ಬುಡ್‌ಬುಡ್ಕಿ ವೇಸಾನ ತಾಳ್ಕಂದು
ಗುಡ್ಡದ ಮೆಲೆ ನಿಂತ್ಗಂದಿದ್ದಾನೆ ನಾರಾಯ್ಣ
ಯಾರಪ್ಪ ನೀನು ಬುಡ್‌ಬುಡ್ಕ್ಯಮ?
ಈ ಬೂಲೋಕಕ್ಕೆ ಬಡ್ಕಂದ್‌ ಬಂದಿದ್ದಿಯಾ.
ಬುಡ್‌ಬುಡ್ಕಯ್ಯ ನನ್ನ ಸಾಸ್ತ್ರ ನೋಡು ಬಪ್ಪ ಅಂದ್ರು
ನನ್ನ ಮಗ ವೋಗಿ ಈವೊತ್ಗೆ ಮೂರು ದುವ್ಸ ಆಗೋಯ್ತು
ಮೂರ್ ದಿವ್ಸದಿಂದ ನನ್ನ ಕುಸ್ಮದೇವಿ ನನ್ನ ಕೆಗೆ ಸಿಕ್ಕಿಲ್ಲಪ್ಪ
(ಕುರಗಂಜಿ), ಬುಡ್‌ ಬುಡ್ಕಿ ನೀನಾದ್ರು
ಸ್ವಲ್ಪ ಸಾಸ್ತ್ರ ನೋಡು ಬಾಪ್ಪ ಅನ್ನೋ ವೊತ್ತಿಗೆ
ನಾನು ಈಗ ಮಂತ್ರ ಯೇಮ್‌ ಗುರು
ಸಾಂತ್ ಗುರು ಅನ್ನೋ ಮಂತ್ರಗಳನ್ನ ಪೂರ ಮಂತ್ರಸ್ತಿನಿ
ನೋಡು, ಯಾವ ಕಡೆಗಿದ್ರು
ಯಾರ್ ಕಡೆಗಿದ್ರು ನೋಡ್ತಿನಿ ಅಂದ್ಬುಟ್ಟು
ನಾರಾಯ್ಣಮೂರ್ತಿ ಕುರವಂಜಿ
ಬುಡ್ ಬುಡ್ಕಿ ರೂಪ ತಾಳ್ಕಂಡು

ಅವ್ರು ಮೆಲ್ ಮೆಲ್ಗೆ ಬೊಮ್ಮೆಗೌಡ್ನ ಪೋಡ್ಗೆ ಬರುತ್ತಾರೆ sss || ತಂದಾನ ||

ಮೆಲ್ಲ ಮೆಲ್ಲಗೆ ಬಂದು

ಕೊರವಂಜಿ ವೇಸ ಆಕಿ ನೋಡ್ವಾಗsss

ನಾರಾಯ್ಣ ಮೂರ್ತಿಯವ್ರು ಮಾಯದ ರೂಪವನ್ನು ತಾಳ್ಕಂದು
ಓಂ ಗುರು ಮಂತ್ರ ಮಂತ್ರಿಸಿದ್ರು
ಎಕ್ಕದ ಬೇರು ಕಿತ್ತು ಎಡಕೈಗ್ ಕಟ್ಟೇಕು
ಕಕ್ಕೆ ಬೇರ್ ಕಿತು ಬಲಕೈಗ್ ಕಟ್ಟಬೇಕು
ಆರ್ ಮಂಡಲ
ತೂರ್ ಮಂಡಲ,
ಕಕ್ಕಿ ಮಂಡಲ
ಗಿರ್ಕು ಮಂಡಲ
ಉಳ್ಕು ಮಂಡಲ
ನಾಗಮಂಡಲ
ನಡು ಮಂಡಲ ಬರ್ದಬುಟ್ರೆ
ಅವ್ರಿಗೆ ಬತ್ತಿರೋ ಗಾಳಿಯಲ್ಲ ಒಂಟೊಯ್ತದೆ
ಆ ಗಾಳಿ ಓಡ್ಯೋಕೆ ನಾ ಬಂದಿದ್ದೀನಿ.
ಆದ್ಕೆನೇನ್ ಸಾಮಾನಾಗ್ ಬೇಕು?
ಐದು ಮೂಲ್ಕೆ ಐದು ತೆಂಗಿನಕಾಯಿ ಆಗ್ಬೇಕು
ಐದಚ್ ಬೆಲ್ಲ ಆಗ್ಬೇಕು
ಐದ್ಪಾವ್ ಕಳ್ಳ ಆಗ್ಬೇಕು
ಐದ್ಪಾವ್ ಅಕ್ಕಿ ಆಗ್ಬೇಕು
ಐದು ಕುಡ್ಕೆ
ಐದಣ ಆಗ್ಬೇಕು
ಬುಡ್ ಬುಡ್ಕಿ ವೇಸ ತಾಳ್ಬೇಕು ಅಂದ್ರೆ
ಬುಡ್ ಬುಡ್ಕೇರು ಏನೇಳ್ತಾರೆ ನಾರಾಯ್ಣ

