ಮೌಖಿಕ ಕಾವ್ಯ ಸಂಗ್ರಹ, ಸಂಪಾದನೆ ವಿಚಾರದಲ್ಲಿ ಅದಕ್ಕೆ ಪೂರಕವಾಗಿ ಹಲವಾರು ಅಗತ್ಯಗಳಿವೆ. “ಈ ಕೆಲಸವನ್ನು ಯಾರು ಬೇಕಾದರು ಮಾಡಬಹುದು. ಕೇವಲ ಅಕ್ಷರ ಜ್ಞಾನವಿದ್ದರೆ ಸಾಕು” ಎಂಬ ವಾದವನ್ನು ಮುಂದಿಡುವುದೂ ಉಂಟು. ಅದರೆ ಇದು ಸಮರ್ಥನೀಯವಾದುದಲ್ಲ. ಪುಟ ಸಂಖ್ಯೆಗಳ ಮೂಲಕ ಕಾವ್ಯವನ್ನು ಮೌಲ್ಯೀಕರಿಸುವುದು ಸೂಕ್ತವಲ್ಲ. ಏಕೆಂದರೆ ಕಾವ್ಯ ಹಾಡುವವನ ಸಮುದಾಯದ ಅಥವಾ ಗಾಯಕನ ಹಿನ್ನೆಲೆ, ಕಾವ್ಯದ ಮಹತ್ವ, ಕಾವ್ಯ ನೀಡುವ ವಿವಿಧ ಹೊಳಹುಗಳ ಬಗೆಗೆ ನಮ್ಮ ಗಮನವಿರಬೆಕಾದುದು ಅಗತ್ಯವೇ ಹೊರತು ಪುಟ ಸಂಖ್ಯೆಯಲ್ಲ.

ಈಗಾಗಲೇ ಬುಡಕಟ್ಟು ಅಧ್ಯಯನ ವಿಭಾಗವು ‘ಬುಡಕಟ್ಟು ಮಹಾಕಾವ್ಯ ಮಾಲೆ’ ಎಂಬ ಯೋಜನೆಯ ಅಡಿಯಲ್ಲಿ ಒಂಬತ್ತು ಮಹಾಕಾವ್ಯಗಳನ್ನು ಪ್ರಕಟಿಸಿದೆ. ಈ ಪ್ರಕಟಣೆಗಳು ನಾಡಿನ ವಿದ್ವಾಂಸರು ಹಾಗೂ ವಿಚಾರವಂತರ ಗಮನ ಸೆಳೆದಿದೆ. ಈ ಮಾಲೆಯ ಒಂದು ಕೃತಿಯಾದ ಮಲೆಮಾದೇಶ್ವರ ಕಾವ್ಯವನ್ನು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸಿ. ಎನ್‌. ರಾಮಚಂದ್ರನ್‌ ಅವರು ಆಂಗ್ಲಭಾಷೆಗೂ ಅನುವಾದಿಸಿದ್ದಾರೆ. ವಿಭಾಗದ ಬುಡಕಟ್ಟು ಮಹಾಕಾವ್ಯ ಮಾಲೆ ಯಶಸ್ವಿಯಾದುದರ ಹಿನ್ನೆಲೆಯಲ್ಲಿ ಅದೇ ಮಾದರಿಯಲ್ಲಿ ಕಾವ್ಯ ಸಂಗ್ರಹ-ಸಂಪಾದನೆ ಮುಂದುವರಿಸಲು ಸೂಚಿಸಿದ ಹಿಂದಿನ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿಯವರು ಬುಡಕಟ್ಟು ವಿಭಾಗದವರಾದ ನೀವು ಬುಡಕಟ್ಟಿಗೆ ಸಂಬಂಧಿಸಿದಂತೆ ಅಧ್ಯಯನ-ಸಂಶೋಧನೆ ಕೈಗೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು. ಆದಕಾರಣ ೧೯೯೮-೯೯ನೇ ಸಾಲಿನ ಸಾಂಸ್ಥಿಕ ಯೋಜನೆ ಅಡಿಯಲ್ಲಿ ಬುಡಕಟ್ಟಿನ ಕಲಾವಿದರೆ ಹಾಡಿದ ಬುಡಕಟ್ಟು ಕಾವ್ಯಗಳನ್ನು ಸಂಗ್ರಹಿಸಿ ಸಂಪಾದಿಸಬೇಕೆಂದು ವಿಭಾಗದ ಅಧ್ಯಾಪಕ ವರ್ಗವೂ ತೀರ್ಮಾನಿಸಿತು. ಆ ಹಿನ್ನೆಲೆಯಲ್ಲಿ ಒಬ್ಬೊಬ್ಬ ಅಧ್ಯಾಪಕನು ಲಭ್ಯವಿರುವ ಒಂದೊಂದು ಬುಡಕಟ್ಟಿನ ಕಾವ್ಯವನ್ನು ಸಂಗ್ರಹಿಸುವ ಯೋಜನೆಯನ್ನು ಹಮ್ಮಿಕೊಂಡೆವು. ಇದು ಒಂದು