ಮೊದಲು ಮಾತು

ವಿಷ್ಣು ಭಕ್ತಿ ಪರಂಪರೆಯು, ನಮ್ಮ ನಾಡಿನಲ್ಲಿ ಸಾವಿರಾರು ವರ್ಷಗಳಿಗೆ ಮೊದಲಿನಿಂದಲೂ ನಡೆದುಕೊಂಡು ಬಂದಿರುವುದು ಇತಿಹಾಸ ಪ್ರಸಿದ್ಧವಾದ ಸಂಗತಿ. ವಿಷ್ಣು ಭಕ್ತಿ ಪ್ರಧಾನವಾಗಿರುವ ಪ್ರಮುಖ ಪ್ರಾಚೀನ. ಪುರಾಣಗ್ರಂಥಗಳೆಂದರೆ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ಭಾಗವತ, ಜೈಮಿನಿ ಭಾರತ ಇತ್ಯಾದಿ. ಅಷ್ಟಾದಶ ಪುರಾಣಗಳಲ್ಲಿಯೂ ಅಲ್ಲಲ್ಲಿ ವಿಷ್ಣುಭಕ್ತಿ ಮಹಾತ್ಮ್ಯ ವಿವರಿತವಾಗಿದೆ. ಪಾಂಚರಾತ್ರ, ವೈಖನಾಸ ಮೊದಲಾದ ಆಗಮಗ್ರಂಥಗಳೂ ವಿಷ್ಣುಭಕ್ತಿಯನ್ನು ಪುರಸ್ಕರಿಸಿ, ಆತನ ಅರ್ಚನೆ, ಧ್ಯಾನ, ಜಪ, ವಿವಿಧ ಹೋಮ ಮೊದಲಾದವುಗಳ ಪ್ರಕ್ರಿಯೆಗಳನ್ನು ನಿರೂಪಿಸುವುವು. ಈ ವೈಷ್ಣ ವಾಗಮಗಳೂ ಬಹುಕಾಲದಿಂದ ಕನ್ನಡನಾಡಿನಲ್ಲಿ ಮನ್ನಣೆಗೆ ಪಾತ್ರವಾದುವುಗಳಾಗಿವೆ. ಇಷ್ಟೆ ಅಲ್ಲ. ಸಂಸ್ಕೃತ ಭಾಗವತ, ಜೈಮಿನಿಭಾರತ, ಪಾದ್ಮಪುರಾಣ ಮೊದಲಾದ ವಿಷ್ಣುಭಕ್ತಿ ನಿರೂಪಕ ಗ್ರಂಥಗಳು, ಕರ್ನಾಟಕದಲ್ಲಿಯೆ ನಿರ್ಮಿತವಾಗಿರಬಹುದೆಂದು ಊಹಿಸುವ ಸಂಸ್ಕೃತಿ ಸಂಶೋಧಕರೂ ಅಲ್ಲಿ ಇಲ್ಲಿ ತಲೆಯುತ್ತಿದ್ದಾರೆ. ಬಾದಾಮಿ, ಪಟ್ಟದಕಲ್ಲು, ಐಹೊಳೆಗಳಲ್ಲಿಯ ಅನೇಕ ದೇವಾಲಯಗಳಲ್ಲಿಯ ವಿಷ್ಣು ಮತ್ತು ಅವನ ಅವತಾರಗಳ ವಿಗ್ರಹಗಳೂ, ರಾಮಾಯಣ, ಭಾಗವತಗಳಲ್ಲಿಯ ಕಥಾಸಂದರ್ಭಸೂಚಕ ಚಿತ್ರಗಳೂ, ಕನ್ನಡಿಗರ ವಿಷ್ಣುಭಕ್ತಿಯ ಪ್ರಾಚೀನತೆಗೆ ಪ್ರತ್ಯಕ್ಷ ಪ್ರಮಾಣಗಳಾಗಿವೆ.

ಕನ್ನಡ ಪ್ರಾಚೀನ ಸಾಹಿತ್ಯದಲ್ಲಿಯೂ ವಿಷ್ಣುವಿನ ಉಪಾಸನೆಯ ವಿಷಯಕ ಮಾತುಗಳು ಸಾಕಷ್ಟು ದೊರೆಯುತ್ತವೆ. ಜೈನ ಸಾಹಿತ್ಯದಲ್ಲಿ ಲೌಕಿಕಕಾವ್ಯಗಳೆಂದು ಹೆಸರುಗೊಂಡು ಸುಪ್ರಸಿದ್ಧವಾಗಿರುವ ವಿಕ್ರಮಾರ್ಜುನ ವಿಜಯ” “ಸಾಹಸ ಭೀಮವಿಜಯ ಅಥವಾ ಗದಾಯುದ್ಧ ಎಂಬ ಕೃತಿಗಳ ಮಂಗಲಾಚರಣ ಪದ್ಯಗಳನ್ನು ನೋಡಿದಲ್ಲಿ ಅವುಗಳ ಮೊದಲ ಪದ್ಯಗಳು, ತಿಮೂರ್ತಿಗಳಲ್ಲಿಯ ವಿಷ್ಣುವಿನ ಆಧಿಕ್ಯವನ್ನು ಸೂಚಿಸುತ್ತವೆ. ಪಂಪ-ರನ್ನರ ಈ ರೀತಿ, ಆಗಿನ ಕಾಲದ ವೈದಿಕ ಸಂಪ್ರದಾಯದ ಕೃತಿಕಾರರ ಅನುಸರಣೆಯೇ ಆಗಿರಬಹುದೆಂದು ಭಾವಿಸುವಂತಿದೆ. ಅವರ ತರುವಾಯದ ಕನ್ನಡ ಕವಿಗಳಾದ ಕಾದಂಬರಿಯ ನಾಗವರ್ಮ, ಪಂಚತಂತ್ರದ ದುರ್ಗಸಿಂಹ, ಜಗನ್ನಾಥವಿಜಯದ ರುದ್ರಭಟ್ಟ, ಇವರ ಕೃತಿಗಳ ಮಂಗಲಾಚರಣ ಭಾಗದಲ್ಲಿ ವಿಷ್ಣುಸ್ತುತಿಗೇ ಪ್ರಧಾನ ಸ್ಥಾನವನ್ನು ಕೊಡಲಾಗಿದೆ.

ಇವರು ತಮ್ಮನ್ನು ವೈಷ್ಣವರೆಂದು ಸ್ವಷ್ಟವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಾದರೂ ವಿಷ್ಣುವಿನ ಉಪಾಸಕರಿದ್ದರೆಂಬುದರಲ್ಲಿ ಸಂದೇಹ ಪಡಬೇಕಾಗಿಲ್ಲ. ಕನ್ನಡದ ಇನ್ನೊಬ್ಬ ಚಂಪೂಕವಿ ಚೌಂಡರಸನಂತೂ ಪಂಡರಪುರದ ಆಂಭಗವಿಟ್ಠಲನ ಭಕ್ತ. ಅವನು ರಚಸಿದ ದಶಕುಮಾರ ಚರಿತ್ರ ಕಾವ್ಯವು ಲೌಕಿಕಥೆಗಳಿಂದ ಕೂಡಿದುದಾದರೂ. ಆತನು ವಿಟ್ಠಲನ ಅರ್ಥಾತ್ ವಿಷ್ಣುವಿನ ಭಕ್ತನಾಗಿದ್ದನೆಂಬುದನ್ನು ಆತನ ಕೃತಿಸಂದರ್ಭಗಳ ಪ್ರಮಾಣಗಳಿಂದಲೇ ಸಿದ್ಧ ಮಾಡಿ ತೋರಿಸಬಹುದು.

