ಕೋಲ್ ಜೇನ್ ಕಂಡ್ಬುಟ್ಟು ಅಕ್ಕ ಚಿಕ್ರಂಗಿ ದೊಡ್ರಂಗಿ,
ಚಿಕ್ಕಾಡಿ, ದೊಡ್ಕಾಡಿ ನೋಡಕ್ಕ ಬೆಳ್ಗಿಂದ ಊಟವಿಲ್ಲ
ರಾತ್ರಿ ಊಟವಿಲ್ಲ
ಅಕ್ಕ ಅಲ್ಲೊಂದ್ ಕೋಲ್ ಜೇನ್ ಕೂತದೆ
ಆ ಕೋಲ್ ಜೇನ್ ಕೀಳ್ರಕ್ಕ ಅಂದ್ಬುಟ್ಟು

ಅಯ್ಯ ಎಂಟು ಜೊನ್ನೆಯ ವಲಿರವ್ವ sss || ತಂದಾನ ||
ಅಯ್ಯ ಬಂದಿರೋದು ಏಳು ಜನsss
ವೋಳ್ವಾದು ಏಳುಜನ
ಎಂಟು ಜೊನ್ನೆ ಕಟ್ಟಿರವ್ವ sss || ತಂದಾನ ||
ಬಂದಿರೋದು ಏಳುಜನsss
ನಿಂತಿರೋದು ಏಳುಜನsss
ಮತ್ತೊಂದು ಜೊನ್ನೆ ಯಾಕವ್ವ || ತಂದಾನ ||

ಅಲ್ಲಮ್ಮ ಬಂದಿರೋದು ನಾವು ಆರ್ ಜನ
ನಿನ್ ಸೇರಿ ಏಳ್ ಜನ ಆಯ್ತಲ್ಲ
ಮತ್ತೊಂದು ಜೊನ್ನೆ ಯಾಕವ್ವ ಅಂತ ಕೇಳ್ತಾರೆ ಕುಸ್ಮದೇವಿಯ
ಮೀಸಲ್ ತಗುದ್ಬುಡಮ್ಮ
ಮೀಸಲು ತದ್ಬುಡಕ್ಕ ಅಂದರು

ಸ್ವಲ್ಪ ಎಂಜುಲು ಇಲ್ಲದೆ ತೆಗಿರವ್ವsss || ತಂದಾನ ||
ಎಂಜ್ಲಿಲ್ದೆ ತಗದ್ಬುಡ್ರಕ್ಕ ಅಂತ ಯೇಳ್ದಾಗsss
ನಾರಾಯ್ಣ ಮೂರ್ತಿ
ಅಲ್ಲಿ ಸುಳ್ಕಂತ ದಾಸಯ್ಯ ಬರುತ್ತಾನೆsss || ತಂದಾನ ||

ಸುಳ್ಕಂತ ದಾಸಪ್ಪ ಬಂದ್ಬುಟ್ಟಿದಾನೆ
ಅಪ್ಪದಾಸಪ್ಪ ಏನಯ್ಯ ಕಜ್ಜಿನಾತ
ಕತ ಕತ ಕತ ನಡಿಕ್ಕೊಂಡ್ ಬರ್ತಾ ಇದಾನೆ
ಅಯ್ಯ ಮೂಡಲು ಬರಬೇಡ

ಬಡಗಾಲು ಬರಬೇಡ ಕಜ್ಜಿಯ ನಾತ ಬಲುನಾತsss || ತಂದಾನ ||
ಅಯ್ಯ….. ಬಾರಯ್ಯ ದಾಸಯ್ಯsss
ತೆಕ್ಕೊಂಡು ಕೊಡೊ ಚಿಕ್ರಂಗಿsss || ತಂದಾನ ||
ಏಯ್ ತೆಕ್ಕೊಂಡು ಕೊಡು ಚಿಕ್ರಂಗಿ ಅನ್ನುವಾಗsss
ನಾನು ಕೊಡಾದಿಲ್ಲ ದೊಡ್ರಂಗಿ sss || ತಂದಾನ ||

ಆರು ಕುಸ್ಮದೇವಿ ಕಯ್‌ಲಿ ಕೊಟ್ಬುಟ್ಟಿದಾರೆ
ಕುಸ್ಮದೇವಿ ಮೂಗಿಗೆ ಬಟ್ಟೆ ಮುಚ್ಕಂಡು
ಜೊನ್ನಿಯ ತೆಕ್ಕೊಂಡೊಗಿ ಕೊಡ್ವಾಗ

ಅಲ್ಲಿ ಕೋಲ್ಜೇನು ತುಪ್ಪ ತೆಗಿತಾರೆsss || ತಂದಾನ ||

ದಾಸಪ್ಪ ಯಾರಪ್ಪ ನೀನು ಬಂದ್ಬುಟ್ಟೆ ಅಂದ್ರು
ಅಯ್ಯೋ ಏಡ್ ನೇತ್ರ ಕಾಣ್ನಿಲ್ಲಮ್ಮ
ನೆಡ್ಗೆ ಬರ್ನಿಲ್ಲ ಆದಿ ತಪ್ಪೋಗ್ಬುಡ್ತು
ಅದಕ್ಕೋಸ್ಕರ ಬಂದೆ ಅಂದ್ರು
ಪಾಪ ನೀನು ಒಂಟಿಗೋಪ್ಪ ಇದೆ ಆದಿ
ಗುರುವೇ ಕೋಲ್ಜೇನ್‌ ತುಪ್ಪ ಕುಡ್ಕಂದ್‌ ನೀನ್ ಒಂಟೋಗ್ ಅಂದ್ರು
ಯೋಚ್ನೆ ಮಾಡ್ಬುಟ್ಟು ನಾರಾಯಣ್ ಮೂರ್ತಿ ಏನ್ಮಾಡ್ತ ಇದಾನೆ ಅಂದ್ರೆ