ರೀತಿಯಲ್ಲಿ ಬುಡಕಟ್ಟು ಸಮುದಾಯಕ್ಕೆ ನಮ್ಮ ಪರೋಕ್ಷ ಸೇವೆ ಎಂದೇ ಹೇಳಬಹುದು. ನಿಗೂಢವಾಗಿ ಉಳಿದಿರುವ ಬುಡಕಟ್ಟಿನ ಮೌಖಿಕ ಸಾಹಿತ್ಯ ಸಂಪತ್ತನ್ನಷ್ಟೆ ಸಂಗ್ರಹಮಾಡದೆ, ಈ ಮೂಲಕ ಆ ಸಮುದಾಯವನ್ನು ಸಮಗ್ರವಾಗಿ ಪರಿಚಯಿಸುವ ಹಾಗೂ ಬುಡಕಟ್ಟೊಂದರ ಸಾಹಿತ್ಯ, ಭಾಷೆ, ಸಂಸ್ಕೃತಿಯನ್ನು ಬಹಿರಂಗಗೊಳಿಸುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ವಿಭಾಗವು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂಬ ನಂಬಿಕೆ ನನಗಿದೆ. ಆದರೆ ಅನೇಕ ಮಿತಿಗಳೂ ಇದ್ದುವು ಎಂಬುದನ್ನು ಹೇಳದಿರಲಾಗದು. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ವೆರಿಯರ್ ಎಲ್ವಿನ್‌ ಭಾರತಕ್ಕೆ ಕ್ರೈಸ್ತಮತ ಪ್ರಚಾರಕ್ಕಾಗಿ ಬಂದರು. ಕುತೂಹಲಕ್ಕೆ ಬುಡಕಟ್ಟು (ಗೊಂಡ) ಜನರ ಸಂಸ್ಕೃತಿ ಅಧ್ಯಯನಕ್ಕೆ ತೊಡಗಿದಾಗ ಅವರು ಎಷ್ಟು ಪ್ರಭಾವಿತರಾಗುತ್ತಾರೆ ಎಂದರೆ ಬುಡಕಟ್ಟು ಜನಸಮುದಾಯಕ್ಕೆ ತಾವೇ ಮತಾಂತರ ಹೊಂದಿದರು. ಕೊನೆಗೆ ಬುಡಕಟ್ಟಿನ ಮಹಿಳೆಯನ್ನು ಮದುವೆಯಾಗಿ ಅವರಿಗೋಸ್ಕರ ಬಾಳಿ ಬದುಕಿದರು. ಅವರ ಸೇವೆಯನ್ನು ಕೇವಲ ಮಾತಿನಲ್ಲಿ ಹೇಳುವುದಕ್ಕೆ ಬದಲು ಬುಡಕಟ್ಟು ಅಧ್ಯಯನ-ಸಂಶೋಧನೆಗೆ ಮೀಸಲಾದ ನಮ್ಮ ವಿಭಾಗವು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸ ಬೇಕಾದ ಅಗತ್ಯವಿದೆ. ಆದರೆ ಬುಡಕಟ್ಟು ಸಮುದಾಯಗಳ ಸಂಶೋಧನೆಯು ಹೆಚ್ಚಿನ ಕಾಲಾವಕಾಶ ಹಾಗೂ ವಿಶೇಷ ಧನಸಹಾಯವನ್ನು ನಿರೀಕ್ಷಿಸುತ್ತದೆ. ವ್ಯಾಪಕ ಕ್ಷೇತ್ರಕಾರ್ಯದಿಂದ ಮಾತ್ರ ಒಂದು ಬುಡಕಟ್ಟು ಸಮುದಾಯವನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯ. ಕೇವಲ ಹತ್ತು ಹದಿನೈದು ದಿನಗಳ ಸೀಮಿತ ಅವಧಿಯಲ್ಲಿ ಪಿಕನಿಕ್‌ ಮಾದರಿ ಕ್ಷೇತ್ರ ಕಾರ್ಯಯದಿಂದ ನಮ್ಮ ಉದ್ದೇಶ ಫಲಿಸದೇ ಹೋಗಬಹುದು. ಆದರೆ ನನ್ನ ಈ ಅಧ್ಯಯನ (ಸಂಗ್ರಹ) ಸಂದರ್ಭದಲ್ಲಿ ಅನೇಕ ಕೊರತೆಗಳ ನಡುವೆಯೂ ನನ್ನ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ.

