ಒಬ್ಬ ವ್ಯಕ್ತಿಯ ಶೇಕಡ ನೂರರಷ್ಟು ಉತ್ತಮ ಚಿಂತನೆ ಒಂದು ಸಮುದಾಯದ ಇಡೀ ಸಮಾಜದ, ರಾಷ್ಟ್ರದ ಕೊನೆಗೆ ಸಮಸ್ತ ಮಾನವ ಪೀಳಿಗೆಯ ಏಳಿಗೆಗೆ ಸಾಧನವಾಗಬಲ್ಲದು. ಇಂಥವರು ಅಪರೂಪದಲ್ಲಿ ಅಪರೂಪ. ಯುಗಕ್ಕೊಬ್ಬನಾದರು ಅವತರಿಸಬೇಕೆಂಬುದು ನನ್ನ ಅಂತರಂಗದ ಆಶಯ. ಈ ಸಂಬಂಧ ಯೇಸು ಕ್ರಿಸ್ತ, ಬುದ್ಧ, ಬಸವ, ಜ್ಯೋತಿಬಾ ಪುಲೆ, ನಾರಾಯಣ ಗುರು, ಅಂಬೇಡ್ಕರ್ ಮತ್ತು ಸಂತ ಮದರ್ ತೆರಸಾ ಅವರುಗಳನ್ನು ನೆನೆಯುತ್ತಾ ಮುಂದಿನವರ ನಿರೀಕ್ಷೆಯಲ್ಲಿದ್ದೇನೆ. ಇವರನ್ನು ಮಹಾತ್ಮರೆನ್ನಿ, ಯುಗಪುರಷರೆನ್ನಿ, ಸಮಾಜ ಸುಧಾರಕರೆನ್ನಿ, ಮಾನವತವಾದಿಗಳೆನ್ನಿ ಆದರೆ ಇವರೆಲ್ಲರು ವಿವಿಧ ಕಾಲಘಟ್ಟದಲ್ಲಿ ಬಾಳಿ ಬದುಕಿ ಜೀವನ ಸಾರ್ಥಕಗೊಳಿಸಿಕೊಂಡು ಮುಗ್ಧ ಹಾಗೂ ಮೂರ್ಖ ಮಾನವ ಕೋಟಿಗೆ ಸಾರ್ಥಕ ಬದುಕನ್ನು ಬದುಕಿಕೊಳ್ಳಿ ಎಂದು ಒಂದಿಷ್ಟು ಹಿತನುಡಿಗಳನ್ನು ಹೇಳಿ ಕೈಲಾದ ಕೆಲಸವನ್ನು ಮಾಡಿ ಸಂದು ಹೋದವರು. ತಮ್ಮ ಬೋಧನೆಯಂತೆ ಬರಹ, ಬರಹದಂತೆ ಬದುಕು ಈ ಮೂರು ಮಿಳಿತವಾಗಿದ್ದ ಅವರ ನುಡಿಗಳು ಸ್ಪಟಿಕದ ಸಲಾಕೆಯಂತಿವೆ. ಸಮಸ್ತ ಮಾನವ ಕೋಟಿ ಮೆಚ್ಚಿ ಅಹುದಹುದೆನ್ನುವಂತಿವೆ. ಯುಗ ಯುಗಗಳೇ ಕಳೆದರು ಎಲ್ಲರಿಗೂ ಕೇಳಿಸುತ್ತಲೇ ಇದೆ. ನಾವೆಲ್ಲರೂ ಇವರಂತಾಗ ಬಯಸೋಣ, ಇವರಂತಾಗದಿದ್ದರೂ ಇವರ ನಡೆ ನುಡಿಗಳನ್ನು ಪಾಲಿಸುವವರಾಗೋಣ, ಪಾಲಿಸಲಾಗದಿದ್ದರೂ ಅವುಗಳನ್ನು ಕೇಳಿಸಿಕೊಳ್ಳೋಣ. ಆದರೆ ಯಾವುದೇ ಕಾರಣಕ್ಕೂ ಕಿವಿ ಮುಚ್ಚಿ, ಕಣ್ಣು ಮುಚ್ಚಿ ಜೀವಂತ ಹೆಣಗಳಾಗದಿರೋಣ ಎಂಬುದೇ ನನ್ನ ಅನುದಿನದ ಆಲೋಚನೆ.

