ಆಗ ಮಡ್ಡಿರಿಗೆ ಎಂಗೆ ನಿದ್ದೆ ಕೊಡ್ಬೇಕು ಅಂದ್ಬುಟ್ಟು
ಯೆಣ್ಣೆ ಸೋಲಿಗರ ಬೊಮ್ಮೆಗೌಡ್ನ ಮಗಳ ಮ್ಯಾಲೆ
ಎಡಗಡೆ ಮಲಿಕೊಂಡ್ರು ಗ್ಯಾನ
ಬಲಗಡೆ ಮಲಿಕೊಂಡ್ರು ಗ್ಯಾನ
ಅಯ್ಯ ಈ ಸೋಲಿಗರ ಬೊಮ್ಮೆಗೌಡ್ರ ಮಗ್ಳ
ಅಡ್ವಿ ಒಳ್ಗೆ ಬಿಟ್ಟುಟ್ಟು ಬಂದು
ಈ ಯೆಣ್ಣೆಗೆ ಸಪ್ತ ಮಾಡ್ಕಂಡಿದ್ರೆ
ನನಗೆ ಅವ ಏನಾಗ್ ಬೇಕು ಅಂದ್ಬುಟ್ಟು
ಎಡಗಡೆ ಗ್ಯಾನ ಮಾದ್ಕಂಡು
ಬಲಗಡೆ ಗ್ಯಾನ ಮಾಡ್ಕಂಡು

ಆಗ್ನು ತೆಂಕಲು ಹೋಗುತವ್ರೆ ತೇಗನ್ನು ತರಿತವ್ರೆsss
ಎಂಟು ಪಟ್ಟನ್ನು ಕಟ್ಟುತ್ತಾರೆsss || ತಂದಾನ ||
ಅಯ್ಯ ಬಡಗಲು ವೋಗವ್ನೆ ಬಾಲೆಯ ಮರ ತರ್ದುsss
ಎಂಟು ಪಟ್ಟನ್ನ ಕಟ್ಟುತ್ತಾರೆsss || ತಂದಾನ ||
ಅಯ್ಯ ಮೂಡಲು ಬತ್ತವ್ನೆ ಮುತ್ತುಗ ಕಡಿತವ್ನೆsss
ತನ್ನ ರೂಪನ್ನೆ ತಿದ್ದುತ್ತಾನೆsss || ತಂದಾನ ||

ಬಡಗಲು ವೋದ ಬಾಳೆ ಮರ ತರ್ದ
ತೆಂಕಲು ಹೋದ ತೇಗಿನ ಮರ ತರ್ದ
ಮೂಡಗ ಬಂದ ಮುತ್ಗದ ಮರ ತರ್ದ
ಬಡಿಗ ದಿಕ್ಕೋದ ಬನ್ನಿ ಮರ ತರ್ದ್ದು ಬುಟ್ಟಿದ್ದಾನೆ
ಎಂಟು ಪಟ್ಟು ಕುಟ್ಬುಟ್ಟು
ಕಿರಬೆಳ್ಳ ಉಳಿ ಮಾಡ್ಬಿಟ್ಟು
ಮುಂಗೈನ ಬಾಚಿ ಮಾಡ್ಬಿಟ್ಟು
ಆ ವೇಸವನ್ನು ಮಾಡ್ಬಿಟ್ಟು
ಇಬ್ರು ಮಡ್ದಿರ ಮದ್ಯೆ ಮಲಗ್ಸ್ ಬುಟ್ಟು

ಅವ್ರು ಬಾಯ್ಗ ಬೆಳ್ಳಂತೆ ಆಕುತ್ತಾರೆsss || ತಂದಾನ ||

ಬಾಯಿಗೆ ಬೆಳ್ಳಾಕಿ ನೋಡ್ತಾರೆ
ಮಡ್ದಿರ್ ಗೆ ತುಂಬಾ ನಿದ್ದೆ ವೋಂಟೋಗ್ ಬುಡ್ತು
ಅದುವಲ್ದೆ ಬಾಯ್ಗೆ ಬೆಳ್ಲಾಕಬುಟ್ರ
ನಿದ್ದೆ ಎಂಬುದು ಯೇಂಗ್ಸು ಜಾತಿಗೆ ಮಾಯ
ಎದೆ ಮೇಲೆ ಕೈಯಿಟ್ಟು ನೋಡ್ತಾರೆ
ತುಂಬಾ ನಿದ್ದೆ ವೋಂಟೋಗ್ ಬುಡ್ತು
ಆಹಾ ಇದೆ ಸೌಳು ಅಂದ್ಬುಟ್ಟು

ಅವ್ರು ಎದ್ದು ವೋಗುತ್ತಾರೆ ಕಳ್ಳ ರಂಗsss || ತಂದಾನ ||
ಕದ್ದು ಓಡಿನಾ ಕಳ್ರಂಗ ಸ್ವಾಮಂತೆsss
ಅವ್ರು ಮೇಲುಗಿರಲಿ ನಿಂತಿದ್ದಾರೆsss || ತಂದಾನ ||