ಸಮಸ್ಯೆಯೆಂದರೆ, ಚಾಮರಾಜನಗರ ಮತ್ತು ಮೈಸುರು ಜಿಲ್ಲೆಯಲ್ಲಿ ಇರುವ ಸುಮಾರು ಇಪ್ಪತೈದು ಸಾವಿರಕ್ಕೂ ಹೆಚ್ಚಿರುವ ಸೋಲಿಗರಲ್ಲಿ ಬಿಳಿಗಿರಿರಂಗನ ಕಾವ್ಯವನ್ನು ಸಮಗ್ರವಾಗಿ ಹಾಡುವವರು ಶ್ರೀಮಾನ್‌ ದಂಬಡಿ ಕ್ಯಾತೇಗೌಡ ಅವರನ್ನ ಬಿಟ್ಟರೆ ಬೇರೊಬ್ಬರಿಲ್ಲ. ಈತನೋ ಮದ್ಯಪಾನ ಸೇವನೆ ಆಗದೆ ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ. ಬಾಯಲ್ಲಿ ಮೊದಲೆ ಹಲ್ಲುಗಳಿಲ್ಲ. ಇಂತಹ ಒಬ್ಬ ವಿಶೇಷ ಕಲಾವಿದನನ್ನು ಕೊನೆಗೂ ಹುಡುಕುವುದೇ ದೊಡ್ಡ ಸಾಧನೆಯಾಯಿತು. ಒಂದು ರೀತಿಯಲ್ಲಿ ಈತ ಸಂಚಾರಿ ಭಿಕ್ಷುಕ. ಹೊಟ್ಟೆಪಾಡಿಗಾಗಿ ನಾಡಿಗೆ ಹೋಗಿ ಗುಡಿ, ಮಠಗಳಲ್ಲಿ ಹಾಡುವುದು ಅಷ್ಟೋ ಇಷ್ಟೋ ಗಳಿಸುವುದು ಕುಡಿಯುವುದು ವಾರದಲ್ಲಿ ಒಂದೋ ಎರಡೋ ದಿನ ತನ್ನ ಪೋಡಿಗೆ ಭೇಟಿಕೊಡುವುದು. ಈತ ಹಾಡಿದ ಬಿಳಿಗಿರಿರಂಗನ ಕಾವ್ಯವನ್ನು ಲಿಪ್ಯಂತರಗೊಳಿಸುವಾಗ ನನ್ನಲ್ಲಿದ್ದ ಅಪಾರ ತಾಳ್ಮೆ ಖರ್ಚಾಯಿತು. ಕೆಲವೊಮ್ಮೆ ಒಂದೊಂದು ಪದವನ್ನು ಸ್ಪಷ್ಟಪಡಿಸಿಕೊಳ್ಳಲು ಐದತ್ತು ನಿಮಿಷವಾದರು ಬೇಕಾಗುತ್ತಿತ್ತು. ಈಗ ಹೇಳಿದ ವಿಚಾರಗಳು ಅನಗತ್ಯವೆನಿಸಿದರು ಅನಿವಾರ್ಯ. ಮುಂದೆ ಹೇಳಹೊರಟಿರುವ ಮಾತುಗಳು ಕಾವ್ಯಕ್ಕೆ ಪೂರಕ. ಕಾವ್ಯವನ್ನು ಓದುವ ಮೊದಲು ಆ ಕಾವ್ಯ ಸೃಷ್ಟಿಪಡೆದ ಸಮುದಾಯವನ್ನು ಕುರಿತು ಒಂದಿಷ್ಟು ಮಾಹಿತಿ ತಿಳಿಸಿಕೊಡುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.