ಸಂದರ್ಶಿಸಿದವರು : ಡಾ. ಕೆ. ಕೇಶವ್ಪ್ರಸಾದ್

 

ಸಂ : ನಮಸ್ಕಾರ ಯಜಮಾನ್ರೆ ನೀವು ಬಿಳಿಗಿರಿ ರಂಗನ ಬಗ್ಗೆ ಹಾಡ್‌ ಹೇಳ್ತಿರ ಅಂತ ಗೊತ್ತಾಯ್ತು. ಅದಕ್ಕೆ ನಿಮ್ಮತ್ರ ಬಂದೆ. ನಿಮ್ಮ ಹೆಸರೇನು?.

ಕಲಾವಿದ : ನೋಡಪ್ಪಾ ನನ್ನೆಸ್ರು ಕ್ಯಾತೇಗೌಡ ಅಂತ. ಎಲ್ರು ನನ್ನ ದಂಬ್ಡಿ ಕ್ಯಾತೇಗೌಡಾಂತ ಕರಿತಾರೆ.

ಸಂ : ನಿಮ್ದು ಯಾವ್ ಪೋಡ್ ಕ್ಯಾತೇಗೌಡ್ರೇ?

ಕಲಾವಿದ : ಮಂಜಿಗುಂಡಿ ಪೋಡಪ್ಪ

ಸಂ : ನಿಮ್ಗೆಎಷ್ಟು ಜನ ಮಕ್ಳು?

ಕಲಾವಿದ : ಇದಾರಪ್ಪ ಏನುಪಯೋಗ? ಮಗ ಇದಾನೆ, ಮಾಗ್ಳಿದ್ದಾಳೆ, ನಾನು ನಮ್ಮೆಂಗ್ಸು ಇದ್ದೀವಿ.

ಸಂ : ಮಕ್ಳಿಗೆ ಮದ್ವೆ ಆಗಿದೆಯಾ?

ಕಲಾವಿದ : ಆಗಿದ್ಯಪ್ಪ

ಸಂ : ನೀವು ಏನ್ ಕೆಲ್ಸ ಮಾಡ್ಕಂತ ಇದ್ದೀರಿ?

ಕಲಾವಿದ : ಒಂದಿಸ್ಟ್ ಬೂಮಿ ಉಂಟಪ್ಪ, ಅದ್ರಾಗೆ ಏನಾದ್ರು ಬೆಳೆತಿವಿ. ಆನೆ ಬಂದು ತುಳ್ದಾಕ್ ಬಿಟ್ರೆ ನಮ್ ಕೈಗೆ ಏನು ಸಿಗಲ್ಲ

ಸಂ : ನೀವು ಹಾಡ್ ಹೇಳ್ತಿರಲ್ಲ, ಯಾವ್ ಯಾವ ಹಾಡ್ ಹೇಳ್ತಿರಿ?

ಕಲಾವಿದ : ಎಲ್ಲಾ ಆಡ್ತಿವಪ್ಪ, ಬಿಳ್ಗಿರಿರಂಗುನ್ದು ಗೊತ್ತು , ಮಾದಪ್ನ ಹಾಡು ಗೊತ್ತು ಮುಡ್ಕು ತೊರೆ ಮಲ್ಲಪ್ನ ಹಾಡು ಗೊತ್ತು.

ಸಂ : ನಿಮ್ದು ಯಾವ್ ಕುಲ ಯಜಮಾನ್ರೇ?

ಕಲಾವಿದ : ನಮ್ದು ಕುಲ ಅಂದ್ರೆ ನೋಡ್ಯಪ್ಪ ತೆನೇರ್ ಕುಲ

ಸಂ : ನಿಮಗೆ ದಂಡಬಿ ಕ್ಯಾತೇಗೌಡ ಅನ್ನೊ ಹೆಸ್ರು ಯಾಕ್ಬಂತು?

