ಅತ್ತಿ ಕಣಿವೆ ಆದಿಲಿ ಬಂದ್ಬುಟ್ಟೆವ್ವ
ಪಾಪ ಇವ್ನ ಗಡ್ಡ ನೋಡು ಎಂಗಿದ್ದದು
ಅಕ್ಕ ಚಿಕ್ರಂಗಿ ಇವ್ನ ಗಡ್ಡ ನೋಡಕ್ಕ,
ಇವ್ನ ತಲೆ ನೋಡಕ್ಕ ಇವ್ನ ಗೊಡ್ಡು ಮೀಸೆ ನೋಡಕ್ಕ
ನೆನ್ನೆ ಬಂದ ದಾಸಪ್ನಲ್ಲಕ್ಕ ಇನ್ನೊಬ್ಬ ದಾಸಪ್ಪ
ಈ ದಾಸಪ್ಪ ಅಲ್ಲ ನೆನ್ನೆ ಬಂದ ದಾಸಪ್ಪ
ಬಾಳ ಉಸಾರಾಗಿ ಮಾತಾಡ್ತ ಇದ್ದ
ಇಂವ ಊಸಾರ್ ದಾಸಪ್ನಲ್ಲ
ದಡ್ಡ-ದಡ್ಡ ನನ್ನಂಗೆ

ಅಯ್ಯ ಬೆಳ್ಳಿ ಬೆಟ್ಟವೆ ಗೊತ್ತೆ ಇಲ್ಲsss || ತಂದಾನ ||

ಕೇಡಿ ಕೇಡಿ ನಿನ್ನಂಗೆ ಯಾರು? ಚಿಕ್ರಂಗಿ
ಈ ಉಡ್ಗಿ ಅಂಗೆ ಅಯ್ಯಯ್ಯೋ ನಮ್ಮಪ್ಪ

ನಾ ಮುಂದೆ ಹೋಗುತ್ತಿನಿ ನೀ ಮುಂದೆ ಬರುತ್ತಿsss
ನನ್ನ ಒಂದಿಗೆ ಬರುತಿಯಾsss || ತಂದಾನ ||

ನಂನ್ನೊಂದಿಗೆ ಬತ್ತಿಯಾ ಅಂದೊತ್ತಿಗೆ
ರಂಗಪ್ಪ ಮೀಸೆ ನುಲಿತಾ ಇದ್ದ ಅಪ್ಪಪ್ಪ
ಸೋಲಿಗ್ರೈಕ ನನ್ನೊಂದ್ಗೆ ಬತ್ತಿನಿ ಆಂದದಕ್ಕೆ

ಅಮ ಕೊನೆ ಮೀಸೆಯ ಸ್ವಾಮಿ ಉರಿ ಮಾಡಿsss || ತಂದಾನ ||

ಕೊನೆ ಮೀಸೆ ಉರಿ ಮಾಡಿಬಿಟ್ಟು ನಾರಾಯ್ಣ ಮೂರ್ತಿ
ಎಡಕ್ಕೆ ನೋಡುದ್ರೆ ಸೋಲುಗ್ರಬೊಮ್ಮೆ ಗೌಡ್ನ ಮಕ್ಳು
ಏನಯ್ಯ ನಮ್‌ ನೋಡ್ಬುಟ್ಟು ಮುಸಿ ಮುಸಿ ನಗ್ತನ ಮುದ್ಕಪ್ಪ
ಈ ಮುದ್ಕಪ್ಪ ನೋಡುದ್ರೆ ಇಂದ್ಗೆ ಸತ್ತನೋ ನಾಳ್ಗೆ ಸತ್ತನೋ
ಅದ್‌ ಗೊತ್ತಿಲ್ಲ ನಮ್‌ ನೋಡ್ಕಂಡು ನಗ್‌ನಾಡ್ತಾನೆ
ನೋಡ್ರಕ್ಕ ನೋಡ್ರಕ್ಕ ಚಿಕ್ರಂಗಿ, ದೊಡ್ರಂಗಿ,
ಚಿಕ್ಕಾಡಿ, ದೊಡ್ಕಾಡಿ ಸೋಲುಗ್ರ ಬೊಮ್ಮಗೌಡ್ನ
ಮಕ್ಕಳ್‌ ನೋಡಿ ಸಂತೋಷ ಪಡ್ತನೆ ದಾಸಪ್ಪ
ಏನಯ್ಯ ದಾಸಪ್ಪ ನಗ್‌ನಾಡ್ತಿಯೇ….

ಅಯ್ಯ ಗೊಡ್ಡು ಕೊನೆ ಮೀಸೆಯ ಉರಿಮಾಡಿsss || ತಂದಾನ ||
ಅಯ್ಯ ನೋಡ್ರಕ್ಕ ನೋಡ್ರಕ್ಕ ದಾಸಯ್ನ ವೇಸವsss
ಅಕ್ಕ ನಮ್ಮನ್‌ ನೋಡ್ಕಂದಕ್ಕ ಕೊನೆ ಮೀಸೆ ಉರಿಮಾಡಿ
ಯಾವೂರ ಕಾಣಕ್ಕ ಕೇಳಿರವ್ವsss || ತಂದಾನ ||

ಏಯ್‌ ಬೆಳ್ಳಿ ಬೆಟ್ಟಕ್ಕ ಬಂದಿದ್ದಿಯಲ್ಲ…
ನಾನು ಮುಂದ್‌ ಮುಂದೆ ಹೊಯ್ತಿನಿ
ಅಂದ್ಲು ಯಾರು ನಿನ್ನಾಗೆ ಕಿಲಾಡಿ
ಚಾರಿ ಕಿಲಾಡಿ ಆ ಉಡ್ಗಿ ಆಗೆ ಬಾರಿ ಕಿಲಾಡಿ
ಏಯ್‌ ದಾಸಪ್ಪ ನಾನು ಮುಂದ ಹೋಗ್ತಿನಿ ಬಯ್ಯ ಅಂದ್ಳು
ದಾಸಪ್ಪನ್ಗ ಆ ಉಡ್ಗಿ ನೋಡ್ಬುಟ್ಟು
ಇನ್ಯಾಕಯ್ಯ ಗಡ್ಡ ಮೀಸೆಯಲ್ಲ
ಇನ್ನೂ ಬೆಳ್ದು ಬುಡ್ತು ಇಸ್ಟು
ತೂರು ಆಡುತ್ತಾ ತಾರು ಆಡುತ್ತಾ