ಅಯ್ಯ ಅನುಮಂತ ರೇಕೆ ಬರೆಬೇಕುsss || ತಂದಾನ ||

ಅನಮಂತ ಮಂಡ್ಲ ಬರ್ದಬುಟ್ರೆ…. .
ಏ ನಿನ್ನ ಉಡ್ಗಿ ನಾ ಪತ್ತೆ ಮಾಡ್ಕೊಡ್ತಿನಿ ಅಂದ್ಬುಟ್ಟು
ಕೊರ್ವಂಜಮ್ಮ ಯೇಳ್ವಾಗ…. .
ಈ ಕೊರವಂಜಿ ಬಾಳ ಚೆನ್ನಾಗಿ ಆಟ ಆಡ್ತಾಳೆ
ಚಿಕ್ಕರಂಗಿ ದೊಡ್ದರಂಗಿ
ನನ್ನ ಮಗಳ ಪತ್ತೆ ಮಾಡ್ ಬುಡ್ ಬಹ್ದು
ಅಮ್ಮ ಸಾಲ್ವೋ ಸೋಲ್ವೊ
ಮಾಡಿ ತಂದು ಕಳಪ ಕಳಿಸ್ಬೇಕು
ಆಗ ಕುಸ್ಮದೇವಿಯನ್ನು ಪತ್ತೆ ಮಾಡಿ
ಕರ್ಕಂಡ್ ಬಂದ್ ಬುಟ್ಟಿದ್ದಾರೆ
ಇವಂಗೆ ನೋಡಪ್ಪ ಒಂದ್ ಸಾಸ್ತ್ರ ಮಾಡ್ಬೇಕು
ಒಂದ್ ಅಂತ್ರ ಮಾಡ್ಬೇಕು
ಒಂದ್ ಮಂತ್ರ ಮಾಡ್ಬೇಕು
ಒಂದ್ ಮಾಯ ಮಾಡ್ಬೇಕು
ಆ ತಾತಿ ಕಟ್ಬೇಕಾದ್ರೆ ನೀವ್ ಕಟ್ಟಕ್ಕಾಗಲ್ಲ
ನಾನೇ ಕಟ್ಬೇಕು
ನಾನು ಯಂಗ್ ಕಟ್ಬೇಕು ಅಂದ್ರೆ
ನಾ ಮಂತ್ರ ಮಾಡ್ಬಾಗ ನೀ ಮಾತಡಕಿಲ್ಲ
ಓಂ ಗುರು ಮಂತ್ರ
ಜಪಮಂತ್ರ ಮಂತ್ರಸ್ಟುಟ್ಟು
ನಾ ಗಾಳಿ ಕಟ್ಟು
ಸಾಕಿ ಕಟ್ಟು
ಪೀಡೆ ಕಟ್ಟು
ಪಿಸಾಚಿ ಕಟ್ಟು
ಆಟ ಕಟ್ಟು

ಬೂತ ಕಟ್ಟೆಲ್ಲಾ ಕಟ್ಟಾಗ

ಒಬ್ರು ಮಾತಾಡಕಿಲ್ಲ ಅಂತ ಕೊರವಂಜಿ ಯೇಳ್ತಾ ಇದ್ದಾಳೆ
ಆ ಬೊಮ್ಮೆಗೌಡನ್ಗೆ ಬಾಳ ದೈರ್ಯ ಬಂದ್ಬುಡ್ತು
ಇಂತ ನಮ್ಮವ್ವ ಇದ್ಕಂದು
ನನ್ ಮಗ್ಳ ಮೊಕ ನೋಡ್ದೆ
ಎಂಗಿದ್ದಳು ನೋಡಪ್ಪ ಕೊರವಂಜಮ್ಮ

ಅವ್ರು ಗಾಳಿ ಗಾಚಾರ ಕಟ್ಟುತ್ತಾರೆsss || ತಂದಾನ ||

ಗಾಳಿ ಗಾಚಾರ ಕಟ್ಟುವಾಗ
ಸೋಲಿಗರ ಬೊಮ್ಮೆಗೌಡ ಏನ್ ಮಾಡ್ತಾ ಇದ್ದಾನೆ?
ಯೆಣ್ಣೆಂಬಾಕೆಗೆ ಅಯ್ಯಯ್ಯೊ ನಮ್ಮಪ್ಪ ಇಸ್ಟ್ ಮಂಡ್ಲ ಬರವಾಗೆ
ಅರ್ ಮಂಡಲ
ತೊರ್ ಮಂಡಲ
ಗೆಜ್ಜೆ ಮಂಡಲ
ಗಿರ್ಕು ಮಂಡಲ
ಉಳ್ಕು ಮಂಡಲ
ನಾಗಮಂಡಲ
ನಡು ಮಂಡಲ
ಎಪ್ಪತ್ತೇಳು ಮಂಡಲ
ಬರೆಸಿ ಅಂದ್ಬುಟ್ಟು
ಕುಸ್ಮದೇವಿ ಕುಂದ್ರುಸ್ಗಂದು ಮಧ್ಯೆ
ಕುಂಡ್ರಸ್ಕಂದು ನಾರಾಯಣ್ ಮೂರ್ತಿ
ನಿನ್ ಮನ್ಸು ನನ್ಗಿರಬೇಕು
ನನಗ್ಯಾನ ನಿನ್ಗರಬೇಕು
ನಾ ಎಲ್ಲೋದ್ರು ನನ್ನೊಂದ್ಗೆ ಬರ್ಬೇಕು
ಆಗೆಂದ್ಬುಟ್ಟು ಮಂತ್ರ ಮಂತ್ರಸ್ತಾರೆ
ಅದಕ್ಕೆ ಮಾಯದ್‌ ಮದ್ದು
ಮಲೆಯಾಳ ಕಪ್ಪು
ಅಂದ್ರೆ ಮಂತ್ರುಸ್ಬುಟ್ಟು ತಾತಿ ಆಕ್ಭುಡ್ತಾರೆ
ಏ ಬೊಮ್ಮೆಗೌಡ್ರೆ ಕಾಣ್ಕೆ ಎಲ್ಲ ಪೂರ ಕೊಡು…. .
ಈ ವೊತ್ತಿನ್ ದಿವ್ಸ ನೋಡ್ರಪ್ಪ
ಕಾಣ್ಕ ಕಪ್ಪೆಲ್ಲಾ ಪೂರ
ಮುತ್ತು ಗದಗದ್ದೆ ಪೋಡಿನೊಳ್ಗೆ ಕೊಟ್ಬುಡಿ ಅಂದ್ರು
ಅಗ್ಲ್ಯೆಪ್ಪಾ ತಕೊಂಡೋಗಪ್ಪ
ನನ್ನ ಮಗಳೆಲ್ಲಿ ಅಂದ್ರು