ಕಲಾವಿದ : ನಾನು ದಂಬ್ಡಿ ಬಡ್ಕೊಂದ್ ಹಾಡೇಳ್ತಿನಲ್ಲ ಅದಕ್ಕೆ ಆಗಂತ ಕರಿತಾರಪ್ಪ

ಸಂ : ಸರಿ ಯಜಮಾನ್ರೆ ನೀವು ಹಾಡೇಳ್ತ ಎಲ್ಲೆಲ್ಲೋಗ್ತಿರಿ?

ಕಲಾವಿದ : ಎಲ್ಲುಯಿಲ್ಲಪ್ಪ. ನಾಡ್ಗೋಗ್ತಿನಿ ದೇವಸ್ತಾನ್ದಲ್ಲಿ ಕುತ್ಗೊಂದು ಹಾಡ್ತಿನಪ್ಪ. ಬಂದ ಬಕ್ತ್ರು ತಮ್ಮ ದುಡ್ಡಲ್ಲಿ ಇದ್ದಸ್ಟ್ ಕೊಡ್ತಾರಪ್ಪ.

ಸಂ : ದಿನಕ್ಕೆ ಎಷ್ಟ್ ಗಳಿಸ್ತೀರಿ?

ಕಲಾವಿದ : ಎಷ್ಟುಯಿಲ್ಲಪ್ಪ, ಅತ್ತಿಪ್ಪತ್ ರೂಪಾಯಿ ಸಿಕ್ಕುತ್ತೆ. ದೇವ್ರ ಪ್ರಸಾದ ಕೊಡ್ತಾರೆ.ಎನೋ ದೇವ್ರಯೆಸ್ರೇಳಿ ಬೇಡ್ಕೊಂತ ಬದ್ಕಿದ್ದೀವಪ್ಪ.

ಸಂ : ಯಾಕೆ ಯಜಮಾನ್ರೇ ನಿಮ್ಗೆ ಸರ್ಕಾರದಿಂದ ಬೇಕಾದಷ್ಟ್ ಸಹಾಯ ಮಾಡ್ತಾಯಿದ್ದಾರಲ್ಲ. ನಿಮ್ಗೆ ಏನು ಅಲ್ಕೂಲ ಆಗಿಲ್ಲಾ?

ಕಲಾವಿದ : ಒಂದ್ ಮನೆ ಕೊಟ್ಟಿದ್ದಾರಪ್ಪ

ಸಂ : ನಿಮ್ಮ ಮಕ್ಕಳು ಯಾರು ಓದಿಲ್ವಾ?

ಕಲಾವಿದ : ಕೇಂದ್ರಕೋಗ್ತಿದ್ವಪ್ಪ (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ) ಅದೇನೋ ಒಂದಸ್ಟ್ ಓದಿ ಮುಂದೆ ವೋಗಿಲ್ಲಪ್ಪ

ಸಂ : ಯಾಜಮಾನ್ರೆ ನೀವು ಬಿಳ್ಗಿರಿರಂಗಪ್ನ ಕತೆನಾ ಪೂರಾ ಹಾಡ್ಬೇಕಲ್ಲ. ನಿಮ್ಜೋತೆಗೆ ಯಾರನ್ನಾದ್ರು ಸೇರಿಸ್ಕೋಳ್ಳಿ. ಅಂಥವ್ರು ಯಾರಾದ್ರು ಇದ್ದಾರಾ?

ಕಲಾವಿದ : ಯಿಲ್ಲಪ್ಪ ಅವ್ರು ಬೇಕಂದ್ರೆ ಕೊಳೇಗಾಲ್ದ ಕಡೆಗೇ ಹೋಗ್ಬೇಕು.

ಸಂ : ಆಗ್ಲಿ ಪರ್ವಾಗಿಲ್ಲ. ಒಟ್ನಲ್ಲಿ ನೀವು ರಂಗಪ್ನ ಕತೆ ಪೂರ್ತಿ ಹೇಳಿ. ನಾನು ಅದನ್ನ ರೆಕಾರ್ಡ್ ಮಾಡ್ಕಂಡು ನಮ್ಮ ವಿಶ್ವವಿದ್ಯಾಲಯದಿಂದ ಪುಸ್ತಕ ಮಾಡಿ ಕೊಡ್ತಿವಿ.

