ಮುಂದುವರಿದು ಸೋಲಿಗರು ಹಾಡಿದ ಬಿಳಿಗಿರಿರಂಗನ ಕಾವ್ಯವನ್ನು ಕುರಿತು ಚರ್ಚಿಸಲಾಗಿದೆ. ಹಿಂದೆ ಹೇಳಿದಂತೆ ಸೋಲಿಗರು, ದ್ರಾವಿಡ ಮೂಲದವರು. ಈ ನೆಲಕ್ಕೆ ಪ್ರಾಚೀನರು ಹೌದು. ಕಾಲಾಂತರದಲ್ಲಿ ಶೈವ ಪಂಥಕ್ಕೆ ಪ್ರಭಾವಿತರಾದುದು ಉಂಟು. ಇದರ ಮಧ್ಯ ವೈಷ್ಣವ ಪಂಥವು ಕೂಡ ಈ ಅರಣ್ಯವಾಸಿ ಸೋಲಿಗರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದು ಸಾಮಾನ್ಯ ಸಂಗತಿಯಲ್ಲ. ಇದಕ್ಕೊಂದು ಐತಿಹಾಸಿಕ ಕಾರಣ ಇದ್ದಿರಲೇ ಬೇಕು ಎಂದು ಪರಿಶೀಲಿಸಿದಾಗ ತಿಳಿದು ಬಂದ ಸಂಗತಿ ಈ ರೀತಿ ಇದೆ. “Ramanujacharya, the doyen seen of the Sri Vaishnavas who lived in the early 1200’s who had to run away from hims perseverant and virify a survival of sorts for himself and his many followers in his native Madras State, had soughts sanctuary in the hill city of Melkote, in the nieghbouring Mysore State, and even gone to establish new Srivaishnava fellowship there.” (The Quartery journal of the Mythic society, July-September 1997- Page.4)

ಹನ್ನೆರಡನೇ ಶತಮಾನದ ಆರಂಭದಲ್ಲಿ ಮದ್ರಾಸ್‌ ಪ್ರಾಂತ್ಯದ ರಾಜನಾಗಿದ್ದ ಚೋಳರ ಆಳ್ವಿಕೆ ಸಂದರ್ಭದಲ್ಲಿ ರಾಮಾನುಜಾಚಾರ್ಯರು ಮತ ಸಂಪ್ರದಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದ ಕಾರಣಕ್ಕಾಗಿ ತಮಿಳುನಾಡಿನಿಂದ ಗಡಿಪಾರು ಮಾಡಲಾಗುತ್ತದೆ. ಆಗ ತಮ್ಮ ಅನುಯಾಯಿಗಳನ್ನು ಕರೆದುಕೊಂಡು ಜೀವ ಉಳಿಸಿಕೊಳ್ಳುವ ಸಲುವಾಗಿ ಆಶ್ರಯವನ್ನು ಅರಸಿ ಕರ್ನಾಟಕದ ಕಡೆಗೆ ಬರುತ್ತಾರೆ. ತಮಿಳುನಾಡಿನಿಂದ ಬಹಳ ಸಮೀಪದ ಹಾದಿಯಲ್ಲಿ ಚಾಮರಾಜನಗರಕ್ಕೆ ಅರಣ್ಯದ ನಡುವಿನಿಂದ ಬಂದು ಅಲ್ಲಿದ್ದ ಬುಡಕಟ್ಟು ಸಮುದಾಯಗಳ ನಡುವೆ ತಮ್ಮ ಮತ ಪ್ರಚಾರ ಮುಂದುವರಿಸಿ, ಈಗಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ವಲ್ಪಕಾಲ ಆಶ್ರಯವನ್ನು ಪಡೆಯುತ್ತಾರೆ. ಆ ಸಂದರ್ಭದಲ್ಲಿ ಸೋಲಿಗರು ವೈಷ್ಣವ ಮತಕ್ಕೆ ಪ್ರಭಾವಿತರಾಗಿರುತ್ತಾರೆ. ರಾಮಾನುಜಾಚಾರ್ಯರ ಜೊತೆಯಲ್ಲಿ ಬಂದಿದ್ದ ಅನುಯಾಯಿಗಳಲ್ಲಿ ಒಬ್ಬಿಬ್ಬರು ಅಲ್ಲೆ ನೆಲೆ ನಿಂತು ಮತ ಪ್ರಚಾರದ ಕಾರ್ಯದಲ್ಲಿ ನಿರತನಾಗಿರುವ ಸಾಧ್ಯತೆ ಇದೆ.

ಪ್ರಸ್ತುತ ಕಾವ್ಯದಲ್ಲಿ ಬರುವ ಆರಂಭದ ಪಾತ್ರಗಳನ್ನು ಗಮನಿಸಿದಾಗ ಸಿಂಗ ಮತ್ತು ರಂಗ ಎಂಬ ಅಣ್ಣತಮ್ಮಂದಿರು ಇರುತ್ತಾರೆ. ಅಣ್ಣನಾದ ಸಿಂಗನು ಸ್ನಾನ ಮಾಡಬೇಕು ಅದಕ್ಕಾಗಿ ಸೀಗೆಕಾಯಿ ಬೇಕು ಎಂದು ತಮ್ಮನಿಗೆ ಹೇಳುತ್ತಾನೆ. ತಮ್ಮನಾದ ರಂಗನು ಅಣ್ಣ ಸೀಗೆಕಾಯಿ ತರಬೇಕಾದರೆ ಬೆಳ್ಳಿಕಲ್ಲ ಬೆಟ್ಟಕ್ಕೆ (ಬಿಳಿಗಿರಿರಂಗನ ಬೆಟ್ಟವನ್ನು ಗ್ರಾಮೀಣ ಪ್ರದೇಶಗಳಲ್ಲಿ ಬಿಳಿಕಲ್ಲ ಬೆಟ್ಟ ಎಂಬುದಾಗಿ ಕರೆಯುವುದುಂಟು) ಹೋಗಬೇಕು. ಅಲ್ಲಿಗೆ ಹೋದರೆ ಬಿಳಿ ಸೀಗೆಕಾಯಿ ಸಿಗುತ್ತೆ ಎಂದು ಹೊರಡುತ್ತಾನೆ. ತಮ್ಮನು ಸೀಗೆಕಾಯಿ ತರುವನೆಂದು ಅಣ್ಣ ತಲಕಾಡಿನಲ್ಲಿ ಕಾಯುತ್ತಿರುತ್ತಾನೆ. ಆದರೆ ತಮ್ಮನಾದ ರಂಗ ಬಿಲಿಕಲ್ಲ ಬೆಟ್ಟಕ್ಕೆ ಬರುತ್ತಾನೆ. ವೈಷ್ಣವ ಪಂಥದ ಅನುಯಾಯಿಯಾದ ಈತ ತನ್ನ ಬಿರುದು ಬಾವಳಿಗಳೊಂದಿಗೆ ಬಂದು ದಾಸಯ್ಯನ ಹುಂಡಿಯಲ್ಲಿ ಒಕ್ಕಲಿಗ ಗಂಗಡಿಕಾರ ಗೌಡನ ಮನೆಯಲ್ಲಿ ವಿಶೇಷ ಕಾರ್ಯದನಿಮಿತ್ತ ಊಟದ ವ್ಯವಸ್ಥೆ ಇರುತ್ತದೆ. ಅವರ ಪದ್ಧತಿಯಂತೆ ಮನೆಯ ಹೆಣ್ಣು ಮಕ್ಕಳ ಊಟ ಮುಗಿಯದೆ ಹೊರಗಿನವರಿಗೆ ಊಟ ನೀಡುವುದಿಲ್ಲ. ಅದನ್ನರಿಯದ ರಂಗದಾಸಯ್ಯ ಒಳಗೆ ನುಗ್ಗುತ್ತಿರುತ್ತಾನೆ. ಆಗ ಅವರು ದಾಸಯ್ಯನನ್ನು ಎಳೆದು ಹೊರಗೆ ಬಿಟ್ಟು ಬಿಡುತ್ತಾರೆ. ಅವಮಾನಿತನಾದ ದಾಸಯ್ಯ “ದಾಸಯ್ನುಂಡಿ ಹಾಳಾಗ್ಲಿ, ಗಂಗವಾಡಿ ಉದ್ಧಾರವಾಗ್ಲಿ” ಎಂದು ಶಾಪವನ್ನು ನೀಡಿ ಮುಂದೆ ಹೋಗುತ್ತಾನೆ. ಹೀಗೆ ಅನೇಕ ಊರುಗಳನ್ನು ದಾಟಿ ಬಿಳಿಕಲ್ಲ ಬೆಟ್ಟಕ್ಕೆ ಬರುತ್ತಾನೆ. ಇದನ್ನೆ ಈ ಕಾವ್ಯದಲ್ಲಿ ಮೇಲುಗಿರಿ ಎಂದು ಕರೆದಿದ್ದಾರೆ.