ಮಡ್ಡಿರಿಗೆ ನಿದ್ದೆ ಬರ್ದೆ ವೋಗ್ಬುಟ್ರೆ ಈವೋತ್ತಿನ್ ದಿವ್ಸ
ಬಮ್ದಂತ ಸೂರ್ಯನ ಬಿಸ್ಗ ಒಳಪ ಕೊಡ್ತಿನಪ್ಪ ಅಂದ್ಬುಟ್ಟು
ಅವರಿಗೊಂದು ಕಾಣ್ಕೆ ಕಟ್ಬುಟ್ಟು
ಕಂಡಿಡ್ದ್‌ಬುಟ್ರು
ಮುಡ್ಕುತೊರೆ ಮಲ್ಲಪ್ಪನಿಗೊಂದು ಕಾಣ್ಕೆ ಕಟ್ಬುಟ್ಟು
ನಂಜುಂಡೇಸ್ಟರನಿಗೆ ಏನ್ ಮಾಡಿದ್ದಾರೆ?
ತೇರಿಗೆ ಗಂಡನಪ್ಪ ನೀನು
ಪಟ್ಟದ ಪಾರ್ವತಿ
ಬೆಟ್ಟದ ಚಾಮುಂಡಿ
ನಿನ್ನ ಕಯ್ ವಸ ಆಗಿದ್ದಾರೆ
ಸೋಲಿಗರ ಬೊಮ್ಮೆಗೌಡ್ನ ಮಗಳ
ಕೈವಸ ಮಾಡಿಕೊಡಪ್ಪ ಅಂದ್ಬುಟ್ಟು…. .

ಅಕ್ಕಿ ಕಾಣಿಕೆಯ ಕಟ್ಟುತ್ತಾರೆsss || ತಂದಾನ ||
ಅಕ್ಕಿ ಕಾಣಿಕೆ ಕಟ್ತಾರೆ ನಾರಾಯಣssss
ಮೂಡಲ ಮಲೆಯ ನೋಡುತ್ತಾರೆsss || ತಂದಾನ ||

ಮೂಡಲ ಮಲೆಯ ನೋಡ್ತಾ ಇದ್ದಾರೆ
ಮಾದಪ್ಪ ಸಾನೆ ಮಾಯ್ಕರ
ಇವ್ನ ಮುಂದೆ ಯಾರು ಇಲ್ಲ
ಇಂದಾಗಲಿ ಮುಂದಾಗಲಿ ಅಂದ್ಬುಟ್ಟು
ಅವರಿಗೊಂದು ಕಾಣ್ಕೆ ಕಟ್ಟಿದ್ರು
ಮೈಸೂರು ಮಟಮನೆ ಅಲ್ಲಿಂದ ಬಂದು
ಲಿಂಗಕ್ಕೆ ಕೊಳ್ಗ ದರ್ಸಬೇಕು ಅಂತ ಅರ್ಕೆ ವೊತ್ತು ಬುಟ್ರೆ
ನನ್ನ ಬಾಮೈದ ಮಾದಪ್ಪ ಅಂದ್ರೆ ಸುಲ್ಬಅಲ್ಲ
ಆಂ ಬಾಮೈದ ಅಂದ್ಬುಟ್ರೆ ಉಲಿಯೊಂದ್ಗೆ ಗೋವು ಕಟ್ತಾನೆ
ಗೋವಿನೊಂದಿಗೆ ಉಲಿ ಕಟ್ತಾನೆ

ಅಂತವ್ನಿಗೊಂದು ಕಾಣ್ಕೆ ಕಟ್ಟಲುಬೇಕುsss || ತಂದಾನ ||

ಅರ್ಕೆ ಕಾಣ್ಕೆ ಕಟ್ಬುಟ್ರು ಮಡ್ದಿರ್ಗೇ
ನಿದ್ದೆ ಬಂದ್ಬುಡ್ತು
ಆಗೇನು ನಾರಾಯಣಮೂರ್ತಿ ಕದ್ದೊಡ್‌ಬುಟ್ಟಿದ್ದಾನೆ
ಕಾಕೋಳಿ ಕೂಗ್‌ಬುಡ್ತು
ಲೋಕ್ವೆಲ್ಲಾ ಬೆಳಗಾಗ್‌ಬುಡ್ತು
ನೋಡ್ತಾರೆ ಕಳ್ರಂಗಪ್ಪಿಲ್ಲ
ಏಯ್ ಅನುಮಂತ
ಏನ್ ತಾಯಿ?

ನಿಮ್ಮ ದಾಸಪ್ಪ ಯಾವುತ್ತು ಸತ್ತೋದರೋsss || ತಂದಾನ ||
ಎಡಗಡೆ ಕಯ್ಯ ಇಟ್ಟೆ ಬಲಗಡೆ ಕಯ್ಯ ಇಟ್ಟೆsss
ದಾಸಯ್ಯ ಯಾವ ಕಡೆ ಆಳಾದsss || ತಂದಾನ ||

ಯಾವ್ ಕಡೆ ವೋದ್ರು ತಾಯಿ?
ಯಾವ್ ಕಡೆ ವೋಗಿದ್ದಾರೋ
ಆ ಸೋಲಿಗರ ಬೊಮ್ಮೆಗೌಡ್ನ ಮಗಳಿಗೋಸ್ಕರ
ಅವ್ರ್ನು ಅಲ್ಲದ್ರು ಇದ್ರೆ ನೋಡಪ್ಪ ಅಂತೇಳ್ವಾಗ
ದಾಸಪ್ಪನವ್ರು ವೋಂಟೋಗ್ ಬುಟ್ಟಿದ್ದಾರೆ
ಆಗ ಸೋಲಿಗರ ಕುಸ್ಮಾಲಿ ಅತ್ರ ಹೋಗಿ……

