ಅದೆಲ್ಲಾ ಸರಿಯಪ್ಪ ಬುಡ್‌‌ಬುಡ್ಕ್ಯವ್ನೆ
ಬುಡ್‌‌ಬುಡ್ಕಿವೇಸ ತಾಳ್ಕೊಂಡು ಬರುವ
ನಾರಾಯಣಮೂರ್ತಿಯವ್ರು ಕೊರವಂಜಿ ವೇಸ ತಾಳ್ಬುಟ್ರು
ಕೊರವಂಜಿ ವೇಸ ತಾಳ್ಕೊಂಡು ಬರ್ತಾರೆ
ಇನ್ನು ಮಗ ಬರ್ಬೇಕಾದ್ರೆ ಯೇಗೆ ಬೊಮ್ಮೆಗೌಡ್ರೆ ಅಂದ್ರೆ
ಕೂಗ ಉಂಜ ಆಗ್ಬೇಕು
ಕೊಂಬಿನ್ ಟಗರಾಗ್ ಬೇಕು
ಬೇಳೆ ಕಾಳಾಗ್ ಬೇಕು
ಬೆಲ್ಲದ ನಂಜಾಗ್ ಬೇಕು
ಆಣ್ತೆಂಗಿನಕಾಯಿ
ಐದು ಮೂಲ್ಗೆ ಐದಾಬೇಕು
ಆ ದಾಸಪ್ಪ ಕೊರವಂಜಿ ಹೇಳಿದ ಮಾತ್ನೆಲ್ಲಾ ಈ ಬೊಮ್ಮೆಗೌಡ ಕೇಳ್ಬುಟ್ಟು
ಅಪ್ಪ ಆದ ಕರ್ಚೆಲ್ಲಾ ಆಗ್ಲಿ ಕೊರವಂಜಮ್ಮ
ಆದ ಕರ್ಚೆಲ್ಲಾ ಆಗ್ಲಿ ಈವೊತ್ತು
ನನ್ನ ಮಗಳ ಬರ್ಮಾಡಿ ಕೊಟ್ಬುಡಿ ಅಂದ್ಬುಟ್ಟು
ಎಲ್ಲಾ…. . ಮಾಡ್ಬುಟ್ಟು ಕುಸ್ಮದೇವಿ ಬಂದು ನೋಡ್ಕಂಡು…. .

ಅಂತರ ಕಟ್ಟಬೇಕು ಮಂತರಮಾಡಬೇಕುsss
ನನ್ಮೇಲೆ ಗ್ಯಾನ ನೀನಂತsss || ತಂದಾನ ||

ಅಲ್ಲೇನ್ ಮಾಡ್ತಾನೆ ಕೊರವಂಜಮ್ಮ
ಏಯ್ ಕುಸ್ಮಾಲೆ
ಏಯ್ ಕುಸ್ಮಾಲೆ ನನ್ ಗ್ಯಾನ ನಿನ್ಗಿರಬೇಕು
ನಿನಿ ಗ್ಯಾನ ನನ್ಗಿರ್ ಬೇಕು, ಅಂತ್ರ ಕಟ್ತಿ ನಾನು
ಮಂತ್ರ ಮಾಡ್ತಿನಿ. ನನ್ ಮೇಲಿನ್ ಗ್ಯಾನ ನಿನ್ಗಿರ್ ಬೇಕು
ನಿನ್ ಮೇಲಿನ್ ಗ್ಯಾನ ನನ್ಗಿರ್ ಬೇಕು

ನೀನು ಕೋಳಿ ಗುಳ್ಳಿಗೆ ಬರಬೇಕುsss || ತಂದಾನ ||
ಕೋಳಿ ಗುಳ್ಳಾರಕ್ಕೆ ಬಂದರೆ ಕುಸುಮಾಲೆsss
ಕದ್ದು ನಾಮಂತೆ ವೋಗು ಬೇಕಾsss || ತಂದಾನ ||

ಆಗ ನಾ ಅಂತರ ಮಂತರ ಮಾಡ್ಬುಟ್ಟು
ಬೇಳೆ ಬೆಲ್ಲ ಗಂಟು ಎಲ್ಲ ರಂಗ ಆಕ್ಬುಟ್ರು
ಯಾವ್‌ ರಂಗ ಆಗ್ಬೇಕು ಬೊಮ್ಮೆಗೌಡ್ರೆ ಅಂದ್ರು
ಅಯ್ಯೋ ಕೊರ್ವಂಜಮ್ಮ
ನನಗೆ ರಂಗ, ಯಾವ ರಂಗ ಆಕ್ಬೇಕು ಗೊತ್ತಸ್ವಾಮಿ
ನಾ ಇಸ್ಟೆಲ್ಲಾ ಮಾಡ್ನೆ ಆಗಲ್ಲಪ್ಪ ಅಂತ ಬೊಮ್ಮೆಗೌಡ್ರು ಯೇಳ್ವುಟ್ರು
ಅನುಮಂತ ರಂಗ ಆಗ್ಬೇಕು….
ಆರು ಮಂಡಲ,
ತೂರು ಮಂಡಲ
ಗೆಜ್ಜೆ ಮಂಡಲ
ಗಿರ್ಕು ಮಂಡಲ
ಉಳ್ಕು ಮಂಡಲ
ನಾಗಮಂಡಲ
ಎಪ್ಪತೇಳು ಮಂಡಲ ಬರ್ದು ಆಕ್ಬುಟ್ಟು
ಇಂಗಣ್ಣ ಒಡಿಬೇಕು
ಮಂಗಣ್ಣ ಒಡಿಬೇಕು
ಮುಕ್ಕಣ್ಣ ಕಾಯಿ ಒಡಿಬೇಕು

