ಸಂಸ್ಕೃತ ಭಾಷೆಯಲ್ಲಿರುವ ಮೂಲ ಭಾಗವತ ಪುರಾಣದ ೧೦ನೆಯ ಸ್ಕಂದವು ಆದ್ಯಂತವಾಗಿ ಶ್ರೀಹರಿಯ ಕೃಷ್ಣಾವತಾರದ ಕಥೆಯಿಂದ ತುಂಬಿದೆ. ಭೂಭಾರವನ್ನು ಹೆಚ್ಚಿಸಿದ ದುಷ್ಟದಾನವ ಕುಲದ ನಾಶಕ್ಕಾಗಿಯೇ ಶ್ರೀಹರಿಯು ಕೃಷ್ಣಾವತಾರವನ್ನು ತಾಳಬೇಕಾಯಿತೆಂಬುದನ್ನು ಪುರಾಣಗಳಲ್ಲಿ ಅನೇಕ ಸಂದರ್ಭಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀಕೃಷ್ಣನ ತಾಯಿ-ದೇವಕಿಯ ದೊಡ್ಡಪ್ಪನ ಮಗನಾದ ಕಂಸನು, ಅಂದಿನ ದಾನವ ಸಮೂಹದಲ್ಲಿ ಶ್ರೇಷ್ಟನಾದವನು. ಅವನು ದೇವಕಿಯ ಎಂಟನೆಯ ಬಸಿರಿನಿಂದ ಜನಿಸುವ ಮಗುವಿನಿಂದ ತನ್ನ ಮರಣವೆಂಬುದನ್ನು ಆಕಾಶವಾಣಿಯ ಮೂಲಕ ತಿಳಿದುಕೊಂಡು, ದೇವಕಿಯ ಹೊಟ್ಟೆಯಿಂದ ಹುಟ್ಟಿದ ಏಳು ಮಕ್ಕಳನ್ನು ಕೂಡಲೆ ಕೊಲೆಮಾಡಿ ಬಿಟ್ಟಿದ್ದನು. ಆದರೆ ಎಂಟನೆಯ ಗರ್ಭದ ಶಿಶುವನ್ನು ಕೊಲ್ಲುವುದಕ್ಕೆ ಆತನಿಗೆ ಸಾಧ್ಯವಾಗಲಿಲ್ಲ. ದೇವಕಿಯ ಪತಿ ವಸುದೇವನು ಆ ಹಸುಮಗುವನ್ನು, ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಒಯ್ದು, ತನ್ನ ಆಪ್ತ ಸ್ನೇಹಿತನಾದ ನಂದಗೋಪನ ಬಳಿ ಇಟ್ಟು ಬರುತ್ತಾನೆ. ಕಂಸನಿಗೆ ಇದು ತಿಳಿದ ಮೇಲೆ, ಆ ಶಿಶುವನ್ನು ಕೊಲ್ಲುವುದಕ್ಕೆ ಹಲವಾರು ಹಂಚಿಕೆಗಳನ್ನು ಅವನು ಮಾಡುತ್ತಾನೆ. ಎಲ್ಲ ಹಂಚಿಕೆಗಳೂ ನಿಷ್ಟ್ರಯೋಜಕವಾಗಿ ಗೋಕುಲದಲ್ಲಿ ಹಸುಳೆ ಬೆಳೆದು ಬಾಲಕನಾಗುತ್ತಾನೆ. ವಸುದೇವನ ಇನ್ನೊಬ್ಬ ಹೆಂಡತಿ ರೋಹಿಣಿದೇವಿಯ ಮಗನೀತ. ಇವರಿಬ್ಬರನ್ನೂ ರಾಜಧಾನಿಗೆ ಕರೆಯಿಸಿ. ಉಪಾಯದಿಂದ ಕೊಲ್ಲಬೇಕೆಂದು ಕಂಸನ ಅಪೇಕ್ಷೆ. ಆದುದರಿಂದಲೇ ಬಿಲ್ಲುಹಬ್ಬದ ನೆಪದಿಂದ ಕೃಷ್ಣ-ಬಲರಾಮರನ್ನು ಮಥುರೆಗೆ ಕರೆದುಕೊಂಡು ಬರಬೇಕೆಂದು ತನ್ನ ಮಂತ್ರಿಯಾದ ಅಕ್ರೂರನನ್ನು ಗೋಕುಲಕ್ಕೆ ಕಳುಹುತ್ತಾನೆ. ಈ ಕಾವ್ಯದ ಕಥಾನಕವು, ಅಕ್ರೂರನ ಗೋಕುಲ ಪ್ರಯಾಣದಿಂದ ಆರಂಭವಾಗಿ, ಕಂಸವಧೆ, ಅಕ್ರೂರನ ಮೇಲಿನ ಶ್ರೀಕೃಷ್ಣನ ಅನುಗ್ರಹ ಇವುಗಳೊಂದಿಗೆ ಕೊನೆಗೊಳ್ಳುತ್ತದೆ. ಮೂಲಭಾಗವತದಲ್ಲಿ ಇದೆಲ್ಲ ಕಥೆಯೂ ಬರುತ್ತದೆ. ಭಾಗವತ ಪಂಥದ ಕವಿಯಾದ ಸೋಮನಾಥನು, ಭಾಗವತದ ದಶಮಸ್ಕಂಧದಲ್ಲಿ ಬರುವ ಭಕ್ತಾಗ್ರಣಿ ಅಕ್ರೂರನಿಗೆ ಸಂಬಂಧಿಸಿದ ಈ ವಿಷಯವನ್ನೆ ತನ್ನ ಕಾವ್ಯಕ್ಕೆ ವಸ್ತುವನ್ನಾಗಿ ತಗೆದುಕೊಂಡಿದ್ದಾನೆ.

ಧರೆಯರಿಯಲಾ ಕೃಷ್ಣ ಚರಿತದ
ಶರಧಿಯೊಳಗಕ್ರೂರ ಚರಿತೆಯ-
ನೊರೆವೆನಚ್ಯುತ ಭಕ್ತರೆಲ್ಲರ ಚರಣಕಭಿನಮಿಸಿ ||

ಎಂದು ಹೇಳಿರುವ ಕವಿಯ ಮೊದಲ ಮಾತಗಳನ್ನು ನೋಡಿದರೆ, ಶ್ರೀಹರಿಯ ಭಕ್ತನಾದ ಅಕ್ರೂರನ ಚರಿತ್ರೆಯ ನೆಪದೊಂದಿಗೆ ಶ್ರೀಕೃಷ್ಣನ ದಿವ್ಯ ಮಹಿಮೆಯನ್ನು ಭಕ್ತಜನರಿಗೆ ಪರಿಚಯ ಮಾಡಿಕೂಡುವ ಉದ್ದೇಶವನ್ನಿಟ್ಟುಕೊಂಡಂತೆ ತೋರುವುದು. ಭಕ್ತಕವಿಯಾದ ಈತನಿಗೆ ತಾನೊಬ್ಬ ನಿರ್ದುಷ್ಟಕೃತಿಕಾರನೆಂಬ ಅಹಂಕಾರವಿಲ್ಲ. ಎಂತಲೇ

ಗರುವರತಿಕೋವಿದರು ಹಿರಿಯರು
ಸರಸರಿದನಾದರಿಸಿ ತಪ್ಪನು
ಪರಿಹರಿಸಿ ತಿದ್ದುವುದು – ಮೆರೆವುದು ನಿಮ್ಮ ಸದ್ಗುಣವ ||

ಎಂದು ವಿನಯವಾಣಿಯಿಂದ ಬಿನ್ನವಿಸಿಕೊಂಡಿದ್ದಾನೆ.

ತಾನು ಬರೆದುದು ಮಹಾಭಾರತದ ಕಥೆಯಾದರೂ ಭಕ್ತಕವಿ ಕುಮಾರವ್ಯಾಸನು ತಿಳಿಯ ಹೇಳುವೆ ಕೃಷ್ಣ ಕಥೆಯನ್ನು ಎಂದು ಹೇಳಿ ತನ್ನ ಕಾವ್ಯನಾಯಕನು ಶ್ರೀ ಕೃಷ್ಣ ಎಂದು ಹೇಳಿದ್ದಾನೆ. ಅದರಂತೆಯೆ ಭಕ್ತಕವಿಗಳಾದ ಕನಕದಾಸರು. ಪ್ರದ್ಯುಮ್ನ-ಅನಿರುದ್ಧರ ಚರಿತ್ರೆಗೆ ಸಂಬಂಧಿಸಿ “ಮೋಹನತರಂಗಿಣಿ” ಯನ್ನು ರಚಿಸಿದ್ದರೂ ಕೃತಿಗೆ ಕರ್ತನು ಕಾಗಿನೆಲೆಯಾದಿ ಕೇಶವ ಎಂದು ಹೇಳಿ ಶ್ರೀಕೃಷ್ಣನೇ ತಮ್ಮ ಕಾವ್ಯದ ನಾಯಕನೆಂದು ಉಗ್ಗಡಿಸಿದ್ದಾರೆ. ಹಾಗೆಯೆ ಚರಿತ್ರೆ ಅಕ್ರೂರನದಾದರೂ, ಶ್ರೀಕೃಷ್ಣನ ಮಹಿಮೆಗೇ ಇದರಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಈ ಕವಿಯೂ ಶ್ರೀ ಕೃಷ್ಣನನ್ನೇ ತನ್ನ ಕಾವ್ಯನಾಯಕನನ್ನಾಗಿ ಮಾಡಿಕೊಂಡಿರುವನು ಅಕ್ರೂರ ಚರಿತೆ ಕವಿಗೆ ಗೌಣ; ಶ್ರೀಕೃಷ್ಣನ ತನ್ನ ಕಾವ್ಯನಾಯಕನನ್ನಾಗಿ ಮಹಿಮಾಪ್ರದರ್ಶನವೇ ಮುಖ್ಯ ಸೋಮನಾಥ ಕವಿಯು, ತನ್ನ ಆಂತರಿಕ ಅಪೇಕ್ಷೆಯನ್ನು ಇದರಲ್ಲಿ ಯಶಸ್ವಿಯಾಗಿ ಪೂರೈಸಿಕೊಂಡಿದ್ದಾನೆ.

