ಕನ್ನಡ ಸಾಹಿತ್ಯ ಜೈನ, ವೀರಶೈವ ಮತ್ತು ವೈದಿಕವಾಙ್ಮಯಗಳ ತ್ರಿವೇಣೀ ಸಂಗಮವೆಂದು ಖ್ಯಾತಿವೆತ್ತಿದೆ. ಈ ಸಾಹಿತ್ಯದ ಬಹುಭಾಗ ಕಾಲನ ಕರಾಳ ದವಡೆಯಲ್ಲಿ ಸಿಲುಕಿ ಕಣ್ಮರೆಯಾಗಿದೆ; ಉಳಿದ ಕೆಲಭಾಗ ಹುಳುಗಳ ಪಾಲಾಗುತ್ತಿದೆ. ಈ ದಿಸೆಯಲ್ಲಿ ಸಂಶೋಧನೆ ನಡೆಸಿ, ಪ್ರಾಚೀನ ಕನ್ನಡ ಸಾಹಿತ್ಯವನ್ನು ಸಂರಕ್ಷಿಸುವುದು ನಾಡಿನ ಕರ್ತವ್ಯವಾಗಿದೆ.

ಈ ಘನವಾದ ಉದ್ದೇಶ ಸಾಧನೆಗಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜೈನ, ವೀರಶೈವ, ಬ್ರಾಹ್ಮಣ ಸಾಹಿತ್ಯ ಸಂಶೋಧನೆ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲಿಯೂ ಪ್ರಾಚೀನ ಗ್ರಂಥಗಳನ್ನು ಪರಿಶೋಧಿಸಿ ಶಾಸ್ತ್ರೀಯವಾಗಿ ಸಂಸ್ಕರಿಸಿ ಪ್ರಕಟಿಸುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ಬ್ರಾಹ್ಮಣ ಸಾಹಿತ್ಯ ಸಂಶೋಧನೆ ಶಾಖೆಯು ಇದೀಗ ಪ್ರಾರಂಭವಾಗಿದ್ದು ಅಲ್ಪಾವಧಿಯಲ್ಲಿಯೇ ಸೋಮನಾಥ ಕವಿರಚಿತವಾದ “ಅಕ್ರೂರ ಚರಿತ್ರೆ”ಯನ್ನು ಅತ್ಯಂತ ಶಾಸ್ತ್ರೋಕ್ತವಾಗಿ ಸಂಶೋಧಿಸಿ, ಸಂಸ್ಕರಿಸಿ ಸಂಪಾದಿಸಲಾಗಿದೆ.

ಸೋಮನಾಥ ಕವಿ, ಕನ್ನಡ ಭಕ್ತ ಕವಿವೃಂದದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾನೆ. ಆತನ ಭಕ್ತಿ ನಿರರ್ಗಗಳವಾಗಿದೆ. ಅಕ್ರೂರ ಚರಿತ್ರೆಯನ್ನು ಆತನು ಪೂರೈಸಿಕೊಂಡು ಹೋಗಿರುವುದನ್ನು ನೋಡಿದರೆ, ಕವಿಯ ಪ್ರಾಸಾದಿಕ ವಾಣಿಯ ಕಲ್ಪನೆಯಾಗುತ್ತದೆ.

ಅಕ್ರೂರನು ವಿಷ್ಣುಭಕ್ತ; ಆತನ ಚರಿತ್ರೆ ಭಾಗವತ, ವಿಷ್ಣು ಪುರಾಣಗಳಲ್ಲಿ ಬರುತ್ತದೆ. ಸೋಮನಾಥ ಕವಿ ಭಾಗವತವನ್ನಾಧರಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಕವಿ ಭಕ್ತಿರಸವನ್ನು ಈ ಕಾವ್ಯದಲ್ಲಿ ಹರಿಸಿದ್ದಾನೆ. ಆತನ ಷಟ್ಟದೀಶೈಲಿ ಲಲಿತ ಬಂಧುರವಾಗಿದೆ: ಮೃದುಮಧುರವಾಗಿದೆ.

