ಸೋಲಿಗರು ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕರ್ನಾಟಕದಲ್ಲಿ. ಅದರಲ್ಲೂ ಚಾಮರಾಜ ನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕ್ರಮವಾಗಿ ಕೊಳ್ಳೆಗಾಲ, ಯಳಂದುರು, ಚಾಮರಾಜನಗರ ಮತ್ತು ಹುಣಸೂರು, ಹೆಗ್ಗಡೆದೇವನಕೋಟೆ, ಪಿರಿಯಾ ಪಟ್ಟಣ ತಲ್ಲೂಕುಗಳಲ್ಲಿಯೂ ಇತ್ತೀಚೆಗೆ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ಗಡಿಭಾಗದಲ್ಲೂ ತತ್ಕಾಲಿಕ ನೆಲೆ ಕಂಡುಕೊಂಡಿರುವುದು ತಿಳಿದುಬರುತ್ತದೆ. ಒಂದು ಅಂದಾಜಿನ ಪ್ರಕಾರ ಈಗ ಸೋಲಿಗರ ಒಟ್ಟು ಜನಸಂಖ್ಯೆಯೂ ಇಪ್ಪತ್ತೈದು ಸಾವಿಕ್ಕೂ ಅಧಿಕವಾಗಿದೆ. (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಪ್ರಕಟಿಸಿದ ಮಾಹಿತಿಯಿಂದ) ಸೋಲಿಗರು ವಾಸಿಸುವ ನೆಲೆಗಳನ್ನು “ಪೋಡು” ಎಂದು ಕರೆಯುವರು. ಸಾಮಾನ್ಯವಾಗಿ ಈ ಪೋಡುಗಳ ಹೆಸರುಗಳು ಗಿಡ-ಮರಗಳು, ಕೆರೆ-ಕಟ್ಟೆ, ಗುಂಡಿ-ಮಾಳ ಇತ್ಯಾದಿಗಳೇ ಆಗಿರುತ್ತವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ. ಸೀಗೆಪೋಡು, ಮುತ್ತುಗದ ಗದ್ದೆಪೋಡು, ದೊಡ್ಡ ಸಂಪಿಗೆ ಪೋಡು, ಕತ್ತೆಕಲ್‌ ಪೋಡು, ಮಂಜಿಗುಂಡಿ ಪೋಡು, ಗುಂಡಿಮಾಳ ಪೋಡು ಇತ್ಯಾದಿ.

ಸೋಲಿಗರು, ಸೋಲಿಗ ಎಂದು ಕರೆಯಲ್ಪಡುವ ಇವರು ತಮ್ಮನ್ನು ಸೋಲಿಗಗೌಡ ಎಂದು ಹೇಳಿಕೊಳ್ಳುವರು. ಅದಕ್ಕಾಗಿ ಅವರ ಹೆಸರಿನ ಮುಂದೆ “ಗೌಡ” ಎಂಬುದು ಸೇರಿರುತ್ತದೆ. ಕ್ಯಾತೇಗೌಡ, ಜಡೇಗೌಡ, ಮಾದೇಗೌಡ, ಹೆಣ್ಣು ಮಕ್ಕಳಿಗಾದರೆ ಕ್ಯಾತಿ, ಮಾದಿ, ದೈತಿ, ಕಾಡಿ ಎಂದಿರುತ್ತವೆ. ಇತ್ತೀಚೆಗೆ ಈ ಸಾಂಪ್ರದಾಯಿಕ ಹೆಸರುಗಳನ್ನು ಕರೆಯುವುದು ಬಿಟ್ಟು ಆಧುನಿಕವಾಗಿ ನಾಡಿನ ಜನರಂತೆ ಹೆಸರು ಕರೆಯುವುದು ರೂಢಿಯಲ್ಲಿದೆ. ಈ ಸಮುದಾಯಕ್ಕೆ ಸೋಲಿಗ ಎಂಬ ಹೆಸರು ಬಂದುದರ ಬಗ್ಗೆ ಹಲವಾರು ವಿದ್ವಾಂಸರ ಅಭಿಪ್ರಾಯಗಳನ್ನು ಡಾ. ಚಂದ್ರು ಕಾಳೇಹಳ್ಳಿಯವರು ತಮ್ಮ ಸೋಲಿಗರ ಸಂಸ್ಕೃತಿ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಅವರ ಪಿ. ಎಚ್‌. ಡಿ. ನಿಬಂಧದ ವಿಷಯವೂ ಹೌದು.

“ಸೋಲಿಗ” ಎಂಬ ಹೆಸರನ್ನು ಕುರಿತ ಕೆಲವು ಮಾಹಿತಿ : ಒಮ್ಮೆ ಪಾರ್ವತಿ ಪರಮೇಶ್ವರರು ತಮ್ಮ ಬೆವರಿನಿಂದ ಎರಡು ಗೊಂಬೆಗಳನ್ನು ಮಾಡಿ ಅವಕ್ಕೆ ಜೀವ ತುಂಬಿದರು. ಒಂದು ನೀಲಯ್ಯನಾಯಿತು. ಇನ್ನೊಂದು ಸಂಕಮ್ಮನಾಯಿತು. ಮುಂದೆ ವಂಶ ಇವರಿಂದ ಬೆಳೆಯಿತು. ಈ ಮಕ್ಕಳು ಸೋಲ ಹಂಬಿನ ಗೆಡ್ಡೆಯನ್ನು ತಿಂದು ಜೀವಿಸುತ್ತಿದ್ದರು. ಹೀಗೆಯೆ ಅವರು ಗೆಡ್ಡೆಯನ್ನು ಕಿತ್ತು ಬೇಯಿಸುತ್ತಾ ತಿನ್ನುತಲ್ಲೆ ಮುಪ್ಪಾದರು. ಆದರೆ ಸೋಲಿನ ಹಂಬು ಮಾತ್ರ ಮತ್ತೆ ಮತ್ತೆ ಚಿಗುರಿ ಹೊಸ ಹೊಸ ಗೆಡ್ಡೆ ಬಿಟ್ಟಿತು. ಒಮ್ಮೆ ಈ ಮುದುಕ ಗೆಡ್ಡೆ ಕೀಳಲು ಹೋದಾಗ ಆ ಸೋಲನ ಹಂಬು ನಿನ್ನ ಕೈಯಿಂದ ನನ್ನ ಗೆಡ್ಡೆಯನ್ನು ಸಾಯುವವರೆಗೂ ಕಿತ್ತರೂ ನನ್ನನ್ನು ಸೋಲಿಸಲಿಕ್ಕೆ ಆಗಲ್ಲ ಆದ್ದರಿಂದ ನನ್ನ ಗೆಡ್ಡೆ ಕಿತ್ತು ಸೋತವನು ನೀನು “ಸೋಲಿಗ” ಎಂದು ಹೇಳಿತು. ಇದು ಒಂದು ಐಹಿತ್ಯವೇ ಹೊರತು ಸತ್ಯಕ್ಕೆ ದೂರವಾದುದು. ಇದು ಸೋಲಿಗನ ಅನುಭವ ಆಗಿರಲೂಬಹುದಷ್ಟೇ ಹೊರತು ಪಾರ್ವತಿ-ಪರಮೇಶ್ವರರ ಕೊಳೆಯಲ್ಲಿ ಸೃಷ್ಟಿಯಾದ ಗೊಂಬೆ ಇವೆಲ್ಲಾ ಕಲ್ಪಿತ ಕಥೆಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಪಾರ್ವತಿ-ಪರಮೇಶ್ವರರಿಂದ ನೀಲಯ್ಯ ಮತ್ತು ಸಂಕಮ್ಮ ಅವರ ಜನನವಾಗಿ ಮಹದೇಶ್ವರರ ದಯೆಯಿಂದ ಕಾರಯ್ಯ ಬಿಲ್ಲಯ್ಯರು ಹುಟ್ಟಿದರು. ಅವರ ಕಾಲ ಮುಗಿದು ಅವರಿಂದ ವಂಶಾಭಿವೃದ್ಧಿಯಾದ ಮೇಲೆ ಈ ಗುಂಪಿನ ಜನರಿಗೆಲ್ಲಾ ಒಬ್ಬ ರಾಜನಿದ್ದ. ಅವನು ಒಮ್ಮೆ ಶತ್ರುರಾಜರ ವಿರುದ್ದ ಯುದ್ಧ ಮಾಡಬೇಕಾಗಿ ಬಂದು ಪರಾಜಿತನಾಗಿ ಜೀವ ರಕ್ಷಣೆಗೋಸ್ಕರ ತನ್ನ ಪರಿವಾರದೊಡನೆ ಕಾಡಿಗೆ ಓಡಿ ಹೋದನು. ಅವನು ಯುದ್ಧದಲ್ಲಿ ಸೋತಿದ್ದರಿಂದ “ಸೋಲುರಾಜ” ಎಂದು ಹೆಸರು ಬಂದಿತು. ಆ ಕಾರಣಕ್ಕಾಗಿ ಅವನ ವಂಶಸ್ಥರಿಗೆ ಸೋಲಿಗರು ಎಂದು ಹೆಸರಾಯಿತು. ಇದಕ್ಕೆ ಯಾವುದೇ ಆಧಾರಗಳಿಲ್ಲ. ಮೊದಲ ಭಾಗ ಪೌರಾಣಿಕವಾದದು. ಕೊನೆಯಲ್ಲಿ ಐತಿಹಾಸಿಕ ಸಂಗತಿಯಂತೆ ನಿರೂಪಿತವಾಗಿದೆ. ಇದೂ ಕೂಡ ಸತ್ಯಾಂಶವನ್ನು ಹೇಳುವಲ್ಲಿ ಅರ್ಧ ಅಂಶ ಮಾತ್ರ ಸಾಧ್ಯವಾಗಿದೆ. ಪೌರಾಣಿಕ ಅಂಶವನ್ನು ಕಡೆಗಣಿಸಿ ಐತಿಹಾಸಿಕ ಅಂಶವನ್ನು ಪರಿಗಣಿಸಬಹುದಾದರೂ, ರಾಜರ ಕಲ್ಪನೆಗಿಂತ ಸಮುದಾಯದ ನಾಯಕರಲ್ಲಿ ಉಂಟಾದ ಒಳ ಜಗಳ ಇಲ್ಲವೆ ಭಿನ್ನಾಭಿಪ್ರಾಯಗಳಿಂದ ಒಂದು ಗುಂಪು ಸೋತಿದ್ದೆ ಅಲ್ಲದೆ ಗಡಿಪಾರು ಮಾಡಿರುವ ಸಾಧ್ಯತೆ ಇದೆ. ಈ ಕುರಿತು ಮುಂದೆ ಚರ್ಚಿಸಲಾಗಿದೆ.

ಭಾಷಾಶಾಸ್ತ್ರಜ್ಞರ ದೃಷ್ಟಿಯಿಂದ ಈ ಕೆಳಗಿನ ಅಭಿಪ್ರಾಯ ಮೂಡಿದೆ “ಸೋಲಿಗರಲ್ಲಿ ‘ಲ’ ಕಾರದ ಸ್ಟಷ್ಟ ಉಚ್ಛಾರಣೆ ಇಲ್ಲದ್ದರಿಂದ” ಇಲು ಎಂಬುದು ಆಗಿ ಉಚ್ಛಾರಣೆ ಪಡೆದು “ಸೋಯಿ” ಎಂಬುದು ಆ ಉಚ್ಛಾರಣೆಯಾಗಿದ್ದು ಅದರ ನಿಜವಾದ ರೂಪವು “ಸ್ವಾಮಿ” ಎಂದಾಗಿದ್ದು ಮಹದೇಶ್ವರ ಸ್ವಾಮಿಯ ಭಕ್ತರಾದುದರಿಂದ ಇವರನ್ನು ಮೊದಲು “ಸ್ವಾಮಿಗೆ” ಎಂದು ಕರೆಯುತ್ತಿದ್ದು ಆ ನಂತರದಲ್ಲಿ “ಸೋಯಿಗ” ಎಂದಾಗಿದ್ದು ಮುಂದೆ ಜನ ಬಳಕೆಯಲ್ಲಿ “ಸೋಲಿಗ” ಎಂದಾಗಿರಬಹುದು.