ನಾವುಗಳು ವಿದ್ಯೆ ಕಲಿತವರು, ಬುದ್ದಿಗಳಿಸಿದವರು, ಒಂದೊಂದು ಕ್ಷೇತ್ರದಲ್ಲಿ ‘ಮಾಸ್ಟರ್’ ಗಳಾಗಿ ಮಾನವ ಸಮುದಾಯಕ್ಕೆ ಸೇವೆಯಲ್ಲಿ ಸಲ್ಲಿಸಲು ನಿಯೋಜಿಸಲ್ಪಟ್ಟವರು. ಆದರೇನು ಬಂತು ಕೆಳಗೆ ಉಲ್ಲೇಖಿಸಿರುವ ಅಲ್ಲಮ ಪ್ರಭುವಿನ ವಚನದಂತೆ ನಾವು ‘ಅಂತರಂಗದಲ್ಲಿ ಅರಿವಾದೊಡೇನು, ಬಹಿರಂಗದಲ್ಲಿ ಕ್ರಿಯೆಯಿಲ್ಲದ ಮೇಲೆ’ ಎಂಬತಾಗಿದ್ದೇವೆ. ಆದ್ದರಿಂದ ಅಪಾರ ಹೊಣೆಗಾರಿಕೆಯನ್ನು ಹೊಂದಿದ ಶಿಕ್ಷಕ ವರ್ಗವು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು ಹಾಗೂ ಮಾತನಾಡಬೇಕು. ಇಲ್ಲವಾದಲ್ಲಿ ವೈರುಧ್ಯಗಳು ಹುಟ್ಟಿಕೊಳ್ಳಬಹುದು. ಈ ಎಲ್ಲಾ ಎಚ್ಚರಿಕೆಯಿಂದ ಜವಾಬ್ದಾರಿಯನ್ನು ಅರಿತು ಬುಡಕಟ್ಟು ಸಮುದಾಯಗಳ ಅಧ್ಯಯನದಲ್ಲಿ ನಮ್ಮ ವಿಭಾಗವು ತೊಡಗಿಸಿಕೊಂಡಿದೆ.

ಬುಡಕಟ್ಟು ಕಾವ್ಯದ ಸಂಗ್ರಹ ಕಾರ್ಯಕ್ಕೆ ಪ್ರೇರಕ ಶಕ್ತಿಯಾದ ವಿಶ್ರಾಂತ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿ ಅವರಿಗೂ, ಜಾನಪದ ಮತ್ತು ಬುಡಕಟ್ಟು ಕ್ಷೇತ್ರದಲ್ಲಿ ಅಪಾರ ಜ್ಞಾನ ಮತ್ತು ಕಾಳಜಿ ಹೊಂದಿದ್ದು, ಈ ಬುಡಕಟ್ಟು ಕಾವ್ಯವು ತುರ್ತಾಗಿ ಪ್ರಕಟವಾಗಬೇಕೆಂಬ ಆಶಯ ವ್ಯಕ್ತಪಡಿಸಿದ ಮಾನ್ಯ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೂ ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಹಿ. ಜಿ. ಬೋರಲಿಂಗಯ್ಯ ಹಾಗೂ ಈಗಿನ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರಿಗೂ,

ಕಲಿಕೆ ನಿರಂತರ ಈ ನಿಟ್ಟಿನಲ್ಲಿ ವಿಭಾಗದ ಸಹೋದ್ಯೋಗಿಗಳ ಜೊತೆಗಿನ ಚರ್ಚೆಗಳು ಹೊಸ ಚಿಂತನೆಗಳನ್ನು ಪಡೆದುಕೊಳ್ಳುವಲ್ಲಿ ಸಹಕಾರ ನೀಡುತ್ತಿರುವ ಸಹದ್ಯೋಗಿ ಮಿತ್ರರಾದ ಡಾ. ಹಿ. ಚಿ. ಬೋರಲಿಂಗಯ್ಯ, ಡಾ. ಕೆ. ಎಂ. ಮೆಟ್ರಿ, ಡಾ. ಚಲುವರಾಜು, ಡಾ. ಗಂಗಾಧರ ದೈವಜ್ಞ, ಶ್ರೀ ಎ. ಎಸ್‌. ಪ್ರಭಾಕರ ಅವರಿಗೂ,

ಯಾವ ಉದ್ದೇಶಕ್ಕಾಗಿ ನಮ್ಮನ್ನು ತೊಡಗಿಸಿಕೊಂಡಿದ್ದೇವೋ ಅವರಿಗೆ ನಾವು ಮಾಡುತ್ತಿರುವುದು ಇಷ್ಟವೋ ಅಥವಾ ಇಲ್ಲವೋ ಅಂತು ನಮ್ಮ ಅಧ್ಯಯನಕ್ಕೆ ಪೂರಕವಾಗಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಕಲ ಮಾಹಿತಿಯನ್ನು ನೀಡಿ ಸಹಕರಿಸಿದ ಸಮಸ್ತ ಸೋಲಿಗ ಬುಡಕಟ್ಟು ಸಮುದಾಯಕ್ಕೂ,