. ಕಾವ್ಯ ಗುಣವಿಚಾರ

ಅಕ್ರೂರ ಚರಿತ್ರೆಯನ್ನು ಲಕ್ಷಣಶಾಸ್ತ್ರದ ದೃಷ್ಟಿಯಿಂದ ಒರೆದು ನೋಡಿದರೆ, ಅದು ಒಂದು ಖಂಡಕಾವ್ಯವೆನಿಸಿಕೊಳ್ಳುವುದು. ಮಹಾಕಾವ್ಯಗಳಲ್ಲಿ ಬರಬೇಕಾದ ಅಷ್ಟಾದಶ ವರ್ಣನೆಗಳನ್ನು ಖಂಡಕಾವ್ಯದಲ್ಲಿ ಅಪೇಕ್ಷಿಸುವ ಕಾರಣವಿಲ್ಲ; ಆದರೂ ಸೋಮನಾಥ ಕವಿ ಅಂತಹ ವರ್ಣನಾಪೇಕ್ಷಿಗಳನ್ನು ನಿರಾಶೆಗೊಳಿಸಿಲ್ಲ. ಅಷ್ಟಾದಶ ವರ್ಣನೆಗಳಲ್ಲಿ ಕೆಲವನ್ನು ಅಂಕುರರೂಪದಿಂದ ಸಂಕ್ಷೇಪವಾಗಿ ತೋರಿಸಿದ್ದಾರೆ. ಬೇರೆ ಕೆಲವನ್ನು ಚಿಗುರು, ಹೂವು, ಹೀಚು, ಕಾಯಿ ಹಣ್ಣುಗಳಿಂದ ಶೋಭಿಸುವ ಮಾಮರಗಳಂತೆ ವಿಸ್ತರಿಸಿದ್ದಾನೆ. ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ ಚಂದ್ರಾಸ್ತಗಳ ವರ್ಣನೆ ಎಷ್ಟು ಸಲ ಇದರಲ್ಲಿ ಬಂದಿರುವುದೋ ಅಷ್ಟು ಸಲ, ಇವನು ಹೊಸತನವನ್ನೇ ತೋರಿಸುತ್ತಾನೆ. ಕೃಷ್ಣನು ಮಥುರೆಗೆ ಹೊರಟು ನಿಂತಾಗ, ಅವನ ಅಗಲಿಕೆಗಾಗಿ ಪರಿತಪಿಸುವ ಗೋಪಿಯರ ವಿರಹ ಜೀವನದ ವರ್ಣನಾಪ್ರಸಂಗದಲ್ಲಿ ವಿವಿಧ ರೀತಿಯಿಂದ ಕವಿಯು ತನ್ನ ಕೌಶಲವನ್ನು ತೋರಿಸಿದ್ದಾನೆ. ಅಕ್ರೂರನಿಗೆ ಶ್ರೀ ಕೃಷ್ಣ ಉಪದೇಶಿಸಿದ ಭಕ್ತ ಧರ್ಮವು ಕವಿಯ ಭಾಗವತ ಧರ್ಮನಿಷ್ಠೆಯನ್ನೂ ಅದರ ಆಳವಾದ ಅನುಭವ ಜ್ಞಾನವನ್ನೂ ತಿಳಿಯುವಂತಾಗಿದೆ. ಶ್ರೀಕೃಷ್ಣನ ವಿಶ್ವರೂಪದರ್ಶನದ ವರ್ಣನೆಯು ಕವಿಯ ಸಾಂಪ್ರದಾಯಿಕ ಗ್ರಂಥಗಳ ನಿಚ್ಚಳವಾದ ಅಭ್ಯಾಸದ ನಿದರ್ಶನವಾಗಿದೆ. ಅರಣ್ಯ, ಉದ್ಯಾನ, ನದೀತಿರ ರಾಜಧಾನಿ ಇವುಗಳ ವರ್ಣನೆಯು ಸೋಮಕವಿಯ ಸೂಕ್ಷ್ಮ ನಿರೀಕ್ಷಣೆಗೆ ಸಾಕ್ಷಿಯಾಗಿದೆ.

ಕವಿಗೆ ಕನ್ನಡ – ಸಂಸ್ಕೃತ ಭಾಷೆಗಳೆರಡರ ಮೇಲೂ ಚೆನ್ನಾದ ಹಿಡಿತವಿದೆ; ಸಂದರ್ಭಕ್ಕೆ ತಕ್ಕ ಶಬ್ದಗಳನ್ನೂ ವಾಕ್ಯಗಳನ್ನೂ ಅಡೆ-ತಡೆಯಿಲ್ಲದೆ ಬಳಸುವ ಸಾಮರ್ಥ್ಯವಿದೆ. ಸಾಮಯಿಕ ಶ್ಲೇಷಚಮತ್ಕೃತಿಗಳನ್ನು ಸೃಷ್ಟಿಸಿ ಸಹೃದಯರನ್ನು ವಿಸ್ಮಯಗೊಳಿಸುವ ವಾಕ್ಚತುರತೆಯು ತನಗೆ ಸಾಕಷ್ಟಿದೆಯೆಂಬುದನ್ನು ಅಲ್ಲಲ್ಲಿ ಕವಿ ಪ್ರದರ್ಶಿಸಿದ್ದಾನೆ. ವ್ಯಾಕರಣದ ಸೂತ್ರಗಳ ಒರೆಗೆ ಇವನ ಭಾಷೆಯು ಹತ್ತದೆ ಹೋದರೂ ಮಧ್ಯಕಾಲದ ವರ್ಣಕ ಕವಿಗಳ ಹಾಡುಗಬ್ಬಗಳ ಭಾಷೆಗೆ ಸರಿಸಮನಾಗಿ ನಿಲ್ಲಬಲ್ಲದು. ಭಾಮಿನಿ ಷಟ್ಪದಿಯ ಛಂದಸ್ಸು ಏಕಲಯ-ಏಕಗತಿಗಳಿಂದ ಕೂಡಿದುದಾದರೂ, ಕುಮಾರವ್ಯಾಸ ಕವಿಯಂತೆ, ಈ ಕವಿಯೂ ತನ್ನ ಕಥನ ಭಾಷೆ ಶೈಲಿಗಳ ಮೂಲಕ ಗತಿ-ಲಯಗಳಲ್ಲಿ ವೈವಿಧ್ಯವನ್ನು ತುಂಬಿದ್ದಾನೆ.

ಕಾವ್ಯದಲ್ಲಿ ಪತ್ರಗಳು ಪರಿಮಿತ ಸಂಖ್ಯೆಯಲ್ಲಿದ್ದು ಮುಖ್ಯಮುಖ್ಯ ಪಾತ್ರಗಳು ಸತ್ತ್ವಯುಕ್ತವಾಗಿ ಪರಿಪುಷ್ಟಿಗೊಂಡಿವೆ. ಸಂವಾದ-ಸಂಭಾಷಣೆಗಳು, ನಾಟಕದ ಪ್ರವೇಶಗಳೇನೋ-ಎಂಬ ಭ್ರಮೆಯನ್ನು ಹುಟ್ಟಿಸುವಂತಿವೆ. ವ್ಯಂಗೋಕ್ತಿ – ನರ್ಮೋಕ್ತಿ, ದರ್ಪೋಕ್ತಿಗಳು ಸಹಜ – ಸ್ವಾಭಾವಿಕವೆನಿಸುತ್ತವೆ. ಭಕ್ತಿಯು ಈ ಕೃತಿಯ ಸ್ಥಾಯಿಭಾವವನ್ನು ಉಚಿತ ರೀತಿಯಿಂದ ವಿಕಾಸಗೊಳಿಸಿರುತ್ತವೆ.