ವಿಟ್ಠಲಭಕ್ತಿ ಪ್ರಧಾನವಾದ ಭಾಗವತ ಅಥವಾ ವೈಷ್ಣವ ಧರ್ಮವು, ಕ್ರಿ.ಶ. ೧೨ನೆಯ ಶತಮಾನಕ್ಕೆ ಪೂರ್ವದಿಂದಲೂ ಕರ್ನಾಟಕ ಮತ್ತು ಅದರ ನೆರೆನಾಡುಗಳಾದ ಆಂಧ್ರ, ಮಹಾರಾಷ್ಟ್ರ, ಕೇರಳ ಪ್ರದೇಶಗಳಲ್ಲಿ ವಿಶೇಷ ಪ್ರಚಾರದಲ್ಲಿತ್ತು. ಈ ಭಾಗವತ ಪಂಥವು, ವೈಧಿಕ ಧರ್ಮದ ಸ್ಮೃತ್ಯುಕ್ತ ಆಚಾರಗಳಿಗಿಂತ ಭಿನ್ನಸ್ವರೂಪದ ತನ್ನವೇ ಆದ ಆಚಾರ-ನಿಯಮಗಳನ್ನು ನಿರ್ಮಿಸಿಕೊಂಡಿದ್ದಿತು. ನವವಿಧಭಕ್ತಿ ಇವರ ಆದರ್ಶಸಾಧನವಾಗಿದ್ದಿತು. ಹರಿನಾಮಸ್ಮರಣ-ಶ್ರವಣಕೀರ್ತನೆಗಳೇ ಇವರ ಭಕ್ತಿಸಾಧನೆಯ ಮುಖ್ಯಾಂಶವಾಗಿದ್ದುವು. ವೈದಿಕಮಾರ್ಗದ ಹೋಮ, ಹವನ, ಯಜ್ಞ, ಯಾಗಗಳಿಗಿಂತ ಭಕ್ತಿಯೇ ಶ್ರೇಷ್ಟವಾದುದೆಂಬುದು ಇವರ ವಿಶ್ವಾಸ. ಈ ಪಂಥದವರಿಗೆ ಭಕ್ತಿಯೇ ಮುಖ್ಯ; ಮುಕ್ತಿ ಗೌಣ ! ಜಗತ್ತಿನ ಸೃಷ್ಟಿ, ಸ್ಥಿತಿ ಲಯಗಳಿಗೆ ಕರ್ತೃಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರತ್ಯೇಕ-ಪ್ರತ್ಯೇಕ ದೇವತೆಗಳಲ್ಲ; ಶ್ರೀಹರಿಯೇ ಈ ಬೇರೆ ಬೇರೆ ಕಾರ್ಯಗಳನ್ನು ಬೇರೆ ಬೇರೆ ರೂಪದಿಂದ ಮಾಡುವುದರಿಂದ, ಅವರ ಸ್ಥಾನ-ಮಾನಗಳಲ್ಲಿ ತಾರತಮ್ಯವನ್ನು ಕಲ್ಪಿಸಲಾಗದು – ಎಂದು ಇವರ ಹೇಳಿಕೆ; ಆದರೂ ಉಪಾಸನೆ ಶ್ರೀ ಹರಿಯ ಮೂಲರೂಪ-ಅವತಾರರೂಪಗಳದೇ! ಬರುಬರುತ್ತ ತಿರುಪತಿಯ ಶ್ರೀವೆಂಕಟೇಶನು ಈ ಭಗವತ ಪಂಥದ ಉಪಾಸ್ಯದೈವತವಾಗಿ ನಿಂತು, ವಿಟ್ಠಲಮೂರ್ತಿಯ ಸ್ಥಾನವನ್ನು ಹಿಡಿದಂತೆ ಕಾಣುವುದು.

ಭಗವತಪಂಥದ ಗುರುಗಳ ಮಠಗಳೂ ಇದ್ದುವೆಂಬುದಕ್ಕೆ ಐತಿಹಾಸಿಕ ಪ್ರಮಾಣಗಳು ಸಾಕಷ್ಟು ದೊರೆಯುತ್ತವೆ.*

[1] ಈ ಗುರುಗಳೆಲ್ಲರೂ ಭಕ್ತಿಯೋಗೀಂದ್ರರು. ಈ ಗುರುವರ್ಗದವರೇ ತಮ್ಮ ಪಂಥದ ಪ್ರಚಾರ-ಪ್ರಸಾರಗಳ ಸದ್ದುದ್ದೇಶದಿಂದ, ವೈಷ್ಣವ ಭಕ್ತಿಪ್ರಾಧಾನ್ಯವಾದ ಮಹಾಭಾರತ, ಭಗವತ, ವಿಷ್ಣುಪುರಾಣಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಚಾರಗಳಿಸಿರಬಹುದೆಂದು ತೋರುವುದು. ಕನ್ನಡನಾಡಿನ ಸಾಂಪ್ರದಾಯಿಕ ಮನೆತನಗಳಲ್ಲಿ ಹೆಚ್ಚಾಗಿ ದೊರೆಯುತ್ತಿರುವ ಕುಮಾರವ್ಯಾಸ ಭರತ, ನಿತ್ಯಾತ್ಮ ಅಂಕಿತದ ಭಾಗವತ ಗ್ರಂಥ-ಇವುಗಳ ಹಸ್ತಪ್ರತಿಗಳ ವೈಪಲ್ಯವನ್ನು ನೋಡಿದರೆ, ನಮ್ಮ ಈ ಊಹೆ ಸತ್ಯವೆಂದು ತೋರುವುದು.

ಶ್ರೀ ರಾಮಾನುಜಾಚಾರ್ಯರ ವಿಷಿಷ್ಟಾದ್ವೈತಪಂಥ, ಶ್ರೀಮದ್ವಾಚಾರ್ಯರ ದ್ವೈತಪಂಥ-ಇವು ಕೂಡ ವಿಷ್ಣುಭಕ್ತಿ ಬೋಧನೆಗೇ ಮಹತ್ವವನ್ನು ಕೊಟ್ಟಿವೆ. ಈ ಹೊಸ ವೈಷ್ಣವಧರ್ಮ-ಪಂಥಗಳು ಹೆಚ್ಚು ಪ್ರಭಾವಶಾಲಿಗಳಾಗಿ ನಮ್ಮ ನಾಡಿನಲ್ಲಿ ಬೆಳೆಯತೊಡಗಲು, ಹಳೆಯ ವೈಷ್ಣವಧರ್ಮ ಬೋಧಕ ಭಾಗವತ ಪಂಥವು ತೆರೆಯ ಮರೆಯಲ್ಲಿ ಅಡಗಿತು. ಹಳೆಯ ಭಾಗವತಪಂಥಿಗಳನೇಕರು, ಹೊಸ ವೈಷ್ಣವ ಪಂಥಗಳನ್ನು ಪುರಸ್ಕರಿಸಿದರು; ಮಿಕ್ಕವರು “ಭಾಗವತ”ರೆನಿಸಿಕೊಂಡು ಈಗಲೂ ಉಳಿದುಕೊಂಡು ಬಂದಿರುವರಾದರೂ, ಅವರೆಲ್ಲ ಶಾಂಕರಾದ್ವೈತಿಗಳ ಪಂಗಡದಲ್ಲಿ ಸೇರಿಕೊಂಡು ಬಿಟ್ಟಿದ್ದಾರೆ. ನಮ್ಮ ಪಂಚಾಂಗಗಳು ಮಾತ್ರ ಏಕಾದಶಿ ತಿಥಿಯನ್ನು ಹೇಳುವಾಗ ಸ್ಮಾರ್ತ, ಭಾಗವತ ಎಂಬ ಭೇದವನ್ನು ತೋರಿಸಿ, ಹಳೆಯ ವೈಷ್ಣವ ಅಥವಾ ಭಾಗವತಪಂಥವನ್ನು ಈಗಲೂ ಜ್ಞಾಪಕಕ್ಕೆ ತಂದು ಕೊಡುತ್ತವೆ.

ಹಳೆಯ ಭಾಗವತ ಪಂಥದ ಕವಿಗಳು, ಕನ್ನಡ ಸಾಹಿತ್ಯದೇವಿಯ ಭಂಡಾರಕ್ಕೆ ಅರ್ಪಿಸುವ ಕೃತಿ ಸಂಪತ್ತು ಸಾಕಷ್ಟು ಇದೆ. ಕ್ರಿ.ಶ. ೧೩-೧೪-೧೫ನೆಯ ಶತಮಾನದ ಬ್ರಾಹ್ಮಣ ಷಟ್ಪದಿಕೃತಿಕಾರರು, ಈ ಭಾಗವತಪಂಥದವರೇ ಆಗಿದ್ದಾರೆ. ಇಷ್ಟೇ ಅಲ್ಲ; ಕ್ರಿ.ಶ. ೧೬ನೆಯ ಶತಮಾನದಲ್ಲಿ ಉದಯಿಸಿ, ಸತ್ತ್ವಶಾಲಿಯಾಗಿ ಎದ್ದುನಿಂತ ಹರಿದಾಸಪಂಥಕ್ಕೆ ಹಳೆಯ ಭಾಗವತ ವೈಷ್ಣವ ಪಂಥವೇ ತಳಹದಿಯಾಗಿದೆ; ಅನೇಕ ಮೂಲ ಸತ್ತ್ವ-ತತ್ತ್ವಗಳನ್ನು ಒದಗಿಸಿಕೊಟ್ಟಿದೆ. ನಾವೀಗ ಪ್ರಕಟನೆಗೆ ತೆಗೆದುಕೊಂಡಿರುವ “ಅಕ್ರೂರಚರಿತ್ರೆ” ಯೂ ಹಳೆಯ ಭಾಗವತ ಸಾಹಿತ್ಯಪರಂಪರೆಗೆ ಸೇರಿದುದಾಗಿದೆ.