ಬಿಳಿಗಿರಿ ರಂಗನ ಕಾವ್ಯವನ್ನು ಹಾಡಿ ಪ್ರಥಮ ಬಾರಿಗೆ ಅಕ್ಷರ ರೂಪ ಪಡೆದುಕೊಳ್ಳಲು ಸಾಧ್ಯವಾಗಿಸಿದ ಪ್ರಧಾನ ಕಲಾವಿದ ಶ್ರೀ ದಂಬಡಿ ಕ್ಯಾತೇಗೌಡ, ಶ್ರೀ ತಂಬೂರಿ ದಾಸೇಗೌಡ ಮತ್ತು ಶ್ರೀ ಸಪ್ಪೇ ಸಿದ್ದೇಗೌಡ ಅವರಿಗೂ,

ಕ್ಷೇತ್ರಕಾರ್ಯಕ್ಕೆ ಹೋದಾಗಲೆಲ್ಲಾ ವೀರಪ್ಪನ್‌ ಆತಂಕದಿಂದ ನನ್ನ ಬರುವಿಕೆಯನ್ನು ನಿರೀಕ್ಷಿಸಿ, ಬಂದ ಬಳಿಕ ಹೋದ ಕೆಲ್ಸ ಆಯ್ತ ಅಯ್ಯೋ ಇನ್ನು ಮೇಲೆ ಈ ತರಹದ ಕೆಲ್ಸಾನೇ ತಗೋಬೇಡಪ್ಪ ಎಂದು ನಿಟ್ಟುಸಿರು ಬಿಡುತ್ತಿದ್ದ ನನ್ನ ಶ್ರೀಮತಿ ಶಾಂತ ಹಾಗೂ ನೀನು ಏನ್‌ ಕೆಲ್ಸ ಮಾಡ್ತಿದ್ದಿಯಪ್ಪ ಎಂಬ ಪ್ರಶ್ನೆಗಳನ್ನು ಕೇಳುತ್ತ ಈಗ ಯಾವ್ಯಾವ ಪುಸ್ತಕ ಬರಿತಿದ್ದಿಯಪ್ಪ ಎಂದು ವಿಚಾರಿಸಿಕೊಳ್ಳುತ್ತಿದ್ದ ಪ್ರಾಮಾಣಿಕ್‌ ಮತ್ತು ಆಕರ್ಷಕ್‌ ಅವರಿಗೂ,

ಆಗಾಗ ನನ್ನ ಜೊತೆ ಶೈಕ್ಷಣಿಕ ಚರ್ಚೆ ಮಾಡುವುದರ ಮೂಲಕ ಅನೇಕ ಹೊಸ ವಿಚಾರಗಳ ಬಗ್ಗೆ ಗಮನ ಸೆಳೆವ ಸ್ನೇಹಿತರಾದ ಡಾ. ಸಿ. ಮಹದೇವ, ಡಾ. ಸಿ. ಆರ್, ಗೋವಿಂದರಾಜು, ಡಾ. ಪಿ. ಮಹದೇವಯ್ಯ, ಡಾ. ವೀರೇಶ ಬಡಿಗೇರ ಹಾಗೂ ಹಿರಿಯರಾದ ಜಿ. ಆರ್. ರಾಮಮೂರ್ತಿ ಅವರಿಗೂ,

ಮೂರು ಬಾರಿ ಅಕ್ಷರ ರೂಪ ಪಡೆದುಕೊಂಡರೂ ಪ್ರಕಟಣೆಗೆ ಸಜ್ಜಾಗದ ನನ್ನ ಈ ಕಾವ್ಯವನ್ನು ನಾಲ್ಕನೇ ಬಾರಿಗೆ ಪಟ್ಟುಬಿಡದೆ ಯಶಸ್ವಿಯಾಗಿ ಪ್ರಕಟಣೆಯ ಬಾಗಿಲಿಗೆ ತಲುಪಿಸಿದ ಸ್ನೇಹಿತರೂ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಸುಜ್ಞಾನಮೂರ್ತಿ ಹಾಗೂ ಅಕ್ಷರ ಜೋಡಣೆ ಮಾಡಿದ ಜಿ. ಶಿವಕುಮಾರ್, ಚಿತ್ರ ಕಲಾವಿದ ಶ್ರೀ ಕೆ. ಕೆ. ಮಕಾಳಿ ಇವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತದೆ.

ಡಾ. ಕೆ. ಕೇಶವನ್ಪ್ರಸಾದ್