ಅವ್ರು ಅಡ್ವಿಯೊಳ್ಗೆ ಇರುತಾರೆsss || ತಂದಾನ ||

ಸ್ವಾಮಿಯವ್ರು ಅಡ್ವಿಯೊಳ್ಗೆ ಇದ್ಕಂಡು
ಮರೆ ಮಾಚಿ ಮಾಯನು ಮಾಡ್ಕಂಡು
ನಾರಾಯಣ ಮೂರ್ತಿಯವ್ರು ಈವೊತ್ತಿನ ದಿವ್ಸದಲ್ಲಿ
ನಾರಾಯಣ ಮೂರ್ತಿಯವ್ರು ಮರೆಯಾಗ್ಬುಟ್ರು
ಸೋಲಿಗರ ಬೊಮ್ಮೆಗೌಡ್ನ ಮಕ್ಕಳೊಂದಿಗೆ
ಅಸ್ಯ ಆಡ್ತ ಪಾಸ್ಯ ಆಡ್ತ ನಿಂತ್ಗೊವೊತ್ಗೆ
ಮೇಲುಗಿರಿ ಏನಾಗಬೇಕಪ್ಪ
ಬಂದಂತ ಮಾನ್ಯರೆಲ್ಲಾ ಏನಾಗ್ ಬೇಕು ಅಂದ್ಬುಟ್ಟು

ಅವರು ಬಾರಿ ಚಿಂತೆಯ ಮಾಡುತ್ತಾರೆsss || ತಂದಾನ ||
ಕದ್ದು ಓಡಿನ ಕಳ್ರಂಗ ನೀನಂತೆsss
ಉಡ್ಕಿ ನೋಡಯ್ಯ ಅನುಮಂತsss || ತಂದಾನ ||
ಉಡ್ಕಿ ನೋಡಯ್ಯ ಅನುಮಂತ ನೀನಯ್ಯsss
ಕದ್ದು ಓಡಿದ್ದಾನೆ ಕಳ್ಳಾರಂಗsss || ತಂದಾನ ||
ಅಲ್ಲಾಣಿ ಇಲ್ಲಾಣಿ ಕಲ್ಯಾಣಿ ಕೊಳಬಿಟ್ಟುsss
ತಾನಗೋಗಿದ್ದಾರ ನೋಡಿರಯ್ಯsss || ತಂದಾನ ||

ಮೇಲುಗಿರಿ ಒಳಗೆ ವೋಗಿ ಯಣ ಒಡ್ಡಿಗೆ ತಾಯವ್ರು
ಎನ್ನೋ ನೋಡ್ತಾರೆ
ತಾಮ್ರದ ಚಂಬು ನೋಡ್ತಾರೆ
ಅಗಲ್‌ ಗಾತ್ರ ಸಂಕ ನೋಡ್ತಾರೆ
ಮುಗಲ್‌ಗಾತ್ರ ಜ್ವಾಗ್ಟೆ ನೋಡ್ತಾರೆ
ಮೇಲುಗಿರಿ ಇಲ್ಲ ಏಯ್‌ ಅನುಮಂತ
ಕಲ್ಯಾಣಿ ಕೊಳಕ್ಕಾಗಿ ಜಾರಿನೋಡು
ನಾಮ ಸೇವೆ ಮಾಡ್ಬೇಕು
ತಣ್ಣಿರ್ ತಾನ ಮಾಡ್ಬೇಕು ಈವೊತ್ತು
ಅದಕ್ಕೆ ಕಳ್ಳಾರಂಗ್ನ ಉಡ್ಕು ಹೋಗು ಎಂದು ಯೇಳುವಾಗ

ಇವ್ರು ಮೆಲ್ಗಮೆಲ್ಗೆ ಸ್ವಾಮಿ ಬರುತಾರೆsss || ತಂದಾನ ||
ಅಯ್ಯ ಮೆಲ್ ಮೆಲ್ಗೆ ಸ್ವಾಮಿ ಅನುಮಂತ ಬರುವಾಗsss
ನರಾರನು ನಾರಾಯ್ಣsss || ತಂದಾನ ||

ನರನಾಗ್ಬುಟ್ರು ನಾರಾಯ್ಣ
ತಾಯಿ ಕಲ್ಯಾಣಿ ಕೊಳದಲ್ಲಿ ಇಲ್ಲ ತಾಯಿ
ನಾನು ಸೇವೆಯನ್ನು ಮಾಡಿದ್ದು
ನಾನು ಅಚ್ಚಿದ್ದು ಗುರ್ತು ಇದೆ ತಾಯಿ
ನಾನು ಸೇವೆ ಮಾಡಿದ್ದಾರೆ
ತಾನ ಮಾಡಿದ್ದಾರೆ ತಾಯಿ
ಅವರಿಲ್ಲ ತಾಯಿ
ಏಯ್ ಬೆಪ್ಪ ಬೆಪ್ಪ ನೀನು
ನಾರಾಯ್ಣಾ ಪತ್ತೆ ಮಾಡ್ದೆ ಬಂದಿದ್ದಿಯಲ್ಲ ನೀನು
ಎಲ್ಲವ್ನ ಅವ್ನ ನೋಡಯ್ಯ
ಅವ್ನು ಅಳ್ಳಿಮರ ಮೇಲೆ ಕೂತಿರ್ ಬಹ್ದು ನೋಡಯ್ಯ ಅಂತೇಳುವಾಗ