ಕವಿಯ ದೇಶಕಾಲ ವಿಚಾರ

ಆಕ್ರೂರ ಚರಿತ್ರೆಯನ್ನು ಬರೆದ ಕವಿಯ ಹೆಸರು ಸೋಮನಾಥಎಂದು. ಸಾಮಾನ್ಯವಾಗಿ ಕನ್ನಡ ಭಕ್ತಕವಿಗಳು, ಸ್ವಪರಿಚಯದ ವಿಷಯವನ್ನು ಹೇಳಿಕೊಂಡಿರುವುದು ಅಪೂರ್ವ; ಎಂತಲೇ ಅನೇಕ ಮಹಾಮಹಾಕವಿಗಳ ದೇಶ-ಕಾಲ-ಕುಲಗಳ ವಿಚಾರವು, ಇದುವರೆಗೂ ಊಹೆ-ಅನುಮಾನಗಳ ಮೇಲೆಯೆ ನಿಂತುಕೊಂಡಿದೆ. ಸೋಮನಾಥ ಕವಿಯೂ ಈ ಸಂಪ್ರದಾಯಕ್ಕೆ ಅಪವಾದಿಯಾಗಿ ನಿಂತವನಲ್ಲ. ಇವನು ಪೀಠಿಕಾಸಂಧಿಯಲ್ಲಿ, ಒಂದೆ ಒಂದು ಸಲ ತನ್ನ ಹೆಸರನ್ನು ’ಸೋಮನಾಥ ಕವೀಂದ್ರ ಎಂದು ಹೇಳಿಕೊಂಡಿದ್ದಾನೆ.*[2] ಆಮೇಲೆ ಕಾವ್ಯದುದ್ದಕ್ಕೂ ಎಲ್ಲಿಯೂ ಕವಿಯ ನಾಮನಿರ್ದೇಶನವಿಲ್ಲ. ಅಲ್ಲದೆ ಮಂಗಲಾಚರಣದ ಮೊದಲ ಪದ್ಯದಲ್ಲಿ ಶ್ರೀಹರಿಯ ಸಾಮಾನ್ಯ ವಿಶೇಷಣಗಳಿಂದ ಕೂಡಿದ ಸಂಬೋಧನಗಳಿವೆಯೇ ಹೊರತು. ಯಾವುದೇ ವಿಶಿಷ್ಟ  ಕ್ಷೇತ್ರದೈವತದ ಭಕ್ತನೆಂಬುದನ್ನು ತಿಳುಹುವ ಮಾತುಗಳಿಲ್ಲ. ಆದುದರಿಂದಲೇ ಈ ಕವಿಯ ವಾಸಸ್ಥಳವಾವುದೆಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಅಸಾಧ್ಯ.

ಕುಮಾರವ್ಯಾಸನ “ಕವಿತೆಜಾಣ”ರನೂ ಸವಿನುಡಿಯ ಗಮಕಿಗಳನ್ನೂ ಈ ಕವಿಯು, ಪೀಠಕಾಪ್ರಕರಣದಲ್ಲಿ ತುಂಬ ಆದರದ ನುಡಿಗಳಿಂದ ಮನ್ನಿಸಿದ್ದಾನೆ. ಇವನ ಕೃತಿಯಲ್ಲಿ ಹೆಸರು ಬಂದಿರುವ ಕನ್ನಡ ಭಾಗವತಪಂಥದ ಕವಿಯೆಂದರೆ ಕುಮಾರವ್ಯಾಸನೊಬ್ಬನೇ ಒಬ್ಬ. ಆದುದರಿಂದ ಸೋಮನಾಥ, ಕುಮಾರವ್ಯಾಸ ಕವಿಯ ತರುವಾಯದವನೆಂದು ನಿರಾತಂಕವಾಗಿ ಹೇಳಬಹುದು. ಕಾವ್ಯದ ಭಾಷೆ, ಶೈಲಿಗಳ ಮೇಲೆ ಕುಮಾರವ್ಯಾಸನ ಭಾಷೆ-ಶೈಲಿಗಳ ಪ್ರಭಾವ ಸಾಕಷ್ಟು ಬಿದ್ದಿದೆಯೆಂಬುದನ್ನು ನೋಡಿದಾಗ ಕುಮಾರವ್ಯಾಸನ ಮಹಾಭಾರತ ಕಾವ್ಯವನ್ನು ಚೆನ್ನಾಗಿ ಪಾರಾಯಣ ಮಾಡಿದವನೆಂಬ ಮಾತು ಗೊತ್ತಾಗುವುದು. ಹಾಗಾದರೆ ಇವನು ಕುಮಾರವ್ಯಾಸ ಕವಿಯ ಮುಂದಿನ ಕಾಲದಲ್ಲಿ ಬೇಗನೆ ಉದಯಿಸಿ ಬಂದವನೆಂದು ಹೇಳಬಹುದೇ ನಾವು?

ಕುಮಾರವ್ಯಾಸ ಕವಿಯ ಕಾಲದ ನಿರ್ಣಯವಿನ್ನೂ ವಾದದ ವಿಷಯವೇ ಆಗಿದೆ. ಸಂಶೋಧಕರ ಊಹೆ-ಅನುಮಾನಗಳ ಮೂಲಕ ಅವನು, ೧೨ನೆಯ ಶತಮಾನದಿಂದ ೧೬ನೆಯ ಶತಮಾನದ ಮಧ್ಯಕಾಲದವರೆಗೂ ಓಡಾಡುತ್ತಲಿದ್ದಾನೆ. ಕುಮಾರವ್ಯಾಸ ಕವಿಯ ಕಾಲವೇ ಹೀಗೆ ಅನಿಶ್ಚಿತವಾಗಿರುವಾಗ, ಸೋಮನಾಥ ಕವಿಯ ನಿಶ್ಚಿತಕಾಲವನ್ನು ಊಹಿಸಿಯಾದರೂ ಹೇಗೆ ಹೇಳಬೇಕು? ಆದರೆ ಇಷ್ಟು ಮಾತ್ರ ಹೇಳಲಿಕ್ಕೆ ಅವಕಾಶವಿದೆ : ಸೋಮನಾಥ ಕುಮಾರವ್ಯಾಸನ ತರುವಾಯ ೧೦೦-೧೫೦ ವರ್ಷಗಳಾದ ಮೇಲೆ ಕಾರ್ಯರಂಗಕ್ಕೆ ಇಳಿದಿರಬಹುದು. ಏಕೆಂದರೆ :

ಎಂತಹ ಶ್ರೇಷ್ಟಕವಿಯ ಕೃತಿಯಾದರೂ ಸಾರ್ವಜನಿಕ ಮನ್ನಣೆಗೆ-ಒಮ್ಮೆಲೆ ಪಾತ್ರವಾಗಿ ನಿಲ್ಲಲಾರದು. ಅದಕ್ಕೆ ಒಂದು ಶತಮಾನ ಕಾಲವಾದರೂ ಗತಿಸಬೇಕಾಗುವುದು. ಪಂಡಿತ ಜನಮಾನ್ಯವಾಗಿ ಕಾವ್ಯ ಗಮಕಿಗಳ ಹೃದಯಕ್ಕಿಳಿದು, ಸಂಗೀತರೂಪ ತಾಳಿ, ಅವರ ಮುಖದಿಂದ ಪ್ರಕಟವಾಗಿ ಲೋಕಪ್ರಿಯವಾಗಬೇಕಾದರೆ, ಇನ್ನೂ ಕೆಲವು ವರ್ಷ ಗತಿಸಬೇಕು. ಸೋಮನಾಥಕವಿಯ ಕಾಲದಲ್ಲಿ ಕುಮಾರವ್ಯಾಸನ ಕೃತಿಯನ್ನೋದುವ ಗಮಕಿಗಳೂ, ಅದರ ಸೌಂದರ್ಯವನ್ನು ಪುರಸ್ಕರಿಸುವ ಪಂಡಿತರೂ ಅನೇಕ ಜನರಿರಬಹುದಾಗಿದೆ :

ಕವಿ ಕುಮಾರವ್ಯಾಸರಾಯನ
ಕವಿತೆಜಾಣರ ಸೊಬಗು ರಸ ಭಾ-
ವವನು ಸಂದಲಂಕೃತಿಯನತಿ ಮಧುರೋಕ್ತಿ ಕೌಶಲವ ||
ಸವಿನುಡಿಯ ಗಮಕಿಗಳ ಚರಣಾ-‌
ಬ್ಜವನು ಪಿಡಿದಕ್ರೂರ ಚರಿತೆಯ
ವಿವರಿಸಿದನಾ ಸೋಮನಾಥ ಕವೀಂದ್ರನೊಲವಿನಲಿ ||
( ಸಂ. ; ಪದ್ಯ )

ಎಂದಿರುವ ಈ ಪದ್ಯವನ್ನು ನೋಡಿದರೆ, ಈ ಕವಿಯ ಕಾಲದಲ್ಲಿ ಕುಮಾರವ್ಯಾಸನ ಕೃತಿಯ ಸಾಕಷ್ಟು ಲೋಕಪ್ರಿಯತೆಯನ್ನು ಪಡೆದಿರುವುದೆಂದು ಅಭಿವ್ಯಕ್ತವಾಗುತ್ತದೆ.

