ಕನ್ನಡ ಸಾಹಿತ್ಯವು ಕಳೆದ ಹದಿನೈದು ನೂರು ವರ್ಷಗಳ ದೀರ್ಘಾವಧಿಯಲ್ಲಿ ವಿವಿಧ ಮುಖವಾಗಿ ಬೆಳೆದು ಬಂದಿದೆ. ಸಂಸ್ಕೃತ, ತಮಿಳು ಇವೆರಡು ಸಾಹಿತ್ಯಗಳನ್ನು ಬಿಟ್ಟರೆ, ಪ್ರಾಚೀನತೆಯ ದೃಷ್ಟಿಯಿಂದ ಕನ್ನಡಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಗಾತ್ರ ಸತ್ತ್ವಗಳ ದೃಷ್ಟಿಯಿಂದಲೂ ಕನ್ನಡ ಸಾಹಿತ್ಯ, ಭಾರತೀಯ ಸಾಹಿತ್ಯದಲ್ಲಿ ಗಣನೀಯವಾದ ಸ್ಥಾನವನ್ನು ಪಡೆಯಲರ್ಹವಾಗಿದೆ.

ಕರ್ನಾಟಕ ಸಂಸ್ಕೃತಿಯ ಪೋಷಣೆಯಲ್ಲಿ ವೈಧಿಕ, ಜೈನ, ವೀರಶೈವ ಧರ್ಮಗಳ ಸ್ಥಾನ ಗುರುತರವಾಗಿದೆ. ಅಂದಿನ ಕಾಲಕ್ಕೆ ಆವಶ್ಯಕವೆನಿಸಿದ ತತ್ತ್ವಗಳನ್ನು ಬೋಧಿಸಿದ್ದಲ್ಲದೆ, ಸಾರ್ವಕಾಲಿನವಾದ ತತ್ವಗಳನ್ನೂ ಸಾರಿವೆ; ಅಂತೆಯೆ ಆ ಧರ್ಮಗಳಿಗೆ ಜಾಗತಿಕ ಧರ್ಮಗಳ ಇತಿಹಾಸದಲ್ಲಿ ಉನ್ನತಸ್ಥಾನವಿದೆ. ಈ ಧರ್ಮಗಳ ವಿಚಾರ ಪ್ರಾಣಾಲಿಯಿಂದ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿದೆ. ಕೇವಲ ಮತತತ್ತ್ವ ನಿರೂಪಣೆಯಿಂದಲ್ಲ; ವಿಶ್ವ ಮಾನವಧರ್ಮವನ್ನು ಎತ್ತಿಹಿಡಿಯುವುದರಿಂದ ಕನ್ನಡ ಸಾಹಿತ್ಯ ವೈಶಿಷ್ಟ್ಯ ಪೂರ್ಣವಾಗಿದೆ. ಧರ್ಮ, ಕಾವ್ಯಧರ್ಮ ಎರಡೂ ಒಂದುಗೂಡಿ ನಡೆದು ಈ ಸಾಹಿತ್ಯದ ವ್ಯಶಿಷ್ಟ್ಯ ಇನ್ನೂ ಹೆಚ್ಚಿದೆ.