ಕವಿಗೆ ಈ ಕಾವ್ಯರಚನೆಯಿಂದ ಯಾವ ಲೌಕಿಕ ಅರ್ಥ-ಕಾಮಗಳನ್ನೂ ಸಾಧಿಸಬೇಕಾಗಿಲ್ಲ. ಸಾಮಾನ್ಯರಂತೆ ಕೀರ್ತಿ-ಮನ್ನಣೆಗಳ ಲಾಲಸೆಯೂ ಇಲ್ಲ. ತನ್ನ ಈ ಕೃತಿ ರಚನೆ ಯಾವ ಆದರ್ಶ ಸಿದ್ಧಿಗಾಗಿ ಇದೆಯೆಂಬುದನ್ನು ಈತ ೨ನೆಯ ಸಂಧಿಯ ಮೊದಲನೆಯ ಪದ್ಯದಲ್ಲಿ ಹೀಗೆ ಹೇಳಿದ್ದಾನೆ:

ಇದು ಮಹಾಪಾತಕದ ನೆತ್ತಿಯ
ಸದೆವಡೆವ ದಡಿ, ಸಕಲ ಸುಕೃತದ
ಸದನವಿಹರಪರಸುಖದ ಪಲಹಾರಕ್ಕೆ ಹೊಣೆಕಾರ ||
ಚದುರಿನಿಕ್ಕೆ, ಸುಧೀಪ್ರಭಾವದ
ವೊದಗು, ನೀತಿಯ ಕೂಟ, ಬಹುಳಾ-
ಭ್ಯುದಯಸೂಚಕ ಕೇಳಿ ಸಭೆಗಕ್ರೂರವರಚರಿತೆ ||

ಶ್ರೀಹರಿಯ, ಹರಿಭಕ್ತರ ಮಹಿಮಾಚರಿತ್ರೆಗಳು ಇಷ್ಟೆಲ್ಲ ಗುಣಗಳಿಂದ ಕೂಡಿದ್ದು ಮಾನವಕುಲವನ್ನು ಇವೇ ಉದ್ಧರಿಸಬಲ್ಲವೆಂಬುದು ಕವಿಯ ನಿಶ್ಚಲವಿಶ್ವಾಸ.

ಹರಿಭಕ್ತನೂ ಕಂಸನ ಒಬ್ಬ ಸಚಿವನೂ ಆಗಿದ್ದ ಅಕ್ರೂರನ ವ್ಯಕ್ತಿತ್ವವನ್ನು ಕವಿ ಪರಿಮಿತ ಶಬ್ದಗಳಲ್ಲಿಯೆ ಹೇಗೆ ಚಿತ್ರಿಸಿದ್ದಾನೆ ನೋಡಿ:

ಆ ಸಭೆಯಲಕ್ರೂರನೆಂಬ ಮ-
ಹಾ ಸಚಿವನತಿಹಿತಿವ ಶುಚಿ ವಿ-
ಶ್ವಾಸಿ ವಿನಯವಿಭೂಷನಗಣಿತ ನೀತಿಯೊಳು ನಿಪುಣ ||
ದೋಷರಹಿತನು ಸುಬಲಸುತ ಧರ-
ಣೀಶಕುದೊಳಭಿಜ್ಞ ನಿರೆ ಕಂ-
ಡಾಸುರಾಧಿಪ ಕಂಸ ನುಡಿಸಿದನುಚಿತ ವಚನದಲಿ ||
(ಸಂ. ೨-ಪ. ೮)

ಮುಂದೆ ಬರುವ ಕಂಸ, ಅಕ್ರೂರ ಇವರ ಸಂಭಾಷಣೆಯಲ್ಲಿ ಅಕ್ರೂರನ ಸ್ವಭಾವವನ್ನು, ಸೂಚ್ಯವಾಗಿ ಈ ರೀತಿಯಲ್ಲಿ ರೇಖಿಸಿರುವನು:

ಕಂಸ : ಎಲೆ ಯದೂತ್ತಮ ನಮ್ಮ ಹಗೆ ಗೋ –
ಕುಲದೊಳಚ್ಯುತನಾಗಿ ನಂದನ
ನಿಳಯದಲಿ ಬಳೆದೊಲಿದು ಮಾನುಷಲೀಲೆಯನು ನಟಿಸಿ ||
ಬಲುಗಡಿಯ ರಕ್ಕಸರನೊಬ್ಬರ-
ನುಳಿಯಲೀಯದೆ ಕೊಂದ ನಾವಿ
ನ್ನುಳಿವುಪಾಯವದಂತು .?…  …

ಅಕ್ರೂರ : ಏಕೆ ಜೀಯ ವ್ರಥಾ ಮನೋವ್ಯಥೆ ?
ಸಾಕು ಬಿಡು ಬಿಡು ಧರೆಯ ಭಾರವ
ನೂಕಲೋಸುಗ ಬಂದ ಹರಿ ಕೃಷ್ಣಾಭಿಧಾನದಲಿ ||
ಗೋಕುಲದೊಳೆವತರಿಸಿ ದೈತ್ಯಾ
ನೀಕವನು ಸವರಿದನು ನೀ ಮುನಿ
ದಾ ಕುಮಾರರ ಕೊಡೆ ಸೆಣಸುವುದುಚಿತವಲ್ಲ ….

ಅಕ್ರೂರನ ಈ ನೇರವಾದ ಸತ್ಯವಚನ ಕಂಸನಿಗೆ ಸಹನವಾಗದೆ. ಸಂತಪ್ರಭಾವದವನಾಗಿ ಹೀಗೆ ಅಣಕವಾಡುವನು :

ಲೇಸನಾಡಿದೆ ದಾನಪತಿ, ವಿ –
ಶ್ವಾಸಿ ನೀನೆಂದೆನ್ನ ಚಿತ್ತದ
ಕ್ಲೇಶವನು ವಿಸ್ತರಿಸಿ ನುಡಿದರೆ ಸಫಲವಾಯ್ತಿಂದು ||
ವಾಸುದೇವನ ಮೀಲೆ ನಿನಗಭಿ-
ಲಾಸೆಯುಂಟೆಂದರಿವೆನೈ ನಾ-
ವೈಸಲೇ ಕಡು ಮೂರ್ಖರು ?….  ….

ಕಂಸನ ಈ ಸಿಡಿನುಡಿಗಳನ್ನು ಕೇಳಿದ ಅಕ್ರೂರನಿಗೆ. ತಾನೀಗ ವಸ್ತುಸ್ಥಿತಿಯನ್ನು ವಿವರಿಸಿದರೆ ಪ್ರಯೋಜನವಾಗದೆಂದು ಎನಿಸಿತು. ಅಲ್ಲದೆ ಶ್ರೀಕೃಷ್ಣನ ಅವತಾರ ರಹಸ್ಯವನ್ನು ಅರಿತ ಅವನಿಗೆ ಅಸುರಕಂಸನ ಅವಸಾನಕಾಲ ಸಮೀಪಕ್ಕೆ ಬಂದಿರುವುದೆಂಬ ಮನವರಿಕೆಯಾಗಿ, ದೈವಕಾರ್ಯಕ್ಕೆ ತಾನೇಕೆ ವಿರೋಧಿಯಾಗಬೇಕೆಂದು ಎನಿಸಿತೇನೋ ! ಕೂಡಲೆ ಅವನು ತನ್ನ ನೇರನುಡಿಗಳ ಬಗೆಯನ್ನು ಬದಲಿಸಿ, ಕಂಸನಿಗೆ ಹೇಳುವ :

ಎನಲು ನಗುತಕ್ರೂರ ನುಡಿದನು
ದನುಜಪತಿ ಚಿತ್ತಯಿಸು ನಾನಿ-
ನ್ನ ನುವನರಿವರೆ ನುಡಿದೆ ಹರಿಬಕೆ ಚಿಂತೆ ನಿನಗೇಕೆ ?
ಮನುಜಗಿನುಜರ ಪಾಡೆ ವಾಸವ..
ಧನಪರನು ಬೆದರಿಸುವ ನಿನಗೀ
ಬಿನಗುಗಳ ಹಗೆಮಾಡಿ ಮುನಿವುದು ನೀತಿಯಲ್ಲ…

ಅಕ್ರೂರನ ಈ ಪ್ರಶಂಸೆಯಿಂದ ಕಂಸನು ಉಬ್ಬಿಹೋಗಿರಬಹುದು. ಆ ಉಬ್ಬಿನಲ್ಲಿ ಆಡಿದ ಮಾತುಗಳಿವು :

….  ….  … ಹಗೆ ಬಡ
ವೆಂದಹಂಕರಿಸುವರೆ ? ನಾನಾ
ಛಂದದಲಿ ಜಯಿಸುವದು ಸನ್ನುತ ರಾಜನೀತಿಯಿದು ||
ಬಂಧುತನದಲಿ ದಾನದಲಿ ಬಲು
ಹಿಂದೆ ಕುಹಕೋಪಾಯದಲಿ ಕೊಲು
ವಂದವನು ಪೇಳು ……..”

ಕಂಸನಾಡಿದ ಮಾತುಗಳನ್ನು ಕೇಳಿ ಅಕ್ರೂರ ತನ್ನ ಸೋಗಿನ ನುಡಿಗಳಿಗೆ ಇನ್ನೂ ಬಣ್ಣವೇರಿಸುತ್ತಾನೆ :

ನೀನರಿಯದಿಹ ನೀತಿಗಳನ –
ಜ್ಞಾನಿಗಳು ನಾವೆತ್ತಬಲ್ಲೆವು
ಭಾನುವಿನ ಸಾಮರ್ಥ್ಯವುಂಟೇ ಮಿಂಚುಬುಳುವಿಂಗೆ ||
ಏನನಾದಡು ಬೆಸಸೆ ಕೈಕೊಂ
ಡಾನದನು ಸಲೆ ಮಾಳ್ವೆನು ……..