ಅಂವ ಮಾಯ ಅಯ್ತವ್ಳೆ ನಾರಾಯ್ಣsss || ತಂದಾನ ||
ಮಾಯ ಆಯ್ತವ್ನೆ || ಮಾಯ ನಾರಾಯಣ್ಣವ್ರುssss ||
ಮೇಲುಗಿರಿ ಬರಲಿಲ್ಲ sss || ತಂದಾನ ||
ಮೇಲುಗಿರಿಕಿ ಬಂದ್ನಲ್ಲಾ ನಾರಾಯ್ಣssss

ಸಾಂಬೋಗರ ಬಾವಿ ಒಳ್ಗೆ ಕೂತುಕೊಂಡು
ಸಂಪಾಗಿ ತಾನ ಮಾಡ್ತ ಅವ್ನೆ
ಕುಸ್ಮದೇವಿ ಆ ಕಟ್ಟೆ ಏರಿ ಮೇಲೆ ಕೂತ್ಕೊಂಡಿದ್ದಾಳೆ
ಯಾವ ಕಟ್ಟೆ ಏರಿ ಮೇಲಪ್ಪ?
ಸಾಮರಾಯ್ನ ಕೊಳ
ಸಾಮರಾಯ್ನ ಕೊಳ ಅಂದ್ರೆ ಕಂಬ್ರಿ ಗುಡ್ದಲ್ಲಿ ನಿಂಗೊತ್ತಿಲ್ಲ
ಆ ಸಾಮರಾಯ್ನ ಕೊಳದಲ್ಲಿ
ತಾನ ಮಾಡ್ವಾಗ
ನಾಮಸೇವೆ ಮಾದ್ತಾ ಇದ್ದಾರೆ
ಆಗ ಕುಸ್ಮದೇವಿ ಕೂತ್ಗಂದು

ಅವ ಕಿಲಕಿಲ್ನಾ ನಗುನಾಡುತಾಳೆsss || ತಂದಾನ ||
ಅಯ್ಯೊ ಕಿಲ ಕಿಲ್ನ ನಗೆಯsss
ಆಡ್ಕೊಂಡು ಬರುವಾಗssss
ಗಾಳಿ ಗಾಚಾರ ಬಿಡನಿಲ್ಲsss || ತಂದಾನ ||

ಅಲ್ಲಪ್ಪ ನಮ್ ಕುಸ್ಮದೇವಿಗೆ
ಉಚ್ಚೆದ್ದೊ, ಬೆಪ್ಪೆದ್ದೊ
ಮಾಯೆದ್ದೊ ಒಂಟೋಗ್ ಬುಟ್ಲಲ್ಲ
ಎಲ್ಲಿ ಯಾರ್ ಮಾಡಿರ್ ಬೇಕು
ಕೊರವಂಜಿ ಕಯ್‌ಲಿ ಕಳಿಸ್ದೆ
ಅದು ಕಳಿದೆ ಓಗ್ಬುಡ್ತು
ಆಗ ಯಾರು ಅಂದ್ರೆ ಕಿಸ್ಣಪ್ಪನಾದ್ರು ಕರ್ಕೊಂಡು ಬರ್ಬೇಕು
ಆಗ ಬೀದ್ ಬೀದಿಯೊಳ್ಗೆ
ನಾರಾಯ್ಣ ಮೂರ್ತಿಯವ್ರು
ಕಿಸ್ಣಪ್ಪನ ವೇಸ ತಳ್ಬುಟ್ರು
ಕುದ್ರೆ ಕಚ್ಚೆ ಉಟ್ಗಂಡು
ಕತ್ರಿಪೇಟ ಕಟ್ಗಂಡು
ಅಂಗಾಲ್ ಗಂಟ ಪಂಚೆ ಉಟ್ಗಂಡು
ಮಾವಿನ ಮರ್ದ ಅತ್ರ ಬರ್ತಾ ಇದ್ದಾರೆ
ಸೋಲಿಗರ ಬೊಮ್ಮೆಗೌಡ್ನೋರು ವೋಗ್ತಾ ಇದ್ದಾರೆ
ಆಹಾ!
ಯಾರಪ್ಪ ಬೊಮ್ಮೆಗೌಡ್ರೆ ಪೋಡ್ಗೆ……
ಯಾರು ಯಳಂದೂರು ಕಿಸ್ಣಪ್ಪ
ಅಯ್ಯಯ್ಯೊ ಕಿಸ್ಣಪ್ಪ ನಿಮ್ಮತ್ರ ಬರ್ತಾ ಇದ್ದೆ
ಯಾಕಪ್ಪ ಬೊಮ್ಮೆಗೌಡ್ರೆ
ಒಂದ್ ಸಾಸ್ತ್ರ ನೋಡ್ಬೇಕು ಗುರು
ಒಂದ್ ಸಾಸ್ತ್ರ ನೋಡ್ಬೇಕು
ನನ್ನ ಮಗ ವೋಗಿ ಒಂಬತ್ ದಿವ್ಸ ಆಗ್ಬುಡ್ತು
ಕೊರವಂಜಿ ಕಯ್‌ಲಿ ಕಳಿಸ್ದೆ
ಇಪ್ಪತ್ತೇಳು ಮಂಡ್ಲ ಬರ್ದು ಕಳಿಸ್ದೆ ಅದು ವೋಯ್ತು
ನಿನ್ನ ಅತ್ರಕೆ ಬರ್ತಾ ಇದ್ದೆ
ಇಲ್ಲೆ ಬರ್ತಾ ಇದ್ದೆ ಬೊಮ್ಮೆಗೌಡ್ರ
ಪೋಡ್ಗೆ ಬರ್ತಾ ಇದ್ದೆ
ಅಯ್ಯ ಸ್ವಾಮಿ ನೀವ್ ಬಂದುದು ಬಾಳ ಪುಣ್ಯಪಾ
ನಮ್ಗೆ ಸಿಲ್ಪಿ ನೋಡ್ಬೇಕಪ್ಪ ಸಾಸ್ತ್ರ ನೋಡ್ಬೇಕು
ಎಲೆ ಅಡ್ಕೆ ಇದ್ದದ ಬೊಮ್ಮೆಗೌಡ್ರೆ?
ಅಯ್ಯಯ್ಯೋ ನನ್ನ ಮೂಲೆ ಚೀಲ್ದಲ್ಲಿ ಅದೆ ಇಲ್ಲೇ ನೋಡಿ ಸ್ವಾಮಿ
ಇಲ್ಲೆ ಬುಟ್ ನೋಡಿ