ಕಲಾವಿದ : ಆಗ್ಲಪ್ಪ ಬಿಳಿಕಲ್ ಬೆಟ್ಟದ ರಂಗಪ್ಪ ಅಂದ್ರೆ ಸೋಲುಗ್ರುಗೆ ಬಾವ ಆಗ್ಬೇಕು. ಸೋಲುಗ್ರ ಹೆಣ್ಣ ಕದ್ಕೊಂಡ್ಹೋಗಿ ಮದ್ವೆ ಆದ್ನಲ್ಲ ಅದ್ನೇಲ್ಲ ಹೇಳ್ಬೇಕು.

ಸಂ : ಹಾಗಾದ್ರೆ ರಂಗಪ್ಪ ನಿಮ್ಗೆ ಬಾವ ಮತ್ತೆ ದೇವ್ರು

ಕಲಾವಿದ : ಹೌದಪ್ಪ, ಬಾಳ ಸತ್ವಂತ ದೇವ್ರು.

ಸಂ : ರಂಗಪ್ನ ಜಾತ್ರೆ ಯಾವಾಗ್ ಆಗುತ್ತೇ ಯಜಮಾನ್ರೇ?

ಕಲಾವಿದ : ಚಿಕ್ಕಜಾತ್ರೆ, ದೊಡ್ ಜಾತ್ರೆ ಅಂತ ಮಾಡ್ತಾರಪ್ಪ

ಸಂ : ಅವುನಡೆಯೋದ್ ಯಾವಾಗ

ಕಲಾವಿದ : ಸಂಕ್ರಾತಿಯಲ್ಲಿ ಚಿಕ್ಕಜಾತ್ರೆ ನಡಿತದಪ್ಪ. ಆಗ ರಂಗಪ್ನ ದೇವಸ್ಥಾನದ ಉತ್ತರದ ಬಾಗ್ಲು ತೆಗಿತಾರಾಪ್ಪ. ಅದನ್ನ ಸ್ವರ್ಗದ್ ಬಾಗ್ಲು ಅಂತಾರೆ. ಆಗ ಬಾಳಜನ ಬರ್ತಾರಪ್ಪ.

ಸಂ : ಹಾಗಾದ್ರೆ ದೊಡ್ದ ಜಾತ್ರೆ ಯಾವಾಗ?

ಕಲಾವಿದ : ಅದು ನೋಡಪ್ಪ ಹುಣ್ಮೇಲಿ ಆಗುತಪ್ಪ, ಬೇಸ್ಗೆ ಇರ್ತದೆ. ಕೆರೇಲಿ ನೀರು ಕಮ್ಮಿಯಿರ್ತದೆ. ಪುರಾಣಿ ಕೊಳ್ದಲ್ಲಿ ಮಾತ್ರ ನೀರಿರ್ತದೆ. ಅಲ್ಲಿ ತೆಪ್ಪೋತ್ಸವ ಮಾಡ್ತಾರಪ್ಪ.

ಸಂ : ಇದು ಎಷ್ಟು ದಿನ ನಡಿತದೆ ಯಜಮಾನ್ರೇ?

ಕಲಾವಿದ : ಇದು ನೋಡಪ್ಪ ಮೂರ್ ದಿನ ನಡಿತದೆ. ನಾಡಿನ್ ಜನ ಎಲ್ಲ ಬರ್ತಾರೆ. ಸರ್ಕಾದವ್ರು ಜಾಸ್ತಿ ಬಸ್ ಬುಡ್ತಾರೆ. ಬಾರಿ ಜನ ಸೇರ್ತಾರೆ.

ಸಂ : ಈ ಎರಡು ಜಾತ್ರೆ ಜೊತೆಗೆ ಮತ್ತೆ ಯಾವ್‌ಯಾವ ಹಬ್ಬಗಳಿವೆ.