ಆಕಯ್ಯ ದೊಣ್ಣೆ ಕೈಯೊಳಗೆsss || ತಂದಾನ ||

ಕಕ್ಕೆ ದೊಣ್ಣೆ ಕೈಲಿಡ್ಕಂಡು ನಾರಾಯ್ಣ ಮೂರ್ತಿ ಏನ್ ಮಾಡ್ತಾಯಿದ್ದಾನೆ?
ಬೊಳ್ಳಬೊಳ್ಗ, ಮೆಲ್ ಮೆಲ್ಗಾ ಓಗ್ತಾ ಇದ್ದಾರೆ
ಗಕ್ಕನ್ ತಿರ್ಗ ನೋಡ್ಬುಟ್ಟ ಡೊಡ್ರಂಗಿ ನಿನ್ನಾಗೆ ಬಾಳ ಯುಕ್ತಿವಂತೆ
ಇವ ಕೇಡಿ ಚಿಕ್ರಂಗಿ, ಇವ ಬುದ್ಧಿವಂತೆ ಡೊಡ್ರಂಗಿ
ಅಕ್ಕ ಮೇಲುಗಿರಿ ಕೈಲಾಸ ಅಂದ್ರೆ ನಮ್ಮಪ್ಪನ್ ಮನೆ ಮನೆದೇವ್ರು
ತಿರ್ಪತಿ ಬಿಟ್ಟು ಅನ್ನೇಡ್ ವರ್ಸ ಆಯ್ತು
ಈ ಉರ್ ನಾಡಿಗೆ ಬಂದಿದ್ದಾರೆ
ಓಕಳಿ ರಂಗಪ್ಪ ನಮ್ ನಾಡಿಗೆ ಬಂದು
ಬೂದುಬಾಳಿಗೆ ಬಂದ್ಬುಟ್ಟಿದ್ದಾರೆ
ಅಲ್ಲಿ ಬಂದು ತಿರ್ಪತಿ ವೆಂಟ್ರಮಣಸ್ವಾಮಿ
ನಾಮಕ್ಕರ್ಣ ಮಾಡ್ಕಂಡು ಮಗ್ಗ-ಮರಳ್ಳಿ,
ರಂಜಕಲ್ಲು, ಎಗ್ಡದೇವನಕೋಟೆ,
ಪಿರಿಯಾಪಟ್ಣ, ಸಂತೆ -ಸರ್ಗೂರು
ನಮ್ಮ ಕರ್ನಾಟಕದಲ್ಲೆಲ್ಲಾ ದಾಸೋಹ ಮಾಡ್ಕಂಡು
ಬೆಂಗಳೂರು, ಬೀರಳ್ಳಿ ಎಲ್ಲಾ ದಾಸೋಹ ಮಾಡ್ಕಂಡು ….
ನಮ್ಮಪ್ಪನ್ ಮನೆ ದೇವ್ರಾಗ್ ಬೇಕಾದ್ರೆ ಸುಲಬ್ ವಲ್ಲ
ಈವೋತ್ತಿನ್ ದಿವ್ಸ ನೋಡಕ್ಕ ಆ ದಾಸಪ್ನೋರು
ನಮ್ ಮೇಲುಗಿರಿಕೆ ತಕ್ಕಂಡೋಗಿ ಬಿಟ್ಬುಟ್ರೆ
ಕಜ್ಜಿ ನೋಡಿ ಇದ್ಯಾವ್ ದಾಸಪ್ಪ ಅಂತ ಬಯ್ ಬೇಡಿ
ಅದೇ ರೀತಿ ಬಂದ್ಬುಟ್ರೆ ಏನ್ಮಾಡ್ತಿಯೇ ಆಗೆಂದ್ಬುಟ್ಟು
ದೊಡ್ರಂಗಿ ಬಾಳ ಬುದ್ದಿವಂತೆ
ಚಿಕ್ರಂಗಿ ಈ ಉಡ್ಗಿಯಾಗೆ ಕಿಲಾಡಿ

ಟಮ್ಮಟಮ್ಮನೆ ತಾಯಿ ಕುಣಿಯುತ್ತಾರೆsss || ತಂದಾನ ||
ಅಲ್ಲಿ ಮುಂದ್ಕೆ ಮೂರೆಜ್ಜೆ ಒಯ್ತಾನೆ ನಾರಾಯ್ಣಾsss
ಜಗ್ಗಿ ಕುಣ್ತಾವ ಮಾಡುತ್ತಾನೆsss || ತಂದಾನ ||

ಜಗ್ಗಿ ಕುಣ್ತಾವ ಮಾಡೊವತ್ಗೆ
ಆ ಸೋಲಿಗ್ರ ಬೊಮ್ಮಗೌಡ್ನ ಮಕ್ಳು
ಅಕ್ಕಕ್ಕ ನೀಡ್ರಕ್ಕ ನೋಡ್ರಕ್ಕ

ಅಕ್ಕ ದಾಸಯ್ಯ ವೇಸವ ನೋಡ್ರಕ್ಕ ವೇಸವಾದಂತೆ ದಾಸಯ್ಯsss || ತಂದಾನ ||
ಅಯ್ಯೋ ದಾಸಯ್ಯ ವೇಸ ನೋಡ್ಕೊಂಡು ಕುಣಿತವ್ರೆsss
ನೋಡಿರಲಕ್ಕ ದಾಸಯ್ಯsss || ತಂದಾನ ||
ಕಾರ್ಯ ಹೋದೆಲ್ಲಾ ಮೋರೆಲ್ಲಾ ಬತ್ತೋಯ್ತುsss || ತಂದಾನ ||
ಕೂರೀರ ಗ್ಯಾನ ನಿನುಗ್ಯಾಕsss || ತಂದಾನ ||
ಏಯ್ ಅಣ್ಣೇ ಊವ್ನಾಗೆಲ್ಲಾ ತಲೆಯಲ್ಲಬೆಳ್ಗಾಗಿsss
ಕನ್ನುಡ್ಗಿಯೆರ ಸುದ್ದಿ ನಿನಗ್ಯಾಕsss || ತಂದಾನ ||