ಕಾವ್ಯದ ಒಂದು ಪ್ರಸಂಗವು ಮೊದಲೆ ಇದ್ದ ಶೈವಧರ್ಮವನ್ನು ಒಕ್ಕಲೆಬ್ಬಿಸಿ ವೈಷ್ಣವ ಧರ್ಮವನ್ನು ಪ್ರತಿಷ್ಠಾಪಿಸುವ ಘಟನೆಯನ್ನು ಸಾಂಕೇತಿಕವಾಗಿ ವರ್ಣಿಸಲಾಗಿದೆ. ಮೊದಲಿಗೆ ಬುಡಕಟ್ಟು ನಾಯಕನಾಗಿ ಆನಂತರ ಶೈವನಾದ ಈಶ್ವರ ಬಿಳಿಕಲ್ಲ ಬೆಟ್ಟದಲಿದ್ದರುತ್ತಾನೆ. ವೈಷ್ಣವ ಧರ್ಮದ ದಾಸಯ್ಯ ಈಶ್ವರನನ್ನು ಉದ್ದೇಶಿಸಿ ನೀವು ಆರಪ್ಪ ಎಂದು ಕೇಳುತ್ತಾನೆ. ನಾನು ಈಶ್ವರನು ಈ ಬೆಟ್ಟ ಹುಟ್ಟಿದ್ದಾಗ ಹುಟ್ಟಿದ್ದೇವೆ. ಅತ್ತಿಮರದ ಒಳಗೆ ನೆಲೆಗೊಂಡಿದ್ದೇವೆ ಎಂದು ಈಶ್ವರ ಉತ್ತರಿಸುತ್ತಾನೆ. ನೀವು ಏನ್ ಕೆಲ್ಸ ಮಾಡ್ತ್ಯೀರಿ ಎಂದು ಕೇಳಿದ ತನ್ನ ಅವತಾರವನ್ನು ವರ್ಣಿಸಿ ಹುಲ್ಲೆ ಚರ್ಮ ಉಟ್ಕೊಂಡಿದ್ದೇನೆ. ಹುಲಿ ಚರ್ಮ ಹಾಸಿಕೊಂಡಿದ್ದೇನೆ. ತ್ರಿಶೂಲ ಇಟ್ಟಿದ್ದೇನೆ, ಶಂಕು ಜೋಳಿಗೆ ಇದೆ ಮನೆ ಒಳಗೆ ನಿಶಬ್ಧ ಅಲ್ಲಿ ನಾನಿದ್ದೇನೆ ಎಂದು ಈಶ್ವರ ಹೇಳುತ್ತಾನೆ. ಆಗ ದಾಸಯ್ಯ ನನಗೆ ಸ್ವಲ್ಪ ಜಾಗ ಕೊಡಪ್ಪ ಎಂದು ಕೇಳುತ್ತಾನೆ. ನಾನು ಇರುವುದು ಹುಟ್ಟು ಬಂಡೆ ಮೇಲೆ ನಿನಗೆಲ್ಲಿ ಜಾಗ ಕೊಡಲಿ ದಾಸಯ್ಯ ಎಂದು ಹೇಳಿದರೂ, ನಾನು ನೇಮಕೊಂಡಿದ್ದೇನೆ. ಜಾಗಟೆಯನ್ನಾದರೂ ಇಡಲು ಸ್ವಲ್ಪಜಾಗ ಕೊಡಪ್ಪ ಎಂದು ಬೇಡುತ್ತಾನೆ. ಈಶ್ವರ ಉದಾರಿ ಇಟ್ಟುಕೋ ಎಂದು ಹೇಳಿಬಿಡುತ್ತಾನೆ. ಇದ್ದನ್ನೆ ನೆಪಮಾಡಿಕೊಂಡು ದಾಸಯ್ಯ ಶಂಕವನ್ನು ಇಡುತ್ತಾನೆ. ಆಗ ಅದು ಬಾನಿನ ಆಗಲದಷ್ಟು ವಿಸ್ತರಿಸಿ, ಭೂಮಿ ಗಾತ್ರದ ಜಾಗಟೆ ತಿರುಗಿಬಿಡುತ್ತದೆ. ಇದನ್ನು ಕಂಡು ಕಂತೆ ಬೊಂತೆಯನ್ನೆಲ್ಲಾ ತೆಗೆದುಕೊಂಡು ಈಶ್ವರ ಕಡೆಯ ಕೋಡಿ ಹತ್ತಿರ ಹೊರಟು ಹೋಗುತ್ತಾನೆ. ಆಗ ದಾಸಯ್ಯ ತನ್ನ ಬುದ್ಧಿಯಿಂದ ಈಶ್ವರನನ್ನು ಮೂಲಸ್ಥಾನದಿಂದ ಓಡಿಸಿಬಿಡುತ್ತಾನೆ. ಹಾಗೂ ನಿನಗೆ ಒಂದು ಪೂಜೆಯನ್ನು ಕೊಡಿಸುತ್ತೇನೆ ಎಂದು ವಾಗ್ಧಾನ ಮಾಡುತ್ತಾನೆ. ಕಡೆ ಕೋಡಿಗೆ (ಬೆಟ್ಟದ ಅಂಚು) ಹೋಗಿ ಕಪ್ಪು ಬಟ್ಟೆಯನ್ನು ಧರಿಸಿಕೊಂಡು ಈಶ್ವರ ಮೂರ್ತವಾಗುತ್ತಾನೆ.

ಈಶ್ವರನನ್ನು ಓಡಿಸಿ ತಾನು ನೆಲೆಗೊಂಡ ದಾಸಯ್ಯ ‘ಕಾ’ ಎಂಬ ಕಾಗೆ ಶಬ್ಧವಿಲ್ಲ. ‘ಗೂ’ ಎಂಬ ಗೂಗೆ ಶಬ್ಧವಿಲ್ಲ ಇಂಥ ಜಾಗದಲ್ಲಿ ಯಾರಿದ್ದರು? ಎಂದು ಒಮ್ಮೆ ಹೊರಗೆ ಬಂದು ನೋಡುತ್ತಾನೆ. ಸೋಲಿಗರ ಬೊಮ್ಮೆಗೌಡ್ನ ಏಳು ಮಂದಿ ಹೆಣ್ಣು ಮಕ್ಕಳು ಹೆಬ್ಬಿದಿರಿನ ಬೊಂಬುಗಳನ್ನು ತೆಗೆದುಕೊಂಡು ನೀರಿಗೆ ಹೋಗ್ತಾ ಇರುತ್ತಾರೆ. ಇದನ್ನು ಕಂಡು ದಾಸಯ್ಯ ಅವರ ಬಳಿ ಹೋಗುತ್ತಾನೆ. ಆಗ ಅವರು ಊರಿನಿಂದ ದಾಸಪ್ಪ ಬಂದಿದ್ದಾನೆ. ತೇರು, ತೆಪ್ಪ, ಹರಿಸೇವೆ ಯಾವತ್ತು ಎಂದು ತಿಳಿದುಕೊಳ್ಳುವ ಸಲುವಾಗಿ ದಾಸಪ್ಪನನ್ನು ಕೇಳಲು ಮುಂದಾಗುತ್ತಾರೆ. ದಾಸಪ್ಪ ಈ ಅವಕಾಶವನ್ನು ಬಳಿಸಿಕೊಂಡು ಏಳು ಜನ ಅಕ್ಕ ತಂಗಿಯರು ನನ್ನ ಎಡಬುಜ, ಬಲಭುಜ ಹಿಡಿದುಕೊಂಡು, ಕುಸ್ಮದೇವಿ ಬಂದು ನನ್ನ ಗಡ್ಡ ಹಿಡಿದುಕೊಂಡು ನನ್ನ ಗಡ್ಡದಾಗೆ ಇದೆಯಲ್ಲ ರಂಗ ಬಾವ, ತೇರು ತೆಪ್ಪ ಯಾವತ್ತು ಎಂದು ಕೇಳಬೇಕು. ಆಗ ನಾನು ತೇರು ತೆಪ್ಪವ ಹೇಳುತ್ತೇನೆ ಎಂದು ಪುಸಲಾಯಿಸುತ್ತಾನೆ. ವಯಸ್ಸಾದ ಅಜ್ಜ ಅಲ್ಲವೆ ಗಡ್ಡ ಹಿಡಿದು ಕೊಂಡರೇನು? ಭುಜ ಹಿಡಿದುಕೊಂಡರೇನು? ನಮ್ಮ ಅಜ್ಜನಂತಲ್ಲವೆ ಎಂದು ಭಾವಿಸಿ ಕುಸ್ಮದೇವಿ ಮತ್ತು ಆರು ಜನ ಅಕ್ಕತಂಗಿಯರು ದಾಸಪ್ಪನ ಭುಜ, ಗಡ್ಡ ಹಿಡಿದುಕೊಂಡಾಗ ಆತನಿಗೆ ತುಂಬಾ ಖುಷಿಯಾಗುತ್ತದೆ. ತೇರು ತೆಪ್ಪದ ವಾರವನ್ನು ತಿಳಿಸಿ ಕಳುಹಿಸುತ್ತಾನೆ. ಈ ದಾಸಪ್ಪನಿಗೆ ಸೋಲಿಗರ ಬೊಮ್ಮೆಗೌಡನ ಕೊನೆಯ ಮಗಳಾದ ಕುಸ್ಮದೇವಿಯ ಮೇಲೆ ಮನಸ್ಸಾಗಿ ಆಕೆಯನ್ನು ಮದುವೆಯಾಗಬೇಕೆಂದು ದಾಸಯ್ಯ ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳುತ್ತಾನೆ.

ಈ ದಾಸಪ್ಪ ಯಾರು ಅಂದರೆ ನಾರಾಯಣ. ತನ್ನ ಇಬ್ಬರು ಮಡದಿಯರನ್ನು ಮೇಲುಕೋಟೆಯಲ್ಲಿ ಬಿಟ್ಟು ಬಂದಿರುತ್ತಾನೆ. ಬಹುದಿನಗಳಾದರು ಮನೆಗೆ ಹೋಗಿರುವುದಿಲ್ಲ. ಅದಕ್ಕಾಗಿ ಆತನಿಗೆ ಇಬ್ಬರು ಮಡದಿಯರು ಮನವಿ ಮಾಡಿಕೊಳ್ಳುತ್ತಾರೆ. ಇಂದು ನಮ್ಮ ಮನೆಗೆ ಪಟ್ಟದ ಪಾರ್ವತಿ, ಬೆಟ್ಟದ ಚಾಮುಂಡಿ, ಸೋಸಲೆ ಹೊನ್ನಾದೇವಿ, ಮುಡುಕುತೊರೆ ಮಲ್ಲಯ್ಯ ಆತನ ಮಡದಿ ಗಂಗಾದೇವಿ ಅಲಂಕಾರ ಮಾಡಿಕೊಂಡು ತಮ್ಮ ತಮ್ಮ ಗಂಡಂದಿರ ಜೊತೆ ಬರುತ್ತಿದ್ದಾರೆ, ನೀವು ಇರಬೇಕು. ಅದಕ್ಕಾಗಿ ಹೂವು ತರಬೇಕು ಎಂದು ನಾರಾಯಣ ಅವರನ್ನು ಮಡದಿಯರು ಕೇಳುತ್ತಾರೆ. ಆಗ ಅಯ್ಯೋ ಮಡದಿಯರೇ ನಾನು ಜಗತ್ತಿನ ಇರುವೆ ಒಂಬತ್ತು ಕೋಟಿ ಜೀವರಾಶಿಗಳಿಗೆ ಅನ್ನದಾನ ನೀಡಿ ಬರಲು ಹೋಗಿದ್ದೆ ಎಂದು ಸಮಜಾಯಿಸಿ ಹೇಳುತ್ತಾನೆ.