ಅಕ್ರೂರ ಹೀಗೆಂದೊಡನೆಯ ಕಂಸನು ಉತ್ಸಾಹಭರದಲ್ಲಿ ಅನೇಕ ರಾಜನೀತಿಯ ಮಾತುಗಳನ್ನಾಡಿ ಕೊನೆಯಲ್ಲಿ ತನ್ನ ಮನದ ನಿಶ್ಚಯವನ್ನು ಹೀಗೆ ತಿಳಿಸುವನು :

ಎನಗೆ ಹಗೆ ವಸುದೇವ ಸುತನಾ
ತನ ವಿನಾಶವನೈದಿಸುವಡೊಂ
ದನುವ ನಿಶ್ಷಯಿಸಿದರೆ ಬಿಡುವುದು ಚಿಂತೆಯಿಂದೆಮಗೆ ||
ಮನವ ವಂಚಿಸ ಬೇಡ ನುಡಿ……..

ಎನಲು ಅಕ್ರೂರನು “ದನುಜನಾಗ್ರಹ ಕಂಡು” ಕೃಷ್ಣನ ಘನತೆಯನು ನೆನೆ ನೆನೆದು ಸೈವೆರೆಗಾದ. ಕೊನೆಗೆ ಕಂಸನ ಆಜ್ಞೆ ರಾಜಾಜ್ಞೆಯಾದುದರಿಂದ, ಶ್ರೀಕೃಷ್ಣನನ್ನು ಕರೆದುಕೊಂಡು ಬರಲು ಗೋಕುಲಕ್ಕೆ ಹೊರಡಲು ಅನುಗೊಂಡ.

ಅಂದು ಮನೆಗೆ ಬಂದು ಅಕ್ರೂರ, ಅಂದಿನಿರುಳನ್ನು ಕಳೆದುದರ ವಿವರಣೆಯೂ ಕವಿಯ ಮಾನವ ಮನಸ್ತತ್ತ್ವಜ್ಞತೆಯ ನೆಲೆಯನ್ನು ತಿಳುಹುವಂತಹದಾಗಿದೆ.

ಶ್ರೀಕೃಷ್ಣನು ಮಥುರೆಗೆ ಹೊರಡಲು ಸಿದ್ಧನಾಗಿ ನಿಂತಾಗ ಯಶೋದೆ ಮತ್ತು ಶ್ರೀಕೃಷ್ಣರಲ್ಲಿ ನಡೆದ ಸಂಭಾಷಣೆಯೂ ಭಾವಪೂರ್ಣವಾಗಿದ್ದು, ಕವಿಯ ಭಾವಜ್ಞೆತೆಯ ಮೇಲೆ ಬೆಳಕನ್ನು ಚೆಲ್ಲುವಂತಿದೆ. ಕೃಷ್ಣ -ಬಲರಾಮರಿಬ್ಬರೂ ಪ್ರಯಾಣಸನ್ನದ್ಧರಾಗಿ ಯಶೋಧೆಯ ಬಳಿ ಬಂದು, ಹೊರಡಲು ಅಪ್ಪಣೆ ಕೇಳುವರು; ಆಗ ಯಶೋದೆ:

ಮಗನೆ, ನಾನೆಂತಗಲಿ ಬದುಕುವೆ
ನಗೆಗೆಡೆಯ ಮಾಡಿದೆಯಲಾ, ನಂ-
ಬುಗೆಯ ಕೆಡಿಸಿದೆ. ಮುಪ್ಪಿನವಳಿನ್ನಾರ ಸೇರುವೆನು ?
ಮೊಗವನೀಕ್ಷಿಸಿ ಸಕಲ ದು:ಖವ
ಬಗೆಯದಿದ್ದೆನು ಬಿಟ್ಟುಹೋಹುದು
ಸುಗುಣವಲ್ಲೆಂದಳಲಿ ತುಂಬಿದಳಬಲೆ ಕಂಬನಿಯ ||

ನೋಡಿ ಹಿಗ್ಗು ವೆನಡಿಗಡಿಗೆ ಕೊಂ
ಡಾಡಿ ಹಾರಯ್ಸುವೆನಕಟ ಮುಂ
ಡಾಡಿ ದಣಿಯೆನು ಬಹಳ ತಡೆದಡೆ ಹಲವ ಹಂಬಲಿಸಿ ||
ಬಾಡುವೆನು ಬಂದಪ್ಪಿದಡೆ ಮೊಗ
ನೋಡಿ ಪುಳಕಿತೆಯಹೆನು ಪಾಪಿಯ
ಮಾಡಿ ವಿಧಿಯಗಲಿಸಿತೆ ನಮ್ಮ ನೆನುತ್ತ ಹಲುಬಿದಳು ||

ಆಗ ಶ್ರೀಕೃಷ್ಣನಾಡಿದ ಸಾಂತ್ವನ ವಚನಗಳಿವು :

ತಾಯೆ, ಶೋಕಿಸಬೇಡ, ವಿವಿಧೋ
ಪಾಯದಲಿ ಬಂದಲ್ಲದಿರೆ, ನಾ-
ನೀಯವಸ್ಥೆಯ ಕಂಡು ನಿಲುವೆನೆ ಕಂಸನಗರಿಯಲಿ ? ||
ನೋಯದಿರಿ ಚಿತ್ತದಲೆನುತ ಕಮ-
ಳಾಯತಾಂಬಕನಾ ಯಶೋಧೆಯ
ಕಾಯವನು ತಕ್ಕೈಸಿ ಚರಣಕ್ಕೆರಗೆ ಹರಸಿದಳು ||

ಕಂಸನು ದುಷ್ಟತನದ ಕಲ್ಪನೆಯಿದ್ದ ಯಶೋದೆ, ಮಕ್ಕಳನ್ನು ಹರಿಸಿದುದು ಹೇಗೆ ?

ಅಸುರ ನಿಮಗುಪಹತಿಗಳು ಚಿಂ
ತಿಸದಿರಲಿ, ನೀವ್ ವಿಜಯರಾಗಿಯೆ
ವಸುಮತಿಗೆ ಪತಿಯಾಗಿ, ರಿಪುಗಳ ಸೀಳಿ ಸಮರದಲಿ ||
ಹಸುಳೆಗಳು ನೀವ್ ಕಂಸನಿತಿ ಸಾ-
ಹಸಿಗನಿರದಿರಿ ಬೇಗ ಬಹುದೆಂ-
ದೊಸೆದು ಹರಸಿದಳಪ್ಪಿ ಮುಂಡಾಡಿದಳು ಹರುಷದಲಿ ||

ಗವಳಿಗರ ಹಟ್ಟಿಯನ್ನು ಕವಿ ಅಕ್ರೂರನಿಗೆ ತೋರಿಸುತ್ತಿರುವಾಗ, ಅದು ನಮ್ಮ ಕಣ್ಣೆದುರು ಬಂದು ನಿಂತಂತಾಗುವಂತಹ ಸ್ವಾಭಾವಿಕತೆಯಿಂದ ಪರಿಪೂರ್ಣವಾಗಿದೆ :

ಹಗಡು-ಗಣ್ಣಿಯ ಮುರಿವ ಕಡೆಗೋ
ಲುಗಳ ತಿದ್ದುವ ದಾವಣಿಯ ಗೂ-
ಟಗಳ ಕೆತ್ತುವ ಮೂಗುನೇಣಿನ ಹುರಿಯ ಜಡಿದುಡಿವ ||
ಮೊಗವಡವ ಮಾಡುವರ ಮನೆ ಹ-
ಟ್ಟಿಗಳ ಕುಳಿ-ತೆವರುಗಳ ತಿದ್ದುವ
ಬಗೆಯಲೊಪ್ಪುವ ಗೋವಳರನಕ್ರೂರನೀಕ್ಷಿಸಿದ ||

ಹಿರಿಯ ಗೋವಳರು ಹೀಗೆ ತಮ್ಮ ಸ್ವಕಾರ್ಯದಲ್ಲಿ ತೊಡಗಿದರೆ. ಕಿರಿಯರು ಏನು ಮಾಡುತ್ತಿದ್ದರೆಂಬುದನ್ನು ಕವಿಯ ಮಾತುಗಳಲ್ಲಿಯೆ ಕೇಳಿರಿ :

ಹಟ್ಟಿ ಹಟ್ಟಿಯ ಮುಂದೆ ಗೋಪರು
ಗೊಟ್ಟಿ ಗೆಲುಗುಂಡುಗಳ ಕುಣಿವಿನ
ಚಿಟ್ಟುಮುರಿ ಹಿಳಿದೆಪ್ಪನಾ ಹಿಡಿಗವಡೆಗಳ ಹಿಡಿದು ||
ಆಟ್ಟಿ ಮುಟ್ಟುವ ಸೂಟಿಗವಡೆಯ-
ನೊಟ್ಟಜೆಯಲಂದಾಡುತಿರಲವ
ದಿಟ್ಟಿಸಿದನಕ್ರೂರನತಿಬಲ ಬಾಲಲೀಲೆಗಳ ||

ಮುಂದುಗೋವಳರ ರೂಪ-ವೇಷಗಳನ್ನು ಸೋಮನಾಥಕವಿ ಎಂತಹ ಸಹ ಜೋಕ್ತಿಗಳಿಂದ ಬಣ್ಣಿಸಿದ್ದಾನೆ ನೋಡಿ :

ಕೊರಳ ಪೊಂಬಚ್ಚುಗಳ ಬೆಳ್ಳಿಯ
ಮುರುಹುಗಡಗದ ಜೋಲ್ವಹುಬ್ಬಿನ
ನರೆದಲೆಯ, ಸೆರೆಯುಬ್ಬಿದಂಗದ ತೆರೆಯ ನಿರಿಗೆಗಳ ||
ತೆರಳಿದಾಸ್ಯದ, ಬತ್ತಿದೆವೆಯದು-
ಕಿರುವ ಕಂಗಳ ಕಳಿದ ದಂತದ
ಪರಮಗೋಪರ ಕಂಡು ನಸುನಗುತಿರ್ದನಕ್ರೂರ ||
(ಸಂ. ೪-.ಪ. ೪೯)

ಅಕ್ರೂರ ಗೋಕುಲಕ್ಕೆ ಬಂದು ಶ್ರೀಕೃಷ್ಣನನ್ನು ಕಂಡಾಗ, ಆ ಅವತಾರಿ ಶ್ರೀಕೃಷ್ಣ ಏನು ಮಾಡುತ್ತಿದ್ದನು?

