ಸ್ವಾಮಿ ಕಡೆ ನೋಡಿ ಗಂಗಾದರೇಶ್ವರ
ಅಂದ್ರೆ ನೀನು ಮಾದಪ್ಪ
ನನ್ಗೆ ರೂಪ್ವಾಗಿ ನೀನು ಯೇಳ್ಬೇಕು
ಸತ್ತೋಗ್ ಬುಟ್ಲ ನೀನೆ ಯೇಳ್ಬೇಕು
ಆ ಸೋಲಿಗರ ಬೊಮ್ಮೆಗೌಡ್ರೆ
ಮಗ ನೋಡಪ್ಪ ದಾಸಯ್ಯ ವಾಸ ಆಗಿದ್ದಾಳೆ
ಮೇಲುಗಿರಿಕೋಗ್ಬೇಕು
ಮಳ್ಳಿ ಒಡ್ಡಿಗೋಗ್ಬೇಕು
ಮಳ್ಳಿ ಒಡ್ಡಿನಲ್ಲ ನೇರ್ವಾಗಿ ನೋಡು
ಅಲಿರ್ತಾ ಇದಾರೆ
ಓಹೋ ಹೋ
ಇನ್ನು ದೇವ್ರೇಳ್ದ ಮಾತು ಉಸಿ ಬರಲ್ಲ ಅಂದ್ಬುಟ್ಟು
ಇವ್ರು ಆರ್ ಮಂದಿ ಅಕ್ಕತಂಗಿರ್ನೆಲ್ಲ
ಏಳು ಮಂದಿನಲ್ಲಿ ಒಬ್ಬ ಕಾಲಿಯಾಗ್ಬುಟ್ಟ
ಆರು ಮಂದಿ ಅಕ್ಕ ತಂಗೇರು
ಸೋಲಿಗರ ಬೊಮ್ಮೆಗೌಡ್ನ ಮಕ್ಕ
ಚಿಕ್ಕಾಳ, ದೊಡ್ಕಾಳ, ಚಿಕ್ಕಮಾದ, ದೊಡ್ಮಾದ
ಎಲ್ಲಾ ಸೇರ್ಕಂಡು ವೋಗಿ ನೋಡ್ವಾಗ

ಅವ್ರು ಮಳ್ಳಿ ಒಡ್ಡಿನಲ್ಲಿ ಇರುತಾರೆsss || ತಂದಾನ ||
ಮಳ್ಳಿ ಒಡ್ಡಿನಲ್‌ ಕೂತವ್ರೆ ರಂಗಯ್ಯsss
ಮಾಯ ರೂಪಂತೆ ತಾಳುತವ್ರೆsss || ತಂದಾನ ||
ಅವ್ರು ಮಾಯದಿ ರೂಪ ತಾಳ್ಕಂಡು ರಂಗಪ್ಪsss
ಎಜ್ಜೆ ನೋಡಯ್ಯ ಆದಿನಾರsss || ತಂದಾನ ||

ಆಗ ಸೋಲಿಗರ ಬೊಮ್ಮೆಗೌಡ್ನ
ಮಕ್ಳಿಗೆ ಕಂಡ್ಬುಟ್ಟು ಏ ಕಳ್‌ದಾಸ ನೀನು
ಮನೆ ಮನೆ ಇಟ್ಟು ತಿರ್ಕೊಂಡ್‌ ತಿನ್ನ ದಾಸ
ನನ್ನ ಮಗಳ ತಕ್ಕ ಬಂದ್ಬುಟ್ಟಿದ್ದೀಯ
ನಿನ್ನ ಮೋರೆ ಮ್ಯಾಲ್‌ ತಿಮಿತಿನ್‌ ನೋಡ್ಕೊ
ನಿನ್ಗ್‌ ತುಂಡುದೊಣ್ಣೇಲಿ ಬಡಿತೀನ್‌ ನೋಡ್ಕೋ……

ಈವೊತ್ತು ಯಾವ ಊರವ್ನ ದಾಸಯ್ಯsss || ತಂದಾನ ||
ಯಾವ ಮತದವ್ನ, ಯಾವ ಕುಲದವ್ನsss
ಜಾತಿಗೆಡ್ಸಿಯಯ್ಯ ಮುದುಕಯ್ಯsss || ತಂದಾನ ||
ಅಯ್ಯ ಜಾತಗೆಡ್ಸಿಯಯ್ಯ ಮುದ್ಕಯ್ಯ ನೀನಯ್ಯsss
ಕೊರ್ಗ ಬೇಡಯ್ಯ ಮುದುಕಯ್ಯsss || ತಂದಾನ ||

ಯಾವ್‌ ಮತವಯ್ಯ ನೀನು ಯಾವ್‌ ಕುಲ್ದವನಯ್ಯ ನೀನು
ಅಯ್ಯೋ ಬೊಮ್ಮೆಗೌಡ್ರೆ ನೋಡಿದ್ರೆ
ಜಗತ್ನಲ್ಲಿ ದೊಡ್ಡವರಾಗಿರಬಹ್ದು ನೀನೆ ದೊಡ್ಡವ್ನು
ನಾನೆ ದೊಡ್ಡವ್ನು ಜಗತ್ತಿನಲ್ಲಿ ಯಾರು ಏನು ಕಂಡವರಿಲ್ಲ
ಸೋಲಿಗರ ಬೊಮ್ಮೆಗೌಡ ಅಂತ ನನ್ಗೆನು ಗೊತ್ತಯ್ಯ
ಅಡ್ವಿಯೊಳ್ಗೆ ಬರ್ತಾ ಇದ್ದೆ
ನಾನು ಕರ್ಕಂಡ್‌ ಬಂದಿ ಬೊಮ್ಮೆಗೌಡ್ರೆ
ನಿನ್ನ ಮಗ ಅಂತ ನನಗ್‌ ಗೊತ್ತಿಲ್ಲ
ನನ್ ಮಗ ಅಂತ ನಿನಗ್‌ ಗೊತ್ತಿಲ್ಲ
ನೀನು ನನಗ್‌ ಗೊತ್ತಿಲ್ಲ
ನಾನಿದ್ದು ನಿನಗ್‌ ಗೊತ್ತಿಲ್ಲ

