ಸೋರೆಯ ಎಳೆಯ ಕಾಯಿಗಳು ಪೌಷ್ಟಿಕವಿರುತ್ತವೆ. ಬಲಿತು ಹಣ್ಣಾದ ಕಾಯಿಗಳು ಸಂಪೂರ್ಣವಾಗಿ ಒಣಗಿದಾಗ ಒಳಗಡೆ ಟೊಳ್ಳು ಏರ್ಪಟ್ಟು ತೂಕದಲ್ಲಿ ಹಗುರವಾಗುತ್ತವೆ. ಗ್ರಾಮಾಂತರಪ್ರದೇಶಗಳಲ್ಲಿ ಈಜು ಕಲಿಯುವವರು ಸೋರೆಬುರುಡೆಗಳನ್ನು ನಡುವಿಗೆ ಕಟ್ಟಿಕೊಳ್ಳುವುದು ಸಾಮಾನ್ಯ ದೃಶ್ಯ. ಸೋರೆ ಬುರುಡೆಗಳಿಂದ ತಂಬೂರಿ ಮುಂತಾಗಿ ತಯಾರಿಸುತ್ತಾರೆ ಕೆಲವರು ಕುಡಿಯುವ ನೀರನ್ನು ಈ ಬುರುಡೆಗಳಲ್ಲಿ ತುಂಬಿಸುವುದುಂಟು. ಎಳೆಯಕಾಯಿಗಳನ್ನು ಸಾರು, ಪಲ್ಯ, ಸಾಗು, ಸಿಹಿ ಪದಾರ್ಥ ತಯಾರಿಕೆಗೆ ಬಳಸುತ್ತಾರೆ.
ಪೌಷ್ಟಿಕ ಗುಣಗಳು :
೧೦೦ ಗ್ರಾಂ ಕಾಯಿಗಳಲ್ಲಿನ ವಿವಿಧ ಪೋಷಕಾಂಶಗಳು
ತೇವಾಂಶ | ೯೬.೧ ಗ್ರಾಂ | ಪೊಟ್ಯಾಷಿಯಂ | ೦.೮೭ ಮಿ.ಗ್ರಾಂ |
ಶರ್ಕರಪಿಷ್ಟ | ೨.೫ ಗ್ರಾಂ | ಕಬ್ಬಿಣ | ೦.೭ ಮಿ.ಗ್ರಾಂ |
ಪ್ರೊಟೀನ್ | ೦.೨ ಗ್ರಾಂ | ರೈಬೋಫ್ಲೆವಿನ್ | ೦.೦೧ ಮಿ.ಗ್ರಾಂ |
ಕೊಬ್ಬು | ೦.೧ ಗ್ರಾಂ | ’ಸಿ’ ಜೀವಸತ್ವ | ೬ ಮಿ.ಗ್ರಾಂ |
ಖನಿಜ ಪದಾರ್ಥ | ೦.೫ ಗ್ರಾಂ | ರಂಜಕ | ೧೦ ಮಿ.ಗ್ರಾಮ |
ಕ್ಯಾಲ್ಸಿಯಂ | ೨೦ ಮಿ.ಗ್ರಾಂ |
ಔಷಧೀಯ ಗುಣಗಳು : ಸೋರೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಸ್ವಲ್ಪ ಮಟ್ಟಿಗೆ ಶೈತ್ಯಕಾರಕ.
ಉಗಮ ಮತ್ತು ಹಂಚಿಕೆ: ಸೋರೆಯ ತವರೂರು ಬಗ್ಗೆ ಖಚಿತವಾಗಿ ತಿಳಿದು ಬಂದಿಲ್ಲ. ಇದರ ಬೇಸಾಯ ಹೆಚ್ಚಾಗಿ ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಪ್ರದೇಶಗಳಲ್ಲಿ ಕಂಡುಬರುತ್ತದೆ. ಭಾರತದ ಎಲ್ಲಾ ಕಡೆ ಇದರ ಬೇಸಾಯ ಮತ್ತು ಬಳಕೆ ಕಂಡುಬರುತ್ತದೆ.
