ರಂಗಯ್ಯ ತೇರು ಸನ್ವಾರ ಬರತ್ತದೆsss
ತೇರಿಗೆ ನಡಿಯೋ ರಂಗಿ ಅಕ್ಕsss
ತೇರಿಗೆ ನಡಿಯೋ ರಂಗ ಬಾವsss

ಅಪ್ಪಪ್ಪ ಅಂದ್ಬುಟ್ಟು ಇನ್ಯಾಕಯ್ಯ
ಈ ಮಾಯದ ಸಂಕುದಾರಿ ಅಂದ್ರೆ
ಸೋಲುಗ್ರ ಬೊಮ್ಮೆಗೌಡ್ನ ಮಕ್ಳ ನೋಡ್ಬುಟ್ಟು
ಇಂತ ಉಡ್ಗಿ ಇನ್ನಿದ್ದದ

ಕಣ್ಣುಬ್ಬ ವಡೆಯುತವ್ನೆ, ಮೇಲಣ್ಣ ತಿರುಗ್ಸಸ್ತವ್ನೆsss
ಕಯ್ ಬೀಸಿ ಸನ್ನೆ ಮಾಡುತ್ತಾರೆsss

ಅಕ್ಕ ಆವೂರ್ ದಾಸಯ್ಯ ನೋಡಕ್ಕ
ಕಯ ಬೀಸಿ ಸನ್ನೆ ಮಾಡ್ತವನಲ್ಲ
ನೋಡ್ರಕ್ಕ ನೋಡ್ರಕ್ಕ ಆ ದಾಸಪ್ಪ ಯೇಳಿದ್ದು
ಅಯ್ಯೋ ಪಾಪ!
ಅಯ್ಯೋ ಪಾಪ! ಇಟ್ ಕಾಣ್ದೆ ಬಂದಿದ್ದಾನೆ
ಊಟ ಕಾಣ್ದೆ ಬಂದಿದ್ದಾನೆ
ಅದ್ಕೆ ನಿಂಗೆ ಕಯ್ಯ ಬೀಸಿ ಸನ್ನೆ ಮಾಡ್ಬುಟ್ರಲ್ಲ
ಅದ್ಕೆ ಕೋಪ ಬಂತ?
ಅದ್ಕೆ ಬೊಳ್ಳ ಬೊಳ್ಳಗೆ ಬಂದ
ಎಲ್ಲಿಗೆ ಬಂದ?
ಬೇರ್ ತಾಳಿಗೆ ಬಂದ
ಸೋಲಿಗ್ರ ಬೊಮ್ಮೆಗೌಡ್ನ ಮಕ್ಳು ಏನ್ಮಾಡ್ತ ಇದ್ದಾರೆ?
ಎಲ್ಲಾ ಸೇರ್ಕಂಡ್ರು
ಇವ್ರಂಗೆ
ಕೋರಿರ್ ಮಕ್ಕ ಎಲ್ಲಾ ಸೇರ್ಕೊಂಡು

ಕಗ್ಗಲು ಬಟ್ಟೆಯವಳೆ, ಮುಗ್ಗಲು ದೂಪದವಳೆsss
ಕುರಗುನ್ಜಿ ರೂಪನ ತುರುಬಿನವಳೆ sss || ತಂದಾನ ||
ಅಯ್ಯ ಕುರಗುಂಜಿ ರೂಪನ ತುರ್ಬ ಕಟ್ಕೊಂಡಂತೆsss
ರಂಗಯ್ಯನ ತೇರು ಸನುವಾರsss || ತಂದಾನ ||

ರಂಗಪ್ಪನ ತೇರು ಎಲ್ಲಾ ಮಡ್ಬುಟ್ರು
ಸೋಲುಗ್ರ ಬೊಮ್ಮೆಗೌಡ್ನ ಮಕ್ಕ
ಪಾಪ ನೋಡ್ಡ
ಏನಯ್ಯ ಒಂದ್ಸಾರಿ ಕಣ್ ಬಡ್ಡ್ ಬುಟ್ರೆ
ಇಂತ ಉಡ್ಗೀರು ಕಾಡಿನಲ್ಲಿ ಉಟ್ಬೇಕು
ಪೋಡಲ್ಲಿ ಬೆಳಿಬೇಕು
ಈ ಪೋಡಲ್ಲಿ ಉಡ್ಗಿ ತಂದ್ಬುಟ್ರೆ ನಾನು
ಇನ್ ಮಾತ್ರ ಯಿಂದ ಮುಂದೆ ಯಾರೂ ಇಲ್ಲ
ಈ ಉಡ್ಗಿ ಇಡ್ಕೊಂಡ್ರೆ ಸೋಲುಗ್ರ ಬೊಮ್ಮೆಗೌಡ್ನ ಮಕ್ಳೆಲ್ಲಾ
ಬಾವ ಅಂದ್ಬುಟ್ರೆ ಸಾಕು ಅಯ್ಯೋ ನಮ್ಮಪ್ಪ

ನನ್ನ ಬಂಗಾರ್ಕೆ ಇವರು ಕಾಮಂದರಂತೆsss || ತಂದಾನ ||

ರೂಪು ಕೊಟ್ಬುಟ್ಟ ನಾರಾಯ್ಣ
ಚಿಕ್ಕಾಡಿ, ದೊಡ್ಕಾಡಿ, ಚಿಕ್ರಂಗಿ, ದೊಡ್ರಂಗಿ
ಕೇತಿ, ಕೇತಿ ದಂಡೆ ಮಾದಿ, ಮಾದಿ ದಂಡೆ ಕುಸ್ಮದೇವಿ
ಎಲ್ಲಾ ತೇರಿಗೆ ಬಂದ್ಬುಟ್ರು
ತೇರಿಗೆ ಬರ್ವಾಗ ಏನ್ಮಾಡ್ತ ಇದ್ರು
ಆಗಲ್ ಗಾತ್ರ ಸಂಕು ಮುಗಲ್ ಗಾತ್ರ ಜಗ್ಟೆ ವೊತ್ಗಂಡೂ
ಯೆಗ್ಗಜ್ಜಿ ಮೂರ್ ಕಂಡ್ಗ
ತುರ್ಗಜ್ಜಿ ಮೂಗಂಡ್ಗ ಕೋಟಾ ಸೆರ್ಗ ಒದ್ಕಂಡು

