ಹೆಸರು: ದೇವಿಕ
ಊರು: ಅರಳಕುಪ್ಪೆ

 

ಪ್ರಶ್ನೆ: ಡಾ. ಶರತ್ಕುಮಾರ್ ಮತ್ತು ಸುಬ್ರಹ್ಮಣ್ಯರವರಿಗೆ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಪ್ರಶ್ನೆ ಸೋದರ ಮಾವನನ್ನು ಮದುವೆಯಾಗಬಹುದೇ? ಮತ್ತು ಅಕ್ಕನ ಮಗನಿಗೆ ತಮ್ಮನ ಮಗಳನ್ನು ಅಥವಾ ಅಣ್ಣನ ಮಗನಿಗೆ ತಂಗಿಯ ಮಗಳನ್ನು ಮದುವೆ ಮಾಡುವುದರಿಂದ ಸಮಸ್ಯೇ ಇದೆಯೇ?

ಉತ್ತರ: ಹಿಂದಿನ ಕಾಲದಿಂದ ಇಂದಿನ ಕಾಲದವರೆಗೂ ರಕ್ತ ಅಥವಾ ಸೋದರ ಸಂಬಂಧಿಗಳಲ್ಲಿ ವಿವಾಹವಾಗುವುದನ್ನು ಕಾಣುತಿದ್ದೇವೆ. ಸೋದರ ಸಂಬಂಧಿಗಳಲ್ಲಿ ಮದುವೆ ಎಂದರೆ ಸೋದರ ಮಾವನ ಮಕ್ಕಳನ್ನು, ಸೋದರ ಅತ್ತೆಯ ಮಕ್ಕಳನ್ನು, ಅಕ್ಕನ ಮಕ್ಕಳನ್ನೂ ಮದುವೆ ಆಗುವ ಪದ್ಧತಿ ಹಿಂದೂ ಸಂಸ್ಕೃತಿಯಲ್ಲಿದೆ. ಅದರಂತೆ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳನ್ನು ಮದುವೆ ಆಗುವ ಪದ್ಧತಿ ಮುಸ್ಮಿಂ ಜನಾಂಗದಲ್ಲಿದೆ. ಇದನ್ನೇ ಸೋದರ ಸಂಬಂಧಿಗಳಲ್ಲಿ ವಿವಾಹ ಅಥವಾ ರಕ್ತ ಸಂಬಂಧಿಗಳಲ್ಲಿ ವಿವಾಹ ಎಂದು ಕರೆಯಲಾಗುವುದು. ಆದರೆ ಸೋದರ ಸಂಬಂಧಿಗಳಲ್ಲಿ ಅಥವಾ ರಕ್ತ ಸಂಬಂಧಿಗಳಲ್ಲಿ ವಿವಾಹವಾಗುವದು ವೈಜ್ಙಾನಿಕವಾಗಿ ಎಷ್ಟು ಉಚಿತ ಎಂಬುದನ್ನು ಅರ್ಥೈಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ಸೋದರ ಸಂಬಂಧಿಗಳಲ್ಲಿ ವಿವಾಹವಾಗುವುದರಿಂದ ಹಲವಾರು ದುಷ್ಪರಿಣಾಮಗಳಾಗುತ್ತವೆ. ಅವುಗಳೆಂದರೆ, ರಕ್ತ ಸಂಬಂಧಿ ದಂಪತಿಗಳಿಗೆ ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆ ಉಂಟಾಗುವ ಸಾಧ್ಯತೆ ಸಾಮಾನ್ಯ ದಂಪತಿಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿರುತ್ತದೆ. ಈ ದಂಪತಿಗಳಲ್ಲಿ ಗರ್ಭಪಾತಗಳೂ ಅಧಿಕ. ಬಂಜೆತನವೂ ಸಹ ಹೆಚ್ಚಾಗಿ ಬರುತ್ತದೆ. ದಾಂಪತ್ಯ ಸುಖದಿಂದಲೂ ಅತೃಪ್ತರಾಗುವ ಈ ದಂಪತಿಗಳಿಗೆ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಅಂಗಹೀನತೆ, ಹೃದಯದ ಖಾಯಿಲೆಗಳು, ಶ್ವಾಸಕೋಶದ ತೊಂದರೆಗಳು, ವಾಕ್ ಮತ್ತು ಶ್ರವಣ ದೋಷ ಮುಂತಾದ ತೊಂದರೆಗಳು ಉಂಟಾಗುತ್ತವೆ. ಕೆಲವು ಪ್ರಕರಣಗಲಲ್ಲಿ “ಸಂತಾನಹೀನತೆ”ಯು ಉಂಟಾಗಿ ವಂಶಾಭಿವೃದ್ಧಿಯೇ ಇಲ್ಲದಂತಾಗಿ ಕುಟುಂಬದಲ್ಲಿ ಅಶಾಂತ ವಾತಾವರಣದಿಂದಾಗಿ ಎಲ್ಲರೂ ಮಾನಸಿಕ ಕ್ಷೋಭೆಗೆ ಒಳಗಾಗಿರುವುದನ್ನು ನಾವು ಗಮನಿಸಿದ್ದೇವೆ.