ಆಗ ಮಡದಿಯರು ಗಂಡನಿಗೆ ಹರಸಿ ವೀಳ್ಯವ ಕೊಡುತ್ತಾರೆ. ನಾರಾಯಣ ನಾನು ನಿಮಗೆ ಜಾಲದ ಹೂವು, ತುರುಗು ಮಲ್ಲಿಗೆ ತರುತ್ತೇನೆ ಎಂದು ಖುಷಿ ಪಡಿಸುತ್ತಾನೆ. ಶ್ರೀ ತುಳಸಮ್ಮ ಮತ್ತು ಶ್ರೀ ಲಕ್ಷ್ಮೀದೇವಿಯರಿಗೆ ಬಹಳ ಸಂತೋಷವಾಗಿ ಗಂಡನನ್ನು ಹರಸಿ ವೀಳ್ಯವನ್ನು ಕೊಟ್ಟಾಗ ನಾರಾಯಣ ಹುಸಿನಗೆ ನಗುತ್ತಿದ್ದಾನೆ. ಏಯ್‌ ಮಡಿದಿಯರೇ, ಎಂದಾಗ ಏನಪ್ಪ ಯಜಮಾನರೇ ಎಂದ ಕೇಳುತ್ತಾರೆ ಹಾಲು ಕರೆಯಲು ಒಬ್ಬಳನ್ನು ತಂದೆ, ಹಾಲು ಕಾಯಿಸಲು ಇನ್ನೊಬ್ಬಳನ್ನು ತಂದೆ, ಈಗ ಬೆಣ್ಣೆಯನ್ನು ಕಡೆಯಲು ಸೋಲಿಗರ ಬೊಮ್ಮೆಗೌಡನ ಮಗಳನ್ನು ತರುತ್ತೇನೆ. ಅವಳನ್ನು ತರದೆ ಹೋದರೆ ನಾನು “ತೇರ ತಡಿಗ ತಿಮ್ಮಯ್ಯನಲ್ಲ, ಮೇಲುಗಿರಿಗೆ ರಂಗಯ್ಯನಲ್ಲ, ಜಗತ್ತಿಗೆ ದೊಡ್ಡವನು ನಾನಲ್ಲ” ಎಂದು ಶಪಥ ಮಾಡುತ್ತಾನೆ. ಮಡದಿಯರು ತುಂಬಾ ಚಿಂತಾಕ್ರಾಂತರಾಗುತ್ತಾರೆ. ಈ ಹಾಳಾದ ದಾಸಯ್ಯನಿಗೆ ಅರಿಸಿನಕೊಟ್ಟು ನಾವು ಮೋಸ ಹೋಗಿಬಿಟ್ಟೆವು ಎಂದು ತಮ್ಮ ಅದೃಷ್ಟವನ್ನು ಜರಿಯುತ್ತಾರೆ.

ಈ ವಿಚಾರವನ್ನು ಮಡಿದಿಯರಿಗೆ ತಿಳಿಸಿದ ತಕ್ಷಣ ನಾರಾಯಣ ಸೋಲಿಗರ ಬೊಮ್ಮೆ ಗೌಡನ ಪೋಡಿಗೆ ಹೊರಟು ಹೋಗುತ್ತಾನೆ. ಬೊಮ್ಮೆ ಗೌಡ ತುಂಬಾ ಹಳೆ ಮನುಷ್ಯ ಎಡಗಡೆ ಮೂಲೆ ಚೀಲ ಹಾಕಿಕೊಂಡು , ಬಲಗಡೆ ಗೆಜ್ಜೆದೊಣ್ಣೆ ಇಟ್ಟುಕೊಂಡು ತನ್ನ ಗುಡಿಸಲ ಮುಂದೆ ಕುಳಿತುಕೊಂಡಿದ್ದಾನೆ. ಅಲ್ಲಿಗೆ ಹೋದ ನಾರಾಯಣ ಜಾಗವನ್ನು ಕೇಳಿದ್ದಾನೆ. ಆತ ದಾಸಯ್ಯನ ಕುಲ, ನೆಲ, ಜಾತಿ ಎಲ್ಲವನ್ನು ವಿಚಾರಿಸುತ್ತಾನೆ. ಅದಕ್ಕೆ “ದಾಸಯ್ಯನಿಗೆ ಒಂದು ಕುಲ ಉಂಟಾ? ಮತ ಉಂಟಾ? ಕೊಕ್ಕರಗೆ ಬಂದು ಕೆರೆ ಉಂಟಾ? ದಾಸರಿಗೆ ಒಂದು ಊರುಂಟಾ? ದಾರಿ ತಪ್ಪಿ ಬಂದೀನಪ್ಪ” ಎನ್ನುತ್ತಾನೆ. ಏನು ಅರಿಯದ ಬೊಮ್ಮೆ ಗೌಡ ದಾಸಯ್ಯ ಹೇಳಿದ್ದೆಲ್ಲವನ್ನು ನಂಬಿ ದಾಸಯ್ಯನಿಗೆ ಸ್ಪಲ್ಪ ಊಟ ಕೊಡಿ ಎಂದು ಹೇಳುತ್ತಾನೆ. ಊಟ ಆದ ಬಳಿಕ ಮಲಗಲು ಜಾಗ ನೋಡ್ತಾ ಇರುತ್ತಾನೆ ದಾಸಪ್ಪ. ಆಗ ಬೊಮ್ಮೆ ಗೌಡ ಕೋಳಿ ಗೂಡಿಗೆ ಹೋಗಿ ಮಲಗಲು ದಾಸಪ್ಪನಿಗೆ ಸೂಚಿಸುತ್ತಾನೆ. ದಾಸಯ್ಯ ಶಂಕು ಜಾಗಟೆಯನ್ನು ಇಟ್ಟ ತಕ್ಷಣ ಕೋಳಿಗಳಿಗೆಲ್ಲ ಕೂಗಲು ಆರಂಭಿಸುತ್ತವೆ. ಅಲ್ಲಿಂದ ಪಕ್ಕದ ಬಂಡಿಗೂಡಿನಲ್ಲಿ ಬೆಂಕಿಹಚ್ಚಿಕೊಂಡು ಮಲಗಲು ಹೇಳುತ್ತಾರೆ. ದಾಸಯ್ಯನಿಗೆ ಅಲ್ಲಿ ಮಲಗಲು ಇಷ್ಟವಿಲ್ಲ ಹೇಗಾದರೂ ಮಾಡಿ ಕುಸ್ಮದೇವಿ ಮಲಗಿರುವಲ್ಲಿ ಹೋಗಬೇಕೆಂದು ಒಂದು ಉಪಾಯ ಮಾಡುತ್ತಾನೆ. ತನ್ನ ಯೋಗ ಶಕ್ತಿಯಿಂದ ದಾಸಯ್ಯ ಮಳೆರಾಯನಿಗೆ ಸೂಚನೆ ಕೊಟ್ಟು ಎಂಟು ದಿಕ್ಕುಗಳಿಂದಲೂ ಕಾರು ಮಳೆಯನ್ನು ಕರೆಯುತ್ತಾನೆ. ಬೊಮ್ಮೆ ಗೌಡ ಈಸ್ಥಿತಿಯನ್ನು ಕಂಡು, ದಾಸಯ್ಯ ಸತ್ತೋಗುತ್ತಾನೆ ಎಂದು ಭಾವಿಸಿ ಕಕ್ಕೆಸೊಲ್ಲಿನ ಗುಳ್ಳಲ್ಲಿ ಮಲಗಿದ್ದ ಕುಸ್ಮದೇವಿಯ ಬೆಳ್ಳಿಸೊಪ್ಪಿನ ಮಂಚದ ಕೆಳಗೆ ಮಲಗಲು ಹೇಳುತ್ತಾನೆ. ಆಗ ಕುಸ್ಮದೇವಿ ದಾಸಪ್ಪನನ್ನು ನೋಡುತ್ತಾಳೆ ಚಂದ್ರ ಸೂರ್ಯರಂತೆ ಹೊಳೆಯುತ್ತಿದ್ದಾನೆ. ನಮ್ಮ ಸೋಲಿಗರ ಜಾತಿಯಲ್ಲಿ ಈ ತರದ ಹುಡುಗರು ಇಲ್ಲವಲ್ಲ ಎಂದು ಹೇಳಿ ಆತನನ್ನು ತನ್ನ ಮಂಚಕ್ಕೆ ಆಹ್ವಾನಿಸುತ್ತಾಳೆ. ಕೋಳಿಕೂಗಿ ಲೋಕವೆಲ್ಲಾ ಬೆಳಕಾಗಿರುವುದೆ ಗೊತ್ತಾಗಲಿಲ್ಲ. ಅಷ್ಟರೊಳಗೆ ದಾಸಪ್ಪ ಎದ್ದು ಹೊರಟು ಹೋಗಿರುತ್ತಾರೆ.