ಅವ್ರು ಮೇಲ್ ಮೆಲ್ಗ ಸ್ವಾಮಿ ಬರುತ್ತಾರೆsss || ತಂದಾನ ||

ಮೆಲ್ ಮೆಲ್ಗೆ ಬರ್ವಾಗ ಅಪ್ಪ ದಾಸಪ್ನೋರು
ಯಾವ್ ಕಡೆ ಬಂದುಟ್ರು?
ಪಡುದಿಕ್ಕು ಗಾಳಿ ಅಲ್ವಾ
ಈ ದೊಡ್ ತೇರಿನ್ ತಿಂಗ ಗಾಳಿ ಬೀಸ್ಬುಡ್ತು
ಪಡುದಿಕ್ಕಿಂದ ಬಂದ್ಬುಟ್ರು

ಅಪ್ಪ ಮೂಡಲು ಬರಬೇಡ ಬಡಗಲು ಬರಬೇಡsss
ಗಾಳಿ ತಪ್ಪಿತೆ ಬರುದಾಸsss || ತಂದಾನ ||
ಯಾವೂರ ದಾಸಯ್ಯ ಯಾವೂರ ದಾಸಯ್ಯ
ಯಾಕಯ್ಯ ಬಂದೆ ಕಜ್ಜಿ ಕಾಟ || ತಂದಾನ ||

ಯಾಕಯ್ಯ ಬಂದೆ ಕಜ್ಜಿಕಾಟದಲಿ ನೀನು
ಅಮ್ಮ ಸ್ರೀನಾರಾಯಣ್ ವಾಸ್ತವ್ವ್ಯ ನಾನು ಬಂದ್ಬುಟ್ಟೆ
ಸೋಲುಗ್ರ ಬೊಮ್ಮ…. ಕೇಳುದ್ರು
ಚಿಕ್ಕಾಡಿ, ದೊಡ್ಕಾಡಿ, ಚಿಕ್ರಂಗಿ, ದೊಡ್ರಂಗಿ
ಇಂತವರೆಲ್ಲಾ ಪೂರ ತೆಕ್ಕೊಂಡೋಗಿ
ಇವರ ಕಯ್‌ಲಿ ಕೊಟ್ರು
ಯಾರ ಕಯ್‌ಲಿ?
ಕುಸ್ಮದೇವಿ ಕಯ್‌ಲಿ ಕೊಟ್ರು
ಇಂವ ಕಜ್ಜಿನಾತ ಬೌನಾತ
ಏಯ್ ಕುಸ್ಮಾಲಿ ಕಯ್‌ಲಿ ಕೊಟ್ಬುಡವ್ವ
ಆ ಮುದ್ಕಪ್ನಿಗೆ ತೆಕ್ಕೊಂಡೋಗಿ ಕೊಟ್ಬುಡ್ಲಿ
ನೀನೇ ಕೊಟ್ಬುಡವ್ವ ಅಂತ ಹೇಳಿದ್ರು
ಆಗೇನೆಳ್ತಾ ಇದ್ದಾರೆ……?

ಆವ ಮೂಗಿಗೆ ಬಟ್ಟೆಯ ಮುಚ್ಚುತ್ತಾರೆsss || ತಂದಾನ ||

ಮೂಗಿಗೆ ಬಟ್ಟೆ ಮುಚ್ಕೊಂಡು ತೆಕ್ಕೋ ದಾಸಪ್ಪ ಅಂದ್ಳು
ಏಯ್ ಆರೋ? ನೀನು ಆರ್ ನೀನು?
ಸೋಲುಗ್ರ ಬೊಮ್ಮೆಗೌಡ್ನ ಮಗ ಕುಸ್ಮದೇವಿ ನಾನೇ ದಾಸಪ್ಪ
ಯೆಣ್ಣೇ…. ದುಡ್ಡಿಗೆ ಬಂದಿಲ್ಲ
ಕಾಸಿಗೆ ಬಂದಿಲ್ಲ ಯೆಣ್ಣೆ ನಿಗ್ಗಾಗಿ ನಾನು ಬಂದಿದ್ದೀನಿ
ನಿನ್ಗಾಗಿ ನಾನು ಬಂದಿನಿ ಕುಸ್ಮಾಲಿ

ಸೋಲಿಗರ ಬೊಮ್ಮನ ಮಗಳಿಗೆsss || ತಂದಾನ ||

ಅಕ್ಕ ಅವರ್ಯಾವ ದಾಸಯ್ಯ ಮುಳುವಾದ ದಾಸಯ್ಯ

ಮೋರೆಯ ಮ್ಯಾಗೆ ತಿಮಿರವ್ವsss || ತಂದಾನ ||
ನೀನು ಯಾವೂರ ದಾಸಯ್ಯ ಯಾವ್ ಮತವ ದಾಸಯ್ಯ
ಕುಲವೇನು ಮುದುಕಯ್ಯsss || ತಂದಾನ ||

