ಈಗಾಗಲೇ ಕಾವ್ಯ ಸಂಗ್ರಹವನ್ನು ಕುರಿತು ಕೆಲವು ಸೂಕ್ಷ್ಮಗಳನ್ನು ತಿಳಿಸಲಾಗಿದೆ. ಮುಂದುವರಿದು ಕಾವ್ಯ ಸಂಗ್ರಹಕ್ಕೆ ಇದ್ದ ಇತಿ ಮಿತಿಗಳನ್ನು ದಾಖಲಿಸುವ ಉದ್ದೇಶದಿಂದ ಈ ಬರಹ ಅನಿವಾರ್ಯವಾಯಿತು. ವಾಸ್ತವವಾಗಿ ಸೋಲಿಗರ ಎಲ್ಲಾ ಹೆಣ್ಣು ಗಂಡುಗಳು ಕಲಾವಿದರೆ ಆಗಿದ್ದಾರೆ. ಹಬ್ಬ ಮತ್ತು ಜಾತ್ರೆಗಳಂತಹ ಸಂದರ್ಭದಲ್ಲಿ ಒಟ್ಟಾಗಿ ಹಾಡಬಲ್ಲರು ಹಾಗೂ ಕುಣಿಯಬಲ್ಲರು. ಇವೆಲ್ಲಾ ಅವರಿಗೆ ಒಂದು ರೀತಿ ಸಹಜ ಪ್ರಕ್ರಿಯೆ ಇದ್ದ ಹಾಗೆ. ಮುಜುಗರ ಪಡುವುದಾಗಲಿ ಅಥವಾ ಹಿಂಜರಿಯುವುದಾಗಲಿ ಅವರ ಜಾಯಮಾನದಲ್ಲೇ ಇಲ್ಲ. ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ವ್ಯಕ್ತಪಡಿಸುವ ಈ ಸಂದರ್ಭಗಳು ಪರಸ್ಪರ ಹೆಣ್ಣು ಗಂಡುಗಳು ತಮ್ಮ ಭಾವಿ ಬದುಕಿಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರಕ ವೇದಿಕೆ ಆಗಿರುತ್ತದೆ. ಆದರೆ ತಮ್ಮ ದೈವ ಮತ್ತು ಬಾವ ಎಂದೇ ಕರೆದುಕೊಳ್ಳುವ ಬಿಳಿಗಿರಿರಂಗನ ಬಗ್ಗೆ ಪ್ರಚಲಿತವಿರುವ ಕಾವ್ಯವನ್ನು ಹಾಡಲು ಕಲಿತವರು ಯಾರಿಲ್ಲ. ಹೆಚ್ಚೆಂದರೆ, ಜೇನು ಬೇಟೆ, ಗಿಡ ಮರ, ಪ್ರಾಣಿ, ಪಕ್ಷಿ, ರಂಗಬಾವ, ಮಾದಪ್ಪ ಇವೆ ಮುಂತಾದ ಕೆಲವು ಹಾಡುಗಳನ್ನು ಮಾತ್ರ ಹಾಡಬಲ್ಲರು. ಸುದೀರ್ಘವಾದ ಕಾವ್ಯವನ್ನು ಹಾಡುವುದು ಹಿರಿಯ ಕಿರಿಯರಾದಯಾಗಿ ಯಾರೊಬ್ಬರಿಗೂ ತಿಳಿದಿಲ್ಲ. ಅಪರೂಪಕ್ಕೆ ಬಿಳಿಗಿರಿರಂಗನ ಬೆಟ್ಟದ ಮಂಜಿಗುಂಡಿ ಪೋಡಿನ ಶ್ರೀ ದಂಬಡಿ ಕ್ಯಾತೇಗೌಡ ಎಂಬುವರು ಹಾಡುತ್ತಾರೆ ಎಂದು ತಿಳಿದುಬಂತು. ಕಲಾವಿದರನ್ನು ಸಂದರ್ಶನದ ಒಂದು ದಿನ ರಾತ್ರಿ ಹಾಡುಗಳನ್ನು ಹಾಡಿಸಿ ಖಚಿತ ಪಡಿಸಿಕೊಳ್ಳಲಾಯಿತು.