ಅಣ್ಣ ರಂಗಯ್ಯ ವನ್ನೆಯ ಮರಮೇಗಿsss
ಸನ್ನೆಯ ಮಾಡಿ ಕರಿತಾನೇ sss || ತಂದಾನ ||
ಅವ್ರು ಸನ್ನೆ ಮಾಡಿ ಕರಿತವ್ರೆ ನಾರಾಯ್ಣsss
ಗೆಡ್ಡೆ ಗೆಣ್ಸ ಕಿಳುತಾರೆ sss || ತಂದಾನ ||

ಗೆಡ್ಡೆ ಗೆಣ್ಸನ್ನು ಕಿತ್ತುಕೊಂಡು ಈ ಅಣ್ಣ ರಂಗಯ್ಯ ನೋಡು ಏನ್ಮಾಡ್ತ ಇದಾನೆ
ವನ್ನೆ ಮರದ್ ಮೇಲೆ ಸನ್ನೆ ಮಾಡ್ತ ಇದಾನೆ
ಆಹಾ ಏನಿ ಜಾಣ ರಂಗಪ್ಪ ಅವ್ನು ವನ್ನೆ ಮರಕ್ಕ ಅತ್ಬುಟ್ಟಿದಾನೆ
ವನ್ನೆ ಮರಕ್ಕ ಅತ್ಬುಟ್ಟು ಅಣ್ಣ ರಂಗಯ್ಯನವ್ರು
ಸನ್ನೆ ಮಾಡಿ ಕರೆವಾಗ ಆಗ ಚಿಕ್ಕಾಡಿ, ದೊಡ್ಕಡಿ
ಕಂಬ್ರಿಗುಡ್ದಲ್ಲಿ ಮುಳ್ಗೆಣ್ಸು, ತಾವ್ರೆಗೆಡ್ಡೆ ಎಲ್ಲಾ ಗೆಡ್ಡೆ ಗೆಣ್ಸನ್ನು ಕಿತ್ತುಬುಟ್ರು
ತಲೆಮ್ಯಾಲೆ ವತ್ಕಂಡು ಅಕ್ಕ ನನ್ಗೇನು ಗೆಡ್ಡೆ ಗೆಣ್ಸು ಸಿಕ್ನಿಲ್ಲ
ಅಲ್ಲಿ ನೋಡ್ಕೊಂಡು ಬರ್ತಿನಿ ನಡ್ರಕ್ಕ ಅಂದ್ಬುಟ್ಟ
ಯಾರು ಕುಸ್ಮದೇವಿ
ಮಾಯ ಮಾಡ್ಬುಟ್ಟು ನಾರಾಯ್ಣಮೂರ್ತಿಯವ್ರು
ಮಾಯ ಮಾಡ್ಬುಟ್ಟು
ಆಗ ಮಾಯ ಮಾಡ್ದೊತ್ತಿಗೆ ಇವ್ರು ನಮ್ಗೆನಮ್ಮ
ಮುದ್ಕ ನೇತ್ರ ಕಾಣಲ್ಲ ನಡ್ಗೆ ಬರಲ್ಲ
ಅವ್ರಿಗೆ ಸ್ವಲ್ಪ ಗೆಡ್ಡೆ ಗೆಣ್ಸು ಬೆಯ್ಸ್ ಕೊಡ್ಬೇಕು ಅಂದ್ಬುಟ್ಟು
ಆಗ ನೋಡುದ್ರು

ಎತ್ತಲಾರದ ಗೆಣ್ಸು ಮುಳ್ಳು ಗೆಣ್ಸನ್ನು ತೆಗ್ದುsss
ಮುರ್ದು ಮೂರ್ದಂಚಿ ಮಡ್ಗತಾರೆ || ತಂದಾನ ||

ಮುರ್ದು ಮುರ್ದು ಮಡ್ಗ್ ಬುಟ್ಟ ಕಟ್ಕೊಳ್ಳಕೆ ಬಟ್ಟಿಲ್ಲ
ಅವ ಮುಂದಲ್ ಸೆರ್ಗನ್ನು ತಗ್ದು ಯಿಂದಕ್ಕೆ ಮಡ್ಚಿಕೊಂಡು

ಗೆಡ್ಡೆಯ ಗೆಣ್ಸ ಕಟ್ಟುತಾಳೆ sss || ತಂದಾನ ||

ಗೆಡ್ಡೆ ಗೆಣ್ಸನ್ನು ಕಟ್ಬುಟ್ಟು ಎತ್ತಕಾಗ್ದೆವೊಯ್ತು
ಅಯ್ಯಯ್ಯೋ ನಮ್ಮಕ್ನು ಇಲ್ಲ
ನನ್ನ ತಂಗು ಇಲ್ಲ
ನನ್ನ ಬಂದು ಬಳ್ಗ ಯಾರು ಇಲ್ಲ
ಅಂದ್ಬುಟ್ಟು ಯೆಜ್ಜೆ ಎತ್ತಕಾಗ್ದೆ ವೋಯ್ತು
ಅಣ್ಣ ರಂಗಯ್ಯ ವನ್ನೆ ಮರ್ದಮೇಲೆ ನೋಡ್ತಾ ಕೂತಿದಾನೆ

ಅಲ್ಲಿ ಕೂತಿದ್ದು ದಾಸಯ್ಯ ಬರುತಾನೆsss || ತಂದಾನ ||
ಏಯ್ ದಾಸಪ್ಪ ದಾಸಪ್ಪ ಜಲ್ಜಿ ಬಾರೊ ಅಪ್ಪsss
ಈ ಗೆಡ್ದೆ ಗೆಣ್ಸಪ್ಪ ಎತ್ತಿಕೊಡೋsss || ತಂದಾನ ||