ಅಪ್ಪ ದಾಸಪ್ಪ ಯಾವೂರ ನೀನು?
ಯಾವ್ ಕೇರಿ?
ಕುಲಯಾವ್ದು?
ನಿನ್ ಮತ ಯವ್ದು ಅಂದ್ರು
ಏಯ್ ಸೋಲುಗ್ರ ಬೊಮ್ಮೆಗೌಡ್ನ ಮಕ್ಳೆ
ನಾನು ಕ್ಸತ್ರಿ ಕುಲ್ದವ್ರ್ನು
ಸೂರ್ಯ ವಂಸ ನಾಮದ ಕುಲ್ದ ನಾರಾಯ್ಣ

ಈ ಸೋಲುಗ್ರ ಐಕೆಲ್ಲಾ ನನ್ಗೆ ಬಾಮೈಕsss || ತಂದಾನ ||
ಏಯ್ ಸೋಲುಗ್ರ ಐಕ ನನ್ಗೆ ಬಾಮೈಕ ಅಂದರೆsss
ನಾಳೆ ಮೇಲುಗಿರಿಯಲ್ಲಿ ಮೆರಿಬೇಕುsss || ತಂದಾನ ||
ನಾನು ಮೇಲುಗಿರಿಯಲ್ಲಿ ಮೆರಿಯದಿದ್ದ ಮೇಗೆsss
ತೇರ ತಡಿನ ತಿಮ್ಮಯ್ಯsss || ತಂದಾನ ||
ಅಯ್ಯ ತೇರ ತಡಿನ ತಿಮ್ಮಯ್ಯ ನಾನಲ್ಲsss
ಮೇಲುಗಿರಿಗೆ ರಂಗಯ್ನಲ್ಲ sss || ತಂದಾನ ||

ಅಕ್ಕ ಇಂವ ಯೇನೇಳ್ತಾನ ಕ್ಸತ್ರಿ ಕುಲ್ದವ
ಸೂರ್ಯ ವಂಸದವ
ನಾಮ್ದ ಕುಲ್ದ ನಾರಾಯ್ಣ ಅಂತಾನೆ
ದುಡ್ಡಿಗೆ ಬಂದಿಲ್ಲ ಕಾಸಿಗೆ ಬಂದಿಲ್ಲ
ನಿನ್ಗಾಗಿ ಬಂದಿವ್ನಿ ಅಂದನಕ್ಕ
ಅವ್ನ ಕಸ ಕಿತ್ಬುಡಿ
ಕಿತ್ತಾಕ್ಬುಡಿ ಅವ್ನ ಜಡೆಯ
ಯೇನೋ ಪಾಪ ನೋಡುದ್ರು
ಏನಯ್ಯ ಏನಯ್ಯ ದಾಸಪ್ನೋರ ವೇಸ ನೋಡಿದ್ರೆ….
ಅಯ್ಯ ದಾಸಯ್ಯ ವೇಸ ನೋಡ್ರಕ್ಕ

ನೋಡ್ರಕ್ಕ ಸ್ರೀಸಕ್ತಿ ಬಣ್ಣ ಕಾಣುತದೆsss || ತಂದಾನ ||

ಅಯ್ಯ ಸ್ರೀಸಕ್ತಿ ಕಾಣ್ತಾನೆ ನಾರಾಯ್ಣ

ಮೊರೆಯ ಮ್ಯಾಗೆ ತಿಮಿರವ್ವsss || ತಂದಾನ ||
ಏಯ್ ಮೋರೆಯ ಮ್ಯಾಗೆ ತಿಮಿರವ್ವ ಅಂತವರೆsss
ಬಾವ ಬಾವ ಅಂದು ಕರಿತಾರೆsss || ತಂದಾನ ||

ಏಯ್ ದಾಸಪ್ಪ ಬಾವ ಅಂದ್ಬುಟ್ಟೆ ಬಾವ ಬಾವ ಅಂತ ಕರ್ದೆಬುಟ್ಟಿಲ್ಲಾ
ನೀನು ದೊಡ್ಡಣ್ಣ ಮಾದಣ್ಣನಿಗೇನಾದ್ರು ಯೇಳ್ಬುಟ್ರೆ

ನಿಂಗೆ ತುಂಡು ದೊಣ್ಣೈಯ ತರುತಾರೆsss || ತಂದಾನ ||
ನಿಂಗೆ ತುಂಡು ದೊಣ್ಣೆಯ ತಂದುsss
ಕಲ್ಲಿನ ಮೇಲೆ ಡಬ್ಬುಡುಬ್ಬನೆ ವೊಡಿತಾರೆsss || ತಂದಾನ ||
ನಿನ್ನ ದೊಡ್ಡ ಮಾದಣ್ಣ ನನ್ಗೆ ಯಿರಿಬಾವ ಕಣೆsss
ನಿಮ್ಮ ಚಿಕ್ಕ ಕಾಳಣ್ಣ ಬಾಮೈದsss || ತಂದಾನ ||

ನೋಡು ಚಿಕ್ರಂಗಿ ಮಾತಿಗೆ ಮಾತು ಸೇರ್ಸಬ್ಯಾಡ
ಕಟಕಟ ಮಾಡ್ಬೇಡ ನೀನು
ದೊಡ್ಡ ಮಾದಣ್ಣ ನಂಗೆ ಬಾವ
ಚಿಕ್ಕಗೋಳಿ ತರ್ತಾರೆ
ಚಿಕ್ಕಣ್ಣ ಯೇಳ್ದೆಲ್ಲ ನನ್ನ ಬಾಮೈದ ಕನ್ರಿ

