ರವಿ ಮತ್ತು ಶಂಕರ ಒಂದೇ ಮನೆಯವರು. ಅಣ್ಣ ತಮ್ಮಂದಿರ ಮಕ್ಕಳು. ರವಿ, ಅಣ್ಣನ ಮಗ; ಹಳ್ಳಿಯ ಮನೆಯಲ್ಲಿ ಇರುತ್ತಿದ್ದ. ಶಂಕರ ತಮ್ಮನ ಮಗ. ಅವನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಅವರಿಬ್ಬರೂ ಒಂದೇ ವಯಸ್ಸಿನವರು; ಹೈಸ್ಕೂಲ್‌ ವಿದ್ಯಾರ್ಥಿಗಳು. ಶಾಲೆಗೆ ರಜೆ ಸಿಕ್ಕಿದಾಗ ಶಂಕರ ಊರಿಗೆ ಬರುತ್ತಿದ್ದ. ಆಗ ಇಬ್ಬರಿಗೂ ಖುಶಿಯೋ ಖುಶಿ.

ಕೆಲವು ದಿನಗಳ ಹಿಂದೆ ಶಾಲೆಗಳಿಗೆ ಬೇಸಗೆ ರಜೆ ದೊರಕಿತ್ತು. ನಿನ್ನೆ ಶಂಕರ ಊರಿಗೆ ಬಂದಿದ್ದ. ರವಿಗೆ ಬಹಳ ಸಂತೋಷವಾಗಿತ್ತು. ಹಗಲಿಡೀ ಅವರು ಎಲ್ಲೆಲ್ಲೋ ಸುತ್ತಿದ್ದರು. ರಾತ್ರೆ ನಿದ್ರೆ ಬರುವ ತನಕವೂ ಅವರು ಮಾತುಕತೆ ನಡೆಸಿದ್ದರು. ಆಗಲೇ ಶಂಕರ ನೆನಪಿಸಿದ್ದ. “ನಾಳೆ ಮುಂಜಾನೆ ದೊಡ್ಡ ಬೆಟ್ಟಕ್ಕೆ ಹೋಗೋಣ. ಸೂರ್ಯೋದಯದ ನೋಟವನ್ನು ಕಣ್ತುಂಬ ನೋಡೋಣ”

“ಆಗಲಿ ಶಂಕರ್, ಅದಕ್ಕೇನಂತೆ” ರವಿ ಒಪ್ಪಿಗೆ ಸೂಚಿಸಿದ್ದ. ಆ ಬಳಿಕ ಅವರು ನಿದ್ದೆ ಹೋಗಿದ್ದರು.

ರವಿಯ ಮನೆ ಇದ್ದುದು ಗುಡ್ಡವೊಂದರ ತಪ್ಪಲಲ್ಲಿ. ಕಡಿದಾಗಿ, ಎತ್ತರವಾಗಿತ್ತು ಆ ಗುಡ್ಡ. ಅದನ್ನು ದೊಡ್ಡ ಬೆಟ್ಟ ಎನ್ನುತ್ತಿದ್ದರು. ಅದರ ಎದುರಿಗೆ ಇನ್ನೊಂದು ಗುಡ್ಡವಿತ್ತು. ಅದನ್ನು ಸಣ್ಣ ಬೆಟ್ಟ ಎಂದು ಕರೆಯುತ್ತಿದ್ದರು. ಅದರಲ್ಲಿ ಹಲವಾರು ಬಂಡೆಗಳಿದ್ದವು. ಕೆಲವು ಬಂಡೆಗಳ ಎಡೆಗಳಲ್ಲಿ ಗವಿಗಳಿದ್ದವು. ಎರಡು ಗುಡ್ಡಗಳಲ್ಲೂ ಮರಗಿಡ ಬಳ್ಳಿಗಳು ಬೆಳೆದಿದ್ದವು. ಆ ಗುಡ್ಡಗಳ ನಡುವಿನ ತಗ್ಗಿನಲ್ಲಿ ತೋಡೊಂದು ಹರಿಯುತ್ತಿತ್ತು. ರವಿ-ಶಂಕರರಿಗೆ ಆ ಗುಡ್ಡಗಳಲ್ಲಿ ತಿರುಗಾಡುವುದೆಂದರೆ ಬಹಳ ಇಷ್ಟ. ಹಾಗಾಗಿಯೇ ಶಂಕರ ಆ ಪ್ರಸ್ತಾವ ಎತ್ತಿದ್ದ. ರವಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದ.