ಸಸ್ಯ ವರ್ಣನೆ : ಸೋರೆ ಕುಕುರ್ಬಿಟೇಸೀ ಕುಟುಂಬಕ್ಕೇ ಸೇರಿದ ವಾರ್ಷಿಕ ಬಳ್ಳಿ. ಬಳ್ಳಿಯ ಹಂಬುಗಳು ಮೇಲಕ್ಕೆ ಏರಲು ಅಥವಾ ಹಬ್ಬಲು ಆಸರೆ ಬೇಕು. ಬಳ್ಳಿಭಾಗಗಳು ಬಿಳಿ ಹಸಿರುಬಣ್ಣವಿದ್ದು ಮೇಲೆಲ್ಲಾ ನಯವಾದ ತುಪ್ಪುಳದ ಹೊದಿಕೆಯಿಂದ ಕೂಡಿರುತ್ತವೆ. ಎಲೆಗಳು ಸರಳ; ಹೃದಯಾಕಾರ. ಅಂಚು ಸಾಮಾನ್ಯವಾಗಿ ಒಡೆದಿರುವುದಿಲ್ಲ. ಹಸಿರು ಬಣ್ಣ, ಹೂವು ಉದ್ದ, ತೊಟ್ಟುಗಳ ತುದಿಯಲ್ಲಿ, ದಳಗಳು ಬಿಳಿ, ಕಾಯಿಗಳ ಆಕಾರ ಮತ್ತು ಗಾತ್ರಗಳಲ್ಲಿ ಬಹಳಷ್ಟು ವ್ಯತ್ಯಾಸ, ಕೆಲವು ಗುಂಡಗೆ, ಕೆಲವು ಉದ್ದ ದುಂಡಾಗಿರುತ್ತವೆ, ಕೆಲವು ಅದುಮಿದಂತೆ ಚಪ್ಪಟೆ, ಬಣ್ಣ ಬಿಳಿ ಹಸುರು, ಬಲಿತಂತೆಲ್ಲಾ ಒಳಗೆ ಟೊಳ್ಳು ಏರ್ಪಟ್ಟು, ತೂಕದಲ್ಲಿ ಹಗುರಗೊಳ್ಳುತ್ತವೆ. ಪೂರ್ಣಬಲಿತು ಒಣಗಿದಾಗ ಅಲುಗಾಡಿಸಿದರೆ ಬೀಜಗಳಿಂದ ಶಬ್ದ ಹೊರಡುವುದು, ಬೀಜ ಉದ್ದ, ಹಲ್ಲಿನಂತೆ, ಮಾಸಲು ಕಂದು ಬಣ್ಣ.
ಬೀಜ ಬಿತ್ತಿದಾಗ, ತಾಯಿ ಬೇರು ಮಣ್ಣಿನಲ್ಲಿ ಆಳವಾಗಿ ಇಳಿಯುತ್ತದೆ. ಕವಲು ಬೇರುಗಳು ಸುತ್ತ ಹರಿಡಿರುತ್ತವೆ.
ಹವಾಗುಣ : ಸೋರೆಯ ಬೇಸಾಯಕ್ಕೆ ಉಷ್ಣ ಹಾಗೂ ಸಮಶೀತೋಷ್ಣ ಹವೆ ಒಪ್ಪುತ್ತದೆ. ದಿನದಲ್ಲಿ ದೀರ್ಘಕಾಲ ಬೆಳಕು ಮತ್ತು ಬೇಸಿಗೆಯ ಉಷ್ಣತೆಗಳು ಇರುವ ಸಂದರ್ಭಗಳಲ್ಲಿ ಗಂಡು ಹೂವು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ. ಬಹಳಷ್ಟು ಶೈತ್ಯ ಹವೆ ಇದ್ದರೆ ಬೆಳೆ ಚೆನ್ನಾಗಿ ಫಲಿಸುವುದಿಲ್ಲ. ಬೇಸಾಯವನ್ನು ಜೂನ್-ಜುಲೈ, ಅಕ್ಟೋಬರ್-ನವೆಂಬರ್ ಹಾಗೂ ಫೆಬ್ರುವರಿ-ಮಾರ್ಚ್ತಿಂಗಳುಗಳಲ್ಲಿ ಹೆಚ್ಚು ಲಾಭದಾಯಕವಾಗಿ ಕೈಗೊಳ್ಳಬಹುದು. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹೂವು ಉದುರುತ್ತವೆ ಹಾಗೂ ಪರಾಗಸ್ಪರ್ಶಗೈಯ್ಯುವ ಕೀಟಗಳ ಹಾರಾಟ ಕುಂಠಿತಗೊಳ್ಳುತ್ತದೆ.