ಮೂರು ಪಗಡೆಯsss
ಒಂಬ್ತತ್ತು ಪಗ್ಡೆ ತಗ್ದುssss
ತುಂಬ್ದ ಕಯ್ಲಂತೆ ಬಿಡುತಾರೆsss || ತಂದಾನ ||
ತುಂಬ್ದ ಕಯ್ಲೊಳ್ಗೆ ಬಿಡ್ತಾರೆ ನಾರಾಯ್ಣsss
ದಾಸಯ್ಯ ವಾಸ ಆಗಿದ್ದಾಳೆ sss || ತಂದಾನ ||
ಆದಿಲಿ ಉಡ್ಕ ಬೇಡssss
ಬೀದಿಲಿ ಉಡ್ಕ ಬೇಡsss
ಅವ ಕಾಡ ಬೀದಿಲಿ ಇರುತಾಳೆsss || ತಂದಾನ ||

ಬೊಮ್ಮೆಗೌಡ್ರೆ ಆದಿ ಬೀದೆಲ್ಲ ಉಡ್ಕಕಿಲ್ಲ. ….
ಕುಸ್ಮದೇವಿ ಪತ್ತೆ ಮಾಡ್ಬೇಕಾದ್ರೆ ಇದು ದಾಸಯ್ಯ ಆಗ್ಬುಟ್ಟಿದೆ
ಇದು ನಮ್ಮ ವಸಕ್ಕೆ ಸಿಕ್ಕಿಲ್ಲ
ಈ ನಮ್ಮ ವಸಕ್ಕೆ ಸಿಕ್ಬೇಕಾದ್ರೆ
ಅದ್ಕೆ ನೋಡಪ್ಪ ನಮ್ಮ ಸಾಸ್ತ್ರ ಸಂಬಂದ ಏನು ಬೇಕಿಲ್ಲ
ನಾನು ಯೇಗೆ ಮಾಡ್ತಿನಿ ಅಂದ್ರೆ
ಅವ್ರು ದಾಸಯ್ನೋರು
ಯಾರೋ ಒಬ್ಬ ಬಡದಾಸ ತೆಕ್ಕೊಂಡು ವೋಗಿದ್ದಾನೆ
ಆ ದಾಸಯ್ಯ ಉಡ್ಕಿ ಪತ್ತೆ ಮಾಡ್ಬೇಕು
ನಾನ್ ಯಾವ್ ಕಡೆಯಪ್ಪ ಉಡ್ಕೋದು
ನಾನು ಯಾವ್ ಕಡೆಯಪ್ಪ ನೋಡೋದು ಅಂದ್ಬುಟ್ಟು…. .

ಅವ್ರ್ನು ಗೊಳ್ ಗೊಳ್ನೆ ಸೋಕ ಮಾಡುತಾನsss || ತಂದಾನ ||

ಏ ಗೊಳ್ ಗೊಳ್ನೆ ಸೋಕ
ಮಾಡ್ಕೊಂಡು ನಾರಾಯಣ್ಗೆ

ಅಂತ ಪಾದವ ಇಡಿತಾನೆ ಕಿಸ್ಣಪ್ಪsss || ತಂದಾನ ||

ಏ ಬೊಮ್ಮೆಗೌಡ್ರೆ ನನ್ಯಾಕಪ್ಪ ಕಾಲಿಡ್ಡ್ರಿ
ಅಯ್ಯೊ ಕಿಸ್ಣಪ್ಪ
ಒಂಬತ್ ದಿವ್ಸ ಆಯ್ತು ಕಿಸ್ಣಪ್ಪ
ನನ್ ಮಗ ವೋಗಿ
ಅಂತ ಮಗ ನಂಗೆ
ಪುಟ್ ಪಾದ್ ಮಗ ಸಿಕ್ ಬೇಕಾದ್ರೆ
ಅವ ಇದ್ದಾಗ ನೋಡಿದ್ರೆ
ನಂಗೆ ಆರಂಬ ಸಾರಂಬ
ಎಲ್ಲಾ ನನ್ಗೆ ಅನ್ಕೂಲ ಇತ್ತು
ಬಾಗ್ಯದ ಗೊಂಬೆ ಮಾಯ ಆಗ್ಬುಟ್ಟ
ಏನು ಆಗಿಲ್ಲ ಸುಮ್ಮಿರು ಬೊಮ್ಮೆಗೌಡ್ರೆ
ಆ ದಾಸಯ್ಯ ವಾಸ ಅದ್ರು ಕೂಡ ನಿನ್ನ ವಾಸ ಸೇರ್ತಾಳೆ

