ಢಣ್‌ ಢಣ್‌ ಢಣ್‌ …. ಶಾಲೆಯ ಘಂಟೆ ಬಾರಿಸಿತು. “ಹೋss” ಎಂದು ಕಿರಿಚಾಡುತ್ತಾ ಮಕ್ಕಳು ತರಗತಿಗಳಿಂದ ಹೊರಬಿದ್ದರು. ಹತ್ತಿರದ ಮನೆಯವರು ಊಟಕ್ಕೆ ಓಡಿದರು. ಬುತ್ತಿ ತಂದ ಮಕ್ಕಳು ಬಾವಿಕಟ್ಟೆಗೆ ನಡೆದರು. ಗೋಪಿ ತನ್ನ ಬುತ್ತಿ ಎತ್ತಿಕೊಂಡ, ಎಂದಿನಂತೆ, “ಬಾರೋ ಸುಬ್ಬು” ಎಂದು ಗೆಳೆಯನನ್ನು ಕೂಗಿದ.

“ನನಗೆ ಹಸಿವಿಲ್ಲ ಕಣೋ, ನಾನು ಬುತ್ತಿ ತಂದಿಲ್ಲ.” ಸುಬ್ಬು ಉತ್ತರ ಕೊಟ್ಟ. ನಿನ್ನೆಯೂ “ಹಸಿವಿಲ್ಲ ಬುತ್ತಿ ತಂದಿಲ್ಲ” ಎಂದಿದ್ದೆ ನೀನು. ಇಂದೂ ಹಾಗೇ ಹೇಳುತ್ತೀಯಾ. ಯಾಕೋ, ಏನಾಯಿತೋ ನಿನಗೆ? ಬುತ್ತಿ ಯಾಕೆ ತಂದಿಲ್ಲ ಹೇಳು?” ಗೋಪಿ ಮತ್ತೆ ಕೇಳಿದ.

“ನನಗೆ ಹಸಿವಿಲ್ಲ ಎಂದೆನಲ್ಲ? ಅದಕ್ಕೇ ಬುತ್ತಿ ತಂದಿಲ್ಲ.” ಸುಬ್ಬು ಹೇಳಿದ. ಅವನ ಮುಖ ಬಾಡಿತ್ತು. ದನಿ ನಡುಗುತ್ತಿತ್ತು. ಕಣ್ಣುಗಳಲ್ಲಿ ನೀರು ತುಂಬಿತ್ತು. ಅವನು ಎಂದಿನಂತಿಲ್ಲ ಎನ್ನುವುದು ಗೋಪಿಗೆ ಗೊತ್ತಾಯಿತು.

“ಸುಬ್ಬೂ, ನೀನು ನನ್ನ ದೋಸ್ತಿ ಅಲ್ವೇನೋ. ನನ್ನಲ್ಲೂ ನೀನು ಯಾಕೆ ಗುಟ್ಟು ಮಾಡ್ತೀ, ಹೇಳು?” ಗೋಪಿ ಒತ್ತಾಯಿಸಿದ.

ಸುಬ್ಬು ಮೆಲ್ಲನೆ ಬಾಯಿ ಬಿಟ್ಟ. “ಎರಡು ದಿನಗಳಿಂದ ಅಪ್ಪನಿಗೆ ಕೆಲಸ ಇಲ್ಲ. ಮನೆಯಲ್ಲಿ ಅಕ್ಕಿ ಮುಗಿದಿದೆ. ಗಂಜಿ ಮಾಡಿಲ್ಲ. ಮತ್ತೆ ಬುತ್ತಿ ಹೇಗೆ ತರಲಿ? ಏನನ್ನು ತರಲಿ?” ಅವನು ನಿಜ ನುಡಿದಿದ್ದ.

“ಹಾಗಾದರೆ ಬೆಳಿಗ್ಗೆ ಏನೂ ತಿಂದಿಲ್ಲವೇ?” ಗೋಪಿ ಕೇಳಿದ.

“ತಿಂದಿಲ್ಲ, ಆದರೆ ಕುಡಿದಿದ್ದೇನೆ.” ಸುಬ್ಬು ಉತ್ತರ ಕೊಟ್ಟ.