ಆಗ ಕುಸ್ಮದೇವಿ ದಾಸಪ್ನ ನೋಡಿ ಗೆಲುವ್ ಆಗ್ಬುಟ್ರು
ಅಯ್ಯಯ್ಯೋ ನಮ್ಮಪ್ಪ ಮೀಸೆ ನೋಡು ಮೀಸೆ
ಮೀಸೆ ಆಚೆ ಈಚೆ ಮೀಸೆ ನವ್ರತ್ತಾರೆ ನಾರಾಯಣಮೂರ್ತಿಯವ್ರು
ಏಯ್‌ ಈ ಗೆಡ್ದೆಗಣ್ಸ ಎತ್ತಿದ್ರೆ ನನ್ಗೆನಾದಯಿ ಯೇಳೆಣ್ಣೆ ಅಂದ್ರು
ಮಂಡಿಗೆತ್ತಿ ಕೊಟ್ಬುಟ್ರೆ ಮಗಳಾಯ್ತಿನಿ
ತಲೆಗೆತ್ತಿ ಕೊಟ್ಬುಟ್ರೆ ತಾಯಿ ಆಯ್ತಿನಿ
ಯೆಗಲ್ಗೆ ಎತ್ತಿ ಕೊಟ್ಬುಟ್ರೆ ತಂಗಿಯಾಯ್ತಿನಿ ಅಂದ್ಲು
ಆಹಾ ತಂಗಿ ಆಗುದುಂಟಾ

ನಂಗ ಇನ್ನೊಂದು ಮಾತ ನುಡಿರೆಣ್ಣೆsss || ತಂದಾನ ||
ಇನ್ನೊಂದು ಮಾತ ನುಡಿರೆಣ್ಣೆ ಅನ್ವಾಗsss

ಗೇರೈಸಿ ಗ್ಯಾನ ಮಾಡ್ಕೊಂಡು
ಅಲ್ಲಪ್ಪ ಇಂತ ಆನೆ ಉಲಿ ಕರ್ಡಿ ಕಾಡೆಮ್ಮೆನೆಲ್ಲ
ಗೆದ್ದು ನಂಗೊತ್ತು ಇಂತ ಕುಳ ಆಸಾಮಿ
ಗೆಲ್ಲದು ಬಲು ಯೆಚ್ಚ ಅಂದ್ಬುಟ್ಟು….

ಮಡ್ದಿ ಆಯ್ತಿನಿ ದಾಸಯ್ಯನವರೇsss || ತಂದಾನ ||
ಮಡ್ದಿ ಆಯ್ತಿನಿ ದಾಸಯ್ಯ ನಾನಂತೆsss
ಎತ್ತು ಬಾರಯ್ಯ ಗೆಣ್ಸಿನ ವೊರೆಯ ದಾಸಯ್ಯsss
ನಿಮ್ಮ ಮಡ್ದಿ ಮಗ್ಳಂತೆ ಆಗುತಿನಿsss || ತಂದಾನ ||

ಆ ಮಾತನ್ನ ಕೇಳ್ಬುಟ್ಟು ನಾರಾಯ್ಣ ಮೂರ್ತಿಯವ್ರು

ಅಹಾ ಜೋರಾಗಿ ಕಾಕ ಆಕುತಾನೆsss || ತಂದಾನ ||

ಜೋರಾಗಿ ಕಾಕ ಆಕ್ಬುಟ್ಟು ನಾರಾಯಣ ಮೂರ್ತಿಯವ್ರು ಎತ್ ಬುಟ್ರು
ಬೆಳ್ ಮಡ್ಗ್ ಬುಟ್ಟು ಕಣ್ ಬುಟ್ಟು ಮುಚ್ಚದ್ರೊಳ್ಗ ಆರ್ಬುಡ್ತು
ಗೆಡ್ಡೆ ಗೆಣ್ಸು…. ವೊರೆ ಎತ್ಬುಟ್ಟು
ನಡ್ಗೆ ಬರಲ್ಲ

ನನ್ನ ಇಸ್ಟುದ್ದ ಒರಬೇಕುsss || ತಂದಾನ ||
ಏಯ್ ನನ್ನ ಇಸ್ಟುದ್ದ ಒತ್ಗಂಡು ವೋದರೆsss
ಬಾಳ ಪುಣ್ಯ ಬರುತ್ತದೆsss || ತಂದಾನ ||
ಬಾಳ ಪುಣ್ಯ ಬರುತ್ತದೆ ಅಂದ್ಬುಟ್ಟುsss
ಕುಂತ್ಕೊ ದಾಸಪ್ಪ ಅಂತ ಕರಿತಾಳೆsss || ತಂದಾನ ||
ಅಯ್ಯ ಕುತ್ಗೊ ದಾಸಪ್ಪ ತಲೆ ಮ್ಯಾಲೆ ಅನ್ವಾಗsss
ಅವ್ರು ಪೊಣ್ಣನೆ ಸ್ವಾಮಿ ಆರುತ್ತಾರೆsss || ತಂದಾನ ||

ಸ್ವಾಮಿಯವ್ರು ಪೊಣ್ಣಾನೆ ಆರ್ಬುಟ್ಟು
ಕೂತ್ಗಂಡು ಕೊನೆ ಮೀಸೆ ತಿರ್ಗಸ್ತಾಯಿದ್ರು
ಈ ತಾಯಿ ಕುಸ್ಮದೇವಿ ಏನ್ ಮಾಡ್ದ
ಮೂರೆಜ್ಜೆ ಕಡೆ ಆಕ್ದ ಕಗ್ಗಲ್ಲ ಒರುಬಯ್ದು