ಅಯ್ಯೋ ಅಣ್ಣೆ ಉವ್ನಾಗ ತಲೆಯೆಲ್ಲಾ ಬೆಳ್ಳಗಾಗ್ ಬುಡ್ತು,
ಕನ್ನೆ ಉಡ್ಗೀರ ಸುದ್ದಿ ನಿನಗೇನು
ಅತ್ತಿ ಊವ್ನಾಗೆ ನೆತ್ತೆಲ್ಲಾ ಬತ್ತೋಗ್ ಬುಡ್ತು
ಕೋರಿ ಉಡ್ಗೀರ ಸುದ್ದಿ ನಿನ್ಗೇನು ದಾಸಯ್ಯ

ಕೇರಿಗೆ ನಡಿಯೇ ಮುದುಕಯ್ಯsss || ತಂದಾನ ||

ಕೇರಿಗೆ ನಡಿ ಅಂದ್ರೆ ದಾಸಪ್ಪ ಏನ್ಮಾಡ್ತ ಇದ್ದಾನೆ
ಏಯ್ ಸೋಲಿಗ್ರ ಬೊಮ್ಮೆಗೌಡ್ನ ಮಕ್ಳ ನೋಡ್ತಾ ….

ಬಡಗಾಲು ನೋಡುತಿನಿ ತೆಂಕಾಲು ನೋಡುತಿನಿsss
ಮುತ್ತಾಗದುವ್ವ ಮುಡಿತೀರಿsss
ಮುತ್ತಾಗದುವ್ವ ಮುಡಿತೀರಿsss || ತಂದಾನ ||

ಮುತ್ತುಗದುವ್ವ ಮುಡುಕೊಂಡು
ನಾರಾಯ್ಣ ಮೂರ್ತಿಯವ್ರು ಬರ್ವಾಗ
ಟಮ್ಮಟಮ್ಮನೆ ಕುಣ್ತಾ ಮಾಡ್ಬುಟ್ಟು ….
ಯಾವುರವ್ರಯ್ಯ?
ಅಯ್ಯ ಕೊಕ್ಕರೆಗೊಂಡು ಕೆರೆಯುಂಟಾ?
ದಾಸಯ್ಯಾನಿಗೊಂದು ಊರುಂಟಾ?
ಮೇಲುಸೀಮೆಯಿಂದ ಬಂದನಮ್ಮ ಉಟ್ಟಿದ್ದು ತಿರ್ಪತಿ
ಬೆಳದದ್ದು ಯರಕ್ ನಾಡು .
ಬಂದಿರೋದು ಗೋಕುಲದೇಸ
ನಾನು ಬಂದ ತಳವೇ ಗೊತಿಲ್ಲಮ್ಮ
ಮನೆ ಮನೆ ನಿದ್ದೆ ಮಾರಿ ಗುಡಿನಿದ್ದೆ ಅಂದ್ರು
ಅಯ್ಯಯೋ ನಮ್ಮಪ್ಪನ್ ಮನೆದೇವ್ರು ಬಿಟ್ಟೋಗ್ತಿರಲ್ಲ
ಅದಕ್ಕೊಂದಕ್ಕೆ ಸಂತೋಷ ಪಡ್ಬೇಕು ಅಂದ್ರು
ಸೋಲಿಗ್ರ ಬೊಮ್ಮೆಗೌಡ್ನ ಮಕ್ಕ
ಆವಾಗ ಬಂದ್ಬುಟ್ರು ಎಲ್ಲಾ

ಬೆಳ್ಳಿ ಬೆಟ್ಟಕ್ಕೆ ಬರುತ್ತಾರೆsss || ತಂದಾನ ||
ಮೇಲುಗಿರಿ ಚಂದ ಮೆರೆಯೊ ಮಂಟಪ ಚಂದsss
ಆಣೆಯ ಮೇಲೊಂದು ಅರಿನಾಮ ಬಲುಚಂದ || ಅಡಿರಿ ರಾಗಗಳ ||
ರಂಗಯ್ನ ಮಡದಿರುsss ರಂಬೆಯ ಚೆಲುವಿರುsss
ಬಂಗಾರದ ಕೈಯ ಬಳೆಯವರುsss || ಅಡಿರಿ ರಾಗಗಳ ||
ರಂಬೆಯ ಚೆಲುವೆರು ಲಕ್ಷ್ಮಿಯ ದೇವಿಯಂತೆsss
ಅಯ್ಯ ಮಂಗಳಾರ್ತಿಸ್ವಾಮಿ ಮಾಡುತ್ತಾರೆsss || ಅಡಿರಿ ರಾಗಗಳ ||

ಸ್ವಾಮಿ ನಾರಾಯ್ಣ ಮೂರ್ತಿಯವ್ರು
ಬಂದು ಪಟ್ಟೆ ಮಂಚದ ಮೇಗೆ ಕೂತುಕೊಂಡು
ನಾಚನೆಯಿತ್ತು ಕೋಟಿಗೆ ಬಡತನವನ್ನು ತಿದ್ದುಬುಟ್ಟು
ಮಾವಿಸ್ಣು ಬಂದು ಕೂತುಕೊಂಡು ಹಿಂದೆ ಮಾಡಿಲ್ಲ
ನನಗೆ ಮಂಗಳಾರ್ತಿ ಮುಂದೆ ಮಾಡಲ್ಲ
ಕಂದ ನನ್ನ ಮಡದಿಯಾಗಿರವ್ವ ಈ ವೊತ್ಯಾಕ್ ಮಾಡಿದ್ರಿ
ಏಯ್ ದಾಸಪ್ಪ ಅಂದ್ರೆ ದೇಸ ಕೆಡ್ಸಿದವ ನೀನು
ದಾಸ ಅಂದ್ರೆ ಯಾವತ್ತೊ ನೀನು ದೇಸ ಕೆಡ್ಸಿದಿಯೇ
ಈವೊತ್ತು ನಾಳೆಯಾರ್ ಬರ್ತಾರೆ
ಸನ್ವಾರ ದಿವ್ಸ ಅಂದೆ ಪಟ್ಟದ ಪಾರ್ವತಿ
ಬೆಟ್ಟದ ಚಾಮುಂಡಿ ತಾಯಿ ಸೋಸಲೆ ವನ್ನಾದೇವಿ
ಮುಡ್ಕುತೊರೆ ಮಲ್ಲಪ್ನ ಮಡ್ಡಿ ಗಂಗಾದೇವಿ
ಕೂಡ ಬರ್ತಾ ಇದ್ದಾರೆ
ನೀಲಗಿರಿ ಕೈಲಾಸಕ್ಕೆ