ಮೇಲಿನ ಮೂರು ಅಭಿಪ್ರಾಯದ ಜೊತೆಗೆ ಮತ್ತೊಂದು ರೀತಿಯಲ್ಲಿ ಆಲೋಚಿಸಿ ಸೇರಿಸಲು ಬಯಸುತ್ತೇನೆ. ಇದು ಪ್ರಮುಖವಾಗಿ ಅವರು ದೈವಗಳು, ಬಳಿಗಳು, ಹೆಸರುಗಳನ್ನು ಆಧರಿಸಿದ್ದಾಗಿವೆ. ಬಿಳಿಗಿರಿರಂಗಯ್ಯನ ಕಾವ್ಯದಲ್ಲಿ ಸೋಲಿಗರ ಬೊಮ್ಮೆಗೌಡ ಬಿಳಿಗಿರಿರಂಗಯ್ಯನಿಗೆ ತನ್ನ ಕುಲನೆಲೆಯನ್ನು ಹೇಳುವ ಸಂದರ್ಭದಲ್ಲಿ ನಮ್ಮ ಜಾತಿ ಅಂದ್ರೆ ಕುಲದಲ್ಲಿ ಕುರುಬ ಒಕ್ಕಲಿಗ ಜಾತೀಲಿ ದೇವಸೋಲ್ಗ… ಎಂಬುದಾಗಿ ಪ್ರಸ್ತಾಪವಿದೆ. ಹಾಗೆಯೇ ಮಲೆಮಾದೇಶ್ವರ ಕಾವ್ಯದಲ್ಲಿ (ಸಂಕಮ್ಮನ ಸಾಲು) ನೀಲಯ್ಯನ ಕುಲದ ಬಗ್ಗೆ ಹೇಳುತ್ತಾ “ಕುಲದಲ್ಲಿ ಕುರಬೊಕ್ಕಲು ಗೌಡ ನೀತಿಯೊಳಗೆ ನೀಲಯ್ಯ, ಜಾತಿಯೊಳಗೆ, ಮಲೆಯಸ್ವಾಲುಗ ನೀಲಯ್ಯ (ಸಂ. ಮಲೆಮಾದೇಶ್ವರ ಕಾವ್ಯ, ಕೇಶವನ್‌ ಪ್ರಸಾದ್‌. ಕೆ. ೧೯೯೭) ಎಂಬುದಾಗಿ ದಾಖಲಾಗಿರುವುದನ್ನು ಪರಿಗಣಿಸಿದಾಗ ನಮಗೆ ಅನೇಕ ವಿಚಾರಗಳು ಸ್ಪಷ್ಟವಾಗುತ್ತವೆ.

ಆದಿಮಾನವನ ಮೂಲವನ್ನು ಕುರುಬ ಜನಸಮುದಾಯದ ಮೂಲಕ ಗುರುತಿಸುತ್ತಿರುವುದು ಸರಿಯಷ್ಟೆ, ಕಾಡುಕುರುಬ, ಜೇನುಕುರಬ, ಮುಳ್ಳು ಕುರುಬ, ಹಂಡೆಕುರುಬ, ಬಂಡೆ ಕುರುಬ, ಗೊಂಡ ಕುರುಬ, ಒಕ್ಕೈ ಕುರುಬ, ಊರು ಕುರುಬ ಇವೆ ಮುಂತಾದ ಕುರುಬ ಸಮುದಾಯಗಳು ಅಸ್ತಿತ್ವದಲ್ಲಿದ್ದುದನ್ನು ಗಮನಿಸದಾಗ ಈ ಸಮುದಾಯ ಗಾತ್ರದಲ್ಲಿ ಒಂದು ಸಣ್ಣ (ಕಾಡು ಕುರುಬ) ಗುಂಪು ಕಾರಣಾಂತರಗಳಿಂದ ಸೋಲಿಗರು ಎಂಬ ಹೆಸರನ್ನು ಪಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಂದೇ ಸಮುದಾಯದ ಎರಡು ಪಂಗಡಗಳ ನಡುವೆ ಅಥವಾ ಎರಡು ಸಮುದಾಯಗಳ ನಡುವೆ ಯಜಮಾನಿಕೆ ಅಥವಾ ಹಂಚಿಕೆ ವಿಚಾರದಲ್ಲಿ ಇಬ್ಬರು ಮುಖಂಡರ ನಡುವೆ ನಡೆದ ಸಂಘರ್ಷದಲ್ಲಿ ಒಂದು ಗುಂಪು ಸೋತು ಕಾಡಿಗೆ ಓಡಿ ಹೋಗಿರುವ ಸಾಧ್ಯತೆ ಇದೆ. ಇದೂ ಅಲ್ಲದೇ ಹಿಂದೆ ಪಂಥ ಕಟ್ಟುವುದು, ಜೂಜಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಅಂಥದ್ದೆ ಒಂದು ಪಂಥದಲ್ಲಿ ಒಂದು ಗುಂಪು ಸೋತು ಮೊದಲೆ ಮಾಡಿಕೊಂಡ ಒಪ್ಪಂದದಂತೆ ತಮ್ಮ ಪಾಲಿನ ಎಲ್ಲವನ್ನು ಒಪ್ಪಿಸಿ ಶರಣಾಗುವುದು ಹಾಗೂ ದೇಶಾಂತರ ಹೊರಟು ಹೋಗುವುದು ರೂಢಿಯಲ್ಲಿತ್ತು. ಇದಕ್ಕೆ ಉದಾಹರಣೆಯಾಗಿ ಪಾಂಡವರು ಕಾಡಿಗೆ ಹೋದ ಮಹಾಭಾರತದ ಕಥೆ ನಮ್ಮ ಮುಂದಿದೆ! ಅದೇ ರೀತಿ ಕುರುಬ ಜನಸಮುದಾಯದಲ್ಲಿ ಇಂಥದ್ದೇ ಒಂದು ಕಾರಣಕ್ಕೆ ಅವರಲ್ಲಿನ ಒಂದು ಗುಂಪು ಸೋತು ಶರಣಾಗಿ ನಾಡಲ್ಲಿ ಬದುಕುವ ಹಕ್ಕನ್ನು ಕಳೆದುಕೊಂಡು ಕಾಡಿಗೆ ಹೋಗಿರುವ ಸಾಧ್ಯತೆಯ ಬಗ್ಗೆ ಆಲೋಚಿಸಬೇಕಾಗಿದೆ. ಈ ರೀತಿ ಸೋತು ಕಾಡಿಗೆ ಹೋದವರೇ ಇಂದಿನ ಸೋಲಿಗರಾಗಿರುವ ಸಾಧ್ಯತೆ ಇದೆ. ಮುಂದುವರಿದು ಇವರಲ್ಲಿ ಮಲೇಸೋಲಿಗ, ಕಾಡುಸೋಲಿಗ, ಊರುಸೋಲಿಗ, ಬುಂಡೆಸೋಲಿಗ, ಉರಿಬತ್ತಿ ಸೋಲಿಗ ಎಂಬ ಉಪಪಂಗಡಗಳಿವೆ. ಕಾಲಾಂತರದಲ್ಲಿ ಅವರಲ್ಲೆ ಗುಂಪುಗಳಾಗಿ ಬೇರೆ ಬೇರೆ ಪ್ರದೇಶದಲ್ಲಿ ನೆಲೆಸಿದ ಮತ್ತು ಕಸುಬನ್ನು ರೂಢಿಸಿಕೊಂಡ ಹಿನ್ನೆಲೆಯಲ್ಲಿ ಈ ಒಳಪಂಗಡಗಳು ಹುಟ್ಟಿಕೊಂಡಿವೆ.

ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬಹುದಾಗಿದೆ. ಈಗ ಚಾಲ್ತಿಯಲ್ಲಿರುವ ಪ್ರತಿಯೊಂದು ಜಾತಿ ಹೆಸರುಗಳು ಒಂದೊಂದು ವೃತ್ತಿಯ ಹಿನ್ನಲೆಯಲ್ಲಿ ಬಂದವುಗಳಾಗಿವೆ. ಉದಾಹರಣೆಗೆ ಈಡಿಗ, ಗಾಣಿಗ, ಬಡಿಗ, ಈರುಳಿಗ, ಕುಂಚಟಿಗ, ಒಕ್ಕಲಿಗ, ಮಾದಿಗ, ಬಾಣಸಿಗ, ಗಾರುಡಿಗ, ಅಂಬಿಗ, ಅಕ್ಕಸಾಲಿಗ, ಕೋಮಟಿಗ, ಕೊರಗ, ಉಪ್ಪಲಿಗ ಮುಂತಾದವುಗಳನ್ನು ಹೆಸರಿಸಬಹುದಾಗಿದೆ. ಈ ಜಾತಿ ಸೂಚಕ ಪದಗಳು “ಗ” ಕಾರದಿಂದ ಕೊನೆಗೊಳ್ಳುತ್ತವೆ. “ಗ” ಕಾರವು ಕ್ರಿಯೆಯನ್ನು ಸೂಚಿಸುತ್ತದೆ. ಆದ್ದರಿಂದ “ಗ” ಯಿಂದ ಕೊನೆಗೊಳ್ಳುವ ಜಾತಿಗಳ ಹೆಸರನ್ನು ಪರಿಶೀಲಿಸಿದಾಗ ಒಂದೊಂದು ಜಾತಿಯು ತೊಡಗಿಸಿಕೊಂಡಿದ್ದ ವೃತ್ತಿಯನ್ನು ಸೂಚಿಸುವುದು ಕಂಡುಬರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಸೋಲಿಗ ಎಂಬುದು ಕ್ರಿಯೆಯನ್ನು ಹೇಳುತ್ತದೆ. ಸೋತ ವ್ಯಕ್ತಿಯು “ಸೋಲಿಗ”ನಾಗುತ್ತಾನೆ. ಎಂಬುದನ್ನು ಗಮನಿಸಬಹುದು. ಇದಕ್ಕೆ ಪೂರಕವಾಗಿ ಮತ್ತೊಂದು ಸ್ಪಷ್ಟನೆಯನ್ನು ಈ ರೀತಿ ನೀಡಬಹುದು. ಸೋಲಿಗ ಅಥವಾ ಸೋಲಿಗರು ಎಂದು ಮಾತ್ರ ಅವರ ಹೆಸರನ್ನು ಮುಂದುವರಿಸಿದ್ದರೆ. ಖಚಿತ ಅಭಿಪ್ರಾಯಕ್ಕೆ ಬರುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರು ತಮ್ಮ ಮೂಲ ಕುಲವನ್ನು ಹೇಳುವಾಗ “ಕುರುಬ ಒಕ್ಕಲಿಗಗೌಡ” ಎಂಬುದಾಗಿಯೇ ಹೇಳುತ್ತಾರೆ. ಇದೂ ಅಲ್ಲದೆ ತಮಗೆ ನಂತರದಲ್ಲಿ ಲಭ್ಯವಾದ ಸೋಲಿಗ ಎಂಬ ಹೆಸರಿನ ಮುಂದೆ “ಗೌಡ” ಎಂಬ ಹೆಸರನ್ನು ಉಳಿಸಿಕೊಂಡು ಮುಂದುವರಿಸುತ್ತಿದ್ದಾರೆ. ಅಂದರೆ ಕುರುಬಗೌಡ ಎಂಬುದು ಸೋಲಿಗ ಗೌಡ ಎಂದು ಮುಂದುವರಿಯಿತು. ಕೇವಲ ಈ ಅಭಿಪ್ರಾಯದೊಂದಿಗೆ ಸೋಲಿಗ ಎಂಬ ಜಾತಿಯ ಸೋತು ಹೋದ ಒಂದು ಸಮುದಾಯಕ್ಕೆ ಬಂದ ಹೆಸರಾಗಿದೆ. ಆ ಸಮುದಾಯವೇ ಇಂದಿನ ಸೋಲಿಗಗೌಡ ಜಾತಿ ಎಂದು ಹೇಳಲು ಬರುತ್ತದೆ. ಮುಂದುವರಿದು ಭಾಷಾ ವಿಜ್ಞಾನಿಗಳು ಮತ್ತು ಸಂಶೋಧಕರು ಹೆಚ್ಚಿನ ಅಧ್ಯಯನದೊಂದಿಗೆ ಅಡಗಿರುವ ಸತ್ಯವನ್ನು ಕಂಡುಕೊಳ್ಳುವುದು ಸಾಧ್ಯವಿದೆ.