ಭೂಗುಣ : ಸೋರೆಯ ಎಲ್ಲಾ ತೆರನಾದ ಮಣ್ಣುಗಳಲ್ಲಿ ಬೆಳೆಯಬಹುದಾದರೂ ನೀರು ಬಸಿಯುವ ಮರಳು ಮೀಶ್ರಿತ ಗೋಡು ಮಣ್ಣಿನ ಭೂಮಿಯಾದರೆ ಅತ್ಯಂತ ಸೂಕ್ತ.
ತಳಿಗಳು :
೧. ಪೂಸಾಸಮ್ಮರ್ ಪ್ರಾಲಿಫಿಕ್ ಲಾಂಗ್: ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ಕೊಡುಗೆ. ಕಾಯಿ ಸುಮಾರು ೪೦-೫೦ ಸೆಂ.ಮೀ. ಉದ್ದ, ೨೦ ರಿಂದ ೨೫ ಸೆಂ.ಮೀ. ದಪ್ಪ, ಕಾಯಿಗಳು ಹಳದಿ ಹಸಿರು ಬಣ್ಣ. ಈ ತಳಿ ವಸಂತ ಋತು ಮತ್ತು ಬೇಸಿಗೆಗಳಿಗೆ ಬಹುವಾಗಿ ಒಪ್ಪುತ್ತದೆ. ಫಸಲು ಸಾಧಾರಣ; ಹೆಕ್ಟೇರಿಗೆ ೧೨ ಟನ್ ಇಳುವರಿ ಖಚಿತ.
೨. ಪೂಸಾಪ್ರಾಲಿಫಿಕ್ ರೌಂಡ್: ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ಕೊಡುಗೆ. ಕಾಯಿಗಳು ದುಂಡಗೆ, ಬಿಡಿಕಾಯಿಗಳು ೧೫ ರಿಂದ ೧೮ ಸೆಂ.ಮೀ ಅಡ್ಡಗಲ; ವಸಂತ ಋತು ಮತ್ತು ಬೇಸಿಗೆಗಳಿಗೆ ಬಹುವಾಗಿ ಒಪ್ಪುವ ತಳಿ.
೩. ಅರ್ಕಾಬಹಾರ್: ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕೊಡುಗೆ. ಕಾಯಿಗಳು ನೆಟ್ಟಗೆ, ಸಾಧಾರಣ ದೊಡ್ಡವು, ಬಿಡಿಕಾಯಿಗಳು ಸುಮಾರು ೪೫ ಸೆಂ.ಮೀ. ಉದ್ದ ಮತ್ತು ೨೬ ಸೆಂ.ಮೀ ದಪ್ಪ, ಒಂದು ಕಿ.ಗ್ರಾಂ. ನಷ್ಟು ತೂಕ. ತಿಳಿ ಹಸಿರು ಬಣ್ಣ, ತಿರುಳು ಮೃದು, ಬಿಳಿ. ತಿನ್ನಲು ರುಚಿಕರ, ಬಿತ್ತನೆ ಮಾಡಿದ ಸುಮಾರು ೧೨೦ ದಿನಗಳಲ್ಲಿ ಕೊಯ್ಲು ಪ್ರಾರಂಭ, ಅಧಿಕ ಇಳುವರಿದಾಯಕ ತಳಿ; ಹೆಕ್ಟೇರಿಗೆ ೪೦ ರಿಂದ ೪೫ ಟನ್ವರೆಗೆ ಸಾಧ್ಯ.
೩. ಪೊಸಾಮೇಘದೂತ್: ಪೂಸಾಸಮ್ಮರ್ ಪ್ರಾಲಿಫಿಕ್ ಲಾಂಗ್ ಮತ್ತು ಸೆಲೆಕ್ಷನ್-೨ ಗಳ ಸಂಕರಣದ ಮಿಶ್ರ ತಳಿ. ಕಾಯಿಗಳು ಉದ್ದ, ತಿಳಿ ಹಸಿರು ಬಣ್ಣ, ಹೆಕ್ಟೇರಿಗೆ ಸುಮಾರು ೨೬ ಟನ್ನುಗಳವರೆಗೆ ಪಸಲು.