ನಂಗೆ ಚಿಕ್ಕ ಕಾಳಣ್ಣ ನಂಗೆ ಬಾಮೈದ sss || ತಂದಾನ ||
ಓಯ್ ಚಿಕ್ಕ ಕಾಳಣ್ಣ ಬಾಮೈದ ಆದರೆsss
ನಾನು ಕಾಡಲ್ಲಿ ಮನೆಯ ಮಾಡಬೇಕುsss || ತಂದಾನ ||
ಅಲ್ಲಿ ಕಾಡಲ್ಲಿ ನಾವು ಮನೆಯ ಮಾಡ್ಕಂಡು ನಾ ನೆಲ್ಗೊಂಡುsss
ಮೇಲು ಬೀದಿಲಿ ಮೆರಿಬೇಕುsss || ತಂದಾನ ||

ಅಕ್ಕ ನೋಡು ರಂಗಪ್ಪ ಯೇನೆಳ್ತಾ ಇದ್ದಾರೆ
ಆಹಾ ಅಂತ ಮಾತಾಡ್ತನಕ್ಕ
ದೊಡ್ಡ ಮಾದ ನಂಗೆ ಬಾವ ಆಗ್ಬೇಕು
ಚಿಕ್ಕಾಡ ನಂಗೆ ಬಾಮೈದ ಆಗ್ಬೇಕು
ಚಿಕ್ರಂಗಿ ನಂಗೆ ನಾದಿನಿ ಆಗ್ಬೇಕು
ಆ ದೊಡ್ರಂಗಿ ಇವ ಎಂತಾ ದಾಸಪ್ನ ಇವ್ರು
ಅಕ್ಕ ಈ ದಾಸಪ್ಪ ನಮ್ ಬುಡ್ಲಾರ
ನಾವ್ ಒಂಟೋಗ್ಬೇಕು
ನಾವು ರಂಗಪ್ನಿಗೆ ಒಂದ್ ಕಾಣ್ಕೆ ಕಟ್ಬುಡಾನ
ಏಯ್ ಇನ್ನೆಂತ ಕಾಣ್ಕೆ ಕಟ್ತಿಯ
ಅಯ್ಯ ಆಸ್ಬುರಕ ದಾಸಪ್ಪ ನಮ್ ಬುಡ್ತಾರ
ಉಡ್ಗಿ ನೋಡುದ್ರ ಇಂವ ನೋಡ್ಕೊಂದ್ ಬರ್ತಾ ಇದ್ದಾನೆ
ತೂರಾಡ್ಕ ತುಂಟಾಡ್ಕ ಬರ್ತಾ ಇದ್ದಾನೆ
ಅಂದ್ಬುಟ್ಟು ಚಿಕ್ರಂಗಿ ನಿನ್ನಂಗೆ ತಲುಳ್ಳವ
ಆಗ ಆಹಹಾ ತಂಗಿರೆ ನಾನ್ ಹೋಗಿ ಅವ್ನಿಗೆ ವನ್ನೇಟ್ ಕಟ್ಬುಡ್ತಿನಿ
ದಾಸಪ್ಪ ಮಾಯ ಆಗ್ಬುಡ್ತಾನೆ
ನಾಳೆ ವರ್ಸ ಬಂದು ಕಾಸಿನ್ ದೂಪ ಕಣ್ಮಣಿ ಸೇವಾ ಮಾಡ್ಬುಟ್ಟು….
ಒಂದು ಆರ್ಕೆ ಮಾಡ್ಬುಡಪ್ಪ ಅಂತಿನಿ……
ಅದಕ್ಕೆ ದಾಸಪ್ಪ ಕೊಡದುಂಟಾ
ನಾವ್ ಕೊಡದಿಲ್ಲ ಆಗೆಂದ್ಬುಟ್ಟು
ತೀರ್ತದಿಂದ ಬಂದು ಸ್ವಾಮಿಯವ್ರು ಪೂಜ ಮಾಡ್ಬುಟ್ಟು

ವೊನ್ನುಗಾಣಿಕೆಯ ಕಟ್ಟುತ್ತಾರೆsss || ತಂದಾನ ||

ವೊನ್ನುಗಾಣಿಕೆ ಕಟ್ಬುಡ್ತಲೆ ದಾಸಪ್ಪ ಮಾಯ ಆಗ್ಬುಟ್ಟ
ಅಕ್ಕಕ್ಕ ನೋಡ್ಬಕ್ಕ ನಮ್ಮ ಮನೆ ದೇವ್ರು ಎಂತಾ ದೇವ್ರಕ್ಕ?
ಸ್ವಾಮಿ ನಮ್ಮಪ್ಪ ನಮ್‌ ದೇವ್ರ ಬುಟ್ರಿ ಇನ್ಯಾವಾ ದೇವ್ರು ಇಲ್ಲ
ಅಲ್ಲಾಣಿ ಇಲ್ಲಾಣಿ ಕಲ್ಯಾಣಿ ಕೊಳ ಕಡ್ದ್ ಬುಟ್ರು
ದೊಡ್ಸಂಪ್ಗೆ ಆದಿ ಒಳ್ಗೆ ತೋಪಿನ ತಿರ್ಗ ಆದಿವಳ್ಗೆ ವೋಗ್ವಾಗ

ಅಲ್ಲೊಬ್ಬ ದಾಸಪ್ಪ ಕಂಡಿದ್ದಾರೆ sss || ತಂದಾನ ||
ಅಕ್ಕ ನೋಡ್ರಕ್ಕ ನೋಡ್ರಕ್ಕ ದಾಸಪ್ಪ ಸತ್ತವ್ನsss
ಇವ್ನ ಬಾನೆ ಉಲ್ಲಿಗೆ ಇಡಿರಕ್ಕ sss || ತಂದಾನ ||