ಮರುದಿನ ದಾಸಯ್ಯ ಮತ್ತೊಂದು ರೂಪದಲ್ಲಿ ಕಾಣಿಸಿಕೊಂಡು ಬೊಮ್ಮೆ ಗೌಡ ಹೆಣ್ಣು ಮಕ್ಕಳನ್ನು ಕೈಬೀಸಿ ಕರೆಯುತ್ತಿದ್ದಾನೆ. ಆದರೆ ಅವರು ಯಾರೋ ಹಿಟ್ಟು ಕಾಣದೆ ಬಂದಿದ್ದಾನೆ ಎಂದು ಮುಂದೆ ಹೋಗುತ್ತಾರೆ. ಮತ್ತೆ ಮತ್ತೆ ಈ ದಾಸಪ್ಪ ಮುಂದೆ ಹೋಗುತ್ತಾನೆ. ಬೊಮ್ಮೆ ಗೌಡನ ಮಕ್ಕಳು ರಂಗಪ್ಪನ ತೇರು ಮುಗಿಸಿಕೊಂಡು ಹೋಗ್ತ ಇದ್ದಾರೆ. ಆಗ ಮೈಯಲ್ಲಾ ಕಜ್ಜಿ ಬರಿಸಿಕೊಂಡು ದಾಸಪ್ಪ ಬರುತ್ತಾನೆ. ಕುಸ್ಮದೇವಿಯ ಅಕ್ಕಂದಿರು ಕೈಯಲ್ಲಿ ಕಾಸನ್ನು ಇಟ್ಟು ದಾಸಯ್ಯನಿಗೆ ಕೊಡಲು ಹೇಳುತ್ತಾರೆ. ಈಕೆಯಾದರೋ ಬಟ್ಟೆಯಿಂದ ಮೂಗನ್ನು ಮುಚ್ಚಿಕೊಂಡು ಬಂದಿಲ್ಲ ನಿನಗಾಗಿ ಬಂದಿದ್ದೇನೆ ಹೆಣ್ಣೆ ಎಂದು ಹೇಳುತ್ತಾನೆ. “ಏಯ್ ದಾಸಯ್ಯ ನೀನು ಯಾವ ಕುಲದವನು? ಯಾವ ಜಾತಿಯವನು? ಯಾವ ವಂಸದವನು?” ಎಂದು ಕೇಳುತ್ತಾಳೆ. “ನಾನು ಕ್ಸತ್ರಿಕುಲ, ಸೂರ್ಯವಂಸ, ನಾರಾಯಣ ಕುಲ” ಎಂದು ಉತ್ತರಿಸುತ್ತಾ ಸೋಲಿಗರ ಮಕ್ಕಳು ನನಗೆ ಬಾಮೈಕ ಎನ್ನುತ್ತಾನೆ. ಈ ಮಾತನ್ನು ಕೇಳಿ ಬೊಮ್ಮೆ ಗೌಡನ ಮಕ್ಕಳಿಗೆ ಸಿಟ್ಟು ಬಂದು ದಾಸಯ್ಯನನ್ನು ಎಚ್ಚರಿಸುತ್ತಾರೆ. ಈ ಮಾತನ್ನ ನಮ್ಮ ಅಣ್ಣ ಕೇಳಿದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎನ್ನುತ್ತಾರೆ. ನಿಮ್ಮ ಅಣ್ಣಂದಿರು ನನಗೆ ಬಾಮೈಕ ಎಂದು ಮತ್ತೆ ಮತ್ತೆ ಹೇಳಿದಾಗ ಈ ದಾಸಯ್ಯನ ಕಾಟ ತಪ್ಪಿಸಿಕೊಳ್ಳಲು ತಮ್ಮ ಕುಲ ದೇವರಾದ ರಂಗಪ್ಪನಿಗೆ ಹರಕೆ ಮಾಡಿಕೊಂಡಾಗ ದಾಸಯ್ಯ ಕಣ್ಮರೆಯಾಗುತ್ತಾನೆ.

ಬೊಮ್ಮೆಗೌಡನ ಮಕ್ಕಳು ತಮ್ಮ ದೇವರ ಮಹಿಮೆಯನ್ನು ಹೊಗಳುತ್ತ ಮುಂದೆ ಸ್ವಲ್ಪ ದೂರ ಹೋಗುತ್ತಾರೆ. ಅಲ್ಲೊಬ್ಬ ದಾಸಯ್ಯ ಕಾಣಿಸಿಕೊಳ್ಳುತ್ತಾನೆ. ಓಹೋ ಇಲ್ಲೊಬ್ಬ ದಾಸಯ್ಯ ಸತ್ತೋಗಿದ್ದಾನೆ. ಜಾತ್ರೆಯಲ್ಲಿ ದೊಡ್ಡ ರೋಗ ಬಂದು ದಾಸಯ್ಯಗಳೆಲ್ಲ ಸತ್ತೋಗಿರಬಹುದು ಎಂದು ನೋಡುವಷ್ಟರಲ್ಲಿ ಕಾಡು ಪ್ರಾಣಿಗಳು ಬಂದುದರಿಂದ ಓಡಿ ಹೋಗುತ್ತರೆ. ಆಗ ಅಲ್ಲೊಬ್ಬ ದಾಸಯ್ಯ ಪ್ರತ್ಯಕ್ಷನಾಗಿ ಸೋಲಿಗರ ಬೊಮ್ಮೆಗೌಡನ ಮಕ್ಕಳು ಬಹಳ ಸತ್ಯವಂತರು ದರ್ಮವುಳ್ಳ ಜನ ಎಂದು ಹೇಳ್ತಾ ಇದ್ದರು ಅದಕ್ಕೆ ಬಂದೀನವ್ವ ಸ್ವಲ್ಪ ಪೋಡಿಗೆ ಸೇರಿಸಿ ಬಿಡಿರವ್ವ ಎಂದು ಬೇಡುತ್ತಾನೆ. ದಾಸಯ್ಯ ಪೋಡಿಗೆ ಬಂದಾಗ ಬೊಮ್ಮೆಗೌಡ ಈ ದಾಸಯ್ಯನಿಗೆ ಊಟ ಕೊಟ್ಟು ಕರೆದು ಕೊಂಡೋಗಿ ಕೃಷ್ಣನ ಕಟ್ಟೆಯ ಹತ್ತಿರ ಬಿಟ್ಟು ಬನ್ನಿ ಎಂದು ಹೇಳುತ್ತಾನೆ ಬೊಮ್ಮೆಗೌಡನ ಮಕ್ಕಳು ಅರಿಕೋಲನ್ನು ತೆಗೆದುಗೊಂಡು ಗೆಡ್ಡೆ ಗೆಣಸು ತರಲು ಹೊರಡುತ್ತಾರೆ. ಅಲ್ಲೊಬ್ಬ ದಾಸಯ್ಯ ಕಾಣಿಸಕೊಳ್ಳುತ್ತಾನೆ. ಇವರು ತಿರುಪತಿಯಿಂದ ಬಂದವರು, ಇವರ ಪಾದ ಹಿಡಿದು ಮುಂದೆ ಹೋದರೆ ಗೆಡ್ಡೆ ಗೆಣಸು ಸಿಗುತ್ತೆ ಎಂದು ಕೈ ಮುಗಿದರು. ದಾಸಯ್ಯನಿಗೆ ಈಶ್ವರನ ಕಟ್ಟೆಗೆ ಹೋಗಲು ಹೇಳಿದ ತಕ್ಷಣ ದಾಸಯ್ಯ ತೂರಾಡುತ್ತ ಹೋಗುತ್ತಾರೆ. ಅಷ್ಟರಲ್ಲಿ ಬೊಮ್ಮೆಗೌಡನ ಮಕ್ಕಳು ಕೋಲುಜೇನು ಕಿತ್ತರು. ಕುಸ್ಮದೇವಿ ಎಂಟು ಜೊನ್ನಿಯನ್ನು ಹೊಲಿಯಲು ಹೇಳುತ್ತಾಳೆ. ನಾವಿರುವುದು ಏಳು ಜನ ಎಂಟು ಜೊನ್ನಿ ಏಕೆ? ಎಂದು ಅಕ್ಕಂದಿರು ಪ್ರಶ್ನಿಸುತ್ತಾರೆ. ಆಗ ಕುಸ್ಮದೇವಿ ಒಂದು ಜೊನ್ನಿ ಮೀಸಲು ತೆಗೆದು ಇರಿಸಲು ಹೇಳಿದಾಗ ಕಜ್ಜನಾತದ ಒಬ್ಬ ದಾಸಯ್ಯ ನಡುಗುತ್ತ ಹಾಜರಾಗುತ್ತಾನೆ. ಏಯ್‌ ದಾಸಯ್ಯ ಹತ್ತಿರ ಬರಬೇಡ ಎಂದು ಯಾರು ಮುಂದೆ ಹೋಗುವುದಿಲ್ಲ. ಕೊನೆಯಲ್ಲಿ ಕುಸ್ಮದೇವಿ ಕೈಯಲ್ಲಿ ಜೇನಿನ ಜೊನ್ನಿಯನ್ನು ಕೊಟ್ಟು ದಾಸಯ್ಯನಿಗೆ ನೀಡಲು ಹೇಳುತ್ತಾರೆ. ಈಕೆಯಾದರು ಮೂಗಿಗೆ ಬಟ್ಟೆ ಮುಚ್ಚಿಕೊಂಡು ಕೊಡುತ್ತಾಳೆ.

ಪುನಃ ಬೊಮ್ಮೆಗೌಡನ ಮಕ್ಕಳು ಗೆಡ್ಡೆ ಗೆಣಸು ಕೀಳುತ್ತಾರೆ. ದಾಸಯ್ಯ ಮರದ ಮೇಲೆ ಕುಳಿತುಕೊಂಡು ಸನ್ನೆ ಮಾಡುತ್ತಿರುತ್ತಾನೆ. ಮುಳ್ಳು ಗೆಣಸು, ತಾವರೆ ಗೆಡ್ಡೆ ಸಂಗ್ರಹಿಸಿ ತಲೆ ಮೇಲೆ ಹೊತ್ತುಕೊಂಡು ಮನೆಗೆ ಹೊರಡುತ್ತಾರೆ. ಆದರೆ ಕುಸ್ಮದೇವಿ ಗೆಡ್ಡೆ ಗೆಣಸಿನ ಹೊರೆಯನ್ನು ಎತ್ತಲಾರದೆ ಪರದಾಡುತ್ತಿರುವಾಗ ದಾಸಯ್ಯನನ್ನು ಕಂಡು ಹೊರೆಯನ್ನು ತಲೆಗೆ ಎತ್ತಿಕೊಡಲು ಕೇಳುತ್ತಾಳೆ. ಆ ಕೆಲಸ ಮಾಡಿದರೆ ನೀನು ನನಗೆ ಏನಾಗುತ್ತಿಯೆ? ಎಂದು ಪ್ರಶ್ನಿಸುತ್ತಾನೆ. ಮಗಳಾಗುತ್ತೇನೆ, ತಂಗಿಯಾಗುತ್ತೇನೆ, ತಾಯಿಯಾಗುತ್ತೇನೆ ಎಂದು ಹೇಳಿದರು ಕೇಳುವುದಿಲ್ಲ. ಕೊನೆಗೆ ಪರಿಸ್ಥಿತಿಯನ್ನು ವಿಚಾರ ಮಾಡಿ ಸಧ್ಯ ಈ ತೊಂದರೆಯಿಂದ ಪಾರಾದರೆ ಸಾಕೆಂದು ಮಡದಿ ಆಗುತ್ತೆನೆ ಎಂದು ಹೇಳಿಬಿಡುತ್ತಾಳೆ. ಆಗ ಗೆಣಸಿನ ಹೊರೆಯನ್ನು ತಲೆ ಮೇಲಿರಿಸಿತ್ತಾನೆ. ನೇತ್ರ ಕಾಣುವುದಿಲ್ಲವೆಂದು ತಾನು ಹೊರೆಯ ಮೇಲೆ ಕೂರುತ್ತೆನೆ. ನನ್ನನ್ನು ಪೋಡಿಗೆ ತಲುಪಿಸಿಬಿಡು ಎಂದು ಕೇಳುತ್ತನೆ. ಅಷ್ಟರಲ್ಲಿ ಕಾರೆಂಬ ಕತ್ತಲು, ಬೋರೆಂಬ ಮಳೆ ಬಂತು ‘ಕಾ’ ಎಂಬ ಕಾಗೆ ಸಬ್ದವಿಲ್ಲ. ‘ಗೂ’ ಎಂಬ ಗೂಗೆ ಶಬ್ದವಿಲ್ಲ. ದಾಸಯ್ಯ ಕುಸ್ಮದೇವಿಯನ್ನು ಕನಕದಾಸರ ಗವಿಗೆ ಕರೆದುಕೊಂಡು ಹೋಗುತ್ತಾನೆ. ಗವಿಯಲ್ಲಿ ಕಾರಾಚಿ ಹುಲ್ಲಿನ ಹಾಸಿಗೆ ಮಾಡಿ ಶಂಕ-ಚಕ್ರವನ್ನು ಎಡಗಡೆ ಬಲಗಡೆ ಕಾವಲಿಡುತ್ತಾನೆ.