ಅವ್ರು ಅಂದ್ಕೊಂಡು ಊವ ಮುಡಕೊಂಡುsss || ತಂದಾನ ||
ಓ ಅಂದ್ಕೊಂಡು ಊವ ಅವ್ರು ಮುಡ್ಕೊಂಡು ಬರ್ವಾಗsss
ಮಂಡ್ಕ ಮಲ್ಲಿಗೂವ ತರಬೇಕುsss || ತಂದಾನ ||

ಎಣ್ಣೆಂಬ ಜಾತಿ ಅಂದ್ರ ಊ ಕಂದ್ರೆ ಬೌ ಆಸೆ ಬೌ ಆಸೆ ಮಾಡ್ಕಂಡು
ಏಯ್ …. ಮಡ್ಡಿರೆ …. ಬರ್ತಾ ಇದ್ದಾರೆ
ಪಟ್ಟದ ಪಾರ್ವತಿ, ಬೆಟ್ಟದ ಚಾಮುಂಡಿ ತಾಯಿ
ಸೋಸ್ಲೆ ವನ್ನಾದೇವಿ, ಮುಡ್ಕುತೊರೆ ಮಲ್ಲಪ್ಪ
ಮಲ್ಲಪ್ನ ಮಡ್ಡಿ ಗಂಗಾದೇವಿ ಕೂಡ ಬರ್ತಾ ಇದ್ದಾರೆ
ಅಯ್ಯೋ ಆ ಮುಡ್ಕುತೊರೆ ಮಲ್ಲಪ್ಪನವ್ರು
ಮಲ್ಲಪ್ನ ಮಡ್ಡಿ ಗಂಗಾದೇವಿ ಕೂಡ
ಪಟ್ಟದ ಪಾರ್ವತಿ ಕೂಡ ಬರ್ತಾ ಇದ್ದಾರೆ
ಅಂದ್ಕೊಂಡು ಚಂದಕೊಂಡು ಊವ ಮುಡ್ಕೊಂಡು ಬರ್ತಾರೆ
ಎಂಡಂದಿರು ಬೇರೆ ಕೂತ್ಗೋಳ್ ಬೇಕು ಗಂಡಂದೀರು ಬೇರೆ ಕೂತ್ಗೊಳಬೇಕು

ಅಯ್ಯೋ ಮಂಟ್ಟಕ್ಕೆ ತಕ್ಕಂತ ಮರುಗು ಮಲ್ಲಿಗೆ ತರಬೇಕುsss || ತಂದಾನ ||
ಮಂಟ್ಟಕ್ಕೆ ಬೇಕಾದ ಮರುಗು ಮಲ್ಲಿಗೆ ತರಬೇಕಾದ್ರ
ಎಣ್ಣೇ ಸ್ವಾಮಿನಾರಾಯ್ಣವ್ರು ಪಟ್ಟ ಉತ್ಸವ ಮಾಡ್ಕೊಂಡು
ಪಟ್ಟದ ಮೇಲೆ ಬಂದು ಕುಂತ್ಕೊಂಡು
ಜಗತ್ತಿಗೆ ಅಟ್ಟ ತಿದ್ದುಕೊಂಡು ಉಸ್ಸೋ ಅಂತ ಕುಂತ್ಗೊಂಡ್ರು
ಆಹಾ ಇನ್ನಾಕಯ್ಯ ನಮ್ಮ ದಾಸಪ್ಪ ಉಸ್ಸೋ ಅಂತ ಕುಂತ್ಬುಟ್ಟ
ಏನಯ್ಯ ಉಸ್ಸೋ ಅಂತ ಕೂತ್ಬುಟ್ಟಿದ್ದಾರೆ ಏನಯ್ಯ ಅಂದ್ರು
ಅಯ್ಯಯೋ ನಾಚನಟ್ಟಿ ಎರೊಂಬತ್ತು ಕೋಟಿಗೆ ಪಟ್ಟ ತಿದ್ದಬೇಕು
ಎಣ್ಣೆ, ಉಚ್ಚೆಣ್ಣೆ, ಬೆಪ್ಪೆಣ್ಣೆ, ಮಂಕೆಣ್ಣೆ
ನನ್‌ ಕೆಲ್ಸ ನಿಂಗೊತ್ತ ಅಂದ್ರು
ಆಹಾ ನಿನ್ ಕೆಲ್ಸ ನನ್ಗೆ ಚೆನ್ನಾಗೊತ್ತು
ಸ್ವಾಮಿ ಮುಡ್ಕುತೊರೆ ಮಲ್ಲಪ್ಪಾವ್ರು ಬತ್ತಾರೆ
ಅವರ ಮಡ್ದೀರು ಬತ್ತಾರೆ, ನಂಜಪ್ಪ ಬತ್ತಾರೆ
ನಮ್ಗೇನ್ ಬೆಲೆ ಕೊಡ್ತಾ ಇದ್ದೀಯೇ