ಕಲಾವಿದ : ಮಾದಪ್ನ ಜಾತ್ರೆ, ಜಡೇಸ್ವಾಮಿ ಹಬ್ಬ, ಕ್ಯಾತೇದೆವ್ರ ಹಬ್ಬ, ರೊಟ್ಟಿ ಹಬ್ಬ ಉಂಟಪ್ಪ.

ಸಂ : ನೀವು ಮಾದಪ್ಪನನ್ನು ಪೂಜೆ ಮಾಡ್ತೀರಾ?

ಕಲಾವಿದ : ಮಾದಪ್ನ ವರ್ದಲ್ಲಿ ಹುಟ್ದವ್ರು ಕಾರಯ್ಯ ಬಿಲ್ಲಯ್ಯ ಸೋಲಿಗ್ರ ಮಕ್ಳು. ಅವ್ರು ಮಾದಪ್ನ ಶಿಷ್ಯಂದ್ರು. ಈ ಪೂಜೆ ಮಾಡೋ ಬೇಡಗಂಪ್ನದವ್ರು ಬಿಲ್ಲಯ್ಯನ ಮೂಲ್ದವ್ರು. ಆದ್ರಿಂದ ಕೊಳ್ಳೇಗಾಲ್ದ ನಮ್‌ ಸೋಲುಗ್ರು ಮಾದಪ್ಪನ್ನ ಪೂಜುಸ್ತಾರೆ. ನಾವು ಹೋಗ್ತಿವಿ.

ಸಂ : ಹಾಗಾದ್ರೆ ಮಾದೇಶ್ವರ ಬೆಟ್ಟದ ಕಡೆ ಇರೋ ಸೋಲಿಗರಿಗೆ ಮಾದಪ್ಪ ಮನೆದೇವ್ರು. ಬಿಳಿಗಿರಿರಂಗನ ಬೆಟ್ತದಲ್ಲಿ ಇರೋ ನಿಮ್ಗೆ ರಂಗಪ್ಪ ಮನೆದೇವ್ರು ಹೌದೋ?

ಕಲಾವಿದ : ಹೌದಪ್ಪ. ಕುಲದೇವ್ರನ್ನು ಪೂಜಿಸ್ತೀವಿ.

ಸಂ : ನಿಮ್ಮ ಕುಲದೇವ್ರು ಅಂದ್ರಲ್ಲ ಅದೇಲ್ಲಿದೆ.

ಕಲಾವಿದ : ಅದು ಇಲ್ಲು ಇದೆ. ಕೊಳ್ಳೇಗಾಲ್ದಲ್ಲು ಇದೆ. ವರ್ಸದಲ್ಲಿ ಒಂದ್ಸಾರಿ ಹಬ್ಬ ಮಾಡ್ತಿವಿ.

ಸಂ : ‘ರೊಟ್ಟಿ ಹಬ್ಬ ‘ ಅಂದ್ರಲ್ಲ ಅದೇನು?

ಕಲಾವಿದ : ಅದು ನೋಡಪ್ಪ ರಾಗಿ ಬೆಲೆ ಬಂದ್ಮೇಲೆ ಕುಲ್ದವ್ರೆಲ್ಲ ಸೇರಿ ತೀರ್ಮಾನ ಮಾಡ್ತಿವಿ.

ಸಂ : ಅದು ಎಲ್ಲಿ ನಡಿತದೆ?

ಕಲಾವಿದ : ರೊಟ್ಟಿ ಹಬ್ಬ ಮಾಡ್ವಾಗ ಬೇಸ್ಗೆ ಇರ್ತದಪ್ಪ. ಅದಕ್ಕೆ ನೀರಿರ್ ಬೇಕು. ನಮ್ಮ ಸೋಲುಗ್ರ ಜನರೆಲ್ಲಾ ಸೇರ್ತದಲ್ಲ ಜಾಸ್ತಿ ಜಾಗಬೇಕು. ಅದಕ್ಕೆ ಒಂದ್ ಬಯ್ಲಾಗಿರೋ ಕಡೆ ಮಾಡ್ತಿವಪ್ಪ.