ಮರುದಿನ ಮುಂಜಾನೆ ರವಿಗೆ ಬೇಗನೆ ಎಚ್ಚರವಾಯಿತು. ಅವನು ಶಂಕರ್ ನನ್ನು ಎಬ್ಬಿಸಿದ್ದ. ಇಬ್ಬರೂ ಹಲ್ಲುಜ್ಜಿ, ಮುಖ ತೊಳದರು” ಅಮ್ಮಾ, ನಾವು ಸ್ವಲ್ಪ ತಿರುಗಾಡಿ ಬರುತ್ತೇವೆ” ರವಿ ಅಮ್ಮನಿಗೆ ಹೇಳಿದ.

“ಐದು ನಿಮಿಷ ತಡೆಯಿರಿ. ನಾನು ಹಾಲು ಬಿಸಿಮಾಡಿ ತರುತ್ತೇನೆ” ಅದನ್ನು ಕುಡಿದು, ಮತ್ತೆ ಹೋಗುವಿರಂತೆ” ಅವರು ಹೇಳಿದರು. ಮಕ್ಕಳಿಬ್ಬರೂ ಹಾಲು ಕುಡಿದರು. ಬಳಿಕ ಹರಟೆ ಹೊಡೆಯುತ್ತ, ಗುಡ್ಡದತ್ತ ಹೆಜ್ಜೆ ಹಾಕಿದರು.

ದೊಡ್ಡ ಬೆಟ್ಟದ ನೆತ್ತಿಯ ಮೇಲೆ ಒಂದು ಮರ ಇತ್ತು. ಹತ್ತಾರು ಕೊಂಬೆಗಳಿಂದ ಕೂಡಿದ ಮರ ಅದು. ವಿಶಾಲವಾಗಿ ಹರಡಿಕೊಂಡಿತ್ತು. ಮಕ್ಕಳೂ ಅದನ್ನು ಹತ್ತುತ್ತಿದ್ದರು. ಅದರಲ್ಲಿ ಆಟವಾಡುತ್ತಿದ್ದರು. ಆ ಮರವೇರಿ ಕೂತರೆ ಊರೆಲ್ಲ ಕಾಣಿಸುತ್ತಿತ್ತು. ರವಿ ಮತ್ತು ಶಂಕರ್ ಬೆಟ್ಟದ ನೆತ್ತಿಗೆ ಬಂದರು. ತಮ್ಮ ಅಚ್ಚು ಮೆಚ್ಚಿನ ಮರವನ್ನು ಏರಿ ಕುಳಿತರು. ಸುತ್ತ ಮುತ್ತಣ ನೋಟಗಳನ್ನು ನೋಡಿದರು; ಸೂರ್ಯೋದಯದ ಚೆಲುವನ್ನು ಸವಿದರು.