೫. ಪೂಸಾಮಂಜರಿ: ಮೀಶ್ರ ತಳಿ; ಪೂಸಾಸಮ್ಮರ್ ಪ್ರಾಲಿಫಿಕ್ ರೌಂಡ್ ಮತ್ತು ಸೆಲೆಕ್ಷನ್-೧೧ಗಳ ಸಂಕರಣ ಕಾಯಿ ಗುಂಡಗೆ, ಬಿಳಿ ಹಸಿರು ಬಣ್ಣ, ಹೆಕ್ಟೇರಿಗೆ ಸುಮಾರು ೨೫ ಟನ್ನುಗಳಷ್ಟು ಪಸಲು.
ಭೂಮಿ ಸಿದ್ಧತೆ ಮತ್ತು ಬಿತ್ತನೆ: ಸಾಲುಗಳ ನಡುವೆ ೧.೮ ಮೀಟರ್ ಹಾಗೂ ಸಸಿಗಳ ನಡುವೆ ೯೦ ಸೆಂ.ಮೀ ಇರುವಂತೆ ಪಾತಿಗಳನ್ನು ಸಿದ್ದಗೊಳಿಸಿ ಪೂರ್ಣಪ್ರಮಾಣದ ತಿಪ್ಪೆಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಬಿತ್ತುವ ಮುಂಚೆ ಸೆರಸಾನ್ ಔಷಧಿ ಬೆರೆಸಿ ಬೀಜೋಪಚಾರ ಮಾಡುವುದು ಒಳ್ಳೆಯದು. ಪ್ರತಿ ಪಾತಿಯಲ್ಲಿ ೩-೪ಬೀಜ ಬಿತ್ತಬೇಕು. ಬಿತ್ತುವ ಆಳ ಹೆಚ್ಚೆಂದರೆ ೧ ಸೆಂ.ಮೀ. ಮಣ್ಣು ಸಾಕಷ್ಟು ಹಸಿಯಾಗಿಲ್ಲದಿದ್ದರೆ ತೆಳ್ಳಗೆ ನೀರು ಕೊಡಬೇಕು. ಬೀಜ ಸುಮಾರು ೪-೫ ದಿನಗಳಲ್ಲಿ ಮೊಳೆಯುತ್ತವೆ.
ಗೊಬ್ಬರ : ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ, ೫೦ ಕಿ.ಗ್ರಾಂ ಸಾರಜನಕ, ೫೦ ಕಿ.ಗ್ರಾಂ ರಂಜಕ ಮತ್ತು ೩೮ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡಬೇಕು.
ನೀರಾವರಿ : ಹವಾ ಮತ್ತು ಭೂಗುಣಗಳನ್ನುಸರಿಸಿ ೪ರಿಂದ ೬ ದಿನಗಳಿಗೊಮ್ಮೆ ನೀರು ಕೊಟ್ಟರೆ ಸಾಕು.
ಬಳ್ಳಿಗಳಿಗೆ ಆಧಾರ ಕೊಡುವುದು: ಬಳ್ಳಿಗಳನ್ನು ನೆಲದ ಮೇಲೆ ಹರಡಲು ಬಿಟ್ಟರೆ ಅವು ಮಣ್ಣಿಗೆ ಸೋಕಿ ಕೆಡುವ ಸಾಧ್ಯತೆ ಇರುತ್ತದೆ. ಹಾಗೆ ವಿಡುವ ಬದಲಾಗಿ ಸುಮಾರು ೧.೮ ಮೀಟರ್ ಎತ್ತರದಲ್ಲಿ ತೋಟದ ಅಗಲಕ್ಕೆ ತಂತಿಯ ಬಲೆ ಹರಡಿ ಚಪ್ಪರ ನಿರ್ಮಿಸಿದರೆ ಕಾಯಿಗಳು ನೆಲದ ಕಡೆಗೆ ಇಳಿಬಿದ್ದು ನೋಡಲು ಚೆನ್ನಾಗಿರುತ್ತವೆ.ಪಾತಿಗಳಲ್ಲಿ ಕೆಲಸ ಮಾಡಲು ಹಾಗೂ ಇತರ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ. ಕೆಲವರು ಮನೆಗಳ ಮೇಲೂ ಸಹ ಹಬ್ಬಿಸುವುದುಂಟು.