ಕರೆವ ಕಟ್ಟುವ ಲಾಲಿಸುವ ಮೈ-
ದುರಿಸಿ ದಳಿಯಿಕ್ಕಿಸುವ ಕರುಗಳ
ಕರೆಕರೆದು ಮುಂಡಾಡಿ ಕಟ್ಟುವ ಪರಸಿ ತೂಪಿರಿದು ||
ಸರಳಿಸುವ ಹೋರಿಗಳ ಬೆನ್ನಲಿ
ಹರಿವ ಹದುಳಿಸಿ ಹಾಲ ಹರವಿಯ
ತೆರಳಿಚುವ ಲೀಲೆಯಲಿ ಹರಿಯರೆ ಕಂಡನಕ್ರೂರ ||
(ಸಂ. ೪. ಪ. ೫೦)

ಇಂತಹ ಸಾಮಾನ್ಯ ಕಾರ್ಯಗಳಲ್ಲಿ ತೊಡಗಿದ್ದರೂ ಅಕ್ರೂರ ಅವನನ್ನು ದೇವೋತ್ತಮನೆಂಬ ಭಾವನೆಯಿಂದಲೇ ಕಂಡ. ಎಂತಲೇ “ಸುಳಿಗುರುಳ ಪೆರೆನೊಸಲ ನಾಟಿಸಿ ಹೊಳೆವ ಕಂಗಳ ಮಿಸುಪ ಕದಪಿನ ಲುಳಿತನಾಸಾಪುಟದ ಬಿಂಬಾಧರದ ಸೀಮೆಯಲಿ ದಶನಾವಳಿಗಳು ಒಪ್ಪುವ ಗಳದ ಸಿರಿ ನೆಲಸಿಪ್ಪ ವಕ್ಷಸ್ಥಳದ ” ಶ್ರೀ ಕೃಷ್ಣನನ್ನು ಕಂಡೊಡನೆ ಅಕ್ರೂರ ಭಕ್ತಿಯ ಭರದಲ್ಲಿ ಭಾವಿಸಿದ :

ತೋಳೆರಡು ನಾಲ್ಕೆನಿಸಿ ತೋರುತ
ನೀಲಮೇಘ ಶ್ಯಾಮನುದರದ
ಮೂಲೆಯಲಿ ಬ್ರಹ್ಮಾಂಡಕೋಟಿಯ ಧರಿಸಿಕೊಂಡಿರುವ ||
ಲೋಲನಖಿಳ ಮುನೀಶ್ವರರ ಹೃದ-
ಯಾಲಯದೊಳಡಿಯಿಡುವ ಬಡ ಗೋ
ಪಾಲನಚ್ಯುತನಹುದೆನುತ ಮೆಯ್ಯಿಕ್ಕಲನುವಾದ ||
(ಸಂ. ೪- ಪದ್ಯ ೫೪ )

ಆಗಲೇ ಪರಮಾತ್ಮನ ಸಗುಣ ಸಾಕಾರಮೂರ್ತಿಯಿದೆಂಬ ಅರಿವುಂಟಾಗಿ

ದೇವ ಜಯ ಜಯ ಜಯ ಜನಾರ್ದನ
ಸಾವು-ಹುಟ್ಟಿಲ್ಲದ ಜಗನ್ಮಯ
ಕಾವುದೈ ಶರಣರನು ಕರುಣಾರ್ಣವ ಮಹಾಮಹಿಮೆ ||
ಶ್ರೀವಧೂವರ ಸಲಹು ಕೃಷ್ಣ ಕೈ
ಪಾವಲೋಕನದಿಂದ ರಕ್ಷಿಸು
ದೇವಕೀಸುತ ಎನುತ ಹೊರಳಿದನಚ್ಯು ತಾಂಘ್ರಿಯಲಿ ||
(ಸಂ. ೪- ಪ. ೫೬)

ಭಕ್ತಿಭಾವದ ಉತ್ಕಟಾವಸ್ಥೆಯನ್ನು ಈ ಭಾಗವತ ಕವಿಯು ಅನೇಕ ಸಲ ಬಣ್ಣಿಸಿದ್ದಾನೆ. ಭಕ್ತಿಯೋಗಿಯ ಅನುಭಾವ-ಸಾತ್ತ್ವಿಕಭಾವಗಳು ಈ ಪದ್ಯದಲ್ಲಿ ತುಂಬಿ ನಿಂತಿವೆ :

ಮೇರೆದಪ್ಪಿದ ಹರುಷ ಪಾರಾ-
ವಾರದಲಿ ಮನಮುಳುಗಿ ಹರಿಪದ
ವಾರಿಜಕೆ ನಿಜತನುವನೊಪ್ಪಿಸಿ ವಿಕಳಭಾವದಲಿ ||
ಆರು ತಾನಿದಿರಾರದೆಂಬ ವಿ-
ಚಾರವಳಿದಾರೂಢಯೋಗಿಯ
ಭಾರಣೆಯಲಕ್ರೂರನೆಸೆದನು ಭಕುತಿಕೇಳಿಯಲಿ ||
(ಸಂ. ೪- ಪ. ೫೭)

ಶ್ರೀಕೃಷ್ಣನು ಅಕ್ರೂರನಿಗೆ ಉಪದೇಶಿಸಿದ ಧರ್ಮ-ನೀತಿಯನ್ನೊಳಗೊಂಡ ಪದ್ಯಗಳೆಲ್ಲವೂ ಮಾನವನ ಇಹಪರ ಜೀವನಕ್ಕೆ ದಾರಿದೀಪದಂತಿರುವುವಿಷ್ಟೇ ಅಲ್ಲ; ಯಾವುದೇ ಮತ-ಪಂಥಗಳ ಮಂಡಲದೊಳಗೆ ಕುಳಿತು ಆಡಿದ ಮಾತುಗಳವಲ್ಲ.

ಕವಿ ಸಾಂಪ್ರಾದಾಯಿಕ ಅರ್ಥಾಲಂಕಾರಗಳನ್ನು ಬಳಸಿರುವನಾದರೂ ಅವು ಸವಕಳಿಯ ನಾಣ್ಯಗಳಾಗಿ ಕಾಣುವುದಿಲ್ಲ; ಕವಿಯ ಲೋಕಾನುಭವ, ಆಂತರಿಕ ದರ್ಶನಾನುಭವಗಳಿಂದ ಕಾಲೋಚಿತವಾದ ಹೊಸ ಮುದ್ರೆಗಳನ್ನು ಪಡೆದಿವೆ. ಚಂದ್ರನ ಅಸ್ತಮಾನವನ್ನು ಈ ಕವಿಯು ಹೇಗೆ ಉತ್ಪ್ರೇಕ್ಷಿಸಿದ್ದಾನೆ ನೋಡಬಹುದು :

ದೋಷದೊಡೆತನವೊಂದು, ಮಿತ್ರ
ದ್ವೇಷವೊಂದಬುಜಕ್ಕೆ ಸೇರದ
ದೋಷವೊಂದಹಿತಂಬುಲೆನಿಸಿದ ನಿಂದೆ ಮತ್ತೊಂದು ||
ದೋಷದಬಲೆಯರಾಸ್ಯದಲಿ ಸಂ-
ಕ್ಲೇಶಿಯಾಗಿಹುದೊಂದೆನುತ ಮನ
ಹೇಸಿ ವಿಧು ಜಾರಿದನು ಪಡುವಣ ವಿಷಧಿಮಜ್ಜನಕೆ ||
(ಸಂ. ೩- ಪ. ೪)

ಕಂಸವಧೆಯ ಮರುದಿನ ರಾತ್ರಿ ಉದಯಿಸಿದ ಚಂದ್ರನ ವರ್ಣನೆ, ಅಂದಿನ ಜನರ ಹೃದಯೋತ್ಸಾಹವನ್ನು ಪ್ರತಿನಿಧಿಸುವ ಬಗೆ ಹೀಗಿದೆ :