ಯಾವುದೋ ಒಂದು ಕಾಲಘಟ್ಟದಲ್ಲಿ ಕಾರಣಾಂತರಗಳಿಂದ ಸೋಲಿಗರು ಕಾಡಲ್ಲೇ ಉಳಿಯುವಂಥಾದುದು ಇತಿಹಾಸವಾಗಿದೆ. ಆದರೆ ಕಾಡಲ್ಲಿ ಉಳಿದು ಬದುಕನ್ನು ಕಂಡು ಕೊಂಡುದು ಮಾತ್ರ ಒಂದು ಸಾಹಸವೇ ಸರಿ. ಏಕೆಂದರೆ ದಟ್ಟ ಅರಣ್ಯದಲ್ಲಿ ಕ್ರೂರಮೃಗಗಳ ಮಧ್ಯ ಪ್ರತಿಕ್ಷಣದಲ್ಲು ಸಾವನ್ನು ಎದುರಿಸುತ್ತ ಬದುಕುವುದು ಸುಲಭದ ವಿಚಾರವಲ್ಲ. ಆದರೆ ಅಗತ್ಯ ಸಂದರ್ಭದಲ್ಲಿ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಒಟ್ಟಿನಲ್ಲಿ ಕಾಡಿನ ಪರಿಸರಕ್ಕೆ ಹೊಂದಿಕೊಂಡು ಅಲ್ಲಿ ಲಭ್ಯವಿರುವ ಗೆಡ್ಡೆ-ಗೆಣಸು, ಹಣ್ಣು-ಹಂಪಲು, ಜೇನನ್ನು, ಆಹಾರವಾಗಿ ಉಪಯೋಗಿಸುತ್ತಾ ಬದುಕನ್ನು ಸಾಗಿಸಿದ್ದಾನೆ. ಕ್ರೂರ ಮೃಗಗಳು, ಪ್ರಕೃತಿ ವಿಕೋಪ ಮುಂತಾದ ಪ್ರತಿಯೊಂದು ತೊಡಕುಗಳನ್ನು ಎದುರಿಸಿ ಪ್ರಾಣ ಹಾನಿಯಾದರೂ ಸಹಿಸಿಕೊಂಡಿದ್ದಾನೆ. ಏಕೆಂದರೆ ತನ್ನ ಪ್ರಯತ್ನ ಹಾಗೂ ಶಕ್ತಿಗೆ ಬಹಳ ಮಿತಿ ಇದೆ ಎಂಬುದನ್ನು ಅರ್ಥ ಮಾಡಿಕೊಂಡವನಾಗಿದ್ದಾನೆ. ಕಾಡಿನಲ್ಲಿರುವ ಹುಲಿ, ಚಿರತೆ, ಆನೆ, ಕಾಡೆಮ್ಮೆ ಹೆಬ್ಬಾವು ಮತ್ತು ಇತರ ವಿಷಜಂತುಗಳಿಗೆ ಹೆದರದೆ ತನ್ನ ಸೂಕ್ಷ್ಮ ಬುದ್ಧಿಯಿಂದ ಬದುಕುವುದು ಸೋಲಿಗರಿಗೆ ಎಂದಿಗೂ ತೊಂದರೆ ಎಂದು ಕಾಡುತ್ತಿದ್ದಿಲ್ಲ. ಸ್ವತಂತ್ರವಾಗಿ ಕಾಡಲ್ಲಿ ಇತರ ಪ್ರಾಣಿಗಳಂತೆ ನಾವು ಒಂದು ಜಾತಿಯ ಕಾಡುವಾಸಿಗಳು (ಪ್ರಾಣಿ) ಎನ್ನುವಷ್ಟರ ಮಟ್ಟಿಗೆ ಜೀವನವನ್ನು ಸಾಗಿಸುತ್ತಿದ್ದರು. ವರುಷದ ಯಾವ ಸಂದರ್ಭದಲ್ಲಿ ಹಸಿವೂ, ಬರ ಎಂಬುದನ್ನು ಕಾಣುತ್ತಿರಲಿಲ್ಲ. ಏಕೆಂದರೆ ಪ್ರತಿಯೊಂದು ಕಾಲದಲ್ಲೂ ಒಂದಲ್ಲ ಒಂದು ಗೆಡ್ಡೆ ಗೆಣಸು, ಸೊಪ್ಪುಸೆದೆ, ಹಣ್ಣು-ಹಂಪಲು ಇದ್ದೆ ಇರುತ್ತಿತ್ತು. ಮತ್ತು ಸದಾ ಕಾಲವು ಜೇನು ದೊರೆಯುತ್ತಿತ್ತು. ಇವುಗಳ ಜೊತೆಗೆ ತನ್ನ ಮಿತಿಯಲ್ಲಿ ಗುಡಿಸಲುಗಳ ಸುತ್ತುಮುತ್ತ ಒಂದಷ್ಟು ಜಾಗವನ್ನು ಹಸನು ಮಾಡಿ ರಾಗಿ, ಅವರೆ, ಹುಚ್ಚೆಳ್ಳುಗಳಂತಹ ಬೆಳೆಯನ್ನು ಬೆಳೆಯುತ್ತಿದ್ದರು. ವರ್ಷದಲ್ಲಿ ಕೆಲವು ಕಾಲ ಇವುಗಳನ್ನು ಆಹಾರವಾಗಿ ಬಳಸಿದರೆ ಉಳಿದ ಸಂದರ್ಭದಲ್ಲಿ ಕಾಡು ಉತ್ಪನ್ನವೇ ಅವರ ಆಹಾರವಾಗಿರುತ್ತಿತ್ತು.

ಬಹಳ ಪ್ರಮುಖವಾಗಿ ಸೋಲಿಗರಲ್ಲಿ ಗುರುತಿಸಬಹುದಾದ ಒಂದು ಗುಣಾತ್ಮಕ ಅಂಶವೆಂದರೆ, ತಮಗೆ ಹಸಿವಾದಾಗ ಮಾತ್ರ ಆಹಾರವನ್ನು ಹುಡುಕುವುದು ತಿನ್ನುವುದು, ಅನಗತ್ಯವಾಗಿ ಆಹಾರ ಸಂಗ್ರಹ ಮಾಡಿಕೊಳ್ಳುವುದು ಇವರಿಗೆ ಒಗ್ಗದ ವಿಚಾರ. ಒಂದು ರೀತಿಯಲ್ಲಿ ಕಾಡು ಪ್ರಾಣಿಗಳಂಥದ್ದೆ ಗುಣ ಇವರಿಗೂ ದತ್ತವಾಗಿರಬಹುದು. ಅಥವಾ ಬೇಕೆಂದಾಗ ಕಾಡಲ್ಲಿ ಹೇರಳವಾಗಿ ಲಭ್ಯವಿರುವ ಯಾವುದಾದರೂ ಒಂದು ಆಹಾರ ಪದಾರ್ಥವನ್ನು ಪಡೆಯುವ ಮುಕ್ತ ಅವಕಾಶವಿದ್ದುದರಿಂದ ಸಹಜವಾಗಿ ಆಹಾರ ಅಗತ್ಯ ಅವನಿಗೆ ಕಂಡು ಬಂದಿರುವುದಿಲ್ಲ. ಎರಡನೆಯ ಗುಣಾತ್ಮಕ ಅಂಶ ಒಂದು ಕುಟುಂಬದಲ್ಲಿ ಮಕ್ಕಳು ಬೆಳೆದು ಮದುವೆಯಾಗುವವರೆಗೆ ಮಾತ್ರ ಒಟ್ಟಾಗಿರುತ್ತಾರೆ. ಮದುವೆಯಾದ ಮರುದಿನವೇ ಅವರು ಮತ್ತೊಂದು ಗುಡಿಸಲು ನಿರ್ಮಿಸಿ ಪ್ರತ್ಯೇಕ ಬದುಕುತ್ತಾರೆ. ಇವರಲ್ಲಿ ಅನಗತ್ಯವಾಗಿ ಒಬ್ಬರನ್ನೊಬ್ಬರು ಅವಲಂಬಿಸಿ ಬದುಕುವುದು ಊಹಿಸಲು ಸಾಧ್ಯವಾಗದು. ಮುಪ್ಪಿನ ಮುದುಕ ಮುದುಕಿಯರು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಹಾಗೂ ಮನೆ ಕಾಯುತ್ತಾರೆ. ಎಂಟು-ಹತ್ತು ವರ್ಷ ತುಂಬಿದ ಮಕ್ಕಳೆಲ್ಲರೂ ಕಾಡಿಗೆ ಹೋಗಿ ಕಾಡು ಉತ್ಪನ್ನದ ಸಂಗ್ರದಲ್ಲಿ ತೊಡಗುತ್ತಾರೆ. ಕನಿಷ್ಠ ಒಣಗಿದ ಉರುವಲನ್ನಾದರು ಸಂಗ್ರಹಿಸುತ್ತಾರೆ. ಏಕೆಂದರೆ ಕ್ರೂರ ಪ್ರಾಣಿಗಳ ರಕ್ಷಣೆಗಾಗಿ ಮತ್ತು ಚಳಿ ಕಾಯಿಸುವ ಸಲುವಾಗಿ ಪ್ರತಿ ರಾತ್ರಿ ಬೆಂಕಿಯನ್ನು ಹಚ್ಚಲೇ ಬೇಕು. ಅದಕ್ಕಾಗಿ ಉರುವಲು ಬೇಕೆ ಬೇಕು.

ಸೋಲಿಗರನ್ನು ಕುರಿತು ಹೇಳುವಾಗ ಈ ವಿಚಾರಗಳ ಜೊತೆಗೆ ಅವರ ಆರೋಗ್ಯದ ಬಗ್ಗೆ ಹೇಳುವುದು ಸೂಕ್ತವೆನಿಸುತ್ತದೆ. ಪ್ರಕೃತಿಗೆ ಮೈಯೊಡ್ಡಿ ಬದುಕುವ ಪ್ರತಿಯೊಂದು ಜಿವಿಗೂ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುತ್ತದೆ. ಕಾಡುವಾಸಿಗರಾದ ಸೋಲಿಗರಿಗೆ ಸಹಜವಾಗಿ ಬರುತ್ತಿದ್ದ ರೋಗಗಳೆಂದರೆ ಮಲೇರಿಯಾ, ಕಜ್ಜಿ, ಬಾಣಂತಿಗೆ ಸಂಬಂಧಿಸಿದ ರೋಗ. ಆದರೆ ಅವುಗಳನ್ನು ತಮ್ಮದೇ ಹಸಿರು ಸೊಪ್ಪು, ನಾರು-ಬೇರು ಇತ್ಯಾದಿ ಔಷಧಿ ಅಥವಾ ಕಷಾಯವನ್ನು ಕುಡಿಯುವುದರ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಕ್ರೂರಪ್ರಾಣಿಗಳಿಂದ ಆಗುತ್ತಿದ್ದ ತೊಂದರೆ (Animals Attacks), ಜೇನು ಬೇಟೆ ಸಂದರ್ಭದಲ್ಲಿ ನೂರಾರು ಅಡಿ ಎತ್ತರದ ಮರದಿಂದ ಬಿದ್ದಾಗ ಆಗುತ್ತಿದ್ದ ಅಪಾಯಗಳಿಗೆ ಇವರಿಂದ ಪೂರ್ಣ ಪ್ರಮಾಣದ ಗುಣವಾಗುವ ಔಷಧಿ ಇರಲಿಲ್ಲ. ಅಂತಹವರು ಶಾಶ್ವತ ರೋಗಿಗಳಾಗಿ ಅಥವಾ ಅಂಗವಿಕಲರಾಗಿ ಬದುಕುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಸಾಯುವವರ ಸಂಖ್ಯೆಯ ಹೆಚ್ಚಿರುತ್ತಿತ್ತು.