ಮುಕ್ಕಣ್ಣ ಕಾಯಿ ಒಡಿಬೇಕುsss || ತಂದಾನ ||
ಏಯ್ ಮುಕ್ಕಣ್ಣ ಕಾಯಂತೆ ಒಡ್ದರೆ ಬೊಮ್ಮೆಗೌಡ
ನಿನ ಪಟ್ಟದ ಗಾಳಿ ಓಡುತ್ತವೆsss || ತಂದಾನ ||

ಆಗ ದೊಡ್ರಂಗಿ ಕೇಳುದ್ರು
ಅಮ್ಮಾಮ್ಮೆ ರಂಗಿ……
ಏನಪ್ಪ?
ಈ ಕೊರವಂಜಮ್ಮ ಕೂಗುವಂತೆ ಉಂಜ ಆಗ್ಬೇಕು
ಕೊಂಬಿಯನ್ ಟಗ್ರು
ಬೆಲ್ಲ ನಂಜಾಗಬೇಕು ಎಲ್ಲಾ ಆಯ್ತಲ್ಲ
ಆಗೆ ನನ್ನ ಮಗ್ಳ ಕರೆಸಿ ಕೊಟ್ಬುಡಪ್ಪ
ಎಷ್ಟು ಮಂಡಲ ಯೇಳ್ತಾನೆ ಅಂದ್ರೆ
ಆರು ಮಂಡಲ
ತೂರು ಮಂಡಲ
ಗೆಜ್ಜೆ ಮಂಡಲ
ಗಿಲ್ಕು ಮಂಡ
ಉಳ್ಕು ಮಂಡಲ
ನಡುಮಂಡಲ
ಎಪ್ಪತ್ತೇಳು ಮಂಡಲ ಬರ್ದ್‌‌ಬುಟ್ಟು
ಆಗ ಅನುಮಂತ ರಂಗ ಆಗ್ಬುಡ್ತಾರೆ

ಆಗ ರಂಗಯ್ಯ ಸ್ವಾಮಿ ಕೊರವಂಜಿsss || ತಂದಾನ ||

ಏಯ್ ಬೊಮ್ಮೆಗೌಡ್ರೆ ಕೊರವಂಜಿ ವೇಸ ತಾಳ್ಕೊಂಡು
ನಾರಾಯ್ಣಮೂರ್ತಿಯವ್ರು ಬರ್ತಾ ಇದಾರೆ
ಎಲ್ಲಿ ನಿನ್ನ ಕಯ್ಯಾ ಕುಣಿತೀನಿ ಆಗಂದ್ಬುಟ್ಟು
ನಾರಾಯ್ಣಮೂರ್ತಿ ಏನ್ಮಾಡ್ತ ಇದ್ದಾನೆ

ಇಂಗಣ್ಣ ಒಡೆಯತವ್ನೆ ಮುಂಗಣ್ಣ ಒಡಿಯತವ್ನೆsss
ಒಂದು ಪಲ್ಟಿಯ ಒಡಿತಾನೆsss || ತಂದಾನ ||
ಅಯ್ಯ ಗಾಳಿ ಕಟ್ತಿನಿ ಗಾಚಾರ ಓಡುಸ್ತೀನಿsss
ಬೊಮ್ಮೆಗೌಡ್ನ ಮಗ್ಳು ದಾಸಯ್ಯ ವಾಸsss || ತಂದಾನ ||

ಅಲ್ಲಪ್ಪ ಇಸ್ಟ್ ಗಾತ್ರ ಮಾಡಿ
ಇಸ್ಟ್ ಗಾತ್ರ ಕೇಳಿ ಕೊರವಂಜಿ
ಅಂಗಾದ್ರು ದಾಸಯ್ಯ ವಾಸ ಅಂತಿಯಲ್ಲ
ನನ್ ಅಣೆಬರ್ಹ ಯೇಗಿದದಪ್ಪ ಅಂದ್ರು
ಅಪ್ಪ ಇಲ್ಲಿ ತಾತಿ ಕಟ್ವಾಗ
ಅಂತ್ರ ಮಂತ್ರ ಮಾಡ್ವಾಗ
ಏನ್ ಯೇಳ್ತಾನೆ ನಾರಾಯ್ಣ
ನನ್ ಗ್ಯಾನ ನಿಂಗಿರ್ ಬೇಕು
ನಿನ್ ಗ್ಯಾನ ನಂಗಿರ್ ಬೇಕು
ನನ್ನೊಂದ್ಗೆ ಬರ್ಬೇಕು
ಮೇಲ್ಗಿರಿ ಮೆರಿಬೇಕು
ಸೋಲ್ಗರ ಬೊಮ್ಮೆಗೌಡ್ನ ಮಕ್ಕ
ನನಗೆ ಬಾಮೈಕ ಆಗ್ಬೇಕು
ಅಕ್ಕಬಾವ ಒಂದುಗ್ ಬರ್ಬೇಕು

ಅಂತ ನೆಪ್ಪಾಗಿ ನಾನು ಪಂತ್ಯಕ್ಕೆ ಪಂತ ಕಟ್ಟುಬೇಕುsss || ತಂದಾನ ||
ಏಯ್ ಕಾಣ್ಕೆ ಕಪ್ಪಂತೆ ಕಟ್ಕೊಂಡು ಬರ್ವಾಗsss
ನಾವು ಮೇಲುಗಿರಿಯಲ್ಲಿ ಮೆರಿಬೇಕುsss || ತಂದಾನ ||