ಕನ್ನಡ ಕವಿಚರಿತಕಾರರು, ಕುಮಾರವ್ಯಾಸನ ಕಾಲವು ಕ್ರಿ. ೧೪೫೦ ಎಂದು ಊಹಿಸಿದ್ದಾರೆ; ಆದರೆ ಇಂದಿನ ಬಹುಜನ ಸಂಶೋಧಕರು, ಅವನ ಕಾಲವನ್ನು ಇನ್ನೂ ೨೦೦-೨೫೦ ವರ್ಷಗಳಷ್ಟು ಹಿಂದೆ ತಳ್ಳುತ್ತಲಿದ್ದಾರೆ. ವೀರಶೈವ ಸಾಹಿತ್ಯದ ೨-೩ ಕೃತಿಗಳು, ಕುಮಾರವ್ಯಾಸ-ಚಾಮರಸ-ರಾಘವಾಂಕರ ಸಮಕಾಲೀನ ಸಂಬಂಧವನ್ನು ಹೇಳಿರುವುದೂ, ಹಿಂದಕ್ಕೆ ತಳ್ಳಬೇಕೆನ್ನುವ ಅವರ ವಾದಕ್ಕೆ ಪೋಷಣೆಯನ್ನು ಕೊಡುತ್ತಲಿದೆ; ಅಲ್ಲದೆ ಕುಮಾರವ್ಯಾಸನ ಕೃತಿಯಲ್ಲಿ ಬಂದಿರುವ ಕೆಲವು ಆಂತರಿಕ ಸಂಗತಿಗಳು, ಆ ಕವಿಯ ಕಾಲವನ್ನು ಹಿಂದಕ್ಕೆ ತಳ್ಳಲು ಸಬಲ ಪ್ರಮಾಣಗಳನ್ನು ಒದಗಿಸುತ್ತವೆ. ಆದುದರಿಂದ, ಕುಮಾರವ್ಯಾಸನ ಕಾಲವು ೧೩ನೆಯ ಶತಮಾನದ ಮಧ್ಯಭಾಗವೆಂದು ಹಿಡಿದರೆ, ಅವನ ತರುವಾಯ ಸುಮಾರು ೧೫೦ ವರ್ಷಗಳ ಮುಂದೆ-ಎಂದರೆ ೧೫ನೆಯ ಶತಮಾನದ ಯಾವುದೋ ಭಾಗದಲ್ಲಿ, ಸೋಮನಾಥ ಕವಿಯು ಮುಂದೆ ಬಂದಿರಬಹುದೆಂದು ಭಾವಿಸುವಂತಿದೆ. ಮೈಸೂರ ಓರಿಯೆಂಟಲ್ ಲೈಬ್ರರಿಯಿಂದ ಕ್ರಿ.ಶ. ೧೯೨೩ರಲ್ಲಿ ಪ್ರಕಟವಾದ ’ಅಕ್ರೂರ ಚರಿತ್ರೆ’ಯ ಉಪೋದ್ ಘಾತದಲ್ಲಿ ಕ್ರಿ.ಶ. ೧೩ನೆಯ ಶತಮಾನದಲ್ಲಿದ್ದ ಸೋಮನಾಥ ಕವಿಯಿಂದ ಅಕ್ರೂರ ಚರಿತ್ರೆಯು ರಚಿಸಲ್ಪಟ್ಟಿತೆಂದು ತೋರುವುದು” ಎಂದು ಅದರ ಸಂಪಾದಕರಾದ ಶ್ರೀಮಾನ್ ಟಿ.ಎನ್. ಸುಬ್ಬರಾಯಶಾಸ್ತ್ರಿ, ರೆಸಿಡೆಂಟ್ ಪಂಡಿತ ಅವರು ಹೇಳಿದ್ದಾರೆ; ಆದರೆ ಅಕ್ರೂರ ಚರಿತ್ರೆಯ ಭಾಷೆ, ಶೈಲಿ, ಕೈಬರಹದ ಪ್ರತಿಗಳ ಕಾಲ ಇವುಗಳನ್ನೆಲ್ಲ ವಿಚಾರ ಮಾಡಿದಾಗ, ಈ ಕವಿಯನ್ನು ೧೩ನೆಯ ಶತಮಾನದಲ್ಲಿ ಕುಳ್ಳಿರಿಸಲು ನಮ್ಮ ಮನಸ್ಸು ಒಪ್ಪುವುದಿಲ್ಲ. ೧೫ನೆಯ ಶತಮಾನದ ಪ್ರಾರಂಭದಲ್ಲಿಯೋ, ಕೊನೆಯಲ್ಲಿಯೋ ಇರಬಹುದೆಂದು ಊಹಿಸಬಹುದು.

ಕ್ರಿ.ಶ. ೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಸೋಮನಾಥ ಎಂಬ ಸಂಸ್ಕೃತ ಕವಿಯೊಬ್ಬನು ಇದ್ದುದು ಸತ್ಯಸಂಗತಿ. ಇವನು ವ್ಯಾಸಯೋಗಿ ಚರಿತಂ ಎಂಬ ಹೆಸರಿನ ಸಂಸ್ಕೃತ ಭಾಷೆಯ ಕಾವ್ಯವೊಂದನ್ನು ಬರೆದಿದ್ದಾನೆ. ಶ್ರೀಕೃಷ್ಣ ದೇವರಾಯನ ಕುಹುಯೋಗವನ್ನು ನಿವಾರಿಸಿ, ರಾಜಗುರುಗಳ ಮನ್ನಣೆಯನ್ನು ಪಡೆದ ಶ್ರೀವ್ಯಾಸರಾಯಸ್ವಾಮಿಗಳ ಚರಿತ್ರೆಗೆ ಸಂಬಂಧಿಸಿದ ಕಾವ್ಯವದು. ಈ ಸಂಸ್ಕೃತ ಸೋಮನಾಥ ಕವಿಯೇ ಕನ್ನಡದಲ್ಲಿ ಅಕ್ರೂರಚರಿತ್ರೆಯನ್ನು ಬರೆದಿರಬಹುದೇನೋ ಎಂದು ಅನುಮಾನಿಸಿವಂತಿದೆ. ಏಕೆಂದರೆ, ಸಂಸ್ಕೃತ ಸೋಮನಾಥ ಕವಿ ಮಾಧ್ವ ವೈಷ್ಣವನಲ್ಲ. ಭಾಗವತಪಂಥಿಯಾಗಿರಬೇಕೆಂದು ಹೇಳಿದರೆ ತಪ್ಪೆನಿಸುವಂತಿಲ್ಲ. ಮಾಧ್ವವೈಷ್ಣವ ಪಂಥದ ಸಂನ್ಯಾಸಿಗಳ ಹರಿಭಕ್ತಿನಿಷ್ಠೆಯು, ಈ ಭಾಗವತ ಪಂಥದ ಭಕ್ತಕವಿಗೆ ತೀರ ಹತ್ತಿರದ್ದಾಗಿ ತೋರಿರಬಹುದು; ಎಂತಲೇ ಇವನು ಶ್ರೀವ್ಯಾಸರಾಯರ ವ್ಯಕ್ತಿತ್ವ-ಪಾಂಡಿತ್ಯಗಳಿಗೆ ಮನಸ್ಸು-ಹೃದಯಗಳನ್ನು ಮಾರುಗೊಟ್ಟಂತೆ ಅವರ ದಿವ್ಯ ಚರಿತ್ರವನ್ನು ಚಿತ್ರಿಸಿದ್ದಾನೆ.

ಇನ್ನೊಂದು ಮಾತು ಸಂಶೋಧಕರನ್ನು ವಿಚಾರಮಾಡಲು ಹಚ್ಚುವಂತಿದೆ. ಅಕ್ರೂರ ಚರಿತ್ರೆಯಲ್ಲಿ ಬಳಸಿದ ಶ್ರೀಕೃಷ್ಣನ ಪರ್ಯಾಯನಾಮಗಳಲ್ಲಿ “ಅಚ್ಯುತ” ಎಂಬುದು ಹೆಚ್ಚು ಸಲ ಬಂದಿರುವುದು. ಕ್ರಿ.ಶ. ೧೫೩೦ನೆಯ ವರ್ಷದಿಂದಲೇ ವಿಜಯನಗರದಲ್ಲಿ ಅಚ್ಯುತರಾಯನ ಆಳ್ವಿಕೆ ಪ್ರಾರಂಭವಾಗುತ್ತದೆ. ಪೂರ್ವದ ಕನ್ನಡ ಕವಿಗಳ ಪರಂಪರೆಗನುಸಾರವಾಗಿ, ಆಶ್ರಯವಿತ್ತ ದೊರೆಯನ್ನೆ ಕಾವ್ಯನಾಯಕನಾದ ಕೃಷ್ಣನಲ್ಲಿ ಈತ ಸಂಕೇತಿಸಿರಬಹುದೇನೋ – ಎಂದು ಭಾವಿಸುವಂತಿದೆ. ಸರಿಯಾದ ಪ್ರಮಾಣಗಳು ದೊರೆತು ಈ ಮಾತು ಸಿದ್ಧವಾದರೆ, ಈ ಕವಿ ವಿಜಯನಗರದ ಅಚ್ಯುತರಾಯನ ಆಶ್ರಯದಲ್ಲಿ ಇದ್ದವನೆಂಬುದೂ ಸಿದ್ಧವಾದೀತು; ಅದರೊಂದಿಗೆ ಕವಿಯ ಸ್ಥಳ-ಕಾಲಗಳ ಸಂಗತಿಯೂ ಗೊತ್ತಾದೀತು. ಶ್ರೀಕೃಷ್ಣದೇವರಾಯನ ಆಶ್ರಯದಲ್ಲಿದ್ದ ಸಂಸ್ಕೃತ ಸೋಮನಾಥ ಕವಿಯೇ ಅಚ್ಯುತರಾಯನ ಕಾಲದಲ್ಲಿ ಕನ್ನಡ ಸೋಮನಾಥ ಕವಿಯೂ ಆಗಿರಬಹುದೆಂದು ಭಾವಿಸಲಿಕ್ಕೆ ಅವಕಾಶವುಂಟಾದೀತು. ಅದುವರೆಗೆ ಕವಿಯ ಸ್ಥಳ-ಕಾಲಗಳ ವಿಷಯ, ಚರ್ಚೆಯ ವಿಷಯವಾಗಿಯೆ ಉಳಿಯುವುದು.