“ಏನನ್ನು ಕುಡಿದಿದ್ದೆ?” ಗೋಪಿಯ ಪ್ರಶ್ನೆ.

“ಹಾಲು ಹಾಕದ ಕಾಫಿಯನ್ನು. ಹಾಲು ನಮ್ಮಲ್ಲಿಲ್ಲ. ಅದನ್ನು ತರಲು ಹಣ ಕೊಡಬೇಕಲ್ಲ? ಹಾಗಾಗಿ ಬರಿ ಕಾಫಿಯನ್ನೇ ನಾವು ಕುಡಿಯುವುದು.” ಸುಬ್ಬು ವಿವರಣೆ ನೀಡಿದ.

ಗೋಪಿಗೆ ಬಹಳ ಕೆಡುಕೆನಿಸಿತು. “ನೀನು ಬುತ್ತಿ ತರದಿದ್ದರೇನು? ನಾನು ತಂದಿದ್ದೇನಲ್ಲ? ಸದ್ಯ ಇರುವುದನ್ನು ಹಂಚಿ ತಿನ್ನೋಣ” ಅವನು ಸುಬ್ಬುವನ್ನು ಕರೆದ.” ಬೇಡ, ನಾನು ಬರುವುದಿಲ್ಲ.” ಎಂದ ಸುಬ್ಬು.

ಗೋಪಿ ಬಿಡಲಿಲ್ಲ. “ನೀನು ಬರದಿದ್ದರೆ ಚಿಂತಿಲ್ಲ. ನಾನೂ ಬುತ್ತಿ ಉಣ್ಣುವುದಿಲ್ಲ.” ಅವನೂ ಗಟ್ಟಿಯಾಗಿ ಕೂತು ಬಿಟ್ಟ. ಹತ್ತು ನಿಮಿಷ ಕಳೆದು ಹೋಯಿತು.

“ಸುಮ್ಮನೆ ಹಠ ಹಿಡಿಯ ಬೇಡ ಗೋಪಿ. ನೀನಂತೂ ಬುತ್ತಿ ತಂದಿದ್ದೀಯಾ ಮತ್ತೆ ನೀನೇಕೆ ಉಪವಾಸ ಮಾಡಬೇಕು?” ಸುಬ್ಬು ಪ್ರಶ್ನೆ ಹಾಕಿದ.

ನಾವಿಬ್ಬರೂ ದೋಸ್ತಿಗಳು, ಒಟ್ಟಿಗೇ ಶಾಲೆಗೆ ಬರುವವರು, ಒಂದೇ ತರಗತಿಯಲ್ಲಿ ಕಲಿವವರು. ನಾನು ಬುತ್ತಿ ತಂದಿದ್ದೇನೆ. ಇದ್ದುದನ್ನು ಹಂಚಿ ತಿನ್ನೋಣ ಎಂದರೆ ನೀನೇಕೆ ಬೇಡ ಎನ್ನುತ್ತೀ? ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೇ? ನೀನು ನನ್ನ ದೋಸ್ತಿ ಅಲ್ಲವೇ? ಗೋಪಿ ವಾದ ಮಾಡಿದ.

ಕೊನೆಗೆ ಸುಬ್ಬು ತಾನೇ ಸೋಲಬೇಕಾಯಿತು.” ಆಗಲಿ ಗೋಪಿ, ನೀನು ಹೇಳಿದಂತೇ ಆಗಲಿ. ನಾನೂ ನಿನ್ನ ಜೊತೆ ಬರುತ್ತೇನೆ, ಬುತ್ತಿ ಉಣ್ಣುತ್ತೇನೆ.” ಎನ್ನುತ್ತಾ ಅವನು ಎದ್ದು ಬಂದ.

ಗೆಳೆಯರಿಬ್ಬರೂ ಬಾವಿಕಟ್ಟೆಗೆ ಬಂದರು, ಕೈಕಾಲು ತೊಳೆದುಕೊಂಡರು.