ಏನೆಲ್ಲಾ ತೊಂದರೆಗಳಿದ್ದರೂ ಹೆದರದೇ ಕಾಡನ್ನೇ ತಮ್ಮ ಬದುಕಿನ ನೆಲೆಯನ್ನಾಗಿ ಮಾಡಿಕೊಂಡು ಸಂತೋಷದಿಂದಲೇ ಬದುಕಿದ್ದಾರೆ ಎಂಬುದು ಸೋಲಿಗರ ಹಿರಿಯ ಮುಖಂಡರನ್ನು ಸಂದರ್ಶನ ನಡೆಸಿದಾಗ ತಿಳಿದುಬಂದ ಸಂಗತಿಯಾಗಿದೆ. ಪ್ರತಿಯೊಂದು ಸಮಸ್ಯೆಗೂ ಅವರದೇ ಆದ ಒಂದು ಪರಿಹಾರವನ್ನು ಕಂಡುಕೊಂಡಿದ್ದಾರೆ. ಉದಾಹರಣೆಗೆ ಚಳಿಯಿಂದ ಪಾರಾಗಲು ಅವರಿಗೆ ಉಣ್ಣೆ ಬಟ್ಟೆಯಾಗಲಿ, ಕಂಬಳಿಗಳಾಗಲಿ ಇಲ್ಲ ಮದ್ಯಪಾನ, ಧೂಮಪಾನವಾಗಲಿ ಇದ್ದಿರಿಲಿಲ್ಲ. ಬದಲಾಗಿ ಬೆಂಕಿ ಕಾಯಿಸುವುದು ಕಷಾಯ ಕುಡಿಯುವುದು ಉಷ್ಣ ಆಹಾರವನ್ನು ಸೇವಿಸುವುದು. ಜೊತೆಗೆ ಕೆಲವರು ಮಾತ್ರ ಭಂಗಿ ಸೇದುವ ಚಟಕ್ಕೆ ಬಲಿಯಾಗಿದ್ದರು. ಇದು ಒಂದು ರೀತಿಯಲ್ಲಿ ಹೆಚ್ಚು ಅಪಾಯವಿಲ್ಲ ಹಾಗೂ ಎಂದಿಗೂ ಮಿತಿಯನ್ನು ಮೀರುತ್ತಿರಲಿಲ್ಲ. ಆದರೆ ನಾಡಿನ ಜನರ ಸಹವಾಸವನ್ನು ಕಂಡುಕೊಂಡ ಬಳಿಕ ಸೋಲಿಗರ ಹಳೆ “ಮಾದರಿ ಬದುಕು” ಕೊನೆಗೊಂಡು ಹೊಸದೊಂದು ಜೀವನ ಕ್ರಮವನ್ನು ರೂಢಿಸಿಕೊಳ್ಳುವ ಅನಿವಾರ್ಯ ಪರಿಸ್ಠಿತಿ ಉಂಟಾಗಿದೆ. ಇದು ಅವರ ಹಿಂದಿನ ಬದುಕಿಗಿಂತ ಉತ್ತಮವಾಗಿದೆ ಎಂದು ಹೇಳಬಹುದಾದರೂ ಅತಂತ್ರದ ಸ್ಥಿತಿಯನ್ನು ತಲುಪಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಮೇಲೆ ಹೇಳಿದಂತೆ ಸೋಲಿಗರು ಇಂದು ಸಮಾಜದ ಪ್ರಮುಖವಾಹಿನಿಗೆ ಬರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳುವುದಕ್ಕಿಂತ ಸರ್ಕಾರ ಮತ್ತು ಸ್ವಯಂ ಸೇವಾ ಸಂಘ ಸಂಸ್ಥೆಗಳು ಸೋಲಿಗರೇ ಅಲ್ಲದೆ ಇಂತಹ ಹಲವಾರು ಬುಡಕಟ್ಟು ಸಮುದಾಯಗಳನ್ನು ಪ್ರಮುಖವಾಹಿನಿಗೆ ತರುವ ಪ್ರಯತ್ನ ಮಾಡುತ್ತಿವೆ. ಮೂಲತಃ ಸೋಲಿಗರು ಮತ್ತು ಇತರೆ ಬುಡಕಟ್ಟು ಸಮುದಾಯಗಳಿಗೆ ಈ ಪ್ರಯತ್ನ ಒಪ್ಪಿತವೆ ಅಥವಾ ಇಲ್ಲವೆ ಎಂದು ಯಾರು ತಿಳಿಯುವ ಗೋಜಿಗೆ ಹೋಗಿಲ್ಲ. ಒಟ್ಟಿನಲ್ಲಿ ಸರ್ಕಾರ ಹಾಗೂ ಸಂಘ-ಸಂಸ್ಠೆಗಳು ಸಂವಿಧಾನಬದ್ಧವಾದ ಹಕ್ಕನ್ನು ಪ್ರತಿಯೊಬ್ಬ ಮಾನವನು ಪಡೆದುಕೊಳ್ಳುವುದು ನ್ಯಾಯ ಸಮ್ಮತ ಎಂಬ ಧೋರಣೆಯೊಂದಿಗೆ ಬುಡಕಟ್ಟು ಮತ್ತು ನಿರ್ಲಕ್ಷಿತ ಸಮುದಾಯಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಈ ಸಂಬಂಧ ಸರ್ಕಾರದ ಹಾಗೂ ಖಾಸಗಿಯವರ ಸಹಯೋಗದಲ್ಲಿ ನೂರಾರು ಯೋಜನೆಗಳು ಸಿದ್ಧವಾಗಿವೆ. ಅವುಗಳು ಈಗಾಗಲೇ ಅನುಷ್ಠಾನಕ್ಕೆ ಬಂದಿವೆ. ಕಾಡಿನ ಮನುಷ್ಯರನ್ನು ನಾಡಿನ ಮನುಷ್ಯರನ್ನಾಗಿ ಬದಲಿಸುವ ಪ್ರಯೋಗಗಳು ನಡೆದಿವೆ. ಬೇಕು ಬೇಡವಾದಷ್ಟು ಅನುಕೂಲಗಳನ್ನು ಮಾಡಿದ್ದಾರೆ. ಮೂಲ ಬೇಡಿಕೆಗಳಾದ ಮನೆ, ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸಿದ್ದಾರೆ. ಇದಿಷ್ಟನ್ನು ನೀಡಿದರೆ ಈ ಸಮುದಾಯದ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಯಿತೆ? ಅಥವಾ ಇವರ ಬೇಕುಗಳು ಯಾವುವು? ಎಂದು ಅಧ್ಯಯನದ ಮೂಲಕ ತಿಳಿದುಕೊಂಡು ಅನಂತರ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಯಿತೇ? ಈ ಪ್ರಶ್ನೆಯನ್ನು ಕೇಳುವ ಕಾಲ ಮುಗಿದು ಹೋಗಿದೆ. ಏಕೆಂದರೆ ನಾವು ಅಭಿವೃದ್ಧಿಗೆ ಒಳಪಡಿಸುವವರನ್ನು ಒಂದು ವಸ್ತು ಅಥವಾ ಪ್ರಾಣಿಯಾಗಿ ತೀರ್ಮಾನಿಸುವುದು ಸರಿಯಾದ ಕ್ರಮವಲ್ಲ. ಅಥವಾ ಈ ಸಮುದಾಯ ಹಿಂದುಳಿದಿದೆ ಅವರನ್ನು ಮುಂದುವರಿಯಲು ಅನುವು ಮಾಡಿಕೊಡುವುದು ನಮ್ಮ ಜವಾಬ್ದಾರಿ ಎಂದು ಭ್ರಮಿಸಿಕೊಳ್ಳುವುದು, ಇಂತಹ ನಿರ್ಧಾರಗಳಿಂದ ಸಮುದಾಯಕ್ಕೆ ಸಂದಾಯವಾಗಬಹುದಾದ ಒಳತಿಗಿಂತ ಅಪಾಯಗಳೇ ಹೆಚ್ಚು ಎಂಬುದನ್ನು ಸೂಕ್ಷ್ಮ ಮನಸ್ಸಿನ ಯಾರೇ ಆದರು ಅರ್ಥಮಾಡಿಕೊಳ್ಳಲು ಸಾಧ್ಯವಿದೆ.

ಸಾವಿರಾರು ವರ್ಷಗಳಿಂದಲೂ ಮಾನವನ ಸಹವಾಸವಿಲ್ಲದೆ ಸ್ವತಂತ್ರ ಬದುಕನ್ನು ಬದುಕುತ್ತಿರುವ ಸಮುದಾಯವೊಂದು ತನ್ನಂಥಹದೇ ಮಾನವನ ಜೀವಿಯನ್ನು ಕಾಣಲು ಇಲ್ಲವೇ ಬೆರೆಯಲು ಸಂದೇಹ ಪಡುತ್ತಾನೆ. ಆದರೆ ಕಾಡಿನ ಯಾವುದೇ ಪ್ರಾಣಿಯೊಂದನ್ನು ಕಂಡಾಗಲೂ ಅವನಿಗೆ ಆರ್ಶ್ವರ್ಯ ಅಥವಾ ಭಯ ಅನಿಸುವುದಿಲ್ಲ. ಏಕೆಂದರೆ ಅದು ತನ್ನ ಪರಿಸರದಲ್ಲಿ ನಿತ್ಯ ಕಾಣುವ ಒಂದು ಜಾತಿಯ ಪ್ರಾಣಿ ಎಂದು ಪರಿಗಣಿಸುತ್ತಾನೆ. ಸೋಲಿಗರ ಸಂದರ್ಭದಲ್ಲಿ ಇಂತಹ ಘಟನೆಗಳು ಮೂವತ್ತು ವರ್ಷಗಳ ಹಿಂದೆ ಸಾಮಾನ್ಯವಾಗಿತು – ವಾರದಲ್ಲಿ ಒಮ್ಮೆ ಅಥವಾ ಅಪರೂಪಕ್ಕೆ ನಾಡಿನ ಜನರು ಬಿಳಿರಂಗನ ಬೆಟ್ಟಕ್ಕೆ ಹೋಗುತ್ತಿದ್ದಾಗ ಸೋಲಿಗರ್ಯಾರು ನಾಡಿನ ಜನರನ್ನು ಬೆರೆಯುತ್ತಿರಲಿಲ್ಲ. ಬದಲಾಗಿ ಇವರನ್ನು ಕಂಡ ಬಳಿಕ ಪೊದೆಯೊಳಗೆ ಮರೆಯಾಗುತ್ತಿದ್ದರು. ಅವರು ಬಂದು ಹೋದ ಬಳಿಕ ಅವರ ಎತ್ತಿನ ಬಂಡಿಯ ಹೆಜ್ಜೆಯನ್ನು ಮೂಸಿ ನೋಡುತ್ತಿದ್ದರು. ನಾಡಿನ ಜನರ ಜೊತೆಗಿನ ಅಂತರ ಇಷ್ಟೊಂದು ದೂರವಿತ್ತು. ಆದರೆ ಇಂದು ಆ ಅಂತರ ಕಡಿಮೆಯಾಗಿದೆ ಅಷ್ಟೆ ಅಲ್ಲ ನಾಡ ಜನರ ಜೊತೆ ಬೆರೆತು ಹೋಗಿದ್ದಾರೆ ಆದರೆ ಕಾಡಿನ ಒಳ ಭಾಗದಲ್ಲಿರುವ ಬುಡಕಟ್ಟು ಸಮುದಾಯಕೆ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯವನ್ನು ತಲುಪಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಸಕಾರಣಗಳಿವೆ.

ಇದೂವರೆಗಿನ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಿದಾಗ ಸರ್ಕಾರವಾಗಲಿ ಖಾಸಗಿ ಸೇವಾ ಸಂಘ, ಸಂಸ್ಥೆಗಳಾಗಲಿ ನಿಸ್ವಾರ್ಥದಿಂದ ತಮ್ಮನ್ನು ಒಪ್ಪಿಸಿಕೊಂಡು ಕೆಲಸ ಮಾಡುತ್ತಿವೆ ಎಂದು ಹೆಸರಿಸಲು ಯಾವೊಂದು ಸಿಗುವುದಿಲ್ಲ. ಏಕೆಂದರೆ ಅಭಿವೃದ್ಧಿ ಮಾಡಲು ಹೊರಟ ಸಮುದಾಯಗಳು ಕೇವಲ ಬಂಡಾವಾಳ ಹಾಕುತ್ತಾರೆ. ಸಂಘ ಸಂಸ್ಥೆಗಳ ಅಭಿವೃದ್ಧಿಯೇ ಅಂತಿಮ ಗುರಿಯಾಗಿ ಮೂಲ ಉದ್ದೇಶವನ್ನೇ ಮರೆತು ಕಾಟಾಚಾರಕ್ಕೆ ಯೋಜನೆಗಳನ್ನು ನಿರ್ಮಿಸಿ ಲೆಕ್ಕಾ ಚಾರಕ್ಕೆ ಅಭಿವೃದ್ಧಿಪಡಿಸಿ ಹಾಳೆಯ ಮೇಲೆ ಸಾಧನೆ ಮಾಡುವ ಅಪಾಯವಿದೆ.

ಸರ್ಕಾರಕ್ಕಾಗಲಿ, ಸಮಾಜಸೇವೆಗೆ ಮುಂದಾಗಿರುವ ಸಂಘ ಸಂಸ್ಥೆಗಳಿಗಾಗಲಿ ಪ್ರಾಮಾಣಿಕವಾದ ಕಾಳಜಿ ಇದ್ದರೆ ಆಯಾ ಸಮುದಾಯದಲ್ಲಿ ವೈದ್ಯರನ್ನು ಉಪಾಧ್ಯಾಯರನ್ನು, ಐ.ಎ.ಎಸ್‌, ಕೆ.ಎ.ಎಸ್‌ ಅಧಿಕಾರಿಗಳನ್ನು, ದಾದಿಯರನ್ನು, ಇಂಜಿನಿಯರ್ ಗಳನ್ನು ಸೃಷ್ಟಿಸಿ ಒಂದೊಂದು ಕ್ಷೇತ್ರದಲ್ಲೂ ದುಡಿಯಲು ಅನುವಾಗುವಂತೆ ಕೆಲಸಗಾರರನ್ನು ಸಿದ್ಧಪಡಿಸಿ ತರಬೇತಿಗೊಳಿಸಿ ಗರಿಷ್ಠ ೨೫-೩೦ ವರ್ಷಗಳು ಸೇವೆ ಸಲ್ಲಿಸಬೇಕು. ಅನಂತರ ಆಯಾ ಕ್ಷೇತ್ರದಲ್ಲಿ ಆ ಸಮುದಾಯಗಳ ಅಭಿವೃದ್ಧಿಯನ್ನು ಆಯಾ ಸಮುದಾಯದ ಕಾರ್ಯಕರ್ತರು, ಕೆಲಸಗಾರರು, ತರಬೇತಿದಾರರು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿ ಸೇವಾ ಸಂಸ್ಥೆಯನ್ನು ಅವರಿಗೆ ಒಪ್ಪಿಸಿ ಹೊರನಡೆಯುವುದು ಸೂಕ್ತ. ಇದನ್ನು ಬಿಟ್ಟು ಗೆದ್ದಲು ಹುಳು ಕಟ್ಟಿದ ಭವ್ಯವಾದ ಹುತ್ತದಲ್ಲಿ ವಿಷಜಂತು ಹಾವು ಬಂದು ಸೇರಿಕೊಂಡು ಭಯಾನಕವಾಗಿ ಗೋಚರವಾಗಬಾರದು. ಹಾಗೂ ಹುತ್ತದಲ್ಲಿ ಗೆದ್ದಲು ಸಂಗ್ರಹಿಸಿರುವ ಅಥವಾ ಅದರಲ್ಲಿ ಕಟ್ಟುವ ತುಡುಬೆ ಜೇನನ್ನು ತಿನ್ನುವ ಸಲುವಾಗಿ ಹುತ್ತವನ್ನು ನಾಶಪಡಿಸುವ ಕಾಡು ಕರಡಿಯಾಗಬಾರದು.

ಇಂದು ಭಾರತಾದ್ಯಂತ ಪ್ರಚಲಿತವಿರುವ ಹೆಚ್ಚಿನ ಸಂಘ-ಸಂಸ್ಥೆಗಳು ಉದ್ದೇಶಿತ ಸಮುದಾಯಗಳ ಅಭಿವೃದ್ಧಿಗಿಂತ ಸಂಸ್ಥೆಯ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದು ಭ್ರಮಿಸಿಕೊಂಡಿವೆ. ಪ್ರಶಸ್ತಿ ಪಡೆಯುವುದು ಆರಂಭವಾಗಿದೆ. ಪ್ರಶಸ್ತಿಯನ್ನು ಕೊಡುವ ಹಾಗೂ ಅರ್ಹರು ಪ್ರಶಸ್ತಿಯನ್ನು ಪ್ರತಿಷ್ಟಾಪಿಸಿ ತನಗೆ ಕೊಡ ಮಾಡಿಕೊಳ್ಳುವ ವ್ಯಕ್ತಿಗಳು ಹಾಗೂ ಸಂಸ್ಥೆಗಳೂ ಹುಟ್ಟಿಕೊಳ್ಳುತ್ತಿವೆ. ಒಟ್ಟಿನಲ್ಲಿ ಮುಂದುವರಿದ ಸಮುದಾಯಗಳು ಅನ್ಯರ ಅಭಿವೃದ್ಧಿಯ ನೆಪದಲ್ಲೂ ತನ್ನ ಅಭಿವೃದ್ಧಿಯನ್ನು ಕಂಡುಕೊಳ್ಳಲು ಈ ಸಂಘ ಸಂಸ್ಥೆಗಳು ಒಂದು ಧಾಳವಾಗಿ ಬಳಕೆಯಾಗುತ್ತಿರುವುದು ಒಂದು ವಿಪರ್ಯಾಸವೇ ಸರಿ. ಸೇವೆಯನ್ನೇ ಮಾಡಬೇಕು ಎಂದು ಹುಟ್ಟಿಕೊಳ್ಳುವ ಸಂಘ ಸಂಸ್ಥೆಗಳು ಅವರಿಂದಲೇ ಸೇವೆಯನ್ನು ಮಾಡಿಸಿಕೊಂಡು ದಣಿಯುವಂತೆ ದಬ್ಬಾಳಿಕೆ ಮಾಡುವುದನ್ನು ಕಾಣಬಹುದು. ಇಂದು ಬುಡಕಟ್ಟುಗಳು ಅತಂತ್ರ ಸ್ಥಿತಿಯನ್ನು ತಲುಪಿ ಹಿಂದಿನ ನೆಮ್ಮದಿಯ ಬದುಕು ಇಲ್ಲ ಅಥವಾ ಬಯಸಿದಂತ ಉತ್ತಮ ಬದುಕು ಅವರಿಗೆ ಸಿಗಲಿಲ್ಲ ಎಂದು ಪರಿತಪಿಸುವಂತಾಗಿದೆ.

ಮೇಲಿನ ಈ ಕಟು ಸತ್ಯವನ್ನು ಅರಿಯಲು ಸಮುದಾಯದ ಜೊತೆ ಕೆಲವಾರು ತಿಂಗಳ ಒಡನಾಟ ಹಾಗೂ ಹತ್ತಿಪ್ಪತ್ತು ವರ್ಷಗಳ ಕಾಲ ಸತತ ಸಂಪರ್ಕ ಇಟ್ಟುಕೊಂಡಾಗ ತಿಳಿದು ಬಂದವುಗಳಾಗಿವೆ. ಇಷ್ಷಾಗಿಯೂ ಹೇಳಲಾಗದ ಅಂತರಂಗದ ಕಹಿ ಅನುಭವಗಳು ಬಹಳಷ್ಟಿವೆ ಎಲ್ಲವನ್ನು ಹೇಳಿದರೆ ನಮ್ಮ ಬದುಕು ಕಷ್ಟಸಾಧ್ಯವಾಗುತ್ತದೆ ಎಂದು ಹಿಂಜರಿಯುವ ಜನರು ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಸೋಲಿಗರ ಅನೇಕ ಹಿರಿಯರನ್ನು ಸಂದರ್ಶನದ ಮೂಲಕ ಮಾಹಿತಿ ಕೇಳಿದಾಗ ಏನನ್ನು ಹೇಳಲು ಹಿಂಜರಿದರು. ಆದರೆ ಆ ಹಿಂಜರಿತದ ಜೊತೆಗೆ ನಮ್ಮ ಮಕ್ಕಳು ಹಿಂದಿನ ಎಲ್ಲಾ ಪ್ರತಿಭೆಯನ್ನು ಮರೆಯುತ್ತಿದ್ದಾರೆ. ಇದರಿಂದ ಓದಿದ್ದಕ್ಕೆ ಕೆಲಸವೂ ಇಲ್ಲ ಅಥವಾ ಹಿಂದೆ ಮಾಡುತ್ತಿದ್ದ ಕೆಲಸವನ್ನು ಮಾಡಲು ಇಷ್ಟಪಡುತ್ತಿಲ್ಲ. ಉದಾಹರಣೆಗೆ ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಯಾವಾಗಲಾದರೂ ಕಾಡಲ್ಲಿ ಉತ್ಪನ್ನ ಸಂಗ್ರಹಿಸುವ ಧೈರ್ಯ ಸಾಹಸ ಇಂದಿನ ಹುಡುಗರಲ್ಲಿ ಕಂಡುಬರುತ್ತಿಲ್ಲ. ಮರ ಹತ್ತುವುದು ಈ ಜನರಿಗೆ ಅನಿವಾರ್ಯವಾಗಿ ಗೊತ್ತಿರಲೇ ಬೇಕಾದ ಕಲೆ. ಕಾಡು ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಹೆಣ್ಣು-ಗಂಡು ಎಲ್ಲರೂ ಹಲವಾರು ತಂತ್ರಗಳನ್ನು ಕಲಿತಿರಬೇಕು. ಇಂದು ವಿದ್ಯಾಭ್ಯಾಸ ಪಡೆಯುವುದು ಮತ್ತು ಆಧುನಿಕ ಸೌಲಭ್ಯಗಳ ಲಭ್ಯವಾದುದರಿಂದ ಪ್ರತಿಭೆಗಳು ನಾಶವಾಗುತ್ತಿದೆ ಎಂದು ಕೊರಗುತ್ತಿದ್ದಾರೆ.

ಹಳೆಯ ಜನರಿಗೆ ಕಾಡಿನ ಪ್ರತಿಯೊಂದು ಪ್ರಾಣಿ-ಪಕ್ಷಿ, ಗಿಡ-ಮರ, ನಾರು-ಬೇರು, ಗೆಡ್ಡೆ-ಗೆಣಸು ಔಷಧಿಯನ್ನು ಗುರುತಿಸುವ ನೆನಪಿನ ಶಕ್ತಿ ಇತ್ತು. ಇಂದಿನ ಹುಡುಗರು ಕಾಡಿಗೆ ಹೋಗಲು ಹಿಂಜರಿಯುತ್ತಾರೆ. ಆದ್ದರಿಂದ ಕಾಡಿನ ಬಗ್ಗೆ ಅವರಿಗೆ ಯಾವುದೇ ಜ್ಞಾನವು ಉಳಿಯುತ್ತಿಲ್ಲ ಎನ್ನುತ್ತಾರೆ. ಇಂತಹ ಹತ್ತು ಹಲವಾರು ತಂತ್ರಗರು ಹುಟ್ಟಿನಿಂದಲೇ ಒಂದಷ್ಟು ಸಹಜವಾಗಿರುತ್ತಿದ್ದವು. ಇಂದು ಅದನ್ನು ಒಂದು ಕೋರ್ಸ್‌ ಮಾದರಿಯಲ್ಲಿ ಪಠ್ಯದಲ್ಲಿ ಕಲಿಯಬೇಕಾಗಿರುವುದು ವಿಪಯ್ಯಾಸವೇ ಸರಿ.