ಬೊಮ್ಮೆಗೌಡನಿಗೆ ಕುಸ್ಮ ದೇವಿ ಬಾರದೆ ಇದ್ದುದನ್ನು ನೋಡಿ ಗಾಬರಿಯಾಗಿ ಎಲ್ಲಿ ಬಿಟ್ಟು ಬಂದಿದ್ದೀರಿ ಎಂದು ಉಳಿದ ಮಕ್ಕಳನ್ನು ಕೇಳುತ್ತಾನೆ. ಆರು ಜನ ಗುಡ್ಡದಲ್ಲಿ ಬಿಟ್ಟೀವಪ್ಪ ಎನ್ನುತ್ತಾರೆ. ತಕ್ಷಣ ಕವಡೆ ಶಾಸ್ತ್ರ ಕೇಳಿದಾಗ ಕುಸ್ಮ ದೇವಿ ದಾಸಯ್ಯನ ವಶವಾಗಿದ್ದಾಳೆ. ಯಾವುದೇ ಅಪಾಯವಿಲ್ಲ ಎಂದು ಬರುತ್ತದೆ. ಬೊಮ್ಮೆಗೌಡ ಯೋಚನೆ ಮಾಡುತ್ತ ಕೃಷ್ಣನ ಕಟ್ಟೆಯ ಬಳಿ ಹೋಗುತ್ತಿದ್ದಾಗ ಆ ಕಡೆಯಿಂದ ದಾಸಯ್ಯನೇ ಕೃಷ್ಣಪ್ಪನ ರೂಪದಲ್ಲಿ ಬರುತ್ತಿರುತ್ತಾನೆ. ಆಗ ಬೊಮ್ಮೆಗೌಡ ಕೃಷ್ಣಪ್ಪನನ್ನು ಕಂಡು ಬಹಳ ಸಂತೋಷವಾಗಿ ನಿಮ್ಮ ಹತ್ತಿರವೇ ಬರುತ್ತಿದ್ದೇ, ಅಷ್ಟರಲ್ಲಿ ನೀವೇ ಸಿಕ್ಕಿದ್ದೀರಾ! ನನ್ನ ಮಗ ಕುಸ್ಮದೇವಿ ಹೋಗಿ ಮೂರು ದಿನವಾಯ್ತು ಒಂದು ಪಗಡೆ ಶಾಸ್ತ್ರ ನೋಡಿ ಎಂದು ಕೇಳುತ್ತಾನೆ. ಈ ಶಾಸ್ತ್ರದಲ್ಲೂ ಸಹ ಅದೇ ಹೇಳಿಕೆ ಬಂತು. ಕನಕದಾಸರ ಗವಿಯಲ್ಲಿ ಇದ್ದಾಳೆ ಎಂದು ತಿಳಿದು ಅಲ್ಲಿ ಹೋಗಿ ನೋಡುತ್ತಾರೆ. ಹೊರಗೆ ಬೆಂಕಿ ಉರಿಯುತ್ತಿದೆ. ಒಳಗೆ ಹಾಸಿಗೆ ಹಾಸಿತ್ತು. ಓಹೋ ಯಾರೋ ಒಬ್ಬ ಕಳ್ಳ ಕರೆದುಕೊಂಡು ಹೋಗಿದ್ದಾನೆ ತುಂಡು ದೊಣ್ಣೆಯ ತೆಗೆದುಕೊಂಡು ಕುಸ್ಮ ದೇವಿ ಹೆಜ್ಜೆಯ ಗುರುತನ್ನು ನೋಡುತ್ತಾರೆ. ಹಜ್ಜೆ ಅಳತೆ ತೆಗೆದುಕೊಂಡು ಬರುತ್ತಾರೆ. ಮುಂದೆ ಆರುವರ ಗವಿಗೆ ಹೋದಾಗ ಕುಸ್ಮ ದೇವಿ ನಾರಾಯಣನ ತಲೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಹೇನು-ಸೀರು ನೋಡುತ್ತಿದ್ದಾಳೆ. ಬೊಮ್ಮೆಗೌಡ ಅವರನ್ನು ಕಂಡುಬಿಟ್ಟ. ನೀನು ಯಾರಯ್ಯ ನನ್ನ ಮಗಳನ್ನು ತಂದದು ಯಾಕೆ? ಎಂದು ಕೇಳುತ್ತಾನೆ. ನಾನು ಬೊಮ್ಮ ಮಾವ ಎನ್ನುತ್ತಾನೆ ದಾಸಯ್ಯ. ಬೊಮ್ಮೆಗೌಡನಿಗೆ ಸಿಟ್ಟು ಬಂದು ನೀನು ಯಾರು? ಯಾವ ಕುಲದವನು? ಎಂದು ಬಯ್ಯತ್ತಾ ತನ್ನ ಮಗಳನ್ನು ಉದ್ದೇಶಿಸಿ ಈ ದಾಸಯ್ನ ವೇಷ ನೋಡಿ ಬಂದಿಯಲ್ಲ. ಬುದ್ಧಿ ಇದೆಯಾ ಎಂದು ಕೇಳುತ್ತಾನೆ.

ಇದ್ಯಾವುದಕ್ಕೂ ಬೇಸರ ಮಾಡಿಕೊಳ್ಳದೆ ದಾಸಯ್ಯ ಹೇಳುತ್ತಾನೆ. ಬೊಮ್ಮ ಮಾವ ನಿನಗೆ ಕರುವನ್ನು ಕಟ್ಟಲು ಕೂಲಿ ಆಳನ್ನು ಇಡುತ್ತೆನೆ. ರಾಗಿ ಬೀಸಲು ಚಿನ್ನದ ಗೂಟವನ್ನು ಕೊಡುತ್ತೇನೆ. ನಿನ್ನ ಮಕ್ಕಳಿಗೆಲ್ಲ ಬೇಕಾದ ಊಟ ಕೊಡಿಸುತ್ತೇನೆ ಎಂದು ಪುಸಲಾಯಿಸುತ್ತಾನೆ. ಕುಲ, ಜಾತಿಯನ್ನು ವಿಚಾರಿಸಿ ಕೊನೆಗೆ ಹೆಣ್ಣಿನ ತೆರವನ್ನು ಕೊಟ್ಟು ಬಿಡಯ್ಯ ದಾಸಯ್ಯ ಎಂದು ಕೇಳಿದಾಗ ಹನ್ನೆರಡು ಕೊಂಗ ತುಂಬ ಚಿನ್ನದ ರೂಪಾಯಿಗಳನ್ನು ಕೊಡುತ್ತಾನೆ. ಆದರೆ ದಡ್ಡ ಬೊಮ್ಮೆಗೌಡ ಮೇಲುಗಿರಿಯಲ್ಲಿ ನಿಂತು ಕೊಂಗದ ರೂಪಾಯಿಯನ್ನು ಗಾಳಿಗೆ ತೂರಿ ಬಿಡುತ್ತಾನೆ. ಎಲ್ಲವೂ ಹೋಗಿ ಆತನ ಕೈಗೆ ಹನ್ನೆರಡುವರೆ ರೂಪಾಯಿ ಮಾತ್ರ ಸಿಗುತ್ತದೆ ದಾಸಯ್ಯ ಬೊಮ್ಮೆಗೌಡನಿಗೆ ಕೊಟ್ಟಿದ್ದ ತೆರ ಹಣದ ಬದಲು ‘ಮೂರು ವರುಷಕ್ಕೊಂದು ಪೋಡಾಗಲಿ, ಮೂರು ವರ್ಷ ತುಂಬಿದ ಮೇಲೆ ದಬ್ಬೆ ಹುಲ್ಲು ಬೆಳೆಯಲಿ, ಹಿಂದೆ ಎತ್ತಾಗಿ ಗಂಡು ಬಳಿಯಾಗಿ ಅನ್ನ ಬಟ್ಟೆಗೆ ತಿರಿರಂತೆ, ಏಳು ಕೋಟೆ ಬಂಗಾರಕ್ಕೆ ನೀನೆ ಕಾವಲು, ನನ್ನ ಮೇಲುಗಿರಿಗೆ ನೀನು ಬರಬೇಕು. ನನ್ನ ಮಾವ ನೀನು, ನೀವು ಬಾವ ಬಾಮೈಕ ಎಂದು ಮಾತು ಅಂತೆ’. ಎಂದು ಶಾಪ ಕೊಡುತ್ತಾನೆ.