ಮುಂದುಕೋದ್ರು ಅಲ್ಲೊಬ್ಬ ದಾಸಯ್ಯ ಬಂದ್ಬುಟ್ರು
ಅಪ್ಪೊಯ್ ತೆಂಕ್ಲಾಗಿ ತಲೆ ಬಡಲಾಗಿ ಕಾಲಿಟ್ಬುಟ್ಟು
ಸಂಕು ಜಾಗ್ಟ ಇಟ್ಬುಟ್ಟು ಇಲ್ ಮಲಗವ್ನೆ
ಅಪ್ಪಪ್ಪ ಇಲ್ಲೊಬ್ಬ ದಾಸಪ್ಪ ನಿಗ್ರೋಗ್ ಬುಟ್ಟಿದ್ದಾನೆ

ಇವ್ನಿಗೆ ಮುತ್ತುಗದ ಸೊಪ್ಪ ಮುಚ್ಟಿರವ್ವsss || ತಂದಾನ ||
ಅಯ್ಯ ಮುತ್ತುಗದ ಸೊಪ್ಪ ಮುಚ್ಬುಟ್ಟು ನಾರಾಯ್ಣsss
ಅವ್ರು ಮುಂದ್ಕೆ ಮೂರೆಜ್ಜೆ ವೋಗ್ವಂತ ಕಾಲ್ದಲ್ಲಿsss
ಅಲ್ಲೊಬ್ಬ ದಾಸಯ್ಯ ಸತ್ತಿದ್ದಾನೆsss || ತಂದಾನ ||

ಅಲ್ಲೊಬ್ಬ ದಾಸಯ್ಯ ಸತ್ತೋಗ್ ಬುಟ್ಟಿದ್ದಾನೆ
ದೊಡ್ರಂಗಿ ಕಂಡ್ಬುಟ್ಟ
ಆಹಾ ಎಲ್ಲೋ ನಮ್ಮ ಬೆಟ್ದಲ್ಲಿ
ಬಿಳಿಗಿರಿರಂಗನ ಬೆಟ್ಟದೊಳ್ಗೆ ಜಾತ್ರೆಯೊಳ್ಗೆ
ದೊಡ್ರೋಗ ಬಂದು ಅಕ್ಕ ಎಲ್ಲಾ ದಾಸ್ಗೊಳು ಸತ್ತೋಗ್ ಬುಟ್ಟಿದ್ದಾರೆ
ದಾಸ್ಗೊಳ್ಗೆ ರೋಗ ಬೀಸ್ಬುಡ್ತು
ತಂಗ್ಳ ಅನ್ನ ಉಂಡ್ಬುಟ್ಟು ತಣ್ಣೀರ್ ಕುಡುದ್ ಬುಟ್ರು
ಅಂದ್ಬುಟ್ಟು ಮುಂದಕ್ಕ ಮೂರೆಜ್ಜ ಇಟ್ರು
ಕರ್ಡಿ ಕಕ್ಕರ್ದಬುಡ್ತು
ವುಲಿ ಅಮ್ಮರ್ದ್ಬುಡ್ತು ಯೆದರ್ಲಿಲ್ಲ
ಸೋಲುಗ್ರ ಬೊಮ್ಮೆಗೌಡ್ನ ಮಕ್ಳು ಅಂದ್ರೆ
ಕಾಡು ಸೋಲುಗ್ರ ಐಕ ಸಿಕ್ಕದುಂಟಾ? ಎದ್ಬುಡ್ತಾರೆ
ಇಬ್ರು ಓಟಾ ಓಡುದ್ರು

ಅಂವ ದಾಸಪ್ಪ ಅವ್ರು ಓಡುತ್ತಾರೆsss || ತಂದಾನ ||

ದಾಸಪ್ನು ಓಡಿ ಓಡಿ ವೋಗ್ತಾ ಇದ್ದಾನಲ್ಲ
ಗಕ್ನ್ ಚಿಕ್ರಂಗಿ ನೋಡ್ಬುಟ್ಟ
ಇವ್ರಾಗೆ ಗಕ್ನ್ ತಿರ್ಗಿ ನೋಡ್ದ
ಅಲ್ಲ ದಾಸಪ್ಪ ಸತ್ತು ಮನ್ಗಿದ್ದೆ ಎದ್ದು ಬಂದಿದ್ದಿಯಾ?
ಅಮ್ಮ ದೊಡ್ರಂಗಿ ನಾನು ಬಂದುದು ಯಾಗೆಂದ್ರೆ ಕರ್ದಿ ಕಕ್ಕರ್ದಬುಡ್ತು
ಉಲಿ ಅಮ್ಮರ್ದ ಬುಡ್ತು
ಆನೆ ಅಬ್ಬರ್ಸಕ ಬಂದ್ಬುಡ್ತು
ಓಡಿ ಓಡಿ ಉಬ್ಸ ಬಂದ್ಬುಡ್ತು
ಅದಕ್ಕೋಸ್ಕರ ಬಂದೆ ಓಡೋಡಿ ಬಂದೆವ್ವ
ನನ್ಗೆ ನೇತ್ರ ಕಾಣಲ್ಲ
ನಡ್ಗೆ ಬರಲ್ಲ
ಅಯ್ಯೋ ಪಾಪ
ಸೋಲಿಗರ ಬೊಮ್ಮೆಗೌಡ್ನ ಮಕ್ಕ ಅಂದ್ರೆ ಬಾಳ ಸತ್ಯ
ಬಾಳ ದರ್ಮಾಂತ
ಸುತ್ತುಳ್ಳ ಜನ ಅಂತಾರೆ
ಸ್ವಲ್ಪ ಪೋಡಿಗೆ ಸೇರ್ಸಿ ಬುಡವ್ವ
ಅಯ್ಯೋಯ್ಯೋ ನಾವೇನೋ ಸೇರ್ಸಿಬುಡ್ತಿವಿ ದಾಸಪ್ಪ
ನಮ್ಮಪ್ಪ ಕೇಡಿ
ನಾಮ್ತಾಯಿ ಕೇಡಿ
ನಾವು ಬೇಲಿಯಿಂದಾಚೆ, ಕಟ್ಟೆಯಿಂದಾಚೆ ಇರ್ತಿ ದಾಸಪ್ಪ
ಬತ್ತಿಯ ದಾಸಪ್ಪ ಅಂದ್ರು
ಅಮ್ಮ ಬತ್ತಿನಿ

