ಕಮಲಿ ಮತ್ತು ವಿಮಲಿ ಆತ್ಮೀಯ ಗೆಳತಿಯರು. ಊರ ಪ್ರೌಢ ಶಾಲೆಯಲ್ಲಿ ಅವರು ಕಲಿಯುತ್ತಿದ್ದರು. ಇಬ್ಬರೂ ಎಂಟನೆಯ ತರಗತಿ ವಿದ್ಯಾರ್ಥಿನಿಯರು. ಜೊತೆಯಾಗಿ ಅವರು ಶಾಲೆಗೆ ಹೋಗುತ್ತಿದ್ದರು, ಜೊತೆಯಾಗಿಯೇ ಮನೆಗೆ ಬರುತ್ತಿದ್ದರು. ಎಂದೂ ಅವರು ಒಬ್ಬರನ್ನೊಬ್ಬರು ಆಗಲಿ ಇರುತ್ತಿರಲಿಲ್ಲ.

ಅಂದು ಆದಿತ್ಯ ವಾರವಾಗಿತ್ತು. ಶಾಲೆಗೆ ರಜೆ ಇತ್ತು. ಹುಡುಗಿಯರಿಬ್ಬರೂ ಬೆಳಗ್ಗಿನ ಉಪಾಹಾರ ತೀರಿಸಿದರು, ಕೊಳೆಯಾದ ತಮ್ಮ ಬಟ್ಟೆಬರೆಗಳನ್ನು ತೆಗೆದುಕೊಂಡರು, ಅವುಗಳನ್ನು ಬಕೆಟಿನೊಳಗೆ ತುಂಬಿ, ತುಂಡು ಸಾಬೂನನ್ನು ಕೈಗೆತ್ತಿಕೊಂಡು ಅವರು ಬಾವಿಕಟ್ಟೆ ಕಡೆಗೆ ಹೆಜ್ಜೆ ಹಾಕಿದರು. ಆಗಲೇ ಕಮಲಿಯ ಅಮ್ಮ ಅವಳನ್ನು ಕರೆದರು “ಕಮಲೀ, ನನಗೆ ತುಂಬ ಕೆಲಸವಿದೆ ಮಗೂ ನನ್ನದೊಂದು ಸೀರೆಯನ್ನು ಸಹ ಒಗೆದು ತರುತ್ತೀಯಾ? ಅವರು ಕೇಳಿದರು.

“ಆಗಲಮ್ಮಾ, ನನಗೆ ತಿಳಿದಂತೆ ಒಗೆದು ತರುತ್ತೇನೆ” ಕಮಲಿ ಹೇಳಿದಳು. ತನ್ನ ಲಂಗ, ರವಕೆಗಳೊಡನೆ ಅವಳಮ್ಮನ ಸೀರೆಯನ್ನೂ ಇರಿಸಿದಳು. ಗೆಳತಿಯರಿಬ್ಬರೂ ಬಾವಿಕಟ್ಟೆಯ ಬಳಿಗೆ ಬಂದರು.

ಹಳೆಯ ಕಾಲದ ಬಾವಿ ಅದು. ಸುಮಾರು ಹದಿನೈದು ಅಡಿ ಆಳವಿತ್ತು. ಅದರಲ್ಲಿ ಏಳೆಂಟು ಅಡಿಗಳ ತನಕ ನೀರು ತುಂಬಿತ್ತು. ಬಾವಿಯ ಸುತ್ತ ಗೋಡೆ ಇರಲಿಲ್ಲ. ಅದರ ಬದಲು ಕಂಗಿನ ಸಲಿಕೆಗಳನ್ನು ಅಡ್ಡ ಕಟ್ಟಿದ್ದರು. ನೀರೆತ್ತಲು ರಾಟೆಯೂ ಇರಲಿಲ್ಲ. ಅಡಿಮರದ ಮೇಲೆ ಕಾಲಿಟ್ಟು ನೀರು ಸೇದಬೇಕಿತ್ತು. ಹಳೆಯದೊಂದು ಎಲ್ಯುಮಿನಿಯಂ ಕೊಡಪಾನ ಮತ್ತು ಹಗ್ಗ ಬಾವಿಯ ಬಳಿ ಬಿದ್ದುಕೊಂಡಿದ್ದವು.