ಅರ್ಸಿ ಇಳ್ಯಾವ ಕೊಡಬೇಕುsss || ತಂದಾನ ||
ಅಯ್ಯ ಆರಿಸಿ ಇಳ್ಯಾವ ಕೊಟ್ಟಾರೆ ನೋಡೆಣ್ಣೇsss
ನಾನು ಜಾಲದ ಊವ ತರುತ್ತೀನಿsss || ತಂದಾನ ||
ಅಯ್ಯ ಜಾಲದ ಊವ ತರ್ತಿನಿ ತೊಳ್ಸಮ್ಮsss
ಮಂಟ್ಟಕ್ಕೆ ತಕ್ಕಂತ ತುರುಗು ಮಲ್ಲಿಗೆ ತರುತ್ತೀನಿsss || ತಂದಾನ ||

ಎಣ್ಣೆಂಬ ಜಾತಿ ಏನೆಂದ್ರೆ ಊವಂದ್ರೆ ಬೌ ಆಸೆ
ಅಯ್ಯಯೋ ನಮ್ಮಪ್ಪ ಇನ್ಯಾಕ ಅಕ್ಕಕ್ಕ ತೊಳ್ಸಮ್ಮ
ಲಕ್ಷ್ಮಿದೇವಿ ಸ್ವಲ್ಪ ಈ ನನ್ನ ಯಜಮಾನ ಆಗಿರೋ ….
ಈ ವೋತ್ತಿನ್ ದಿವ್ಸ ನೋಡು ….

ಅರ್ಸಿ ಇಳ್ಯಾವ ಕೊಡಿರವ್ವsss || ತಂದಾನ ||

ಅರ್ಸಿ ಇಳ್ಯಾವ ಕೊಟ್ಬುಟ್ಟಿದ್ದಾರೆ
ನಾರಾಯ್ಣ ಮೂರ್ತಿಯವ್ರು ಏನ್ ಮಾಡ್ತ ಇದ್ದಾರೆ
ಉಸಿನಗೆ ನೆಗ್ ನಾದ್ತ ನಿತ್ಕೊಂಡ
ಆಹಾ ಏಯ್ ಮಡ್ಡಿ ….
ಏನ್ರಿ ಅಂದ ಏನ್ರಪ್ಪ ನಮ್ಮೆಜ್ಮಾನ್ರೆ ಅಂದ್ರು
ಆಲ್ ಕರಿಯಾಕೆ ನಿನ್ ತಂದೆ ಆಲು ಕಾಯ್ಸಕೆ ನಿನ್ನ ತಂದೆ

ಬೆಣ್ಣೆ ಕಡೆಯೋಕೆ ತರಬೇಕುsss || ತಂದಾನ ||
ಅಯ್ಯ ಬೆಣ್ಣೆ ಕಡೆಯಾಕೆ ಆರಾರ ತರಬೇಕುsss
ಸೋಲಿಗ್ರ ಬೊಮ್ಮನ ಮಗಳಂತೆsss
ನಾನು ಸೋಲಿಗ್ರ ಬೊಮ್ಮೆಗೌಡ್ನ ಮಗಳ ತರ್ದಿದ್ದ ಮೇಗೆಯsss
ನಾನು ತೇರ ತಡಿಗ ತಿಮ್ಮಯ್ಯನಲ್ಲsss || ತಂದಾನ ||
ತೇರ ತಡಿಗ ತಿಮ್ಮಯ್ನು ನಾನಲ್ಲsss
ಮೇಲುಗಿರಿಕೆ ರಂಗಯ್ನುಲ್ಲsss
ಏಯ್ ಮೇಲುಗಿರಿಕೆ ರಂಗಯ್ಯನು ನಾನಲ್ಲsss
ಜಗತ್ತಿಗೆ ದೊಡ್ಡವನು ನಾನಲ್ಲsss || ತಂದಾನ ||

ತಾಯವರಿಗೆ ತುಂಬಾ ಚಿಂತೆ ಬಂದ್ಬುಡ್ತು
ಅಯಯ್ಯೋ ನಮ್ಮಪ್ಪ ಈ ಆಳಾದ್ ದಾಸಯ್ನಿಗೆ
ಅರಿಸಿನ ಕೊಟ್ಬುಟ್ಟು ನಾವು ಎಂತ ಕೆಲ್ಸ ಆಗೋಗ್ ಬುಡ್ತು
ಕೊಟ್ಬುಟ್ಟು ನಾವು ಕೆಟ್ಟೊ ಅಂದ್ಬುಟ್ಟು
ಸೋಲಿಗ್ರ ಬೊಮ್ಮೆಗೌಡ್ನ ಪೋಡಿಗೋಗ್ತಾನೆ
ಸೋಲಿಗ್ರ ಬೊಮ್ಮೆಗೌಡ ಪೋಡು ಅಂದ್ರೆ
ಗುರುವಿನ ಗದ್ದೆ ಅತ್ರ ಓಗ್ತಾನೆ
ಆಹಾ ಸೋಲಿಗ್ರ ಬೊಮ್ಮೆಗೌಡ ಅಂದ್ರೆ ಏನ್ಮಾಡ್ತ ಇದ್ದಾನೆ
ಎಡಗಡೆ ಮೂಚೀಲ ಆಸ್ಗಂಡು
ಬಲಗಡೆ ಗೆಜ್ಜೆದೊಣ್ಣೆ ಇಟ್ಕಂಡು ಕೂತ್ಬುಟ್ಟಿದ್ದಾನೆ

ಅಯ್ಯ ಜಾಗ ಕೊಡಯ್ಯ ಬೊಮ್ಮೇಗೌಡ sss || ತಂದಾನ ||
ಅಯ್ಯ ಯಾವೂರ ದಾಸಯ್ಯ, ಯಾವೂರ ಕೇರಿಯವ್ನsss
ಮತ, ಕುಲವ ಹೇಳು ದಾಸsss || ತಂದಾನ ||

ಅಪ್ಪ ಬೊಮ್ಮೆಗೌಡ್ರೆ ನಮ್ಗೆ ಯಾವ ಕುಲವುಂಟು?
ಮತ ಉಂಟಾ?
ಕೊಕ್ಕರೆಗೆ ಒಂದು ಕೆರೆ ಉಂಟಾ?
ದಾಸರಿಗೆ ಒಂದು ಊರುಂಟಾ?
ದಾರಿತಪ್ಪಿ ಬಂದ್ಬುಟ್ಯಪ್ಪ