ಅವ್ರು ಮೆಲ್ ಮೆಲ್ಗೆ ಸ್ವಾಮಿ ಬರುತ್ತಾರೆsss || ತಂದಾನ ||
ಕೊಟ್ಟು ನೋಡಿ ಸ್ವಾಮಿ ಕೀಳುತ್ತಾರೆsss || ತಂದಾನ ||
ಓಯ್ ಕೊಟ್ಟು ನೋಡಿ ಸ್ವಾಮಿ ಕಿಳ್ತಾವ್ನೆ ನಾರಾಯ್ನಾsss
ಎತ್ತಿ ನೋಡಯ್ಯ ಅರಿನಾಡsss || ತಂದಾನ ||

ಸ್ವಾಮಿಯವ್ರು ಅರಿನಾಡು ನೋಡ್ಕಂಡು
ಎಡಗಡೆ ನೋಡುದ್ರ ಸೋಲುಗ್ರ ಬೊಮ್ಮೆಗೌಡ್ನ ಮಗಳ ಗ್ಯಾನ
ಏನವ್ವ ಮಾಡ್ಲಿ ಅಂದ್ಬುಟ್ಟು ಏಡ್ ನೇತ್ರ ಕಾಣ್ಣಿಲ್ಲ ನೆಡ್ಗಬರ್ದಾಗೆ

ತೂರು ತುಂಟಾಡಿ ಹೋಗುತ್ತಾರೆsss || ತಂದಾನ ||

ತೂರಿ ತುಂಟಾಡ್ಕೊಂಡು ನಾರಾಯ್ಣ ಮೂರ್ತಿಯವ್ರು ವೋಗಿ
ಸೋಲಿಗ್ರು ಬೊಮ್ಮೆಗೌಡ್ನ ಪೋಡಿಗೆ ವೋಗಿದ್ದಾನೆ
ಸೋಲಿಗ್ರ ಬೊಮ್ಮೆಗೌಡ್ನ ಪೋಡ್ನಲ್ಲಿ
ಆ ಬಿದ್ರ ಬಿಂಕಿ ಅಕ್ಬುಟ್ಟು ಮನ್ಗಿರುವಾಗ
ಕಾರೆಂಬ ಕತ್ಲು ಬೋರೆಂಬ ಮಳೆ ಬಂದ್ಬುಡ್ತು
ಕಾ ಕೋಲಿ ಕೂಗ್ ಬುಡ್ತು

ಲೋಕ್ವೆಲ್ಲಾ ಬೆಳಗಾಗ್ ಬುಡ್ತುsss || ತಂದಾನ ||
ಅಯ್ಯ ದಾಸಯ್ಯ ತಕ್ಕಂಡೋಗಿ ಬುಡಿರವ್ವಾsss || ತಂದಾನ ||
ತೂರು ಆಡುತ್ತಾ ತುಂಟಾಡಿ ಬರುತವ್ನೆsss
ಮೇಲುಗಿರಿಕೆ ಸ್ವಾಮಿ ಇಳಿತಾರೆsss || ತಂದಾನ ||
ಅಯ್ಯೋ ಮೇಲುಗಿರಿಂದ ದಾಸಪ್ಪ ಬತ್ತವ್ನೆsss
ಬೊಮ್ಮೆಗೌಡ್ನ ಪೋಡಿಗೆ ವೋಗುತ್ತಾರೆsss || ತಂದಾನ ||

ಬೊಮ್ಮೆಗೌಡ್ನ ಪೋಡಿಗೆ ವೋಗುವಾಗ
ಆಹಾ ಅಣ್ಣ ಸೊಪ್ಪಿನ ಊಟ
ಅರೆಗೆಣ್ಣಿನ ಅಂಬ್ಲಿ ಕೂಳುಗೀಳು ಕೊಡ್ರಪ್ಪ
ಈ ದಾಸಪ್ಪ ತೆಕ್ಕಂಡೋಗಿ ಕೃಷ್ಣನ ಕಟ್ಟೇಲಿ ಬಿಟ್ಟುಡವ್ವ ಅಂತೇಳುವಾಗ
ಅಪ್ಪಪ್ಪ ಇನ್ಯಾಕಪ್ಪ
ಅಪ್ಪ…. ಅಪ್ಪ…. ಬೆಳ್ಗಿಂದ ಊಟಿಲ್ಲ
ಅರಿಕೋಲ್ ತೆಕ್ಕೊಡ್ ಗೆಡ್ಡ ಗೆಣ್ಸು ತರ್ತಿವಿ ಅಂದ್ಬುಟ್ಟು

ಅವ್ರು ಕೋಳಿ ಗುಳ್ಳಾರಕ್ಕೆ ವೋಗಿದ್ದಾರೇsss || ತಂದಾನ ||
ಕೋಳಿ ಗುಳ್ಳಾರಕ್ಕೆ ವೋಗ್ತಾರ ನಾರಾಯ್ಣsss
ಬಾಜರ್ ಕೆಂತಿ ದಯಮಾಡಿ sss || ತಂದಾನ ||