ಇತ್ತ ಕಡೆ ಶ್ರೀ ತುಳಸಮ್ಮ ಮತ್ತು ಶ್ರೀ ಲಕ್ಷ್ಮೀದೇವಿ ನಾರಾಯಣನ ಮಡದಿಯರು ಗಂಡ ಮೂರು ತಿಂಗಳಾದರು ಬರಲಿಲ್ಲ ಎಂದು ಹುಡುಕಾಟ ಆರಂಭಿಸುತ್ತಾರೆ. ಅವರು ಸೋಲಿಗರ ಬೊಮ್ಮೆಗೌಡನ ಮಗಳ ಹಿಂದೆ ಹೋಗಿದ್ದಾನೆ ಎಂದು ಸಂಶಯ ಪಡುತ್ತಾರೆ. ಗಂಡನನ್ನು ಉದ್ದೇಶಿಸಿ ನೀನು ಎಲ್ಲಿ ಹೋಗ್ತಿಯಾ ಎಂದು ಕೇಳುತ್ತಾರೆ. ಅದಕ್ಕೆ ನಾರಾಯಣ ನಾನು ಜಗತ್ತಿನ ಇರೊಂಬತ್ತು ಕೋಟಿ ಜೀವರಾಶಿಗೂ ಅನ್ನದಾನ ಮಾಡಲು ಹೋಗುತ್ತೇನೆ ಎಂದು ತಪ್ಪಿಸಿಕೊಳ್ಳುತ್ತಾನೆ. ಮಡದಿಯರು ಒಪ್ಪಿಗೆ ಸೂಚಿಸಿ ಹೋಗಿ ಬನ್ನಿ ಎಂದು ಕಳುಹಿಸುತ್ತಾರೆ. ಬಳಿಕ ಅಕ್ಕ-ತಂಗಿಯರು ಒಂದು ಉಪಾಯ ಮಾಡುತ್ತಾರೆ. ಒಂದೊಂದು ಸುಣ್ಣಕಾಯಿ ಡಬ್ಬಿಯನ್ನು ತೆಗೆದುಕೊಂಡು ಅದರಲ್ಲಿ ಒಂದೊಂದು ಇರುವೆಯನ್ನು ಒಳಗಿಟ್ಟು ಮುಚ್ಚುತ್ತಾರೆ. ಡಬ್ಬಗಳನ್ನು ನಡುವಿನ ಬಳಿ ಸೀರೆ ಗಂಟಿನಲ್ಲಿ ಸೇರಿಸಿಕೊಳ್ಳತ್ತಾರೆ. ಆಗ ನಾರಾಯಣ ತನ್ನ ಕರ್ತವ್ಯವನ್ನು ಮುಗಿಸಿ ಬಂದು ಸುಸ್ತಾಗಿ ಕುಳಿತ್ತಿದ್ದಾನೆ. ಮಡದಿಯರು ಒಬ್ಬರನ್ನೊಬ್ಬರು ನೋಡಿ ಹುಸಿನಗೆ ನಗುತ್ತಿದ್ದಾರೆ. ತನ್ನ ಮಡದಿಯರ ಸಂಚನ್ನು ಮೊದಲೇ ತಿಳಿದು ಕೊಂಡಿರುತ್ತಾನೆ. ಇವರು ಸುಣ್ಣ ಕಾಯಿ ಡಬ್ಬ ತೆಗೆದುನೋಡಿದಾಗ ಆ ಇರುವೆಗಳ ಬಾಯಲ್ಲಿ ಬತ್ತ, ರಾಗಿ ಇರುವುದನ್ನು ನೋಡಿ ಪೆಚ್ಚಾಗುತ್ತಾರೆ. ತನ್ನ ಗಂಡನ ಮಹಿಮೆಯನ್ನು ಕೊಂಡಾಡುತ್ತಾರೆ. ಹಾಗೆಯೇ ಈ ದಿನ ನೀನು ಎಲ್ಲೂ ಹೋಗಬಾರದು ನಮ್ಮ ಜೊತೆಯಲ್ಲೇ ಇರಬೇಕು ಎಂದು ಹಠ ಹಿಡಿಯುತ್ತಾರೆ. ಆದರೆ ನಾರಾಯಣ ತನ್ನ ಮಡದಿಯರಿಗೆ ಮಾಯದ ನಿದ್ದೆಯನ್ನು ಕೊಟ್ಟು ತನ್ನ ಬದಲು ಕಟ್ಟಿಗೆಯಿಂದ ಮಾಡಿದ ಬೊಂಬೆಯೊಂದನ್ನು ಮಧ್ಯೆ ಮಲಗಿಸಿ ಪಾರಾಗುತ್ತಾನೆ.

ಮಡದಿಯರು ನಿದ್ದೆ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ನಾರಾಯಣ ಬೊಮ್ಮೆಗೌಡನ ಪೋಡಿಗೆ ಬಂದಿದಾನೆ. ಕುಸ್ಮದೇವಿ ನನ್ನ ವಶ ಆಗುವಂತೆ ಮಾಡಪ್ಪ ಎಂದು ಮುಡುಕುತೊರೆ ಮಲ್ಲಪ್ಪನಿಗೆ ಕಾಣಿಕೆ ಕಟ್ಟಿದ್ದಾನೆ. ನಂಜುಂಡೇಶ್ವರ ತೇರಿಗೆ ಗಂಡನಪ್ಪ ಪಟ್ಟದ ಪಾರ್ವತಿ ಬೆಟ್ಟದ ಚಾಮುಂಡಿ ನಿನ್ನ ಕೈವಶ ಆಗಿದ್ದಾರೆ ಹಾಗೆಯೆ ಬೊಮ್ಮೆಗೌಡನ ಮಗಳು ನನ್ನ ಕೈವಶ ಆಗುವಂತೆ ಮಾಡಿಕೊಡಪ್ಪ ಎಂದು ಅಕ್ಕಿ ಕಾಣಿಕೆಯನ್ನು ಕಟ್ಟುತ್ತಾನೆ. ಬಳಿಕ ಮೂಡಲ ಮಲೆಯನ್ನು ನೋಡಿ ಮಾದಪ್ಪ ಸಾನೆ ಮಾಯ್ಕಾರ ಇವನ ಮುಂದೆ ಯಾರು ಇಲ್ಲ. ಹಿಂದಾಗಲಿ, ಮುಂದಾಗಲಿ, ಎಂದು ಅವನಿಗೊಂದು ಕಾಣಿಕೆಯನ್ನು ಕಟ್ಟುತ್ತಾನೆ. ಮೈಸೂರು ಮಠಮನೆ ಲಿಂಗಕ್ಕೆ ಕೊಳಗ ಧರಿಸಬೇಕು ಎಂದು ಹರಕೆ ಹೊರುತ್ತಾನೆ.

ಇತ್ತ ಕಡೆ ನಾರಾಯಣನ ಮಡದಿಯರು ಬೆಳಿಗ್ಗೆ ಎದ್ದು ನೋಡಿದಾಗ ಗಂಡ ಕದ್ದು ಹೊರಟು ಹೋಗಿದ್ದಾನೆ. ಆಗ ಎಲ್ಲೋ ನಾರಾಯಣ ಸತ್ತು ಹೋಗಿರಬೇಕು ಎಂದು ಭಾವಿಸಿ ಹುಡುಕಲು ಹನುಮಂತನಿಗೆ ಹೇಳುತ್ತಾರೆ. ಪೋಡೆಲ್ಲಾ ಹುಡುಕಿಸಿದರು ನಾರಾಯಣ ಸಿಗುವುದಿಲ್ಲ. ಆದರೆ ಬೊಮ್ಮೆಗೌಡನ ಮಗಳು ಕುಸ್ಮದೇವಿಯೊಂದಿಗೆ ಹೊರಟು ಹೋಗಿದ್ದಾನೆ. ಮೇಲುಗಿರಿಗೆ (ಮೇಲುಕೋಟೆ) ಬಂದ ಭಕ್ತರು ಎಲ್ಲಿ ಹೋಗಬೆಕು? ಏನು ಮಾಡಬೇಕು? ಎಂದು ಇಬ್ಬರು ಮಡದಿಯರು ಚಿಂತೆ ಮಾಡುತ್ತಿದ್ದಾರೆ. ಹನುಮಂತ ನಾರಾಯಣ ಹೋಗುತ್ತಿದ್ದ ಎಲ್ಲಾ ಸ್ಥಳಗಳಲ್ಲೂ ಹುಡುಕುತ್ತಾನೆ. ಕೊನೆಗೆ ತೀರ್ಥಹಳ್ಳಿಯಲ್ಲಿ ನಾರಾಯಣ ಸಿಕ್ಕುತ್ತಾನೆ. ಆಗ ನಾರಾಯಣ ನನಗೆ ಹಿಂದಾ-ಮುಂದಾ (ವಾಂತಿ ಭೇದಿ) ಆಗಿದೆ ಎಂದು ಹೇಳಿ ಬಿದಿರ ಅಕ್ಕಿ ಪಾಯಸ ಮಾಡಿಕೊಂಡು ಬರುವಂತೆ ತಿಳಿಸಲು ಹನುಮಂತನಿಗೆ ಹೇಳುತ್ತಾನೆ. ಗಾಬರಿಗೊಂಡು ತಕ್ಷಣ ಬಿದಿರ ಅಕ್ಕಿ ಪಾಯಸ ಮಾಡಿಕೊಂಡು ಮಡದಿಯರು ಮೇಲುಗಿರಿಗೆ ಬಂದಾಗ ಅಲ್ಲಿ ನಾರಾಯಣ ಇರುವುದಿಲ್ಲ. ಹುಡುಕಾಡುತ್ತಾ ದೊಡ್ಡ ಸಂಪಿಗೆಗೆ ಹೋಗುತ್ತಾರೆ. ಕೊನೆಯಲ್ಲಿ ನಾರಾಯಣ ನೇರಿಕೊಡೆಯಲ್ಲಿ ಇರುತ್ತಾನೆ. ಆತನ ಮಡದಿಯರು ಗಂಡನಾದ ನಾರಾಯಣನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಾನು ಬೆಳ್ಳಿ ಬೆಟ್ಟಕ್ಕೆ ಬಿಳಿ ಸೀಗೆಕಾಯಿ ತರುವ ಸಲುವಾಗಿ ಬಂದೆ. ಆದರೆ ಇಲ್ಲಿ ಸೋಲಿಗರ ಬೊಮ್ಮೆಗೌಡನ ಮಗಳ ಮುಖ ನೋಡಿ ಮರುಳಾಗಿ ಇಲ್ಲಿ ತಿಮ್ಮಯ್ಯನಾಗಿ ಮೇಲುಗಿರಿ ರಂಗಯ್ಯನಾಗಿ ಸೋಲಿಗರ ಬಂಧುಗಳಿಗೆಲ್ಲಾ ಬಾವನಾಗಿದ್ದಾನೆ ಎಂದು ಹೇಳುತ್ತಾನೆ.