ಕಲ್ ಕಲ್ಲ ಒರುಬಯ್ದು ಅಲ್ಪ ದಾಸಯ್ಯ ಒರುಬಾರsss || ತಂದಾನ ||
ಅಲ್ಪ ದಾಸಯ್ಯ ಒರುಬಾರ ಎಂದುಬುಟ್ಟುsss
ದುಬ್ನ ದಾಸಯ್ಯ ಇಡುತ್ತಾಳೆsss || ತಂದಾನ ||
ದುಬ್ನ ಕೈನ ಇಡ್ವಾಗ ವೊತ್ತಿನಲ್ಲಿsss
ಟಮ್ಮ ಟುಮ್ನೆ ಸ್ವಾಮಿ ಕುಣಿಯುತಾನೆsss || ತಂದಾನ ||

ಆಗ ನೋಡುದ್ರು ಕಾರೆಂಬ ಕತ್ಲೆ ಆಗ್ಬುಡ್ತು
ಬೋರೆಂಬ ಮಳೆ ಬಂದ್ಬುಡ್ತು
ಕಂಬ್ರಿ ಗುಡ್ದಲ್ಲಿ ಕಾ ಅಂದ್ರೆ ಕಾಗೆ ಸಬ್ದವಿಲ್ಲ
ಗೂ ಎಂಬ ಗೂಗೆ ಸಬ್ದವಿಲ್ಲ
ಅಯ್ಯೋ ನಾನೇನಪ್ಪ ಮಾಡ್ಬೇಕು ಅಂದ್ರೆ
ಸೋಲಿಗರ ಬೊಮ್ಮೆಗೌಡ್ನ ಮಕ್ಳೆಲ್ಲಾ ಪೋಡು ಸೇರ್ನಿಲ್ಲ.

ಅವ್ರು ಕನಕದಾಸರ ಗವಿಗೆ ಕರಕೊಂಡುsss || ತಂದಾನ ||

ಸ್ವಾಮಿಯವ್ರು ಕನಕದಾಸರ ಗವಿಗೆ
ಕುಸ್ಮದೇವಿ ಕರ್ಕಂಡು ಉಗ್ನ ಕಾರಾಚಿ ಉಲ್ಲ ಆಸ್ಗೆ ಮಾಡ್ಬುಟ್ಟು
ಸಂಕ ಚಕ್ರ ಎಡ್ಗೆಡೆ ಬಲ್ಗಡೆ ಇಟ್ಬುಟ್ಟು
ಕುಸ್ಮಾಲೆ ಕಟ್ಕೊಂಡು ಬಂದಿದ್ರು
ಸೋಲಿಗ್ರ ಬೊಮ್ಮೆಗೌಡ ನೋಡುದ್ರೆ
ನಿನ್ನಾಗೆ ಗಡ್ಡ ಮೀಸೆ ಎಲ್ಲಾ ಕೂಡ್ಕೊಂಡು
ಬೊಮ್ಮೆಗೌಡ ನೋಡುದ್ರು
ನನ್ನ ಕಿರಿಮಗ ಉಸ್ಮದೇವಿ ಬಂದಾಳಲ್ಲ
ಯಾವ್ ಕಡೇಮ್ಮ ಬಿಟ್ರಿ ನೀವು?
ನೋಡಪ್ಪ ಇಲ್ಲಪ್ಪ ಕಂಬ್ರಿಗುಡ್ಡದ
ಅಂಜನಾಗುಡ್ಡದಲ್ಲಿ ಬಂದಿವಪ್ಪ ನಾವು
ಕುಸ್ಮದೇವಿ ಯಾಕ್ ಬಂದಿಲ್ಲ?

ಆ ಮೂಲ ಚೀಲವ ತೆಗಿರವ್ವsss || ತಂದಾನ ||
ಮೂಲೆ ಚೀಲವ ತೆಗಿರವ್ವ ಎನ್ನುವಾಗsss
ಕವಡೆ ಚೀಲವ ಕೊಡುತ್ತಾರೆsss || ತಂದಾನ ||

ಪಗಡೆ ಚೀಲ ಅಂದ್ರೆ ಯಾವ್ದು?
ಕಣಿ ಬುಡ್ತಾರೆ ಆಗ
ಮೂಲ ಕೈಯೊಳ್ಗೆ ಸಾಸ್ತ್ರ ಬಿಟ್ಟು ನೋಡುವಾಗ
ನಿಮ್ಮ ಕುಸ್ಮದೇವಿಗೆ ಏನು ಅಪಾಯ ಆಗಿಲ್ಲ