ಬಾಜರ್ಕ್ಕಿಂದ ದಯಮಾಡುವಾಗ
ಸೋಲಿಗ್ರ ಬೊಮ್ಮೆಗೌಡ್ನ ಮಕ್ಕ
ಚಿಕ್ಕಾಡಿ ದೊಡ್ಕಾಡಿ, ಚಿಕ್ರಂಗಿ, ದೊಡ್ರಂಗಿ
ಎಲ್ಲಾ ಕೂಡ್ಕಂಡು ಸ್ವಾಮಿ ಪಾದ ಇಡಿತಾಯಿದ್ರು
ದಾಸಪ್ಪ ಇವ್ರ ನೋಡವ್ವ ತಿರ್ಪತಿಯಿಂದ ಬಂದವ್ರು
ಇವ್ರ ಪಾದ ಇಡ್ದು ಮುಂದಕೊದ್ರೆ ನಮ್ಗೆ ಗೆಡ್ದ ಗೆಣ್ಸು ಸಿಕ್ತದೆ
ನಾರಾಯ್ಣ ಮೂರ್ತಿಯವ್ರು ಆಗ ಉಸ್ನಗೆ ನಗ್ತಾ ಇದ್ರು
ಆಗನು ನಮ್ಮ ದೇವ್ರ ಪಾದ ಯಿಡುದ್ರ
ಉಸಗ್ನ ನಗ್ ನಾಡ್ತಯಿದ್ದಿಯಲ್ಲ ಅಂದ್ರು
ಅಮ್ಮ ಅದು ನಾವು ಮುಟ್ಟುದ್ರೆ ಆಗಲ್ಲ
ಅದು ನೀವು ಪೂಜೆ ಮಾಡ್ಕಳ್ಳಿ ಅಂದ್ರು

ಕನಕದಾಸರ ಗವಿಗೆ ಹೋಗುತ್ತಾರೆsss || ತಂದಾನ ||

ಕನಕದಾಸರ ಗವಿಯೊಳ್ಗೆ ಕಾಡುದಾಸರ ಗವಿಯೊಳ್ಗೆ
ನಾರಾಯ್ಣಮೂರ್ತಿಯವ್ರು ಒಡೆದುಮೂಡಿ
ವೈರು ಮುಡಿಯೊಳ್ಗ ಒರಗಿ ನಿಂತಿದ್ದಾರೆ
ಇದೆ ಆದಿ ಒಂಟೋಗಪ್ಪ
ಈ ಆದಿ ಎಲ್ಲಿಗೋಗ್ತಾದಮ್ಮ
ದೊಡ್ರಂಗಿ ಎಲ್ಲೋಗ್‌ತದ ಅಂತ ಕೇಳುದ್ರೆ
ಇದೇ ನೋಡಪ್ಪ ವೈರುಮುಡಿ
ಅದು ಅನುಮಂತ್ರಾಯ್ನ ಕಣ್ವೆ
ಇದು ಸೋಮಾದಿಯಪ್ಪನ ಕೊಳ
ಅದು ಬೊಮ್ಮನ ಕೊಳ
ಯಿಸ್ಪುರನ ಕಟ್ಟೆಗೆ ಒಂಟೋಗ್ಬುಡು
ಈವೊತ್ತು ಮರಿಮಾವ್ಸ ಅನ್ನ
ನಿಂಗೆ ವೊಟ್ಟೆ ತುಂಬಾ ಊಟ
ನಿಂಗೆ ಊಟ ಕೊಡ್ತಾರೆ ವೋಗಪ್ಪ ಅನ್ನೊತ್ತಿಗೆ …. .

ಅಪ್ಪ ತೂರಿ ಆಡುತ್ತಾ ಹೋಗುತ್ತಾನೆsss || ತಂದಾನ ||
ತಿಂಗಾಳು ಮುಣುಗಿದವೋ || ರಂಗೋಲಿ ಬೆಳಗಿದವೋsss ||
ಸ್ವಾಮಿ ರಂಗಯ್ನ ಪೂಜೆಗೆಂದು ಬಾಳೆ ಬಾಗಿದವುsss
ಎಡ್ಚರಿ ತೊಳಸಮ್ಮ ಬಲ್ಚರಿ ಲಕ್ಸ್ಮಿದೇವಿsss
ನೆಟ್ಟ ನಡುವೆ ನಾರಾಯ್ಣ ಕೂತುಕೊಂಡುsss || ತಿಂಗಳು ||
ಅಳ್ಳ ಕೊಳ್ಳಿಯ ನೀರು ಬೆಳ್ಳಿಲಿ ಕಯ್ಯಚಂಬುsss
ಇಲ್ಲಿ ರಂಗಯ್ನ ಸಿವಪೂಜೆ ಮಾಡುವಾಗsss
ಆಕಾಸ ಗಂಗೆ ಗಣಿರೆಂದೋsss || ತಿಂಗಳು ||
ಕಾಡು ಸೋಲಿಗರೈಕsss
ಇಲ್ಲಿ ಕಾಡಿಂದ ಬಂದವರೆsss
ಅರ್ಸಿ ಪೂಜೆಯ ಮಾಡುತ್ತಾರೆsss || ತಿಂಗಳು ||
ಊಟ ಮಾಡೋದಕ್ಕೆsss
ಗೆಡ್ಡ ಗೆಣ್ಸು ಅಯ್ಯsss
ಎದ್ದು ನೋಡ ನಾರಾಯ್ಣಮೂರ್ತಿsss || ತಿಂಗಳು ||