ಸಂ : ಅದರ ವಿಶೇಷ ಹೇಳ್ತಿರಾ?

ಕಲಾವಿದ : ಬಾಳ ನೇಮದಿಂದ ಮಾಡ್ಬೇಕಪ್ಪ ಅದು. ರಾಗಿ ಬೆಳಿದಿರೋರೆಲ್ಲಾ ಸರ್ದಿಕೊಡ್ತರಪ್ಪ. ಕಾಳು ಕೋಡೋರು ಕೊಡ್ತಾರೆ. ಹಣ ಕೊಡೋರು ಕೊಡ್ತಾರೆ. ಎಲ್ಲ ಸೇರಿದ್ಮೇಲೆ ತೀರ್ಮಾನ ಆದ ದಿನ ಎಲ್ಲಾ ಸೇರ್ತಾರೆ. ಕಾಡಿಂದ ಬಿದ್ರು (ಬಾಳ ನೇಮದಿಂದ ತರಬೇಕು) ತಂದು ದೇವಸ್ಥಾನ ಕಟ್ತಾರೆ. ಅದ್ರಲ್ಲಿ ಕುಲ್ದೇವ್ರ ಇಟ್ಟು ಪೂಜಾ ಮಾಡ್ತಿವಿ. ಆಮೇಲೆ ರಾಗಿ ರೊಟ್ಟಿ ಮಾಡೋದುಈ ಹಬ್ದ ವಿಶೇಷ. ಅವರೆ ಕಾಳು ಹಲಸಿನ ಕಾಯಿ ತಾಳ್ದ (ಪಲ್ಯ) ಮಾಡ್ತಿವಪ್ಪ.

ಸಂ : ರೊಟ್ಟಿ ಮಾಡೊ ಕ್ರಮ ಹೇಗೆ?

ಕಲಾವಿದ : ರಾಗಿಯಿಟ್ ಕಲ್ಸಿ ಅದನ್ನ ತೇಗ್ದ ಎಲೆಯಲ್ಲಿ ತಟ್ಟಿ ಮೇಲೊಂದ್ ತೇಗ್ದ ಎಲೆ ಮುಚ್ಚಿ ಬೆಂಕಿಯಲ್ಲಿ ಹಾಕ್ತಿವಿ. ಅದನ್ನ ಹುಡುಗ್ರು ಬಿದ್ರಿನ ಕೋಲಿನಿಂದ ಮೇಲ ಕೆಳ್ಗ ಮಾಡಿ ಬೇಯಿಸ್ತಾರೆ. ಅದನ್ನೆಲ್ಲ ತುಂಬಿ ದೇವಾಸ್ಥಾನದಲ್ಲಿಟ್ಟು ಪೂಜಾ ಮಾಡಿ ಮೊದ್ಲು ನಮ್ ಕುಲ್ದೇವ್ರಿಗೆ ಎಡೆಮಾಡಿ (ನೈವೇದ್ಯ) ಆಮೇಲೆ ಬಂದ ಜನ್ರಿಗೆಲ್ಲ ಹೆಣ್ಣು ಗಂಡು, ಮಕ್ಳು ಮರಿ, ಮನೇಲಿರಾ ಪ್ರತಿಯೊಬ್ರಿಗೂ ಪ್ರಸಾದ ಕೊಡ್ಬೇಕು. ಹಬ್ಬಕ್ಕೆ ಬರ್ಲಿಲ್ಲ ಅಂದ್ರೆ ಅವ್ರ ಪಾಲ್ನ ಪ್ರಸಾದ ಮನೆಗೆ ಕಳಿಸ್ ಬೇಕು. ಗರ್ಭಿಣಿ ಹೊಟ್ಟೇಲಿರೋ ಮಗುಗೂ ಈ ಪ್ರಸಾದ್ದ ಪಾಲು ಕೊಡಬೇಕಪ್ಪ.