ಅಲ್ಲಿ ದಾಸಯ್ಯ ವಾಸಂತೆ ಆಗಿದಾಳೆsss || ತಂದಾನ ||

ಅಯ್ಯಯ್ಯೋ ನಮ್ಮಪ್ಪ ದಾಸಯ್ನ ವಾಸ ಅಂತ ವೋಗುವಾಗ
ಈ ಸೋಲಿಗ್ರ ಬೊಮ್ಮೆಗೌಡ್ನ ಮಕ್ಳು
ಗೆಡ್ದೆಗೆಣ್ಸ್‌ ತೆಕ್ಕೊಂಡು ಅವ್ರು ಎಲ್ಲೋಗ್ತಾರೆ?
ಕೃಷ್ಣನ ಕಟ್ಟೆಗೋಗ್ತಾರೆ
ಕೃಷ್ಣನ ಕಟ್ಟೇಲಿ ಎನ್ಮಾಡ್ತಾರೆ ನಾರಾಯ್ಣ?
ಅಲ್ಲಿ ತಾರಮಾರ್ನೆ ಪೇಟ ಕಟ್ಬುಟ್ಟು
ಕೃಷ್ಣನ ಕಟ್ಟಿಗೆ ಬರ್ತಾ ಇದಾನೆ ಮೆಲ್ಗೆ ಕೃಸ್ಣಪ್ಪ
ಆಹಾ ಏನ್ ಕೃಸ್ಣಪ್ಪ ಇಲ್ಗೆ ಒರ್ಟಬುಟ್ರಿ ಅಂದ ಸೋಲಿಗ್ರ ಬೊಮ್ಮೆಗೌಡ
ಆಹಾ…. ಏನಪ್ಪ ಬೊಮೆಗೌಡ್ರೆ ಅಂದ್ರು
ನನ್ನ ಮಗ ವೋಗಿ ಮೂರುದಿವ್ಸ ಆಯ್ತು ಸ್ವಾಮಿ
ಕಂಬ್ರಿಗುಡ್ದಾಗ ಹೋಗ್ಬುಟ್ಟು ಮಾಯ ಆಗ್ಬುಟ್ರು ಅಂದ್ರು
ಮತ್ತೆ ಎಲ್ಲಿಗ್ ಬತ್ತಿದೆ ಬೊಮ್ಮೆಗೌಡ ಅಂದ್ರು
ನಿಮ್ಮತ್ರ ಬತ್ತಿದ್ದೆ ಗುರು ನಿಮ್ಮತ್ರ ಬತ್ತಿದ್ದೆ ಕೃಸ್ಣಪ್ಪ ಅಂದ್ರು
ನನ್ನಿಂದೇನಾಗ್ಬೇಕು ಅಂದ್ರು
ಒಂದು ಸಾಸ್ತ್ರ ನೋಡ್ಬೇಕಪ್ಪ
ಒಂದು ಸಾಸ್ತ್ರ ನೋಡ್ಬೇಕು ಕೃಸ್ಣಪ್ಪ ಅಂದ್ರು
ಅಗ ಕೃಸ್ಣನ ಕಟ್ಟೇಲಿ ಕೂತ್ಗಂಡು
ಪಗ್ಡೆಸಾಸ್ತ್ರವನ್ನು ನಾರಾಯ್ಣಮೂರ್ತಿ ಮಾಯ್ದಲ್ಲಿ ಮಾಡ್ಬುಟ್ಟೂ
ಅಯ್ಯೋ ಬೊಮ್ಮೆಗೌಡ
ಯಾರೋ ಒಬ್ಬ ದಾಸಪ್ನ ವಾಸ ಆಗವ್ಳೆ ನೋಡು
ದಾಸಪ್ಪ ವಾಸ ಆಗವ್ಳೆ ನೋಡಪ್ಪ ಅಂದ್ರು
ಅಯ್ಯಯ್ಯೋ ಕೃಸ್ಣಪ್ಪ ನಾ ಏನಪ್ಪ ಮಾಡದು ಅಂದ್ರು

ಈಗ ಕೃಸ್ಣನ ಕಟ್ಟೇಲಿ ಇಂದು ನಾಮಕರಣsss || ತಂದಾನ ||
ಏಯ್ ಕೃಸ್ಣ ಕಟ್ಚೆಂದು ನಾಮ್ಕರ್ಣ ಮಾಡ್ಕಂದುsss
ಮೇಲುಗಿರಿಕೆ ಬರುತ್ತಾರೆsss || ತಂದಾನ ||

ನಾಮ್ಕರ್ಣ ಮಾಡ್ಬುಟ್ಟು ಬಂದ್ಬುಟ್ಟು
ಏನ್ ಅಪಾಯ ಆಗಿಲ್ಲಪ್ಪ
ಬನ್ನಿ ಗೌಡ್ರೆ ದಾಸಪ್ನ ವಾಸ ಆಗವ್ಳೆ ಅಂದ್ಬುಟ್ಟು
ಕೃಸ್ಣಪ್ಪ ಅವ್ರಿಗೆ ಯೇಳ್ಬುಟ್ಟು
ಏನ್ ಅವ್ರ ಪಂಚೆ ಆರುಗಜ್ಜೆ ನೋಡ್ತ ಅವ್ರು ಕೋರೆ….
ಪಗ್ಡೆಸಾಸ್ತ್ರ ನೋಡುದ್ರು ಕೃಸ್ಣಪ್ಪ
ಈ ಬೊಮ್ಮೆಗೌಡನ್ಗೆ ಏನಾಗೊಯ್ತು
ನಿನ್ನಾಗೆ ಸೋಲಿಗ್ರ ಬೊಮ್ಮೆಗೌಡ ದಡ್ಡ ಅಲ್ವ
ಆಗೇನಿಲ್ಲ ಅಯ್ಯಯ್ಯೋ ನಮ್ಮಪ್ಪ ಕೃಸ್ಣಪ್ಪ
ಸಾಸ್ತ್ರ ನೋಡ್ದಮ್ಮಿ ಇನ್ಯಾಕಮ್ಮಿ ಎಂತಾ ಸಾಸ್ತ್ರ ನೋಡ್ದ
ದಾಸಪ್ನ ವಾಸವಾಗಿದ್ದಾಳೆ ಅವರು ವೋಗಿ
ನಾವು ಎಲ್ಲಿದ್ದಾಳೆ ಎಂದು ಕೇಳುವಾಗ
ಕನಕದಾಸರ ಗವಿಗೆ….

ಕನಕದಾಸ ಗವಿಗೆ ವೋಗಿದಾರೆsss || ತಂದಾನ ||

ಕನಕದಾಸರ ಗವಿಯೊಳ್ಗ ವೋಗಿ ನೋಡುದ್ರು
ಎನ್ ಬೆಂಕಿ ಬಗ ಬಗ ಅಂತದೆ
ಒಳ್ಗೆ ಆಸ್ಗೆ ಆಸಿತ್ತು
ಓಹೋ ಇಲ್ಲೆ ಇದ್ದ ಯಾರೊ ಒಬ್ಬ ಕಳ್ಳ ತೆಕ್ಕೊಂಡು ವೋಗಿದಾನೆ
ಏಯ್ ಚಿಕ್ಕಾಡ, ದೊಡ್ಕಾಡ, ಚಿಕ್ಕಮಾದ, ದೊಡ್ದಮಾದ….