ನಿನಗೊಂದು ಬಾಗ ಕೊಡುತಾರೆsss || ತಂದಾನ ||
ಅಯ್ಯ ನಿನೊಂದು ಬಾಗssss
ಅಯ್ತದೆ ಬೊಮ್ಮೆಗೌಡsss
ಎದ್ರ ಬೇಡಯ್ಯ ಬೊಮ್ಮೆಗೌಡsss || ತಂದಾನ ||
ಅಯ್ಯ ಎದ್ರ ಬೇಡಯ್ಯsss
ಬೊಮ್ಮೆಗೌಡ ನೀನುsss
ಅವ ದಾಸಯ್ಯ ವಾಸ ಆಗುಬಿಟ್ಟ sss || ತಂದಾನ ||
ಅಯ್ಯ ದಾಸಯ್ಯ ವಾಸ ಆಗ್ಬುಟ್ಟ ಬೊಮ್ಮೆಗೌಡsss
ದುಕ್ಕ ಬೇಡಯ್ಯ ಬೊಮ್ಮೆಗೌಡsss || ತಂದಾನ ||

ದುಕ್ಕ ಬೇಡಯ್ಯ ಬೊಮ್ಮೆಗೌಡ್ರೆ
ದಾಸಯ್ಯ ವಾಸ ಯಾವತ್ತೊ ಆಗ್ಬುಟ್ಟ
ಇದಕ್ಕೆ ಮಂಡ್ಲ
ಅನುಮಂತ ರಂಗ ಕಳಿತೀನಿ ಅಂತೇಳಿ
ಬುಡ್ ಬುಡ್ಕಿ ವೇಸ ತಾಳ್ದಿ ಅಂತೇಳಿ
ಬುಡ್ ಬುಡ್ಕಮ್ಮ ಬಂದ್ಬುಟ್ಟೊ
ಅವ್ರು ಎಂತ ಬುಡ್ ಬುಡ್ಕಿ ದಾಸಯ್ಯ ಅಂದ್ರೆ
ಊರ ಮೇಲಿನ ದಾಸಪ್ಪ
ಎಂಗೇ ದಾಸಪ್ಪ ಅಂದ್ರೆ
ಮನೆ ಮನೆ ಮುದ್ದೆ ಮಾರಿಗುಡಿ ನಿದ್ದೆ
ಅಂತ ದಾಸಪ್ನತ್ರ ಒಂಟೋಗ್ ಬುಟ್ಟಿದ್ದಾಳೆ
ಕೆರಿಮನೆ ರಾಗಿ ಜೋಳ ಬಿಕ್ಸೆ ಮಾಡ ದಾಸಪ್ನೋರು

ಅವ್ರು ಊರಿಗೆ ದಾಸಪ್ಪ ಕೇರಿಗೆ ದಾಸಪ್ಪsss
ನಾಳೆ ನೋಡಪ್ಪ ಇನ್ನೊಂದ್ ಊರ್ಲಿರ್ತಾರೆsss
ಅವ್ರ ಎಲ್ಲಿ ಉಡ್ಕಿದೆ ಬೊಮ್ಮೆಗೌಡsss || ತಂದಾನ ||
ಅಯ್ಯಯ್ಯೋ ಕಿಸ್ಣಪ್ಪ ಇಂತ ಮಾತನ್ನು ಆಡಿದೆ ಕಿಸ್ಣಯ್ಯ
ನೀನು ಯಾವ ಕಿಸ್ಣಪ್ಪ ಆಡುತಿಯೋsss || ತಂದಾನ ||

ಅಂಗಾದ್ರೆ ಸಿಕ್ಕಲ್ಲವಲ್ಲ ಕಿಸ್ಣಪ್ಪ
ನಿನ್ನ ಸಾಸ್ತ್ರದಲ್ಲಿ ಸ್ವಲ್ಪ ನಿರಾಳ
ಯೇಳ್ಕಡಪ್ಪ ಅಂದ್ರು
ಪಗಡೆಯವ್ರಿಗೆ ದಾಸಪ್ನ ವಾಸ ಆಯ್ತು ಅಂದ್ರು
ತಿರ್ಗಿ ಬರ್ ಬೇಕಾದ್ರೆ ಐದುಕಾಲ್ ರೂಪಾಯಿ ಆಗ್ಬೇಕು
ಅಯ್ಯಯ್ಯೋ ನಂಚರಿ ಇಲ್ಲವಲ್ಲಪ್ಪ ಕಿಸ್ಣಪ್ಪ
ನಂಚರಿ ಇಲ್ಲ ನೋಡಪ್ಪ ತಿಂದ್ರೆ ಗೆಡ್ಡೆ ಗೆಣ್ಸು ತಿನ್ಬೇಕು
ಮನಿಕಂದ್ರೆ ಬೆಂಕಿ ಮುಂದೆ ಮನಿಕಬೇಕು