ಸಂ : ಮತ್ತೇ ಹಬ್ಬದ ವಿಶೇಷ ಏನು?

ಕಲಾವಿದ : ಬಂದವರ್ಗೆಲ್ಲಾ ಊಟ ಆದ್ಮೇಲೆ ಆವೊತ್ತು ರಾತ್ರಿ ಪೂರ್ತಿ ಪೂಜೆ ಮಾಡ್ಬೇಕಪ್ಪ. ದೇವ್ರಹತ್ರ ಬಂದ ಜನ ತಮ್ಮ ಕಷ್ಟ ಸುಖ ಕೇಳ್ತಾರಪ್ಪ. ಅದಕ್ಕೆ ದೇವ್ರು ಈಗಾಗುತ್ತೆ ಈಗ್ಮಾಡ್ಬೇಕು ಅಂತ ವಾದ್ಗಾನ ಕೊಡುತ್ತೆ. ಹೆಣ್ಣು ಗಂಡು ದೇವಸ್ಥಾನದ ಮುಂದೆ ಹಾಡೇಳ್ತಾ ಕುಣಿತ್ತಾರೆ. ಜನ್ರಿಗೆಲ್ಲ ಋಷಿ ಕೊಡ್ತಾರೆ. ನಕ್ಲಿ ವೇಷ ಹಾಕದು ಉಂಟು.

ಸಂ : ನಕ್ಲಿ ವೇಷ ಅಂದ್ರೇನು?

ಕಲಾವಿದ : ಒಬ್ಬ ಹುಡ್ಗ ಹೆಣ್ ವೇಷ ಹಾಕ್ಕೊಂಡು ಕುಣ್ತಾ ಮಾಡ್ತಾರಲ್ಲ ಅವ್ರ ಜೊತೆ ತಮಾಷೆ ಮಾಡ್ತ ಋಷಿ ಕೊಡ್ತಾನೆ.

ಸಂ : ಯಜಮಾನ್ರೆ ಬಹಳಷ್ಟು ವಿಚಾರ ತಿಳಿದಿದ್ದೀರಿ ನೀವು ಮತ್ತು ಇನ್ನಿಬ್ರು ಕಲಾವಿದರಾದ ಶ್ರೀ ಶ್ರೀ ತಂಬೂರಿ ದಾಸ್ಸೇಗೌಡ ಮತ್ತು ಶ್ರೀ ಸಪ್ಪೇ ಸಿದ್ದೇಗೌಡ ಅವರು ಸೇರಿ ಬಿಳಿಗಿರಿರಂಗಪ್ಪನ ಹಾಡೇಳಿ ರೆಕಾರ್ಡ್ ಮಾಡ್ಕೊಳ್ಳಕ್ಕೆ ಸಹಕಾರಿ ನೀಡಿದ್ದೀರಿ. ಆದ್ದರಿಂದ ತಮಗೆ ಬುಡಕಟ್ಟು ಅಧ್ಯಯನ ವಿಭಾಗದ ಪರವಾಗಿ, ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಮತ್ತು ನನ್ನ ಪರವಾಗಿ ನಿಮಗೆ ವಂದನೆಗಳನ್ನ ಹೇಳ್ತೀನಿ. ನೀವ್ ಏನು ಹಾಡಿದ್ದೀರಿ ಅದನ್ನ ಪುಸ್ತ್ಕ ಮಾಡಿದ ಮೇಲೆ ನಿಮ್ಗು ಒಂದೊಂದ್ ಪ್ರತಿ ಕೊಡ್ತೇವೆ. ಅದ್ರಲ್ಲಿ ನಿಮ್ ಹೆಸ್ರು ಇರುತ್ತೆ. ಮತ್ತೊಂದ್ ಸಾರಿ ನಿಮ್ಗೆ ವಂದನೆಗಳು.