ವಿಮಲಿ ಮೊದಲು ತನ್ನ ಬಕೆಟನ್ನು ಖಾಲಿ ಮಾಡಿದಳು. “ನಾನು ಬೇಗ ನೀರು ತಂದು ಬಿಡುತ್ತೇನೆ. ಮತ್ತೆ ನೀನು ತಾ” ಎನ್ನುತ್ತ ಅವಳು ಬಾವಿಯನ್ನು ಸಮೀಪಿಸಿದಳು. ಕೊಡವನ್ನು ನೀರಿಗೆ ಇಳಿಸಿದಳು. ಕಮಲಿ ನಿಧಾನವಾಗಿ ತನ್ನ ಬಕೆಟಿನ ಬಟ್ಟೆಗಳನ್ನು ಖಾಲಿಮಾಡತೊಡಗಿದಳು.

ಆಗಲೇ ‘ಲಟಕ್‌’ ಎಂಬ ಸದ್ದಿನೊಡನೆ ಬಾವಿಯ ಅಡ್ಡಮರ ತುಂಡಾಯಿತು. ವಿಮಲಿ ಹಿಡಿದಿದ್ದ ಹಗ್ಗ ಕೈಯಿಂದ ಜಾರಿ ಹೋಯಿತು. ನೀರಿನ ಕೊಡದ ಜೊತೆ ಅವಳು ಸಹ ದುಡುಮ್ಮನೆ ಬಾವಿಗೆ ಬಿದ್ದುಬಿಟ್ಟಳು.

ಸದ್ದು ಕೇಳಿ ಬೆಚ್ಚಿ ಬಿದ್ದ ಕಮಲಿ ಬಾವಿಯತ್ತ ನೋಡಿದಳು. ವಿಮಲಿ ಕಾಣಿಸಲಿಲ್ಲ. ಅಲ್ಲೇನು ನಡೆಯಿತೆಂಬುದನ್ನು ಅವಳಿಗೆ ಅರ್ಥವಾಯಿತು. ತತ್‌ಕ್ಷಣ ಅವಳು “ಅಮ್ಮಾ, ಅಪ್ಪಾ, ವಿಮಲಿ ಬಾವಿಗೆ ಬಿದ್ದದ್ದಾಳೆ. ಬೇಗ ಬನ್ನಿ…” ಎಂದು ಬೊಬ್ಬಿಟ್ಟಳು. ಹಾಗೆಯೇ ಬಾವಿ ಬದಿಗೆ ಧಾವಿಸಿ, ಕೆಳಗೆ ಬಗ್ಗಿ ನೋಡಿದಳು. ವಿಮಲಿ ಅಷ್ಟರಲ್ಲೇ ಒಂದು ಬಾರಿ ಮುಳುಗಿ, ಮೇಲೆ ಎದ್ದಿದ್ದಳು. ಗಾಬರಿಗೊಂಡ ಅವಳು ಆಸರೆಗಾಗಿ ಅಲ್ಲಿ ತಡಕಾಡುತ್ತಿದ್ದಳು. ಕಮಲಿ ಅತ್ತಿತ್ತ ಕಣ್ಣಾಡಿಸಿದಳು. ಬಾವಿಯ ಹಗ್ಗ ಕಾಣಿಸಲಿಲ್ಲ. ಫಕ್ಕನೆ ಅವಳಿಗೆ ತಾನು ತಂದಿದ್ದ ಸೀರೆಯ ನೆನಪಾಯಿತು. ಕ್ಷಣದೊಳಗೆ ಅವಳು ಸೀರೆಯನ್ನು ಎತ್ತಿಕೊಂಡಳು.

ಅದರ ಒಂದು ತುದಿಯನ್ನು ಅವಳು ತನ್ನ ಕೈಗೆ ಸುತ್ತಿಕೊಂಡಳು. ಇನ್ನೊಂದು ತುದಿಯನ್ನು ಬಾವಿಗೆ ಇಳಿಬಿಟ್ಟಳು. ಅಲ್ಲಿ ವಿಮಲಿ ಬಾವಿ ಬದಿಯ ಬಿರುಕಿನೊಳಗೆ ತನ್ನ ಬೆರಳುಗಳನ್ನು ತೂರಿಸಿದ್ದಳು. ಕೈಕಾಲು ಬಡಿಯುತ್ತ, ನೀರಲ್ಲಿ ಮುಳುಗಿ ಹೋಗದಿರಲು ಒದ್ದಾಡುತ್ತಿದ್ದಳು.