ಇದು ಕುಸ್ಮದೇವಿ ನೋಡುತ್ತಾರೆsss || ತಂದಾನ ||
ಈವೊತ್ತು ನೀನಯ್ಯ ಸಿಕ್ಕಿಬುಟ್ಟಿ ಮಗಳೆsss
ನಿನ್ನ ಮಗ ಎಂದು ನೋಡಲಿಲ್ಲsss || ತಂದಾನ ||

ನೋಡಪ್ಪ ಈ ವೊತ್ತಿಗೆ ಮಗ್ಳೆ ನಿನ್ನ ಮೊಕ ನನಗ್‌ ಬೇಕಿಲ್ಲ
ನನ್‌ ಮೊಕ ನಿನಗ್‌ ಬೇಕಿಲ್ಲ
ನೀನು ದಾಸಯ್ಯ ವಾಸ ಆಗ್ಬುಟ್ಟೆ
ನನ್ಗೆ ನೋಡಪ್ಪ ನೀನು ಸತ್ರು ಆಗಾಕಿಲ್ಲ
ಕೆಟ್ಟು ಆಗಾಕಿಲ್ಲ
ನಾನ್‌ ನೋಡುದ್ರೆ ಜಾತಿಯೊಳ್ಗೆ ಸೋಲಿಗ್ರಾಗ್‌ ಉಟ್ಟಿ
ಬಡ ದಾಸಯ್ನ ವಾಸಕ್ಕ ಬಂದ್ಬುಟ್ಟೆಲ್ಲಾ
ಇಂತ ವಯ್ನಾದ ಉಡ್ಗಿನಾ ಬಿಟ್ಟು

ಅವ ಬಯ್‌ಬೊಯ್ನ ಸ್ವಾಮಿ ಬೊಯ್ಯುತಾರೆsss || ತಂದಾನ ||
ಅಯ್ಯ ಬೊಯ್‌ ಬೊಯ್ನೆ ಸ್ವಾಮಿsss
ಬೊಯ್ತವ್ನೆ ರಂಗಯ್ಯsss
ನನ್ನ ಬಯ್ಯಲು ಬೇಡ ಬೊಮ್ಮ ಮಾವsss || ತಂದಾನ ||

ಬಯ್‌ಬೇಡ ಬೊಮ್ಮ ಮಾವ
ಬಯ್‌ಬೇಡ ಮೊಮ್ಮ ಮಾವ
ನಿಂಗೆ ಕರ ಕಟ್ಟಕೆ ಕಂಬ್ಳದ ಆಳು
ರಾಗಿ ಬೀಸಕೆ ಚಿನ್ನದ ಗುಂಟ
ಮನಿಕಳಕೆ ಪಟ್ಟಮಂಚ ಕೊಡ್ತೀನಿ ಮಾವ
ನನ್‌ ಒಡಿಬ್ಯಾಡ ಮಾವ
ಎಯ್‌ ಬಡ್ವ ನೀನ್‌ ನೋಡಿದ್ರೆ
ಮನೆ ಮನೆ ತಿರ್ಗೋವಂತ ಇಟ್‌ಕಾಣ್ದ ದಾಸ
ನನ್‌ ಮಗ್ಳ ತಕ್ಕೊಂಡ್‌ ಬಂದಿ ಅಂದ್ಬುಟ್ಟು

ಅವ್ರು ತುಂಡು ದೊಣ್ಣೆಯ ಯಿಡಿತಾರೆsss || ತಂದಾನ ||
ಅಪ್ಪ ತುಂಡು ದೊಣ್ಣೆಯ ಯಿಡ್ದುsss
ಸಂದಿನ್‌ ಮ್ಯಾಲೆ ಒಡೆವಾಗsss
ಅಯ್ಯೊ ಬಡೆಯಲು ಬೇಡ ಬೊಮ್ಮೆಗೌಡsss || ತಂದಾನ ||

ಮೂರ್ ಏಟ್‌ ಬೊಮ್ಮೆಗೌಡ್ನೋರು
ಉರ್ದುಬುಟ್ಟು ದಾಸಪ್ನ್ಗ
ಮೂರ್ ಏಟ್‌ ಉಗರ್ದೇಟ್ಗ ದಾಸಪ್ನೋರು
ನಿನ್ಗೆ ಪುಣ್ಯ ಕೊಟ್ಟುದ್ದೆಲ್ಲ ಆಳಾಗ್ಲಿ
ಈವೊತ್ತಿನ್‌ ದಿವ್ಸ ನೀ ಕರ ಕಟ್ಟೋದಕ್ಕೆ
ಕಂಬಳದ ಆಳ್‌ ಕೊಟ್ಟುದಕ್ಕೆ
ರಾಗಿ ಬೀಸೋದಕ್ಕೆ
ಚಿನ್ನದ ಗೂಟ ಕೊಟ್ಟೋದಕ್ಕೆ
ಚಿಕ್ಕ ಮಕ್ಕಳು ಮನಿಕಳಕೆ
ಈವೊತ್ತು ನಿನ್ಗೆ
ತಿನ್ನ ಅನ್ನ ಚಿನ್ನ ಆಗ್ಲಿ
ಕುಡಿಯಾ ನೀರು ಪಾಯ್ಸ ಆಗ್ಲಿ

ತುಂಡು ಬಟ್ಟೆ ನಿನ್ಗೆ ಎರ್ಡು ಕಾಣೊsss || ತಂದಾನ ||

ಅವ್ನು ಸಾಪವನ್ನು ಕೊಟ್ಬುಬಿಟ್ಟು
ನಾರಾಯ್ಣ ಮೂರ್ತಿಯವ್ರು
ಮೂರು ವರ್ಸಕ್ಕೊಂದು ಪೋಡಾಗಲಿ
ಮೂರು ವರ್ಸ ತುಂಬಿದ
ಮೇಲೆ ದಬ್ಬೆ ವುಲ್ಲು ಬರ್ಲಿ ಅಂತ ಸಾಪ ಇಟ್ಬುಟ್ಟಿದ್ದಾರೆ
ಅಯ್ಯಯ್ಯೋ ನಿನ್‌ ಸಾಪ ನನ್ನೇನ್‌ ಮಾಡಕ್ಕಾದ್ದಯ್ಯ

ನಿನ್‌ ಮಾತು ನನ್ಗೇನ್‌ ಬೇಕಯ್ಯsss
ನನ್ಗಿಂತ್‌ ಎಚ್ನ ಮಂತ್ರವಂತ್ನsss?