ಗೋಪಿ ಬುತ್ತಿಯ ಮುಚ್ಚಳ ತೆಗೆದ, ಬುತ್ತಿಯಲ್ಲಿದ್ದ ಎರಡು ಇಡ್ಲಿಗಳಲ್ಲಿ ಒಂದನ್ನು ಅದರಲ್ಲಿಟ್ಟ, ಸ್ವಲ್ಪ ಚಟ್ನಿಯನ್ನೂ ಹಾಖಿದ, ಅದನ್ನು ಸುಬ್ಬುಗೆ ನೀಡಿದ. ಇಬ್ಬರೂ ಒಂದೊಂದು ಇಡ್ಲಿ ತಿಂದರು. ಕೈ ಬಾಯಿ ತೊಳೆದು ಕೊಂಡರು.

“ನನ್ನಿಂದಾಗಿ ನಿನಗೆ ಅರೆಹೊಟ್ಟೆಯಾಯಿತು.” ಸುಬ್ಬು ಪೇಚಾಡಿಕೊಂಡ.

“ಹಂಚಿ ಉಂಡರೆ ರುಚಿ ಹೆಚ್ಚಂತೆ. ನಮ್ಮಮ್ಮ ಹೇಳುತ್ತಾರೆ. ನನಗೆ ನಿಜಕ್ಕೂ ಸಂತೋಷವಾಗಿದೆ, ಹೊಟ್ಟೆ ತುಂಬಿದೆ. ನೀನೇನೂ ಯೋಚಿಸಬೇಡ.” ಗೋಪಿ ಹೇಳಿದ.

“ಏನೇ ಆಗಲಿ. ನೀನು ಶಾಲೆಗೆ ಬರದಿರಬೇಡ ಸುಬ್ಬು. ನಾನಂತೂ ಬುತ್ತಿ ತರುತ್ತೇನೆ. ಇರುವುದನ್ನು ಹಂಚಿ ತಿನ್ನೋಣ. ನೀನು ನನ್ನ ದೋಸ್ತಿ ಹೌದಾದರೆ ಇದನ್ನು ಒಪ್ಪಿಕೊಳ್ಳಬೇಕು.” ಅವನು ಮಾತು ಸೇರಿಸಿದ.

“ಉಪಕಾರ ಮಾಡಿದೆ ಗೋಪೀ.ನನಗೆ ನಿನ್ನಂಥ ದೋಸ್ತಿ ಬೇರೆ ಯಾರಿದ್ದಾರೆ ಹೇಳು?” ಸುಬ್ಬು ಕೇಳಿದ. ಅವನ ಕಣ್ಣುಗಳು ತುಂಬಿ ಬಂದಿದ್ದವು. ಮಾತು ಮೌನವಾಯಿತು. ಇಬ್ಬರು ತರಗತಿಗೆ ಹಿಂದಿರುಗಿದರು. ಗೋಪಿ ತುಂಬ ಖುಶಿಯಲ್ಲಿದ್ದ.

ಸಂಜೆ ಶಾಲೆ ಬಿಟ್ಟು ಮನೆ ಬರುವಾಗಲೂ ಗೋಪಿ ಸುಬ್ಬನ ಬಗ್ಗೆ ಯೋಚಿಸುತ್ತಿದ್ದ. ಅವನಿಗಾಗಿ ತಾನು ಏನಾದರೂ ಮಾಡಬೇಕಲು. ಎನ್ನುವುದು ಅವನ ಬಯಕೆಯಾಗಿತ್ತು. ಅಂತೂ ಆ ದಿನ ಹಾಗೆ ಕಳೆಹೋಯಿತು.

ಮರುದಿನ ಗೋಪಿ ಶಾಲೆಗೆ ಹೊರಡುವ ಸಮಯ. ಅವನ ಊಟ ಆಗಲೇ ಮುಗಿದಿತ್ತು. ಅವನು ಅಂಗಿ ಚಡ್ಡಿ ಧರಿಸಿದ್ದ ಪುಸ್ತಕಗಳನ್ನು ಚೀಲದಲ್ಲಿ ತುಂಬಿದ್ದ. ಇನ್ನು ಬುತ್ತಿ ಸಿದ್ಧವಾಗಬೇಕಲ್ಲ?” ಅಮ್ಮಾ, ಬುತ್ತಿ ಹಾಕಿದೆಯಾ?” ಅವನು ವಿಚಾರಿಸಿದ.