ಸ್ವಲ್ಪ ಜಾಗ ಕೊಡಯ್ಯ ಬೊಮ್ಮೆಗೌಡsss || ತಂದಾನ ||

ನೋಡಪ್ಪ ಈವೊತ್ತಿನ್‌ ದಿವ್ಸದಲ್ಲಿ… ಅವ್ವ ಚಿಕ್ರಂಗಿ
ಏನಪ್ಪ…? ಏಪ್ಪಾ…? ಅಪ್ಪನಾ ಕೂಗ್ತಾರೆ.
ಬೊಮ್ಮೆಗೌಡ್ನ ಕೂಗುವಾಗ…
ಅವ ಸೋಲುಗ್ರ ಬೊಮ್ಮೆಗೌಡ ಅಂದ್ರೆ
ಪಗಡೆ ಒಂದ್ಕಡೆ, ಚಿಕಾಣಿ ಮೂಲೆ ಚೀಲ ಒಂದ್ಕಡೆ ಇಟ್ಬುಟ್ಟಿದ್ದಾರೆ
ಅಡ್ಗೇನಮ್ಮ ಮಾಡಿದ್ದೀರಿ?
ಅಪ್ಪ ಈವೊತ್ತು ಏನು ಊಟ ಇಲ್ಲಪ್ಪ
ಅಣ್ಣೆ ಸೊಪ್ಪು ಆರ್ಕಿನ ಅಂಬಿಲಿ ಕಾಯ್ಸಿದ್ದೀವಿ

ದಾಸಯ್ನಗೆ ಸ್ವಲ್ಪ ಕೊಡಿರವ್ವsss || ತಂದಾನ ||
ಅಯ್ಯ ದಾಸಯ್ನಿಗೆ ಸ್ವಲ್ಪ ಕೊಡರ್ವ್ವ ಎನುವಾಗsss
ಬೊಳ್‌ ಬೊಳ್ಗೆ ಅಡ್ಡ ಎತ್ತುತ್ತಾರೆsss || ತಂದಾನ ||

ಬೊಳ್‌ ಬೊಳ್ಗೆ ಅಡ್ಡ ತೆಕ್ಕೊಂಡು
ಏನ್ಮಾಡ್ತಾನೆ ನಾಲ್ಕು ದಿಕ್ಕೂವೆ ನೋಡ್ತಾನೆ
ಆರು? ನಾರಾಯಣ
ಏಯ್‌ ದಾಸಯ್ಯ
ಏನ್ರಪ್ಪ ಬೊಮ್ಮೆಗೌಡ
ಕೋಲ್ಗುಳೀಕೋಗಪ್ಪ, ಅಲ್ಲಿ ಸ್ವಲ್ಪ ಊಟ ಮಾಡ್ಕಂದು ಮನಿಕೋಗಪ್ಪ ಅಂದ್ರು

ಅಂವ ಮೆಲ್‌ಮೆಲ್ಗೆ ಸ್ವಾಮಿ ವೋಗುತ್ತಾರೆsss || ತಂದಾನ ||

ಮೆಲ್‌ ಮೆಲ್ಗೋಗಿ ನಾರಾಯ್ಣಮೂರ್ತಿಯವ್ರು
ಸಂಕು ಜಾಗ್ಟ ಮಡ್ಗದ್ರು ಜಾಗ ಚಿಕ್‌ದಾಗ್ಬುಡ್ತು

ಅಯ್ಯೋ ಜಾಗ ಕೊಡಯ್ಯ ಬೊಮ್ಮೆಗೌಡ || ತಂದಾನ ||
ಜಾಗ ಕೊಡಪ್ಪ ಬೊಮ್ಮೆಗೌಡ ಅಂತೇಳುವಾಗsss

ಕೋಳಿಗಳೆಲ್ಲ ಚಿಂಯ್ಯೋ ಪಂಯ್ಯ ಅಂತ ಸಾಯ್ತ ಇದ್ದವಲ್ಲ
ಅಮ್ಮ ದೊಡ್ರಂಗಿ ಇದ್ಯಾಕೊ ದಾಸಪ್ನ ಗಿಲ್ಮೇಲಿ
ಕೋಳಿಯಲ್ಲ ಪತ್ರಗಟ್ತವೆ ನೋಡ್ರಮ್ಮ ಅಂದ್ರು
ಅಪ್ಪಪ್ಪ ಈ ದಾಸಪ್ಪ ಏನ್ಮಾಡ್ತ ಇದ್ದಾನೆ

ಅವ್ರು ಕುಕ್ರಗಾಲ್ನಲ್ಲಿ ಕೂತಿದ್ದಾರೆsss || ತಂದಾನ ||

ಕುಕ್ಕರ ಗಾಲ್ನಲ್ಲಿ ಕೂತ್ಬುಟ್ಟಿದ್ದಾರೆ ನಾರಾಯ್ಣ ಮೂರ್ತಿಯವ್ರು
ಅಪ್ಪಪ್ಪ ನೋಡಪ್ಪ ನೋಡಪ್ಪ ಕೋಳಿಗಳೆಲ್ಲಾ ಸತ್ತೋಯ್ತಿದ್ದವೆ
ದಾಸಪ್ನ ಬೇಗ ಕಡಸ್ಯೆಪ್ಪ

ಅಲ್ಲಿ ಬಿರ್ರನೆ ಬೆಂಕಿಯ ಆಕಿರಯ್ಯsss || ತಂದಾನ ||

ಆಗನೋ ದೊಡ್ರಂಗಿ ವೋಗಿ
ಬಂಡಿಗೂಡು ಗೊತ್ತುತಾನೆ?
ಬಂಡಿಗೂಡು ತೆಕ್ಕೊಂಡೋಗಿ
ಕಾರೆ ಅಂಬ ಬಂಡಿ ಗೂಡ್ಗೆ ಚೆನ್ನಾಗಿ ಬೆಂಕಿ ಆಕ್ಭುಟ್ಟು
ಮನಿಕೊ ದಾಸಪ್ಪ ಅಂದ
ದಾಸಪ್ಪ ಆಗ ಸನ್ನೆ ಮಾಡ್ತಾನೆ