ನೀ ನನ್ಗ ಮಗ್ಳ ಗೆಲ್ಲೊಂತ
ಮಂತ್ರ ತಂತ್ರ ಮಾಡಿ ಮೋಸ ಮಾಡ್ದಂತ
ಮುದ್ಕಪ್ಪ ನೀನು
ನಿನ್ನ ಮೊಕ ನೋಡಕಾಗಲ್ಲ ಅಂದ್ಬುಟ್ಟು …. .
ಅವ್ರು ನಿನ್‌ ಮೊಕ ನಾನೋಡಗಿಲ್ಲ
ನನ್‌ ಮೊಕ ನೀ ನೋಡಾಗಿಲ್ಲ

ಅವ್ರು ಪಾತಾಳ್‌ ಲೋಕಕ್ಕೆ ವೋಗುತ್ತಾರೆsss || ತಂದಾನ ||
ಅವ್ರು ಪಾತಾಳಲೋಕಕ್ಕೆ ವೋಗ್ತಾರೆ ಬೊಮ್ಮೆಗೌಡsss
ವೋಗಾಲು ಬೇಡ ಬೊಮ್ಮೆ ಮಾವsss || ತಂದಾನ ||

ವೋಗ್ಬೇಡ ಬೋಮ್‌ ಮಾವ
ಪಾತಾಳ್‌ ಲೋಕಕ್ಕೆ ವೋಗ್ಬುಟ್ರೆ
ನಿನ್‌ಪಾದ ನನ್ಗೆ ಸಿಕ್ಕಲ್ಲ ಅಂದ್ಬುಟ್ಟು

ಅಂತ ಸಂಕ್ರಾಂತಿ ದಿವ್ಸ ನಿನ್ಗೊಂದು ಪೂಜೆ ಕೊಡುತಿನಿsss || ತಂದಾನ ||
ನಿನ್ಗೊಂದು ಪೂಜೆ ಕೊಡ್ತಿನಿ ಬೊಮ್ಮ ಮಾವsss
ನೀನು ವೋಗ ಬೇಡ ಕಾಣೊ ಬೊಮ್ಮ ಮಾವsss || ತಂದಾನ ||
ಚೆಲ್ಲಿದರು ಮಲ್ಲಿಗೆಯ ಬೆಳ್ಳಿ ಬೆಟ್ಟದ ಮೇಲೆsss

ಅಂದಾದ ಚೆಂದಾದ ಚೆಲ್ವ ರಂಗಪ್ಪನಿಗೆ

ಚೆಲ್ಲಿದರು ಮಲ್ಲಿಗೆಯsss
ಮಲ್ಲಿಗೆ ವೂನಲ್ಲಿsss
ರಂಗಯ್ಯ ವಲ್ಲಿಯ ನೆಯ್ದವರೆsss
ಇಲ್ಲೊಂದು ಗಳಿಗೆsss ತಂಗವ್ರೆ ರಂಗಯ್ಯ || ಚೆಲ್ಲಿದರು ||
ಆನೆಯ ಯಿಡಿದವರೆsss
ರಂಗಯ್ಯ ಆನಂದ ಮಾಡವರೇsss ಬರುತವ್ರೆsss
ಇವ್ರು ಚೆಲ್ಲಿದರು ಮಲ್ಲಿಗೆಯsss || ಚೆಲ್ಲಿದರು ||
ದಾಸೋಳದ ವೂವಿಲ್ಲಾ ರಂಗಯ್ಯsss
ಆಸುಗೆಗ ನಾನು ತಂದೆsss
ಸೇವಂತಿಗೆ ವೂವು ಸೀಮಂತ ರಂಗಯ್ಯ || ಚೆಲ್ಲಿದರು ||
ಅಲ್ಲಾಣಿ ಇಲ್ಲಾಣಿ ರಂಗಯ್ಯsss
ಕಲ್ಯಾಣಿ ಕೊಳದಾಣಿsss
ಇಲ್ಲೊಂದು ರಾತುರೆ ತಂಗಿದ್ದು ವೋಗಯ್ಯsss || ಚೆಲ್ಲಿದರು ||
ಅಯ್ಯ ನೆಟ್ಟ ನಡುವೆ ನಾರಾಯ್ಣ ಕೂತ್ಗಂಡು
ನೆಟ್ಟ ನಡುವೆ ನಾರಾಯ್ಣsss || ತಂದಾನ ||
ಅವ್ರು ನಾರಿರ್ಗ ಸುದ್ದಿ ಯೇಳ್ಕೊಂಡು ನಾರಾಯ್ಣsss
ನಾಟ್ಕ ಕಲೇಲಿ ನಲಿತಾರೇsss || ತಂದಾನ ||
ಅವ್ರು ನಾಟ್ಕ ಕಲೇಲಿ ನಲ್ಕಂಡು ಉಳ್ಕಂಡುsss
ತೇರ ತಾಳಿಗೆ ಸ್ವಾಮಿ ಬರುತಾರೆsss || ತಂದಾನ ||

ಸ್ವಾಮೇರು ನಾಟ್ಕಲಿ ನಲ್ಕೊಂದು
ತೇರ್ನ ತಾಳಿಗೆ ತೆರಳ್‌ಬುಟ್ಟಿದ್ದಾರೆ
ತೇರು ಯಾವತಪ್ಪ
ತೆಪ್ಪ ಯಾವತಪ್ಪ ಅಂದ್ರು
ಇವೆಲ್ಲ ಯೇಳ್‌ ಮಾತು
ಸೂಳೆ ರಂಗಮ್ಮನೋರು ಯೇಳಿದ್ದಾರೆ
ಸೂಳೆ ರಂಗಮ್ಮ ಅಂದ್ರೆ ನೀವಾರು
ಸೂಳೆ ರಂಗಮ್ಮ ಅಂದ್ರೆ
ನಾವು ನೋಡಪ್ಪ
ಕಲ್ಯಾಣಿ ಕೊಳ ಉಟ್ವಾಗ
ಕಲ್ಯಾಣಿ ಆಗ ಕೊಳ ಅಲ್ಲ
ಬೊಮ್ಮೆಗೌಡ ನೀವು ವೋದ್ರು ವೋಗು
ಮಾವ ಅಂತ ನಿಮ್ಮ ಪಾದ