ರಂಗಯ್ಯನವ್ರು ಅಂದ್ರೆ ಬಕ್ತಾದಿಗಳ್ಗೆ ಸ್ವಾಮಿ ರಂಗಯ್ಯ
ನಾವು ನೋಡುದ್ರೆ ಕಾಡ್‌ ಸೋಲುಗ್ರುಗೆ ಬಾವ ರಂಗಪ್ಪ ಆದ್ರು

ಅವ್ವ ಬಳ್ಸಿ ಬುಡಿರವ್ವ ಬಾಳೆ ಅಣ್ಣsss || ತಂದಾನ ||
ಆಡಿ ಬನ್ನಿರೋ ರಂಗಯ್ಯ ಚೆಂದ ನೋಡಿ ಆಡಿ ಬನ್ನಿರೋsss
ನೋಡಿ ಬನ್ನಿರೋ, ಸ್ವಾಮಿ ನೋಡಿ ಬನ್ನಿರೋsss
ರಂಗಯ್ನ ಚೆಂದಾನೋಡಿ ಆಡಿಬನ್ನಿರೋsss
ಸೋಲಗಿತ್ತಿಗೆ ಸಗುತ ನೋಡಿರೋsss
ರಂಗಯ್ನsss ಮಡದಿ ನೋಡಿರೋsss
ರಂಗಯ್ನ ಸಗುತ ನೋಡಿ ಬನ್ನಿರೋsss
ಅಲ್ಲಿ ಇಲ್ಲಿ ಬರುತಾರೆ ನೋಡಿ ಬನ್ನಿರೋsss
ಅಂದದಲ್ಲಿ ಕುಣ್ತ ಕುಣಿಯೋ ಚಂದ ನೋಡಿರೋsss || ನೋಡಿ ||
ಸೋಲಗಿತ್ತಿ ಸಗುತ ನೋಡಿsss
ಮೇಲುಗಿರಿಲಿ ಮೆರೆಯ ನೋಡಿರೋsss || ನೋಡಿ ||
ನೋಡಿ ಬನ್ನಿರೋ ನೀವು ನೋಡಿ ಬನ್ನಿರೋsss
ಸೋಲಗಿತ್ತಿ ಸಗುತ ನೋಡಿ ನೀವು ಓಡಿ ಬನ್ನಿರೋsss || ನೋಡಿ ||
ಓಡಿ ಬನ್ನಿರೋ ರಂಗಯ್ನ ನೋಡಿ ಬನ್ನಿರೋsss
ಕಾಡಿನಲ್ಲಿ ಸೋಲುಗಿತ್ತಿ ನೋಡಿ ಬನ್ನಿರೋsss
……………. ತರಬೇಕು ನೋಡಿ ಬನ್ನಿರೋ || ನೋಡಿ…. ||
ಕಮ್ಮತಿಯ ಮರದಲ್ಲಿsss
ಸಣ್ಣ ಗೊಂಬಿನ ಆನೆಯಂತೆsss || ನೋಡಿ ||
ಆನೆ ಬರುವ ಚಂದನೋಡುsss
ದಾಸಯ್ನ ಅಂದ ನೋಡೊsss || ನೋಡಿ ||
ಕೃಸ್ಣನ ಕಟ್ಟೆಗೆ ಬರುತಾರೆsss || ತಂದಾನ ||
ಸ್ವಾಮಿ ಕೃಸ್ಣನ ಕಟ್ಟೆಗೆ ವೋದಯ ದಾಸಯ್ಯsss
ಮರಿಯೊ ಕುರಿಯನ್ನೆ ಕುಯ್ಯುತ್ತಾರೆsss || ತಂದಾನ ||

ಸ್ವಾಮಿ ದಾಸಪ್ಪ ಮರಿ ಕುಯ್ತಾರೆ
ಕೋಳಿ ಕುಯ್ತಾರೆ
ಅಕ್ಕಿ ಆಕ್ತಾರೆ
ಬೇಳೆ ಆಕ್ತಾರೆ ದಾಸಪ್ಪ ಈವೊತ್ತು ….
ಅನಮಂತ್ರಯ್ನ ದೇವಸ್ತಾನ ….
ಗೊತ್ತಿಲ್ಲ ದಾಸಪ್ಪ ಅಂದ್ರು
ಅಯ್ಯಯ್ಯೋ ಗೊತ್ತಿಲ್ಲಮ್ಮ ಅಂದ್ರು
ಆರ್ಗೆ ಚಿಕ್ರಂಗಿಗೆ
ಇದೆ ಆದಿ ಒಂಟೋಗಪ್ಪ ಅಂತ ಯೇಳುವಾಗ ….
ಈ ದಾಸಪ್ಪೋರು ಏನ್ಮಡ್ತಾರೆ
ತೂರಾಡ್ತ ವುಂಟಾಡ್ತಾರೆ
ಈ ಸೋಲಿಗರ ಬೊಮ್ಮೆಗೌಡ್ನ ಮಕ್ಳು ಉಡ್ಗಿರಿದ್ರಲ್ಲ
ಇವ್ರೇನೆಂದ್ರೆ ಕಂಬ್ರಿಪುರ ಕಡೆಗೊಂಟೋದ್ರು

ಆರೆಯ ಕೋಲ ತೆಕ್ಕೊಂಡು ಸೋಲಗಿತ್ತಿsss
ನೊರೆಯ ಗೆಣ್ಸ ಕೀಳುತಾರೆsss || ತಂದಾನ ||
ಏಯ್ ನೂರೆಯ ಗೆಣ್ಸ ಕಿಳ್ವಾಗ ಸೋಲಗಿತ್ತಿsss
ಕೋಲ್ ಜೇನ ಕಾಣುತಾರೆsss || ತಂದಾನ ||