ಮೂಡಲ ನೋಡುತವ್ರೆ ಬಡಗಲು ನೋಡುತವ್ರೆsss
ತೆಂಕ ದಿಕ್ಕಲು ನೋಡುತ್ತಾರೆsss || ತಂದಾನ ||

ತೆಂಕ್ಕ ದಿಕ್ಕ ನೋಡ್ಬುಟ್ಟು ನಾರಾಯಣವ್ರು
ಮೂರು ದಿಕ್ಕು ನೋಡುದ್ರು
ಆಗ ದೇವೇಂದ್ರನಿಗೆ ಐಕ್ಯ ಕೊಟ್ರು
ಮೂಡಲ ಬರ ಆಕ್ರ ಮಳೆ
ಬಡಗಲು ದಿಕ್ಕು ಬಲಾಗ್ರ
ಎಂಟು ದಿಕ್ಕು ಬಲಾಗ್ರ
ಎಂಟು ದಿಕ್ಕು ನಾಲ್ಕು ದಿಕ್ಕೂ ಬಲಾಗ್ರ
ಸೋಲುಗ್ರ ಬೊಮ್ಮೆಗೌಡ್ನ ಪೋಡ್ನೊಳ್ಗೆ

ಅಯ್ಯ ಕಾರ ಮಳೆಯಂತೆ ಕರೆಬೇಕುsss || ತಂದಾನ ||
ಕಾರ ಮಳೆಯಂತೆ ಕರಿಬೇಕು ಅಂತ ಕೂತ್ಬುಟ್ಟsss
ವಿಷಗಾಳಿ ಬೀಸ್ತು ಕಾರ್ ಮಳೆ ಬಂದಾಯ್ತುsss
ಗಡಗಡ್ನೆ ದಾಸಯ್ಯ ಒದ್ರುತ್ತಾರೆsss || ತಂದಾನ ||

ಏಯ್ ಚಿಕ್ರಂಗಿ ದಾಸಪ್ಪ ಸತ್ಯೋಗ್ ಬುಡ್ತಾನೆ
ಆ ದಾಸಪ್ನ ಸ್ವಲ್ಪ ಕುಸ್ಮದೇವಿ ಮಲ್ಗಾಳಲ್ಲ
ಆ ಮಂಚದ ಕೆಳ್ಗಾದ್ರು ಬುಡುವ್ವ ಅಂದ್ರು
ಅಯ್ಯೋ ದಾಸಪ್ಪ ಮರಿಯೊಂದ್ಗು ಬೇಡ
ಕೋಳಿಯೊಂದ್ಗು ಬೇಡ ಅಂದ್ಬುಟ್ಟು
ಕಕ್ಕೆಸೊಪ್ಪಿನ ಗುಳ್ಳೊಳಗೆ ಬೆಳ್ಳಿಸೊಪ್ಪಿನ ಮಂಚದ ಮೇಲೆ
ಮಲ್ಗಿದ್ದಾಳೆ ಕುಸ್ಮದೇವಿ
ಅಯ್ಯೋ ದಾಸಪ್ಪ ಬನ್ನಿ ಬನ್ನಿ ನಮ್ ಕುಸ್ಮದೇವಿ ಮಲ್ಗಿದ್ದಾಳೆ
ಆ ಮಂಚದ ಕೇಳ್ಗಾದ್ರು ಮನಿಕಪ್ಪ ಅಂದ್ರು
ಏನ್ ದಾಸಪ್ಪ ಗಡ ಗಡ ಗಡ್ನೆ ನಡಿಕೊಂಡು

ಮೇಲು ಮುಸ್ಕಂತೆ ತೆಗಿತ್ತಾರೆsss || ತಂದಾನ ||

ಮೇಲು ಮುಸ್ಕ ತೆಗ್ದು ನೋಡ್ತಾರೆ
ನಾರಾಯ್ಣ! ಸೂರ್ಯ ಆತರ ಇಲ್ಲ
ಚಂದ್ರನೂ ಆತರ ಇಲ್ಲ
ಲಕ್ಸದ ಗೊಂಬೆಯು ಆ ತರ ಇಲ್ಲ
ಅಯ್ಯಯೊ, ನಮ್ಮ ಜಾತಿಲಿ ಇಂತವ್ರು ಇಲ್ವಲ್ಲ
ನಮ್ಮ ಕುಲ್ದಲ್ಲಿ ಇಂತ ತರವಾದ ಉಡುಗ್ರು ಇಲ್ಲ

ಅಯ್ಯೋ ಪಟ್ಟೆ ಮಂಚಕೆ ನೀನು ಬರಬೇಕುsss || ತಂದಾನ ||

ಪಟ್ಟ ಮಂಚಕ್ಕೆ ಕಕ್ಕೆ ಸೊಪ್ಪಿನ ಮಂಚಕೆ ಕರಕೊಂಡು
ಕುಸ್ಮದೇವಿ ಮಲ್ಗಸ್ ಕೊಂಡು
ಏನಯ್ಯ ಗಿಣಿಮರಿ ಗಿಣಿಮರಿ
ನಾರಾಯಣಮೂರ್ತಿಯವ್ರು ಮನಿಕೊಂಡ್ರು
ಅಯ್ಯೋ ನೀನು ಮನಿಕೊಂಡ್ರೆ ಕೋಲಿಕೂಗ್ತಾ ಇದೆ
ಲೋಕ್ವೆಲ್ಲಾ ಬೆಳಗಾಗ್ತ ಇದೆ