ನಿನ್ಗೊಂದು ಪೂಜೆ ಕೊಡುತ್ತೀವಿsss || ತಂದಾನ ||
ಅಯ್ಯ ನಿನ್ಗೊಂದು ಪೂಜೆ ಕೊಡ್ತಿನಿ ಬೋಮ್‌ ಮಾವsss
ನಿನಗೊಂದು ವರವ ಕೊಡುತಿನಿsss || ತಂದಾನ ||

ಅಯ್ಯಯ್ಯೋ ಪಾತಾಳ್‌ ಲೋಕಕ್ಕೆ ವೋಗುವಾಗ
ಕಂಬ್ರಿ ಗುಡ್ಡದ ಮ್ಯಾಗೆ ನಿನ್ಗೊಂದು ಮನೆ ಕಟ್ಸಿ
ಮಟ ಮಾಡ್ಸ್‌ತಿನಿ ಮಾವ
ವೋಗ್ಬೇಡ ಮಾವ ನೀನು
ನನ್‌ ಜಮೀನ್‌ ಕಾಯ್ಕಂಡಿದ್ರೆ ಸಾಕು ಅಂದ್ಬುಟ್ಟು

ಅವ್ರು ಕೆಮ್ಮತ್ತಿಕೊಂತ ತರುತ್ತಾರೆsss || ತಂದಾನ ||

ಸೋಲಿಗರ ಬೊಮ್ಮೆಗೌಡ್ನ ಮಗ
ಕುಸ್ಮದೇವಿ ಕರ್ಕಂಡು ಮೇಲ್‌ಗಿರಿಗೆ ಬರ್ತಾ ಇದಾರೆ
ಏಯ್‌ ಎಡಗಡೆ ನೋಡ್ತಾರೆ ತೊಳ್ಸಮ್ಮ ಕುಳ್ತಿದಾರೆ
ಬಲ್ಗಡೆ ನೋಡ್ತಾರೆ ಲಕ್ಷ್ಮೀದೇವಿ ಇದ್ದಾಳೆ
ಸೋಲಿಗರ ಬೊಮ್ಮೆಗೌಡ್ನ ಮಕ್ಕಳು ಕಾಡ್ನಲ್ಲಿ ವುಟ್ಟಿ
ಕಾಡ್ನಲಿ ಬೆಳ್ದು ಊರ್ಗೆ ಬರ್ತಾರೆ ಅಂದ್ಬುಟ್ಟು …

ರಂಗಯ್ಯಸ್ವಾಮಿ ಬರುತಾರೆsss || ತಂದಾನ ||
ಅಯ್ಯ ವೊತ್ಕಂಡು ಸ್ವಾಮಿ ಬರ್ತವ್ನೆ ರಂಗಪ್ಪsss
ಯೆಗ್ಲಲ್ಲಿ ಸ್ವಾಮಿ ಕೂತಿದಾಳೆsss || ತಂದಾನ ||
ಯೆಗ್ಲಲ್ಲಿ ಸ್ವಾಮಿ ಕೂತ್ಗಂಡು ನಾರಾಯ್ಣsss
ನಾರಿರ್ಗೆ ಓದ ಯೇಳುತಾರೆsss || ತಂದಾನ ||
ಅಯ್ಯ ನಾರಿರ್ಗೆ ಓದಿ ಯೇಳ್ಕಂಡು ನಾರಾಯಣsss
ಅವ್ರು ಮೇಲುಗಿರಿಗೆ ನಡೆದಾರೆsss || ತಂದಾನ ||
ಮೇಲುಗಿರಿಯಲ್ಲಿ ನೆಲ್ಗೊಂಡು ನಾರಾಯ್ಣsss
ನಾರಿರ್ಗೆ ಬೋದ ಯೇಳುತಾರೆsss || ತಂದಾನ ||

ಸ್ವಾಮೇರು ನಾರಿರ್ಗೂ ಇಬ್ರು
ಮಡ್ದಿರ ಮದ್ಯೆ ಕೂತ್ಗಂಡು
ಮೇಲ್ಗಿರಿ ಕೈಲಾಸವನ್ನು ಮಟದೊಳ್ಗೆ ಬಿಟ್ಗಂಡು
ಚಿಗ್ರಮರಿ ಬಿಟ್ಗಂಡು
ಕಾಡ್‌ ಸೋಲ್ಗಿತ್ತಿ ಒಡ್ಬತಾಳೆ ಅಂತ

ಅವ್ರಿಗೊಂದು ಮಾತ ಆಡುತಾರೆsss || ತಂದಾನ ||
ಅವ್ರಿಗೊಂದು ಮಾತ ಆಡ್ವಾಗ ಸೋಲ್ಗಿತ್ತಿsss
ಅವ ದುಕ್ಕ ಮಾಡಂತೆ ಬರುತಾಳೆsss || ತಂದಾನ ||

ದುಕ್ಕ ಮಾಡ್ವಾಗ ಏನ್‌ ಯೇಳ್ತಾರೆ ನಾರಾಯ್ಣ
ಮಾಂತ ಮಾರ್ಲಾಮಿ
ಜಂಬು ಸವಾರಿ ವೋಗ್ವಾಗ
ಜಾತ್ರೆಯೊಳ್ಗೆ ನಿಮ್ಗೆ ಕುಂಬ್ಳವನ್ನು ಕೊಡ್‌ಬೇಕು
ಬೂದ್‌ಗುಂಬ್ಳಕಾಯಿ ಕೊಡ್‌ಬೇಕು
ಬಾಳೆಲೆ ಕೊಡ್‌ಬೇಕು
ಬಾಳೆಕಾಯಿ ಕೊಡ್ಬೇಕು
ನಮ್ಮ ಬಾವ ಬೊಮ್ಮ ಮಾವ್ನಿಗೆ
ನಮ್ಮ ಬಾವ ಬೊಮ್ಮ ಮಾವ್ನಿಗೆ