ಆಗಲೇ, “ರವೀ, ನೋಡೋ ಅಲ್ಲಿ ಬಂಡೆಯ ಮಗ್ಗುಲಲ್ಲಿ ಯಾರೋ ನಿಂತಿದ್ದಾರಲ್ಲಾ!” ಶಂಕರ್ ಬೊಟ್ಟು ಮಾಡಿ ತೋರಿಸಿದ. ರವಿ ಅತ್ತ ನೋಟ ಹರಿಸಿದ. ಹೌದು, ಎದುರುಗಡೆ ಸಣ್ಣ ಬೆಟ್ಟದ ಬಂಡೆಯೊಂದರ ಮೇಲೆ ಯಾರೋ ಒಬ್ಬ ನಿಂತಿದ್ದಾನೆ. ಅವನು ಕಂದು ಬಣ್ಣದ ಅಂಗಿ-ಲುಂಗಿ ಧರಿಸಿದ್ದಾನೆ; ಕಳ್ಳನಂತೆ ಸುತ್ತ ಮುತ್ತ ನೋಡುತ್ತಿದ್ದಾನೆ. ರವಿ ಕಣ್ಣರಳಿಸಿ ನೋಡಿದ.  ಆ ಬಂಡೆ ಬಹಳ ದೂರದಲ್ಲೇನೂ ಇರಲಿಲ್ಲ. ಹಾಗಾಗಿ ಬಂಡೆಯ ಮೇಲೆ ನಿಂತವನ ಗುರುತು ಸಿಕ್ಕಿ ಬಿಟ್ಟಿತು ಅವನಿಗೆ. “ಹೋ, ಅದು ಸಂಕು.” ಅವನು ಮೆಲ್ಲನೆ ಉದ್ಗರಿಸಿದ.“ಸಂಕು? ಯಾರವನು? ಎಲ್ಲಿಯವನು?” ಶಂಕರ್ ಕುತೂಹಲ ತೋರಿದ. “ಶ್‌ss ಮೆಲ್ಲಗೆ ಮಾತಾಡು. ‘ಸಂಕು’ ಎಂದರೆ ಸಂಕಪ್ಪ. ಅದು ಅವನ ಪೂರ್ಣ ಹೆಸರು. ಕಳ್ಳತನವೇ ಅವನ ವೃತ್ತಿ. ಅವನೊಬ್ಬ ಗಂಧ ಕಳ್ಳ; ನಮ್ಮೂರ ವೀರಪ್ಪನ್‌. ಊರಲ್ಲಿದ್ದ ನೂರಾರು ಗಂಧದ ಮರಗಳನ್ನೆಲ್ಲ ಕಡಿದು ನಾಶ ಮಾಡಿದವ” ರವಿ ಪರಿಚಯ ನೀಡಿದ.

“ಇಷ್ಟು ಮುಂಜಾನೆ ಅವನಿಗೆ ಅಲ್ಲೇನು ಕೆಲಸ? ಅವನೇನು ಮಾಡುತ್ತಿದ್ದಾನೆ?” ಮಾಡುವುದೇನು? ರಾತ್ರೆ ಎಲ್ಲೋ ಗಂಧದ ಮರ ಕಡಿದಿದ್ದಾನೆ. ಹಗಲು ಅದನ್ನು ಸಾಗಿಸಲು ಆಗುವುದಿಲ್ಲವಲ್ಲ? ಮನೆಯಲ್ಲಿ ಇರಿಸಿಕೊಳ್ಳುವುದೂ ಅಪಾಯ ತಾನೆ? ಹಾಗಾಗಿ ಕದ್ದ ಮಾಲನ್ನು ಬಚ್ಚಿಡಲು ಬಂದಿರಬೇಕು. ಆ ಬಂಡೆಯ ಎಡೆಯಲ್ಲಿ ಗವಿ ಇದೆ. ಅದರಲ್ಲಿ ಗಂಧವನ್ನು ಬಚ್ಚಿಡುತ್ತಾನೆ. ರಾತ್ರೆ ಅದರ ಸಾಗಾಟ ನಡೆಸುತ್ತಾನೆ” ಅವನು ವಿವರಿಸಿದ. ಅಷ್ಟರಲ್ಲೇ ಬಂಢೆಯ ಮೇಲೆ ಕಾಣಿಸಿದವ ಕಣ್ಮರೆಯಾಗಿದ್ದ.

“ಬಾ ಶಂಕರ್. ಮೊದಲು ನಾವು ಮನೆಗೆ ಹೋಗೋಣ. ಮತ್ತೆ ನಾವು ಆ ಗವಿಯ ಶೋಧ ಮಾಡೋಣ. ಅಲ್ಲಿ ಗಂಧ ಇದೆ ಎಂದಾದರೆ, ಫೋನ್‌ ಮಾಡಿ ಪೋಲೀಸರಿಗೆ ವಾರ್ತೆ ಮುಟ್ಟಿಸೋಣ.” ರವಿ ಅವಸರಿಸಿದ. ಇಬ್ಬರೂ ಮರದಿಂದ ಕೆಳಗಿಳಿದರು, ಮನೆಗೆ ಧಾವಿಸಿದರು. ಒಡನೆ ರವಿ ಟಾರ್ಚ್ ಒಂದನ್ನು ಕೈಗೆ ತೆಗೆದುಕೊಂಡ, ಒಂದು ಕೋಲನ್ನು ಹಿಡಿದುಕೊಂಡ, ಇನ್ನೊಂದನ್ನು ಶಂಕರ್ ನಿಗೂ ನೀಡಿದ.