  ಸೋಮನಾಥ ಕವಿಯ ಕೃತಿ ವಿಚಾರ

“ಅಕ್ರೂರಚರಿತೆ” ಯಲ್ಲದೆ ಬೇರೆ ಕಾವ್ಯಗಳನ್ನಾದರೂ ಬರೆದಿರಬಹುದೇ ಎಂಬುದನ್ನು ತಿಳಿಯಲು ಯಾವ ಪ್ರಮಾಣಗಳೂ ದೊರೆತಿಲ್ಲ; ಇಷ್ಟೇ ಅಲ್ಲ, ಅಕ್ರೂರ ಚರಿತ್ರೆಯ ಕೈಬರಹದ ಪ್ರತಿಗಳೂ ಹೆಚ್ಚಾಗಿ ದೊರೆತಿಲ್ಲ. ದೊರೆತಿರುವ ಪ್ರತಿಗಳಲ್ಲಿ ಸಂಧಿ ಸಂಖ್ಯೆಯು ಒಂದೆ ಬಗೆಯದಾಗಿಲ್ಲ. ಪದ್ಯಗಳ ಸಂಖ್ಯೆ, ಪದ್ಯಾನುಕ್ರಮಗಳೂ ಅಲ್ಲಲ್ಲಿ ವ್ಯತ್ಯಾಸಗೊಂಡಿವೆ. ಮಹತ್ತ್ವದ ಪಾಠಾಂತರಗಳು ಸಾಕಷ್ಟು ಇವೆ. ಈ ಮೊದಲು ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ ಮೈಸೂರು ಓರಿಯೆಂಟಲ್ ಲೈಬ್ರರಿಯವರಿಗೂ ಎರಡೇ ಹಸ್ತಪ್ರತಿಗಳು ದೊರೆತಿವೆ. ಅವುಗಳಲ್ಲಿಯ ಒಂದು ಮಾತ್ರ ಓಲೆಯ ಪ್ರತಿ; ಇನ್ನೊಂದು ಕಾಗದದ ಪ್ರತಿ ಅವೆರಡರಲ್ಲಿ ಸಾಕಷ್ಟು ವ್ಯತ್ಯಾಸ ವೈಷಮ್ಯಗಳಿವೆಯಂತೆ. ಮೂಲ ಪ್ರತಿಕಾರರ ಕೈವಾಡದಿಂದ ಹಾಗೆ ಆಗಿರಬಹುದು.

ನಾವೀಗ ಬೇರೆ ಬೇರೆ ಮೂರು ಪ್ರತಿಗಳ ಆಧಾರದಿಂದ ಈ ಕೃತಿಯ ಸಂಪಾದನೆಯ ಕಾರ್ಯವನ್ನು ಕೈಕೊಂಡಿದ್ದೇವೆ.

೧. ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನೆ ಸಂಸ್ಥೆಯ ಹಸ್ತಪ್ರತಿಗಳ ಭಂಡಾರದಲ್ಲಿರುವ ಕ್ರಮಾಂಕ ೨೧೭೮ನೆಯ ತಾಳೆಯೋಲೆಯ ಪ್ರತಿ. ಇದಕ್ಕೆ “ಅ” ಎಂಬ ಸಂಕೇತಾಕ್ಷಾರವನ್ನು ನಾವು ಕೊಟ್ಟಿದ್ದೇವೆ.

೨. ಮೇಲಿನ ಸಂಶೋಧನ ಸಂಸ್ಥೆಯಲ್ಲಿಯೆ ಇರುವ ಕ್ರಮಾಂಕ ೨೧೭೯ನೆಯ ತಾಳೆಗರಿಯ ಪ್ರತಿ. ಇದನ್ನು ಗುರುತಿಸಲು ’ಆ’ಎಂಬ ಸಂಕೇತಾಕ್ಷರವನ್ನು ಕೊಡಲಾಗಿದೆ.

೩. ಮೈಸೂರು ಸರಕಾರದ ಓರಿಯೆಂಟಲ್ ಲೈಬ್ರರಿಯ ಮುಖ್ಯಾಧಿಕಾರಿಗಳೂ, ಪ್ರಾಚ್ಯಸಂಶೋಧನ ವಿಭಾಗದ ಡೈರೆಕ್ಟರರೂ ಆಗಿದ್ದ ಡಾ.ಆರ್.ಶ್ಯಾಮಾಶಾಸ್ತ್ರಿ, ಬಿ.ಎ., ಪಿ.ಎಚ್ ಡಿ., ಎಂ.ಆರ್.ಎ.ಎಸ್, ಅವರು ಸಂಪಾದಿಸಿ ೧೯೨೩ರಲ್ಲಿ ಬೆಳಕಿಗೆ ತಂದ ಮುದ್ರಿತ ಪ್ರತಿ. ಇದನ್ನು ಗುರುತಿಸಲು “ಮು” ಎಂಬ ಸಂಕೇತವನ್ನು ಕೊಡಲಾಗಿದೆ.

. ಆಕರ ಪ್ರತಿಗಳ ಪರಿಚಯ

ಸಂಕೇತದ ತಾಳೆಗರಿಯ ಪ್ರತಿಯಲ್ಲಿ ಒಟ್ಟು ೫೫ ಗರಿಗಳ್ಳಿದ್ದು, ಪೀಠಿಕಾ ಸಂಧಿ ೧-೩ರ ವರೆಗಿನ ಗರಿಗಳಲ್ಲಿ ಮುಗಿದಿದೆ. ಮುಂದಿನ ಏಳು ಸಂಧಿಗಾಗಿ ೧ರಿಂದ ೫೨ರ ವರೆಗೆ ಅಂಕಿಗಳನ್ನೊಳಗೊಂಡ ಗರಿಗಳಿವೆ.

ಪ್ರತಿಯೊಂದು ಪುಟವು 12 1/4 ಇಂಚು ಉದ್ದ 1 1/4 ಇಂಚು ಅಗಲ ಇವೆ. ಪ್ರತಿ ಪುಟದಲ್ಲಿಯೂ ೫ ಅಥವಾ ೬ ಅಕ್ಷರ ಪಂಕ್ತಿಗಳಿದ್ದು, ಅಕ್ಷರಗಳು ಸುಂದರವಾಗಿಯೂ ಇವೆ. ಪ್ರತಿ ಮಾಡಿದ ವ್ಯಕ್ತಿ-ಕಾಲಗಳನ್ನು ಆದಿ ಅಂತ್ಯಗಳಲ್ಲಿ ಎಲ್ಲಿಯೂ ಕಾಣಿಸಿಲ್ಲ. ಆದರೆ ಗರಿಗಳ ಹಳೆಯತನವನ್ನೂ ಲಿಪಿಲೇಖನದ ರೀತಿಯನ್ನೂ ನೋಡಿದರೆ, ಈ ಪ್ರತಿಯನ್ನು ೧೭೫-೮೦ ವರ್ಷಗಳಿಗೆ ಹಿಂದೆಯೆ ಬರೆದಿರಬಹುದೆಂದು ಎನಿಸದಿರದು.

ಈ ಹಸ್ತ ಪ್ರತಿಯ ಕ್ರಮಾಂಕ ೨೪ ಗರಿಯ ಅರ್ಧಭಾಗ ಹರಿದು ಹೋಗಿದೆ. ಅಲ್ಲದೆ ಅನೇಕ ಗರಿಗಳ ಕೆಳಬದಿಯು ಹರಿದು ಹೋಗಿದ್ದು. ಹುಳುಗಳು ಕಡಿದುದರಿಂದ ಅಲ್ಲಲ್ಲಿ ತೂತುಗಳು ಬಿದ್ದಿವೆ. ಆದುದರಿಂದ ಅಕ್ಷರಗಳೂ ಚರಣಭಾಗಗಳೂ ಹೋಗಿ ಬಿಟ್ಟಿವೆ. ೪೨-೪೪ನೆಯ ಕ್ರಮಾಂಕದ ಗರಿಗಳೆರಡು ಕಳೆದುಹೋಗಿವೆ.

ಈ ಪ್ರತಿಯಲ್ಲಿ ಪೀಠಾಕಾಸಂಧಿಯನ್ನು ಹಿಡಿದು ಒಟ್ಟು ಎಂಟು ಸಂಧಿಗಳಿವೆ. ಆ ಪ್ರತಿಯಲ್ಲಿ ಏಳನೆಯದಾಗಿರುವ ೩೫ ಪದ್ಯಗಳುಳ್ಳ ಒಂದು ಸಂಧಿಯನ್ನು ಇದರಲ್ಲಿ ತೆಗೆದುಕೊಂಡೇ ಇಲ್ಲ. ಅದರಂತೆಯೇ ಈ ಪ್ರತಿಯ ನಾಲ್ಕನೆಯ ಸಂಧಿಯಲ್ಲಿರುವ ೭೮ ಪದ್ಯಗಳಲ್ಲಿ ಸುಮಾರು ೨೨ ರಷ್ಟು ಪದ್ಯಗಳನ್ನು ಆ ಪ್ರತಿಕಾರನು ತೆಗೆದು ಕೊಂಡಿಲ್ಲ. ಇದರಲ್ಲಿ ಪ್ರತಿಯೊಂದು ಸಂಧಿಯಲ್ಲಿ ಇರುವ ಪದ್ಯಗಳ ಸಂಖ್ಯಾನುಕ್ರಮವು ಈ ರೀತಿಯಲ್ಲಿದೆ.