ಅವ್ನು ಅಳ್ಳಿಮರ್ದ ಸ್ವಾಮಿ ದಯಮಾಡಿsss || ತಂದಾನ ||

ಪೋಡಿಗೇನೋ ಬಂದ್ಬುಟ್ಟಿದ್ದಾರೆ
ಸೋಲಿಗರ ಬೊಮ್ಮೆಗೌಡ್ನ ಪೋಡೊಳಗೆ ಬಂದು
ಕಾಕು ಬೆಂಕಿ ಕಕ್ಕ ಸೊಪ್ಪಿನ ಗುಳ್ಳು ಕಾರಾಚಿನ ಮನೆ
ಕಬ್ಬಾಳೆ ಅಂಬು ತಿನ್ನುತ್ತಾ ಕೂತಿದ್ದಾರೆ
ಆಹಾ ಈ ದಾಸಪ್ಪ ನಮ್ಮೊಂದ್ಗೆ ಸುತ್ತ ನೋಡ್ತನಲ್ಲ
ಇವನ್ಯಾರು?
ಇವನ್ಯಾರು ಎಂದು ಕೇಳ್ವಾಗ
ನಾನು ನೋಡ್ರಿ ಸೋಲಿಗರ ಬೊಮ್ಮೆಗೌಡ ಮಾವ ಆಗ್ಬೇಕು
ಅವ್ನ ಮಕ್ಕ ಎಲ್ಲಾ ಬಾವ ಬಾಮೈಕ ಆಗ್ಬೇಕು
ಅವ ಅಕ್ಕ ತಂಗಿರೆಲ್ಲಾ ಅತ್ತೆರಾಗ್‌ಬೇಕು

ಕಿರಿಯವ ಕಾಣೋ ಕುಸುಮಾಲೆsss || ತಂದಾನ ||
ಆ ಕಿರಿಯವಳ ಅಂತೆ ಕುಸುಮಾಲೆ ಆದರೆsss
ಬಣ್ಣಾರು ಕಾಣಂತೆ ತಿರುಪತಿsss || ತಂದಾನ ||

ನಾನು ತಿರುಪತಿಯಿಂದ ಬಂದಿ ತಳಕಾಡಿನಲ್ಲಿ ನಿಂದಿ

ತಾನ ಮಾಡದಕ್ಕೆ ಬೆಳ್ಳಿ ಬೆಟ್ಟಕ್ಕೆ ಬಂದಿದೀನಿsss || ತಂದಾನ ||

ಬೆಳ್ಳಿ ಬೆಟ್ಟಕ್ಕೆ ಬಂದು
ಬಿಳಿ ಸೀಗೆಕಾಯಿ ತರ್ತಿನಿ ಅಂದ್ಬುಟ್ಟು ಬಂದ್ಬುಟ್ಟು
ಸೋಲಿಗರ ಬೊಮ್ಮೆಗೌಡ್ನ ಉಡ್ಗಿ ಮೊಕ ನೋಡುದ್ರು

ಗುರುವಂಜಿ ಮೊಕದವ್ಳೆsss
ಬಾಳೆಯ ಬಣ್ಣದವಳೆsss
ಈ ಉಡ್ಗಿಯ ನಾನು ಬಿಡದಿಲ್ಲsss || ತಂದಾನ ||
ಏಯ್ ಏಲಕ್ಕಿ ಎಲೆಸಣ್ಣ ಜೀರಗೆ ಗೊನೆ ಸಣ್ಣsss
ತಿರುಗಿ ನೋಡಣ್ಣ ಸೋಲಿಗರೆಣ್ಣsss || ತಂದಾನ ||
ಅಣ್ಣ ತಿರ್ಗಿ ನೋಡಣ್ಣ ಸೋಲಿಗರೆಣ್ಣsss
ಅದ ತರ್ದಿದ್ದ ಮೇಲೆ ಪಲ ಏನಾsss || ತಂದಾನ ||
ಏಲಕ್ಕಿ ಎಲೆ ಸಣ್ಣ ಜೀರಗಿ ಗೊನೆಸಣ್ಣsss
ತಿರ್ಗಿ ನೋಡಣ್ಣ ಸೋಲಿಗರೆಣ್ಣsss || ತಂದಾನ ||
ರಂಗಯ್ಯ ಉಟ್ಟಿದ್ದೆ ಜಂಬು ನೇರಳೆ ತಾಳುsss
ರಂಗಯ್ಯ ಮಡ್ಡಿ ಕುಸುಮಾಲೆsss || ತಂದಾನ ||
ಅಯ್ಯ ರಂಗಯ್ಯ ಮಡ್ಡಿ ಕುಸ್ಮಾಲೆ ಆದರೆsss
ದಾಸಯ್ಯ ವಾಸ ಆಗುತವ್ಳೆsss || ತಂದಾನ ||
ದಾಸಯ್ಯ ವಾಸ ಆಗುತವ್ಳೆ ಅಂದ್ಕಂಡುsss
ತೇರಿನ ತಿಮ್ಮಯ್ಯ ಬರುತವನೆsss || ತಂದಾನ ||