ಮಾಡ್ಬುಟ್ಟ ಅಲ್ಲೆ ರಂಗಪ್ಪ
ಮಾಯ್ದ ರಂಗಪ್ಪ ಅಂದ್ರ ಉಡುಗಾಟ್ವ
ಎಲ್ಲಾ ಮಾಯ ಮಾಡ್ಬುಟ್ಟು ಮಂಡ್ಲ ಮಡ್ಕೆ
ಅನುಮಂತರಂಗ
ಬರ್ದ ಬುಟ್ಟು ನನ್ ಗ್ಯಾನ ನಿನ್ಗಿರ್ ಬೇಕು
ನಿನ್ ಗ್ಯಾನ ನನ್ಗಿರಬೇಕು
ಅಂತ್ರ ಬರ್ದ ಬುಟ್ಟು ಕುಸ್ಮದೇವಿ
ನಿನ್ನತ್ರ ಇಟ್ಕೊ ಅಂದ್ಬುಟ್ಟು

ಅವ ಮಾಯ ಆದಳೊ ಕುಸುಮಾಲಿsss || ತಂದಾನ ||

ಮಾಯ ಮಾಡ್ಬುಟ್ಟು ಪಾರಿವಾಳದ ಗವಿಯಲ್ಲಿ
ಮಲಗಿರುವಂತ ವೊತ್ತಿನಲ್ಲಿ ವೋಗಿ ನಾರಾಯ್ಣ ಮೂರ್ತಿಯವ್ರು
ಜಾತಿ ಕುಲವನ್ನು ಕಟ್ಟಿಕೊಂಡು ವೋಗ್ವಾಗ
ಆಗಬೊಮ್ಮೆಗೌಡ್ನೋರು ಏನ್ಮಾಡ್ತ ಇದ್ದಾರೆ
ಕಂಡಿಡ್ದ್‌ಬುಟ್ರು
ಕಂಡಿಡ್ದ್‌ಬುಟ್ರು
ಏಯ್‌ ಆರಯ್ಯ ನೀನು?
ಏನಯ್ಯ ಮನ್‌ಮನೆ ಇಟ್ಟು ತಿನ್ನೊಂತ ತಿರ್ಕದಾಸ
ನೀನು ಬಂದು ನನ್‌ ಮಗ್ಳ ಕರ್ಕಂಡ್‌ ಬಂದ್ಯೆಲ್ಲಾ
ಏನಯ್ಯ ಮೋಸ್ಗಾರ್ ದಾಸಯ್ಯ
ನೀ ಎಂತ ಕೆಲ್ಸ ಮಾಡ್ತಿಯೇ
ಆಹಾ ಮಾವ ಮಾವ
ಏಯ್‌ ಮಾವ ಅನ್ಬೇಡ ಕಣೋ ನೀನು
ಯಾವ ಕೇರಿಯವ್ನು?
ಯಾವ್‌ ಮತದವ್ನು?
ನೀ ಆರಯ್ಯ …. ?
ನಾನು ಅರಿದಾಸ
ಬಿರಿದಾಸ
ವೊಟ್ಟೆದಾಸ
ಬಟ್ಟೆ ದಾಸ
ಕನಕದಾಸ
ಕರ್ಣದಾಸ
ದಾಸ ದಾಸರಿಗೆಲ್ಲಾ ಯೆಚ್ಚಿನ ಅರಿವು ನಾವೆಂದ್ರು
ಅಯ್ಯೋ ಇಸ್ಟ್‌ ಯೆಸ್ರ ಕರಿವಾಗ ನಾನೇನಪ್ಪ ಮಾಡ್ಬೇಕು
ಯಾವ ದಾಸ್ರೆಂದು ತಿಳಿಬೇಕು ಅಂದ್ಬುಟ್ಟು

ಅವ್ರು ದಾಸಯ್ನ ವೇಸ ತಾಳುತ್ತಾರೆsss || ತಂದಾನ ||

ಕುಸ್ಮದೇವಿ ಏನ್‌ ಯೇಳ್ತಾ ಇದ್ದಾರೆ
ತುಳ್ಸಮ್ಮ ಅವ್ರು ಸ್ವಾಮಿಯವ್ರು ವೋಗಿ ಮೂರ್ ತಿಂಗ ಆಯ್ತು
ನಿಮ್ಮ ಸ್ವಾಮಿ ಒಡೆಯ ರಂಗಪ್ಪ ಬಂದಿಲ್ಲ
ಯಾವ್‌ ಕಡೆ ವೋಗಿದ್ದಾನೆಯೋ
ಅವ್ನ ಸ್ವಲ್ಪ ಉಡ್ಕಬೇಕು
ಪತ್ತೆ ಮಾಡ್ಬೇಕು ಕಳ್ಳರಂಗ ವೊರ್ಟೋಗಿದಾನೆ ಅಂದ್ಬುಟ್ಟು

