ಏಳನೇ ವಯಸ್ಸಿನಲ್ಲಿ ಬಾಲ ನಟರಾಗಿ ರಂಗಗೀತೆ ಹಾಡುತ್ತ ವೇದಿಕೆ ಏರಿ, ಹದಿನೇಳನೇ ವಯಸ್ಸಿನಲ್ಲಿ (೧೯೬೧) ಅಖಿಲ ಭಾರತ ಆಕಾಶವಾಣಿಯ ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಹಿಂದುಸ್ಥಾನಿ ಹಾಡುಗಾರಿಕೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಪತಿಗಳಿಂದ ಪದಕ ಪಡೆದ ಜೇನು ಕಂಠದ ಗಾಯಕ ಧಾರವಾಡದ ಪಂ. ಸೋಮನಾಥ ಮರಡೂರ ಅವರು ಕನ್ನಡ ನಾಡು ಕಂಡ ಅಪರೂಪದ ಕಲಾವಿದರು.

ಪಂ. ಸೋಮನಾಥ ಅವರು ಜನಿಸಿದ್ದು ೧೯೪೪ರ ಜನವರಿ ೨೩ ರಂದು ಹಾವೇರಿ ಜಿಲ್ಲೆಯ ಮರಡೂರ ಎಂಬ ಗ್ರಾಮದಲ್ಲಿ ಅವರದು ಸಂಗೀತ ಪರಂಪರೆಯ ಮನೆತನ. ಅವರ ತಂದೆ ಶ್ರೀ ಗುರಯ್ಯನವರು ಹಾಗೂ ಅಜ್ಜ ಸಂಗೀತಗಾರರಾಗಿದ್ದರು. ಶಾಲಾ ದಿನಗಳಲ್ಲಿಯೇ ಸಂಗೀತದತ್ತ ಒಲವು ತೋರಿದ ಸೋಮನಾಥರಿಗೆ ಶಾಲೆಯ ವಿದ್ಯೆಯಿಂದ ದೂರ ಉಳಿದು ಸಂಗೀತದ ಕಡೆ ಲಕ್ಷ್ಯ ಹರಿಸಿದರು. ಅವರಿಗೆ ಸಂಗೀತದ ಮೊದಲ ಪಾಠ ಹೇಳಿದವರು ಮರಡೂರು ಗ್ರಾಮದ ಶ್ರೀ ಮರೋಳ ವೀರಪ್ಪಯ್ಯ ಸ್ವಾಮಿಗಳು. ಅವರ ಬಳಿ ಎರಡು ವರ್ಷ ಸಂಗೀತದ ಪ್ರಾಥಮಿಕ ಜ್ಞಾನ ಪಡೆದುಕೊಂಡು ೧೪ನೇ ವಯಸ್ಸಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದು ಪಂ. ಪುಟ್ಟರಾಜ ಗವಾಯಿಗಳಲ್ಲಿ ೨ ವರ್ಷ ಸಂಗೀತ ಶಿಕ್ಷಣ ಪಡೆದು ಮುಂದೆ ೧೬ನೇ ವಯಸ್ಸಿನಲ್ಲಿ ವಿಖ್ಯಾತ ಹಿಂದೂಸ್ಥಾನಿ ಗಾಯಕ ಪದ್ಮಭೂಷಣ ಪಂ. ಬಸವರಾಜ ರಾಜಗುರು ಅವರ ಬಳಿ ಬಂದು ೧೨ ವರ್ಷಗಳ ಸುದೀರ್ಘ ಕಾಲ ಕಿರಾನಾ ಘರಾಣೆಯ ತಾಲೀಮು ಪಡೆದುಕೊಂಡು ದೇಶದ ಮಹಾನ್‌ ಗಾಯಕರೆನಿಸಿದರು.

ಆರಂಭದಲ್ಲಿ ಗ್ವಾಲಿಯರ್ ಘರಾಣೆ ನಂತರ ಕಿರಾಣಾ ಘರಾಣೆಯ ಎಲ್ಲ ಉತ್ತಮಾಂಶಗಳನ್ನು ಪಡೆದುಕೊಂಡು ನಿರಂತರ ಸಾಧನೆಯಿಂದ ರಾಷ್ಟ್ರ ಮಟ್ಟದ ಖ್ಯಾತಿ ಗಳಿಸಿದ ಪಂ. ಸೋಮನಾಥ ಅವರು ಆರಂಭದಲ್ಲಿ ೧೦ ವರ್ಷಗಳ ಕಾಳ (೧೯೬೭ ರಿಂದ ೧೯೭೭) ಸರ್ಕಾರಿ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಂತರ ರಾಜೀನಾಮೆ ನೀಡಿ ಪೂರ್ಣಾವಧಿ ಸಂಗೀತ ಸಾಧಕರಾಗಿ ದೇಶದೆಲ್ಲೆಡೆ ಸಂಗೀತ ಸಂಚಾರಿಗಳಾಗಿ ಬೆಂಗಳೂರು, ಮದ್ರಾಸ್‌, ಮುಂಬೈ, ದೆಹಲಿ, ನಾಗಪುರ, ಪುಣೆ, ಕಲ್ಕತ್ತಾ, ಭೂತಾಲ – ಹೀಗೆ ದೇಶದ ತುಂಬೆಲ್ಲ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಆಕಾಶವಾಣಿ ರಾಷ್ಟ್ರೀಯ ವಾಹಿನಿಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಖಯಾಲ, ಠುಮ್ರಿ, ಭಜನ್‌, ತರಾನಾ ಎಲ್ಲ ಪ್ರಕಾರದಲ್ಲೂ ಅವರ ಹಾಡುಗಾರಿಕೆ ಸಮೃದ್ಧವಾಗಿದೆ. ಶರಣರ ವಚನಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಡುವ ಅವರ ‘ಶರಣವಾಣಿ’ ಕಾರ್ಯಕ್ರಮ ಕೇಳಿಯೇ ಆನಂದಿಸಬೇಕು. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರದು ಸಂಗೀತ ಪರಿವಾರ. ಮಗ ಬಸವ ಕುಮಾರ, ಹೆಣ್ಣು ಮಕ್ಕಳಾದ ಶ್ರೀಮತಿ ವೀಣಾ ಹಾಗೂ ಶ್ರೀಮತಿ ವಾಣಿ – ಎಲ್ಲರೂ ಸುಶ್ರಾವ್ಯ  ಕಂಠದ ಗಾಯಕರು. ತಂದೆ – ಮಕ್ಕಳೆಲ್ಲರೂ ಆಕಾಶವಾಣಿ ಹಾಗೂ ದೂರದರ್ಶನದ ಕಲಾವಿದರು. ಪಂ. ಸೋಮನಾಥ ಮರಡೂರ ಅವರಿಗೆ ‘ಪಂಡಿತ’ (೧೯೬೬), ಮುಂಬೈನ ಸೂರ ಸಿಂಗಾರ ಸಂಸತ್ತಿನ ‘ಸುರಮಣಿ’ (೧೯೭೮), ‘ಸಂಗೀತ ರತ್ನ’ (೧೯೯೯), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ (೧೯೯೪), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೪), ರಮಣಶ್ರೀ ಶರಣ ಪ್ರಶಸ್ತಿ (೨೦೦೬) ಮುಂತಾದ ಪ್ರಶಸ್ತಿ – ಪುರಸ್ಕಾರ ದೊರೆತಿವೆ.