ಅಯ್ಯ ತುಂಡು ದೊಣ್ಣೆಯ ನೀವು ತೆಕ್ಕೊಳ್ರಯ್ಯsss || ತಂದಾನ ||

ತುಂಡು ದೊಣ್ಗೆ ತೆಕ್ಕೊಂಡು ತಾಯಿಪಾದ ಪುಟ್ಟಾದ
ಗೆಡ್ಡೆ ಗೆಣ್ಸ ಕಿತ್ತಂತ ಈ ಮಣ್ಣಿನ್ ಮೇಲೆ
ಕುಳಿ ಮೇಲೆ ಮಡ್ಗ್ ಬುಟ್ಟಿತ್ತು
ಆಹಾ ನೋಡಪ್ಪ ನನ್ನ ಮಗಳ ಪಾದ
ನೋಡು ಯಂಗ್ ಇಟ್ಟಿದೆ ಅಂದ್ಬುಟ್ಟು

ಮರ್ಳಿಯಾ ಕಡ್ದಿ ಮುರಿತಾರೆsss || ತಂದಾನ ||
ಅಯ್ಯ ಮಳಿಯಾ ಕಡ್ಡಿಯ ಮುರ್ಕಂಡು ಒಂದ್ಗಳ್ಗ
ಅಜ್ಜೆಯ ಆಳ್ತೆ ತೆಗಿತಾರೆsss || ತಂದಾನ ||

ಅಜ್ಜೆ ಆಳ್ತೆ ತಗ್ದು ಬುಟ್ಟು ಮೂರೆಜ್ಜೆ ಮುಂದ್ಕೆ ವೋದ್ರು
ಅಲ್ಲೊಂದು ಇಟ್ಬುಟ್ಟಿತ್ತು
ಅಯಯ್ಯೋ ನಮಪ್ಪ ಇನ್ಯಾಕ ಆಪಾದ ನೋಡುದ್ರ
ಏಯ್ ದೊಡ್ಡಮಾದ…. .
ಏನಪ್ಪಾ……?
ನೋಡೋ ಈ ಪಾದ ನೋಡೋ
ಆನೆ ಪಾದವು ಈ ತರ ಇಲ್ಲ
ಒಂಟೇ ಪಾದವು ಈ ತರ ಇಲ್ಲ
ಇದಕ್ಕೆ ದೊಡ್ಡ ಪಾದ ಅನ್ನೋದು
ಈ ಪಾದ ಪತ್ತೆ ಮಾಡ್ಬೇಕು
ಇವ್ನೆ ನನ್ನ ಮಗ್ಳ ತೆಕ್ಕೊಂಡ್ ವೋಗಿರವ
ಆಹಾ ಅಪ್ಪಾ ಅಪ್ಪಾ…. .
ಉನ್ಗನ ವುಲ್ಲು ಯಾವ್ ಕಡೆ ವೋಗಿದ್ದಾದೋ

ಅವ್ರು ಜಾದು ಕಲ್ಲಂತೆ ತೆಗಿರಪ್ಪsss || ತಂದಾನ ||

ಅಜ್ಜೆಯ ತೈಲತೆಕ್ಕೊಂಡು ವೋಗುತವ್ರೆ

ಗವಿಗೆ ವೋಗುತಾರೆsss || ತಂದಾನ ||

ಅರುವರ ಗವಿಗೆ ವೋಗುವಾಗ
ಕುಸ್ಮದೇವಿ ಏನ್ಮಾಡ್ತ ಇದಾಳೆ?
ಈ ನಾರಾಯ್ಣ ತಲೆ ತೆಗ್ದು ತೊಡೆ ಮೇಲಿಟ್ಕೊಂಡು

ಅವ ಯೇನು ಸೀರುವೆ ನೋಡುತಾಳೆsss || ತಂದಾನ ||

ಗಕ್ಕನ್ ಕಂಡ್ಬುಟ್ಟ ಬೊಮ್ಮೆಗೌಡ ಅವರ
ಏಯ್ ಆರಯ್ಯ ನೀನು?
ನನ್ನ ಮಗ್ಳ ತಂದದು…. .
ನಾನೇ ಬೊಮ್ಮೆ ಮಾವ
ಮಾವ ನಾನೇ ತಂದಿದ್ದೀನಿ ಮಾವ ಅಂದ್ರು
ಏಯ್ ಮಾವ ಅನ್ನೋಕೆ ನೀನ್ಯಾರೋ?
ಆರು ನೀನು?

ಆರಯ್ಯ ನೀನು ಯಾವ ಕುಲವೋ

ನೀನು ನನ್ನ ಮಗಳ ತೆಕ್ಕೊಂಡ್ ಬಂದಿದ್ದೀಯಾ
ಅಮ್ಮ ಕುಸ್ಮದೇವಿ ಅಮ್ಮ ಕುಸ್ಮಾಲೆ
ನೀನು ಈ ದಾಸಯ್ಯ ವೇಸ ನೋಡಿ ಬಂದಿಯಲ್ಲ
ನಿಂಗೇನಾದ್ರು ಬುದ್ದಿ ಕಲ್ಸನಿಲ್ವ

ನಿಂಗೆ ಕರುವ ಕಟ್ಟಕ್ಕೆ ಒಂದು ಕಂಬ್ಳದಾಳುsss
ಕರುವ ಕಟ್ಟಕೆ ಕಂಬ್ಳದಾಳ ಕೊಡ್ತಿನಿsss
ರಾಗಿ ಬೀಸಕೆ ಚಿನ್ನದ ಗುಂಟsss || ತಂದಾನ ||

ಮಾವ ರಾಗಿ ಬೀಸಕೆ ಚಿನ್ನದ ಗುಂಟ
ಕರುವ ಕಟ್ಟಕೆ ಕಂಬ್ಳದಾಳು ನಮ್ಮ ನೋಡಿದ್ರೆ
ಮಾವ ಚಿಕ್ಕ ಮಕ್ಕಳಿಗೆಲ್ಲ ಅಂತ ಊಟ ಕೊಡ್ತಿಯಾ ಮಾವ
ಏಯ್ ದಾಸ……
ಏಯ್ ದಾಸ ಮನೆ ಮನೆ ಯಿಟ್ ತಿರ್ಕೊಂಡು ತಿನ್ನ ದಾಸಯ್ಯ ನೀನು
ನನ್ನ ಮಗಳ ತಂದು ಆದ್ರ ಗೆಡ್ಸುಬಿಟ್ಟಿ
ಯಾವ ಕುಲ್ದವ್ನು?
ಯಾವ ಮತ್ದವ್ನು?
ಯಾವ್ ಜಾತಿಯವ್ನು ನೀನು?