ಇತ್ತ ನಾರಾಯಣ ಮಡದಿಯರು ಬೇಸರಗೊಂಡು ನಾರಾಯಣನ ಸಹವಾಸವೇ ಬೇಡ, ವೈದಿಕ ಮಾಡಬೇಕೆಂದು ದಾಸಯ್ಯಗಳನ್ನು ಹುಡುಕುತ್ತಿರುತ್ತಾರೆ. ಆಗ ಮೇಲುಗಿರಿಯ ಕೃಷ್ಣನ ಕಟ್ಟೆಯಲ್ಲಿ ನಾರಾಯಣ ದಾಸಯ್ಯನ ವೇಷದಲ್ಲಿ ಸಿಕ್ಕುತ್ತಾನೆ. ಆಗ ಆ ಹೆಣ್ಣುಮಕ್ಕಳನ್ನು ಉದ್ದೇಶಿಸಿ ನೀವು ಮುಂದೆ ನಡೆಯಿರಿ ನಾನು ಹಿಂದೆ ಬರುತ್ತೇನೆ ಎಂದು ಹೇಳುತ್ತಾನೆ. ಈ ಮುದುಕ ದಾಸಯ್ಯನನ್ನು ನಂಬಲು ಆಗುವುದಿಲ್ಲ. ಬರುತ್ತೇನೆಂದು ಹೇಳಿ ಎಲ್ಲಿಯಾದರೂ ಹೊರಟು ಹೋದರೆ ಕಷ್ಟ ಎಂದು ಭಾವಿಸಿ ಜೊತೆಯಲ್ಲಿ ಬಾ ದಾಸಯ್ಯ ಎಂದು ಹೊರಡುತ್ತಾರೆ. ಜೊತೆಗೆ ಬರುತ್ತಿರುವಾಗಲೇ ನಾರಾಯಣ ಅವರು ಕುಂಬಾರ ದೇವಪ್ಪನ ಕೊಳದ ಬಳಿ ಬಂದು ಕುಳಿತ್ತಿದ್ದಾರೆ. ಕೊನೆಗೆ ವೈರು ಮುಡಿಯಲ್ಲಿ ಅನ್ನ – ಬೇಳೆ – ಪಾಯ್ಸ ಎಲ್ಲಾ ಮಾಡಿ ದಾಸೋಹಕ್ಕೆ ಸಿದ್ದಪಡಿಸಿದ್ದಾರೆ. ದಾಸಯ್ಯನನ್ನು ಪೂಜೆಗೆ ಕರೆದರು. ನಾರಾಯಣ ದಾಸಯ್ನ ವೇಷದ ಇರೊಂಬತ್‌ ಕೋಟಿ ಜೀವರಾಶಿಗಳನ್ನೆಲ್ಲಾ ಕರೆಯುತ್ತಾರೆ. ಆಗ ಮಾಡಿದ್ದ ಅಡುಗೆಯಲ್ಲಾ ಮುಗಿದು ಹೋಯಿತು. ಆಗ ತನ್ನ ಮಡದಿಯರನ್ನು ಕುರಿತು ಹೇಳುತ್ತಾನೆ. ನನ್ನ ವೈದಿಕ ಮಾಡಬೇಕಾದರೆ ನೀವು ಎಂತವರಾಗಿರಬೇಕು. ಈ ರೀತಿ ನೀವು ಮಾಡಬೇಕಾದರೆ ನಾನು ಸೃಷ್ಟಿ ಮಾಡಿರುವ ಎಲ್ಲಾ ಜೀವರಾಶಿಗಳಿಗೂ ಅನ್ನದಾನ ಮಾಡಬೇಕು ಎಂದು ಹೇಳುತ್ತಾನೆ. ಅಂದಿನಿಂದ ನಾರಾಯಣ ವರ್ಷಕ್ಕೊಂದು ದಿನ ವೈಕುಂಠ ಸೇರುತ್ತಾರೆ. ಅಂದು ಸಂಕ್ರಾಂತಿ ಸ್ವರ್ಗದ ಬಾಗಿಲು ತೆರದಿರುತ್ತದೆ ಎಂದು ನಂಬುತ್ತಾರೆ.

ಇತ್ತ ದಾಸಯ್ಯ ಬೊಮ್ಮೆಗೌಡನ ಪೋಡಿಗೆ ಬಂದು ಬಹಳ ಖುಷಿಯಿಂದ ಕುಣಿಯುತ್ತಿದ್ದಾನೆ. ಬೊಮ್ಮೆಗೌಡ ಯಾಕೆ ದಾಸಯ್ಯ ಇಷ್ಟೊಂದ್‌ ಸಂಪತ್ತು ಪಡುತಿದ್ದಿಯಾ ಏನಾಯ್ತು ನಾನ್‌ ನೋಡಿದರೆ ನನ್ನ ಮಗಳನ್ನು ಕಳೆದುಕೊಂಡು ದುಃಖ ಪಡುತ್ತಿದ್ದೇನೆ ಎನ್ನುತ್ತಾನೆ. ಅಯ್ಯಯೋ ನನಗೆ ಕುಸ್ಮದೇವಿಯನ್ನೇ ಬಿಕ್ಸೇ ಕೊಡಪ್ಪಾ ನಿನಗೆ ಬಾಳ ಪುಣ್ಯ ಬರುತ್ತೆ ಎನ್ನುತ್ತಾನೆ ದಾಸಯ್ಯ. ಬೊಮ್ಮೆಗೌಡನ ಮನೆಯವರಿಗೆಲ್ಲಾ ಬಹಳ ದುಃಖವಾಗುತ್ತದೆ. ದಾಸಪ್ಪನು ಕುಸ್ಮದೇವಿಯನ್ನು ಕೇಳುತ್ತಿದ್ದಾನಲ್ಲ ಎಂದು ಚಿಂತಾಕ್ರಾಂತನಾಗುತ್ತಾರೆ. ಆಗ ಗಂಗಾಧರನ (ಈಶ್ವರನ ದೇವಸ್ಥಾನ) ಗುಡಿಗೆ ಹೋಗಿ ಕೊಳದಲ್ಲಿ ತಣ್ಣೀರು ಸ್ನಾನ ಮಾಡಿ ಮನೆದೇವರಾದ ಮಾದಪ್ಪನನ್ನು ನೆನೆದು ಅಯ್ಯೋ ಮಕ್ಕಳ ಫಲ ನೀಡೋದು ನೀನು, ಕಿತ್ತುಕೊಳ್ಳುವವನು ನೀನು, ಈಗ ನಾನೊಂದು ವರ ಕೇಳ್ತೇನೆ ನನಗೆ ಪ್ರಸಾದ ಕೊಡು ಎಂದು ಬೇಡುತ್ತಾನೆ. ಆಗ ಎಡಗಡೆಯಿಂದ ಪ್ರಸಾದ ಬರುತ್ತದೆ. ದಾಸಯ್ಯನ ವೇಷದ ನಾರಾಯಣ ಅಲ್ಲಿಯು ಬಂದು ನಿಂತು ಹೇಳುತ್ತಿದ್ದಾನೆ. ನೋಡಪ್ಪಾ ನಿನ್ನ ಮಗಳು ದಾಸಯ್ಯನ ವಶವಾಗಿದ್ದಾಳೆ. ಮೇಲುಗಿರಿಯಿಂದ ಹೋಗಬೇಕು ಎಂದಾಗ ಮಳ್ಳಿ ಒಡ್ಡಿಗೆ ಹೋದರೆ ಅಲ್ಲಿ ಇದ್ದಾರೆ ಎಂದಾಗ ಆ ಮಾತನ್ನು ಕೇಳಿ ಬೊಮ್ಮೆಗೌಡನಿಗೆ ಸಂತೋಷವಾಯಿತು. ಓಹೋ ದೇವರು ಹೇಳೋ ಮಾತು ಸತ್ಯ ಎಂದು ತನ್ನ ಗಂಡು ಮಕ್ಕಳನ್ನೆಲ್ಲಾ ಕರೆದುಕೊಂಡು ಮಳ್ಳಿ ಒಡ್ಡಿಗೆ ಹೋಗುತ್ತಾರೆ. ಅಲ್ಲಿ ದಾಸಯ್ಯನ ಹತ್ತಿರ ಕುಸ್ಮದೇವಿ ಇರುತ್ತಾಳೆ. ಏಯ್‌ ದಾಸಯ್ಯ ತಿರಿದು ತಿನ್ನೋದನ್ನು ಬಿಟ್ಟು ನನ್ನ ಮಗಳನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಹೆದರಿಸುತ್ತಾರೆ. ಆಗ ದಾಸಯ್ಯ ಇಲ್ಲ ಬೊಮ್ಮೆಗೌಡ ಕುಸ್ಮದೇವಿ ಕಾಡಿನ ಒಳಗೆ ಬರುತ್ತಿದ್ದಳು. ಕರೆದುಕೊಂಡು ಬಂದೆ. ನಿನ್ನ ಮಗಳು ಎಂದು ನನಗೆ ಗೊತ್ತಿಲ್ಲ ಎನ್ನುತ್ತಾನೆ.

ಬೊಮ್ಮೆಗೌಡ ಮಗಳನ್ನು ಉದ್ದೇಶಿಸಿ ನಿನ್ನ ಮುಖ ನಾ ನೋಡುವುದಿಲ್ಲ. ನನ್ನ ಮುಖ ನೀನು ನೋಡಬೇಡ. ನೀನು ದಾಸಯ್ಯನ ವಾಸ ಆಗಿದ್ದೀಯಾ. ನೀನು ಸತ್ತರೂ, ಕೆಟ್ಟರೂ, ನಮಗೆ ಬೇಕಿಲ್ಲಾ ಎಂದು ತಿರಸ್ಕರಿಸುತ್ತಾನೆ. ಜಾತಿಯಲ್ಲಿ ನಾವು ಸೋಲಿಗರು. ಈ ಬಡ ದಾಸಯ್ಯನ ವಾಸಕ್ಕೆ ಬಂದಿದ್ದಿಯಲ್ಲಾ ಎಂದು ದೂರುತ್ತಾ ದಾಸಯ್ಯನನ್ನು ಬಯ್ಯುತ್ತಾನೆ. ಅದಕ್ಕೆ ದಾಸಯ್ಯ ಬೊಮ್ಮ ಮಾವ ಬಯ್ಯಬೇಡ ನಿನಗೆ ಬೇಕಾದ ಐಶ್ವರ್ಯ ಕೊಡುತ್ತೇನೆ ಎನ್ನುತ್ತಾನೆ. ಆದರೆ ಬೊಮ್ಮೆಗೌಡ ದಾಸಯ್ಯನನ್ನು ದೊಣ್ಣೆಯಿಂದ ಹೊಡೆಯಲು ಹೋಗುತ್ತಾನೆ. ದಾಸಯ್ಯ ಕೊಟ್ಟಿದ್ದ ಐಶ್ವರ್ಯವನ್ನೆಲ್ಲಾ ವಾಪಸ್‌ ಕಿತ್ತುಕೊಂಡು ಶಾಪ ಕೊಡುತ್ತಾನೆ.