ಅವ್ರು ವೈರು ಮುಡಿಕೆ ವೋಗುತಾರೆsss || ತಂದಾನ ||

ವೈರು ಮುಡಿಕೆ ವೋಂಟೆಗ್‌ಬುಟ್ಟಿದ್ದಾರೆ
ಅಲ್ಲೇನು ವೈರು ಮುಡಿಒಳ್ಗೆ ಸ್ವಾಮಿಯವ್ರು ಒರ್ಗ್‌‌ತ ನಿಂತಿದಾರೆ
ಒಹೋ ಕಂಡ್ಬುಟ್ರು ತಾಯವ್ರು
ಕಲ್ಯಾಣ ಮದ್ವೆಯಾಗವ್ರು ಕಂಡ್ಬುಟ್ರು

ನಿನ್ನ ಒಂಟಾನೆ ಜಿಗಿಬಾರ
ಎಂಟಾಳು ಹೊರಬಾರsss
ಊರಿಗೆ ಸುದ್ದಿ ಬಲುಬಾರsss || ತಂದಾನ ||
ಏಯ್‌ ಕುಂಜ್‌ಗುರ್ಕ ಕಡಿಬಾರ್ದ
ಮಂಡ್ಲಾವು ಯಿಡಿಬಾರ್ದsss
ಎಂದಿಗ ಬಳೆ ಕುಕ್ಕುತ್ತಾರೋsss || ತಂದಾನ ||

ಕುಂಜುಗರ್ಕ ಕಡಿಯಲಿ
ಮಂಡಲ್‌ದಾವು ಇಡಿಯಲಿ
ಎಂದಿಗ ಬಳೆಕುಕ್‌ ಬುಟ್ಟಾವೋ ನಾವು
ನಿನ್ನ ಗಂಡನ್‌ ಮಾಡ್ಕೊಂಡು ಲೋಕದ್‌ ಮೇಲಿದ್ದು
ಬೆಳ್ಳಿ ಬೆಟ್ಟದಲ್ಲಿ ನಾವು ಬಿಳಿಗಿರಿ ರಂಗಯ್ನ ಮಡ್ದಿರು
ನಾವು ಅಂತ ಮಾತಾಡ್ಕೊಂಡು ಇರದಿದ್ರೆ

ನಿನ್ಗೆ ನಾವು ಕಣ್ಣಿಗೆ ಮರೆ ಆಗುಬೇಕುsss || ತಂದಾನ ||

ಏಯ್‌ ಮಡ್ದಿರೆ…
ಈವೊತ್ತಿನ ದಿವ್ಸ ಕೃಸ್ಣನ ಒಳ್ಗೆ
ಮರಿಕುಯ್ತಾ ಇದ್ದರೋ
ಕೋಳಿಕುಯ್ತಾ ಇದ್ದರೋ

ನಾನು ಊಟಕ್ಕೆ ಕಾಣಂತೆ ವೋಗಿದ್ದಿನಂತೆsss || ತಂದಾನ ||
ಅಯ್ಯ ಊಟಕ್ಕೆ ನಾನು ವೋಗಿದ್ದೆ ಮಡ್ದಿರೆsss
ಯಾಕೆಣ್ಣೆ ನನ್ನ ಬೊಯ್ಯುತ್ತೀರಿsss || ತಂದಾನ ||
ಮಾಕೆಣ್ಣೆ ನನ್ನ ಬೋಯ್ತಿರಿ ಎಲೆ ಉಡ್ಗಿsss
ಮೀಸೆಯ ಮೇಲೆ ನೋಡೆಣ್ಣೆsss || ತಂದಾನ ||
ಮೀಸೆಯ ಮ್ಯಾಗೆ ನೋಡ್ತಾವ್ರೆ ನಾರಾಯ್ಣsss
ಅನ್ನದ ಅಗ್ಳ ತೋರುತಾನೆsss || ತಂದಾನ ||

ಆಹಾ! ಅನುಮಂತ ಇಂವ ಅನ್ನಗಿನ್ನ ತೋರ್ಸುದ್ರು
ನಮ್ಗೇನು ಗೊತಿಲ್ಲ ನೀನೆ ನಡ್ಕಂದ್ ಬಂದ್ಬುಡಪ್ಪ ಅಂದ್ಬುಟ್ಟು
ಮೇಲ್ಗಿರಿ ಕೈಲಾಸಕ್ಕೆ ವೊಂಟೋಗ್ ಬುಟ್ರು
ಅನುಮಂತ…… ಅನುಮಂತ. .
ಅನುಮಂತ ನನ್ಗೆ ವೊಟ್ಟೆ ನೋಯ್ತದೆ
ನನ್ನ ವೊಟ್ಟೆ ನೊಯ್ತದೆ
ನಡ್ರಪ್ಪ ಪಾಯ್ಕಾನೆ ಮಾಡ್ಬೇಕು

ನನ್ನ ಬುಟ್ಟು ಕೊಡಯ್ಯ ಅನುಮಂತsss || ತಂದಾನ ||
ಅಯ್ಯಯ್ಯೋ ನಮ್ಮಪ್ಪ ಯಾಕಪ್ಪ ವೊಟ್ಟೆನೋವುsss
ಇಂದೆ ಮುಂದೆ ನನಗೆ ಆಗುತದೆsss || ತಂದಾನ ||
ಇಂದ ಮುಂದೆ ಆಯ್ತದೆ ಅನುಮಂತsss
ಬೆಟ್ಟಕ್ಕೆ ಹೋಗು ನೀ ತಾಯಿ ದಂಡೆsss || ತಂದಾನ ||