ಸೋಲಿಗರ ಬೊಮ್ಮೆಗೌಡ್ನ ಮಕ್ಕಳೆಲ್ಲಾ ಪೋಡು ಸೇರಿ……
ತಿಮ್ಮಯ್ಯ ಆಗ್ಬುಟ್ಟಿದ್ದಾನೆ
ಮೇಲುಗಿರಿ ರಂಗಯ್ಯ ಆಗ್ಬುಟ್ಟಿದ್ದಾನೆ
ಇವ್ನ ನೋಡ್ದರೆ ವೊಟ್ಟೆ ಮೇಲೆ ಬಟ್ಟನಾಮ
ತೋಳ ಮೇಲೆ ತೊಳ್ಸನಾಮ
ಎಡಗಡೆ ನೋಡಿದ್ರೆ ಏಡ್ ನಾಮ ಇಟ್ಟಿದ್ದಾರೆ
ಬಲಗಡೆ ನೋಡುದ್ರೆ ಬಿಳಿನಾಮ ಇಟ್ಟುಕೊಂಡು
ಅಗಲಗಾತ್ರ ಸಂಕ ಬಿಟ್ಕೊಂಡು
ವೊಟ್ಟೆ ನೋಡುದ್ರೆ ಬೂದುಗುಂಬಳ ಕಾಯಂಗೆ ಮಾಡ್ಕೊಂಡು
ಅಯ್ಯಯ್ಯೋ ನಮ್ಮಪ್ಪ ಇನ್ಯಾಕಪ್ಪ

ಈ ದಾಸಯ್ನ ವೊಟ್ಟೆಯ ನೋಡಿರಪ್ಪsss || ತಂದಾನ ||
ವೊಟ್ಟೆ ಮಾಡ್ಕೊಂಡು ಬೂದುಗುಂಬಳಕಾಯಿ
ತಲೆ ನೋಡುದ್ರೆ ಕಜ್ಜಿ
ಗಡ್ಡ ನೋಡುದ್ರೆ ಗೊಳ್ಳು ಮುಳ್ಳು
ಮೀಸೆ ನೋಡುದ್ರೆ ಗೊಡ್ಡು ಮಂಜಿ
ತಲೆ ನೋಡುದ್ರೆ ಅಂಚಿ ಕಡ್ಡಿ ಮಾಡ್ಕಂದು
ನೀಲಗಿರಿ ಕೈಲಾಸದೊಳ್ಗೆ
ಮಾಯದ ರಂಗಪ್ಪನು ಬರುವಾಗ……

ಸೋಲಿಗರ ಐಕಳ ಮೇಲೆ ಕಿರುಗಣ್ಣ ಬಲಗಣ್ಣು ಇಡುತಾರೆsss || ತಂದಾನ ||
ಅವ್ರು ಎಡಗಣ್ಣ ಇಡುತಾರೆ ಬಲಗಣ್ಣ ಬಿಡುತಾರೆsss
ಕೈಮಾಡಿ ಉಡ್ಗಿಯ ಕರೆತಾರೆsss || ತಂದಾನ ||
ಸ್ವಾಮಿ ರಂಗಯ್ಯಎಂದು ಬಾಳೆಯಣ್ಣ ಬಿಡಿರವ್ವsss
ಇಂದಿಗ ಮರೆಯೋ ಈ ಮಾಟsss || ತಂದಾನ ||
ಯೆಣ್ಣು ಇಂದಿಗೆ ಮರೆಯೋ ಈ ಮಾಟ ಸೋಲಗಿತ್ತಿsss
ಬಾವ ರಂಗಯ್ಯ ಎಂದು ಕರಿರಮ್ಮsss || ತಂದಾನ ||
ಬಾವ ಬಾವೆಂದು ಎಸ್ಟೊತ್ತು ಕರಿತಿರಿsss
ಬಾವ ರಂಗಯ್ಯ ಆಗುತಾನsss || ತಂದಾನ ||
ಬಾವ ಬಾವ ರಂಗಬಾವ ರಂಗಬಾವsss
ಅಯ್ಯ ಬಾವ ಬಾವೆಂದು ಕೂಗಿರಯ್ಯsss || ತಂದಾನ ||
ಅಕ್ಕ ಬುಡ್ರಕ್ಕ ದಾಸಯ್ಯsss
ಇವ್ನ ಮೋರೆಯ ಮ್ಯಾಗೆ ತಿಮಿರವ್ಯ ಅಂದ್ಬುಟ್ಟುsss
ಕಿಲಕಿಲ್ನೆ ನಗೆಯ ಆಡುತಾರೆsss || ತಂದಾನ ||
ಅಯ್ಯ ಮೋರೆಯ ಮ್ಯಾಗೆತಿಮಿಯುವಾಗ ಅಂತೆsss
ಕಿಲಕಿಲ್ನೆ ನಗೆಯ ಆಡುತ್ತಾರೆsss || ತಂದಾನ ||

