ಜನನ : ೧೯೧೮ ರಲ್ಲಿ ಲೋಕಾಪುರದಲ್ಲಿ

ಮನೆತನ : ಉತ್ತಮ ಸುಸಂಸ್ಕೃತ ಪರಂಪರೆಯ ಮನೆತನ. ತಂದೆ ಕೃಷ್ಣಚಾರ್ಯ. ತಾಯಿ ರುಕ್ಮಿಣಿಬಾಯಿ, ಅಜ್ಜ ಅಣ್ಣಯ್ಯಾಚಾರ್ಯ ಕಟ್ಟಿ ಮುಧೋಳ ಕೀರ್ತನಕಾರರಾಗಿದ್ದವರು.

ಶಿಕ್ಷಣ : ಅತಿ ಎಳೆಯ ವಯಸ್ಸಿನಲ್ಲೇ ಶ್ರೀ ವಿನಾಯಕ ಮಹಾರಾಜರಲ್ಲಿ ಅನಂತರ ಪಂ,. ಮಂಗಳ ವ್ಹೇಡೆಯವರಲ್ಲಿ ಸಂಗೀತ ಶಿಕ್ಷಣ ಪಡೆದವರು. ಅಜ್ಜ ಅಣ್ಣಯ್ಯಾಚಾರ್ಯ ಕಟ್ಟಿಯವರು ತಾವು ರಚಿಸಿದ ಅನೇಕ ಕಥಾ ಪ್ರಸಂಗಗಳನ್ನು ಮೊಮ್ಮಗಳಿಗೆ ಕಲಿಸಿ ಕೀರ್ತನ ಪ್ರಪಂಚಕ್ಕೆ ಪರಿಚಯಿಸಿದವರು.

ಕ್ಷೇತ್ರ ಸಾಧನೆ : ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ಚಿಕ್ಕೋಡಿಯಲ್ಲಿ ಧ್ರುವ ಚರಿತ್ರೆ ಕಥಾ ಪ್ರಸಂಗದೊಂದಿಗೆ ಪ್ರಥಮ ರಂಗಪ್ರವೇಶ. ಬಾಲ ಪ್ರತಿಭೆಯಾಗಿ ಉತ್ತರಾದಿ ಮಠದ ಯತಿಗಳಾಗಿದ್ದ ಶ್ರೀ ಶ್ರೀ ಸತ್ಯಧ್ಯಾನ ತೀರ್ಥರ ಸಮ್ಮುಖದಲ್ಲಿ ಅನಂತರ ತಿರುಪತಿ ವೆಂಕಟೇಶನ ಸನ್ನಿಧಾನದಲ್ಲಿ ಕಥಾ ಕೀರ್ತನೆಗಳನ್ನು ನಡೆಸಿ ಗುರ‍್ವಾನುಗ್ರಹ, ದೈವಾನುಗ್ರಹಕ್ಕೆ ಪಾತ್ರರಾದರು. ಮುಂದೆ ಕರ್ನಾಟಕ, ಪುದುಚೇರಿಯ ಅರವಿಂದಾಶ್ರಮ, ಧರ್ಮಸ್ಥಳ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಂಚರಿಸಿ ಸುಮಾರು ಏಳು ದಶಕಗಳಿಗೂ ಮಿಕ್ಕಿ ಕಥಾ ಕೀರ್ತನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇಷ್ಟಾದರೂ ಇವರು ಪ್ರಚಾರ ಪ್ರಿಯರಾಗದೇ ಎಲೆ ಮರೆಯ ಕಾಯಿಯಂತೆ ತಾವಾಯಿತು. ತಮ್ಮ ಕೀರ್ತನ ಕ್ಷೇತ್ರವಾಯಿತು ಎನ್ನುವಂತಿದ್ದರು. ತಮ್ಮ ಪತಿ ವಿಷ್ಣು ಪಂತ ಗಂಗಾಧರ ದೇಶಪಾಂಡೆಯವರ ನಿಧನದ ನಂತರ ಇವತ ಒಲವು ಹೆಚ್ಚಿನಂಶ ಆಧ್ಯಾತ್ಮ ಚಿಂತನೆಯ ಕಡೆಗೆ ಸಾಗಿ ಕೀರ್ತನ ಕ್ಷೇತ್ರದಲ್ಲೇ ಮನಃಶಾಂತಿಯನ್ನು ಕಂಡುಕೊಂಡರು.

ಧ್ರುವ ಚರಿತ್ರೆ, ಪ್ರಹ್ಲಾದ ಚರಿತ್ರೆ, ಕಬೀರ ಖಯಾಲ್, ಗೋರ ಕುಂಬಾರ, ಸಂತ ತುಕಾರಾಮ, ದಾಮಾಜಿ ಪಂತ, ಗೀತಾಸಾರ ಮುಂತಾದ ಪ್ರಸಂಗಗಳನ್ನು ಜನಪ್ರಿಯಗೊಳಿಸಿದ ಖ್ಯಾತಿ ಈಕೆಯದು.

ಪ್ರಶಸ್ತಿ- ಪುರಸ್ಕಾರಗಳು: ಉತ್ತರಾದಿ ಮಠಾಧಿಪತಿಗಳು, ತಿರುಪತಿ ವೆಂಕಟೇಶನ ಅನುಗ್ರಹಗಳೇ ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೭-೯೮ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರು ಇತ್ತೀಚಿಗೆ ಬೆಳಗಾವಿಯಲ್ಲಿ ನಿಧನರಾದರು.