ಇಳೆಯ ಭಾರವನಿಳುಹಿ ಸುರರನು
ಸಲಹಿ ಕಂಸಾಸುರನ ಮಡುಹಿದ
ಬಲ-ಮುರಾಂತಕರಂಘ್ರಿದರ್ಶನ ಘಟಿಸಿತೆನಗೆಂದು ||
ಖಳನ ಕಾಂತಾಜನದ ನೇತ್ರೋ
ತ್ವಳವ ಮುಗಿಸುತ ದೇವಕಿಯ ಮುಖ
ನಳಿನವನು ವಿಕಸಿಸುತ ಚಿತ್ರಶಶಾಂಕನೆಸೆದಿರ್ದ ||

ಚಂದ್ರ, ಉತ್ಪಳಗಳ ಅರಳಿಕೆಗೂ ನಳಿನಗಳ ಬಳಲಿಕೆಗೂ ಕಾರಣನಾಗಬೇಕು. ಆದರೆ ಇಲ್ಲಿ ಕಂಸನ ಹೆಂಡಿರ ನೇತ್ರೋತ್ಪಳಗಳನ್ನು ಬಳಲಿಸಿ, ದೇವಕೀದೇವಿಯ ಮುಖನಳಿನವನ್ನು ಅರಳಿಸಿ “ಚಿತ್ರಶಶಾಂಕ” ನಾಗಿ ಕಂಡಿದ್ದಾನೆ ಕವಿಗೆ.

ಸೂರ್ಯೋದಯ-ಸೂರ್ಯಾಸ್ತಮಯಗಳನ್ನೂ ಕವಿಯು ತನ್ನ ಕೃತಿಯ ಕಥಾಸಂದರ್ಭಕ್ಕೆ ಹೊಂದಿಸಿಕೊಂಡ ರೀತಿ ತುಂಬ ಔಚಿತ್ಯದಿಂದ ಕೂಡಿದೆ. ಕಂಸನಿಂದ ಗೋಕುಲಕ್ಕೆ ಹೊರಡುವ ಆಜ್ಞೆಯನ್ನು ಪಡೆದ ಅಕ್ರೂರ, ಅಂದಿನ ಇರುಳವನ್ನು ವಿವಿಧ ಭಾವನೆಗಳ ಪ್ರಕ್ಷುಬ್ಧತೆಯಲ್ಲಿಯೆ ಕಳೆಯುವನು. ಬೆಳಗಾಯಿತು.

ಹರಿಯ ನೆನೆವಕ್ರೂರನಂತ-
ಸ್ತಿಮಿರದೊಡನಾ ತಿಮಿರವಳಿಯಿತು
ಪರಮವೈಷ್ಣ ವರಾಸ್ಯ ಪಂಕಜದೊಡನೆ ಸರಸಿರುಹ ||
ಅರಳಿದವು ಸುಕವಿಯ ಮನೋರಥ
ಸಿರಿಯ ಕೂಡ ರಥಾಂಗ ಕೂಡಿದು-
ವರರೆ ರವಿಯುದಯಿಸಿದನಿಂದ್ರದಿಶಾದ್ರಿ ಶಿಖರದಲಿ ||
( ಸಂ. ೨- ಪ. ೨೮ )

ಕಂಸನು ಕೊಲೆಗೊಂಡ ದಿನದ ಸೂರ್ಯಾಸ್ತಮಯ ಹೀಗೆ ವರ್ಣಿತವಾಗಿದೆ :

ಮಡಿದ ಕಂಸನ ಕಂಡು ಮರುಗುವ
ಮಡದಿಯರ ಶೋಕಾಗ್ನಿ ವರ್ಧಿಸಿ
ಸುಡದೆ ಮಾಣದೆನುತ್ತ ತನ್ನಯ ಬರುವ ಬೀಳ್ಕೊಟ್ಟು ||
ಪಡುವಣದ್ರಿಗೆ ನಡೆದನಿನನೂ-
ಗ್ಗೊಡೆದು ಚೆಲ್ಲಿತು ಸೇನೆ ಮನೆಯಲಿ
ಗುಡಿಯ ಕಟ್ಟಿಸಿ ಬಹಳ ಹರ್ಷದೊಳಿರ್ದನಕ್ರೂರ ||
(ಸಂ. ೮- ಪ. ೯೦)

ಏಳನೆಯ ಸಂಧಿಯಲ್ಲಿ ಬಂದಿರುವ ಸೂಳೆಗೇರಿಯ ವರ್ಣನೆಯು ಕವಿಯ ವಾಸ್ತವ ನಿರೂಪಣೆಗೆ ನಿದರ್ಶಕವಾಗಿದೆ. ಇದರಲ್ಲಿ ಕವಿಸಮಯ-ಸಂಪ್ರದಾಯಗಳಿಗೆ ಸ್ವಲ್ಪವೂ ಅವಕಾಶ ದೊರೆತಿಲ್ಲ;

ಕುರುಳತಿದ್ದುವ ಜಡಿವ ಕಬರಿಯ
ಭರವ ಸಂತಯಿಸುವ ವಿಲೇಪನ
ವರೆದಡಂ ಸೋದಿಸುವ ಕರ್ಣಾಭರಣಮುದ್ರಿಕೆಯ ||
ಸರಿದಲುಗದಂತಿಡುವ ಪಣೆಯೊಳು
ಬರೆದು ತಿಲಕವ ದರ್ಪಣವನಾ-
ದರಿಸಿ ನೋಡುವ ಬಾಲೆಯರನೀಕ್ಷಿಸಿದನಸುರಾರಿ ||

ಕರರುಹವ ಸಾಗಿಸುವ ಮೇಲುದ-
ವರೆದೆರೆದು ಗುರುಕುಚುವ ತೋರುವ
ಕೊರಳ ಹಾರವನಡಿಗಡಿಗೆ ಸರಿದೋವಿ ನಿಟ್ಟಿಸುವ ||
ಸರಸ ಮಿಗೆ ಕೈಹೊಯ್ದು ನಾಲ್ವರ
ಬರಿಯನಪ್ಪುವ ನುಡಿದು ಚಿತ್ತವ
ಕರಗಿಸುವ ಯುವತಿಯರ ಕಂಡಸುರಾರಿ ನಗುತಿರ್ದ ||
(ಸಂ. ೭- ಪ. ೧೩-೧೪)

ಯಾವ ವರ್ಣನೆಯನ್ನು ನೋಡಿದರೂ ಕವಿಯ ದೃಷ್ಟಿ ಅದ್ಭುತ ರಮ್ಯತೆಗಿಂತ ಹೆಚ್ಚಾಗಿ ವಾಸ್ತವದರ್ಶನದ ಕಡೆಗೇ ಹೆಚ್ಚಿರುವುದೆಂಬುದು ಕೃತಿಯುದ್ದಕ್ಕೂ ಕಾಣುವುದು. ಅರಣ್ಯ ವರ್ಣನೆ, ಉದ್ಯಾನವರ್ಣನೆ ಧನುರ್ಮಂದಿರದ ವರ್ಣನೆ, ಮಲ್ಲಗಾಳೆಗ ಮೊದಲಾದ ಪ್ರತಿಯೊಂದು ವರ್ಣನಾಭಾಗವೂ ಸಹಜ ಚಿತ್ರಗಳಿಂದಲೇ ತುಂಬಿದೆ.

ಗೋಪಕಾಂತೆಯರ ವಿರಹತಾಪಗಳ ಚಿತ್ರವು ಮಾತ್ರ ವಾಸ್ತವಪ್ರಿಯರಿಗೆ ಅಸಹಜವಾಗಿ ತೋರಬಹುದಾದರೂ – ಸಂಪ್ರದಾಯವಾದಿಗಳ ಹೃದಯ-ಮನಸ್ಸುಗಳನ್ನು ಅಲ್ಲಾಡಿಸುವಂತಿದೆ. ಕಂಸನಗರಿಯ ಉದ್ಯಾನದಲ್ಲಿರುವ ಕಪಿಗಳ ಸ್ವಭಾವ ಚಿತ್ರವಿದು :

ಮರಮರಕೆ ಲಂಘಿಸುವ ಬೆರಳಲಿ
ಬರಿಯ ತುರಿಸುವ ಕಳವಳಿಸಿ ಪ –
ಲ್ಗಿರಿದು ಮರಿಗಳನೆತ್ತಿ ಮುದ್ದಿಸಿ ಪರಸಿ ತೂಷಿರವ ||
ತರುಣಿಯರನೇಡಿಸುವ ಪಣ್ಗಳ
ತಿರಿದು ದೆಸೆದೆಸೆಗಿಡುವ ಕಪಿಗಳ
ನೆರವಿ-ನೆರವಿಯ ಕಂಡು ಕಂಡುಸುರಾರಿ ನಗುತಿರ್ದ ||
( ಸಂ. ೬- ಪ.೯ )