ಕಿಲಕಿಲ್ನೆ ನಗುನಾಡುವಾಗ ನಾರಾಯಣಮೂರ್ತಿಯವ್ರು
ಈಕಡೆ ಗಡ್ಡ ನೋಡುದ್ರೆ ನುಲಿತಾರೆ
ನೋಡ್ರಕ್ಕ ನೋಡ್ರಕ್ಕ
ಆ ದಾಸಪ್ಪ ನೋಡು ಮೀಸೆ ನುಲಿತಾನೆ ನೋಡು
ಗಡ್ಡ ನೋಡುದ್ರೆ ನುಲಿತಾನೆ ನೋಡಿ
ಅಯ್ಯಯ್ಯೋ ವೊಟ್ಟೆ ನೋಡುದ್ರೆ ಪೆಟ್ಟಿಗಾತ್ರ
ಮೂಗ್ ನೋಡುದ್ರೆ ಮೂಡೆ ಗಾತ್ರ
ಎಂತದಾಸಪ್ನ

ಅಯ್ಯ ನೋಡ್ರಕ್ಕ ದಾಸಯ್ಯsss || ತಂದಾನ ||
ಅಯ್ಯ ದಾಸಯ್ಯ ಬತ್ತವ್ನೆ ದೇಸದ ಮೇಲೆಲ್ಲಾssss
ದಾಸಯ್ನ ವೇಸ ನೋಡಿರವ್ವsss || ತಂದಾನ ||
ಅಂಮ್‌ ಮಾತಾಡೊ ಮುದ್ದು ರಾಮsss
ಮಾತಾಡೋ ಗಿಣಿಯ ರಾಮsss
ಸಂಪಂಗಿ ವನದಲ್ಲಿ ಸಂಪತ್ತುಗಾರsss
ನಿಂದುವೆ ಮಾತಾಡೋsss
ಕಾರೆಂಬ ಕತ್ತಲಲ್ಲಿ ಬೋರೆಂಬsss
ಸಂಪತ್ತುಗಾರ ರಂಗಯ್ಯsss || ಮಾತಾಡು ||
ಬಡವರು ಬಂದವರೆsss
ನಿಮ್ಮ ಪಾದ್ದಲ್ಲಿ ನಿಂದವರೆsss
ಬಾಗಿ ಕೊಡಯ್ಯ ದರುಸನ sss || ಮಾತಾಡು ||
ಯಾಕಯ್ಯ ರಂಗಯ್ಯೋsss
ಮೋಹನನ ಮೇಗೆsss
ನಿನ್ ನೋಡಕ್ ಬಂದವರು ನಗುನಾಡಿsss || ಮಾತಾಡು ||
ನೋಡಕ್ಕೆ ಬಂದವರು ನಗುತಾರೆ ನಾರಾಯ್ಣsss
ನಿನ್ನ ಬೇಡಕ್ ಬಂದವರು ಅಳುತ್ತಾರೆsss || ಮಾತಾಡು ||
ಆಗಲ್ ಗಾತ್ರ ಸಂಕು ಮುಗಿಲ್ ಗಾತ್ರ ಜಾಗ್ಟೆ ಸಿವಸಿವ
ನಮ್ಮ ಜಗದೊಡೆಯ ಕಡೆದ ಬೂಲೋಕಕ್ಕೆsss || ತಂದಾನ ||
ಓ ಜಗದೊಡೆಯ ಕಡ್ದ ಬಿಳಿಗಿರಿರಂಗಯ್ಯssss
ಅನ್ನ ನೀಡಯ್ಯ ಆರಿ ನಾರಾಯ್ಣsss || ತಂದಾನ ||

ಅಪ್ಪಾ ಕಾಡಲ್ಲಿ ಉಟ್ಟಿ ಕಾಡಲ್ಲಿಬೆಳ್ದು
ಈ ಚಂಪ ಸಾಗರ ಅರಣ್ಯದಲ್ಲಿ ಕೂತ್ಬುಟ್ಟಿದ್ದಾರೆ
ಇಲ್ಲಿ ಬಿಳಿಗಿರಿರಂಗಯ್ಯ ಆಗಿದ್ದಾರೆ
ಈ ಸೋಲಿಗರೆಲ್ಲಾ ಬಾವ ಆಗ್ಬುಟ್ಟಿದ್ದಾರೆ
ಇಂತ ಬಾವ ಜಗತ್ಗೆ ಇಲ್ಲ ಅಂದ್ಬುಟ್ಟು
ಮುಳ್ ಗೆಣ್ಸು, ತಾವರೆಗೆಂಡೆ,
ಕಿರಿಜೇನು ತುಪ್ಪ ತಂದು……

ರಂಗಯ್ನಿಗೊಂದೆಡೆಯsss
ಕೊಟ್ಟು ನೀನು ಊಟ ಮಾಡಿsss
ಅಯ್ಯನಿಮ್ಮ ಅಡ್ವಿ ಒಳ್ಗೆ ಊಟ ಕೊಡುತಾರೆsss || ತಂದಾನ ||
ಅಯ್ಯ ಅಡ್ವಿಯಲ್ಲಿ ಉಟ್ಬೇಕು
ನಗ್ರದಲ್ಲಿ ಬೆಳಿಬೇಕುsss
ರಂಗಯ್ನ ಪಾದ ಪೂಜ್ಸಬೇಕುsss || ತಂದಾನ ||
ಎದ್ದು ಬಾರಯ್ಯsss ರಂಗಯ್ಯsss
ಎದ್ದು ಕಾಯಯ್ಯ ಬರಬೇಕುsss || ತಂದಾನ ||
ಕಳ್ಳರು ಬೆಟ್ಟದಲ್ಲಿ ಕಳ್ರಂಗ ಬರುತವ್ನೆsss