ನನಗೆ ಯೆಣ್ಣಿನ ತೆರ್ವ ಕೊಟ್ಟಾರೆ ದಾಸಯ್ಯsss
ಬಿಟ್ಟು ವೋಗ್ತಿಮಿ ನಿನ್ನುಡುಗಿಯsss || ತಂದಾನ ||

ಅವ್ರಗೇನು ಸಾಕ್ಸಾತ್ ಬಗವಂತ
ಅನ್ನೇಡ್ ಕೊಂಗ ರೂಪಾಯ್ ಕೊಟ್ಬುಟ್ಟ
ಈ ದಡ್ಡ ಸೋಲಿಗರ ಬೊಮ್ಮೆಗೌಡ
ಏನ್ಮಾಡ್ಡ ಮೇಲ್ಗಿರಿ ಕೈಲಾಸ್ದೊಳ್ಗೆ ನಿಂತ್ಗಂಡು
ಕಮ್ರಿ ಒಳ್ಗೆ ಅಮ ಜಲ್ ಜಲ್ನೆ ರೂಪಾಯಿ

ಅಮ ಜಲ್ ಜಲ್ನೆ ರೂಪಾಯಿ ತೂರುತ್ತಾನೆsss || ತಂದಾನ ||

ಅಮ ಜಲ್ ಜಲ್ನೆ ತೂರ್ಬುಟ್ರು ಎಲ್ಲಾ ಒಂಟೋಯ್ತು ಬಂಡೆಗೆ
ಆಹಾ ಒಂಟೋಯ್ತು
ಅನ್ನೇಡ್ ಕೊಂಗದ ರೂಪಾಯ್ನು ತೂರ್ಬುಟ್ಟ

ಅನ್ನೇಡುವರ್ ರೂಪಾಯಿ ಅವ್ರಿಗೆ ಸಿಕ್ಕುಬಿಡುತುsss || ತಂದಾನ ||

ಅನ್ನೇಡುವರ್ ರೂಪಾಯಿ ನನ್ನೆಣ್‌ನ ತೆರ ಆಯ್ತು
ಕತ್ತಲ್ ನೋಡ್ಲಿಲ್ಲ
ಉತ್ತ ನೋಡ್ಲಿಲ್ಲ ಅಂದ್ಬುಟ್ಟು
ಏಯ್ ಸೋಲಿಗ್ರ ಬೊಮ್ಮೆಗೌಡ್ರನವರು
ನನ್ನ ಉಗ್ದ್ ಬಿಟ್ಟಿದ್ದಿಯಾ
ಬಯ್ದ್ ಬಿಟ್ಟಿದ್ದಿಯಾ
ಕರು ಕಟ್ಟಕೆ ಕಂಬ್ಳದಾಳು
ರಾಗಿ ಬೀಸಕೆ ಚಿನ್ನದ ಗುಂಟ
ಆಸ್ಗೆ ಆರುಗಂಟ ತೆಗೆಲ್ಲ ಅಂತ ಸಾಪ ಕೊಟ್ಟಿದ್ದಿಯೇ
ಈವೊತ್ತಿನ ದಿವ್ಸ ನೋಡಪ್ಪ ನಿಂಗೆ
ಮೂರು ವರ್ಸಕ್ಕೊಂಡು ಪೋಡಾಗಲಿ
ಮೂರು ವರ್ಸ ತುಂಬಿದ ಮೇಲೆ ಅದು ದಬ್ಬೆ ದರ್ಬುಲ್ಲು…. .

ಅದು ದಬ್ಬೆ ದರ್ಬುಲು ಬರಬೇಕುsss || ತಂದಾನ ||
ಅಯ್ಯ ಯಿಂದು ಎತ್ತಾಗಿ ಗಂಡು ಬಳಿಯಾಗಿsss
ಅನ್ನ ಬಟ್ಟೇಕ ತಿರಿರಂತೆsss || ತಂದಾನ ||
ಅಯ್ಯ ಅನ್ನ ಬಟ್ಟೆಕ ತಿರ್ದುವ ದಾರಿsss
ಸೋಲ್ಗ ಬೊಮ್ಮನ ಮಕ್ಕಳು ಅಂದರೆsss
ಏಳುಕೋಟೆ ಬಂಗಾರಕ್ಕೆ ಬಾದ್ಯ ನೀನೆ ಕಾಣೋsss

ಏಳುಕೋಟೆ ಬಂಗಾರಕ್ಕೆ ನೀನೆ ಕಾವ್ಲು
ನನ್ನ ಬಂಗಾರಕ್ಕೆ ನೀನೆ ಸೈನ್‌ ಮಾಡಬೇಕು
ನನ್ನ ಬಂಗಾರಕ್ಕೆ ನೀನು ಬೆಟ್ಟೊತ್ತಬೇಕು
ನನಗೆ ಉರ್ದುಳ್ಳಿ ತಿನ್ನಬೇಕು
ಊಟ ಮಾಡ್ಸ್ಕ ಉಣ್ಣಬೇಕು
ರಾಗಿ ಮುದ್ದೆ ಉಣ್ಣಬೇಕು
ನನ್ನ ಮೇಲುಗಿರಿಕೆ ಬರ್ಬೇಕು ನೀನು
ನನ್ನ ಬವಾದ್ರು ನೀನು