“ಈಗ ಸಂಕು ಅಲ್ಲಿಂದ ಹೊರಟು ಹೋಗಿರಬಹುದು. ಬಾ, ನಮ್ಮ ಪಾಲಿನ ಶೋಧಕಾರ್ಯ ಮುಗಿಸಿ ಬಿಡೋಣ.” ಎನ್ನುತ್ತ ಅವನು ಹೊರಟೇ ಬಿಟ್ಟ. ಶಂಕರ್ ಅವನನ್ನು ಹಿಂಬಾಲಿಸಿದ. ಸದ್ದಾಗದಂತೆ ಅವರು ಬಂಡೆಯತ್ತ ನಡೆದರು. ಅಲ್ಲಿಗೆ ಹೋಗಲು ಸರಿಯಾದ ದಾರಿ ಇರಲಿಲ್ಲ. ಪೊದೆಗಳನ್ನು ಬದಿಗೆ ಸರಿಸುತ್ತಾ, ಅವರು ಮುಂದೆ ಸಾಗಿದರು. ಅಲ್ಲಲ್ಲಿ ಹಾದಿ ಬದಿಯ ಗಿಡಗಳು ಆಕಡೆ ಈಕಡೆ ಮಾಲಿದ್ದವು. ಕೆಲವೆಡೆ ಅಸ್ಪಷ್ಟ ಹೆಜ್ಜೆ ಗುರುತುಗಳೂ ಕಾಣಿಸುತ್ತಿದ್ದವು. ಹುಡುಗರ ಮೈ ರೋಮಗಳು ನಿಮಿರಿ ನಿಂತವು. ಕಳ್ಳ ಹೆಜ್ಜೆಯಿಡುತ್ತಾ ಅವರು ಮುನ್ನಡೆದರು.

ಮಕ್ಕಳು ಗವಿಯ ಬಾಗಿಲಿಗೆ ಬಂದರು. ಒಳಗಿನಿಂದ ಸದ್ದೇನೂ ಕೇಳಿಸಲಿಲ್ಲ. ಅವರು ಗವಿಯ ಒಳ ನಡೆದರು, ಮೊದಲು ಬಗ್ಗಿಕೊಂಡು ಮತ್ತೆ ಅಂಬೆಗಾಲಿಟ್ಟು ಮುಂದುವರಿದರು. ಒಳಗೆ ಕತ್ತಲಿತ್ತು. ರವಿ ಟಾರ್ಚಿನ ಬೆಳಿಕನ್ನು ಹಾಯಿಸಿ, ನೋಡಿದ. ಗವಿಯ ಮೂಲೆಯಲ್ಲಿ ಮೂರು ಗೋಣಿಗಳಿದ್ದವು. ಮರದ ತುಂಡುಗಳನ್ನು ತುಂಬಿದ ಸಿಮೆಂಟ್‌ ಗೋಣಿಗಳವು. ಅವರು ಅವುಗಳನ್ನು ಮುಟ್ಟಿ ನೋಡಿದರು, ಮೂಸಿ ನೋಡಿದರು. ಗಂಧದ ಪರಿಮಳ ಅವರ ಮೂಗಿಗೆ ಬಡಿಯಿತು. ಅವರ ಊಹೆ ನಿಜವಾಗಿತ್ತು.

“ಹೂ, ಮನೆಗೆ ಹೋಗೋಣ. ಮುಂದಿನ ಕೆಲಸದ ಬಗ್ಗೆ ಯೋಚಿಸೋಣ” ರವಿ ಹೇಳಿದ. ಇಬ್ಬರೂ ಮನೆಗೆ ಧಾವಿಸಿದರು. ರವಿ ತನ್ನ ಅಪ್ಪನಿಗೆ ವಿಷಯವನ್ನು ತಿಳಿಸಿದ. ಅವರಿಗೆ ಖುಶಿಯಾಯಿತು. “ಮುಂದೇನು ಮಾಡುತ್ತೀರಿ?” ಅವರು ಕೇಳಿದರು.