ಇಷ್ಟೆಲ್ಲಾ ಗೊಂದಲಗಳ ನಡುವೆಯು ಕೆಸರಿನ ಕಮಲಗಳಂತೆ ಆರಂಭದಲ್ಲಿ ಶಿಕ್ಷಣವನ್ನು ಪಡೆದವರ ಸ್ಥಿತಿ ಅಷ್ಟೇನು ಆಶಾದಾಯಕವಾಗಿಲ್ಲ. ಹಾಗೂ ಇವರು ಇನ್ನೊಬ್ಬರ ಹಂಗಿನಿಂದ ಬೆಳೆದು ಬಂದು ಬದುಕನ್ನು ಕಂಡುಕೊಳ್ಳುತ್ತಿರುವ ಅವಲಂಬಿತರು. ಮೊದಲನೆಯದಾಗಿ ರಾಜಕೀಯದ ಬಲವಿಲ್ಲ. ಹಣದ ಶಕ್ತಿಯಿಲ್ಲ. ಇದರಿಂದ ಅನ್ಯರನ್ನೇ ನಂಬಿ ಬದುಕಬೇಕಾದ ಸ್ಥಿತಿ ಬಂದಿದೆ. ತನ್ನ ಸಮುದಾಯವನ್ನು ನಿಜವಾಗಿ ಅಭಿವೃದ್ಧಿ ಪಡಿಸಬೇಕು ಎಂಬ ಹಂಬಲವಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿ ಇವರಿದ್ದಾರೆ. ಇಡೀ ಸಮುದಾಯವೇ ಸೇರಿ ತಮಗಾಗುವ ಅನ್ಯಾಯವನ್ನು ಪ್ರತಿಭಟಿಸಬೆಕು ಎಂಬ ಆಲೋಚನೆ ಇದ್ದರೂ ಅನಂತರ ಏನು ಎಂಬುದು ಯಾರಿಗೂ ತಿಳಿಯದಾಗಿದೆ. ಪ್ರತಿಭಟನೆಗೆ ಮುಂದಾದರೂ, ಅಲ್ಪ ಆಸೆಗೆ ಬಲಿಯಾದ ಕೆಲವರು ಸಂಘಟನೆಯನ್ನು ಹಗುರ ಮಾಡಿಬಿಡುತ್ತಾರೆ. ಇಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ನೌಕರಿ ಪಡೆಯಲಿಲ್ಲ. ಅವರ ಬದುಕು ಸುಖಮಯವಾಗಲಿಲ್ಲ. ಕೆಳಗಿನ ಒಂದು ಉದಾಹರಣೆಯ ಮೂಲಕ ಬುಡಕಟ್ಟು ಸಮುದಾಯ ಯಾವ ದಾರಿಯನ್ನು ಹಿಡಿದಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ಒಂದು ಸಂಘಟನೆಯ ಮೂಲನಿವಾಸಿಗಳ ಅಭಿವೃದ್ಧಿ ದೃಷ್ಟಿಯಿಂದ ಸಾರಾಯಿ ನಿಷೇಧಿಸಬೇಕು ಎಂದು ಹೋರಾಟ ಮಾಡಿ ಸಂಬಂಧಿಸಿದವರಿಗೆ ಮನವಿಯನ್ನು ಸಲ್ಲಿಸಿತು. ಇದೇ ಸಮುದಾಯದ ಜನರಿಂದ ಮತ್ತೊಂದು ಕಡೆ ನಮಗೆ ಸರಾಯಿಬೇಕು ಎಂದು ಹೋರಾಟ ಮಾಡಿಸಲಾಯಿತು. ಅಂದರೆ ಮುಗ್ಧರಾದ ಬುಡಕಟ್ಟು ಸಮುದಾಯಗಳು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಅರಿಯದಂತಹ ಸ್ಥಿತಿಯಲ್ಲಿದ್ದಾರೆ. ಇವರನ್ನು ಯಾರು ಯಾವುದೇ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ. ಕುಂಬಾರ ಅಂಗಳದಲ್ಲಿ ಇರುವ ಮಣ್ಣಿನಂತಾಗಿದೆ ಈ ಸಮುದಾಯದ ಸ್ಥಿತಿ. ಮಣ್ಣಿಗೆ ನಾನು ಏನಾಗುತ್ತೇನೆ. ಏನಾಗಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ, ಗೊತ್ತು ಗುರಿಯೂ ಇಲ್ಲ. ಅದನ್ನು ಕಂಬಾರ ತನ್ನ ಮನಬಂದಂತೆ ಏನು ಬೇಕಾದರು ಮಾಡಬಲ್ಲ. ಈ ಹಿನ್ನೆಲೆಯಲ್ಲೇ ನಾನು ಒತ್ತಾಯಿಸುವುದು ಏನೆಂದರೆ ಸಮುದಾಯದ ಅಭಿವೃದ್ಧಿಯನ್ನು ಸಮುದಾಯವೇ ಮಾಡಿಕೊಳ್ಳಬೆಕು ಹಾಗೂ ಅವರಲ್ಲೇ ನಾಯಕ ಹುಟ್ಟಿಕೊಳ್ಳಬೇಕೆ ಹೊರತು, ಆ ಗುಂಪಿಗೆ ಹೊರಗಿನಿಂದ ಹೋದವ ನಾಯಕನಾಗಲಾರ. ಬದಲಾಗಿ ಮಾರಕನಾಗುವ ಸಾಧ್ಯತೆಯೇ ಹೆಚ್ಚು.

ಸೋಲಿಗ ಅಂದು-ಇಂದು ಎರಡರ ಬದುಕಿನ ಅವಲೋಕನ ಜೊತೆಗೆ ಮುಂದೆ ಏನು ಎಂಬುದನ್ನು ಚಿಂತನೆಗೆ ಒಳಪಡಿಸಬೇಕಾಗಿದೆ. ಮುಂದಿನದನ್ನು ತೀರ್ಮಾನಿಸಲು ಸಾಧ್ಯವಿಲ್ಲದ ಕಾರಣ ಇಂದಿನ ಸರಿತಪ್ಪುಗಳನ್ನು ಸರಿಪರಿಡಿಸಿಕೊಳ್ಳುವ ಮೂಲಕ ಮುಂದಿನ ಬದುಕನ್ನು ಹಸನು ಮಾಡಿಕೊಳ್ಳುವುದು ಮಾತ್ರ ಸಾಧ್ಯ. ದೃಢಕಾಯನಾದ ವ್ಯಕ್ತಿಯ ಜೊತೆ ಬಲಹೀನನನ್ನು ಸ್ಪರ್ಧೆಗೆ ಇಳಿಸಿದರೆ ನಿರೀಕ್ಷೆಯಂತೆ ದೃಢಕಾಯ ಗೆಲ್ಲುತ್ತನೆ. ಆದ್ದರಿಂದ ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಎಲ್ಲಾ ಸೌಲಭ್ಯಗಳಿಂದಲು ವಂಚಿತರಾದ ಸೋಲಿಗ ಮತ್ತು ಎಲ್ಲಾ ಬುಡಕಟ್ಟು ಸಮುದಾಯಗಳನ್ನು ವಿಶೇಷವಾಗಿ ಪರಿಗಣಿಸಬೇಕು. ಅವರಿಗೆ ಕೇವಲ ವಿದ್ಯಾಭ್ಯಾಸ ಮತ್ತು ಮನೆ ಕೊಡುವ, ಸಾಲನೀಡುವ, ಸಂದರ್ಭದಲ್ಲಿ ವಿಶೇಷವಾಗಿ ಪರಿಗಣಿಸುವುದರ ಜೊತೆಗೆ ಕನಿಷ್ಟ ಹತ್ತು ವರ್ಷಗಳ ಕಾಲ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ನೌಕರಿ ನೀಡುವುದಕ್ಕೆ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಪ್ರಮುಖವಾಹಿನಿಯ ಜೊತೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅವರ ಅತಂತ್ರದ ಸ್ಥಿತಿಗೆ ನಾವೇ ಕಾರಣರಾಗಬೇಕಾಗುತ್ತದೆ.

ಇತ್ತೀಚೆಗೆ ಅರಣ್ಯದಿಂದ ಬುಡಕಟ್ಟು ಸಮುದಾಯಗಳನ್ನು ತೆರವುಗೊಳಿಸುತ್ತಿರುವುದು ನಿಜವಾಗಿಯೂ ಬಹಳ ಆತಂಕಕಾರಿಯಾಗಿದೆ. ಏಕೆಂದರೆ ರಾಜ ಮಹಾರಾಜರ ಕಾಲದಿಂದಲೂ ಕಾಡಿನಲ್ಲಿ ಬದುಕುತ್ತ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಹಿಂದಿನ ಕಾಲದಲ್ಲಿ ರಾಜರ ಸಹಜ ಹವ್ಯಾಸಕ್ಕೆ ಕಾಡಿನಲ್ಲಿ ಬೇಟೆ ಆಡುವುದಿತ್ತು. ಅಂತಹ ಸಂದರ್ಭದಲ್ಲಿ ರಾಜನಾಗಲಿ ಆತನ ಸೇನೆಯಾಗಲಿ ಕಾಡಿನಲ್ಲಿ ಮನಬಂದಂತೆ ಅಲೆದಾಡುವುದು ಸಾಧ್ಯವಿರಲಿಲ್ಲ. ಆಗ ಕಾಡವಾಸಿಗರಾಗಿದ್ದ ಸೋಲಿಗರು ಜೇನು ಕುರುಬ, ಕಾಡುಕುರುಬ ಇವರೇ ಮುಂತಾದವರು ಅರಸರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ದಿನದ ಯಾವ ಗಳಿಗೆಯಲ್ಲಿ ಎಲ್ಲಿ ಯಾವ ಪ್ರಾಣಿಗಳು ಲಭ್ಯವಾಗುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅಷ್ಟೇ ಅಲ್ಲ ಅವರ ಜೊತೆಗಿದ್ದು ಬೇಟೆಯಲ್ಲಿ ಸಹಾಯ-ಸಹಕಾರ ನೀಡುತ್ತಿದ್ದರು. ಒಟ್ಟಿನಲ್ಲಿ ರಾಜರ ಬೇಟೆಯ ಸಂದರ್ಭದಲ್ಲಿ ಇವರು ಮಾರ್ಗದರ್ಶಕರಾಗಿ, ರಕ್ಷಕರು ಆಗಿರುತ್ತಿದ್ದರು. ಅದಕ್ಕಾಗಿ ಅನೇಕರು ಬಹುಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಾಕನಕೋಟೆಯನ್ನು ಓರ್ವ ಬುಡಕಟ್ಟು ನಾಯಕನಿಗೆ ವಹಿಸಿಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಇಂತಹ ಬುಡಕಟ್ಟುಗಳ ಸ್ಥಿತಿ ಇಂದು ಅನಾಥವಾಗಿ ನೆಲೆಯನ್ನು ಕಳೆದುಕೊಳ್ಳಬೇಕಾದ ಅಥವಾ ಬದುಕನ್ನು ದುರಂತ ಮಾಡಿಕೊಳ್ಳಬೇಕಾದ ಸ್ಥಿತಿಗೆ ಬಂದಿರುವುದನ್ನು ಗಮನಿಸಿದರೆ ದುಷ್ಟ ಪ್ರಾಣಿಯು ಸಾಧು ಪ್ರಾಣಿಗಳನ್ನು ಹೊಂಚುಹಾಕಿ ಸಿಗಿದು ತಿನ್ನುವಂತೆ ಮುಂದುವರಿದ ಸಮಾಜದ ತಂತ್ರಕ್ಕೆ ಈ ಮುಗ್ಧ ಸಮುದಾಯಗಳು ಬಲಿಯಾಗ ಬೇಕಾಗಿರುವುದನ್ನು ಯಾವ ರೀತಿ ಅರ್ಥೈಸಿಬೇಕೆಂಬುದೇ ತಿಳಿಯದ ಸಂಗತಿಯಾಗಿದೆ. ಅಷ್ಟಾಗಿಯೂ ನಾನು ಕಂಡುಕೊಂಡ ಸತ್ಯವೇನೆಂದರೆ ಈ ಬುಡಕಟ್ಟುಗರು ಯಾವುದೇ ಕಾರಣಕ್ಕೂ ಕಾಡಿನ ಯಾವ ಮರ ಕಡಿಯುವುದಾಗಲಿ ಅಥವಾ ಪ್ರಾಣಿಗಳನ್ನು ಕೊಲ್ಲುವುದನ್ನಾಗಲಿ ಮಾಡುವುದಿಲ್ಲ. ಹುಲಿ-ಚಿರತೆಯಂತ ಪ್ರಾಣಿಗಳು ಸಾಧು ಪ್ರಾಣಿಗಳನ್ನು ಕೊಂದು ತಿಂದು ಬಳಿಕ ಉಳಿದುದನ್ನು ಇವರು ಆಹಾರಕ್ಕೆ ಬಳಸುತ್ತಾರೆ. ಸ್ವತಃ ಇವರು ಯಾವುದೇ ಪ್ರಾಣಿ, ಪಕ್ಷಿಗಳನ್ನು ಕೊಲ್ಲುವ ಪ್ರಯತ್ನ ಮಾಡುವುದಿಲ್ಲ. ಏಕೆಂದರೆ ಅವುಗಳು ಸಹ ಅವರ ಬಳಗವೆಂಬಂತೆ ಒಟ್ಟಿಗೆ ಬುದುಕುತ್ತಿದ್ದಾರೆ.