ದಾಸಯ್ಯನ ವೇಷಧಾರಿ ನಾರಾಯಣ ಸೋಲಿಗರ ಬೊಮ್ಮೆಗೌಡನ ಮಗಳನ್ನು ಕರೆದುಕೊಂಡು ಮೇಲುಗಿರಿಗೆ ಹೋಗುತ್ತನೆ. ಅಲ್ಲಿ ಎಡಗಡೆ ಶ್ರೀ ತುಳಸಮ್ಮ, ಬಲಗಡೆ ಶ್ರೀ ಲಕ್ಷ್ಮೀದೇವಿ ಕುಳಿತ್ತಿದ್ದಾರೆ. ಹೀಗೆ ಮೂವರು ಮಡದಿಯರು ಒಟ್ಟಾಗಿ ಇರುವಾಗ ಕುಸ್ಮದೇವಿಗೆ ಏನೋ ಒಂದು ಮಾತು ಆಡುತ್ತಾರೆ. ಹಾಗೆ ಆಕೆ ದುಃಖ ಮಾಡುತ್ತಿರುತ್ತಾಳೆ. ಇದನ್ನು ಕಂಡ ನಾರಾಯಣ ಮಹಾನವಮಿಯ ದಿನ ಜಂಬೂ ಸವಾರಿಹೋಗುವಾಗ ನಿಮ್ಮ ಸೋಲಿಗರ ಜಾತಿಯವರು ಕುಂಬಳದನ್ನ, ಬೂದುಗುಂಬಳಕಾಯಿ ಬಾಳೆ ಎಲೆ, ಬಾಳೆ ಕಾಯಿಯನ್ನು ತಂದು ಕೊಡಬೇಕೆಂದು ಷರತ್ತು ಮಾಡುತ್ತಾನೆ. ನನ್ನ ಬೊಮ್ಮ ಮಾವನಿಗೆ ಒಂದು ಎಡೆಯನ್ನು ಕೊಡುತ್ತೇನೆ ಎಂದು ಮಾತು ಕೊಡುತ್ತಾನೆ. ಮತ್ತು ನನ್ನ ಬಾಮೈಕಗಳಲ್ಲಿ ಹಿರಿಯ ಬಾಮೈದ, ದೊಡ್ಡಮಾದ, ನೀವು ಏಳುಕೋಟಿ ಬಂಗಾರಕ್ಕೆ ಬಾಧ್ಯರು ಎಂದು ಬರೆಸುತ್ತಾನೆ. ಜೊತೆಗೆ ಸೋಲಿಗರ ಜಾತಿಯವರು ರಂಗಯ್ಯನ ಜಾತ್ರೆ ಉತ್ಸವ ಸಂದರ್ಭದಲ್ಲಿ ಯಾವ ಯಾವ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ನೇಮಕ ಮಾಡುತ್ತಾನೆ.

ಉಪಸಂಹಾರ

ಆರಂಭದಲ್ಲಿಯೇ ಹೇಳಿದಂತೆ, ಕಾರಣಾಂತರಗಳಿಂದ ಸೋಲಿಗರ ನಾಡಿಗೆ ಬಂದ ವೈಷ್ಣವ ಸಂಪ್ರದಾಯ ಪ್ರಚಾರಕರಲ್ಲಿ ಕೆಲವರು ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ವಾಸ್ತವ್ಯ ಮಾಡಿರುವುದು ಸ್ಪಷ್ಟ, ಕ್ರಮೇಣ ಸೋಲಿಗರಲ್ಲಿದ್ದ ಶೈವ ಸಂಪ್ರದಾಯದ ಜೊತೆಗೆ ವೈಷ್ಣವ ಸಂಪ್ರದಾಯದ ಪ್ರಭಾವವನ್ನು ಬೀರಿದ್ದಾರೆ. ಮುಂದುವರಿದು ಸೋಲಿಗರ ಹೆಣ್ಣನ್ನು ಮೋಹಿಸಿ ಮದುವೆ ಆಗುವುದರೊಂದಿಗೆ ವೈಷ್ಣವ ಸಂಪ್ರದಾಯವು ಈ ನೆಲಕ್ಕೆ ಗಾಢವಾದ ಸಂಬಂಧವನ್ನು ಹೊಂದಿತು. ಕಾಡುವಾಸಿಗಳಾದ ಸೋಲಿಗರು ಹೆಣ್ಣನ್ನು ಕೊಟ್ಟ ಕಾರಣದಿಂದ ವೈಷ್ಣವ ಸಂಪ್ರದಾಯದ ದೈವವಾದ ನಾರಾಯಣ ಅಥವಾ ರಂಗಸ್ವಾಮಿಯನ್ನು ಬಾವ ಎಂದು ಸಂಭೋದಿಸುವುದು ಹಾಗೂ ಈ ಸಂಪ್ರದಾಯಕ್ಕೆ ಚಾಚುತಪ್ಪದೆ ಇಂದಿಗೂ ನಡೆದುಕೊಳ್ಳುವರು. ಆದರೆ ತಮ್ಮ ಮೂಲದೈವಗಳ ಆಚರಣೆಗಳನ್ನು ಬಿಟ್ಟಿಲ್ಲ. ಅವುಗಳ ಜೊತೆಗೆ ಬಿಳಿಗಿರಿರಂಗ ಹೊಸ ಸೇರ್ಪಡೆ ಮಾತ್ರ ಆಗಿದೆ. ಇದು ಸಹಜವಾಗಿ ಬುಡಕಟ್ಟುಗಳ ಮೂಲ ಗುಣಗಳಲ್ಲಿ ಒಂದಾಗಿದೆ. ಪ್ರಭಾವಿಯಾದುದರ ಜೊತೆ ಸಂಘರ್ಷಕ್ಕೆ ಹೋಗದೆ, ‘ತಮ್ಮತನ’ಗಳನ್ನು ಬಲಿಕೊಡದೆ ಸಮನ್ವಯತೆ ಕಾಪಾಡಿಕೊಳ್ಳುವುದು ಇಲ್ಲಿ ಎದ್ದು ಕಾಣುತ್ತದೆ. ಇವರಲ್ಲಿನ ಈ ಗುಣ ಜಗತ್ತಿನ ಯಾವ ಜ್ಞಾನಿಗಳಿಗೂ ಕಡಿಮೆಯಿಲ್ಲ. ಎಂತಹುದೇ ಸಂದರ್ಭದಲ್ಲೂ ವಿವೇಕವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಇರುವುದು ಇವರಿಗೆ ದತ್ತವಾದ ಗುಣವಾಗಿದೆ. ಹಾಗೆಯೇ ಮತ್ತೊಬ್ಬರ ಗಳಿಕೆಯ ಹಣದಿಂದ ನಾನು ಬದುಕಬೇಕು ಎಂಬುದು ಇವರ ಜಾಯಮಾನದಲ್ಲೇ ಇಲ್ಲ. ಆ ಕಾರಣದಿಂದಲೇ ಸೋಲಿಗರ ಬೊಮ್ಮೆಗೌಡ ತನ್ನ ಮಗಳನ್ನು ವಿವಾಹವಾಗುವ ಸಲುವಾಗಿ ವಧುದಕ್ಷಿಣೆಯೆಂದು ವೈಷ್ಣವ ಪಂಥದ ದಾಸಯ್ಯ ಹನ್ನೆರಡುವರೆ ಕೊಂಗದಷ್ಟು ಚಿನ್ನದ ನಾಣ್ಯವನ್ನು (ಭವಿಷ್ಯ ಇದು ಬೆಳ್ಳಿ ನಾಣ್ಯ ಇದ್ದಿರಬೇಕು) ಕೊಟ್ಟಾಗ ಅದನ್ನು ಬೆಟ್ಟದ ಮೇಲೆ ನಿಂತು ತೂರಿಬಿಡುತ್ತಾನೆ. ಆದ್ದರಿಂದ ಸೋಲಿಗರಿಗೆ ಜೀವನ ಮೌಲ್ಯಗಳು ಮುಖ್ಯವಾಗಿತ್ತೆ ಹೊರತು ಹಣ-ಅಂತಸ್ತುಗಳಲ್ಲ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ. ಸೋಲಿಗರನ್ನು ಕಾಡುವಾಸಿಗಳು, ಅನಾಗರಿಕರು, ಗಿರಿಜನರು, ಪರಿಶಿಷ್ಟರು, ಬುಡಕಟ್ಟು ಜನರು, ಆದಿವಾಸಿಗಳು, ಮೂಢರು ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತರಾದರು ಇವರು ಪರಿಸರ ಪ್ರಜ್ಞೆವುಳ್ಳವರು, ನೀತಿವಂತರು, ಹಾಗೂ ವಾಸ್ತವವಾದಿಗಳು ಎಂಬುದನ್ನು ಅವರ ಒಡನಾಟದಿಂದ ಮಾತ್ರ ತಿಳಿಯಲು ಸಾಧ್ಯವಿದೆ.

ಪ್ರಸ್ತುತ ಸೋಲಿಗರು ಹಾಡಿದ ಬಿಳಿಗಿರಿರಂಗನ ಕಾವ್ಯವು ಕೆಲವು ಐತಿಹಾಸಿಕ ಸತ್ಯವನ್ನು ತಿಳಿಸುತ್ತದೆಯಲ್ಲದೆ, ಮುಂದಿನ ಅಧ್ಯಯನಕಾರರಿಗೆ ಪೂರಕ ಮಾಹಿತಿಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.