಿಗೆ ತುಂಬ ನಾಣ್ಯಗಳು ನಿನ್ನಲ್ಲಿದ್ದವು. ಆದರೆ

ನೀನು ಅವುಗಳನ್ನು ಸ್ವಂತಕ್ಕೂ ಉಪಯೋಗಿಸಿಲಿಲ್ಲ. ಪರರ ಉಪಕಾರಕ್ಕೂ ಬಳಸಲಿಲ್ಲ. ಬದಲಾಗಿ ಕಣ್ಣು ತುಂಬ ನೋಡಿ ತೃಪ್ತಿಪಡುತ್ತಿದ್ದೆ ಅಷ್ಟೆ. ಈಗ ನಾಣ್ಯಗಳು ಪರರ ಪಾಲಾಗಿವೆ. ನಿಜ ಆದರೇನು? ನೋಡಲು ಪೆಟ್ಟಿಗೆಯಂತೂ ಉಳಿದಿದೆಯಲ್ಲ? ದಿನವೂ ನೀನು ಅದನ್ನೇ ನೋಡಿ ಬಿಡು. ನೋಡಿ, ಖುಶಿ ಪಡು”

ಸಾಹುಕಾರ ನಾಚಿ ತಲೆ ತಗ್ಗಿಸಿದ. “ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ” ಈ ಮಾತು ಎಷ್ಟು ಸತ್ಯ!.