“ಹೂಂ, ಹಾಕುತ್ತಿದ್ದೇನೆ” ಅಮ್ಮ ಉತ್ತರ ಕೊಟ್ಟರು. ಗೋಪಿ ಅಡುಗೆ ಮನೆಗೆ ನಡೆದ. “ಅಮ್ಮ, ನನ್ನ ಬುತ್ತಿಗೆ ಒಂದು ಇಡ್ಲಿ ಜಾಸ್ತಿ ಹಾಕುತ್ತೀಯಾ” ಅವನು ಅಮ್ಮನನ್ನು ಕೇಳಿದ.

ಅಮ್ಮನಿಗೆ ಆಶ್ಚರ್ಯವಾಯಿತು. ಮಗನ ಬುತ್ತಿಯಲ್ಲಿ ಅವರು ಎರಡು ಇಡ್ಲಿ ಇಡುತ್ತಿದ್ದರು. “ಅದು ಹೆಚ್ಚಾಯಿತು, ಒಂದೇ ಇಡ್ಲಿ ಸಾಕು ನನಗೆ”? ಎನ್ನುತ್ತಿದ್ದ ಗೋಪಿ. ಆದರೂ ಅಮ್ಮ ಎರಡು ಇಡ್ಲಿ ಹಾಕಿಯೇ ಹಾಕುತ್ತಿದ್ದರು. ಒಂದೊಂದು ಬಾರಿ ಅದರಲ್ಲಿ ಅರ್ಧ ಇಡ್ಲಿ ಹಿಂದೆ ಬರುವುದು ಇತ್ತು. ಹಾಗಿರುವಾಗ “ಇಂದು ಒಂದು ಇಡ್ಲಿ ಹೆಚ್ಚು ಹಾಕುತ್ತಿಯಾ?” ಎಂದು ಮಗ ಕೇಳುತ್ತಿದ್ದಾನೆ. ಅಮ್ಮನಿಗೆ ಬಹಳ ಸಂತೋಷವಾಯಿತು. “ಏನು, ಪುಟ್ಟಾ ನಿನಗೀಗ ಹಸಿವು ಹೆಚ್ಚಾಗಿದೆಯಾ? ಖುಶಿಯಾಯಿತು ಬಿಡು, ನೀನು ತಿನ್ನುವೆಯಾದರೆ ಒಂದಲ್ಲ ಎರಡು ಇಡ್ಲಿ ಹೆಚ್ಚು ಹಾಕುತ್ತೇನೆ.” ಅವರು ಹೇಳಿದರು.

“ಎರಡು ಬೇಡಮ್ಮಾ, ಒಂದು ಇಡ್ಲಿ ಹೆಚ್ಚು ಇರಲಿ. ಅಷ್ಟು ಸಾಕು ನನಗೆ” ಎಂದ ಗೋಪಿ.

“ಅಂದರೆ ಒಟ್ಟು ಮೂರು ಇಡ್ಲಿ ತಾನೇ? ಖಂಡಿತ ಹಾಕುತ್ತೇನೆ.

ಆದರೆ ಒಂದು, ಅದನ್ನೆಲ್ಲ ನೀನು ತಿನ್ನಬೇಕು. ಅರ್ಧಕ್ಕರ್ಧ ಹಿಂದೆ ತರಬಾರದು ಮತ್ತೆ.” ಅಮ್ಮ ಷರತ್ತು ಹಾಕಿದರು.

ಈಗ ಗೋಪಿಗೆ ಒಂದು ಸಮಸ್ಯೆ ಎದುರಾಯಿತು, ಅದೇನು ಗೊತ್ತೆ? ಶಾಲೆ ದೂರವಿದ್ದುದರಿಂದ ಅವನು ಬುತ್ತಿ ಒಯ್ಯುತ್ತಿದ್ದ. ಆದರೆ ಎರಡು ಇಡ್ಲಿಗಿಂತ ಹೆಚ್ಚು ಅವನು ತಿನ್ನುತ್ತಿರಲಿಲ್ಲ. ಆದರೆ ಇಂದು ಮೂರು ಇಡ್ಲಿ ಬೇಕೆಂದು ಅವನೇ ಹೇಳಿದ್ದಾನೆ.