ಇಂತಹ ಕಾವ್ಯವನ್ನು ಸಂಪಾದಿಸುವ ಕಾರ್ಯಘನವಾದುದು. ಶ್ರೀಕೃಷ್ಣಶರ್ಮಾ ಬೆಟಗೇರಿ ಅವರ ಹೆಸರು ಕನ್ನಡ ಸಾಹಿತ್ಯದಲ್ಲಿ ಚಿರಾಸ್ಥಾಯಿಯಾಗಿದೆ. ಅವರ ಸೃಜನ ಶಕ್ತಿ ಅದ್ಭುತವಾದಂತೆ ಪಾಂಡಿತ್ಯವೂ ಅಪಾರವಾಗಿದೆ. ಶ್ರೀ ಬೆಟಗೇರಿ ಅವರು ಯಾವುದನ್ನು ಮಾಡಿದರೂ ಬಹುಕಾಲ ಬಾಳುವಂತೆ ಮಾಡುವರು. ಇಂತಹ ಪ್ರತಿಭಾ ಸಂಪನ್ನರೂ ಘನವಿದ್ವಾಂಸರೂ ಅಕ್ರೂರಚರಿತ್ರೆಯ ಸಂಪಾದಕರಾಗಿರುವರು. ಅವರ ಜೊತೆಗೆ ಶ್ರೀ ಶೇ.ಗೋ.ಕುಲಕರ್ಣಿ ಅವರು ನಿರಂತರ ಕೆಲಸ ಮಾಡಿರುವರು. ಶ್ರೀ ಶೇ.ಗೋ.ಕುಲಕರ್ಣಿ ಅವರ ಹೆಸರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸ್ವಷ್ಟವಾಗಿ ಗೋಚರಿಸುತ್ತದೆ. ವಿಶ್ವಭಾರತಿಯಲ್ಲಿ ಶಿಕ್ಷಣ ಪಡೆದು ಬಂದ ಈ ಗೀತಾಪ್ರಿಯರು ಕನ್ನಡದಲ್ಲಿ ಸಾಕಷ್ಟು ಕೃಷಿ ಮಾಡಿರುವರು. ಚಿ.ಸುರೇಶ ಬೆಟಗೇರಿ ಉತ್ಸಾಹದಿಂದ ಕಾರ್ಯಮಾಡುವವರು. ಕೊನೆಗೆ ಈ ಶಾಖೆಗೆ ರೀಡರ‍್ ರೆಂದು ಖ್ಯಾತ ಸಾಹಿತ್ಯ ಡಾ|| ಕೆ.ಜಿ.ಶಾಸ್ತ್ರಿ ಎಂ.ಎ.. ಪಿಎಚ್.ಡಿ. ಅವರು ನೇಮಕಗೊಂಡಿರುವರು. ಇವರೆಲ್ಲರು ದೊರೆತುದು ನನ್ನ ಸುದೈವವೆಂದೇ ಭಾವಿಸಿದ್ದೇನೆ. ಈ ಗ್ರಂಥ ಸಂಪಾದಕರಿಗೂ ಸಹಾಯಕ ಸಂಶೋಧಕರಿಗೂ ಹಾರ್ದಿಕ ಅಭಿನಂದನೆಗಳು.

ಕರ್ನಾಟಕ ವಿಶ್ವವಿದ್ಯಾಲಯವು ಪ್ರಾಚೀನ ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಪ್ರಕಟನೆಗೆ ನೀಡುತ್ತಿರುವ ನೆರವು ಸುವರ್ಣಾಕ್ಷರಗಳಿಂದ ಬರೆದಿಡತಕ್ಕದು. ನಮ್ಮ ಮಾನ್ಯ ಕುಲಪತಿಗಳಾದ ಡಾ. ಅ.ಶೆ. ಅಡಕೆ. ಬಿ.ಇ.ಪಿಎಚ್.ಡಿ.ಎ.ಎಂ.ಆಯ್.ಇ. ಅವರು ಈ ಕಾರ್ಯಕ್ಕೆ ಸರ್ವ ರೀತಿಯ ಪ್ರೋತ್ಸಾಹ ನೀಡಿದುದಲ್ಲದೆ ಇದಕ್ಕೆ ಒಂದು ಮುನ್ನುಡಿಯನ್ನೂ ಆಶೀರ್ವದಿಸಿರುವರು. ಅವರಿಗೆ ನನ್ನ ಹಾರ್ದಿಕ ಪ್ರಣಾಮಗಳು.
ಈ ಗ್ರಂಥವನ್ನು ಅಲ್ಪಾವಧಿಯಲ್ಲಿ ಅಂದವಾಗಿ ಅಚ್ಚುಮಾಡಿಕೊಟ್ಟ ಸಂಗಮ ಮುದ್ರಣಾಲಯದವರಿಗೆ ನಾನು ಕೃತಜ್ಞನಾಗಿದ್ದೇನೆ.

ಕನ್ನಡ ಸಾಹಿತ್ಯ ಪ್ರೆಮಿಗಳು ಈ ಗ್ರಂಥವನ್ನು ಆದರದಿಂದ ಬರಮಾಡಿಕೊಳ್ಳುವರೆಂದು ನಂಬಿದ್ದೇನೆ.

– ಆರ್.ಸಿ.ಹಿರೇಮಠ

ಧಾರವಾಡ
೧೯-೩-೧೯೬೯