ನೀನು ಬಾವ ಬಾಮೈಕ ಅಂತ ಮಾತು ಅಂತೆsss || ತಂದಾನ ||
ಆಡಿರಿ ರಾಗಗಳ ನುಡಿಸಿರಿ ತಾಳಗಳsss
ಅಚ್ಚಿರಿ ದೀಪಗಳ ಆಕಿರಿ ದೂಪಗಳsss

ಅಂಗಂದ್ಕಂಡು ನಾರಾಯಣಮೂರ್ತಿಯವ್ರು
ಕೃಸ್ಣನ ಕಟ್ಟೆ ಪೋಡೊಳಗೆ ಉಡ್ಗಿ ತೆಕ್ಕೊಂಡೋಗಿ
ಪೋಡು ಅಂದ್ರೆ ಕಳ್ಳರ ಬೆಟ್ಟ
ಕಾಮಾರಿ ಮಲ್ಕಿ ಬೆಟ್ಟ
ಈ ದೇಸವೆಲ್ಲ ತಿರಿಕೊಂಡು ಜಾಜಿ ವನದಲ್ಲಿ ಬಂದು
ಜಾಜಿ ವೂವು ಮುಡಕೊಂಡು ಬಂದು
ನಾರಾಯಣಮೂರ್ತಿಯವ್ರು ಬಂದು
ಸೋಲಿಗ್ರ ಬೊಮ್ಮೆಗೌಡ್ನ ಪೋಡಿಗೆ ಬಂದು
ದಾಸಯ್ಯ ವೇಸವನ್ನು ತಾಳ್ಬುಟ್ಟು
ಸೋಲಿಗ್ರ ಉಡ್ಗಿ ನೋಡ್ಬುಟ್ಟು
ಈ ಉಡ್ಗಿ ತೆಕ್ಕೊಂಡ್ರೆ……

ನನ್ಗೆ ಬಾಳ ಪುಣ್ಯ ಬರುತದೆsss || ತಂದಾನ ||
ಬಾಳ ಪುಣ್ಯ ಬರ್ತದೆ ಅಂದುಬುಟ್ಟುsss
ಪಾರಿವಾಳದ ಗವಿಗೆ ದಯಮಾಡಿsss || ತಂದಾನ ||

ಪಾರಿವಾಳದ ಗವಿಯೊಳಗೆ
ಸೋಲಿಗರ ಬೊಮೆಗೌಡ್ನೋರು ವೋಗ್ವಾಗ
ದಾಸಪ್ನ ಯಂಗಸ್ರು ಮಾಯ ಆಗ್ಬುಟ್ರು
ಆಹಾ ಈ ನನ್ ಉಡ್ಗಿ ಇಲ್ಲ
ನನ್ನುಡ್ಗಿ ಯಾವ್ ಕಡೆ ಅದ್ರು ನಿಂತಿದೆ
ಈ ದಾಸಪ್ನರು ಎನ್ಮಾಡ್ತಾ ಇದ್ದಾರೆ?
ಬುಡ್‌ಬುಡ್ಕಿ ವೇಸ ತಾಳ್ಬುಟ್ಟಿದ್ದಾರೆ
ಕಲ್ಲು ಕರ್ಗೋ ಜಾಮ ನೀಲ್‌ಗಿರಿಗೋಗಿ
ಆ ಬೊಮ್ಮೆಗೌಡ್ನ ಪೋಡಿನ ತಿಟ್ಟಿನ ಮೇಲೆ ನಿಂತ್ಗಂಡು
ಬುಡ್‌ಬುಡ್ಕಿ ವೇಸ ಆಕುವಾಗ

ಅಂವ ಬುಡ್‌‌ಬುಡ್ಕಿ ವೇಸ ತಾಳುತಾರೆsss || ತಂದಾನ ||
ಏಯ್ ಬುಡ್‌‌ಬುಡ್ಕಿ ವೇಸ ತಾಳ್ಕಂಡು ನಾರಾಯ್ಣsss
ಸೋಲ್ಗರ ಬೊಮ್ಮೆಗೌಡ್ರ ಮಗಳಂತೆ sss || ತಂದಾನ ||
ಸೋಲ್ಲರ ಬೊಮ್ಮನ ಮಗಳು ಆದರೆ ಕಾಣೋsss
ಅವ ದಾಸಯ್ಯ ವಾಸ ಆಗಿದ್ದಾಳೆsss || ತಂದಾನ ||
ಏಯ್ ಬುಡ್‌‌ಬುಡ್ಕಿ ಬಡ್ಡಿಗಣ್ಣ ಇಡ್ಕೊಳ್ಳಿ ಎಂದುsss
ದೇಸಂತ್ರ ಬಂದು ಸಾರುತಾರೆsss || ತಂದಾನ ||

ಆ ಬುಡ್‌ಬುಡ್ಕ್ಯವ ಬಂದ್ರೆ ಸ್ವಲ್ಪ ಕರಿರಪ್ಪ
ಬೊಮ್ಮೆಗೌಡ್ನೋರು ಕೂಗ್ ಕೊಂಡು ಕರಿರಪ್ಪ ಅಂದ್ರು
ಬೊಮ್ಮೆಗೌಡ್ರೆ ನಿನ್ನ ಮಗ ದಾಸಯ್ಯ ವಾಸ ಆಗ್ಬುಟ್ಟ
ಅದ್ಕೇನ್ ಮಾಡ್ಬೇಕು ಅಂದ್ರೆ ನಾನು ಬರ ಮಾಡ್ತಿನಿ ಅಂದ್ಬುಟ್ಟು

ಅಂತರ ಕಟ್ಟುತಿನಿ ಮಂತರ ಮಾಡುತಿನಿsss
ಮಾಯಾವಿ ನಾನು ಬರಮಾಡಿsss || ತಂದಾನ ||