ಅನಂತರ ಪ್ರಮುಖ ಕಲಾವಿದರ ಜೊತೆಗೆ ಮತ್ತೆ ಇಬ್ಬರನ್ನು ಜೊತೆಗೂಡಿಸುವ ಕೆಲಸ ಮುಂದುವರಿಯಿತು. ಆಗ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಕೆಲವು ಪೋಡುಗಳಿಗೆ ಹೋಗಿ, ಸಹ ಕಲಾವಿದರಾದ ಶ್ರೀ ತಂಬೂರಿ ದಾಸೇಗೌಡ ಮತ್ತು ಶ್ರೀ ಸಪ್ಪೆ ಸಿದ್ದೇಗೌಡರನ್ನು ಕೂಡಿಸಿಕೊಂಡು ದಿನಾಂಕ ೨೦.೮.೨೦೦೦ರಂದು ಮೊದಲು ಹಂತದ ಸಂಗ್ರಹಕಾರ್ಯವೂ ಮುಗಿಯಿತು. ಅಂದರೆ ಕಾವ್ಯದ ಅರ್ಧಭಾಗವನ್ನು ಮಾತ್ರ ಧ್ವನಿಮುದ್ರಣ ಮಾಡಿಕೊಳ್ಳಲಾಯಿತು. ಕಾರಣಾಂತರಗಳಿಂದ ಆರು ತಿಂಗಳುವರೆಗೆ ಕಾವ್ಯ ಸಂಗ್ರಹ ಸಾಧ್ಯವಾಗಲೇ ಇಲ್ಲ. ಎರಡನೆಯ ಹಂತದ ಕಾವ್ಯ ಸಂಗ್ರಹಕಾರ್ಯ ಬಿಳಿಗಿರಿರಂಗನ ಬೆಟ್ಟದಲ್ಲೇ ಪ್ರಧಾನ ಕಲಾವಿದರಾದ ಶ್ರೀ ದಂಬಡಿ ಕ್ಯಾತೇಗೌಡ ಒಬ್ಬರಿಂದಲೇ ಮಾಡಲಾಯಿತು. ಕಾವ್ಯವನ್ನು ಎರಡು ಹಂತದಲ್ಲಿ ಸಂಗ್ರಹ ಮಾಡಿರುವ ಕಾರಣ ಕಾವ್ಯದ ಮಧ್ಯಭಾಗದಲ್ಲಿ ಪುನರುಕ್ತಿಯಾಗಿದೆ. ಆದರೆ ಕಲಾವಿದರು ಹಾಡಿರುವುದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಏಕೆಂದರೆ ಈ ಕಾವ್ಯ ಪ್ರಕಟವಾಗುವ ಮೊದಲೇ ಪ್ರಧಾನ ಕಲಾವಿದರು ಮರಣ ಹೊಂದಿದ ಕಾರಣ ಕಾವ್ಯವನ್ನು ಮತ್ತೊಮ್ಮೆ ಹಾಡಿಸಿ ಇದರಲ್ಲಿ ಕಂಡುಬರುವ ಪುರುಕ್ತಿ ಬಗ್ಗೆ ಆಗಲಿ ಅಥವಾ ಕಾವ್ಯದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಂಡು ಪ್ರಕಟಣೆ ಸಂದರ್ಭದಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ದೊರೆಯಲಿಲ್ಲ. ಈ ಎಲ್ಲಾ ಮಿತಿಗಳೊಂದಿಗೆ ಸೋಲಿಗರೇ ಹಾಡಿದ ಬಿಳಿಗಿರಿರಂಗಯ್ಯನ ಕಾವ್ಯವನ್ನು ಮೊದಲ ಬಾರಿಗೆ ಪ್ರಕಟಿಸಲಾಗುತ್ತಿದೆ ಹಾಗೂ ಸೋಲಿಗ ಬುಡಕಟ್ಟು