ನಾವೊಂದು ಎಡೆಯ ಕೊಡಬೇಕುsss || ತಂದಾನ ||
ಬಾವ ಎಂದರೆ ದೊಡ್ಡ ಮಾದ ಬಾವಂತೆsss
ಚಿಕ್ಕಕಾಡಂತೆ ಬಾಮೈದನೇsss || ತಂದಾನ ||

ಚಿಕ್ಕಾಡ ಬಾಮೈದ,
ದೊಡ್ಡಕಾಡ ಬಾಮೈದ,
ದೊಡ್ಡ ಮಾದನ ಯಿರಿ ಬಾವನ್‌ ಮಾಡ್ಬುಟ್ಟು
ನಾಳೆ ನೀವು ಏಳು ಕೊಟಿ ಬಂಗಾರಕ್ಕೆ
ಬರ್ಕೊಳ್‌ಬೇಕಪ್ಪ ಅಂದ್ಬುಟ್ಟು

ಆದಿ ನಾರಾಯ್ಣ ಬರಿತಾರೆsss || ತಂದಾನ ||
ಆದಿ ನಾರಾಯ್ಣ ಆದಿಲಿ ಬರುತವ್ರೆsss
ಬುಗ್‌ಬುಗ್ನ ಸಂಕ ಊದುತಾರೆsss || ತಂದಾನ ||
ಬುಗ್‌ಬುಗ್ನ ಸಂಕ ಊದ್ಕೊಂಡು ರಂಗಪ್ಪsss
ಮೇಲುಗಿರಿಗೆ ಮೆರಿತಾನೆsss || ತಂದಾನ ||
ಆ ನಾಮ ಈ ನಾಮ ಮೇಲುಕೋಟೆಯನಾಮsss
ಮೇಲೊಂದು ನಾಮ ಬಿಳಿನಾಮsss || ತಂದಾನ ||
ಅಯ್ಯ ಮೇಲೊಂದು ನಾಮ ಬಿಳಿನಾಮ ರಂಗಪ್ಪsss
ವೊಟ್ಟಿಯ ಮೇಗೆ ಬಟ್ಟು ನಾಮsss || ತಂದಾನ ||
ಅಯ್ಯನಾಮ ಬರೆಯವ್ರು ನಾರಾಯ್ಣ ಮೂರ್ತಂತೆsss
ತಾನ ಮಾಡಾಗ ಅಳಿತಾರೆsss || ತಂದಾನ ||
ಬನ್ನಿರಯ್ಯೋ ರಂಗಪ್ಪಾನೆsss
ಬನ್ನಿಸ್ವಾಮಿ ನಾರಾಯ್ಣsss
ನೀರೊರ್ರಿ ಸುಂದರಾಗಿ
ನೀರೂರಿ ಗಿರಿಯಲ್ಲಿsss
ಬನ್ನಿರಯ್ಯ ರಂಗಪ್ಪಯ್ಯsss
ಬನ್ನಿಬಾವ ರಂಗಪ್ಪಯ್ಯsss
ಬಾವ ಬಾ ಬಾವಯ್ಯsss
ಬಂದು ನೋಡೋ ತೇರಯ್ಯsss
ಬನ್ನಿರಪ್ಪ ರಂಗಸ್ವಾಮಿsss
ಸೋಲಿಗ್ರೈಕ ಬರುತಾವೆsss
ಸೋಲಿಗಿತ್ತಿ ಸಗುತ ನೋಡಣ್ಣsss
ಅಣ್ಣಾ ಸೋಲಗಿತ್ತಿ ಸಗುತ ನೋಡಣ್ಣsss
ಈ ರಂಗನೊಂದು … ತೇರು ಉಂಟಣ್ಣsss
ಸೋಲಿಗಿತ್ತಿ ಸಗುತ ನೋಡುsss
ರಂಗಾನೊಂದು ತೇರನೋಡುsss
ನಿಮ್ಮ ಮುದ್ದು ರಂಗಯ್ನ ಗಿರಿಮೇಲೆsss || ತಂದಾನ ||
ಅಲ್ಲಿ ಮುದ್ದು ರಂಗಯ್ನ ಗಿರಿಮ್ಯಾಲೆ ಏನೇನೋsss
ಅಲ್ಲಿ ಸಿದ್ದು ಮುದ್ದಿನ ಸಿವಸಂಕುsss || ತಂದಾನ ||
ಅವು ಸಿದ್ದು ಮುದ್ದಿನ ಸಿವ ಸಂಕ ಯಿಡ್ಕಂಡುsss
ಅವ್ರು ಎದ್ದೇಳು ಬೀದಿ ಮರೆತವ್ರೆ ರಂಗಯ್ಯ
ನಮ್‌ ಮುದ್ದು ರಂಗಯ್ನ ಗಿರಿಯಲಿsss || ತಂದಾನ ||

ಮುದ್ದು ರಂಗಯ್ನ ಗಿರಿಯೊಳ್ಗೆ ಎದ್ದು
ಮುದ್ದಿನ ಸಿವಸಂಕನ ಯಿಡ್ಕಂದು ಏದ್ದೇಳು
ಬೀದಿ ಮೆರ್ದ್‌ ಬುಟ್ಟಿದ್ದಾರೆ
ಆಹಾ …

ಎಲ್ಲಿ ರಂಗಯ್ನ ಒಂಟವ್ನೆ ಕೊಂಗ್‌ನಾಡ್‌ಸೀಮೆಗೆsss
ಕೊಂಗಾರು ಕೊಟ್ಟ ಕುದುರೆಲಿsss || ತಂದಾನ ||
ಅಲ್ಲಿ ಕೊಂಗರು ಕೊಟ್ಟ ಕುದ್ರೇಲಿ ರಂಗಯ್ಯsss
ಏರಿದ ಸ್ವಾಮಿ ಗಿರಿಮಲೆsss || ತಂದಾನ ||
ಅಲ್ಲಿ ಏರಿನ ಸ್ವಾಮಿ ಗಿರಿಯ ರಂಗಪ್ಪsss
ಅವ್ರು ಮುದ್ದು ರಂಗಯ್ಯ ಗಿರಿಮ್ಯಾಲೆ ಆದರೆssss
ಅವು ಬೆಂಡೆ ಕಡ್ಡಿಯ ಅವ್ರಗೆ ತಿರುಗಪ್ಪsss || ತಂದಾನ ||