ಎಲ್ಲವನ್ನೂ ತಿನ್ನಬೇಕು. ಹಿಂದೆ ತರಬಾರದು ಎನ್ನುವುದು ಅಮ್ಮನ ಷರತ್ತು. ಆಗಲಿ ಎಲ್ಲವನ್ನೂ ತಿನ್ನುತ್ತೇನೆ” ಎಂದು ಅಮ್ಮನಲ್ಲಿ ಸುಳ್ಳು ಹೇಳಬೇಕೆ? ಹಾಗೆ ಹೇಳಬಹುದೇ? ಅದು ತಪ್ಪಲ್ಲವೇ? ಅವನು ಯೋಚನೆಗೆ ಒಳಗಾದ.

“ಏನೋ ಗೋಪೀ, ಯಾಕೆ ಸುಮ್ಮನಿದ್ದೀಯಾ? ಬುತ್ತಿಗೆ ಹಾಕಿ ಕೊಟ್ಟದನ್ನೆಲ್ಲ ತಿನ್ನುತ್ತೀಯಷ್ಟೇ:” ಅವರು ಇನ್ನೊಮ್ಮೆ ಕೇಳಿದರು. “ಅಮ್ಮಾ, ನಾನು ತಿನ್ನುವುದು ಎರಡೇ ಇಡ್ಲಿ ….“ಗೋಪಿ ರಾಗ ಎಳೆದ“ಮತ್ತೆ ‘ಮೂರು ಬೇಕಲು’ ಎಂದೆಯಲ್ಲ?

ಯಾಕೆ? ಯಾರಿಗದು? ಅವರು ಕುತೂಹಲ ತೋರಿದರು.

“ಅದೂ…..ಅದೂ …….” ಗೋಪಿ ತಡವರಿಸಿದ, “ಏನೋ ಅದು? ಯಾಕೆ ತಡವರಿಸುತ್ತೀ? ನೀನು ತಿನ್ನುವುದು ಎರಡೇ ಇಡ್ಲಿ ಎನ್ನುತ್ತೀ. ಬುತ್ತಿಗೆ ಮಾತ್ರ ಮೂರು ಹಾಕಿಬಿಡಿ ಎನ್ನುತ್ತೀ. ಏನಿದು ವಿಚಿತ್ರ? ನಿಜಸಂಗತಿ ಹೇಳ ಬಾರದೇ?” ಅಮ್ಮಾ ಒತ್ತಾಯಿಸಿದರು. ಗೋಪಿ ಬಾಯಿಬಿಡಲೇ ಬೇಕಾಯಿತು.

“ಅಮ್ಮಾ, ನಮ್ಮ ಸುಬ್ಬು ಇದ್ದಾನಲ್ಲ? ಕೆಲವು ದಿನ ಅವನ ಅಪ್ಪನಿಗೆ ಕೆಲಸ ಇರುವುದಿಲ್ಲ. ಆಗ ಉಣ್ಣಲಿಕ್ಕೂ ಕಷ್ಟ ಅವರಿಗೆ. ಎಷ್ಟೋ ಬಾರಿ ಗಂಜಿ ಸಹ ಉಣ್ಣದೆ ಶಾಲೆಗೆ ಬರುತ್ತಾನೆ. ಮತ್ತೆ ಬುತ್ತಿ ಹೇಗೆ ತಂದಾನು? ಅವನು ಬುತ್ತಿ ತರದ ದಿನ, ಒತ್ತಾಯಮಾಡಿ ಅವನನ್ನು ನಾನು ಎಬ್ಬಿಸುತ್ತೇನೆ. ನನ್ನ ಬುತ್ತಿಯಲ್ಲಿ ಇರುವುದನ್ನು ಅವನ ಜೊತೆ ಹಂಚಿ ತಿನ್ನುತ್ತೇನೆ. ದಿನವೂ ಬುತ್ತಿಯಲ್ಲಿ ನೀನು ಎರಡು ಇಡ್ಲಿ ಅಥವಾ ದೋಸೆ ಇರಿಸುತ್ತಿಯಲ್ಲ? ಎರಡರ ಬದಲು, ಮೂರು ಇರಸಿದರೆ ನಾವಿಬ್ಬರು ಹಂಚಿ ತಿನ್ನುತ್ತೇವೆ. ಅದಕ್ಕಾಗಿ ಹಾಗೆ ಹೇಳಿದೆ, ಅಮ್ಮಾ ….“ಗೋಪಿ ಮಾತು ನಿಲ್ಲಿಸಿದ. ಅಮ್ಮಾ ಏನು ಹೇಳುತ್ತಾಳೋ ಎಂಬ ಹೆದರಿಕೆ ಅವನಿಗೆ. ಕಾತರದಿಂದ ಅವನು ಅಮ್ಮನ ಮುಖವನ್ನೆ ದಿಟ್ಟಿಸುತ್ತಿದ್ದ.