ಸಮುದಾಯದ ಪರಿಚಯವನ್ನು ಓದುಗರ ಮಾಹಿತಿಗಾಗಿ ನೀಡಲಾಗಿದೆ. ಬಿಳಿಗಿರಿರಂಗಯ್ಯನ ಬಗ್ಗೆ ನಾಡಿನ ಕಲಾವಿದರು ಸುದೀರ್ಘವಾಗಿ ಹಾಡುತ್ತಾರೆ. ಅದನ್ನು ‘ಸೋಲುಗ್ರ ಕುಸ್ಮಾಲೆ ಕತೆ’ ಎನ್ನುವರು ಮೌಖಿಕ ಕಾವ್ಯಗಳು ಸಮುದಾಯದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಆದ್ದರಿಂದ ಆಯಾ ಸಮುದಾಯದ ಗಾಯಕರಿಂದಲೇ ಕಾವ್ಯವನ್ನು ಹಾಡಿಸಿ ಸಂಗ್ರಹಿಸುವುದರಿಮದ ಹಲವಾರು ಚಾರಿತ್ರಿಕ ಘಟನೆಗಳು ಪ್ರಥಮ ಮಾಹಿತಿಯಾಗಿ ದೊರೆಯುತ್ತವೆ. ಅಲ್ಲದೆ ಆ ಸಮುದಾಯದ ಧಾರ್ಮಿಕ, ಸಾಮಾಜಿಕ, ಹಾಗೂ ಹುಟ್ಟಿನಿಂದ ಸಾವಿನವರೆಗಿನ ಹಲವಾರು ಆಚರಣೆಗಳು ದಾಖಲಾಗುತ್ತವೆ. ಜೊತೆಗೆ ಅವರಲ್ಲಿರುವ ಸಾಂಸ್ಕೃತಿಕ ಅನನ್ಯತೆಯನ್ನು ತಿಳಿದುಕೊಳ್ಳುವುದು ಸಾಧ್ಯವಿದೆ. ಒಟ್ಟಾರೆ ಭಾರತದ ಪ್ರತಿಯೊಂದು ಬುಡಕಟ್ಟು ಸಮುದಾಯಗಳ ಚರಿತ್ರೆಯ ಪುನರ್ ರಚನೆಯ ದೃಷ್ಟಿಯಿಂದ ಇಂತಹ ಮೌಖಿಕ ಮಾಹಾಕಾವ್ಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದಲೇ ಆಧುನಿಕ ಇತಿಹಾಸತಜ್ಞರು ಇಂದು ಒಂದೊಂದು ಸಮುದಾಯಗಳ ಬಗ್ಗೆ ಪ್ರಕಟವಾಗಿರುವ ಮೌಖಿಕ ಕಾವ್ಯ ಮತ್ತು ಸಾಹಿತ್ಯವನ್ನು ಪರಿಗಣಿಸುವ ಮನಸ್ಸು ಮಾಡಿದ್ದಾರೆ. ಹಾಗೂ ಅವುಗಳ ಅಧ್ಯಯನದಲ್ಲಿ ತೊಡಗಿರುವುದು ಭಾರತದ ಇತಿಹಾಸವನ್ನು ಪುನರ್ ರಚಿಸಲು ನಾಂದಿ ಎಂದರೆ ತಪ್ಪಲ್ಲ.

ಪ್ರತಿಯೊಂದು ಕೆಲಸವೂ ಪರಿಪೂರ್ಣ ಆಗಿರಬೇಕೆಂಬುದು ಎಲ್ಲರ ಬಯಕೆ. ಆದರೆ ಅನೇಕ ಮಿತಿಗಳಿಗೆ ಒಳಗಾಗಿ ದೋಷಗಳು ಉಳಿದುಕೊಳ್ಳುವುದುಂಟು. ಹಾಗೆಯೇ ಈ ಕಾವ್ಯದಲ್ಲಿ ಅರ್ಥಸೂಚಿಯ ಅನಿವಾರ್ಯತೆಯನ್ನು ಅರಿತು ನೀಡಿದೆಯಾದರೂ ಅಕಾರಾದಿ ಮಾಡಲು ಸಾಧ್ಯವಾಗಿರುವುದಿಲ್ಲ.