ಅಪ್ಪ ಅನುಮಂತ ಬಿಳಿಗಿರಿರಂಗಯ್ನ ಬೆಟ್ಟಕ ವೋಗಿ
ಮೇಲ್ಗಿರಿ ಕೈಲಾಸಕ್ಕೆ ವೋಗಿ
ನಿನ ತಾಯಿ ಲಕ್ಷ್ಮಿದೇವಿ ತೊಳ್ಸಮ್ಮ ಅವ್ರಿಗೆ
ನಿಮ್ಮ ನಾರಾಯ್ಣ ನಮ್ಮೊಡೆಯವ್ರಿಗೆ
ಇಂದ ಮುಂದಾಗೋಯ್ತು

ಬೆಟ್ಟದ ರಂಗಯ್ನಿಗೆ ಬಿದ್ರಕ್ಕಿ ಪಾಯ್ಸನsss
ಜಲ್ದಿ ಕಾಯ್ಸರಕ್ಕ ಬಿದರಕ್ಕಿsss || ತಂದಾನ ||

ಅನುಮಂತನ್ಗ ಬಂಯ ಬಂದ್ಬುಡ್ತು
ನನ್ನೊಡೆಯ ಸತ್ತೋಗ್ ಬುಡ್ತಾನೆ ಅಂದ್ಬುಟ್ಟು
ಕಚ್ಚೆ ಬಿಚ್ಕೊಂಡು. .
ಇಂದೆ ಮುಂದೆ ಓಡಾಡ್ತಯಿದ್ದ
ಆಗನೋ ಮೇಲ್ ಗಿರಿ ಸೇವೆಗೆ
ನಮ್ಮ ಬೆಟ್ಟದ ರಂಗಪ್ಪನಿಗೆ
ಇಂದೆ ಮುಂದೆ ಆಗ್ ಬುಟ್ಟದ ತಾಯಿ
ಬಿದ್ರಕ್ಕಿ ಪಾಯ್ಸಾ ಕಾಯ್ಸಿ ತಕ್ಕಂಡು ನಡಿರಿ ತಾಯಿ ಅಲ್ಲಿಗೆ
ಅಯ್ಯೋ ಪಾಪ ಅಂದ್ಬುಟ್ಟು ಮೇಲ್ ಗಿರಿ ಒಳ್ಗೆ ತರಾಬಿರಿಯಲ್ಲಿ

ಅಯ್ಯ ಬಿದ್ರಕಿ ಪಾಯ್ಸವ ಕಾಯ್ಸುತಾರೆsss || ತಂದಾನ ||
ಬಿದ್ರಕ್ಕಿ ಪಾಯ್ಸ ಕಾಯ್ಸ್ಕೊಂಡು ಬರುವಾಗsss
ಮಾಯಾದನೋ ನಾರಾಯ್ಣsss || ತಂದಾನ ||

ಆಗ ನಾರಾಯ್ಣ ಮೂರ್ತಿಯವ್ರು
ತಾಯಿಯವ್ರು ಬೆಟ್ಟಕ್ಕೆ ಬಿದ್ರಕ್ಕಿಪಾಯ್ಸಾ
ಕಾಯ್ಸ್ಕೊಂಡು ಬಂದು ನೋಡುದ್ರು
ಮಾಯ ಆಗ್ಬುಟ್ಟ
ಏಯ್ ಅನುಮಂತ
ಟೇಕ್ ದಾರ್ ತಿಮ್ಮಯ್ಯ
ಮೇಲ್ಗಿರಿ ರಂಗಯ್ಯನ
ಎಲ್ ಬುಟ್ಟುಟ್ಟಿದ್ದಯಿ? ಅಂತಕೇಲ್ಅಗ
ತಾಯಿ ಇಲ್ಲೆ ಬುಟ್ ಬುಟ್ಟಿದ್ದೆ ತಾಯಿ
ಅದಕ್ಕೋಸ್ಕರ ಬಂದಿ ತಾಯಿ ನಾನು
ಇಲ್ಲೆ ಯಾಕಯ್ಯ ಬುಟ್ಟೆ? ಅಂದ್ಬುಟ್ಟು
ಊಡಿಕಂಡು ವೋಗ್ವಾಗ ಬೇವ್ರು ಕಿತ್ಗಂಡು
ರೂಡಿಯಾಗ್ದ ಬಾಲೆಯನ್ನು ರೂಡಿ ಮಾಡ್ಕಂಡು

ಅವ್ರು ದೊಡ್ಡಸಂಪಗೆಗೆ ವೋಗುತ್ತಾರೆsss || ತಂದಾನ ||

ದೊಡ್ ಸಂಪಿಗೋಗ್ ಬುಟ್ಟಿದ್ದಾರೆ
ಪರಸಂ ಮೂರ್ತಿಗಳು
ನೂರೊಂದ್ ಕೋಟಿ ಜಂಗಮರಿದ್ದಾರೆ
ತಾಯವ್ರು ಅನುಮಂತನ್ ಕರ್ಕಂಡೋಗಿ
ಪರಸಂಮೂರ್ತಿ ಆಗಿರ್ವಂತ
ದೊಡ್ ಸಂಪಿಗೆಯಲ್ಲಿ
ಸಿವ ಜಂಗಮರೆಲ್ಲಾ ಇರುವಾಗ ಮಾವಿಸ್ಣು
ಬಂದಿದ್ದರಪ್ಪ ಅಂತ ಕೇಳ್ತಾರೆ
ನೆನ್ನೆ ದಿವ್ಸ ನೋಡಪ್ಪ
ಈ ಕೊಂಬೆ ಮೇಲೆ ಕೂತ್ಗಂಡು
ಕೊರಳ್ ಬಾರ್ಸುತ ಇದ್ರು
ನಾರಿ ಸೀರೆಲ್ಲಾ ತೂಗಿತ್ತು ಇಸ್ಟ್ ಕಂಡೆ ನಾನು
ಈವೋತ್ತಿಲ್ಲ ತಾಯಿ
ಅಯ್ಯಯ್ಯೊ ಯಾವ್ ಕಡೆವ್ರಪ್ಪ ತಾವು
ನೆನ್ನೆ ಮಾತ್ರ ಅನ್ನೇಡ್ ಗಂಟೆಗೆ ತಾಯಿ
ಅ ಮರ್ದ ಕೊಂಬೆ ಮೇಲ್ ಕುಂತ್ಬುಟ್ಟಿದ್ರು