ಕಾಡಿನ ಯಾವುದೇ ಗಿಡಮರಗಳನ್ನು ಕಡಿಯದೇ ಕೇವಲ ತಾವು ವಾಸಕ್ಕೆ ಬಳಸಿಕೊಂಡ ಸುತ್ತಿನ ಜಾಗವನ್ನು ಶುಚಿಗೊಳಿಸಿ ಅಲ್ಲಿ ಒಂದಿಷ್ಟು ರಾಗಿ ಅಥವಾ ಕಾಳುಗಳನ್ನು ಬೆಳೆದು ಕೊಳ್ಳುತ್ತಾರೆ. ಅಲ್ಲದೇ ಒಂದೇ ಸ್ಥಳದಲ್ಲಿ ಮೂರುವರ್ಷಕ್ಕಿಂತ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ. ಅಂದರೆ ಲಭ್ಯವಿದ್ದ ಗೆಡ್ಡೆ ಗೆಣಸು ಇತ್ಯಾದಿಗಳನ್ನು ಬಳಸಿಕೊಂಡಿದ್ದಾರೆ. ಭೂಮಿಯನ್ನು ಬಳಸಿದರೆ ಸಾರ ಕಡಿಮೆಯಾಗಿದೆ. ಆದಕಾರಣ ಮುಂದಿನ ಫಲವತ್ತಾದ ಜಾಗದಲ್ಲಿ ಹೋಗಿ ವಾಸಕ್ಕೆ ಅಣಿಗೊಳಿಸುತ್ತಿದ್ದರು. ಕಾಡಿಗೆ ಯಾವುದೇ ಹಾನಿಯಾಗದಂತೆ ತಮ್ಮ ಬದುಕನ್ನು ಸಾಗಿಸುತ್ತಿದ್ದುದು ಇಲ್ಲಿ ಕಂಡುಬರುತ್ತದೆ.

ಹಾಗಾದರೆ ಕಾಡುಜನರು ಕಳ್ಳರು, ಮರಗಳನ್ನು ಕಡಿಯುತ್ತಾರೆ, ಅನೇಕ ಕಳ್ಳ ವ್ಯವಹಾರ ಮಾಡುತ್ತಾರೆ ಎಂದು ಅರಕ್ಷಕ ಠಾಣೆಯಲ್ಲಿ ದಾಖಲೆಗಳಿವೆ. ಇದಕ್ಕೆ ಕಾರಣವೇನು?. ಈ ಮುಗ್ಧ ಕಾಡುಜನರನ್ನು ಬಳಸಿಕೊಂಡು ನಾಡಿನ ದುಷ್ಟರು ಬೆಲೆಬಾಳುವ ಮರವನ್ನು ಕಡಿಯುವುದು ಕಳ್ಳಸಾಗಣೆ ಮಾಡುವುದು ಯಾರಿಗೂ ತಿಳಿಯದ ಸಂಗತಿಯೇನಲ್ಲ. ಆದರೆ ಆ ದುಷ್ಟರನ್ನು ಹಿಡಿಯುವ ಕೆಲಸ ಸುಲಭದ್ದಲ್ಲವೆಂದು ಹೇಳುವುದು ಅಗತ್ಯವಿಲ್ಲ. ಈ ಸಂದರ್ಭದಲ್ಲಿ ಕೇವಲ ಕೇಸು ದಾಖಲಿಸಲು ಅಥವಾ ಸಾಧನೆಯನ್ನು ತೋರಲು ಬುಡಕಟ್ಟು ಮುಗ್ಧರು ಬಲಿಪಶುವಾಗಿದ್ದಾರೆ. ಈ ಮಾತನ್ನು ನಾನು ಹೇಳುವ ಬದಲು ಅನ್ಯಾಯಕ್ಕೆ ಒಳಗಾದ ಆ ವ್ಯಕ್ತಿಗಳಿಂದಲೇ ಕೇಳಿದರೆ ಎಂತಹ ಕಟುಕನಿಗೂ ಮನಕರಗದಿರದು. ಏನು ಅರಿಯದ ಮುಗ್ದರು ಬೆಲೆಬಾಳುವ ಮರದ ಪಕ್ಕದಲ್ಲಿ ಕುಳಿತು ಕಳ್ಳರಾಗಿ ಛಾಯಚಿತ್ರ ತೆಗೆಸಿಕೊಂಡು ಅವಮಾನಿತರಾಗಿದ್ದಾರೆ. ದನಕ್ಕೆ ಬಡಿದಂತೆ ಬಡಿಸಿಕೊಂಡು ಶಾಶ್ವತ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿ ಕೃತ್ಯಗಳು ಇಲ್ಲಿಗೆ ಮಾತ್ರ ಸೀಮಿತ ಎಂದು ದಾಖಲಿಸುತ್ತಿಲ್ಲ. ಇಲ್ಲಿಯ ಈ ಸಮುದಾಯ ಯಾವ ಯಾವ ರೀತಿಯಲ್ಲಿ ಅನ್ಯಾಯಕ್ಕೆ ಒಳಗಾಗವುದು ಸಾಧ್ಯವಿದೆ ಎಂಬುದನ್ನು ಹಾಗೂ ವಾಸ್ತವ ಚಿತ್ರವನ್ನು ಪರಿಚಯಿಸುತ್ತಿದೇನೆ ಅಷ್ಟೆ.

ಹಿಂದೆ ಪ್ರಸ್ತಾಪಿಸಿದ ಅರಣ್ಯದಿಂದ ತೆರವು ಮಾಡುವ ಸಂಗತಿ ಬುಡಕಟ್ಟು ಜನರಿಗೆ ಸಂತಸದ ವಿಚಾರವೇನು ಅಲ್ಲ. ನೀರಿನಲ್ಲಿದ್ದ ಮೀನನ್ನು ಹೊರಗೆ ತೆಗೆದಂತೆ ಆಗುವ ಸಾಧ್ಯತೆಗಳಿವೆ. ನಿಜವಾದ ಅರ್ಥದಲ್ಲಿ ಕಾಡನ್ನು ರಕ್ಷಿಸುತ್ತಿದ್ದ ಜನರು ಬುಡಕಟ್ಟುಗಳೇ ಆಗಿದ್ದರು, ಕಾಡಲ್ಲಿದ್ದರೆ ನಾಡಿನ ಕೆಲವು ಆಕಾಂಕ್ಷಿಗಳಿಗೆ ತಮ್ಮ ಕಾರ್ಯ ಸಿದ್ಧಿಯಾಗುವುದಿಲ್ಲ ಎಂಬುದು ಮನವರಿಕೆಯಾಗಿದೆ ಹಾಗೂ ತಮ್ಮಿಂದ ಸಾದ್ಯವಿದ್ದಾಗ ಆದಷ್ಟು ಗಳಿಸುವುದು, ಕಾಡಾದರೇನು? ನಾಡಾದರೇನು? ಒಟ್ಟಿನಲ್ಲಿ ಭೂಮಿಯನ್ನು ಲೂಟಿಮಾಡುವುದು ಅದರಲ್ಲಿ ಪಾಲು ಹಂಚಿಕೊಳ್ಳುವುದು ಇದು ಇಂದು ಜರುಗುತ್ತಿರುವ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಸ್ಥಿತಿಯಲ್ಲಿ ನಾಗರಹೊಳೆ, ಬಂಡೀಪುರದ ಬುಡಕಟ್ಟು ಸಮುದಾಯಗಳು ತೊಂದರೆಗೆ ಸಿಲುಕಿವೆ. ಇದು ಈಗಾಗಲೇ ರಾಜ್ಯಮಟ್ಟದ ಸುದ್ಧಿಯಾಗಿದೆ. ಇದರ ವಿರುದ್ಧ ಹೋರಾಟಗಳು ನಡೆದಿವೆ.

ಆದರೆ ಬಿಳಿಗಿರಿರಂಗನ ಬೆಟ್ಟದ ಮತ್ತು ಸುತ್ತ-ಮುತ್ತಲಿರುವ ಬುಡಕಟ್ಟುಗಳ ಸಮಸ್ಯೆಯೇ ಬೇರೆಯಾಗಿದೆ. ಇಲ್ಲಿನ ಸೋಲಿಗ ಸಮುದಾಯವು ಅತಿ ಬೇಗನೆ ಮುಂದುವರಿದಿರುವುದು ಮತ್ತು ಮುಂದುವರಿಯುತ್ತಿರುವುದು ಸಮುದಾಯ ಅಸ್ತಿತ್ವವನ್ನೇ ಅಲುಗಾಡಿಸುವಂತಿದೆ. ಏಕೆಂದರೆ ಕಾಫಿಯಂತಹ ದುಭಾರಿ ಬೆಳೆ ಬೆಳೆಯುವುದು ಸಾಧ್ಯವಾಗುತ್ತಿದೆ. ವಿದ್ಯಾವಂತರಾದ ಸೋಲಿಗರ ಯುವಕರು ವ್ಯವಸಾಯ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಹೊರಗಿನ ಹಣವಂತರು (ಬೆಂಗಳೂರು, ಮೈಸೂರು) ಮುಂದೆ ಒಂದು ದಿನ ಬಿಳಿಗಿರಿರಂಗನ ಬೆಟ್ಟ ಮಿನಿ ಊಟಿ ಆಗುತ್ತದೆ ಎಂಬ ಆಶಯವನ್ನು ಹೊಂದಿದ್ದು ಸೋಲಿಗರಿಗೆ ನೀಡಿರುವ ಒಂದು ಅಥವಾ ಎರಡು ಎಕರೆ ಭೂಮಿಯನ್ನೂ ಕೊಂಡು ಕೊಳ್ಳುವಲ್ಲಿ ಪೈಪೋಟಿ ನಡೆಸಿದ್ದಾರೆ. ಇದರಿಂದ ಇತ್ತ ಕಾಡು ಬದುಕು ಇಲ್ಲ. ಅತ್ತ ನಾಡ ಬದುಕು ಇಲ್ಲದಂತೆ ಮತ್ತೊಮ್ಮೆ ಅತಂತ್ರ ಬದುಕಿಗೆ ಮೊರೆ ಹೋಗಬೇಕಾದ ಸ್ಥಿತಿ ಬರುವುದರಲ್ಲಿ ಆಶ್ಚರ್ಯವಿಲ್ಲ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಲಭ್ಯವಾದ ಹಲವಾರು ಜನರ ಅಭಿಪ್ರಾಯವನ್ನು ದಾಖಲಿಸುವುದಾದರೆ ನಾಡಿನ ಜನರು ಹೀಗೆ ತಮ್ಮ ಆಕ್ರಮಣ ಬುದ್ಧಿಯನ್ನು ಮುಂದುವರಿಸಿದರೆ ಒಂದಿಲ್ಲ ಒಂದು ದಿನ ಅವರ ವಿರುದ್ಧ ದಂಗೆ ಏಳುವುದು ಖಚಿತವೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗಾಗಲೇ ಅಂತಹ ಅತಿರೇಕದ ಒಂದೆರಡು ಸಂದರ್ಭಗಳು ಬಂದಿದ್ದರು ತಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ತಣ್ಣಗಾಗಿವೆ ಎನ್ನುತ್ತಾರೆ.