ಅವ್ರು ಮೂಲೆಯ ಚೀಲ ನೋಡುತ್ತಾರೆsss || ತಂದಾನ ||

ಮೂಲೆ ಚಿಲ ನೋಡ್ವಾಗ ಒಂದುಕಾಲ್‌ ರೂಪಾಯಿ ಸಿಕ್ಬುಡ್ತು
ಆ ಕಾಲದ ದುಡ್ಡು ಅಂದ್ರೆ ಬೆಳ್ಳಿ ದುಡ್ಡು
ಒಂದು ಕಾಲರೂಪಾಯಿ ಇದೆ ಕಿಸ್ಣಪ್ಪ ಅಂದ್ರು
ಮಡ್ಗು ನಾನು ಸ್ವಲ್ಪ ನೋಡ್ತಿನಿ ಅಂದ್ರು
ಸಿಲ್ಪಿ ನೋಡ್ದಾಗ ಕಿಸ್ಣಪ್ಪ ಅವ್ರು ಮೂರ್ ಕೈಗೆ
ಮೂರ್ ದಾರ್ಕೆ
ಆರೆ ಸಿಲ್ಪಿ ನೋಡ್ವಾಗ

ಅಲ್ಲಿ ದಾಸಯ್ನ ವಾಸವಾಗಿದ್ದಾರೆsss || ತಂದಾನ ||
ಏ ದಾಸಯ್ನ ವಾಸ ಆಗವ್ಳೆ ಬೊಮ್ಮೆಗೌಡsss
ನೀ ಕರ್ಕೊಳ್ಳ ಬೇಡ ದಾಸಯ್ನsss || ತಂದಾನ ||

ಅಂವ ಎಲ್ಲಿದ್ದನು ಸ್ವಲ್ಪು ನೋಡಪ್ಪೊ
ಕಿಸ್ಣಪ್ಪ ಆ ದಾಸಪ್ಪ ಎಲ್ಲಿದ್ದನು?
ಆಗ ಕತ್ತೆತ್ತಿ ನೋಡ್ಬುಟ್ಟು
ಆ ದಾಸಪ್ಪ ಪತ್ತೆ ಮಾಡಕ ಆಗ್ತದಪ್ಪ ಬೊಮ್ಮೆಗೌಡ್ರೆ
ಅವ್ರು ಮನಿ ಮನಿ ಮುದ್ದೆ
ಮಾರಿ ಗುಡಿ ನಿದ್ದೆ
ಆದ್ರ ಉಂಡ್ಕತ್ತಾರೆ.
ಆಳ ಮಕ್ಳಾಗಿ ಮನಿಕೊತ್ತಾರೆ
ಈವೊತ್ತು ಇಲ್ಲಿರ್ತಾರೆ
ನಾಳೆ ಸಾದ್ ನುಂಡೀಲಿ ಇರ್ತಾರೆ
ಅದು ಬಿಟ್ಮೀಲೆ ನಾಳೆ ವಂಗ್ನೂರ್ಲಿ ಇರ್ತಾರೆ
ಎಲ್ಲಿಂದಪ ನಾ ನೋಡದು
ಆಗಂದ್ ಬುಟ್ಟು ಸುಳ್ ಮಾತಾಡ್ ಬುಟ್ಟ
ಯಾರು ಅರಿನಾರಾಯ್ಣ ದೇವ್ರು
ಕಿಸ್ಣಪ್ಪ ಆಗಿ ರೂಪ ತಾಳ್ಕಂಡು
ಮಾಯ ಮಾಡ್ಬುಟ್ಟು ಅಯ್ಯೋ ಕಿಸ್ಣಪ್ಪ
ಮತ್ತೇನಪ್ಪ ಕಿಸ್ಣಪ್ಪ ಮಾಡ್ಬೇಕು
ಅದ್ಕೆ ಅವ್ರಿಗೆ ನಾವ್ ಮಾಡ್ಬೇಕಾದ್ರೆ
ಮಂತ್ರ ಮಾಯ ಏನು ಬೇಕಿಲ್ಲ?
ಅವರಿಂಚೆ ಅವ್ರೆ ಬರ್ತಾರೆ
ನಿನ್ನಿಚ್ನೆ ನೀನಿರು
ಆದ್ರೆ ನಂಜೀವ ತಡೆಲಪ್ಪಾ
ಕಿಸ್ಣಪ್ಪ ನಂಜೀವ ತಡೆಲ್ಲಾ
ನನ್ನ ಮಗ ಪುಟ್ ಪಾದ್ ಮಗ
ಒಂಟೋಗ್ ಬುಟ್ಟು
ಏನಪ್ಪ ಮಾಡ್ಬೇಕು ನಾನು?

ಅಂವ ಗೊಳ್ ಗೋಳು ಅಂತ ಆಳುತ್ತಾನೆsss || ತಂದಾನ ||
ರಾಮsss ರಾಮsss
ಅವ್ರು ಮಾಯದ ರೂಪ ಲಕ್ತವ್ರೆ ನಾರಾಯ್ಣsss
ಅವ್ರು ಮಾಯದ ಸಂತೆ ಬರುತ್ತಾರೆsss || ತಂದಾನ ||