ಸ್ವಾಮಿಯವ್ರು ಕಳ್ರಬೆಟ್ಟಕ್ಕೋದ್ರು
ಕಳ್ರಂಗ ಆಗ್ಬುಟ್ರು ಮುಲ್ಕಿ ಬೆಟ್ಕ ಬಂದ್‌ ಬುಟ್ಟಿದ್ದಾರೆ
ಮಲ್ಕಿ ಬೆಟ್ದಲ್ಲಿ ನಿಂತ್ಕಂಡು ಮಲ್ಕಮ್ನ ನೋಡುದ್ರು
ಆಹಾ!
ಉಡ್ಗಿ ಸುಂದ್ರವಾದಂತ ಉಡ್ಗಿ
ಇವ್ನ ನೋಡಿದ್ರ ರೂಪ್ವಂತ
ಅಯ್ಯಯ್ಯೊ ನನ್ನ ಬುಟ್ಟರಪ್ಪ ಅಂದ್ಬುಟ್ಟು
ಅಯ್ಯ ಮಲ್ಕಿ ಬೆಟ್ಟದ ಮಲ್ಕಮ್ಮ

ಅವ್ರು ಮಲ್ಕಿ ಬಿದ್ದೋಡಿ ಓಡುತಾರೆsss || ತಂದಾನ ||
ಅವ್ರು ಮಲ್ಕಿ ಬೆಟ್ಟಾವ ದಾಟಿsss
ಜಗ್ಟೆ ಕಲ್ಲಿಗೆ ಬಂದುsss
ಜೈಜೈನೆ ಜಾಗ್ಟೆ ಒಡಿತಾರೆsss || ತಂದಾನ ||

ಜಾಗ್ಟೆ ಕಲ್ಲಿಗೆ ಬಂದ್ಬುಟ್ರು
ಜಾಗ್ಟೆ ಒಡಿವಾಗ ಅಗಲ್‌ ಗಾತ್ರ ಸಂಕ
ಮುಗಲ್‌ ಗಾತ್ರ ಜಾಗ್ಟೆ
ಸೂರ್ಯ ಚಂದ್ರವೆಲ್ಲಾ ನಡಗ್‌ ಬುಡ್ತು
ಲೋಕವೆಲ್ಲಾ ಬೆಳಗಾಗ್‌ ಬುಡ್ತು
ಈ ದಾಸಪ್ಪ ಅಂದ್ರೆ ಯಾವುರ್ ದಾಸಪ್ನ
ಮುಂದಕ್ಕೆ ಮೂರಲ್‌ ಕಳ್ದೋಗ್‌ ಬುಟ್ಟಿದ್ದೊ
ಬಿಳಿ ಪಟ್ಟೆ ನನ್ನಾಗೆ
ಎಲ್ಲಾ ಅಲ್‌ ಬಿದ್ದೋಗ್‌ ಬುಡ್ತು
ಮಂಡಿಯೆಲ್ಲ ಕಟ್ಟೋಗ್‌ ಬುಡ್ತು
ವೊಟ್ಟೆ ನೋಡಿದ್ರೆ ಪೆಟ್ಟಿಗಾತ್ರ ಮಾಡ್ಕಂದ
ಮೂಗು ಮೂಡೆಗಾತ್ರ
ಅಯ ಒಂದ್ಕಡೆ ತಿರ್ಗೋಯ್ತು

ಅವ್ನು ಬೌನೆ ಸಂಕ ಊದುತ್ತಾನೆsss || ತಂದಾನ ||
ರಾಮ || ರಾಮsss || ತಂದಾನ ||
ರಂಗಯ್ಯಸ್ವಾಮಿsss || ತಂದಾನ ||
ಕೊಡ್ವಾದು ದೂರsss
ಕಲಿವಾದು ಗೋವಿಂದsss
ಕೊಟ್ಟು ನೋಡು ಸ್ವಾಮಿ ಕಿಳುತಾರೇsss || ತಂದಾನ ||
ಕೊಡದಂತೆ ಈ ಸ್ವರ ಕಿಳದಂತೆ ಗೋವಿಂದsss

ಸಾಕು ನಿನ್ನ ಅಹಂಕಾರ ಐಬೋಗ,
ಕಾಮ, ಕ್ರೋದ, ಮದ, ಮತ್ಸರಲೀಗ ನೋಡ್ಕಂಡು
ಇನ್ನು ಅಹಂಕಾರ ಬಂದ್ಬುಟ್ರೆ ಈಸ್ಪುರ ಕೊಡ್ಬುಡ್ತಾನೆ
ನೀವ್‌ ಕೊಡ್ಬುಡ್ತೀರಿ
ಅವ್ರು ಕಿತ್ಗೋತಾರೆ

ಅವ್ರು ಕಿತ್ತುಕೊಟ್ಟಾರೆ ನಾರಾಯ್ಣsss || ತಂದಾನ ||
ಮೇಲುಗಿರಿಯಲ್ಲಿ ನಾರಾಯ್ಣsss
ನಾರಾಯ್ಣ ನೆನಕೊಂಡುsss
ಅವ್ರು ಪೋಡು ಪೊನ್ನಾಚಿ ತಿರ್ಗುತ್ತಾರೆsss || ತಂದಾನ ||