೧ ಸಂ- ೨೩ ಪದ್ಯ, ೨ ಸಂ- ೬೫ ಪದ್ಯ, ೩ ಸಂ- ೫೨, ೪ ಸಂ- ೭೮ ಪದ್ಯ, ೫ ಸಂ- ೫೫ ಪದ್ಯ, ೬ ಸಂ- ೫೫ ಪದ್ಯ, ೭ ಸಂ- ೯೦ ಪದ್ಯ ೮ ಸಂ. ೫೬ ಇವೆಲ್ಲ ಪದ್ಯಗಳ ಮೊತ್ತ ೪೭೪ ಆದರೂ, ಹಸ್ತಪ್ರತಿಯ ಕೊನೆಯಲ್ಲಿ “ಅಂತು ಸಂಧಿ ೮ ಕಂಪದನು ೪೭೩ ಕಂ ಮಂಗಳ ಮಹಾ ಶ್ರೀ” ಎಂದು ಬರೆಯಲಾಗಿದೆ, ನಿಜವಾದ ಮೊತ್ತಕ್ಕಿಂತಲೂ ಒಂದು ಪದ್ಯ ಕಡಿಮೆಯಾಗಿದೆ- ಅದೇಕೋ ಏನೋ !

“ಆ” ಸಂಕೇತದ ಹಸ್ತಪ್ರತಿಯಲ್ಲಿ ಕ್ರಮಾಂಕ ೧ ರಿಂದ ೬೪ರವರೆಗೆ ಗರಿಗಳಿದ್ದು ಪೂರ್ಣ ಕೃತಿಯನ್ನು ಒಳಗೊಂಡಿದೆ. ಆದರೆ ೩೬ ರಿಂದ ೬೪ರ ವರೆಗಿನ ಗರಿಗಳು ಕಳೆದುಹೋಗಿವೆ. ೬೨ ರಿಂದ ೬೪ರ ವರೆಗಿನ ಗರಿಗಳು ತೀರ ಖಿಲವಾಗಿವೆ. ಅಲ್ಲದೆ ಇಡಿಯ ಪ್ರತಿಯ ಎಲ್ಲ ಗರಿಗಳಿಗೂ ಹುಳು ತಿಂದ ತೂತುಗಳಿವೆ. ೨೮-೨೯ ನೆಯ ಗರಿಗಳು ಅಪೂರ್ಣವಾಗಿವೆ.

ಈ ಹಸ್ತಪ್ರತಿಯ ಗರಿಗಳ ಉದ್ದಳತೆ 12 1/2 ಇಂಚು; ಅಗಲಳತೆ 1 1/4  ಇಂಚು. ಒಂದೊಂದು ಗರಿಯಲ್ಲಿ ಆರಾರು ಅಕ್ಷರ ಪಂಕ್ತಿಗಳಿವೆ. ಅಕ್ಷರ ಕೊರತೆ ಚೆನ್ನಾಗಿದೆಯಾದರೂ ಅವು ಸ್ವಷ್ಟವಾಗಿ ಕಾಣುವ ಸ್ಥಿತಿಯಲ್ಲಿಲ್ಲ.

ಪೀಠಿಕಾಸಂಧಿಯನ್ನು ಹಿಡಿದು ೯ ಸಂಧಿಗಳಿವೆ ಇದರಲ್ಲಿ. ಕಳೆದು ಹೋಗಿರುವ ೩೬ ರಿಂದ ೪೩ರ ವರೆಗಿನ ಗರಿಗಳಲ್ಲಿ, ಆರನೆಯ ಸಂಧಿಯ ೧೦ನೆಯದರಿಂದ ಕೊನೆಯವರೆಗಿನ ಪದ್ಯಗಳೂ, ಏಳನೆಯ ಸಂಧಿಯ ಪ್ರಾರಂಭದ ಸೂಚನೆಯೊಂದಿಗೆ ೬ ಪದ್ಯಗಳೂ ಇಲ್ಲದಂತಾಗಿವೆ. ಪೀಠಿಕಾಸಂಧಿಯಲ್ಲಿ ಕೇವಲ ಹತ್ತು ಪದ್ಯಗಳನ್ನು ಬರೆಯಲಾಗಿದೆಯಾದರೂ ೮-೯-೧೦ನೆಯ ಪದ್ಯಗಳಿಗೆ ೧೮-೧೯-೨೦ ಎಂದು ಕ್ರಮಾಂಕಗಳು ಬಂದಿವೆ. ಅಲ್ಲದೆ ಎರಡನೆಯ ಸಂಧಿಯ ಸೂಚನಾಪದ್ಯ ಮತ್ತು ೧ನೆಯ ಪದ್ಯಗಳನ್ನು ಇದರಲ್ಲಿ ಹಿಂದೆ ಮುಂದೆ ಮಾಡಿ ಬರೆಯಲಾಗಿದೆ.

ಕನ್ನಡ ಕವಿಚರಿತೆಕಾರರು ಉಲ್ಲೇಖಿಸಿರುವಂತೆ, ಈ ಹಸ್ತಪ್ರತಿಯಲ್ಲಿ ೯ ಸಂಧಿಗಳಿವೆಯಾದರೂ ಪದ್ಯಗಳ ಮೊತ್ತದ ಸಂಖ್ಯೆಗಳು ಹೆಚ್ಚು ಕಡಿಮೆಯಾಗಿವೆ. ಕವಿ ಚರಿತಕಾರರ ಮೊತ್ತದ ಸಂಖ್ಯೆ ೫೦೧ ಎಂದಿದೆ. ಈ ಹಸ್ತ ಪ್ರತಿಗಳಲ್ಲಿರುವ ಪದ್ಯಗಳ ಮೊತ್ತ ೪೮೫ ರಷ್ಟಾಗುವುದು. ಪೀಠಿಕಾಸಂಧಿಯಲ್ಲಿ ಬರೆಯದೆ ಬಿಟ್ಟಿರುವ ೧೪ ಪದ್ಯಗಳನ್ನು ಕೂಡಿಸಿದರೂ ೫೦೧ ಕ್ಕಿಂತ ಮೊತ್ತ ಕಡಿಮೆಯೆ ಆಗುತ್ತದೆ.

ಇದರಲ್ಲಿರುವ ೯ ಸಂಧಿಗಳು ಪದ್ಯಗಳ ಸಂಖ್ಯೆ ಈ ರೀತಿಯಲ್ಲಿದೆ : ಸಂ. ೧-೯ (೨೦?) ಪದ್ಯ . ಸಂ ೨-೬೫ ಪದ್ಯ, ಸಂ ೩-೫೫ ಪದ್ಯ, ಸಂ ೪-೫೬ ಪದ್ಯ, ಸಂ. ೫-೫೪ ಪದ್ಯ, ಸಂ. ೬-೫೫ ಪದ್ಯ, ಸಂ ೭-೩೫ ಪದ್ಯ, ಸಂ. ೮-೯೦ ಪದ್ಯ, ಸಂ. ೯-೬೬ ಪದ್ಯ. ೯ನೆಯ ಸಂಧಿಯ ಕೊನೆಯಲ್ಲಿ ಗ್ರಂಥಸಮಾಪ್ತಿಯಾದ ಮೇಲೆ ಈ ಪ್ರತಿಯ ೧೭೫-೮೦ ವರ್ಷಗಳ ಹಿಂದೆ ಬರೆದುದಾಗಿರಬಹುದು.

ಮು ಅಕ್ಷರ ಸಂಕೇತದ ಪ್ರತಿಯು, ಈ ಮೊದಲು ಹೇಳಿರುವಂತೆ ಮೈಸೂರು ಸರಕಾರದ ಓರಿಯೆಂಟಲ್ ಲೈಬ್ರರಿಯವರು ಸಂಪಾದಿಸಿ ಪ್ರಕಟಿಸಿದ ಮುದ್ರಿತ ಪುಸ್ತಕ. “ಓ” ಮತ್ತು “ಕಾ” ಎಂಬ ಅಕ್ಷರ ಸಂಕೇತದ ಎರಡು ಹಸ್ತ ಪ್ರತಿಗಳ ಆಧಾರದಿಂದ ಈ ಪುಸ್ತಕವನ್ನು ಸಂಪಾದಿಸಲಾಗಿದೆ. ಡೆ. ಅಷ್ಟಪತ್ರ ದಳತೆಯ ೧೩೫ ಪುಟಗಳಲ್ಲಿ ಮೂಲ ಕೃತಿಯು ಅಚ್ಚಾಗಿದೆ. ಇದಕ್ಕೆ ಆಧಾರವಾಗಿರುವ ಓ ಪ್ರತಿಯು ನಮ್ಮ ಅ ಪ್ರತಿಯ ಪರಂಪರೆಗೂ ಸೇರಿದುದಾಗಿ ತೋರುತ್ತದೆ.

ಈ ಪ್ರತಿಯಲ್ಲಿಯೂ ಎಂಟೆ ಎಂಟು ಸಂಧಿಗಳಿವೆ: ಆದರೆ ಆ ಪ್ರತಿಯ ೭ನೆಯ ಸಂಧಿಯ ೩೫ ಪದ್ಯಗಳನ್ನು ಇದರ ೬ನೆಯ ಸಂಧಿಯಲ್ಲಿಯೆ ಸೇರಿಸಿಕೊಳ್ಳಲಾಗಿದೆ. ನಮ್ಮ ಪುಸ್ತಕದ ಸಂಪಾದನೆಗಾಗಿ ತೆಗೆದುಕೊಂಡಿರುವ ಮೂಲ ಕೃತಿಗಳನ್ನು ನೋಡಿದರೆ, ಮುದ್ರಿತ ಪುಸ್ತಕದ ಸಂಪಾದಕರು, ಭಾಷಾಶುದ್ದಿ-ಶಬ್ದ ಶುದ್ಧಿಗಳ ಕಾರಣದಿಂದ ಅಲ್ಲಲ್ಲಿ -ಸಾಕಷ್ಟು-ತಿದ್ದುವ ಸ್ವಾತಂತ್ರವನ್ನು ವಹಿಸಿರುವಂತೆ ತೋರುತ್ತದೆ.