ಕಂಸವಧೆಯ ಭಾಗವು ಉತ್ಸಾಹಭಾವವನ್ನು ಪರಿಪೋಷಿಸುತ್ತಿದ್ದು ಅದು ಈ ಕೃತಿಯ ಕಲಶದಂತಿದೆ. ಕುವಲಯಾಷೀಡೆನೆಂಬ ಮದದಾನೆಯನ್ನು ಮತ್ತು ಚಾಣೂರ ಮುಷ್ಟಿಕರೆಂಬ ಜಟ್ಟಿಗಳನ್ನು ವಧಿಸಿದ ಬಲರಾಮಕೃಷ್ಣರು, ಕಂಸನ ಅರಮನೆಗೆ ಬರುವರು. ಆಗ ಕಂಸನು ಸಿಂಹಾಸನದ ಮೇಲೆ –

. . . . . .ಮುಸುಕಿದ
ಭೀತಿಯಲಿ ಸಿಗ್ಗಾಗಿ ಕಂಗೆ
ಟ್ಟಾತುರಿಸಿ ಜವಗುಂದಿ ಕಳವಳಿಸುತ ವಿಕಾರದಲಿ ||
ಮಾತನಾಡುತ ಮರೆದು ನಿಮಿಷಕೆ
ಚೇತರಿಸಿ ಹಲುಮೊರೆದು ಮರುಗುವ
ಮಾತುಳನ ದು:ಸ್ಥಿತಿಯ ಕಂಡಸುರಾರಿಯಿಂತೆಂದ ||

ಮೊದಲೆ ಹೆದರಿ ಕೆಂಗೆಟ್ಟಿರುವ ಕಂಸನನ್ನು ಇನ್ನಿಷ್ಟು ಕಂಗೆಡಿಸಬೇಕೆಂದು ವಸ್ತುಸ್ಥಿತಿಯನ್ನು ಶ್ರೀಕೃಷ್ಣ, ಅಣಕದ ನುಡಿಗಳಲ್ಲಿ ವಿವರಿಸುವನು :

ಬಿದ್ದು ದಗ್ಗದ ದಂತಿ ಮಲ್ಲರು
ಹದ್ದು-ಕಾಗೆಗೆ ಬೋನವಾದರು
ಹೊದ್ದಲಮ್ಮರು ನಿನ್ನ ಕಾಹಿನ ವೀರಪರಿವಾರ ||
ಬಿದ್ದಿನರನುಪಚರಿಸು ಬಾ ಮೇ
ಲಿದ್ದು ನೋಡುವುದುಚಿತವಲ್ಲೆನೆ
ಗದ್ದುಗೆಯ ಹೊಯ್ದೆದ್ದು ಕಿಡಿಕಿಡಿಯೋದನಾ ಕಂಸ ||
( ಸಂ. ೮- ಪ.೭೫ )

ಕಿಡಿಕಿಡಿಯಾದ ಕಂಸನು ಆಗ ಗರ್ಜಿಸುತ್ತ ಕೃಷ್ಣ-ಬಲರಾಮರ ಮೇಲೆ ಬೀಳಲು ಆಜ್ಞೆ ಕೊಡುತ್ತಿರುವಾಗಲೆ, ಮೈಮರೆದು ತನ್ನ ಪತ್ನಿಯರನ್ನು ನೆಮ್ಮಿ ಬಿದ್ದು ಕೊಂಡನು. ಒಡೆಯನ ಆಜ್ಞೆಯಂತೆ ಕಾಪಿನ ಭಟರು ಕೃಷ್ಣ-ಬಲರಾಮರನ್ನು ಮುತ್ತಿ ಕವಿಯುತ್ತಿರುವಾಗಲೆ. ಕೃಷ್ಣ ಮತ್ತೆ ತನ್ನ ವಕ್ರೋಕ್ತಿಗಳನ್ನು ಆರಂಭಿಸಿದ :

ಮಾವ ಕೇಳ್, ನಿನ್ನೊಡನೆ ಹುಟ್ಟಿದ
ದೇವಕಿಯ ಸುತಾರಾವು ಹಬ್ಬಕೆ
ನೀವು ಬರಹೇಳಿದೊಡೆ ಬಂದೆವು ನಮ್ಮ ಕೊಬ್ಬಿನಲಿ ||
ಲಾವಕರ ನುಡಿ ಕೇಳಿ ಕೊಲಿಸದೆ
ಕಾವುದೊಳ್ಳಿತು; ವನದೊಳಾಡುವ
ಗೋವರಲಿ ಗುಣ-ದೋಷವರಸುವುದುಚಿತವಲ್ಲೆಂದ ||
(ಸಂ. ೮- ಪ. ೭೮ )

ಶ್ರೀಕೃಷ್ಣ ತನ್ನ ಕಟಕಿವಾತವನ್ನು ಮತ್ತೆ ಮುಂದುವರೆಸುವ :

ನಾವು ಬಂದೆರಗುವಡೆ ನೀವಿಹ
ಠಾವೆಮಗೆ ವಶವಲ್ಲ ಸೋದರ
ಮಾವನಾಗಿಯು ನಮ್ಮ ಮೇಲಿನಿತಿಲ್ಲ ಕೃಪೆ ನಿಮಗೆ ! ||
ಈ ವಿಗಡ ಪರಿವಾರದಿದಿರಲಿ
ಜೀವಿಸುವರೇ ತರಳರಕಟ ಕೃ-
ಪಾವಲೋಕನದಿಂದ ಸಲಹುವುದೆಂದನಸುರಾರಿ ||
( ಸಂ. ೮- ಪ. ೭೯ )

ಹೀಗೆಲ್ಲ ಶ್ರೀಕೃಷ್ಣ ಮೂದಲೆನುಡಿಗಳನ್ನಾಡಿ, “ಒಂದು ಸರಳಿಂದ ತ್ರಿಪುರವ ನುರಿಪಿದ ಉಗ್ರನ ರೂಪ ಕೈಕೊಂಡು, ಹಿಂದಣ ಕಥೆಯನೆಲ್ಲ ನೆನೆದು ಊರಿದೆದ್ದು ಮನದಲಿ ನೊಂದು ಒದರಿ ಪುಟನೆಗೆದು, ಇಂದುಬಿಂಬವನ್ನು ರಾಹು ಮೊಗೆದು ಅರೆ ಯಟ್ಟುವಂದದಲಿ ” ಕಂಸನ ಮೇಲೆ ಹಾರಿದನು. ಕೃಷ್ಣನಿಗೆ ಸಹಕಾರಿಯಾಗಿ” ಅಬ್ಬರಿಸಿ ತವಗಕೆ ನೆಗೆಯಲು, ಅರರೆ, ಹಲಧರ ಜಾಗು ಜಾಗು ಎನ್ನುತ್ತ ಶ್ರೀಕೃಷ್ಣನು ಖಳನ ಶಿರವ ಚಚ್ಚರದಲಿ ಮೇಲ್ವಾಯ್ದು, ಎರಗಿಮುಂದಲೆವಿಡಿದು ತಿವಿದು ಇಳೆಗೆ ಉರುಳಿಸಿದೊಡೆ,” ರಕ್ಕಸ ಕಂಸನು, “ಎರಗಿದ ಸಿಡಿಲ ರಭಸದಲಿ ಅಡಗೆಡೆದನು.”

ಸೋಮನಾಥ ಕವಿ ಯಾವ ಸಂದರ್ಭವನ್ನು ವಿವರಿಸಬೇಕಾದರೂ, ಭಾವರಿಪರಿಪಾಕದೊಂದಿಗೆ ಪರಿಣಾಮಕಾರಿಯಾಗಿ ಹೇಳುವನು. ಒಂಬತ್ತನೆಯ ಸಂಧಿಯಲ್ಲಿ ಉಕ್ತವಾಗಿರುವ ಅಕ್ರೂರನ ಮನೆಯ ಔತಣ ಸಮಾರಂಭದ ಚಿತ್ರಣವೂ ರಮಣೀಯವಾಗಿದ್ದು, ಕಂಸವಧೆಯ ದುರಂತದಲ್ಲಿ ಕೊನೆಗೊಳ್ಳಬೇಕಾಗಿದ್ದ ಕೃತಿಯನ್ನು ಆನಂದ ಪರ್ಯವಸಾಯಿಯನ್ನಾಗಿ ಮಾಡಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅಕ್ರೂರಚರಿತೆಯು ಚಿಕ್ಕದಾದರೂ ಚೊಕ್ಕಟವಾದ ಕೃತಿ.

ಅ, ಆ, ಮು ಈ ಮೂರು ಪ್ರತಿಗಳ ಆಧಾರದಿಂದ ಈ ಕೃತಿಯನ್ನು ಸಂಪಾದಿಸಲಾಗಿದೆಯಾದರೂ, ಅ ಪ್ರತಿಯನ್ನೇ ಮೂಲಪ್ರತಿಯನ್ನಾಗಿ ನಾವು ಇರಿಸಿಕೊಂಡಿದ್ದೇವೆ. ಅ ಪ್ರತಿಯಲ್ಲಿಯ ಪಾಠ ತೀರ ಅಶುದ್ಧವೆಂದು ಕಂಡಾಗ, ಆ ಪ್ರತಿಯಲ್ಲಿದ್ದುದು ಹೆಚ್ಚು ಶುದ್ದವೆನಿಸಿದಲ್ಲಿ ಅದನ್ನು ಸ್ವೀಕರಿಸಿದ್ದೇವೆ. ಎರಡೂ ಪ್ರತಿಗಳಲ್ಲೂ ಒಂದು ಪಾಠ ಅಶುದ್ದವಾಗಿಯೇ ಇದೆಯೆಂಬುದು ತಿಳಿದಾಗ, ಮುದ್ರಿತ ಪ್ರತಿಯನ್ನು ನೋಡಿ, ಅ, ಆ ಪ್ರತಿಗಳ ಪಾಠಗಳೊಂದಿಗೆ ತೂಗಿ, ಆ ಶುದ್ಧಪಾಠಗಳನ್ನು ಸರಿಗೊಳಿಸಿ ಸ್ವೀಕರಿಸಿದ್ದೇವೆ. ಈ ಕಾವ್ಯದಲ್ಲಿ ೯ ಸಂಧಿಗಳಿರುವುದೆ ಕೃತಿತಂತ್ರದ ದೃಷ್ಠಿಯಿಂದ ಒಳ್ಳೆಯದೆಂದು ಎನಿಸಿದುದರಿಂದ, ಆ ಪ್ರತಿಯ ಸಂಧಿ-ಕ್ರಮವನ್ನೇ ನಾವು ಒಪ್ಪಿಕೊಂಡಿದ್ದೇವೆ.