ಅವ್ರು ಬುಗ್ ಬುಗ್ನೆ ಕೊರಳ ಬಾರ್ಸಿದಾರುsss || ತಂದಾನ ||

ನೆನ್ನೆ ದಿವ್ಸ ಇದ್ದ ತಾಯಿ ಈವತ್ತಿಲ್ಲ
ಮಾವಿಸ್ಣುರಿಲ್ಲ
ನಾರೀರ ಸೀರೆಲ್ಲ ಊರ್ಕೊಂಡು ಕುಸಿನ್ ಮೇಲಿಟ್ಕೊಂಡಿದ ತಾಯಿ
ಅಯ್ಯಯ್ಯೊ ಅವ್ನಿಗೆಲ್ಲಿ ಬಂತು ಈ ನಾರೀನ ಸೂಳೆ
ಅವ್ರು ಸೂಳೆರಂಗಪ್ಪ ಅಂದ್ರೆ
ಮಾವಿಸ್ಣು ಅಂದ್ರೆ ಸುಲ್ಟ ಅಲ್ಲ ಅಂದ್ಬುಟ್ಟು

ಅವ್ರು ನೇರಿಕೊಡೆಗೆ ಬರುತಾರೆsss || ತಂದಾನ ||

ನೇರಿಕೊಡಗೆ ಬರುವಾಗ ನಾರಾಯ್ಣ ಮೂರ್ತಿಯವ್ರು
ಏನ್ಮಾಡ್ತ ಇದಾರೆ ಅಂದ್ರೆ
ನೇರಿಕೊಡೆಗೆ ಆತ್ರದಲ್ಲಿ
ಎಳಬಿಸ್ಲು ಬಗಬಗ್ನೆ ಬರ್ತಾ ಇತ್ತು ಸೂರ್ಯಕ್ಕೆ
ಆಹಾ ಸೂರ್ಯನ ಕಡೆಗೆ ಬೆನ್ನು ಕೊಟ್ಬುಟ್ಟು
ಅನುಮಂತ
ಬಾಲ ರೂಡಿ ಮಾಡ್ತಾ ಇದಾನೆ
ತಾಯಿ! ತಾಯಿ! …… ತಾಯಿ!…… ತಾಯಿ!…. .
ನೋಡಲ್ಲಿ ತಾಯಿ ಅಲ್ಲಿ