ಮಾಯದ ರೂಪದಲ್ಲಿ ಕಿಸ್ಣಪ್ಪ
ಅವ್ರು ಯೇಳ್ಬುಟ್ರು
ರಂಗಿಯವ್ರ ಆತ್ರ ಬಂದ್ನ
ಬೊಮ್ಮೆಗೌಡ ಬಂದು
ಅಮ್ಮೆ ನನ್ ಮಡ್ದೆ
ನನ್ ಮಗಳ್ ನೋಡ್ಡೆ ಅಂದ
ನಾನು ಕಿಸ್ಣಪ್ಪ ಅತ್ರ ವೋಗಿದೆ
ಅವ್ರು ಸಾಸ್ತ್ರದಲ್ಲಿ ದಾಸಪ್ನತ್ರ ಅವ್ಳೆ ಅಂದ್ರು
ನನ್ಗೆ ಮೂರ್ ದಿವ್ಸ ಆಯ್ತು ಊಟ ಮಾಡಿ
ತಿರ್ಗಿ ತಿರ್ಗಿ ಮೂರ್ ದಿವ್ಸ ಆಯ್ತು
ಏನಪ್ಪ ಮಾಡಿದ್ದ ಆಡ್ಗೆ ಅಂತೇಳಿದ್ರು
ಇಲ್ಲ ಮಾರಾಯ
ಈವೊತ್ತು ಸಾಸಿವೆ ಸೊಪ್ ಆಡ್ಗೆ ಅಂದ್ರು
(ಸಾಸಿವೆ ಸೊಪ್ಪು ಆಡ್ಗೆ ಅಂದ್ರೆ ಆರ್ಥ ಆಗ್ತದ)
ಸಾಸಿವೆ ಸೊಪ್ಪು ಆಗ್ಲಿ ಕೊಡಪ್ಪ
ರಾಗಿ ಊಟ ಮಾಡ್ತಿನಿ
ನನ್ನ ಮಗ್ಳು ಸಿಕ್ಲಿಲ್ಲ
ನನ್ನ ಮಗ್ಳಾಸೆ ನನ್ಗಿಲ್ಲ
ನನ್ನಾಸೆ ನಿಂಗಿಲ್ಲ
ಅಂತ ಬಾಳ್ ಬಂದುಡ್ತು ನನಗೆ ಅಂದ್ಬುಟ್ಟು
ಅಲ್ಲ ಕಣೆ ನಾನು ಇಂತ ಅಡವಿ ಒಳ್ಗಿದ್ದು
ಆನೆ ಉಲಿ ಕರ್ಡಿ ಕಾಡೆಮ್ಮೆ ಮದ್ಯೆ ಇದ್ದು
ಆ ಉಡ್ಗಿ ಪತ್ತೆ ಮಾಡಕೆ
ನಮ್ಗೆ ಅವಕಾಸ ಇಲ್ದೆ ವೊಯ್ತಲ್ಲ ಅಂದ್ಬುಟ್ಟು
ಆಹಾ ತಾಯಾಗಿಕ್ವಿಂತ
ಎತ್ತ ತಾಯಿ ಗರ್ಬದಲ್ಲಿ ಮಡ್ಗಿದ್ದವ

ಅವ ದುಕ್ಕ ಮಾಡುತ್ತ ಅಳುತಾಳೆ sss || ತಂದಾನ ||
ಅಯ್ಯ ದುಕ್ಕ ಮಾಡಂತ ಅಳ್ತವ್ರೆ ರಂಗಮ್ಮsss
ಅಳ್ಬೇಡ ಕಾಣೆ ಸುಮನಿರೆsss || ತಂದಾನ ||

ಸೋಲಿಗರ ಬೊಮ್ಮೆಗೌಡ್ನ ಮಕ್ಕ ಮರಿ
ಯೆಣ್ಣು ಗಂಡಿನ ಗೋಳು ನೋಡ್ಬುಟ್ಟು
ಆಗಲ್ ಗಾತ್ರ ಸಂಕು
ಮುಗಲ್ ಗಾತ್ರ ಜೆಗ್ಟೆ ಇಟುಕೊಂಡು
ಈ ಜಗದೊಡೆಯ ಗದ್ಗಿ ಅತ್ರ ಬಂದ
ಎಲ್ಗೆ?
ಗುರುವಿನ ಗದ್ಗೆ ಅತ್ರ
ಆಹಾ ದಾಸಪ್ಪ ಯಾವೊರಪ್ಪ ನೀವು?
ನಾನು ವಂಗ್ನೂರಪ್ಪ
ವಂಗ್ನೂರ್ ದಾಸಪ್ಪ ನೀವು
ಯಾವಾಗ್ ಬಂದೆ?
ಅನುಮಂತ ರಾಯ್ನ ಗುಡಿಯಲ್ಲಿಂದ ಬಂದ್ದಿದೀನಿ
ಯಾಕಯ್ಯ ದುಕ್ಕ ಮಾಡ್ಡೆ
ಅಯ್ಯಯ್ಯೋ ಯಾ ದುಕ್ಕ ಯೇಳ್ಳಿ ದಾಸಪ್ಪ?
ನನ್ನ ಮಗ ಕುಸ್ಮಾಲೆ ದಾಸಪ್ಪ ತಗಂಡೋಗಿದ್ದಾನೆ?
ದಾಸಪ್ಪ ತೆಕೊಂಡೋಗಿದ್ದಾನೆ
ಸಾಸ್ತ್ರ ಸಂಬಂದ ಮಾಡಿ ವಿದ್ಯೆ ಅಲ್ಲ
ದಾಸಪ್ಪ ತೆಕೊಂಡೋದ್ರು ಅಂತಾರಲ್ಲ
ವಂಗ್ನೂರಿಂದ ಬಂದ್ರಲ್ಲ
ನೀವಾದ್ರು ಕಂಡ್ರಪ್ಪ ದಾಸಪ್ಪ
ನಾನು ದಾಸಪ್ಪನೆ ಕರ್ಕೊಂಡೋದವ್ರ್ನು ದಾಸಪ್ನೆ
ದಾಸಯ್ಯ ಅಂದ್ರೆ ಅವ್ರು ನಾಮ ಉಂಟಪ್ಪ
ನಾಮ ಆ ರುದ್ರಪ್ಪ
ನಂಗೇನು ಗೊತ್ತಿಲ್ಲ ಸ್ವಾಮಿ ದಾಸಪ್ಪ
ನಂಗೇನು ಗೊತ್ತಿಲ್ಲ ಸ್ವಾಮಿ ದಾಸಪ್ಪ
ನಂಗೇನು ಗೊತ್ತಿಲ್ಲ
ನನ್ನ ಮಗ್ಳ ಕರ್ಕಡೋಗಿ ಎಲೊ ಮಾಯ ಆಯ್ತು
ಕಂಬ್ರಿ ಬುಡಕ್ಕೆ ಗೆಡ್ಡೆ ಗೆಣಸ್ಗೆ ವೋದವ್ಳೆ ಮಾಯ ಆಗ್ಬುಟ್ಟ
ಆ ದಾಸಪ್ಪ ಅಂದ್ರೆ ವೊಟ್ಟೆ ಮೇಲೆ ಬಟ್ಟ ನಾಮ ಇತ್ತು
ತೋಳ ಮೇಲೆ ತೋಳ್ಸ ನಾಮ ಇಡ್ತಾರೆ
ಕಳ್ಳಗುಳಿ ಒಳ್ಗೆ ಕಳ್ಳನಾಮ ಇಡ್ತಾರೆ
ಅವ ಏನಾದ್ರು ಕರ್ಕಂಡೋಗಿದ್ರೆ
ನೀನೆ ಸ್ವಲ್ಪ ನೋಡ್ಬೇಕಲ್ಲ ಅಂದ್ಬುಟ್ಟು
ನೀವಾದ್ರು ನೋಡು ದಾಸಪ್ಪ
ಊರೂರ್ ಮೇಲ್ ವೋಯ್ತಿಯಲ್ಲ
ಅವ್ವ ನಾ ಊರೂರ್ ಮ್ಯಾಲ್ ಯಾವ್ದ
ಈಗ ಪೋಡಿಗೆ ಬಂದಿವ್ನಿ