ಮುದ್ರಿತ ಪುಸ್ತಕದ ೮ ಸಂಧಿಗಳಲ್ಲಿರುವ ಪದ್ಯಗಳ ಸಂಖ್ಯೆ ಈ ಬಗೆಯಲ್ಲಿದೆ: ಸಂ.೧-ಪ.೨೩, ಸಂ.೨-ಪ.೬೬, ಸಂ.೩-ಪ.೫೨, ಸಂ.೪-ಪ.೮೫. ಸಂ.೫-ಪ.೫೩ ಸಂ.೬-ಪ.೮೪, ಸಂ..೭-ಪ.೯೦, ಸಂ.೮-ಪ.೬೦, ಒಟ್ಟು ಪದ್ಯಗಳ ಸಂಖ್ಯೆ ೫೧೩.

ಆ ಪ್ರತಿಯೊಂದನ್ನು ಬಿಟ್ಟರೆ ಮಿಕ್ಕ ಎಲ್ಲ ಪ್ರತಿಗಳಲ್ಲಿ ಕೃತಿಯ ಕೊನೆಯ ಭಾಗವು ಮೊಟಕಾಗಿ ಮುಗಿದಿರುವಂತೆ ಕಾಣದಿರದು. ಆ ಪ್ರತಿಯಲ್ಲಿರುವ ಕೊನೆಯ ಸಂಧಿಯು ೫೬ ಪದ್ಯಗಳಿಂದ ಕೂಡಿದ್ದು, ಕೃತಿಸಮಾಪ್ತಿಯಾಯಿತೆಂಬುದು ಗೊತ್ತಾಗುವುದೇ ಇಲ್ಲ. ಮುದ್ರಿತ ಪ್ರತಿಯಲ್ಲಿ ಕೊನೆಗೆ ನಾಲ್ಕು ಪದ್ಯಗಳು ಹೆಚ್ಚಾಗಿವೆಯಾದರೂ ಕೃತಿ ಮುಕ್ತಾಯದ ಕ್ರಮವು ಒಪ್ಪುಗೊಂಡಿಲ್ಲ. ಆ ಪ್ರತಿಯ ಕೊನೆಯ ಸಂಧಿಯು ೬೬ ಪದ್ಯಗಳಿಂದ ಕೂಡಿದ್ದು, ಕೊನೆಯ ಎಂಟು ಪದ್ಯಗಳಲ್ಲಿ ಉಗ್ರಸೇನನ ರಾಜ್ಯಭಾರ ಕ್ರಮವನ್ನೂ ಫಲಶ್ರುತಿ-ಸ್ವಸ್ತಿ ವಾಚನಗಳನ್ನೂ ಹೇಳಿ ಕೃತಿಯ ಸಮಾಪ್ತಿಯನ್ನು ಮಾಡಲಾಗಿದೆಯೆಂಬುದು ತಿಳಿಯುತ್ತದೆ. ಆದರೆ ಗರಿಗಳ ಜೀರ್ಣಾವಸ್ಥೆಯ ಮೂಲಕ ಈ ಕೊನೆಯ ಎಂಟು ಪದ್ಯಗಳ ಹೆಚ್ಚಿನ ಭಾಗಗಳು ನಷ್ಟವಾಗಿರುವುದರಿಂದ ನಮಗೆ ಕಾಣುವಷ್ಟು ಭಾಗಗಳನ್ನು ಪ್ರಯತ್ನಪಟ್ಟು ಓದಿ ನೋಡಿದಾಗ ಇಷ್ಟು ಮಾತಗಳು ನಮಗೆ ದೊರೆತುವು.
…  …  …  …  …
…  …  …  …  ಬಳಿ
ಕಾಗರುತ್ಮದ್ಧ್ವ ಜನ ಹೊರಗೈತಂದು ಕೈಮುಗಿದು
ಭೋಗಶಯನ  …  …
…  …  ….  ….
…  ನೆ ಜಯಜಯೆನುತಕ್ರೂರ ಕುಳಿತಿರ್ದ     ೫೭

ಕರೆಸಿದನು ಹರಿ  …  …
….  …  …  ….
….  …. ಮಂತ್ರಿ ನಿನಗಕ್ರೂರ … ನನೂ ||
ಹರುಷದಿಂದನ್ನಂತೆ …. ಕಾಣ್ಬುದು
ಪರಮ ….  …  ….
…  ….  …. ಯದುಕುಲವ ಪಾಲಿಸಿದೆ          ೫೮

ಬಳಿಕ ಯದುರಾಜ್ಯಾಧಿಪತ್ಯದೆ
ಲಲಿತವಿಭವ …. … …
….  …  ….  …  …  … ಗಡಣದಲಿ ||
ತೊಳಪ ತಾರಾವಳಿಯ ಮಧ್ಯೆ
ಸ್ಥಳದ ಚಂದ್ರಮನಂತೆ
..  ..  ..  ..  ..  …  … …  …  …       ೫೯

ದೇಶದೊಳಗನ್ಯಾಯ ಡಾವರ
ಮೋಸ ಪುಸಿ ಪಿಸುಣತ್ವ ವಳಿ ವಿ-
ಶ್ವಾಸಘಾತಕ  ….  ….  …  …  …  ||
…  ….  …  ….  ತಿ
ವೋಸರಿಸದಂತೊಲಿದು ಮಹಿಳಾ-
ಧೀಶ ಪಾಲಿಸುತಿರ್ದ್ದನಾ ಯದುರಾಜ್ಯ .. …. .. ೬೦

…  ….  ….  … ಆನಕ-
ದುಂದುಭಿಯ ದೇವಕಿಯ ಗೋಪರ
ವೃಂದವನು ಬಲದೇವನಕ್ರೂರಾದಿ ಯಾದವರ  |
…  ….  ….  ಸುರಮನಿ
ವೃಂದ ಭಜಿಸುತ್ತಿರಲು ..  ….  ….
…. …. …. …. … .. … .. … …            ೬೧

(೬೨ನೆಯ ಪದ್ಯಭಾಗಗಳು ತಿಳಿಯುವುದೇ ಇಲ್ಲ )
.. .. .. ..
.. .. .. ..
.. .. … … ಸಾರಥಿಯಾಗಿ ಫಲುಗುಣಗೆ  ||
.. .. .. ..
….. ……………. .. … ಭಕ್ತರನು ಪಾಲಿಸುತೆ ೬೩

ದೇವ ಜಯ ಜಯ ವಿಶ್ವತೋಧರ
…. …. …. ….
…   ….   ….   ….  …  …  …  …  ||
…  …  ….  ….
…  …  ..  …  ….
ದೇವ ಯದುಕುಲ ಪಾಲಕನೆ ಜಯದೇವ .. ……… ೬೪

ಸೋಮಕವಿಯಕ್ರೂರ ಚರಿತೆಯ
ತಾ ಮಹಾಭಕ್ತಿ ಯಲೊರೆದು ..
..  ….   …  ಕೃತಿಯ
ಭೂಮಿಯೊಳಗೋದುವರ ಕೇಳ್ವರ
ನಾ ಮಹಿಮ ಶ್ರೀ ಕೃಷ್ಣ ಸಲಹುವ
..  ..  …  …  …  …  …  …     ರಲಿ            ೬೫

ಗೋಧನವ ಸಾಸಿರುವ ವಿಪ್ರರಿ-
ಗಾದರದೆ ಗಂಗೆಯ ತಡಿಯಲಾ
….  ..  ….  …  …  ..  ರಲಾ    ||
ಆದರದಿ ರಕ್ಷಿಸಿದ ಫಲವೆಂ
ದಾದಯಾನಿಧಿ ಕೃಷ್ಣ ನಾಜ್ಞೆಯೊ
ಳೋದು  …  …  ….   ….              ರೂ    ||  ೬೬ ||

ಈ ನಷ್ಟಶೇಷ ಪದ್ಯ ಭಾಗಗಳಲ್ಲಿ ಯಥೋಚಿತ ಕೃತಿ ಸಮಾಪ್ತಿ ಕ್ರಮದ ಸೂಚನೆ ಕಂಡುಬರುತ್ತದೆ; ಅಲ್ಲದೆ ೯ ಸಂಧಿಗಳುಳ್ಳ ಕೃತಿಯೆಂಬುದೂ ಕೊನೆಯಲ್ಲಿ ಸ್ವಷ್ಟವಾಗಿರುತ್ತದೆ. ಆದರೆ ಆ ಪ್ರತಿಯ ಪೀಟಿಕಾ ಸಂಧಿಯಲ್ಲಿ, ಬೇರೆಯ ಪ್ರತಿಗಳಲ್ಲಿ ಕಾಣುವ ೧೪ ಪದ್ಯಗಳನ್ನು ೪ನೆಯ ಸಂಧಿಯಲ್ಲಿಯ ಗೋವಳಿತಿಯರ ವಿರಹ ದು:ಖಕ್ಕೆ ಸಂಬಂಧಿಸಿದ ೨೨ ಪದ್ಯಗಳನ್ನೂ ಏಕೆ ಬರೆಯಲಿಲ್ಲವೆಂಬುದನ್ನು ಊಹೆಯಿಂದಲೇ ನಾವು ಅರಿತುಕೊಳ್ಳಬೇಕು.