ಮಗನ ಮಾತನ್ನು ಅಮ್ಮ ಕಿವಿಗೊಟ್ಟು ಕೇಳಿದರು. ಅವನ ಒಳ್ಳೆಯ ಬುದ್ದಿಗಾಗಿ ಅವರು ಹೆಮ್ಮೆಪಟ್ಟರು. ಮಗೂ, ನೀನು ಸತ್ಯವನ್ನೇ ಆಡಿದ್ದೀಯಾ ಕಷ್ಟದಲ್ಲಿರುವ ಗೆಳೆಯನಿಗೆ ಸಹಾಯವನ್ನೂ ಮಾಡಿದ್ದೀಯಾ ನಿಜಕ್ಕೂ ನನಗೆ ಸಂತೋಷವಾಗಿದೆ. ನಮಗೆ ಶಕ್ತಿ ಇರುವಷ್ಟು ಕಾಲ ಇಂಥ ಕೆಲಸ ನಡೆಯುತ್ತಿರಲಿ” ಅವರು ಹೇಳಿದರು. ಮತ್ತೆ ಬುತ್ತಿಗೆ ಇಡ್ಲಿಗಳನ್ನು ತುಂಬಿ, ಮಗನ ಕೈಗಿತ್ತರು.” ಇದರಲ್ಲಿ ನಾಲ್ಕು’ ಇಡ್ಲಿಗಳಿವೆ. ನಿನಗೆರಡು ನಿನ್ನ ಗೆಳೆಯನಿಗೆರಡು.” ಅವರೆಂದರು.“ಹಾಗಾದರೆ ಇನ್ನು ಇಬ್ಬರಿಗೂ ಬುತ್ತಿ ನಾನೇ ತರುತ್ತೇನೆ ಎಂದು ಸುಬ್ಬುಗೆ ಹೇಳಿಬಿಡಲೇ?” ಉತ್ಸಾಹದಿಂದ ಗೋಪಿ ಕೇಳಿದ. ಅಮ್ಮ ಕೊಡುವುದನ್ನು ಖಾತರಿಪಡಿಸಿಕೊಳ್ಳುವ ಉದ್ದೇಶ ಅವನದು.

“ಆಗಲಿ ಮಗೂ. ಸುಬ್ಬು ಚೆನ್ನಾಗಿ ಕಲಿಯಲಿ-ಅವನ ಕಷ್ಟದ ದಿನಗಳು ಮುಗಿಯುವವರೆಗೂ ನಮ್ಮಿಂದಾಗುವ ಸಹಾಯ ಮಾಡೋಣ ಅಮ್ಮ ಭರವಸೆ ನೀಡಿದರು. “ನನಗೀಗ ತುಂಬ ಖುಶಿಯಾಯಿತಮ್ಮಾ” ಹಿಗ್ಗಿ ಕುಣಿದಾಡುತ್ತ, ಗೋಪಿ ಅಮ್ಮನ ಕೈಗೊಂದು ಮುದ್ದಿನ ಮುದ್ರೆ ಒತ್ತಿದ.