“ವಿಮಲೀ, ಈ ಸೀರೆಯ ತುದಿಯನ್ನು ಗಟ್ಟಿಯಾಗಿ ಹಿಡಿದುಕೋ. ಸ್ವಲ್ಪ ಹೊತ್ತು ಹಾಗೇ ಇರು. ಹೆದರಬೇಡ” ಕಮಲಿ ಧೈರ್ಯ ಹೇಳಿದಳು. ಮತ್ತೆ, “ವಿಮಲಿ, ಬಾವಿಗೆ ಬಿದ್ದಿದ್ದಾಳೆ. ವಿಮಲಿ ಬಾವಿಗೆ ಬಿದ್ದದ್ದಾಳೆ. ಬೇಗ ಬನ್ನಿ, ರಕ್ಷಿಸಿ…” ಎಂದು ಬೊಬ್ಬಿಟ್ಟಳು.

ಕೆಲವೇ ನಿಮಿಷಗಳಲ್ಲಿ ಜನ ಸೇರಿದರು. ಒಬ್ಬರು ಓಡಿ ಹೋಗಿ ಉದ್ದದ ಹಗ್ಗ ತಂದರು. ಇನ್ನೊಬ್ಬರು ಓಡಿ ಹೋಗಿ, ಕಂಗಿನ ತುಂಡೊಂದನ್ನು ತಂದು, ಅಡ್ಡ ಮರ ಹಾಕಿದರು. ಮತ್ತೊಬ್ಬರು ಒಂದು ಹೆಡಿಗೆ ತಂದು, ಹಗ್ಗದ ತುದಿಗೆ ಅದನ್ನು ಕಟ್ಟಿ ಬಾವಿಗೆ ಇಳಿಸಿದರು. “ವಿಮಲೀ, ಕಾಲು ಹೊರಗೆ ಹಾಕಿ, ಈ ಹೆಡಿಗೆಯಲ್ಲಿ ಕೂತು ಬಿಡು. ಹಗ್ಗವನ್ನು ಬಿಗಿಯಾಗಿ ಹಿಡಿದುಕೋ. ಹೆದರಬೇಡ. ನಾವು ಹೆಡಿಗೆಯನ್ನು ಮೇಲಕ್ಕೆ ಎಳೆಯುತ್ತೇವೆ. “ಅವರು ಕೂಗಿ ಹೇಳಿದರು.

ವಿಮಲಿಯ ಕೈಕಾಲುಗಳು ನಡುಗುತ್ತಿದ್ದವು. ಆದರೂ ಅವಳು ಬಹು ಪ್ರಯಾಸದಿಂದ ಹಗ್ಗವನ್ನು ಆಧರಿಸಿ, ಹೆಡಿಗೆಯಲ್ಲಿ ಕೂತುಕೊಂಡಳು. ನೆರೆದವರೆಲ್ಲ ಸೇರಿ ಹೆಡಿಗೆಯನ್ನು ಮೇಲಕ್ಕೆ ಎಳೆದರು. ಹೆಡಿಗೆ ಅಡ್ಡ ಮರದ ಬಳಿಗೆ ಬಂದಿತು. ಆಗ ಹಿರಿಯರೊಬ್ಬರು ಕೈ ನೀಡಿ, ವಿಮಲೆಯನ್ನು ಮೇಲಕ್ಕೆ ಎಳೆದು ಕೊಂಡರು.

ನೀರಿಗೆ ಬಿದ್ದಿದ್ದ ವಿಮಲಿ ಈಗ ಬಾವಿ ಕಟ್ಟೆಯಲ್ಲಿ ನಿಂತಿದ್ದಳು. ಒದ್ದೆಮುದ್ದೆಯಾಗಿದ್ದ ಅವಳ ದೇಹ, ಥರ ಥರ ನಡುಗುತ್ತಲೇ ಇದ್ದಿತು. ಕಮಲಿ ಕಣ್ಣಿಗೆ ಬಿದ್ದುದೇ ತಡ “ಕಮಲೀsss” ಎನ್ನುತ್ತ ವಿಮಲಿ ಗೆಳತಿಯನ್ನು ಬರಸೆಳೆದು ತಬ್ಬಿಕೊಂಡಳು. ತೊಟ್ಟಿಕ್ಕುತ್ತಿದ್ದ ಅವಳ ಕಣ್ಣೀರು ಜೀವ ಉಳಿಸಿದ ಗೆಳತಿಗೆ ಕೃತಜ್ಞತೆ ಸಲ್ಲಿಸುತ್ತಿತ್ತು. ಕಮಲಿಯ ಸಕಾಲಿಕ ಸಹಾಯ ಎಲ್ಲರ ಮೆಚ್ಚಿಕೆ ಗಳಿಸಿತ್ತು.