ಆಗ ಏನ್ಮಾಡ್ತ ಇದ್ದಾರೆ ನಾರಾಯ್ಣವ್ರು?
ಏನ್ಮಾಡ್ತ ಅವ್ರೆ?
ಬಂಗಾರದ ಕೊಳ್ಗ ತೆಕ್ಕೊಂಡ್‌ ಬಂದ್ಬುಟ್ಟಿದ್ದಾರೆ
ಒಹೋ ಬಂಗಾರ್ದ ಕೊಳ್ಗ ತೆಕ್ಕಂಡ್‌ ಬಂದು
ಬಡವರ ಮನಿಗೆಲ್ಲಾ ಆದಾರ ಆಗ್ಬೇಕು
ಬಲ್ಗಾರ ಮನೆನು
ಅಹಂಕಾರ ಪಟ್ಟವರ ಮನೆನು
ಆಳ್‌ ಮಾಡ್ಬೇಕು ಅಂದ್ಬುಟ್ಟು
ಅಲ್ಲಿ …

ಅವ್ರು ತೇರು ತಾಳಿಗೆ ತಿಮ್ಮಯ್ಯನವ್ರು ಬರುತಾರೆsss || ತಂದಾನ ||
ಅಯ್ಯ ತೇರು ತಾಳಿಗೆ ಬತ್ತಾವ್ರೆ ನಾರಾಯ್ಣsss
ಟುಮ್ಮು ಟುಮ್ಮನೆ ಸ್ವಾಮಿ ಕುಣಿತಾನೆsss || ತಂದಾನ ||

ತೇರು ತಾಳಿಗೆ ಬಂದ್ಬುಟ್ಟಿದ್ದಾರೆ
ಚಿನ್ನಪ್ಪನಾಗ್ಬುಟ್ಟಿದ್ದಾರೆ
ಮೇಲುಗಿರ್ಕಿ ರಂಗಪ್ಪನಾಗ್ಬುಟ್ಟಿದ್ದಾರೆ
ಸೋಲಿಗರ ಬಂದುಗಳೆಲ್ಲಾ ಬಾವನಾಗ್ಬುಟ್ಟಿದ್ದಾರೆ
ಆಹಾಹ!
ಇನ್ಯಾಕಯ್ಯ! ಇನ್ಯಾಕಯ್ಯ!
ಇಂತ ಬಾವ ಸಿಕ್ಕಬೇಕಾದ್ರೆ ಅಯ್ಯೋ ರಂಗಪ್ಪ …

ಕಗ್ಗಾಲು ಬತ್ತಿಯವ್ಳೆ ಮುಗ್ಗಾಲು ಮೋರೆಯವ್ಳೆsss
ಎದ್ದು ನೋಡಮ್ಮ ನಾರಾಯ್ಣsss || ತಂದಾನ ||
ಎದ್ದು ನೋಡುತವ್ರೆsss
ನಾರಾಯ್ಣ ನೋಡು ಕೊಂಡುsss
ಕಿಲಕಿಲ್ನೆ ನಗುನಾಡುತ್ತಾರೆsss || ತಂದಾನ ||

ಕಿಲಕಿಲ್ನೆ ನಗ್‌ನಾಡ್ಬುಟ್ರು
ಅಯ್ಯಯ್ಯೋ ಈ ಉಡ್ಗಿರೆ
ನನ್ನ ಯಿಂಗ್‌ ಮಾಡ್ಬೇಕು ಅಂದ್ರೆ
ಇನ್ನು ನೆಲಗಾಡವರಾದ್ರೆ
ಎಂಗಾರು ಮಾಡ್ಕೊಳ್‌ಬಹ್ದು
ಆನೆ ಕಂಡ್ರೆ ಎದ್ರುಸ್‌ಬುಡ್ತಾರೆ
ಉಲಿ ಕಂಡ್ರೆ ಬೆದ್ರಸ್‌ ಬುಡ್ತಾರೆ
ಕಳ್ಳ ಮನ್ಸ ಸಿಕ್ಟುಟ್ರೆ ಕರ್ದಿ ಮಾಡ್ಬುಡ್ತಾರೆ
ಒಳ್ಳೆ ಮನ್ಸ ಸಿಕ್ಕುದ್ರು
ಉಲಿ ಮಾಡಂತ ಜಾತಿ ಅವ್ರು ಸಿಬ್ರಿಗೆ …
ಮಂತ್ರ ನಾನಾಗ್‌ಬೇಕು ಅಂದ್ಬುಟ್ಟು
ನಾರಾಯ್ಣಮೂರ್ತಿಯವ್ರು ಪೂರಮಂತ್ರ
ಯಂತ್ರ ಮಂತ್ರ ಅಂದ್ರೆ …
ಎಕ್ಕದ ಬೇರ ಕಿತ್ತು ಎಡಕೈಲಿ ಕಟ್ಟುವಂತೆ ಮಂತ್ರ

ಅದಕ್ಕಿಂತ ದೊಡ್ಡ ಮಂತ್ರ ಮಾಡ್ತಿನಿ ನಾರಾಯ್ಣsss || ತಂದಾನ ||
ಅವ್ರು ಬುಡ್‌ಬುಡ್ಕಿ ವೇಸ ತಾಳುತಾರೆsss || ತಂದಾನ ||