ಅಂತರ ಬೇಸಾಯ : ಅಂತರ ಬೇಸಾಯ ಹಗುರವಾಗಿದ್ದರೆ ಉತ್ತಮ. ಬಳ್ಳಿಗಳಲ್ಲಿ ಹೂಬಿಟ್ಟು ಕಾಯಿ ಕಚ್ಚಲು ಪ್ರಾರಂಭವಾದ ನಂತರ ಕಳೆಗಳ ಹಾವಳಿ ಇರುವುದಿಲ್ಲ.
ಚೋದಕ ಗಳ ಬಳಕೆ: ಸೋರೆಯಲ್ಲೂ ಸಹ ಅಧಿಕ ಪ್ರಮಾಣದ ಗಂಡು ಹೂವು ಬಿಡುತ್ತವೆ. ಹೆಚ್ಚಿನ ಸಂಖ್ಯೆಯ ಹೆಣ್ಣು ಹೂವು ಬಿಡುವಂತೆ ಮಾಡಲು ೫೦ ರಿಂದ ೧೦೦ ಪಿಪಿಎಂ ಸಾಮರ್ಥ್ಯದ ಮ್ಯಾಲೆಯಿಕ್ ಹೈಡ್ರಜೆಡ್ ಅಥವಾ ೫-೧೦ ಪಿಪಿಎಂ ಜಿಬ್ಬೆರಲ್ಲಿಕ್ ಆಮ್ಲ ಇಲ್ಲವೇ ೧೦೦ ಪಿಪಿಎಂ ಸಾಮರ್ಥ್ಯದ ನ್ಯಾಫ್ತಲಿನ್ ಅಸೆಟಿಕ್ ಆಮ್ಲವನ್ನು ದ್ರಾವಣ ರೂಪದಲ್ಲಿ ಸಸಿಗಳಲ್ಲಿ ಎರಡು ಎಲೆಗಳಿರುವಾಗ ಒಮ್ಮೆ ಮತ್ತು ಒಂದು ವಾರದ ನಂತರ ಮತ್ತೊಮ್ಮೆ ಸಿಂಪಡಿಸುಬಹುದು.
ಇಳುವರಿ : ಕಾಯಿಗಳು ಸ್ವಲ್ಪ ಎಳಸಾಗಿರುವಾಗಲೇ ಕಿತ್ತು ಮಾರಾಟ ಮಾಡಿದರೆ ಒಳ್ಳೆಯ ಬೆಲೆ ಸಿಗುತ್ತದೆ. ಕಾಯಿಗಳ ಮೇಲೆ ಉಗುರಿನ ಮೊನೆಯಿಂದ ಚುಚ್ಚಿದರೆ ಅದು ಸುಲಭವಾಗಿ ಇಳಿಬೀಳುತ್ತದೆ. ಬೆಳೆ ಚೆನ್ನಾಗಿ ಫಲಿಸಿದರೆ ಹೆಕ್ಟೇರಿಗೆ ೨೦-೨೫ ಟನ್ ಇಳುವರಿ ಸಾಧ್ಯ.
ಕೀಟ ಮತ್ತು ರೋಗಗಳು :
೧. ಕುಂಬಳದ ಕೆಂಪು ದುಂಬಿ: ಈ ಕೀಟಗಳು ಎಲೆ, ಹೂವು ಮತ್ತು ಚಿಗುರುಗಳನ್ನು ತಿಂದು ಹಾಳು ಮಾಡುತ್ತವೆ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು. ಬೀಜ ಬಿತ್ತಿದ ಎರಡು ವಾರಗಳ ನಂತರ ಈ ಕೀಟ ನಾಶಕವನ್ನು ಸಿಂಪಡಿಸುವುದು ಒಳ್ಳೆಯದು. ಹೆಕ್ಟೇರಿಗೆ ಸುಮಾರು ೩೬೦ ಲೀಟರ್ ದ್ರಾವಣ ಬೇಕಾಗುತ್ತದೆ.