ಇದರಿಂದಾಗಿ ಸಾಧ್ಯವಾದ ಮಟ್ಟಿಗೆ ರಕ್ತ ಸಂಬಂಧಿಗಳು ಪರಸ್ಪರ ವಿವಾಹವಾಗುವುದನ್ನು ತಪ್ಪಿಸುವುದು ಒಳ್ಳೆಯದು. ಇದರಿಂದ ಅವರುಗಳ ಕುಟುಂಬ ಮಾತ್ರವಲ್ಲ, ಸಮಾಜವೂ ಸಹ ನೆಮ್ಮದಿಯಿಂದ ಬಾಳ್ವೆ ನಡೆಸಬಹುದು.

ಅನೇಕ ಸಂಧರ್ಭಗಳಲ್ಲಿ ಮದುವೆಯಾದ ರಕ್ತ ಸಂಬಂಧಿಗಳಲ್ಲಿ ಇಂತಹ ಯಾವುದೇ ವಿಕೃತಿಗಳು ಕಂಡುಬಾರದಿರುವ ಪ್ರಕರಣಗಳೂ ಇವೆ. ಆದ್ದರಿಂದ ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಸಿಗಬಹುದಾದ ಕೇವಲ ಒಂದೆರೆಡು ಪ್ರಕರಣಗಳಿಂದ ಇಡೀ ಸಮುದಾಯಕ್ಕೆ ಒಳೆಯದಾಗುತ್ತದೆ ಎಂಬುದು ಸರಿಯಲ್ಲ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಶಿಶುಗಳನ್ನು ಪರೀಕ್ಷಿಸಿದಾಗ ಬಹುತೇಕ ಪ್ರಕರಣಗಳಲ್ಲಿ ರಕ್ತ ಸಂಬಂಧಿಗಳನ್ನು ವಿವಾಹವಾಗಿರುವ ಅಂಶ ಕಂಡುಬಂದಿದೆ. ಅಲ್ಲದೆ ದೇಶ ವಿದೇಶಗಳಲ್ಲಿ ಕೈಗೊಳ್ಳಲಾದ ನೂರಾರು ಸಂಶೋಧನೆಗಳಿಂದಲೂ, ಪರಿಶೀಲನೆಯಿಂದಲೂ ಇದು ದೃಢಪಟ್ಟಿದೆ.

ನೆಮ್ಮದಿ ಮತ್ತು ಆರೋಗ್ಯವಂತ ಕುಟುಂಬವನ್ನು ಹೊಂದಬೇಕಾದರೆ ಮತ್ತು ಬಂಜೆತನವನ್ನು ತಡೆಗಟ್ಟಲು ಆದಷ್ಟು ಮಟ್ಟಿಗೆ ರಕ್ತ ಸಂಬಂಧಿಗಳಲ್ಲಿ ವಿವಾಹ ಮಾಡುವುದನ್ನು ತಡೆಗಟ್ಟುವುದು ಸೂಕ್ತ.