ಈಗ ಪೋಡಿಗೆ ಬಂದಿವ್ನಿ ನಾಡಿನ ದಾಸಯ್ಯsss
ದಾನ ದರ್ಮವ ನೀಡಯ್ಯ sss || ತಂದಾನ ||
ನಾಡಿನ ದಾಸಯ್ಯ ಪೋಡಿಗೆ ಬಂದವ್ನೆsss
ದಾನವ ಅಂತೆ ಸಾರುತಾನೆsss || ತಂದಾನ ||
ನಾವು ಕಾಡನ್ನು ಕಡಿದಿಮಿsss
ಪೋಡನ್ನು ಮಾಡಿಮಿsss
ಪೋಡಿಗೆ ಇನ್ನು ಬರನಿಲ್ಲsss || ತಂದಾನ ||
ಅಲ್ಲ ದಾಸಪ್ಪ

ಈ ಕಾಡ್ನ ಕಡ್ದು ಪೋಡ್ ಮಾಡ್ಬಿಟ್ಟು
ನನ್ನ ಮಗ ಈವೋತ್ತು ವೋದ್ಗಲ್ಲ
ಅಗೆ ಬದ್ಕು ಬಾಳೆಲ್ಲ ಆಳಾಗೊಯ್ತು
ನೀವಾದ್ರು ಸ್ವಲ್ಪ ಪತ್ತೆ ಮಾಡ್ಯೆಪ್ಪ
ನೋಡಪ್ಪ ಸಂಕಿನ ಊದ್ದೀಮಿ
ನಾವು ಸಂಕ್ ಊದ್ಕಂಡ್ ವೋಗವ್ರು
ನಾವು ಆರು ಅಂದ್ರೆ
ಕನಕದಾಸ್ರು
ಕಾಡ ದಾಸ್ರು
ಊರಿಬತ್ತಿ ದಾಸ್ರು
ವೊಟ್ಟೆದಾಸ್ರು
ಬಟ್ಟೆದಾಸ್ರು
ಅಂದ್ರೆ ವೊಟ್ಟೆಗೋಸ್ಕರ ಊರ ಮ್ಯಾಗ ವೋಗವ್ರು
ವೊಟ್ಗೆ ಗೋಸ್ಕರ ಕೇರಿ ಮ್ಯಾಲೆ ವೋಗಿ
ರಾಗಿ ಜೋಳಕ್ಕೊಸ್ಕರ ಮನೆ ಮನೆ ಸಂಕ ಊದ್ದೀಮಿ
ಜಗಟೆ ಬಾರಸ್ತಿಮಿ
ನಮ್ಗ ನಿನ್ನ ಮಗ್ಳ ಪತ್ತೆ ಮಾಡಕ್ಕಾದ್ದಮ್ಮ
ಯಾಕಾದ್ರು ಮಾಡಿ ಪತ್ತೆ ಮಾಡ್ಬೇಕಲ್ಲಪ್ಪ
ಇರ್ಲಿ ಇರ್ಲಿ
ಆಂಗಾದ್ ಮ್ಯಾಲೆ ಇದ್ರ ಮರ್ಮ ತಿಳಿಬೇಕು
ಅಂದ್ಬುಟ್ಟು ನಾರಾಯ್ಣ

ಸ್ವಾಮಿ ಇನ್ನೊಂದು ರೂಪ ತಾಳುತಾರೆsss || ತಂದಾನ ||
ಇನ್ನೊಂದು ರೂಪ ತಾಳ್ಕೊಂಡು ನಾರಾಯಣsss
ಮೆಲ್ ಮೆಲ್ಗೆ ಸ್ವಾಮಿ ಬರುತಾರೆsss || ತಂದಾನ ||