ನಾವು ನೋಡಿದ ಎರಡು ಪ್ರತಿಗಳಲ್ಲಿಯೂ ಲಿಪಿಕಾರರ ಅಶುದ್ಧ ಲೇಖನದ ಉದಾಹರಣೆಗಳು ಪದ್ಯ ಪದ್ಯಗಳಲ್ಲಿಯೂ ನೋಡಲು ಸಿಕ್ಕುವವು. ಆ ಕಾಲದ ಬೇರೆ ಹಸ್ತಪ್ರತಿಗಳಲ್ಲಿಯೂ ಇವೇ ಬಗೆಯ ಲೇಖನ ದೋಷಗಳು ಇರುವುದನ್ನು ನೋಡಿದರೆ, ಲೇಖನ ಶುದ್ಧಿಯ ಬಗೆಗೆ ಅವರು ಇರಿಸಿಕೊಂಡ ಕಲ್ಪನೆಯೇ ಬೇರೆಯ ರೀತಿಯದಾಗಿರಬಹುದೆಂದು ತೋರುವುದು. ಮಾದರಿಗಾಗಿ ಒಂದೆರಡು ಪದ್ಯಗಳನ್ನು ನೋಡಬಹುದು :

ತನಗೆ ಹಗೆಯಹ ದೇವಕಿ ನಂ-
ದನನ ಭುಜಸಾಹಸವ ಕೆಳಿದು
ಮೊನೆಯಲಗು ಕಿಬ್ಬಸುರಿನಲಿ ಮಸೆದೊರಿದಂದದಲಿ
ತನುವನಹಿ ಪಿಡಿದಂತೆ ಚಿಂತಾ
ವನದಿಯಲಿ ಮನಮುಳುಗಿ ನಾರದ
ಮುನಿಯ ನುಡಿ ತಲೆ ತಾಗಿತೆನುತಳವಳಿದನಾ ಕಂಸ ||

ಮದವದಳಿ ಗಜದಂತೆ ಬಲುಪಿಂ
ಗಿದ ಮ್ರುಗಾದಿಪನಂತೆ ವದನದ
ಹಲುಗಳದ ಪಣಿಯಂತೆ ಮರ್ಕಟ ಪಾವ ಕಂಡಂತೆ
ಸುದತಿಯರು ಖತಿಯಾದ ನರನಂ
ತದಿಕ ಚಿಂತೆಯ ತಾಳು ನಾನಾ
ವಿದದುಪಾಯವನೆನಿಸುತೋಲಗ ಸಾಲೆಗೈ ತಂದ ||
(೨ನೆಯ ಸಂಧಿ ೨-೩ ಪದ್ಯಗಳು)
ಎಂದಡೆಂದನು ಕಂಶ ಹಗೆ ಬಡ-
ವೆಂದು ಹಂಕರಿಸುವರೆ ನಾನಾ
ಛಂದದಲ್ಲಿ ಜಯಸುಉದು ಸಂನ್ಮಥ ರಾಜನೀತಿಯಲಿ
ಬಂದುತನದಲಿ ದಾನದಲಿ ಬಲ
ಹಿಂದ ಕುಹಕೊಪಾಯದಲಿ ಕೊಲು-
ವಂದವನು ಪೆಳೆನಲು ನಗುತಕ್ರೂರ ನಿಂತೆಂದ ||

ನಿನರಿಯದಿಹ ನಿತಿಗಳನ-
ಗ್ನಾನಿಗಳು ನಾವೆತ್ತ ಬಲ್ಲೆ ಉ
ಭಾನುವಿನ ಸಾಮರ್ಥ್ಯ ಉಂಟೆ ಮಿಂಚುಬುಳುವಿಂಗೆ ||
ಎನನಾದಡು ಬೆಸೆಸೆ ಕೈ ಕೊಂ-
ಡಾಉದನು ಸಲೆ ಮಾಳ್ವೆನೆಂದಾ
ದಾನಪತಿ ಕೈ ಮುಗಿದು ನುಡಿದರೆ ಕಂಶನಿಂತೆಂದ  ||
(ಸಂ. ೨-ಪ ೧೩-೧೪)
ಮೂಲ ಕೃತಿಯನ್ನು ಪ್ರತಿ ಮಾಡಿಕೊಳ್ಳಬೇಕಾದಾಗ. ಹಸ್ತ ಪ್ರತಿಕಾರರು ಸ್ವಲ್ಪ ಸ್ವಾತಂತ್ರ‍್ಯ ವಹಿಸುತ್ತಿದ್ದರೆಂದು ತೋರುವುದು. ತಮಗೆ ಬೇಡವೆನಿಸಿದ ಪದ್ಯಗಳನ್ನು ಅವರು ಬರೆದುಕೊಳ್ಳದೆ ಬಿಟ್ಟುಬಿಡುತ್ತಿದ್ದರೇನೋ! ಏಕೆಂದರೆ “ಅ” ಪ್ರತಿಯಲ್ಲಿ ಇದ್ದ ಕೆಲವು ಪದ್ಯಗಳು “ಆ” ಪ್ರತಿಯಲ್ಲಿ ಇಲ್ಲ; “ಆ” ಪ್ರತಿಯಲ್ಲಿ ಕಾಣುವ ಕೆಲವು ಪದ್ಯಗಳು ” ಆ” ಪ್ರತಿಯಲಿಲ್ಲ. ಇವೆರಡರಲ್ಲಿಯೂ ಇಲ್ಲದ ಕೆಲವು ಪದ್ಯಗಳು ಮುದ್ರಿತ ಪ್ರತಿಯಲ್ಲಿವೆ. ಹೆಚ್ಚಿನ ಪದ್ಯಗಳು ಮೂಲ ಕವಿಯಿಂದ ರಚಿತವಾದುವೊ, ಇನ್ನಾರಿಂದಲಾದರೂ ರಚಿತವಾಗಿ ಸೇರಿಕೊಂಡಿರುವೆಯೋ ? — ಎಂಬುದು, ಇನ್ನಿಷ್ಟು ಹಸ್ತಪ್ರತಿಗಳು ದೊರೆತು, ಹೆಚ್ಚಿನ ಸಂಶೋಧನ ಕಾರ್ಯ ನಡೆದಾಗಲೇ ಸ್ಪಷ್ಟವಾಗುವ ವಿಷಯ. ಈಗ ನಾವು ಎಲ್ಲ ಪ್ರತಿಗಳಲ್ಲಿಯ ಪದ್ಯಗಳನ್ನೂ ಔಚಿತ್ಯ ವರಿತು — ಸ್ವೀಕರಿಸಿರುವೆವಾದುದರಿಂದ, ನಮ್ಮ ಈ ಸಿದ್ಧಪ್ರತಿಯ ಪದ್ಯಗಳ ಸಂಖ್ಯೆ ೫೧೮ ಕ್ಕೆ ಏರಿನಿಂತಿದೆ.

ಸಿದ್ಧ ಪ್ರತಿಯ ೯ ಸಂಧಿಗಳ ಸಂಖ್ಯೆ ಈ ರೀತಿಯಲ್ಲಿದೆ;

ಸಂ. ೧- ಪ. ೨೩, ಸಂ. ೨-ಪ. ೬೬, ಸಂ. ೩-ಪ. ೫೫, ಸಂ. ೪-ಪ. ೮೨, ಸಂ. ೬ಪ-೫೬, ಸಂ ೭-ಪ.೩೫ (ಇದರಲ್ಲಿ ೫ ಪದ್ಯಗಳು ಕಳೆದು ಹೋಗಿವೆ) , ಸಂ. ೮-ಪ. ೯೦ ಸಂ. ೯-ಪ. ೬೧ (ಇದರಲ್ಲಿಯೂ ಒಂದು ಪದ್ಯ ಗ ಕಾರ ದ್ವಿತೀಯಾಕ್ಷರ ಪ್ರಾಸವುಳ್ಳದು ತೀರ ಖಿಲವಾಗಿ ಹೋಗಿದೆ). ಒಟ್ಟು ಪದ್ಯಗಳು ೫೨೪-೬=೫೧೮.


[1] [* ಕನ್ನಡ ಭಾಗವತದ ಕವಿಗಳೆಲ್ಲರೂ “ಅಚ್ಯುತಾರಣ್ಯಯೋಗಿಂದ್ರ” ಎಂದು ತಮ್ಮ ಗುರುಗಳ ಹೆಸರನ್ನು ಹೇಳಿರುವರು. ಈ ಅಚ್ಯುತಾರಣ್ಯರು ಒಂದು ಮಠದ ಅಧಿಪತಿಗಳೇ ಆಗಿರಬೇಕು.]

[2] [* ಆ ಪ್ರತಿಯಲ್ಲಿ ೯ನೆಯ ಸಂಧಿಯ ಕೊನೆಯಲ್ಲಿ, ತೀರ ಖಿಲವಾಗಿರುವ ಒಂದು ಪದ್ಯದಲ್ಲಿ ’ಸೋಮಕವಿಯ ಕ್ರೂರಚರಿತೆಯ…ಭಕ್ತಿಯೊಳೊರೆದೂ’ ಎಂದು ಬಂದಿದೆ.]