ಅಪಾರವಾದ ಕನ್ನಡ ಸಾಹಿತ್ಯ ಇನ್ನೂ ಬೆಳಕು ಕಾಣದೆ ಹಾಗೆಯೆ ಉಳಿದುಕೊಂಡು ಬಂದಿದೆ. ಈ ಸಾಹಿತ್ಯವನ್ನು ಶಾಸ್ತ್ರಬದ್ಧವಾಗಿ ಸಂಸ್ಕರಿಸಿ ಪ್ರಕಟಿಸುವ ಕಾರ್ಯ ಅತಿಮಹತ್ತ್ವವಾದುದು. ಅಲ್ಲದೆ ಈ ಮಹತತ್ವಗಳ ಹಾಗೂ ಸಾಹಿತ್ಯದ ಸೌರಭವನ್ನು ಉಚ್ಚತರಗತಿಯ ವಿದ್ಯಾರ್ಥಿಗಳು ಅಭ್ಯಸಿಸುವುದು ಸೂಕ್ತವಾಗಿದೆ. ಈ ಧರ್ಮ, ತತ್ತ್ವ,ಸಾಹಿತ್ಯಗಳ ಪರಿಜ್ಞಾನ ಸಕಲರಿಗೂ ಉಂಟಾಗುವಂತೆ ಮಾಡುವ ಕಾರ್ಯವೂ ಅತಿ ಅವಶ್ಯವಾಗಿದೆ. ಇದನ್ನು ಮನಗಂಡು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜೈನ, ವೀರಶೈವ,  ಬ್ರಾಹ್ಮಣ ಸಾಹಿತ್ಯ ಸಂಶೋಧನ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಪ್ರತಿಯೊಂದು ಶಾಖೆಯಲ್ಲಿ ಸಂಶೋಧನೆ ನಡೆಯುವುದಲ್ಲದೆ ಆ ಧರ್ಮ, ತತ್ತ್ವ, ಸಾಹಿತ್ಯಗಳ ಬಗೆಗೆ ಅಧ್ಯಯನವೂ ನಡೆಯುತ್ತದೆ. ಪ್ರತಿಯೊಂದು ಶಾಖೆಯೂ ತ್ವರಿತಗತಿಯಿಂದ ಕಾರ್ಯವನ್ನು ಕೈಕೊಂಡು ಗ್ರಂಥಗಳನ್ನು ಪ್ರಕಟಿಸುತ್ತಿರುವುದು ಸಂತೋಷದ ವಿಷಯ. ವೈದಿಕ, ಜೈನ, ವೀರಶೈವ ಹಾಗೂ ಜಗತ್ತಿನ ಎಲ್ಲ ಧರ್ಮಗಳ ತೌಲನಿಕ ಅಭ್ಯಾಸ ನಡೆದು ಎಲ್ಲರಿಗೂ ಅವುಗಳ ಸಾರವೇದ್ಯವಾಗುವುದು ಅವಶ್ಯ. ಇದರಿಂದ ಶಾಂತಿ, ಸುವ್ಯವಸ್ಥೆ ನೆಲೆಗೊಳ್ಳುವುದು.

ಇದೀಗ ಬ್ರಾಹ್ಮಣಶಾಖೆಯ ಪರವಾಗಿ ಸೋಮನಾಥಕವಿಯ “ಅಕ್ರೂರ ಚರಿತ್ರೆ” ಪ್ರಕಟವಾಗುತ್ತಿದೆ. ಅಕ್ರೂರನು ವಿಷ್ಣುಭಕ್ತ. ಆತನ ವಿಷ್ಣುಭಕ್ತಿ ಶ್ಲಾಘನೀಯವಾಗಿದೆ ಆತನ ಚರಿತ್ರೆಯನ್ನು-ಪರ್ಯಾಯವಾಗಿ ಶ್ರೀಕೃಷ್ಣನ ಚರಿತ್ರೆಯನ್ನು ವಿವರಿಸುವ ಈ ಕಾವ್ಯ ಭಕ್ತಿರಸಪೂರ್ಣವಾಗಿದೆ. ರಸಿಕರ ಹಾಗೂ ಭಕ್ತರ ಮನವನ್ನು ಸಂತೃಪ್ತಿಪಡಿಸುವ ಶಕ್ತಿ ಈ ಕಾವ್ಯದಲ್ಲಿದೆ. ಆದುದರಿಂದ ಇದು ಸಕಲರ ಮೆಚ್ಚುಗೆಯನ್ನು ಪಡೆಯುವುದೆಂಬ ಪೂರ್ಣ ಭರವಸೆ ಇದೆ. ಇಂತಹ ಮಹತ್ತ್ವದ ಕಾರ್ಯವನ್ನು ಪೂರೈಸಿದುದಕ್ಕಾಗಿ ಗ್ರಂಥದ ಸಂಪಾದಕರಿಗೂ ಆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಸಂಶೋಧಕರಿಗೂ ಮಾಲೆಯ ಪ್ರಧಾನ ಸಂಪಾದಕರಿಗೂ ಅಭಿನಂದನೆಗಳು. ಇಂತಹ ಕಾರ್ಯ ಹೆಚ್ಚು ಹೆಚ್ಚಾಗಿ ಮುಂದುವರೆದು, ನಮ್ಮ ಸಾಹಿತ್ಯದ ಸೌರಭ ಸಕಲರಿಗೂ ವೇದ್ಯವಾಗುವಂತಾಗಲೆಂದೂ ಹಾರೈಸುತ್ತೇನೆ.

ಡಾ. ಅ. ಶೆ. ಅಡಕೆ
ಕುಲಪತಿಗಳು
ಕರ್ನಾಟಕ ವಿಶ್ವವಿದ್ಯಾಲಯ
ಯುಗಪ್ರತಿಪದೆ
೧೯-೩-೧೯೬೯