ಅಲ್ಲಿಜೋಡು ಅಗ್ಗವ ಇಡಿರಯ್ಯsss || ತಂದಾನ ||

ಅವ್ರು ಗುಡಿಯಾಗ ಅಂತ ಅನುಮಂತ ದೇವ್ರನೋಡು

ಜೋಡು ಅಗ್ಗವ ಇಡುತಾರೆsss || ತಂದಾನ ||

ಜೋರಾಗಿ ಬಿದ್ದದಕ್ಕೆ ಗಕ್‌‌ನ ತಿರ್ಗ್‌ ನೋಡುದ್ರು
ಅಯ್ಯಯ್ಯೊ ಅನುಮಂತ ಯಾಕಪ್ಪ ಇಟ್ಟೆ ನನಗೆ ಅಂದ್ರು
ಆಹಾ ನಿನ್ನಂತ ಯಜಮಾನ್ರು ಇದ್ಬುಟ್ರೆ
ಬಾಳ ಪುಣ್ಯ ಬರ್ತದೆ
ಈ ನೀಲ್ಗಿರಿ ಕೈಲಾಸ್ದಲ್ಲಿ ಈವೊತ್ತು ನಮ್ ಬಳೆ ಕುಕ್‌ಬುಟ್ಟು
ನಾವು ಗಂಡ್ಸತ್ತ ಮುಂಡೆ ಆಗಿದ್ಬುಟ್ರೆ ಸುಕ ಬತ್ತದೆ ಅಂದ್ರು
ಯಾಕೆಣ್ಣೆ ಉಚ್ಚೆಣ್ಣೆ, ಬೆಪ್ಪೆಣ್ಣೆ, ಮಂಕೆಣ್ಣೆ, ಮರಳೆಣ್ಣೆ ನಾನೆಲ್ಗೋಗಿದ್ದೆ?
ನೀನೆಲ್ಗೋಗಿದ್ದೆ ಮತ್ತೆ
ಏಯ್ ಉಚ್ಚಿ
ಏಯ್ ಬೆಪ್ಪಿ ನಾನು ವೋಗಿದ್ದೆ ನೋಡೆಣ್ಣೆ
ನಾಚನ ಅಟ್ಟಿಗೆ ಪಟ್ಟಾ ತೆಗಿಬೇಕು
ಅದ್ಕೋಸ್ಕರ ವೋಗಿದ್ದೆ ಯೆಣ್ಣೆ ಅಂದ್ಬುಟ್ಟು
ಅನ್ದಾನ ನೀಡ್ಬೇಕು ನಾನು ಊಟ ಕೊಡ್ಬೇಕು
ನಾನು ಅದ್ಕೋಸ್ಕರ ವೋಗಿದೆ
ಆಹಹಾ…. .
ಇವರಂತವ್ರು ಇದ್ದುಬುಟ್ರೆ ಊಟ ಕೊಡಬವ್ದು
ಕಳ್ ರಂಗ್…… ಕಳ್ಳನೀನು
ಕಳ್ಳನಿಗೆ ಕಳ್ಳ ಸುಳ್ಳನಿಗೆ ಸೂಳ್ಳಾ ಸೂರ್ರಾಗಿರುವಾಗ
ನೀನು ಈವೋತ್ತು ನೀನು ಕೊಡಬಯ್ಯಾ ಅಂದ್ಬುಟ್ಟು
ಜಾಣವಂತೆ ಯಾರು ಲಕ್ಷ್ಮಿದೇವಿ
ಅಕ್ಕ…. . ಅಕ್ಕ ಇವ್ನ ಕಚ್ಚೆ ಇಡಿ
ಇವ್ನ ಮಾತನ್ನ ಕೇಳ್ಬೇಕು ಅಂದ್ಬುಟ್ಟು
ಸೋಲ್ಗರ ಬೊಮ್ಮೆಗೌಡ್ನ ಮನ್ಗೆ
ಅವ್ನು ಮತ್ತೆ ವೋಗ್ತಾ ಇದ್ದಾನೆ
ಎಲ್ಲಿ ಎಲ್ಲೋಗ್ತೀಯಾ? ಈ ವೊತ್ತು
ನಾಚನಟ್ಟಿ ಇರೊಂಬತ್ತು ಕೋಟಿ
ಜೀವರಾಸಿಗೂ ಪಟ್ಟಾತೆಗಿಬೇಕು
ಅದಕ್ಕೋಸ್ಕರ ವೋಗ್ತಾ ಇದ್ದೀನಿ
ಈವೋತ್ತು ಅದಕ್ಕೋಸ್ಕರ ವೋಗ್ತಿಯಾ ವೋಗಪ್ಪ
ಅಂತ ಕಳ್ಸ್ ಬುಟ್ಟು
ಅಕ್ಕ ಅಂದ್ರು
ಏನಮ್ಮ ತಂಗಿ ಅಂದ್ರು
ನೀನೊಂದು ಸುಣ್ಕಾಯಿ ತೆಕ್ಕೊ
ನಾನೊಂಡ್ ಸುಣ್ಕಾಯಿ ತೆಕ್ಕೋತ್ತಿನಿ
ನಾನೊಂದ್ ಇರ ಇಡ್ಕತ್ತಿನಿ
ನೀನೊಂದ್ ಇರ ಇಡ್ಕಂಡು ಕೂಡಿ
ನರಿ ಸೀರೆ ಒಳ್ಗೆ ಇಟ್ಕಂಡು
ಅವ್ನ ಅವ್ನ ಇಡಿಬೇಕು

ಮುಂದಲೆ ಇಡಿಬೇಕು ಮೀಸೆಯ ಕೀಳಬೇಕುsss
ಮೂರು ಗುದ್ದಂತೆ ಗುದ್ದಬೇಕುsss || ತಂದಾನ ||

ಮಾವಿಸ್ಣು ರಂಗಯ್ಯ ವೊಂಟವ್ನೆ ಕೊಂಗ್ನಾಡ ಸೀಮೆಗೆ
ಕೊಂಗಾರು ಕೊಟ್ಟ ಪೂಜೆಗಾಗಿsss || ತಂದಾನ ||
ಅಯ್ಯ ಕೊಂಗಾರು ಕೊಟ್ಟ ಪೂಜೆಗೆ ರಂಗಪ್ಪsss
ತೇರಿನ ಸ್ವಾಮಿ ಗಿರಿಮ್ಯಾಗsss || ತಂದಾನ ||

ಆಗ ಇನ್ನು ಬಂದು ಪಟ್ಟೆ ಮಂಚದ ಮೇಲೆ
ಉಸ್ಸೋ ಅಂದು ಕುಂತ್ಬುಟ್ರು
ಆಹಹಾ ನಮ್ಮೆಜ್ಮಾನ್ರು ಎಸ್ಟ್ ದೇಸಕ್ಕೋಗಿದ್ದಾರೆ?
ಕುದ್ರೆ ಮೇಲೆ ಬಂದ್ಬುಟ್ಟಿದ್ದಾರಲ್ಲ
ಈ ಕುದ್ರೆ ಒಳ್ಗೆ ಅವ್ರು ಎಸ್ಟ್ ದೇಸ ನೋಡಿದ್ದಾರೆ?
ಆಗೆಂದ್ಬುಟ್ಟು ಎಲ್ಲಿ ವೋಗಿದ್ದೆ ಅಂದ್ರು
ಅಯ್ಯೋ ಉಚ್ಚೆಣ್ಣೆ ಬೆಪ್ಪೆಣ್ಣೆ
ನಾನು ನಾಚನಟ್ಟಿ ಇರೊಂಬತ್ತು ಜೀವರಾಸಿಗೆ
ಪಟ್ಟಾ ತಿದ್ದಕ್ಕೊಗಿದೆ
ಅಕ್ಕನ ಕಣ್ಣ ತಂಗಿನು ನೋಡುತವಳೆ