೨. ಚಿಬ್ಬುರೋಗ: ಇದು ಶಿಲೀಂಧ್ರರೋಗ. ಮೋಡ ಕವಿದ ದಿನಗಳಲ್ಲಿ ಇದರ ಹಾವಳಿ ಜಾಸ್ತಿ. ಸಸ್ಯಭಾಗಗಳಲ್ಲಿಕಲೆಗಳುಂಟಾಗಿ ಅನಂತರ ಅವು ಕುಸಿದು ಇಳಿಬೀಳುತ್ತವೆ. ಎಲೆ ಮತ್ತು ಹೂಗಳಲ್ಲಿ ತೂತುಗಳಾಗುತ್ತವೆ. ಅಂತಹ ಭಾಗಗಳು ನೋಡಲು ವಿಕಾರವಾಗಿರುತ್ತವೆ. ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಗ್ರಾಂ. ಮ್ಯಾಂಕೊಜೆಬ್ ಬೆರೆಸಿ ಸಿಂಪಡಿಸಬಹುದು. ವಾರಕ್ಕೊಮ್ಮೆ ಎರಡು ಸಾರಿ ಸಿಂಪಡಿಸಿದರೆ ಸಾಕು.
೩. ಬೂದಿ ರೋಗ: ಇದೂ ಸಹ ಶಿಲೀಂಧ್ರರೋಗವೇ. ಎಲೆಗಳ ಎರಡೂ ಪಾರ್ಶ್ವಗಳಲ್ಲಿ ಬೂದಿಯಂತಹ ಧೂಳು ಕುಳಿತಿರುತ್ತದೆ. ಕೆಲವೇ ದಿನಗಳಲ್ಲಿ ಅಂತಹ ಎಲೆಗಳು ನಿಸ್ತೇಜಗೊಂಡು, ಒಣಗಿ ಸಾಯುತ್ತವೆ, ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ದಿನಕಾಪ್ ಬೆರೆಸಿ ಎರಡು ಮೂರು ವಾರಗಳಿಗೊಮ್ಮೆ ಸಿಂಪಡಿಸಬೇಕು. ಹೆಕ್ಟೇರಿಗೆ ಸುಮಾರು ೭೦೦ ಲೀಟರ್ ದ್ರಾವಣ ಬೇಕಾಗುತ್ತದೆ.
ಬೀಜೋತ್ಪಾದನೆ : ಸೋರೆ ಅನ್ಯ ಪರಾಗಸ್ಪರ್ಶದ ಬೆಳೆ. ಕಾಯಿಗಳು ಬಳ್ಳಿಗಳಲ್ಲಿಯೇ ಪೂರ್ಣಬಲಿತು ಹಣ್ಣಾಗಬೇಕು. ಬೀಜೋತ್ಪಾದನೆಗೆ ಒಳ್ಳೆಯ ಕಾಯಿಗಳನ್ನು ಮಾತ್ರವೇ ಆರಿಸಿ ತೆಗೆಯಬೇಕು. ಒಣಗಿದ ಬುರುಡೆಗಳನ್ನು ಒಡೆದು ಬೀಜವನ್ನು ಹೊರತೆಗೆದು ಗಟ್ಟಿಬೀಜವನ್ನು ಮಾತ್ರವೇ ಆರಿಸಿಕೊಳ್ಳಬೇಕು. ಅವುಗಳನ್ನು ಚೆನ್ನಾಗಿ ಒಣಗಿಸಿ ಅನಂತರ ದಾಸ್ತಾನು ಮಾಡುವುದು ಅಗತ್ಯ. ಬೀಜಗಳಲ್ಲಿನ ತೇವಾಂಶ ಶೇಕಡಾ ೬ರಿಂದ ೮ ರಷ್ಟಿದ್ದರೆ ಸಾಕು.
ಬೀಜ ಸುಮಾರು ೪-೫ ವರ್ಷಗಳವರೆಗೆ ಜೀವಂತವಾಗಿರುತ್ತವೆ.
* * *
Leave A Comment