ಸೋಲಿಗರ ಬೊಮ್ಮೆಗೌಡ್ನ ಮಕ್ಳು
ಬೆಂಡೆ ಕಡ್ಡಿಯ ತಂದು
ತೇರು ಚಿತ್ರಾವನ್ನು ಗೇದ್ ಬುಟ್ಟಿದ್ದಾರೆ
ಮುದ್ದು ರಂಗಯ್ಯ ಸಿರಿವೊಳ್ಗೆ ಬರ್ವಾಗ
ಅವ್ರು ಮೇಲ್ಗಿರಿಯಿಂದ ಬರ್ಬೇಕಾದ್ರೆ

ಅವ್ರು ನಡ್ಕಲ್ ಮಂಟಪದ ನಲಿತಾರೇsss || ತಂದಾನ ||
ಅಯ್ಯೊ ನಡ್ಕಲ್ ಮಂಟಪಾದ ನಲ್ಕಂಡು ಉಲ್ಕಂದುsss
ಕೆರ ತಡಿಗ ಸ್ವಾಮಿ ತೆರಕಿದಾsss || ತಂದಾನ ||
ಅವ್ರು ಕೆರ ತಡಿಗೆ ತೆರಳಿದ ರಂಗಯ್ಯsss
ಕೂಡಿ ಆಡಿರೋ ಅಣ್ಣು ಜವನಾsss || ತಂದಾನ ||
ಅಲ್ಲಿ ಕೂಡಿ ಆಡಿರೊ ಅಂದವ್ನೆ ನಾರಾಯ್ಣsss
ಅಲ್ಲಿ ಬೆಟ್ಟಾ ಕುಕ್ಕೇಲಿ ಮೆಕ್ಕಕಾಯಿ
ತೆಕ್ಕೊಳ್ಳಿರಕ್ಕ ತಲಿಗೊಂದsss || ತಂದಾನ ||
ಅಯ್ಯ ತೆಕ್ಕೊಳ್ಳಿರಕ್ಕ ತಲಿಗೊಂಡು ಮೆಕ್ಕಕಾಯಿsss
ಸ್ವಾಮಿ ರಂಗಯ್ಯ ತೇರಿಗೆ sss || ತಂದಾನ ||
ಅಯ್ಯ ಸ್ವಾಮಿ ರಂಗಯ್ಯ ಮಾತನ್ನು ಉಡ್ಗೇರಿsss
ಇಂದಿಗೆ ಮರೆಯೋ ಈ ಮಾತsss || ತಂದಾನ ||

ಏಯ್‌ ಸೋಲಿಗರ ಬೊಮ್ಮೆಗೌಡ್ನ ಮಕ್ಳ
ಸ್ವಾಮಿ ರಂಗಯ್ನ ಮಾತ ಈವೊತ್ಗೆ ಮರ್ತ್‌‌ಬುಡಿ
ಬಾವ ರಂಗಯ್ಯ ಅಂತ ಕರಿಬೇಕು
ಅಯ್ಯೋ ದಾಸಪ್ಪ ನೀಲ್ಗಿರಿ ಕೈಲಾಸದಿಂದ ಬಂದಿರೋದು
ನಾರಾಯ್ಣಮೂರ್ತಿ ಅಂದ್ರೆ ಸುಲ್ಪ ಅಲ್ಲಪ್ಪ
ಏನಯ್ಯ ಆ ತರ ಮಾತು
ಅರ್ತವಿಲ್ಲದ ಮಾತ ಆಡ್ತಿಯಲ್ಲ
ಅಪ್ಪ ಸ್ವಾಮಿ ರಂಗಯ್ನ ತೇರು ಅಂದ್ರೆ
ಬಾವ ರಂಗಯ್ಯ ತೇರು ಅಂತಿಯಲ್ಲಿ
ಏಯ್‌ ಸೋಲಿಗ್ರೈಕ್ಳ ಈವೊತ್ತು
ಸ್ವಾಮಿ ರಂಗಯ್ನ ಮಾತ್‌ ಮರ್ತ್‌‌ಬುಡಿ

ನಿಮ್ಮ ಬಾವ ರಂಗಯ್ನ ಜಾತುರೆಗೆsss || ತಂದಾನ ||
ಅಯ್ಯ ಬಾವ ರಂಗಯ್ಯ ತೇರಿಗೆ ಉಡ್ಗೀರುsss
ಬಳಸಿ ಬುಡಿರಮ್ಮ ಬಾಳೆಅಣ್ಣsss || ತಂದಾನ ||
ಅಯ್ಯ ಬಳ್ಸಿಬುಡಿರೊ ಬಾಳೆಅಣ್ಣ ಉಡುಗಿರೆsss
ತೆಂಕಲ ಕಡಿಕಂತೆ ವೋಗುತದೆsss || ತಂದಾನ ||
ನೋಡ್ರಕ್ಕ ನೋಡ್ರಕ್ಕ ದಾಸಯ್ಯ ಸಿಡುಗಕ್ಕsss
ಸೆಡ್ಗು ನರಾರಿ ಬೇಡsss || ತಂದಾನ ||

ಅಕ್ಕ ಅಕ್ಕ ಚಿಕ್ರಂಗಿ ಅಕ್ಕ
ಏನವ್ವ……
ನಾರಾಗಿದ್ರು ಬಲ ಜೋರಾಗಿದ್ದಾನೆ
ಮುದ್ಕುನಾದ್ರು ಬಲು ಸಡ್ಕನಾಗಿದ್ದಾನೆ.
ನೋಡಕ್ಕ ದಾಸಯ್ನದು ಎಂತ ಸಿಡ್ಕಾಡ ಆಡ್ತಾನೆ
ಬೆಡ್ಗಾಟ ಆಡ್ತಾನೆ