“ಫೋನ್‌ ಮಾಡಿ, ಪೋಲೀಸರಿಗೆ ವಿಷಯ ತಿಳಿಸುತ್ತೇವೆ.” ಅವನು ಉತ್ತರ ಕೊಟ್ಟ.

“ಒಳ್ಳೆಯದು ಹಾಗೇ ಮಾಡಿರಿ” ಅವರು ಒಪ್ಪಿಗೆ ಸೂಚಿಸಿದರು.

ತಕ್ಷಣ ರವಿ ಫೋನ್‌ ಮಾಡಿ ಪೋಲೀಸರಿಗೆ ವಾತೆ ಮುಟ್ಟಿಸಿದ. ಸಬ್‌ ಇನ್ಸ್‌ಪೆಕ್ಟರರೇ ಫೋನ್‌ ಎತ್ತಿದರು. “ಒಳ್ಳೆಯ ಕೆಲಸ ಮಾಡಿದಿರಿ. ನಾವು ಈಗಲೇ ಬರುತ್ತೇವೆ” ಅವರು ಹೇಳಿದರು.

ಮುಂದೆ ಅರ್ಧ ತಾಸು ಕಳೆದಿತ್ತು ಅಷ್ಟೆ. ಆಗಲೇ ಪೋಲೀಸ್‌ ಜೀಪ್‌ ಅಲ್ಲಿ ಕಾಣಿಸಿಕೊಂಡಿತು. ಸಬ್‌ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಪೊಲೀಸರು ಅದರಿಂದ ಕೆಳಗಿಳಿದರು. ಮಕ್ಕಳೇ ಅವರನ್ನು ಗವಿಯ ಬಳಿಗೆ ಕರೆದೊಯ್ದರು. ರವಿಯ ಟಾರ್ಚ್ ಬೆಳಕು ಗವಿಯನ್ನು ಬೆಳಗಿತು. ಗಂಧದ ಕೊರಡುಗಳಿದ್ದ ಚೀಲಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಮತ್ತೆ ಅವರು ತಡಮಾಡಲಿಲ್ಲ. ತಕ್ಷಣ ಹೋಗಿ ಸಂಕುನ ಮನೆಗೆ ದಾಳಿಮಾಡಿದರು.

ಗಂಧಕಳ್ಳ ಸಂಕು ಹಾಯಾಗಿ ಮಲಗಿದ್ದ. ಪೊಲೀಸರು ಅವನನ್ನು ಎಬ್ಬಿಸಿ, ವಿಚಾರಣೆ ನಡೆಸಿದರು. ಅವನು ತನ್ನ ತಪ್ಪನ್ನು ಒಪ್ಪಿಕೊಂಡುದರಿಂದ ಅವರ ಕೆಲಸ ಸುಲಭವಾಯಿತು. ಅವರು ಅವನನ್ನು ಬಂಧಿಸಿದರು. ಕದ್ದ ಮಾಲು ಸಹಿತ ಅವರು ಅವನನ್ನು ಕರೆದೊಯ್ದರು. ಆ ಮೊದಲು ಮಕ್ಕಳ ಕೈ ಕುಲುಕಿ, ಅವರ ಸಾಹಸವನ್ನು ಕೊಂಡಾಡಲು ಅವರು ಮರೆಯಲಿಲ್ಲ.

ರವಿಶಂಕರರ ಸಾಹಸ ಕಾರ್ಯ ಊರವರ ಗಮನ ಸೆಳೆಯಿತು. ಅವರು ಪಂಚಾಯತು ಭವನದಲ್ಲಿ ಸಭೆ ಜರಗಿಸಿದರು. ಪಂಚಾಯತು ಪ್ರಮುಖರು ಅಧ್ಯಕ್ಷತೆ ವಹಿಸಿದ್ದರು. ಅವರು ಮಕ್ಕಳ ಸಾಹಸವನ್ನು ಕೊಂಡಾಡಿದರು. ಬಹುಮಾನ ನೀಡಿ, ಸನ್ಮಾನಿಸಿ, ಅವರಿಗೆ ಶುಭ ಕೋರಿದರು. ರವಿ-ಶಂಕರರ ಹೆಸರು ಆ ಊರಲ್ಲಿ ಮನೆ ಮಾತಾಯಿತು.