ಒಂದು ಬುಡಕಟ್ಟು ಯಾವುದೇ ಸಂದರ್ಭದಲ್ಲಿ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಅಷ್ಟಕ್ಕೂ ಅದು ರೂಢಿಸಿಕೊಂಡು ಬಂದಿರುವ ಯಾವುದೇ ರೀತಿ-ನೀತಿಗಳು ಆ ಸಮುದಾಯದ ಅನೇಕ ದಿನಗಳ ಅನುಭವ ಮತ್ತು ಸಾಧನೆಯಿಂದಾಗಿರುತ್ತದೆ. ಉದಾಹರಣೆಗೆ ಸೋಲಿಗರ ಕಟ್ಟೆಮನೆ ನ್ಯಾಯವನ್ನು ಕುರಿತು ಹೇಳುವುದಾದರೆ, ಒಂದು ಉತ್ತಮ ಹಾಗೂ ಸಾರ್ವತ್ರಿಕ ಸ್ಥಾನವಾಗಿದ್ದ ‘ಕಟ್ಟೆಮನೆ ನ್ಯಾಯ’ ಇಂದು ಇಲ್ಲದಾಗಿದೆ. ಕಾರಣ ಹೊರಗಿನ ಪ್ರಭಲವಾದ ಶಕ್ತಿ ಸಮುದಾಯವನ್ನು ಸಮುದಾಯದ ಹಳೆ ಪದ್ಧತಿಯನ್ನು ಹಗುರುಗೊಳಿಸಿದ್ದು ಅತ್ಯಂತ ಕಿರಿಯ ವಯಸ್ಸಿನ ಕೆಲವರು ರಾಜಕೀಯ ಪ್ರವೇಶ ಪಡೆದು ತಮ್ಮ ಹಿರಿಯರನ್ನು ಮತ್ತು ತಮ್ಮದೇ ನೀತಿ ನಿಯಮಗಳನ್ನು ಗೌರವಿಸದೆ ಇರುವುದು. ಇದರಿಂದ ಇವರಲ್ಲಿದ್ದ ಐದು ಕುಲದವರಿಗೂ ಇದ್ದ ಒಂದೊಂದು ಜವಬ್ದಾರಿ ಇಂದು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ. ನಾಯಕನಾದವನಿಗೆ ಪ್ರಭಾವಿತ ಶಕ್ತಿಯ ವಿರುದ್ಧ ಏನನ್ನು ಹೇಳಲು ಹಿಂಜರಿಯುವುದು ತನ್ನ ಜೀವನ ಮಾರ್ಗಕ್ಕೆ ಅವರನ್ನೇ ಆಶ್ರಯಿಸಿರುವುದು ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಲು ಸಾಧ್ಯವಾದಂತೆ ಕಾಣುತ್ತಿಲ್ಲ.

ಮಿಗಿಲಾಗಿ ಹಣವನ್ನು ಕಾಣದೆ, ಬರಡಾಗಿದ್ದ ಮನಸ್ಸುಗಳು ಹಣವೆಂದರೆ ಯಾವುದೇ ಕೆಲಸವನ್ನು ಮಾಡಲು ಒಪ್ಪಿಕೊಳ್ಳುವುದು ಅಪಾಯಕಾರಿಯಾಗಿದೆ. ಸರಾಯಿ ಎಂಬ ಭೂತವನ್ನು ಬಳಸಿಕೊಂಡು ಇಡಿ ಸಮುದಾಯವನ್ನೇ ರಾಜಕೀಯ ನಾಯಕರು ಹಾಗೂ ಸಂಘ ಸಂಸ್ಥೆಗಳು ಹೇಗೆಂದರೆ ಹಾಗೆ ಬಳಸಿಕೊಳ್ಳುವುದು ಸಾಧ್ಯವಿದೆ. ಸೋಲಿಗಗೌಡ ಎಂಬ ಹೆಸರನ್ನು ದುರುಪಯೋಗ ಮಾಡಿಕೊಂಡು ಹೊರರಾಷ್ಟ್ರಕ್ಕೆ ಹೋಗಿ ಬಂದಿರುವ ಉದಾಹರಣೆಗಳು ನನ್ನ ಸಂದರ್ಶನ ವೇಳೆಯಲ್ಲಿ ದಾಖಲೆಗೆ ದೊರತಿದೆ. ಆದರೆ ತಮಗೆ ಅಥವಾ ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯವನ್ನು ನೋಡಿದರು ನೋಡದವರಂತೆ, ಮೂಕ ಪ್ರೇಕ್ಷಕರಾಗಿ ಕೇವಲ ವೇದನೆಯನ್ನು ಅನುಭವಿಸುತ್ತಾ ಇದ್ದಾರೆ. ಬೇರೆಯವರಿಗೆ ಹೇಳಿಕೊಳ್ಳಲು ಹೆದರುವ ಸ್ಥಿತಿಯನ್ನು ನೋಡಿದಾಗ ಈ ಜನರ ಸ್ಥಿತಿ ಹಿಂದಿಗಿಂತಲೂ ಹೀನಾಯವಾಗಿದೆ ಎಂದೇ ಹೇಳಬೇಕಾಗುತ್ತದೆ.

ಓರ್ವ ಸೋಲಿಗ ಅಜ್ಜನ ಮಾತನ್ನ ಉದಾಹರಿಸುವುದಾದರೆ “ನಾವು ಕಾಡಲ್ಲಿ ವಾಸವಾಗಿದ್ದು ಇಲ್ಲಿ ಕ್ರೂರಪ್ರಾಣಿಗಳಿಗೆ ಹೆದರಲಿಲ್ಲ ಆದರೆ ನಾಡಪ್ರಾಣಿ ಬಂದುದರಿಂದ ನಮಗೆ ಹೆದರಿಕೆ ಜಾಸ್ತಿಯಾಗಿದೆ. ಮುಂದೇನೋ ಗೊತ್ತಾಗ್ತ ಇಲ್ಲಪ್ಪ…..”

ಯೋಜನೆಗಳ ಬಗ್ಗೆ ಹೇಳುವುದು ಈ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ. ಗೌಳಿಗರು ಹೈನುಗಾರಿಕೆಯಿಂದ ಬದುಕು ಸಾಗಿಸುತ್ತಾರೆ. ಇವರ ಕಸುಬಿಗೆ ಪೂರಕವಾಗಿ ಮನೆಯನ್ನು ನಿರ್ಮಿಸಿ ಕೊಡುವುದು ಸಮಂಜಸ. ಆದರೆ ಗೌಳಿಗರ ವಾಸಕ್ಕೆ ಮನೆ ನೀಡಬೇಕು ಎಂದು ತಿಳಿದು ೧೦-೨೦ ಜಾಗದಲ್ಲಿ ಒಂದು ಗೂಡುಕಟ್ಟಿ ಕೊಟ್ಟರೆ ಏನು ಪ್ರಯೊಜನವಾಗಲಾರದು. ಏಕೆಂದರೆ ಗೌಳಿಗರ ಕಸುಬು ಹೈನುಗಾರಿಕೆ. ಅದಕ್ಕಾಗಿ ಅವರು ಸಾಕುವ ಎಮ್ಮೆಗಳನ್ನು ಕಟ್ಟಲು ವಿಶಾಲವಾದ ಸ್ಥಳಬೇಕು. ಸರ್ಕಾರ ನೀಡುವ ೧೦ x ೨೦ ಅಡಿ ಮನೆಯಲ್ಲಿ ವಾಸವಾದರೆ ಕಸುಬಿನ ಗತಿಯೇನು? ಇದು ಯೋಜನೆಯು ಸಿದ್ದವಾಗುವ ಮೊದಲು ನಿರ್ದಿಷ್ಟ ಸಮುದಾಯರ ಬಗ್ಗೆ ಅಧ್ಯಯನ ನಡೆಯಬೇಕು. ಆ ಬಳಿಕವೆ ಅವರ ಅಗತ್ಯಕ್ಕೆ ಪೂರಕವಾಗಿ ಯೋಜನೆ ಸಿದ್ಧವಾಗಬೇಕು. ಕಾಲ ವಿಳಂಬವಿಲ್ಲದೆ ಕಾಲ ಕಾಲಕ್ಕೆ ನಡೆಯಬೇಕಾದ ಕಾರ್ಯ ನಡೆಯುವಂತೆ ನೋಡಿಕೊಳ್ಳಬೇಕು. ಫಲ-ವಿಫಲಗಳನ್ನು ಜೊತೆ ಜೊತೆಗೆ ಪರಿಶೀಲಿಸಿ ಪರಿಷ್ಕೃತ ಪರಿಹಾರಗಳನ್ನು ಅನುಷ್ಠಾನ ಗೊಳಿಸಬೇಕು. ಇದಕ್ಕೆ ಯಾವುದೇ ಆಡಳಿತಾತ್ಮಕ ಅಡೆತಡೆಗಳು ಬಾರದಂತೆ ಎಚ್ಚರಿಕೆ ವಹಿಸ ಬೇಕು. ಇಲ್ಲವಾದರೆ ಉದ್ದೇಶಿತ ಯೋಜನೆ ಉಚ್ಚಾಟಿತ ಯೋಜನೆಗಳಾಗುವ ಸಾಧ್ಯತೆಗಳಿರುತ್ತವೆ.

ಒಂದರ ಹಿಂದೆ ಒಂದರಂತೆ ಅಸಂಖ್ಯಾತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದಲು ಪರಿಣಾಮಕಾರಿಯಾದ ಕೆಲವೇ ಯೋಜನೆಗಳನ್ನು ಹಮ್ಮಿಕೊಂಡು ಸಮುದಾಯದ ಪ್ರತಿಯೊಂದು ವ್ಯಕ್ತಿ ಹಾಗೂ ಕುಟುಂಬವು ಒಳಗೊಳ್ಳುವಂತೆ ಕಾರ್ಯ ಯೋಜನೆ ರೂಪಿಸುವುದು ಒಳ್ಳೆಯದು. ಉದಾಹರಣೆಗೆ ವಾಸಕ್ಕೆ ಮನೆ ಕಟ್ಟಲು ಒಂದೇ ಯೋಜನೆ ಸಾಕು ಎನಿಸುತ್ತದೆ. ಅದೇ ರೀತಿ ವಿಧ್ಯಾಭ್ಯಾಸ ಸ್ವಯಂ ಉದ್ಯೋಗಕ್ಕೆ, ಕೃಷಿಗೆ ಮತ್ತು ಮನೆ ಕಟ್ಟಲು ಹತ್ತು ಹದಿನೈದು ಹೆಸರಿನ ಯೋಜನೆಗಳ ಅನುಷ್ಠಾನದಿಂದ ಬುಡಕಟ್ಟಿಗೆ ಏನು ಲಾಭವಾಗುವುದಿಲ್ಲ. ಬದಲಾಗಿ ಅಲೆದಾಟ, ಅನಗತ್ಯ ಖರ್ಚು ಆಗುವುದರಲ್ಲಿ ಸಂಶಯವಿಲ್ಲ.