ಅಪ್ಪ ಬೆಡ್ಗು ದಾಸಯ್ಯ ವೇಸ ನೋಡಿರವ್ವsss || ತಂದಾನ ||
ಏಯ್ ಬೆಡ್ಗು ದಾಸಯ್ಯ ವೇಸ ನೋಡ್ರಕ್ಕ ನೋಡ್ರಕ್ಕsss
ಬಾವ ರಂಗಯ್ಯ ಎನ್ನೂ ಕರೆಯಬೇಕsss || ತಂದಾನ ||

ಏದಾಸಯ್ಯ ಹೋಗು ಕಲ್ಯಾಣಿ ಕೊಳ್ಕ
ಕಲ್ಯಾಣಿ ಕೊಳಕ್ಕ ವೋಗಪ್ಪ ನೀನು
ಈವೊತ್ತು ನಮ್ಮೊಂದ್ಗೆ ಆಟ ಪಾಟ ಆಡ್ದೆ
ಮಾರ್ವಾದಿ ಮಾನ ಉಳಿಸ್ಬೇಕು
ವೋಗಪ್ಪ ನೀನು ನಮ್‌ಜಾತಿ ಅಂದ್ರೆ
ಕುಲ್ದಲ್ಲಿ ಕುರುಬ ಒಕ್ಲಿಗ
ಜಾತಿಲಿ ದೇವಸೋಲ್ಗ ನೀತಿಗೌಡ್ರು ನಾವು
ನಮ್ಮ ಕುಲ್ದವ್ರು ಕಂಡ್ಬುಟ್ರೆ ಅನ್ನೇಡ್‌ ವರ್ಸ ನಮ್ಮ
ವೊರ್ಗಿಟ್‌ ಬುಡ್ತಾರೆ
ವಜಾ ಮಾಡ್ಬುಡ್ತಾರೆ
ಸ್ವಲ್ಪ ನೀನು ಆಚೆ ವೋಗಪ್ಪ ಅನ್ನವೊತ್ಗೆ

ಅವ ಕಿಲಕಿಲ್ನೆ ನಗೆಯ ಆಡುತಾನೆsss || ತಂದಾನ ||
ಏಯ್‌ ಕಿಲಕಿಲ್ನೆ ನಗೆಯ ಆಡ್ಕೊಂಡು ರಂಗಪ್ಪsss

ಟುಮ್ಮು ಟುಮ್ಮು ಟುಮ್ಮನೆ ಕುಣ್ಕಂದು ರಂಗಯ್ಯ

ಮೆಲ್‌ಮೆಲ್ಗೆ ಸ್ವಾಮಿ ಬರುತಾರೆsss || ತಂದಾನ ||

ಮೆಲ್‌ಮೆಲ್ಗೆ ಬರ್ವಾಗ ಅಯ್ಯೋ ಮುದ್ಕಯ್ಯ
ಯಾಕಯ್ಯ ಸಾಕಾದಯಿ ದಾಸಯ್ಯ
ಕಲ್ಯಾಣಿ ಕೊಳಕ್ಕೋಗಪ್ಪ
ಮಗ್ಗ ಮರಳಿ, ಎಗ್ಗಡೆದೇವನಕೋಟೆ
ರಂಜಕಲ್ಲು,
ಪಿರಿಯಾಪಟ್ಣ
ಸಂತೆಸರ್ಗೂರು,
ಬೆಂಗಳೂರು
ಬೀರಳ್ಳಿ,
ಈ ಕಡೆ ಬಕ್ತಾದಿಗಳೆಲ್ಲಾ ಬಂದಿದಾರೆ
ತಂಗ್ಳನ ಉಂಡು ತಣ್ಣೀರ್ ಕುಡ್ಕೊಂದ್‌ ಬಂದಿದಾರೆ
ಕಲ್ಯಾಣಿ ಕೊಳಕ್ಕೊಗಪ್ಪ ಅಂತ ಯೇಳ್ವಾಗ
ದಾಸಪ್ನೋರು ಅಲ್ಲಿ ಏನಮ್ಮ ಕೊಡ್ತಾರೆ ಅಂದ್ರು
ಅಯ್ಯೊ ನಿಮ್ಮಂತ ದಾಸಪ್ನೋರು ಏನ್ಮಾಡ್ತ ಇದಾರೆ
ಈವೊತ್ತು ಅಣ್ಣು ಮುರಿತಾ ಇದಾರೆ
ಕಾಯಿ ಒಡಿತಾ ಇದಾರೆ
ಅರಿಸ್ಣ ಕುಂಕುಮ ಆಕ್ತಾರೆ
ಪಾದ ತೊಳಿತಾರೆ.

ನಿಂಗೆ ತಂಗಳು ಬುತ್ತಿ ಕೊಡುತಾರೆsss || ತಂದಾನ ||
ತಂಗುಳ್‌ ಬುತ್ತಿಯ ಉಂಡು ತಣ್ಣಿರ್ ಕುಡುಕೊಂಡುsss
ತಣ್ಣಗೆ ಬತ್ತಾರೆ ನಿನ್ನ ಪರುಸೆsss || ತಂದಾನ ||
ನಾಳೆ ಅರ್ಸೆವೆ ದಿವ್ಸ ದಾಸಯ್ಯsss
ಮರಿಯಾ ಕೋಳಿರಯ ಕುಯ್ಯುತಾರೆsss || ತಂದಾನ ||

ಅಪ್ಪ ಮುದ್ಕಪ್ಪ ನಾಳೆ ದಿವ್ಸ ಮರಿ ಕುಯ್ದ್‌ ಬುಟ್ಟು
ಕೋಳಿ ಕುಯ್ದ್‌ಬುಟ್ಟು ಮೀಸಲು ಬಿಡದುಂಟು
ಬೇಳೆ ಬದನೆಕಾಯಿ ಆಕದುಂಟು
ದಾಸ್ಸೊಳ್ಗೆ ವೋಟ್ಟೆ ತುಂಬಾ ಊಟ ಸಿಕ್ತದೆ
ಮೂರ್ ದಿವ್ಸ ದಾಸಪ್ಪ
ಊಟ ಮಾಡ್ಕಂಡು ವೊಟ್ಟೆ ತುಂಬ್ಸು ವೋಗಪ್ಪ
ನಾವ್‌ ನೋಡುದ್ರೆ ಪೋಡ್ನ ಒಳ್ಗಿರುವಂತ ಸೋಲುಗ್ರು ನಾವು
ಸೋಲಗಿತ್ತಿಯ ಸಗುತ ನೋಡಕ ನೀನು
ಇಸ್ಟು ಅವತಾರಕ್ಕೆ ಬಂದಿದ್ಯೀಯಲ್ಲ ಅಂದ್ಬುಟ್ಟು
ಚಿಕ್ಕಾಡಿ …. .