ಅ, ಆ ಹಸ್ತಪ್ರತಗಳಲ್ಲಿ ಕಾರ್ಯವನ್ನು ಬಳಸಲಾಗಿದೆಯಾದರೂ, ಅದರ ಶುದ್ಧಾಶುದ್ಧತೆಯ ಪ್ರಜ್ಞೆ ಲಿಪಿಕಾರರಿಗೆ ಇದ್ದಂತಿಲ್ಲ. ಕೆಲಕೆಲವು ಶುದ್ಧ ಸಂಸ್ಕೃತ ಶಬ್ದಗಳಲ್ಲಿಯೂ ಶಕಟರೇಫವನ್ನು ಬಳಸಿದ್ದಾರೆ. ಅಲ್ಲದೆ ಕೃತಿಕಾರನೂ ಪ್ರಾಸಾದಿಸ್ಥಾನಗಳಲ್ಲಿ ಶಕಟರೇಫದ ನಿಯಮವನ್ನು ಸರಿಯಾಗಿ ಪಾಲಿಸಿದಂತಿಲ್ಲ. ಆದುದರಿಂದ ನಾವು ಇದರಲ್ಲಿ ಶಕಟರೇಫದ ಆಸ್ತಿತ್ವಕ್ಕೆ ಎಡೆಯನ್ನು ಕೊಟ್ಟಿಲ್ಲ. ಎಲ್ಲ ಕಡೆಗೂ ಸಾಮಾನ್ಯ ರಕಾರವನ್ನೇ ತೆಗೆದುಕೊಂಡಿದ್ದೇವೆ.

ಲಿಪಿಕಾರರು ಮಾಡಿದ ಅಕ್ಷರದೋಷ ಶುದ್ದದೋಷಗಳನ್ನು, ಶುದ್ದಲೇಖನದ ದೃಷ್ಟಿಯಿಂದ ಇಲ್ಲಿ ತಿದ್ದಲಾಗಿದೆ. ಪದ್ಯಗಳಲ್ಲಿ ಛಂದೋದೋಷಗಳು ತೀರ ಪ್ರತಿಯನ್ನು ನೋಡಿ ತಿದ್ದಲು ನಮಗೆ ಸಾಧ್ಯವಾಯಿತು. ತಿದ್ದುವ ಕೆಲಸದಲ್ಲಿ ನಾವು ಎಲ್ಲಿಯೂ ಸ್ವಾತಂತ್ರ‍್ಯ ವಹಿಸಿಕೊಂಡು ಮೂಲಕವಿಯ ಮಾತುಗಳನ್ನು ಮರೆಮಾಡಿಲ್ಲ. ಸಮಂಜಸಗಳೆಂದು ತೋರಿದ ಪಾಠಾಂತರಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಗಿದೆ.

ಅಭಿನಂದನೆಗಳು

ಈ ಕಾವ್ಯದ ಸಂಪಾದಿತ ಹಸ್ತಪ್ರತಿಯನ್ನು ಸಿದ್ಧಗೊಳಿಸಲು, ಕ.ವಿ. ವಿದ್ಯಾನಿಲಯದ ಕನ್ನಡ ಸಂಶೋಧನ ಸಂಸ್ಥೆಯ ಅಧಿಕಾರಿಗಳು, ತಮ್ಮ ಹಸ್ತಪ್ರತಿ ಗ್ರಂಥ ಭಾಂಡಾರದಲ್ಲಿರುವ ಎರಡು ತಾಳೆಗರಿಯ ಪ್ರತಿಗಳನ್ನು ಒದಗಿಸಿ, ಬೆಲೆಯುಳ್ಳ ನೆರವನ್ನು ನಮಗೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಅಲ್ಲದೆ ಹಿಂದಿನ ಮೈಸೂರು ಸರಕಾರದ ಓರಿಯೆಂಟಲ್ ಲೈಬ್ರರಿಯವರು ೧೯೨೩ರಲ್ಲಿ ಪ್ರಕಟಿಸಿದ ಮುದ್ರಿತ ಪ್ರತಿಯೂ, ನಮ್ಮ ಸಂಪಾದನೆಯ ಕೆಲಸದಲ್ಲಿ ಸಹಾಯಮಾಡಿದೆ. ಆದುದರಿಂದ ಮೈಸೂರು ಓರಿಯೆಂಟಲ್ ಲೈಬ್ರರಿಯ ಮುಖ್ಯಾಧಿಕಾರಿಗಳಿಗೂ ನಮ್ಮ ಕೃತಜ್ಞತೆಗಳನ್ನು ಸೂಚಿಸಬಯಸುತ್ತೇವೆ. ಈ ಕೃತಿ ಸಂಪಾದನೆಯ ಕಾರ್ಯದಲ್ಲಿ ಮೊದಲಿನಿಂದ ಕೊನೆಯವರೆಗೂ ವಿವಿಧ ಮುಖದ ಹೊಣೆಯನ್ನು ಹೊತ್ತು, ಆತ್ಮೀಯ ಭಾವದಿಂದ ಕಾರ್ಯಮಾಡಿದ ನಮ್ಮ ಸಂಶೋಧನ ಪ್ರಕಾಶನ ವಿಭಾಗದಲ್ಲಿ ಒಬ್ಬ ಕಾರ್ಯಕರ್ತರಾಗಿರುವ ಶ್ರೀಮಾನ್ ಎಸ್.ಜಿ. ಕುಲಕರ್ಣಿಯವರ ನೆರವನ್ನೂ ನಾವಿಲ್ಲಿ ನೆನೆಯಬೇಕಾದುದು ಅತ್ಯಗತ್ಯ !

ಕರ್ನಾಟಕ ವಿಶ್ವವಿದ್ಯಾಲಯವು ಈ ಮೊದಲೇ ವೀರಶೈವ, ಜೈನ ಪ್ರಾಚೀನ ಸಾಹಿತ್ಯದ ಸಂಸ್ಕರಣ-ಪ್ರಕಟನೆಯ ವಿಭಾಗಗಳನ್ನು ನಡೆಸುತ್ತಲಿದ್ದು. ಈಗ ಬ್ರಾಹ್ಮಣ ಸಾಹಿತ್ಯದ ಸಂಸ್ಕರಣ-ಪ್ರಕಾಶನ ವಿಭಾಗವನ್ನೂ ಪ್ರಾರಂಭಿಸಿರುವುದು ಕನ್ನಡ ನಾಡಿಗೆ ಒಂದು ಆನಂದದ ಸಂಗತಿ, ಕನ್ನಡ ಪ್ರಾಚೀನ ಸಾಹಿತ್ಯದ ಎಲ್ಲ ಕೃತಿಗಳನ್ನೂ ಬೆಳಕಿಗೆ ತರಬೇಕೆಂಬ ಆದರ್ಶ ಸಿದ್ಧಿಗಾಗಿ ಪ್ರತ್ಯಕ್ಷ ಕಾರ್ಯವನ್ನು ಕೈಕೊಂಡು ದಿನದಿನಕ್ಕೂ ಮುಂದೆಡಿಯಿಡುತ್ತಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕರ್ತವ್ಯಬುದ್ಧಿ ನಿಜವಾಗಿಯೂ ಅಭಿನಂದನೀಯವಾದುದು. ಬ್ರಾಹ್ಮಣ ಸಾಹಿತ್ಯ ವಿಭಾಗ ಪ್ರಾರಂಭವಾಗಿ ಹೆಚ್ಚು ದಿನಗಳು ಆಗಿಲ್ಲವಾದರೂ, ಅದು ತನ್ನ ಮೊದಲನೆಯ ಕೃತಿಕುಸುಮವನ್ನು ಕನ್ನಡ ಶಾರದೆಗೆ ಅರ್ಪಿಸುವ ಸುಯೋಗವನ್ನು ತಂದುಕೊಂಡುದು ನಮಗೆ ತುಂಬ ಸಂತಸವನ್ನು ಉಂಟಮಾಡಿದೆ.

–      ಸಂಪಾದಕರು

೨೦-೮-೧೯೬೮
ಶ್ರಾವಣ ವದ್ಯ ೧೨
೧೮೯೦ ಶಾ. ಶ.