ಎದ್ರು ನಾರಾಯ್ಣ ಬೆಳಗಾಯ್ತುsss || ತಂದಾನ ||
ಚೆಲ್ಲಿದರು ಮಲ್ಲಿಗೆಯ ಬೇಳ್ಲಿ ಬೆಟ್ಟಾದ ಮ್ಯಾಗೆsss
ಅಂದಾ ಚೆಂದಾದ ಮಾಯ್ಕಾರ ರಂಗಪ್ಪನಿಗೆ sss || ಚೆಲ್ಲಿದರು ||
ಬೆಳ್ಳಿ ಬೆಟ್ಟಾದ ಮ್ಯಾಗೆ ಚೆಲ್ಲಿದರು ಮಲ್ಲಿಗೆಯsss
ಅಂದಾದ ಚೆಂದಾದ ಮಾಯ್ಕಾರ ರಂಗಪ್ಪನಿಗೆ sss || ಚೆಲ್ಲಿದರು ||
ಕಾಡ ಸೋಲಗಿತ್ತಿ ಕಾಡಿಗೆ ಒಂಟವಳೆsss
ಚಿಗ್ರು ತತ್ತವಳೆ ಸಿರುಗಂದ ರಂಗಯ್ಯಾ sss || ಚೆಲ್ಲಿದರು ||
ಅವ ಚಿಗ್ರು ತತ್ತವಳೆ ಸಿರುಗಂದ ರಂಗಯ್ಯಾ sss
ಅಯ್ಯ ಒಡ್ಡು ನೋಡಯ್ಯ ಮಯಿಮೆಯsss || ಚೆಲ್ಲಿದರು ||
ನೀವು ಎಲ್ಲಿಂದ ಬಂದಿದ್ದೀರಿ ತಳ್ಕಾಡ ತವರಿಂದsss
ತಿರ್ಪತಿ ಬಿಟ್ಟು ಎಸ್ತೋತ್ತಲಾಯ್ತು sss || ಚೆಲ್ಲಿದರು ||
ತಿರ್ಪತಿ ಬಿಟ್ಟಿವಿರಿ ರಂಗಯ್ಯ ಸನ್ವಾರ ದಿವ್ಸಯ್ಯsss
ತಳ್ಕಾಡಿಗಂತೆ ಬಂದೀವಿ ರಂಗಯ್ಯ sss || ಚೆಲ್ಲಿದರು ||

ಯಳಂದರೂ ತಾಲ್ಲೂಕು, ಬಿಳಿಗಿರಿರಂಗಪ್ನ ಬೆಟ್ಟ
ಸ್ವಾಮಿಯವ್ರು ಸಿವಪೂಜೆ ಅನ್ನೇಡ್ ಗಂಟೆಗೆ ಕರೆಂಟಾಗಿ ಆಗ್ಬೇಕು
ಬಕ್ತಾದಿಗಳೆಲ್ಲ ಬರ್ತಾ ಇದ್ದಾರೆ
ದೊಡ್ದ ಜಾತ್ರೆ , ಸಂಕ್ರಾಂತಿ, ತೆಪ್ಪ
ಸೋಲುಗ್ರ ಬೊಮ್ಮೆಗೌಡ್ನ ಮಕ್ಳು ಅಂದ್ರೆ ಐದ್ ಕುಲ್ದವ್ರು
ಕುಲ ಅಂದ್ರೆ ಯಾವ್ದು?
ಬೆಳ್ಳಿಕುಲ, ತನಿರ್ ಕುಲ. ಆಲ್ ಕುಲ, ಪಣಿರ್ ಕುಲ
ಆ ಕುಲ್ದವ್ರಿಗೆಲ್ಲ ಮದ್ಯೆ ಯಾರು ಅಂದ್ರೆ
ಬೆಳ್ಳಿ ಕುಲ್ದವ ಕೋಲ್ಕಾರನ ಕೆಲ್ಸ
ಆಲ್ರ ಕುಲ್ದವ ಪಟ್ಗಾರ
ಆಹಾ ಯಾರು ನೀವು?
ನಾನು ಪಟ್ಟಗಾರ
ಏಯ್ ನನ್ ದೇವ್ರಿಗೆ ಬರ್ದವನ್ಗೆ ಆಣೆಸರ
ಆರ್ಯಾರು ಯೇಳವ?
ಕೋಲ್ಕಾರ
ದಾಸೇಗೌಡ
ದಾಸೆಗೌಡ….
ದಾಸೆಗೌಡ ಅಂದ್ರೆ ಬೆಳ್ರ ಕುಲ್ದ ವಂಸ
ಬೆಳ್ಳಿ ಕುಲ ಆ ವಂಸದವ್ರು ಅಂದ್ರೆ ಐದುಕುಲ

ಬೆಳ್ಳಿ ಬೆಟ್ಟಾದಲ್ಲವ್ನೆ ಬಿಳಿಗಿರಿ ರಂಗಪ್ಪಸ್ವಾಮಿsss
ಐದು ಕುಲ್ದ ಯೆಣ್ಣ ತಂದಿದ್ದೀರಿsss
ಐದು ಕುಲಕೆ ದಾಸನಾದ ಬಾವಯ್ಯsss
ಬಾವ ರಂಗಯ್ಯ ತೇರಿಗೆ, ಬಾವ ರಂಗಯ್ಯ ತೇರಿಗೆsss
ಆಕಯ್ಯ ಬಾವ ಅಂದ್ರು
ಕಗ್ಗಲು ಬಟ್ಟೆಯವ್ಳೆ ಮುಗ್ಗಲು ತುರ್ಬಿನವಳೆsss
ಕುರುಗುಂಜಿ ರೂಪ ತಾಳುತ್ತಾರೆsss
ಕಗ್ಗಲು ಬಟ್ಟೆಯವ್ಳೆ ಮುಗ್ಗಲು ತುರ್ಬಿನವಳೆsss
ಕುರುಗುಂಜಿ ರೂಪ ತಾಳುತ್ತಾರೆsss
ಕಗ್ಗಲು ಬಟ್ಟೆ ಸೋಲುಗಿತ್ತಿsss

ನೋಡ್ಬುಟ್ಟ ರಂಗನ ಇನ್ಯಾಕಪ್ಪ,
ಇನಾಕಯ್ಯ, ಕಗ್ಗಲು ಬಟ್ಟೆ,
ಮುಗ್ಗಲು ಕುರವಂಜಿ
ಯೆಣ ಗಂಟಾ ಕಂಡು ಬತ್ತಾ ಇದ್ದಾರೆ
ನೋಡ್ಡ ರಂಗಪ್ಪ ನಿಂಗ ತಕ್ಕಂತ ರೂಪ ನಾನ್ ತಾಳ್ಬೇಕು