ಅವ ಕಣ್ಮಿಂಚ ಕಣ್ಣ ಒಡಿತಾಳೆsss || ತಂದಾನ ||
ಅಕ್ಕ ಚಿಕ್ರಂಗಿ ದೊಡ್ರಂಗಿ ಚಿಕ್ಕಾಡಿ ದೊಡ್ಕಾಡಿsss
ದಾಸಯ್ನ ಬುಟ್ಟು ನಡಿರಪ್ಪsss || ತಂದಾನ ||

ದಾಸಯ್ನ ಬುಟ್ಟು ನಡ್ರಪ್ಪ ಅಂದ್ಬುಟ್ಟು
ಈ ಮುದ್ಕ ದಾಸಪ್ನ ನೋಡುದ್ರೆ
ಬಾಳ ಸಡ್ಕ ಆಡ್ತಾನೆ ಅಂದ್ಬುಟ್ಟು
ಅಲ್ಲಾಣಿ ಇಲ್ಲಾಣಿ …
ಸೋಲಿಗ ಬೊಮ್ಮೆಗೌಡ್ನ ಮಕ್ಳು
ತೇರು ತೆಪ್ಪ ಅಸ್ರೇವೆ ಗುರ್ಸೇವೆಯಲ್ಲ ಆಗ್ಬುಡ್ತು
ಆರ್ ಸೇರಕ್ಕಿ ಒಡಿಯ ತೆಂಗಿನಕಾಯಿ
ಒಡೆಯ ರಂಗಪ್ನ ಆರ್ಸೆವೆ ಆಗೋಗ್‌ಬುಡ್ತು

ಅವ್ರು ಕಾಡ್ಗುಡಿತಮೆ ಬರುತಾರೆsss || ತಂದಾನ ||
ಬಾಣೆ ವುಲ್ಲಿನ ಬಗ್ಗಿ ತಾ ಬತ್ತವ್ನೆsss
ಆರು ನೋಡ್ರಕ್ಕ ದೊಡ್ರಂಗಿsss || ತಂದಾನ ||

ಬಾಣು ವುಲ್ಲು ನೋಡ್ತಾರೆ
ಬಗ್ತ ಇಗ್ತ ಬರ್ತಾ ಇದ್ದಾರೆ
ಆರಕ್ಕಾ ಅಲ್ಲಿಬತ್ತಾ ಇರವ್ನು ಆರಕ್ಕ

ಅಲ್ಲಿ ನಾಡಿನ ದಾಸಯ್ಯ ಪೋಡಿಗೆ ಬತ್ತವ್ನೇsss
ಬೇಗ ಬೇಗ ನಡಿರಮ್ಮsss || ತಂದಾನ ||
ದಾಸಯ್ನ ವೇಸವೂ ದೇಸೆಲ್ಲ ಬಲ್ಲದುsss
ದಾಸಯ್ನ ಬುದ್ದಿ ಬಿಡನಿಲ್ಲsss || ತಂದಾನ ||

ನಾಡಿನ ದಾಸಯ್ಯ ಪೋಡಿಗೆ ಬಂದ್ಬುಟ್ಟಿದಾನೆ ಅಂದ್ಬುಟ್ಟು
ಕದ್ದು ಬಿದ್ದೆಲ್ಲಾ ಓಡ್ಬುಟ್ರು
ಆಹಾ! ಈವೋತ್ತಿನ ದಿವ್ಸ ಸೋಲಿಗರ ಬೊಮ್ಮೆಗೌಡ್ನ
ಮಕ್ಳಲ್ಲಿ ನಿನ್ನ ತಂದು ನನ್ನ ಮೇಲುಗಿರಿಕೆ
ನಾನು ಮೆರ್ಸದ ಮೇಲೆ ಜಾಣ ರಂಗಯ್ಯನಲ್ಲ
ತೀರ್ತ ತಿಮ್ಮಯ್ಯಲ್ಲಿ ಮೇಲ್‌ಗಿರಿಕೆ ರಂಗಯ್ಯನಲ್ಲಿ ನಾನು

ನಾಮ ಇಕ್ದಾಕೆ ನಲವೇನುsss || ತಂದಾನ ||
ಅಯ್ಯ ನಾಮ ಇಕ್ದಾಕೆ ಸಲಮೆ ಎಂದ್ಬುಟ್ಟುsss
ಪಂತ ಒತ್ತವ್ರೆ ನಾರಾಯ್ಣsss || ತಂದಾನ ||
ಆಡಿರಿ ರಾಗಗಳ ನುಡಿಸಿರಿ ತಾಳಗಳsss
ಮುದ್ದು ರಂಗಯ್ಯ ಗಿರಿಯಮೇಲೆsss
ಅಚ್ಚಿರಿ ದೀಪಗಳ ಆಕಿರಿ ದೂಪಗಳsss || ಆಡಿರಿ ||
ರಾಮ ರಂಗಯ್ಯ ಗಿರೀಲಿsss
ಜಾತ್ರೆಯ ಗೊತ್ತsss
ಸಂಕು ಉಟ್ದದ ಸನುವಾರsss || ಆಡಿರಿ ||
ಮುಂದಾಲ ಪರೋಸೇಲಿsss
ಬಕೌರು ಇವರ್ಯಾರುsss
ಲೋಕ ತಂದವ್ರು ನಾರಾಯ್ಣsss || ಆಡಿರಿ ||
ಮುಂದಲ ಪರಸೇಲಿsss
ಬರವ್ರು ಇವರ್ಯಾರುsss
ಲೋಕ ಕಂಡವ್ರು ನಾರಾಯ್ಣsss || ಆಡಿರಿ ||