ತಂಗಿನ ಕಣ್ಣ ಅಕ್ಕ ನೋಡಿsss || ತಂದಾನ ||
ಅಕ್ಕಕ್ಕ ಕಣ್ಣು ಒಡಿತವ್ರೆ ಸನ್ನೆಯ ಮಾಡುತವ್ರೆsss
ನೆರಿಯ ಚೆಂಡಿಗೆ ಕಯ್ಯ ಇಡಿಯುತ್ತಾರೆsss || ತಂದಾನ ||

ಪಟ್ಟಾ ಮಂಚದ ಮೇಲೆ ಕೂತಿದ್ದ
ನಾರಾಯ್ಣಗೆ ಗೊತ್ತಾಗ್ ಬುಡ್ತು
ಏನಪ್ಪಾ ಕಣ್ಣುಬ್ಬು ಬಡಿತಾರೆ
ಸನೆಯ ಮಾಡ್ತಾರೆ ನೆರಿಚೆಂಡಿಗೆ ಕಯ್ ಆಕ್ತಾರೆ
ಎಡಗಡೆ ತೊಲ್ಸಮ್ಮ ಬಲ್ಲಡೆ ಲಕ್ಷ್ಮಿದೇವಿ ಕುಳ್ತಗಂದು
ಬಾಳೆಕಾಯಿ ನೆರಿಒಳ್ಗೆ ಸುಣ್ಕಾಯಿ
ತೆಗ್ಡು ತೆಗ್ಡು ಇಟ್ಕೊಂಡು ನೋಡ್ತಾ ಇದ್ದಾರೆ
ನೋಡ್ತಾಯಿದ್ರೆ ಇರ ಬಾಯಲ್ಲಿ ಬತ್ತ ಕಚ್ ಬುಟ್ಟಿದೆ
ಇರಿನ ಬಾಯಿ ಒಳ್ಗೆ ರಾಗಿಬೇಳೆ ಕಚ್ಚುಟ್ಟಿದೆ
ಆಹಾ ಮಾವಿಸ್ಣು ಅಂದ್ರೆ ಇವ್ನ ಮುಂದೆ ಯಾರು ಇಲ್ಲ
ನಾಚನಟ್ಟಿ ಇರೊಂಬತ್ತು ಕೋಟಿಗೆ
ಪಟ್ಟಾ ಇದ್ದುವಂತೆ ಮಾಯವಿ ನೀನು
ನಿನ್ನ ಮಾತು ಎಳ್ಳಸ್ಟು ಸುಳ್ ಬರದು ಅಂದ್ಬುಟ್ಟು
ನೋಡು ಯೆಣ್ಣು ಗಂಡು ಅಂದ್ರೆ
ಈ ಪಟ್ಟ ಮಂಚ ಮಾಡುದ್ದು ಏತಕ್ಕೆ
ನೀವು ನಾನು ಮನಿಕಳಕ್ಕೆ ಅಲ್ವಾ
ಸ್ವಾಮಿ ನಾವು ಮನ್ಗಬೇಕು
ಈವೊತ್ತು ನೀನು ಎಲ್ಲೂ ವೋಗ್ಬೇಡ
ಅನ್ನ ಆಕಿದ್ದೀಯಾ ಸಾಕು ಅಂದ್ಬುಟ್ಟು
ನಾರಾಯಣ ಮೂರ್ತಿಯವ್ರಿಗೆ

ಅವ್ರು ಮಡ್ಡಿರು ಸುವ್ವಿಯ ಯೇಳುತ್ತರೆsss || ತಂದಾನ ||
ಚೆಲ್ಲಿದರು ಮಲ್ಲಿಗೆಯಾsss
ಮೇಲುಗಿರಿಯ ಮ್ಯಾಗೆsss
ಅಂದುಳ್ಳ ಚೆಂದುಳ್ಳ ಚೆಲುವ ರಂಗಪ್ಪನಿಗೆsss
ಚೆಲ್ಲಿದರು ಮಲ್ಲಿಗೆಯ || ಚೆಲ್ಲಿದರು ||
ಮೇಲುಗಿರಿಯ ಚೆಂದ ನಿಂಗೆsss
ಮೆರಿಯ ಮಂಟಪ ಚಂದsss
ನಿನ್ನ ಆಣೆಯ ಮೇಲಿರುವ ನಾಮ ನೋಡಲು ಚಂದsss || ಚೆಲ್ಲಿದರು ||
ಮುದ್ದು ರಂಗಯ್ನಲ್ಲಿ ಏನಯ್ಯ ಐಬೋಗsss
ಇದ್ದು ಮುದಿನ ಸಿವ ಸಂಕರ ಐಬೋಗsss || ಚೆಲ್ಲಿದರು ||
ಮದ್ಯಾನವೊತ್ತಿನ ಸಜ್ಜೀವ ರಂಗಯ್ಯsss
ಮುದ್ದು ರಂಗಯ್ಯ ಗಿರಿಯ ಮ್ಯಾಗೆsss || ಚೆಲ್ಲಿದರು ||
ಮದ್ಯಾನದೊತ್ತಿಗೆ ಮದ್ದಾಳೆ ಗದ್ದುಗೆ ಆಕಿsss
ಸರ್ನು ಮಾಡಂತಿ ಕರ್ದವ್ರೆ ರಂಗಯ್ಯsss || ಚೆಲ್ಲಿದರು ||